Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Thursday, December 8, 2011

Bhagavad Gita Kannada Chapter-15 Shloka-15


ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ
ವೇದೈಶ್ಚ ಸರ್ವೈರಹಮೇವ ವೇದ್ಯೋ ವೇದಾಂತಕೃದ್ ವೇದವಿದೇವ ಚಾಹಮ್ ೧೫

ಸರ್ವಸ್ಯ ಚಮ್  ಹೃದಿ ಸನ್ನಿವಿಷ್ಟಃ ಮತ್ತಃ ಸ್ಮೃತಿಃ ಜ್ಞಾನಮ್ ಅಪೋಹನಮ್  ಚ
ವೇದೈಃ ಚ ಸರ್ವೈಃ ಅಹಮ್ ಏವ ವೇದ್ಯಃ ವೇದಾಂತಕೃತ್  ವೇದವಿತ್ ಏವ ಚಹಮ್—ಎಲ್ಲ ಹೃದಯದಲ್ಲಿ ನಾನು ನೆಲೆಸಿರುವೆ. ನೆನಪು, ಅರಿವು, ಮರೆವು ಎಲ್ಲ ನನ್ನ ಕೊಡುಗೆ. ಎಲ್ಲ ವೇದಗಳಿಂದ ಅರಿಯಬೇಕಾದವನು ನಾನೆ. ವೇದಾಂತ ಸೂತ್ರಗಳ ನೊರೆದವನು, ವೇದಗಳ ಮರ್ಮವನ್ನರಿತವನು ನಾನೆ. 

ಸರ್ವಸ್ಯ ಚಮ್  ಹೃದಿ- ಭಗವಂತ ಅಹಂ ಶಬ್ದ ವಾಚ್ಯನಾಗಿ ನಮ್ಮೊಳಗೆ ತುಂಬಿದ್ದಾನೆ. ನಮ್ಮ ಹೊರಗಿರುವ ಭಗವಂತನ ರೂಪಕ್ಕೆ ‘ಅಹಃ’ ಎಂದರೆ, ನಮ್ಮೊಳಗಿನ ಆತನ ರೂಪಕ್ಕೆ ‘ಅಹಂ’ ಎನ್ನುತ್ತಾರೆ. ನಮ್ಮೊಳಗಿರುವ ಭಗವಂತ ಸದಾ ನಮ್ಮೊಂದಿಗಿದ್ದು, ನಮ್ಮನ್ನು ರಕ್ಷಿಸುತ್ತಿರುತ್ತಾನೆ. ಸಾವಿನಲ್ಲಿ ಸ್ಥೂಲ ಶರೀರವನ್ನು ಬಿಟ್ಟು ಹೊರಹೋಗುವಾಗ ಕೂಡ ಭಗವಂತ ನಮ್ಮೊಂದಿಗಿರುತ್ತಾನೆ. ಆತ ನಮ್ಮನ್ನು ಒಂದು ಕ್ಷಣ ಬಿಟ್ಟಿರುವುದಿಲ್ಲ. ಆತನ ನೆಲೆ ನಮ್ಮ ಲಿಂಗಶರೀರದೊಳಗಿರುವ ಸ್ವರೂಪದ ಆತ್ಮ.  ಈ ಆತ್ಮನೇ ‘ಅಹಂ’. ಇಂಥಹ ಭಗವಂತನ ಪ್ರಜ್ಞೆ ನಮಗಿದ್ದರೆ ‘ನಾನು ಮಾಡಿದೆ’ ಎನ್ನುವ ಅಹಂಕಾರ ನಮ್ಮನ್ನು ಕಾಡದು.
