Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Thursday, January 5, 2012

Bhagavad GitA Kannada Chapter-18 Shloka 49-53


ಅಸಕ್ತಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತಸ್ಪೃಹಃ        ।
ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ                       ॥೪೯॥

ಅಸಕ್ತಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತಸ್ಪೃಹಃ        ।
ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನ ಅಧಿಗಚ್ಛತಿ –ಎಲ್ಲೂ ಬುದ್ಧಿಯನ್ನು ಅಂಟಿಸಿಕೊಳ್ಳದೆ , ಬಗೆಯನ್ನು ಗೆದ್ದು, ಬಯಕೆ ತೊರೆದವನು ಇಂಥ ‘ಸಂನ್ಯಾಸ’ದಿಂದ ಮೋಕ್ಷಪ್ರದವಾದ ಹಿರಿಯ ಯೋಗ ಸಿದ್ಧಿಯನ್ನು [ಅನಿಷ್ಟ ಕರ್ಮಗಳ ನಾಶವೆಂಬ ಸಿದ್ಧಿಯನ್ನು] ಪಡೆಯುತ್ತಾನೆ.  

ಮೋಕ್ಷಸಾಧನವಾಗಿರತಕ್ಕಂತಹ ಸಿದ್ಧಿಯನ್ನು[ಪಾಪಕರ್ಮಗಳು ಇಲ್ಲದ ಸ್ಥಿತಿಯನ್ನು] ತಲುಪಲು ಕೇವಲ ಸ್ವಕರ್ಮದಲ್ಲಿ ತೊಡಗಿದರೆ ಸಾಲದು, ಬದಲಿಗಿ ನಾವು ನಮ್ಮ ಮನಸ್ಸನ್ನು ನಿಯಂತ್ರಿಸಿ, ಯಾವುದೇ ಫಲಾಪೇಕ್ಷೆ ಇಲ್ಲದೆ,  ನನ್ನಿಂದಾಯ್ತು ಎನ್ನುವ ಅಹಂಕಾರವನ್ನು ಬಿಟ್ಟು, ಭಗವದರ್ಪಣಾ ಭಾವದಿಂದ ಕರ್ಮವನ್ನು ಮಾಡಬೇಕು. ಅಹಂಕಾರ ಅಧ್ಯಾತ್ಮದ ದೊಡ್ಡ ಶತ್ರು. ಇದರ ಎಚ್ಚರ ನಮಗಿರಬೇಕು. ಒಟ್ಟಿನಲ್ಲಿ ಹೇಳಬೇಕೆಂದರೆ ಸರ್ವತ್ರ ‘ನನ್ನಿಂದಾಯಿತು’ ಎನ್ನುವ ಅಹಂಕಾರವನ್ನು ಬಿಟ್ಟು, ಮನಸ್ಸನ್ನು ಗೆದ್ದು, ಬುದ್ಧಿಯಿಂದ ಫಲಕಾಮನೆಯನ್ನು ತೊಡೆದುಹಾಕಿ, ಕಾಮನೆಗಳ ನ್ಯಾಸ ಮಾಡಿ, ಎಲ್ಲವನ್ನು ಭಗವಂತನಲ್ಲಿ ಅರ್ಪಿಸಿ ಸ್ವಕರ್ಮ ಮಾಡಿದರೆ- ಮೋಕ್ಷವನ್ನು ಸೇರಲು ಬೇಕಾದ ಸಿದ್ಧಿ ಪ್ರಾಪ್ತವಾಗುತ್ತದೆ.        

ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ ತಥಾSSಪ್ನೋತಿ ನಿಬೋಧ ಮೇ ।
ಸಮಾಸೇನೈವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ                   ॥೫೦॥

ಸಿದ್ಧಿಂ ಪ್ರಾಪ್ತಃ  ಯಥಾ ಬ್ರಹ್ಮ ತಥಾ ಆಪ್ನೋತಿ ನಿಬೋಧ ಮೇ ।
ಸಮಾಸೇನ ಏವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ – ಕೌಂತೇಯ, ಯಾವ ಬಗೆಯ ಸಿದ್ಧಿ ಪಡೆದವನು ಬ್ರಹ್ಮತತ್ವವನ್ನು[ಶ್ರೀತತ್ವವನ್ನು]ಸೇರುತ್ತಾನೆ ಆ ಬಗೆಯನ್ನು ಕೇಳು. ಈ ಸಿದ್ಧಿ ತಿಳಿವಿನ ಕೊನೆಯ ಮಜಲು.

ಯಾವ ಪಾತಕದಿಂದಲೂ ಕಲುಷಿತವಾಗದ ಜೀವನದ ನಡೆ(ನೈಷ್ಕರ್ಮ್ಯಸಿದ್ಧಿ) ರೂಪಿತವಾದಾಗ ನಮ್ಮ ಮನಸ್ಸಿನಲ್ಲಿ ಭಗವಂತ ಬಂದು ನೆಲೆಸುತ್ತಾನೆ. ಇದರಿಂದ ತಾಯಿ ಶ್ರಿಲಕ್ಷ್ಮಿಯನ್ನು ಸೇರಿ ಕೊನೆಗೆ ಭಗವಂತನನ್ನು ಸೇರಲು ಸಾಧ್ಯ. ಯಾವ ರೀತಿ ಬ್ರಹ್ಮತತ್ವವನ್ನು ಸೇರುವುದು ಎನ್ನುವುದನ್ನು ಮುಂದೆ ಕೃಷ್ಣ ಅಡಕವಾಗಿ ಹೇಳುತ್ತಾನೆ.  ನೈಷ್ಕರ್ಮ್ಯಸಿದ್ಧಿ ಎನ್ನುವುದು ಒಬ್ಬ ಮನುಷ್ಯನ ಜ್ಞಾನಸಾಧನೆಯ ಕೊನೇಯ ಮಜಲು.  ಈ ಹಂತವನ್ನು ತಲುಪಬೇಕಾದರೆ ನಾವು ಅಧ್ಯಾತ್ಮದಲ್ಲಿ ಕುಂತಿಯಂತೆ ಛಲವುಳ್ಳ-ಕೌಂತೇಯರಾಗಬೇಕು.

ಬುದ್ಧ್ಯಾ ವಿಶುದ್ಧಯಾ ಯುಕ್ತೋ ಧೃತ್ಯಾತ್ಮಾನಂ ನಿಯಮ್ಯ ಚ ।
ಶಬ್ದಾದೀನ್ ನ್ವಿಷಯಾಂಸ್ತ್ಯಕ್ತ್ವಾ ರಾಗದ್ವೇಷೌ ವ್ಯುದಸ್ಯ ಚ                  ॥೫೧॥

ಬುದ್ಧ್ಯಾ ವಿಶುದ್ಧಯಾ ಯುಕ್ತಃ  ಧೃತ್ಯ ಆತ್ಮಾನಂ ನಿಯಮ್ಯ ಚ ।
ಶಬ್ದ ಆದೀನ್ ವಿಷಯಾನ್ ತ್ಯಕ್ತ್ವಾ ರಾಗದ್ವೇಷೌ ವ್ಯುದಸ್ಯ ಚ -- ತಿಳಿಯಾದ ಬುದ್ಧಿಯಿರಬೇಕು. ದಿಟ್ಟತನದಿಂದ ಬಗೆಯನ್ನು ಬಿಗಿಹಿಡಿಯಬೇಕು. ಶಬ್ದ ಮುಂತಾದ ವಿಷಯಲಾಲಸೆಯನ್ನು ತೊರೆಯಬೇಕು. ಪ್ರೀತಿ-ಹಗೆತನಗಳನ್ನು ದೂರವಿರಿಸಬೇಕು.

ಅಧ್ಯಾತ್ಮ ಸಾಧನೆಯಲ್ಲಿ ನಮ್ಮ ಮನಸ್ಸು ಯಾವತ್ತೂ ಕೂಡ ಕೆಟ್ಟದ್ದನ್ನು ಯೋಚಿಸಬಾರದು. ಶುದ್ಧವಾದ ಬುದ್ಧಿ ನಮ್ಮದಾಗಿರಬೇಕು. ಮನಸ್ಸನ್ನು ಬಹಳ ಧೈರ್ಯದಿಂದ ನಿಯಂತ್ರಿಸಿ, ಅಸಾಧಾರಣ ಸಾಹಸದಿಂದ ಎಲ್ಲ ಕೆಟ್ಟ ವಿಚಾರವನ್ನು ಮನಸ್ಸಿನಿಂದ  ಹೊಡೆದೋಡಿಸಬೇಕು. ಇಂದ್ರಿಯಗಳು ಮನಸ್ಸನ್ನು ಕದಡುವ ಸಾಧನಗಳು. ಆದ್ದರಿಂದ ಕೇಳುವ, ನೋಡುವ, ಮುಟ್ಟುವ, ಮೂಸುವ ಮತ್ತು ತಿನ್ನುವ ಚಪಲವನ್ನು ಮೊದಲು ಬಿಡಬೇಕು. ಮಗುವಿನಂತೆ ರಾಗ-ದ್ವೇಷವಿಲ್ಲದೆ ನಿರ್ಮಲ ಮನಸ್ಸಿನಿಂದಿರಬೇಕು.              

