Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, December 3, 2011

Bhagavad GitA Kannada Chapter-15 Shloka 5-6


ನಿರ್ಮಾನಮೋಹಾ ಜಿತಸಂಗದೋಷಾ ಅಧ್ಯಾತ್ಮನಿತ್ಯಾ ವಿನಿವೃತ್ತಕಾಮಾಃ
ದ್ವಂದ್ವೈರ್ವಿಮುಕ್ತಾಃ ಸುಖದುಃಖಸಂಜ್ಞೈರ್ಗಚ್ಛನ್ತ್ಯಮೂಢಾಃ ಪದಮವ್ಯಯಂ ತತ್          

ನಿರ್ಮಾನಮೋಹಾಃ ಜಿತ ಸಂಗ ದೋಷಾಃ  ಅಧ್ಯಾತ್ಮ ನಿತ್ಯಾಃ  ವಿನಿವೃತ್ತಕಾಮಾಃ
ದ್ವಂದ್ವೈಃ ವಿಮುಕ್ತಾಃ ಸುಖ ದುಃಖ ಸಂಜ್ಞೈಃ ಗಚ್ಛಂತಿ ಅಮೂಢಾಃ ಪದಮ್ ಅವ್ಯಯಮ್  ತತ್—ಬಿಂಕವಿರದವರು, ಮೋಹವಳಿದವರು, ಬಯಕೆಗಳನ್ನು ಬಿಟ್ಟವರು, ಸುಖ-ದುಃಖಗಳೆಂಬ  ಇಕ್ಕಟ್ಟಿನ ಇರುಕನ್ನು ಮೀರಿ ನಿಂತವರು- ಇಂಥ ಜಾಣರು ಈ ಅಳಿವಿರದ ತಾಣವನ್ನು ಸೇರುತ್ತಾರೆ.

