Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, December 25, 2011

Bhagavad GitA Kannada Chapter-17 Shloka 23-28


ಈವರೆಗೆ ಕೃಷ್ಣ ಹೇಳಿದ ಸಾತ್ವಿಕ ಕರ್ಮದ ಮಹತ್ವವನ್ನು ಹೇಳುವ ‘ಅರ್ಥವಾದ’ ಈ ಅಧ್ಯಾಯದ ಮುಂದಿನ ಭಾಗ. ‘ಅರ್ಥವಾದ’ ಎಂದರೆ ಸಾತ್ವಿಕ ಕರ್ಮದ ಮಹತ್ವಿಕೆಯನ್ನು ಹೇಳುವ ನಿರೂಪಣೆ.

ಓಂ ತತ್ ಸದಿತಿ ನಿರ್ದೇಶೋ ಬ್ರಹ್ಮಣಸ್ತ್ರಿವಿಧಃ ಸ್ಮೃತಃ
ಬ್ರಾಹ್ಮಣಾಸ್ತೇನ ವೇದಾಶ್ಚ ಯಜ್ಞಾಶ್ಚ ವಿಹಿತಾಃ ಪುರಾ                       ೨೩

ಓಂ ತತ್ ಸತ್ ಇತಿ ನಿರ್ದೇಶಃ  ಬ್ರಹ್ಮಣಃ ತ್ರಿವಿಧಃ ಸ್ಮೃತಃ
ಬ್ರಾಹ್ಮಣಾಃ ತೇನ ವೇದಾಃ ಚ  ಯಜ್ಞಾಃ ಚ  ವಿಹಿತಾಃ ಪುರಾ ಓಂ [ಪ್ರಪಂಚವನ್ನು ಹೊತ್ತವನು ಮತ್ತು ಪ್ರಪಂಚದಲ್ಲಿ ತುಂಬಿರುವವನು], ತತ್ [ವೇದಗಳ ಮೂಲಕ, ಪರೋಕ್ಷವಾಗಿ ಮಾತ್ರ ತಿಳಿಯಲು ಸಾಧ್ಯವಾದವನು] ಸತ್  [ಎಲ್ಲ ಶುಭ ಗುಣಗಳಿಂದ ಪೂರ್ಣನಾದವನು] – ಇವು ಭಗವಂತನ ಮೂರು ಹೆಸರುಗಳು. ಆ ಭಗವಂತನೆ ವೇದಗಳನ್ನೂ, ವೇದಜ್ಞರನ್ನೂ ಮತ್ತು ಯಜ್ಞಗಳನ್ನೂ ಅಣಿಗೊಳಿಸಿದನು.  

