Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, December 18, 2011

Bhagavad GitA in Kannada Chapter-16 Shloka-11-20


ಚಿಂತಾಮಪರಿಮೇಯಾಂ ಚ ಪ್ರಳಯಾಂತಾಮುಪಾಶ್ರಿತಾಃ ।
ಕಾಮೋಪಭೋಗಪರಮಾ ಏತಾವದಿತಿ ನಿಶ್ಚಿತಾಃ                   ॥೧೧॥

ಚಿಂತಾಮ್ ಅಪರಿಮೇಯಾಂ ಚ ಪ್ರಳಯಾಂತಾಮ್ ಉಪಾಶ್ರಿತಾಃ ।
ಕಾಮ ಉಪಭೋಗ ಪರಮಾಃ ಏತಾವತ್ ಇತಿ ನಿಶ್ಚಿತಾಃ -- ಸಾವಿನ ಜೊತೆಗೆಯೆ ಅಳಿಯುವ, ಅಳೆಯಲಾಗದ ಚಿಂತೆಗೊಳಗಾದವರು. ಕಾಮದ ತೀಟೆಯೇ ಜೀವನದ ಸರ್ವಸ್ವವಾದವರು. ಜೀವನವೆಂದರೆ ಇಷ್ಟೇ ಎಂದು ನಂಬಿದವರು.

ಇವರ ಕೊರಗಿಗೆ ಕೊನೆಯೇ ಇಲ್ಲ. ಇವರು ತಮ್ಮ ಇಡೀ ಜೀವನವನ್ನು-ಇಲ್ಲದ್ದನ್ನು ಪಡೆಯುವ ಕೊರಗಿನಲ್ಲಿ ಕಳೆಯುತ್ತಾರೆ. ಇವರು ಚಿಂತೆಯ ದಾಸರಾಗುತ್ತಾರೆ. ಇವರ ಚಿಂತೆ ಪ್ರಳಯಾಂತ- ಸಾಯುವ ತನಕವೂ ಅವರ ಬೆನ್ನುಬಿಡದೆ ಕಾಡುತ್ತಿರುತ್ತದೆ. ಇವರು ಭೋಗಜೀವನದ ದಾಸರಾಗಿ, ಅದನ್ನು ಬಿಟ್ಟು ಇರಲಾರದ ಪರಾಧೀನತೆಯಲ್ಲಿ, ಜೀವನವೆಂದರೆ ಇಷ್ಟೇ ಎಂದು ತಿಳಿದು ಬದುಕುತ್ತಿರುತ್ತಾರೆ.  

ಆಶಾಪಾಶಶತೈರ್ಬದ್ಧಾಃ ಕಾಮಕ್ರೋಧಪರಾಯಣಾಃ।
ಈಹನ್ತೇ ಕಾಮಭೋಗಾರ್ಥಮನ್ಯಾಯೇನಾರ್ಥಸಂಚಯಾನ್       ॥೧೨॥

ಆಶಾಪಾಶ ಶತೈಃ ಬದ್ಧಾಃ ಕಾಮಕ್ರೋಧಪರಾಯಣಾಃ।
ಈಹಂತೇ ಕಾಮಭೋಗಾರ್ಥ ಅನ್ಯಾಯೇನ ಅರ್ಥಸಂಚಯಾನ್ -- ನೂರಾರು ಆಸೆಗಳ ಬಲೆಯಲ್ಲಿ ಸಿಕ್ಕಿಬಿದ್ದವರು. ಹುಚ್ಚು ಹಂಬಲ-ಸಿಡುಕುಗಳಿಗೆ ತಮ್ಮನ್ನು ಮಾರಿಕೊಂಡವರು. ತೀಟೆ ತೀರಿಸಲೆಂದು ತಪ್ಪು ದಾರಿಯಿಂದ ರಾಶಿ ರಾಶಿ ಹೊನ್ನು ಬಾಚಬಯಸುವವರು.

