Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Saturday, March 12, 2011

Bhagavad Gita Kannada Chapter-02_Shloka 56-58

ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ।
ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ        ॥೫೬॥

ದುಃಖೇಷು ಅನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ
ವೀತ ರಾಗ ಭಯ ಕ್ರೋಧಃ ಸ್ಥಿತಧೀ ಮುನಿಃ ಉಚ್ಯತೇ --ಸಂಕಟ ಬಂದಾಗ ಬಗೆಯಲ್ಲಿ ತಳಮಳವಿಲ್ಲ. ಸುಖದ ಸಂಗತಿಗಳಲ್ಲಿ ಹಂಬಲವಿಲ್ಲ. ಯಾವುದರಲ್ಲೂ  ರಾಗವಿಲ್ಲ, ಭಯವಿಲ್ಲ, ಕ್ರೋಧವಿಲ್ಲ. ಇಂಥಹ ಚಿಂತನಶೀಲ 'ಸ್ಥಿತಪ್ರಜ್ಞ' ಎನಿಸುತ್ತಾನೆ.

ಜೀವನದಲ್ಲಿ ಸುಖ-ದುಃಖಗಳು ಹಗಲು-ರಾತ್ರಿ ಇದ್ದಂತೆ. ಇದು ನಿರಂತರ ಮತ್ತು ಯಾರನ್ನೂ ಬಿಟ್ಟಿಲ್ಲ. ಕೆಲವೊಮ್ಮೆ ಸುಖ-ನಾವು ಬಯಸದೇ ಬರುತ್ತದೆ. ಅದೇ ತರ ಇನ್ನು ಕೆಲವೊಮ್ಮೆ ದುಃಖ ಸರಮಾಲೆಯಾಗಿ ಬೆನ್ನು ಹತ್ತುತ್ತದೆ. ದುಡ್ಡಿನಿಂದ ದುಃಖವನ್ನು ತಡೆಯಲಾಗದು-ಸುಖವನ್ನು ಖರೀದಿಸಲಾಗದು.  ಸಾಮಾನ್ಯವಾಗಿ ದುಃಖ ಬಂದಾಗ ನಾವು ಉದ್ವೇಗಕ್ಕೊಳಗಾಗುತ್ತೇವೆ. ಇದರಿಂದ ಮನಸ್ಸು ಕಂಗೆಡುತ್ತದೆಅದರಿಂದ  ದೇಹದ ಆರೋಗ್ಯ ಕೆಡುತ್ತದೆ. ಯಾವುದು ಅನಿವಾರ್ಯವೋ ಅದರ ಬಗ್ಗೆ ಅಳುತ್ತಾ ಕುಳಿತುಕೊಂಡರೆ ಉಪಯೋಗವಿಲ್ಲ. ಅಳುತ್ತಾ ಕೂರುವುದರಿಂದ ಬಂದ ದುಃಖ ಹೋಗದು, ಬರುವ ದುಃಖವನ್ನು ತಡೆಯಲಾಗದು. ದುಃಖ 'ಸುಖದ ಸಿದ್ಧತೆ'; ಸುಖ 'ದುಃಖದ ಸಿದ್ಧತೆ'. ಇವು ಜೀವನದ ಅನಿವಾರ್ಯ ದ್ವಂದ್ವಗಳು. ಅಂದರೆ  ಸುಖ ಬಂದಾಗ ಸಂತೋಷಪಡಬಾರದು ಎಂದಲ್ಲ, ಆ ಸುಖದಲ್ಲಿ ಮೈಮರೆಯಬಾರದು ಅಷ್ಟೆ.  ತಟಸ್ಥತೆಯನ್ನು ಮನಸ್ಸಿಗೆ ಅಭ್ಯಾಸ ಮಾಡಿಸಬೇಕು. ಜೀವನ ಯುದ್ಧದಲ್ಲಿ ಸುಖ-ದುಃಖಗಳು ಹಾಸುಹೊಕ್ಕಾಗಿವೆ ಎನ್ನುವ ಸತ್ಯವನ್ನರಿತು ಜೀವನ ಸಾಗಿಸಬೇಕು.
ದುಃಖ ಬಂದಾಗ ಮನಸ್ಸನ್ನು ಗಟ್ಟಿಯಾಗಿಸಿಕೊಂಡು ಬದುಕಬೇಕು ಎಂದು ಹೇಳುವುದು ಸುಲಭ. ಆದರೆ ಅದನ್ನು ಜೀವನದಲ್ಲಿ ಅನುಸರಿಸುವುದು ಅಷ್ಟೇ  ಕಷ್ಟ. ಇದಕ್ಕೆ ದೃಷ್ಟಾಂತ  ಮಹಾಭಾರತ ಯುದ್ಧದಲ್ಲಿ  ಅಭಿಮನ್ಯು ಸತ್ತಾಗ ಕಣ್ಣೀರು ಸುರಿಸಿದ ಅರ್ಜುನ. ಸ್ವಯಂ ಭಗವಂತನಿಂದ ಉಪದೇಶ ಪಡೆದು, ಭಗವಂತನ ಸಾರಥ್ಯದಲ್ಲಿ  ಯುದ್ಧಕ್ಕಿಳಿದ ಸ್ಥಿತಪ್ರಜ್ಞನಾದ ಅರ್ಜುನ, ತನ್ನ ಮಗ ಅಭಿಮನ್ಯು ಸತ್ತಾಗ ದುಃಖಿಸುತ್ತಾನೆ. ನಾವು ದುಃಖವನ್ನು ಸ್ವೀಕರಿಸಲು ಅಭ್ಯಾಸ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಬದುಕು ದುಸ್ತರವಾಗುತ್ತದೆ.

