Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Wednesday, December 28, 2011

Bhagavad Gita Kannada Chapter-18 Shloka 11-18


ನಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ ।
ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ                         ॥೧೧॥

ನಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣಿ ಅಶೇಷತಃ ।
ಯಃ ತು  ಕರ್ಮ ಫಲ ತ್ಯಾಗೀ ಸಃ ತ್ಯಾಗೀ ಇತಿ ಅಭಿಧೀಯತೇ –ಶರೀರದಲ್ಲಿರುವಷ್ಟು ಕಾಲ ಕರ್ಮಗಳನ್ನು ಪೂರ್ತಿಯಾಗಿ  ಬಿಡುವುದು ಸಾಧ್ಯವಿಲ್ಲ. ಕರ್ಮದ ಫಲವನ್ನು ತೊರೆದವನೆ ಕರ್ಮತ್ಯಾಗಿ.

ಮನುಷ್ಯನಾಗಿ ಹುಟ್ಟಿದ ಮೇಲೆ, ಹುಟ್ಟಿನಿಂದ ಸಾಯುವ ತನಕ ನಾವು ಕರ್ಮ ಮಾಡಲೇ ಬೇಕು. ಕರ್ಮವನ್ನೇ ಬಿಟ್ಟು ಬದುಕಲು ಸಾಧ್ಯವಿಲ್ಲ. ನಾವು ತೊರೆಯಬೇಕಾದದ್ದು ಕರ್ಮವನ್ನಲ್ಲ-ಕರ್ಮಫಲವನ್ನು. ಈ ರೀತಿ ಕರ್ಮ ಮಾಡಿಕೊಂಡು ಕರ್ಮಫಲ ತೊರೆದವನು ಕರ್ಮತ್ಯಾಗಿ ಎನಿಸುತ್ತಾನೆ.   

ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಮ್ ।
ಭವತ್ಯತ್ಯಾಗಿನಾಂ ಪ್ರೇತ್ಯ ನತು ಸಂನ್ಯಾಸಿನಾಂ ಕ್ವಚಿತ್                 ॥೧೨॥

ಅನಿಷ್ಟಮ್ ಇಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಮ್ ।
ಭವತಿ ಅತ್ಯಾಗಿನಾಂ ಪ್ರೇತ್ಯ ನತು ಸಂನ್ಯಾಸಿನಾಂ ಕ್ವಚಿತ್ – ಕರ್ಮದ ಫಲ ಮೂರು ತೆರ: ಬೇಕಾದ್ದು, ಬೇಡವಾದದ್ದು, ಮತ್ತು ಎರಡರ ಬೆರಕೆ. ಫಲತ್ಯಾಗ ಮಾಡದವರಿಗೆ ಇದು ಸತ್ತಮೇಲೆ ಸಲ್ಲುತ್ತದೆ. ಫಲದ ನಂಟು ತೊರೆದವರಿಗೆ ಇದು ಎಂದೂ ಸೋಕುವುದಿಲ್ಲ.

ಕರ್ಮ ಮಾಡುವುದರಿಂದ ಸುಖವಾಗಬಹುದು; ದುಃಖವಾಗಬಹುದು; ಅಥವಾ ಸುಖ-ದುಃಖದ ಬೆರಕೆಯ ಫಲ ಸಿಗಬಹುದು. ಕರ್ಮಫಲ ತ್ಯಾಗ ಮಾಡದೆ ಕರ್ಮ ಮಾಡುವವರಿಗೆ ಇದು ಸತ್ತ ಮೇಲೆ ಸಲ್ಲುತ್ತದೆ. ಇವರು ಕರ್ಮ ಮತ್ತು ಕರ್ಮ ಫಲದ ಸುಳಿಯಲ್ಲಿ ಸಿಲುಕಿ  ಮತ್ತೆ ಸಂಸಾರ ಬಂಧದಲ್ಲಿ ಸಿಲುಕುತ್ತಾರೆ. ಆದರೆ ಕರ್ಮ ಫಲದ ಅಪೇಕ್ಷೆ ಇಲ್ಲದವರಿಗೆ ಇದು ಎಂದೂ ಸೋಕುವುದಿಲ್ಲ. ಅವರಿಗೆ ಏನು ಬಂದರೂ ಅದು ಭಗವಂತನ ಪ್ರಸಾದ. ಅದರಲ್ಲಿ ಬೇಕಾದ್ದು, ಬೇಡವಾದದ್ದು ಎನ್ನುವ ಭೇದವಿಲ್ಲ. ಇದು ಮೋಕ್ಷ ಮಾರ್ಗ. ಉದಾಹರಣೆಗೆ ರಾಜ್ಯದ, ಅಧಿಕಾರದ ಆಸೆಯಿಂದ, ಭಗವಂತನನ್ನು ಮರೆತು ಯುದ್ಧವನ್ನು ಮಾಡುವವ- ಯುದ್ಧದಲ್ಲಿ ನಡೆಯುವ ಪ್ರಾಣಹಾನಿಗೆ ಕಾರಣನಾಗುತ್ತಾನೆ. ಆತ ಈ ಪಾಪದ ಹೊರೆಯನ್ನು ಸತ್ತ ನಂತರ ಪಡೆಯಬೇಕಾಗುತ್ತದೆ. ಆದರೆ ಕರ್ತವ್ಯ ಕಾರಣಕ್ಕಾಗಿ ಯಾವುದೇ ಸ್ವಾರ್ಥವಿಲ್ಲದೆ ಎಲ್ಲವನ್ನು ಭಗವಂತನಿಗೆ ಅರ್ಪಿಸಿ ಯುದ್ಧ ಮಾಡುವವನಿಗೆ ಯಾವ ಪಾಪದ ಲೇಪವೂ ಅಂಟುವುದಿಲ್ಲ.     

ಪಂಚೈತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ ।
ಸಾಂಖ್ಯೇ ಕೃತಾಂತೇ ಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಮ್          ॥೧೩॥

ಪಂಚ ಏತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ ।
ಸಾಂಖ್ಯೇ ಕೃತ ಅಂತೇ ಪ್ರೋಕ್ತಾನಿ ಸಿದ್ಧಯೇ ಸರ್ವ ಕರ್ಮಣಾಮ್ –ಎಲ್ಲ ಕಾರ್ಯಗಳು ಕೈಗೂಡಲು ಇವು ಐದು ಕಾರಣಗಳು. ಹೇ ಮಹಾಬಾಹೋ, ವೈದಿಕ ಜ್ಞಾನದ ಸಿದ್ಧಾಂತದಲ್ಲಿ ಹೇಳಲಾದ ಅವುಗಳನ್ನು ನನ್ನಿಂದ ತಿಳಿದುಕೋ :

ನಮ್ಮಲ್ಲಿ ಅನೇಕರಿಗೆ ಒಂದು ಪ್ರಶ್ನೆ ಇದೆ. ನಾವು ಮಾಡಿದ ಕೆಲಸವನ್ನು ‘ನಾನು ಮಾಡಿದೆ’ ಅನ್ನುವುದರಲ್ಲಿ ತಪ್ಪೇನು’ ಎಂದು. ಈ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕಾದರೆ, ಒಂದು ಕ್ರಿಯೆ ನಡೆಯಬೇಕಾದರೆ ಆ ಕ್ರಿಯೆಯ ಹಿಂದೆ ಇರುವ ಐದು ಕಾರಣಗಳನ್ನು ತಿಳಿದುಕೊಳ್ಳಬೇಕು. ವೈದಿಕ ಸಾಂಖ್ಯ ಶಾಸ್ತ್ರದಲ್ಲಿ, ಜ್ಞಾನದ ಸಿದ್ಧಾಂತದಲ್ಲಿ ಹೇಳಲಾದ ಈ ಐದು ಕಾರಣಗಳನ್ನು ಕೃಷ್ಣ ಅರ್ಜುನನಿಗೆ ವಿವರಿಸುತ್ತಾನೆ. 
ಇಲ್ಲಿ ಕೃಷ್ಣ ಅರ್ಜುನನನ್ನು ಮಹಾಬಾಹೋ ಎಂದು ಸಂಬೋಧಿಸಿದ್ದಾನೆ. 'ಮಹಾ-ಬ' ಅಂದರೆ ಮಹತ್ತಾದ ಬಯಕೆಗಳು. ಅದನ್ನು ತ್ಯಾಗ ಮಾಡಿದವ-ಮಹಾಬಾಹು. ನಾವೆಲ್ಲರೂ ನಮ್ಮ ಜೀವನದಲ್ಲಿ ಕರ್ಮಫಲತ್ಯಾಗ ಮಾಡಿ, ಕೇವಲ ಭಗವದರ್ಪಣಾ ಭಾವದಿಂದ ಕರ್ಮ ಮಾಡುವುದನ್ನು ಕಲಿತುಕೊಂಡು-ಮಹಾಬಾಹುಗಳಾಗಬೇಕು ಎನ್ನುವುದು ಈ ಸಂಬೋಧನೆ ಹಿಂದಿರುವ ಧ್ವನಿ.

ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ ವಿಧಮ್ ।
ವಿವಿಧಾಶ್ಚ ಪೃಥಕ್ ಚೇಷ್ಟಾ ದೈವಂ ಚೈವಾತ್ರ ಪಂಚಮಮ್                ॥೧೪॥

ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ ವಿಧಮ್ ।
ವಿವಿಧಾಃ ಚ ಪೃಥಕ್ ಚೇಷ್ಟಾ ದೈವಂ ಚ ಏವ ಅತ್ರ ಪಂಚಮಮ್ – ಕ್ರಿಯೆ ನಡೆಯುವ ತಾಣ, ಮಾಡುವ ಭಗವಂತ [ಜೀವ], ಬೇರೆಬೇರೆ ಉಪಕರಣಗಳು, ಬಗೆಬಗೆಯ ಪೂರಕ ಕ್ರಿಯೆಗಳು ಮತ್ತು ಐದನೆಯದಾದ ಅದೃಷ್ಟ[ಭಗವಂತ].

ಪ್ರತಿಯೊಂದು ಕ್ರಿಯೆ ನಡೆಯಲು ಐದು ಕಾರಣಗಳು:
(೧) ಅಧಿಷ್ಠಾನ: ಇಲ್ಲಿ ಅಧಿಷ್ಠಾನ ಎಂದರೆ ನೆಲೆ. ನಮ್ಮ ದೇಹವೇ ನಮ್ಮ ಅಧಿಷ್ಠಾನ. ಈ ಸಾಧನಾ ಶರೀರವಿಲ್ಲದೆ ಯಾವ ಕ್ರಿಯೆಯೂ ನಡೆಯುವುದಿಲ್ಲ. ನಿನಗೆ ದೊರೆತಿರುವ ಸಾಧನಾ ಶರೀರ ಆ ಭಗವಂತನ ಪ್ರಸಾದ.
(೨) ಕರ್ತಾ: ಶರೀರದಲ್ಲಿ ಕೂತು ನಮ್ಮ ಕ್ರಿಯೆಗಳನ್ನು ನಿಯಂತ್ರಿಸುವ ಭಗವಂತ ಕರ್ತಾ. ಆತ ಸ್ವತಂತ್ರ. ಆತನಿಗೆ ಅಧೀನವಾಗಿರುವ ಜೀವ(ನಾನು-Self) ಸ್ವತಂತ್ರನಲ್ಲ. ಆದರೆ ಜೀವನಿಗೆ ಇಚ್ಛಾಪೂರ್ವಕ ಕೃತಿ ಇದೆ.
(೩) ಕರಣಗಳು: ನಮ್ಮ  ಇಂದ್ರಿಯಗಳು. ನಮ್ಮ ಇಂದ್ರಿಯಗಳನ್ನು ದೇವತೆಗಳು ನಿಯಂತ್ರಿಸುತ್ತಾರೆ. ಇಂದ್ರಿಯಗಳ ಒಡೆಯ ಭಗವಂತ(ಹೃಷೀಕೇಶ). ಇಂದ್ರಿಯಗಳು ನಮಗೆ ಭಗವಂತನ ಮಹಾ ಪ್ರಸಾದ.
(೪) ವಿವಿಧ ಪೂರಕ ಸಾಧನಗಳು: ಒಂದು ಕ್ರಿಯೆ ಆಗಬೇಕಾದರೆ ಅದಕ್ಕೆ ಪೂರಕವಾದ ಅನೇಕ ಪೂರಕ ಸಾಧನಗಳು ಅಗತ್ಯ.
(೫) ದೈವಂ: ನಮ್ಮ ಪ್ರತಿಯೊಂದು ಕ್ರಿಯೆ ಭಗವಂತನ ಸಂಕಲ್ಪವನ್ನು ಅವಲಂಭಿಸಿದೆ. ಇದನ್ನು ಅದೃಷ್ಟ, ಹಣೆಬರಹ ಎಂದೂ ಕರೆಯಬಹುದು. 

