Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Friday, December 23, 2011

Bhagavad GitA in Kannada Chapter-17 Shloka-2-6


ಭಗವಾನುವಾಚ
ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವಭಾವಜಾ
ಸಾತ್ವಿಕೀ ರಾಜಸೀ ಚೈವ ತಾಮಸೀ ಚೇತಿ ತಾಂ ಶೃಣು        

ಭಗವಾನ್ ಉವಾಚ –ಭಗವಂತ ಹೇಳಿದನು:
ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವಭಾವಜಾ
ಸಾತ್ವಿಕೀ ರಾಜಸೀ ಚ ಏವ  ತಾಮಸೀ ಚ ಇತಿ  ತಾಂ ಶೃಣು – ಜೀವಿಗಳ ಹುಟ್ಟುಗುಣದಿಂದಲೆ ಹುಟ್ಟಿಬರುವ ಈ ನಂಬಿಕೆ ಮೂರು ತೆರನಾಗಿದೆ: ಸಾತ್ವಿಕ, ರಾಜಸ, ಮತ್ತು ತಾಮಸ. ಅದರ ಬಗೆಯನ್ನಾಲಿಸು.

ಸಾಧನಾ ಶರೀರದಲ್ಲಿರುವ ಜೀವಗಳು ಮೂಲಭೂತವಾಗಿ ಮೂರು ತೆರನಾಗಿರುತ್ತವೆ. ಅದು ಸಾತ್ವಿಕ, ರಾಜಸ ಮತ್ತು ತಾಮಸ. ಇದರ ಮೇಲೆ ಪರಿಸರದ ಮತ್ತು ಮನೆತನದ ಪ್ರಭಾವದಿಂದ ಮಾನಸಿಕವಾಗಿ ನಾವು ಮತ್ತೆ ಮೂರು ತೆರನಾದ ಶ್ರದ್ಧೆಯನ್ನು ಬೆಳಸಿಕೊಳ್ಳುತ್ತೇವೆ. ಆದ್ದರಿಂದ ಸ್ವರೂಪತಃ ಸಾತ್ವಿಕನಾಗಿದ್ದರೂ ಕೂಡ ಆತ ಮಾನಸಿಕವಾಗಿ ರಾಜಸನಾಗಿರಬಹುದು ಅಥವಾ ತಾಮಸನಾಗಿರಬಹುದು. ಉದಾಹರಣೆಗೆ ಸ್ವರೂಪತಃ ಸಾತ್ವಿಕರಾಗಿದ್ದ ಗರ್ಗಾಚಾರ್ಯರು ತಾಮಸ ಪ್ರಭಾವಕ್ಕೊಳಗಾಗಿ ಕೃಷ್ಣನನ್ನು ಸೋಲಿಸುವ ಮಗ ಹುಟ್ಟಬೇಕು ಎಂದು  ತಪಸ್ಸನ್ನಾಚರಿಸಿರುವ ಕಥೆಯನ್ನು ಹಿಂದೆ ನೋಡಿದ್ದೇವೆ. ಮಾನಸಿಕವಾಗಿ ಬರುವ ಈ ಬಾಹ್ಯ ಶ್ರದ್ಧೆ ಜನ್ಮ ಜನ್ಮಾಂತರದ್ದಲ್ಲ. ಆದರೆ ಸ್ವರೂಪ ಶ್ರದ್ಧೆ ಪ್ರತಿ ಜನ್ಮದಲ್ಲೂ ಸದಾ ಜೀವನೊಂದಿಗಿರುತ್ತದೆ. ಇದನ್ನು ಸ್ಪಷ್ಟಪಡಿಸುವುದಕ್ಕೋಸ್ಕರ ಈ ಶ್ಲೋಕದಲ್ಲಿ ‘ಏವ’ ಮತ್ತು ‘ಚ’ ಕಾರವನ್ನು ಒಟ್ಟಿಗೆ ಬಳಸಿದ್ದಾರೆ. ಜೀವಸ್ವರೂಪ- ಸಾತ್ವಿಕೇವ, ರಾಜಸ್ಯೇವ ಅಥವಾ ತಾಮಸ್ಯೇವ-ಅದು ಬದಲಾಗುವುದಿಲ್ಲ. ಈ ಸ್ವರೂಪದ ಮೇಲಿರುವ ಬಾಹ್ಯ ಶ್ರದ್ಧೆ- ಸಾತ್ವಿಕೇಚ, ರಾಜಸೇಚ, ತಾಮಸೇಚ-ಪ್ರಭಾವದಿಂದ ಬರುವಂಥದ್ದು, ಗರಿಷ್ಠ ಒಂದು ಜನ್ಮಕ್ಕೆ ಮೀಸಲಾಗಿರುವಂತದ್ದು. “ಈ ಮೂರು ವಿಧವಾದ ಶ್ರದ್ಧೆಯ ಬಗೆಯನ್ನಾಲಿಸು" ಎಂದು ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ.  

