Bhagavad Gita in Kannada- Source: "Discourse On Gita" By Bannanje Govindacharya
Pages
Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)
Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.
Visit: ಮಹಾಭಾರತ ತಾತ್ಪರ್ಯ ನಿರ್ಣಯ
Showing posts with label Bhagavad Gita in Kannada. Show all posts
Showing posts with label Bhagavad Gita in Kannada. Show all posts
Friday, January 27, 2012
Sunday, January 8, 2012
ಭಗವದ್ಗೀತಾ-ಫಲಶ್ರುತಿಃ ಮತ್ತು ಉಪಸಂಹಾರ (ಅಧ್ಯಾಯ-18 ಶ್ಲೋಕ 67-78)
ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ
।
ನಚಾಶುಶ್ರೂಷವೇ ವಾಚ್ಯಂ ನಚ ಮಾಂ ಯೋSಭ್ಯಸೂಯತಿ ॥೬೭॥
ಇದಂ ತೇ ನ ಅತಪಸ್ಕಾಯ ನ ಅಭಕ್ತಾಯ ಕದಾಚನ
।
ನಚಾಶುಶ್ರೂಷವೇ ವಾಚ್ಯಂ ನಚ ಮಾಂ ಯಃ
ಅಭ್ಯಸೂಯತಿ – ಇದನ್ನು ನೇಮದ ನಿಷ್ಠೆ ಇರದವರಿಗೆ ಹೇಳಬೇಡ. ಭಕ್ತಿ ಇರದವನಿಗೆ ಎಂದೂ ಹೇಳಬೇಡ. ಕೇಳುವಾಸೆ ಇರದವನಿಗೂ ಹೇಳಬೇಡ. ನನ್ನ ಬಗೆಗೆ ಕಿಚ್ಚು ಪಡುವವನಿಗಂತು ಹೇಳಲೇಬೇಡ.
ಇಲ್ಲಿ ಕೃಷ್ಣ ಜ್ಞಾನದ ಪರಂಪರೆಯನ್ನು
ಹೇಗೆ ರಕ್ಷಿಸಬೇಕು ಎನ್ನುವುದನ್ನು ವಿವರಿಸಿದ್ದಾನೆ. ಯಾರಿಗೆ ಆಳವಾದ ಚಿಂತನಶೀಲತೆ ಇಲ್ಲವೋ ಅವರಿಗೆ ಇದನ್ನು
ಹೇಳಬೇಡ; ಚಿಂತನಶೀಲತೆ ಇದ್ದು ಕೇಳುವ ಆಸಕ್ತಿ ಇಲ್ಲದವರಿಗೆ ಇದನ್ನು ಹೇಳಬೇಡ; ಆಸಕ್ತಿ ಇದೆ ಆದರೆ
ಭಕ್ತಿ/ಪ್ರೀತಿ ಇಲ್ಲ-ಅಂಥವರಿಗೆ ಇದನ್ನು ಹೇಳಬೇಡ; ಎಲ್ಲಕ್ಕಿಂತ ಮಿಗಿಲಾಗಿ ಭಗವಂತನ ಬಗ್ಗೆ
ಅಸಹನೆ,ಅಸೂಯೆ, ದ್ವೇಷವುಳ್ಳವರಿಗೆ ಸರ್ವತಾ ಹೇಳಲೇಬೇಡ.
ಎಂದೂ ಅಧ್ಯಾತ್ಮವನ್ನು ಬೀದಿಯ ಸೊತ್ತಾಗಿಸಬೇಡ.
ಒಂದು ಕಾಲದಲ್ಲಿ ವೇದಾಂತವನ್ನು
ಸಾರ್ವಜನಿಕವಾಗಿ ಬಿಚ್ಚಿಡಬಾರದು, ಅದನ್ನು ರಹಸ್ಯವಾಗಿಡಬೇಕು ಎನ್ನುವ ಅಭಿಪ್ರಾಯ ಹೆಚ್ಚಾಗಿ
ಬೆಳೆಯಿತು. ಇದರ ಪರಿಣಾಮ ಕಾಲಕ್ರಮೇಣ ಮುಚ್ಚಿಟ್ಟ ಜ್ಞಾನವನ್ನು ತೆರೆಯುವವರೇ ಇಲ್ಲವಾಯಿತು. ಇಂದು
ನಮ್ಮಲ್ಲಿ ಹೆಚ್ಚಿನವರು ಆಧ್ಯಾತ್ಮಿಕ ಗ್ರಂಥಗಳಿಗೆ ಆರತಿ ಮಾಡಿ ಕುಂಕುಮ ಹಚ್ಚಿ ಮುಚ್ಚಿಡುವವರೇ
ಹೆಚ್ಚಾಗಿದ್ದಾರೆ. ಈ ಕಾರಣದಿಂದ ನಾವು ಮುಚ್ಚಿಟ್ಟ ಈ ಅಮೂಲ್ಯ ಜ್ಞಾನವನ್ನು ತೆರೆದು
ಆಸಕ್ತಿವುಳ್ಳವರಿಗೆ ಕೊಡುವ ಕೆಲಸ ಮಾಡಬೇಕಾಗಿದೆ.
ಭಗವದ್ಗೀತೆಯ ಈ ಅಮೂಲ್ಯ ಸಂದೇಶದ
ಅಧ್ಯಯನ ಮಾಡಿ ಮನನ ಮಾಡುವುದರಿಂದ ಸಿಗುವ ಫಲಶ್ರುತಿ ಏನು ಎನ್ನುವುದನ್ನು ಕೃಷ್ಣ ಮುಂದಿನ ನಾಲ್ಕು
ಶ್ಲೋಕಗಳಲ್ಲಿ ವಿವರಿಸಿದ್ದಾನೆ. ಭಗವದ್ಗೀತೆಯ ನಿಜವಾದ ಫಲ ಮನುಷ್ಯನ ಪುರುಷಾರ್ಥದಲ್ಲಿ ಕೊನೆಯದಾದ
ಮೋಕ್ಷ. ಅಧ್ಯಾತ್ಮ ವಿದ್ಯೆಯನ್ನು ಹೇಳುವ ಸಮಸ್ತ ಶಾಸ್ತ್ರಗಳ ಸಾರ ಭಗವದ್ಗೀತೆ. ಭಗವಂತನ
ಸ್ವರೂಪವನ್ನು ತಿಳಿದು ಭಗವಂತನ ಲೋಕ ಸೇರಲು ಇದೊಂದೇ ಗ್ರಂಥ ಸಾಕು. ಸಮಸ್ತ ಶಾಸ್ತ್ರಗಳಲ್ಲಿನ
ಸಮಸ್ತ ಸಾರವನ್ನು, ಸಮಸ್ತ ರಹಸ್ಯವನ್ನು ನಾವು ಈ
ಕೃಷ್ಣಾರ್ಜುನ ಸಂವಾದದಲ್ಲಿ ಕಾಣಬಹುದು. ಈ ರೀತಿ ಎಲ್ಲ ಶಾಸ್ತ್ರಗಳ ಪೂರ್ಣ ಸಾರಸಂಗ್ರಹ ಅಡಕವಾಗಿರುವ ಗ್ರಂಥ
ಇನ್ನೊಂದಿಲ್ಲ. ಇಂಥಹ ಗೀತೆಯನ್ನು ನಾವು ಗುರು
ಮುಖೇನ ತಿಳಿಯುವುದರಿಂದ; ಮನನ ಮಾಡುವುದರಿಂದ; ಇಲ್ಲಿ ಹೇಳಿರುವ ಸಾಧನಾ ಉಪಾಯವನ್ನು ಜೀವನದಲ್ಲಿ ಅನುಸರಿಸುವುದರಿಂದ; ನಾವು ತಿಳಿದ
ಜ್ಞಾನವನ್ನು ಆಸಕ್ತರಿಗೆ ತಿಳಿಸುವುದರಿಂದ-ನಾವು ಭಗವಂತನ ಲೋಕವನ್ನು(ಮೋಕ್ಷವನ್ನು) ಸೇರಬಹುದು.
ಯ ಇಮಂ ಪರಮಂ ಗುಹ್ಯಂ ಮದ್ ಭಕ್ತೇಷ್ವಭಿಧಾಸ್ಯತಿ
।
ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯಸಂಶಯಃ ॥೬೮॥
ಯಃ ಇಮಂ ಪರಮಂ ಗುಹ್ಯಂ ಮತ್ ಭಕ್ತೇಷು ಅಭಿಧಾಸ್ಯತಿ ।
ಭಕ್ತಿಂ ಮಯಿ ಪರಾಂ ಕೃತ್ವಾ ಮಾಮ್ ಏವ
ಏಷ್ಯತಿ ಅಸಂಶಯಃ – ತುಂಬ ಗೋಪ್ಯವಾದ ಇದನ್ನು ನನ್ನ ಭಕ್ತರಲ್ಲಿ ಅರುಹುವವನು ನನ್ನಲ್ಲಿ ಹಿರಿಯ
ಭಕ್ತಿಯನ್ನು ಮಾಡಿ ನನ್ನನ್ನೆ ಸೇರುತ್ತಾನೆ; ಸಂಶಯವಿಲ್ಲ.
ಇಂಥಹ ಜ್ಞಾನವನ್ನು ಅರಿತು,
ಅದನ್ನು 'ನನ್ನಲ್ಲಿ ಶ್ರದ್ಧಾಭಕ್ತಿಯುಳ್ಳ
ಸಾಧಕನಿಗೆ' ಕೊಡುತ್ತಾರೋ ಅವರು ನಿಶ್ಚಿತವಾಗಿ ನನ್ನನ್ನು ಬಂದು ಸೇರುತ್ತಾರೆ. ಇದರಲ್ಲಿ
ಸಂಶಯವಿಲ್ಲ.
ನಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್
ತಮಃ ।
ಭವಿತಾ ನಚ ಮೇ ತಸ್ಮಾದನ್ಯಃ ಪ್ರಿಯತರೋ
ಭುವಿ ॥೬೯॥
ನಚ ತಸ್ಮಾತ್ ಮನುಷ್ಯೇಷು ಕಶ್ಚಿತ್ ಮೇ ಪ್ರಿಯಕೃತ್
ತಮಃ ।
ಭವಿತಾ ನಚ ಮೇ ತಸ್ಮಾತ್ ಅನ್ಯಃ ಪ್ರಿಯತರಃ ಭುವಿ – ಮನುಷ್ಯರಲ್ಲಿ ಅವನಿಗಿಂತ ಹೆಚ್ಚು ಮೆಚ್ಚಿನವನು ನನಗೆ ಇನ್ನೊಬ್ಬನಿಲ್ಲ. ಅವನಿಗಿಂತ
ಹೆಚ್ಚು ಮೆಚ್ಚಿನ ಇನ್ನೊಬ್ಬ ಭೂಮಿಯಲ್ಲಿ ಮುಂದೆ ಹುಟ್ಟಲಾರ.
“ಗೀತೆಯನ್ನು ತಿಳಿದು ಅದನ್ನು ಭಕ್ತ
ಜನಾಂಗಕ್ಕೆ ತಲುಪಿಸುವ ಶ್ರೇಷ್ಠ ಕಾರ್ಯ ಮಾಡುವವರು ‘ಮನುಷ್ಯರಲ್ಲಿ’ ನನಗೆ ಅತ್ಯಂತ ಮೆಚ್ಚಿನವರು. ಇವರಿಗಿಂತ ಹೆಚ್ಚು ಇಷ್ಟವಾದದ್ದನ್ನು ಮಾಡುವ ಮಾನವ ಈ ಭೂಮಿಯ ಮೇಲೆ ಇಲ್ಲ” ಎನ್ನುತ್ತಾನೆ ಕೃಷ್ಣ. ಭಗವಂತನಿಗೆ ಜ್ಞಾನಿಗಳು
ಅಚ್ಚುಮೆಚ್ಚು. ಅವರಿಗಿಂತಲೂ ಅಚ್ಚುಮೆಚ್ಚು ತಾವು ಜ್ಞಾನಿಗಳಾಗಿ, ಆ ಜ್ಞಾನದ ಸವಿಯನ್ನು ಸಮಾಜಕ್ಕೆ
ಕೊಡುವವರು. “ಇವರು ಭೂಮಿಯಲ್ಲಿ ನನಗೆ ಇಷ್ಟವಾದುದ್ದನ್ನು ಮಾಡುವವರಲ್ಲಿ ಸರ್ವಶ್ರೇಷ್ಠರು” ಎಂದಿದ್ದಾನೆ
ಕೃಷ್ಣ.
ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯಂ ಸಂವಾದಮಾವಯೋಃ
।
ಜ್ಞಾನಯಜ್ಞೇನ ತೇನಾಹಮಿಷ್ಟಃ ಸ್ಯಾಮಿತಿ
ಮೇ ಮತಿಃ ॥೭೦॥
ಅಧ್ಯೇಷ್ಯತೇ ಚ ಯಃ ಇಮಂ ಧರ್ಮ್ಯಂ ಸಂವಾದಮ್ ಆವಯೋಃ ।
ಜ್ಞಾನ ಯಜ್ಞೇನ ತೇನ ಅಹಮ್ ಇಷ್ಟಃ ಸ್ಯಾಮ್ ಇತಿ ಮೇ ಮತಿಃ -- ಜೀವನಧರ್ಮವನ್ನರುಹುವ ನಮ್ಮ ಈ ಮಾತುಕತೆಯನ್ನು ಅಧ್ಯಯನ ಮಾಡಿದರೆ ಕೂಡ
ಜ್ಞಾನಯಜ್ಞದಿಂದ ನನ್ನನ್ನು ಪೂಜಿಸಿದಂತಾಯಿತು ಎಂದು ನನ್ನ ಆಶಯ.
ಒಂದು ವೇಳೆ ಗೀತೆಯ ಜ್ಞಾನವನ್ನು
ಅರಗಿಸಿಕೊಂಡು ಇನ್ನೊಬ್ಬರಿಗೆ ಹೇಳುವ ಕ್ಷಮತೆ ನಮ್ಮಲ್ಲಿಲ್ಲದಿದ್ದರೆ, ಧರ್ಮ ವಿಷಯಕವಾದ ಈ ಕೃಷ್ಣಾರ್ಜುನ ಸಂವಾದವನ್ನು ಗುರುಮುಖದಲ್ಲಿ
ಅಧ್ಯಯನ ಮಾಡಿದರೆ ಕೂಡ-ಅದು ಜ್ಞಾನ ಯಜ್ಞದಂತೆ ಭಗವಂತನ ಪೂಜೆಯಾಗುತ್ತದೆ. “ಇದು ನನ್ನ ಅಭಿಪ್ರಾಯ”
ಎಂದು ಹೇಳುತ್ತಾನೆ ಕೃಷ್ಣ. ಭಗವಂತನ ಬಗೆಗೆ ಮನುಷ್ಯ ಏನೇನು ತಿಳಿದುಕೊಳ್ಳಬೇಕು, ಅದನ್ನು ತಿಳಿದು
ಹೇಗೆ ಧರ್ಮದ ದಾರಿಯಲ್ಲಿ ಸಾಗಬೇಕು ಎನ್ನುವ 'ಜೀವನ ಧರ್ಮವನ್ನು' ಗೀತೆಯ ಮೂಲಕ ತಿಳಿದು ಪಾಲಿಸುವವ-ಮೋಕ್ಷವನ್ನು
ಸೇರುತ್ತಾನೆ.
ಶ್ರದ್ಧಾವಾನನಸೂಯಶ್ಚ ಶೃಣುಯಾದಪಿ ಯೋ
ನರಃ ।
ಸೋSಪಿ ಮುಕ್ತಃ ಶುಭಾನ್ ಲೋಕಾನ್
ಪ್ರಾಪ್ನುಯಾತ್ ಪುಣ್ಯಕರ್ಮಣಾಮ್ ॥೭೧॥
ಶ್ರದ್ಧಾವಾನ್ ಅನಸೂಯಃ ಚ ಶೃಣುಯಾತ್ ಅಪಿ ಯಃ ನರಃ ।
ಸಃ ಅಪಿ ಮುಕ್ತಃ ಶುಭಾನ್ ಲೋಕಾನ್
ಪ್ರಾಪ್ನುಯಾತ್ ಪುಣ್ಯಕರ್ಮಣಾಮ್ – ನಂಬಿಕೆ ಇರುವ, ಕಿಚ್ಚು ಇರದ ಮನುಷ್ಯ ಕೇಳಿದರೂ ಸಾಕು. ಅಂಥವನೂ ಪಾಪದಿಂದ ಬಿಡುಗಡೆಗೊಂಡು ಪುಣ್ಯಜೀವಿಗಳ ಮಂಗಲಮಯ ಲೋಕಗಳನ್ನು ಪಡೆದಾನು.
ಒಂದು ವೇಳೆ ಗೀತೆಯನ್ನು ಸ್ವಯಂ
ಅಧ್ಯಯನ ಮಾಡುವ ಸಾಮರ್ಥ್ಯ ನಮ್ಮಲ್ಲಿ ಇಲ್ಲದೇ ಇದ್ದಾಗ, ಯಾವುದೇ ಅಸೂಯೆ ಇಲ್ಲದೆ,
ಶ್ರದ್ಧಾಭಕ್ತಿಯಿಂದ ತಿಳಿದವರಿಂದ ಕೇಳಿ ತಿಳಿದುಕೊಂಡರೂ ಸಾಕು- ನಾವು ನಮ್ಮ ಪಾಪವನ್ನು ತೊಳೆದುಕೊಂಡು ಭಗವಂತನ ಲೋಕವನ್ನು ಸೇರಬಹುದು. ಇದು ಕೃಷ್ಣನ ಭರವಸೆ.
ಕಚ್ಚಿದೇತಚ್ಛ್ರುತಂ ಪಾರ್ಥ ತ್ವಯೈಕಾಗ್ರೇಣ
ಚೇತಸಾ ।
ಕಚ್ಚಿದಜ್ಞಾನಸಂಮೋಹಃ ಪ್ರನಷ್ಟಸ್ತೇ ಧನಂಜಯ ॥೭೨॥
ಕಚ್ಚಿತ್ ಏತತ್ ಶ್ರುತಂ ಪಾರ್ಥ ತ್ವಯಾ
ಏಕಾಗ್ರೇಣ ಚೇತಸಾ ।
ಕಚ್ಚಿತ್ ಅಜ್ಞಾನ ಸಂಮೋಹಃ ಪ್ರಣಷ್ಟಃ
ತೇ ಧನಂಜಯ – ಪಾರ್ಥ, ಇದನ್ನು ಒಮ್ಮನದಿಂದ
ಕಿವಿಗೊಟ್ಟು ಕೇಳಿದೆಯೇನು? ಧನಂಜಯ, ನಿನ್ನ ಅಜ್ಞಾನದ ಗೊಂದಲ ಕಳೆಯಿತೇನು?
ಇದು ಗೀತೆಯಲ್ಲಿ ಕೃಷ್ಣನ ಕೊನೇಯ
ಮಾತು. ಎಲ್ಲವನ್ನು ವಿವರಿಸಿದ ಕೃಷ್ಣ ತನ್ನ
ಶಿಷ್ಯ ಅರ್ಜುನನಲ್ಲಿ ಕೇಳುತ್ತಾನೆ: “ನಾನು ಹೇಳಿದ್ದು
ನಿನ್ನ ಕಿವಿಯೊಳಗೆ ಹೋಗಿ ಹೃದಯಕ್ಕೆ ಮುಟ್ಟಿತೇನೋ? ಇದರಿಂದ ನಿನ್ನ ಮನಸ್ಸಿನಲ್ಲಿದ್ದ ತಪ್ಪು ತಿಳುವಳಿಕೆ
ಗೊಂದಲ ಕಳೆಯಿತೇ?" ಎಂದು. ಇಲ್ಲಿ ಕೃಷ್ಣ -ಗುರು
ತನ್ನ ಶಿಷ್ಯನಲ್ಲಿ ಕೇಳುವಂತೆ ಅರ್ಜುನನನ್ನು ಪ್ರಶ್ನಿಸಿದ್ದಾನೆ. ಇಲ್ಲಿಗೆ ಗೀತೆಯಲ್ಲಿ
ಕೃಷ್ಣನ ನುಡಿಗಳುಳ್ಳ ೫೭೪ ಶ್ಲೋಕಗಳು ಮುಗಿಯಿತು. ಅರ್ಜುನನ ಒಟ್ಟು ೮೪ ಶ್ಲೋಕಗಳಲ್ಲಿ ಕೊನೇಯ ಶ್ಲೋಕ ಮತ್ತು ಸಂಜಯನ ಒಟ್ಟು ೪೧ ಶ್ಲೋಕಗಳಲ್ಲಿ ಕೊನೇಯ
ಐದು ಶ್ಲೋಕ ಈ ಅಧ್ಯಾಯದ ಉಳಿದ ಭಾಗ. [ಕೃಷ್ಣ-೫೭೪; ಅರ್ಜುನ-೮೪; ಸಂಜಯ-೪೧ ; ಧೃತರಾಷ್ಟ್ರ-೧ ;
ಒಟ್ಟು ೭೦೦ ಶ್ಲೋಕಗಳು]
ಅರ್ಜುನ ಉವಾಚ ।
ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್
ಪ್ರಸಾದಾನ್ಮಯಾSಚ್ಯುತ ।
ಸ್ಥಿತೋSಸ್ಮಿ ಗತಸಂದೇಹಃ ಕರಿಷ್ಯೇ ವಚನಂ
ತವ ॥೭೩॥
ಅರ್ಜುನ ಉವಾಚ-ಅರ್ಜುನ ಹೇಳಿದನು.
