Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Friday, January 6, 2012

Bhagavad GitA Kannada Chapter-18 Shloka 54-57


ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ  ।
ಸಮಃ ಸರ್ವೇಷು ಭೂತೇಷು ಮದ್ ಭಕ್ತಿಂ ಲಭತೇ ಪರಾಮ್              ॥೫೪॥

ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ  ।
ಸಮಃ ಸರ್ವೇಷು ಭೂತೇಷು ಮತ್ ಭಕ್ತಿಂ ಲಭತೇ ಪರಾಮ್ – ಭಗವಂತನಲ್ಲೆ ಬಗೆ ನೆಟ್ಟವನು [ಶ್ರೀತತ್ವದಲ್ಲಿ ನೆಲೆಗೊಂಡವನು] ಬಗೆ ತಿಳಿಗೊಂಡು ಯಾವುದಕ್ಕೂ ದುಃಖಿಸುವುದಿಲ್ಲ; ಯಾವುದನ್ನೂ ಬಯಸುವುದಿಲ್ಲ. ಎಲ್ಲ ಜೀವಿಗಳಲ್ಲು ಸಮಭಾವ ಹೊಂದಿ ನನ್ನಲ್ಲಿ ಪರಾಭಕ್ತಿಯನ್ನು ಪಡೆಯುತ್ತಾನೆ.

ಭಗವಂತನಲ್ಲಿ ಬಗೆ ನೆಟ್ಟವನಿಗೆ ಯಾವದೇ ಬೇಕು-ಬೇಡಗಳಿರುವುದಿಲ್ಲ. ಆತನ ಮನಸ್ಸು ಸ್ವಚ್ಛವಾಗಿರುತ್ತದೆ. ಈ ಸ್ಥಿತಿಯಲ್ಲಿ ಸರ್ವೋತ್ಕೃಷ್ಟ ಭಕ್ತಿ ಬೆಳೆಯುತ್ತದೆ. ಗುಣಪೂರ್ಣನಾದ ಭಗವಂತನನ್ನು ಆತ ಪ್ರಪಂಚದ ಪ್ರತೀ ವಸ್ತುವಿನಲ್ಲೂ ಕಾಣುತ್ತಾನೆ. ಇದರಿಂದಾಗಿ ಆತನಲ್ಲಿ ಯಾವುದೇ ತಾರತಮ್ಯ, ದ್ವೇಷ ಇರುವುದಿಲ್ಲ.

ಭಕ್ತ್ಯಾ ಮಾಮಭಿಜಾನಾತಿ ಯಾವಾನ್ ಯಶ್ಚಾಸ್ಮಿ ತತ್ತ್ವತಃ ।
ತತೋ ಮಾಂ ತತ್ತ್ವತೋ ಜ್ಞಾತ್ವಾ ವಿಶತೇ ತದನಂತರಮ್               ॥೫೫॥

ಭಕ್ತ್ಯಾ ಮಾಮ್ ಅಭಿಜಾನಾತಿ ಯಾವಾನ್ ಯಃ ಚ ಅಸ್ಮಿ  ತತ್ತ್ವತಃ ।
ತತಃ  ಮಾಮ್  ತತ್ತ್ವತಃ  ಜ್ಞಾತ್ವಾ ವಿಶತೇ ತತ್ ಅನಂತರಮ್ –ಭಕ್ತಿಯಿಂದ ‘ನಾನು’ ಏನು ಎಂತು ಎನ್ನುವುದನ್ನು ಸರಿಯಾಗಿ ಅರಿಯಬಲ್ಲವನಾಗುತ್ತಾನೆ. ಅಂಥ ಪರಾಭಕ್ತಿಯಿಂದ  ನನ್ನನ್ನು ಸರಿಯಾಗಿ ಅರಿತ ಅನಂತರ ನನ್ನನ್ನೆ ಸೇರುತ್ತಾನೆ.