ಈ ಮೇಲಿನ ವಿಷಯವನ್ನು ಉದಾಹರಣೆಯೊಂದಿಗೆ ನೋಡುವುದಾದರೆ- ಒಬ್ಬ ಅತ್ಯುತ್ತಮ ಮಾತುಗಾರ. ಆತ ಅಷ್ಟೊಂದು ಸ್ವಾರಸ್ಯವಾಗಿ, ವಿಷಯಗರ್ಭಿತವಾಗಿ ಮಾತನಾಡುತ್ತಾನೆ. ಆತ ಹೀಗೆ ಮಾತನಾಡಬೇಕಾದರೆ ಆತ ಮೂಗನಾಗಿರಬಾರದು, ಬಾಯಿ ಇದ್ದರೆ ಸಾಲದು-ಬಾಯಿಯಲ್ಲಿ ಶಬ್ದ ಬರಬೇಕು. ಕೇವಲ ಶಬ್ದವಲ್ಲ-ಯಾವ ಮಾತನಾಡಬೇಕೋ ಅದಕ್ಕನುಗುಣವಾದ ಶಬ್ದ ಬರಬೇಕು. ಆ ಶಬ್ದ ಬರಬೇಕಾದರೆ ಮಾತಿಗೆ ಒಂದು ಭಾವ ಬೇಕು. ಭಾವ ಅನ್ನುವುದು ಮನಸ್ಸಿನಲ್ಲಿ ಹೊಳೆಯಬೇಕು, ಹೊಳೆದ ಭಾವಕ್ಕೆ ತಕ್ಕಂತೆ ಶಬ್ದ ಬರಬೇಕು, ಆ ಶಬ್ದ ಬಾಯಿಯಲ್ಲಿ ಸ್ಫುಟವಾಗಿ ಹೊರ ಹೊಮ್ಮಬೇಕು. ಭಾವನೆಯಿಂದ ಶಬ್ದದ ಹುಟ್ಟಿಗೆ ಆಕಾಶ-ಗಾಳಿ ಮಾಧ್ಯಮ. ಈ ಎಲ್ಲ ಕ್ರಿಯೆ ಸುಸೂತ್ರವಾಗಿ ನಡೆದರೆ ಮಾತ್ರ ಆತ ಚನ್ನಾಗಿ ಮಾತನಾಡಬಲ್ಲ. ಮನಸ್ಸಿನಲ್ಲಿ ಭಾವ ಮತ್ತು ಶಬ್ದವನ್ನು ಹೊಳೆಸುವವನು ಯಾರು? ಒಂದು ವೇಳೆ ಹೇಳಬೇಕು ಅನ್ನುವ ವಿಷಯಕ್ಕೆ ಅನುಗುಣವಾದ ಶಬ್ದ ಹೊಳೆಯದೆ ಇದ್ದರೆ? ನಮ್ಮ ಮೆದುಳಿನಲ್ಲಿ ಯಾವುದೋ ಒಂದು ಗುಂಡಿ ಆ ಕ್ಷಣದಲ್ಲಿ ಕೆಲಸ ಮಾಡದೆ ಇದ್ದರೆ? ಹುಟ್ಟುವಾಗಲೇ ಮೂಗನಾಗಿ ಹುಟ್ಟಿದ್ದರೆ? ಜ್ಞಾನ ಪರಂಪರೆಯೇ ಇಲ್ಲದ ಮನೆತನದಲ್ಲಿ ಹುಟ್ಟಿದ್ದರೆ? ಇಲ್ಲಿ ನಮ್ಮ ಕೈವಾಡ ಏನಿದೆ? ಇದು ತಿಳಿದಾಗ ‘ನಾನು ಮಾಡಿದೆ’ ಎನ್ನುವ ಅಹಂಕಾರ ಬಾರದು. ಈ ಅರಿವಿದ್ದಾಗ ಎಲ್ಲರೊಡನೆ ಎಲ್ಲರಂತೆ ಇದ್ದು ಅಂಟಿಸಿಕೊಳ್ಳದೆ   ಇರಲು ಸಾಧ್ಯ.

ಶರೀರವಾಙ್ಮನೋಭಿರ್ಯತ್ ಕರ್ಮ ಪ್ರಾರಭತೇ ನರಃ ।
ನ್ಯಾಯ್ಯಂ ವಾ ವಿಪರೀತಂ ವಾ ಪಂಚೈತೇ ತಸ್ಯ ಹೇತವಃ                 ॥೧೫॥

ಶರೀರ ವಾಕ್ ಮನೋಭಿಃ ಯತ್ ಕರ್ಮ ಪ್ರಾರಭತೇ ನರಃ ।
ನ್ಯಾಯ್ಯಂ ವಾ ವಿಪರೀತಂ ವಾ ಪಂಚ ಏತೇ ತಸ್ಯ ಹೇತವಃ – ಮೈ-ಮಾತು-ಮನಗಳಿಂದ ಮನುಷ್ಯ ಯಾವ ಕೆಲಸ ಕೈಗೊಂಡರೂ –ಅದು ಒಪ್ಪಿರಲಿ, ತಪ್ಪಿರಲಿ-ಇವು ಐದು ಅದಕ್ಕೆ ಕಾರಣಗಳು.

