Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Wednesday, March 30, 2011

Bhagavad Gita Kannada Chapter-03 Shloka 17-20


ಯಸ್ತ್ವಾತ್ಮರತಿರೇವ ಸ್ಯಾದಾತ್ಮತೃಪ್ತಶ್ಚ ಮಾನವಃ।
ಆತ್ಮನ್ಯೇವ ಚ ಸಂತುಷ್ಟಸ್ತಸ್ಯ ಕಾರ್ಯಂ ನ ವಿದ್ಯತೇ    ॥೧೭॥

ಯಃ ತು ಆತ್ಮ ರತಿಃ ಏವ ಸ್ಯಾತ್ ಆತ್ಮ  ತೃಪ್ತಃ ಚ  ಮಾನವಃ
ಆತ್ಮನಿ ಏವ ಚ ಸಂತುಷ್ಟ ತಸ್ಯ ಕಾರ್ಯಮ್  ನ ವಿದ್ಯತೇ- ಪರಮಾತ್ಮನನ್ನು ಕಂಡು (ಪರಮಾತ್ಮನ ಕರುಣೆಯಿಂದ) ಸುಖವುಂಡವನು, ಪರಮಾತ್ಮನ ಕಾಣ್ಕೆಯಿಂದ(ಕರುಣೆಯಿಂದ) ಕೃತಕೃತ್ಯನಾದವನು, ಬೇರಾವುದೂ ಬೇಡವನಿಸಿ ಪರಮಾತ್ಮನಲ್ಲೆ ಆನಂದವಾಗಿರುವ ಸಮಾಧಿಮಗ್ನನು(ತೃಪ್ತನಾಗುವ ಮುಕ್ತನು) ಮಾತ್ರವೇ ಮಾಡಬೇಕಾದ್ದೇನೂ ಇರುವುದಿಲ್ಲ.

ಭಗವಂತನನ್ನು ಅಂತರಂಗದಲ್ಲಿ ಕಂಡು ಪಡುವ ಆನಂದ 'ಆತ್ಮರತಿ'.  ಈ ಸ್ಥಿತಿಯನ್ನು ಸಮಾಧಿ ಸ್ಥಿತಿಯಲ್ಲಿ ತಲುಪಬಹುದು. ನಿಜವಾದ ಸಮಾಧಿ ಸ್ಥಿತಿಯಲ್ಲಿ ನಮ್ಮ ಇಂದ್ರಿಯಗಳು ಮತ್ತು ಮನಸ್ಸು ಕೆಲಸ ಮಾಡುವುದಿಲ್ಲ. ಜ್ಞಾನ ಸ್ವರೂಪವಾದ 'ಜೀವಸ್ವರೂಪ' ನೇರವಾಗಿ ಭಗವಂತನನ್ನು ಕಾಣುವ ಸ್ಥಿತಿ ಸಮಾಧಿಸ್ಥಿತಿ. ಈ ಸ್ಥಿತಿಯಲ್ಲಿ ಭಗವಂತನೊಡನೆ ನೇರ ಸಂಪರ್ಕ ಸಾಧ್ಯ. ಇಂತಹ ಸ್ಥಿತಿಯಲ್ಲಿರುವವನಿಗೆ ಯಾವುದೇ ಕರ್ಮದ ಲೇಪವಿಲ್ಲ. ದೇವರನ್ನು ಕಂಡ ಮೇಲೆ ಆತನಿಗೆ ಈ ಲೌಕಿಕ ಪ್ರಪಂಚ ತೃಪ್ತಿಯಾಗಿ ಅದು ಬೇಡವೆನಿಸುತ್ತದೆ.  ಕೇವಲ ಭಗವಂತನ ಸಾಕ್ಷಾತ್ಕಾರದ ಆನಂದ ಸಾಗರದಲ್ಲಿ ಆತ ಮುಳುಗಿರುತ್ತಾನೆ. ಈ ಸ್ಥಿತಿಯಲ್ಲಿ ಆತನಿಗೆ ಯಾವುದೇ ಕರ್ತವ್ಯ ಕರ್ಮವಿಲ್ಲ, ಆತ ವಿಧಿ ನಿಷೇಧಗಳಿಂದ ಅತೀತನಾಗಿರುತ್ತಾನೆ.

ನೈವ ತಸ್ಯ ಕೃತೇನಾರ್ಥೋ ನಾಕೃತೇನೇಹ ಕಶ್ಚನ ।
ನ ಚಾಸ್ಯ ಸರ್ವಭೂತೇಷು ಕಶ್ಚಿದರ್ಥವ್ಯಪಾಶ್ರಯಃ ॥೧೮॥

ನ ಏವ ತಸ್ಯ ಕೃತೇನ ಅರ್ಥಃ ನ ಅಕೃತೇನ ಇಹ ಕಶ್ಚನ
ನ ಚ ಅಸ್ಯ ಸರ್ವಭೂತೇಷು ಕಶ್ಚಿತ್ ಅರ್ಥ ವ್ಯಪಾಶ್ರಯಃ -ಅಂಥವನು ಏನನ್ನಾದರೂ ಮಾಡುವುದರಿಂದ ಹೆಚ್ಚಿನ ಸಾಧಕವಾಗಲಿ, ಮಾಡದೆ ಇರುವುದರಿಂದ ಯಾವುದೇ ಬಾದಕವಾಗಲಿ ಇಲ್ಲ. ಸಮಸ್ತ ಜೀವಿಗಳಲ್ಲಿ ಅವನಿಗೆ ಯಾವುದೇ ಫಲದ ಹಂಗಿಲ್ಲ.

ಸಮಾಧಿ ಸ್ಥಿತಿಯಲ್ಲಿ ಅವನಿಗೆ ಹಸಿವು, ಬಾಯಾರಿಕೆ ಇಲ್ಲ. ಆತನಿಗೆ ಹೊರ ಪ್ರಪಂಚದ ಅರಿವೇ ಇರುವುದಿಲ್ಲ. ಇಂತಹ ಸ್ಥಿತಿಯಲ್ಲಿರುವಾಗ ಇನ್ಯಾವುದೋ ಸಾಧನೆ ಮಾಡುವುದರಿಂದ ಉದ್ಧಾರವಾಗಲಿ, ಕರ್ತವ್ಯ ಕರ್ಮ ಮಾಡದೆ ಇರುವ ದೋಷವಾಗಲಿ ಇರುವುದಿಲ್ಲ. ಪಂಚಭೂತಗಳ, ಪಂಚಕೋಶಗಳ ಆಸರೆ ಕೂಡಾ ಅವನಿಗೆ ಬೇಕಾಗಿರುವುದಿಲ್ಲ. ಸಮಸ್ತ ಜನಾಂಗ, ಪರಿವಾರ ಎನ್ನುವ ಮಮಕಾರ ಈ ಸ್ಥಿತಿಯಲ್ಲಿ ಇರುವುದಿಲ್ಲ. ಆತನಿಗೆ ಹೊರ ಪ್ರಪಂಚದ ಹಂಗಿಲ್ಲ. ಈ ರೀತಿ ಸಮಾಧಿ ಸ್ಥಿತಿಯಿಂದ ದೇವರನ್ನು ಕಾಣುತ್ತಿರುವವನು ಕರ್ತವ್ಯ ಕರ್ಮದಿಂದ ಆಚೆಗಿರುತ್ತಾನೆ.

ತಸ್ಮಾದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚರ ।
ಅಸಕ್ತೋ ಹ್ಯಾಚರನ್ ಕರ್ಮ ಪರಮಾಪ್ನೋತಿ ಪೂರುಷಃ   ॥೧೯॥

ತಸ್ಮಾತ್ ಅಸಕ್ತಃ ಸತತಂ ಕಾರ್ಯಮ್  ಕರ್ಮ ಸಮಾಚರ ।
ಅಸಕ್ತಃ ಹಿ ಆಚರನ್ ಕರ್ಮ ಪರಮ್ ಆಪ್ನೋತಿ ಪೂರುಷಃ –ಆದ್ದರಿಂದ  ಫಲದ ನಂಟು ತೊರೆದು ಸದಾ ಕರ್ತವ್ಯ ಕರ್ಮವನ್ನು ಮಾಡುತ್ತಿರು. ನಂಟು ತೊರೆದು ಕರ್ತವ್ಯದಲ್ಲಿ ತೊಡಗುವುದರಿಂದಲೇ ಸಾಧಕ ಭಗವಂತನನ್ನು ಸೇರುವುದು ಸಾಧ್ಯ.