ಇವರು ಭೋಗದ ಆಸೆಗಾಗಿ ತಮ್ಮನ್ನು ತಾವು ಆಸೆಗಳ ಪಾಶದಲ್ಲಿ ಸಿಲುಕಿ ಹಾಕಿಸಿಕೊಂಡು, ದಿಗ್ಭಂಧನದಿಂದ ಬದುಕುತ್ತಿರುತ್ತಾರೆ. ಕಾಮ ಕ್ರೋಧಗಳಿಗೆ ತಮ್ಮನ್ನು ಮಾರಿಕೊಂಡು, ಕಾಮಕ್ರೋಧ ಪರಾಯಣರಾಗಿ ಬದುಕುತ್ತಾರೆ. ಇದಕ್ಕೆ ಉತ್ತಮ ದೃಷ್ಟಾಂತ ಪೌಂಡ್ರಕ ವಾಸುದೇವ. ಆತನಿಗೆ ‘ತಾನೇ ದೇವರಾಗಬೇಕು ಎನ್ನುವ ಕಾಮ’. ಈ ಕಾಮದಿಂದಾಗಿ ಅದು ಸರಿಯಲ್ಲ ಎಂದು ತಿಳಿಹೇಳುವ ತತ್ವಜ್ಞಾನಿಗಳ ಮೇಲೆ ಕೋಪ.
ಇವರು ತಮ್ಮ ಸುಖ-ಭೋಗವನ್ನು ತೀರಿಸಿಕೊಳ್ಳಲು ಅನ್ಯಾಯ ಮಾರ್ಗದಲ್ಲಿ ದುಡ್ಡು ಸಂಗ್ರಹ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಶಾಸ್ತ್ರದಲ್ಲಿ ಬರೆದಿರುವ ವಿಷಯಗಳನ್ನು ತಮಗೆ ಬೇಕಾದಂತೆ ತಿರುಚಿಕೊಂಡು, ತಮ್ಮ ಇಷ್ಟಸಿದ್ಧಿ ಸಾಧನೆಯಲ್ಲಿ ತೊಡಗುತ್ತಾರೆ.       

ಇದಮದ್ಯ ಮಯಾ ಲಬ್ಧಮಿಮಂ ಪ್ರಾಪ್ಸ್ಯೇ ಮನೋರಥಮ್ ।
ಇದಮಸ್ತೀದಮಪಿ ಮೇ ಭವಿಷ್ಯತಿ ಪುನರ್ಧನಮ್                             ॥೧೩॥

ಅಸೌ ಮಯಾ ಹತಃ ಶತ್ರುರ್ಹನಿಷ್ಯೇ ಚಾಪರಾನಪಿ ।
ಈಶ್ವರೋSಹಮಹಂ ಭೋಗೀ ಸಿದ್ಧೋSಹಂ ಬಲವಾನ್ ಸುಖೀ          ॥೧೪॥

 ಆಢ್ಯೋSಭಿಜನವಾನಸ್ಮಿ ಕೋSನ್ಯೋSಸ್ತಿ ಸದೃಶೋಮಯಾ  ।
ಯಕ್ಷ್ಯೇ ದಾಸ್ಯಾಮಿ ಮೋದಿಷ್ಯ ಇತ್ಯಜ್ಞಾನವಿಮೋಹಿತಾಃ                   ॥೧೫॥