ಸತ್ವಾನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ
ಶ್ರದ್ಧಾಮಯೋSಯಂ ಪುರುಷೋ ಯೋ ಯಚ್ಛ್ರದ್ಧಃ ಸ ಏವ ಸಃ            

ಸತ್ವನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ
ಶ್ರದ್ಧಾ ಯಃ ಅಮ್  ಪುರುಷಃ ಯಃ ಯತ್ ಶ್ರದ್ಧ ಸಃ  ಏವ ಸಃ –ಭಾರತ, ಸ್ವಭಾವಕ್ಕೆ ತಕ್ಕಂತೆ ಎಲ್ಲರ ನಂಬಿಕೆಯೂ ಇರುತ್ತದೆ. ಈ ಜೀವ ನಂಬಿಕೆಯ ಸ್ವರೂಪವೆ. ಅವನ ನಂಬಿಕೆ ಎಂಥದೋ ಅವನು ಅಂಥವನು.

ಜೀವದ ಸ್ವರೂಪಕ್ಕೆ ಅನುಗುಣವಾಗಿಯೇ ಮೂಲ ಶ್ರದ್ಧೆ ಇರುವುದು. ಆದರೆ ಕೆಲವೊಮ್ಮೆ ಅದು ವ್ಯಕ್ತವಾಗದೇ ಇರಬಹುದು. ಇದು ವ್ಯಕ್ತವಾಗದೆ ಇದ್ದಾಗ, ಮನಸ್ಸಿನಲ್ಲಿ ಯಾವ ಬಾಹ್ಯ ಪ್ರಭಾವ ಶ್ರದ್ಧೆ ಇದೆಯೋ ಅದೇ ಅವನ ನಂಬಿಕೆಯಾಗುತ್ತದೆ. ಮನುಷ್ಯ ಶ್ರದ್ಧೆಯ ಕೈಗೊಂಬೆ. ಯಾರ ಸ್ವರೂಪ ಶ್ರದ್ಧೆ ಸಾತ್ವಿಕವೋ ಅವನು ಸಾತ್ವಿಕ; ಯಾರ ಸ್ವರೂಪ ಶ್ರದ್ಧೆ ರಾಜಸವೋ ಅವನು ರಾಜಸ; ಯಾರ ಸ್ವರೂಪ ಶ್ರದ್ಧೆ ತಾಮಸವೋ ಅವನು ತಾಮಸ. ಹಾಗಾಗಿ ಜೀವರಲ್ಲಿ ಮೂರು ವಿಧ: ಸಾತ್ವಿಕ ಶ್ರದ್ಧೆ ಇರುವ ಜೀವ-ಸಾತ್ವಿಕ ಜೀವ; ರಾಜಸ ಶ್ರದ್ಧೆ ಇರುವ ಜೀವ-ರಾಜಸ ಜೀವ; ತಾಮಸ ಶ್ರದ್ಧೆ ಇರುವ ಜೀವ-ತಾಮಸ ಜೀವ. ನಾವು ಧ್ಯಾನದಿಂದ ಮನಸ್ಸನ್ನು ಸ್ಥಗನಗೊಳಿಸಿ, ಉನ್ಮನಿ/ತುರಿಯ ಸ್ಥಿತಿಯನ್ನು ತಲುಪಿದಾಗ ಬಾಹ್ಯ ಶ್ರದ್ಧೆ ಕಣ್ಮರೆಯಾಗಿ ಕೇವಲ ಸ್ವರೂಪ ಶ್ರದ್ಧೆ ವ್ಯಕ್ತವಾಗುತ್ತದೆ.

