Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, December 18, 2011

Bhagavad GitA Kannada Chapter-16 Shloka 21-24


ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ ।
ಕಾಮಃ ಕ್ರೋಧಸ್ತಥಾ ಲೋಭಸ್ತಸ್ಮಾದೇತತ್ ತ್ರಯಂ ತ್ಯಜೇತ್          ॥೨೧॥

ತ್ರಿವಿಧಂ ನರಕಸ್ಯ  ಇದಂ ದ್ವಾರಂ ನಾಶನಮ್ ಆತ್ಮನಃ ।
ಕಾಮಃ ಕ್ರೋಧಃ ತಥಾ ಲೋಭಃ ತಸ್ಮಾತ್ ಏತತ್  ತ್ರಯಮ್ ತ್ಯಜೇತ್ -- ಇದು ಮೂರು ಆತ್ಮ ನಾಶದ ದಾರಿ, ನರಕದ ಬಾಗಿಲು: ಕಾಮ, ಕ್ರೋಧ, ಮತ್ತು ಲೋಭ. ಅದ್ದರಿಂದ ಈ ಮೂರನ್ನು ದೂರವಿಡಬೇಕು.

ಈ ಶ್ಲೋಖ ಬಹಳ ಮುಖ್ಯವಾದ ಸಂದೇಶವನ್ನು ಕೊಡುವ ಶ್ಲೋಕ. ವಿದುರನೀತಿಯಲ್ಲಿ ಕೂಡ ಈ ಶ್ಲೋಕ ಬಂದಿದೆ. ಸಾಮಾಜಿಕ ಮತ್ತು ಆಧ್ಯಾತ್ಮಿಕ ನಿಟ್ಟಿನಲ್ಲಿ ಭಾರತ ಇದನ್ನು ಉಲ್ಲೇಖಮಾಡುತ್ತದೆ. ಇಲ್ಲಿ ಕೃಷ್ಣ ಆತ್ಮ ನಾಶಕ್ಕೆ ಕಾರಣವಾಗುವ ಮೂರು ಅಂಶಗಳನ್ನು ವಿವರಿಸಿದ್ದಾನೆ. ಅವುಗಳೆಂದರೆ ಕಾಮ-ಕ್ರೋಧ-ಲೋಭ. ಇವು "ಮಾನವನ ನರಕದ ಬಾಗಿಲು" ಎನ್ನುತ್ತಾನೆ ಕೃಷ್ಣ. ಕ್ರೋಧ ಎನ್ನುವುದು ಕಾಮದ ಮರಿ. ನಮಗೆ ಕ್ರೋಧ ಬರುತ್ತಿದೆ ಎಂದರೆ ನಮ್ಮ ಒಳಗೆ ಬಹಳ ಆಸೆಗಳು ಹುದುಗಿವೆ ಎಂದರ್ಥ. ಅದು ನೆರವೇರದೇ ಇದ್ದಾಗ ನಮಗೆ ಕೋಪ.  ಮಹಾಭಾರತದ ಅನುಶಾಸನ ಪರ್ವದಲ್ಲಿ ಒಂದು ಕಥೆ ಇದೆ. ಓರ್ವ ಬ್ರಾಹ್ಮಣ ಸ್ತ್ರೀ; ಆಕೆಯ ಹೆಸರು ಗೌತಮಿ. ಆಕೆಗೆ ಒಬ್ಬನೇ ಮಗ. ಒಂದು ದಿನ ಹಾವು ಕಚ್ಚಿ ಆತ ಸಾಯುತ್ತಾನೆ. ಇದನ್ನು ಒಬ್ಬ ಹಾವಾಡಿಗ ಕಂಡು, ಕೂಡಲೇ ಆ ಹಾವನ್ನು ಹಿಡಿದು ಆಕೆಯ ಎದುರು ತಂದು: “ಹೇಳು, ನಿನ್ನ ಮಗನನ್ನು ಕಚ್ಚಿ ಕೊಂದ ಈ ಹಾವನ್ನು ಯಾವ ರೀತಿ ಕೊಲ್ಲಲು ನೀನು ಇಷ್ಟ ಪಡುತ್ತೀಯ” ಎಂದು ಕೇಳುತ್ತಾನೆ. ಆಗ ಆಕೆ ಹೇಳುತ್ತಾಳೆ “ನ ಬ್ರಾಹ್ಮಣಾನಂ ಕೋಪೋSಸತಿ  ಕೃತಃ  ಕೋಪಾಚ  ಚ  ಯಾತನಾ....” | ೧೩-೦೧-೨೦| .  “ನಾವು ಬ್ರಾಹ್ಮಣರು, ಬ್ರಾಹ್ಮಣನಿಗೆ ಕೋಪ ಬರುವುದಿಲ್ಲ, ಬಂದರೆ ಆತ ಬ್ರಾಹ್ಮಣನೇ ಅಲ್ಲ” ಎಂದು. ಹಾವನ್ನು ಕೊಲ್ಲುವುದರಿಂದ, ಸತ್ತ  ಮಗ ಮರಳಿ ಬದುಕಲಾರ. ನನ್ನ ಮಗ ಆತನ ಕರ್ಮಕ್ಕನುಗುಣವಾಗಿ ಸತ್ತ. ಅದಕ್ಕಾಗಿ ಕೋಪ ದುಃಖ ತರವಲ್ಲ, ಬಿಟ್ಟುಬಿಡು ಆ ಹಾವನ್ನು”  ಎನ್ನುತ್ತಾಳೆ ಆಕೆ. ಯಾರಿಗೆ ತಿಳುವಳಿಕೆ ಇದೆ, ಬಯಕೆಗಳಿಲ್ಲ –ಅಂಥವರಿಗೆ ಕೋಪ ಬರುವುದಿಲ್ಲ. ಅವನು ನಿಜವಾದ ಬ್ರಾಹ್ಮಣ ಎನಿಸುತ್ತಾನೆ. “ಕಾಮ-ಕ್ರೋಧ-ಲೋಭ ಎನ್ನುವುದು ನಮ್ಮನ್ನು ಅಧಃಪಾತಕ್ಕೆ ತಳ್ಳುವ ಮೂರು ನರಕದ ಬಾಗಿಲುಗಳು, ಅವುಗಳಿಂದ ದೂರವಿರು” ಎಂದು ಕೃಷ್ಣ ಇಲ್ಲಿ ನಮ್ಮನ್ನು ಎಚ್ಚರಿಸಿದ್ದಾನೆ. ಇವು ನಮ್ಮ ವ್ಯಕ್ತಿತ್ವವನ್ನು ಹಾಳುಮಾಡುವ ಮೂಲ ಶತ್ರುಗಳು. ಇತರ ಎಲ್ಲಾ ದುರ್ಗುಣಗಳೂ ಇವುಗಳ ಮರಿಗಳು. ಮನುಷ್ಯ ಈ ಮೂರು ದುರ್ಗುಣಗಳಿಂದ ತನ್ನ ನರಕವನ್ನು ತಾನೇ ಸೃಷ್ಟಿಸಿಕೊಳ್ಳುತ್ತಾನೆ. ಈ ಮೂರನ್ನು ಬಿಟ್ಟರೆ ಇಹದಲ್ಲೂ ಸುಖ-ಪರದಲ್ಲೂ ಸುಖ.           

ಏತೈರ್ವಿಮುಕ್ತಃ ಕೌಂತೇಯ ತಮೋದ್ವಾರೈಸ್ತ್ರಿಭಿರ್ನರಃ ।
ಆಚರತ್ಯಾತ್ಮನಃ ಶ್ರೇಯಸ್ತತೋ ಯಾತಿ ಪರಾಂ ಗತಿಮ್                  ॥೨೨॥

ಏತೈಃ ವಿಮುಕ್ತಃ ಕೌಂತೇಯ ತಮಃ ದ್ವಾರೈಃ ತ್ರಿಬಿಃ ನರಃ ।
ಆಚರತಿ ಆತ್ಮನಃ ಶ್ರೇಯಃ ತತಃ ಯಾತಿ ಪರಾಂ ಗತಿಮ್ -- ಕೌಂತೇಯ, ನರಕದ ಈ ಮೂರು ಬಾಗಿಲುಗಳಿಂದ ಪಾರಾದ ನರನು ತನಗೆ ಒಳಿತಾದ್ದನ್ನು ಮಾಡಬಲ್ಲವನಾಗುತ್ತಾನೆ. ಅದರಿಂದ ಉತ್ತಮಗತಿಯನ್ನೂ ಪಡೆಯುತ್ತಾನೆ.