ಇಂತಹ ಭಕ್ತಿಯ ಉತ್ಕೃಷ್ಟ ಸ್ಥಿತಿಯಲ್ಲಿರುವವನಿಗೆ ಯಾವುದೇ ತಪ್ಪು ತಿಳುವಳಿಕೆ ಇರುವುದಿಲ್ಲ. ಲಕ್ಷ್ಮಿಯ ಸನ್ನಿಧಾನದಿಂದ ಭಗವಂತ ಅಂದರೇನು, ಅವನ ಮಹಿಮೆ ಏನು, ಅವನ ಶಕ್ತಿ ಏನು, ಅವನ ಅನಂತ ಗುಣಗಳ ಹರವು ಏನು- ಎನ್ನುವುದು ಯಥಾವತ್ತಾಗಿ ಜೀವಯೋಗ್ಯತೆಯ ಪೂರ್ಣ ಪ್ರಮಾಣದಲ್ಲಿ ಅರಿಯುತ್ತಾನೆ. ”ಈ ರೀತಿ ತತ್ತ್ವತಃ ಭಗವಂತನನ್ನು ಯಥಾವತ್ತಾಗಿ ತಿಳಿದ ಮೇಲೆ  ಅತ್ಯಂತ ಪರಿಶುದ್ಧ ಜ್ಞಾನ ಮತ್ತು ಭಕ್ತಿಯಿಂದ ನನ್ನನ್ನು ಬಂದು ಸೇರುತ್ತಾನೆ” ಎನ್ನುತ್ತಾನೆ ಕೃಷ್ಣ.      

ಸರ್ವಕರ್ಮಾಣ್ಯಪಿ ಸದಾ ಕುರ್ವಾಣೋ ಮದ್ ವ್ಯಪಾಶ್ರಯಃ  ।
ಮತ್ ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಯಮ್               ॥೫೬॥

ಸರ್ವ ಕರ್ಮಾಣಿ ಅಪಿ ಸದಾ ಕುರ್ವಾಣಃ  ಮತ್  ವ್ಯಪಾಶ್ರಯಃ           ।
ಮತ್ ಪ್ರಸಾದಾತ್ ಅವಾಪ್ನೋತಿ ಶಾಶ್ವತಮ್  ಪದಮ್ ಅವ್ಯಯಮ್ – 'ನಾನೆ' ಸರ್ವಸ್ವ ಎಂದು ತಿಳಿದು ಎಲ್ಲ ಕರ್ಮಗಳನ್ನು ನಿರಂತರ ಮಾಡುತ್ತಿರುವವನು ನನ್ನ ಹಸಾದದಿಂದ, ಅಳಿವಿರದ ಬದಲಾಗದ ತಾಣವನ್ನು ಸೇರುತ್ತಾನೆ.

ಭಗವಂತನೇ ಸರ್ವಸ್ವ ಎಂದು ತಿಳಿದು; ಯಾವುದೇ ಕರ್ಮ ಮಾಡಿದರೂ ಆ ಕರ್ಮದ ಗುರಿ ಭಗವಂತನನ್ನಾಗಿರಿಸಿಕೊಂಡು; ಪೂರ್ಣ ಭಗವದರ್ಪಣಾ ಬುದ್ಧಿಯಿಂದ ಕರ್ಮ ಮಾಡುವವರು, ಭಗವಂತನ ಅನುಗ್ರಹದಿಂದ ಎಂದೂ ಏರುಪೇರಿಲ್ಲದ ಮೋಕ್ಷವನ್ನು ಸೇರುತ್ತಾರೆ.   