ಜಂತೇ ಸಾತ್ವಿಕಾ ದೇವಾನ್ ಯಕ್ಷರಕ್ಷಾಂಸಿ ರಾಜಸಾಃ
ಪ್ರೇತಾನ್ ಭೂತಗಣಾಂಶ್ಚಾನ್ಯೇ ಯಜಂತೇ ತಾಮಸಾ ಜನಾಃ         

ಜಂತೇ ಸಾತ್ವಿಕಾ ದೇವಾನ್ ಯಕ್ಷರಕ್ಷಾಂಸಿ ರಾಜಸಾಃ
ಪ್ರೇತಾನ್ ಭೂತಗಣಾನ್ ಚ ಅನ್ಯೇ ಯಜಂತೇ ತಾಮಸಾಃ  ಜನಾಃ –ಸಾತ್ವಿಕರ ಪೂಜೆ ದೇವತೆಗಳಿಗೆ ಸಲ್ಲುತ್ತದೆ, ರಾಜಸರದು ಯಕ್ಷ-ರಾಕ್ಷಸರಿಗೆ. ತಾಮಸರ ಪೂಜೆಯೋ ಪ್ರೇತಗಳಿಗೆ, ಭೂತಗಣಗಳಿಗೆ ಸಲ್ಲುತ್ತದೆ.

ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ ಏನೂ ಅರ್ಥವಾಗುವುದಿಲ್ಲ. ಮೇಲ್ನೋಟಕ್ಕೆ  “ಸಾತ್ವಿಕರು ದೇವತೆಗಳನ್ನು ಪೂಜೆ ಮಾಡುತ್ತಾರೆ; ರಾಜಸರು ಯಕ್ಷ-ರಾಕ್ಷಸರನ್ನು ಮತ್ತು ತಾಮಸರು ಭೂತ-ಪ್ರೇತಗಳನ್ನು ಪೂಜಿಸುತ್ತಾರೆ” ಎಂದು ಹೇಳಿದಂತೆ ಕಾಣಿಸುತ್ತದೆ. ಆದರೆ ಇಲ್ಲಿ ಅಡಗಿರುವ ಮೂಲ ಅರ್ಥವೇ ಬೇರೆ. ನಮಗೆ ತಿಳಿದಂತೆ ಸಾತ್ವಿಕರಾಗಲಿ, ರಾಜಸರಾಗಲಿ, ತಾಮಸರಾಗಲಿ-ಅವರು ಪೂಜೆ ಮಾಡುವುದು ಭಗವಂತನನ್ನು ಅಥವಾ ದೇವತೆಗಳನ್ನು.  ವಾಮಾಚಾರ(Witchcraft) ಮಾಡುವವರನ್ನು ಬಿಟ್ಟರೆ ಇನ್ಯಾರೂ ಪ್ರೇತ-ಪಿಶಾಚಿ-ರಾಕ್ಷಸರನ್ನು ಪೂಜಿಸುವುದಿಲ್ಲ. ಆದ್ದರಿಂದ ಇಲ್ಲಿ ಹೇಳಿರುವ ಮೂಲ ಸಂದೇಶ ಅರ್ಥವಾಗಬೇಕಾದರೆ ನಾವು ಈ ಶ್ಲೋಕವನ್ನು ಆಳವಾಗಿ ವಿಶ್ಲೇಷಿಸಬೇಕು.  ಇಲ್ಲಿ ‘ದೇವಾನ್’ ಎಂದರೆ: ಭಗವಂತನ ಅನೇಕ ರೂಪಗಳು ಮತ್ತು ಭಗವಂತನ ಪರಿವಾರ ದೇವತೆಗಳು’ ಎಂದರ್ಥ. ‘ಜಂತೇ ಸಾತ್ವಿಕಾ ದೇವಾನ್’ ಎಂದರೆ-ಸಾತ್ವಿಕರು ಭಗವಂತನ ಅನುಸಂಧಾನದಿಂದ ಮಾಡುವ ಪೂಜೆ ದೇವತೆಗಳನ್ನು ಸೇರುತ್ತದೆ ಎಂದರ್ಥ. ಅದೇ ರೀತಿ "ಕ್ಷರಕ್ಷಾಂಸಿ ರಾಜಸಾಃ" ಎಂದರೆ- ರಾಜಸರು ಮಾಡುವ ಪೂಜೆ ಯಕ್ಷ-ರಾಕ್ಷಸರನ್ನು ಸೇರುತ್ತದೆ ಎಂದರ್ಥ. ರಾಜಸರು ಸಾಮಾನ್ಯವಾಗಿ ಭಗವಂತನ ಪಾರಮ್ಯದ ಎಚ್ಚರವಿಲ್ಲದೆ, ಭಯದಿಂದ, ದೇವತೆಗಳು ನಮಗೆ ತೊಂದರೆ ಕೊಡದಿರಲಿ ಎನ್ನುವ ಹರಕೆ ಸಂದಾಯ ಭಾವನೆಯಿಂದ ಪೂಜೆ ಮಾಡುತ್ತಾರೆ. ಈ ರೀತಿ ಪೂಜೆ ಮಾಡಿದಾಗ, ನಾವು  ಭಗವಂತನಿಗೆಂದು ಸಲ್ಲಿಸುವ ಪೂಜೆಯನ್ನು ದೇವತೆಗಳ ಹೆಸರಿನ ಯಕ್ಷ-ರಾಕ್ಷಸರು ಬಂದು ಸ್ವೀಕರಿಸುತ್ತಾರೆ. ಇನ್ನು ಮೂರನೆಯ ವರ್ಗ ತಾಮಸ. ಇವರು ಪೂಜೆ ಮಾಡುವುದು ತಮ್ಮ ಅಂತಸ್ತನ್ನು ತೋರಿಸಿಕೊಳ್ಳುವುದಕ್ಕಾಗಿ. ಉದಾಹರಣೆಗೆ ದುರ್ಯೋಧನ ಪಾಂಡವರು ಮಾಡಿದ ಅಶ್ವಮೇಧ ಯಾಗವನ್ನು ಮೀರಿಸುವ ಸಲುವಾಗಿ ಪೌಂಡ್ರಿಕ ಯಾಗ ಮಾಡಿಸಿದಂತೆ. ಹೀಗೆ ದುರುದ್ದೇಶದಿಂದ ತಾಮಸರು ಮಾಡುವ  ಪೂಜೆಯನ್ನು   ಬಂದು ಸ್ವೀಕರಿಸುವವರು ದೇವತೆಗಳ ಹೆಸರಿನ ಭೂತ-ಪ್ರೇತಗಳು.