ನಷ್ಟಃ ಮೋಹಃ ಸ್ಮೃತಿ ಲಬ್ದಾ ತ್ವತ್ ಪ್ರಸಾದಾತ್ ಮಯಾ ಅಚ್ಯುತ ।
ಸ್ಥಿತಃ ಅಸ್ಮಿ ಗತಸಂದೇಹಃ ಕರಿಷ್ಯೇ ವಚನಂ
ತವ –ಅಚ್ಯುತ, ಗೊಂದಲ ಕಳೆಯಿತು. ನಿನ್ನ ಹಸಾದದಿಂದ ನನ್ನ ನೆನಪು ಮರುಕಳಿಸಿತು. ಸಂದೇಹವಳಿದು
ಗಟ್ಟಿಯಾಗಿ ನಿಂತಿದ್ದೇನೆ. ನಿನ್ನ ಮಾತಿನಂತೆ ನಡೆಯುತ್ತೇನೆ.
ನನ್ನಲ್ಲಿದ್ದ ತಪ್ಪು ತಿಳುವಳಿಕೆ
ಕಳೆಯಿತು. ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯಲಿಕ್ಕಾಗದ ಸ್ಥಿತಿ ನನ್ನಲ್ಲಿತ್ತು- ಅದು ಹೊರಟು ಹೋಯಿತು. ಬಂಧುಮೋಹದಲ್ಲಿ ಹೊರಟುಹೋಗಿದ್ದ ನನ್ನ ಸ್ಮೃತಿ ಮರಳಿ ಬಂತು. ಅಚ್ಯುತನಾದ ನಿನ್ನ ಅನುಗ್ರಹದಿಂದ
ನನ್ನ ಮರೆವು ಮರೆಯಾಯ್ತು. ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ನಿನ್ನ ಮಾತು ಮನವರಿಕೆಯಾಗಿದೆ. ನಿನ್ನ ಮಾತಿನಂತೆಯೇ ನಡೆಯುತ್ತೇನೆ.
ಇಲ್ಲಿ ನಾವು ಗಮನಿಸಬೇಕಾದ
ಅಂಶವೇನೆಂದರೆ ಅರ್ಜುನ ಕೃಷ್ಣನ ಉಪದೇಶದಿಂದ ‘ನನಗೆ ಜ್ಞಾನ ಬಂತು’ ಎಂದು ಹೇಳದೆ- ಸ್ಮೃತಿ ಬಂತು
ಎಂದಿದ್ದಾನೆ. ಇದರಿಂದ ನಮಗೆ ತಿಳಿವುದೇನೆಂದರೆ- ಅರ್ಜುನ ಆ ಕಾಲದ ಮಹಾಜ್ಞಾನಿ. ಆದರೆ ಯುದ್ಧರಂಗದಲ್ಲಿ ಆತ ತನ್ನೆಲ್ಲ ಸ್ಮೃತಿಯನ್ನು
ಕಳೆದುಕೊಂಡು ಕುಸಿದು ಕುಳಿತ. ಇದೊಂದು ಭಗವಂತನ ಆಟ. ಪ್ರಪಂಚಕ್ಕೆ ಇಂಥಹ ಅಮೂಲ್ಯವಾದ ಕೃತಿಯನ್ನು
ನೀಡುವುದಕ್ಕೋಸ್ಕರ ಕೃಷ್ಣ ಅರ್ಜುನನ್ನು ಈ ರೀತಿ ಮಾಧ್ಯಮವಾಗಿ ಬಳಸಿದ. ಭಗವದ್ಗೀತೆಯಲ್ಲಿ ಏನು
ಸಂದೇಶವಿದೆ ಅದರ ಪ್ರಾಯೋಗಿಕ ವಿವರಣೆ ಮಹಾಭಾರತ. ಅಲ್ಲಿ ಬರುವ ಒಂದೊಂದು ಪಾತ್ರಗಳೂ ಗೀತೆಯ
ಒಂದೊಂದು ಸಂದೇಶವನ್ನು ಪ್ರತಿನಿಧಿಸುತ್ತವೆ. ಮನಃಶಾಸ್ತ್ರೀಯವಾಗಿ ನೋಡಿದಾಗ ಮಹಾಭಾರತ ಐದು ಸಾವಿರ
ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವಲ್ಲ. ಅದು ನಮ್ಮ ಅಂತರಂಗದ, ನಮ್ಮ ಜೀವನದ ಹೋರಾಟ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.
ಸಂಜಯ ಉವಾಚ ।
ಇತ್ಯಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ
।
ಸಂವಾದಮಿಮಮಶ್ರೌಷಮದ್ಭುತಂ ರೋಮಹರ್ಷಣಮ್ ॥೭೪॥
ಸಂಜಯ ಉವಾಚ-ಸಂಜಯ ಹೇಳಿದನು:
ಇತಿ ಅಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ
।
ಸಂವಾದಮ್ ಇಮಮ್ ಅಶ್ರೌಷಮ್ ಅದ್ಭುತಂ ರೋಮಹರ್ಷಣಮ್
– ಹೀಗೆ ಮಹಾತ್ಮರಾದ ವಾಸುದೇವ ಮತ್ತು ಪಾರ್ಥರ ಅಚ್ಚರಿಯ ನವಿರೇಳಿಸುವ ಈ ಮಾತುಕತೆಯನ್ನು ನಾನು
ಕೇಳಿಸಿಕೊಂಡೆ.
ಸಂಜಯ ಕೃಷ್ಣಾರ್ಜುನರ ಈ ಅಪೂರ್ವ
ಸಂವಾದವನ್ನು ಸಾಕ್ಷಾತ್ ನೋಡಿ ವಿಸ್ಮಯಗೊಂಡ. ಆತ ಹೇಳುತ್ತಾನೆ: ನನ್ನ ಕಣ್ಮುಂದೆ ನಡೆದ ವಾಸುದೇವ ಮತ್ತು ಅರ್ಜುನರ ಈ ಸಂವಾದವನ್ನು ನಾನು
ಕೇಳಿಸಿಕೊಂಡೆ. ಇದು ನನ್ನ ಭಾಗ್ಯ. ನನಗಾದ ಅನುಭವವನ್ನು ಶಬ್ದಗಳಿಂದ ವರ್ಣಿಸಲಾಗದು. ಇದೊಂದು
ಅದ್ಭುತ. ಈ ಸಂವಾದವನ್ನು ಕೇಳಿ ಆನಂದದಿಂದ ಮೈನವಿರೆದ್ದಿದೆ. ಆನಂದದ ಪುಳಕ ನನ್ನನ್ನು
ಆವರಿಸಿಕೊಂಡು ಬಿಟ್ಟಿದೆ.
ವ್ಯಾಸಪ್ರಸಾದಾಚ್ಛ್ರುತವಾನೇತದ್ ಗುಹ್ಯಮಹಂ
ಪರಮ್ ।
ಯೋಗಂ ಯೋಗೇಶ್ವರಾತ್ ಕೃಷ್ಣಾತ್ ಸಾಕ್ಷಾತ್
ಕಥಯತಃ ಸ್ವಯಮ್ ॥೭೫॥
ವ್ಯಾಸಪ್ರಸಾದಾತ್ ಶ್ರುತವಾನ್ ಏತತ್ ಗುಹ್ಯಮ್ ಅಹಂ ಪರಮ್ ।
ಯೋಗಂ ಯೋಗೇಶ್ವರಾತ್ ಕೃಷ್ಣಾತ್ ಸಾಕ್ಷಾತ್
ಕಥಯತಃ ಸ್ವಯಮ್ – ವ್ಯಾಸರ ಕರುಣೆಯಿಂದ ನಾನು ಯೋಗದ ದಾರಿಯನ್ನು, ಈ ಹಿರಿಯ ಗುಟ್ಟನ್ನು ಎಲ್ಲಾ ಯೋಗಮಾರ್ಗಗಳ ಒಡೆಯನಾದ ಕೃಷ್ಣನ ಬಾಯಿಯಿಂದಲೇ ನೇರವಾಗಿ ಕೇಳಿಸಿಕೊಂಡೆ.
ಪರಮ ಪೂಜ್ಯ ಗುರುಗಳಾದ ವ್ಯಾಸರ
ಅನುಗ್ರಹದಿಂದ ನಾನು ಈ ಅದ್ಭುತ ಭಾಗ್ಯವನ್ನು ಪಡೆದೆ. ಬೇಕು ಎಂದರೆ ಸಿಗದ ಪ್ರಪಂಚದ ಅತ್ಯಂತ
ರಹಸ್ಯಗಳ ರಹಸ್ಯ ನನಗೂ ತಿಳಿಯಿತು. ಇಡೀ ಜಗತ್ತಿನ ಎಲ್ಲ ಶಕ್ತಿಗಳ ಒಂದು ಸಮಷ್ಟಿರೂಪವಾದ
ಯೋಗೇಶ್ವರ ಕೃಷ್ಣನಿಂದ ಅಧ್ಯಾತ್ಮದ ಸಾರ ಸರ್ವಸ್ವವನ್ನು ಸಾಕ್ಷಾತ್ ಕೇಳಿಸಿಕೊಂಡೆ.
ರಾಜನ್ ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮಿಮಮದ್ಭುತಮ್ ।
ಕೇಶವಾರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ
ಮುಹುರ್ಮುಹುಃ ॥೭೬॥
ರಾಜನ್ ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮ್
ಇಮಮ್ ಅದ್ಭುತಮ್ ।
ಕೇಶವ ಅರ್ಜುನಯೋಃ ಪುಣ್ಯಂ ಹೃಷ್ಯಾಮಿ
ಚ ಮುಹುಃಮಹುಃ – ದೊರೆಯೆ, ಕೇಶವಾರ್ಜುನರ ಅಚ್ಚರಿಯ ಈ ಮೆಚ್ಚಿನ ಮಾತುಕತೆಯನ್ನು ನೆನೆಯುತ್ತ
ನೆನೆಯುತ್ತ ಮತ್ತೆ ಮತ್ತೆ ನವಿರುಗೊಳ್ಳುತ್ತಿದ್ದೇನೆ.
ಓ ದೊರೆಯೆ(ಧೃತರಾಷ್ಟ್ರನನ್ನು
ಕುರಿತು), ಈ ಅದ್ಭುತ ಸಂವಾದವನ್ನು ನೆನೆ-ನೆನೆದು ವಿಸ್ಮಯ, ಆನಂದ, ರೋಮಾಂಚನ, ಆಶ್ಚರ್ಯ. ಇಂಥದ್ದು
ಹಿಂದೆ ಆಗಿಲ್ಲ ಮುಂದೆ ಆಗಲಿಕ್ಕಿಲ್ಲ. ಇಡೀ ವಿಶ್ವವನ್ನು ನಿಯಂತ್ರಿಸುವ, ಸಮಸ್ತ
ದೇವಾಧಿದೇವತೆಗಳನ್ನು ನಿಯಂತ್ರಿಸುವ ಶಕ್ತಿ- ಇಲ್ಲಿ ಅರ್ಜುನನ ಸಾರಥಿ ರೂಪದಲ್ಲಿ ನಿಂತು ನುಡಿದ ಈ
ಅದ್ಭುತ ಸಂದೇಶವನ್ನು- ಹಿಂದೆ ಯಾರು ಕೇಳಿದ್ದೂ ಇಲ್ಲ, ಅನುಭವಿಸಿದ್ದೂ ಇಲ್ಲ. ಇದನ್ನು
ನೆನಪಿಸಿಕೊಂಡು ಮತ್ತೆ ಮತ್ತೆ ಪುಳಕಗೊಳ್ಳುತ್ತಿದ್ದೇನೆ.
ತಚ್ಚ ಸಂಸ್ಮೃತ್ಯ ಸಂಸ್ಮೃತ್ಯ ರೂಪಮತ್ಯದ್ಭುತಂ
ಹರೇಃ ।
ವಿಸ್ಮಯೋ ಮೇ ಮಹಾನ್ ರಾಜನ್ ಹೃಷ್ಯಾಮಿ
ಚ ಪುನಃಪುನಃ ॥೭೭॥
ತತ್ ಚ ಸಂಸ್ಮೃತ್ಯ ಸಂಸ್ಮೃತ್ಯ ರೂಪಮ್ ಅತ್ಯದ್ಭುತಂ ಹರೇಃ ।
ವಿಸ್ಮಯಃ ಮೇ ಮಹಾನ್ ರಾಜನ್ ಹೃಷ್ಯಾಮಿ ಚ ಪುನಃಪುನಃ -- ದೊರೆಯೆ, ಹರಿಯ ಅಚ್ಚರಿಯ ರೂಪವನ್ನು
ನೆನೆಯುತ್ತ ನನಗೆ ಬೆರಗೋ ಬೆರಗು. ಮೈಯಲ್ಲ ಮರಳಿಮರಳಿ ನವಿರು.
ಕೃಷ್ಣನ ವಿಶ್ವರೂಪ ದರ್ಶನ ಪಡೆದಿದ್ದ
ಸಂಜಯ ಮುಂದುವರಿದು ಹೇಳುತ್ತಾನೆ: ಓ ದೊರೆಯೆ, ನಮ್ಮ ಸಮಸ್ತ ಸಮಸ್ಯೆಗಳನ್ನು ಪರಿಹರಿಸುವ(ಹರಿಃ) ಆ ಪರಮಾತ್ಮ, ಇಂದು ನಮಗೆ ಸಮಸ್ತ ಸಮಸ್ಯೆಯನ್ನೂ
ಪರಿಹರಿಸುವ ಈ ಅದ್ಭುತ ಸಂದೇಶವನ್ನು ಕೊಟ್ಟ. ನಾನು ಕೃಷ್ಣನನ್ನು ಕಂಡೆ; ಅವನ ಅದ್ಭುತ
ವಿಶ್ವರೂಪವನ್ನು ಕಂಡೆ; ಅವನ ಮಾತನ್ನು ಕೇಳಿದೆ; ಇದು ನನ್ನ ಮಾತಿಗೆ ಮೀರಿದ ಸಂತೋಷ. ನಾನು ಖುಷಿಯಿಂದ ತುಂಬಿಹೋಗಿದ್ದೇನೆ.
ಹೀಗೆ ತನ್ನ ಆನಂದವನ್ನು ಹಂಚಿಕೊಂಡ
ಸಂಜಯ ಮುಂದೆ ತನಗನಿಸಿದ ಫಲಶ್ರುತಿಯನ್ನು ಹೇಳುತ್ತಾನೆ.
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ
ಧನುರ್ಧರಃ ।
ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ ॥೭೮॥
ಯತ್ರ ಯೋಗೇಶ್ವರಃ ಕೃಷ್ಣಃ ಯತ್ರ ಪಾರ್ಥಃ ಪಾರ್ಥೋ ಧನುರ್ಧರಃ ।
ತತ್ರ ಶ್ರೀಃ ವಿಜಯಃ ಭೂತಿಃ ಧ್ರುವಾ ನೀತಿಃ
ಮತಿಃ ಮಮ –ಯೋಗಮಾರ್ಗಗಳೊಡೆಯನಾದ ಕೃಷ್ಣನಿರುವಡೆ, ಬಿಲ್ಗಾರನಾದ
ಪಾರ್ಥನಿರುವೆಡೆ(ನರ-ನಾರಾಯಣನಿರುವೆಡೆ) ಸಿರಿ, ಗೆಲುವು, ಉನ್ನತಿಕೆ ಮತ್ತು ಸ್ಥಿರವಾದ ನೀತಿ
ನೆಲೆಸಿರುತ್ತದೆ ಎಂದು ನನ್ನ ನಿರ್ಧಾರ.
ಎಲ್ಲಿಎಲ್ಲಿ ನರ-ನಾರಾಯಣರಿರುತ್ತಾರೋ
ಅಲ್ಲಿ ಎಲ್ಲವೂ ಇದೆ. ಎಲ್ಲ ಬಗೆಯ ಸಂಪತ್ತು, ಗೆಲುವು, ಅಂತರಂಗ ಸಾಧನೆ, ಬಾಹ್ಯ ಉನ್ನತಿ ಎಲ್ಲವೂ
ನೆಲೆಸಿರುತ್ತದೆ. ಇದು ನನ್ನ ನಿರ್ಧಾರ ಎನ್ನುತ್ತಾನೆ ಸಂಜಯ.
ಭಗವದ್ಗೀತೆ ನಮಗೆ ಪ್ರಾಪಂಚಿಕ ಸುಖದ
ಸೆಳೆತವನ್ನು ಮೀರಿ ಎತ್ತರಕ್ಕೇರಲು ಬೇಕಾದ ಅಧ್ಯಾತ್ಮ ಜ್ಞಾನ ಮತ್ತು ವೇದ ವಿದ್ಯೆಯನ್ನು ಕೊಡುವ
ಅಪೂರ್ವ ಗ್ರಂಥ. ಗೀತೆ ಮನಸ್ಸಿನಲ್ಲಿ ನಿಂತರೆ ಸುಳ್ಳು, ಮೋಸ- ಸಾಧ್ಯವಿಲ್ಲ. ಎಲ್ಲಿ ಗೀತೆಯ ಅಧ್ಯಯನವಿದೆ ಅಲ್ಲಿ ಪ್ರಾಮಾಣಿಕತೆ ಇದೆ. ಗೀತೆಯನ್ನು ಓದಿ, ಗೀತೆಯನ್ನು ಮುಟ್ಟಿ ನಾವು ಸುಳ್ಳು
ಹೇಳಿದರೆ, ಅಪ್ರಾಮಾಣಿಕವಾಗಿ ಬದುಕಿದರೆ ಅದು ಆ
ಗೀತಾಚಾರ್ಯನಿಗೆ ನಾವು ಮಾಡುವ ದ್ರೋಹ.
ಎಲ್ಲಿ ಗೀತೆಯ ಜ್ಞಾನವಿದೆ ಅಲ್ಲಿ ಗೆಲುವಿದೆ, ಉನ್ನತಿ ಇದೆ, ನೀತಿ ಇದೆ,ಸಮಷ್ಟಿಯೂ ಇದೆ- ಎನ್ನುವಲ್ಲಿಗೆ ಭಗವದ್ಗೀತೆಯ ಅತ್ಯದ್ಭುತ ಸಂದೇಶ ಕೊನೆಗೊಂಡಿತು.
ಎಲ್ಲಿ ಗೀತೆಯ ಜ್ಞಾನವಿದೆ ಅಲ್ಲಿ ಗೆಲುವಿದೆ, ಉನ್ನತಿ ಇದೆ, ನೀತಿ ಇದೆ,ಸಮಷ್ಟಿಯೂ ಇದೆ- ಎನ್ನುವಲ್ಲಿಗೆ ಭಗವದ್ಗೀತೆಯ ಅತ್ಯದ್ಭುತ ಸಂದೇಶ ಕೊನೆಗೊಂಡಿತು.