ಮೈ-ಮಾತು-ಮನಗಳಿಂದ ನಾವು ಯಾವ ಕ್ರಿಯೆ ಮಾಡಿದರೂ ಅದರ ಹಿಂದೆ ಮೇಲೆ ಹೇಳಿದ ಐದು ಕಾರಣಗಳಿರುತ್ತವೆ. ಆ ಕ್ರಿಯೆ ಒಳ್ಳೆಯದಿರಬಹುದು ಅಥವಾ ಕೆಟ್ಟದ್ದಿರಬಹುದು. ಕ್ರಿಯೆ ಮಾತ್ರ ಈ ಐದು ಕಾರಣಗಳಿಂದಲೇ ನಡೆಯುವುದು.

ತತ್ರೈವಂ ಸತಿ ಕರ್ತಾರಮಾತ್ಮಾನಂ ಕೇವಲಂ ತು ಯಃ        ।
ಪಶ್ಯತ್ಯಕೃತಬುದ್ಧಿತ್ವಾನ್ನ ಸ ಪಶ್ಯತಿ ದುರ್ಮತಿಃ                                ॥೧೬॥

ತತ್ರ ಏವಂ ಸತಿ  ಕರ್ತಾರಮ್ ಆತ್ಮಾನಂ ಕೇವಲಂ ತು ಯಃ       ।
ಪಶ್ಯತಿ ಅಕೃತ ಬುದ್ಧಿತ್ವಾತ್ ನ ಸಃ  ಪಶ್ಯತಿ ದುರ್ಮತಿಃ –ಅದು ಹೀಗಿರುತ, ಏನೂ ಮಾಡದ ತನ್ನನ್ನು ‘ಮಾಡುವವನು’ ಎಂದು [ತಾನೊಬ್ಬನೇ ಎಲ್ಲ ಮಾಡಿದವನು ಎಂದು] ತಿಳಿದವನು ಬುದ್ಧಿಗೇಡಿ. ಆ ತಿಳಿಗೇಡಿಗಳಿಗೆ ಏನೂ ತಿಳಿದಿಲ್ಲ.

ಈ ರೀತಿ ಐದು ಕಾರಣಗಳು ನಮ್ಮ ಕ್ರಿಯೆಯಲ್ಲಿ ಪಾತ್ರಧಾರಿಗಳಾಗಿರುವಾಗ, ಅದನ್ನು ಅರಿಯದೆ, “ನಾನು ಮಾಡಿದೆ” ಎಂದು ಅಹಂಕಾರ ಪಟ್ಟುಕೊಳ್ಳುವುದು ಅರ್ಥಶೂನ್ಯ. ಈ ರೀತಿ ತಿಳಿದುಕೊಳ್ಳುವವರು ಬುದ್ಧಿಗೇಡಿಗಳು. ಇಂಥಹ ಮತಿಗೇಡಿಗಳು ಏನನ್ನೂ ತಿಳಿದಿಲ್ಲ.    

ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ     ।
ಹತ್ವಾSಪಿ ಸ ಇಮಾನ್ ಲೋಕಾನ್ ನ ಹಂತಿ  ನ ನಿಬಧ್ಯತೇ              ॥೧೭॥

ಯಸ್ಯ ನ ಅಹಂಕೃತಃ ಭಾವಃ  ಬುದ್ಧಿಃ ಯಸ್ಯ ನ ಲಿಪ್ಯತೇ       ।
ಹತ್ವಾ ಅಪಿ ಸ ಇಮಾನ್ ಲೋಕಾನ್ ನ ಹಂತಿ  ನ ನಿಬಧ್ಯತೇ – ನಾನು ಮಾಡಿದೆ ಎಂಬ ಹಮ್ಮಿರದವನು, ಬಗೆಯಲ್ಲಿ ಫಲದ ನಂಟಿರದವನು, ಈ ಮಂದಿಯನ್ನೆಲ್ಲ ಕೊಂದರೂ ಯಾರನ್ನೂ ಕೊಲ್ಲುವುದಿಲ್ಲ. ಕರ್ಮದ ಸೆರೆ ಅವನನ್ನು ಸೋಕದು.

