Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Wednesday, March 2, 2011

Bhagavad Gita Kannada Chapter-02 Shloka 42-44

ಯಾಮಿಮಾಂ ಪುಷ್ಪಿತಾಂ ವಾಚಂ ಪ್ರವದಂತ್ಯವಿಪಶ್ಚಿತಃ
ವೇದವಾದರತಾಃ ಪಾರ್ಥ ನಾನ್ಯದಸ್ತೀತಿ ವಾದಿನಃ  ೪೨

ಯಾಮ್  ಇಮಾಮ್ ಪುಷ್ಪಿತಾಮ್  ವಾಚಮ್  ಪ್ರವದಂತಿ ಅವಿಪಶ್ಚಿತಃ
ವೇದವಾದರತಾಃ ಪಾರ್ಥ ನ ಅನ್ಯತ್ ಅಸ್ತಿ ಇತಿ  ವಾದಿನಃ - -ಓ ಪಾರ್ಥ, ಅರೆಬರೆ ತಿಳಿದವರು ಹೇಳುತ್ತಾರೆ: ಈ ವೇದವಾಣಿ ಸ್ವರ್ಗವೆಂಬ ಹೂಬಿಡುವ ಬಳ್ಳಿ.   ಹುಟ್ಟು,  ಕರ್ಮದ ಕಟ್ಟುಗಳ ಸಂಸಾರವೆ ಇದರ ಹಣ್ಣು.

ಕಾಮಾತ್ಮಾನಃ ಸ್ವರ್ಗಪರಾ ಜನ್ಮಕರ್ಮಫಲಪ್ರದಾಮ್ ।
ಕ್ರಿಯಾವಿಶೇಷಬಹುಲಾಂ ಭೋಗೈಶ್ವರ್ಯಗತಿಂ ಪ್ರತಿ    ॥೪೩॥

ಕಾಮ ಆತ್ಮಾನಃ ಸ್ವರ್ಗ ಪರಾಃ  ಜನ್ಮ ಕರ್ಮ ಫಲ ಪ್ರದಾಮ್ 
ಕ್ರಿಯಾ ವಿಶೇಷ ಬಹುಲಾಮ್  ಭೋಗ ಐಶ್ವರ್ಯ ಗತಿಮ್  ಪ್ರತಿ - ಐಷಾರಾಮದ ಐಸಿರಿಯ ಬದುಕಿಗಾಗಿ ಅದರ ತುಂಬ ಬಗೆ ಬಗೆಯ ಕರ್ಮ ಕಲಾಪಗಳು. ಅವರು ವೇದದ ಹೊರನೋಟದ ಅರ್ಥದಲ್ಲೇ ನಿಂತುಬಿಡುವರು. [ವೇದದಲ್ಲಿ ವಿವಾದ ಬೆಳೆಸುವವರು, ಅಥವಾ ಅರ್ಥವನ್ನರಿಯದೆ ಬರಿದೆ ಉರು ಹೊಡೆಯುವವರು] ಅದರಾಚೆ ಏನೂ ಇಲ್ಲ ಎನ್ನುವವರು. ಬಗೆಯಲ್ಲಿ ಆಸೆ ತುಂಬಿ ಸ್ವರ್ಗದ ಕನಸು ಕಾಣುವವರು.

ಭೋಗೈಶ್ವರ್ಯಪ್ರಸಕ್ತಾನಾಂ ತಯಾSಪಹೃತಚೇತಸಾಮ್         
ವ್ಯವಸಾಯಾತ್ಮಿಕಾ ಬುದ್ಧಿಃ ಸಮಾಧೌ ನ ವಿಧೀಯತೇ  ೪೪

ಭೋಗ ಐಶ್ವರ್ಯ ಪ್ರಸಕ್ತಾನಾಮ್  ತಯಾ ಅಪಹೃತ ಚೇತಸಾಮ್   
ವ್ಯವಸಾಯ ಆತ್ಮಿಕಾ ಬುದ್ಧಿಃ ಸಮಾಧೌ ನ ವಿಧೀಯತೇ- ಐಷಾರಾಮದ ಐಸಿರಿಯಲ್ಲಿ ಮುಳುಗಿ, ವೇದ ಓದಿಯೇ ತಲೆ ಕೆಡಿಸಿಕೊಂಡ ಇಂಥವರಿಗೆ, ಹದಗೊಂಡ ತಿಳಿನುಡಿ ಕೂಡ ಮನಸ್ಸಿನ ಸಮಸ್ಥಿತಿಗೆ ನೆರವಾಗದು.

