Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Friday, December 30, 2011

Bhagavad GitA Kannada Chapter-18 Shloka 19-28


ಗುಣತ್ರಯಗಳ ಬಗ್ಗೆ ಹಿಂದೆ ಸಾಕಷ್ಟು ವಿವರಗಳನ್ನು ಕೊಟ್ಟಿದ್ದ ಕೃಷ್ಣ, ಇಲ್ಲಿ ಜೀವನಕ್ಕೆ ಬಹಳ ಮುಖ್ಯವಾದ ತ್ರೈಗುಣ್ಯ ವಿದ್ಯೆಯನ್ನು ವಿವರಿಸಿದ್ದಾನೆ.

ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧೈವ ಗುಣಭೇದತಃ ।
ಪ್ರೋಚ್ಯತೇ ಗುಣಸಂಖ್ಯಾನೇ ಯಥಾವಚ್ಛೃಣು ತಾನ್ಯಪಿ               ॥೧೯॥

ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧಾ ಏವ  ಗುಣಭೇದತಃ ।
ಪ್ರೋಚ್ಯತೇ ಗುಣಸಂಖ್ಯಾನೇ ಯಥಾವತ್ ಶೃಣು ತಾನಿ ಅಪಿ – ಅರಿವು, ಕಾಯಕ ಮತ್ತು ಮಾಡುವಾತ ಕೂಡ ಗುಣಗಳ ಭೇದದಿಂದ ಮೂರು ತೆರ ಎಂದು ಗುಣಗಳ ಎಣಿಕೆಯ ಪ್ರಕರಣದಲ್ಲಿ [ವೈದಿಕ ಸಾಖ್ಯ ಶಾಸ್ತ್ರದಲ್ಲಿ] ಹೇಳಲಾಗಿದೆ. ಅವುಗಳನ್ನು ಹಾಗೆಯೇ ಆಲಿಸು.

ಪ್ರತಿಯೊಬ್ಬನ ಬದುಕಿನಲ್ಲಿರುವ ಮೂರು ಪ್ರಮುಖ ಘಟಕಗಳೆಂದರೆ ಅರಿವು(ಜ್ಞಾನ), ಕಾಯಕ(ಕರ್ಮ) ಮತ್ತು ಕರ್ತಾ(ಮಾಡುವಾತ). ಏನನ್ನೇ ಮಾಡುವುದಾದರೂ ಕೂಡ ಒಂದು ತಿಳುವಳಿಕೆಯಿಂದ ಮಾಡುತ್ತೇವೆ-ಅದು ಜ್ಞಾನ; ಆ ತಿಳುವಳಿಕೆಯಿಂದ ‘ಮಾಡುವುದು’-ಕರ್ಮ; ಜ್ಞಾನ ಮತ್ತು ಕರ್ಮಗಳಿಗೆ ಆಶ್ರಿತನಾಗಿರತಕ್ಕಂತವ-ಕರ್ತಾ. ಈ ಮೂರೂ ಕೂಡ ಗುಣತ್ರಯ ವಿಭಾಗಕ್ಕೆ ಒಳಪಟ್ಟು ಪ್ರತಿಯೊಂದೂ ಮತ್ತೆ ಮೂರು ವಿಧವಾಗಿದೆ. ಶಾಸ್ತ್ರದಲ್ಲಿ ಎಲ್ಲಿ ಗುಣಗಳ ಪರಿಗಣನೆ ಆಗುತ್ತದೋ ಅಲ್ಲಿ ಈ ವಿಷಯ ಹೇಳಿದ್ದಾರೆ ಮತ್ತು ಭಗವಂತ ಕಪಿಲವಾಸುದೇವನಾಗಿ  ಜಗತ್ತಿಗೆ ಕೊಟ್ಟ ‘ಪರಮಸಾಂಖ್ಯದಲ್ಲಿ’ ಇದನ್ನು ಹೇಳಲಾಗಿದೆ. ಇದು ಕಪಿಲ ವಾಸುದೇವನಿಂದ ಮೊಟ್ಟಮೊದಲು ಹೇಳಲ್ಪಟ್ಟ, ಪುರಾತನ ಕಾಲದಿಂದಲೂ ಇದ್ದ, ಜಗತ್ತಿಗೆ ಹೇಳಬೇಕಾದ ವಿಷಯಗಳಲ್ಲೇ ಅತ್ಯಂತ ಪ್ರಕೃಷ್ಟವಾದ ವಿಷಯ. ತ್ರೈಗುಣ್ಯವಿಲ್ಲದೆ ಜೀವನವೇ ಇಲ್ಲ. ನಮ್ಮ ಬದುಕಿನ ಎಲ್ಲ ಮುಖದಲ್ಲೂ ವ್ಯಾಪಿಸಿರುವ ಈ ತ್ರೈಗುಣ್ಯವನ್ನು ನಾವು ಅರ್ಥಮಾಡಿಕೊಳ್ಳದಿದ್ದರೆ ನಮ್ಮ ಬದುಕನ್ನು ತಿದ್ದಿಕೊಳ್ಳಲು ಸಾಧ್ಯವಿಲ್ಲ ಮತ್ತು ತ್ರಿಗುಣಾತೀತ ಭಗವಂತನ ಕಡೆಗೆ ಸಾಗಲು ಸಾಧ್ಯವಿಲ್ಲ. “ಅತ್ಯಂತ ಪುರಾತನವಾದ ಈ ಮೂಲಭೂತ ಸತ್ಯವನ್ನು ನಾನು ನಿನಗೆ ತದ್ವತ್ತಾಗಿ ಹೇಳುತ್ತೇನೆ -ಅದನ್ನು ಗಮನವಿಟ್ಟು ಆಲಿಸು” ಎಂದು ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ.

