Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Showing posts with label Bhagavad GitA phalashruti. Show all posts
Showing posts with label Bhagavad GitA phalashruti. Show all posts

Sunday, January 8, 2012

ಭಗವದ್ಗೀತಾ-ಫಲಶ್ರುತಿಃ ಮತ್ತು ಉಪಸಂಹಾರ (ಅಧ್ಯಾಯ-18 ಶ್ಲೋಕ 67-78)


         ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ ।
         ನಚಾಶುಶ್ರೂಷವೇ ವಾಚ್ಯಂ ನಚ ಮಾಂ ಯೋSಭ್ಯಸೂಯತಿ       ॥೬೭॥

ಇದಂ ತೇ ನ ಅತಪಸ್ಕಾಯ ನ ಅಭಕ್ತಾಯ ಕದಾಚನ ।
ನಚಾಶುಶ್ರೂಷವೇ ವಾಚ್ಯಂ ನಚ ಮಾಂ ಯಃ ಅಭ್ಯಸೂಯತಿ – ಇದನ್ನು ನೇಮದ ನಿಷ್ಠೆ ಇರದವರಿಗೆ ಹೇಳಬೇಡ. ಭಕ್ತಿ ಇರದವನಿಗೆ ಎಂದೂ ಹೇಳಬೇಡ. ಕೇಳುವಾಸೆ ಇರದವನಿಗೂ ಹೇಳಬೇಡ. ನನ್ನ ಬಗೆಗೆ ಕಿಚ್ಚು ಪಡುವವನಿಗಂತು ಹೇಳಲೇಬೇಡ.

ಇಲ್ಲಿ ಕೃಷ್ಣ ಜ್ಞಾನದ ಪರಂಪರೆಯನ್ನು ಹೇಗೆ ರಕ್ಷಿಸಬೇಕು ಎನ್ನುವುದನ್ನು ವಿವರಿಸಿದ್ದಾನೆ.  ಯಾರಿಗೆ ಆಳವಾದ ಚಿಂತನಶೀಲತೆ ಇಲ್ಲವೋ ಅವರಿಗೆ ಇದನ್ನು ಹೇಳಬೇಡ; ಚಿಂತನಶೀಲತೆ ಇದ್ದು ಕೇಳುವ ಆಸಕ್ತಿ ಇಲ್ಲದವರಿಗೆ ಇದನ್ನು ಹೇಳಬೇಡ; ಆಸಕ್ತಿ ಇದೆ ಆದರೆ ಭಕ್ತಿ/ಪ್ರೀತಿ ಇಲ್ಲ-ಅಂಥವರಿಗೆ ಇದನ್ನು ಹೇಳಬೇಡ; ಎಲ್ಲಕ್ಕಿಂತ ಮಿಗಿಲಾಗಿ ಭಗವಂತನ ಬಗ್ಗೆ ಅಸಹನೆ,ಅಸೂಯೆ, ದ್ವೇಷವುಳ್ಳವರಿಗೆ ಸರ್ವತಾ ಹೇಳಲೇಬೇಡ.  ಎಂದೂ ಅಧ್ಯಾತ್ಮವನ್ನು ಬೀದಿಯ ಸೊತ್ತಾಗಿಸಬೇಡ.
ಒಂದು ಕಾಲದಲ್ಲಿ ವೇದಾಂತವನ್ನು ಸಾರ್ವಜನಿಕವಾಗಿ ಬಿಚ್ಚಿಡಬಾರದು, ಅದನ್ನು ರಹಸ್ಯವಾಗಿಡಬೇಕು ಎನ್ನುವ ಅಭಿಪ್ರಾಯ ಹೆಚ್ಚಾಗಿ ಬೆಳೆಯಿತು. ಇದರ ಪರಿಣಾಮ ಕಾಲಕ್ರಮೇಣ ಮುಚ್ಚಿಟ್ಟ ಜ್ಞಾನವನ್ನು ತೆರೆಯುವವರೇ ಇಲ್ಲವಾಯಿತು. ಇಂದು ನಮ್ಮಲ್ಲಿ ಹೆಚ್ಚಿನವರು ಆಧ್ಯಾತ್ಮಿಕ ಗ್ರಂಥಗಳಿಗೆ ಆರತಿ ಮಾಡಿ ಕುಂಕುಮ ಹಚ್ಚಿ ಮುಚ್ಚಿಡುವವರೇ ಹೆಚ್ಚಾಗಿದ್ದಾರೆ. ಈ ಕಾರಣದಿಂದ ನಾವು ಮುಚ್ಚಿಟ್ಟ ಈ ಅಮೂಲ್ಯ ಜ್ಞಾನವನ್ನು ತೆರೆದು ಆಸಕ್ತಿವುಳ್ಳವರಿಗೆ ಕೊಡುವ ಕೆಲಸ ಮಾಡಬೇಕಾಗಿದೆ.

ಭಗವದ್ಗೀತೆಯ ಈ ಅಮೂಲ್ಯ ಸಂದೇಶದ ಅಧ್ಯಯನ ಮಾಡಿ ಮನನ ಮಾಡುವುದರಿಂದ ಸಿಗುವ ಫಲಶ್ರುತಿ ಏನು ಎನ್ನುವುದನ್ನು ಕೃಷ್ಣ ಮುಂದಿನ ನಾಲ್ಕು ಶ್ಲೋಕಗಳಲ್ಲಿ ವಿವರಿಸಿದ್ದಾನೆ. ಭಗವದ್ಗೀತೆಯ ನಿಜವಾದ ಫಲ ಮನುಷ್ಯನ ಪುರುಷಾರ್ಥದಲ್ಲಿ ಕೊನೆಯದಾದ ಮೋಕ್ಷ. ಅಧ್ಯಾತ್ಮ ವಿದ್ಯೆಯನ್ನು ಹೇಳುವ ಸಮಸ್ತ ಶಾಸ್ತ್ರಗಳ ಸಾರ ಭಗವದ್ಗೀತೆ. ಭಗವಂತನ ಸ್ವರೂಪವನ್ನು ತಿಳಿದು ಭಗವಂತನ ಲೋಕ ಸೇರಲು ಇದೊಂದೇ ಗ್ರಂಥ ಸಾಕು. ಸಮಸ್ತ ಶಾಸ್ತ್ರಗಳಲ್ಲಿನ ಸಮಸ್ತ ಸಾರವನ್ನು, ಸಮಸ್ತ ರಹಸ್ಯವನ್ನು  ನಾವು ಈ ಕೃಷ್ಣಾರ್ಜುನ ಸಂವಾದದಲ್ಲಿ ಕಾಣಬಹುದು. ಈ ರೀತಿ ಎಲ್ಲ ಶಾಸ್ತ್ರಗಳ  ಪೂರ್ಣ ಸಾರಸಂಗ್ರಹ ಅಡಕವಾಗಿರುವ ಗ್ರಂಥ ಇನ್ನೊಂದಿಲ್ಲ.  ಇಂಥಹ ಗೀತೆಯನ್ನು ನಾವು ಗುರು ಮುಖೇನ ತಿಳಿಯುವುದರಿಂದ; ಮನನ ಮಾಡುವುದರಿಂದ; ಇಲ್ಲಿ ಹೇಳಿರುವ ಸಾಧನಾ ಉಪಾಯವನ್ನು  ಜೀವನದಲ್ಲಿ ಅನುಸರಿಸುವುದರಿಂದ; ನಾವು ತಿಳಿದ ಜ್ಞಾನವನ್ನು ಆಸಕ್ತರಿಗೆ ತಿಳಿಸುವುದರಿಂದ-ನಾವು ಭಗವಂತನ ಲೋಕವನ್ನು(ಮೋಕ್ಷವನ್ನು) ಸೇರಬಹುದು.

        ಯ ಇಮಂ ಪರಮಂ ಗುಹ್ಯಂ ಮದ್ ಭಕ್ತೇಷ್ವಭಿಧಾಸ್ಯತಿ ।
        ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯಸಂಶಯಃ            ॥೬೮॥

ಯಃ  ಇಮಂ ಪರಮಂ ಗುಹ್ಯಂ ಮತ್  ಭಕ್ತೇಷು ಅಭಿಧಾಸ್ಯತಿ ।
ಭಕ್ತಿಂ ಮಯಿ ಪರಾಂ ಕೃತ್ವಾ ಮಾಮ್ ಏವ ಏಷ್ಯತಿ ಅಸಂಶಯಃ – ತುಂಬ ಗೋಪ್ಯವಾದ ಇದನ್ನು ನನ್ನ ಭಕ್ತರಲ್ಲಿ ಅರುಹುವವನು ನನ್ನಲ್ಲಿ ಹಿರಿಯ ಭಕ್ತಿಯನ್ನು ಮಾಡಿ ನನ್ನನ್ನೆ ಸೇರುತ್ತಾನೆ; ಸಂಶಯವಿಲ್ಲ.

ಇಂಥಹ ಜ್ಞಾನವನ್ನು ಅರಿತು, ಅದನ್ನು  'ನನ್ನಲ್ಲಿ ಶ್ರದ್ಧಾಭಕ್ತಿಯುಳ್ಳ ಸಾಧಕನಿಗೆ' ಕೊಡುತ್ತಾರೋ ಅವರು ನಿಶ್ಚಿತವಾಗಿ ನನ್ನನ್ನು ಬಂದು ಸೇರುತ್ತಾರೆ. ಇದರಲ್ಲಿ ಸಂಶಯವಿಲ್ಲ. 

        ನಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್ ತಮಃ ।
        ಭವಿತಾ ನಚ ಮೇ ತಸ್ಮಾದನ್ಯಃ ಪ್ರಿಯತರೋ ಭುವಿ                    ॥೬೯॥

ನಚ ತಸ್ಮಾತ್ ಮನುಷ್ಯೇಷು ಕಶ್ಚಿತ್ ಮೇ  ಪ್ರಿಯಕೃತ್ ತಮಃ ।
ಭವಿತಾ ನಚ ಮೇ ತಸ್ಮಾತ್ ಅನ್ಯಃ ಪ್ರಿಯತರಃ ಭುವಿ – ಮನುಷ್ಯರಲ್ಲಿ ಅವನಿಗಿಂತ ಹೆಚ್ಚು ಮೆಚ್ಚಿನವನು ನನಗೆ ಇನ್ನೊಬ್ಬನಿಲ್ಲ. ಅವನಿಗಿಂತ ಹೆಚ್ಚು ಮೆಚ್ಚಿನ ಇನ್ನೊಬ್ಬ ಭೂಮಿಯಲ್ಲಿ ಮುಂದೆ ಹುಟ್ಟಲಾರ.

“ಗೀತೆಯನ್ನು ತಿಳಿದು ಅದನ್ನು ಭಕ್ತ ಜನಾಂಗಕ್ಕೆ ತಲುಪಿಸುವ ಶ್ರೇಷ್ಠ ಕಾರ್ಯ ಮಾಡುವವರು ‘ಮನುಷ್ಯರಲ್ಲಿ’ ನನಗೆ ಅತ್ಯಂತ ಮೆಚ್ಚಿನವರು. ಇವರಿಗಿಂತ ಹೆಚ್ಚು ಇಷ್ಟವಾದದ್ದನ್ನು ಮಾಡುವ ಮಾನವ ಈ ಭೂಮಿಯ ಮೇಲೆ  ಇಲ್ಲ” ಎನ್ನುತ್ತಾನೆ ಕೃಷ್ಣ. ಭಗವಂತನಿಗೆ ಜ್ಞಾನಿಗಳು ಅಚ್ಚುಮೆಚ್ಚು. ಅವರಿಗಿಂತಲೂ ಅಚ್ಚುಮೆಚ್ಚು ತಾವು ಜ್ಞಾನಿಗಳಾಗಿ, ಆ ಜ್ಞಾನದ ಸವಿಯನ್ನು ಸಮಾಜಕ್ಕೆ ಕೊಡುವವರು. “ಇವರು ಭೂಮಿಯಲ್ಲಿ ನನಗೆ ಇಷ್ಟವಾದುದ್ದನ್ನು ಮಾಡುವವರಲ್ಲಿ ಸರ್ವಶ್ರೇಷ್ಠರು” ಎಂದಿದ್ದಾನೆ ಕೃಷ್ಣ.

       ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯಂ ಸಂವಾದಮಾವಯೋಃ ।
       ಜ್ಞಾನಯಜ್ಞೇನ ತೇನಾಹಮಿಷ್ಟಃ ಸ್ಯಾಮಿತಿ ಮೇ ಮತಿಃ                  ॥೭೦॥

ಅಧ್ಯೇಷ್ಯತೇ ಚ ಯಃ  ಇಮಂ ಧರ್ಮ್ಯಂ ಸಂವಾದಮ್ ಆವಯೋಃ ।
ಜ್ಞಾನ ಯಜ್ಞೇನ ತೇನ ಅಹಮ್ ಇಷ್ಟಃ  ಸ್ಯಾಮ್ ಇತಿ ಮೇ ಮತಿಃ  -- ಜೀವನಧರ್ಮವನ್ನರುಹುವ ನಮ್ಮ ಈ ಮಾತುಕತೆಯನ್ನು ಅಧ್ಯಯನ ಮಾಡಿದರೆ ಕೂಡ ಜ್ಞಾನಯಜ್ಞದಿಂದ ನನ್ನನ್ನು ಪೂಜಿಸಿದಂತಾಯಿತು ಎಂದು ನನ್ನ ಆಶಯ.

ಒಂದು ವೇಳೆ ಗೀತೆಯ ಜ್ಞಾನವನ್ನು ಅರಗಿಸಿಕೊಂಡು ಇನ್ನೊಬ್ಬರಿಗೆ ಹೇಳುವ ಕ್ಷಮತೆ ನಮ್ಮಲ್ಲಿಲ್ಲದಿದ್ದರೆ,  ಧರ್ಮ ವಿಷಯಕವಾದ ಈ ಕೃಷ್ಣಾರ್ಜುನ ಸಂವಾದವನ್ನು ಗುರುಮುಖದಲ್ಲಿ ಅಧ್ಯಯನ ಮಾಡಿದರೆ ಕೂಡ-ಅದು ಜ್ಞಾನ ಯಜ್ಞದಂತೆ ಭಗವಂತನ ಪೂಜೆಯಾಗುತ್ತದೆ. “ಇದು ನನ್ನ ಅಭಿಪ್ರಾಯ” ಎಂದು ಹೇಳುತ್ತಾನೆ ಕೃಷ್ಣ. ಭಗವಂತನ ಬಗೆಗೆ ಮನುಷ್ಯ ಏನೇನು ತಿಳಿದುಕೊಳ್ಳಬೇಕು, ಅದನ್ನು ತಿಳಿದು ಹೇಗೆ ಧರ್ಮದ ದಾರಿಯಲ್ಲಿ ಸಾಗಬೇಕು ಎನ್ನುವ 'ಜೀವನ ಧರ್ಮವನ್ನು' ಗೀತೆಯ ಮೂಲಕ ತಿಳಿದು ಪಾಲಿಸುವವ-ಮೋಕ್ಷವನ್ನು ಸೇರುತ್ತಾನೆ.    

       ಶ್ರದ್ಧಾವಾನನಸೂಯಶ್ಚ ಶೃಣುಯಾದಪಿ ಯೋ ನರಃ ।
       ಸೋSಪಿ ಮುಕ್ತಃ ಶುಭಾನ್ ಲೋಕಾನ್ ಪ್ರಾಪ್ನುಯಾತ್ ಪುಣ್ಯಕರ್ಮಣಾಮ್ ॥೭೧॥

ಶ್ರದ್ಧಾವಾನ್ ಅನಸೂಯಃ ಚ  ಶೃಣುಯಾತ್ ಅಪಿ ಯಃ  ನರಃ ।
ಸಃ ಅಪಿ ಮುಕ್ತಃ ಶುಭಾನ್ ಲೋಕಾನ್ ಪ್ರಾಪ್ನುಯಾತ್ ಪುಣ್ಯಕರ್ಮಣಾಮ್ – ನಂಬಿಕೆ ಇರುವ, ಕಿಚ್ಚು ಇರದ ಮನುಷ್ಯ ಕೇಳಿದರೂ ಸಾಕು. ಅಂಥವನೂ ಪಾಪದಿಂದ ಬಿಡುಗಡೆಗೊಂಡು ಪುಣ್ಯಜೀವಿಗಳ ಮಂಗಲಮಯ ಲೋಕಗಳನ್ನು ಪಡೆದಾನು.

ಒಂದು ವೇಳೆ ಗೀತೆಯನ್ನು ಸ್ವಯಂ ಅಧ್ಯಯನ ಮಾಡುವ ಸಾಮರ್ಥ್ಯ ನಮ್ಮಲ್ಲಿ ಇಲ್ಲದೇ ಇದ್ದಾಗ, ಯಾವುದೇ ಅಸೂಯೆ ಇಲ್ಲದೆ, ಶ್ರದ್ಧಾಭಕ್ತಿಯಿಂದ  ತಿಳಿದವರಿಂದ ಕೇಳಿ  ತಿಳಿದುಕೊಂಡರೂ ಸಾಕು- ನಾವು ನಮ್ಮ  ಪಾಪವನ್ನು ತೊಳೆದುಕೊಂಡು ಭಗವಂತನ ಲೋಕವನ್ನು ಸೇರಬಹುದು. ಇದು ಕೃಷ್ಣನ ಭರವಸೆ.

       ಕಚ್ಚಿದೇತಚ್ಛ್ರುತಂ ಪಾರ್ಥ ತ್ವಯೈಕಾಗ್ರೇಣ ಚೇತಸಾ ।
       ಕಚ್ಚಿದಜ್ಞಾನಸಂಮೋಹಃ ಪ್ರನಷ್ಟಸ್ತೇ ಧನಂಜಯ                        ॥೭೨॥

ಕಚ್ಚಿತ್ ಏತತ್ ಶ್ರುತಂ ಪಾರ್ಥ ತ್ವಯಾ ಏಕಾಗ್ರೇಣ ಚೇತಸಾ ।
ಕಚ್ಚಿತ್ ಅಜ್ಞಾನ ಸಂಮೋಹಃ ಪ್ರಣಷ್ಟಃ ತೇ  ಧನಂಜಯ – ಪಾರ್ಥ, ಇದನ್ನು ಒಮ್ಮನದಿಂದ ಕಿವಿಗೊಟ್ಟು ಕೇಳಿದೆಯೇನು? ಧನಂಜಯ, ನಿನ್ನ ಅಜ್ಞಾನದ ಗೊಂದಲ ಕಳೆಯಿತೇನು?

ಇದು ಗೀತೆಯಲ್ಲಿ ಕೃಷ್ಣನ ಕೊನೇಯ ಮಾತು.  ಎಲ್ಲವನ್ನು ವಿವರಿಸಿದ ಕೃಷ್ಣ ತನ್ನ ಶಿಷ್ಯ ಅರ್ಜುನನಲ್ಲಿ ಕೇಳುತ್ತಾನೆ: “ನಾನು ಹೇಳಿದ್ದು  ನಿನ್ನ ಕಿವಿಯೊಳಗೆ ಹೋಗಿ ಹೃದಯಕ್ಕೆ ಮುಟ್ಟಿತೇನೋ?  ಇದರಿಂದ ನಿನ್ನ ಮನಸ್ಸಿನಲ್ಲಿದ್ದ ತಪ್ಪು ತಿಳುವಳಿಕೆ ಗೊಂದಲ ಕಳೆಯಿತೇ?"  ಎಂದು. ಇಲ್ಲಿ  ಕೃಷ್ಣ -ಗುರು ತನ್ನ ಶಿಷ್ಯನಲ್ಲಿ ಕೇಳುವಂತೆ ಅರ್ಜುನನನ್ನು ಪ್ರಶ್ನಿಸಿದ್ದಾನೆ. ಇಲ್ಲಿಗೆ ಗೀತೆಯಲ್ಲಿ ಕೃಷ್ಣನ  ನುಡಿಗಳುಳ್ಳ ೫೭೪ ಶ್ಲೋಕಗಳು ಮುಗಿಯಿತು. ಅರ್ಜುನನ ಒಟ್ಟು ೮೪ ಶ್ಲೋಕಗಳಲ್ಲಿ ಕೊನೇಯ ಶ್ಲೋಕ ಮತ್ತು ಸಂಜಯನ ಒಟ್ಟು ೪೧ ಶ್ಲೋಕಗಳಲ್ಲಿ ಕೊನೇಯ ಐದು ಶ್ಲೋಕ ಈ ಅಧ್ಯಾಯದ ಉಳಿದ ಭಾಗ. [ಕೃಷ್ಣ-೫೭೪; ಅರ್ಜುನ-೮೪; ಸಂಜಯ-೪೧ ; ಧೃತರಾಷ್ಟ್ರ-೧ ; ಒಟ್ಟು ೭೦೦ ಶ್ಲೋಕಗಳು]      

      ಅರ್ಜುನ ಉವಾಚ ।
         ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್ ಪ್ರಸಾದಾನ್ಮಯಾSಚ್ಯುತ ।
         ಸ್ಥಿತೋSಸ್ಮಿ ಗತಸಂದೇಹಃ ಕರಿಷ್ಯೇ ವಚನಂ ತವ                  ॥೭೩॥

ಅರ್ಜುನ ಉವಾಚ-ಅರ್ಜುನ ಹೇಳಿದನು.
ನಷ್ಟಃ ಮೋಹಃ ಸ್ಮೃತಿ ಲಬ್ದಾ  ತ್ವತ್ ಪ್ರಸಾದಾತ್ ಮಯಾ ಅಚ್ಯುತ ।
ಸ್ಥಿತಃ ಅಸ್ಮಿ ಗತಸಂದೇಹಃ ಕರಿಷ್ಯೇ ವಚನಂ ತವ –ಅಚ್ಯುತ, ಗೊಂದಲ ಕಳೆಯಿತು. ನಿನ್ನ ಹಸಾದದಿಂದ ನನ್ನ ನೆನಪು ಮರುಕಳಿಸಿತು. ಸಂದೇಹವಳಿದು ಗಟ್ಟಿಯಾಗಿ ನಿಂತಿದ್ದೇನೆ. ನಿನ್ನ ಮಾತಿನಂತೆ ನಡೆಯುತ್ತೇನೆ.

ನನ್ನಲ್ಲಿದ್ದ ತಪ್ಪು ತಿಳುವಳಿಕೆ ಕಳೆಯಿತು. ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯಲಿಕ್ಕಾಗದ  ಸ್ಥಿತಿ ನನ್ನಲ್ಲಿತ್ತು- ಅದು ಹೊರಟು ಹೋಯಿತು. ಬಂಧುಮೋಹದಲ್ಲಿ ಹೊರಟುಹೋಗಿದ್ದ ನನ್ನ ಸ್ಮೃತಿ ಮರಳಿ ಬಂತು. ಅಚ್ಯುತನಾದ ನಿನ್ನ ಅನುಗ್ರಹದಿಂದ ನನ್ನ ಮರೆವು ಮರೆಯಾಯ್ತು. ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ನಿನ್ನ ಮಾತು ಮನವರಿಕೆಯಾಗಿದೆ. ನಿನ್ನ ಮಾತಿನಂತೆಯೇ ನಡೆಯುತ್ತೇನೆ.
ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ ಅರ್ಜುನ ಕೃಷ್ಣನ ಉಪದೇಶದಿಂದ ‘ನನಗೆ ಜ್ಞಾನ ಬಂತು’ ಎಂದು ಹೇಳದೆ- ಸ್ಮೃತಿ ಬಂತು ಎಂದಿದ್ದಾನೆ. ಇದರಿಂದ ನಮಗೆ ತಿಳಿವುದೇನೆಂದರೆ- ಅರ್ಜುನ ಆ ಕಾಲದ ಮಹಾಜ್ಞಾನಿ.  ಆದರೆ ಯುದ್ಧರಂಗದಲ್ಲಿ ಆತ ತನ್ನೆಲ್ಲ ಸ್ಮೃತಿಯನ್ನು ಕಳೆದುಕೊಂಡು ಕುಸಿದು ಕುಳಿತ. ಇದೊಂದು ಭಗವಂತನ ಆಟ. ಪ್ರಪಂಚಕ್ಕೆ ಇಂಥಹ ಅಮೂಲ್ಯವಾದ ಕೃತಿಯನ್ನು ನೀಡುವುದಕ್ಕೋಸ್ಕರ ಕೃಷ್ಣ ಅರ್ಜುನನ್ನು ಈ ರೀತಿ ಮಾಧ್ಯಮವಾಗಿ ಬಳಸಿದ. ಭಗವದ್ಗೀತೆಯಲ್ಲಿ ಏನು ಸಂದೇಶವಿದೆ ಅದರ ಪ್ರಾಯೋಗಿಕ ವಿವರಣೆ ಮಹಾಭಾರತ. ಅಲ್ಲಿ ಬರುವ ಒಂದೊಂದು ಪಾತ್ರಗಳೂ ಗೀತೆಯ ಒಂದೊಂದು ಸಂದೇಶವನ್ನು ಪ್ರತಿನಿಧಿಸುತ್ತವೆ. ಮನಃಶಾಸ್ತ್ರೀಯವಾಗಿ ನೋಡಿದಾಗ ಮಹಾಭಾರತ ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವಲ್ಲ. ಅದು ನಮ್ಮ ಅಂತರಂಗದ, ನಮ್ಮ ಜೀವನದ ಹೋರಾಟ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation)  ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

   ಸಂಜಯ ಉವಾಚ ।
        ಇತ್ಯಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ ।
        ಸಂವಾದಮಿಮಮಶ್ರೌಷಮದ್ಭುತಂ ರೋಮಹರ್ಷಣಮ್            ॥೭೪॥

ಸಂಜಯ ಉವಾಚ-ಸಂಜಯ ಹೇಳಿದನು:
ಇತಿ ಅಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ ।
ಸಂವಾದಮ್ ಇಮಮ್ ಅಶ್ರೌಷಮ್ ಅದ್ಭುತಂ ರೋಮಹರ್ಷಣಮ್ – ಹೀಗೆ ಮಹಾತ್ಮರಾದ ವಾಸುದೇವ ಮತ್ತು ಪಾರ್ಥರ ಅಚ್ಚರಿಯ ನವಿರೇಳಿಸುವ ಈ ಮಾತುಕತೆಯನ್ನು ನಾನು ಕೇಳಿಸಿಕೊಂಡೆ.

ಸಂಜಯ ಕೃಷ್ಣಾರ್ಜುನರ ಈ ಅಪೂರ್ವ ಸಂವಾದವನ್ನು ಸಾಕ್ಷಾತ್ ನೋಡಿ ವಿಸ್ಮಯಗೊಂಡ. ಆತ ಹೇಳುತ್ತಾನೆ: ನನ್ನ ಕಣ್ಮುಂದೆ  ನಡೆದ ವಾಸುದೇವ ಮತ್ತು ಅರ್ಜುನರ ಈ ಸಂವಾದವನ್ನು ನಾನು ಕೇಳಿಸಿಕೊಂಡೆ. ಇದು ನನ್ನ ಭಾಗ್ಯ. ನನಗಾದ ಅನುಭವವನ್ನು ಶಬ್ದಗಳಿಂದ ವರ್ಣಿಸಲಾಗದು. ಇದೊಂದು ಅದ್ಭುತ. ಈ ಸಂವಾದವನ್ನು ಕೇಳಿ ಆನಂದದಿಂದ ಮೈನವಿರೆದ್ದಿದೆ. ಆನಂದದ ಪುಳಕ ನನ್ನನ್ನು ಆವರಿಸಿಕೊಂಡು ಬಿಟ್ಟಿದೆ.   

        ವ್ಯಾಸಪ್ರಸಾದಾಚ್ಛ್ರುತವಾನೇತದ್ ಗುಹ್ಯಮಹಂ ಪರಮ್ ।
        ಯೋಗಂ ಯೋಗೇಶ್ವರಾತ್ ಕೃಷ್ಣಾತ್ ಸಾಕ್ಷಾತ್ ಕಥಯತಃ ಸ್ವಯಮ್ ॥೭೫॥

ವ್ಯಾಸಪ್ರಸಾದಾತ್ ಶ್ರುತವಾನ್ ಏತತ್  ಗುಹ್ಯಮ್ ಅಹಂ ಪರಮ್ ।
ಯೋಗಂ ಯೋಗೇಶ್ವರಾತ್ ಕೃಷ್ಣಾತ್ ಸಾಕ್ಷಾತ್ ಕಥಯತಃ ಸ್ವಯಮ್ – ವ್ಯಾಸರ ಕರುಣೆಯಿಂದ ನಾನು ಯೋಗದ ದಾರಿಯನ್ನು, ಈ   ಹಿರಿಯ ಗುಟ್ಟನ್ನು ಎಲ್ಲಾ ಯೋಗಮಾರ್ಗಗಳ ಒಡೆಯನಾದ ಕೃಷ್ಣನ ಬಾಯಿಯಿಂದಲೇ ನೇರವಾಗಿ ಕೇಳಿಸಿಕೊಂಡೆ.

ಪರಮ ಪೂಜ್ಯ ಗುರುಗಳಾದ ವ್ಯಾಸರ ಅನುಗ್ರಹದಿಂದ ನಾನು ಈ ಅದ್ಭುತ ಭಾಗ್ಯವನ್ನು ಪಡೆದೆ. ಬೇಕು ಎಂದರೆ ಸಿಗದ ಪ್ರಪಂಚದ ಅತ್ಯಂತ ರಹಸ್ಯಗಳ ರಹಸ್ಯ ನನಗೂ ತಿಳಿಯಿತು. ಇಡೀ ಜಗತ್ತಿನ ಎಲ್ಲ ಶಕ್ತಿಗಳ ಒಂದು ಸಮಷ್ಟಿರೂಪವಾದ ಯೋಗೇಶ್ವರ ಕೃಷ್ಣನಿಂದ ಅಧ್ಯಾತ್ಮದ ಸಾರ ಸರ್ವಸ್ವವನ್ನು ಸಾಕ್ಷಾತ್ ಕೇಳಿಸಿಕೊಂಡೆ.  

        ರಾಜನ್ ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮಿಮಮದ್ಭುತಮ್ ।
        ಕೇಶವಾರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ ಮುಹುರ್ಮುಹುಃ      ॥೭೬॥

ರಾಜನ್ ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮ್ ಇಮಮ್ ಅದ್ಭುತಮ್   ।
ಕೇಶವ ಅರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ ಮುಹುಃಮಹುಃ – ದೊರೆಯೆ, ಕೇಶವಾರ್ಜುನರ ಅಚ್ಚರಿಯ ಈ ಮೆಚ್ಚಿನ ಮಾತುಕತೆಯನ್ನು ನೆನೆಯುತ್ತ ನೆನೆಯುತ್ತ  ಮತ್ತೆ ಮತ್ತೆ ನವಿರುಗೊಳ್ಳುತ್ತಿದ್ದೇನೆ.

ಓ ದೊರೆಯೆ(ಧೃತರಾಷ್ಟ್ರನನ್ನು ಕುರಿತು), ಈ ಅದ್ಭುತ ಸಂವಾದವನ್ನು ನೆನೆ-ನೆನೆದು ವಿಸ್ಮಯ, ಆನಂದ, ರೋಮಾಂಚನ, ಆಶ್ಚರ್ಯ. ಇಂಥದ್ದು ಹಿಂದೆ ಆಗಿಲ್ಲ ಮುಂದೆ ಆಗಲಿಕ್ಕಿಲ್ಲ. ಇಡೀ ವಿಶ್ವವನ್ನು ನಿಯಂತ್ರಿಸುವ, ಸಮಸ್ತ ದೇವಾಧಿದೇವತೆಗಳನ್ನು ನಿಯಂತ್ರಿಸುವ ಶಕ್ತಿ- ಇಲ್ಲಿ ಅರ್ಜುನನ ಸಾರಥಿ ರೂಪದಲ್ಲಿ ನಿಂತು ನುಡಿದ ಈ ಅದ್ಭುತ ಸಂದೇಶವನ್ನು- ಹಿಂದೆ ಯಾರು ಕೇಳಿದ್ದೂ ಇಲ್ಲ, ಅನುಭವಿಸಿದ್ದೂ ಇಲ್ಲ. ಇದನ್ನು ನೆನಪಿಸಿಕೊಂಡು ಮತ್ತೆ ಮತ್ತೆ ಪುಳಕಗೊಳ್ಳುತ್ತಿದ್ದೇನೆ. 

         ತಚ್ಚ ಸಂಸ್ಮೃತ್ಯ ಸಂಸ್ಮೃತ್ಯ ರೂಪಮತ್ಯದ್ಭುತಂ ಹರೇಃ ।
         ವಿಸ್ಮಯೋ ಮೇ ಮಹಾನ್ ರಾಜನ್ ಹೃಷ್ಯಾಮಿ ಚ ಪುನಃಪುನಃ    ॥೭೭॥

ತತ್ ಚ  ಸಂಸ್ಮೃತ್ಯ ಸಂಸ್ಮೃತ್ಯ ರೂಪಮ್ ಅತ್ಯದ್ಭುತಂ ಹರೇಃ ।
ವಿಸ್ಮಯಃ  ಮೇ ಮಹಾನ್ ರಾಜನ್ ಹೃಷ್ಯಾಮಿ ಚ ಪುನಃಪುನಃ -- ದೊರೆಯೆ, ಹರಿಯ ಅಚ್ಚರಿಯ ರೂಪವನ್ನು ನೆನೆಯುತ್ತ ನನಗೆ ಬೆರಗೋ ಬೆರಗು. ಮೈಯಲ್ಲ ಮರಳಿಮರಳಿ ನವಿರು.

ಕೃಷ್ಣನ ವಿಶ್ವರೂಪ ದರ್ಶನ ಪಡೆದಿದ್ದ ಸಂಜಯ ಮುಂದುವರಿದು ಹೇಳುತ್ತಾನೆ: ಓ ದೊರೆಯೆ, ನಮ್ಮ ಸಮಸ್ತ ಸಮಸ್ಯೆಗಳನ್ನು ಪರಿಹರಿಸುವ(ಹರಿಃ) ಆ ಪರಮಾತ್ಮ,  ಇಂದು ನಮಗೆ ಸಮಸ್ತ ಸಮಸ್ಯೆಯನ್ನೂ ಪರಿಹರಿಸುವ ಈ ಅದ್ಭುತ ಸಂದೇಶವನ್ನು ಕೊಟ್ಟ. ನಾನು ಕೃಷ್ಣನನ್ನು ಕಂಡೆ; ಅವನ ಅದ್ಭುತ ವಿಶ್ವರೂಪವನ್ನು ಕಂಡೆ; ಅವನ ಮಾತನ್ನು ಕೇಳಿದೆ; ಇದು ನನ್ನ ಮಾತಿಗೆ ಮೀರಿದ ಸಂತೋಷ. ನಾನು ಖುಷಿಯಿಂದ ತುಂಬಿಹೋಗಿದ್ದೇನೆ.

ಹೀಗೆ ತನ್ನ ಆನಂದವನ್ನು ಹಂಚಿಕೊಂಡ ಸಂಜಯ ಮುಂದೆ ತನಗನಿಸಿದ ಫಲಶ್ರುತಿಯನ್ನು ಹೇಳುತ್ತಾನೆ.   

        ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ ।
        ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ           ॥೭೮॥

ಯತ್ರ ಯೋಗೇಶ್ವರಃ ಕೃಷ್ಣಃ  ಯತ್ರ ಪಾರ್ಥಃ ಪಾರ್ಥೋ ಧನುರ್ಧರಃ ।
ತತ್ರ ಶ್ರೀಃ ವಿಜಯಃ ಭೂತಿಃ ಧ್ರುವಾ ನೀತಿಃ ಮತಿಃ ಮಮ –ಯೋಗಮಾರ್ಗಗಳೊಡೆಯನಾದ ಕೃಷ್ಣನಿರುವಡೆ, ಬಿಲ್ಗಾರನಾದ ಪಾರ್ಥನಿರುವೆಡೆ(ನರ-ನಾರಾಯಣನಿರುವೆಡೆ) ಸಿರಿ, ಗೆಲುವು, ಉನ್ನತಿಕೆ ಮತ್ತು ಸ್ಥಿರವಾದ ನೀತಿ ನೆಲೆಸಿರುತ್ತದೆ ಎಂದು ನನ್ನ ನಿರ್ಧಾರ.
ಎಲ್ಲಿಎಲ್ಲಿ ನರ-ನಾರಾಯಣರಿರುತ್ತಾರೋ ಅಲ್ಲಿ ಎಲ್ಲವೂ ಇದೆ. ಎಲ್ಲ ಬಗೆಯ ಸಂಪತ್ತು, ಗೆಲುವು, ಅಂತರಂಗ ಸಾಧನೆ, ಬಾಹ್ಯ ಉನ್ನತಿ ಎಲ್ಲವೂ ನೆಲೆಸಿರುತ್ತದೆ. ಇದು ನನ್ನ ನಿರ್ಧಾರ ಎನ್ನುತ್ತಾನೆ ಸಂಜಯ.

ಭಗವದ್ಗೀತೆ ನಮಗೆ ಪ್ರಾಪಂಚಿಕ ಸುಖದ ಸೆಳೆತವನ್ನು ಮೀರಿ ಎತ್ತರಕ್ಕೇರಲು  ಬೇಕಾದ ಅಧ್ಯಾತ್ಮ ಜ್ಞಾನ ಮತ್ತು ವೇದ ವಿದ್ಯೆಯನ್ನು ಕೊಡುವ ಅಪೂರ್ವ ಗ್ರಂಥ. ಗೀತೆ ಮನಸ್ಸಿನಲ್ಲಿ ನಿಂತರೆ ಸುಳ್ಳು, ಮೋಸ- ಸಾಧ್ಯವಿಲ್ಲ. ಎಲ್ಲಿ ಗೀತೆಯ  ಅಧ್ಯಯನವಿದೆ ಅಲ್ಲಿ ಪ್ರಾಮಾಣಿಕತೆ ಇದೆ. ಗೀತೆಯನ್ನು ಓದಿ, ಗೀತೆಯನ್ನು ಮುಟ್ಟಿ ನಾವು ಸುಳ್ಳು ಹೇಳಿದರೆ, ಅಪ್ರಾಮಾಣಿಕವಾಗಿ ಬದುಕಿದರೆ  ಅದು ಆ ಗೀತಾಚಾರ್ಯನಿಗೆ ನಾವು ಮಾಡುವ ದ್ರೋಹ. 
ಎಲ್ಲಿ ಗೀತೆಯ ಜ್ಞಾನವಿದೆ ಅಲ್ಲಿ ಗೆಲುವಿದೆ,  ಉನ್ನತಿ ಇದೆ, ನೀತಿ ಇದೆ,ಸಮಷ್ಟಿಯೂ ಇದೆ- ಎನ್ನುವಲ್ಲಿಗೆ ಭಗವದ್ಗೀತೆಯ ಅತ್ಯದ್ಭುತ ಸಂದೇಶ ಕೊನೆಗೊಂಡಿತು.

     ಇತಿ ಅಷ್ಟಾದಶೋಧ್ಯಾಯಃ
           ಹದಿನೆಂಟನೆಯ ಅಧ್ಯಾಯ ಮುಗಿಯಿತು

                || ಸರ್ವೇ ಜನಾಃ ಸುಖಿನೋ ಭವಂತು ||
             || ಶ್ರೀ ಕೃಷ್ಣಾರ್ಪಣಮಸ್ತು ||

Note:  ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available under Website . Click HERE to Visit our Website.

 *******

Thursday, May 26, 2011

Bhagavad Gita Kannada Chapter-06, Shloka -20-23


ಯತ್ರೋಪರಮತೇ ಚಿತ್ತಂ ನಿರುದ್ಧಂ ಯೋಗಸೇವಯಾ ।
ಯತ್ರ ಚೈವಾSತ್ಮನಾSSತ್ಮಾನಂ ಪಶ್ಯನ್ನಾತ್ಮನಿ ತುಷ್ಯತಿ     ॥೨೦॥

ಯತ್ರ ಉಪರಮತೇ ಚಿತ್ತಮ್ ನಿರುದ್ಧಮ್ ಯೋಗ ಸೇವಯಾ।
ಯತ್ರ ಚ ಏವ ಆತ್ಮನಾ ಆತ್ಮಾನಮ್  ಪಶ್ಯನ್ ಆತ್ಮನಿ ತುಷ್ಯತಿ ||

ಸುಖಮ್ಮಾತ್ಯಂತಿಕಂ ಯತ್ತದ್ ಬುದ್ಧಿ ಗ್ರಾಹ್ಯಮತೀಂದ್ರಿಯಮ್ ।
ವೇತ್ತಿ ಯತ್ರ ನ ಚೈವಾಯಂ ಸ್ಥಿತಶ್ಚಲತಿ ತತ್ತ್ವತಃ                 ॥೨೧॥

ಸುಖಮ್ ಆತ್ಯನ್ತಿಕಮ್  ಯತ್ ತತ್  ಬುದ್ಧಿ ಗ್ರಾಹ್ಯಮ್ ಅತೀಂದ್ರಿಯಮ್ ।
ವೇತ್ತಿ ಯತ್ರ ನ ಚ ಏವ ಅಯಮ್  ಸ್ಥಿತಃ  ಚಲತಿ  ತತ್ತ್ವತಃ ||

ಯಂ ಲಬ್ಧ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ ।
ಯಸ್ಮಿನ್ ಸ್ಥಿತೋ  ನ ದುಃಖೇನ ಗುರುಣಾSಪಿ ವಿಚಾಲ್ಯತೇ    ॥೨೨॥

ಯಮ್  ಲಬ್ಧ್ವಾ ಚ ಅಪರಮ್  ಲಾಭಮ್  ಮನ್ಯತೇ ನ ಅಧಿಕಮ್  ತತಃ ।
ಯಸ್ಮಿನ್ ಸ್ಥಿತಃ ನ ದುಃಖೇನ ಗುರುಣಾ ಅಪಿ ವಿಚಾಲ್ಯತೇ  ||

ತಂ ವಿದ್ಯಾದ್ ದುಃಖಸಂಯೋಗವಿಯೋಗಂ ಯೋಗಸಂಜ್ಞಿತಮ್ ।
ಸ ನಿಶ್ಚಯೇನ ಯೋಕ್ತವ್ಯೋ ಯೋಗೋನಿರ್ವಿಣ್ಣಚೇತಸಾ      ॥೨೩॥

ತಮ್  ವಿದ್ಯಾತ್ ದುಃಖಸಂಯೋಗ ವಿಯೋಗಮ್  ಯೋಗಸಂಜ್ಞಿತಮ್ ।
ಸಃ ನಿಶ್ಚಯೇನ ಯೋಕ್ತವ್ಯಃ ಯೋಗಃ ಅನಿರ್ವಿಣ್ಣಚೇತಸಾ ||

ಧ್ಯಾನ ಸಾಧನೆಯಿಂದ ಬಿಗಿಗೊಂಡ ಒಳಬಗೆ ಈ ಸ್ಥಿತಿಯಲ್ಲಿ ಹೊರಗಣ ವಿಷಯಗಳತ್ತ ಹರಿಯದು. ಇಲ್ಲಿ ತನ್ನೊಳಗೆಯೆ ಬಗೆಯಿಂದ[ಭಗವಂತನ ಹಸಾದದಿಂದ] ಭಗವಂತನನ್ನು ಕಾಣುತ್ತ ಸಂತಸಗೊಳ್ಳುತ್ತಾನೆ.ಇಲ್ಲಿ ಇಂದ್ರಿಯಗಳಿಂದ ದೊರಕದ, ಒಳಬಗೆಯಲ್ಲಿ ಅರಳುವ ಅತಿಶಯವಾದ ಆನಂದವನ್ನು ಅನುಭವಿಸುತ್ತಾನೆ. ಈ ಸ್ಥಿತಿಯಲ್ಲಿ ನಿಂತವನು ಎಂದೂ ಭಗವಂತನಿಂದ ಕದಲುವುದಿಲ್ಲ. ಇದನ್ನು ಪಡೆದ ಮೇಲೆ ಇನ್ನಾವ ಗಳಿಕೆಯೂ ಇದಕ್ಕಿಂತ ಮಿಗಿಲೆನಿಸುವುದಿಲ್ಲ. ಇಲ್ಲಿ ನಿಂತವನು ಎಂಥ ಹಿರಿಯ ದುಗುಡದಿಂದಲೂ ಕಂಗೆಡುವುದಿಲ್ಲ. ಇದೇ ಎಲ್ಲ ದುಗುಡಗಳಿಂದ ಬಿಡುಗಡೆಗೊಳಿಸುವ ಯೋಗವೆಂದರಿಯಬೇಕು. ವಿಷಯಗಳಿಂದ ಬೇಸತ್ತು ಬೆನ್ನು ತಿರುಗಿಸಿದವನು ಅವಶ್ಯವಾಗಿ ಈ ಯೋಗದಲ್ಲಿ ಪಳಗಬೇಕು.

ಹೊರಗಿನ ಪ್ರಪಂಚದ ಸಂಪರ್ಕವನ್ನು ಕಳೆದುಕೊಂಡು ಮನಸ್ಸು ಭಗವಂತನಲ್ಲಿ ನೆಲೆಸಿದಾಗ ಏನಾಗುತ್ತದೆ ಎಂದರೆ- ಕೃಷ್ಣ ಹೇಳುತ್ತಾನೆ: ಉಪರಮತೇ ಚಿತ್ತಮ್ಅಂದರೆ ಉತ್ಕೃಷ್ಟವಾದ ಆ ಆನಂದದಲ್ಲೇ ಮನಸ್ಸು  ನಿಂತುಬಿಡುತ್ತದೆ. ಆ ಆನಂದದ ಸೆಲೆಯಿಂದ ಬೇರೆಯಾಗುವುದು ಬೇಡ ಎನ್ನುವ ಭಾವನೆ ಬಂದುಬಿಡುತ್ತದೆ. ಸಾಮಾನ್ಯವಾಗಿ ತಕ್ಷಣ ಈ ಸ್ಥಿತಿಗೆ ಮನಸ್ಸು ಹೋಗುವುದಿಲ್ಲ. ಅದಕ್ಕೆ ಬಹಳ ಪ್ರಯತ್ನ ಬೇಕು. ಪ್ರಯತ್ನ ಒಂದು ಜನ್ಮದಲ್ಲ ಅನೇಕ ಜನ್ಮದ ಪ್ರಯತ್ನವಿಲ್ಲದೆ ಒಮ್ಮೆಗೆ ಈ ಸ್ಥಿತಿಯನ್ನು ತಲುಪುವುದು ಅಸಾಧ್ಯ. ನಿರಂತರ ಯೋಗಾಭ್ಯಾಸದ ಸಾಧನೆಯಿಂದ ಚಿತ್ತ ವೃತ್ತಿಯನ್ನು ನಿರೋಧ ಮಾಡಬೇಕು. ಅಂದರೆ ನಮ್ಮ  ಮನಸ್ಸನ್ನು ತಡೆಹಿಡಿಯಬೇಕು. ಅದು ಎಲ್ಲಿಯೂ ಹರಿಯದಂತೆ ಒಡ್ಡುಹಾಕಿ ಅದು ಭಗವಂತನಲ್ಲೇ ನೆಲೆನಿಲ್ಲುವಂತೆ ಮಾಡಬೇಕು.
ನಮಗೆ ಆತ್ಮಸಾಕ್ಷಾತ್ಕಾರವಾದಾಗ ಎಂದೂ ಆಗದ ಅಪೂರ್ವ ಆನಂದವಾಗುತ್ತದೆ. ಇದು ಅತ್ಯಂತ ಶ್ರೇಷ್ಠವಾದ ಆನಂದದ ಅನುಭವ.  ಭಗವಂತನ ಬಗ್ಗೆ ಭಕ್ತನ ಭಕ್ತಿ ಹಾಗು ಭಕ್ತನ ಮೇಲೆ ಭಗವಂತನ ವಾತ್ಸಲ್ಯ ಇವೆರಡೂ ಮೇಳವಿಸಿದಾಗ  ನಿರ್ಭಯ’.  ಒಳಗಣ್ಣಿನಿಂದ  ಧ್ಯಾನದ ಸ್ಥಿತಿಯಲ್ಲಿ ಅಂತರ್ಯಾಮಿಯಾದ ಭಗವಂತನನ್ನು ಕಾಣುವುದು ಧ್ಯಾನದಲ್ಲಿ  ಬರುವ ಅನುಭವ. ಇಲ್ಲಿ ನಮಗೆ ಕಾಣುವುದು ಮನಸ್ಸು ಕಡೆದ ಆ ಭಗವಂತನ ಭವ್ಯ ರೂಪ. ಇದು ಕೇವಲ ಭಗವಂತನ ಪ್ರತೀಕ. ನಾವು ಭಗವಂತನನ್ನು ನಿಜವಾಗಿ ಕಾಣಬೇಕಾದರೆ ಅವನು ನಮ್ಮನ್ನು ಪ್ರೀತಿಸಬೇಕು. ಭಗವದ್ ಅನುಗ್ರಹವಾದಾಗ ನಮ್ಮ ಸ್ವರೂಪ ಭಗವಂತನನ್ನು ಕಾಣುತ್ತದೆ. ಇದು ಬಹಳ ಉತ್ಕಟವಾದ ಸ್ಥಿತಿ. ಈ ಸ್ಥಿತಿಯಲ್ಲಿ ಮನಸ್ಸು ಸಂಪೂರ್ಣ ಸ್ತಬ್ಧವಾಗಿ ನೇರವಾಗಿ ಆತ್ಮಸ್ವರೂಪ ತನ್ನ ಆತ್ಮಸ್ವರೂಪದ ಕಣ್ಣಿನಿಂದ ಭಗವಂತನನ್ನು ಕಾಣುತ್ತದೆ. ಈ ಸ್ಥಿತಿ ಸಂಪೂರ್ಣ ತೃಪ್ತಿಯನ್ನು ಕೊಡಬಲ್ಲದು. ಇಂದ್ರಿಯಗಳಿಂದ ಸಿಗುವ ಆನಂದ ಸಾಪೇಕ್ಷ  ಎನ್ನುವ ನಿಜ ಆ ಹಂತದಲ್ಲಿ ತಿಳಿಯುತ್ತದೆ. ಈ ಉತ್ಕಟವಾದ ಆನಂದವನ್ನು ಅನುಭವಿಸಿದ ಮೇಲೆ ಮತ್ತೆ ಮೇಲೇರಬೇಕು ಅಥವಾ ಕೆಳಗಿಳಿಯಬೇಕು ಎನ್ನುವ ಬಯಕೆ ಇಲ್ಲ. ಭಗವಂತನ ಪೂರ್ಣ ಅನುಭವ ಬಂದಾತ ಯಾವ ಪ್ರಾಪಂಚಿಕ ದುಃಖದಲ್ಲೂ  ಎಂದೂ ವಿಚಲಿತನಾಗುವುದಿಲ್ಲ. ಇದು ಮಾನವ ಜೀವನದಲ್ಲಿ ಪಡೆಯಬಹುದಾದ ಅತೀ ಎತ್ತರದ ಸ್ಥಿತಿ. ನಾವು ನಿಜವಾದ ಆನಂದವನ್ನು ಕಾಣಬೇಕಾದರೆ ಈ ಉತ್ಕಟವಾದ ಸ್ಥಿತಿಯನ್ನು ತಲುಪಬೇಕು.
ಮೇಲೆ ಹೇಳಿದ ವಿಚಾರವನ್ನು ಕೇಳಿ ಕೆಲವರು ಭ್ರಮೆಗೊಳಗಾಗಿ ಒಮ್ಮೆಗೆ ಎಲ್ಲವನ್ನೂ ಬಿಟ್ಟು ಈ ಸ್ಥಿತಿಯನ್ನು ತಲುಪುವ ಸಾಹಸಕ್ಕೆ ಕೈ ಹಾಕುತ್ತಾರೆ. ಆದರೆ ಹಾಗೆ ಮಾಡಿದರೆ ಎಂದೂ ಯಶಸ್ಸು ಸಿಗದು. ಕೇವಲ ನಿರಂತರ ಸಾಧನೆಯಿಂದ ಮಾತ್ರ ಈ ಆನಂದವನ್ನು ಪಡೆಯಲು ಸಾಧ್ಯ. ಜೀವನದ ಸುಖವನ್ನು ಅನುಭವಿಸಿ, ಪ್ರಾಪಂಚಿಕ ಸುಖ ಸಾಕು ಎಂದು ಕಾಣಿಸಿದಾಗ ಅಧ್ಯಾತ್ಮದ ಆಳಕ್ಕಿಳಿಯುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಅಪಾಯ.

Sunday, May 22, 2011

Bhagavad Gita Kannada Chapter-06 Shloka 10-14

ಹೀಗೆ ಧ್ಯಾನಕ್ಕೆ ಬೇಕಾದ ಪೂರ್ವ ಸಿದ್ಧತೆಯನ್ನು ವಿವರಿಸಿದ ಕೃಷ್ಣ ಮುಂದೆ ನೇರವಾಗಿ  ಧ್ಯಾನಕ್ಕೆ ಕೂರುವ ವಿಧಾನವನ್ನು ವಿವರಿಸುತ್ತಾನೆ.  

ಯೋಗೀ ಯುಂಜೀತ ಸತತಮಾತ್ಮಾನಂ ರಹಸಿ ಸ್ಥಿತಃ
ಏಕಾಕೀ ಯತಚಿತ್ತಾತ್ಮಾ ನಿರಾಶೀರಪರಿಗ್ರಹಃ ೧೦

ಯೋಗೀ ಯುಂಜೀತ ಸತತಮ್ ಆತ್ಮಾನಮ್  ರಹಸಿ ಸ್ಥಿತಃ
ಏಕಾಕೀ ಯತ ಚಿತ್ತ ಆತ್ಮಾ ನಿರಾಶೀಃ ಅಪರಿಗ್ರಹಃ –ಯೋಗ ಸಾಧಕನು ಒಬ್ಬನೆ ಏಕಾಂತದಲ್ಲಿ ಕುಳಿತು, ಮೈಮನಗಳನ್ನು ಹದಗೊಳಿಸಿ, ಆಸೆಪಡದೆ, ಏತಕ್ಕೂ ಕೈಯೊಡ್ಡದೆ, ಬಗೆಯನ್ನು ಸದಾ ಸಮಾಧಿಗೆ ಅಣಿಗೊಳಿಸಬೇಕು.

“ಸತತಮ್ ಆತ್ಮಾನಮ್”-ಧ್ಯಾನ ಮಾರ್ಗದಲ್ಲಿ ಸಾಧನೆ ಮಾಡತಕ್ಕಂತಹ ವ್ಯಕ್ತಿ ಮನಸ್ಸನ್ನು ನಿರಂತರ ಧ್ಯಾನ ಯೋಗದಲ್ಲಿ ತೊಡಗಿಸಲು ಹಾಗು  ಏಕಾಗ್ರಗೊಳಿಸಲು  ಪ್ರಯತ್ನಪಡಬೇಕು;  “ರಹಸಿ ಸ್ಥಿತಃ”- ಜನಜಂಗುಳಿ ಇದ್ದಲ್ಲಿ ಧ್ಯಾನ ಅಭ್ಯಾಸ ಮಾಡಲು ಅಸಾಧ್ಯ. ಈ ಕಾರಣಕ್ಕಾಗಿ ಹಿಂದಿನವರು ಧ್ಯಾನಕ್ಕಾಗಿ ಬೆಳಗಿನ ಜಾವದ ಅರುಣೋದಯ ಕಾಲವನ್ನು ಮೀಸಲಿಡುತ್ತಿದ್ದರು. ಬೆಳಗಿನಜಾವ ಸೂರ್ಯೋದಯಕ್ಕಿಂತ ತೊಂಬತ್ತಾರು ನಿಮಿಷ ಮೊದಲು ಧ್ಯಾನಕ್ಕೆ ಕುಳಿತರೆ ಆಗ ಇಡೀ ಪ್ರಕೃತಿ ಪ್ರಶಾಂತವಾಗಿರುತ್ತದೆ. ಈ ಕಾಲ ಮನಸ್ಸನ್ನು ಏಕಾಗ್ರತೆಗೆ ಕೊಂಡೊಯ್ಯಲು ಅತ್ಯಂತ ಪೂರಕ ಕಾಲ. ಇದನ್ನು ‘ಬ್ರಹ್ಮಮಹೂರ್ತ’ ಎನ್ನುತ್ತಾರೆ(ಸೂರ್ಯೋದಯಕ್ಕಿಂತ ತೊಬತ್ತಾರು ನಿಮಿಷ(ನಾಲ್ಕು ಘಳಿಗೆ) ಮೊದಲು ಪ್ರಾರಂಭವಾಗಿ ನಲವತ್ತೆಂಟು ನಿಮಿಷಗಳ ಕಾಲ(ಎರಡು ಘಳಿಗೆ) ಬ್ರಹ್ಮಮಹೂರ್ತ-ಉದಾಹರಣೆಗೆ ಸೂರ್ಯೋದಯ 5:44ಕ್ಕೆ  ಆದರೆ 4:08 ರಿಂದ 4:56 ರ ತನಕ ಬ್ರಹ್ಮಮಹೂರ್ತ). ಈ ಮಹೂರ್ತದ ದೇವತೆ ಚತುರ್ಮುಖ ಬ್ರಹ್ಮ. ಈತನೇ ನಮ್ಮ ಚಿತ್ತದ ದೇವತೆ. ಆದ್ದರಿಂದ ಈ ಕಾಲ ಜಪ ಸ್ಮರಣೆ ಮತ್ತು ಧ್ಯಾನಕ್ಕೆ ಅತ್ಯಂತ ಶ್ರೇಷ್ಠವಾದ ಸಮಯ. ಧ್ಯಾನ  ಎನ್ನುವುದು ಅತ್ಯಂತ ಅಂತರಂಗದ ಕ್ರಿಯೆ. ಇಲ್ಲಿ ಕೇವಲ ಭಗವಂತ ಮತ್ತು ಸಾಧಕ ಜೀವ ಮಾತ್ರ ಇರಬೇಕು, ಮೂರನೆ ಸಂಗಾತಿ ಬಂದರೆ ತೊಂದರೆಯಾಗುತ್ತದೆ. ಒಬ್ಬ ಕಲುಷಿತ ಮನಸ್ಸಿನ(polluted mind) ವ್ಯಕ್ತಿಯಿಂದ ಆತನ ಸುತ್ತಲಿನ ವಾತಾವರಣ ಕೆಡುತ್ತದೆ. ಅದಕ್ಕಾಗಿ ಧ್ಯಾನ ಅಭ್ಯಾಸ ಮಾಡುವಾಗ ಯಾವಾಗಲೂ ಏಕಾಂತವಾಗಿ ಅಭ್ಯಾಸ ಮಾಡಬೇಕು. ನಮ್ಮ ಚಿತ್ತ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟು, ಯಾವುದೇ ಆಸೆ ಆಕಾಂಕ್ಷೆ ಮನಸ್ಸಿಗೆ ಸುಳಿಯದಂತೆ, ತೃಪ್ತ ಮನಸ್ಸಿನಿಂದ ಧ್ಯಾನಕ್ಕೆ ಅಣಿಯಾಗಬೇಕು.

ಮುಂದಿನ ಶ್ಲೋಕದಲ್ಲಿ ಧ್ಯಾನಕ್ಕೆ ಕೂರುವ ಸ್ಥಳ ಹೇಗಿರಬೇಕು ಮತ್ತು ಹೇಗೆ ಕುಳಿತುಕೊಳ್ಳಬೇಕು  ಎನ್ನುವುದನ್ನು ಕೃಷ್ಣ ವಿವರಿಸುತ್ತಾನೆ.                

ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ
ನಾತ್ಯುಚ್ಛ್ರಿತಂ ನಾತಿನೀಚಂ ಚೇಲಾಜಿನಕುಶೋತ್ತರಮ್            ೧೧

ತತ್ರೈಕಾಗ್ರಂ ಮನಃ ಕೃತ್ವಾ ಯತಚಿತ್ತೇಂದ್ರಿಯಕ್ರಿಯಾಃ
ಉಪವಿಶ್ಯಾSಸನೇ ಯುಂಜ್ಯಾದ್ ಯೋಗ ಮಾತ್ಮವಿಶುದ್ಧಯೇ   ೧೨

ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮ್ ಆಸನಮ್ ಆತ್ಮನಃ
ನ ಅತಿ ಉಚ್ಛ್ರಿತಮ್ ನ ಅತಿ ನೀಚಮ್  ಚೇಲ ಅಜಿನ ಕುಶ ಉತ್ತರಮ್     
ತತ್ರ ಏಕ ಅಗ್ರಮ್  ಮನಃ ಕೃತ್ವಾ ಯತಚಿತ್ತ ಇಂದ್ರಿಯ ಕ್ರಿಯಃ
ಉಪವಿಶ್ಯ ಆಸನೇ ಯುಂಜ್ಯಾದ್ ಯೋಗಮ್ ಆತ್ಮ ವಿಶುದ್ಧಯೇ –ನಿರ್ಮಲವಾದ ತಾಣದಲ್ಲಿ, ಹುಲ್ಲ(ದರ್ಬೆ) ಚಾಪೆ-ಜಿಂಕೆಯ ತೊಗಲ ಮೇಲೆ ಬಟ್ಟೆ ಹಾಸಿ, ತುಂಬ ಎತ್ತರವೂ ಅಲ್ಲದ, ತೀರ ತಗ್ಗೂ ಅಲ್ಲದ, ನಲುಗದ ಆಸನವನ್ನು ತನಗಾಗಿ ಅಣಿಗೊಳಿಸಬೇಕು. ಅದರಲ್ಲಿ ಕುಳಿತು, ಬಗೆಯನ್ನು ನೆಟ್ಟ ಗುರಿಯಲ್ಲಿರಿಸಿ, ಇಂದ್ರಿಯಗಳ ಮತ್ತು  ಒಳಬಗೆಯ ಚೆಲ್ಲಾಟವನ್ನು ನಿಲ್ಲಿಸಿ, ಆತ್ಮ ಶುದ್ಧಿಗಾಗಿ ಸಮಾಧಿಯನ್ನು ಸಾಧಿಸಬೇಕು.

ಧ್ಯಾನಕ್ಕೆ ಕೂರುವ ಪ್ರದೇಶ ಸ್ವಚ್ಛವಾಗಿರಬೇಕು. ಮನೆಯಲ್ಲಿ ಸಾತ್ವಿಕ ಕಂಪನ(Vibration)ವಿರುವ ಸ್ಥಳವನ್ನು ಧ್ಯಾನಕ್ಕೆ  ಆರಿಸಿಕೊಳ್ಳಬೇಕು. ಹಿಂದೆ  ಮನೆಯಲ್ಲಿ ಹೆಚ್ಚು ಸಾತ್ವಿಕ ಕಂಪನವಿರುವ ಸ್ಥಳವನ್ನು ಗುರುತಿಸಿ ಅಲ್ಲಿ ದೇವರಮನೆಯನ್ನು ನಿರ್ಮಿಸುತ್ತಿದ್ದರು. ದುರಾದೃಷ್ಟಾವಶಾತ್ ಇಂದು ಮನೆ ಕಟ್ಟುವಾಗ  ಎಲ್ಲಿ ಜಾಗ ಉಳಿದಿದೆ ಅದನ್ನು ದೇವರಮನೆಯಾಗಿ ಪರಿವರ್ತಿಸುತ್ತಿದ್ದೇವೆ. ನಾವು   ಮನೆಯಲ್ಲಿ ಯಾವ ಭಾಗದಲ್ಲಿ ಕುಳಿತಾಗ ನಮಗೆ ಮನಸ್ಸು ಪ್ರಸನ್ನವಾಗಿ ದೇವರ ಧ್ಯಾನಕ್ಕೆ ಪೂರಕವಾಗಿರುತ್ತದೋ ಅಲ್ಲಿ ಸಾತ್ವಿಕ ಕಂಪನ ಹೆಚ್ಚಾಗಿದೆ ಎಂದು ನಾವು ಸುಲಭವಾಗಿ ಕಂಡು ಹಿಡಿಯಬಹುದು. ಇದನ್ನೇ ಇಲ್ಲಿ “ಶುಚಿ ದೇಶ” ಎಂದಿದ್ದಾರೆ.
ನಾವು ಸಾತ್ವಿಕ ಕಂಪನವಿರುವ ಸ್ಥಳವನ್ನು ಗುರುತಿಸಿದರೆ ಸಾಲದು; ಅಲ್ಲಿ ಎಷ್ಟು ಒಳ್ಳೆಯ ಸಾತ್ವಿಕ ಕಂಪನವಿದ್ದರೂ ನಾವು ನೆಲದಲ್ಲಿ ಕುಳಿತರೆ ನೆಲದಲ್ಲಿರುವ ಕೆಟ್ಟ ಕಂಪನ ನಮ್ಮ ದೇಹವನ್ನು ಪ್ರವೇಶಿಸಬಹುದು. ಅದಕ್ಕಾಗಿ ನಾವು ಕುಳಿತುಕೊಳ್ಳುವ ಆಸನ ವ್ಯವಸ್ಥೆ ಸರಿಯಾಗಿರಬೇಕು. ಸ್ಥಿರವಾದ ಆಸನ ಅತೀ ಮುಖ್ಯ. ಇದಕ್ಕಾಗಿ ಸೋಫಾದಂತಹ ಕುಶನ್ ಇರುವ ಆಸನವನ್ನು ಉಪಯೋಗಿಸಬಾರದು. ಇಲ್ಲಿ ಕೃಷ್ಣ ಯಾವ ರೀತಿಯ ಆಸನ ಯೋಗ್ಯ ಎನ್ನುವುದನ್ನು ವಿವರಿಸಿದ್ದಾನೆ. ನಾವು ಕುಳಿತು ಕೊಳ್ಳುವ ಆಸನ ಬಹಳ ತಗ್ಗಾಗಿ ಇರಬಾರದು ಬಹಳ ಎತ್ತರದಲ್ಲಿಯೂ ಇರಬಾರದು. ಕುಳಿತುಕೊಳ್ಳುವ ಸ್ಥಳದಲ್ಲಿ ಮೊದಲು ದರ್ಬೆಯ ಚಾಪೆಯನ್ನು ಹಾಸಬೇಕು. ಅದರ ಮೇಲೆ ಕೃಷ್ಣಾಜಿನವನ್ನು(ಸಂಸಾರಿಗಳು) ಅಥವಾ ವ್ಯಾಗ್ರಾಜಿನ(ಸಂಸಾರವನ್ನು ತ್ಯಜಿಸಿದ-ನೈಷ್ಠಿಕ ಬ್ರಹ್ಮಚಾರಿಗಳು)ವನ್ನು ಹಾಸಬೇಕು. ಅದರ ಮೇಲೆ ಬಟ್ಟೆ (ರೇಷ್ಮೆಯ ಪಟ್ಟೆ ಅಥವಾ ದಾವಳಿ). ಇದು ಧ್ಯಾನಕ್ಕೆ ಅತ್ಯಂತ ಶ್ರೇಷ್ಠ ಆಸನ.
ಇಲ್ಲಿ ದರ್ಬೆಯ ಚಾಪೆಯನ್ನು ಉಪಯೋಗಿಸಲು ಹೇಳಿದ್ದಾರೆ. ಮೇಲ್ನೋಟಕ್ಕೆ ದರ್ಬೆ ವ್ಯರ್ಥವಾಗಿ ಬೆಳೆಯುವ ಹುಲ್ಲು; ಆದರೆ ವಾತಾವರಣದಲ್ಲಿರುವ ದುಷ್ಟಶಕ್ತಿಯನ್ನು ನಿಯಂತ್ರಿಸುವ ಅಮೋಘ ಶಕ್ತಿ ದರ್ಬೆಗಿದೆ. ಅದಕ್ಕಾಗಿ ಯಜ್ಞ-ಯಾಗದಿಗಳಲ್ಲಿ ದರ್ಬೆಯನ್ನು ಉಂಗುರವಾಗಿ ಧರಿಸುತ್ತಾರೆ ಹಾಗು ದುಷ್ಟ ಶಕ್ತಿ ನಿಯಂತ್ರಕವಾಗಿ ಯಜ್ಞಕುಂಡದ ಸುತ್ತಲೂ ದರ್ಬೆಯನ್ನು  ಇಡುತ್ತಾರೆ. ಧ್ಯಾನ ಕಾಲದಲ್ಲಿ ಯಾವ ದುಷ್ಟಶಕ್ತಿ ನಮಗೆ ತೊಂದರೆ ಕೊಡದಂತೆ ಇಲ್ಲಿ ದರ್ಬೆಯ ಚಾಪೆ ನಮಗೆ ಸಹಾಯ ಮಾಡುತ್ತದೆ. ಕೃಷ್ಣಾಜಿನ ಹಾಗು ಪಟ್ಟೆ ಮಹತ್ತಾದ ಸಾತ್ವಿಕ ಕಂಪನವನ್ನು ನಮಗೊದಗಿಸುತ್ತದೆ. ಇದು ನೆಲದಿಂದ ನಮ್ಮ ದೇಹಕ್ಕೆ ಕೆಟ್ಟ ಕಂಪನ ಪ್ರವೇಶಿಸದಂತೆ ತಡೆಯುತ್ತದೆ. ನಮ್ಮಲ್ಲಿ ಕೆಲವರು ಮರದ ಮಣೆಯನ್ನು ಉಪಯೋಗಿಸುತ್ತಾರೆ. ಆದರೆ ಮಣೆಯಲ್ಲಿ ಕುಳಿತಾಗ ನಮ್ಮ ದೇಹದ ಕೆಲವು ಭಾಗ ನೆಲವನ್ನು ಸ್ಪರ್ಶಿಸುವ ಸಾಧ್ಯತೆ ಇದೆ. ಅದಕ್ಕಾಗಿ ಕೃಷ್ಣ ಹೇಳಿದ ಈ ಮೇಲಿನ  ಆಸನ ಬಹಳ ಸೂಕ್ತ. ಈ ರೀತಿಯ ಆಸನವನ್ನು ತಯಾರಿಸಿಕೊಂಡು ನಮಗೆ ಸಾಧ್ಯವಾದ ಭಂಗಿ(Posture)ಯಲ್ಲಿ ನೆಟ್ಟಗೆ ಕುಳಿತುಕೊಳ್ಳಬೇಕು. ನಮಗೆ ಸಾಧ್ಯವಾಗದ ಆಸನದಲ್ಲಿ ಬಲವಂತವಾಗಿ ಕೂರುವುದು ಧ್ಯಾನಕ್ಕೆ ಪೂರಕವಲ್ಲ. ಸಾಮಾನ್ಯವಾಗಿ ವಜ್ರಾಸನ ಬಹಳ ಪ್ರಸಿದ್ಧ. ಈ ಆಸನದಲ್ಲಿ ನಮ್ಮ ದೇಹ ನೆಟ್ಟಗಿರುತ್ತದೆ ಹಾಗು ಇದು ಧ್ಯಾನಕ್ಕೆ ಪೂರಕ. ಈ ಬಗ್ಗೆ ಮುಂದೆ ವಿವರವಾಗಿ ಹದಿಮೂರನೇ ಶ್ಲೋಕದಲ್ಲಿ  ಕೃಷ್ಣ ವಿವರಿಸುತ್ತಾನೆ.
ಮೇಲೆ ಹೇಳಿದ ರೀತಿ ಆಸನವನ್ನು ಸಿದ್ಧ ಪಡಿಸಿಕೊಂಡು ಕುಳಿತ ತಕ್ಷಣ ಧ್ಯಾನ ಸಾಧ್ಯವಾಗುವುದಿಲ್ಲ. ಆಸನದ ಮೇಲೆ ಸೂಕ್ತ ಭಂಗಿಯಲ್ಲಿ ಕೂತು ಮನಸ್ಸನ್ನು ಭಗವಂತನ ಕಡೆಗೆ ಏಕಾಗ್ರ ಮಾಡಬೇಕು. ‘ಏಕಾಗ್ರ’ ಎನ್ನುವ ಪದಕ್ಕೆ ಎರಡು ಅರ್ಥವಿದೆ. ಏಕ+ಅಗ್ರ-ಬಾಣದಂತೆ ಒಂದೇ ಗುರಿ. ಯಾವುದಕ್ಕೆ ಗುರಿ ಇಡುವುದು ಎಂದರೆ ಅದಕ್ಕೆ ಇದೇ ಪದದಲ್ಲಿ ಉತ್ತರವಿದೆ.  ‘ಏಷ ಏವ ಕರೋತೀತಿ ಏಕಾಗ್ರಹಃ’ ಯಾರೊಬ್ಬನು ಎಲ್ಲ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನಾಜ್ಞಾನ-ಬಂಧ-ಮೊಕ್ಷಗಳಿಗೆ ಕಾರಣನೋ ಅವನಲ್ಲಿ ಮನಸ್ಸನ್ನು ನೆಲೆಗೊಳಿಸುವುದು ಏಕಾಗ್ರ.  ಬಾಲ್ಯದಿಂದ ಬೆಳೆಸಿಕೊಂಡು ಬಂದ ಅಭ್ಯಾಸವನ್ನು ಬಿಟ್ಟು ಹೊಸ ಅಭ್ಯಾಸಕ್ಕೆ ತನ್ನನ್ನು ತಾನು ಅಣಿಗೊಳಿಸಬೇಕಾದರೆ ಮನಸ್ಸಿಗೆ ಬಹಳ ಸಮಯ ಬೇಕಾಗುತ್ತದೆ. ಹೀಗಾಗಿ ಧ್ಯಾನಕ್ಕೆ ಕೂತ ತಕ್ಷಣ ಮನಸ್ಸು ಏಕಾಗ್ರವಾಗಲಿಲ್ಲ ಎಂದು ಯಾರೂ ಗಾಬರಿಯಾಗುವುದು ಬೇಡ. ನಿರಂತರ ಪ್ರಯತ್ನವನ್ನು ಎಂದೂ ಕೈಬಿಡದೆ ಛಲದಿಂದ ಸಾಧನೆ ಮಾಡಿದಾಗ ಏಕಾಗ್ರತೆ ಸಾಧ್ಯ.
ಮನಸ್ಸು ಏಕಾಗ್ರವಾದ ನಂತರ ‘ಯತಚಿತ್ತ ಇಂದ್ರಿಯ ಕ್ರಿಯಃ’ – ಎಲ್ಲ ಬಾಹ್ಯಇಂದ್ರಿಯ ಕ್ರಿಯೆಯನ್ನು ಸಂಪೂರ್ಣ ಸ್ಥಬ್ಧಗೊಳಿಸಬೇಕು. ಅಂದರೆ ಈ ಸ್ಥಿತಿಯಲ್ಲಿ ಹೊರಗಿನ ಶಬ್ದ ನಮಗೆ ಕೇಳಿಸದು, ಬಾಹ್ಯ ಕಂಪು ಮೂಗಿಗೆ ಬಡಿಯದು. ಒಂದು ವೇಳೆ ಒಂದು ಸೊಳ್ಳೆ ಕಚ್ಚಿದರೂ ಆ ನೋವಿನ ಅರಿವು ನಮಗಾಗುವುದಿಲ್ಲ. ಇದು ನಿದ್ದೆಯಂತೆ; ನಿದ್ದೆಯಲ್ಲಿ ನಮಗೆ ಅಂತರಂಗ ಪ್ರಪಂಚ ಎಚ್ಚರವಿರುವುದಿಲ್ಲ, ಆದರೆ ಧ್ಯಾನದಲ್ಲಿ ಅಂತರಂಗ ಪ್ರಪಂಚ ಎಚ್ಚರವಿರುತ್ತದೆ. ಹೀಗೆ ಬಾಹ್ಯೇಂದ್ರಿಯ ಕ್ರಿಯೆಯನ್ನು ಸ್ಥಬ್ಧಗೊಳಿಸಿ ನಂತರ ಚಿತ್ತವನ್ನು ನಿಯಂತ್ರಿಸಬೇಕು. ನಮ್ಮ ಚಿತ್ತದಲ್ಲಿ ಅದೆಷ್ಟು ವಿಚಾರ ಸಂಗ್ರಹವಾಗಿರುತ್ತದೆ. ಆದರೆ ಹಿಂದೆ ದಾಖಲಿಸಿರುವ ಎಲ್ಲ ವಿಷಯವನ್ನೂ ಬಿಟ್ಟು ಕೇವಲ ಭಗವಂತನ ಗುಣದ ಅಂಶವನ್ನು ಮಾತ್ರ ಧ್ಯಾನ ಮಾಡಬೇಕು.
ಹೀಗೆ ನಮ್ಮ ಮನಸ್ಸು ಚಿತ್ತವನ್ನು ನಿಯಂತ್ರಿಸಲು ಜನ್ಮ ಜನ್ಮಾಂತರದ ಸಾಧನೆ ಬೇಕು. ಕೆಲವರು ಈ ಸಾಧನೆಯಲ್ಲಿ ನಿರಂತರ ಪ್ರಯತ್ನ ಮಾಡಿ ಯಾವುದೇ ಸಿದ್ಧಿಫಲಿಸದೇ ನಿರಾಶರಾಗುವುದಿದೆ. ಆದರೆ ಹಿಂದೆ ಹೇಳಿದಂತೆ ನಾವು ಅಧ್ಯಾತ್ಮದಲ್ಲಿ ಇಡುವ ಒಂದು ತೊದಲು ಹೆಜ್ಜೆ ಕೂಡಾ ವ್ಯರ್ಥವಲ್ಲ. ಈ ಜನ್ಮದಲ್ಲಿ ಸಿದ್ಧಿ ಸಾಧ್ಯವಾಗದೇ ಇದ್ದರೆ ಖಂಡಿತ ಮುಂದಿನ ಜನ್ಮದಲ್ಲಿ ನಮ್ಮ ಸಾಧನೆ ನಾವು ಈ ಜನ್ಮದಲ್ಲಿ ಎಲ್ಲಿ ನಿಂತಿದ್ದೆವೋ ಅಲ್ಲಿಂದ ಆರಂಭವಾಗುತ್ತದೆ. ಆದ್ದರಿಂದ ಎಂದೂ ನಿರಾಶೆ ಬೇಡ, ಪ್ರಯತ್ನ ಮಾತ್ರ ನಿರಂತರವಾಗಿರಲಿ.
ಹೀಗೆ ನಮ್ಮ ಮನಸ್ಸು ಮತ್ತು ಚಿತ್ತ ನಿಯಂತ್ರಣಕ್ಕೆ ಬಂದ ಮೇಲೆ ನಾವು ಅದನ್ನು ಅದೇ ಸ್ಥಿತಿಯಲ್ಲಿ ಹಿಡಿದಿಟ್ಟುಕೊಳ್ಳಬೇಕು(ಯುಂಜ್ಯಾದ್ ಯೋಗಮ್). ಈ ಸ್ಥಿತಿಯಲ್ಲಿ ನಮ್ಮ ಜ್ಞಾನಾನಂದಮಯವಾದ ಆತ್ಮಕ್ಕೆ ಹಿಡಿದ ಕೊಳೆ ತೊಳೆದುಹೋಗಿ ಆತ್ಮಶುದ್ಧಿಯಾಗುತ್ತದೆ. ಇಂತಹ ಶುದ್ಧವಾದ ಆತ್ಮದಿಂದ ಪವಿತ್ರನಾದ ಭಗವಂತನನ್ನು ಕಾಣಲು ಸಾಧ್ಯ.
ಮುಂದಿನ ಶ್ಲೋಕದಲ್ಲಿ ಕೃಷ್ಣ ಧ್ಯಾನ ಭಂಗಿ(ಕುಳಿತುಕೊಳ್ಳುವ ರೀತಿ)ಯ ಬಗ್ಗೆ ಇನ್ನೂ ಸ್ಪಷ್ಟವಾದ ಚಿತ್ರಣವನ್ನು ಕೊಡುತ್ತಾನೆ.

ಸಮಂ ಕಾಯಶಿರೋಗ್ರೀವಂ ಧಾರಯನ್ನಚಲಂ ಸ್ಥಿರಃ
ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್            ೧೩

ಪ್ರಶಾಂತಾತ್ಮಾ ವಿಗತಭೀರ್ಬ್ರಹ್ಮಚಾರಿವ್ರತೇ ಸ್ಥಿತಃ
ಮನಃ ಸಂಯಮ್ಯ ಮಚ್ಚಿತ್ತೋ ಯುಕ್ತ ಆಸೀತ ಮತ್ಪರಃ ೧೪


ಸಮಮ್  ಕಾಯ ಶಿರಃ ಗ್ರೀವಮ್  ಧಾರಯನ್ ಅಚಲಮ್  ಸ್ಥಿರಃ 
ಸಂಪ್ರೇಕ್ಷ್ಯ ನಾಸಿಕಾ ಅಗ್ರಮ್  ಸ್ವಮ್  ದಿಶಃ ಚ ಅನವಲೋಕಯನ್ ||

ಪ್ರಶಾಂತ ಆತ್ಮಾ ವಿಗತ ಭೀಃ ಬ್ರಹ್ಮಚಾರಿವ್ರತೇ ಸ್ಥಿತಃ
ಮನಃ ಸಂಯಮ್ಯ ಮತ್ ಚಿತ್ತಃ ಯುಕ್ತಃ  ಆಸೀತ ಮತ್ ಪರಃ -- ಬೆನ್ನು-ತಲೆ-ಕತ್ತುಗಳನ್ನು ನೆಟ್ಟಗೆ ನಿಲ್ಲಿಸಿ, ನಲುಗದೆ ಗಟ್ಟಿಯಾಗಿ ಕುಳಿತು, ಅತ್ತಿತ್ತ ನೋಡದೆ ತನ್ನ ಮೂಗಿನ ತುದಿಯಲ್ಲೆ ನೋಟವಿಟ್ಟು, ಬಗೆಯನ್ನು ವಿಷಯಗಳತ್ತ ಹರಿಯಗೊಡದೆ ಹದಗೊಳಿಸಿ, ಅಂಜದೆ, ಬ್ರಹ್ಮಚರ್ಯದಲ್ಲಿದ್ದು, ನನ್ನನ್ನೇ ಪರದೈವವೆಂದು ನಂಬಿ, ನನ್ನನ್ನೆ ನೆನೆಯುತ್ತ ಸಮಾಧಿಯನ್ನು ಸಾಧಿಸಬೇಕು.

ಧ್ಯಾನಕ್ಕೆ ಕುಳಿತಾಗ ಸೊಂಟದಿಂದ ಮೇಲಿನ ನಮ್ಮ ಶರೀರ ನೆಟ್ಟಗೆ ಸರಳರೇಖೆಯಲ್ಲಿರಬೇಕು. ಬೆನ್ನು ಬಗ್ಗಿರಕೂಡದು,  ಕುತ್ತಿಗೆ, ತಲೆ ವಾಲಿರಬಾರದು. ದೇಹವನ್ನು ನಿಶ್ಚಲಗೊಳಿಸಬೇಕು. ಸ್ವಲ್ಪವೂ ಅಲ್ಲಡಿಸಬಾರದು. ಈ ರೀತಿ ಕುಳಿತುಕೊಳ್ಳದೆ ಮನಸ್ಸಿನ ಸ್ಥಿರತೆ ಅಸಾಧ್ಯ. ಮನಸ್ಸು ಈ ದೇಹವೆಂಬ ಪಾತ್ರೆಯೊಳಗಿನ ನೀರಿನಂತೆ. ಪಾತ್ರೆ ಅಲ್ಲಾಡಿದರೆ ಮನಸ್ಸೆಂಬ ನೀರಿನಲ್ಲಿ ಅಲೆಗಳು ಮೂಡುತ್ತವೆ, ಇದರಿಂದ ಏಕಾಗ್ರತೆಗೆ ಭಂಗವಾಗುತ್ತದೆ.
ದೇಹದಲ್ಲಿ ಇನ್ನೊಂದು ಪ್ರಮುಖ ಅಂಗ ಕಣ್ಣು. ದೇಹವನ್ನು ಸ್ಥಿರಗೊಳಿಸಿದ ಮೇಲೆ ಕಣ್ಣನ್ನು ಸ್ಥಿರಗೊಳಿಸಬೇಕು. ಮೂಗಿನ ತುದಿಯಲ್ಲಿ ದೃಷ್ಟಿಯನ್ನು ನೆಟ್ಟು ಯಾವ ದಿಕ್ಕಿನ ಯಾವ ಆಕೃತಿಯೂ ಕಾಣದಂತೆ ನೇರವಾಗಿ ಒಂದೇ ಕಡೆ ದೃಷ್ಟಿ ಸ್ಥಿರಗೊಳಿಸಬೇಕು.(ಕಣ್ಣನ್ನು ಮುಚ್ಚಿ ಧ್ಯಾನ ಮಾಡಬಹುದು, ಆದರೆ ಕಣ್ಣನ್ನು ಮುಚ್ಚಿದರೆ ನಿದ್ದೆ ಮಾಡುವ ಸಾಧ್ಯತೆ ಹೆಚ್ಚು).
ಈ ರೀತಿ ಧ್ಯಾನದ ಸ್ಥಿತಿಯನ್ನು ತಲುಪಿದಾಗ ಮನಸ್ಸು ಪ್ರಶಾಂತವಾಗುತ್ತದೆ. ಯಾವ ಗೊಂದಲವೂ ಇಲ್ಲದ ಹೇಳಲಾಗದ ವಿಚಿತ್ರ ಆನಂದದಸ್ಥಿತಿಯನ್ನು ನಾವು ಈ ಸ್ಥಿತಿಯಲ್ಲಿ  ಅನುಭವಿಸುತ್ತೇವೆ. ಇದರಿಂದ ನಮಗೆ ಎಲ್ಲಾ ಭಯವೂ ಹೊರಟು ಹೋಗುತ್ತದೆ. ಧ್ಯಾನಕ್ಕೆ ಅತಿ ಮುಖ್ಯವಾಗಿ ಬೇಕಾದ  ಇನ್ನೊಂದು ಅಂಶ ಬ್ರಹ್ಮಚರ್ಯ ಪಾಲನೆ. ಇಲ್ಲಿ ಬ್ರಹ್ಮಚರ್ಯ ಎನ್ನುವ ಪದಕ್ಕೆ ಮೂರು ಅರ್ಥವಿದೆ. ಪರಬ್ರಹ್ಮನ ಕಡೆಗೆ ಹೋಗುವ ಧೀಕ್ಷೆ-ಬ್ರಹ್ಮಚರ್ಯ; ನಿರಂತರ ವೇದಾಧ್ಯಯನ-ಬ್ರಹ್ಮಚರ್ಯ; ಸಂಸಾರಿಗಳಾದವರು ನಿಯಮಿತ ಲೈಂಗಿಕತೆ ಪಾಲಿಸುವುದು(ಅತಿ ಸುಲಭವಾಗಿ ಲೈಂಗಿಕತೆಯಿಂದ ದೂರ ಸರಿದು ನಿಲ್ಲುವ ಕ್ಷಮತೆ ಹಾಗು ಬೇಕೆನಿಸಿದಾಗ ನಿಯಮಿತ ಲೈಂಗಿಕತೆ) ಹಾಗು ವಿರಕ್ತಿಗಳ(ನೈಷ್ಠಿಕ ಬ್ರಹ್ಮಚಾರಿ) ಲೈಂಗಿಕ ಮುಕ್ತ ಜೀವನ-ಬ್ರಹ್ಮಚರ್ಯ.
ಭಗವಂತನೇ ಸರ್ವೋತ್ತಮ ಎನ್ನುವ ಅಚಲವಾದ ಭಕ್ತಿಯಿಂದ, ಭಗವಂತನಲ್ಲಿ ಸಂಪೂರ್ಣ ಭರವಸೆಯನ್ನಿಟ್ಟು ಸದಾ ಭಗವಂತನನ್ನು ನೆನೆಯುತ್ತ, ಎಂದೂ ಎದೆಗುಂದದೆ ಸಮಾಧಿಯನ್ನು ಸಾಧಿಸಬೇಕು.
ಧ್ಯಾನದ  ಪರಿಣಾಮವೇನು? ನಾವು ಏಕೆ ಧ್ಯಾನ ಮಾಡಬೇಕು? ಉತ್ತರ ಮುಂದಿನ ಶ್ಲೋಕ!

Monday, April 25, 2011

Bhagavad Gita Chapter-05 Shloka-01-03


ಅಧ್ಯಾಯ ಐದು

ನಾಲ್ಕನೆ ಅಧ್ಯಾಯದಲ್ಲಿ ಕೃಷ್ಣ ಕರ್ಮಯೋಗದ ಬಗ್ಗೆ ಹೇಳಿದ ಹಾಗು ಕೊನೆಯಲ್ಲಿ ಕರ್ಮಸನ್ಯಾಸದ ಬಗ್ಗೆಯೂ ಹೇಳಿದ. ಇಲ್ಲಿ ನಮಗೆ ಸ್ವಲ್ಪ ಗೊಂದಲವಾಗುತ್ತದೆ. ಇದನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಕರ್ಮಯೋಗ ಮತ್ತು ಕರ್ಮಸಂನ್ಯಾಸ ಅಂದರೆ ಏನು ಎಂದು ತಿಳಿಯಬೇಕು.  ಮೇಲ್ನೋಟಕ್ಕೆ ನಮಗೆ ಕರ್ಮಸಂನ್ಯಾಸ ಅಂದರೆ 'ಕರ್ಮತ್ಯಾಗ' ಎನ್ನುವಂತೆ ಕಾಣುತ್ತದೆ. ಆದರೆ ಕೃಷ್ಣ ನಾಲ್ಕನೇ ಅಧ್ಯಾಯದ ಕೊನೆಯಲ್ಲಿ "ಎದ್ದು ನಿಲ್ಲು- ಯುದ್ಧ ಮಾಡು" ಎಂದು ಅರ್ಜುನನನ್ನು ಕರ್ಮ ಮಾಡುವಂತೆ ಹುರಿದುಂಬಿಸಿದ್ದನ್ನು ನಾವು ಕಂಡಿದ್ದೇವೆ. ಇದರಿಂದ  ಕರ್ಮಸಂನ್ಯಾಸ ಅಂದರೆ  ಕರ್ಮತ್ಯಾಗವಲ್ಲ ಎನ್ನುವುದು ನಮಗೆ  ಸ್ಪಷ್ಟವಾಗುತ್ತದೆ. ಶಾಸ್ತ್ರೀಯವಾಗಿ ಕರ್ಮಸಂನ್ಯಾಸ ಎಂದರೆ  ದ್ವಂದ್ವಾತೀತವಾಗಿ, ಕರ್ಮಫಲದ ಬಯಕೆಯಿಲ್ಲದೆ-ಕರ್ಮ  ಮಾಡುವುದು. ಇಲ್ಲಿ ರಾಗ-ದ್ವೇಷಗಳಿಗೆ, ಕಾಮ-ಕ್ರೋಧಗಳಿಗೆ ಎಡೆಯಿಲ್ಲ. ಈ ಬಗ್ಗೆಯೂ ವಿಶೇಷವಾಗಿ ಕೃಷ್ಣ ಹಿಂದೆ ವಿವರಿಸಿದ್ದ.  ಆದ್ದರಿಂದ ಕರ್ಮಸಂನ್ಯಾಸ  ಎಂದರೆ ಕರ್ಮವನ್ನು ಬಿಡುವುದಲ್ಲ, ಕರ್ಮದಲ್ಲಿ ಕಾಮ ಕ್ರೋಧಗಳನ್ನು ಬಿಡುವುದು.  "ಕಾಮಕ್ರೋಧಗಳ  ಅತೀತನಾಗಿ ಯುದ್ಧಮಾಡು ಮತ್ತು ಜ್ಞಾನಯೋಗದ ದಾರಿಯಲ್ಲಿ ನಡೆ" ಎನ್ನುವುದು ಅರ್ಜುನನಿಗೆ ಕೃಷ್ಣನ ಸಂದೇಶ. ಆದರೆ ಕಾಮ-ಕ್ರೋಧಗಳ ಅತೀತನಾಗಿ ಜ್ಞಾನಮಾರ್ಗದಲ್ಲಿ ಯುದ್ಧ ಮಾಡುವುದು ಹೇಗೆ? ಇದನ್ನು   ಅರ್ಥ ಮಾಡಿಕೊಳ್ಳುವುದು ನಮಗೆ ಸ್ವಲ್ಪ ಕಷ್ಟ.  ಈ ಕುರಿತು ಅರ್ಜುನ ಕೃಷ್ಣನಲ್ಲಿ ವಿವರಣೆಯನ್ನು ನಮ್ಮ ನಿಮ್ಮೆಲ್ಲರ ಪರವಾಗಿ ಕೇಳುವುದರೊಂದಿಗೆ ಐದನೇ ಅಧ್ಯಾಯ ಆರಂಭವಾಗುತ್ತದೆ. ಈ ಅಧ್ಯಾಯದಲ್ಲಿ ಕರ್ಮಸಂನ್ಯಾಸದ ಬಗ್ಗೆ ವಿಶೇಷವಾದ ವಿವರಣೆಯನ್ನು ಕೃಷ್ಣ ನಮ್ಮ ಮುಂದಿಟ್ಟಿದ್ದಾನೆ.

ಅರ್ಜುನ ಉವಾಚ ।
ಸಂನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ ।
ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್       ॥೧॥

ಅರ್ಜುನಃ  ಉವಾಚ-ಅರ್ಜುನ ಕೇಳಿದನು:
ಸಂನ್ಯಾಸಂ ಕರ್ಮಣಾಮ್  ಕೃಷ್ಣ ಪುನಃ ಯೋಗಮ್  ಚ ಶಂಸಸಿ ।
ಯತ್  ಶ್ರೇಯಃ  ಏತಯೋಃ ಏಕಮ್ ತತ್ ಮೇ ಬ್ರೂಹಿ ಸುನಿಶ್ಚಿತಮ್ -- ಕೃಷ್ಣ, ಒಮ್ಮೆ ಕರ್ಮಸಂನ್ಯಾಸವನ್ನು ಹೊಗಳುತ್ತಿ; ಮತ್ತೊಮ್ಮೆ ಕರ್ಮಯೋಗವನ್ನು. ಇವೆರಡರಲ್ಲಿ ಯಾವುದು ಮಿಗಿಲು ಅದನ್ನು ನನಗೆ ಖಚಿತವಾಗಿ ಹೇಳು.

ಅರ್ಜುನ  ಕೇಳುತ್ತಾನೆ: "ಓ ಕೃಷ್ಣ, ನೀನು ಒಮ್ಮೆ ಹೋರಾಡು ಎನ್ನುತ್ತಿ, ಇನ್ನೊಮ್ಮೆ ಕರ್ಮಸಂನ್ಯಾಸ ಮಾಡು ಅನ್ನುತ್ತಿ . ಒಂದು ವೇಳೆ ಕರ್ಮಸಂನ್ಯಾಸ ಅಂದರೆ ಕರ್ಮತ್ಯಾಗವಾದರೆ  ಇದು ಒಂದಕ್ಕೊಂದು ವಿರುದ್ಧ.  ಇದರಲ್ಲಿ ಯಾವುದು ಶ್ರೇಯಸ್ಕರ ಎನ್ನುವುದನ್ನು ನಿಶ್ಚಿತವಾಗಿ ಹೇಳು" ಎಂದು ಅರ್ಜುನ ಕೃಷ್ಣನನ್ನು ಕೇಳುತ್ತಾನೆ. ಯುದ್ಧ ಮಾಡುವಾಗ ದ್ವಂದ್ವ ಅನ್ನುವುದು ಇದ್ದೇ ಇದೆ. ದ್ವಂದ್ವತ್ಯಾಗದಿಂದ ಯುದ್ಧ ಮಾಡುವುದು ಹೇಗೆ? ಕರ್ಮಸಂನ್ಯಾಸ ಮತ್ತು ಕರ್ಮಯೋಗ ಇವೆರಡೂ ಒಟ್ಟಿಗೆ ಹೇಗೆ ಸಾಧ್ಯ? ಯುದ್ಧವೆಂದಮೇಲೆ ರಾಗ-ದ್ವೇಷ ಇದ್ದೇ ಇರುತ್ತದೆ. ಈ ಕಾರಣದಿಂದ ಕೃಷ್ಣನ ಮಾತು ನಮಗೆ ಖಚಿತವಾಗಿ ಅರ್ಥವಾಗುವುದಿಲ್ಲ. ಅದಕ್ಕಾಗಿ ಅರ್ಜುನ ಕೃಷ್ಣನಲ್ಲಿ ವಿವರವನ್ನು ಕೇಳುತ್ತಿದ್ದಾನೆ.
ಇಲ್ಲಿ ಅರ್ಜುನ ತನ್ನ  ಪ್ರಶ್ನೆಯ ನಡುವೆ "ಕೃಷ್ಣ" ಎನ್ನುವ ಸಂಬೋಧನೆಯನ್ನು ಬಳಸಿದ್ದಾನೆ.  'ಕರ್ಷತಿ ಇತೀ ಕೃಷ್ಣಃ' ಎಲ್ಲರನ್ನೂ ತನ್ನೆಡೆಗೆ ಸೆಳೆಯುವ ಪಾದರಸಸಂಸಾರದಿಂದ ಎತ್ತರಕ್ಕೆ ಕೊಂಡೊಯ್ಯುವ ಕರ್ಷಣಶಕ್ತಿಯಾದ ಸೌಂದರ್ಯಮೂರ್ತಿ ಭಗವಂತ ಕೃಷ್ಣಃ. ಅಜ್ಞಾನದಿಂದ ಬರುವ  ಸಂಶಯವನ್ನು ಕರ್ಷಣೆಮಾಡಿ ಜ್ಞಾನದ ಮಡಿಲಿಗೆ ಸೆಳೆಯುವ ನೀನು ನನಗೆ ಖಚಿತವಾಗಿ ಯಾವುದು ಶ್ರೇಯಸ್ಸು ಎನ್ನುವುದನ್ನು ತಿಳಿಸು ಎನ್ನುವ ಭಾವ ಈ ಸಂಬೋಧನೆಯಲ್ಲಿದೆ.
ಭಗವಾನುವಾಚ ।
ಸಂನ್ಯಾಸಃ ಕರ್ಮಯೋಗಶ್ಚ ನಿಃಶ್ರೇಯಸಕರಾವುಭೌ ।
ತಯೋಸ್ತು ಕರ್ಮಸಂನ್ಯಾಸಾತ್  ಕರ್ಮಯೋಗೋ ವಿಶಿಷ್ಯತೇ ॥೨॥

ಭಗವಾನುವಾಚ- ಭಗವಂತ ಹೇಳಿದನು
ಸಂನ್ಯಾಸಃ ಕರ್ಮಯೋಗಃ ಚ ನಿಃಶ್ರೇಯಸ ಕರೌ ಉಭೌ ।
ತಯೋಃ ತು ಕರ್ಮ ಸಂನ್ಯಾಸಾತ್  ಕರ್ಮಯೋಗಃ  ವಿಶಿಷ್ಯತೇ -- ಕರ್ಮಸಂನ್ಯಾಸ ಮತ್ತು ಕರ್ಮಯೋಗ ಎರಡೂ ಒಳಿತಿನ ದಾರಿಗಳೆ. ಅವುಗಳಲ್ಲಿ ಕರ್ಮಸಂನ್ಯಾಸಕ್ಕಿಂತ ಕರ್ಮಯೋಗ ಮಿಗಿಲು.

ಜ್ಞೇಯಃ ಸ ನಿತ್ಯಸಂನ್ಯಾಸೀ ಯೋ ನ ದ್ವೇಷ್ಟಿ ನ ಕಾಂಕ್ಷತಿ  ।
ನಿರ್ದ್ವಂದ್ವೋ  ಹಿ ಮಹಾಬಾಹೋ ಸುಖಂ ಬಂಧಾತ್ ಪ್ರಮುಚ್ಯತೇ     ॥೩॥

ಜ್ಞೇಯಃ ಸ ನಿತ್ಯಸಂನ್ಯಾಸೀ ಯಃ  ನ ದ್ವೇಷ್ಟಿ ನ ಕಾಂಕ್ಷತಿ  ।
ನಿರ್ದ್ವಂದ್ವಃ  ಹಿ  ಮಹಾಬಾಹೋ ಸುಖಮ್  ಬಂಧಾತ್ ಪ್ರಮುಚ್ಯತೇ --ದ್ವೇಷಿಸದವನು, ಮತ್ತು ಬಯಸದವನು  ನಿಜವಾದ ಸಂನ್ಯಾಸಿಯೆಂದರಿಯಬೇಕು. ಮಹಾವೀರ, ಇಂಥ ದ್ವಂದ್ವಗಳನ್ನು ಗೆದ್ದವನು ಹಾಯಾಗಿ ಕರ್ಮ ಸೆರೆಯಿಂದ ಪಾರಾಗುತ್ತಾನೆ.

ಇಲ್ಲಿ ಅರ್ಜುನನ ಪ್ರಶ್ನೆಗೆ ಕೃಷ್ಣನ ಉತ್ತರ ಒಗಟಿನ ರೂಪದಲ್ಲಿದೆ. ಈ ಶ್ಲೋಕವನ್ನು ಎಚ್ಚರಿಕೆಯಿಂದ ಬಿಡಿಸಿ ಅರ್ಥೈಸಿಕೊಳ್ಳಬೇಕು.  ಇಲ್ಲಿ ಹೇಳುವ ಸಂನ್ಯಾಸ ಸಂನ್ಯಾಸಾಶ್ರಮವಲ್ಲ. ಯಾರು ರಾಗ ದ್ವೇಷವನ್ನು ದಾಟಿ ನಿಲ್ಲುತ್ತಾನೋ ಅವನು ಸಂನ್ಯಾಸಿ. ಸ+ಅಹಂ+ನ್ಯಾಸ-ಸಂನ್ಯಾಸ. '' ಅಂದರೆ ಸಂಪೂರ್ಣವಾದ, ಸಮೀಚೀನವಾದ, ದೋಷರಹಿತ ಮತ್ತು ಗುಣಪೂರ್ಣನಾದ ಭಗವಂತ. ಅವನಲ್ಲಿ ನಮ್ಮ ಅಹಂ(ರಾಗ ದ್ವೇಷ-ಅಹಂಕಾರ)ನ್ನು ನ್ಯಾಸ ಮಾಡುವುದು ಸಂನ್ಯಾಸ. ಕೃಷ್ಣ ಹೇಳುತ್ತಾನೆ: "ಕರ್ಮಯೋಗ  ಕರ್ಮಸಂನ್ಯಾಸಕ್ಕಿಂತ ಮಿಗಿಲು" ಎಂದು. ಏಕೆಂದರೆ ಇಲ್ಲಿ ಅರ್ಜುನ 'ನನಗೆ ಕೌರವರ ಮೇಲೆ ದ್ವೇಷವಿಲ್ಲ, ನಾವೇ ಗೆಲ್ಲಬೇಕು ಎನ್ನುವ ಬಯಕೆ  ಇಲ್ಲ, ನನಗೆ ಯಾವ ಫಲದ ಆಸೆಯೂ ಇಲ್ಲ' ಎಂದು ಯುದ್ಧ ಮಾಡದೇ ನಿರ್ಲಿಪ್ತನಾಗಿ-ನಿಷ್ಕ್ರೀಯನಾಗಿ ಕುಳಿತರೆ ಅದು ಕರ್ಮಸಂನ್ಯಾಸವಾಗುತ್ತದೆ. ಆದರೆ ಹೀಗೆ ಸುಮ್ಮನೆ ಕುಳಿತರೆ ಕರ್ತವ್ಯಕರ್ಮ(ಕರ್ಮಯೋಗ) ಮಾಡಿದಂತಾಗುವುದಿಲ್ಲ . ಇದರಿಂದಾಗಿ ಅಧರ್ಮಕ್ಕೆ ಜಯವಾಗುತ್ತದೆ. ಆದ್ದರಿಂದ ಕರ್ಮಸಂನ್ಯಾಸ ಮತ್ತು ಕರ್ಮಯೋಗ ಜೊತೆ-ಜೊತೆಯಾಗಿರಬೇಕು. ಕರ್ಮಯೋಗವಿಲ್ಲದ ಕರ್ಮಸಂನ್ಯಾಸ ಎಂದೂ ಶ್ರೇಯಸ್ಸನ್ನು ತರುವುದಿಲ್ಲ ಎನ್ನುವುದು ಕೃಷ್ಣನ ಉತ್ತರ.
ಸಂನ್ಯಾಸ  ಅನ್ನುವುದು ಅರ್ಥಪೂರ್ಣವಾಗಬೇಕಾದರೆ ಕಾಮ ಕ್ರೋಧಗಳ ತ್ಯಾಗದ ಜೊತೆಗೆ ಕ್ರಿಯೆ ಇರಬೇಕು. ಹೋರಾಡಬೇಕು-ಆದರೆ ರಾಗದ್ವೇಷದಿಂದಲ್ಲ. ಕ್ರಿಯೆ ಇಲ್ಲದೆ  ರಾಗ-ದ್ವೇಷ ತ್ಯಾಗಕ್ಕೆ ಅರ್ಥವಿಲ್ಲ. ಆದ್ದರಿಂದ ದ್ವಂದ್ವಾತೀತವಾಗಿ ಕರ್ಮ ಮಾಡಬೇಕು ಎನ್ನುವುದು ಕೃಷ್ಣನ ಸಂದೇಶ.
ನಮ್ಮ ಜೀವನವೇ ಒಂದು ಹೋರಾಟ. ಇಲ್ಲಿ ನಮ್ಮ ಕರ್ತವ್ಯಕರ್ಮದಿಂದ ದೂರ ಸರಿದು,  ರಾಗ-ದ್ವೇಷ, ಕಾಮ-ಕ್ರೋಧವನ್ನು  ಬಿಟ್ಟು, ನಿಷ್ಕ್ರೀಯನಾಗಿ,  ‘ಕರ್ಮಸಂನ್ಯಾಸವನ್ನು ಸಾಧಿಸಿದೆ’ ಎಂದುಕೊಂಡರೆ ನಮ್ಮ ಜೀವನ ವ್ಯರ್ಥ. ಅದರಿಂದ  ಎಂದೂ ಶ್ರೇಯಸ್ಸಿಲ್ಲ ಮತ್ತು  ಮೋಕ್ಷವಿಲ್ಲ. ರಾಗ-ದ್ವೇಷ ತ್ಯಾಗದ ಜೊತೆಗೆ, ಬದುಕು ಎನ್ನುವ ಜೀವನ ಸಂಗ್ರಾಮದಲ್ಲಿ  ನಮ್ಮ ಕರ್ತವ್ಯಕರ್ಮದ ಮುಖೇನ ಹೋರಾಟ ಮಾಡುವುದೇ  ನಿಜವಾದ ಜೀವನಧರ್ಮ. ಈ ರೀತಿ ದ್ವಂದ್ವಾತೀತ  ಬದುಕನ್ನು ಬಾಳುವವನು ಕರ್ಮದ ಸೆರೆಯಿಂದ ಪಾರಾಗುತ್ತಾನೆ.
 ಇಲ್ಲಿ ಕೃಷ್ಣ ಅರ್ಜುನನ್ನು ಮಹಾಬಾಹು ಎಂದು ಸಂಬೋಧಿಸಿದ್ದಾನೆ.  ಹಿಂದೆ ಹೇಳಿದಂತೆ ಮಹಾಬಾಹು  ಎಂದರೆ ಮಹಾವೀರ ಎನ್ನುವುದು ಮೇಲ್ನೋಟದ ಅರ್ಥ.ಇಲ್ಲಿ  ಈ  ವಿಶೇಷಣಕ್ಕೆ ವಿಶೇಷ ಅರ್ಥವಿದೆ. 'ಮಹಾಬಾ' ಅಂದರೆ ರಾಗ-ದ್ವೇಷ, ಮತ್ತು ಕಾಮನೆಗಳ ಮಡುವಿನಲ್ಲಿರುವವ. ಇಂತಹ ಮಹತ್ತರವಾದ ರಾಗ-ದ್ವೇಷಗಳನ್ನು ತ್ಯಾಗ ಮಾಡಿದವ ಮಹಾಬಾಹು. "ನಿನ್ನಲ್ಲಿ ಕರ್ಮಸಂನ್ಯಾಸವಿದೆ, ಅದರ ಜೊತೆಗೆ ಕರ್ಮಯೋಗ ಮಾಡಲು ಅರ್ಹತೆಯುಳ್ಳ ಮಹಾವೀರ ನೀನು"  ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ.  ನಮ್ಮ ಜೀವನ ಸಂಗ್ರಾಮದಲ್ಲಿ ರಾಗ-ದ್ವೇಷಗಳನ್ನು ಬಿಟ್ಟು ಕರ್ಮ ಮಾಡಬೇಕು. ಕರ್ಮಸಂನ್ಯಾಸ ಮತ್ತು ಕರ್ಮಯೋಗ ಎರಡೂ ಒಟ್ಟಿಗಿರಬೇಕು ಎನ್ನುವುದು ಮೂಲ ಸಂದೇಶ. ಅದಕ್ಕೆ ಹೊಂದಿಕೆಯಾಗುವಂತೆ ಇಲ್ಲಿ 'ಮಹಾಬಾಹು' ಎನ್ನುವ ವಿಶೇಷಣ ಬಳಕೆಯಾಗಿದೆ.

Sunday, April 24, 2011

Bhagavad Gita Kannada Chapter-04 Shloka 39-42


ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ  ಸಂಯತೇಂದ್ರಿಯಃ  ।
ಜ್ಞಾನಂ ಲಬ್ಧ್ವಾ ಪರಾಂ ಶಾಂತಿಮಚಿರೇಣಾಧಿಗಚ್ಛತಿ             ॥೩೯॥

ಶ್ರದ್ಧಾವಾನ್ ಲಭತೇ ಜ್ಞಾನಮ್ ತತ್  ಪರಃ  ಸಂಯತ ಇಂದ್ರಿಯಃ  ।
ಜ್ಞಾನಮ್  ಲಬ್ಧ್ವಾ ಪರಾಮ್  ಶಾಂತಿಮ ಆಚಿರೇಣ ಅಧಿಗಚ್ಛತಿ-ಇಂದ್ರಿಯಗಳನ್ನು ಹದ್ದಿನಲ್ಲಿಟ್ಟು, ಶ್ರದ್ಧೆಯಿಂದ ನನ್ನನ್ನೇ ಪರದೈವವೆಂದು  ನಂಬಿದವನು ತಿಳಿವನ್ನುಗಳಿಸಿ ಶೀಘ್ರವಾಗಿ  ಸಂತಸದ ಸೆಲೆಯಾದ ಮುಕ್ತಿಯನ್ನು ಪಡೆಯುತ್ತಾನೆ.

ನಮ್ಮಲ್ಲಿ ಅರಿವು ಮೂಡಬೇಕೆಂದರೆ ಬರಿಯ ಅಧ್ಯಯನ ಸಾಲದು. ಒಂದು ವಿಷಯ ನಮಗೆ ಮನವರಿಕೆಯಾಗಬೇಕಾದರೆ ಮೊದಲು ನಮಗೆ ಶ್ರದ್ಧೆ ಬೇಕು. ಇಲ್ಲಿ ಸಮರ್ಪಣಾ ಭಾವನೆ ಅತೀ ಮುಖ್ಯ.  ನಾನು ತಿಳಿದಿದ್ದೇ ದೊಡ್ಡದು ಅದಕ್ಕಿಂತ ದೊಡ್ಡದು  ಯಾವುದೂ ಇಲ್ಲ ಅನ್ನುವ ಅಹಂಕಾರವನ್ನು ಮೊದಲು ಬಿಡಬೇಕು. ನನಗೆ ಯಾವುದು ತಿಳಿದಿಲ್ಲವೋ ಅದು ಸತ್ಯವಾಗಿರಲು ಸಾಧ್ಯ ಎನ್ನುವ ಶ್ರದ್ಧೆ ಬೇಕು. ಪ್ರಪಂಚದ ಸತ್ಯ ನಮ್ಮ ನಂಬಿಕೆಯ ಮೇಲೆ ನಿಂತಿಲ್ಲ.  ಈ ಪ್ರಪಂಚದಲ್ಲಿ ನಮಗೆ ತಿಳಿದಿರುವುದು ಕೇವಲ ಅತೀ ಚಿಕ್ಕ ಅಂಶ. ನಮಗೆ ಗೊತ್ತಿಲ್ಲದೇ ಇರುವ ಸತ್ಯ ಇದೆ ಎಂದು ತಿಳಿಯುವುದೇ ಶ್ರದ್ಧೆ. ನಮ್ಮ ಬದುಕಿನ ಗುರಿ ಜ್ಞಾನ ಮತ್ತು  ಸತ್ಯದ ತಿಳುವಳಿಕೆಯಾಗಬೇಕು. ಜ್ಞಾನದ ತೃಷೆ ಜೊತೆಗೆ ಇಂದ್ರಿಯಗಳ ಚಾಪಲ್ಯಕ್ಕೆ ಹಿಡಿತ. ಹೀಗೆ ಇದ್ದಾಗ ಅದರಿಂದ ಮಾನಸ ಸಾಕ್ಷಾತ್ಕಾರ, ಆತ್ಮ ಸಾಕ್ಷಾತ್ಕಾರ-ಕೊನೆಗೆ ಪರಮಾತ್ಮನ ಸಾಕ್ಷಾತ್ಕಾರ. ಈ ನಡೆಯಿಂದ ಅಪರೋಕ್ಷ ಜ್ಞಾನ ಸಿದ್ಧಿಯಾಗುತ್ತದೆ  ಮತ್ತು ಇದರಿಂದ  ಸದಾ ಜ್ಞಾನಾನಂದಪೂರ್ಣನಾದ ಭಗವಂತನನ್ನು(ಮೋಕ್ಷವನ್ನು) ಪಡೆಯಲು ಸಾಧ್ಯ.                 

ಅಜ್ಞಶ್ಚಾಶ್ರದ್ದಧಾನಶ್ಚ ಸಂಶಯಾತ್ಮಾ ವಿನಶ್ಯತಿ           ।
ನಾಯಂ ಲೋಕೋSಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ॥೪೦॥

ಅಜ್ಞಃ ಚ ಅಶ್ರದ್ದಧಾನಃ ಚ  ಸಂಶಯ ಆತ್ಮಾ ವಿನಶ್ಯತಿ
ನ ಅಯಮ್  ಲೋಕಃ ಅಸ್ತಿ  ನ ಪರಃ ನ ಸುಖಮ್  ಸಂಶಯ ಆತ್ಮನಃ -ಅರಿವಿರದ, ನಂಬಿಕೆ ಕಳೆದುಕೊಂಡ ಇಬ್ಬಂದಿ ವಿನಾಶದತ್ತ ಸಾಗುತ್ತಾನೆ. ಇಬ್ಬಂದಿಗೆ ಇಹವಿಲ್ಲ; ಪರವಿಲ್ಲ; ನೆಮ್ಮದಿಯೂ ಇಲ್ಲ.

ಜ್ಞಾನವಿಲ್ಲದ, ಶ್ರದ್ಧೆ ಇಲ್ಲದ ಅಜ್ಞಾನಿಗಳು ನಿರಂತರ ಸಂಶಯದಲ್ಲೇ ಬದುಕುತ್ತಾರೆ.  ಜ್ಞಾನ ಮತ್ತು ಶ್ರದ್ಧೆ ಇಲ್ಲದಾಗ ಅಲ್ಲಿ ಸಂಶಯ ಬೆಳೆಯಲಾರಂಭಿಸುತ್ತದೆ. ಆ ಸಂಶಯ ಮನಸ್ಸನ್ನು ಆಕ್ರಮಿಸಿ ನಂತರ ಚಿತ್ತವನ್ನು ತಲುಪುತ್ತದೆ.  ಬುದ್ಧಿಗೆ ಬಂದ ಸಂಶಯಕ್ಕೆ ಪರಿಹಾರವಿಲ್ಲ. ಅದು ನಮ್ಮನ್ನು ಅಧಃಪಾತಕ್ಕೆ ಕೊಂಡೊಯ್ಯುತ್ತದೆ. ಇದರಿಂದ ಅಂತವರಿಗೆ ಇಹವಿಲ್ಲ, ಪರವಿಲ್ಲ, ಎಂದೆಂದೂ ನೆಮ್ಮದಿ ಇಲ್ಲ.      

ಯೋಗಸಂನ್ಯಸ್ತಕರ್ಮಾಣಂ ಜ್ಞಾನಸಂಛಿನ್ನಸಂಶಯಮ್           ।
ಆತ್ಮವಂತಂ ನ ಕರ್ಮಾಣಿ  ನಿಬಧ್ನಂತಿ  ಧನಂಜಯ             ॥೪೧॥

ಯೋಗ ಸಂನ್ಯಸ್ತ ಕರ್ಮಾಣಮ್  ಜ್ಞಾನ ಸಂಛಿನ್ನ ಸಂಶಯಮ್
ಆತ್ಮವಂತಮ್  ನ ಕರ್ಮಾಣಿ  ನಿಬಧ್ನಂತಿ  ಧನಂಜಯ- ಧನಂಜಯ, ಸಾಧನೆಯಿಂದ ಕರ್ಮಫಲದ ನಂಟು ತೊರೆದ, ಅರಿವಿನಿಂದ ಶಂಕೆಗಳನ್ನು ಕಳೆದುಕೊಂಡ ಭಗವದ್ಭಕ್ತನನ್ನು ಕರ್ಮಗಳು ಕಟ್ಟಿ ಹಾಕುವುದಿಲ್ಲ.

ಜೀವನದಲ್ಲಿ ಕರ್ಮ ಮಾಡು, ಕರ್ಮ ಮಾಡುತ್ತಾ ಕರ್ಮ ಸನ್ಯಾಸ ಮಾಡು ಎನ್ನುತ್ತಾನೆ ಕೃಷ್ಣ. ಇಲ್ಲಿ ಕರ್ಮ ಸನ್ಯಾಸ ಅಂದರೆ ಕರ್ಮ ತ್ಯಾಗವಲ್ಲ. 'ಈ ಕರ್ಮ ಭಗವಂತನಿಗೆ ಸೇರಿದ್ದು ಎಂದು ಭಗವಂತನಲ್ಲಿ ಕರ್ಮವನ್ನು ಅರ್ಪಿಸುವುದು'- ಕರ್ಮ ಸನ್ಯಾಸ(ಈ ಬಗ್ಗೆ ಮುಂದಿನ ಅಧ್ಯಾಯದಲ್ಲಿ ಹೆಚ್ಚಿನ ವಿವರಣೆಯನ್ನು ಕಾಣಬಹುದು). ಕರ್ಮಫಲದ ಬಗ್ಗೆ ಆಸೆ ಆಕಾಕ್ಷೆಗಳನ್ನು  ಬಿಟ್ಟು ಎಲ್ಲವನ್ನು ಸಮದೃಷ್ಟಿಯಿಂದ ಕಾಣುತ್ತಾ, ನಿರ್ವೀಕಾರನಾಗಿ ನಿರಂತರ ಕರ್ಮ ಮಾಡುವುದು ಕರ್ಮಸನ್ಯಾಸ. ಕರ್ಮವನ್ನು ಭಗವಂತನಲ್ಲಿ ಅರ್ಪಿಸಿ, ಜ್ಞಾನದಿಂದ ಸಂಶಯವನ್ನು ಪರಿಹರಿಸಿಕೊಂಡು, ವಿವೇಕಿಯಾಗಿ ಚಿತ್ತವನ್ನು ಜಾಗೃತಿಗೊಳಿಸಿ, ಆತ್ಮವಂತನಾಗಿ ಬದುಕುವುದನ್ನು ಕಲಿತಾಗ ಯಾವ ಕರ್ಮವೂ ಎಂದೂ ನಮಗೆ  ಬಂಧಕವಾಗುವುದಿಲ್ಲ. "ಯುದ್ಧದಲ್ಲಿ ಶತ್ರುಗಳನ್ನು ಗೆದ್ದು ಧನವನ್ನು ಗೆದ್ದ ನೀನುಜ್ಞಾನಧನವನ್ನು ಗೆದ್ದ ಧನಂಜಯ, ನಿನ್ನನ್ನು ಕರ್ಮ ಬಂಧಿಸದು" ಎನ್ನುತ್ತಾನೆ ಕೃಷ್ಣ.

ತಸ್ಮಾದಜ್ಞಾನಸಂಭೂತಂ ಹೃತ್ ಸ್ಥಂ ಜ್ಞಾನಾಸಿನಾSSತ್ಮನಃ ।
ಛಿತ್ವೈನಂ ಸಂಶಯಂ ಯೋಗಮಾತಿಷ್ಠೋತ್ತಿಷ್ಠ ಭಾರತ         ॥೪೨॥

ತಸ್ಮಾತ್ ಅಜ್ಞಾನ ಸಂಭೂತಮ್  ಹೃತ್ ಸ್ಥಮ್   ಜ್ಞಾನ ಅಸಿನಾ ಆತ್ಮನಃ ।
ಛಿತ್ವೈನಮ್  ಸಂಶಯಮ್  ಯೋಗಮ್ ಆತಿಷ್ಠ ಉತ್ತಿಷ್ಠ ಭಾರತ-ಆದ್ದರಿಂದ, ಓ ಭಾರತ, ಅಜ್ಞಾನದಿಂದ ಹುಟ್ಟಿ ಬಗೆಯೊಳಹೊಕ್ಕು ನಿಂತ ನಿನ್ನ ಈ ಸಂದೇಹವನ್ನು ತಿಳಿವಿನ ಕತ್ತಿಯಿಂದ ಕತ್ತರಿಸಿ ಜ್ಞಾನದ ದಾರಿಯಲ್ಲಿ ನಡೆ; ಎದ್ದು ನಿಲ್ಲು.

"ಆದ್ದರಿಂದ ಎದ್ದು ನಿಲ್ಲು, ಭರತ ಚಕ್ರವರ್ತಿಯಂತಹ ಮಹಾ ಪುರುಷರು ಹುಟ್ಟಿ ಬಂದ ವಂಶದವನಾದ ನೀನು ಜ್ಞಾನ ಸ್ವರೂಪನಾದ ಭಗವಂತನ ಭಕ್ತಿಯಲ್ಲಿ ನಿರತನಾದ ಜ್ಞಾನಿ(ಭಾರತ)ನಿನ್ನ ಮನಸ್ಸಿನಲ್ಲಿ ಕುಳಿತಿರುವ ಸಂಶಯವನ್ನು ಭಗವಂತನೆನ್ನುವ  ಜ್ಞಾನ ಕತ್ತಿಯಿಂದ ಕಡಿದು ಹಾಕು. ಅನ್ಯಾಯದ ವಿರುದ್ಧ ಹೋರಾಟ ಭಗವಂತನ ಪೂಜೆ ಎನ್ನುವ ಧೀಕ್ಷೆ ತೊಟ್ಟು, ಸತ್ಯದ, ಪ್ರಾಮಾಣಿಕತೆಯ ಬದುಕನ್ನು ಬದುಕುವುದಕ್ಕೊಸ್ಕರ ಪುಣ್ಯದ ಸಾಧನೆಯಲ್ಲಿ ತೊಡಗು"  ಎನ್ನುತ್ತಾನೆ ಕೃಷ್ಣ.               

ಇತಿ ಚತುರ್ಥೋSಧ್ಯಾಯಃ
ನಾಲ್ಕನೆಯ ಅಧ್ಯಾಯ ಮುಗಿಯಿತು.

*******