ಓಂ, ತತ್, ಸತ್  ಇವು ಮೂರು ಭಗವಂತನ ಹೆಸರುಗಳು. ಭಗವಂತನ ಸ್ಮರಣೆಗಾಗಿ, ಭಗವಂತನನ್ನು ಕರೆಯುವುದಕ್ಕಾಗಿ ಜ್ಞಾನಿಗಳು ಈ ರೀತಿ ಅನುಸಂಧಾನವನ್ನು ಬಳಕೆಗೆ ತಂದರು. ಭಗವಂತನ ಹೆಸರು ನಮ್ಮ ಹೆಸರಂತಲ್ಲ. ಆತನ ಹೆಸರು ಆತನ ಗುಣವಾಚಕ ಪದಗಳು. ‘ಓಂ’ ಭಗವಂತನಿಗೆ ಮೀಸಲಾದ( Exclusive) ಹೆಸರು. ಇದು ಮನುಷ್ಯನ ಒಟ್ಟು ಜೀವನದ ಎಲ್ಲ ಮುಖವನ್ನು ಮೂರು ಅಕ್ಷರಗಳಲ್ಲಿ(ಅ, ಉ, ಮ್) ಹೇಳುತ್ತದೆ. ಇಡೀ ಜಗತ್ತು ಯಾರಲ್ಲಿ ಓತವಾಗಿದೆಯೋ, ಇಡೀ ಜಗತ್ತು ಯಾರಲ್ಲಿ ಹೆಣೆದುಕೊಂಡಿದೆಯೋ –ಅವನು ‘ಓಂ’.  ನಾವು ಮಾಡುವ ಸಮಸ್ತ ಕರ್ಮವೂ ಅವನಲ್ಲಿ ಅರ್ಪಿತವಾಗಿದೆ ಎಂದು ಹೇಳುವುದಕ್ಕಾಗಿ ಓಂಕಾರವನ್ನು ಬಳಸುತ್ತಾರೆ. ‘ಹರಿಃ ಓಂ’ ಎಂದು ಪ್ರಾರಂಭದಲ್ಲಿ ಹೇಳಿದರೆ - “ನಾನು ಮುಂದೆ ಮಾಡತಕ್ಕ ಸಮಸ್ತವೂ  ಭಗವಂತನಿಗೆ ಅರ್ಪಿತವಾಗಿದೆ” ಎಂದು ಹೇಳಿದಂತೆ. [ಓಂಕಾರದ ಬಗ್ಗೆ ಹೆಚ್ಚಿನ ವಿವರಣೆಗಾಗಿ ಅಧ್ಯಾಯ-೭ ಶ್ಲೋಕ ೮-೯ ನೋಡಿ).
‘ತತಃ’ ಅಂದರೆ ತುಂಬಿರುವವನು. ಭಗವಂತ ಸಮಸ್ತ ಗುಣಗಳ ನೆಲೆ. ಗುಣಪರಿಪೂರ್ಣನಾದ ಅವನು ಸಮಸ್ತ ವೇದದಲ್ಲಿ ತುಂಬಿದ್ದಾನೆ. ಆದ್ದರಿಂದ ಆತ ‘ತತ್'. ಇನ್ನು  ‘ಸತ್ ‘ ಎಂದರೆ ಯಾವ ದೋಷವೂ ಇಲ್ಲದವ. ಹೀಗೆ ಓಂ-ತತ್-ಸತ್ ಎನ್ನುವುದು ವೇದಕಾಲದ ನಾಮತ್ರಯಗಳು. ಇಂದು ನಾವು ಹೇಳುವ ಅಚ್ಯುತಾಯನಮಃ, ಅನಂತಾಯನಮಃ, ಗೋವಿಂದಾಯ ನಮಃ ಕೂಡ ಇದೇ ಅರ್ಥವನ್ನು ಕೊಡುತ್ತದೆ. ಅ-ಚ್ಯುತ ಅಂದರೆ ಯಾವ ಗುಣದಿಂದಲೂ ಚ್ಯುತನಾದವನಲ್ಲ ಎಂದರ್ಥ. ಅವನಿಂದ ಚ್ಯುತನಾಗಿ ಈ ಜಗತ್ತಿಗೆ ಅಸ್ತಿತ್ವವಿಲ್ಲ. ಆತ ಸರ್ವ ಜಗತ್ತಿಗೆ ಆಧಾರ. ಇನ್ನು ಎರಡನೇ ನಾಮ –ಅನಂತ. ಅಂತವಿಲ್ಲದ್ದು ಅನಂತ. ಯಾರ ಗುಣಗಳಿಗೆ ಕೊನೆ ಇಲ್ಲವೋ ಅವನು ಅನಂತ. ಮೂರನೆಯ ನಾಮ ಗೋವಿಂದ. ಗೋ-ಅಂದರೆ ವೇದಗಳು. ಸಮಸ್ತ ವೇದಗಳಿಂದ ಪ್ರತಿಪಾದ್ಯನಾದ  ಭಗವಂತ-ಗೋವಿಂದ. ಒಟ್ಟಿನಲ್ಲಿ ಸಂಕ್ಷಿಪ್ತವಾಗಿ ಇಲ್ಲಿ - ಓಂ ತತ್ ಸತ್ ಎಂದರೆ “ಜಗದಾದಾರನೂ, ಸಮಸ್ತ ಗುಣಪೂರ್ಣನೂ, ಸಮಸ್ತ ವೇದ ಪ್ರತಿಪಾದ್ಯನೂ, ಸಮಸ್ತ ದೋಷ ದೂರನೂ ಆದ ಭಗವಂತ” ಎಂದರ್ಥ. ಇಂಥಹ ಭಗವಂತ ವೇದವನ್ನು ಸೃಷ್ಟಿ ಮಾಡಿದ, ಅದರಿಂದ 'ಜ್ಞಾನಿಗಳಾಗಿ' ಎಂದು ವೇದಜ್ಞ(ಜ್ಞಾನಿ)ರನ್ನು ಸೃಷ್ಟಿ ಮಾಡಿದ, ಜ್ಞಾನ ಪೂರ್ವಕವಾಗಿ ಕರ್ಮ ಮಾಡಿರೆಂದು ಯಜ್ಞವನ್ನು ಸೃಷ್ಟಿ ಮಾಡಿದ.
ನಮ್ಮಲ್ಲಿ ಕೆಲವರು ವೇದ-‘ಪೌರುಷೇಯ’ ಎಂದೂ, ಹಾಗು ಇನ್ನು ಕೆಲವರು ವೇದ-‘ಅಪೌರುಷೇಯ’ ಎಂದೂ ವಾದ ಮಾಡುವವರಿದ್ದಾರೆ. ಸೃಷ್ಟಿ ಪೂರ್ವದಲ್ಲಿ ಪರಮಪುರುಷನಿಂದ ಉಚ್ಚರಿಸಲ್ಪಟ್ಟ ವೇದ ಪೌರುಷೇಯ;  ಇದು ಅನಾದಿ-ಅನಂತ ಕಾಲದಲ್ಲಿ ಪ್ರತೀ ಕಲ್ಪದಲ್ಲೂ ಭಗವಂತನಿಂದ ಉಚ್ಚರಿಸಲ್ಪಡುವುದರಿಂದ ಅಪೌರುಷೇಯ ಕೂಡ ಹೌದು. ಆದ್ದರಿಂದ ಈ ಕುರಿತು ಮಾಡುವ ವಾದ ವ್ಯರ್ಥ.                         