ಸರ್ವಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ ।
ಅವಿಭಕ್ತಂ ವಿಭಕ್ತೇಷು ತಜ್ ಜ್ಞಾನಂ ವಿದ್ಧಿ ಸಾತ್ತ್ವಿಕಮ್                   ॥೨೦॥

ಸರ್ವಭೂತೇಷು ಯೇನ ಏಕಂ ಭಾವಂ ಅವ್ಯಯಮ್ ಈಕ್ಷತೇ ।
ಅವಿಭಕ್ತಂ ವಿಭಕ್ತೇಷು ತತ್ ಜ್ಞಾನಂ ವಿದ್ಧಿ ಸಾತ್ತ್ವಿಕಮ್ – ಎಲ್ಲ ಜೀವಿಗಳಲ್ಲಿ ಬದಲಾಗದ ಒಂದು ಪರತತ್ವವನ್ನು, ಬಗೆಬಗೆಯ ವಸ್ತುಗಳಲ್ಲಿ ಒಂದೆ ಬಗೆಯ ಭಗವಂತನನ್ನು ಕಾಣುವ ತಿಳಿವು ಸಾತ್ವಿಕ ಎಂದು ತಿಳಿ.

ಬೃಹದಾರಣ್ಯಕ ಉಪನಿಷತ್ತಿನಲ್ಲಿ(೪-೫-೧೧)ಹೇಳುವಂತೆ: “ಅಸ್ಯ ಮಹತೋ ಭೂತಸ್ಯ ನಿಶ್ವಸಿತಮ್”- ‘ಅಂದರೆ ಇಡೀ ಪ್ರಪಂಚ ಆ ಮಹಾಭೂತದ ಉಸಿರಿನ ಉದ್ಗಾರ’. ವಿಷ್ಣು ಸಹಸ್ರನಾಮದಲ್ಲಿ ಹೇಳುತ್ತಾರೆ: “ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ” ಎಂದು. ಅಂದರೆ ಒಬ್ಬನೇ ಒಬ್ಬ ವಿಷ್ಣು ಹಿರಿಯ ಚೇತನ(ಮಹಾಭೂತ); ಅಲ್ಪ ಚೇತನಗಳು(ಭೂತಗಳು) ಹಲವಾರು ಎಂದು. ಗೀತೆಯ ಈ ಶ್ಲೋಕದಲ್ಲಿ ಕೃಷ್ಣ ಸಾತ್ವಿಕ ಅರಿವಿನ ಬಗ್ಗೆ ಹೇಳುತ್ತ ಹೇಳುತ್ತಾನೆ: “ಪರಸ್ಪರ ಭಿನ್ನವಾದ, ಒಂದರಂತೆ ಇನ್ನೊಂದಿಲ್ಲದ, ವಿಲಕ್ಷಣವಾದ ಜೀವಪ್ರಪಂಚದಲ್ಲಿ(ಸರ್ವಭೂತೇಷು)- ಯಾವ ಭೇದವೂ ಇಲ್ಲದೆ, ಪೂರ್ಣ ಗುಣಕ್ರಿಯೆಯಲ್ಲಿ ಅಖಂಡ ಸತ್ಯವಾಗಿರುವ ಒಂದು ತತ್ವ ನೆಲೆಸಿದೆ. ಅನಂತದಲ್ಲಿ ಏಕವಾಗಿರುವ, ತ್ರೈಗುಣ್ಯವರ್ಜಿತ  ಭಗವಂತನೆಂಬ ಈ ತತ್ವ ಯಾವ ಅರಿವಿಗೆ ಗೋಚರವಾಗುತ್ತದೋ ಆ ಅರಿವು ಸಾತ್ವಿಕ” ಎಂದು.