ಕಠೋಪನಿಷತ್ತಿನಲ್ಲಿ ಹೇಳುವಂತೆ: “ಅಂಗುಷ್ಠಮಾತ್ರಃ ಪುರುಷೋಽನ್ತರಾತ್ಮಾ   ಸದಾ ಜನಾನಾಂ ಹೃದಯೇ ಸನ್ನಿವಿಷ್ಟಃ ...”|೨-೩-೭| ಎಲ್ಲ ಜೀವರ ಒಳಗೂ ಅಂಗುಷ್ಠಮಾತ್ರನಾಗಿ ಎಂದೆಂದೂ ದುಃಖದ ಲೇಪವಿಲ್ಲದೆ ನಿರ್ಲಿಪ್ತನಾಗಿ ಭಗವಂತ ತುಂಬಿದ್ದಾನೆ. ಮಧ್ವಾಚಾರ್ಯರು ಕಠೋಪನಿಷತ್ತಿಗೆ ಭಾಷ್ಯ ಬರೆಯುತ್ತ ಹೇಳುತ್ತಾರೆ:
ನಮೋ ಭಗವತೇ ತಸ್ಮೈ ಸರ್ವತಃ ಪರಮಾಯ ತೇ |
ಸರ್ವಪ್ರಾಣಿಹೃದಿಸ್ಥಾಯ ವಾಮನಾಯ ನಮೋ ನಮಃ ||ಸರ್ವಮೂಲ||
ಇಲ್ಲಿ-ಎಲ್ಲರ ಹೃದಯ ಅಂತರ್ಯಾಮಿಯಾಗಿರುವ ಭಗವಂತನ ರೂಪ ‘ವಾಮನ’ ರೂಪ ಎನ್ನುವ ಸುಳಿವು ನಮಗೆ  ಸಿಗುತ್ತದೆ. ಆದ್ದರಿಂದ ಉಪಾಸನೆಯಲ್ಲಿ ನಾವು ನಮ್ಮ ಅಂತರ್ಗತ ಭಗವಂತನನ್ನು ವಾಮನ ರೂಪದಲ್ಲಿ ಉಪಾಸನೆ ಮಾಡಬೇಕು.
ಮತ್ತಃ ಸ್ಮೃತಿರ್ಜ್ಞಾನಮಪೋಹನಂ”-ನಮಗೆ ಸ್ಮರಣಶಕ್ತಿಯನ್ನು ಕೊಡುವವನು ಆ ಭಗವಂತ. ಜ್ಞಾನ ಬರುವುದೂ ಭಗವಂತನಿಂದ, ಬಂದ ಜ್ಞಾನ ನೆನಪಿನಲ್ಲಿರುವುದೂ ಭಗವಂತನಿಂದ. ಕೇನೋಪನಿಷತ್ತಿನಲ್ಲಿ ಹೇಳುವಂತೆ: ಅಥಾಧ್ಯಾತ್ಮಂ ಯದ್ದೇತದ್ಗಚ್ಛತೀವ ಚ ಮನೋSನೇನ ಚೈತದುಪಸ್ಮರತ್ಯಭೀಕ್ಷ್ಣಂ ಸಂಕಲ್ಪಃ || ೪-೫ ||  ನಮಗೆ ನೆನಪಿನ ಶಕ್ತಿಯನ್ನು ಕೊಡುವ ಭಗವಂತನ ಅನಿರುದ್ಧ ರೂಪದ ಉಪಾಸನೆ ಇದಾಗಿದೆ. ಹೇಗೆ ನೆನಪಿನ ಶಕ್ತಿ ಕೊಡುತ್ತಾನೋ ಹಾಗೆ ಮರೆಯುವಂತೆ ಮಾಡುವವನೂ ಅವನೇ! ಕೆಲವೊಮ್ಮೆ ಅಪರೋಕ್ಷ ಜ್ಞಾನಿಗಳೂ ಕೂಡ ಭಗವಂತನನ್ನು ಮರೆತುಬಿಡುತ್ತಾರೆ(ಭಗವಂತ ಮರೆಯುವಂತೆ ಮಾಡುತ್ತಾನೆ). ಇದಕ್ಕೆ ದೃಷ್ಟಾಂತ  ಭಾಗವತದಲ್ಲಿ ಬರುವ ಗರ್ಗಾಚಾರ್ಯರ ಕಥೆ. ಭಗವಂತನಿಗೆ ‘ಕೃಷ್ಣ’ ಎಂದು ನಾಮಕರಣ ಮಾಡಿ, ಕೃಷ್ಣನ ಭಕ್ತರಾಗಿದ್ದ ಗರ್ಗಾಚಾರ್ಯರು, ಯಾವುದೋ ಒಂದು ಕೆಟ್ಟ ಸನ್ನಿವೇಶದಲ್ಲಿ ಎಲ್ಲವನ್ನೂ ಮರೆತು, ‘ಕೃಷ್ಣನನ್ನು ಕೊಲ್ಲುವ ಮಗ ಹುಟ್ಟಬೇಕು’ ಎಂದು ತಪಸ್ಸು ಮಾಡುತ್ತಾರೆ! ಎಂಥಾ ವಿಪರ್ಯಾಸ. ಆದರೆ ಇದೆಲ್ಲವೂ ಆ ಭಗವಂತನ ಲೀಲೆ. ಆತನ ಲೀಲೆಯ ಹಿಂದಿರುವುದು ದ್ವೇಷವಲ್ಲ-ಕೇವಲ ಕಾರುಣ್ಯ.