ಕರ್ಮಫಲದ ತ್ಯಾಗ ಮಾಡಿದವ ಯಾವ ಕರ್ಮ ಮಾಡಿದರೂ ಅದು ಅವನಿಗೆ ಬಾಧಕವಾಗುವುದಿಲ್ಲ.  ನಾವು ‘ನನ್ನಿಂದಾಯಿತು’ ಎಂದು ಅಂಟಿಸಿಕೊಳ್ಳದೆ, ಯಾವುದೇ ಫಲಾಪೇಕ್ಷೆ ಇಲ್ಲದೆ, ಕರ್ಮ ಮಾಡಿದಾಗ-ಆ ಕರ್ಮದ ಫಲ ಎಂದೂ ನಮ್ಮನ್ನು ಬಾಧಿಸುವುದಿಲ್ಲ. ನಾವು ಮಹಾಭಾರತ ಯುದ್ಧದ ಸನ್ನಿವೇಶವನ್ನು ನೋಡಿದರೆ-ಪಾಂಡವರಿಗೆ ಯುದ್ಧ ಅನಿವಾರ್ಯವಾಗಿ ಒದಗಿಬಂದಿರುವುದು. ಅವರು ಎಂದೂ ಯುದ್ಧವಾಗಬೇಕು ಎಂದು ಬಯಸಿಲ್ಲ; ಯುದ್ಧದಲ್ಲಿ ಗೆದ್ದು ಅಧಿಕಾರ ಪಡೆಯಬೇಕು ಎಂತಲೂ ಯೋಚಿಸಿಲ್ಲ. ಆದರೆ ಅವರಿಗೆ ಅನಿವಾರ್ಯವಾಗಿ ಯುದ್ಧಮಾಡುವ ಸನ್ನಿವೇಶ ಎದುರಿಗೆ ಬಂದು ನಿಂತಿತು. ಅವರು ಅದನ್ನು 'ಇದು ದೈವೇಚ್ಛೆ' ಎಂದು ಯುದ್ಧದ ಪರಿಣಾಮದ ಬಗ್ಗೆ ಯೋಚಿಸದೆ ಭಗವದರ್ಪಣಾ ಭಾವದಿಂದ ಮಾಡಿದರು. ಈ ರೀತಿ ಒದಗಿ ಬಂದ ಯುದ್ಧದಲ್ಲಿ ಅವರು ಅನೇಕಾನೇಕ ಯೋಧರನ್ನು ಕೊಲ್ಲಬೇಕಾಯಿತು. ಆದರೆ ಅವರು ತಮ್ಮ ಕರ್ತವ್ಯ ಕರ್ಮವನ್ನು ಫಲಾಪೇಕ್ಷೆ, ಅಹಂಕಾರವಿಲ್ಲದೆ ಮಾಡಿದರು.  ಈ ರೀತಿ "ನಿರ್ಲಿಪ್ತ ಮನಸ್ಸಿನಿಂದ ಯುದ್ಧ ಭೂಮಿಯಲ್ಲಿ ಅನೇಕ ಜನರನ್ನು ಕೊಲ್ಲುವ ಪ್ರಸಂಗ ಬಂದರೂ ಕೂಡ-ಆ ಕೊಂದ ಪಾಪ ಕೊಂದವನನ್ನು ಸೋಕುವುದಿಲ್ಲ" ಎನ್ನುತ್ತಾನೆ ಕೃಷ್ಣ. ಆದರೆ ಇಲ್ಲಿ ಬಹಳ ಮುಖ್ಯ ವಿಚಾರ ಎಂದರ-ಮಾನಸಿಕವಾಗಿ ಒಂದು ಕ್ಷಣವೂ ನಮಗೆ ಭಗವಂತನ ಮೇಲೆ ಅಪನಂಬಿಕೆ ಬರಕೂಡದು; ಸಂಪೂರ್ಣ ಅರ್ಪಣಾ ಭಾವದಲ್ಲಿ, ನಿಶ್ಚಿತಾಭಿಪ್ರಾಯದಲ್ಲಿ(Conviction)  ನಮ್ಮ ಪಾಲಿಗೆ ಒದಗಿ ಬಂದಿರುವ ಕರ್ಮವನ್ನು ಫಲಾಪೇಕ್ಷೆ ಇಲ್ಲದೆ ಮಾಡಬೇಕು. ಭಗವಂತನ ಕೈಯಲ್ಲಿ ನಾನು ಒಂದು ಸಾಧನ(Instrument)ಎನ್ನುವ ಎಚ್ಚರದಿಂದ ಎಲ್ಲವನ್ನು ಭಗವಂತನ ಚರಣಗಳಿಗೆ ಅರ್ಪಿಸಿ ಕರ್ಮವನ್ನು ಮಾಡಿದಾಗ ಕರ್ಮದ ಸೆರೆ ನಮ್ಮನ್ನು ಸೋಕುವುದಿಲ್ಲ. ಜೀವನಿಗೆ ಕರ್ಮದ ಫಲ ತಟ್ಟುವುದೇ ಅವನು 'ನಾನು ಮಾಡಿದೆ' ಎಂದು ತಿಳಿದುಕೊಳ್ಳುವುದರಿಂದ.