ಪೃಥಕ್ ತ್ವೇನ  ತು ಯಜ್ ಜ್ಞಾನಂ ನಾನಾಭಾವಾನ್ ಪ್ರಥಗ್ ವಿಧಾನ್            ।
ವೇತ್ತಿ ಸರ್ವೇಷು ಭೂತೇಷು ತಜ್ ಜ್ಞಾನಂ ವಿದ್ಧಿ ರಾಜಸಮ್            ॥೨೧॥

ಪೃಥಕ್ ತ್ವೇನ  ತು ಯತ್  ಜ್ಞಾನಂ ನಾನಾಭಾವಾನ್ ಪ್ರಥಗ್ ವಿಧಾನ್           ।
ವೇತ್ತಿ ಸರ್ವೇಷು ಭೂತೇಷು ತತ್  ಜ್ಞಾನಂ ವಿದ್ಧಿ ರಾಜಸಮ್ – ಭಗವಂತನ ಶಕ್ತಿಯಲ್ಲಿ ಅಂತರವನ್ನು ಕಾಣುವುದು, ಎಲ್ಲ ಜೀವಿಗಳಲ್ಲಿ ಬಗೆಬಗೆಯ ದೈವೀಶಕ್ತಿಗಳು ಬೇರೆಬೇರೆಯಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಯುವುದು[ಎಲ್ಲ ಜೀವಿಗಳಲ್ಲಿರುವ ಭೇದವನ್ನು ಮಾತ್ರ ಗುರುತಿಸುವ, ಒಂದರಂತೆ ಒಂದಿಲ್ಲ ಎಂದರಿಯುವ, ಆದರೆ ಭಗವತ್ ಪ್ರಜ್ಞೆಯಿರದ ಕೇವಲ ಭೌತಿಕ ನಿಜದರಿವು] ರಾಜಸ ಎಂದು ತಿಳಿ.

ಏಕಭಕ್ತಿ ಇಲ್ಲದೆ ಅನೇಕ ದೇವತಾವಾದದಲ್ಲಿ ನಂಬಿಕೆ-ರಾಜಸ ಅರಿವು. ಇವರಿಗೆ ಅಖಂಡವಾದ ಪರತತ್ವದ ಎಚ್ಚರವಿರುವುದಿಲ್ಲ. ಇವರು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ದೇವತೆಗಳನ್ನು ಪೂಜೆ ಮಾಡುತ್ತಾರೆ. ಇಂದಿನ ಜ್ಯೋತಿಷ್ಯ ಕೂಡ ಜನರನ್ನು ಈ ತಪ್ಪು ದಾರಿಯಲ್ಲಿ ಹೋಗುವಂತೆ ಪ್ರೇರಣೆ ಮಾಡುತ್ತಿದೆ. ಅಖಂಡವಾದ ಭಗವಂತನ ಎಚ್ಚರವಿಲ್ಲದೆ ಒಂದೊಂದು ಗ್ರಹಚಾರಕ್ಕೆ ಒಂದೊಂದು ದೇವತೆಯಪೂಜೆ ಮಾಡುವುದು ರಾಜಸ ಅರಿವು. ಯಾವ ಪೂಜೆಯೇ ಇರಲಿ ಅದನ್ನು ಸರ್ವನಿಯಾಮಕ ಭಗವಂತನ ಎಚ್ಚರದಿಂದ ಮಾಡಿದರೆ ಆ ಪೂಜೆ ಸಾತ್ವಿಕವಾಗುತ್ತದೆ. ಅದನ್ನು ಬಿಟ್ಟು ನಾನಾ ದೇವತೆಗಳನ್ನು ಬೇರೆಯಾಗಿ ಪೂಜಿಸಿದಾಗ ಅದೇ ಪೂಜೆ  ರಾಜಸವಾಗುತ್ತದೆ.   

ಯತ್ ತು  ಕೃತ್ಸ್ನವದೇಕಸ್ಮಿನ್ ಕಾರ್ಯೇ ಸಕ್ತಮಹೈತುಕಮ್ ।
ಅತತ್ತ್ವಾರ್ಥವದಲ್ಪಂ ಚ ತತ್ ತಾಮಸಮುದಾಹೃತಮ್               ॥೨೨॥

ಯತ್ ತು  ಕೃತ್ಸ್ನವತ್ ಏಕಸ್ಮಿನ್ ಕಾರ್ಯೇ ಸಕ್ತಮ್ ಅಹೈತುಕಮ್ ।
ಅತತ್ತ್ವ ಅರ್ಥವತ್ ಅಲ್ಪಂ ಚ ತತ್ ತಾಮಸಮ್ ಉದಾಹೃತಮ್ –- ಯಾವುದೋ ಒಂದು ಕ್ಷುದ್ರವಾದ ಕಜ್ಜಕ್ಕೆ ಅಂಟಿಕೊಂಡು ಅದೇ ಸರ್ವಸ್ವವೆಂದು [ಬದಲಾಗದ ಜೀವವನ್ನೆ  ಬದಲಾಗದ ಭಗವಂತನೆಂದು, ಇಡಿಯ ವಿಶ್ವ ಒಬ್ಬ ಜೀವನ ಕಲ್ಪನಾವಿಲಾಸ ಎಂದು] ನಂಬುವ, ಕಾರಣವಿರದ, ನಿಜವನ್ನು ಗ್ರಹಿಸಿದ [ವಿಶ್ವ ನಿಜವಲ್ಲ ಎಂದು ಗ್ರಹಿಸುವ] ಕ್ಷುಲ್ಲಕವಾದ ತಿಳಿವು ತಾಮಸ ಎನಿಸುತ್ತದೆ.