ಕೃಷ್ಣ  ಈ ಶ್ಲೋಕದಲ್ಲಿ ಹೇಳಿರುವ ವಿಚಾರ ಈ ಹಿಂದಿನ ಅನೇಕ ಅಧ್ಯಾಯಗಳಲ್ಲಿ ಅಲ್ಲಲ್ಲಿ ಬಂದಿದೆ ಮತ್ತು ಬಂದಾಗ ನಾವು ಆ ಬಗ್ಗೆ ವಿಶೇಷವಾಗಿ ವಿಶ್ಲೇಷಣೆ ಮಾಡಿದ್ದೇವೆ. ಎಲ್ಲವನ್ನು ಸಮಷ್ಟಿಯಾಗಿ  ಇಲ್ಲಿ ಕೃಷ್ಣ ಹೇಳಿದ್ದಾನೆ. ಭಗವಂತನಲ್ಲಿ ಶರಣಾಗತಿಬೇಡಿ  ಸಾಗುವ ನಮ್ಮ ಜೀವನದ ನಡೆ ಹೇಗಿರಬೇಕು ಎನ್ನುವುದನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ. “ಎಲ್ಲಕ್ಕಿಂತ ಮೊದಲು ಮಾನ-ಮೋಹವನ್ನು ಬಿಡಬೇಕು” ಎನ್ನುತ್ತಾನೆ ಕೃಷ್ಣ. ಅಂದರೆ 'ನಾನು' ಎನ್ನುವ ‘ಅಹಂಕಾರ’ ಮತ್ತು 'ನನ್ನದು' ಎನ್ನುವ ‘ಮಮಕಾರ’ ಇವೆರಡನ್ನು ನಾವು ಮೊದಲು ತೊರೆಯಬೇಕು. ಈ ಪ್ರಪಂಚಕ್ಕೆ ಬರುವಾಗಲೂ ನಾವು ಬತ್ತಲೆ, ಹೋಗುವಾಗಲೂ ಬತ್ತಲೆ. ಹೀಗಿರುವಾಗ ಇಲ್ಲಿ ‘ನಾನು’, ‘ನನ್ನದು’ ಎಂದು ಅಹಂಕಾರ-ಮಮಕಾರದಲ್ಲಿ ಬೀಳುವುದರಲ್ಲಿ ಯಾವುದೇ ಅರ್ಥವಿಲ್ಲ. ಸಂಗದೋಷ ನಮ್ಮ ಮೇಲೆ ಅನೇಕ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದಕ್ಕಾಗಿ ನಾವು ಸಂಗದೋಷವನ್ನು ಗೆಲ್ಲಬೇಕು. ಒಂದು ವಸ್ತುವಿನ ಅತಿಯಾದ ಒಡನಾಟ, ಅದರ ಮೇಲಿನ ಅತಿಯಾದ ಮಮಕಾರ ಎಂದೆಂದಿಗೂ ಒಳ್ಳೆಯದಲ್ಲ. ಈ ರೀತಿ ನಿರ್ಲಿಪ್ತತೆಯಿಂದ ಬದುಕಬೇಕಾದರೆ ಮೊದಲು ನಮ್ಮನ್ನು ನಾವು ಅಧ್ಯಾತ್ಮ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು. ಬಯಕೆಗಳನ್ನು ಬಿಟ್ಟು, ಸುಖ ಬಂದಾಗ ಹಾರಾಡದೆ, ದುಃಖ ಬಂದಾಗ ಕುಗ್ಗದೆ, ದ್ವಂದ್ವಾತೀತರಾಗಿ ಬದುಕುವುದನ್ನು ನಾವು ಕಲಿಯಬೇಕು. ಸೋಲೇ ಗೆಲುವಿನ ಮೆಟ್ಟಿಲು, ದುಃಖ-ಸುಖದ ಮೆಟ್ಟಿಲು.  