ಯಾವುದೇ ಒಂದು ವಸ್ತುವಿನ  ಬಗ್ಗೆ ಮೂರು ವಿಷಯಗಳು ಮನಸ್ಸಿನಲ್ಲಿರಬಾರದು. ಅವುಗಳೆಂದರೆ ರಾಗ-ಭಯ-ಕ್ರೋಧ. ದುಃಖದ ಪೂರ್ವ ಸ್ಥಿತಿ ಭಯ; ಭಯದ ಉತ್ತರ ಸ್ಥಿತಿ ದುಃಖ!  ಅತಿಯಾಗಿ ಆಸೆ ಪಡುವುದು ರಾಗ, ಆಸೆಪಟ್ಟ ವಸ್ತು ಸಿಗದಿದ್ದಾಗ ನಿರಾಶೆ. ಆ ವಸ್ತು ನಮ್ಮಿಂದ ದುರ್ಬಲರಿಗೆ ಸಿಕ್ಕಿದರೆ ಅವರ ಮೇಲೆ ಕ್ರೋಧ; ನಮ್ಮಿಂದ ಬಲಿಷ್ಠರಿಗೆ ಸಿಕ್ಕರೆ ಅವರಿಂದ ಭಯ!  ಇವೆಲ್ಲವೂ ಮನಸ್ಸಿನ ಹೊಯ್ದಾಟ. ವ್ಯಾಸರು ಹೇಳಿದಂತೆ “ಈ ಜಗತ್ತಿನಲ್ಲಿ ಈವರೆಗೆ ಆಗಬಾರದ್ದು ಯಾವುದೂ ಆಗಿಲ್ಲ, ಹಾಗು ಇನ್ನು ಮುಂದೆ ಆಗುವುದೂ ಇಲ್ಲ”. ಆಗಬೇಕಾದದ್ದು ಆಗಿಯೇ ತೀರುತ್ತದೆ, ಅದರ ಬಗ್ಗೆ ಚಿಂತಿಸಿ ಫಲವಿಲ್ಲ. ಇಂತಹ ಚಿಂತನಶೀಲತೆಯನ್ನು ಮೈಗೂಡಿಸಿಕೊಂಡವನು ಸ್ಥಿತಪ್ರಜ್ಞ ಎನಿಸುತ್ತಾನೆ.
ಇಲ್ಲಿ   ಮುನಿಃ ಎನ್ನುವ ಪದ ಬಳಕೆಯಾಗಿದೆ. ಮುನಿಃ ಎಂದರೆ ಕಾಮ-ಕ್ರೋಧವನ್ನು ಗೆದ್ದವನು. ನಾವು ಮನಸ್ಸನ್ನು ಎಲ್ಲಾ ಸಂದರ್ಭದಲ್ಲೂ ಏಕರೂಪವಾಗಿ ತಟಸ್ಥವಾಗಿಡಲು ಪ್ರಯತ್ನಿಸಬೇಕು. ಏನು ಬಂದರೂ ಬರಲಿ, ಭಗವಂತನ ದಯೆಯೊಂದಿರಲಿ ಎಂದು ಜೀವನದಲ್ಲಿ ಸುಖ-ದುಃಖವನ್ನು ಸಮದೃಷ್ಟಿಯಲ್ಲಿ ಕಾಣುವವ ಮುನಿ. “ನೀನೂ ಕೂಡ ಅಂಥಹ ಮುನಿಯಾಗು” ಎನ್ನುವುದು ಇಲ್ಲಿರುವ ಸಂದೇಶ.