ಇದಮ್ ಅದ್ಯ ಮಯಾ ಲಬ್ಧಮ್ ಇಮಮ್  ಪ್ರಾಪ್ಸ್ಯೇ ಮನೋರಥಮ್ ।
ಇದಮ್ ಅಸ್ತಿ ಇದಮ್ ಅಪಿ ಮೇ ಭವಿಷ್ಯತಿ ಪುನರ್ಧನಮ್  ||
ಅಸೌ ಮಯಾ ಹತಃ ಶತ್ರುಃ ಹನಿಷ್ಯೇ ಚ ಅಪರಾನ್ ಅಪಿ ।
ಈಶ್ವರಃ ಅಹಮ್ ಅಹಮ್  ಭೋಗೀ ಸಿದ್ಧಃ ಅಹಂ ಬಲವಾನ್ ಸುಖೀ  ||
ಆಢ್ಯೋ ಅಭಿಜನವಾನ್ ಅಸ್ಮಿ  ಕಃ ಅನ್ಯಃ ಅಸ್ತಿ ಸದೃಶಃ  ಮಯಾ       ।
ಯಕ್ಷ್ಯೇ ದಾಸ್ಯಾಮಿ ಮೋದಿಷ್ಯೇ ಇತಿ ಅಜ್ಞಾನ ವಿಮೋಹಿತಾಃ –ಅವರು ತಿಳಿಗೇಡಿತನದಿಂದ ಹೀಗೆ ಬಡಬಡಿಸುತ್ತಾರೆ: ಇದನ್ನೀಗ ನಾನು ಪಡೆದೆ; ಈ ಬಯಕೆಯನ್ನು ಮುಂದೆ ಈಡೇರಿಸಿಕೊಳ್ಳುತ್ತೇನೆ; ಇದಂತು ಇದೆ; ಮತ್ತೆ ಈ ಹೊನ್ನೂ ನನ್ನದಾಗಲಿದೆ; ಈ ಹಗೆಯನ್ನು ಕೊಂದೆ; ಉಳಿದವರನ್ನೂ ಮುಗಿಸಲಿದ್ದೇನೆ; ನಾನು ಸರ್ವಶಕ್ತ; ನಾನೆ ಭೋಗಿಸುವವನು; ನಾನೆ ಬಯಸಿದ್ದನ್ನೆಲ್ಲ ಪಡೆದವನು; ಶಕ್ತಿಶಾಲಿ ಮತ್ತು ಸುಖಿ; ಸಿರಿವಂತನಿದ್ದೇನೆ; ಕುಲವಂತನಿದ್ದೇನೆ; ಯಾರಿದ್ದಾರೆ ನನಗೆ ಸಾಟಿ? ನಾನು ಯಾಗ ಮಾಡಿಸುತ್ತೇನೆ. ದಾನ ನೀಡುತ್ತೇನೆ. ಖುಶಿಪಡುತ್ತೇನೆ.

ಆಸುರೀ ಸ್ವಭಾವದವರ ಯೋಚನೆಗಳು ಹೇಗಿರುತ್ತವೆ ಎನ್ನುವುದನ್ನು ಕೃಷ್ಣ ಈ ಮೂರು ಶ್ಲೋಕದಲ್ಲಿ ವಿವರಿಸಿದ್ದಾನೆ. ಇವರಿಗೆ ಸದಾ ಧನ ಸಂಗ್ರಹ ಮಾಡಬೇಕು ಎನ್ನುವ ಯೋಚನೆ. ಸಿಕ್ಕಿದಾಗ ‘ಇಂದು ಇಷ್ಟು ಸಿಕ್ಕಿತು, ನಾಳೆ ಇಷ್ಟು ಗಳಿಸುತ್ತೇನೆ’ ಎನ್ನುವ ಚಪಲ. ದುಡ್ಡು ಸಂಗ್ರಹ ಮಾಡುವುದು ಇವರಿಗೊಂದು ಚಟ. ತನಗೆ ಆಗದವನನ್ನು ಮುಗಿಸಿದೆ, ಇನ್ನು ಆಗದವರನ್ನು ಮುಗಿಸುವೆ ಎನ್ನುವ ಯೋಚನೆ. ನಾನೇ ಸರ್ವ ಸಮರ್ಥ, ನನ್ನಿಂದಾಗದ್ದು ಈ ಜಗತ್ತಿನಲ್ಲೇನಿದೆ? ನಾನು ಸುಖ ಪಡಲು ಹುಟ್ಟಿದವನು-ದುಃಖಪಡಲಿಕ್ಕಲ್ಲ; ನನ್ನ ಸುಖಕ್ಕಾಗಿ ಏನು ಬೇಕಾದರೂ ನಾನು ಮಾಡುತ್ತೇನೆ; ಅದಕ್ಕೆ ಅಡ್ಡ ಬರುವವರನ್ನು ಮುಗಿಸುತ್ತೇನೆ; ನಾನೇ ಸಿದ್ಧ ಪುರುಷ; ನನ್ನ ಸಿದ್ಧಿಗೆ ನಾನೇ ಹೊಣೆಗಾರ; ನಾನು ಸುಖಪಡಲು ಹುಟ್ಟಿದವ ಅದಕ್ಕೆ ಬೇಕಾದ ಜನ-ಧನ-ಅಧಿಕಾರ ನನ್ನಲ್ಲಿದೆ; ನನ್ನಿಚ್ಛೆಯಂತೆ  ನಾನು ನಡೆದುಕೊಳ್ಳುತ್ತೇನೆ; ದುಡ್ಡಿನಿಂದ ಏನನ್ನಾದರೂ ಖರೀದಿಸಬಲ್ಲೆ; ನನಗೆ ಸರಿಸಾಟಿ ಈ ಜಗತ್ತಿನಲ್ಲಿ ಯಾರಿದ್ದಾರೆ? - ಇತ್ಯಾದಿ ಇವರ ಯೋಚನೆಗಳು. ತೋರಿಕೆಗಾಗಿ ಯಜ್ಞ ಯಾಗಾದಿಗಳನ್ನು ಮಾಡುವುದು, ದಾನ ನೀಡುವುದು ಇವರ ನಿರಂತರ ಚಟುವಟಿಕೆ. ಇದು ಅಜ್ಞಾನದ ನಾಟ್ಯ. ಇದು ಅವರ ಸರ್ವನಾಶದ ಹೆಬ್ಬಾಗಿಲು ಎನ್ನುವ ಪರಿವೆ ಅವರಿಗಿರುವುದಿಲ್ಲ. ಅದೇ ದೊಡ್ಡಸ್ತಿಕೆ, ಅದೇ ಸುಭಗತನ ಎನ್ನುವ ಭ್ರಮೆಯಲ್ಲಿ ಇವರು ಬದುಕುತ್ತಿರುತ್ತಾರೆ.        