ನರಕದ ಈ ಮೂರು ಬಾಗಿಲುಗಳಿಂದ ಪಾರಾದ ಮಾನವ ಪುಣ್ಯಾತ್ಮ. ಆತನಿಗೆ ಮೋಕ್ಷದ ದಾರಿ ಸುಗಮವಾಗುತ್ತದೆ. ಆತ ಉತ್ತಮ ಗತಿಯನ್ನು ಪಡೆಯುತ್ತಾನೆ. ಇಲ್ಲಿ ಕೃಷ್ಣ ‘ವಿಮುಕ್ತ’ ಎನ್ನುವ ಪದವನ್ನು ಬಳಸಿದ್ದಾನೆ. ಇದರ ಅರ್ಥ ಎಲ್ಲಾ ಕಾಮನೆಗಳನ್ನೂ ಬಿಡುವುದಲ್ಲ, ನಮ್ಮ ಬದುಕಿಗೆ ಭಾದಕವಾಗಿರುವ ರಾಜಸ ಮತ್ತು ತಾಮಸ ಕಾಮನೆಗಳನ್ನು ಬಿಡುವುದು ಎಂದರ್ಥ. ಉದಾಹರಣೆಗೆ ಭಗವಂತನನ್ನು ಸೇರಬೇಕು ಎನ್ನುವುದೂ ಒಂದು ಕಾಮನೆ. ಇದು ನರಕದ ಬಾಗಿಲಲ್ಲ. ಇದನ್ನು ಬಿಡಬೇಕಾಗಿಲ್ಲ. ಕಾಮ ಇಲ್ಲದೆ ಜೀವನವಿಲ್ಲ. ಆದ್ದರಿಂದ ಇಲ್ಲಿ ನಾವು ಬಿಡಬೇಕಾಗಿರುವುದು ಕೇವಲ ರಾಜಸ ಮತ್ತು ತಾಮಸ ಅಂಶವನ್ನು. ಇದನ್ನು ಸೂಚಿಸುವುದಕ್ಕಾಗಿ ಇಲ್ಲಿ ‘ಮುಕ್ತ’ ಎಂದು ಹೇಳದೆ ‘ವಿ-ಮುಕ್ತ’ ಎಂದು ಹೇಳಲಾಗಿದೆ.
ಇಲ್ಲಿ 'ಕೌಂತೇಯ' ಎನ್ನುವ ವಿಶೇಷಣ ಬಳಕೆಯಾಗಿದೆ. ‘ನಾವು ಜ್ಞಾನ ಮಾರ್ಗದಲ್ಲಿ ಸಾಗಬೇಕಾದರೆ  ಕುಸ್ಸಿತವಾದ ಈ ಕಾಮ-ಕ್ರೋಧ-ಲೋಭವನ್ನು ತಿರಸ್ಕಾರ ಮಾಡುವ ಕೌಂತೇಯರಾಗಬೇಕು’ ಎನ್ನುವ ಸಂದೇಶ ಈ ವಿಶೇಷಣದ ಹಿಂದಿರುವ ಧ್ವನಿ.

ನಮ್ಮಲ್ಲಿ ಕೆಲವರಿಗೆ ಶಾಸ್ತ್ರದ ವಿಧಿ ವಿಧಾನ ಏಕೆ ಬೇಕು, ಆತ್ಮ ಸಾಕ್ಷಿಯಿಂದ ಬದುಕಿದರೆ ಸಾಲದೇ? ಎನ್ನುವ ಪ್ರಶ್ನೆ ಇದೆ. ಕೃಷ್ಣ ಮುಂದಿನ ಶ್ಲೋಕದಲ್ಲಿ ಶಾಸ್ತ್ರದ ವಿಧಿ-ವಿಧಾನ  ಪಾಲನೆಯ ಮಹತ್ವವನ್ನು ವಿವರಿಸುತ್ತಾನೆ.        