ಇತಿ ಅಷ್ಟಾದಶೋಧ್ಯಾಯಃ
ಹದಿನೆಂಟನೆಯ ಅಧ್ಯಾಯ ಮುಗಿಯಿತು
|| ಶ್ರೀ ಕೃಷ್ಣಾರ್ಪಣಮಸ್ತು ||
*******
Labels:
Bannanje Govindacharya,
Bhagavad Gita in Kannada,
Bhagavad GitA phalashruti,
Chapter-18,
ಉಪಸಂಹಾರ,
ಭಗವದ್ಗೀತಾ ಫಲಶ್ರುತಿ,
ಭಗವದ್ಗೀತೆ
Saturday, January 7, 2012
Bhagavad Gita Kannada Chapter-18 Shloka 58-66
ಮಚ್ಚಿತ್ತಃ ಸರ್ವದುರ್ಗಾಣಿ ಮತ್ ಪ್ರಸಾದಾತ್
ತರಿಷ್ಯಸಿ ।
ಅಥ ಚೇತ್ ತ್ವಮಹಂಕಾರಾನ್ನ ಶ್ರೋಷ್ಯಸಿ
ವಿವಿನಂಕ್ಷ್ಯಸಿ ॥೫೮॥
ಮಚ್ಚಿತ್ತಃ ಸರ್ವದುರ್ಗಾಣಿ ಮತ್ ಪ್ರಸಾದಾತ್
ತರಿಷ್ಯಸಿ ।
ಅಥ ಚೇತ್ ತ್ವಮಹಂಕಾರಾನ್ನ ಶ್ರೋಷ್ಯಸಿ
ವಿವಿನಂಕ್ಷ್ಯಸಿ –
ನನ್ನಲ್ಲೆ ಒಳಬಗೆಯಿಟ್ಟಾಗ, ನನ್ನ ಹಸಾದದಿಂದ ಎಲ್ಲ ಕೋಟಲೆಗಳನ್ನು ದಾಟುವೆ. ಒಂದೊಮ್ಮೆ
ಹೆಮ್ಮೆಯಿಂದ ಕಿವಿಗೊಡದಿದ್ದರೆ ಕೆಟ್ಟುಹೋಗುವೆ.
ಮನಸ್ಸನ್ನು ಭಗವಂತನತ್ತ ಹರಿಸಿ,
ಬುದ್ಧಿಯಲ್ಲಿ ಭಗವಂತನನ್ನು ನೆಟ್ಟು, ಚಿತ್ತದಲ್ಲಿ ಭಗವಂತನನ್ನು ಸ್ಥಿರಗೊಳಿಸಿ,
ಸುಪ್ತಪ್ರಜ್ಞೆಯಲ್ಲಿ ಕೂಡ ಭಗವಂತನ ಸ್ಮರಣೆ ಶಾಶ್ವತಗೊಳಿಸಿದಾಗ, ನಮ್ಮ ಎಲ್ಲ ಕ್ರಿಯೆಗಳೂ ಭಗವಂತನ
ಪೂಜೆಯಾಗುತ್ತದೆ. ಇದರಿಂದ ನಮ್ಮ ಎಲ್ಲ ವ್ಯವಹಾರದಲ್ಲೂ ಪೂರ್ಣ ಪ್ರಾಮಾಣಿಕತೆ
ವ್ಯಕ್ತವಾಗುತ್ತದೆ ಹಾಗು ಜೀವನದಲ್ಲಿ ಬರುವ ದುರ್ಗಮ ಸ್ಥಿತಿ, ಕಷ್ಟ, ಕಾರ್ಪಣ್ಯಗಳನ್ನು
ಎದುರಿಸುವ ಕ್ಷಮತೆ ಬರುತ್ತದೆ. ಹೀಗೆ ಜ್ಞಾನಿ ತನ್ನ ಜೀವನ ಪಯಣದಲ್ಲಿ ಅನಿವಾರ್ಯವಾಗಿ ಬರುವ ಎಲ್ಲ
ಆಪತ್ತುಗಳನ್ನು ನಿರಾಯಾಸವಾಗಿ ದಾಟಿ ಮುನ್ನೆಡೆಯುತ್ತಾನೆ. ಈ ರೀತಿ ಬದುಕಿದಾಗ ಭಗವಂತ ನಮ್ಮ ಜೀವನದಲ್ಲಿ
ಬರುವ ಸರ್ವ ಅನಿಷ್ಟಗಳಿಂದಲೂ ನಮ್ಮನ್ನು ರಕ್ಷಿಸುತ್ತಾನೆ. ಆತನ ರಕ್ಷಾಕವಚ ಸದಾ ನಮ್ಮನ್ನು
ಸುತ್ತುವರಿದಿರುತ್ತದೆ. ಇದರಿಂದ ಜೀವನದಲ್ಲಿ ಬರುವ ಎಲ್ಲ ಆಪತ್ತುಗಳಿಂದ ನಾವು ಪಾರಾಗುತ್ತೇವೆ. ಇದನ್ನು
ಬಿಟ್ಟು ವೇದಾಂತ ಕೇವಲ ಬೊಗಳೆ, ಅದರಲ್ಲಿ ನನಗೆ ನಂಬಿಕೆ ಇಲ್ಲ ಎಂದು ಅಹಂಕಾರ ಪಟ್ಟರೆ, ನಮ್ಮ
ಕೈಯಾರೆ ನಾವು ನಮ್ಮ ಭವಿಷ್ಯವನ್ನು ಹಾಳು ಮಾಡಿಕೊಂಡು ವಿನಾಶ ಹೊಂದುತ್ತೇವೆ.
ಯದಹಂಕಾರಮಾಶ್ರಿತ್ಯ ನ ಯೋತ್ಸ್ಯ ಇತಿ
ಮನ್ಯಸೇ ।
ಮಿಥ್ಯೈಷ ವ್ಯವಸಾಯಸ್ತೇ ಪ್ರಕೃತಿಸ್ತ್ವಾಂ
ನಿಯೋಕ್ಷ್ಯತಿ ॥೫೯॥
ಯತ್ ಅಹಂಕಾರಮ್ ಆಶ್ರಿತ್ಯ ನ ಯೋತ್ಸ್ಯೇ
ಇತಿ ಮನ್ಯಸೇ ।
ಮಿಥ್ಯಾ ಏಷಃ ವ್ಯವಸಾಯಃ ತೇ ಪ್ರಕೃತಿಃ
ತ್ವಾಮ್ ನಿಯೋಕ್ಷ್ಯತಿ – ಅಹಂಕಾರದಿಂದ ಬೀಗಿ ‘ನಾನು ಹೋರಾಡುವುದಿಲ್ಲ’ ಎಂದು ತಿಳಿದಿರುವೆಯಾದರೆ
ನಿನ್ನ ಈ ನಿರ್ಧಾರ ಹುಸಿಯಾದದ್ದು. ನಿನ್ನ ಸ್ವಭಾವ [ಭಗವಂತನ ಇಚ್ಛೆ] ನಿನ್ನನ್ನು
ಹೊರಾಡಿಸುತ್ತದೆ.
‘ನಾನು ಯುದ್ಧ ಮಾಡುವುದಿಲ್ಲ’ ಎಂದು
ಅರ್ಜುನ ರಥದಲ್ಲಿ ಕುಸಿದು ಕುಳಿತಿದ್ದನ್ನು ನಾವು ಅಧ್ಯಾಯ ಒಂದರಲ್ಲಿ ನೋಡಿದ್ದೇವೆ. ಇಲ್ಲಿ
ಕೃಷ್ಣ ಹೇಳುತ್ತಾನೆ “ ‘ನಾನು ಯುದ್ಧ ಮಾಡುವುದಿಲ್ಲ’ ಎನ್ನುವುದು ನಿನ್ನ ಅಹಂಕಾರಭರಿತ ಭ್ರಮೆ.
ನೀನು ಏನನ್ನು ಮಾಡುವುದಿಲ್ಲ ಎಂದು ಹೇಳಿರುವೆಯೋ
ಅದನ್ನೇ ಮಾಡುತ್ತೀಯ” ಎಂದು. ಏಕೆಂದರೆ ನಮ್ಮನ್ನು ನಿಯಂತ್ರಣ ಮಾಡುವ ಶಕ್ತಿ ಪ್ರಕೃತಿ. ಇಲ್ಲಿ
ನಮ್ಮ ಭೌತಿಕ ತೀರ್ಮಾನ ವ್ಯರ್ಥ. ನಮ್ಮ ಜೀವಸ್ವಭಾವ, ಅದಕ್ಕನುಗುಣವಾಗಿ ಅನುವಂಶೀಯ ಪ್ರಭಾವ,
ಪರಿಸರದ ಪ್ರಭಾವ ಮತ್ತು ಈ ಎಲ್ಲವನ್ನು ನಿಯಂತ್ರಿಸುವ ಭಗವಂತನ ಇಚ್ಛೆಯಂತೆ ಕ್ರಿಯೆ ನಡೆದೇ
ನಡೆಯುತ್ತದೆ.
ಸ್ವಭಾವಜೇನ ಕೌಂತೇಯ ನಿಬದ್ಧಃ ಸ್ವೇನ
ಕರ್ಮಣಾ ।
ಕರ್ತುಂ ನೇಚ್ಛಸಿ ಯನ್ಮೋಹಾತ್ ಕರಿಷ್ಯಸ್ಯವಶೋSಪಿ
ತತ್ ॥೬೦॥
ಸ್ವಭಾವಜೇನ ಕೌಂತೇಯ ನಿಬದ್ಧಃ ಸ್ವೇನ
ಕರ್ಮಣಾ ।
ಕರ್ತುಂ ನ ಇಚ್ಛಸಿ ಯತ್ ಮೋಹಾತ್ ಕರಿಷ್ಯಸಿ
ಅವಶಃ ಅಪಿ ತತ್ – ಕೌಂತೇಯ, ಸ್ವಭಾವ ಸಹಜವಾದ ನಿನ್ನ ಕರ್ಮದಿಂದ ನೀನು ಸುತ್ತುವರಿದಿರುವೆ. ಅಜ್ಞಾನದಿಂದಾಗಿ ಯಾವುದನ್ನು ಮಾಡಬಾರದು
ಎಂದೆಣಿಸಿರುವೆ ಅದನ್ನು ನೀನು ನಿನಗರಿವಿಲ್ಲದಂತೆಯೆ[ಭಗವದಿಚ್ಛೆಗೆ ವಶನಾಗಿ] ಮಾಡುವೆ.
ನಾವು ಹೀಗೆ ಮಾಡಬೇಕು, ಹಾಗೆ
ಮಾಡಬೇಕು ಎಂದು ಅಹಂಕಾರದಿಂದ ಯೋಚಿಸುವುದು ನಮ್ಮ ಅಜ್ಞಾನದಿಂದ. ಈ ರೀತಿ ಯಾವ ಯೋಚನೆ ಮಾಡಿದರೂ
ಕೊನೆಗೆ ಮಾಡುವುದು ನಮ್ಮ ಜೀವ ಸ್ವಭಾವಕ್ಕೆ ಅನುಗುಣವಾಗಿಯೇ. ಇದರ ನಿಯಂತ್ರಣ ನಮ್ಮಲ್ಲಿಲ್ಲ. ಅದು ನಮಗರಿವಿಲ್ಲದಂತೆ, ಭಗವಂತನ ಇಚ್ಚೆಯಂತೆ ನಡೆಯುತ್ತದೆ.
ಈಶ್ವರಃ ಸರ್ವಭೂತಾನಾಂ ಹೃದ್ದೇಶೇSರ್ಜುನ
ತಿಷ್ಠತಿ ।
ಭ್ರಾಮಯನ್ ಸರ್ವಭೂತಾನಿ ಯಂತ್ರಾರೂಢಾನಿ
ಮಾಯಯಾ ॥೬೧॥
ಈಶ್ವರಃ ಸರ್ವಭೂತಾನಾಂ ಹೃತ್ ದೇಶೇ ಅರ್ಜುನ
ತಿಷ್ಠತಿ ।
ಭ್ರಾಮಯನ್ ಸರ್ವಭೂತಾನಿ ಯಂತ್ರ ಆರೂಢಾನಿ
ಮಾಯಯಾ – ಅರ್ಜುನ, ಎಲ್ಲ ಜೀವಿಗಳ ಎದೆಯ ತಾಣದಲ್ಲಿ ಸರ್ವಶಕ್ತನಾದ ಭಗವಂತ ನೆಲೆಸಿದ್ದಾನೆ –
ಸುತ್ತುವ ಜಗದ್ ಯಂತ್ರದಲ್ಲಿ ಕೂತ ಎಲ್ಲ ಜೀವಿಗಳನ್ನೂ ಪ್ರಕೃತಿಯ ಮಾಯೆಯಿಂದ [ತನ್ನ ಇಚ್ಛೆಯಿಂದ]ತಿರುಗಾಡಿಸುತ್ತ.
ಎಲ್ಲ ಜೀವರ ಹೃತ್ಕಮಲದ ಮಧ್ಯದಲ್ಲಿ
ಸರ್ವಶಕ್ತನಾದ ಭಗವಂತ ನೆಲೆಸಿದ್ದಾನೆ. ಈ ಪಿಂಡಾಂಡ ಮತ್ತು ಬ್ರಹ್ಮಾಂಡ ಎನ್ನುವ ಅದ್ಭುತ ಯಂತ್ರ
ನಿರಂತರ ಚಲಿಸುವಂತೆ ಮಾಡುವವ ಆ ಭಗವಂತ. ಆತನೇ ಬ್ರಹ್ಮಾಂಡ ಮತ್ತು ಪಿಂಡಾಂಡದ ಒಡೆಯ. ಎಲ್ಲರೊಳಗಿದ್ದು ಅವರಿಗೆ ಅನುಭವವನ್ನು ಕೊಟ್ಟು
ನಿಯಂತ್ರಿಸುವ ಮಹಾ ಚೈತನ್ಯ ಆ ಭಗವಂತ. ಸರ್ವ
ಕರ್ಮವೂ ಭಗವಂತನ ಮಹಿಮೆಯಿಂದ ಅವನ ಇಚ್ಛೆಯಂತೆ ನಡೆಯುತ್ತದೆ.
ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ ।
ತತ್ ಪ್ರಸಾದಾತ್ ಪರಾಂ ಶಾಂತಿ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ॥೬೨॥
ತಮ್ ಏವ ಶರಣಂ ಗಚ್ಛ ಸರ್ವಭಾವೇನ ಭಾರತ ।
ತತ್ ಪ್ರಸಾದಾತ್ ಪರಾಂ ಶಾಂತಿ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ – ಭಾರತ, ಎಲ್ಲ
ಬಗೆಯಿಂದಲೂ ಅವನಿಗೇ ಶರಣಾಗು. ಅವನ ಕರುಣೆಯಿಂದ ಹಿರಿದಾದ ಸುಖವನ್ನು, ಅಳಿವಿರದ ತಾಣವನ್ನು
ಪಡೆಯುವೆ.
ಸರ್ವಸಮರ್ಥನಾದ ಭಗವಂತನಿಗೆ ನಾವು
ನಮ್ಮನ್ನು ಅರ್ಪಿಸಿಕೊಳ್ಳಬೇಕು. ನಮ್ಮ ಜೀವನದ ಎಲ್ಲ ಹಂತಗಳಲ್ಲೂ ಭಗವಂತನಲ್ಲಿ ಶರಣಾಗತಿ ಇರಬೇಕು.[ಕೇವಲ
ಕಷ್ಟ ಕಾಲದಲ್ಲಿ ಮಾತ್ರವಲ್ಲ]. ನಮ್ಮಲ್ಲಿ ಸತ್ವಗುಣವನ್ನು ಬೆಳಸಿಕೊಂಡು, ಕತ್ತಲೆಯನ್ನು
ದೂರಮಾಡಿ, ಭಗವಂತನಲ್ಲಿ ನಮ್ಮನ್ನು ನಾವು ಅರ್ಪಿಸಿಕೊಂಡಾಗ-ನಮಗೆ ನಿಜವಾದ ಪೂರ್ಣ ಸತ್ವದ
ದರ್ಶನವಾಗುತ್ತದೆ. ಆ ಭಗವಂತ ಕಣ್ಣು ತೆರೆದು ಅನುಗ್ರಹ ಮಾಡಿದನೆಂದರೆ ನಂತರ ತಿಳಿವು ಬರಲು ಇತರ
ಯಾವ ಸಾಧನವೂ ಬೇಡ. ಸತ್ಯ ತನ್ನಷ್ಟಕ್ಕೆ ತಾನು ತೆರೆದುಕೊಳ್ಳುತ್ತದೆ ಮತ್ತು ಸರ್ವೋತ್ಕೃಷ್ಟ ಆನಂದ
ನಮ್ಮದಾಗುತ್ತದೆ. ಇದರಿಂದ ಜ್ಞಾನಾನಂದದ ತುತ್ತ ತುದಿಯಾದ ಮೋಕ್ಷವನ್ನು ಸೇರಬಹುದು.
ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್
ಗುಹ್ಯತರಂ ಮಯಾ ।
ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು
॥೬೩॥
ಇತಿ ತೇ ಜ್ಞಾನಮ್ ಆಖ್ಯಾತಂ ಗುಹ್ಯಾತ್
ಗುಹ್ಯತರಂ ಮಯಾ ।
ವಿಮೃಶ್ಯ ಏತತ್ ಅಶೇಷೇಣ ಯಥಾ ಇಚ್ಛಸಿ
ತಥಾ ಕುರು -- ತುಂಬ ಜತನದಿಂದ ಬಚ್ಚಿಡಬೇಕಾದ ಈ
ತಿಳಿವನ್ನು ನಾನು ನಿನ್ನೆದುರು ಬಿಚ್ಚಿಟ್ಟೆ. ಇದನ್ನೆಲ್ಲ ಪರಾಂಬರಿಸಿ ಮತ್ತೆ ನಿನಗೆ ತೋಚಿದಂತೆ
ಮಾಡು.
ಕೃಷ್ಣ ಹದಿನೈದನೇ ಅಧ್ಯಾಯದಲ್ಲಿ
ಜ್ಞಾನದ ಉಪಸಂಹಾರ ಮಾಡಿದ್ದ. ಇಲ್ಲಿ ಉಪಾಸನೆಯ ಎಲ್ಲ ಅರಿವನ್ನು ಕೊಟ್ಟ ನಂತರ ಅದರ ಉಪಸಂಹಾರ ಮಾಡುತ್ತ ಹೇಳುತ್ತಾನೆ: “ಇದು
ಪ್ರಪಂಚದಲ್ಲಿನ ರಹಸ್ಯಗಳಲ್ಲಿ ರಹಸ್ಯ. ಅಧ್ಯಾತ್ಮದ ಅಂತರಂಗದ ರಹಸ್ಯವನ್ನು ನಿನಗೆ ಹೇಳಿದೆ. ನಾನು
ಹೇಳಿರುವ ವಿಚಾರವನ್ನು ಸಮಗ್ರವಾಗಿ ಪರಾಂಬರಿಸಿ ನಿನಗೆ ಮನವರಿಕೆಯಾದಂತೆ ಮಾಡು” ಎಂದು. ಇಲ್ಲಿ 'ನಿನ್ನ
ಜೀವಸ್ವರೂಪ, ಆತ್ಮಸಾಕ್ಷಿ ಏನು ಹೇಳುತ್ತದೊ ಹಾಗೆ ಮಾಡು' ಎಂದು ಅರ್ಜುನನಿಗೆ ಹೇಳುವ ಮೂಲಕ-ನಾವು ಇನ್ನೊಬ್ಬರ ಮೇಲೆ ನಮ್ಮ
ಅಭಿಪ್ರಾಯ ಹೇರಬಾರದು ಎನ್ನುವ ಸಮಾಜನೀತಿಯನ್ನು ಕೃಷ್ಣ ಎತ್ತಿ ತೋರಿಸಿದ್ದಾನೆ.