ಮೇಲಿನ ಮೂರು ಶ್ಲೋಕ ಅತ್ಯಂತ ಮುಖ್ಯವಾದುದು. ಹೆಚ್ಚಿನವರಿಗೆ ಇದು ಅರ್ಥವೇ ಆಗುವುದಿಲ್ಲ. ಅರ್ಥವಾಗದೆ ಈ ಶ್ಲೋಕವನ್ನು ಟೀಕಿಸಿದವರೂ ಇದ್ದಾರೆ! ಪ್ರಾಚೀನ ಗ್ರಂಥಗಳಲ್ಲಿ, ವೇದಗಳಲ್ಲಿ, ಶ್ರುತಿಗಳಲ್ಲಿ, ಕೇವಲ ಅಧ್ಯಾತ್ಮವಲ್ಲದೆ ಅನೇಕ ಲೌಕಿಕ ವಿಷಯಗಳು ತುಂಬಿಕೊಂಡಂತೆ ಕಾಣುತ್ತದೆ.  ಬರಿಯ ವೇದ ಗ್ರಂಥಗಳನ್ನು ಓದುವುದರಿಂದ ನನ್ನನ್ನು ತಿಳಿಯಲು ಸಾಧ್ಯವಿಲ್ಲ ಎನ್ನುತ್ತಾನೆ ಕೃಷ್ಣ.  ಕೃಷ್ಣ ಹೇಳುತ್ತಾನೆ ವೇದವಾದಿಗಳಾದವರು ವೇದದ ಮೇಲ್ನೋಟದ ಅರ್ಥವೆಂಬ ಹೂವನ್ನು ಕಿತ್ತು ತೆಗೆದುಕೊಂಡು ಆಳವಾದ ಜ್ಞಾನ ಸಾಗರವೆಂಬ ಹಣ್ಣಿನಿಂದ ವಂಚಿತರಾಗುತ್ತಾರೆ ಎಂದು. ವೇದವನ್ನು ಆಳವಾಗಿ ಅರ್ಥ ಮಾಡಿಕೊಳ್ಳದೆ, ಕೇವಲ ಮೇಲ್ನೋಟದ ಅರ್ಥದಲ್ಲೇ ನಿಂತು ವೇದವೆಂದರೆ ಇಷ್ಟೇ ಎಂದು ಹೇಳುವವರಿಗೆ ಕೃಷ್ಣ ಈ ಮಾತನ್ನು ಹೇಳಿದ್ದಾನೆ. ಇಲ್ಲಿ 'ವೇದವಾದರು' ಎಂದರೆ ವೇದದ ಅರ್ಥ ತಿಳಿಯದೆ ಅದರ ಬಗ್ಗೆ ವಿವಾದ ಮಾಡುವವರು. ವೇದವನ್ನು ಬಾಯಿಪಾಠ   ಮಾಡಿ ಅದರ ಅರ್ಥ ತಿಳಿಯದೆ ಮಾತನಾಡುವವರು. ವೇದದ ಮೇಲ್ನೋಟದ ಅರ್ಥದಲ್ಲೇ ನಿಂತವರು. ಇವರು ಮೇಲಿನಿಂದ ಈಜುವವರು. ಇವರಿಗೆ ತಳದಲ್ಲಿರುವ ಮುತ್ತು ರತ್ನಗಳ ಅರಿವಿಲ್ಲ. ವೇದವನ್ನು ನಿಜವಾಗಿ ಅರಿತುಕೊಳ್ಳದೆ, ಅದರ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಂಡು, ಅದನ್ನೇ ಜನರಿಗೆ ಹೇಳುವುದು ನರಕಕ್ಕೆ ನೇರ ದಾರಿ. ಪೌರೋಹಿತ್ಯ ಕೂಡಾ ಹೀಗೆ. ನಿಜವಾದ ಜ್ಞಾನವಿಲ್ಲದೆ, ಮಂತ್ರದ ಅರ್ಥ ಗೊತ್ತಿಲ್ಲದೆ ಪೌರೋಹಿತ್ಯ ಮಾಡುವುದು ಕೂಡಾ ಅಷ್ಟೇ ಅಪಾಯಕಾರಿ. ಪೌರೋಹಿತ್ಯ ಒಂದು ಜವಾಬ್ದಾರಿಯುತ ಕೆಲಸ. ಒಬ್ಬ ಮನುಷ್ಯನ ಪಾಪವನ್ನು ಪರಿಹರಿಸಿ ಅವನನ್ನು ಎತ್ತರಕ್ಕೇರಿಸಬೇಕಾದರೆ ಪೌರೋಹಿತ್ಯ ಮಾಡುವವನೂ ಕೂಡಾ ಎತ್ತರದಲ್ಲಿರಬೇಕು. ವೇದ ಮಂತ್ರದ ರಹಸ್ಯ ತಿಳಿದವನಾಗಿರಬೇಕು. ಕೃಷ್ಣ ಇಲ್ಲಿ ಹೇಳುತ್ತಾನೆ: “ವೇದದ ಅಂತರಂಗದ ಅರ್ಥ ತಿಳಿಯದಿದ್ದರೆ ಎಲ್ಲವೂ ಅಪಾರ್ಥವಾಗುತ್ತದೆ. ಯಾರು ಪ್ರಾಚೀನ ಗ್ರಂಥಗಳ ಮೇಲ್ನೋಟದ ಅರ್ಥವನ್ನು ಹೇಳಿ ಸಮಾಜಕ್ಕೆ ಮೋಸ ಮಾಡುತ್ತಾರೋ ಅವರು ಅವಿಪಶ್ಚಿತರು” ಎಂದು. 'ವಿಪಶ್ಚಿತರು' ಎಂದರೆ ಜ್ಞಾನ ಸ್ವರೂಪವಾದ ಆತ್ಮವನ್ನು ಕಂಡವರು, ಆತ್ಮ ಜ್ಞಾನಿಗಳು.  ಅವಿಪಶ್ಚಿತರು ಶಾಸ್ತ್ರಕ್ಕೆ ಮೇಲ್ನೋಟದ ಅರ್ಥವನ್ನು ಹೇಳುವವರು-ಅವರು ತಿಳಿಗೇಡಿಗಳು ಎನ್ನುತ್ತಾನೆ ಕೃಷ್ಣ! ಈ ಮಾತು ಪ್ರಪಂಚದ ಪ್ರತಿಯೊಂದು ಧರ್ಮ ಗ್ರಂಥಗಳಲ್ಲಿದೆ. ಬೈಬಲ್ ನಲ್ಲಿ ಇದನ್ನು ಗೂಡಾರ್ಥ ಎನ್ನುತ್ತಾರೆ.  ಕುರಾನಿನಲ್ಲಿ  ಕೂಡಾ ಈ ಬಗ್ಗೆ ಎಚ್ಚರದ ನುಡಿ ಇದೆ. "There are Sentences that are clear in meaning and there are Sentences that are susceptible of different interpretations" . ಇದು ಕುರಾನ್ ನಲ್ಲಿ ಬರುವ ಒಂದು ನುಡಿ. ಎಲ್ಲಾ ಪ್ರಾಚೀನ ಅನುಭಾವ ಸಾಹಿತ್ಯದಲ್ಲಿ ಈ ಎಚ್ಚರವನ್ನು ಕೊಟ್ಟಿದ್ದಾರೆ. ಪ್ರಾಚೀನ ಗ್ರಂಥಗಳು ಒಗಟಿನಂತೆ. ಅದರ ಮೇಲ್ನೋಟದ ಅರ್ಥವನ್ನು ತಿಳಿದುಕೊಂಡರೆ ಅಸಂಗತವಾಗುತ್ತದೆ. ಅಧ್ಯಾತ್ಮ ಗ್ರಂಥಗಳಲ್ಲಿ ನಮ್ಮನ್ನು ಆಭೂತಿಗೆ ಕೊಂಡೊಯ್ಯಲು ಈ ರೀತಿ ಒಗಟಿನ ಬಾಷೆಯನ್ನು (mystical language) ಉಪಯೋಗಿಸಿದ್ದಾರೆ. ವೇದವೆನ್ನುವುದು ಸಾಂಕೇತಿಕ ಭಾಷೆ ಎನ್ನುವುದನ್ನು ಅರಿಯದಿದ್ದರೆ ಆಧ್ಯಾತ್ಮ ಚಿಂತನೆ ಅನರ್ಥವಾಗುತ್ತದೆ. ಈ ರೀತಿ ತಿಳಿಯದೆ ಮಾಡುವ ಸಾಧನೆಯಿಂದ ಏನೂ ಉಪಯೋಗವಿಲ್ಲ.
ಪ್ರಾಚೀನ ಗ್ರಂಥಗಳಲ್ಲಿ ಅನೇಕ ಕಥೆಗಳನ್ನು ಕಾಣುತ್ತೇವೆ. ಅದನ್ನು ಮೇಲ್ನೋಟದಲ್ಲಿ ನೋಡಿದರೆ ವಿನೋದವೆನಿಸುತ್ತದೆ. ಆದರೆ ಅದರ ತಿರುಳನ್ನು ಅರಿತರೆ ಜೀವನ ಸಾರ್ಥಕ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಗಣಪತಿಯ ಕಥೆ. "ಪಾರ್ವತಿ ತನ್ನ ಮೈಯ  ಮಣ್ಣಿನಿಂದ ಗಣಪತಿಯನ್ನು ನಿರ್ಮಿಸಿದಳು, ಆತನ ತಲೆಯನ್ನು ಶಿವ ಕಡಿದ, ನಂತರ ಆತನಿಗೆ ಉತ್ತರ  ದಿಕ್ಕಿಗೆ ತಲೆ ಹಾಕಿದ ಆನೆಯ ತಲೆಯನ್ನು ಜೋಡಿಸಿದರು, ಕಡಬು ತಿಂದ ಗಣೇಶ ಹೊಟ್ಟೆಗೆ ಹಾವನ್ನು ಸುತ್ತಿಕೊಂಡ".  ಏನಿದರ ಅರ್ಥ? ಭಾಗಶಃ ಈ ಕಥೆಯನ್ನು ಕೇಳದವರಿಲ್ಲ; ಆದರೆ ಅರ್ಥ ತಿಳಿದವರು ಸಾವಿರಕ್ಕೆ ಒಬ್ಬರಿಲ್ಲ! ಈ ಕಥೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಮಾತ್ರ ನಮಗೆ ಕಥೆಯ ಮಹತ್ವ, ಪೂಜೆಯ ಮಹತ್ವ, ನಂಬಿಕೆಯ ಮಹತ್ವ ಅರಿಯುತ್ತದೆ. ಗಣಪತಿ ಆಕಾಶದ ದೇವತೆ. ಆಕಾಶ ಪಂಚ ಭೂತಗಳಲ್ಲಿ ಮಹತ್ತಾದದ್ದು.  