ತಾಮಸ ಸ್ವಭಾವಕ್ಕೆ ಅನೇಕ ಮುಖಗಳು. ಕಾಣುವುದು ಅನೇಕ-ಇರುವುದು ಏಕ ಎಂದು ತಿಳಿಯುವುದು; ಜೀವನಿಗಿಂತ ಬೇರೆಯಾದ ಭಗವಂತನನ್ನು ಒಪ್ಪದಿರುವುದು; ಈ ಪ್ರಪಂಚದಲ್ಲಿ ಯಥಾರ್ಥವಾದ ವಸ್ತುವಿಗೆ ಅಸ್ತಿತ್ವವೇ ಇಲ್ಲ ಎಂದು ತಿಳಿದುಕೊಳ್ಳುವುದು; ಅಜ್ಞಾನ-ಅದರಿಂದ ವಿಪರೀತಜ್ಞಾನ; ಅರಿವಿಲ್ಲದಿದ್ದರೂ ಕೂಡ ತನ್ನನ್ನು ತಾನು ಮಹಾಜ್ಞಾನಿ ಎಂದು ಭ್ರಮಿಸುವುದು; ಯಾವುದೋ ಒಂದು ವಿಷಯವನ್ನು ತಿಳಿದುಕೊಂಡು ನಾನು ಎಲ್ಲವನ್ನು ತಿಳಿದಿದ್ದೇನೆ ಅಂದುಕೊಳ್ಳುವುದು, ಇತ್ಯಾದಿ ತಾಮಸ ಅರಿವು ಎನಿಸುತ್ತದೆ. ನಾವು ನಮ್ಮ ಜ್ಞಾನದ ಇತಿ-ಮಿತಿಯನ್ನು ಅರಿತು ಪ್ರತಿ ಕ್ಷಣ ಅದಕ್ಕಿಂತ ಹೆಚ್ಚಿನ ಸತ್ಯವನ್ನು ತಿಳಿಯಲು ನಿರಂತರ ಪ್ರಯತ್ನ ಮಾಡಬೇಕು-ಇಲ್ಲದಿದ್ದರೆ ನಾವು ತಾಮಸರಾಗುತ್ತವೆ. ದ್ವೈತ ಸಿದ್ಧಾಂತ ನಮಗೆ ಸರಿಯಾಗಿ ಅರ್ಥವಾಗಬೇಕಾದರೆ ನಾವು ಅದ್ವೈತ ಮತ್ತು ವಿಶಿಷ್ಟಾದ್ವೈತವನ್ನು ಓದಿರಬೇಕು. ಹಿಂದುತ್ವ ಅರ್ಥವಾಗಬೇಕಾದರೆ ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಏನು ಹೇಳುತ್ತದೆ ಎನ್ನುವ ಅರಿವು ನಮಗಿರಬೇಕು. ಇದನ್ನು ಬಿಟ್ಟು ನಾನು ನಂಬಿದ್ದೇ ಸತ್ಯ ಉಳಿದಿದ್ದೆಲ್ಲ ಮಿಥ್ಯ ಎಂದು ಗ್ರಹಿಸುವವನ ಮೂಢ ಅರಿವು ತಾಮಸವೆನಿಸುತ್ತದೆ. ಸದಾ ಸತ್ಯದ ಹುಡುಕಾಟ, ಜ್ಞಾನದ ದಾಹ- ನಮ್ಮನ್ನು ಸಾತ್ವಿಕತೆಯತ್ತ ಕೊಂಡೊಯ್ಯಬಲ್ಲದು. ಜ್ಞಾನವನ್ನು ತನ್ನ ಲೌಕಿಕ, ವ್ಯಾವಹಾರಿಕ ಬದುಕಿಗೆ ಸೀಮಿತಗೊಳಿಸಿಕೊಂಡು; ಇನ್ನೂಬ್ಬರಲ್ಲಿರುವ ಸಾತ್ವಿಕ ಜ್ಞಾನವನ್ನು ಗುರುತಿಸದೆ; ಪರಮಾತ್ಮನ ಪ್ರಜ್ಞೆ ಇಲ್ಲದ ಅನುಷ್ಠಾನದಲ್ಲಿ ಬದುಕುವುವಂತೆ ಮಾಡುವ ಮೂಢ ಅರಿವು ತಾಮಸ.

ನಿಯತಂ ಸಂಗರಹಿತಮರಾಗದ್ವೇಷತಃ ಕೃತಮ್ ।
ಅಫಲಪ್ರೇಪ್ಸುನಾ ಕರ್ಮ ಯತ್ ತತ್ ಸಾತ್ತ್ವಿಕಮುಚ್ಯತೇ              ॥೨೩॥

ನಿಯತಮ್ ಸಂಗರಹಿತಮ್ ಆರಾಗ ದ್ವೇಷತಃ ಕೃತಮ್ ।
ಅಫಲಪ್ರೇಪ್ಸುನಾ ಕರ್ಮ ಯತ್ ತತ್ ಸಾತ್ತ್ವಿಕಮ್ ಉಚ್ಯತೇ – ಹಚ್ಚಿಕೊಳ್ಳದೆ, ಮೆಚ್ಚು-ಕಿಚ್ಚುಗಳಿಗೊಳಗಾಗದೆ, ಫಲದ ಹಂಬಲವಿರದೆ ಮಾಡಿದ ವಿಹಿತವಾದ ಕರ್ಮ ಸಾತ್ವಿಕ ಎನಿಸುತ್ತದೆ.