ಸರ್ವಗುಹ್ಯತಮಂ ಭೂಯಃ ಶೃಣು ಮೇ ಪರಮಂ
ವಚಃ ।
ಇಷ್ಟೋSಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ
ತೇ ಹಿತಮ್ ॥೬೪॥
ಸರ್ವ ಗುಹ್ಯ ತಮಮ್ ಭೂಯಃ ಶೃಣು ಮೇ ಪರಮಂ ವಚಃ ।
ಇಷ್ಟಃ ಅಸಿ ಮೇ ದೃಢಮ್ ಇತಿ ತತಃ ವಕ್ಷ್ಯಾಮಿ ತೇ ಹಿತಮ್ – ಎಲ್ಲಕ್ಕಿಂತ ಹೆಚ್ಚು
ಬಚ್ಚಿಡಬೇಕಾದ ನನ್ನೀ ಹಿರಿಯ ಮಾತನ್ನು ಇನ್ನೊಮ್ಮೆ ಆಲಿಸು. ನೀನು ನನಗೆ ತುಂಬ ಮೆಚ್ಚಿನವನೆಂದು,
ಅದಕ್ಕಾಗಿ ನಿನಗೆ ಹಿತವಾದ ಹೇಳುತ್ತಿದ್ದೇನೆ:
ಹಿಂದೆ ಹೇಳಿದ ಸಾಧನೆಯ ಸಾರವನ್ನು,
ನಾವು ತಿಳಿದುಕೊಳ್ಳಬೇಕಾದ ವಿಷಯಗಳಲ್ಲಿ ಅತ್ಯಂತ ರಹಸ್ಯವಾದ ಸಾಧನೆಯ ಗುಟ್ಟನ್ನು ಸಾತ್ವಿಕನಾದ
ನಿನಗೆ ಇನ್ನೊಮ್ಮೆ ಹೇಳುತ್ತಿದ್ದೇನೆ; ನನ್ನ ಭಕ್ತನಾದ ನೀನು ಜ್ಞಾನಿ. ಜ್ಞಾನಿಗಳು ನನಗೆ ಅಚ್ಚುಮೆಚ್ಚು, ಅದಕ್ಕಾಗಿ ಅದನ್ನು ಮತ್ತೊಮ್ಮೆ ಹೇಳುತ್ತಿದ್ದೇನೆ- ಕೇಳು:
ಮನ್ಮನಾ ಭವ ಮದ್ ಭಕ್ತೋ ಮದ್ ಯಾಜೀ ಮಾಂ
ನಮಸ್ಕುರು ।
ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ
ಪ್ರಿಯೋSಸಿ ಮೇ ॥೬೫॥
ಮತ್ ಮನಾಃ ಭವ ಮತ್ ಭಕ್ತಃ ಮತ್
ಯಾಜೀ ಮಾಂ ನಮಸ್ಕುರು ।
ಮಾಮ್ ಏವ ಏಷ್ಯಸಿ ಸತ್ಯಂ ತೇ ಪ್ರತಿಜಾನೇ
ಪ್ರಿಯಃ ಅಸಿ ಮೇ -- ನನ್ನಲ್ಲೆ ಬಗೆಯಿಡು. ನನ್ನಲ್ಲೆ ಭಕ್ತಿಯಿಡು. ನನ್ನನ್ನೆ ಪೂಜಿಸು. ನನಗೇ ಪೊಡಮಡು. ಆಗ
ನನ್ನನ್ನೆ ಸೇರುವೆ. ನೀನು ನನಗೆ ಮೆಚ್ಚಿನವ. ನಿನ್ನಾಣೆಗೂ ಇದು ನಿಜ.
ಸಾಧನೆಯ ಸಾರವನ್ನು ವಿವರಿಸುತ್ತ ಕೃಷ್ಣ
ಇಲ್ಲಿ ಹಿಂದೆ ವಿವರಿಸಿದ ವಿಷಯವನ್ನು, ಸಾಧನೆಯ ಸಾರಸಂಗ್ರಹವನ್ನು ಮತ್ತೆ ಉಪಸಂಹಾರ ರೂಪದಲ್ಲಿ ಹೇಳುತ್ತಾನೆ. ಕೃಷ್ಣ ಹೇಳುತ್ತಾನೆ: “ನನ್ನಲ್ಲೇ ಮನಸ್ಸನ್ನಿಡು” ಎಂದು. ಸಾಧನೆಯಲ್ಲಿ ನಮ್ಮ ಅನನ್ಯಚಿಂತನೆ ಕೇವಲ ಭಗವಂತನ ಕುರಿತಾದ ಏಕಭಕ್ತಿಯಾಗಿರಬೇಕು. ಜ್ಞಾನಪೂರ್ವಕವಾಗಿ
ಭಗವಂತ ಸರ್ವೋತ್ತಮ ಎಂದು ಭಗವಂತನನ್ನು ನೆನೆಯಬೇಕು. ಭಗವಂತನಲ್ಲಿ “ಶುದ್ಧವಾದ ಪ್ರೀತಿ ಇರಲಿ”. ನಾವು ಮಾಡುವ ಎಲ್ಲ ಕರ್ಮಗಳೂ ಪ್ರೀತಿಪೂರ್ವಕ ಭಗವದರ್ಪಣೆಯಾಗಿರಬೇಕು. “ಸರ್ವದೇವ ನಮಸ್ಕಾರಃ
ಕೇಶವಂ ಪ್ರತಿಗಚ್ಛತಿ” ಎನ್ನುವ ಸತ್ಯವನ್ನು ತಿಳಿದು ಸರ್ವಾಂತರ್ಯಾಮಿ ಭಗವಂತನನ್ನು ಪೂಜಿಸು. ಈ ರೀತಿ ಎಲ್ಲ ಉಪಾಸನೆಯಲ್ಲಿ ಭಗವಂತನನ್ನು ಕಂಡರೆ "ನನ್ನನ್ನೇ ಬಂದು ಸೇರುತ್ತೀಯ ಇದು ನಿನ್ನಾಣೆಗೂ ಸತ್ಯ" ಎನ್ನುತ್ತಾನೆ ಕೃಷ್ಣ.
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ
ವ್ರಜ ।
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ
ಮಾ ಶುಚಃ ॥೬೬॥
ಸರ್ವಧರ್ಮಾನ್ ಪರಿತ್ಯಜ್ಯ ಮಾಮ್
ಏಕಮ್ ಶರಣಂ ವ್ರಜ ।
ಅಹಂ ತ್ವಾಮ್ ಸರ್ವ ಪಾಪೇಭ್ಯಃ ಮೋಕ್ಷಯಿಷ್ಯಾಮಿ ಮಾ ಶುಚಃ -- ಎಲ್ಲ ಬಿನುಗು ಧರ್ಮಗಳನ್ನೂ ಫಲದ ಹಂಬಲಗಳನ್ನೂ ತೊರೆದು ನನಗೊಬ್ಬನಿಗೇ
ಶರಣಾಗು. ನಾನು ನಿನ್ನನ್ನು ಎಲ್ಲ ಪಾಪಗಳಿಂದಲೂ ಪಾರುಗಾಣಿಸುತ್ತೇನೆ. ಕೊರಗದಿರು.
‘ಸರ್ವಧರ್ಮಾನ್ ಪರಿತ್ಯಜ್ಯ’
ಎಂದರೆ ಎಲ್ಲ ಪುಣ್ಯಕರ್ಮಗಳನ್ನು ಮಾಡಿ ಅದರಿಂದ ಫಲಾಪೇಕ್ಷೆಯನ್ನು ನಿರೀಕ್ಷಿಸದೇ ಇರುವುದು. ನಾವು ಮಾಡುವ ಧರ್ಮಕಾರ್ಯ ವ್ಯಾಪಾರವಾಗಬಾರದು. ಇದಕ್ಕೆ ಒಂದು ಉತ್ತಮ ದೃಷ್ಟಾಂತ ಧರ್ಮರಾಯ ಮತ್ತು ದ್ರೌಪದಿ ನಡುವಿನ ಸಂಭಾಷಣೆ. ದ್ರೌಪದಿ ಹೇಳುತ್ತಾಳೆ: “ಧರ್ಮೋ ರಕ್ಷತಿ ರಕ್ಷಿತಃ - ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ
ಎನ್ನುವುದನ್ನು ಕೇಳಿದ್ದೇನೆ, ಅದು ನಿನ್ನನ್ನು ಏಕೆ
ರಕ್ಷಿಸಲಿಲ್ಲ? ನಾವೇಕೆ ರಾಜ್ಯ ಕಳೆದುಕೊಂಡು ಕಾಡು ಸೇರಬೇಕಾಯ್ತು? ” ಎಂದು. ಅದಕ್ಕೆ ಧರ್ಮರಾಯ ಕೊಡುವ
ಉತ್ತರ ರೋಚಕ. ಆತ ಹೇಳುತ್ತಾನೆ: “ನಾನು ಧರ್ಮದ ವ್ಯಾಪಾರಿ ಅಲ್ಲ; ನಾನು ಧರ್ಮ ಆಚರಣೆ ಮಾಡುವುದು ನನ್ನ ಆತ್ಮಸಂತೋಷಕ್ಕಾಗಿ ಹೊರತು ಯಾವುದೋ ಫಲಾಪೇಕ್ಷೆಯಿಂದಲ್ಲ”
ಎಂದು. ಹೀಗೆ ಯಾವುದೇ ಧರ್ಮವಿದ್ದರೂ ಅದು ಕೇವಲ ಭಗವಂತನ
ಆರಾಧನೆ. ಅಲ್ಲಿ ಫಲಾಪೇಕ್ಷೆ ಇಲ್ಲ. ಈ ರೀತಿ ಬದುಕಿದಾಗ ಭಗವಂತ ನಮ್ಮ ಎಲ್ಲ ಜನ್ಮಗಳ ಪಾಪಗಳನ್ನು ಸುಟ್ಟುಬಿಡುತ್ತಾನೆ. ಭಗವಂತನಲ್ಲಿ ಪೂರ್ಣ ಶರಣಾದಾಗ ಭಗವಂತನ ಕೈಯಲ್ಲಿ ನಾವು ಸುರಕ್ಷಿತವಾಗಿ ಧೈರ್ಯದಿಂದಿರಬಹುದು. ಇದು ಗೀತೆಯ ಉಪದೇಶದಲ್ಲಿ ಕೃಷ್ಣ ನಮಗೆ ಕೊಟ್ಟ ಕೊನೆಯ
ಭರವಸೆ. ಇಲ್ಲಿಗೆ ಗೀತೆಯಲ್ಲಿ ಭಗವಂತನ ಉಪದೇಶದ ಭಾಗ ಮುಗಿಯಿತು. ಈ ಅಧ್ಯಾಯದ ಮುಂದಿನ ಶ್ಲೋಕಗಳಲ್ಲಿ ಗೀತೆಯ ಫಲಶ್ರುತಿಯನ್ನು ಕಾಣಬಹುದು.
Friday, January 6, 2012
Bhagavad GitA Kannada Chapter-18 Shloka 54-57
ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ
ನ ಕಾಂಕ್ಷತಿ ।
ಸಮಃ ಸರ್ವೇಷು ಭೂತೇಷು ಮದ್ ಭಕ್ತಿಂ ಲಭತೇ
ಪರಾಮ್ ॥೫೪॥
ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ
ನ ಕಾಂಕ್ಷತಿ ।
ಸಮಃ ಸರ್ವೇಷು ಭೂತೇಷು ಮತ್ ಭಕ್ತಿಂ ಲಭತೇ
ಪರಾಮ್ – ಭಗವಂತನಲ್ಲೆ ಬಗೆ ನೆಟ್ಟವನು [ಶ್ರೀತತ್ವದಲ್ಲಿ ನೆಲೆಗೊಂಡವನು] ಬಗೆ ತಿಳಿಗೊಂಡು ಯಾವುದಕ್ಕೂ
ದುಃಖಿಸುವುದಿಲ್ಲ; ಯಾವುದನ್ನೂ ಬಯಸುವುದಿಲ್ಲ. ಎಲ್ಲ ಜೀವಿಗಳಲ್ಲು ಸಮಭಾವ ಹೊಂದಿ ನನ್ನಲ್ಲಿ ಪರಾಭಕ್ತಿಯನ್ನು
ಪಡೆಯುತ್ತಾನೆ.
ಭಗವಂತನಲ್ಲಿ ಬಗೆ ನೆಟ್ಟವನಿಗೆ ಯಾವದೇ
ಬೇಕು-ಬೇಡಗಳಿರುವುದಿಲ್ಲ. ಆತನ ಮನಸ್ಸು ಸ್ವಚ್ಛವಾಗಿರುತ್ತದೆ. ಈ ಸ್ಥಿತಿಯಲ್ಲಿ ಸರ್ವೋತ್ಕೃಷ್ಟ
ಭಕ್ತಿ ಬೆಳೆಯುತ್ತದೆ. ಗುಣಪೂರ್ಣನಾದ ಭಗವಂತನನ್ನು ಆತ ಪ್ರಪಂಚದ ಪ್ರತೀ ವಸ್ತುವಿನಲ್ಲೂ ಕಾಣುತ್ತಾನೆ. ಇದರಿಂದಾಗಿ ಆತನಲ್ಲಿ ಯಾವುದೇ ತಾರತಮ್ಯ, ದ್ವೇಷ ಇರುವುದಿಲ್ಲ.
ಭಕ್ತ್ಯಾ ಮಾಮಭಿಜಾನಾತಿ ಯಾವಾನ್ ಯಶ್ಚಾಸ್ಮಿ
ತತ್ತ್ವತಃ ।
ತತೋ ಮಾಂ ತತ್ತ್ವತೋ ಜ್ಞಾತ್ವಾ ವಿಶತೇ
ತದನಂತರಮ್ ॥೫೫॥
ಭಕ್ತ್ಯಾ ಮಾಮ್ ಅಭಿಜಾನಾತಿ ಯಾವಾನ್ ಯಃ
ಚ ಅಸ್ಮಿ ತತ್ತ್ವತಃ ।
ತತಃ ಮಾಮ್ ತತ್ತ್ವತಃ
ಜ್ಞಾತ್ವಾ ವಿಶತೇ ತತ್ ಅನಂತರಮ್ –ಭಕ್ತಿಯಿಂದ ‘ನಾನು’
ಏನು ಎಂತು ಎನ್ನುವುದನ್ನು ಸರಿಯಾಗಿ ಅರಿಯಬಲ್ಲವನಾಗುತ್ತಾನೆ. ಅಂಥ ಪರಾಭಕ್ತಿಯಿಂದ ನನ್ನನ್ನು ಸರಿಯಾಗಿ ಅರಿತ ಅನಂತರ ನನ್ನನ್ನೆ ಸೇರುತ್ತಾನೆ.
ಇಂತಹ ಭಕ್ತಿಯ ಉತ್ಕೃಷ್ಟ ಸ್ಥಿತಿಯಲ್ಲಿರುವವನಿಗೆ
ಯಾವುದೇ ತಪ್ಪು ತಿಳುವಳಿಕೆ ಇರುವುದಿಲ್ಲ. ಲಕ್ಷ್ಮಿಯ ಸನ್ನಿಧಾನದಿಂದ ಭಗವಂತ ಅಂದರೇನು, ಅವನ ಮಹಿಮೆ
ಏನು, ಅವನ ಶಕ್ತಿ ಏನು, ಅವನ ಅನಂತ ಗುಣಗಳ ಹರವು ಏನು- ಎನ್ನುವುದು ಯಥಾವತ್ತಾಗಿ ಜೀವಯೋಗ್ಯತೆಯ ಪೂರ್ಣ
ಪ್ರಮಾಣದಲ್ಲಿ ಅರಿಯುತ್ತಾನೆ. ”ಈ ರೀತಿ ತತ್ತ್ವತಃ ಭಗವಂತನನ್ನು ಯಥಾವತ್ತಾಗಿ ತಿಳಿದ ಮೇಲೆ ಅತ್ಯಂತ ಪರಿಶುದ್ಧ ಜ್ಞಾನ ಮತ್ತು ಭಕ್ತಿಯಿಂದ ನನ್ನನ್ನು
ಬಂದು ಸೇರುತ್ತಾನೆ” ಎನ್ನುತ್ತಾನೆ ಕೃಷ್ಣ.
ಸರ್ವಕರ್ಮಾಣ್ಯಪಿ ಸದಾ ಕುರ್ವಾಣೋ ಮದ್
ವ್ಯಪಾಶ್ರಯಃ ।
ಮತ್ ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಯಮ್ ॥೫೬॥
ಸರ್ವ ಕರ್ಮಾಣಿ ಅಪಿ ಸದಾ ಕುರ್ವಾಣಃ ಮತ್ ವ್ಯಪಾಶ್ರಯಃ ।
ಮತ್ ಪ್ರಸಾದಾತ್ ಅವಾಪ್ನೋತಿ ಶಾಶ್ವತಮ್
ಪದಮ್ ಅವ್ಯಯಮ್ – 'ನಾನೆ' ಸರ್ವಸ್ವ ಎಂದು ತಿಳಿದು ಎಲ್ಲ
ಕರ್ಮಗಳನ್ನು ನಿರಂತರ ಮಾಡುತ್ತಿರುವವನು ನನ್ನ ಹಸಾದದಿಂದ, ಅಳಿವಿರದ ಬದಲಾಗದ ತಾಣವನ್ನು ಸೇರುತ್ತಾನೆ.
ಭಗವಂತನೇ ಸರ್ವಸ್ವ ಎಂದು ತಿಳಿದು; ಯಾವುದೇ ಕರ್ಮ ಮಾಡಿದರೂ
ಆ ಕರ್ಮದ ಗುರಿ ಭಗವಂತನನ್ನಾಗಿರಿಸಿಕೊಂಡು; ಪೂರ್ಣ ಭಗವದರ್ಪಣಾ ಬುದ್ಧಿಯಿಂದ ಕರ್ಮ ಮಾಡುವವರು,
ಭಗವಂತನ ಅನುಗ್ರಹದಿಂದ ಎಂದೂ ಏರುಪೇರಿಲ್ಲದ ಮೋಕ್ಷವನ್ನು ಸೇರುತ್ತಾರೆ.
ಚೇತಸಾ ಸರ್ವಕರ್ಮಾಣಿ ಮಯಿ ಸಂನ್ಯಸ್ಯ
ಮತ್ ಪರಃ ।
ಬುದ್ಧಿಯೋಗಮುಪಾಶ್ರಿತ್ಯ ಮಚ್ಚಿತ್ತಃ
ಸತತಂ ಭವ ॥೫೭॥
ಚೇತಸಾ ಸರ್ವಕರ್ಮಾಣಿ ಮಯಿ ಸಂನ್ಯಸ್ಯ
ಮತ್ ಪರಃ ।
ಬುದ್ಧಿಯೋಗಮ್ ಉಪಾಶ್ರಿತ್ಯ ಮತ್ ಚಿತ್ತಃ
ಸತತಮ್ ಭವ – ಒಳಬಗೆಯಿಂದ ಎಲ್ಲ ಕರ್ಮಗಳನ್ನು ನನಗೊಪ್ಪಿಸಿ,
ನನ್ನನ್ನೆ ಪರತತ್ವವೆಂದು ತಿಳಿದು, ಜ್ಞಾನಯೋಗದ ದಾರಿ ಹಿಡಿದು ನಿರಂತರ ನನ್ನಲ್ಲೆ ಒಳಬಗೆಯನ್ನಿಡು.