ಯಃ ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ ।
ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂ ಗತಿಮ್                     ॥೨೩॥

ಯಃ ಶಾಸ್ತ್ರವಿಧಿಮ್ ಉತ್ಸೃಜ್ಯ ವರ್ತತೇ ಕಾಮಕಾರತಃ ।
ನ ಸಃ  ಸಿದ್ಧಿಮ್  ಅವಾಪ್ನೋತಿ ನ ಸುಖಂ ನ ಪರಾಂ ಗತಿಮ್ –ಶಾಸ್ತ್ರದ ಕಟ್ಟಳೆಯನ್ನು ಮೀರಿ ಇಷ್ಟಬಂದಂತೆ ನಡೆವವನು ಸಿದ್ಧಿಯನ್ನು ಪಡೆಯಲಾರ. ಅವನಿಗೆ ಸುಖವಿಲ್ಲ; ಪರಮಗತಿಯೂ ಇಲ್ಲ.

ನಾವು ಶಾಸ್ತ್ರದ ಕಟ್ಟಳೆಯನ್ನು ಬಿಟ್ಟು ನಮ್ಮಷ್ಟಕ್ಕೆ ನಾವು ಪ್ರಾಮಾಣಿಕವಾಗಿ  ಬದುಕಲು ಸಾಧ್ಯವಿಲ್ಲ. ಏಕೆಂದರೆ ನಮಗೆ ಯಾವುದು ಸರಿ, ಯಾವುದು ತಪ್ಪು ಎನ್ನುವ ಪರಿಜ್ಞಾನವಿರುವುದಿಲ್ಲ. ನಮಗೆ ಇಷ್ಟವಾದುದು ಸರಿ ಎಂದು ನಾವು ತಿಳಿದುಕೊಳ್ಳುತ್ತೇವೆ. ನಮಗೆ ಯಾವುದು ತಿಳುವಳಿಕೆ ಕೊಡುತ್ತವೋ ಅವು ಶಾಸ್ತ್ರಗಳು. ಜಗತ್ತಿನ ಅನೇಕ ಸಂಗತಿಗಳನ್ನು ನಮ್ಮ ಅನುಷ್ಠಾನದಲ್ಲಿ ಅಳವಡಿಸಿಕೊಳ್ಳಲು ಕೇವಲ ಆತ್ಮಶಕ್ತಿ ಮತ್ತು ಪ್ರಾಮಾಣಿಕತೆ ಸಾಲದು. ಇದು ಸರಿ ಇದು ತಪ್ಪು ಎಂದು ತೀರ್ಮಾನ ಮಾಡಲು ಶಾಸ್ತ್ರಗಳು ಬೇಕೇ ಬೇಕು. ನಾವು ನಮ್ಮ ಅನುಭವದಿಂದ ಇಡೀ ಪ್ರಪಂಚವನ್ನು ಗ್ರಹಿಸಲು ಸಾಧ್ಯವಿಲ್ಲ. ನಮ್ಮ ಬುದ್ಧಿ ಸೀಮಿತ, ನಮ್ಮ ತರ್ಕ ಸೀಮಿತ, ನಮ್ಮ ಆತ್ಮಸಾಕ್ಷಿ ಸೀಮಿತ, ನಮ್ಮ ಪ್ರಾಮಾಣಿಕತೆ ಸೀಮಿತ. ಹಾಗಾಗಿ ನಾವು ಸೀಮಿತವಾದ ಅನುಭವದಿಂದ ಇಡೀ ವಿಶ್ವದ ಸತ್ಯವನ್ನು ತಿಳಿಯಲು ಸಾಧ್ಯವಿಲ್ಲ. ಈ ಕಾರಣದಿಂದ ಭಗವಂತ; ಆತ ಜಗತ್ತಿಗೆ ಕೊಟ್ಟ ವೇದಾದಿ ಶಾಸ್ತ್ರಗಳು; ಆ ಶಾಸ್ತ್ರವನ್ನು ಅರ್ಥಮಾಡಿಕೊಂಡು ನಮಗೆ ತಿಳಿ ಹೇಳಿದ ದೇವರನ್ನು ಬಲ್ಲ ಜ್ಞಾನಿಗಳು-ಇವರಿಂದ ನಾವು ನಿಜವನ್ನು ಅರಿಯಬೇಕು. ಇಲ್ಲದಿದ್ದರೆ ಸಿದ್ಧಿ ಸಾಧ್ಯವಿಲ್ಲ.     