ಈ ಎಲ್ಲಾ ಕಾರಣದಿಂದ ನಾವು ನಮ್ಮ ಕರ್ತವ್ಯ ಕರ್ಮವನ್ನು ಮಾಡಬೇಕು. "ಎಲ್ಲವನ್ನು ಮಾಡು ಆದರೆ ಯಾವುದನ್ನೂ ಅಂಟಿಸಿಕೊಳ್ಳದೇ ಮಾಡು. ಏನು ಮಾಡಬೇಕೋ  ಅದನ್ನು ಫಲದ ಬಗ್ಗೆ ಯೋಚಿಸದೆ(ಅಧಿಕಾರ ಸಾಧಿಸದೇ) ಮಾಡು. ಹೀಗೆ ಕರ್ಮ ಮಾಡಿದರೆ ಅದು ನಿನ್ನನ್ನು ಭಗವಂತನಡೆಗೆ ಕೊಂಡೊಯ್ಯುತ್ತದೆ. ಅದು ಎಂದೂ ನಿನ್ನನ್ನು ಮತ್ತೆ ಕರ್ಮ ಬಂಧನಕ್ಕೆ ತಳ್ಳುವುದಿಲ್ಲ. ಈ ರೀತಿ ಮಾಡುವುದರಿಂದ ಭಗವಂತನನ್ನು ಸೇರುವುದು ಸಾಧ್ಯ ಹೊರತು ಕರ್ಮ ತ್ಯಾಗದಿಂದಲ್ಲ "ಎನ್ನುತ್ತಾನೆ ಕೃಷ್ಣ.

ಇಲ್ಲಿ "ಪೂರುಷಃ" ಎನ್ನುವ ಪದ ಬಳಕೆಯಾಗಿದೆ. ಪುರದಲ್ಲಿ(ಪೂರ್ಣವಾದ ಶರೀರದಲ್ಲಿ) ಇರುವವ ಪುರುಷ. ಪುರವನ್ನು ಪೂರ್ಣ  ಪ್ರಮಾಣದಲ್ಲಿ ಉಪಯೋಗಿಸುವ ಸಾಧಕ-ಪೂರುಷಃ. ಸಾಧನಾ ಶರೀರದಲ್ಲಿದ್ದು ಸಾಧನೆಯಲ್ಲಿ ತೊಡಗಿರುವ ಜೀವ ಪೂರುಷಃ.
ಈ ರೀತಿ ಕರ್ಮ ಸಿದ್ಧಾಂತವನ್ನು ವಿವರಿಸಿದ ಕೃಷ್ಣ ಅದಕ್ಕೆ ಪೂರಕವಾದ ನಿದರ್ಶನವನ್ನು ಮುಂದಿನ ಶ್ಲೋಕದಲ್ಲಿ ಕೊಡುತ್ತಾನೆ.

ಕರ್ಮಣೈವ ಹಿ ಸಂಸಿದ್ಧಿಮಾಸ್ಥಿತಾ ಜನಕಾದಯಃ ।
ಲೋಕಸಂಗ್ರಹಮೇವಾಪಿ ಸಂಪಶ್ಯನ್ ಕರ್ತುಮರ್ಹಸಿ ॥೨೦॥

ಕರ್ಮಣಾ ಏವ ಹಿ ಸಂಸಿದ್ಧಿಮ್ ಅಸ್ಥಿತಾಃ  ಜನಕ ಅದಯಃ
ಲೋಕಸಂಗ್ರಹಮ್ ಏವ ಅಪಿ ಸಂಪಶ್ಯನ್ ಕರ್ತುಮ್ ಅರ್ಹಸಿ -ಕರ್ಮದಿಂದಲೆ ಸಾಧಿಸಿ ಜನಕ ಮೊದಲಾದವರು ಗುರಿ ಮುಟ್ಟಿದರು. ಜನತೆಯನ್ನು ತಿದ್ದುವ ಹೊಣೆಯನ್ನರಿತಾದರೂ ನೀನು ಕರ್ಮ ಮಾಡಬೇಕಾಗಿದೆ.

ಹಿಂದಿನ ಅನೇಕ ರಾಜರ್ಷಿಗಳು ಈ ಮಾರ್ಗದಲ್ಲಿ ನಡೆದು ಮೋಕ್ಷ ಪಡೆದಿದ್ದಾರೆ. ಅವರ್ಯಾರೂ ಎಲ್ಲವನ್ನು ತ್ಯಜಿಸಿ ಕಾಡಿಗೆ ಹೋಗಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಜನಕ ಮಹಾರಾಜ. ಈತ ಎಲ್ಲಾ ರಾಜ್ಯ ವೈಭೋಗದೊಂದಿಗೆ ರಾಜ್ಯಭಾರ ಮಾಡಿದ ವ್ಯಕ್ತಿ. ಆದರೆ ಅವನಷ್ಟು ದೊಡ್ಡ ಜ್ಞಾನಿ ಆ ಕಾಲದಲ್ಲಿ ಯಾರೂ ಇರಲಿಲ್ಲ. ಅಂಥಹ ಮಹಾ ರಾಜರ್ಷಿ ಆತ.  ಶುಖಾಚಾರ್ಯರು  ವೈರಾಗ್ಯದ ಬಗ್ಗೆ ಸರಿಯಾದ ತಿಳುವಳಿಕೆಗಾಗಿ ಜನಕನಲ್ಲಿಗೆ ಬಂದಿದ್ದರು!  ಇದು ನಿಜವಾದ ಸಾಧಕನ ಬದುಕು. ಜನಕ ಎಲ್ಲಾ ಅಧಿಕಾರದ ಭೋಗದ ನಡುವೆ ಇದ್ದು, ವಿರಕ್ತನಾಗಿ ಬದುಕಿದವ. ಆದ್ದರಿಂದ ಕೃಷ್ಣ ಇಲ್ಲಿ ಜನಕನ ಹೆಸರನ್ನು ಪ್ರಸ್ತಾಪಿಸುತ್ತಾನೆ. ಕೃಷ್ಣ ಹೇಳುತ್ತಾನೆ: "ಜನಕ ಮುಂತಾದ ರಾಜರ್ಷಿಗಳು ಕರ್ಮಯೋಗದಿಂದಲೇ ಜ್ಞಾನ ಪಡೆದು, ಕರ್ಮ ಮಾಡುತ್ತಾ ಎತ್ತರಕ್ಕೇರಿದರೇ ಹೊರತು, ಕರ್ಮ ತ್ಯಾಗದಿಂದಲ್ಲ" ಎಂದು. ಈ ರೀತಿ ಸಮಾಜಕ್ಕೆ ಮಾರ್ಗದರ್ಶಿಯಾದ ನೀನು ಸಮಾಜಕ್ಕೋಸ್ಕರ ಯುದ್ಧ ಮಾಡು ಎಂದು ಹೇಳುತ್ತಿದ್ದಾನೆ ಕೃಷ್ಣ". 
ಕರ್ತವ್ಯ ಕರ್ಮದ ಬಗ್ಗೆ ವಿವರವಾಗಿ ವಿವರಿಸಿದ ಕೃಷ್ಣ, ಈಗ ತಪ್ಪು ದಾರಿಯಲ್ಲಿ ಮುಂದಾಳು ನಡೆದಾಗ ಸಮಾಜದ ಮೇಲಾಗುವ ಪರಿಣಾಮದ ಬಗ್ಗೆ ಸ್ವತಃ ತನ್ನನ್ನೇ ಉದಾಹರಣೆಯಾಗಿಟ್ಟುಕೊಂಡು ಮುಂದಿನ ಶ್ಲೋಕಗಳಲ್ಲಿ ವಿವರಿಸುತ್ತಾನೆ.