ನಮಗೆ ಪ್ರಾಪ್ತವಾಗಿರುವ ವಿಹಿತಕರ್ಮವನ್ನು ಭಗವಂತನ ಪೂಜಾರೂಪವಾಗಿ ಮಾಡಿದಾಗ ಅದು ಸಾತ್ವಿಕ ಕರ್ಮವಾಗುತ್ತದೆ. ಈ ಕರ್ಮದಲ್ಲಿ ಯಾವುದೇ ರಾಗ-ದ್ವೇಷವಿಲ್ಲ; ಫಲಾಪೇಕ್ಷೆಯಿಲ್ಲ; ಯಾವುದೇ ರೀತಿ ಅಂಟಿಸಿಕೊಳ್ಳುವಿಕೆಯಿಲ್ಲ.ಶ್ರದ್ಧಾ-ಭಕ್ತಿಯಿಂದ, ನಿರ್ಲಿಪ್ತತೆಯಿಂದ, ಕರ್ತವ್ಯವನ್ನು ನಿರ್ವಂಚನೆಯಿಂದ ಭಗವದರ್ಪಣಾಭಾವದಿಂದ  ಮಾಡುವ ಕರ್ಮ ಸಾತ್ವಿಕ ಕರ್ಮ. 

ಯತ್ ತು  ಕಾಮೇಪ್ಸುನಾ ಕರ್ಮ ಸಾಹಂಕಾರೇಣ ವಾ ಪುನಃ ।
ಕ್ರಿಯತೇ ಬಹುಲಾಯಾಸಂ ತದ್ ರಾಜಸಮುದಾಹೃತಮ್          ॥೨೪॥

ಯತ್ ತು  ಕಾಮ ಈಪ್ಸುನಾ ಕರ್ಮ ಸ ಅಹಂಕಾರೇಣ ವಾ ಪುನಃ       ।
ಕ್ರಿಯತೇ ಬಹುಲ ಆಯಾಸಮ್  ತತ್ ರಾಜಸಮ್ ಉದಾಹೃತಮ್ –ಫಲದ ಬಯಕೆಯಿಂದ ಅಥವಾ ಹಮ್ಮಿನಿಂದ ದೇಹವನ್ನು ಬಳಲಿಸಿ, ದಂಡಿಸಿ ಮಾಡುವ ಕರ್ಮ ರಾಜಸ ಎನಿಸುತ್ತದೆ.

ಮಾಡುವ ಕೆಲಸವೇನೋ ಒಳ್ಳೆಯ ಕೆಲಸವೆ. ಆದರೆ ಅದರ ಹಿಂದೆ ಅನೇಕ ಕಾಮನೆ, ನಾನುಮಾಡಿದೆ ಅನ್ನುವ ಅಹಂಕಾರ ಸೇರಿದಾಗ ಅದು ರಾಜಸ ಕರ್ಮವೆನಿಸುತ್ತದೆ. ನಮ್ಮ ಯಾವುದೋ ಸಮಸ್ಯೆಯ ಪರಿಹಾರಕ್ಕಾಗಿ ಕರ್ಮ ಮಾಡುವುದು, ಕರ್ಮ ಮಾಡುವಾಗ ಅನೇಕ ಫಲದ ಅಪೇಕ್ಷೆಯಿಂದ ಮಾಡುವುದು, ಮಾಡಿದ ಮೇಲೆ ‘ನಾನು ಮಾಡಿದೆ’ ಎಂದು ಅಹಂಕಾರಪಡುವುದು ರಾಜಸ ಕರ್ಮದ ಲಕ್ಷಣ. ಜೀವನಪೂರ್ತಿ ಯಾವುದೋ ಕಾಮನೆಯ ಬೆನ್ನು ಹತ್ತಿ, ನಾಳೆಯ ಸುಖವನ್ನು ಬಯಸಿ, ಇದ್ದ ಇಂದಿನ ಸುಖವನ್ನು ಮರೆತು ದೇಹವನ್ನು ಬಳಲಿಸಿ ಮಾಡುವ ಕರ್ಮ ರಾಜಸ ಕರ್ಮ.