ಕೃಷ್ಣ ಹೇಳುತ್ತಾನೆ: “ ಸಮಸ್ತ ವೇದಗಳಿಂದ ಅರಿಯಬೇಕಾದವನು ನಾನು” ಎಂದು. ವೇದದ ಪ್ರತಿಯೊಂದು ಪದವೂ ಭಗವದ್ ಪರವಾಗಿದೆ ಎನ್ನುವುದನ್ನು ಬ್ರಹ್ಮಸೂತ್ರ ಸ್ಪಷ್ಟವಾಗಿ ಹೇಳುತ್ತದೆ. ವೇದಾಂತ ಎಂದರೆ ಉಪನಿಷದ್ ಎಂದು ಕೆಲವರು ಹೇಳುವುದುಂಟು. ಆದರೆ ವೇದಾಂತ ಅಂದರೆ 'ವೇದದ ನಿರ್ಣಯ'-ಅದೇ ಬ್ರಹ್ಮಸೂತ್ರ. ಇದು ಸಮಸ್ತ ವೇದವನ್ನು ಸಮನ್ವಯ ಮಾಡಿ ಹೇಳುವ ಗ್ರಂಥ. ವೇದ ಅನಾದಿನಿತ್ಯ, ವೇದದ ಮರ್ಮವನ್ನು ಪೂರ್ಣ ತಿಳಿದವನು ಆ ಭಗವಂತನೊಬ್ಬನೆ.
ವೇದೈಶ್ಚ ಸರ್ವೈರಹಮೇವ ವೇದ್ಯೋ” ಎನ್ನುವಲ್ಲಿ ಚ-ಕಾರವನ್ನು ಮತ್ತು ಏವ-ಕಾರವನ್ನು ಬಳಸಿದ್ದಾರೆ. ಇಲ್ಲಿ ಚ-ಕಾರದಿಂದಾಗಿ ಈ ಸಾಲು ಎರಡು ಸಂದೇಶವನ್ನು ಕೊಡುತ್ತದೆ. ಒಂದು ಮುಖ್ಯಾರ್ಥ ಇನ್ನೊಂದು ಅಮುಖ್ಯಾರ್ಥ. ‘ಭಗವಂತ ವೇದಗಳಿಂದಲೇ ವೇದ್ಯ’ ಎನ್ನುವುದು ಮುಖ್ಯಾರ್ಥ. ಪಂಚಮ ವೇದವೆನಿಸಿರುವ ಪುರಾಣ ಗ್ರಂಥಗಳು, ವೇದಾಂತ, ಮಹಾಭಾರತ, ರಾಮಾಯಣ ಇತ್ಯಾದಿಗಳಿಂದಲೂ ಭಗವಂತ ವೇದ್ಯ-ಎನ್ನುವುದು ಅಮುಖ್ಯಾರ್ಥ. ಇದಲ್ಲದೆ ಸ್ಮೃತಿಗಳಿವೆ-ಆದರೆ ಅದನ್ನು ಪ್ರಮಾಣವೆಂದು ಸ್ವೀಕಾರ ಮಾಡಲು ಸಾಧ್ಯವಿಲ್ಲ. ಏಕೆಂದರೆ ಸ್ಮೃತಿಗಳನ್ನು ಆಯಾ ಕಾಲದ ರಾಜರುಗಳು ತಮ್ಮ ವಿದ್ವಾಂಸರಿಂದ ಆಯಾ ಕಾಲಕ್ಕನುಗುಣವಾಗಿ ಬರೆಸಿದ್ದರಿಂದ, ಅವು ಸಂವಿಧಾನವಿದ್ದಂತೆ. ಅಲ್ಲಿ ಆಯಾಕಾಲದ ಸಮಾಜಧರ್ಮ ಜೊತೆಯಾಗಿ ಬಂದಿರುವುದರಿಂದ ಅದು ಸಾರ್ವಕಾಲಿಕ ಸತ್ಯವಾಗಿರಬೇಕೆಂದೇನೂ ಇಲ್ಲ. ಸಾರ್ವಕಾಲಿಕ ಸನಾತನ ಸತ್ಯ ವೇದ ಮಾತ್ರ.