Sunday, March 27, 2011

Bhagavad Gita Kannada Chapter-03 Shloka 14-16


ಅನ್ನಾದ್ ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ ।
ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ   ॥೧೪॥

ಅನ್ನಾತ್  ಭವಂತಿ ಭೂತಾನಿ ಪರ್ಜನ್ಯಾತ್ ಅನ್ನ ಸಂಭವಃ
ಯಜ್ಞಾತ್  ಭವತಿ ಪರ್ಜನ್ಯಃ  ಯಜ್ಞಃ  ಕರ್ಮ ಸಮುದ್ಭವಃ -ಜೀವಿಗಳ ಹುಟ್ಟು  ಆಹಾರದಿಂದ;  ಆಹಾರದ ಬೆಳೆ ಸೂರ್ಯನಿಂದ[ಮೋಡದಿಂದ]. ಸೌರಶಕ್ತಿಯ ವೃದ್ಧಿ [ಮೋಡದ ಹುಟ್ಟು]-ಯಜ್ಞದಿಂದ; ಯಜ್ಞದ ನಿರ್ವಹಣೆ-ಕರ್ಮದಿಂದ.

ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಮ್ ।
ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಮ್  ॥೧೫॥

ಕರ್ಮ ಬ್ರಹ್ಮಉದ್ಭವಮ್  ವಿದ್ಧಿ  ಬ್ರಹ್ಮ ಅಕ್ಷರ ಸಮುದ್ಭವಮ್
ತಸ್ಮಾತ್ ಸರ್ವ ಗತಮ್  ಬ್ರಹ್ಮ ನಿತ್ಯಮ್  ಯಜ್ಞೇ ಪ್ರತಿಷ್ಠಿತಮ್ - ಕರ್ಮದ ನಿಷ್ಪತ್ತಿ ಭಗವಂತನಿಂದ; ಭಗವಂತನ ಅಭಿವ್ಯಕ್ತಿ- ವೇದಾಕ್ಷರದಿಂದ. ಆದ್ದರಿಂದ ಎಲ್ಲೆಡೆಯಿರುವ ಭಗವಂತ ಸದಾ ಯಜ್ಞದಲ್ಲಿ ನೆಲೆಸಿದ್ದಾನೆ.        

ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ।
ಅಘಾಯುರಿಂದ್ರ ಯಾರಾಮೋ ಮೋಘಂ ಪಾರ್ಥ ಸ ಜೀವತಿ ॥೧೬॥

ಏವಂ ಪ್ರವರ್ತಿತಮ್  ಚಕ್ರಮ್    ಅನುವರ್ತಯತಿ ಇಹ ಯಃ
ಅಘ ಆಯಃ  ಇಂದ್ರಿಯ ಆರಾಮಃ ಮೋಘಮ್  ಪಾರ್ಥ ಸಃ ಜೀವತಿ -ಹೀಗೆ ಜಗದ ಗಾಲಿಯನ್ನು ಮುಂದುವರಿಸದವನು ಪಾಪದ ಬದುಕು ಬದುಕುತ್ತ ಇಂದ್ರಿಯ ಸುಖದಲ್ಲೇ ಮೈಮರೆತವನು. ಓ ಪಾರ್ಥ, ಅಂಥವನ ಬದುಕು ವ್ಯರ್ಥ.

ಜೀವಜಾತದ ಹುಟ್ಟು ಆಹಾರದಿಂದ. ಆಹಾರವಿಲ್ಲದೆ ಬದುಕಿಲ್ಲ. ಈ ಆಹಾರ ಸಿಗುವುದು ಬೆಳೆಯಿಂದ. ಬೆಳೆಗೆ ಮೂಲ ಸೌರಶಕ್ತಿ  ಮತ್ತು ಮಳೆ. ಮಳೆ ಬರುವುದು ಯಜ್ಞದಿಂದ, ನಾವು ಮಾಡುವ ಪ್ರಾಮಾಣಿಕ ಬದುಕಿನಿಂದ, ಭಗವದರ್ಪಣ ಬುದ್ಧಿಯಿಂದ. ಯಜ್ಞದ ನಿರ್ವಹಣೆ ಕರ್ಮದಿಂದ, ನಮ್ಮ ಕ್ರಿಯಾಶೀಲತೆಯಿಂದ. ಕರ್ಮ ಎಂದರೆ ಕರ್ತವ್ಯ ಕರ್ಮ, ಪ್ರಾಮಾಣಿಕ ಕ್ರಿಯೆ. ಇಂತಹ ಕರ್ಮ ನಡೆಯುವುದು  ಭಗವಂತನಿಂದ. ಈ ಭಗವಂತ(ಬ್ರಹ್ಮ) ನೆಲೆಸಿರುವುದು ವೇದ(ಅಕ್ಷರ)ದಲ್ಲಿ. ವೇದ ಇರುವುದು ಜೀವ ಜಾತಗಳಲ್ಲಿ(ಮನುಷ್ಯನಲ್ಲಿ). ಆದ್ದರಿಂದ ಇದೊಂದು ಚಕ್ರ.  ಮಾನವ<->ಆಹಾರ<->ಮಳೆ<->ಯಜ್ಞ<->ಭಗವಂತ<->ವೇದ<-> ಮಾನವ. ಇಲ್ಲಿ ವೇದ ಎಂದರೆ ವೇದ ಮಂತ್ರವನ್ನು ಬಾಯಿಪಾಠ ಮಾಡುವುದಲ್ಲ. ವೈದಿಕ ವಾಙ್ಮಯದ ಎಚ್ಚರ-ಪ್ರಜ್ಞೆ. ಈ ಚಕ್ರದಲ್ಲಿ ನಾವು ನಮ್ಮ ಕರ್ಮವನ್ನು ತೊರೆಯುವಂತಿಲ್ಲ. ಕರ್ಮವನ್ನು ಸದಾ ಯಜ್ಞವಾಗಿ, ಭಗವದರ್ಪಣವಾಗಿ ಮಾಡಬೇಕು. ಭಗವಂತನ ಎಚ್ಚರ, ವೈದಿಕ ವಾಙ್ಮಯ ಪ್ರಜ್ಞೆ  ಎಲ್ಲವೂ ಸಮನಾಗಿದ್ದರೆ ಮಳೆ, ಮಳೆಯಿಂದ ಬೆಳೆ, ಬೆಳೆಯಿಂದ ಜೀವನ. ಈ ಚಕ್ರವನ್ನು ಯಾರು ಮುಂದುವರಿಸಿಕೊಂಡು ಹೋಗುವುದಿಲ್ಲವೋ ಅವನು ವಿಶ್ವ ಚಕ್ರದ ನಡೆಯನ್ನು ಮುರಿದವನು, ಸಮಾಜದ ಸಹಜ ನಡೆಗೆ ಅಡ್ಡಗಾಲು ಹಾಕಿದವನು. ಅಂತವನು ಬರಿಯ ಇಂದ್ರಿಯ ಸುಖ ಭೋಗದಲ್ಲಿ ಮೈಮರೆತು ತನ್ನ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಾನೆ.