ಯಃ ಸರ್ವತ್ರಾನಭಿಸ್ನೇಹಸ್ತತ್ತತ್ ಪ್ರಾಪ್ಯ ಶುಭಾಶುಭಮ್  
ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ  ॥೫೭॥

ಯಃ ಸರ್ವತ್ರ ಅನಭಿಸ್ನೇಹ ತತ್  ತತ್ ಪ್ರಾಪ್ಯ ಶುಭ ಅಶುಭಮ
ನ ಅಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ--ಆಯಾ ಒಳಿತು-ಕೆಡುಕುಗಳು ಬಂದೊದಗಿದಾಗ ಎಲ್ಲೂ ಅತಿಯಾಗಿ ಅಂಟಿಕೊಳ್ಳುವುದಿಲ್ಲ. ಒಳಿತಿನ ಬಗೆಗೆ ಮೆಚ್ಚೂ ಇಲ್ಲ. ಕೆಡುಕಿನ ಬಗ್ಗೆ ರೊಚ್ಚೂ ಇಲ್ಲ.  ಇಂಥವನ ಅರಿವು ಗಟ್ಟಿಗೊಂಡಿರುತ್ತದೆ.

ಇಲ್ಲಿ ಕೃಷ್ಣ ಹೇಳುತ್ತಾನೆ- “ದುಃಖ ಬಂದಾಗ ಕಂಗೆಡಬೇಡ, ಸುಖ ಬಂದಾಗ ಉಬ್ಬಬೇಡ, ನಿರ್ಲಿಪ್ತತೆಯನ್ನು ಅಭ್ಯಾಸ ಮಾಡು. ಯಾವುದರ ಮೇಲೂ ಅತಿಯಾದ ಆಸಕ್ತಿ( Over attachment)  ಬೇಡ. ಮನಸ್ಸಿನ ಸಮತೋಲನವನ್ನು ಸಾಧಿಸು” ಎಂದು. ದುಃಖ ಎನ್ನುವುದು ಯಾರನ್ನೂ ಬಿಟ್ಟಿಲ್ಲ. ದೇವಾಂಶ  ಸಂಭೂತರಾದ ಪಾಂಡವರು ಪಟ್ಟ ಕಷ್ಟವನ್ನು ನೋಡಿದರೆ ಇದು ಸ್ಪಷ್ಟ.  ಜ್ಞಾನಿಗಳಾಗಲಿ, ಅಜ್ಞಾನಿಗಳಾಗಲಿ, ಎಲ್ಲರಿಗೂ ಕಷ್ಟ ಬರುತ್ತದೆ. ನಾವು ಕಷ್ಟವನ್ನು ನೋಡುವ ಮನಃಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಅಷ್ಟೆ. "ನಾನು ಬೇಕು-ಬೇಡವನ್ನು ಮೀರಿ ನಿಂತಿದ್ದೇನೆ, ಇಂತದ್ದೇ ಬೇಕು, ಇಂತದ್ದು ಬೇಡ ಎನ್ನುವ ಆಯ್ಕೆ-ಅಧಿಕಾರ ನನಗಿಲ್ಲ"- ಎನ್ನುವ ಸತ್ಯವನ್ನರಿತು ಬದುಕಿದಾಗ  ಜೀವನ ಸುಗಮವಾಗುತ್ತದೆ. ಅಂತಹ ವ್ಯಕ್ತಿ ಎತ್ತರಕ್ಕೇರುತ್ತಾನೆ.