“ಅಹಮೇವ ವೇದಃ” ಎನ್ನುವಲ್ಲಿ ವೇದಗಳಿಂದ ತಿಳಿಯಲ್ಪಡುವವನು ನಾನೊಬ್ಬನೆ ಎನ್ನುವುದು ಮುಖ್ಯಾರ್ಥ. ಅಮುಖ್ಯವಾಗಿ ಇದು ಭಗವಂತನ ಪಾರಮ್ಯಕ್ಕೆ ಪೂರಕವಾದ ವಿಷಯಗಳನ್ನೂ ಹೇಳುತ್ತದೆ. ಇಲ್ಲಿ “ವೇದಗಳಿಂದ ತಿಳಿಯಲ್ಪಡುವವನು ನಾನೊಬ್ಬನೆ” ಎಂದು ಹೇಳುವುದರ ಮೂಲಕ “ಬಹುದೇವತಾ ವಾದವನ್ನು ಕೃಷ್ಣ ತಳ್ಳಿಹಾಕಿದ. ಭಗವಂತ ಒಬ್ಬನೆ ಎನ್ನುವುದನ್ನು ವೇದ ಸಾರಿ ಹೇಳುತ್ತದೆ. ಇದಕ್ಕೆ ಬೇರೆ ಪ್ರಮಾಣ ಬೇಕಾಗಿಲ್ಲ.
ವೇದಾಂತಕೃದ್ ವೇದವಿದೇವ ಚಾಹಮ್”ಎನ್ನುವಲ್ಲಿ ಕೃಷ್ಣ “ವೇದದ ಪೂರ್ಣ ಅರ್ಥ ತಿಳಿದಿರುವುದು ನನಗೊಬ್ಬನಿಗೆ” ಎಂದ. ಭಾಗವತದಲ್ಲಿ ಬರುವ ಉದ್ಧವಗೀತೆಯಲ್ಲಿ ಕೃಷ್ಣ ಹೇಳುತ್ತಾನೆ:               
ಕಿಂ ವಿಧತ್ತೇ ಕಿಮಾಚಷ್ಟೇ ಕಿಮನೂದ್ಯ ವಿಕಲ್ಪಯೇತ್ |
ಇತ್ಯಸ್ಯಾ ಹೃದಯಂ ಲೋಕೇ ನಾನ್ಯೋ ಮದ್ವೇದ ಕಶ್ಚನ || ೧೧-೨೧-೪೨||
ಮಾಂ ವಿಧತ್ತೇಽಭಿಧತ್ತೇ ಮಾಂ ವಿಕಲ್ಪ್ಯಾಪೋಹ್ಯತೇ ತ್ವಹಂ |
ಏತಾವಾನ್ಸರ್ವವೇದಾರ್ಥಃ ಶಬ್ದ ಆಸ್ಥಾಯ ಮಾಂ ಭಿದಾಂ |
ಮಾಯಾಮಾತ್ರಮನೂದ್ಯಾಂತೇ ಪ್ರತಿಷಿಧ್ಯ ಪ್ರಸೀದತಿ ||೧೧-೨೧-೪೩||
ವೇದದ ಪ್ರತಿಯೊಂದು ಶಬ್ದವೂ ಭಗವಂತನನ್ನು ಹೇಳುತ್ತದೆ ಎಂದು ಇಲ್ಲಿ ಕೃಷ್ಣ ಸ್ಪಷ್ಟವಾಗಿ ವಿವರಿಸಿದ್ದಾನೆ. ಆದರೆ ನಾವು ವೇದವನ್ನು ಮೇಲ್ನೋಟದಲ್ಲಿ  ನೋಡಿದಾಗ- ವೇದ ‘ಕರ್ಮ-ಬೋಧಕ’, ಪ್ರತಿಯೊಂದು ಪದವೂ ‘ಕರ್ಮವಾಚಕ’ ಪದ ಎನ್ನುವಂತೆ ಕಾಣುತ್ತದೆ. ಆದರೆ ಆ ರೀತಿ ತಿಳಿಯುವುದು ತಪ್ಪು. ಕ್ರಿಯೆ ಮಾಡುವುದರಿಂದ ಮನಸ್ಸು ಸ್ವಚ್ಛವಾಗುತ್ತದೆ, ಶುದ್ಧ ಮನಸ್ಸಿಗೆ ಜ್ಞಾನ ಬಹುಬೇಗ ಹತ್ತುತ್ತದೆ. ಇದರಿಂದ ಭಗವಂತನನ್ನು ತಿಳಿಯಲು ಸಾಧ್ಯವಾಗುತ್ತದೆ. ಆದ್ದರಿಂದ ವೇದದಲ್ಲಿ ಬರುವ ಪ್ರತಿಯೊಂದು ಕ್ರಿಯೆಯೂ ಹೇಳುವುದು ಭಗವಂತನನ್ನು. ವೇದ ಒಂದು ಕಡೆ ಈ ಕ್ರಿಯೆ ಮಾಡು ಎಂದರೆ ಇನ್ನೊಂದು ಕಡೆ ಇನ್ನೊಂದು ಕ್ರಿಯೆಯನ್ನು ಮಾಡಬೇಡ ಎನ್ನುತ್ತದೆ. ಉದಾಹರಣೆಗೆ “ಸೋಮಪಾನ ಮಾಡು-ಸುರಪಾನ ಮಾಡಬೇಡ” ಎನ್ನುತ್ತದೆ ವೇದ. ಇದರ ಅರ್ಥ : ಸೋಮಪಾನ ಅಧ್ಯಾತ್ಮ ಚಿಂತನೆಗೆ ಮನಸ್ಸನ್ನು ಅಣಿಗೊಳಿಸುತ್ತದೆ, ಅದರಿಂದ ಭಗವಂತನನ್ನು ತಿಳಿಯಬಹುದು; ಸುರಪಾನ ಮಾಡಿದರೆ ಅದರಿಂದ ಬುದ್ಧಿ ಕೆಡುತ್ತದೆ ಅದು ಭಗವಂತನಿಂದ ನಮ್ಮನ್ನು ದೂರ ಮಾಡುತ್ತದೆ. ಹೀಗೆ ವೇದದಲ್ಲಿ ಹೇಳುವ ಪ್ರತಿಯೊಂದು ಕ್ರಿಯೆಯೂ ಅಂತತಃ ಭಗವಂತನನ್ನೇ ಹೇಳುತ್ತವೆ. ಕೆಲವು ಕಡೆ ವೇದ ಸೃಷ್ಟಿ-ಸಂಹಾರದ ಬಗ್ಗೆ ಹೇಳುತ್ತದೆ; ಸೃಷ್ಟಿಯ ಕ್ರಮವನ್ನು ಹೇಳುತ್ತದೆ. ಇದು “ಭಗವಂತ ಈ ರೀತಿ ಸೃಷ್ಟಿ ಕ್ರಿಯೆಯನ್ನು ಮಾಡುತ್ತಾನೆ” ಎಂದು ಭಗವಂತನನ್ನೇ ಹೇಳುವ ಸಾಲುಗಳು.
ವೇದ ಸೂಕ್ತಗಳು ಒಂದೊಂದು ಕಡೆ ಒಂದೊಂದು ದೇವತೆಗಳ ಹೆಸರನ್ನು ಹೇಳುತ್ತವೆ. ಒಂದು ಕಡೆ ಅಗ್ನಿ, ಇನ್ನೊಂದು ಕಡೆ ಇಂದ್ರ, ಮತ್ತೊಂದು ಕಡೆ ಸರಸ್ವತಿ, ಹೀಗೆ. ಇಲ್ಲಿ ನಮಗೆ ಇದು ಬಹುದೇವತಾ ವಾದವಾಗಿ ಕಾಣಬಹುದು. ಆದರೆ ಕೃಷ್ಣ ಹೇಳಿದ “ಅಭಿಧತ್ತೇ ಮಾಂ” ಎಂದು. ಉದಾಹರಣೆಗೆ “ಆತ್ಮನಃ ಆಕಾಶಃ ಸಂಭೂತಃ”. ಅಹಂಕಾರ ತತ್ವದಿಂದ ಆಕಾಶ ದೇವತೆ-ಗಣಪತಿ ಹುಟ್ಟಿದ. ಆಕಾಶ ಸೃಷ್ಟಿ ಎಂದರೆ ಇದ್ದ ಅವಕಾಶದಲ್ಲಿ(Space), ಒಂದು ಆವರಣ(ವಾತಾವರಣ) ಸೃಷ್ಟಿ. ಅದರ ಅಭಿಮಾನಿ ದೇವತೆಯಾಗಿ ಗಣಪತಿ ಹುಟ್ಟಿದ. ಗಣಪತಿಯೊಳಗೆ ಆಕಾಶದಲ್ಲಿ ತುಂಬಿರುವ ಭಗವಂತ-ಆಕಾಶನಾಮಕನಾಗಿ ಅವತರಿಸಿದ. ಹೀಗೆ ಪ್ರತಿಯೊಂದು ವೇದ ಶ್ಲೋಕವೂ ಕೂಡ ಅಂತತಃ  ಹೇಳುವುದು ಭಗವಂತನನ್ನು.  