ಅನೇಕಚಿತ್ತವಿಭ್ರಾಂತಾ ಮೋಹಜಾಲಸಮಾವೃತಾಃ ।
ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇSಶುಚೌ                        ॥೧೬॥

ಅನೇಕ ಚಿತ್ತ ವಿಭ್ರಾಂತಾಃ  ಮೋಹಜಾಲ ಸಮಾವೃತಾಃ ।
ಪ್ರಸಕ್ತಾಃ ಕಾಮಭೋಗೇಷು ಪತನ್ತಿ ನರಕೇ ಅಶುಚೌ –ಹಲವು ಬಗೆಯ ಯೋಚನೆಗಳಿಂದ ಗೊಂದಲಗೊಂಡವರು; ಮೋಹದ ಬಲೆಯಲ್ಲಿ ಸಿಕ್ಕಿಕೊಂಡವರು; ಕಾಮದ ತೀಟೆಗಳಲ್ಲಿ ಮೈಮರೆತವರು. ಅವರು ಕೊಳಕು ನರಕದಲ್ಲಿ ಬಿದ್ದು ನರಳುತ್ತಾರೆ.

ಇವರು ತಮ್ಮ ಜೀವನದಲ್ಲಿ ಹಿಂದೆ ಆಗಿಹೋದ ಘಟನೆಗಳನ್ನು ಸದಾ ನೆನಪಿಸಿಕೊಂಡು ಗೊಂದಲಗೊಳ್ಳುತ್ತಾರೆ. ಇವರು ಎಂದೂ ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುವುದಿಲ್ಲ. ಸಾತ್ವಿಕರು ಪಶ್ಚಾತ್ತಾಪ ಪಟ್ಟು ತಪ್ಪನ್ನು ಸರಿಪಡಿಸಿಕೊಳ್ಳುತ್ತಾರೆ, ಆದರೆ  ಇವರು ಸದಾ ಭಯಂಕರವಾದ ಅಜ್ಞಾನ-ಮಮಕಾರವೆಂಬ ಮೋಹದ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಮತ್ತಷ್ಟು ಗೊಂದಲಕ್ಕೊಳಗಾಗುತ್ತಾರೆ-ತಿದ್ದಿಕೊಳ್ಳುವುದಿಲ್ಲ. ತಾವು ಬಯಸಿದ ವಸ್ತುವನ್ನು ಭೋಗಿಸುವುದು ಮತ್ತು ಅದರಲ್ಲಿ ತೃಪ್ತಿಪಡದೆ ಮತ್ತಷ್ಟು ಸಂಗ್ರಹಮಾಡಿ ಜೋಪಾನ ಮಾಡುವುದರಲ್ಲಿ ಪ್ರವೃತ್ತರಾಗುತ್ತಾರೆ. ಇವರು ಮುಂದೆ ಕೊಳಕು ನರಕದಲ್ಲಿ ಬಿದ್ದು ಒದ್ದಾಡಬೇಕಾಗುತ್ತದೆ.      