ಇಲ್ಲಿ ಹೇಳಿರುವ ಈ ವಿಶ್ವ ಚಕ್ರದ ಎಚ್ಚರ ನಮಗೆ ನಮ್ಮ ದೈನಂದಿನ ಕಾರ್ಯದಲ್ಲಿ ಇದ್ದರೆ ನಮ್ಮ ಜೀವನ ಸಾರ್ಥಕ. ನಾವು ಸದಾ ಆ ವಿಶ್ವ ಶಕ್ತಿಯ ನಡೆಯನ್ನು ಅನುಸರಿಸಿದರೆ ನಮ್ಮ ಉದ್ಧಾರ ಸದಾಸಿದ್ಧ. ಎಂದೂ ಯಾವ ವಿಚಾರವಾಗಿ ನಾವು ಭಯ ಪಡುವ ಅಗತ್ಯವಿಲ್ಲ. ನಮ್ಮ ದೈನಂದಿನ ಬದುಕನ್ನು ಒಂದು ಯಜ್ಞವಾಗಿ ಮಾಡಿಕೊಂಡು, ಭಗವಂತನ ಪ್ರಜ್ಞೆಯಲ್ಲಿ ಬದುಕುವುದನ್ನು ನಾವು ರೂಢಿಸಿಕೊಳ್ಳಬೇಕು. ಇದು ನಿಜವಾದ ಕರ್ಮಯೋಗ. ಇದುವೇ ಮೋಕ್ಷದ  ನಡೆ. ಇದು ಭಗವಂತನನ್ನು ಸೇರುವ ಮಾರ್ಗ.
ಈ ವಿಶ್ವದಲ್ಲಿ ಎಲ್ಲವೂ ಒಂದಕ್ಕೊಂದು ಹೊಂದಿಕೊಂಡಿದೆ(Inter Dependent). ಒಂದು ಇನ್ನೊಂದರ ಸಹಾಯದಿಂದ ನಿಂತಿದೆ. ಯಾವುದೂ ಸ್ವತಂತ್ರ ಅಲ್ಲ (Inter linked not independent). ಪ್ರತಿಯೊಂದು ಪುಟ್ಟ ಕ್ರಿಯೆಯಲ್ಲಿ ಇಡೀ ವಿಶ್ವದ ಶಕ್ತಿಗಳು  ಪರೋಕ್ಷವಾಗಿ ಪಾಲ್ಗೊಳ್ಳುತ್ತವೆ. ನಾವು ಉಣ್ಣುವ ಆಹಾರದ ಹಿಂದೆ ಅನೇಕ ಋಣಗಳಿವೆ. ಅದನ್ನು ನೆನಪಿಸದೇ ಇದ್ದರೆ ವಿಶ್ವ ಶಕ್ತಿಗೆ ಕೃತಘ್ನರಾದಂತೆ.
ವಿಶ್ವದ ನಡೆಯ ಕರ್ಮಚಕ್ರ’; ಅದರಲ್ಲಿ ನಮ್ಮ ಕರ್ತವ್ಯಕರ್ಮ’; ನಮ್ಮ ಯಜ್ಞ ಯಾಗಾದಿಗಳು ಈ ಬಗ್ಗೆ ವಿವರವಾಗಿ ಕೃಷ್ಣ ಹೇಳಿದ. ಆದರೆ ಇಲ್ಲಿ ನಮಗೆ ಒಂದು ಪ್ರಶ್ನೆ ಮೂಡಬಹುದು. ಅದೇನೆಂದರೆ: ಹಿಂದೆ ಕೃಷ್ಣ  ಜ್ಞಾನವನ್ನು ಶ್ರೇಷ್ಠ ಎಂದು ಹೇಳಿದ್ದ,  ಆದರೆ ಕರ್ಮವನ್ನು ಬಿಟ್ಟಲ್ಲ ಎಂತಲೂ  ಹೇಳಿದ.  ಆದರೆ ಶಾಸ್ತ್ರದಲ್ಲಿ ಜ್ಞಾನಿಗಳಿಗೆ ಕರ್ಮ ಬೇಡ ಎಂದು ಹೇಳಿದೆ. ಏನಿದರ ಅರ್ಥ?  ಕೃಷ್ಣ ನಮ್ಮ ಈ ಪ್ರಶ್ನೆಯನ್ನು ಆತನೇ ಎತ್ತಿಕೊಂಡು ಮುಂದಿನ ಶ್ಲೋಕದಲ್ಲಿ ಉತ್ತರ ಕೊಡುತ್ತಾನೆ. ಒಬ್ಬ ಅಂತರಂಗದಲ್ಲಿ ಯಜ್ಞ ಮಾಡತಕ್ಕವನಿಗೆ ಕರ್ಮವಿದೆಯೋ? ಅವನು ಕರ್ಮ ಮಾಡದಿದ್ದರೆ ಲೋಪವಿದೆಯೋ? ಮನುಷ್ಯ ಕರ್ಮ ಬಂಧನವಿಲ್ಲದೆ ಇರುವ ಸ್ಥಿತಿ ಯಾವುದು? ಮೋಕ್ಷಕ್ಕೆ ಮೊದಲು ಸಂಸಾರಿಕ ಸ್ಥಿತಿಯಲ್ಲಿ ಕರ್ಮ ಮಾಡದೆ ಇರುವುದು ಸಾಧ್ಯವೋ? ಕರ್ಮವಿಲ್ಲದೆ ಸಂಪೂರ್ಣ ಅಂತರಂಗದ ಸ್ಥಿತಿಯಲ್ಲಿರುವುದು ಸಾಧ್ಯವೋ? ಇತ್ಯಾದಿ ಪ್ರಶ್ನೆಗಳಿಗೆ ಮುಂದೆ ಕೃಷ್ಣ ವಿವರಣೆ ಕೊಟ್ಟಿದ್ದಾನೆ.

Bhagavad Gita Kannada Chapter-03 Shloka 10-13


ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋವಾಚ ಪ್ರಜಾಪತಿಃ ।
ಅನೇನ ಪ್ರಸವಿಷ್ಯಧ್ವಮೇಷ ವೋsಸ್ತ್ವಿಷ್ಟಕಾಮಧುಕ್         ॥೧೦॥

ಸಹ ಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರಾ ಉವಾಚ ಪ್ರಜಾಪತಿಃ
ಅನೇನ ಪ್ರಸವಿಷ್ಯಧ್ವಮ್ ಏಷ ವಃ ಅಸ್ತು ಇಷ್ಟ ಕಾಮ ಧುಕ್- ಹಿಂದೆ ಪ್ರಜಾಪತಿ ಭಗವಂತನ ಪೂಜಾ ರೂಪವಾದ ಕರ್ಮದ ಜೊತೆಗೆ ಮಾನವರನ್ನು ಹುಟ್ಟಿಸಿ ಹೀಗೆ ಹೇಳಿದನು: ಇದರಿಂದ ಬೆಳವಣಿಗೆ ಹೊಂದಿ, ಇದು ನಿಮ್ಮ ಬಯಕೆಯನ್ನು ಈಡೇರಿಸಲಿ.

ಹಿಂದೆ ಚತುರ್ಮುಖ- ಚಿಂತನ ಶೀಲ ಮಾನವರನ್ನು ಸೃಷ್ಠಿ ಮಾಡಿ, ಅವರಿಗಾಗಿ ಅವರು ಆಚರಿಸಬೇಕಾದ ಯಜ್ಞವನ್ನು ಸೃಷ್ಠಿ ಮಾಡಿದ. ಹಾಗು ಹೇಳಿದ " ಈ ಪೂಜಾ ವಿಧಾನದಿಂದ ಬೇಕಾದ್ದನ್ನು ಪಡೆಯಿರಿ. ಇದು ನೀವು ಬಯಸಿದ ಅಭೀಷ್ಟವನ್ನು ಕೊಡುವ ಕಾಮದೇನು" ಎಂದು. ಹಿಂದೆ ಹೇಳಿದಂತೆ  'ಯಜ್ಞ' ಎಂದರೆ 'ದೇವರನ್ನು ಉಪಾಸನೆ ಮಾಡುವ ವಿಧಾನ'; 'ದಾನ' ಹಾಗು 'ಸಂಗತೀಕರಣ' ಕೂಡಾ ಯಜ್ಞ. ಇಲ್ಲಿ ದಾನ ಎನ್ನುವುದಕ್ಕೆ ವಿಶೇಷ ಅರ್ಥವಿದೆ. ತನ್ನಲ್ಲಿ ಬೇಕಾದಷ್ಟು ಇದ್ದು,  ತನಗೆ ಬೇಡವಾದದ್ದನ್ನು ಇನ್ನೊಬ್ಬನಿಗೆ ಕೊಡುವುದು ದಾನವಲ್ಲ. ತನ್ನಲ್ಲಿ ಎರಡು ಹೊತ್ತಿನ ಊಟವಿದ್ದು, ಇನ್ನೊಬ್ಬನಲ್ಲಿ ಒಂದು ಹೊತ್ತಿನ ಊಟ ಕೂಡಾ ಇಲ್ಲದಿದ್ದಾಗ, ಅವನಿಗೆ ತನ್ನಲ್ಲಿರುವ ಊಟವನ್ನು ಕೊಟ್ಟು ಹಂಚಿ ತಿನ್ನುವುದು ನಿಜವಾದ ದಾನ. ಇನ್ನೊಬ್ಬರ ಕಷ್ಟದಲ್ಲಿ ಕರಗುವುದು ನಿಜವಾದ ದಾನ. ಇನ್ನು ಸಂಗತೀಕರಣ ಎಂದರೆ ಜ್ಞಾನಾರ್ಜನೆಗಾಗಿ ಒಂದು ಕಡೆ ಕಲೆಯುವುದು. ಪ್ರವಚನ ಒಂದು ಸಂಗತೀಕರಣ.

ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ ।
ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ          ॥೧೧॥

ದೇವಾನ್ ಭಾವಯತಾ ಅನೇನ ತೇ ದೇವಾಃ ಭಾವಯಂತು ವಃ
ಪರಸ್ಪರಮ್  ಭಾವಯಂತಃ ಶ್ರೇಯಃ ಪರಮ್ ಅವಾಪ್ಸ್ಯಥ-ಇದರಿಂದ ದೇವತೆಗಳಿಗೆ ನೆರವಾಗಿ. ಆ ದೇವತೆಗಳು ನಿಮಗೆ ನೆರವಾಗಲಿ. ಒಬ್ಬರಿಗೊಬ್ಬರು ನೆರವಾಗುತ್ತ ಹಿರಿಯ ಹಿತವನ್ನು ಪಡೆಯಿರಿ.

ಈ ರೀತಿ ಯಜ್ಞದ ಸೃಷ್ಟಿ ಮಾಡಿದ ಚತುರ್ಮುಖ ಹೇಳಿದನಂತೆ: ಯಜ್ಞಗಳ ಮೂಲಕ ನೀವು  ದೇವತೆಗಳಿಗೆ ನೇರವಾಗಿ ಹಾಗು ಅವರು ನಿಮ್ಮ ಅಭೀಷ್ಟವನ್ನು ಪೂರೈಸಲಿ" ಎಂದು.  "ಹೀಗೆ ಒಬ್ಬರಿಗೊಬ್ಬರು ನೆರವಾಗುತ್ತಾ ಹಿರಿಯ ಹಿತವನ್ನು ಪಡೆಯಿರಿ" ಎಂದನಂತೆ. ನಾವು ನಮಗೆ ಬೇಕಾದುದನ್ನು ನಾವೇ ಸೃಷ್ಟಿಸಿ ಕೊಳ್ಳುತ್ತೇವೆ ಎನ್ನುವುದು ನಮ್ಮ ಭ್ರಮೆ. ನಾವು ಬಿತ್ತಿ ಬೆಳೆಯಬೇಕು ಎಂದರೆ ಪ್ರಕೃತಿಯಲ್ಲಿ ವಾತಾವರಣ ವೈಪರಿತ್ಯ ಆಗಬಾರದು. ಇಲ್ಲದಿದ್ದರೆ ನಮಗೆ ಏನನ್ನೂ ಬೆಳೆಯಲು ಸಾಧ್ಯವಿಲ್ಲ.  ಪ್ರತಿಯೊಂದು ಕ್ರಿಯೆಯ ಹಿಂದೆ ಅನೇಕ ದೇವತಾ ಶಕ್ತಿಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ನಮ್ಮ ಪ್ರತಿಯೊಂದು ಅಂಗಾಂಗಳಿಗೂ ಒಬ್ಬ ಅಭಿಮಾನಿ ದೇವತೆ ಇದ್ದಾನೆ. ಆ ಶಕ್ತಿ ಕೆಲಸ ಮಾಡದೆ ಇದ್ದರೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಹೀಗೆ ನಮಗೆ ಬದುಕು ಕೊಟ್ಟು, ನೋಡುವ ಕಣ್ಣು, ಕೇಳುವ ಕಿವಿ ಕೊಟ್ಟು, ಒಳ್ಳೆಯದನ್ನು ನೋಡುವ, ಒಳ್ಳೆಯದನ್ನು ಕೇಳುವ ಬುದ್ಧಿ ಕೊಟ್ಟು, ಈ ಎಲ್ಲಾ ಕಾರ್ಯವನ್ನು ಒಂದು ದೇವತೆಗಳ ಸಮೂಹ ನಿರಂತರ ನಡೆಸುವಂತೆ ಭಗವಂತನ ವ್ಯವಸ್ಥೆ ಇದೆ. ಹೀಗಿರುವಾಗ ನಾವು ಇಂತಹ ದೇವತಾ ಶಕ್ತಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಹೀಗೆ ಒಬ್ಬರಿಗೊಬ್ಬರು ನೆರವಾದಾಗ ನಾವು ಹಿತವನ್ನು ಕಾಣಲು ಸಾಧ್ಯ.
ಸಾಮಾನ್ಯವಾಗಿ ಅಗ್ನಿ ಮುಖದಲ್ಲಿ ಮಾಡುವ ಪೂಜೆಯನ್ನು ಯಜ್ಞ ಎನ್ನುವುದು ವಾಡಿಕೆ. ದೇವರ ಪೂಜೆಯಲ್ಲಿ ಅಗ್ನಿ ಅತ್ಯಂತ ಮುಖ್ಯ ಪ್ರತೀಕ. ಏಕೆಂದರೆ ಅಗ್ನಿ ಅತ್ಯಂತ ಶುದ್ಧ. ಅಗ್ನಿಗೆ ಏನನ್ನು ಹಾಕಿದರೂ ಅದು ಶುದ್ಧವಾಗುತ್ತದೆ. ಅಗ್ನಿ  ಭಗವಂತನ ಪ್ರತೀಕ. ಭಗವಂತನಿಗೆ ಆಕಾರವಿಲ್ಲ, ಆತ ಬೆಳಕಿನ ಪುಂಜ ಹಾಗು ಪವಿತ್ರ. ಇದೇ ಗುಣವನ್ನು ಅಗ್ನಿಯಲ್ಲಿ ನಾವು ಕಾಣಬಹುದು. ಇನ್ನು ನಾವು ಭಗವಂತನಿಗೆ ಏನನ್ನಾದರೂ ತಿನ್ನಿಸಬೇಕು ಎಂದರೆ ಅದು ಅಗ್ನಿ ಮುಖೇನ ಮಾತ್ರ ಸಾಧ್ಯ.  ಯಜ್ಞದಲ್ಲಿ ನಾವು ಪೂಜೆ ಮಾಡುವುದು ಬೆಂಕಿಯನ್ನಲ್ಲ, ಅಗ್ನಿ ಮುಖೇನ ಅಗ್ನಿನಾರಾಯಣನ ಪೂಜೆ-ಯಜ್ಞ. ಈ ಅರಿವಿಲ್ಲದೆ ಯಜ್ಞವನ್ನು ಮಾಡಿದರೆ ಹೊಗೆ ತಿಂದು ಸಾಯಬೇಕಾದೀತು! ನಮ್ಮ ಪೂಜೆ ಅಗ್ನಿನಾರಾಯಣನಿಂದ ಸೂರ್ಯ ನಾರಾಯಣನನ್ನು ಸೇರಿ, ಮರಳಿ ನರನಾರಾಯಣನನ್ನು ತಲುಪುತ್ತದೆ. ಇದಕ್ಕಾಗಿ ದೇವರನ್ನು ಕುರಿತು ಮಾಡುವ ಯಜ್ಞ ಯಾವಾಗಲೂ ಹಗಲು ಹೊತ್ತಿನಲ್ಲೇ ನಡೆಯುತ್ತದೆ. ಅಗ್ನಿಯ ಏಳು ಬಣ್ಣಗಳ ಮುಖೇನ ಸೂರ್ಯನ ಏಳು ಬಣ್ಣಗಳಲ್ಲಿ ವಿಲೀನವಾಗುವ ಯಜ್ಞಶಕ್ತಿ, ವಾತಾವರಣವನ್ನು ಸೇರಿ ಲೋಕಕ್ಕೆ ಮಂಗಳಮಂಗಳವನ್ನುಂಟುಮಾಡುತ್ತದೆ. ಇದನ್ನು ಇಲ್ಲಿ ಕೊಡು-ಕೊಂಡುಕೊಳ್ಳುವ ಕ್ರಿಯೆ ಎಂದಿದ್ದಾರೆ.