ಜ್ಞಾನಿಗಳಲ್ಲಿ ಇಂಥಹ ಮನಃಸ್ಥಿತಿ ಇರುತ್ತದೆ. ಸಾಮಾನ್ಯ ಮಾನವರಾದ ನಮಗೆ ಇಂದ್ರಿಯ ನಿಗ್ರಹ ಬಹಳ ಕಷ್ಟ, ಆದರೆ ಅಸಾಧ್ಯವಲ್ಲ. ನಿರಂತರ ಸಾಧನೆಯಿಂದ ಇದನ್ನು ಸಾಧಿಸಬಹುದು. ಯಾವ ರೀತಿ ನಾವು ಇಂದ್ರಿಯ ನಿಗ್ರಹ ಮಾಡಿ ಸಾಧನೆ ಮಾಡಬೇಕು ಎನ್ನುವುದನ್ನು ದೃಷ್ಟಾಂತದೊಂದಿಗೆ ಕೃಷ್ಣ ಮುಂದಿನಶ್ಲೋಕದಲ್ಲಿ ವಿವರಿಸಿದ್ದಾನೆ.

ಯದಾ ಸಂಹರತೇ ಚಾಯಂ ಕೂರ್ಮೋಂSಗಾನೀವ ಸರ್ವಶಃ ।
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ  ॥೫೮॥

ಯದಾ ಸಂಹರತೇ ಚ ಅಯಮ್ ಕೂರ್ಮಃ ಅಂಗಾನಿ ಇವ ಸರ್ವಶಃ
ಇಂದ್ರಿಯಾಣಿ ಇಂದ್ರಿಯ ಅರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ-- ಹೇಗೆ ಆಮೆಯು ತನ್ನ ಅಂಗಗಳನ್ನು ಪೂರ್ತಿಯಾಗಿ  ಚಿಪ್ಪಿನೊಳಗೆ ಎಳೆದುಕೊಳ್ಳುತ್ತದೋ ಹಾಗೆ, ಇಂದ್ರಿಯಗಳನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆಳೆದುಕೊಳ್ಳುವವರ ಪ್ರಜ್ಞೆ ಗಟ್ಟಿಗೊಂಡಿರುತ್ತದೆ.