ತಸ್ಮಾದೋಮಿತ್ಯುದಾಹೃತ್ಯ ಯಜ್ಞದಾನತಪಃಕ್ರಿಯಾಃ
ಪ್ರವರ್ತಂತೇ ವಿಧಾನೋಕ್ತಾಃ ಸತತಂ ಬ್ರಹ್ಮವಾದಿನಾಮ್                ೨೪

ತಸ್ಮಾತ್ ಓಂ ಇತಿ ಉದಾಹೃತ್ಯ ಯಜ್ಞ ದಾನ ತಪಃ ಕ್ರಿಯಾಃ
ಪ್ರವರ್ತಂತೇ ವಿಧಾನ ಉಕ್ತಾಃ ಸತತಮ್  ಬ್ರಹ್ಮವಾದಿನಾಮ್ ಆದ್ದರಿಂದ ಶಾಸ್ತ್ರದ ಕಟ್ಟಳೆಗೆ  ಅನುಗುಣವಾದ, ಬ್ರಹ್ಮ ಚಿಂತಕರ ಯಜ್ಞ, ದಾನ ಮತ್ತು ತಪದ ಕ್ರಿಯೆಗಳು ಯಾವಾಗಲೂ ‘ಓಂ’ ಎಂದು ಭಗವಂತನ ನಾಮ ಸ್ಮರಣೆಯ ಜತೆಗೆಯೆ ತೊಡಗುತ್ತವೆ.

