Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Wednesday, December 21, 2011

Bhagavad GitA Kannada Chapter-17 Shloka-01


ಅಧ್ಯಾಯ ಹದಿನೇಳು
           ಕೃಷ್ಣ ಗೀತೆಯ ಆರಂಭದಲ್ಲಿ ಕರ್ಮದ ಬಗ್ಗೆ ವಿವರಿಸುತ್ತ: “ಫಲದ ನಂಟು ತೊರೆದು, ಭಗವಂತನ ಪೂಜೆಯೆಂದು ಕರ್ಮ ಮಾಡು” ಎನ್ನುವ ಸಂದೇಶವನ್ನು ಕೊಟ್ಟ. ಕರ್ಮ ಮಾಡುವಾಗ ನಾವು ತಿಳಿದುಕೊಳ್ಳಬೇಕಾದ ಒಂದು ಬಹಳ ಮುಖ್ಯವಾದ ವಿಚಾರವೆಂದರೆ: ಯಾವುದು ಸತ್ಕರ್ಮ ಮತ್ತು ಯಾವುದು ಅಸತ್ಕರ್ಮ ಎನ್ನುವದು. ಕೆಟ್ಟ ಕೆಲಸ ಮತ್ತು ಒಳ್ಳೆಯ ಕೆಲಸ ಎನ್ನುವುದು ನಾವು ತಿಳಿದಷ್ಟು ಸರಳವಾಗಿ ತಿಳಿಯುವ ವಿಚಾರವಲ್ಲ. ನಮಗೆ ಮೇಲ್ನೋಟಕ್ಕೆ ಒಳ್ಳೆಯ ಕೆಲಸ ಎಂದು ಕಂಡು ಬಂದದ್ದು ಕೆಟ್ಟ ಕೆಲಸವಾಗಿರಬಹುದು ಅಥವಾ ಕೆಟ್ಟ ಕೆಲಸವೆಂದು ಕಾಣಿಸಿದ್ದು ಒಳ್ಳೆಯ ಕೆಲಸವಾಗಿರಬಹುದು. ಇಲ್ಲಿ ಕೆಲಸದ ಹಿಂದಿರುವ ಭಾವ ಮುಖ್ಯವಾಗುತ್ತದೆ. ಒಂದೇ ಕ್ರಿಯೆ ಅದರ ಹಿಂದಿನ ಭಾವಕ್ಕನುಗುಣವಾಗಿ  ಸತ್ಕರ್ಮವಾಗಬಹುದು ಅಥವಾ ದುಷ್ಕರ್ಮವಾಗಬಹುದು. ಉದಾಹರಣೆಗೆ: ಮಹಾಭಾರತ ಯುದ್ಧ. ಈ ಯುದ್ಧದಲ್ಲಿ ಪಾಂಡವರೂ ಪಾಲ್ಗೊಂಡಿದ್ದರು ಮತ್ತು ಕೌರವರೂ ಪಾಲ್ಗೊಂಡಿದ್ದರು. ಪಾಂಡವರಲ್ಲಿ ಸಾತ್ವಿಕವಾದ ಮನೋವೃತ್ತಿ ಇತ್ತು. ಅವರು  ಎಂದೂ ಸಾಮಾಜಿಕವಾಗಿ ತಾವು ದೊಡ್ಡ ಸ್ಥಾನವನ್ನು ಗಳಿಸಬೇಕು(ರಾಜಸ ಭಾವನೆ), ಕೌರವರನ್ನು ಮಣ್ಣು ಮುಕ್ಕಿಸಬೇಕು(ತಾಮಸ ಭಾವನೆ) ಎನ್ನುವ ಭಾವನೆಯಿಂದ ಯುದ್ಧ ಮಾಡಿಲ್ಲ. ಆದರೆ ದುರ್ಯೋಧನನಲ್ಲಿ ಇದ್ದದ್ದು ಕೇವಲ ರಾಜಸ ಮತ್ತು ತಾಮಸ ಭಾವನೆ. ಈ ಕಾರಣದಿಂದ ಪಾಂಡವರು ಮಾಡಿದ ಯುದ್ಧ ಸಾತ್ವಿಕ ಯುದ್ಧವಾದರೆ, ಕೌರವರು ಮಾಡಿದ ಯುದ್ಧ ತಾಮಸ ಯುದ್ಧವಾಯಿತು.  ಆದ್ದರಿಂದ ನಾವು ಸತ್ಕರ್ಮ ಯಾವುದು ಅಸತ್ಕರ್ಮ ಯಾವುದು ಎನ್ನುವ ಜ್ಞಾನವನ್ನು ಪಡೆದು ಕರ್ಮ ಮಾಡುವುದು ಬಹಳ ಮುಖ್ಯವಾಗುತ್ತದೆ. ಕರ್ಮ ಎನ್ನುವುದು ಸತ್ವ, ರಜಸ್ಸು, ತಮಸ್ಸುಗಳೆಂಬ ಮೂರು ವಿಧವಾದ ತ್ರಿಗುಣಗಳ ಪರಿಧಿಯಲ್ಲೇ ನಡೆಯುತ್ತದೆ. ನಾವು ಮಾಡುವ ಯಜ್ಞ, ದಾನ, ತಪಸ್ಸು; ನಾವು ಸೇವಿಸುವ ಆಹಾರ, ಎಲ್ಲದರಲ್ಲೂ ಈ ಗುಣತ್ರಯಗಳ ಪ್ರಭಾವ ಸೇರಿಕೊಂಡಿರುತ್ತದೆ. ಈ ಗುಣತ್ರಯಗಳ ಪ್ರಭಾವ ನಮ್ಮ ಕರ್ಮದ ಮೇಲೆ ಹೇಗಾಗುತ್ತದೆ ಎನ್ನುವುದನ್ನು ನಾವು ಸಾಧ್ಯವಾದಷ್ಟು ಅರಿತು, ಸತ್ವದ ಪರಿಧಿಯೊಳಗೆ ಕರ್ಮಾಚರಣೆ ಮಾಡಬೇಕು. ಈ ಅಧ್ಯಾಯ ಮುಖ್ಯವಾಗಿ ಯಾವ ಅನುಸಂಧಾನದಿಂದ ಕರ್ಮ ಮಾಡಿದಾಗ ಆ ಕ್ರಿಯೆ ಸಾತ್ವಿಕ, ರಾಜಸ ಅಥವಾ ತಾಮಸ ಕ್ರಿಯೆಯಾಗುತ್ತದೆ ಎನ್ನುವುದನ್ನು ವಿವರಿಸುತ್ತದೆ.
ಹಿಂದಿನ ಅಧ್ಯಾಯದ ಕೊನೆಯಲ್ಲಿ ಕೃಷ್ಣ “ಶಾಸ್ತ್ರದ ಕಟ್ಟಳೆಯನ್ನು ಮೀರಿ ಇಷ್ಟಬಂದಂತೆ ನಡೆವವನು ಸಿದ್ಧಿಯನ್ನು ಪಡೆಯಲಾರ, ಅವನಿಗೆ ಸುಖವಿಲ್ಲ, ಪರಮಗತಿಯೂ ಇಲ್ಲ” ಎಂದು ಹೇಳಿದ್ದ. ಇಲ್ಲಿ ನಮಗೆ ಒಂದು ಪ್ರಶ್ನೆ ಬರುತ್ತದೆ. ಶಾಸ್ತ್ರದ ಕಟ್ಟಳೆ ತಿಳಿಯದವರು-ನಂಬಿಕೆಯಿಂದ ಕರ್ಮ ಮಾಡುತ್ತಾರೆ-ಅಂಥವರ  ಗತಿ ಏನು? ಎಂದು. ನಮ್ಮ ಪರವಾಗಿ ಅರ್ಜುನ ಕೃಷ್ಣನಲ್ಲಿ ಈ ಪ್ರಶ್ನೆಯನ್ನು ಕೇಳುವುದರೊಂದಿಗೆ ಈ ಅಧ್ಯಾಯ ಪ್ರಾರಂಭವಾಗುತ್ತದೆ. ಬನ್ನಿ ಅರ್ಜುನನೊಂದಿಗೆ ನಾವೂ ಸೇರಿಕೊಂಡು ಭಗವಂತನ ಉಪದೇಶವನ್ನು ಆಲಿಸೋಣ. 