ಚೇತಸಾ ಸರ್ವಕರ್ಮಾಣಿ ಮಯಿ ಸಂನ್ಯಸ್ಯ ಮತ್ ಪರಃ ।
ಬುದ್ಧಿಯೋಗಮುಪಾಶ್ರಿತ್ಯ ಮಚ್ಚಿತ್ತಃ ಸತತಂ ಭವ                            ॥೫೭॥

ಚೇತಸಾ ಸರ್ವಕರ್ಮಾಣಿ ಮಯಿ ಸಂನ್ಯಸ್ಯ ಮತ್ ಪರಃ ।
ಬುದ್ಧಿಯೋಗಮ್ ಉಪಾಶ್ರಿತ್ಯ ಮತ್ ಚಿತ್ತಃ ಸತತಮ್  ಭವ – ಒಳಬಗೆಯಿಂದ ಎಲ್ಲ ಕರ್ಮಗಳನ್ನು ನನಗೊಪ್ಪಿಸಿ, ನನ್ನನ್ನೆ ಪರತತ್ವವೆಂದು ತಿಳಿದು, ಜ್ಞಾನಯೋಗದ ದಾರಿ ಹಿಡಿದು ನಿರಂತರ ನನ್ನಲ್ಲೆ ಒಳಬಗೆಯನ್ನಿಡು.