ತಸ್ಮಾಚ್ಛಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತೌ ।
ಜ್ಞಾತ್ವಾ ಶಾಸ್ತ್ರವಿಧಾನೋಕ್ತಂ ಕರ್ಮ ಕರ್ತುಮಿಹಾರ್ಹಸಿ                   ॥೨೪॥

ತಸ್ಮಾತ್ ಶಾಸ್ತ್ರಮ್  ಪ್ರಮಾಣಂ ತೇ ಕಾರ್ಯ ಅಕಾರ್ಯ ವ್ಯವಸ್ಥಿತೌ ।
ಜ್ಞಾತ್ವಾ ಶಾಸ್ತ್ರ ವಿಧಾನ ಉಕ್ತಮ್  ಕರ್ಮ ಕರ್ತುಮ್ ಇಹ ಅರ್ಹಸಿ –ಅದರಿಂದ ಬೇಕು-ಬೇಡಗಳ ತೀರ್ಮಾನಕ್ಕೆ ನಿನಗೆ ಶಾಸ್ತ್ರವೆ ಪ್ರಮಾಣ. ಶಾಸ್ತ್ರದ ಕಟ್ಟಳೆಯನ್ನರಿತು ಇಲ್ಲಿ ಕರ್ಮ ಮಾಡಲೆಳಸು.

ಎಲ್ಲ ಬೇಕು ಬೇಡಗಳಿಗೆ ಶಾಸ್ತ್ರವೇ ಪ್ರಮಾಣ. ಆದ್ದರಿಂದ ನಾವು ಶಾಸ್ತ್ರದಲ್ಲಿ ಹೇಳುವುದನ್ನು ಮೊದಲು ನಂಬಬೇಕು. ಆಗ ಅದನ್ನು ತಿಳಿಯಲು ಸಾಧ್ಯವಾಗುತ್ತದೆ. ಶಾಸ್ತ್ರದಲ್ಲಿ ಹೀಗೆ ಮಾಡು, ಹೀಗೆ ಮಾಡಬೇಡ ಎಂದು ಹೇಳಿರುವವರು- ಅದರಿಂದಾಗುವ ಪರಿಣಾಮವನ್ನು ಸಾಕ್ಷಾತ್ಕರಿಸಿಕೊಂಡ ಜ್ಞಾನಿಗಳು. ಆದ್ದರಿಂದ ಕರ್ಮದ ಕಟ್ಟಳೆಯನ್ನರಿತು ಕರ್ಮ ಮಾಡು ಎನ್ನುತ್ತಾನೆ ಕೃಷ್ಣ.
ಇಲ್ಲಿ ಶಾಸ್ತ್ರ ಎಂದರೆ ನಾಲ್ಕು ವೇದಗಳು ಮತ್ತು ಅದಕ್ಕೆ ಪೂರಕವಾದ ಪಂಚರಾತ್ರ, ಮಹಾಭಾರತ, ಮೂಲರಾಮಾಯಣ, ಮತ್ತು ಹದಿನೆಂಟು ಪುರಾಣಗಳು. ಇವು ಬಿಟ್ಟು ಇತರ ಯಾವುದನ್ನೂ ಪೂರ್ಣವಾಗಿ ಪ್ರಮಾಣವಾಗಿರಿಸಲು ಸಾಧ್ಯವಿಲ್ಲ.     
ಇತಿ ಷೋಡಶೋಧ್ಯಾಯಃ
ಹದಿನಾರನೆಯ ಅಧ್ಯಾಯ ಮುಗಿಯಿತು

*******

No comments:

Post a Comment