ಅನುಬಂಧಂ ಕ್ಷಯಂ ಹಿಂಸಾಮನಪೇಕ್ಷ್ಯ ಚ ಪೌರುಷಮ್ ।
ಮೋಹಾದಾರಭ್ಯತೇ ಕರ್ಮ ಯತ್ ತತ್ ತಾಮಸಮುಚ್ಯತೇ        ॥೨೫॥

ಅನುಬಂಧಂ ಕ್ಷಯಂ ಹಿಂಸಾಮ್ ಅನಪೇಕ್ಷ್ಯ ಚ ಪೌರುಷಮ್ ।
ಮೋಹಾತ್ ಆರಭ್ಯತೇ ಕರ್ಮ ಯತ್ ತತ್ ತಾಮಸಮ್ ಉಚ್ಯತೇ – ಪರಿಣಾಮ, ಪೋಲು, ತೊಂದರೆಗಳನ್ನು ಗಮನಿಸದೆ, ತನ್ನಳವನ್ನು ಮೀರಿ ತಿಳಿಗೇಡಿತನದಿಂದ ತೊಡಗುವ ಕರ್ಮ ತಾಮಸ ಎನಿಸುತ್ತದೆ.

ತನ್ನ ಯೋಗ್ಯತೆಯನ್ನು ತಿಳಿದುಕೊಳ್ಳದೆ, ಮುಂದೇನಾಗುತ್ತದೆ ಎನ್ನುವ ಯೋಚನೆಯನ್ನೂ ಮಾಡದೆ, ಫಲಾಪೇಕ್ಷೆ, ದುಡುಕು, ಅಹಂಕಾರ, ದ್ವೇಷದಿಂದ; ಭಗವಂತನನ್ನು ಮರೆತು ಮಾಡುವ ಸಮಾಜ ವಿನಾಶಕವಾದ ಕರ್ಮ ತಾಮಸ ಕರ್ಮ. ಇದಕ್ಕೆ ಉತ್ತಮ ದೃಷ್ಟಾಂತ ದುರ್ಯೋಧನ ಮಾಡಿದ ಕರ್ಮಗಳು. ಮುಂದೆ ಆಗುವ ದುರಂತದ ಬಗ್ಗೆ ಯೋಚಿಸದೆ, ಇನ್ನೊಬ್ಬರಿಗೆ ಕೆಟ್ಟದ್ದಾಗಬೇಕು ಎನ್ನುವ ಅನಿಷ್ಟ ಚಿಂತನೆಯಿಂದ ಮಾಡುವ ಕರ್ಮ ತಾಮಸ. ಒಳ್ಳೆಯ ಕರ್ಮವೂ ಕೆಟ್ಟ ಉದ್ದೇಶದಿಂದ ಮಾಡಿದಾಗ ತಾಮಸವಾಗುತ್ತದೆ.

ಜ್ಞಾನ ಮತ್ತು ಕರ್ಮದಲ್ಲಿ ತ್ರೈವಿದ್ಯದ ವಿಧವನ್ನು ಹೇಳಿದ ಕೃಷ್ಣ ಮುಂದೆ ‘ಕರ್ತಾ’ನಲ್ಲಿ ಮೂರು ವಿಧವನ್ನು ವಿವರಿಸುತ್ತಾನೆ.
     
ಮುಕ್ತಸಂಗೋSನಹಂವಾದೀ ಧೃತ್ಯುತ್ಸಾಹಸಮನ್ವಿತಃ ।
ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ                 ॥೨೬॥

ಮುಕ್ತ ಸಂಗಃ ಅನಹಂವಾದೀ ಧೃತಿ ಉತ್ಸಾಹ ಸಮನ್ವಿತಃ ।
ಸಿದ್ಧಿ ಅಸಿಧ್ಯೋಃ ನಿರ್ವಿಕಾರಃ ಕರ್ತಾ ಸಾತ್ತ್ವಿಕಃ ಉಚ್ಯತೇ -- ಹಚ್ಚಿಕೊಳ್ಳದವನು, ನಾನು ಮಾಡಿದೆ ಎಂದು ಕೊಚ್ಚಿಕೊಳ್ಳದವನು, ಹುರುಪಳಿಯದ ಗಟ್ಟಿಗ, ಗಳಿಕೆ-ಅಳಿಕೆಗಳಿಂದ ವಿಚಲಿತನಾಗದವನು ಸಾತ್ವಿಕ ಕರ್ತಾರ ಎನಿಸುತ್ತಾನೆ.