ಗಣಪತಿಯ ಸ್ಥಾನ ಇಪ್ಪತ್ತೊಂದನೆಯದು. ಅದಕ್ಕಾಗಿ ಆತನಿಗೆ ಇಪ್ಪತ್ತೊಂದು ಮೋದಕ ಅರ್ಪಣೆ. ಐದು ಅಂತಃಕರಣ, ಐದು ಜ್ಞಾನೇಂದ್ರಿಯ, ಐದು ಕರ್ಮೇಂದ್ರಿಯ, ಐದು ತನ್ಮಾತ್ರೆಗಳು(ಶಬ್ದ, ಸ್ಪರ್ಶ ರೂಪ ರಸ ಗಂಧ) ಇದರಿಂದ ಆಚೆಗೆ ಆಕಾಶ, ಗಾಳಿ, ಬೆಂಕಿ,ನೀರು, ಮಣ್ಣು. ಇಲ್ಲಿ ಆಕಾಶ ಇಪ್ಪತ್ತೊಂದನೆ ಮೆಟ್ಟಿಲಲ್ಲಿದೆ. ಇದು ಇಪ್ಪತ್ತೊಂದನೆ ತತ್ವ. ಗಣಪತಿಗಿಂತ ಮೊದಲ ಸ್ತರದಲ್ಲಿರುವ ತತ್ವಾಭಿಮಾನಿಗಳು ಇಪ್ಪತ್ತುಮಂದಿ. ಬ್ರಹ್ಮ, ವಾಯು, ಗರುಡ, ಶೇಷ, ರುದ್ರ, ಇಂದ್ರ, ಕಾಮ, ಅಹಂಪ್ರಾಣ, ಅನಿರುದ್ಧ, ಸ್ವಾಯಂಭುವಮನು, ಬೃಹಸ್ಪತಿ, ದಕ್ಷಪ್ರಜಾಪತಿ, ಪ್ರವಹವಾಯು, ಚಂದ್ರ, ಸೂರ್ಯ, ಯಮಧರ್ಮ, ವರುಣ, ವಹ್ನಿ, ಮಿತ್ರ ಮತ್ತು ನಿರ್ ಋತಿ. ಗಣಪತಿ ಇಪ್ಪತ್ತೊಂದನೆಯವನು.
ಇನ್ನು ಶಿವ  ಪಾರ್ವತಿಯರು. ಇವರು ದಂಪತಿಗಳು. ಇಲ್ಲಿ ಶಿವ ಮನಸ್ಸಿನ ಅಭಿಮಾನಿ ಮತ್ತು ಪಾರ್ವತಿ ವಾಕ್ ದೇವತೆ.  ಮನಸ್ಸು ಯೋಚಿಸಿದಂತೆ ಮಾತು. ಅದಕ್ಕಾಗಿ ಅವರದು ಅನ್ಯೋನ್ಯ ದಾಂಪತ್ಯ. ಶಬ್ದದ ಮೂಲ ಶಕ್ತಿ ಗಾಳಿ ಮತ್ತು ಆಕಾಶ. ಆಕಾಶ ಮತ್ತು ಗಾಳಿ ಇಲ್ಲದಿದ್ದರೆ ಶಬ್ದವಿಲ್ಲ. ನಮ್ಮ ಒಳಗಿಂದ ವಾಕ್ ನಾದವೇ ಪಾರ್ವತಿ-ಅದು ಶಬ್ದ ರೂಪದಲ್ಲಿ ಹೊರ ಹೊಮ್ಮುವುದೇ ಮಾತು. ಇದು ಮೂಲ ನಾದದ ಸ್ಥೂಲ ರೂಪ.  ಮನುಷ್ಯನಿಗೆ ದೊಡ್ಡ ಆಪತ್ತು ಮಾತು. ಅದ್ಯಾತ್ಮ ಸಾಧನೆಗೆ ಬೇಕಾಗಿರುವುದು ಮಾತಿಗಿಂತ ಹೆಚ್ಚಾಗಿ ಮೌನ. ತನ್ನತನದ ಅರಿವಿಲ್ಲದೆ(Awareness of self), ಅಹಂಕಾರ ತತ್ವದ ವಿರುದ್ಧ ಮಾತು ಬೆಳೆದಾಗ, ಮಾತಿನ ಶಿರಛೇದನವಾಗದೆ ಜ್ಞಾನವಿಲ್ಲ. ಶಿರಛೇದನವಾದ ಮೇಲೆ ಪುನಃ ಅದೇ ಮಾತು ಮುಂದುವರಿಯಬಾರದು. ಅದಕ್ಕಾಗಿ ಎಲ್ಲವನ್ನು ಕೇಳುವ ದೊಡ್ಡ ಕಿವಿಯುಳ್ಳ, ಪ್ರಾಣಶಕ್ತಿಯನ್ನು ನಿಯಂತ್ರಿಸುವ ಉದ್ದನೆಯ ಮೂಗಿನ ಸಾಂಕೇತ ರೂಪವಾದ ಆನೆಯ ತಲೆಯನ್ನು ಇಟ್ಟು ಗಣಪತಿ ಎನ್ನುವ ಹೊಸ ಆಕಾರದ ಜನನವಾಯಿತು. ಗಣಪತಿಯನ್ನು ನೋಡಿದಾಕ್ಷಣ ನಮಗೆ ನೆನಪಿಗೆ ಬರಬೇಕಾದ ವಿಷಯ ಮಾತಿಗಿಂತ ಮನನ ಹೆಚ್ಚು ಮಾಡು, ಸರಿಯಾಗಿ ಕೇಳಿಸಿಕೋ (Be a good listener) ಎನ್ನುವ ವಿಚಾರ. ಇನ್ನು ಉತ್ತರ ದಿಕ್ಕಿಗೆ ತಲೆ ಹಾಕುವುದು ಅಂದರೆ ಏನು? ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವಂತೆ ಉತ್ತರಕ್ಕೆ ತಲೆ ಹಾಕಿ ಮಲಗಬಾರದು. ದಕ್ಷಿಣಕ್ಕೆ ಮುಖ ಮಾಡಿ ಪೂಜೆಗೆ ಕುಳಿತು ಕೊಳ್ಳಬಾರದು. ದೇವಸ್ಥಾನದಲ್ಲಿ ಅಪ್ರದಕ್ಷಿಣೆ ಸುತ್ತಬಾರದು ಇತ್ಯಾದಿ. ಆದರೆ ಈ ಎಲ್ಲಾ ವಿಚಾರ ಏಕೆ? ಇದರ ಹಿಂದಿರುವ ಸಿದ್ಧಾಂತ ಏನುಈ ಭೂಮಿಯಲ್ಲಿ ಉತ್ತರ  ದ್ರುವದ ಶಕ್ತಿ ಉತ್ತರದಿಂದ ಪೂರ್ವಕ್ಕೆ ಹರಿಯುತ್ತಿರುತ್ತದೆ ಹಾಗು ದಕ್ಷಿಣ ದ್ರುವದ ಶಕ್ತಿ ದಕ್ಷಿಣದಿಂದ ಪಶ್ಚಿಮಕ್ಕೆ  ಹರಿಯುತ್ತಿರುತ್ತದೆ. ನಮ್ಮ ಚಲನೆ ಕೂಡಾ  ಈ ಶಕ್ತಿಪಾತಕ್ಕೆ ಅನುಗುಣವಾಗಿರಬೇಕು. ನಾವು ದಕ್ಷಿಣಕ್ಕೆ ಮುಖ ಮಾಡಿದರೆ ದಕ್ಷಿಣ ದ್ರುವದ ಶಕ್ತಿಪಾತಕ್ಕೆ ನಮ್ಮನ್ನು ನಾವು ಒಡ್ಡಿಕೊಂಡಂತೆ ಹಾಗು ಉತ್ತರಕ್ಕೆ ಮುಖ ಮಾಡಿದರೆ ಉತ್ತರ ದ್ರುವದ ಶಕ್ತಿಪಾತಕ್ಕೆ ಒಡ್ಡಿಕೊಂಡಂತೆ. ಉತ್ತರಕ್ಕೆ ತಲೆ ಹಾಕಿ ಮಲಗುವುದು ಎಂದರೆ ಎದ್ದಾಗ ದಕ್ಷಿಣಕ್ಕೆ ಮುಖ ಮಾಡುವುದು. ಆದ್ದರಿಂದ ದಕ್ಷಿಣ ಮುಖ ಹಾಗು ಉತ್ತರ ತಲೆ ಎರಡೂ ಒಂದೆ.   