ಇಲ್ಲಿ ನಮಗೆ ಒಂದು ಪ್ರಶ್ನೆ ಮೂಡಬಹುದು. ಜೀವನಿಗೆ ಸ್ವತಂತ್ರ ಕರ್ತೃತ್ವ ಇಲ್ಲ, ಕರ್ಮ ಭಗವದಿಚ್ಛೆಯಂತೆ ನಡೆಯುತ್ತದೆ. ಹೀಗಿರುವಾಗ ಜೀವನಿಗೆ ವಿಧಿನಿಷೇಧ ಏಕೆ? ಶಾಸ್ತ್ರ ಏಕೆ ಅದನ್ನು ಮಾಡು, ಇದನ್ನು ಮಾಡಬೇಡ ಎಂದು ಹೇಳುತ್ತದೆ?  ಈ ಪ್ರಶ್ನೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸಿದ್ದಾನೆ.         

ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ       ।
ಕರಣಂ ಕರ್ಮ ಕರ್ತೇತಿ ತ್ರಿವಿಧಃ ಕರ್ಮಸಂಗ್ರಹಃ                              ॥೧೮॥

ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮ ಚೋದನಾ      ।
ಕರಣಂ ಕರ್ಮ ಕರ್ತಾ ಇತಿ ತ್ರಿವಿಧಃ ಕರ್ಮಸಂಗ್ರಹಃ –ಕರ್ಮ ವಿಧಿಯ ಉದ್ದೇಶ ಮೂರು: ಮಾಡಬೇಕೆಂಬ ಅರಿವು, ಅದಕ್ಕಾಗಿ ಅರಿಯಬೇಕಾದ ಕರ್ಮ,ಕರ್ಮಫಲ ಮತ್ತು ಅರಿತು ಮಾಡುವವನು. [ಕರ್ಮಕ್ಕೆ ಕಾರಣವಾದ ಭಗವಂತನ ಪ್ರೇರಣೆ ಅವನ ಸ್ವರೂಪವೇ. ಆದ್ದರಿಂದ ಮುಮ್ಮುಖವಾದ ಅದು ಅರಿವಿನ ರೂಪ, ಎಲ್ಲರೂ ಅರಿಯಬೇಕಾದಂಥದು ಮತ್ತು ಎಲ್ಲವನ್ನೂ ಬಲ್ಲುದು] ಕರ್ಮದ ಕಾರಣವೂ ಅಡಕವಾಗಿ ಮೂರು ತೆರ: ಉಪಕರಣ, ಮಾಡುವಿಕೆ ಮತ್ತು ಮಾಡುವವನು.