ಪೂಜೆಯಲ್ಲಿ ಕೇವಲ ಶ್ರದ್ಧೆ ಮುಖ್ಯವಲ್ಲ ಬದಲಿಗೆ ಅದು ಎಂಥಹ ಶ್ರದ್ಧೆ ಎನ್ನುವುದು ಮುಖ್ಯ. ಶಾಸ್ತ್ರ ಗೊತ್ತಿಲ್ಲದಿದ್ದರೂ ಕೂಡ, ಸಾತ್ವಿಕ ಶ್ರದ್ಧೆಯಿಂದ: “ಭಗವಂತ, ನನಗೆ ಏನೂ ಗೊತ್ತಿಲ್ಲ, ನಾನು ಭಕ್ತಿಯಿಂದ ನಿನ್ನನ್ನು ಆರಾಧನೆ ಮಾಡುತ್ತೇನೆ, ನನ್ನ ತಪ್ಪನ್ನು ಕ್ಷಮಿಸು” ಎಂದು ಶರಣಾಗತಿಯಿಂದ ಬೇಡಿದರೆ ಆ ಪೂಜೆಯನ್ನು ಸ್ವತಃ ಭಗವಂತನೇ ಬಂದು ಸ್ವೀಕಾರ ಮಾಡುತ್ತಾನೆ. ಆದರೆ ಸ್ವಾರ್ಥ, ಅಹಂಕಾರ, ಡಂಭದಿಂದ ಮಾಡುವ ರಾಜಸ ಅಥವಾ ತಾಮಸ ಪೂಜೆಯನ್ನು  ಭಗವಂತನಾಗಲಿ, ಅವನ ಪರಿವಾರ ದೇವತೆಗಳಾಗಲಿ ಸ್ವೀಕರಿಸುವುದಿಲ್ಲ.
ನಮ್ಮ ಕರ್ಮ ಕಾಮರಹಿತ(ನಿಷ್ಕಾಮ)ವಾಗಿರಬೇಕು. ಇಲ್ಲಿ ಕಾಮ ಅಂದರೆ ಕೆಟ್ಟಬಯಕೆ. ಬಯಕೆಯಲ್ಲಿ ಎಂದೂ ಸ್ವಾರ್ಥವಿರಕೂಡದು. ನಾವು ನನಗೆ ಮಾತ್ರ ಒಳ್ಳೆಯದಾಗಲಿ ಎನ್ನುವ ಸಂಕುಚಿತ ಭಾವವನ್ನು ಬಿಟ್ಟುಬಿಡಬೇಕು. ಪೂಜೆ ಪುನಸ್ಕಾರ ಮಾಡುವಾಗ ಯಾವುದೋ ಸಂಕುಚಿತ ಉದ್ದೇಶವಿಟ್ಟು ನಾವು ಪೂಜೆ ಮಾಡಬಾರದು. ಉದಾಹರಣೆಗೆ: “ನನ್ನ ವ್ಯವಹಾರದಲ್ಲಿ ಏಳಿಗೆ ಆಗಲಿ ಎಂದು ಯಜ್ಞ ಮಾಡುವುದು; ಮಗಳಿಗೆ ಉತ್ತಮ ವರ ಸಿಗಲಿ ಎನ್ನುವ ಫಲಾಪೇಕ್ಷೆಯಿಂದ ಪೂಜೆ ಮಾಡುವುದು ಇತ್ಯಾದಿ. ನಾವು ದೇವರಲ್ಲಿ ಈ ರೀತಿ ನಮ್ಮ ಕಾಮನೆಗಳ ಪಟ್ಟಿ ಕೊಡಬಾರದು. ಯಾವುದು ಆಗಬೇಕು ಎನ್ನುವುದು ದೇವರಿಗೆ ಗೊತ್ತಿದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎನ್ನುವುದು ಅವನಿಗೆ ಮಾತ್ರ ಗೊತ್ತಿರುವುದು. ಅದನ್ನು ಅವನು ಕೊಟ್ಟೇ ಕೊಡುತ್ತಾನೆ. ಹೀಗಿರುವಾಗ ನಾವು ನಮ್ಮ ಇಂಥಹ ಸಂಕುಚಿತ ಕಾಮದ ಪಟ್ಟಿಯನ್ನು ಹಿಡಿದುಕೊಂಡು ಕರ್ಮ ಮಾಡಿದಾಗ ಆಗುವ ದುರಂತ ಘೋರ. ನಾವು ದೇವರಲ್ಲಿ ಯಾವುದೋ ಬಯಕೆಯನ್ನಿಟ್ಟು ಪೂಜೆ ಮಾಡಿಸುತ್ತೇವೆ. ಆ ಪೂಜೆಗಾಗಿ ಹಣ ವೆಚ್ಚ ಮಾಡಿರುತ್ತೇವೆ. ಆದರೆ ಆ ಬಯಕೆ ಈಡೇರುವುದಿಲ್ಲ. ಆಗ ನಮಗೆ ದೇವರ ಮೇಲೆ ದ್ವೇಷ, ಹಣ ವ್ಯರ್ಥವಾಯಿತು ಎನ್ನುವ ಅಸಮಾಧಾನ. ಹೀಗಾದಾಗ ನಮ್ಮ ಪೂಜೆ ವ್ಯಾಪಾರವಾಗುತ್ತದೆ ಮತ್ತು ಅದು ಭೂತ-ಪ್ರೇತಗಳನ್ನು ಸೇರುತ್ತದೆ. ದೇವರ ಪೂಜೆ ವ್ಯಾಪಾರವಲ್ಲ.