ಎರಡು ಶಕ್ತಿಪಾತದಲ್ಲಿ ಒಂದು ದೊಡ್ಡ ವ್ಯತ್ಯಾಸವಿದೆ. ಅದೇನೆಂದರೆ ಉತ್ತರದ ಶಕ್ತಿಪಾತ ಊರ್ಧ್ವಮುಖವಾದದ್ದು ಹಾಗು ದಕ್ಷಿಣದ ಶಕ್ತಿಪಾತ ಸಂಸಾರದ ಸುಳಿಯಲ್ಲಿ ಸಿಲುಕಿಸುವಂತಾದ್ದು. ಈ ಕಾರಣಕ್ಕಾಗಿ ಉತ್ತರಕ್ಕೆ ತಲೆ ಹಾಕಿ ಮಲಗಿದರೆ ಅಥವಾ ದಕ್ಷಿಣಕ್ಕೆ ಮುಖ ಮಾಡಿ ಪೂಜೆಗೆ ಕುಳಿತರೆ ನಮ್ಮ ಶಿರಛೇದವಾಗುತ್ತದೆ. ನಾವು ಪುನಃ ಈ ಸಂಸಾರದ ಸುಳಿಯಲ್ಲಿ ಸುತ್ತಬೇಕಾಗುತ್ತದೆ. ಇನ್ನು ಹೊಟ್ಟೆಗೆ ಹಾವಿನ ಸುತ್ತು. ಹಾವು ಕುಂಡಲಿನಿ ಶಕ್ತಿಯ ಸಂಕೇತ. ಇದು ಚಕ್ರಾಕಾರವಾಗಿ ತಲೆ ಕೆಳಗೆ ಹಾಕಿ ಮಲಗಿದ ಹಾವಿನ ರೂಪದಲ್ಲಿ ನಮ್ಮ ಮಲ-ಮೂತ್ರ ದ್ವಾರದ ಮಧ್ಯದಲ್ಲಿರುತ್ತದೆ. ಕುಂಡಲಿನಿ ಜಾಗೃತವಾಗುವುದು ಎಂದರೆ ಈ ಹಾವು ಹೆಡೆಯತ್ತಿ ನಿಲ್ಲುವುದು. ಕುಂಡಲಿನಿ ಜಾಗೃತವಾದಾಗ ಶಕ್ತಿ- ಮೂಲದಾರ, ಮಣಿಪುರ ಹಾಗು ಸ್ವದಿಷ್ಟಾನ ಶಕ್ತಿ ಕೇಂದ್ರಗಳಲ್ಲಿ ಊರ್ಧ್ವ ಮುಖವಾಗಿ ಸಂಚರಿಸುತ್ತದೆ. ನಮ್ಮ ಹೊಕ್ಕುಳಿನ ಮೇಲಿನ ಶಕ್ತಿ ಕೇಂದ್ರ  ಜ್ಞಾನದ ಬಾಗಿಲು, ಗಣಪತಿ ಈ ಮೂರು ಶಕ್ತಿ ಕೇಂದ್ರಗಳನ್ನು ನಿಯಂತ್ರಿಸಿ ನಮಗೆ ಜ್ಞಾನದ ಬಾಗಿಲನ್ನು ತೆರೆಯುವ ಶಕ್ತಿದೇವತೆ. ಇಷ್ಟೊಂದು ಸಂಗತಿ ಈ ಪುಟ್ಟ ಕಥೆಯಲ್ಲಿದೆ. ಇದು ಹೂವಿನಿಂದ ಹಣ್ಣಿಗೆ ಹೋಗುವ ರೀತಿ. ಕೇವಲ ಮೇಲ್ನೋಟದ ಅರ್ಥದಲ್ಲೇ ನಿಂತರೆ ತೊಂದರೆಯಿಲ್ಲ, ಅದರಿಂದಾಚೆಗೆ ಏನೂ ಇಲ್ಲ ಎಂದು ತಿಳಿದರೆ ಅದು ಅನರ್ಥ.
ನಾವು     ನಮ್ಮ ತಲೆಯಲ್ಲಿದ್ದದ್ದನ್ನು ವೇದದಲ್ಲಿ ಕಾಣದೆ, ವೇದದಲ್ಲಿದ್ದದ್ದನ್ನು ತಲೆಯೊಳಗೆ ತುಂಬಿಕೊಳ್ಳಬೇಕು.  ವೇದವನ್ನು ಮೇಲ್ನೋಟದಲ್ಲಿ ಕಂಡಾಗ ಕೇವಲ ಜನ್ಮ-ಕರ್ಮ, ಹುಟ್ಟು-ಸಾವು, ಈ ಸುಳಿಯಲ್ಲೇ ಇರುತ್ತೇವೆ, ಎಂದೂ ಅಮರತ್ವದ ದಾರಿ ಕಾಣದು. ಮೇಲ್ನೋಟಕ್ಕೆ ವೇದವನ್ನು ಕಾಣುವವರು  ಬೆಳಗಿನಿಂದ ಸಂಜೆಯ ತನಕ  ಭೋಗ ಐಶ್ವರ್ಯ ಕರ್ಮ ಕಲಾಪದಲ್ಲಿ ನಿಂತು ಆತ್ಮ ಸಾಕ್ಷಾತ್ಕಾರವನ್ನು ಮರೆತು ನಿಲ್ಲುತ್ತಾರೆ. ಇದು ದೊಡ್ಡ ದುರಂತ.
ಈಗ ನಮಗೆ ಒಂದು ಪ್ರಶ್ನೆ ಕಾಡುತ್ತದೆ. ಅದೇನೆಂದರೆ ಪ್ರಾಚೀನ ಅಧ್ಯಾತ್ಮ ಗ್ರಂಥಗಳನ್ನು ಏಕೆ ಒಗಟಿನ ರೂಪದಲ್ಲಿ ಬರೆದಿದ್ದಾರೆ? ಎಂದು. ತರಗತಿಗೊಂದು ಪಠ್ಯಪುಸ್ತಕವಿರುವಂತೆ ಈ ಗ್ರಂಥಗಳನ್ನು ಹಂತಹಂತವಾಗಿ ಅರ್ಥವಾಗುವ ರೀತಿ ಏಕೆ ಬರೆದಿಲ್ಲ? ಇತ್ಯಾದಿ. ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯ ಏನೆಂದರೆ ಈ ಗ್ರಂಥಗಳನ್ನು ತಿಳಿದುಕೊಳ್ಳಲು ಯೋಗ್ಯತೆ ಬೇಕು. ಇಲ್ಲಿ ಪುಸ್ತಕ ಒಂದೆ; ಆದರೆ ಒಂದೇ ಪುಸ್ತಕದಲ್ಲಿ ಅನೇಕ ಹಂತದ ಶಿಕ್ಷಣ ಅಡಗಿದೆ. ಈ ವೇದ ಗ್ರಂಥಗಳು ಎಂದೂ ಅಯೋಗ್ಯರಿಗೆ ದಕ್ಕದು. ಅವು ಕೇವಲ ತನ್ನನ್ನು ಅರಿಯಬಲ್ಲ, ಅರಿತು ಅದರ ಸದುಪಯೋಗ ಮಾಡಬಲ್ಲವನ  ಮುಂದೆ ಮಾತ್ರ ತೆರೆದುಕೊಳ್ಳುತ್ತವೆ. ಯೋಗ್ಯನಾದವನು ಈ ಗ್ರಂಥದ ಆಳಕ್ಕಿಳಿದಷ್ಟೂ ಹೆಚ್ಚು ಹೆಚ್ಚು ವಿಷಯ ತಿಳಿಯುತ್ತಾನೆ. ಒಂದು ಗ್ರಂಥವನ್ನು  ಅರಿಯಲು  ಅನೇಕ ಜನ್ಮಗಳ ಸಾಧನೆ  ಬೇಕು.

No comments:

Post a Comment