ಇಷ್ಟಾನ್ ಭೋಗಾನ್ ಹಿ ವೋ ದೇವಾ ದಾಸ್ಯಂತೇ ಯಜ್ಞಭಾವಿತಾಃ ।
ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸಃ ॥೧೨॥

ಇಷ್ಟಾನ್ ಭೋಗಾನ್ ಹಿ ವಃ ದೇವಾಃ ದಾಸ್ಯಂತೇ ಯಜ್ಞ ಭಾವಿತಾಃ
ತೈಃ ದತ್ತಾನ್ ಅಪ್ರದಾಯ ಏಭ್ಯಃ  ಯಃ ಭುಂಕ್ತೇ ಸ್ತೇನಃ ಏವ ಸಃ -ಇಂಥ ಯಜ್ಞದಿಂದ ಬಲಗೊಂಡ ದೇವತೆಗಳು ನೀವು ಬಯಸಿದ ಬಯಕೆಗಳನ್ನು ಈಡೇರಿಸುತ್ತಾರೆ. ಅವರು ನೀಡಿದ್ದನ್ನು ಅವರಿಗೆ ನೀಡದೆ ತಿನ್ನುವವನು ಕಳ್ಳನೇ ಸರಿ.

ನಮಗೆ ಏನು ಬೇಕೋ ಅದನ್ನು ಈ ಪ್ರಕೃತಿ ಕೊಡುತ್ತದೆ. ಹಾಗಿರುವಾಗ ಅದನ್ನು ಉಪಯೋಗಿಸುವ ನಮಗೆ ಕೃತಜ್ಞತೆ ಬೇಕು. ಅದನ್ನು ಬಿಟ್ಟು 'ಇದು ನನ್ನದು' ಎಂದು ಅಧಿಕಾರ ಅಹಂಕಾರ ತೋರಿದರೆ ಉದ್ಧಾರವಿಲ್ಲ. ಪ್ರಕೃತಿ ಕೊಟ್ಟಿದ್ದನ್ನು ಕೃತಜ್ಞತೆ ಸಲ್ಲಿಸದೆ ಪಡೆದುಕೊಂಡು 'ಇದು ನನ್ನದು' ಎನ್ನುವವನು ಕಳ್ಳನೇ ಸರಿ!

ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ  ಸರ್ವಕಿಲ್ಬಿಷೈಃ ।
ಭುಂಜತೇ  ತೇ ತ್ವಘಂ ಪಾಪಾ ಯೇ ಪಚಂತ್ಯಾತ್ಮಕಾರಣಾತ್      ॥೧೩॥

ಯಜ್ಞ ಶಿಷ್ಟ ಅಶಿನಃ ಸಂತಃ  ಮುಚ್ಯಂತೇ  ಸರ್ವ ಕಿಲ್ಬಿಷೈಃ ।
ಭುಂಜತೇ  ತೇ ತು ಅಘಮ್  ಪಾಪಾಃ ಯೇ ಪಚಂತಿ ಆತ್ಮ ಕಾರಣಾತ್- ದೇವತೆಗಳಿಗೆ ಸಲ್ಲಿಸಿ ಉಳಿದಿದ್ದನ್ನು ಉಣ್ಣುವ ಸಜ್ಜನರು ಎಲ್ಲಾ ಪಾಪಗಳಿಂದ ಪಾರಾಗುತ್ತಾರೆ. ತಮಗಾಗಿ ಅನ್ನ ಬೇಯಿಸುವವರು ತಮ್ಮ ಪಾಪವನ್ನೇ ತಾವು ತಿನ್ನುತ್ತಾರೆ.

ಯಾರು ಪಡೆದಿದ್ದನ್ನು ಭಗವದರ್ಪಣೆ ಮಾಡಿ ಅದನ್ನು ಭಗವಂತನ ಪ್ರಸಾದವೆಂದು ಸ್ವೀಕರಿಸುತ್ತಾರೆ, ಅವರು  ಬದುಕಿನ ಎಲ್ಲಾ ಕೊಳೆಗಳಿಂದ ಬಿಡುಗಡೆಗೊಂಡು ಸ್ವಚ್ಛ  ಬದುಕನ್ನು ಬಾಳುತ್ತಾರೆ. ಯಾರ ಮನೆಯಲ್ಲಿ ತಮಗೋಸ್ಕರ ಅನ್ನ ಬೇಯುತ್ತದೋ ಅವನು ತಿನ್ನುವುದು ಅನ್ನವನ್ನಲ್ಲ ಪಾಪವನ್ನು. ನಮಗೆ ಈ ಆಹಾರವನ್ನು ಕೊಟ್ಟವನು ಆ ಭಗವಂತ. ಅವನಿಗೆ ನಾವು ಮೊದಲು ಕೃತಜ್ಞತೆಯನ್ನು ತೋರಬೇಕು. ಅದನ್ನು ಬಿಟ್ಟು ಇದು ನನ್ನ ಸಂಪಾದನೆ, ನಾನ್ಯಾಕೆ ಇದನ್ನು ಇನ್ನೊಬ್ಬರಿಗೆ ಹಂಚಬೇಕು ಎನ್ನುವ ಭಾವನೆಯನ್ನು ಬೆಳೆಸಿಕೊಂಡರೆ ನಾವು ನಮ್ಮ ಪಾಪದ ಗಂಟನ್ನು ಬೆಳೆಸಿಕೊಳ್ಳುತ್ತೇವೆ. ಸೃಷ್ಟಿಯ ಉದ್ದೇಶ(Divine Will)ದಂತೆ ನೆಡೆದುಕೊಳ್ಳದೇ ಇದ್ದರೆ ನಾವು ಗಳಿಸಿದ್ದು ಸಹ ನಮಗೆ ದಕ್ಕುವುದಿಲ್ಲ.

Saturday, March 26, 2011

Bhagavad Gita Kannada Chapter-03 Shloka 08-09


ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹ್ಯಕರ್ಮಣಃ ।
ಶರೀರಯಾತ್ರಾsಪಿ ಚ ತೇ ನ ಪ್ರಸಿದ್ಧ್ಯೇದಕರ್ಮಣಃ ॥೮॥
ನಿಯತಮ್  ಕುರು ಕರ್ಮ ತ್ವಮ್  ಕರ್ಮ ಜ್ಯಾಯಃ  ಹಿ  ಅಕರ್ಮಣಃ
ಶರೀರ ಯಾತ್ರಾ ಅಪಿ ಚ ತೇ ನ ಪ್ರಸಿದ್ಧ್ಯೇತ್ ಅಕರ್ಮಣಃ -ನಿನ್ನ ಪಾಲಿನ ಕರ್ಮ ನೀನು ಮಾಡು. ನಿಷ್ಕ್ರೀಯತೆಗಿಂತ ಕರ್ಮ ಮೇಲಲ್ಲವೇ ? ನಿಷ್ಕ್ರೀಯನಾದರೆ ನಿನ್ನ ಬಾಳ ಬಂಡಿಯ ಪಯಣವು ಸಾಗದು.