ಆತ್ಮಸಂಭಾವಿತಾಃ ಸ್ತಬ್ಧಾ ಧನಮಾನಮದಾನ್ವಿತಾಃ ।
ಯಜಂತೇ ನಾಮಯಜ್ಞೈಸ್ತೇ ಡಂಭೇನಾವಿಧಿಪೂರ್ವಕಮ್               ॥೧೭॥

ಆತ್ಮಸಂಭಾವಿತಾಃ ಸ್ತಬ್ಧಾಃ ಧನ ಮಾನಮ್ ಮದ ಅನ್ವಿತಾಃ ।
ಯಜಂತೇ ನಾಮಯಜ್ಞೈಃ ತೇ ಡಂಭೇನ ಅವಿಧಿ ಪೂರ್ವಕಮ್ –ತಮ್ಮ ಬಗೆಗೆಯೆ ಕೊಚ್ಚಿಕೊಳ್ಳುವವರು. ಸಿರಿ ಸಮ್ಮಾನದ ಸೊಕ್ಕಿನಿಂದ ಬೀಗಿದವರು. ಅಂಥವರೂ ಯಜ್ಞಗಳನ್ನಾಚರಿಸುತ್ತಾರೆ: ಬೂಟಾಟಿಕೆಯಿಂದ, ಶಾಸ್ತ್ರದ ಕಟ್ಟಳೆಯ ಕಟ್ಟು ಮುರಿದು.

ತಮ್ಮ ಬಗ್ಗೆ ತಮಗೇ ಹೆಗ್ಗಳಿಕೆ ಇವರಿಗೆ. “ಅವಿದ್ಯಾಯಾಂ ಅಂತರೇ ವರ್ತಮಾನಾಃ ಸ್ವಯಂ ಧೀರಾ ಪಂಡಿತಂ ಅನ್ಯಮಾನಾ” ಎನ್ನುವಂತೆ ಉಳಿದವರಿಗೆ ತಮ್ಮ ಮೇಲೆ ಗೌರವ ಇದೆಯೊ ಇಲ್ಲವೋ ಗೊತ್ತಿಲ್ಲ, ಆದರೆ ತನ್ನ ಬಗ್ಗೆ ತಾನೇ ಮಹತ್ವ ಜ್ಞಾನ ಬೆಳಸಿಕೊಂಡು ಅದರಿಂದ ಬಿಗುಮಾನದಿಂದ ಬೀಗುತ್ತಿರುತ್ತಾರೆ. ಇವರ ಈ ಬಿಗುಮಾನಕ್ಕೆ ಕಾರಣ ಜ್ಞಾನವಲ್ಲ, ಬದಲಿಗೆ ಕೈಯಲ್ಲಿರುವ ದುಡ್ಡಿನ ಮದ ಕಾರಣ; ಆ ದುಡ್ಡಿಗೋಸ್ಕರ ಜನ ಮಾಡುವ ಸಮ್ಮಾನ ಕಾರಣ. ಇವರು ಬೂಟಾಟಿಕೆಗಾಗಿ, ದೊಡ್ಡಸ್ತಿಕೆಯ ಪ್ರದರ್ಶನಕ್ಕಾಗಿ-ಯಜ್ಞ ಯಾಗಾದಿಗಳನ್ನು ಮಾಡಿಸುತ್ತಾರೆ. ಅಲ್ಲಿ ಶಾಸ್ತ್ರದ ಎಚ್ಚರವಿರುವುದಿಲ್ಲ; ಭಗವಂತ ಪ್ರೀತ್ಯರ್ಥನಾಗಲಿ ಎನ್ನುವ ಉದ್ದೇಶವಿಲ್ಲದ, ಅಂತರ್ಯಾಮಿ ಭಗವಂತನನ್ನು ಮರೆತು ಮಾಡುವ ಪೂಜೆ ಅದಾಗಿರುತ್ತದೆ.               

ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ ।
ಮಾಮಾತ್ಮಪರದೇಹೇಷು ಪ್ರದ್ವಿಷಂತೋSಭ್ಯಸೂಯಕಾಃ                ॥೧೮॥

ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ ।
ಮಾಮ್ ಆತ್ಮ ಪರದೇಹೇಷು ಪ್ರದ್ವಿಷಂತಃ ಅಭ್ಯಸೂಯಕಾಃ –ಹಮ್ಮು, ಬಲತ್ಕಾರ, ಸೊಕ್ಕು, ಬಯಕೆ, ಸಿಡುಕುಗಳ ನೆಲೆಯಾದವರು. ತನ್ನ ಮತ್ತು ಪರರ ದೇಹದೊಳಗಿರುವ ನನ್ನನ್ನು ನಂಬದೆ ನಿರಾಕರಿಸುವವರು. ಇನ್ನೊಬ್ಬರ ಏಳಿಗೆಗೆ ಕಿಚ್ಚುಪಡುವವರು.

ಇವರ ಮೂಲ ಆಸ್ತಿ- ಅಹಂಕಾರ, ದರ್ಪ, ಕಾಮ ಮತ್ತು ಕ್ರೋಧ. ನನ್ನನ್ನು ಮೀರಿಸುವವರ್ಯಾರಿದ್ದಾರೆ? ನಾನೇ ದೊಡ್ಡ ಮನುಷ್ಯ ಎನ್ನುವ ಅಹಂಕಾರ, ಅದಕ್ಕೆ ಬೆಂಬಲ ಧನ ಮತ್ತು ಅಧಿಕಾರ ಬಲ, ಇದರಿಂದ ಇನ್ನೊಬ್ಬರನ್ನು ತಿರಸ್ಕಾರದಿಂದ ಕಾಣುವ ದರ್ಪ. ತೀರದ ಬಯಕೆಗಳು, ಅವು ಈಡೇರಲಿಲ್ಲ ಎನ್ನುವ ಕೋಪ-ಇದೇ ಅವರ ಅಸ್ತಿತ್ವ. ಕೃಷ್ಣ ಹೇಳುತ್ತಾನೆ: “ಎಲ್ಲರೊಳಗಿರುವ ‘ನನ್ನನ್ನು’ ನಂಬದೆ ನಿರಾಕರಿಸುತ್ತಾರೆ” ಎಂದು. ಇದು ಯಾವುದೋ ಕಾರಣ ನಿಮಿತ್ತ ತಾತ್ಕಾಲಿಕವಾಗಿ ಭಗವಂತನನ್ನು ನಿರಾಕರಿಸುವುದಲ್ಲ, ಬದಲಿಗೆ ಸ್ವರೂಪತಃ ಭಗವಂತನನ್ನು ನಿರಾಕರಿಸುವುದು. ಇಂತವರು  ಇನ್ನೊಬ್ಬರ ಜ್ಞಾನ ಮತ್ತು ಧನ ಸಂಪತ್ತನ್ನು ನೋಡಿ ಸದಾ ಅಸೂಯೆ ಪಡುತ್ತಿರುತ್ತಾರೆ.

ಹೀಗೆ ಆಸುರೀ ಜನರ ಸ್ವಭಾವ, ಅವರ ಯೋಚನೆಗಳು, ಅವರ ನಡವಳಿಕೆಗಳನ್ನು ಕೂಲಂಕುಶವಾಗಿ ಕೃಷ್ಣ ವರ್ಣಿಸಿದ. ಮುಂದೆ ಕೃಷ್ಣ ಇಂಥಹ ಆಸುರೀ ಜನರನ್ನು ಭಗವಂತ ಏನು ಮಾಡುತ್ತಾನೆ? ಅವರ ಗತಿ ಏನಾಗುತ್ತದೆ ಎನ್ನುವುದನ್ನು ವರ್ಣಿಸುತ್ತಾನೆ.         

ತಾನಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರಾಧಮಾನ್ ।
ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು                          ॥೧೯॥

ತಾನ್ ಅಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರ ಅಧಮಾನ್      ।
ಕ್ಷಿಪಾಮಿ ಅಜಸ್ರಮ್ ಅಶುಭಾನ್ ಆಸುರೀಷು ಏವ ಯೋನಿಷು –ಪರತತ್ವವನ್ನು ದ್ವೇಷಿಸುವ, ಕನಿಕರವಿಲ್ಲದ ಕೊಳಕಾದ ಅಂಥ ನೀಚ ಮನುಜರನ್ನು ನಾನು ನಿರಂತರವಾಗಿ ಬಾಳ ಬವಣೆಗಳಲ್ಲಿ, ಕೆಡುನಡೆಯ ಬಸಿರುಗಳಲ್ಲಿ ಕೆಡುವುತ್ತೇನೆ.