ಅಶಾಸ್ತ್ರವಿಹಿತಂ ಘೋರಂ ತಪ್ಯಂತೇ ಯೇ ತಪೋ ಜನಾಃ    
ಡಂಭಾಹಂಕಾರಸಂಯುಕ್ತಾಃ ಕಾಮರಾಗಬಲಾನ್ವಿತಾಃ                    
ಕರ್ಶಯಂತಃ ಶರೀರಸ್ಥಂ ಭೂತಗ್ರಾಮಮಚೇತಸಃ
ಮಾಂ ಚೈವಾಂತಃ ಶರೀರಸ್ಥಂ ತಾನ್ ವಿದ್ಧ್ಯಾಸುರನಿಶ್ಚಯಾನ್         

ಅಶಾಸ್ತ್ರ ವಿಹಿತಂ ಘೋರಂ ತಪ್ಯಂತೇ ಯೇ ತಪೋ ಜನಾಃ   
ಡಂಭ ಅಹಂಕಾರ ಸಂಯುಕ್ತಾಃ ಕಾಮ ರಾಗ ಬಲನ್ವಿತಾಃ
ಕರ್ಶಯಂತಃ ಶರೀರಸ್ಥಂ ಭೂತಗ್ರಾಮಮ್ ಅಚೇತಸಃ  
ಮಾಂ ಚ ಏವ ಅಂತಃ ಶರೀರಸ್ಥಂ ತಾನ್ ವಿದ್ಧಿ ಆಸುರನಿಶ್ಚಯಾನ್  ||

ಕೆಲವು ಜನರು ಶಾಸ್ತ್ರದ ಕಟ್ಟಳೆ ಮೀರಿ ಕೆಟ್ಟ ತಪವನ್ನಾಚರಿಸುತ್ತಾರೆ; ಬೂಟಾಟಿಕೆಯಿಂದ ಮತ್ತು ಹಮ್ಮಿನಿಂದ. ಆಸೆ-ಆಸಕ್ತಿಗಳೆ ಅವರ ಸಾಧನೆಗೆ ಬೆಂಬಲ. ಇಂಥ ತಿಳಿಗೇಡಿಗಳು ತಮ್ಮ ದೇಹದಲ್ಲಿರುವ ಭೂತ ಸಮೂಹವನ್ನು [ದೇಹವನ್ನು ನಿಯಮಿಸುವ ದೇವತಾಗಣವನ್ನು] ಕಡೆಗಣಿಸುತ್ತಾರೆ. ದೇಹದೊಳಗಿರುವ ನನ್ನ ಹಿರಿಮೆಯನ್ನು ಅಲ್ಲಗಳೆಯುತ್ತಾರೆ. ಅಂಥವರು ತಾಮಸ ಸ್ವಭಾವದವರು ಎಂದು ತಿಳಿ.