ಕರ್ಮದಲ್ಲಿ ಓಂಕಾರ ಬಳಕೆಯ ಮಹತ್ವವನ್ನು ಕೃಷ್ಣ  ಇಲ್ಲಿ ವಿವರಿಸಿದ್ದಾನೆ. ನಮಗೆ ತಿಳಿದಂತೆ ಒಬ್ಬ ವೇದಜ್ಞನಾಗಬೇಕಾದರೆ ಆತನಿಗೆ ಓಂಕಾರದ ಉಪದೇಶವಾಗಿರಬೇಕು; ಯಜ್ಞದ ಆದಿ-ಅಂತದಲ್ಲಿ ಓಂಕಾರ ಹೇಳಬೇಕು; ವೇದ ಪಠಣದ ಆದಿ-ಅಂತದಲ್ಲಿ ಓಂಕಾರವಿರಬೇಕು. ಇದೆಲ್ಲವೂ ಹಿಂದಿನಿಂದಲೂ ಬಂದಿರುವ ಆಚರಣೆಗಳು. ನಾವು ಮಾಡುವ ಯಾವ ಕಾರ್ಯವೇ ಇರಲಿ, ಅದನ್ನು ಪ್ರಾರಂಭಿಸುವಾಗ “ಇದನ್ನು ಭಗವಂತನ ಪೂಜಾರೂಪವಾಗಿ ಮಾಡುತ್ತೇನೆ” ಎನ್ನುವ ಸಂಕಲ್ಪ ಮಾಡಿ ಮಾಡುವುದು ಮತ್ತು ಅಂತ್ಯದಲ್ಲಿ  “ನಾನು ಮಾಡಿದ್ದನ್ನು ಭಗವಂತ ಸ್ವೀಕರಿಸಲಿ” ಎಂದು ಹೇಳುವುದು-ಇದರ ಮೂಲ ಉದ್ದೇಶ. ಹೀಗೆ ಓಂಕಾರ ಹೇಳಿಯೇ ಕರ್ಮ ಮಾಡಬೇಕು ಎನ್ನುವ ಆಚರಣೆ ಹಿಂದಿನಿಂದ ಬೆಳೆದುಬಂತು. ಈ ಅನುಸಂಧಾನದಿಂದ ನಾವು ಯಾವುದೇ ಪಾರಾಯಣ, ಹೋಮ, ಹವನ, ಯಜ್ಞ, ತಪಸ್ಸು, ದಾನ  ಮಾಡಿದರೂ ಕೂಡ ಅದು ಸಾತ್ವಿಕ ಕರ್ಮವೆನಿಸುತ್ತದೆ.

ತದಿತ್ಯನಭಿಸಂಧಾಯ ಫಲಂ ಯಜ್ಞತಪಃಕ್ರಿಯಾಃ
ದಾನಕ್ರಿಯಾಶ್ಚ ವಿವಿಧಾಃ ಕ್ರಿಯಂತೇ ಮೋಕ್ಷಕಾಂಕ್ಷಿಭಿಃ                     ೨೫

ತ್ ಇತಿ ಅನಭಿಸಂಧಾಯ ಫಲಂ ಯಜ್ಞ ತಪಃ ಕ್ರಿಯಾಃ
ದಾನ ಕ್ರಿಯಾಃ ಚ  ವಿವಿಧಾಃ ಕ್ರಿಯಂತೇ ಮೋಕ್ಷಕಾಂಕ್ಷಿಭಿಃ – ಮೋಕ್ಷ ಬಯಸುವ ಸಜ್ಜನರು ಫಲವನ್ನು ಬಯಸದೆ, ‘ತತ್’ ಎನಿಸಿದ ಭಗವಂತನಿಗಾಗಿ ಬಗೆಬಗೆಯ ಯಜ್ಞ, ದಾನ ಮತ್ತು ತಪದ ಕ್ರಿಯೆಗಳನ್ನು ಆಚರಿಸುತ್ತಾರೆ.