ಭಗವಂತ ಜೀವನನ್ನು ಸೃಷ್ಟಿಸುವುದಿಲ್ಲ; ಮೂಲವಾಗಿ ಜೀವ ಮತ್ತು ಜೀವ ಸ್ವಭಾವ ಅನಾಧಿನಿತ್ಯ ಎನ್ನುವುದನ್ನು ನಾವು ಹಿಂದೆ ತಿಳಿದಿದ್ದೇವೆ. ಆಸುರೀ ಸ್ವಭಾವ ಎನ್ನುವುದು ಮೂಲತಃ ಜೀವ ಸ್ವಭಾವ. ಹೇಗೆ ಹಾಗಲಕಾಯಿ ಕಹಿಯೋ ಹಾಗೆ ಈ ಆಸುರೀ ಜನರ ಜೀವಸ್ವಭಾವ ತಾಮಸ. ಅದನ್ನು ಭಗವಂತ ಬದಲಿಸುವುದಿಲ್ಲ. ಬದಲಿಗೆ ಆ ಜೀವದ ಸ್ವಭಾವಕ್ಕನುಗುಣವಾಗಿ ಜೀವದ ಗತಿ ನಿರ್ಮಾಣವಾಗುತ್ತದೆ. ಭಗವಂತನನ್ನು ದ್ವೇಷಿಸುವ, ಮನುಕುಲವನ್ನು ದ್ವೇಷಿಸುವ, ಪ್ರಪಂಚವನ್ನೇ ದ್ವೇಷಿಸುವ ಈ ಕ್ರೂರಿಗಳನ್ನು ಭಗವಂತ ನಿರಂತರ ಸಂಸಾರ ಸಾಗರದಲ್ಲಿ ಹಾಕುತ್ತಾನೆ. ಇದರಿಂದ ಅವರು ಮರಳಿಮರಳಿ ಹೀನ ಮನೆತನದಲ್ಲಿ ಹುಟ್ಟಿಬರುವಂತಾಗುತ್ತದೆ.           

ಆಸುರೀಂ ಯೋನಿಮಾಪನ್ನಾ ಮೂಢಾ ಜನ್ಮನಿಜನ್ಮನಿ         ।
ಮಾಮಪ್ರಾಪ್ಯೈವ ಕೌಂತೇಯ ತತೋ ಯಾಂತ್ಯಧಮಾಂ ಗತಿಮ್     ॥೨೦॥

ಆಸುರೀಂ ಯೋನಿಮ್ ಆಪನ್ನಾಃ  ಮೂಢಾಃ ಜನ್ಮನಿಜನ್ಮನಿ   ।
ಮಾಮ್ ಅಪ್ರಾಪ್ಯ ಏವ  ಕೌಂತೇಯ ತತಃ ಯಾಂತಿ ಅಧಮಾಂ ಗತಿಮ್—ಕೌಂತೇಯ, ಕೆಡುನಡೆಯ ಬಸಿರಿನಲ್ಲಿ ಮರಳಿಮರಳಿ ಹುಟ್ಟಿಬಂದ ಆ ತಿಳಿಗೇಡಿಗಳು  ಕೊನೆಗೂ ನನ್ನನ್ನು ಸೇರದೆಯೆ, ಅಲ್ಲಿಂದ ಮತ್ತೆ ಅಧೋಗತಿಯನ್ನೆ ಪಡೆಯುತ್ತಾರೆ.

ಈ ರೀತಿ ಹೀನ ಮನೆತನದಲ್ಲಿ ಮರಳಿಮರಳಿ ಹುಟ್ಟಿ ಬರುವ ಈ ದುಷ್ಟರು ಪ್ರತೀ ಜನ್ಮದಲ್ಲೂ ಮೂಢರಾಗುತ್ತಾ ಹೋಗುತ್ತಾರೆ. ಪ್ರತೀ ಜನ್ಮದಲ್ಲೂ ಇವರ ಭಗವಂತನ ಮೇಲಿನ ದ್ವೇಷ ಪರಾಕಾಷ್ಠೆಗೆ ಹೋಗುತ್ತದೆ. ಅಹಂಕಾರ, ಮದ, ದರ್ಪ, ಕಾಮ ಕ್ರೋಧ ಮಿತಿಮೀರಿ ಇವರು ತಾವಾಗಿಯೇ ಅಧಃಪಾತವನ್ನು ಹೊಂದುತ್ತಾರೆ. ಇವರೆಂದೂ ಭಗವಂತನನ್ನು ಸೇರುವುದಿಲ್ಲ. ಇವರು ತಮ್ಮ ಜೀವಸ್ವಭಾವದ ಗತಿಗನುಗುಣವಾಗಿ  ತಾಮಸಲೋಕವನ್ನು ಸೇರುತ್ತಾರೆ.