ಇಲ್ಲಿ ಕೃಷ್ಣ ಹೇಳುತ್ತಾನೆ: “ನನ್ನನ್ನು
ತಿಳಿದು, ಎಲ್ಲ ಕರ್ಮವನ್ನು ನನ್ನಲ್ಲಿ ಅರ್ಪಿಸಿ, ಜ್ಞಾನಯೋಗದಿಂದ ಮನಸ್ಸನ್ನು ನಿರಂತರ ನನ್ನಲ್ಲಿರಿಸು” ಎಂದು . ಇಲ್ಲಿ ನಾವು ಮಾಡುವ ಎಲ್ಲ ಕರ್ಮವನ್ನು ಭಗವತನಿಗೆ ಅರ್ಪಿಸಿ ಮಾಡಬೇಕು ಎನ್ನುವುದು ಬಹಳ ಮುಖ್ಯವಾದ ವಿಷಯ. ಇಂದು ಈ ರೀತಿಯ ಕರ್ಮ ಸಾಧನೆ ಇಲ್ಲವಾಗಿದೆ. ಇದಕ್ಕೆ ಮೂಲ ಕಾರಣ ಅಜ್ಞಾನ. ನಾವು ಪೂಜೆ ಮಾಡುವುದು ಯಾವುದೋ ಫಲದ ಅಪೇಕ್ಷೆಯಿಂದ. ಕೆಲವೊಮ್ಮೆ ಜ್ಯೋತಿಷಿಗಳು
ಯಾವುದೋ ಗ್ರಹ ದೋಷವಿದೆ ಎಂದು ಹೇಳುತ್ತಾರೆ. ಉದಾಹರಣೆಗೆ: ಕುಜದೋಷ. ಸಾಮಾನ್ಯವಾಗಿ ಜ್ಯೋತಿಷಿಗಳು
ಕುಜದೋಷ ಎಂದು ಹೇಳಿದಾಗ ನಮಗೆ ಮೊದಲು ಕಾಣುವುದು ‘ಈ ಗ್ರಹ ನಮಗೆ ತೊಂದರೆ ಕೊಡುತ್ತಿದೆ’ ಎಂದು. ವಸ್ತುತಃ ಕುಜದೋಷ ಎಂದರೆ ಕುಜನ ದೋಷವಲ್ಲ. ಅದು ನಮ್ಮ ದೋಷ. ನಮ್ಮ ಪ್ರಾರಾಬ್ಧಕರ್ಮ. ಅದನ್ನು ಈ ಗ್ರಹ
ಸೂಚಿಸುತ್ತದೆ ಅಷ್ಟೆ. ಅದನ್ನು ನಾವು ತಪ್ಪಾಗಿ ಕುಜನೇ ನನ್ನ ಬೆನ್ನ ಹಿಂದೆ ಬಿದ್ದಿದ್ದಾನೆ ಎಂದು
ತಿಳಿದುಕೊಳ್ಳುತ್ತೇವೆ. ಗ್ರಹಗಳಿರುವುದು ನಮಗೆ ಕಾಟ ಕೊಡಲಿಕ್ಕಾಗಿ ಅಲ್ಲ. ಅವರು ಎಂದೂ ಕಾಟ ಕೊಡುವುದಿಲ್ಲ. ಬದಲಿಗೆ ನಮಗೆ ನಮ್ಮ ಪ್ರರಾಬ್ಧದಿಂದ ಬರತಕ್ಕ ಕಾಟವನ್ನು ಅವರು ಸೂಚಿಸುತ್ತಾರೆ. ನಮಗೆ ಕಷ್ಟಬರುವ ಸಾಧ್ಯತೆಯನ್ನು
ನಮಗೆ ಮುಂದಾಗಿ ತಿಳಿಸಿ, ನಾವು ಆ ಅನಿಷ್ಟವನ್ನು ಎದುರಿಸಲು ಮಾನಸಿಕ ಸಿದ್ಧತೆ ನಡೆಸುವಂತೆ
ಮಾಡುವುದು ಗ್ರಹಗಳ ಕರ್ತವ್ಯ. ಹೀಗೆ ಪ್ರಾರಾಬ್ಧಕರ್ಮ ಇದೆ ಎಂದು ಗೊತ್ತಾದಾಗ, ಆ ಸಮಸ್ಯೆಯನ್ನು ಎದುರಿಸಿ,
ಸಾಧನಾ ಮಾರ್ಗದಲ್ಲಿ ಮುಂದೆ ಸಾಗುವುದಕ್ಕೆ ಭಗವಂತನಲ್ಲಿ ಮೊರೆ ಹೋಗುವುದು ಪ್ರಾಯಶ್ಚಿತ ಪೂಜೆ
ಹೊರತು-ಇದು ಗ್ರಹಗಳಿಗೆ ಕೊಡುವ ಲಂಚವಲ್ಲ. ಉದಾಹರಣೆಗೆ ನವಗ್ರಹ ಪೂಜೆ. ನಮ್ಮ ಪ್ರಾರಾಬ್ಧಕರ್ಮವನ್ನು
ಗ್ರಹಗಳು ಸೂಚಿಸಿರುವುದರಿಂದ, ಆ ಗ್ರಹಗಳ ಅಂತರ್ಯಾಮಿಯಾಗಿರುವ ಭಗವಂತನನ್ನು ಪ್ರಾರ್ಥಿಸುವುದು
ನವಗ್ರಹಪೂಜೆ.
ನಾರಾಯಣನ ಭಕ್ತನನ್ನೂ ಪ್ರಾರಾಬ್ಧಕರ್ಮ ಬಿಡುವುದಿಲ್ಲ. ನಮ್ಮ ಪ್ರಾರಾಬ್ಧಕ್ಕೆ
ತಕ್ಕಂತೆ ನಾವು ನಮ್ಮ ಗ್ರಹಚಾರವನ್ನು ಅನುಭವಿಸಲೇಬೇಕು. ಜ್ಞಾನಿಗಳಿಗೂ ಕೂಡ ಕಷ್ಟ ಬರುತ್ತದೆ. ಆ ದುಃಖವನ್ನು
ಎದುರಿಸುವ ಸಾಮರ್ಥ್ಯ ನಮ್ಮಲ್ಲಿಲ್ಲದಾಗ ಭಗವಂತನನ್ನು ಪ್ರಾರ್ಥಿಸುವುದು ತಪ್ಪಲ್ಲ. ಇಲ್ಲಿ ಒಂದು ಬಹಳ
ಮುಖ್ಯ ವಿಷಯ ಏನೆಂದರೆ ಫಲಾಪೇಕ್ಷೆ ಇಲ್ಲದೆ ಪರಮಾತ್ಮನಲ್ಲಿ ಪ್ರಾರ್ಥನೆ. “ನಾನು ನನ್ನ ಹಿಂದಿನ ಜನ್ಮದಲ್ಲಿ
ಮಾಡಿದ ಕರ್ಮದ ಫಲವಾಗಿ ಇಂದು ಈ ಅನಿಷ್ಟವನ್ನು ಪಡೆದಿದ್ದೇನೆ. ನನ್ನ ಮುಂದಿರುವ ಈ ಗ್ರಹಚಾರವನ್ನು
ನೀನು ಗ್ರಹಗಳ ಅಂತರ್ಯಾಮಿಯಾಗಿ ನಿಂತು ನನಗೆ ತೋರಿಸಿದ್ದೀಯ. ನಿನಗೆ ನನ್ನ ಕೋಟಿ-ಕೋಟಿ ನಮನ. ನನಗರಿವಿಲ್ಲದೆ ನಾನು ಮಾಡಿದ ತಪ್ಪನ್ನು ಮನ್ನಿಸಿ, ನಾನು ಈ ಅನಿಷ್ಟವನ್ನು ಎದುರಿಸಿ ಜ್ಞಾನ
ಮಾರ್ಗದಲ್ಲಿ ಮುನ್ನೆಡೆದು ನಿನ್ನನ್ನು ಸೇರಲು ನನಗೆ ದಾರಿ ತೋರಿಸು; ನನ್ನೊಳಗಿರುವ ನೀನು ನಿನ್ನ ಪೂಜೆಯನ್ನು
ನನ್ನನ್ನು ಮಾಧ್ಯಮವಾಗಿ ಬಳಸಿ ಮಾಡಿಸಿಕೊ; ನಾನು ನಿನ್ನಲ್ಲಿ ಶರಣಾಗಿದ್ದೇನೆ” ಎನ್ನುವ ಅನುಸಂಧಾನ
ಈ ಪೂಜೆಯ ಹಿಂದಿರಬೇಕು. ಹೀಗೆ ಭಗವಂತ
ಸರ್ವಶ್ರೇಷ್ಠ ಎನ್ನುವ ಎಚ್ಚರದಿಂದ, ಎಲ್ಲ ದೇವತೆಗಳ ಆರಾಧನೆ ಮಾಡುವಾಗಲೂ ಸಹ- ಅವರ ಅಂತರ್ಯಾಮಿಯಾಗಿರತಕ್ಕಂತಹ
ಭಗವಂತನನ್ನು ತಿಳಿದು, ಕರ್ಮವನ್ನು ಮಾನಸಿಕವಾಗಿ ಭಗವಂತನಲ್ಲಿ ಅರ್ಪಿಸಬೇಕು. ಇದು ನಿಜವಾಗಿ ಮಾಡಬೇಕಾದ ಕರ್ಮದ ವಿಧಾನ.
ಒಟ್ಟಿನಲ್ಲಿ ಹೇಳಬೇಕೆಂದರೆ: ನಾವು ನಮ್ಮ
ಮನಸ್ಸು ಬೇರೆಕಡೆ ಹೋಗದಂತೆ ತಡೆದು ಅದನ್ನು ಭಗವಂತನಲ್ಲಿ ನೆಲೆಗೊಳಿಸಬೇಕು; ನಾವು ಮಾಡುವ ಎಲ್ಲ ಕರ್ಮಗಳೂ
ಭಗವಂತನ ಪೂಜಾರೂಪವಾಗಿದ್ದು, ಅದನ್ನು ಭಗವಂತ ನಮ್ಮ ಕೈಯಿಂದ ಮಾಡಿಸುತ್ತಿದ್ದಾನೆ ಎನ್ನುವ ಎಚ್ಚರ ನಮ್ಮ
ಮನಸ್ಸಿನಲ್ಲಿ ನೆಲೆಗೊಳ್ಳಬೇಕು. ನಮ್ಮ ಅನುಷ್ಠಾನ, ಅನುಸಂಧಾನ ಆನಂದಮಯವಾಗಿರಬೇಕು. ಅಲ್ಲಿ ಯಾವುದೇ
ಒತ್ತಡ, ಭಯ, ಫಲಾಪೇಕ್ಷೆ ಇರಕೂಡದು.
Thursday, January 5, 2012
Bhagavad GitA Kannada Chapter-18 Shloka 49-53
ಅಸಕ್ತಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತಸ್ಪೃಹಃ ।
ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ
॥೪೯॥
ಅಸಕ್ತಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತಸ್ಪೃಹಃ ।
ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನ ಅಧಿಗಚ್ಛತಿ
–ಎಲ್ಲೂ ಬುದ್ಧಿಯನ್ನು ಅಂಟಿಸಿಕೊಳ್ಳದೆ , ಬಗೆಯನ್ನು ಗೆದ್ದು, ಬಯಕೆ ತೊರೆದವನು ಇಂಥ
‘ಸಂನ್ಯಾಸ’ದಿಂದ ಮೋಕ್ಷಪ್ರದವಾದ ಹಿರಿಯ ಯೋಗ ಸಿದ್ಧಿಯನ್ನು [ಅನಿಷ್ಟ ಕರ್ಮಗಳ
ನಾಶವೆಂಬ ಸಿದ್ಧಿಯನ್ನು] ಪಡೆಯುತ್ತಾನೆ.
ಮೋಕ್ಷಸಾಧನವಾಗಿರತಕ್ಕಂತಹ ಸಿದ್ಧಿಯನ್ನು[ಪಾಪಕರ್ಮಗಳು
ಇಲ್ಲದ ಸ್ಥಿತಿಯನ್ನು] ತಲುಪಲು ಕೇವಲ ಸ್ವಕರ್ಮದಲ್ಲಿ ತೊಡಗಿದರೆ ಸಾಲದು, ಬದಲಿಗಿ ನಾವು ನಮ್ಮ ಮನಸ್ಸನ್ನು
ನಿಯಂತ್ರಿಸಿ, ಯಾವುದೇ ಫಲಾಪೇಕ್ಷೆ ಇಲ್ಲದೆ, ನನ್ನಿಂದಾಯ್ತು
ಎನ್ನುವ ಅಹಂಕಾರವನ್ನು ಬಿಟ್ಟು, ಭಗವದರ್ಪಣಾ ಭಾವದಿಂದ ಕರ್ಮವನ್ನು ಮಾಡಬೇಕು. ಅಹಂಕಾರ ಅಧ್ಯಾತ್ಮದ
ದೊಡ್ಡ ಶತ್ರು. ಇದರ ಎಚ್ಚರ ನಮಗಿರಬೇಕು. ಒಟ್ಟಿನಲ್ಲಿ ಹೇಳಬೇಕೆಂದರೆ ಸರ್ವತ್ರ ‘ನನ್ನಿಂದಾಯಿತು’
ಎನ್ನುವ ಅಹಂಕಾರವನ್ನು ಬಿಟ್ಟು, ಮನಸ್ಸನ್ನು ಗೆದ್ದು, ಬುದ್ಧಿಯಿಂದ ಫಲಕಾಮನೆಯನ್ನು ತೊಡೆದುಹಾಕಿ,
ಕಾಮನೆಗಳ ನ್ಯಾಸ ಮಾಡಿ, ಎಲ್ಲವನ್ನು ಭಗವಂತನಲ್ಲಿ ಅರ್ಪಿಸಿ ಸ್ವಕರ್ಮ ಮಾಡಿದರೆ- ಮೋಕ್ಷವನ್ನು ಸೇರಲು ಬೇಕಾದ ಸಿದ್ಧಿ ಪ್ರಾಪ್ತವಾಗುತ್ತದೆ.
ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ ತಥಾSSಪ್ನೋತಿ
ನಿಬೋಧ ಮೇ ।
ಸಮಾಸೇನೈವ ಕೌಂತೇಯ ನಿಷ್ಠಾ ಜ್ಞಾನಸ್ಯ
ಯಾ ಪರಾ ॥೫೦॥
ಸಿದ್ಧಿಂ ಪ್ರಾಪ್ತಃ ಯಥಾ ಬ್ರಹ್ಮ ತಥಾ ಆಪ್ನೋತಿ
ನಿಬೋಧ ಮೇ ।
ಸಮಾಸೇನ ಏವ ಕೌಂತೇಯ ನಿಷ್ಠಾ ಜ್ಞಾನಸ್ಯ
ಯಾ ಪರಾ – ಕೌಂತೇಯ, ಯಾವ ಬಗೆಯ ಸಿದ್ಧಿ ಪಡೆದವನು ಬ್ರಹ್ಮತತ್ವವನ್ನು[ಶ್ರೀತತ್ವವನ್ನು]ಸೇರುತ್ತಾನೆ ಆ ಬಗೆಯನ್ನು ಕೇಳು. ಈ ಸಿದ್ಧಿ ತಿಳಿವಿನ ಕೊನೆಯ ಮಜಲು.
ಯಾವ ಪಾತಕದಿಂದಲೂ ಕಲುಷಿತವಾಗದ
ಜೀವನದ ನಡೆ(ನೈಷ್ಕರ್ಮ್ಯಸಿದ್ಧಿ) ರೂಪಿತವಾದಾಗ ನಮ್ಮ ಮನಸ್ಸಿನಲ್ಲಿ ಭಗವಂತ ಬಂದು ನೆಲೆಸುತ್ತಾನೆ. ಇದರಿಂದ ತಾಯಿ ಶ್ರಿಲಕ್ಷ್ಮಿಯನ್ನು
ಸೇರಿ ಕೊನೆಗೆ ಭಗವಂತನನ್ನು ಸೇರಲು ಸಾಧ್ಯ. ಯಾವ ರೀತಿ ಬ್ರಹ್ಮತತ್ವವನ್ನು ಸೇರುವುದು
ಎನ್ನುವುದನ್ನು ಮುಂದೆ ಕೃಷ್ಣ ಅಡಕವಾಗಿ ಹೇಳುತ್ತಾನೆ.
ನೈಷ್ಕರ್ಮ್ಯಸಿದ್ಧಿ ಎನ್ನುವುದು ಒಬ್ಬ ಮನುಷ್ಯನ ಜ್ಞಾನಸಾಧನೆಯ ಕೊನೇಯ ಮಜಲು. ಈ ಹಂತವನ್ನು ತಲುಪಬೇಕಾದರೆ ನಾವು ಅಧ್ಯಾತ್ಮದಲ್ಲಿ ಕುಂತಿಯಂತೆ
ಛಲವುಳ್ಳ-ಕೌಂತೇಯರಾಗಬೇಕು.
ಬುದ್ಧ್ಯಾ ವಿಶುದ್ಧಯಾ ಯುಕ್ತೋ ಧೃತ್ಯಾತ್ಮಾನಂ
ನಿಯಮ್ಯ ಚ ।
ಶಬ್ದಾದೀನ್ ನ್ವಿಷಯಾಂಸ್ತ್ಯಕ್ತ್ವಾ ರಾಗದ್ವೇಷೌ
ವ್ಯುದಸ್ಯ ಚ ॥೫೧॥
ಬುದ್ಧ್ಯಾ ವಿಶುದ್ಧಯಾ ಯುಕ್ತಃ ಧೃತ್ಯ ಆತ್ಮಾನಂ
ನಿಯಮ್ಯ ಚ ।
ಶಬ್ದ ಆದೀನ್ ವಿಷಯಾನ್ ತ್ಯಕ್ತ್ವಾ ರಾಗದ್ವೇಷೌ
ವ್ಯುದಸ್ಯ ಚ -- ತಿಳಿಯಾದ ಬುದ್ಧಿಯಿರಬೇಕು. ದಿಟ್ಟತನದಿಂದ ಬಗೆಯನ್ನು ಬಿಗಿಹಿಡಿಯಬೇಕು. ಶಬ್ದ
ಮುಂತಾದ ವಿಷಯಲಾಲಸೆಯನ್ನು ತೊರೆಯಬೇಕು. ಪ್ರೀತಿ-ಹಗೆತನಗಳನ್ನು ದೂರವಿರಿಸಬೇಕು.
ಅಧ್ಯಾತ್ಮ ಸಾಧನೆಯಲ್ಲಿ ನಮ್ಮ ಮನಸ್ಸು ಯಾವತ್ತೂ ಕೂಡ ಕೆಟ್ಟದ್ದನ್ನು
ಯೋಚಿಸಬಾರದು. ಶುದ್ಧವಾದ ಬುದ್ಧಿ ನಮ್ಮದಾಗಿರಬೇಕು. ಮನಸ್ಸನ್ನು ಬಹಳ ಧೈರ್ಯದಿಂದ ನಿಯಂತ್ರಿಸಿ,
ಅಸಾಧಾರಣ ಸಾಹಸದಿಂದ ಎಲ್ಲ ಕೆಟ್ಟ ವಿಚಾರವನ್ನು ಮನಸ್ಸಿನಿಂದ ಹೊಡೆದೋಡಿಸಬೇಕು. ಇಂದ್ರಿಯಗಳು ಮನಸ್ಸನ್ನು ಕದಡುವ ಸಾಧನಗಳು. ಆದ್ದರಿಂದ ಕೇಳುವ, ನೋಡುವ, ಮುಟ್ಟುವ, ಮೂಸುವ ಮತ್ತು ತಿನ್ನುವ ಚಪಲವನ್ನು ಮೊದಲು ಬಿಡಬೇಕು. ಮಗುವಿನಂತೆ
ರಾಗ-ದ್ವೇಷವಿಲ್ಲದೆ ನಿರ್ಮಲ ಮನಸ್ಸಿನಿಂದಿರಬೇಕು.
ವಿವಿಕ್ತಸೇವೀ ಲಘ್ವಾಶೀ ಯತವಾಕ್ ಕಾಯಮಾನಸಃ
।
ಧ್ಯಾನಯೋಗಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ ॥೫೨॥
ವಿವಿಕ್ತಸೇವೀ ಲಘ್ವ ಆಶೀ ಯತ ವಾಕ್ ಕಾಯ ಮಾನಸಃ
।
ಧ್ಯಾನ ಯೋಗ ಪರಃ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ ---- ಏಕಾಂತದಲ್ಲಿ ನೆಲೆಸಬೇಕು. ಮಿತವಾಗಿ ಉಣ್ಣಬೇಕು. ಮಾತು-ಮೈ-ಮನಗಳಲ್ಲಿ ಹಿಡಿತವಿರಬೇಕು. ಧ್ಯಾನಯೋಗದಲ್ಲಿದ್ದು ಅನುದಿನವೂ ವೈರಾಗ್ಯ ತಳೆಯಬೇಕು.
ಹಾಳು ಹರಟೆ ನಡೆಯುವ ಜನಸಂದಣಿಯಲ್ಲಿ ಬೆರೆಯದೆ, ಆದಷ್ಟು ಏಕಾಂತದಲ್ಲಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅಧ್ಯಾತ್ಮ ಸಾಧನೆಯಲ್ಲಿ ಆದಷ್ಟು ಪವಿತ್ರವಾದ
ಸ್ಥಳವನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡಬೇಕು. ಅತಿಯಾಗಿ ತಿಂದಾಗ ಮನಸ್ಸು ಕೆಲಸ ಮಾಡುವುದಿಲ್ಲ. ಅದಕ್ಕಾಗಿ ನಿಯತವಾದ ಸಮಯದಲ್ಲಿ ನಿಯತ ಆಹಾರವನ್ನು ಸೇವನೆ ಮಾಡಬೇಕು. ಮಾತಿನ ಮೇಲೆ ನಿಯಂತ್ರಣ,
ದೇಹದ ಚಟುವಟಿಕೆಯ ಮೇಲೆ ನಿಯಂತ್ರಣ, ಮನಸ್ಸಿನ ಚಿಂತನೆಯಲ್ಲಿ ನಿಯಂತ್ರಣವಿದ್ದು ಧ್ಯಾನ ಮಾಡಬೇಕು. ಜೀವನದಲ್ಲಿ ಎಲ್ಲವನ್ನು ಪ್ರೀತಿಸುತ್ತ
ಯಾವುದನ್ನೂ ಅಂಟಿಸಿಕೊಳ್ಳದೆ ಬದುಕಬೇಕು.