‘ತತ್’ ಎನ್ನುವುದು ಸಮಸ್ತ ವೇದ ವಾಚ್ಯನಾದ ಭಗವಂತನ್ನು ಹೇಳುತ್ತದೆ ಎನ್ನುವುದನ್ನು ಹಿಂದೆ ನೋಡಿದ್ದೇವೆ. ಇಲ್ಲಿ-ನಾವು ಮಾಡುವ ಕರ್ಮದಲ್ಲಿ ‘ತತ್’ ಏನನ್ನು ಹೇಳುತ್ತದೆ ಎನ್ನುವುದನ್ನು ಕೃಷ್ಣ ವಿವರಿಸಿದ್ದಾನೆ. ‘ತತ್’ ಎನ್ನುವುದು ವೇದಮಾತಾ ಗಾಯತ್ರಿಯ ಸಂಕ್ಷಿಪ್ತಪದ(Abbreviation; ಮೊದಲ ಮತ್ತು ಕೊನೆಯ ಅಕ್ಷರ) ಹೀಗಾಗಿ ಇದು ಗಾಯತ್ರಿ ವಾಚ್ಯ ಭಗವಂತನ ಮುಖ್ಯ ನಾಮಧೇಯ. ‘ತತ್’ ಎನ್ನುವುದು ಕರ್ಮದಲ್ಲಿ ಭಗವಂತನು ಕೊಡುವ ಫಲವನ್ನು ಹೇಳುತ್ತದೆ. ‘ತತ್’ ಎಂದರೆ ಯಾವುದೇ ಐಹಿಕ ಫಲದ ಆಸೆ ಇಲ್ಲದೆ, ಭವಬಂಧನದಿಂದ ಬಿಡುಗಡೆಗೊಳಿಸಿ ಮೋಕ್ಷವನ್ನು ಕೊಡುವ ಭಗವಂತನ ಪ್ರೀತಿಗಾಗಿ ಮಾಡುವ ಕರ್ಮ. ಅದು ಯಜ್ಞವಿರಬಹುದು, ತಪಸ್ಸಿರಬಹುದು ಅಥವಾ ದಾನವಿರಬಹುದು. ಜ್ಞಾನಿಗಳು ದಾನ ಮಾಡುವಾಗ ಕೂಡ ಯಾವುದೇ ಐಹಿಕ ಫಲದ ಅಪೇಕ್ಷೆ ಇಲ್ಲದೆ ದಾನ ಮಾಡುತ್ತಾರೆ. ಉದಾಹರಣೆಗೆ ಅನ್ನದಾನ: ಅನ್ನದ ಅಭಿಮಾನಿ ಲಕ್ಷ್ಮಿ; ಅನ್ನದಾನ ಎಂದರೆ ದಾನ ಸ್ವೀಕರಿಸುವವನೊಳಗಿರುವ ವೈಶ್ವಾನರ ರೂಪಿ ನಾರಾಯಣನಿಗೆ ಲಕ್ಷ್ಮಿಯ ಸಮರ್ಪಣೆ. ಇದೇ ರೀತಿ ಕನ್ಯಾದಾನ: ಕನ್ಯಾದಾನ ಮಾಡುವಾಗ ಕನ್ಯಾಪಿತೃಗಳು ಗಂಡಿನ ಆಸ್ತಿ, ಹುದ್ದೆ,  ಸಂಬಳ ನೋಡಿ ದಾನ ಮಾಡುವುದಲ್ಲ. ಬದಲಿಗೆ ಹುಡುಗಿಯ ಒಳಗಿರುವ ಲಕ್ಷ್ಮಿಯನ್ನು ಹುಡುಗನ ಒಳಗಿರುವ ನಾರಾಯಣನಿಗೆ ಅರ್ಪಿತವಾಗಲಿ ಎನ್ನುವ  ಅನುಸಂಧಾನದಿಂದ  ನೀಡುವುದು. ಹೀಗೆ ಮೊಕ್ಷಕಾಂಕ್ಷಿಗಳು  “ಎಲ್ಲ ಮಾಡಿಸುವವನು ಆ ಭಗವಂತ-ಅವನ ಪ್ರೀತ್ಯರ್ಥ ಈ ಪೂಜೆ” ಎಂದು ಯಾವುದೇ ಲೌಕಿಕ ಫಲಾಪೇಕ್ಷೆ ಇಲ್ಲದೆ ಕ್ರಿಯೆವನ್ನು ಮಾಡುತ್ತಾರೆ. ಇದು ‘ತತ್’.  