ಇಲ್ಲಿ ಕೃಷ್ಣ ಹೇಳುತ್ತಾನೆ: “ನನ್ನನ್ನು ತಿಳಿದು, ಎಲ್ಲ ಕರ್ಮವನ್ನು ನನ್ನಲ್ಲಿ ಅರ್ಪಿಸಿ, ಜ್ಞಾನಯೋಗದಿಂದ ಮನಸ್ಸನ್ನು ನಿರಂತರ ನನ್ನಲ್ಲಿರಿಸು” ಎಂದು . ಇಲ್ಲಿ ನಾವು ಮಾಡುವ ಎಲ್ಲ ಕರ್ಮವನ್ನು ಭಗವತನಿಗೆ  ಅರ್ಪಿಸಿ ಮಾಡಬೇಕು ಎನ್ನುವುದು ಬಹಳ ಮುಖ್ಯವಾದ ವಿಷಯ. ಇಂದು ಈ ರೀತಿಯ ಕರ್ಮ ಸಾಧನೆ ಇಲ್ಲವಾಗಿದೆ. ಇದಕ್ಕೆ ಮೂಲ ಕಾರಣ ಅಜ್ಞಾನ. ನಾವು ಪೂಜೆ  ಮಾಡುವುದು ಯಾವುದೋ ಫಲದ ಅಪೇಕ್ಷೆಯಿಂದ. ಕೆಲವೊಮ್ಮೆ ಜ್ಯೋತಿಷಿಗಳು ಯಾವುದೋ ಗ್ರಹ ದೋಷವಿದೆ ಎಂದು ಹೇಳುತ್ತಾರೆ. ಉದಾಹರಣೆಗೆ: ಕುಜದೋಷ. ಸಾಮಾನ್ಯವಾಗಿ ಜ್ಯೋತಿಷಿಗಳು ಕುಜದೋಷ ಎಂದು ಹೇಳಿದಾಗ ನಮಗೆ ಮೊದಲು ಕಾಣುವುದು ‘ಈ ಗ್ರಹ ನಮಗೆ ತೊಂದರೆ ಕೊಡುತ್ತಿದೆ’ ಎಂದು. ವಸ್ತುತಃ ಕುಜದೋಷ ಎಂದರೆ ಕುಜನ ದೋಷವಲ್ಲ. ಅದು ನಮ್ಮ ದೋಷ. ನಮ್ಮ ಪ್ರಾರಾಬ್ಧಕರ್ಮ. ಅದನ್ನು ಈ ಗ್ರಹ ಸೂಚಿಸುತ್ತದೆ ಅಷ್ಟೆ. ಅದನ್ನು ನಾವು ತಪ್ಪಾಗಿ ಕುಜನೇ ನನ್ನ ಬೆನ್ನ ಹಿಂದೆ ಬಿದ್ದಿದ್ದಾನೆ ಎಂದು ತಿಳಿದುಕೊಳ್ಳುತ್ತೇವೆ. ಗ್ರಹಗಳಿರುವುದು ನಮಗೆ ಕಾಟ ಕೊಡಲಿಕ್ಕಾಗಿ ಅಲ್ಲ. ಅವರು ಎಂದೂ ಕಾಟ ಕೊಡುವುದಿಲ್ಲ. ಬದಲಿಗೆ ನಮಗೆ ನಮ್ಮ ಪ್ರರಾಬ್ಧದಿಂದ ಬರತಕ್ಕ ಕಾಟವನ್ನು ಅವರು ಸೂಚಿಸುತ್ತಾರೆ. ನಮಗೆ ಕಷ್ಟಬರುವ ಸಾಧ್ಯತೆಯನ್ನು ನಮಗೆ ಮುಂದಾಗಿ ತಿಳಿಸಿ, ನಾವು ಆ ಅನಿಷ್ಟವನ್ನು ಎದುರಿಸಲು ಮಾನಸಿಕ ಸಿದ್ಧತೆ ನಡೆಸುವಂತೆ ಮಾಡುವುದು ಗ್ರಹಗಳ ಕರ್ತವ್ಯ. ಹೀಗೆ ಪ್ರಾರಾಬ್ಧಕರ್ಮ ಇದೆ ಎಂದು ಗೊತ್ತಾದಾಗ, ಆ ಸಮಸ್ಯೆಯನ್ನು ಎದುರಿಸಿ, ಸಾಧನಾ ಮಾರ್ಗದಲ್ಲಿ ಮುಂದೆ ಸಾಗುವುದಕ್ಕೆ ಭಗವಂತನಲ್ಲಿ ಮೊರೆ ಹೋಗುವುದು ಪ್ರಾಯಶ್ಚಿತ ಪೂಜೆ ಹೊರತು-ಇದು ಗ್ರಹಗಳಿಗೆ ಕೊಡುವ ಲಂಚವಲ್ಲ. ಉದಾಹರಣೆಗೆ ನವಗ್ರಹ ಪೂಜೆ. ನಮ್ಮ ಪ್ರಾರಾಬ್ಧಕರ್ಮವನ್ನು ಗ್ರಹಗಳು ಸೂಚಿಸಿರುವುದರಿಂದ, ಆ ಗ್ರಹಗಳ ಅಂತರ್ಯಾಮಿಯಾಗಿರುವ ಭಗವಂತನನ್ನು ಪ್ರಾರ್ಥಿಸುವುದು ನವಗ್ರಹಪೂಜೆ. 