ಅರ್ಜುನ ಉವಾಚ
ಯೇ ಶಾಸ್ತ್ರವಿಧಿಮುತ್ಸೃಜ್ಯ ಯಜಂತೇ ಶ್ರದ್ಧಯಾSನ್ವಿತಾಃ
ತೇಷಾಂ ನಿಷ್ಠಾ ತು ಕಾ ಕೃಷ್ಣ ಸತ್ತ್ವಮಾಹೋ ರಜಸ್ತಮಃ       

ಅರ್ಜುನ ಉವಾಚ- ಅರ್ಜುನ ಕೇಳಿದನು:
ಯೇ ಶಾಸ್ತ್ರವಿಧಿಮ್ ಉತ್ಸೃಜ್ಯ ಯಜಂತೇ ಶ್ರದ್ಧಯಾನ್ವಿತಾಃ
ತೇಷಾಂ ನಿಷ್ಠಾ ತು ಕಾ ಕೃಷ್ಣ ಸತ್ತ್ವಮ್ ಆಹೋ ರಜಸ್ತಮಃ -- ಕೆಲವರು ಶಾಸ್ತ್ರದ ಕಟ್ಟಳೆ ಅರಿಯದೆ ಬಿಟ್ಟರೂ ನಂಬಿಕೆಯಿಂದ ನಡೆದುಕೊಳ್ಳುತ್ತಾರೆ. ಅಂಥವರ ನೆಲೆ ಎಂಥದು ಕೃಷ್ಣ? ಸತ್ವವೆ, ರಾಜಸ್ಸೆ ಅಥವಾ ತಮಸ್ಸೆ?