ದ್ ಭಾವೇ ಸಾಧುಭಾವೇ ಚ ಸದಿತ್ಯೇತತ್ ಪ್ರಯುಜ್ಯತೇ
ಪ್ರಶಸ್ತೇ ಕರ್ಮಣಿ ತಥಾ ಸಚ್ಛಬ್ದಃ ಪಾರ್ಥ ಯುಜ್ಯತೇ                          ೨೬

ತ್  ಭಾವೇ ಸಾಧುಭಾವೇ ಚ ಸತ್ ಇತಿ ಏತ್ ಪ್ರಯುಜ್ಯತೇ
ಪ್ರಶಸ್ತೇ ಕರ್ಮಣಿ ತಥಾ ಸತ್ ಶಬ್ದಃ ಪಾರ್ಥ ಯುಜ್ಯತೇ – ಪಾರ್ಥ, ‘ಹುಟ್ಟು’ ಮತ್ತು ‘ಒಳ್ಳೆಯತನ’ ಎಂಬ ಅರ್ಥದಲ್ಲಿ  ‘ಸತ್’ ಎಂಬ ಶಬ್ದ ಬಳಕೆಯಾಗುತ್ತದೆ. ‘ಒಳ್ಳೆಯ ಕೆಲಸ’ ಎಂಬ ಅರ್ಥದಲ್ಲು ‘ಸತ್’ ಶಬ್ದ ಸಲ್ಲುತ್ತದೆ.

‘ಸತ್’ ಅನ್ನುವುದಕ್ಕೆ ಒಂದು ಅರ್ಥ-ಭಾವ. ಸತ್-ಭಾವ ಎಂದರೆ ಸಜ್ಜನಿಕೆಯಿಂದ ಇರುವುದು. ಇದು ಲೋಕದಲ್ಲಿ ವ್ಯಕ್ತಿಗೆ ಬಳಸುವ ಪದಪ್ರಯೋಗ. ಇದನ್ನು ಕರ್ಮದಲ್ಲಿ ಬಳಸಿದಾಗ ಸತ್-ಕರ್ಮವಾಗುತ್ತದೆ.  ಓಂಕಾರ ವಾಚ್ಯ ಭಗವಂತನಿಗೆ ಅರ್ಪಣಾ ಭಾವದಿಂದ, ಯಾವುದೇ  ಫಲಾಪೇಕ್ಷೆ ಇಲ್ಲದೆ(ತತ್)  ಮಾಡುವ ಕರ್ಮ ‘ಸತ್’-ಕರ್ಮ. ಯಾವ ಕರ್ಮವನ್ನು ಭಗವಂತನ ಕುರಿತಾಗಿ ಮಾಡುತ್ತೇವೋ, ಆ ಕರ್ಮ ಪ್ರಶಸ್ತವಾಗಿರಬೇಕು. ಅಂದರೆ ಸ್ವಾರ್ಥಕ್ಕಾಗಿ ಮಾಡಿದರೆ ಅದನ್ನು ಜನ ಮೆಚ್ಚುವುದಿಲ್ಲ. ಬದಲಿಗೆ ತ್ಯಾಗದಿಂದ ಮಾಡುವ ಕರ್ಮ ಪ್ರಶಸ್ತ ಕರ್ಮವೆನಿಸುತ್ತದೆ. ನಾವು ಈ ರೀತಿ ಪ್ರತಿಯೊಂದು ಶಬ್ದದ ಅರ್ಥವನ್ನು ತಿಳಿದು, ಪಾಲನೆ ಮಾಡುವ ಪಾರ್ಥರಾಗಬೇಕು ಎನ್ನುವುದು ಕೃಷ್ಣನ ಸಂದೇಶ. ‘ಸತ್’ ಪದದ ಅರ್ಥವನ್ನು ಇನ್ನೂ ವಿವರವಾಗಿ ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸುತ್ತಾನೆ.

ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸದಿತಿ ಚೋಚ್ಯತೇ
ಕರ್ಮ ಚೈವ ತದರ್ಥೀಯಂ ಸದಿತ್ಯೇವಾಭಿಧೀಯತೇ                        ೨೭

ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸತ್ ಇತಿ ಚ ಉಚ್ಯತೇ
ಕರ್ಮ ಚ ಏವ ತತ್ ಅರ್ಥೀಯಂ ಸತ್ ಇತಿ ಏವ ಅಭಿಧೀಯತೇ – ಯಜ್ಞ-ದಾನ-ತಪಸ್ಸುಗಳಲ್ಲಿ  ನಿಷ್ಠೆಯನ್ನೂ ‘ಸತ್’ ಎನ್ನುತ್ತಾರೆ. ಭಗವಂತನಿಗಾಗಿ  ಆಚರಿಸುವ ಕರ್ಮವನ್ನೂ ‘ಸತ್’ ಎಂದೇ ಕರೆಯುತ್ತಾರೆ.