ಕೃಷ್ಣ ಹೇಳುತ್ತಾನೆ: 'ನೀನು ನಿನ್ನ ಜೀವ ಸ್ವಭಾವಕ್ಕೆ ಅನುಗುಣವಾದ, ಜ್ಞಾನಕ್ಕೆ ಪೂರಕವಾದ ನಿಯತ ಕರ್ಮವನ್ನು ಮಾಡು' ಎಂದು. ಇಲ್ಲಿ ಅರ್ಜುನನನ್ನು ನೋಡಿದರೆ, ಆತನ ಜೀವ ಸ್ವಭಾವ ಅನ್ಯಾಯದ ವಿರುದ್ಧ ಹೋರಾಡಿ ದೇಶದ ಪ್ರಜೆಗಳ ರಕ್ಷಣೆ ಮಾಡುವ ಕ್ಷತ್ರಿಯ ಸ್ವಭಾವ. ಅದನ್ನು ಬಿಟ್ಟು, ದೇಶದಲ್ಲಿ ಅನ್ಯಾಯ ತಾಂಡವವಾಡುತ್ತಿರುವಾಗ, ಜ್ಞಾನ ಮಿಗಿಲೆಂದು ತಪಸ್ಸನ್ನಾಚರಿಸಿದರೆ ಅದು ನಿಜವಾದ ಯೋಗವೆನಿಸುವುದಿಲ್ಲ. ಕೃಷ್ಣ ಹೇಳುತ್ತಾನೆ, “ಎಂದೂ ನಿಷ್ಕ್ರೀಯನಾಗಬೇಡ,ನಿನ್ನ ಕರ್ಮವನ್ನು ನೀನು ಮಾಡು,ಅದರಿಂದ ಏನು ಸಿಕ್ಕಿತೋ ಅದನ್ನು ಅನುಭವಿಸು. ಆದರೆ ಮಾಡುವ ಕರ್ಮ ಜ್ಞಾನಕ್ಕೆ ಪೂರಕವಾಗಿರಲಿ. ಭಗವಂತನ ಎಚ್ಚರ ಯಾವಾಗಲೂ ಇರಲಿ” ಎಂದು. ‘ಭಗವಂತ ಈ ಕರ್ಮವನ್ನು ನನ್ನ ಕೈಯಿಂದ ಮಾಡಿಸುತ್ತಿದ್ದಾನೆ, ಇದು ಅವನಿಗರ್ಪಿತ’ ಎನ್ನುವ ಭಾವನೆಯಿಂದ ಕರ್ಮ ಮಾಡಿದಾಗ ಯಾವ ಕರ್ಮವೂ ನಮಗೆ ಬಂಧಕವಾಗುವುದಿಲ್ಲ.
ನಿನ್ನ   ಪಾಲಿನ ಕರ್ಮ ಮಾಡು, ಬಂದುದನುಣ್ಣು, ಹರಿಯ ಚರಣದ ಅರಿವು ತಪ್ಪದಿರಲಿ.
ಹರಿಯೇ ಪರ ದೈವತವು, ಹರಿಯೇ ಗುರು ಆಸರೆಯು, ಹರಿಯೊಬ್ಬನೆ ಜಗದ ತಾಯಿ ತಂದೆ.
ನಾವು ಒಂದು  ದೇಹದಲ್ಲಿರುವಷ್ಟು ಕಾಲ ಕರ್ಮ ಅನಿವಾರ್ಯ. ಅಪರೋಕ್ಷ ಜ್ಞಾನ ಬಂದಾಗಲೂ ಕೂಡಾ ಕರ್ಮ ನಿರಂತರ. ಈ ರೀತಿ ಕೃಷ್ಣ  ಕರ್ಮ ಸಿದ್ಧಾಂತವನ್ನು ಈ ಶ್ಲೋಕದ ಮುಖೇನ ನಮ್ಮ ಮುಂದೆ ಬಿಚ್ಚಿಟ್ಟಿದ್ದಾನೆ.

ಇಲ್ಲಿ ಒಂದು ವಿಷಯವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಶಾಸ್ತ್ರಗಳು ಹೇಳುವ ಪ್ರಕಾರ ಕರ್ಮ ಬಂಧಕ . ಪುನಃ ಕರ್ಮ ಮಾಡುವುದರಿಂದ ನಾವು ಕರ್ಮ ಚಕ್ರದಲ್ಲಿ ಸಿಲುಕುತ್ತೇವೆ. ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ- ಕರ್ಮ ಅನಿವಾರ್ಯ ಎಂದು.  ಹಾಗಿದ್ದರೆ ಮೋಕ್ಷದ ಮಾರ್ಗ ಯಾವುದು? ನಮ್ಮ ಈ ಪ್ರಶ್ನೆಗೆ ಮುಂದಿನ ಶ್ಲೋಕದಲ್ಲಿ ಸ್ಪಷ್ಟ ಉತ್ತರವಿದೆ.

ಯಜ್ಞಾರ್ಥಾತ್ ಕರ್ಮಣೋsನ್ಯತ್ರ ಲೋಕೋsಯಂ ಕರ್ಮಬಂಧನಃ ।
ತದರ್ಥಂ ಕರ್ಮ ಕೌಂತೇಯ ಮುಕ್ತಸಂಗಃ ಸಮಾಚರ ॥೯॥

ಯಜ್ಞಾ ಅರ್ಥಾತ್ ಕರ್ಮಣಃ ಅನ್ಯತ್ರ ಲೋಕಃ ಅಯಮ್  ಕರ್ಮ ಬಂಧನಃ
ತತ್ ಅರ್ಥಮ್  ಕರ್ಮ ಕೌಂತೇಯ ಮುಕ್ತಸಂಗಃ ಸಮಾಚರ-- ಭಗವಂತನ ಪೂಜಾ ರೂಪವಾದ ಇಂಥ ಕರ್ಮಕ್ಕಿಂತ ಬೇರೆಯಾದ ನಡೆಯಲ್ಲಿ ಮಾತ್ರ ಸಾಧಕ ಕರ್ಮದ ಕಟ್ಟಿಗೆ ಸಿಲುಕುತ್ತಾನೆ. ಓ ಕೌಂತೇಯ, ಫಲದ ನಂಟು ತೊರೆದು, ಭಗವಂತನ ಪೂಜೆಯೆಂದು ಕರ್ಮ ಮಾಡು.