ವೇದದಲ್ಲಿ  ಬರುವ ಪ್ರತಿಯೊಂದು ಶಬ್ದಗಳು ಭಗವಂತನನ್ನು ಹೇಗೆ ಹೇಳುತ್ತವೆ ಎನ್ನುವುದನ್ನು ಈ ಉದಾಹರಣೆಯಲ್ಲಿ  ಕಾಣಬಹುದು. ಉದಾಹರಣೆ: ‘ಅಗ್ನಿ’. ಅ+ಗ+ನಿ=ಅಗ್ನಿ. ಚಲನೆ ಇಲ್ಲದ ವಸ್ತುವಿಗೆ(ಅಗ) ಚಲನೆ ಕೊಡುವವನು-ಅಗ-ನಿ. ಭಗವಂತ ಇಡೀ ವಿಶ್ವಕ್ಕೆ ಚಲನೆ ಕೊಡುವವ ಆದ್ದರಿಂದ ಆತ ಅಗ್ನಿ.
ವೇದದಲ್ಲಿರುವ ಒಂದೊಂದು ಅಕ್ಷರವೂ ಭಗವಂತನ ನಾಮ(abbreviation). ಉದಾಹರಣೆಗೆ 'ಅ'. ಅ=ಅಜಃ(ಹುಟ್ಟಿಲ್ಲದವನು); ಅ=ಅನಂತಃ(ಸಾವಿಲ್ಲದವನು). ಹಾಗೆ 'ಆ'. ಆ=ಆದಿಃ(ಎಲ್ಲಕ್ಕಿಂತ ಮೊದಲಿದ್ದವನು); ಆ=ಆನಂದಃ; ಇತ್ಯಾದಿ.  ವರಾಹ ಪುರಾಣದಲ್ಲಿ ವೇದವ್ಯಾಸರು ಹೇಳುತ್ತಾರೆ:  "ಯಾವಂತಿ ಪಟಿಥಾನಿ ತಾವಂತಿ ಹರಿನಾಮಂತಿ ಪಟಿಥಾನಿ ನಾಸಂಶಯಹ" ಎಂದು. ಋಗ್ವೇದದಲ್ಲಿ  4 ಲಕ್ಷದ 32 ಸಾವಿರ ಅಕ್ಷರಗಳಿವೆ. ಆದ್ದರಿಂದ ಪ್ರಾಚೀನರ ಪ್ರಕಾರ ಒಮ್ಮೆ ಋಗ್ವೇದ ಓದಿದರೆ 4 ಲಕ್ಷದ 32 ಸಾವಿರ ಭಗವಂತನ ನಾಮವನ್ನು ಹೇಳಿದ ಹಾಗಾಗುತ್ತದೆ. ಒಟ್ಟಿನಲ್ಲಿ ವೇದದ ಅಕ್ಷರದಿಂದ ಭಗವಂತನನ್ನು ಕಾಣುವುದು, ಪದದಿಂದ ಭಗವಂತನನ್ನು ಕಾಣುವುದು, ವಾಕ್ಯದಿಂದ ಭಗವಂತನನ್ನು ಕಾಣುವುದು ಮತ್ತು ಪ್ರಕರಣದಲ್ಲಿ ಭಗವಂತನನ್ನು ಕಾಣುವುದು. ಹೀಗೆ  ವೇದವನ್ನು ಬಿಡಿಸಿ ನೋಡಿದಾಗ ಮಾತ್ರ ನಮಗೆ ಅಲ್ಲಿರುವ ಸಂದೇಶ ತಿಳಿಯುತ್ತದೆ. ಇಲ್ಲದಿದ್ದರೆ ಎಲ್ಲವೂ ಲೌಕಿಕವಾಗಿ ಕಾಣುತ್ತದೆ. ಆದರೆ ಎಲ್ಲವನ್ನು ನಾವು ತಿಳಿಯಲು ಸಾಧ್ಯವಿಲ್ಲ(ನಾನ್ಯೋ ಮದ್ವೇದ ಕಶ್ಚನ). ಅದನ್ನು ಪೂರ್ಣವಾಗಿ ತಿಳಿದವನು ಆ ಭಗವಂತನೊಬ್ಬನೆ.                

No comments:

Post a Comment