ಆಸುರೀ ಜನರ ಜೀವ ಸ್ವಭಾವ, ಅವರ ನಡೆ-ನುಡಿ-ಯೋಚನೆ-ಕೃತಿಯ ಬಗ್ಗೆ  ಸುಂದರವಾಗಿ ಕೃಷ್ಣ ವಿವರಿಸಿದ. ಇದರಿಂದ ನಮಗೆ ಲೋಕದಲ್ಲಿ ಲೋಕಕಂಟಕರು ಏಕಿದ್ದಾರೆ? ಅವರು ಮುಂದೆ ಯಾವ ಗತಿಯನ್ನು ಪಡೆಯುತ್ತಾರೆ ಎನ್ನುವ ವಿಚಾರ ತಿಳಿಯುತ್ತದೆ. ನಮಗರಿವಿಲ್ಲದೆ ನಮ್ಮನ್ನು ಆಸುರೀ ಗುಣ ಕಾಡಿದಾಗ ನಾವು ಜ್ಞಾನದ ಅರಿವಿನಿಂದ ಭಗವಂತನಲ್ಲಿ ಮೊರೆ ಹೊಕ್ಕು, ಅದರಿಂದ ಬಿಡುಗಡೆಗೆ ಇಚ್ಚಿಸಲು ಈ ಅಧ್ಯಾಯ ಸಹಕರಿಸುತ್ತದೆ. ಜೀವದ ಸ್ವಭಾವ ಎಂದೂ ಬದಲಾಗುವುದಿಲ್ಲ. ಜೀವಕ್ಕೆ ಸ್ವತಂತ್ರ ಕರ್ತೃತ್ವ ಇಲ್ಲ. ಆದರೆ ಜೀವಕ್ಕೆ ಇಚ್ಛಾಪೂರ್ವಕ ಕೃತಿ ಇದೆ. ಇದಕ್ಕನುಗುಣವಾಗಿ ನಿರಂತರ ದೈವೀ ಸ್ವಭಾವವನ್ನು ಬೆಳಸಿಕೊಂಡು-ಭಗವಂತನನ್ನು ಸೇರುವ ಪ್ರಯತ್ನವನ್ನು ನಾವು ಮಾಡಬೇಕು. ಅದಕ್ಕೆ ಫಲ ಸಿಗುವುದು ಬಿಡುವುದು ಭಗವಂತನ ಇಚ್ಛೆ-ಅದಕ್ಕಾಗಿ ನಾವು ತಲೆಕೆಡಿಸಿಕೊಳ್ಳಬಾರದು. ಒಳ್ಳೆಯದನ್ನು ಇಚ್ಚಿಸು, ಒಳ್ಳೆಯವನಾಗಿ ಇದ್ದದ್ದರಲ್ಲಿ ತೃಪ್ತಿಪಟ್ಟು ಬದುಕು. ನಿನ್ನ ರಕ್ಷಣೆಯ ಭಾರ ಭಗವಂತನದು, ಆತ ನಿನ್ನನ್ನು ರಕ್ಷಿಸಿಯೇ ರಕ್ಷಿಸುತ್ತಾನೆ.          

1 comment:

  1. Bhagavad Gita In Kannada: Bhagavad Gita In Kannada Chapter-16 Shloka-11-20 >>>>> Download Now

    >>>>> Download Full

    Bhagavad Gita In Kannada: Bhagavad Gita In Kannada Chapter-16 Shloka-11-20 >>>>> Download LINK

    >>>>> Download Now

    Bhagavad Gita In Kannada: Bhagavad Gita In Kannada Chapter-16 Shloka-11-20 >>>>> Download Full

    >>>>> Download LINK yu

    ReplyDelete