‘ಸತ್’ ಎಂದರೆ ‘ಸತ್’ ಶಬ್ದ ವಾಚ್ಯನಾದ ಭಗವಂತನನ್ನು ಯಜ್ಞ, ದಾನ, ತಪಸ್ಸಿನಿಂದ ಆರಾಧಿಸುವುದು. ಹೀಗಾಗಿ ಭಗವಂತನೂ ‘ಸತ್’; ಅವನ ಕುರಿತಾದ ಕರ್ಮವೂ ‘ಸತ್’(ಸತ್ಕರ್ಮ); ಅವನ ಕುರಿತಾಗಿ ಕರ್ಮ ಮಾಡುವವನೂ ‘ಸತ್’(ಸಜ್ಜನ). ನಾವು ಭಗವಂತನ ಎಚ್ಚರದಿಂದ, ಫಲಾಪೇಕ್ಷೆ ಇಲ್ಲದೆ, ಭಗವದರ್ಪಣಾ ಭಾವದಿಂದ, ಭಗವಂತ ಪ್ರೀತನಾಗಲಿ ಎಂದು ಮಾಡುವ ಸಮಸ್ತ ಕರ್ಮವೂ ಸತ್-ಕರ್ಮ.

ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್
ಅಸದಿತ್ಯುಚ್ಯತೇ ಪಾರ್ಥ ನ ಚ ತತ್ ಪ್ರೇತ್ಯ ನೋ ಇಹ                     ೨೮

ಅಶ್ರದ್ಧಯಾ ಹುತಮ್  ದತ್ತಮ್  ತಪಃ ತಪ್ತಮ್ ಕೃತಂ ಚ ಯತ್
ಅಸತ್ ಇತಿ ಉಚ್ಯತೇ ಪಾರ್ಥ ನ ಚ ತತ್ ಪ್ರೇತ್ಯ ನೋ ಇಹ – ಮಾಡುವ ಕರ್ಮದಲ್ಲಿ ಶ್ರದ್ದೆ ಇಲ್ಲದೆ, ಭಗವಂತನಲ್ಲಿ ಶ್ರದ್ದೆ ಇಲ್ಲದೆ, ಯಾರದ್ದೋ ಒತ್ತಾಯಕ್ಕಾಗಿ, ಅಥವಾ ಭಯದಿಂದ, ಪೂರ್ಣ ನಂಬಿಕೆ ಇಲ್ಲದೆ ಮಾಡುವ ಕ್ರಿಯೆ ವ್ಯರ್ಥ. ಶ್ರದ್ದೆ ಇಲ್ಲದೆ ಮಾಡುವ ಇಂಥಹ  ದಾನ, ತಪಸ್ಸು, ಯಜ್ಞ, ಅಥವಾ ಇತರ ಯಾವುದೇ ಕರ್ಮಕ್ಕೆ  ಇಹದಲ್ಲೂ ಫಲವಿಲ್ಲ, ಪರದಲ್ಲೂ ಫಲವಿಲ್ಲ.
             
ಇತಿ ಸಪ್ತದಶೋSಧ್ಯಾಯಃ
ಹದಿನೇಳನೆಯ ಅಧ್ಯಾಯ ಮುಗಿಯಿತು

*******

2 comments:

  1. ಓಂ-ತತ್-ಸತ್ ನ ಅರ್ಥವನ್ನು ವಿವರಿಸಿರುವುದು ಬಹಳ ಚೆನ್ನಾಗಿದೆ. ನನ್ನ ಬ್ಲಾಗ್ ಗೆ ಭೇಟಿ ಕೊಡಿ.

    ReplyDelete
  2. ಧನ್ಯವಾದಗಳು. 'ಪ್ರತೀಕ್ಷೆ' ಯಲ್ಲಿ ನಿಮ್ಮ ಬರಹ ನೋಡಿ ಸಂತೋಷವಾಯಿತು.(ಇನ್ನೂ ಓದಬೇಕಷ್ಟೇ)

    ReplyDelete