ನಾರಾಯಣನ ಭಕ್ತನನ್ನೂ ಪ್ರಾರಾಬ್ಧಕರ್ಮ ಬಿಡುವುದಿಲ್ಲ. ನಮ್ಮ ಪ್ರಾರಾಬ್ಧಕ್ಕೆ ತಕ್ಕಂತೆ ನಾವು ನಮ್ಮ ಗ್ರಹಚಾರವನ್ನು ಅನುಭವಿಸಲೇಬೇಕು. ಜ್ಞಾನಿಗಳಿಗೂ ಕೂಡ ಕಷ್ಟ ಬರುತ್ತದೆ. ಆ ದುಃಖವನ್ನು ಎದುರಿಸುವ ಸಾಮರ್ಥ್ಯ ನಮ್ಮಲ್ಲಿಲ್ಲದಾಗ ಭಗವಂತನನ್ನು ಪ್ರಾರ್ಥಿಸುವುದು ತಪ್ಪಲ್ಲ. ಇಲ್ಲಿ ಒಂದು ಬಹಳ ಮುಖ್ಯ ವಿಷಯ ಏನೆಂದರೆ ಫಲಾಪೇಕ್ಷೆ ಇಲ್ಲದೆ ಪರಮಾತ್ಮನಲ್ಲಿ ಪ್ರಾರ್ಥನೆ. “ನಾನು ನನ್ನ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮದ ಫಲವಾಗಿ ಇಂದು ಈ ಅನಿಷ್ಟವನ್ನು ಪಡೆದಿದ್ದೇನೆ. ನನ್ನ ಮುಂದಿರುವ ಈ ಗ್ರಹಚಾರವನ್ನು ನೀನು ಗ್ರಹಗಳ ಅಂತರ್ಯಾಮಿಯಾಗಿ ನಿಂತು ನನಗೆ ತೋರಿಸಿದ್ದೀಯ. ನಿನಗೆ ನನ್ನ ಕೋಟಿ-ಕೋಟಿ ನಮನ. ನನಗರಿವಿಲ್ಲದೆ ನಾನು ಮಾಡಿದ ತಪ್ಪನ್ನು ಮನ್ನಿಸಿ, ನಾನು ಈ ಅನಿಷ್ಟವನ್ನು ಎದುರಿಸಿ ಜ್ಞಾನ ಮಾರ್ಗದಲ್ಲಿ ಮುನ್ನೆಡೆದು ನಿನ್ನನ್ನು ಸೇರಲು ನನಗೆ ದಾರಿ ತೋರಿಸು; ನನ್ನೊಳಗಿರುವ ನೀನು ನಿನ್ನ ಪೂಜೆಯನ್ನು ನನ್ನನ್ನು ಮಾಧ್ಯಮವಾಗಿ ಬಳಸಿ ಮಾಡಿಸಿಕೊ; ನಾನು ನಿನ್ನಲ್ಲಿ ಶರಣಾಗಿದ್ದೇನೆ” ಎನ್ನುವ ಅನುಸಂಧಾನ ಈ ಪೂಜೆಯ ಹಿಂದಿರಬೇಕು.    ಹೀಗೆ ಭಗವಂತ ಸರ್ವಶ್ರೇಷ್ಠ ಎನ್ನುವ ಎಚ್ಚರದಿಂದ, ಎಲ್ಲ ದೇವತೆಗಳ ಆರಾಧನೆ ಮಾಡುವಾಗಲೂ ಸಹ- ಅವರ ಅಂತರ್ಯಾಮಿಯಾಗಿರತಕ್ಕಂತಹ ಭಗವಂತನನ್ನು ತಿಳಿದು,   ಕರ್ಮವನ್ನು ಮಾನಸಿಕವಾಗಿ ಭಗವಂತನಲ್ಲಿ ಅರ್ಪಿಸಬೇಕು. ಇದು ನಿಜವಾಗಿ ಮಾಡಬೇಕಾದ ಕರ್ಮದ ವಿಧಾನ.
ಒಟ್ಟಿನಲ್ಲಿ ಹೇಳಬೇಕೆಂದರೆ: ನಾವು ನಮ್ಮ ಮನಸ್ಸು ಬೇರೆಕಡೆ ಹೋಗದಂತೆ ತಡೆದು ಅದನ್ನು ಭಗವಂತನಲ್ಲಿ ನೆಲೆಗೊಳಿಸಬೇಕು; ನಾವು ಮಾಡುವ ಎಲ್ಲ ಕರ್ಮಗಳೂ ಭಗವಂತನ ಪೂಜಾರೂಪವಾಗಿದ್ದು, ಅದನ್ನು ಭಗವಂತ ನಮ್ಮ ಕೈಯಿಂದ ಮಾಡಿಸುತ್ತಿದ್ದಾನೆ ಎನ್ನುವ ಎಚ್ಚರ ನಮ್ಮ ಮನಸ್ಸಿನಲ್ಲಿ ನೆಲೆಗೊಳ್ಳಬೇಕು. ನಮ್ಮ ಅನುಷ್ಠಾನ, ಅನುಸಂಧಾನ ಆನಂದಮಯವಾಗಿರಬೇಕು. ಅಲ್ಲಿ ಯಾವುದೇ ಒತ್ತಡ, ಭಯ, ಫಲಾಪೇಕ್ಷೆ ಇರಕೂಡದು.       

4 comments: