ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸ್ತ್ರಿವಿಧಂ
ಶೃಣು ।
ಪ್ರೋಚ್ಯಮಾನಮಶೇಷೇಣ ಪೃಥಕ್ ತ್ವೇನ ಧನಂಜಯ ॥೨೯॥
ಬುದ್ಧೇಃ ಭೇದಮ್ ಧೃತೇಃ ಚ ಏವ ಗುಣತಃ
ತ್ರಿವಿಧಮ್ ಶೃಣು ।
ಪ್ರೋಚ್ಯಮಾನಮ್ ಅಶೇಷೇಣ ಪೃಥಕ್
ತ್ವೇನ ಧನಂಜಯ –– ಧನಂಜಯ, ಬುದ್ಧಿ ಮತ್ತು ಧೈರ್ಯ
ಕೂಡ ಗುಣದಿಂದ ಮೂರು ಬಗೆ. ಪೂರ್ತಿಯಾಗಿ ಅದರ ಪ್ರತ್ಯೇಕ ವಿವರಣೆಯನ್ನಾಲಿಸು.
ದೇಹ ಮತ್ತು ಇಂದ್ರಿಯಗಳು ಪೂರ್ಣಪ್ರಮಾಣದಲ್ಲಿ ವಿಕಸನ
ಹೊಂದಿರುವುದು ಮಾನವರಲ್ಲಿ. ಅದಕ್ಕಾಗಿ ಮಾನವ ಶರೀರವನ್ನು ‘ಪುರ’ ಎನ್ನುತ್ತಾರೆ. ಈ ದೇಹದಲ್ಲಿರುವ
ಜೀವನಿಗೆ(ಪುರುಷ) ಬುದ್ಧಿ ಮತ್ತು ಧೃತಿ ಬಹಳ ಮುಖ್ಯವಾದ
ಅಂಶ. ನಾವು ನಮ್ಮ ಜೀವನದಲ್ಲಿ ಹೇಡಿಗಳಾಗದೆ ಬುದ್ಧಿವಂತರಾಗಿ ಬದುಕಬೇಕು. ಈ ಬುದ್ಧಿ
ಮತ್ತು ಧೃತಿಯಲ್ಲಿ ಕೂಡ ಮೂರು ವಿಧ. ಸಾತ್ವಿಕ, ರಾಜಸ ಮತ್ತು ತಾಮಸ. ನಾವು ನಮ್ಮ ಜೀವನದಲ್ಲಿ ರಾಜಸ
ಮತ್ತು ತಾಮಸವನ್ನು ಅನುಸರಿಸಬಾರದು. ಅದಕ್ಕಾಗಿ ಯಾವುದು ರಾಜಸ ಯಾವುದು ತಾಮಸ ಎನ್ನುವ ವಿಚಾರ
ನಮಗೆ ತಿಳಿದಿರಬೇಕು. “ಬುದ್ಧಿ ಮತ್ತು ಧೃತಿಯಲ್ಲಿ ಮೂರು ಬಗೆಯನ್ನು ಪೂರ್ಣವಾಗಿ,
ಬಿಡಿಬಿಡಿಯಾಗಿ ಹೇಳುತ್ತೇನೆ-ಅದನ್ನು ಗಮನವಿಟ್ಟು
ಕೇಳು” ಎಂದು ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ. ನಾವು ಸಾತ್ವಿಕ ಧೃತಿಯನ್ನು ಗೆದ್ದು
ಧನಂಜಯರಾಬೇಕು ಎನ್ನುವುದು ಕೃಷ್ಣನ ಈ ಸಂದೇಶದ ಮೂಲ ಉದ್ದೇಶ.
ಪ್ರವೃತ್ತಿಂ ಚ ನಿವೃತ್ತಿಂ ಚ ಕಾರ್ಯಾಕಾರ್ಯೇ
ಭಯಾಭಯೇ ।
ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ ॥೩೦॥
ಪ್ರವೃತ್ತಿಮ್ ಚ ನಿವೃತ್ತಿಮ್ ಚ ಕಾರ್ಯ ಅಕಾರ್ಯೇ ಭಯ ಅಭಯೇ ।
ಬಂಧಂ ಮೋಕ್ಷಮ್ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ –
ಪಾರ್ಥ, ಇಹದ ಧರ್ಮ-ಪರದ ಧರ್ಮ, ಮಾಡಬೇಕಾದ್ದು-ಮಾಡಬಾರದ್ದು, ಅಂಜಬೇಕಾದ್ದು- ಅಂಜಬಾರದ್ದು,
ಬಂಧನದ ದಾರಿ- ಬಿಡುಗಡೆಯ ದಾರಿ ಇವನ್ನೆಲ್ಲ ಅರಿಯಬಲ್ಲ ಬುದ್ಧಿಯೆ ಸಾತ್ವಿಕ ಬುದ್ಧಿ.
ನಮ್ಮ ಜೀವನದಲ್ಲಿ ಮುಖ್ಯವಾಗಿ
ಎದುರಾಗುವ ಸಮಸ್ಯೆ ಏನೆಂದರೆ ‘ಒಂದು ಕೆಲಸವನ್ನು ಮಾಡಬೇಕೋ ಬೇಡವೋ’ ಎನ್ನುವ ಗೊಂದಲ. ಯಾವುದನ್ನು
ಹಿಡಿಯಬೇಕು, ಯಾವುದನ್ನು ಬಿಡಬೇಕು; ಯಾವುದು ಒಳ್ಳೆಯ
ಕೆಲಸ, ಯಾವುದು ಕೆಟ್ಟ ಕೆಲಸ ಎನ್ನುವ ತೀರ್ಮಾನ; ನನ್ನ ಕರ್ತವ್ಯ ಯಾವುದು ಎಂದು ತಿಳಿದಿರುವುದು;
ಧರ್ಮ-ಅಧರ್ಮಗಳು; ಪಾಪ-ಪುಣ್ಯಗಳು; ಭಯ-ಅಭಯ; ಬಂಧನದ ಮತ್ತು ಬಿಡುಗಡೆಯ ದಾರಿ- ಇವೆಲ್ಲವುದರ ಬಗ್ಗೆ
ಖಚಿತವಾದ ನಿರ್ಧಾರ ಸಾತ್ವಿಕ ಮನಸ್ಸಿಗಿರುತ್ತದೆ. ಇದು ಸ್ವಾರ್ಥದ ಸುಳಿವೇ ಇಲ್ಲದ(ಅಪಾರ್ಥ)-ಪ್ರಜ್ಞೆ; ಜ್ಞಾನದ ಆಳಕ್ಕೆ ಇಳಿದಾಗ ಬರುವ-ಪ್ರಜ್ಞೆ;
ಬುದ್ಧಿ ವಿಸ್ತಾರವಾದಾಗ(ಪಾರ್ಥ) ಬರುವ-ಪ್ರಜ್ಞೆ. ವಿಶ್ಲೇಷಣೆ ಮಾಡಿ ನಾವು ಸರಿಯಾದ
ದಾರಿಯಲ್ಲಿ ಹೋಗುವಂತೆ ತೀರ್ಮಾನ ಮಾಡತಕ್ಕಂತಹ-ವಿವೇಕಪ್ರಜ್ಞೆ. ನಮಗೆ ನಮ್ಮ ಆತ್ಮಸಾಕ್ಷಿ ಎಂದೂ ಮೋಸ ಮಾಡುವುದಿಲ್ಲ. ಪ್ರತಿಯೊಬ್ಬನ ಆತ್ಮಸಾಕ್ಷಿ ಕೊಡುವ ನಿರ್ಧಾರ ಖಚಿತವಾದ ನಿರ್ಧಾರವಾಗಿರುತ್ತದೆ ಮತ್ತು ಅದು ಸಾತ್ವಿಕ.
ಯಯಾ ಧರ್ಮಮಧರ್ಮಂ ಚ ಕಾರ್ಯಂ ಚಾಕಾರ್ಯಮೇವ
ಚ ।
ಅಯಥಾವತ್ ಪ್ರಜಾನಾತಿ ಬುದ್ಧಿಃ ಸಾ ಪಾರ್ಥ
ರಾಜಸೀ ॥೩೧॥
ಯಯಾ ಧರ್ಮಮ್ ಅಧರ್ಮಮ್ ಚ ಕಾರ್ಯಮ್ ಚ ಅಕಾರ್ಯಮ್ ಏವ ಚ ।
ಅಯಥಾವತ್ ಪ್ರಜಾನಾತಿ ಬುದ್ಧಿಃ ಸಾ ಪಾರ್ಥ
ರಾಜಸೀ – ಪಾರ್ಥ, ಯಾವುದು ಧರ್ಮ –ಯಾವುದು ಅಧರ್ಮ, ಯಾವುದು ಮಾಡಬೇಕಾದ್ದು –ಯಾವುದು ಮಾಡಬಾರದ್ದು
ಎನ್ನುವುದನ್ನು ಸರಿಯಾಗಿ ನಿರ್ಧರಿಸಲಾಗದ ಬುದ್ಧಿ ರಾಜಸ ಬುದ್ಧಿ.
ಕೆಲವೊಮ್ಮೆ ಧರ್ಮವನ್ನೇ ಅಧರ್ಮ ಎಂದು
ತಿಳಿಯುವುದು ಅಥವಾ ಅಧರ್ಮವನ್ನೇ ಧರ್ಮವೆಂದು ತಿಳಿಯುವುದು; ಇನ್ನು ಕೆಲವೊಮ್ಮೆ ಯಾವುದು ಸರಿ ಯಾವುದು ತಪ್ಪು
ಎನ್ನುವ ಗೊಂದಲದಲ್ಲಿ ಬೀಳುವುದು-ರಾಜಸ ಬುದ್ಧಿ. ಜೀವನದಲ್ಲಿ ಉಪಯೋಗಕ್ಕೆಬಾರದ ಈ ವಿಧವಾದ ಬುದ್ಧಿ, ಯಾವುದು ಮಾಡಬೇಕಾದದ್ದು-ಯಾವುದು
ಮಾಡಬಾರದ್ದು ಎನ್ನುವುದನ್ನು ಸರಿಯಾಗಿ ನಿರ್ಧರಿಸಲಾರದು.
ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾSSವೃತಾ
।
ಸರ್ವಾರ್ಥಾನ್ ವಿಪರೀತಾಂಶ್ಚ ಬುದ್ಧಿಃ
ಸಾ ಪಾರ್ಥ ತಾಮಸೀ ॥೩೨॥
ಅಧರ್ಮಮ್ ಧರ್ಮಮ್ ಇತಿ ಯಾ ಮನ್ಯತೇ ತಮಸಾ ಆವೃತಾ ।
ಸರ್ವ ಅರ್ಥಾನ್ ವಿಪರೀತಾನ್ ಚ ಬುದ್ಧಿಃ ಸಾ ಪಾರ್ಥ ತಾಮಸೀ –ಪಾರ್ಥ, ಅಧರ್ಮವನ್ನೆ
ಧರ್ಮವೆಂದು ಗ್ರಹಿಸುವ, ಹೀಗೆ ಎಲ್ಲ ಸಂಗತಿಯನ್ನು ವಿಪರೀತವಾಗಿಯೆ ಗ್ರಹಿಸುವ, ಕತ್ತಲು ಕವಿದ
ಬುದ್ಧಿ ತಾಮಸ ಬುದ್ಧಿ.
ಇರುವ ವಿಷಯವನ್ನು ಯಥಾವತ್ತಾಗಿ
ಗ್ರಹಿಸದೆ, ವ್ಯತಿರಿಕ್ತವಾಗಿಯೇ ಗ್ರಹಿಸುವ ಬುದ್ಧಿ ತಾಮಸ. ಇವರು ದುಃಖವನ್ನು ದುಃಖವೆಂದು
ಗ್ರಹಿಸದೆ ಸುಖವೆಂದು ಗ್ರಹಿಸುತ್ತಾರೆ. ಉದಾಹರಣೆಗೆ ಮದ್ಯಪಾನ ಮಾಡುವುದು ಆನಂದ ಎಂದು ಭ್ರಮಿಸಿ ಮದ್ಯಪಾನ
ವ್ಯಸನಿಗಳಾಗುವುದು. ಜ್ಞಾನವನ್ನೇ ಅಜ್ಞಾನವೆಂದು ತಿಳಿದು, ತಮ್ಮ ವಿಪರೀತ ಜ್ಞಾನವನ್ನೇ
ಸರ್ವಸ್ವವಾಗಿರಿಸಿಕೊಂಡು, ಇನ್ನೊಬ್ಬರ ಮಾತಿಗೆ ಕಿವಿಗೊಡದಂತೆ ಮಾಡುವ ಬುದ್ಧಿ ತಾಮಸ ಬುದ್ಧಿ.
ಯಾರಿಗೆ ಒಳ್ಳೆಯ ಬುದ್ಧಿ ಇದೆ
ಅವರಿಗೆ ಧೃತಿ ಇರುತ್ತದೆ. ಅಜ್ಞಾನದಿಂದ-ಭಯ, ಅರಿವಿನಿಂದ-ಅಭಯ. ವೇದಾಂತವಿರುವುದೇ ಅಭಯಕ್ಕಾಗಿ, ಮನಸ್ಸಿಗೆ ಧೈರ್ಯ ತುಂಬಿ ಮನುಷ್ಯನನ್ನು
ನಿರ್ಭಯನನ್ನಾಗಿ ಮಾಡುವುದಕ್ಕೋಸ್ಕರ.
'ಧೃತಿ' ಎನ್ನುವುದರ ಮೇಲ್ನೋಟದ ಅರ್ಥ -ಧೈರ್ಯ, ಆತ್ಮವಿಶ್ವಾಸ(Confidence), ಎದೆಗಾರಿಗೆ(courage) ಇತ್ಯಾದಿ. ಇದರ ಪೂರ್ಣ ಪ್ರಮಾಣದ ಅರ್ಥ ಇನ್ನೂ ವಿಶಾಲ. ಅಷ್ಟಾಂಗಜಪದಲ್ಲಿ(ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಮತ್ತು ಸಮಾಧಿ) ಹೇಳುವ ‘ಧಾರಣ’-ಧೃತಿ. ಒಂದು ವಿಷಯವನ್ನು ಗ್ರಹಿಸಿ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಧೃತಿ. ಇಂಥಹ ಧೃತಿಯಲ್ಲೂ ಮೂರು ವಿಧ-ಸಾತ್ವಿಕ, ರಾಜಸ ಮತ್ತು ತಾಮಸ. ಇದರ ಸುಂದರ ವಿವರಣೆಯನ್ನು ಮುಂದಿನ ಮೂರು ಶ್ಲೋಕಗಳಲ್ಲಿ ಕಾಣಬಹುದು.
'ಧೃತಿ' ಎನ್ನುವುದರ ಮೇಲ್ನೋಟದ ಅರ್ಥ -ಧೈರ್ಯ, ಆತ್ಮವಿಶ್ವಾಸ(Confidence), ಎದೆಗಾರಿಗೆ(courage) ಇತ್ಯಾದಿ. ಇದರ ಪೂರ್ಣ ಪ್ರಮಾಣದ ಅರ್ಥ ಇನ್ನೂ ವಿಶಾಲ. ಅಷ್ಟಾಂಗಜಪದಲ್ಲಿ(ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಮತ್ತು ಸಮಾಧಿ) ಹೇಳುವ ‘ಧಾರಣ’-ಧೃತಿ. ಒಂದು ವಿಷಯವನ್ನು ಗ್ರಹಿಸಿ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಧೃತಿ. ಇಂಥಹ ಧೃತಿಯಲ್ಲೂ ಮೂರು ವಿಧ-ಸಾತ್ವಿಕ, ರಾಜಸ ಮತ್ತು ತಾಮಸ. ಇದರ ಸುಂದರ ವಿವರಣೆಯನ್ನು ಮುಂದಿನ ಮೂರು ಶ್ಲೋಕಗಳಲ್ಲಿ ಕಾಣಬಹುದು.
ಧೃತ್ಯಾ ಯಯಾ ಧಾರಯತೇ ಮನಃಪ್ರಾಣೇಂದ್ರಿಯಕ್ರಿಯಾಃ ।
ಯೋಗೇನಾವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ
ಸಾತ್ತ್ವಿಕೀ ॥೩೩॥
ಧೃತ್ಯಾ ಯಯಾ ಧಾರಯತೇ ಮನಃ ಪ್ರಾಣ ಇಂದ್ರಿಯ
ಕ್ರಿಯಾಃ ।
ಯೋಗೇನ ಅವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ
ಸಾತ್ತ್ವಿಕೀ – ಪಾರ್ಥ, ಭಕ್ತಿಯೋಗದಿಂದ ಬಗೆಗೊಂಡು ಯಾವ ಗಟ್ಟಿತನದ ಮನಸ್ಸು, ಪ್ರಾಣ ಮತ್ತು
ಇಂದ್ರಿಯಗಳ ವ್ಯಾಪಾರಗಳನ್ನು ದಾರಿಗೆಡದಂತೆ ಧರಿಸಬಲ್ಲುದೋ ಅದು ಸಾತ್ವಿಕ ಧೈರ್ಯ.
ಯಾವ ಧೃತಿಯಿಂದ ಮನಸ್ಸು, ದೇಹ, ಇಂದ್ರಿಯಗಳು
ದಾರಿತಪ್ಪದೆ ಒಂದಕ್ಕೊಂದು ಪೂರಕವಾಗಿ ಭಕ್ತಿಯೋಗದಲ್ಲಿ ಕೆಲಸ ಮಾಡುತ್ತವೆ-ಅಂಥಹ ಧೃತಿ ಸಾತ್ವಿಕ ಧೃತಿ. ಮನಸ್ಸು ಯಥಾವತ್ತಾದದ್ದನ್ನು ಗ್ರಹಿಸುತ್ತದೆ, ಇಂದ್ರಿಯಗಳು ಮತ್ತು ದೇಹ ಅದಕ್ಕೆ ಪೂರಕವಾಗಿ,
ಭಕ್ತಿಯಿಂದ ಕೆಲಸ ಮಾಡುತ್ತವೆ. ಇಲ್ಲಿ ಯೋಗ ಎಂದರೆ
ಭಗವದ್ ಭಕ್ತಿಗೆ ಪೂರಕವಾಗಿ ವಾಸ್ತವವನ್ನು ಗ್ರಹಿಸುವ ಉಪಾಯ- ಅದೇ ನಮ್ಮ ಆತ್ಮವಿಶ್ವಾಸ. ಇದರಲ್ಲಿ
ಅನೇಕ ಮುಖಗಳಿವೆ. ಉದಾಹರಣೆಗೆ ‘ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯ’. ಸಾಮಾನ್ಯವಾಗಿ ತಪ್ಪನ್ನು ತಪ್ಪು ಎಂದು ಹೇಳಲು ಅನೇಕ ತೊಂದರೆಗಳಿರುತ್ತವೆ. ಇದಕ್ಕೆ ಮೊದಲ ಅಡ್ಡಿ-ದಾಕ್ಷಿಣ್ಯ. ಭಗವದ್ ಭಕ್ತಿಗೆ ಪೂರಕವಾದುದನ್ನು ನಾವು ನಿರ್ದಯವಾಗಿ ಹೇಳಿಬಿಡಬೇಕು. ದೈರ್ಯವಾಗಿ ತಪ್ಪನ್ನು ಪ್ರತಿಭಟಿಸಬೇಕು. ತಪ್ಪು ಗ್ರಹಿಕೆ ಮಾಡದೆ, ತಪ್ಪು ದಾರಿಯಲ್ಲಿ ಸಾಗದೆ, ಭಗವದ್
ಭಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳದೆ, ಸತ್ಯವನ್ನು ನಿಷ್ಠುರವಾಗಿ ಹೇಳುವುದು ಸಾತ್ವಿಕ ಧೃತಿ. ಮನಸ್ಸು ಕೆಟ್ಟದ್ದನ್ನು ಯೋಚಿಸದೆ ಇರುವುದು, ದೇಹ ಕೆಟ್ಟದ್ದರ ಕಡೆ ಚಲಿಸದೇ ಇರುವುದು,
ಇಂದ್ರಿಯಗಳು ಕೆಟ್ಟದ್ದನ್ನು ಗ್ರಹಿಸದೇ ಇರುವುದು- ಹೀಗೆ ಭಗವದ್ ಭಕ್ತಿಗೆ ಪೂರಕವಾಗಿರುವ ಎಲ್ಲವೂ
ಸಾತ್ವಿಕ ಧೃತಿ.
ಸಾಮಾನ್ಯವಾಗಿ ನಾವು ನಮ್ಮ ದೇಹ ಇಂದ್ರಿಯಗಳನ್ನು
ನಿಯಂತ್ರಿಸಬಹುದು, ಆದರೆ ಮನಸ್ಸು ಕೆಟ್ಟದ್ದನ್ನು ಯೋಚಿಸದಂತೆ ನಿಯಂತ್ರಿಸುವುದು ಬಹಳ ಕಷ್ಟದ ಕೆಲಸ. ಇದನ್ನು ಸಾಧಿಸಲು ಧೀರ್ಘಕಾಲದ ಸಾಧನೆ ಅಗತ್ಯ. ಈ ಎಲ್ಲ ವಿಷಯಗಳು ತಿಳಿದಾಗ ನಾವು ಸಾತ್ವಿಕ ಧೃತಿಯಿಂದ
ಎಷ್ಟು ದೂರದಲ್ಲಿದ್ದೇವೆ ಎನ್ನುವುದು ತಿಳಿಯುತ್ತದೆ ಮತ್ತು ನಮ್ಮನ್ನು ನಾವು ತಿದ್ದಿಕೊಂಡು ಸಾತ್ವಿಕ
ಧೃತಿಯತ್ತ ಸಾಗಲು ಸಹಾಯಕವಾಗುತ್ತದೆ.
ಯಯಾ ತು ಧರ್ಮಕಾಮಾರ್ಥಾನ್ ಧೃತ್ಯಾ ಧಾರಯತೇSರ್ಜುನ
।
ಪ್ರಸಂಗೇನ ಫಲಾಕಾಂಕ್ಷೀ ಧೃತಿಃ ಸಾ ಪಾರ್ಥ ರಾಜಸೀ ॥೩೪॥
ಯಯಾ ತು ಧರ್ಮ ಕಾಮ ಅರ್ಥಾನ್ ಧೃತ್ಯಾ
ಧಾರಯತೇ ಅರ್ಜುನ ।
ಪ್ರಸಂಗೇನ ಫಲ ಆಕಾಂಕ್ಷೀ ಧೃತಿಃ ಸಾ ಪಾರ್ಥ ರಾಜಸೀ – ಪಾರ್ಥ,
ಧರ್ಮ-ಕಾಮ-ಅರ್ಥಗಳನ್ನು ಓಲೈಸುವ, ಅತಿಯಾಗಿ ಹಚ್ಚಿಕೊಂಡು ಫಲದ ಆಸೆ ಹೊತ್ತ ಗಟ್ಟಿತನ ರಾಜಸ
ಧೈರ್ಯ.
ತಾಯಿ ತನ್ನ ಮಗುವನ್ನು ನಿಸ್ವಾರ್ಥವಾಗಿ
ಪ್ರೀತಿಸುವಂತೆ ಭಗವಂತನನ್ನು ಪ್ರೀತಿಸುವುದು ಭಕ್ತಿ. ಈ ಪ್ರೀತಿಯಲ್ಲಿ ಫಲಾಪೇಕ್ಷೆ ಸೇರಿದರೆ ಅದು
ಭಕ್ತಿ ಎನಿಸದೆ ಸ್ವಾರ್ಥ ಎನಿಸುತ್ತದೆ. ರಾಜಸ ತನ್ನ ಇಷ್ಟಾರ್ಥ ಸಿದ್ಧಿಗಾಗಿ ಆದಷ್ಟು ಧರ್ಮದ ಚೌಕಟ್ಟಿನಲ್ಲೇ
ಕಾರ್ಯ ನಿರ್ವಹಿಸಬಹುದು. ಆದರೆ ಆತ ಹಣವನ್ನು ಗಳಿಸುವುದಕ್ಕಾಗಿ ಅಥವಾ ಅತಿಯಾದ ಮೋಹದಿಂದ ಫಲದ ಆಸೆ
ಹೊತ್ತ ಗಟ್ಟಿತನ ತನ್ನದಾಗಿರಿಸಿಕೊಂಡಿರುತ್ತಾನೆ. ಇದು ರಾಜಸ ಧೃತಿ. ನಾವು ರಾಜಸ ಗುಣದ ಸ್ಪರ್ಶವಿಲ್ಲದ,
ಬಿಳಿಯಾದ(ಅರ್ಜುನ)-ಶುದ್ಧಸಾತ್ವಿಕರಾಗಬೇಕು ಎನ್ನುವುದು ಕೃಷ್ಣನ ಸಂದೇಶ.
ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ
ಚ ।
ನ ವಿಮುಂಚತಿ ದುರ್ಮೇಧಾ ಧೃತಿಃ ಸಾ ಪಾರ್ಥ
ತಾಮಸೀ ॥೩೫॥
ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ
ಚ ।
ನ ವಿಮುಂಚತಿ ದುರ್ಮೇಧಾ ಧೃತಿಃ ಸಾ ಪಾರ್ಥ
ತಾಮಸೀ – ಪಾರ್ಥ, ನಿದ್ದೆ, ಅಂಜಿಕೆ, ದುಗುಡ, ನಿರುತ್ಸಾಹ, ಸೋಕ್ಕುಗಳನ್ನು ಬಿಟ್ಟಿರಲಾಗದ
ತಿಳಿಗೇಡಿಯ ಗಟ್ಟಿತನವೆ ತಾಮಸ ಧೈರ್ಯ.
ಗ್ರಹಿಕೆಯಲ್ಲಿ ತಾಮಸ ಪ್ರವೃತ್ತಿ
ಉಳ್ಳವ ತಿಳಿಗೇಡಿ, ಅವಿವೇಕಿ. ಆತ ಒಳ್ಳೆಯ ಗ್ರಹಿಕೆಗಳಿಗೆ ಹೋಗುವುದೇ ಇಲ್ಲ. ಒಳ್ಳೆಯ ವಿಷಯ ಚರ್ಚೆಯಾಗುವಾಗ
ಈತ ನಿದ್ದೆಮಾಡುತ್ತಿರುತ್ತಾನೆ. ಈತನಿಗೆ ಯಾವಾಗಲೂ ಭಯ.[ಉದಾಹರಣೆಗೆ ಲಂಚ ತೆಗೆದುಕೊಳ್ಳುವುದು ಮತ್ತು ಅದರಿಂದಾಗಿ ಜೀವನಪೂರ್ತಿ ಭಯದಿಂದ ಬಾಳುವುದು]. ಈತನ ಜೀವನದಲ್ಲಿ
ಲವಲವಿಕೆ, ಉತ್ಸಾಹ, ಗೆಲುವು ಇರುವುದಿಲ್ಲ. ತಾನು ಶ್ರೇಷ್ಠ ಉಳಿದವರು ಕನಿಷ್ಠ ಎನ್ನುವ ಅಶಾಸ್ತ್ರೀಯವಾದ
ಸಂಕಲ್ಪ ತಾಮಸ ಧೃತಿ.
ಸುಖಂ ತ್ವಿದಾನೀಂ ತ್ರಿವಿಧಂ ಶೃಣು ಮೇ
ಭರತರ್ಷಭ ।
ಅಭ್ಯಾಸಾದ್ ರಮತೇ ಯತ್ರ ದುಃಖಾಂತಂ ಚ
ನಿಗಚ್ಛತಿ ॥೩೬॥
ಯತ್ ತದಗ್ರೇ ವಿಷಮಿವ ಪರಿಣಾಮೇSಮೃತೋಪಮಮ್
।
ತತ್ ಸುಖಂ ಸಾತ್ವಿಕಂ ಪ್ರೋಕ್ತಮಾತ್ಮಬುದ್ಧಿಪ್ರಸಾದಜಮ್ ॥೩೭॥
ಸುಖಮ್ ತು ಇದಾನೀಮ್ ತ್ರಿವಿಧಮ್ ಶೃಣು ಮೇ ಭರತರ್ಷಭ ।
ಅಭ್ಯಾಸಾತ್ ರಮತೇ ಯತ್ರ ದುಃಖಾಂತಮ್ ಚ ನಿಗಚ್ಛತಿ ||
ಯತ್ ತತ್ ಅಗ್ರೇ ವಿಷಮ್ ಇವ ಪರಿಣಾಮೇ
ಅಮೃತ ಉಪಮಮ್ ।
ತತ್ ಸುಖಮ್ ಸಾತ್ವಿಕಮ್ ಪ್ರೋಕ್ತಮ್ ಆತ್ಮ ಬುದ್ಧಿ ಪ್ರಸಾದಜಮ್ –– ಭರತರ್ಷಭ, ಈಗ ಮೂರುತೆರನಾದ ಸುಖವನ್ನು ನನ್ನಿಂದಾಲಿಸು: ಬಳಕೆಯಿಂದ ಖುಷಿಕೊಡುವಂಥದು,
ದುಃಖವನ್ನು ನೀಗಿಸುವಂಥದು, ಮೊದಲು ವಿಷದಂತೆ ಅಪ್ರೀಯವಾಗಿ ಕೊನೆಗೆ ಅಮೃತದಂತೆ ಹಿತ ನೀಡುವಂಥದು –ಇಂಥ
ಸುಖ-ಸಾತ್ವಿಕ. ಇದು ತನ್ನ ಬಗೆ ತಿಳಿಯಾದಾಗ, ಭಗವಂತನ ಕರುಣೆಯಿಂದ ಬರುವಂಥದು.
ಮನುಷ್ಯ ಒಟ್ಟಾಗಿ ಜೀವನದಲ್ಲಿ ಬಯಸುವುದು
ಸುಖವನ್ನು. ಆತನ ಜೀವನದ ಕೊನೆಯ ಗುರಿ ಸುಖ. ಆದರೆ ಯಾವುದು ನಿಜವಾದ ಸುಖ? ಸುಖದಲ್ಲೂ ಮೂರು ವಿಧ-ಸಾತ್ವಿಕ,
ರಾಜಸ ಮತ್ತು ತಾಮಸ. “ತ್ರೈವಿದ್ಯೆಯ ವಿವರಣೆಯ ಕೊನೆಯಲ್ಲಿ ಸುಖದ ಮೂರು ವಿಧದ ವಿವರಣೆಯನ್ನು ಕೇಳು”
ಎನ್ನುತ್ತಾನೆ ಕೃಷ್ಣ. ಇಲ್ಲಿ ಬಳಸಿರುವ ‘ಭರತರ್ಷಭ’ ಎನ್ನುವ ವಿಶೇಷಣದ ಹಿಂದೆ ವ್ಯಾಸರು ನಮಗೆ ಅನೇಕ ಸಂದೇಶವನ್ನು
ಕೊಟ್ಟಿರುವುದನ್ನು ನಾವು ಗಮನಿಸಬೇಕು. ಭಗವಂತನ ಭಕ್ತಿಯಲ್ಲಿ-ರತ(ಶ್ರೇಷ್ಠ)ರಾದಾಗ; ಭರತನಂತೆ ಲೌಕಿಕ
ಸುಖದ ಆಸೆ ಇಲ್ಲದೆ ಪೂರ್ಣ ಪ್ರಮಾಣದಲ್ಲಿ ಶ್ರೀರಾಮಚಂದ್ರನನ್ನು ಪ್ರೀತಿಸಿದಾಗ; ಭಗವಂತನ ಭಕ್ತಿಯಲ್ಲಿ
ನಿರತರಾದವರಲ್ಲಿ ಶ್ರೇಷ್ಠರಾದ ವಾಯು(ಹನುಮಂತ)ದೇವರಲ್ಲಿ ಗುರುಭಕ್ತಿಯನ್ನಿಟ್ಟು, ಭಗವದರ್ಪಣಾಭಾವದಿಂದ
ನಮ್ಮ ಕರ್ಮ ನಿರ್ವಹಿಸಿದಾಗ- ನಾವು ಭರತರ್ಷಭರಾಗಬಹುದು. ಭರತರ್ಷಭನಾದವನಿಗೆ ನಿಜವಾದ ಸುಖ ಎಂದರೇನು ಎಂದು ತಿಳಿದು ಅದನ್ನು ಅನುಭವಿಸಲು ಸಾಧ್ಯ.
ಯಾವುದೇ ಒಂದು ವಿಷಯ ಪ್ರಾರಂಭದಿಂದಲೇ
ಸುಖವಾಗಿ ಕಾಣಿಸಿದರೆ ಅದು ಸಾತ್ವಿಕ ಸುಖವಲ್ಲ. ಕಷ್ಟಪಡದೆ ಅನಾಯಾಸವಾಗಿ ಪಡೆಯುವುದು ಮೋಹದ ಸುಖ. ಸಾತ್ವಿಕ
ಸುಖ ಮೊದಲು ಕಷ್ಟ ರೂಪದಲ್ಲಿರುತ್ತದೆ. ಇದಕ್ಕೆ ಉತ್ತಮ ದೃಷ್ಟಾಂತ ಸಮುದ್ರಮಥನ. ಅಲ್ಲಿ
ಮೊದಲು ಬಂದಿರುವುದು ಅಮೃತವಲ್ಲ ಬದಲಿಗೆ ವಿಷ. ನಿಜವಾದ ಅಮೃತ ಸಿಕ್ಕಿರುವುದು ಕೊನೆಯಲ್ಲಿ. ಕೈಕೆಸರಾದರೆ ಬಾಯಿ ಮೊಸರು-ಕಷ್ಟಪಟ್ಟರೆ ಸುಖ. ನಾವು ಕುಡಿಯುವ ಔಷಧ ವಿಷದಂತೆ ಕಹಿ, ಆದರೆ ಅದರಿಂದ
ಬರುವ ಆರೋಗ್ಯ ಅಮೃತದಂತೆ ಸಿಹಿ.
ಕೃಷ್ಣ ಇಲ್ಲಿ “ಆತ್ಮ ಬುದ್ಧಿ ಪ್ರಸಾದಜಮ್”
ಎನ್ನುವ ಒಂದು ಅಪೂರ್ವ ವಿಶೇಷಣವನ್ನು ಬಳಸಿದ್ದಾನೆ. ಆತ್ಮಪ್ರಸಾದ ಅಂದರೆ ದೇವರ ಅನುಗ್ರಹ. ಸಾತ್ವಿಕ ಸುಖ ನಾವು ಬೇಕು ಎಂದು ಬಯಸಿದಾಗ ಸಿಗುವುದಿಲ್ಲ. ಅದು ಭಗವಂತನ ಅನುಗ್ರಹದಿಂದ ಸಿಗುವಂಥದ್ದು. ಅದನ್ನು ಪಡೆಯಲು ನಮಗೆ ಪಾರದರ್ಶಕವಾದ ಶುದ್ಧ
ಮನಸ್ಸಿರಬೇಕು. ಅದು ಹೊರಗಿನಿಂದ ಬರುವುದಲ್ಲ ಬದಲಿಗೆ ಒಳಗಿನಿಂದ ಚಿಮ್ಮುವುದು. ಹೀಗೆ ಭಗವಂತನ
ಅನುಗ್ರಹ ಮತ್ತು ಮನಸ್ಸಿನ ಪ್ರಸನ್ನತೆಯಿದ್ದಾಗ ಒಳಗಿನ ಸ್ವರೂಪಾನಂದದ ಸುಖವನ್ನು ಅನುಭವಿಸಲು ಸಾಧ್ಯ.
ವಿಷಯೇಂದ್ರಿಯ ಸಂಯೋಗಾದ್ ಯತ್ ತದಗ್ರೇSಮೃತೋಪಮಮ್ ।
ಪರಿಣಾಮೇ ವಿಷಮಿವ ತತ್ ಸುಖಂ ರಾಜಸಂ ಸ್ಮೃತಮ್ ॥೩೮॥
ವಿಷಯ ಇಂದ್ರಿಯ ಸಂಯೋಗಾತ್ ಯತ್ ತತ್ ಅಗ್ರೇ
ಅಮೃತ ಉಪಮಮ್ ।
ಪರಿಣಾಮೇ ವಿಷಮ್ ಇವ ತತ್ ಸುಖಮ್ ರಾಜಸಮ್
ಸ್ಮೃತಮ್ -- ವಿಷಯ ಮತ್ತು ಇಂದ್ರಿಯಗಳ ನಂಟಿನಿಂದ ಉಂಟಾಗುವಂಥದು, ಮೊದಲು ಅಮೃತದಂತೆ ರೋಚಕ,
ಕಡೆಗೆ ವಿಷದಂತೆ ಅಪಾಯಕಾರಿ –ಅಂಥ ಸುಖ ರಾಜಸ ಎನಿಸುತ್ತದೆ.