ಸಾತ್ವಿಕ ಕರ್ತಾ ಯಾವುದನೂ ಅಂಟಿಸಿಕೊಳ್ಳುವುದಿಲ್ಲ. ಹೇಗೆ ಯಾವುದೇ ಪೂಜೆಯ ಕೊನೆಯಲ್ಲಿ ‘ಶ್ರೀ ಕೃಷ್ಣಾರ್ಪಣಮಸ್ತು’ ಎಂದು ಅರ್ಪಿಸುವ ಪದ್ಧತಿ ಇದೆಯೊ ಹಾಗೆ ಸಾತ್ವಿಕ ತನ್ನ ಜೀವನದಲ್ಲಿ ತಾನು ಮಾಡುವ ಎಲ್ಲ ಕರ್ಮವನ್ನು ಭಗವದ್ ಭಕ್ತಿಯಿಂದ ಭಗವದರ್ಪಣಾಭಾವದಿಂದ ಮಾಡುತ್ತಾನೆ. ಅವನಿಗೆ ‘ನಾನು ಮಾಡಿದೆ’ ಎನ್ನುವ ಅಹಂಕಾರವೇ ಇಲ್ಲ. ಯಾವುದೇ ಕೆಲಸವಿರಲಿ ಆತ ಅದನ್ನು ಅತ್ಯುತ್ಸಾಹದಿಂದ ಮಾಡುತ್ತಾನೆ. ಮಾಡಿದ ಕೆಲಸ ಕೈಗೂಡದಿದ್ದಾಗ ಆತ ಕುಸಿಯುವುದಿಲ್ಲ, ಯಶಸ್ವೀಯಾದಾಗ ಹಾರಾಡುವುದಿಲ್ಲ. ಎಲ್ಲವನ್ನು ವಿರ್ವಿಕಾರನಾಗಿ ಮಾಡುತ್ತಾನೆ. ಇದನ್ನೇ ದ್ವಾದಷಸ್ತೋತ್ರದಲ್ಲಿ ಆಚಾರ್ಯರು ಈ ರೀತಿ ಸುಂದರವಾಗಿ ಹೇಳಿದ್ದಾರೆ:
ಕುರು ಭುಂಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾ ಸತತಂ |
ಹರಿರೇವ ಪರೋ ಹರಿರೇವ ಗುರುಃ ಹರಿರೇವ ಜಗತ್ಪಿತೃಮಾತೃಗತಿಃ      ||
ನಿನ್ನ ಪಾಲಿನ ಕರ್ಮ ನೀನು ಮಾಡು. ಬಂದುದನುಣ್ಣು. ಹರಿಪಾದದ ಸ್ಮರಣೆ ತಪ್ಪದಿರಲಿ-ಇದು ಸಾತ್ವಿಕನ ಜೀವನದ ಮೂಲ ಮಂತ್ರ.

ರಾಗೀ ಕರ್ಮಫಲಪ್ರೇಪ್ಸುರ್ಲುಬ್ಧೋ ಹಿಂಸಾತ್ಮಕೋSಶುಚಿಃ    ।
ಹರ್ಷಶೋಕಾನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ                    ॥೨೭॥

ರಾಗೀ ಕರ್ಮಫಲ ಪ್ರೇಪ್ಸು ಲುಬ್ಧಃ ಹಿಂಸಾ ಆತ್ಮಕಃ ಅಶುಚಿಃ    ।
ಹರ್ಷ ಶೋಕ ಅನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ – ಹಚ್ಚಿಕೊಳ್ಳುವವ, ಫಲ ದೊರೆತಾಗ ಹಿಗ್ಗುವವ, ಇರದಾಗ ಕುಗ್ಗುವವ –ಇಂಥ ಕರ್ತಾರ ರಾಜಸ ಎನಿಸುತ್ತಾನೆ.

ರಾಜಸನಾದವನು ಒಳ್ಳೆಯ ಕೆಲಸ ಮಾಡುತ್ತಾನೆ ಆದರೆ ಅದರಲ್ಲಿ ‘ಹರ್ಷ ಶೋಕ’ ತುಂಬಿರುತ್ತದೆ. ಆತ ತನ್ನ  ಕೆಲಸದಲ್ಲಿ ಯಶಸ್ವೀಯಾದಾಗ ಆಕಾಶಕ್ಕೇರುತ್ತಾನೆ, ಕೆಲಸ ಕೈಗೂಡದಾಗ ಪಾತಾಳಕ್ಕೆ ಕುಸಿಯುತ್ತಾನೆ. ಇದಕ್ಕೆ ಮೂಲ ಕಾರಣ ರಾಜಸನಾದವನು ತನ್ನ ಪ್ರತಿಯೊಂದು ಕರ್ಮವನ್ನು ಫಲಾಪೇಕ್ಷೆಯಿಂದಲೇ ಮಾಡುವುದು. ಆತ  ಕರ್ಮವನ್ನು ಅಂಟಿಸಿಕೊಂಡು ಕರ್ಮಫಲದ ನಿರೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾನೆ. ಮಾಡುವ ಕಾರ್ಯದಲ್ಲಿ ಲೋಭ, ಶ್ರದ್ಧೆ ಇಲ್ಲದೆ ಮಾಡುವುದು, ಕರ್ಮ ಮಾಡುವಾಗ ಮಾನಸಿಕ ಸ್ವಚ್ಛತೆ ಇಲ್ಲದೇ ಇರುವುದು ರಾಜಸನಾದವನ ಸ್ವಭಾವ.    

ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಕೃತಿಕೋSಲಸಃ ।
ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ               ॥೨೮॥

ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠಃ  ನೈಕೃತಿಕಃ ಅಲಸಃ ।
ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸಃ  ಉಚ್ಯತೇ – ನಡೆಗೇಡಿ, ಅಸಂಸ್ಕೃತ[ಭಗವಂತನಲ್ಲಿ ಭಕ್ತಿಯಿರದವ], ಹಿರಿಮೆಗೆ ತಲೆ ಬಾಗದವ, ಉದ್ಧಟ, ಮೋಸಗಾರ, ಸೋಮಾರಿ, ಹುರುಪಿರದವ, ಇನ್ನೊಬ್ಬರ ತಪ್ಪನ್ನೆ  ಅನುಗಾಲ ಟೀಕಿಸುವವ [ಮತ್ತೆ ಮಾಡಿದರೆ ಸರಿ ಎಂದು ಕೆಲಸವನ್ನು ಸುಮ್ಮನೆ ಮುಂದೂಡುವವ]-ಇಂಥ ಕರ್ತಾರ ತಾಮಸ ಎನಿಸುತ್ತಾನೆ.