ವಿವಿಕ್ತಸೇವೀ ಲಘ್ವಾಶೀ ಯತವಾಕ್ ಕಾಯಮಾನಸಃ ।
ಧ್ಯಾನಯೋಗಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ                  ॥೫೨॥

ವಿವಿಕ್ತಸೇವೀ ಲಘ್ವ ಆಶೀ ಯತ ವಾಕ್ ಕಾಯ ಮಾನಸಃ ।
ಧ್ಯಾನ ಯೋಗ ಪರಃ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ ---- ಏಕಾಂತದಲ್ಲಿ ನೆಲೆಸಬೇಕು. ಮಿತವಾಗಿ ಉಣ್ಣಬೇಕು. ಮಾತು-ಮೈ-ಮನಗಳಲ್ಲಿ ಹಿಡಿತವಿರಬೇಕು. ಧ್ಯಾನಯೋಗದಲ್ಲಿದ್ದು ಅನುದಿನವೂ ವೈರಾಗ್ಯ ತಳೆಯಬೇಕು.

ಹಾಳು ಹರಟೆ ನಡೆಯುವ ಜನಸಂದಣಿಯಲ್ಲಿ ಬೆರೆಯದೆ, ಆದಷ್ಟು ಏಕಾಂತದಲ್ಲಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅಧ್ಯಾತ್ಮ ಸಾಧನೆಯಲ್ಲಿ ಆದಷ್ಟು ಪವಿತ್ರವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡಬೇಕು. ಅತಿಯಾಗಿ ತಿಂದಾಗ ಮನಸ್ಸು ಕೆಲಸ ಮಾಡುವುದಿಲ್ಲ. ಅದಕ್ಕಾಗಿ ನಿಯತವಾದ ಸಮಯದಲ್ಲಿ ನಿಯತ ಆಹಾರವನ್ನು ಸೇವನೆ ಮಾಡಬೇಕು. ಮಾತಿನ ಮೇಲೆ ನಿಯಂತ್ರಣ, ದೇಹದ ಚಟುವಟಿಕೆಯ ಮೇಲೆ ನಿಯಂತ್ರಣ, ಮನಸ್ಸಿನ ಚಿಂತನೆಯಲ್ಲಿ ನಿಯಂತ್ರಣವಿದ್ದು  ಧ್ಯಾನ ಮಾಡಬೇಕು. ಜೀವನದಲ್ಲಿ ಎಲ್ಲವನ್ನು ಪ್ರೀತಿಸುತ್ತ ಯಾವುದನ್ನೂ ಅಂಟಿಸಿಕೊಳ್ಳದೆ ಬದುಕಬೇಕು.

ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್ ।
ವಿಮುಚ್ಯ ನಿರ್ಮಮಃ ಶಾಂತೋ  ಬ್ರಹ್ಮಭೂಯಾಯ ಕಲ್ಪತೇ             ॥೫೩॥

ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್ ।
ವಿಮುಚ್ಯ ನಿರ್ಮಮಃ ಶಾಂತಃ  ಬ್ರಹ್ಮಭೂಯಾಯ ಕಲ್ಪತೇ –-ನಾನೆಂಬ ಹಮ್ಮು, ಬಲಾತ್ಕಾರ, ಸೊಕ್ಕು, ಕಾಮ, ಕೋಪ ಮತ್ತು ಕೈಯೊಡ್ಡುವ ಬುದ್ಧಿ ಇವುಗಳನ್ನು ತೊರೆದು, ಮಮತೆಯಳಿದು ಭಗವಂತನಲ್ಲಿ ಬಗೆಯಿಡಬೇಕು. ಆಗ ಭಗವಂತನಲ್ಲೆ ಬಗೆ ನೆಲೆಗೊಳ್ಳುತ್ತದೆ.[ಅಂಥವನು ಶ್ರೀತತ್ವವನ್ನು ಸೇರುತ್ತಾನೆ]
ಭಗವಂತನ ಚಿಂತನೆಗೆ ವಿರುದ್ಧವಾಗಿ ‘ನಾನು ಮಾಡಿದೆ’ ಅನ್ನುವ ಅಹಂಕಾರ, ಇನ್ನೊಬ್ಬರ ಮೇಲೆ ತಮ್ಮ ಅಭಿಪ್ರಾಯ ಹೇರುವುದು, ತನ್ನ ಸ್ಥಿತಿಯ ಬಗ್ಗೆ ದರ್ಪ, ಕಾಮ-ಕ್ರೋಧ, ಇನ್ನೊಬ್ಬರ ಮುಂದೆ ಕೈಯೊಡ್ಡುವ ಬುದ್ಧಿ- ಇವೆಲ್ಲವನ್ನು ತೊರೆದು, ನಾನು-ನನ್ನದು ಎನ್ನುವ ಮಮಕಾರವನ್ನು ಬಿಟ್ಟು, ಭಗವಂತನಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದರಿಂದ ಬ್ರಹ್ಮತತ್ವವನ್ನು ಸೇರಬಹುದು. [ಮನಸ್ಸು ಭಗವಂತನಲ್ಲಿ ನೆಲೆಗೊಳ್ಳುತ್ತದೆ; ಚತುರ್ಮುಖನ ಉಪದೇಶ ಪಡೆದು- ತಾಯಿ ಲಕ್ಷ್ಮಿಯನ್ನು ಸೇರುತ್ತಾನೆ]. 
  

No comments:

Post a Comment