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್
।
ವಿಮುಚ್ಯ ನಿರ್ಮಮಃ ಶಾಂತೋ ಬ್ರಹ್ಮಭೂಯಾಯ ಕಲ್ಪತೇ ॥೫೩॥
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್
।
ವಿಮುಚ್ಯ ನಿರ್ಮಮಃ ಶಾಂತಃ ಬ್ರಹ್ಮಭೂಯಾಯ ಕಲ್ಪತೇ –-ನಾನೆಂಬ ಹಮ್ಮು, ಬಲಾತ್ಕಾರ,
ಸೊಕ್ಕು, ಕಾಮ, ಕೋಪ ಮತ್ತು ಕೈಯೊಡ್ಡುವ ಬುದ್ಧಿ ಇವುಗಳನ್ನು ತೊರೆದು, ಮಮತೆಯಳಿದು ಭಗವಂತನಲ್ಲಿ
ಬಗೆಯಿಡಬೇಕು. ಆಗ ಭಗವಂತನಲ್ಲೆ ಬಗೆ ನೆಲೆಗೊಳ್ಳುತ್ತದೆ.[ಅಂಥವನು ಶ್ರೀತತ್ವವನ್ನು ಸೇರುತ್ತಾನೆ]
ಭಗವಂತನ ಚಿಂತನೆಗೆ ವಿರುದ್ಧವಾಗಿ ‘ನಾನು ಮಾಡಿದೆ’ ಅನ್ನುವ ಅಹಂಕಾರ, ಇನ್ನೊಬ್ಬರ ಮೇಲೆ ತಮ್ಮ ಅಭಿಪ್ರಾಯ ಹೇರುವುದು, ತನ್ನ ಸ್ಥಿತಿಯ ಬಗ್ಗೆ ದರ್ಪ, ಕಾಮ-ಕ್ರೋಧ, ಇನ್ನೊಬ್ಬರ ಮುಂದೆ ಕೈಯೊಡ್ಡುವ ಬುದ್ಧಿ- ಇವೆಲ್ಲವನ್ನು ತೊರೆದು, ನಾನು-ನನ್ನದು ಎನ್ನುವ ಮಮಕಾರವನ್ನು ಬಿಟ್ಟು, ಭಗವಂತನಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದರಿಂದ ಬ್ರಹ್ಮತತ್ವವನ್ನು ಸೇರಬಹುದು. [ಮನಸ್ಸು ಭಗವಂತನಲ್ಲಿ ನೆಲೆಗೊಳ್ಳುತ್ತದೆ; ಚತುರ್ಮುಖನ ಉಪದೇಶ ಪಡೆದು- ತಾಯಿ ಲಕ್ಷ್ಮಿಯನ್ನು ಸೇರುತ್ತಾನೆ].
ಭಗವಂತನ ಚಿಂತನೆಗೆ ವಿರುದ್ಧವಾಗಿ ‘ನಾನು ಮಾಡಿದೆ’ ಅನ್ನುವ ಅಹಂಕಾರ, ಇನ್ನೊಬ್ಬರ ಮೇಲೆ ತಮ್ಮ ಅಭಿಪ್ರಾಯ ಹೇರುವುದು, ತನ್ನ ಸ್ಥಿತಿಯ ಬಗ್ಗೆ ದರ್ಪ, ಕಾಮ-ಕ್ರೋಧ, ಇನ್ನೊಬ್ಬರ ಮುಂದೆ ಕೈಯೊಡ್ಡುವ ಬುದ್ಧಿ- ಇವೆಲ್ಲವನ್ನು ತೊರೆದು, ನಾನು-ನನ್ನದು ಎನ್ನುವ ಮಮಕಾರವನ್ನು ಬಿಟ್ಟು, ಭಗವಂತನಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದರಿಂದ ಬ್ರಹ್ಮತತ್ವವನ್ನು ಸೇರಬಹುದು. [ಮನಸ್ಸು ಭಗವಂತನಲ್ಲಿ ನೆಲೆಗೊಳ್ಳುತ್ತದೆ; ಚತುರ್ಮುಖನ ಉಪದೇಶ ಪಡೆದು- ತಾಯಿ ಲಕ್ಷ್ಮಿಯನ್ನು ಸೇರುತ್ತಾನೆ].
Wednesday, January 4, 2012
Bhagavad Gita Kannada Chapter-18 Shloka 45-48
ವರ್ಣದ ಬಗ್ಗೆ ಕೃಷ್ಣ ಬಹಳ ರೋಚಕವಾದ ವಿವರಣೆಯನ್ನು
ಕೊಟ್ಟ. ಸಮಾಜದಲ್ಲಿ ಮತ್ತು ಕೆಲವು ಪ್ರಾಚೀನ ಗ್ರಂಥಗಳಲ್ಲಿ ವರ್ಣವನ್ನು ಜಾತಿ ಎನ್ನುವ ಶಬ್ದದಿಂದ ಮತ್ತು ಜಾತಿಯನ್ನು
ವರ್ಣ ಎನ್ನುವ ಶಬ್ದದಿಂದ ಬಳಸಿರುವುದನ್ನು ಕಾಣುತ್ತೇವೆ. ಇಂಥಹ ಸಂದರ್ಭದಲ್ಲಿ ನಾವು ಗೊಂದಲ ಮಾಡಿಕೊಳ್ಳದೆ, ಅಲ್ಲಲ್ಲಿ ಯಾವ ಅರ್ಥದಲ್ಲಿ
ಹೇಳಲಾಗಿದೆ ಎನ್ನುವುದನ್ನು ತಿಳಿದು, ಅದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ “ವರ್ಣ ಪದ್ಧತಿಯನ್ನು ನನ್ನ ಆಡಳಿತದಲ್ಲಿ ನಾನು ಹೇಗೆ ಪಾಲಿಸಬೇಕು” ಎಂದು ಪ್ರಶ್ನೆ ಮಾಡಿದ
ಧರ್ಮರಾಯನಿಗೆ ಭೀಷ್ಮಾಚಾರ್ಯರು ಹೇಳುತ್ತಾರೆ: “ವರ್ಣ ವಿಭಾಗವೇ ಇಲ್ಲ,
ಎಲ್ಲರೂ ದೇವರ ಮಕ್ಕಳು, ರಾಜನಾದವನಿಗೆ ವರ್ಣಭೇದ ಮಾಡುವ
ಅಧಿಕಾರವಿಲ್ಲ” ಎಂದು. ಇಲ್ಲಿ ವರ್ಣ ಎನ್ನುವುದು ಜಾತಿ
ಎನ್ನುವ ಅರ್ಥದಲ್ಲಿ ಬಳಕೆಯಾಗಿದೆ.
ಸಾಮಾನ್ಯವಾಗಿ ಸಮಾಜದಲ್ಲಿ ತಂದೆ/ತಾಯಿಯ ಸ್ವಭಾವ ಯಾವುದಿರುತ್ತದೋ ಅದೇ ಸ್ವಭಾವವನ್ನು ಮಕ್ಕಳು ಅನುಸರಿಸುತ್ತಾರೆ. ಉದಾಹರಣೆಗೆ: ಒಬ್ಬ ಬ್ರಾಹ್ಮಣನ ಮಗ, ಅವನಿಗೆ ಬ್ರಾಹ್ಮಣ ಸ್ವಭಾವವನ್ನು ಅನುಸರಿಸುವುದು ಸುಲಭವಾಗುತ್ತದೆ. ಆತ ಅದನ್ನೇ ಅನುಸರಿಸಿಕೊಂಡು ಬೆಳೆಯುತ್ತಾನೆ. ಹೀಗಾದಾಗ ನಿಜವಾದ ವರ್ಣವನ್ನು ಗುರುತಿಸುವುದು ಕಷ್ಟವಾಗುತ್ತದೆ. ಹೀಗೆ ವರ್ಣವನ್ನು ಗುರುತಿಸಲು ಕಷ್ಟವಾದಾಗ ಬಂದ ಪದ್ಧತಿ ಜಾತಿಪದ್ಧತಿ. ಜಾತಿ ಬೇರೆ ವರ್ಣ ಬೇರೆ ಎನ್ನುವುದಕ್ಕೆ
ಉತ್ತಮ ಉದಾಹರಣೆ- ಒಬ್ಬ ಬೆಸ್ತರ ಹುಡುಗಿಯಲ್ಲಿ ಹುಟ್ಟಿದ ವೇದವ್ಯಾಸರು. ಅವರು ಮಹಾಬ್ರಾಹ್ಮಣ ಎನ್ನುವುದನ್ನು ಪ್ರಪಂಚವೇ ಒಪ್ಪಿದೆ.
ಇಂದು ಸಮಾಜದಲ್ಲಿ ಜೀವ ಸ್ವಭಾವವನ್ನು
ಗುರುತಿಸಿ ಅದಕ್ಕನುಗುಣವಾದ ಕರ್ಮವನ್ನು ಮಾಡುವ ಪದ್ಧತಿ ಇಲ್ಲವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ
ತಂದೆ-ತಾಯಿ ತಮ್ಮ ಇಷ್ಟವನ್ನು ತಮ್ಮ ಮಕ್ಕಳ ಮೇಲೆ ಹೇರುತ್ತಿದ್ದಾರೆ. ಇದು ತೀರಾ ಅವೈಜ್ಞಾನಿಕ
ಪದ್ಧತಿ. ಮಕ್ಕಳಲ್ಲಿ ಹುದುಗಿರುವ ನಿಜವಾದ ಪ್ರತಿಭೆಯನ್ನು ಗುರುತಿಸದೆ, ತಾವು ಹೇಳಿದ ವಿಷಯವನ್ನು ಮಕ್ಕಳು
ಕಲಿಯಬೇಕು ಎನ್ನುವುದು ವರ್ಣಪದ್ಧತಿಗೆ ವಿರುದ್ಧವಾದ ಸಂಪ್ರದಾಯ. ಅವರವರ ಜೀವ ಸ್ವಭಾವ ಏನೋ ಅದಕ್ಕನುಗುಣವಾಗಿ
ಅವರು ಕಲಿಯಬೇಕು. ಆಗ ಅವರು ಆ ವಿಷಯದಲ್ಲಿ ಪರಿಣತರಾಗುತ್ತಾರೆ ಮತ್ತು ಸಮಾಜಕ್ಕೆ ಅವರಿಂದ ಉಪಯೋಗವಾಗುತ್ತದೆ.
ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ
ಲಭತೇ ನರಃ ।
ಸ್ವಕರ್ಮನಿರತಃ ಸಿದ್ಧಿಂ ಯಥಾ ವಿಂದತಿ
ತಚ್ಛೃಣು ॥೪೫॥
ಸ್ವೇ ಸ್ವೇ ಕರ್ಮಣಿ ಅಭಿರತಃ ಸಂಸಿದ್ಧಿಂ
ಲಭತೇ ನರಃ ।
ಸ್ವಕರ್ಮನಿರತಃ ಸಿದ್ಧಿಂ ಯಥಾ ವಿಂದತಿ
ತತ್ ಶೃಣು –- ತನ್ನತನ್ನ ಸಹಜ ಕರ್ಮದಲ್ಲಿ ನಿರತನಾದ ಮನುಷ್ಯ ಸಿದ್ಧಿಯನ್ನು ಪಡೆಯುತ್ತಾನೆ. ತನ್ನದಾದ ಕರ್ಮದಲ್ಲಿ ತೊಡಗಿದವನು ಹೇಗೆ ಸಿದ್ಧಿ ಪಡೆಯುತ್ತಾನೆ ಆ ಬಗೆಯನ್ನು ಕೇಳು.
ಅವರವರ ಸ್ವಭಾವಕ್ಕೆ ಅನುಗುಣವಾದ ಕರ್ಮವನ್ನು
ಕೃಷ್ಣ ‘ಸ್ವಕರ್ಮ’ ಎಂದು ಕರೆದಿದ್ದಾನೆ. ‘ನಿನ್ನ
ಕರ್ಮ ನೀನು ಮಾಡು’ ಎಂದರೆ ನಿನ್ನ ಸ್ವಭಾವಕ್ಕೆ ಒಗ್ಗುವ ಕರ್ಮವನ್ನು ನೀನು ಮಾಡು ಎಂದರ್ಥ. ಪ್ರಾಮಾಣಿಕತೆ
ಮತ್ತು ಸ್ವಕರ್ಮನಿಷ್ಠೆಗಿಂತ ದೊಡ್ಡ ಧರ್ಮ ಇನ್ನೊಂದಿಲ್ಲ. ತನ್ನ ಸ್ವಭಾವಕ್ಕೆ ಸಹಜವಾದ ಕರ್ಮವನ್ನು
ಭಗವದರ್ಪಣಾ ಬುದ್ಧಿಯಿಂದ ಮಾಡುತ್ತ ಪ್ರಾಮಾಣಿಕವಾಗಿ ಬದುಕುವುದೇ ಎಲ್ಲಕ್ಕಿಂತ ಶ್ರೇಷ್ಠ ಧರ್ಮ.
ನಮ್ಮಲ್ಲಿ ಕೆಲವರು ಕೇಳಬಹುದು: “ಯಾವ
ಕೆಲಸವಾದರೇನು, ಯಾವುದರಿಂದ ಹೆಚ್ಚು ಹಣ ಸಂಪಾದನೆ ಸಾಧ್ಯವೋ ಆ ಕೆಲಸವನ್ನು ಮಾಡುವುದರಲ್ಲಿ ತಪ್ಪೇನು”
ಎಂದು. ಇಲ್ಲಿ ಕೃಷ್ಣ ಅದು ತಪ್ಪು ಎಂದಿದ್ದಾನೆ. ಯಾವುದೋ ಒಂದು ಕೆಲಸ ಮಾಡುವುದು ಬದುಕಲ್ಲ, ಅದು ಯಾತನೆ. ನಿನ್ನನಿನ್ನ ಸ್ವಭಾವಸಹಜವಾದ ಕರ್ಮದಲ್ಲಿ ನೀನು ಬದುಕಿದರೆ ಅದು ಬದುಕು. ಅದೇ ಮೋಕ್ಷ ಮಾರ್ಗ. ನಿನ್ನ ಸ್ವಭಾವಕ್ಕೆ ತಕ್ಕಂತೆ ನಿನ್ನ ಶಿಕ್ಷಣ; ನಿನ್ನ ಶಿಕ್ಷಣಕ್ಕೆ ತಕ್ಕಂತೆ ನಿನ್ನ ಕರ್ಮ. ಹೀಗೆ ಮಾಡಿದಾಗ ಕರ್ಮದಲ್ಲಿ ಅಭಿರತಿ(ಸಂಪೂರ್ಣ ತೃಪ್ತಿ ಮತ್ತು ಸಂತೋಷ) ಇರುತ್ತದೆ. ಈ ರೀತಿ ಖುಷಿಯಿಂದ ಭಗವದರ್ಪಣೆಯಾಗಿ
ಕರ್ಮ ಮಾಡಿದಾಗ, ಬದುಕಿನ ಕೊನೆಯ ಸಿದ್ಧಿಯಾದ ಮೋಕ್ಷವನ್ನು
ಪಡೆಯಬಹುದು. ಸ್ವಭಾವ ಸಹಜವಾದ ಕರ್ಮದಿಂದ ಹೇಗೆ ಸಿದ್ಧಿಯಾಗುತ್ತದೆ ಎನ್ನುವುದನ್ನು ಕೃಷ್ಣ ಮುಂದಿನ
ಶ್ಲೋಕಗಳಲ್ಲಿ ವಿವರಿಸಿದ್ದಾನೆ.
ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ
ತತಮ್ ।
ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ
ಮಾನವಃ ॥೪೬॥
ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮ್ ಇದಂ
ತತಮ್ ।
ಸ್ವಕರ್ಮಣಾ ತಮ್ ಅಭ್ಯರ್ಚ್ಯ ಸಿದ್ಧಿಂ ವಿಂದತಿ
ಮಾನವಃ -- ಯಾರಿಂದ ಜೀವಿಗಳ
ಚಟುವಟಿಕೆಯೋ, ಯಾರು ಈ ಎಲ್ಲವನ್ನು ತುಂಬಿನಿಂತಿರುವನೋ ಅಂಥ ಭಗವಂತನನ್ನು ಮನುಷ್ಯ ಸ್ವಭಾವಸಹಜವಾದ
ಕರ್ಮದಿಂದ ಆರಾಧಿಸಿ ಸಿದ್ಧಿ ಪಡೆಯುತ್ತಾನೆ.
ನಮ್ಮ ಸ್ವಭಾವ ಸಹಜ ಕರ್ಮವನ್ನು ಭಗವಂತನ
ಅಭ್ಯರ್ಚನೆಯಾಗಿ ಮಾಡಿದಾಗ ಅದು ಅಧ್ಯಾತ್ಮವಾಗುತ್ತದೆ. ಇದಕ್ಕಿಂತ ಮಹತ್ತಾದ ಪೂಜೆ ಇನ್ನೊಂದಿಲ್ಲ. ಇಲ್ಲಿ ಅರ್ಚನೆ ಎಂದರೆ ಪುರೋಹಿತರ ಮುಖೇನ ದೇವಸ್ಥಾನದಲ್ಲಿ
ಮಾಡುವ ಅರ್ಚನೆ ಅಲ್ಲ. ಇದು ಇಂದ್ರಿಯ ನಿಗ್ರಹ, ಶಮಃ, ದಮಃ ಎಲ್ಲವೂ ಸೇರಿ ಸ್ವಯಂ ಮಾಡತಕ್ಕ ಅರ್ಚನೆ. ಆದ್ದರಿಂದ ನಾವು ಮಾಡುವ ಸ್ವಭಾವ ಸಹಜ ಕರ್ಮದಲ್ಲಿ ನಮ್ಮ ಇಂದ್ರಿಯ ನಿಗ್ರಹ ಸೇರಿದೆ, ಭಗವನ್ನಿಷ್ಠೆ
ಸೇರಿದೆ, ಭಗವದರ್ಪಣಾ ಬುದ್ಧಿ ಸೇರಿದೆ. ಇವೆಲ್ಲವೂ ಸೇರಿ ನಾವು ಮಾಡತಕ್ಕ ಪ್ರತಿಯೊಂದು ಸ್ವಕರ್ಮ/ಸಹಜಕರ್ಮ
ಭಗವಂತನ ಪೂಜೆಯಾಗುತ್ತದೆ. ಈ ರೀತಿ ಬದುಕಿದಾಗ ನಮ್ಮ
ಇಡೀ ಬದುಕು ದೇವರ ಪೂಜೆಯಾಗುತ್ತದೆ. ನಮಗೆ ಇಚ್ಛೆ ಮತ್ತು ಪ್ರವೃತ್ತಿಯನ್ನು ಕೊಟ್ಟ ಭಗವಂತನಿಗೆ ನಮ್ಮ ಕರ್ಮವನ್ನು ಅರ್ಪಿಸಿದಾಗ ನಮ್ಮ ಕರ್ಮವೇ ಒಂದು ಅರ್ಚನೆಯಾಗುತ್ತದೆ.
ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್
ಸ್ವನುಷ್ಠಿತಾತ್ ।
ಸ್ವಭಾವನಿಯತಂ ಕರ್ಮ ಕುರ್ವನ್ ನಾSಪ್ನೋತಿ
ಕಿಲ್ಬಿಷಮ್ ॥೪೭॥
ಶ್ರೇಯಾನ್ ಸ್ವಧರ್ಮಃ ವಿಗುಣಃ ಪರಧರ್ಮಾತ್ ಸು ಅನುಷ್ಠಿತಾತ್ ।
ಸ್ವಭಾವ ನಿಯತಂ ಕರ್ಮ ಕುರ್ವನ್ ನ ಆಪ್ನೋತಿ
ಕಿಲ್ಬಿಷಮ್ –- ಚನ್ನಾಗಿ ಆಚರಿಸಿದ ಪರಧರ್ಮಕ್ಕಿಂತ ಆಚರಣೆಯಲ್ಲಿ ಕೊರತೆಯಿದ್ದರೂ ತನ್ನ ಸಹಜಧರ್ಮ
ಮಿಗಿಲು. ತನ್ನ ಸ್ವಭಾವಕ್ಕೆ ತಕ್ಕುದಾದ ಕರ್ಮ ಮಾಡಿದರೆ ಪಾಪ ತಟ್ಟುವುದಿಲ್ಲ.