ನಾವು ವೇದಾಧ್ಯಯನ ಮಾಡಿಲ್ಲ , ನಮಗೆ ಶಾಸ್ತ್ರದ ವಿಧಿ ಗೊತ್ತಿಲ್ಲ, ಆದರೆ ಶಾಸ್ತ್ರ ತಿಳಿಯದೇ ಇದ್ದುದಕ್ಕಾಗಿ ಪಶ್ಚಾತ್ತಾಪವಿದೆ;  ಶಾಸ್ತ್ರದ ಬಗ್ಗೆ ಶ್ರದ್ಧೆ ಇದೆ, ಅದರ ಪ್ರಕಾರ ಬದುಕಬೇಕು ಎನ್ನುವ ಬಯಕೆ ಇದೆ.  ತಿಳಿದವರು ಹೇಳುತ್ತಾರೆ: "ಯದೇವ ವಿದ್ಯಯಾ ಕರೋತಿ ಶ್ರದ್ಧೆಯ.. ಅಂದರೆ ನೀನು ಏನನ್ನು ಮಾಡಿದರೂ ತಿಳಿದು ಮಾಡು. ಜ್ಞಾನ ಪೂರ್ವಕವಾಗಿ ಮಾಡಿದ ಕರ್ಮ ಸಫಲ. ಇಲ್ಲದಿದ್ದರೆ ಅದು ವ್ಯರ್ಥ ಎಂದು. ಹೀಗಿರುವಾಗ ಒಬ್ಬ ಶ್ರದ್ಧೆಯಿಂದ ಮಾಡುವ ಕರ್ಮ ವ್ಯರ್ಥವೋ?  ಇದು ಅರ್ಜುನನ ಪ್ರಶ್ನೆ.

ಇಲ್ಲಿ ‘ಶ್ರದ್ಧಾ’ ಅಂದರೆ-ಅತೀಂದ್ರಿಯವಾಗಿರತಕ್ಕ, ನಮ್ಮನ್ನು ನಿಯಂತ್ರಿಸುವ ಅಗೋಚರ ಶಕ್ತಿಯ ಬಗ್ಗೆ ನಮಗಿರುವ ನಂಬಿಕೆ. ಅರ್ಥಾತ್: ಭಗವಂತನ ಮೇಲೆ ನಂಬಿಕೆ, ಶಾಸ್ತ್ರದ ಮೇಲೆ ನಂಬಿಕೆ, ಪಾಪ-ಪುಣ್ಯದ ನಂಬಿಕೆ, ಎಲ್ಲವನ್ನು ನಿಯಂತ್ರಿಸುವ ಪರಶಕ್ತಿ ಒಂದಿದೆ ಎನ್ನುವ ನಂಬಿಕೆ.  ಮಹಾಭಾರತದಲ್ಲಿ ಹೇಳುವಂತೆ: 'ಕರ್ಮಕ್ಕೆ ಫಲವಿದೆ ಎನ್ನುವ ನಂಬಿಕೆಯೇ ಮನುಷ್ಯನ ಬದುಕಿನ ಆಧಾರ ಸ್ಥಂಭ'.  ಹೀಗಿರುವಾಗ  ನಂಬಿಕೆಯೊಂದಿಗೆ ಶ್ರದ್ಧೆ ಇದ್ದು, ಶಾಸ್ತ್ರದ ತಿಳುವಳಿಕೆ ಇಲ್ಲದೇ ಇದ್ದರೆ  ಅಂತವರ ನೆಲೆ ಏನು? “ಎಲ್ಲರನ್ನು ಕರ್ಷಣೆ ಮಾಡುವ(ಕೃಷ್ಣ) ನೀನು ಇಂಥವರನ್ನು ಎಲ್ಲಿಗೆ ಕರ್ಷಣೆ ಮಾಡುತ್ತೀಯ? ಅಂಥವರ ನಿಷ್ಠೆ ಸಾತ್ವಿಕವೋ, ರಾಜಸವೋ ಅಥವಾ ತಾಮಸವೋ?” ಎಂದು ನಮ್ಮ ನಿಮ್ಮೆಲ್ಲರಿಗಿರುವ ಈ ಗೊಂದಲದ ಪ್ರಶ್ನೆಯನ್ನು ಅರ್ಜುನ ಕೃಷ್ಣನಲ್ಲಿ ಕೇಳುತ್ತಾನೆ.

No comments:

Post a Comment