 ಶ್ರದ್ಧೆಯಲ್ಲೇ ಅತ್ಯಂತ ನೀಚವಾದ ತಾಮಸ ಶ್ರದ್ಧೆ ಹೇಗಿರುತ್ತದೆ ಎನ್ನುವುದನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ. ಕೆಲವರು ಶಾಸ್ತ್ರದ ಕಟ್ಟಳೆ ಮೀರಿ ತಪಸ್ಸನ್ನಾಚರಿಸುತ್ತಾರೆ. ಆ ತಪಸ್ಸಿನ ಹಿಂದಿರುವ ಉದ್ದೇಶ ಘೋರ. ಇಲ್ಲಿ ತಪಸ್ಸು ಅಂದರೆ ಕೇವಲ ಋಷಿ-ಮುನಿಗಳು ಮಾಡುವ ತಪಸ್ಸು ಮಾತ್ರವಲ್ಲ, ಶ್ರದ್ಧೆಯಿಂದ ಮಾಡುವ ಯಾವ ಕ್ರಿಯೆಯೂ ತಪಸ್ಸಾಗಬಹುದು[ಈ ಕುರಿತು ಹೆಚ್ಚಿನ ವಿವರಣೆಯನ್ನು ಈ ಅಧ್ಯಾಯದ ಮುಂದಿನ ಭಾಗ(ಶ್ಲೋಕ ೧೪-೧೯)ದಲ್ಲಿ ಕಾಣಬಹುದು]. ತಪಸ್ಸು ಮಾಡುವಾಗ ನಾವು ನನಗೆ ಒಳ್ಳೆಯದಾಗಲಿ ಎಂದು ತಪಸ್ಸು ಮಾಡಬಹುದು ಅಥವಾ ಲೋಕಕ್ಕೆ ಒಳ್ಳೆಯದಾಗಲಿ ಎಂದು ತಪಸ್ಸು ಮಾಡಬಹುದು. ಉದಾಹರಣೆಗೆ ಗಾಯತ್ರಿ: ಇಲ್ಲಿ  “ಧಿಯೋ ಯೋನಃ ಪ್ರಚೋದಯಾತ್” ಎನ್ನುವಲ್ಲಿ “ನಮಗೆಲ್ಲರಿಗೂ ಒಳ್ಳೆಯ ಬುದ್ಧಿ ಕೊಡು ದೇವರೇ” ಎನ್ನುವ ಸಾತ್ವಿಕ ಶ್ರದ್ಧೆ ಇದೆ. ಲೋಕದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಮಾಡುವ ತಪಸ್ಸು ಸಾತ್ವಿಕ ತಪಸ್ಸು. ಇದನ್ನು ಬಿಟ್ಟು  “ನನಗೆ ಮಾತ್ರ  ಒಳ್ಳೆಯದನ್ನು ಕೊಡು” ಎಂದು ಮಾಡುವ ಪೂಜೆ ರಾಜಸ. “ಇನ್ನೊಬ್ಬರು ಹಾಳಾಗಬೇಕು-ನಾನು ಒಳ್ಳೆಯದಾಗಬೇಕು”  ಎಂದು ಮಾಡುವ ಪೂಜೆ  ತಾಮಸ. ಇವು ಲೋಕಕಂಟಕವಾದ ಘೋರ ಶ್ರದ್ಧೆ.
ಶಾಸ್ತ್ರವಿಹಿತವಾದ ತಪಸ್ಸು ಎಂದರೆ: ಭಗವಂತನ ಪಾರಮ್ಯವನ್ನು ಅರಿತು,  ಇನ್ನೊಬ್ಬರ ಬಗ್ಗೆ ಕೆಟ್ಟ ಯೋಚನೆ ಮಾಡದೆ, ಲೋಕದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಮಾಡುವ ತಪಸ್ಸು. ‘ಸರ್ವೋತ್ಕರ್ಷೆ ದೇವ ದೇವಸ್ಯ ವಿಷ್ಣೋ ಮಹಾ ತಾತ್ಪರ್ಯಂ’- ಸಮಸ್ತ ಶಾಸ್ತ್ರಗಳ ತಾತ್ಪರ್ಯ- ‘ಭಗವಂತ ಸರ್ವೋತ್ತಮ’ ಎನ್ನುವುದು. ಇದನ್ನು ಒಪ್ಪಿಕೊಳ್ಳದೆ ಇರುವುದು ಶಾಸ್ತ್ರ ವಿರುದ್ಧ. ಇದನ್ನು ಒಪ್ಪಿಕೊಂಡು ಲೋಕಕ್ಕೆ ಕೆಟ್ಟದಾಗಲಿ ಎನ್ನುವ ಭಾವನೆ ಮನದಲ್ಲಿ ಮೂಡಿದರೆ ಅದೂ ಕೂಡ ಅಶಾಸ್ತ್ರವಿಹಿತವಾಗುತ್ತದೆ. ಯಾವುದು ಶಾಸ್ತ್ರವಿಹಿತ ಅಲ್ಲವೋ ಅದು ಭಗವಂತನಿಗೆ ಪ್ರಿಯವಲ್ಲ. ಇನ್ನೊಬ್ಬರ ಬಗ್ಗೆ ಕೆಟ್ಟದ್ದನ್ನು ಬಯಸಿ, ಸ್ವಾರ್ಥದಿಂದ ಮಾಡುವ ಕರ್ಮ ‘ಘೋರ ಕ್ರಿಯೆ’ ಎನಿಸುತ್ತದೆ ಎನ್ನುವ ಎಚ್ಚರವನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ. ಇಂಥಹ ಕ್ರಿಯೆಯ ಹಿಂದೆ ಡಂಭಾಚಾರ ಮತ್ತು ಅಹಂಕಾರವಿರುತ್ತದೆ. ಇದನ್ನು ದೇವತೆಗಳು ಎಂದೂ ಸ್ವೀಕರಿಸುವುದಿಲ್ಲ.
 ಕೆಲವರು ತಮ್ಮ ದೈಹಿಕ ಬಲದಿಂದ ಇನ್ನೊಬ್ಬರನ್ನು ಬಗ್ಗುಬಡಿಯಬೇಕು ಎನ್ನುವ ದುಷ್ಟ ಉದ್ದೇಶವಿಟ್ಟು ತಪವನ್ನಾಚರಿಸುತ್ತಾರೆ. ಯಾರು ತಮ್ಮ ಕಾಮನೆಗಳಿಗೆ ಅಡ್ಡಿಪಡಿಸುತ್ತಾರೆ, ತಮ್ಮ ಇಷ್ಟಾನಿಷ್ಠಗಳಿಗೆ ಸ್ಪಂದಿಸುವುದಿಲ್ಲ, ಅಂಥವರನ್ನು ಮುಗಿಸಬೇಕು ಎನ್ನುವ ಕೆಟ್ಟ ಚಿಂತನೆ ಇವರ ಮನಸ್ಸಿನಲ್ಲಿರುತ್ತದೆ. ಹೀಗೆ ಡಂಭದಿಂದ, ಅಹಂಕಾರದಿಂದ, ಸಂಕುಚಿತ ಕಾಮದಿಂದ, ಸ್ವಾರ್ಥದಿಂದ, ತೋಳ್ಬಲದಿಂದ ಕ್ರಿಯೆ ಮಾಡುವವರು ತಿಳಿಗೇಡಿಗಳು. ಇವರು ತಮ್ಮ ದೇಹವನ್ನು ದಂಡನೆ ಮಾಡಿ ತಪಸ್ಸನ್ನಾಚರಿಸುತ್ತಾರೆ.ಆದರೆ ಅವರಿಗೆ ತಮ್ಮ ದೇಹದಲ್ಲಿರುವ ಭೂತಗ್ರಾಮದ(ದೇವತೆಗಳ ಸಮೂಹದ) ಎಚ್ಚರವಿರುವುದಿಲ್ಲ. ಸಮಸ್ತ ದೇವತಾಗಣವನ್ನು ನಿರ್ಲಕ್ಷ ಮಾಡಿ, ದೇವತೆಗಳ ಒಳಗಿರುವ ಭಗವಂತನನ್ನೂ ನಿರ್ಲಕ್ಷ್ಯ ಮಾಡಿ, ದೇಹದಂಡನೆ ಮಾಡಿಕೊಂಡು ಅನುಷ್ಠಾನ ಮಾಡುವ ಇವರು ಅಸುರರೆನಿಸುತ್ತಾರೆ. ಇವರು 'ಇಂದ್ರಿಯ ಕರ್ಮವೇ ಸರ್ವಸ್ವ-ಅದರಿಂದಾಚೆಗೆ ಏನೂ ಇಲ್ಲ' ಎಂದು ತಿಳಿದಿರುತ್ತಾರೆ.
ಕೃಷ್ಣನ ಈ ವಿವರಣೆಯನ್ನು ನೋಡಿದಾಗ ನಮ್ಮ-ನಿಮ್ಮೊಳಗಿರುವ ಈ ಅಸುರ(ಪ್ರಭಾವದಿಂದ ಬೆಳೆದ ಅಂಧಃಶ್ರದ್ಧೆ)  ಎಷ್ಟು ಭಯಾನಕ ಎನ್ನುವ ಅಂಶ ನಮಗೆ ತಿಳಿಯುತ್ತದೆ. ಇದನ್ನು ನಾವು ನಮ್ಮ ಪ್ರತಿಯೊಂದು ಕ್ರಿಯೆಯಲ್ಲೂ ಗುರುತಿಸಿಕೊಂಡು ತಿದ್ದಿಕೊಳ್ಳಬೇಕು. ಇದಕ್ಕಾಗಿ ಕೃಷ್ಣ ಮುಂದಿನ ಶ್ಲೋಕಗಳಲ್ಲಿ ಆಹಾರ, ತಪಸ್ಸು, ದಾನ ಇತ್ಯಾದಿಯಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸ ಪ್ರಭೇದ ಹೇಗಿರುತ್ತದೆ ಎನ್ನುವುದನ್ನು ವಿವರಿಸುತ್ತಾನೆ.        

No comments:

Post a Comment