ನಮ್ಮ ಸ್ವಭಾವಕ್ಕೆ ಸಹಜವಾದ ಸ್ವಧರ್ಮ
ಮಾಡುವುದರಿಂದ, ಆ ಕರ್ಮದಲ್ಲಿ ದೋಷವಿದ್ದರೂ ಕೂಡ ಅದರಿಂದ ಪಾಪ ತಟ್ಟುವುದಿಲ್ಲ. ಇದನ್ನು ಬಿಟ್ಟು ಪರಧರ್ಮ
ಮಾಡುವುದು ಯುಕ್ತವಲ್ಲ. ವೇದವ್ಯಾಸರು ಯುದ್ಧಾನಂತರ ತಾನು ಸಿಂಹಾಸನವೇರಲಾರೆ, ನನಗೇನೂ ಬೇಡ, ನಾನು
ಕಾಡಿಗೆ ಹೋಗುತ್ತೇನೆ ಎಂದು ಕುಳಿತ ಧರ್ಮರಾಯನಿಗೆ- “ನೀನು ನಿನ್ನ ಸಹಜ ಧರ್ಮವನ್ನು ಬಿಟ್ಟು ಕಾಡಿಗೆ
ಹೋಗುವುದು ಎಷ್ಟು ಅಸಂಗತವೋ, ಅಷ್ಟೇ ಅಸಂಗತ ನಾನು ತಪಸ್ಸನ್ನು ಬಿಟ್ಟು ಬಂದು ರಾಜ್ಯಭಾರ ಮಾಡುವುದು”
ಎಂದು ಬುದ್ಧಿವಾದ ಹೇಳುತ್ತಾರೆ. ಇದರಿಂದ ನಾವು ತಿಳಿಯಬೇಕಾದದ್ದು ಏನೆಂದರೆ -ನಾವು ಪರಧರ್ಮ ಮಾಡುವುದಕ್ಕಿಂತ-ದೋಷವಿದ್ದರೂ ಸರಿ, ನಮ್ಮ ಸಹಜ ಕರ್ಮ ಮಾಡುವುದೇ ಅತ್ಯಂತ ಶ್ರೇಷ್ಠ
ಧರ್ಮ
ಸಹಜಂ ಕರ್ಮ ಕೌಂತೇಯ ಸದೋಷಮಪಿ ನ ತ್ಯಜೇತ್
।
ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾऽವೃತಾಃ ॥೪೮॥
ಸಹಜಂ ಕರ್ಮ ಕೌಂತೇಯ ಸದೋಷಮ್ ಅಪಿ ನ ತ್ಯಜೇತ್
।
ಸರ್ವಾರಂಭಾಃ ಹಿ ದೋಷೇಣ ಧೂಮೇನ ಅಗ್ನಿಃ ಇವ ಆವೃತಾಃ –- ಕೌಂತೇಯ, ಸಹಜವಾದ ಕರ್ಮವನ್ನು ದೋಷವಿದ್ದರೂ ಬಿಡಬಾರದು. ಎಲ್ಲ ಕರ್ಮಗಳಲ್ಲು ದೋಷವಿದ್ದೇ ಇದೆ. ಬೆಂಕಿಯಿದ್ದಲ್ಲಿ ಹೊಗೆ ಇರುವಂತೆ.
ನಾವು ನಮ್ಮ ಸ್ವಭಾವಕ್ಕೆ ಮತ್ತು ಪರಿಸ್ಥಿತಿಗೆ
ಸಹಜವಾದ ಕರ್ಮದಲ್ಲಿ ಎಷ್ಟೇ ದೋಷವಿದ್ದರೂ ಸಹ ಆ ಕರ್ಮವನ್ನು
ಬಿಡಬಾರದು. ಇಲ್ಲಿ ಪಾಂಡವರ ಸಹಜ ಧರ್ಮ ಅನ್ಯಾಯದ ವಿರುದ್ಧ ಹೋರಾಡುವುದು. ಹೀಗೆ ಹೋರಾಡುವಾಗ ಸಾವು ನೋವು ಉಂಟಾಗಬಹುದು. ಆದರೆ ಅದು ಪಾಪವಲ್ಲ. ಈ ಪ್ರಪಂಚದಲ್ಲಿ ದೋಷವಿಲ್ಲದ ಒಂದು ಕರ್ಮವಿಲ್ಲ. ಬೆಂಕಿ ಇದ್ದಲ್ಲಿ ಹೊಗೆ ಇದ್ದೇ
ಇರುತ್ತದೆ. ಕರ್ಮದಲ್ಲಿ ಹಿಂಸೆ ಇರಬಹುದು, ಆದರೆ ಅದು ಸಹಜ ಧರ್ಮವಾದಾಗ ಅದನ್ನು ಕೈಬಿಡಲಾಗದು. ಸಹಜ ಧರ್ಮದಲ್ಲಿ ಹಿಂಸೆ ಅನಿವಾರ್ಯವಾದಾಗ ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ನಮ್ಮ ಪಾಲಿಗೆ ಒದಗಿ
ಬರುವ ಕರ್ಮವನ್ನು ಭಗವದರ್ಪಣಾ ಬುದ್ಧಿಯಿಂದ ನಿಷ್ಕಾಮನಾಗಿ ಮಾಡುವುದು ಧರ್ಮ. ಇದರಿಂದ ಪಾಪ ಅಂಟದು.
ಕೇವಲ ಸ್ವಭಾವದಂತೆ ನಡೆದುಕೊಂಡಮಾತ್ರಕ್ಕೆ
ಮುಕ್ತಿ ಸಿಗುವುದಿಲ್ಲ. ಅದರ ಹಿಂದೆ ಕೆಲವು ಸಾಧನೆಗಳು ಬೇಕಾಗುತ್ತದೆ. ಕೆಲವು ಅನುಸಂಧಾನಗಳು ಬೇಕಾಗುತ್ತವೆ. ಅದರ ವಿವರಣೆಯನ್ನು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ವಿವರಿಸಿದ್ದಾನೆ.
Monday, January 2, 2012
Bhagavad Gita Kannada Chapter-18 Shloka 40-44
ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು
ವಾ ಪುನಃ ।
ಸತ್ತ್ವಂ ಪ್ರಕೃತಿಜೈರ್ಮುಕ್ತಂ ಯದೇಭಿಃ
ಸ್ಯಾತ್ ತ್ರಿಭಿರ್ಗುಣೈಃ ॥೪೦॥
ನ ತತ್ ಅಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು
ವಾ ಪುನಃ ।
ಸತ್ತ್ವಂ ಪ್ರಕೃತಿಜೈಃ ಮುಕ್ತಂ ಯತ್
ಏಭಿಃ ಸ್ಯಾತ್ ತ್ರಿಭಿಃ ಗುಣೈಃ –– ಭೂಮಿಯಲ್ಲಾಗಲಿ, ಸ್ವರ್ಗದಲ್ಲಿನ
ದೇವತೆಗಳಲ್ಲಾಗಲಿ, ಪ್ರಕೃತಿಯಿಂದುಟಾದ ಈ ಮೂರು ಗುಣಗಳಿಂದ ಬಿಡುಗಡೆಗೊಂಡ ಜೀವಜಾತವೆಂಬುದಿಲ್ಲ.
ತ್ರೈಗುಣ್ಯದ ಬಗ್ಗೆ ವಿವರವಾದ
ಚಿತ್ರಣವನ್ನು ಕೊಟ್ಟ ನಂತರ ಕೃಷ್ಣ ಜೀವ ಸ್ವಭಾವದ ವಿವರಣೆಯನ್ನು ಕೊಡುತ್ತಾನೆ. ಈ ಭೂಮಿಯಲ್ಲಾಗಲಿ, ಅಥವಾ ಸತ್ಯಲೋಕದ ತನಕ ಯಾವುದೇ
ದೇವತಾ ಲೋಕವಿರಲಿ, ಸಮಸ್ತ ಜೀವಜಾತಗಳು ಈ
ಪ್ರಕೃತಿಯಿಂದ ನಿರ್ಮಿತವಾದ ತ್ರಿಗುಣಗಳ ಅಧೀನ. ಪ್ರತಿಯೊಂದು ಜೀವವೂ ಕೂಡ ಈ ಮೂರು ಸ್ವಭಾವಕ್ಕೆ ಒಳಪಟ್ಟಿದೆ ಮತ್ತು ಪ್ರತಿಯೊಂದು
ಜೀವ ಈ ಮೂರು ಗುಣಗಳ ಕಲಬೆರಕೆ. ನೂರಕ್ಕೆ ನೂರು ಸಾತ್ವಿಕ/ರಾಜಸ/ತಾಮಸ ಯಾರೂ ಇಲ್ಲ. ಇಡೀ ಜಗತ್ತು
ಮೂರರ ಮಿಶ್ರಣ.
ಜೀವ ಸ್ವಭಾವವನ್ನು ನೇರವಾಗಿ ಸಾತ್ವಿಕ-ರಾಜಸ-ತಾಮಸ ಎಂದು ಮೂರು ವಿಭಾಗ ಮಾಡಲು
ಬರುವುದಿಲ್ಲ. ಇದಕ್ಕಾಗಿ ಇದನ್ನು ಚಾತುರ್ವರ್ಣ್ಯವಾಗಿ ಕೃಷ್ಣ ವಿಗಡಿಸಿ ಹೇಳಿದ. ಹಿಂದೆ
ವಿವರಿಸಿದಂತೆ ಚಾತುರ್ವರ್ಣ್ಯ ‘ಜಾತಿವಿಭಾಗ’ ಅಲ್ಲ. ಇದು ವರ್ಣ ವಿಭಾಗ. ಭಗವದ್ಗೀತೆಯಾಗಲಿ ,
ವೇದವಾಗಲಿ ಜಾತಿ ವಿಭಾಗವನ್ನು ಒತ್ತುಕೊಟ್ಟು ಹೇಳುವುದಿಲ್ಲ. ಜಾತಿವಿಭಾಗ ಕೆಲವು ಧರ್ಮ
ಶಾಸ್ತ್ರಗಳಲ್ಲಿ ಬಂದಿದೆ ಹೊರತು ವೇದ ಮತ್ತು ಭಗವದ್ಗೀತೆಯಲ್ಲಿ ಬಂದಿಲ್ಲ. ಜಾತಿ ಅನ್ನುವುದು ಸಮಾಜ ವ್ಯವಸ್ಥೆಗಾಗಿ ಮಾಡಿಕೊಂಡ
ವಿಭಾಗ. ಆದರೆ ವರ್ಣ ಮನಃಶಾಸ್ತ್ರೀಯವಾಗಿ ಜೀವಸ್ವಭಾವವನ್ನು ಅರಿತು ಹೇಳುವಂತಾದ್ದು.
ಸ್ಥೂಲವಾಗಿ ಹೇಳಬೇಕೆಂದರೆ ದೇವತೆಗಳು-ಸಾತ್ವಿಕರು,
ಮಾನವರು-ರಾಜಸರು ಮತ್ತು ದೈತ್ಯರು-ತಾಮಸರು. ಆದರೆ ಈ ವಿಭಾಗ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಈ
ಪ್ರತಿಯೊಂದು ವರ್ಗದಲ್ಲಿ ಮತ್ತೆ ಮೂರು ವಿಭಾಗವಿದೆ. ಉದಾಹರಣೆಗೆ ತಾಮಸ-ಸಾತ್ವಿಕರು. ಮನುಷ್ಯರಲ್ಲಿ ನರಾಧಮರು ತಾಮಸ-ಸಾತ್ವಿಕರು. ದೈತ್ಯ ಪರಿವಾರದವರು ತಾಮಸ-ರಾಜಸರು; ಅವರನ್ನು
ನಿಯಂತ್ರಿಸುವ ಕಾಲನೇಮಿಯಂತಹ ದೈತ್ಯರು ತಾಮಸ-ತಾಮಸರು.
ಮಾನವರಲ್ಲಿ ರಾಜಸ-ತಾಮಸರು ನರಾಧಮರು. ರಾಜಸ-ರಾಜಸರು ಎಂದರೆ ನಿತ್ಯ ಸಂಸಾರಿಗಳು. ಅವರು ಎಂದೂ ತಮಸ್ಸಿಗಾಗಲಿ, ಮೋಕ್ಷಕ್ಕಾಗಲಿ
ಹೋಗುವುದಿಲ್ಲ. ಸದಾ ಈ ಸಂಸಾರ ಚಕ್ರದಲ್ಲಿ ಸುತ್ತುತ್ತಿರುತ್ತಾರೆ. ಇನ್ನು ಮೂರನೆಯವರಾದ
ರಾಜಸ-ಸಾತ್ವಿಕರು ಮೋಕ್ಷ ಯೋಗ್ಯರು. ಚಾತುರ್ವರ್ಣ್ಯ ಎನ್ನುವುದು ಈ ಮೂರನೆ ಗುಂಪಿಗೆ ಮಾತ್ರ ಸೀಮಿತವಾದದ್ದು. ಆದ್ದರಿಂದ ಮೋಕ್ಷ
ಯೋಗ್ಯರಾದ ರಾಜಸ-ಸಾತ್ವಿಕರಲ್ಲಿ ನಾಲ್ಕು ವಿಧ. ಮೋಕ್ಷಯೋಗ್ಯ-ಬ್ರಾಹ್ಮಣ, ಮೋಕ್ಷಯೋಗ್ಯ- ಕ್ಷತ್ರಿಯ,
ಮೋಕ್ಷಯೋಗ್ಯ-ವೈಶ್ಯ, ಮತ್ತು ಮೋಕ್ಷಯೋಗ್ಯ-ಶೂದ್ರ. ಇದು ಜೀವ ಸ್ವಭಾವದ ಮೇಲೆ ಇರುವ ನಾಲ್ಕು
ವಿಭಾಗ. ಇಲ್ಲಿ ಮೇಲು-ಕೀಳು ಎನ್ನುವ ಭೇದವಿಲ್ಲ. ಎಲ್ಲರೂ ಮೋಕ್ಷ ಯೋಗ್ಯರು. ಸತ್ವ ರಜಸ್ಸು ಮತ್ತು
ತಮಸ್ಸಿನ ಅನುಪಾತದಂತೆ ಮತ್ತೆ ಅನೇಕ ವಿಧವನ್ನು ಚಾತುರ್ವರ್ಣ್ಯದೊಳಗೆ ಕಾಣಬಹುದು.
(೧)ಪರಮಹಂಸರು(೯೦-ಅಂಶ ಸಾತ್ವಿಕ):ಇವರು ತಮ್ಮನ್ನು ತಾವು ಪೂರ್ಣವಾಗಿ ಭಗವಂತನಲ್ಲಿ ನೆಲೆಗೊಳಿಸಿಕೊಂಡವರು. ಇವರಲ್ಲಿ ರಾಜಸ ಮತ್ತು
ತಾಮಸದ ಅಂಶ ಕೇವಲ ೧೦.
(೨)ಹಂಸರು(೮೫-ಅಂಶ ಸಾತ್ವಿಕ): ಹಂಸರು ಪರಮಹಂಸರ ನಂತರದವರು. ಇವರಲ್ಲಿ ರಾಜಸ ಮತ್ತು ತಾಮಸದ ಪ್ರಮಾಣ ೧೫-ಅಂಶ.
(೩)ಬಹೂದಕರು(೮೦-ಅಂಶ ಸಾತ್ವಿಕ): ಇವರಿಗೆ ಒಂದು
ಸ್ಥಿರವಾದ ನೆಲೆ ಇಲ್ಲ. ದಿನಕ್ಕೊಂದು ಕಡೆ ಇವರ ವಾಸ. ಇವರಲ್ಲಿ ಸಾತ್ವಿಕ ಅಂಶ ೮೦ ಮತ್ತು
ರಾಜಸ-ತಾಮಸ ಅಂಶ-೨೦
(೪)ಕುಟೀಚಕರು(೭೫-ಅಂಶ ಸಾತ್ವಿಕ): ಇವರು ಬಹೂದಕರಂತೆ. ಆದರೆ ಇವರು ಒಂದು ಕಡೆ ಒಂದು ಮನೆಯಲ್ಲಿ ವಾಸಿಸುವವರು. ಇವರಲ್ಲಿ ರಾಜಸ ಮತ್ತು ತಾಮಸದ ಅಂಶ-೨೫.
(೫)ವಾನಪ್ರಸ್ಥರು(೭೦-ಅಂಶ ಸಾತ್ವಿಕ):ಮನೆಯಲ್ಲಿ
ಗೃಹಸ್ಥರಾಗಿದ್ದು, ನಂತರ ತಮ್ಮ ಮಕ್ಕಳು ಪ್ರಾಯಪ್ರಬುದ್ಧರಾದ ಮೇಲೆ ಕಾಡಿಗೆ ಹೋಗಿ ಸಾಧನೆ
ಮಾಡುವವರು. ಇವರಲ್ಲಿ ೩೦ ಅಂಶ ರಾಜಸ-ತಾಮಸವಿದ್ದರೆ ಉಳಿದ ೭೦-ಅಂಶ ಸಾತ್ವಿಕ. ಇವರಿಗೆ ಅಗ್ನಿ
ಕರ್ಮವಿದೆ, ಸ್ತ್ರೀ-ಸಂಗವಿಲ್ಲ.
(೬)ಬ್ರಹ್ಮಚಾರಿಗಳು(೬೫-ಅಂಶ
ಸಾತ್ವಿಕ): ಇವರಲ್ಲಿ ಶೇಕಡಾ ೩೫ ಅಂಶ ರಾಜಸ ಮತ್ತು ತಾಮಸ. ಇವರಿಗೆ ಸ್ತ್ರೀ-ಸಂಗ ನಿಷಿದ್ಧ.
(೭)ಗೃಹಸ್ಥರು: ಇವರಲ್ಲಿ ಸಾತ್ವಿಕ
ಅಂಶ ೬೦, ಉಳಿದ ೪೦- ರಾಜಸ ಮತ್ತು-ತಾಮಸ ಅಂಶ. ಇವರು ಸಾಂಸಾರಿಕ ಜೀವನ ನೆಡೆಸಬಹುದು.
ಈ ಮೇಲಿನ ೭ ವಿಧ ಬ್ರಾಹ್ಮಣ ವರ್ಗಕ್ಕೆ ಸಂಬಂಧಪಟ್ಟಿದ್ದು. ಒಟ್ಟಿನಲ್ಲಿ ಹೇಳಬೇಕೆಂದರೆ ಕನಿಷ್ಠ ೬೦-ಪ್ರಮಾಣ ಸಾತ್ವಿಕ-ಅಂಶ ಇರುವ ಮೋಕ್ಷಯೋಗ್ಯ ಮಾನವ ಬ್ರಾಹ್ಮಣ ಎನಿಸುತ್ತಾನೆ.
(೮)ಕ್ಷತ್ರಿಯರು(೫೫:೩೫:೧೦): ಇವರಲ್ಲಿ ಸಾತ್ವಿಕ ಅಂಶ-೫೫ ಮತ್ತು ರಾಜಸ ಅಂಶ ೩೫. ಇವರಿಗೆ ಆಡಳಿತದಲ್ಲಿ ಆಸಕ್ತಿ. ತಮ್ಮ
ತೋಳ್ಬಲದಿಂದ ಸಮಾಜದ ರಕ್ಷಣೆ ಮಾಡುವುದು ಇವರ ಕರ್ತವ್ಯ.
(೯)ವೈಶ್ಯರು (೪೦:೪೦:೨೦): ಇವರಲ್ಲಿ ಸಾತ್ವಿಕ ಮತ್ತು ರಾಜಸ ಅಂಶ ಸಮನಾಗಿದೆ(೪೦). ಇವರಿಗೆ ಕೃಷಿ, ಹೈನುಗಾರಿಕೆ, ವ್ಯಾಪಾರದಲ್ಲಿ
ಆಸಕ್ತಿ.
