Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Sunday, March 6, 2011

Bhagavad Gita Kannada-Chapter-02 Shloka-47

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ।
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋSಸ್ತ್ವಕರ್ಮಣಿ ॥೪೭॥

ಕರ್ಮಣಿ ಏವ ಅಧಿಕಾರಃ ತೇ  ಮಾ ಫಲೇಷು ಕದಾಚನ
ಮಾ ಕರ್ಮಫಲ ಹೇತುಃ ಭೂಃ ಮಾ ತೇ ಸಂಗಃ ಅಸ್ತು ಅಕರ್ಮಣಿ --ಕರ್ಮದಲ್ಲಿ ಮಾತ್ರ ನಿನಗೆ ಹಕ್ಕು, ಫಲಗಳಲ್ಲಿ ಎಂದೂ ಇಲ್ಲ. ಫಲವನ್ನೇ ನಂಬಿ ಕರ್ಮ ಮಾಡಬೇಡ (ಕರ್ಮಕ್ಕೆ ಫಲ ನೀಡುವ ಶಕ್ತಿ ತಾನೆಂದು ಭ್ರಮಿಸಬೇಡ). ಅಂತೆಯೇ ನಿಷ್ಕ್ರಿಯತೆ ನಿನಗಂಟದಿರಲಿ.

ಈ ಶ್ಲೋಕವನ್ನು ಅಪಾರ್ಥ ಮಾಡಿಕೊಳ್ಳುವವರೆ ಹೆಚ್ಚು. ಕರ್ಮ ಮಾಡಬೇಕು ಆದರೆ ಫಲವನ್ನು ಬಯಸಬಾರದು ಅಂದರೆ ಏನು? ಇದು ಮನುಷ್ಯನನ್ನು ನಿಷ್ಕ್ರಿಯಗೊಳಿಸುತ್ತದೆ, ಎಂಬಿತ್ಯಾದಿ ವಾದಗಳನ್ನು ಈ ಶ್ಲೋಕದ ಮೇಲೆ ಅನೇಕ ಮಂದಿ ಮಂಡಿಸಿದ್ದಾರೆ. ಆದರೆ ಅವರ್ಯಾರೂ ಶ್ಲೋಕದ ನಿಜವಾದ ಅರ್ಥವನ್ನು ತಿಳಿಯಲು ಪ್ರಯತ್ನಿಸಿಲ್ಲ. ಇಲ್ಲಿ ಫಲವನ್ನು ಬಯಸಬೇಡ ಎಂದು ಎಲ್ಲಿಯೂ ಹೇಳಿಲ್ಲ. ಅದಕ್ಕೆ ಬದಲಾಗಿ ಫಲದಲ್ಲಿ ಅಧಿಕಾರ ಸಾಧಿಸಬೇಡ ಎಂದಿದ್ದಾನೆ ಕೃಷ್ಣ.
 ಕರ್ಮ ನಿನ್ನ ಕೈಯಲ್ಲಿದೆ- ಆದರೆ ಕರ್ಮ ಫಲ ಭಗವಂತನ ಕೈಯಲ್ಲಿದೆ. ನೀನು ನಾನೇ ಕರ್ಮ ಫಲದ ಹೇತು ಎಂದು ತಿಳಿಯಬೇಡ. ಕರ್ಮಫಲದ ಹೇತು ಭಗವಂತ ಎನ್ನುವ ಎಚ್ಚರ ನಿನಗಿರಲಿ ಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಬಯಕೆಯನ್ನು ನಿರಾಕರಣೆ ಮಾಡಿಲ್ಲ, ಆದರೆ 'ಹೀಗೇ ಆಗಬೇಕು' ಇಲ್ಲದಿದ್ದರೆ ನಾನು ಈ ಕರ್ಮವನ್ನು ಮಾಡಲಾರೆ ಎನ್ನುವ ಅಭಿಪ್ರಾಯ ಸರಿಯಲ್ಲ ಎಂದಿದ್ದಾನೆ. ಬಯಸುವ ಅಧಿಕಾರ ನಮಗಿದೆ ಆದರೆ ಫಲವನ್ನು ಕೊಡುವವ ಭಗವಂತ ಎನ್ನುವ ಪರಿಜ್ಞಾನ ಬೇಕು. ಎಷ್ಟೋ ಸಲ ನಾವು ಅರಿವಿಲ್ಲದೆ ತಪ್ಪನ್ನು ಬಯಸುತ್ತೇವೆ. ಆಗ ಭಗವಂತ ಅದನ್ನು ಕೊಡಲಾರ. ಏಕೆಂದರೆ ಯಾವುದು ಸರಿ, ಯಾವುದು ತಪ್ಪು ಎನ್ನುವ ಪರಿಜ್ಞಾನ ನಮಗಿಲ್ಲ. ಈ ಎಚ್ಚರ ಇದ್ದರೆ ನಮಗೆ ಫಲ ಸಿಗದಿದ್ದಾಗ ದುಃಖವಾಗುವುದಿಲ್ಲ. ನಾವು ಮಾಡುವ ಕರ್ಮವನ್ನು ನಿಷ್ಠೆಯಿಂದ ಭಗವದರ್ಪಣೆಯಾಗಿ ಮಾಡಿ, ಅದರಿಂದ ಏನು ಫಲ ಬಂತೋ ಅದನ್ನು ಹಾಗೇ ಸ್ವೀಕರಿಸುವ ಮನೋವೃತ್ತಿಯನ್ನು ಬೆಳೆಸಿಕೊಂಡರೆ ದುಃಖವಿರುವುದಿಲ್ಲ.
ಯಾವ ಕಾಲಕ್ಕೂ ನಿಷ್ಕ್ರೀಯನಾಗಿ ಕುಳಿತುಕೊಳ್ಳದೆ ಸದಾ ಕರ್ತವ್ಯ ಶೀಲನಾಗು ಎನ್ನುತ್ತಾನೆ ಕೃಷ್ಣ. ‘ಹೀಗೇ ಆಗಬೇಕು’, ‘ಇಂಥಹ ಫಲವೇ ಬರಬೇಕು’ ಎನ್ನುವ ವಿಚಾರವನ್ನು ಬಿಟ್ಟು, ಕರ್ತವ್ಯ ನಿರ್ವಹಿಸಿದಾಗ ಯಾವ ದುಃಖವೂ ಇಲ್ಲ. ಅದನ್ನು ಬಿಟ್ಟು ಫಲದಲ್ಲಿ ಅಧಿಕಾರ ಸಾಧಿಸಿದರೆ ಆ ಫಲ ದಕ್ಕದೇ ಇದ್ದಾಗ ಆಗುವ ಆಘಾತವ್ಯಾಕುಲತೆ(Mental depression) ಭಯಾನಕ. ಸೋಲನ್ನಾಗಲಿ ಗೆಲುವನ್ನಾಗಲಿ ಸಮನಾಗಿ ಕಾಣುವ ಮನಃಸ್ಥಿತಿ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಈ ಹಿಂದೆ ಹೇಳಿದಂತೆ ನಾವು ಸೋಲಿನಲ್ಲಿ ಕಲಿತಷ್ಟು ಗೆಲುವಿನಲ್ಲಿ ಕಲಿಯಲಾಗದು. ಭಗವಂತ ನಮಗೆ ಫಲವನ್ನು ಕೊಡುವಾಗ ನಮ್ಮ ಒಳಿತನ್ನು ಗಮನದಲ್ಲಿಟ್ಟುಕೊಂಡು ಕೊಡುತ್ತಾನೆಯೇ ಹೊರತು , ನಾವು ಅಂದುಕೊಂಡಂತೆ ಅಲ್ಲ. ಬಂದದ್ದನ್ನು ಬಂದಂತೆ ಸ್ವೀಕರಿಸಿ, ಎಂದೂ ನಿಷ್ಕ್ರೀಯನಾಗದೆ, ಫಲದಲ್ಲಿ ಅಧಿಕಾರವನ್ನು ಸಾಧಿಸದೆ ಮುನ್ನೆಡೆಯಬೇಕು ಎನ್ನುವುದು ಕೃಷ್ಣನ ಕರ್ಮ ಸಿದ್ಧಾಂತ. ಇಲ್ಲಿ ಅರ್ಜುನ ತಾನು ಧರ್ಮ ರಕ್ಷಣೆ ಮಾಡಲು, ಧರ್ಮದ ವಿಜಯಕ್ಕಾಗಿ ಯುದ್ಧ ಮಾಡುತ್ತೇನೆ ಅಂದುಕೊಳ್ಳುವುದು ತಪ್ಪಲ್ಲ. ಈ ಹಂತದಲ್ಲಿ ಸೋಲು-ಗೆಲುವಿನ ಬಗ್ಗೆ  ಯೋಚಿಸದೆ, ಅದನ್ನು ಪೂರ್ಣ ಭಗವಂತನಲ್ಲಿ ಅರ್ಪಿಸಿ, ತನ್ನ ಪಾಲಿಗೆ ಬಂದ ಕರ್ತವ್ಯವನ್ನು ನಿಷ್ಟೆಯಿಂದ ತನ್ನ ಶಕ್ತಿ ಮೀರಿ ನಿಭಾಯಿಸುವುದು ಆತನ ಧರ್ಮ. ಹೀಗೆ ಮಾಡಿದಾಗ ಯುದ್ಧದ ಪ್ರತಿಯೊಂದು ಹಂತದಲ್ಲಿ ಬರುವ ಫಲಿತಾಂಶ ಆತನನ್ನು ಕಂಗೆಡಿಸಲಾರವು. ಏನೇ ಫಲಿತಾಂಶ ಬಂದರೂ ಅದು ಭಗವಂತನ ಪ್ರಸಾದ ಎಂದು ಸ್ವೀಕರಿಸುತ್ತಾ ಮುಂದೆ ಸಾಗಬೇಕು ಅಷ್ಟೆ.

No comments:

Post a Comment