ಯಾವುದು ಮೊದಲು ಅನುಭವಿಸುವಾಗ ಬಹಳ ಸುಖವನ್ನು
ಕೊಟ್ಟು ಆ ನಂತರ ಪರಿಣಾಮ ದುಃಖಕರವಾಗಿರುತ್ತದೆ ಅದು ರಾಜಸ ಸುಖ. ಇದು ಬಾಹ್ಯಸುಖ. ಇದು ಹೊರಗಿನ ವಿಷಯಗಳಿಗೂ ನಮ್ಮ ಇಂದ್ರಿಯಗಳಿಗೂ
ಸಂಪರ್ಕದಿಂದ ತತ್ಕಾಲಕ್ಕೆ ಸಿಗುವ ಸುಖ. ಇಂದು ನಾವು ಕಾಣುವ ಹೆಚ್ಚಿನ ಅಪರಾಧ ಸುದ್ಧಿಗಳು
ಈ ರೀತಿಯ ಕ್ಷಣಿಕ ಸುಖದ ಹಿಂದೆ ಹೋಗಿ ಆಗುವ ಪರಿಣಾಮ. ವಿಷಯ ಸುಖವನ್ನು ಅನುಭವಿಸುವುದು ತಪ್ಪಲ್ಲ, ಆದರೆ ಅನುಭವಿಸಿ
ಅದನ್ನು ಮೀರಿನಿಲ್ಲುವುದು ಬಹಳ ಮುಖ್ಯ. ಹಿಂದಿನವರು ಮುಖ್ಯವಾಗಿ ಎರಡನ್ನು ಗೆಲ್ಲು ಎಂದಿದ್ದಾರೆ. ಒಂದು-ಆಹಾರದ ಚಟ ಇನ್ನೊಂದು ಲೈಂಗಿಕ ಚಪಲ. ಒಟ್ಟಿನಲ್ಲಿ ಕ್ಷಣಿಕವಾದ ಇಂದ್ರಿಯ ಸುಖವನ್ನು ಗೆಲ್ಲುವುದು ಬಹಳ ಮುಖ್ಯ.
ಯದಗ್ರೇ ಚಾನುಬಂಧೇ ಚ ಸುಖಂ ಮೋಹನಮಾತ್ಮನಃ ।
ನಿದ್ರಾಲಸ್ಯಪ್ರಮಾದೋತ್ಥಂ ತತ್ ತಾಮಸಮುದಾಹೃತಮ್ ॥೩೯॥
ಯತ್ ಅಗ್ರೇ ಚ ಅನುಬಂಧೇ ಚ ಸುಖಂ ಮೋಹನಮ್ ಆತ್ಮನಃ ।
ನಿದ್ರಾ ಆಲಸ್ಯ ಪ್ರಮಾದ ಉತ್ಥಂ ತತ್ ತಾಮಸಮ್ ಉದಾಹೃತಮ್ –– ಮೊದಲೂ ಕೊನೆಗೂ ಮತ್ತು ಬರಿಸಿ ಮೈಮರೆಸುವಂಥ ಸುಖ, ನಿದ್ದೆ-ಮೈಗಳ್ಳತನ-ಎಚ್ಚರಗೇಡಿತನಗಳಿಂದ ಸಿಗುವಂಥ
ಸುಖ-ತಾಮಸ ಎನಿಸುತ್ತದೆ.
ಮನುಷ್ಯನನ್ನು ವಾಸ್ತವ ಪ್ರಪಂಚದಿಂದ ಭ್ರಮೆಗೆ
ತಳ್ಳಿ, ಅವನನ್ನು ಮೋಹದಬಲೆಯಲ್ಲಿ ಬೀಳಿಸಿ,
ಬುದ್ಧಿಗೇಡಿಯನ್ನಾಗಿಸಿ, ಸಂತೋಷದ ಭ್ರಮೆ ಹುಟ್ಟಿಸುವುದು ತಾಮಸ ಸುಖ. ಇದರಲ್ಲಿ ಮೊದಲೂ ಸುಖವಿಲ್ಲ,
ಕೊನೆಗೂ ಸುಖವಿಲ್ಲ. ಉದಾಹರಣೆಗೆ ಮದ್ಯಪಾನ, ಧೂಮಪಾನ ಇತ್ಯಾದಿ ಎಲ್ಲ ದುಶ್ಚಟಗಳು.
ಸೋಮಾರಿತನದಿಂದ ಬರುವ ಸುಖ,
ನಿದ್ದೆಯಿಂದ ಬರುವ ಸುಖ, ಎಚ್ಚರಗೇಡಿತನದಿಂದ ಬರುವ ಸುಖ-ಇವು ಒಳಗಿನ ಮನಸ್ಸನ್ನು ಕೊಂದು ಪಡೆಯುವ ಬಾಹ್ಯ
ಸುಖ- ಇದು ತಾಮಸ. ಉದಾಹರಣೆಗೆ ನಿದ್ದೆ. ಮನುಷ್ಯ ಮಗುವಾಗಿದ್ದಾಗ ಆತನಿಗೆ ಇಪ್ಪತ್ತು ಗಂಟೆ ನಿದ್ದೆ ಮತ್ತು
ನಾಲ್ಕು ಗಂಟೆ ಎಚ್ಚರ ಅಗತ್ಯ. ಆದರೆ ಪ್ರಬುದ್ಧನಾದವನಿಗೆ ನಾಲ್ಕು ಗಂಟೆ ನಿದ್ದೆ ಸಾಕು. ಆತ ಅಭ್ಯಾಸ
ಮಾಡಿದರೆ ಇಪ್ಪತ್ತು ಗಂಟೆ ಎಚ್ಚರವಾಗಿರಬಹುದು. ಆದರೆ ತಾಮಸ ಸುಖ ದಿನವಿಡೀ
ನಿದ್ದೆ ಮಾಡುವುದೇ ಪರಮ ಸುಖ ಎಂದು ಭ್ರಮೆ ಹುಟ್ಟಿಸಿ ಮನುಷ್ಯನನ್ನು ದಾರಿ ತಪ್ಪಿಸುತ್ತದೆ.
No comments:
Post a Comment