ವಿಧಿನಿಷೇಧ  ಇರುವುದು ನಮ್ಮ ಜ್ಞಾನಕ್ಕಾಗಿ. "ಭಗವಂತನನ್ನು 'ನಾನು' ತಿಳಿದುಕೊಳ್ಳಬೇಕು" ಎನ್ನುವುದಕ್ಕಾಗಿ ಕರ್ಮದ ವಿಧಿನಿಷೇಧ. ಕರ್ಮ ಮಾಡುವುದು ಕರ್ಮಕ್ಕಾಗಿ ಅಲ್ಲ-ಜ್ಞಾನಕ್ಕಾಗಿ. ಕರ್ಮದ ವಿಧಾನದ ಹಿಂದಿರುವುದು ಕಾರುಣ್ಯ. ಜ್ಞಾನವಿಲ್ಲದ ಲೋಕಕ್ಕೆ ಭಗವಂತನ ಜ್ಞಾನ-ಆ ಜ್ಞಾನಕ್ಕೆ ಪೂರಕವಾಗಿ ಕರ್ಮ. ಕರ್ಮದ ಹಿಂದಿರುವ ಪ್ರೇರಣೆ ಮೂರು: ಜ್ಞಾನ, ಜ್ಞೇಯ ಮತ್ತು ಜ್ಞಾತಾ.  ಒಂದು ಕ್ರಿಯೆಯನ್ನು ಮಾಡಬೇಕು ಅನ್ನುವ ಅರಿವು; ಆ ಕ್ರಿಯೆಯನ್ನು ಮಾಡಲು ಅರಿಯಬೇಕಾದ ಕರ್ಮ; ಮತ್ತು ಕರ್ಮವನ್ನು ಅರಿತು ಕರ್ಮವನ್ನು ಮಾಡುವವನು. ಭಗವಂತನನ್ನು ತಿಳಿದುಕೊಳ್ಳಬೇಕು ಎನ್ನುವುದು ಕರ್ಮದ ಹಿಂದಿನ ಮೂಲಪ್ರೇರಣೆ. ಕರ್ಮ ಮಾಡುವುದು ನಮ್ಮ ತಿಳಿಗೇಡಿತನವನ್ನು ಕಳಚಿಕೊಂಡು ಜ್ಞಾನವನ್ನು ಪಡೆಯುವುದಕ್ಕೋಸ್ಕರ; ನಮ್ಮ ಅರಿವನ್ನು ಬೆಳೆಸುವುದಕ್ಕೊಸ್ಕರ; ಆ ಅರಿವು ಭಗವನ್ಮುಖವಾಗುವುದಕ್ಕೊಸ್ಕರ. ನಾವು ಅರಿವುಳ್ಳವರಾಗುವುದಕ್ಕೊಸ್ಕರವೇ ಕರ್ಮವಿಧಿನಿಷೇಧ ಶಾಸ್ತ್ರಕಾರರಿಂದ ಬಂತು.
ಜೀವನಿಗೆ ಕರ್ಮ ಮಾಡಬೇಕು ಎನ್ನುವ ಪ್ರೇರಣೆ ಮಾಡುವವ-ಭಗವಂತ. ಅದಕ್ಕನುಗುಣವಾಗಿಯೇ ಜೀವ ಕರ್ಮ ಮಾಡುತ್ತಾನೆ. ಯಾವ ಜೀವ ಏನು ಆಗಬೇಕು ಎನ್ನುವುದು ಆ ಜೀವದ ಸ್ವರೂಪಕ್ಕೆ ಸಂಬಂಧಪಟ್ಟ ವಿಚಾರ. ಆದರೆ ಸ್ವಯಂ ಜೀವನಿಗೆ ಅದನ್ನು ಅಭಿವ್ಯಕ್ತಗೊಳಿಸುವ ಶಕ್ತಿ ಇಲ್ಲ. ಭಗವಂತ ಆ ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಆತನಲ್ಲಿ ಪ್ರೇರಣೆ ಮಾಡುತ್ತಾನೆ. ಭಗವಂತನ ಪ್ರೇರಣೆಯಿಂದ ಜೀವಯೋಗ್ಯತೆ ವ್ಯಕ್ತವಾಗುತ್ತದೆ ಮತ್ತು ಅದಕ್ಕನುಗುಣವಾಗಿ ಜೀವ ಕರ್ಮದಲ್ಲಿ ತೊಡಗುತ್ತಾನೆ. ಇಲ್ಲಿ ಎಲ್ಲವೂ ಮೂಲತಃ  ಭಗವದ್ ಸ್ವರೂಪ. ಭಗವಂತನ ಜ್ಞಾನ-ಭಗವದ್ ಸ್ವರೂಪ, ಭಗವಂತನ ಕ್ರಿಯೆ-ಭಗವದ್ ಸ್ವರೂಪ, ಭಗವಂತನ ಪ್ರೇರಣೆ-ಭಗವದ್ ಸ್ವರೂಪ. ಭಗವಂತನ ಸ್ವರೂಪ ನೇರ ನಮ್ಮ ಮೇಲೆ ಕೆಲಸ ಮಾಡುತ್ತಿರುತ್ತದೆ. ಅವನೇ ಜ್ಞಾನ, ಅವನೇ  ಜ್ಞೇಯ, ಅವನೇ ಜ್ಞಾತೃ. ಆದ್ದರಿಂದ ಅವನ ಪ್ರೇರಣೆ-ಜ್ಞಾನಸ್ವರೂಪ; ಅವನ ಪ್ರೇರಣೆ- ಜ್ಞಾತೃಸ್ವರೂಪ; ಅವನ ಪ್ರೇರಣೆ-ಜ್ಞೇಯ. ಹೀಗೆ ಜ್ಞಾನಸ್ವರೂಪನಾದ ಭಗವಂತನ ಪ್ರೇರಣೆಯಿಂದ ಜೀವ ಕರ್ಮ ಮಾಡುತ್ತಾನೆ ಮತ್ತು ಎಲ್ಲವೂ  ಅವನ ಅಧೀನವಾಗಿ ನಡೆಯುತ್ತದೆ.
ಒಟ್ಟಿನಲ್ಲಿ ಕರ್ಮದ ಕಾರಣಗಳನ್ನು ಅಡಕವಾಗಿ ಹೇಳಬೇಕೆಂದರೆ ಅವು ಮೂರು ವಿಧ: ದೇಹ ಇಂದ್ರಿಯಾದಿ ಉಪಕರಣಗಳು, ಮಾಡುವಿಕೆ(ಕರ್ಮ) ಮತ್ತು ಕರ್ತಾ(ಜೀವ,ಭಗವಂತ ಮತ್ತು ಅದೃಷ್ಟ).

No comments:

Post a Comment