ತಾಮಸರಲ್ಲಿ ಅನೇಕ ವಿಧ.
(೧) ಅಯುಕ್ತಃ  : ಮಾಡುವ ಕೆಲಸದಲ್ಲಿ ನಂಬಿಕೆ ಶ್ರದ್ಧೆ ಇಲ್ಲದೇ ಇರುವುದು. ಕರ್ಮ ಮಾಡುವಾಗ ಕರ್ಮ ನಿಯಾಮಕನಾದ ಭಗವಂತನಲ್ಲಿ ಮನೋಯೋಗವೇ ಇಲ್ಲದಿರುವುದು.
(೨) ಪ್ರಾಕೃತಃ : ದೇವರ ಮೇಲೆ ನಂಬಿಕೆಯೇ ಇಲ್ಲದವರು. ಕೇವಲ ಪ್ರಾಕೃತ ಪ್ರಪಂಚದಲ್ಲಿ ಆಸಕ್ತಿ ಉಳ್ಳವರು.
(೩)  ಸ್ತಬ್ಧಃ  : ತಾನು ಮಾಡುವ ಕರ್ಮದಲ್ಲಿ ತಪ್ಪಿದ್ದರೂ ಕೂಡ ಅದನ್ನು ತಿದ್ದಿಕೊಳ್ಳದೆ, ತಿಳುವಳಿಕೆ ಇಲ್ಲದೆ, ತಪ್ಪು ನಂಬಿಕೆಯನ್ನೇ ಆಚರಿಸಿಕೊಂಡು ಸಾಗುವವರು.
(೪) ಶಠಃ : ತಪ್ಪು ಎಂದು ಗೊತ್ತಿದ್ದರೂ ತಿದ್ದಿಕೊಳ್ಳುವ ಅಪೇಕ್ಷೆ ಇಲ್ಲದೆ ಇರುವವರು. ನಾನೇಕೆ ತಲೆ ತಗ್ಗಿಸಬೇಕು ಎನ್ನುವ ಮನೋವೃತ್ತಿ ಇರುವವರು.
(೫)ನೈಕೃತಿಕಃ : ಒಳ್ಳೆಯತನದ ವೇಷಹಾಕಿಕೊಂಡು ಬುದ್ಧಿಪೂರ್ವಕವಾಗಿ ಇನ್ನೊಬ್ಬರಿಗೆ ಮೋಸಮಾಡಿ ಲಾಭಪಡೆಯುವವರು.
(೬) ಅಲಸಃ : ಯಾವುದು ಒಳ್ಳೆಯದು ಎನ್ನುವುದು ಗೊತ್ತಿದೆ ಆದರೆ ಮಾಡಲು ಸೋಮಾರಿತನ ಇರುವವರು.
(೭) ವಿಶಾದೀ: ಒಂದು ಕ್ರಿಯೆಯನ್ನು ‘ಅಯ್ಯೋ ಮಾಡಬೇಕಲ್ಲಾ' ಎಂದು ಮಾಡುವವರು. ಮಾಡಿದ ಮೇಲೂ ಮತ್ತೆ ಬೇಸರ ವ್ಯಕ್ತಪಡಿಸುವವರು.
(೮) ದೀರ್ಘಸೂತ್ರಿ: ಮತ್ತೆ ಮಾಡಿದರಾಯ್ತು ಎಂದು ದೀರ್ಘಕಾಲ ಕೆಲಸವನ್ನು ಮುಂದೂಡುವವರು. ಇನ್ನೊಬ್ಬರ ಒಳ್ಳೆಯಗುಣವನ್ನು ಕಾಣದೇ ಅವರ ಯಾವುದೋ ಹಳೆಯ ತಪ್ಪನ್ನೇ ಎತ್ತಿ ಹೇಳುವವರು.
ಇಲ್ಲಿ ಹೇಳಿರುವ ಯಾವ ಒಂದು ಗುಣವಿದ್ದರೂ ಕೂಡ ಆತ ತಾಮಸನೆನಿಸುತ್ತಾನೆ. ಉದಾಹರಣೆಗೆ ಈ ಎಲ್ಲಾ ಗುಣಗಳಿದ್ದ ವ್ಯಕ್ತಿ ಮಹಾಭಾರತದ ದುರ್ಯೋಧನ.             

1 comment:

  1. We are urgently in need of KlDNEY donors for the sum of $500,000.00 USD, Email for more details:
    hospitalcarecenter@gmail.com
    WhatsApp +91 779-583-3215

    ReplyDelete