ನಮ್ಮನ್ನು  ನಮ್ಮ ಇಂದ್ರಿಯಗಳು ದಾರಿ ತಪ್ಪಿಸುತ್ತವೆ. ಯಾವುದು ಬೇಡವೋ ಅದೇ ಬೇಕು ಎನ್ನುವ ಆಸೆ ಹುಟ್ಟಿಸುತ್ತವೆ. ಇಲ್ಲಿ ಕೃಷ್ಣ ಹೇಳುತ್ತಾನೆ: ಆಮೆ ಹೇಗೆ ತನ್ನ ನಾಲ್ಕು ಕಾಲು ಮತ್ತು ತಲೆಯನ್ನು ತನ್ನ ಚಿಪ್ಪಿನೊಳಗೆ ಸಂಪೂರ್ಣ ಎಳೆದುಕೊಂಡು ಸುರಕ್ಷಿತವಾಗಿರುತ್ತದೋ, ಹಾಗೇ ನಾವು ನಮ್ಮ ಪಂಚೇಂದ್ರಿಯಗಳನ್ನು ಗಟ್ಟಿ ಮನಸ್ಸಿನ ಕೋಟೆಯೊಳಗೆ ಎಳೆದುಕೊಂಡು ಅಂತರ್ಮುಖಗೊಳಿಸಿಕೊಳ್ಳಬೇಕು ಎಂದು. ಇಲ್ಲಿ ಅಂತರ್ಮುಖಗೊಳಿಸುವುದು  ಎಂದರೆ ನೋಡುವ ದೃಷ್ಟಿಯನ್ನು ಬದಲಿಸಿಕೊಳ್ಳುವುದು. ಎಲ್ಲವನ್ನು ಅಂತರಂಗ ದೃಷ್ಟಿಯಿಂದ ವಿಶ್ಲೇಷಣೆ ಮಾಡಿ ಅದರಲ್ಲಿನ ಒಳ್ಳೆಯತನವನ್ನು ಗುರುತಿಸಿ ಗ್ರಹಣ ಮಾಡುವುದು. ಅದನ್ನು ಸೃಷ್ಟಿಸಿದ ಭಗವಂತನ ಮಹಿಮೆಯನ್ನು ಅನುಸಂಧಾನ ಮಾಡುವುದು.
ನಾವು ಭಗವಂತ ಸೃಷ್ಟಿಸಿದ ಈ ಪ್ರಪಂಚವನ್ನು ನೋಡುತ್ತೇವೆ. ನೋಡುತ್ತಾ ಅದರ ಹಿಂದೆ ಇರುವ ಆ ವಿಶ್ವಶಕ್ತಿಯ ಮಹಿಮೆಯನ್ನು ಯೋಚಿಸಿದರೆ- ಅದು ಅಂತರ್ಮುಖವಾದ ಒಳನೋಟವಾಗುತ್ತದೆ. ಎಲ್ಲವುದರ ಒಳಗೂ ಭಗವಂತನಿದ್ದಾನೆ ಎನ್ನುವ ಎಚ್ಚರ, ಒಂದೊಂದು ಅಭಿವ್ಯಕ್ತಿಯಲ್ಲಿ ಭಗವಂತನ ಒಂದೊಂದು ವಿಭೂತಿ ಇದೆ ಎನ್ನುವ ತಿಳುವಳಿಕೆ ಇದ್ದಾಗ, ಯಾವುದೂ ನಮ್ಮನ್ನು ದಾರಿ ತಪ್ಪಿಸುವುದಿಲ್ಲ. ಇದು ಜ್ಞಾನಿ ಪ್ರಪಂಚವನ್ನು ನೋಡುವ ದೃಷ್ಟಿ. ನಾವು ಪ್ರಪಂಚವನ್ನು ಬದಲಿಸಲು ಸಾಧ್ಯವಿಲ್ಲ.  ಪ್ರಪಂಚವನ್ನು ನಾವು ನಮ್ಮ ಇಷ್ಟದಂತೆ  ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನರಿತು, ಪ್ರಪಂಚ ಇದ್ದ ಹಾಗೆ  ಅದಕ್ಕನುಗುಣವಾಗಿ ಬದುಕುವ ಮನೋವೃತ್ತಿಯನ್ನು ಬೆಳೆಸಿಕೊಂಡಾಗ ಯಾವ ಸಮಸ್ಯೆಯೂ ಇಲ್ಲ. ಈ ರೀತಿ ತಮ್ಮ ಇಂದ್ರಿಯಗಳನ್ನು ಅಂತರ್ಮುಖಗೊಳಿಸಿಕೊಂಡವನ ಪ್ರಜ್ಞೆ ಗಟ್ಟಿಗೊಂಡಿರುತ್ತದೆ.

No comments:

Post a Comment