(೧೦)ಶೂದ್ರರು(೩೫:೩೫:೩೦): ಇವರು
ಇಡೀ ಸಮಾಜದ ಅಡಿಪಾಯ. ಇವರು ಸೇವಾ ಮನೋವೃತ್ತಿ ಇರುವವರು.
ಹೀಗೆ ಸ್ವರೂಪ ಸ್ವಭಾವದಂತೆ ವರ್ಣ
ವಿಂಗಡಣೆ. ಇಲ್ಲಿ ಹೇಳಿದ ಎಲ್ಲ ಪ್ರಮುಖ ೪ ವರ್ಣದವರು ಮೋಕ್ಷ ಯೋಗ್ಯರು. ಇವರಲ್ಲಿ ಮೇಲು ಕೀಳು
ಎನ್ನುವುದಿಲ್ಲ. ಇದು ಕೇವಲ ಭಾರತಕ್ಕೆ ಮೀಸಲಾದ ವಿಂಗಡಣೆ ಅಲ್ಲ. ಈ ರೀತಿಯ ಸ್ವಭಾವ ವಿಂಗಡಣೆ
ಪ್ರಪಂಚದ ಎಲ್ಲ ಮೂಲೆಗೂ ಅನ್ವಯ. ಭಾರತದ ತತ್ವಶಾಸ್ತ್ರ ಇದನ್ನು ಗುರುತಿಸಿ ನಮಗೆ ನೀಡಿದೆ ಅಷ್ಟೆ. ಇದನ್ನು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯನ್ನು ನೋಡುವುದಾದರೆ: ಒಂದು ಮನೆಯಲ್ಲಿ ನಾಲ್ಕು ಜನ
ಅಣ್ಣ-ತಮ್ಮಂದಿರರಿದ್ದಾರೆ. ಅವರಲ್ಲಿ ಹಿರಿಯ ಮಗ ಎಲ್ಲ ಮನೆಮಂದಿಗೆ ಪಾಠ-ಪ್ರವಚನ ಮಾಡಿಕೊಂಡು,
ವೇದಾಧ್ಯಯನ ಮಾಡಿಕೊಂಡಿದ್ದರೆ-ಆತ ಬ್ರಾಹ್ಮಣ ವರ್ಣ. ಎರಡನೆಯವ ಮನೆಯ ಯಜಮಾನಿಕೆ ನೋಡಿಕೊಂಡರೆ
ಆತ-ಕ್ಷತ್ರಿಯ. ಮೂರನೆಯವ ತೋಟ, ಬೇಸಾಯ ಇತ್ಯಾದಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೆ ಆತ-ವೈಶ್ಯ. ನಾಲ್ಕನೆಯವ ತನ್ನ ಅಣ್ಣಂದಿರರಿಗೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಆತ-ಶೂದ್ರ. ಇದು
ಮನಃಶಾಸ್ತ್ರೀಯವಾದ ವರ್ಣ ಪದ್ಧತಿ. ಬ್ರಹ್ಮ-ಅಣತಿ ಬ್ರಾಹ್ಮಣಃ. ದೊಡ್ದದ್ದನ್ನು ತಿಳಿಯುವವನು,
ಜ್ಞಾನ ಸಾಧಕ-ಬ್ರಾಹ್ಮಣ. ಕ್ಷತ್ರ-ತ್ರಾಣಃ –ಕ್ಷತ್ರಿಯಃ. ಯಾರಿಗಾದರೂ ಅಪಾಯವಾದಾಗ ರಕ್ಷಣೆಗೆ ಮುನ್ನುಗ್ಗುವವ
ಕ್ಷತ್ರಿಯ. ವಿಶ್ ಎಂದರೆ ಸಮಾಜ. ಸಮಾಜಕ್ಕೆ ಬೇಕಾದ ಆಹಾರ ಸಲಕರಣೆ ಪೂರೈಸುವವ ವೈಶ್ಯ. ನಾನಾ
ಜನಸ್ಯ ಶುಶ್ರೂಷಃ-ಶೂದ್ರಃ. ಮನುಷ್ಯನ ಮೂಲಭೂತ ಧರ್ಮವಾದ ‘ಸೇವೆ’ಯಲ್ಲಿ ನಿರತನಾದವನು ಶೂದ್ರ. ಕೃಷ್ಣ ಈ ಕುರಿತು ಕೊಡುವ ಅಪೂರ್ವ ವಿಶ್ಲೇಷಣೆಯನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.
ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ
ಚ ಪರಂತಪ ।
ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ ॥೪೧॥
ಬ್ರಾಹ್ಮಣ ಕ್ಷತ್ರಿಯ ವಿಶಾಮ್ ಶೂದ್ರಾಣಾಮ್ ಚ ಪರಂತಪ ।
ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವ ಪ್ರಭವೈಃ
ಗುಣೈಃ -- ಓ ಅರಿಗಳ ಉರಿಯೆ, ಸ್ವಭಾವದಿಂದುಂಟಾದ
ಗುಣಗಳಿಗೆ ಅನುಗುಣವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಕರ್ಮಗಳೂ
ಬೇರೆಬೇರೆಯಾಗಿವೆ.
ಜೀವಸ್ವಭಾವಕ್ಕನುಗುಣವಾಗಿ
ಮೋಕ್ಷಯೋಗ್ಯವಾದ ಮಾನವನಲ್ಲಿ ನಾಲ್ಕು ವಿಧದ ವರ್ಣಗಳಿವೆ. ಸ್ವಭಾವಕ್ಕನುಗುಣವಾಗಿ ಪ್ರತಿಯೊಬ್ಬನ
ನಡೆ-ನುಡಿ, ಆಚಾರ-ವಿಚಾರ. ಸ್ವಭಾವ ಭೇದದಿಂದಾಗಿ
ಗುಣ-ಕರ್ಮ ಭೇದ. ಇದು ಪೂರ್ಣವಾಗಿ ಜೀವ ಸ್ವಭಾವಕ್ಕೆ ಸಂಬಂಧಪಟ್ಟ ವಿಚಾರವಾಗಿರುವುದರಿಂದ ಇದಕ್ಕೂ
ಜಾತಿಗೂ ಯಾವ ಸಂಬಂಧವೂ ಇಲ್ಲ. ಜಾತಿ ದೇಹಕ್ಕೆ ಸಂಬಂಧಪಟ್ಟಿದ್ದು, ವರ್ಣ ಜೀವಸ್ವರೂಪಕ್ಕೆ
ಸಂಬಂಧಪಟ್ಟಿದ್ದು. [ಚಾತುರ್ವರ್ಣ್ಯದ ಬಗ್ಗೆ ಹೆಚ್ಚಿನ ವಿವರಣೆಯನ್ನು ಅಧ್ಯಾಯ ೦೪-ಶ್ಲೋಕ-೧೩
ರಲ್ಲಿ ವಿವರಿಸಲಾಗಿದೆ]. ಈ ನಾಲ್ಕು ವರ್ಣದವರ ಸಹಜ ಕರ್ಮದ ವಿವರಣೆಯನ್ನು ಕೃಷ್ಣ ಮುಂದಿನ
ಶ್ಲೋಕಗಳಲ್ಲಿ ವಿವರಿಸಿದ್ದಾನೆ.
ಶಮೋ ದಮಸ್ತಪಃ ಶೌಚಂ ಕ್ಷಾಂತಿರಾರ್ಜವಮೇವ
ಚ ।
ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ
ಸ್ವಭಾವಜಮ್ ॥೪೨॥
ಶಮಃ ದಮಃ ತಪಃ ಶೌಚಂ ಕ್ಷಾಂತಿ ಆರ್ಜವಮ್
ಏವ ಚ ।
ಜ್ಞಾನಂ ವಿಜ್ಞಾನಮ್ ಆಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್ –– ಭಗವತನಲ್ಲಿ ನಿಷ್ಠೆ, ಇಂದ್ರಿಯಗಳಲ್ಲಿ ಹಿಡಿತ, ಉಪವಾಸಾದಿ ನೇಮಗಳು,
ನೈರ್ಮಲ್ಯ, ಅಪಕಾರಿಯನ್ನೂ ಮನ್ನಿಸುವ ಸೈರಣೆ, ನೇರ ನಡೆ-ನುಡಿ, ತಿಳಿವು, ಆಳವಾದ ಸಂಶೋಧನಾ ದೃಷ್ಟಿ ಮತ್ತು ಆಸ್ತಿಕತೆ- ಇವು ಬ್ರಾಹ್ಮಣ
ಸ್ವಭಾವದ ಸಹಜ ಕರ್ಮಗಳು.
ಜೀವ ಸ್ವಭಾವ ‘ಬ್ರಾಹ್ಮಣ’
ವಾಗಿದ್ದರೆ ಅವರ ಸಹಜ ಕರ್ಮಗಳು ಹೇಗಿರುತ್ತವೆ ಎನ್ನುವುದನ್ನು ಕೃಷ್ಣ ಈ ಶ್ಲೋಕದಲ್ಲಿ
ವಿವರಿಸಿದ್ದಾನೆ. ಈ ವರ್ಣದ ಸ್ವಭಾವಗಳು ಹೀಗಿವೆ:
(೧)ಶಮಃ : ಮನಸ್ಸು ಭಗವಂತನಲ್ಲಿ ನೆಲೆಗೊಂಡಿರುವುದು.
(೨)ದಮಃ : ಇಂದ್ರಿಯಗಳ ಹತೋಟಿ.
(೩)ತಪಃ : ಮಾನಸಿಕವಾಗಿ ವಿಷಯವನ್ನು ಆಳವಾಗಿ
ಚಿಂತನೆ ಮಾಡುವುದು, ಮನಸ್ಸು ಒಳ್ಳೆಯದನ್ನು ಯೋಚಿಸುವುದಕ್ಕೆ ಪೂರಕವಾಗಿ ವೃತಾನುಷ್ಠಾನ, ನಿರಂತರ
ಶಾಸ್ತ್ರ ಚಿಂತನೆ.
(೪)ಶೌಚಮ್ : ಮನಸ್ಸಿನ ಶುದ್ಧತೆ ಮತ್ತು
ಅದಕ್ಕೆ ಪೂರಕವಾಗಿ ಬಾಹ್ಯ ಶುದ್ಧಿ.
(೫)ಕ್ಷಾಂತಿ : ತಪ್ಪು ಮಾಡಿದವರನ್ನೂ
ಕ್ಷಮಿಸುವ, ಕೋಪಿಸಿಕೊಳ್ಳದ ಮನಸ್ಸು.
(೬)ಆರ್ಜವ : ಸ್ವಚ್ಛ ನಿರಾಳ ಮನಸ್ಸು,
ನೇರ ನಡೆ-ನುಡಿ.
(೭)ಜ್ಞಾನ : ಭಗವದ್ ವಿಷಯಕವಾದ ಜ್ಞಾನ.
(೮)ವಿಜ್ಞಾನ : ಭಗವಂತನ ಬಗ್ಗೆ ಆಳವಾದ
ಅರಿವು, ಭಗವಂತನ ಗುಣಗಳ ವಿಶಿಷ್ಠ ಜ್ಞಾನ.
(೯)ಆಸ್ತಿಕ್ಯ : ಪೂರ್ಣವಾಗಿ ಭಗವಂತನ
ಅಸ್ತಿತ್ವದಲ್ಲಿ ಭರವಸೆ ಪಡೆದು ಮುಂದೆ ಸಾಗುವುದು.
ಈ ಎಲ್ಲ ಗುಣಗಳು ಎಲ್ಲ ವರ್ಣದವರಲ್ಲೂ
ಇರಬೇಕು. ಆದರೆ ಹೆಚ್ಚಿನ ಪ್ರಮಾಣದಲ್ಲಿರುವುದು ಬ್ರಾಹ್ಮಣ
ವರ್ಣದವರಲ್ಲಿ. ಇವುಗಳಲ್ಲಿ ಒಂದು ಗುಣದ ಪ್ರಮಾಣ ಕಡಿಮೆ ಇದ್ದರೂ ಆತ ಬ್ರಾಹ್ಮಣನೆನಿಸುವುದಿಲ್ಲ. ಒಂದು ವೇಳೆ
ಕ್ಷತ್ರಿಯರಲ್ಲಿ ಈ ಗುಣಗಳ ಪ್ರಮಾಣ ಬ್ರಾಹ್ಮಣರಿಗಿಂತ ಹೆಚ್ಚಾಗಿ ಕಂಡುಬಂದರೆ ಆತ ರಾಜರ್ಷಿ ಎನಿಸುತ್ತಾನೆ. (ಉದಾಹರಣೆಗೆ ಜನಕ ಮಹಾರಾಜ)
ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ
ಚಾಪ್ಯಪಲಾಯನಮ್ ।
ದಾನಮೀಶ್ವರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಮ್ ॥೪೩॥
ಶೌರ್ಯಂ ತೇಜಃ ಧೃತಿಃ ದಾಕ್ಷ್ಯಮ್ ಯುದ್ಧೇ ಚ ಅಪಿ ಅಪಲಾಯನಮ್ ।
ದಾನಮ್ ಈಶ್ವರ ಭಾವಃ ಚ ಕ್ಷಾತ್ರಮ್ ಕರ್ಮ ಸ್ವಭಾವಜಮ್ –– ಕೆಚ್ಚು, ಕಸುವು, ಗಟ್ಟಿತನ,
ಕೌಶಲ, ಕಾಳಗದಲ್ಲಿ ಬೆನ್ನು ತೋರಿಸದಿರುವುದು, ಕೊಡುಗೈತನ ಮತ್ತು ಒಡೆತನ ಇವು ಕ್ಷತ್ರಿಯ ಸ್ವಭಾವದ
ಸಹಜ ಕರ್ಮಗಳು.
ಕ್ಷತ್ರಿಯನಾದವನ ಸಹಜ ಕರ್ಮಗಳನ್ನು ಇಲ್ಲಿ
ಕೃಷ್ಣ ವಿವರಿಸಿದ್ದಾನೆ.
(೧) ಶೌರ್ಯಮ್ : ಎದುರಾಳಿಗಳನ್ನು ಬಗ್ಗುಬಡಿಯುವ
ಶಕ್ತಿ.
(೨) ತೇಜಸ್ಸು : ಎದುರಾಳಿಗಳು ನೋಡಿದಾಕ್ಷಣ
ತಲೆ ತಗ್ಗಿಸುವ ತೇಜಸ್ಸು.
(೩) ಧೃತಿ : ಪ್ರಾಣಾಪಾಯ ಬಂದಾಗಲೂ ಎದೆಗೆಡದೆ
ಮುನ್ನುಗ್ಗುವ ಸಾಹಸ ಪ್ರವೃತ್ತಿ
(೪) ದಕ್ಷತೆ: ಶತ್ರುಗಳನ್ನು ಮಣಿಸುವ
ತಂತ್ರಗಾರಿಕೆ-ಚಾತುರ್ಯ.
(೫) ಯುದ್ಧೇ ಚ ಅಪಿ ಅಪಲಾಯನಮ್ : ಯುದ್ಧ ಭೂಮಿಯಲ್ಲಿ ಬೆನ್ನು ಹಾಕದೆ, ಪಲಾಯನ ಮಾಡದೆ ಹೋರಾಡುವ ಧೀರತನ.
(೬) ದಾನಮ್: ದಾನ ಧರ್ಮ ಮಾಡುವುದು.
ಈ ಮೇಲಿನ ಆರು ಗುಣಗಳು ಕ್ಷತ್ರಿಯನಲ್ಲಿ
ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇತರ ವರ್ಣದವರಲ್ಲಿ ಇದು ಕಡಿಮೆ ಪ್ರಮಾಣದಲ್ಲಿರುತ್ತದೆ. ಇದಲ್ಲದೆ ಕ್ಷತ್ರಿಯರಿಗೇ ಮೀಸಲಾದ ಒಂದು ವಿಶೇಷ ಗುಣ (೭) ಈಶ್ವರ ಭಾವಃ : ಅಪರಾಧಿಗೆ ಸೂಕ್ತ ಶಿಕ್ಷೆ ಕೊಡುವ ಅಧಿಕಾರ. ಬೇರೆ ವರ್ಣದವರಿಗೆ ಈ ಅಧಿಕಾರವಿಲ್ಲ.
ಕೃಷಿಗೋರಕ್ಷ್ಯವಾಣಿಜ್ಯಂ ವೈಶ್ಯಕರ್ಮ
ಸ್ವಭಾವಜಮ್ ।
ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ
ಸ್ವಭಾವಜಮ್ ॥೪೪॥
ಕೃಷಿ ಗೋರಕ್ಷ್ಯವಾಣಿಜ್ಯಂ ವೈಶ್ಯಕರ್ಮ
ಸ್ವಭಾವಜಮ್ ।
ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ
ಸ್ವಭಾವಜಮ್ –– ಬೇಸಾಯ, ಆಕಳು ಸಾಕಣೆ ಮತ್ತು ವ್ಯಾಪಾರ ವೈಶ್ಯರ ಸ್ವಭಾವಸಹಜವಾದ ಕರ್ಮ. ಸೇವಾರೂಪವಾದ ಕಾಯಕ ಶೂದ್ರ ಸ್ವಭಾವಕ್ಕೆ ಸಹಜವಾದದ್ದು.
ವೈಶ್ಯರ ಸ್ವಭಾವಸಹಜ ಕಾಯಕ ಕೃಷಿ,
ಗೋರಕ್ಷಣೆ(ಹೈನುಗಾರಿಕೆ) ಮತ್ತು ವಾಣಿಜ್ಯ. ಭೀಷ್ಮಾಚಾರ್ಯರು ಧರ್ಮರಾಯನಿಗೆ ರಾಜಧರ್ಮ ಉಪದೇಶ ಮಾಡುತ್ತಾ
“ಯಾವ ದೇಶದಲ್ಲಿ ಕೃಷಿಕರು ಮತ್ತು ವಾಣಿಜ್ಯೋದ್ಯಮಿಗಳು ಕರಭಾರ ತಡೆಯಲಾಗದೆ ಬೇರೆ ದೇಶಕ್ಕೆ ಹೊರಟು
ಹೋಗುತ್ತಾರೆ- ಆ ದೇಶ ಉದ್ಧಾರವಾಗದು" ಎಂದಿದ್ದಾರೆ. ಕೃಷಿ, ವಾಣಿಜ್ಯ ಮತ್ತು ಹೈನುಗಾರಿಕೆ ದೇಶದ ಬೆನ್ನೆಲುಬು. ಈ ಕಾಯಕ ವೈಶ್ಯರ ಸ್ವಭಾವಸಹಜವಾದ ಕರ್ಮ.
ಶೂದ್ರರಲ್ಲಿ ಇನ್ನೊಬ್ಬರ ಸೇವೆ ಮಾಡುವ
ಸೇವಾ ಗುಣ ಮಹತ್ವವಾಗಿರುತ್ತದೆ. ಈ ಗುಣ ಇಲ್ಲದವ ಮನುಷ್ಯನೇ ಅಲ್ಲ. ಯಾರೂ
ಏಕವರ್ಣದವನಲ್ಲ. ಎಲ್ಲರಲ್ಲೂ ಎಲ್ಲ ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಾಗಿದೆಯೋ(Majority) ನಾವು ಆ ವರ್ಣಕ್ಕೆ ಸೇರುತ್ತೇವೆ. ಶೂದ್ರ
ಸ್ವಭಾವ ಎಷ್ಟು ಮುಖ್ಯ ಎಂದರೆ ಈ ಸ್ವಭಾವ ಇಲ್ಲದೆ ಬೇರೆ ಸ್ವಭಾವಕ್ಕೆ ಬೆಲೆ ಇಲ್ಲ. ಯಾವಾಗಲೂ ನಾವು
ಮಾಡುವ ಕರ್ಮವನ್ನು ಸೇವಾ ಮನೋವೃತ್ತಿಯಿಂದ ಮಾಡಬೇಕು. ಉದಾಹರಣೆಗೆ: ಬ್ರಾಹ್ಮಣನಾದವನು ಸಮಾಜ ಸೇವೆಯ
ಭಾವನೆಯಿಂದ ಜ್ಞಾನದಾನ ಮಾಡಬೇಕು. ಇಲ್ಲದಿದ್ದರೆ ಅದು ಜ್ಞಾನದಾನವೆನಿಸುವುದಿಲ್ಲ.
Subscribe to:
Posts (Atom)