ಈ ಲೋಕ ಕರ್ಮದ ಬಂಧನಕ್ಕೆ ಒಳಗಾಗಿದೆ. ಆದರೆ ಎಲ್ಲಾ ಕರ್ಮವೂ ಬಂಧಕ ಅಲ್ಲ. ತಿಳಿದು ಮಾಡುವ ಕರ್ಮ ಎಂದೂ ಬಂಧಕವಾಗುವುದಿಲ್ಲ. ನಾವು ಮಾಡುವ ಕರ್ಮವನ್ನು ಭಗವಂತನ ಪ್ರಜ್ಞೆಯಿಂದ ಮಾಡಬೇಕು. ನಾವು ಸೂತ್ರದ ಗೊಬೆಗಳಿದ್ದಂತೆ. ಭಗವಂತ ಸೂತ್ರದಾರ. ಈ ಎಚ್ಚರದಿಂದ ನಾವು ಕರ್ಮ ಮಾಡಿದಾಗ ನಮ್ಮ ಪ್ರತಿಯೊಂದು ಕರ್ಮವೂ ಕೂಡಾ ಯಜ್ಞವಾಗುತ್ತದೆ.  ಉದಾಹರಣೆಗೆ ನಾವು ಉಸಿರಾಡುತ್ತೇವೆ. ಹೊರಗಿನಿಂದ ಆಮ್ಲಜನಕವನ್ನು ಹೀರಿ ಕಾರ್ಬನ್  ಡೈ ಆಕ್ಸೈಡನ್ನು ಹೊರ ಹಾಕುತ್ತೇವೆ. ನಮ್ಮೊಳಗಿರುವ ಆ ವಿಶೇಷ ಯಂತ್ರದ ಕಲ್ಪನೆ ಕೂಡಾ ನಮಗಿರುವುದಿಲ್ಲ. ನಮಗೆ ಅರಿವಿಲ್ಲದಂತೆ ಈ ಕ್ರಿಯೆ ನಡೆಯುತ್ತಿರುತ್ತದೆ.  ನಾವು ಬಿಟ್ಟ ಗಾಳಿಯನ್ನು ಗಿಡಗಳು ಸೇವಿಸಿ ನಮಗೆ ಬೇಕಾದ ಆಮ್ಲಜನಕವನ್ನು ಕೊಡುತ್ತವೆ. ಇದೆಲ್ಲವೂ ಆ ಭಗವಂತನ ವ್ಯವಸ್ಥೆ. ಈ ಕಾರಣಕ್ಕಾಗಿ ಭಾರತೀಯರು ಅತಿಹೆಚ್ಚು ಆಮ್ಲಜನಕವನ್ನು ಕೊಡುವ ಅಶ್ವತ್ಥವೃಕ್ಷವನ್ನು ಪೂಜಿಸುತ್ತಾರೆ.  ಆ ವೃಕ್ಷದಲ್ಲಿ ಭಗವಂತನ ವಿಶೇಷ ವಿಭೂತಿ ಅಡಗಿದೆ. ಈ ರೀತಿ ನಾವು ನಮ್ಮ ಪ್ರತಿಯೊಂದು ಕಾರ್ಯದಲ್ಲೂ  ಭಗವಂತನ ಹಿರಿಮೆಯನ್ನು ತಿಳಿದಾಗ, ನಾವು ಮಾಡುವ ಕರ್ಮ-ಕರ್ಮಯೋಗವಾಗುತ್ತದೆ. ಹಾಗು ಅದು ಎಂದೂ ಬಂಧಕವಾಗುವುದಿಲ್ಲ.
ಇಲ್ಲಿ ಬಳಕೆಯಾದ 'ಯಜ್ಞ' ಪದದ ಅರ್ಥ 'ಯಜ-ದೇವ-ಪೂಜಾ' ಅಂದರೆ ದೇವರ ಪೂಜೆ ಎಂದರ್ಥ. ದೇವರನ್ನು ಕೂಡಾ ಯಜ್ಞ ಎಂದು ಕರೆಯುತ್ತಾರೆ.  ಆದ್ದರಿಂದ ಕೇವಲ ಅಗ್ನಿ ಮುಖದಲ್ಲಿ ಮಾಡುವ  ಪೂಜೆ ಮಾತ್ರ ಯಜ್ಞವಲ್ಲ. ನಮ್ಮ ಪ್ರತಿಯೊಂದು ಕರ್ಮವನ್ನು  ಭಗವದ್ಪ್ರಜ್ಞೆಯಿಂದ ಮಾಡಿದಾಗ ಅದು ಯಜ್ಞವಾಗುತ್ತದೆ. ಇಲ್ಲಿ ನಾವು ಬಿಡಬೇಕಾದದ್ದು ಕರ್ಮವನ್ನಲ್ಲ, ಬದಲಿಗೆ ನಾವು ಕರ್ಮದ ಬಗ್ಗೆ ಇರುವ ನಮ್ಮ  ಭಾವನೆಯನ್ನು ಬದಲಿಸಿ ಕೊಳ್ಳಬೇಕು ಅಷ್ಟೆ. ಕರ್ಮ ಎಂದರೆ 'ಕರ+ಮ' ಅಂದರೆ ಭಗವಂತನ ರಾಜ್ಯದ ಪ್ರಜೆಗಳಾದ ನಾವು ಆತನಿಗೆ ಸಲ್ಲಿಸುವ 'ಕರ' ಅಥವಾ ಕಂದಾಯವೇ ಕರ್ಮ.  ಭಗವಂತ ಎಂದೂ ದುಡ್ಡಿನ ಕಂದಾಯವನ್ನು ಪಡೆಯುವುದಿಲ್ಲ. ಆತನ ಕರ ಸಂದಾಯವನ್ನು ನಾವು- ನಮ್ಮನ್ನು ಸಮಾಜ ಕ್ರಿಯೆಯಲ್ಲಿ ತೊಡಗಿಸಿಗೊಂಡು ಸಲ್ಲಿಸಬೇಕು. ಈ ಭಾವನೆ ಬಂದಾಗ ಕರ್ಮ ಬಂಧಕವಾಗದೆ ಮೋಕ್ಷ ಮಾರ್ಗವಾಗುತ್ತದೆ.
ಇಲ್ಲಿ  ಕೃಷ್ಣ ಅರ್ಜುನನನ್ನು 'ಕೌಂತೇಯ' ಎಂದು ಸಂಬೋಧಿಸಿದ್ದಾನೆ. ಈ ರೀತಿ ಇಲ್ಲಿ ಸಂಬೋಧಿಸಲು ವಿಶೇಷ ಕಾರಣವಿದೆ.  ಕುಂತಿ  ಅಷ್ಟು ದೊಡ್ಡ ಮನೆತನದಲ್ಲಿ ಹುಟ್ಟಿ ಬೆಳೆದರೂ ಕೂಡಾ,  ಆಕೆ ಎಂದೂ ಭೋಗದ ಆಸೆಗೆ ಬಲಿಬಿದ್ದವಳಲ್ಲ. ತನ್ನ ಯೌವನವನ್ನು ಕಾಡಿನಲ್ಲಿ ಕಳೆದ ಆಕೆ, ತನ್ನ ಮಕ್ಕಳು ಧೈರ್ಯಗೆಟ್ಟಾಗ ಧೈರ್ಯ ತುಂಬಿದ ಧೀರ ಮಹಿಳೆ.  ಆಕೆ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಆದರೆ ಆಕೆ ಕೃಷ್ಣನಲ್ಲಿ “ನನಗೆ ಕಷ್ಟವನ್ನೇ ಕೊಡು, ಏಕೆಂದರೆ ಆಗ ನಮಗೆ ಸದಾ ನಿನ್ನೊಂದಿಗಿರುವ ಭಾಗ್ಯವಿರುತ್ತದೆ” ಎಂದಾಕೆ!  ಕರ್ತವ್ಯ ನಿಷ್ಠೆಯನ್ನು ಜಗತ್ತಿಗೆ ತೋರಿದ ಧೀರ ಮಹಿಳೆ ಆಕೆ. ಇಂಥ ಮಹಾ ಮಹಿಳೆಯ ಮಗನಾದ ನಿನಗೆ ಕರ್ಮ ಯೋಗದ ಬಗ್ಗೆ ತಿಳಿದೇ ಇದೆ  ಎನ್ನುವ ಧ್ವನಿಯಲ್ಲಿ ಕೃಷ್ಣ ಅರ್ಜುನನನ್ನು 'ಕೌಂತೇಯ' ಎಂದು ಸಂಬೋಧಿಸಿದ್ದಾನೆ.

ಈ ರೀತಿ ಜ್ಞಾನವನ್ನು ಮತ್ತು ಕರ್ಮವನ್ನು ಹೇಗೆ ಸಮನ್ವಯಗೊಳಿಸಿಕೊಂಡು ಬದುಕಬೇಕು ಎನ್ನುವುದನ್ನು ಹೇಳಿದ ಕೃಷ್ಣ, ಮುಂದೆ ಅದು ಸ್ಪಷ್ಟವಾಗಿ ಅರ್ಥವಾಗುವಂತೆ ಒಂದು ಕಥೆಯ ರೂಪದಲ್ಲಿ ವಿವರಣೆಯನ್ನು ಕೊಡುತ್ತಾನೆ. ಆ ವಿವರಣೆಯನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.