ಹಗಲು-ರಾತ್ರಿಯನ್ನು ಸ್ವೀಕರಿಸಿದಂತೆ ಕಷ್ಟ-ಸುಖವನ್ನು ನಾವು ಸಮನಾಗಿ ಸ್ವೀಕರಿಸಬೇಕು. ಲೌಕಿಕ ನಿರೀಕ್ಷೆ-ನಿರಾಶೆಯ ಮೂಲ. ಇದರ ಹಿಂದೆ ಹೋದವರು ತಿಳಿಗೇಡಿಗಳು. ಅವರು ತಾವೇ ತಾವಾಗಿ ತಮ್ಮ ಜೀವನದಲ್ಲಿ ಸಮಸ್ಯೆಯನ್ನು ತಂದುಕೊಳ್ಳುತ್ತಾರೆ. ಆದರೆ ಈ ಮರ್ಮವನ್ನು ಅರಿತ ಜ್ಞಾನಿಗಳು ಭಗವಂತನ ಲೋಕವನ್ನು ನಿರಾಯಾಸವಾಗಿ ಸೇರುತ್ತಾರೆ-ಇದು ನಿಶ್ಚಿತ.

ದೇವರ ಬಗ್ಗೆ ದೇವರನ್ನು ನಂಬುವವರಲ್ಲೇ ಅನೇಕ ಅಭಿಪ್ರಾಯ ಭೇದಗಳಿವೆ. ಪ್ರತಿಯೊಬ್ಬರಿಗೂ ತಮ್ಮ ವಿಚಾರಧಾರೆಯೇ ಸರಿ ಎನ್ನುವ ಭಾವನೆ ಇರುತ್ತದೆ. ಇದಕ್ಕಾಗಿ ಮುಂದಿನ ಶ್ಲೋಕಗಳಲ್ಲಿ ಕೃಷ್ಣ ಈ ಕುರಿತ ವಿವರಣೆಯನ್ನು ಕೊಡುತ್ತಾನೆ. ಇಲ್ಲಿ ಪ್ರಸ್ತುತವಿರುವ ಶ್ಲೋಕಗಳಲ್ಲಿ ಇರುವ ವಿಚಾರ ನಮಗೆ ಸ್ವಲ್ಪ ಅಸ್ಪಷ್ಟವಾಗಿ ಕಾಣಬಹುದು. ನಮ್ಮ ಸಾಧನೆ ಮತ್ತು ನಮ್ಮ ಯೋಗ್ಯತೆಗನುಗುಣವಾಗಿ ಈ ಶ್ಲೋಕಗಳು ತೆರೆದುಕೊಳ್ಳುತ್ತವೆ. ಇಲ್ಲಿ ಕೃಷ್ಣ ಜೀವ-ಜಗತ್ತು-ಭಗವಂತ ಈ ತ್ರಿಪುಟಿಗಳ ಕಲ್ಪನೆಯನ್ನು ಬಹಳ ರೋಚಕವಾಗಿ ವಿವರಿಸಿದ್ದಾನೆ.
ಭಗವಂತನ ಚಿಂತನೆಯಲ್ಲಿ ಕಾಳಜಿ ಇರುವವರಿಗೆ ಈ ಅಧ್ಯಾಯದ ಮುಂದಿನ ಭಾಗ ಬಹಳ ಮುಖ್ಯವಾಗುತ್ತದೆ. ನಮ್ಮ ಜೀವನದಲ್ಲಿ ನಾವು ಹೇಗೆ ಸಾಧನೆ ಮಾಡಬೇಕು, ಹೇಗೆ ಭಗವಂತನ ಚಿಂತನೆ ಮಾಡಬೇಕು ಅನ್ನುವುದರ ಸಮಸ್ತ ಸಾರವನ್ನು ಕೃಷ್ಣ ಇಲ್ಲಿ ಹೇಳಿದ್ದಾನೆ.

ನ ತದ್ ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ
ದ್ ಗತ್ವಾ ನ ನಿವರ್ತಂತೇದ್ ಧಾಮ ಪರಮಂ ಮಮ             

ನ ತತ್  ಭಾಸಯತೇ ಸೂರ್ಯಃ  ನ ಶಶಾಂಕಃ  ನ ಪಾವಕಃ
ತ್  ಗತ್ವಾ ನ ನಿವರ್ತಂತೇತ್  ಧಾಮ ಪರಮಮ್  ಮಮ—ಅದನ್ನು ಸೂರ್ಯ ಬೆಳಗಿಸಲಾರ; ಚಂದ್ರ ಬೆಳಗಿಸಲಾರ; ಬೆಂಕಿ ಕೂಡ. ಅದರತ್ತ ತೆರಳಿದವರು ಮತ್ತೆ ಮರಳುವುದಿಲ್ಲ. ಅದು ನನ್ನ ಹಿರಿಯ ರೂಪ.

ಇದೇ ರೀತಿಯ ವಿವರಣೆ ಕಠೋಪನಿಷತ್ತಿನಲ್ಲಿ ಬಂದಿದೆ. ಅದರ ಸಾರವನ್ನು ಕೃಷ್ಣ ಇಲ್ಲಿ ಹೇಳಿದ್ದಾನೆ. ಕಠೋಪನಿಷತ್ತಿನಲ್ಲಿ ಹೇಳುವಂತೆ:
ನ ತತ್ರ ಸೂರ್ಯೋ ಭಾತಿ ನ ಚಂದ್ರತಾರಕಂ ನೇಮಾ ವಿದ್ಯುತೋ ಭಾಂತಿ ಕುತೋಽಯಮಗ್ನಿಃ .
ತಮೇವ ಭಾಂತಮನುಭಾತಿ ಸರ್ವಂ  ತಸ್ಯ ಭಾಸಾ ಸರ್ವಮಿದಂ ವಿಭಾತಿ                   ||೧೫||
“ಭಗವಂತನನ್ನು ಸೂರ್ಯ ಬೆಳಗಿಸುವುದಿಲ್ಲ, ಬೆಳದಿಂಗಳಾಗಲಿ, ಅಗ್ನಿಯ ಬೆಳಕಾಗಲಿ ಆತನನ್ನು ಬೆಳಗಿಸಲಾರದು” ಎನ್ನುತ್ತಾನೆ ಕೃಷ್ಣ. ಇಲ್ಲಿ ನಾವು ಉಪಾಸನೆ ಮಾಡುವ ಭಗವಂತನ ಪ್ರತೀಕವನ್ನು ಕೃಷ್ಣ ಉದಾಹರಣೆಯಾಗಿ ತೆಗೆದುಕೊಂಡಿದ್ದಾನೆ. ನಾವು ಸೂರ್ಯನಲ್ಲಿ ಗಾಯತ್ರಿಯನ್ನು ಉಪಾಸನೆ ಮಾಡುತ್ತೇವೆ; ಚಂದ್ರಮಂಡಲ ಮಧ್ಯಸ್ಥನಾಗಿ ಭಗವಂತನನ್ನು ಧನ್ವಂತರಿಯಲ್ಲಿ ಪೂಜಿಸುತ್ತೇವೆ; ಭೂಲೋಕದಲ್ಲಿ ಭಗವಂತನ ಆರಾಧನೆ ಅಗ್ನಿ ಮುಖದಲ್ಲಿ. ಇಲ್ಲಿ ಕೃಷ್ಣ ಕೊಡುತ್ತಿರುವ ಎಚ್ಚರ ಏನೆಂದರೆ –ಇವೆಲ್ಲವೂ ಬೆಳಕಿನ ಪ್ರತೀಕ ಮಾತ್ರ. ಇವು ನೇರವಾಗಿ ನಮಗೆ ಭಗವಂತನನ್ನು ತೋರಿಸಲಾರವು. ಭಗವಂತನನ್ನು ಕಾಣಲು ನಾವು ನಮ್ಮೊಳಗಿನ ಸ್ವರೂಪಭೂತವಾದ ಅಂತಃಜ್ಯೋತಿಯನ್ನು ಬಳಸಬೇಕು. ಬೃಹದಾರಣ್ಯಕ ಉಪನಿಷತ್ತಿನಲ್ಲಿ(ಅ-೦೪) ಜನಕ ಮತ್ತು ಯಾಜ್ಞವಲ್ಕ್ಯರ ನಡುವಿನ ಸಂಭಾಷಣೆಯಲ್ಲಿ ಈ ವಿಷಯವನ್ನು ಸ್ಪಷ್ಟವಾಗಿ ತೆರೆದಿಡಲಾಗಿದೆ:  
ಯಾಜ್ಞವಲ್ಕ್ಯ, ಕಿಮ್ ಜ್ಯೋತಿರಯಂಪುರುಷಃ ಇತಿ | ಆದಿತ್ಯ ಜ್ಯೋತಿಃ, ಸಮ್ರಾಡ್, ಇತಿ ಹೋವಾಚಾದಿತ್ಯೇ ನೈವಾSಯಂ ಜ್ಯೋತಿಷಾಸ್ತೇ, ಪಲ್ಯಯತೇ, ಕರ್ಮ ಕುರುತೇ, ವಿಪಲ್ಯಯೇತ್ ಇತಿ | ಏವಮೇವೈ ತದ್ ಯಾಜ್ಞವಲ್ಕ್ಯ ||೪-೨|| -ಇಲ್ಲಿ ಜನಕ ಯಾಜ್ಞವಲ್ಕ್ಯನಲ್ಲಿ ಕೇಳುತ್ತಾನೆ: “ಈ ಪ್ರಪಂಚದಲ್ಲಿ ಜೀವರು ತಮ್ಮ ಕಾರ್ಯ ನಿರ್ವಹಣೆ ಮಾಡಲು ಸಹಾಯಕವಾದ ಬೆಳಕು ಯಾವುದು” ಎಂದು. ಇದಕ್ಕೆ ನೇರವಾಗಿ ಯಾಜ್ಞವಲ್ಕ್ಯ ಉತ್ತರಿಸುತ್ತಾನೆ “ ಸೂರ್ಯನ ಪ್ರಕಾಶ” ಎಂದು.
ಅಸ್ತಮಿತ ಆದಿತ್ಯೇ ಯಾಜ್ಞವಲ್ಕ್ಯ, ಕಿಮ್ ಜ್ಯೋತಿರೇವಾಯಂ ಪುರುಷಃ ಇತಿ | ಚಂದ್ರಮೇವಾಸ್ಯ  ಜ್ಯೋತಿರ್ ಭವತಿ, ಚಂದ್ರಮಾಸೈವಾಯಂ ಜ್ಯೋತಿಷಾಸ್ತೇ ಪಲ್ಯಯತೇ ಕರ್ಮ ಕುರುತೇ ವಿಪಲ್ಯಯೇತ್ ಇತಿ ಏವಮೇವೈ ತದ್ ಯಾಜ್ಞವಲ್ಕ್ಯ||೪-೩||ಸೂರ್ಯ ಪ್ರಕಾಶ ಇಲ್ಲದೆ ಇದ್ದಾಗ ಜೀವರು ಯಾವ ಬೆಳಕಿನಿಂದ ತಮ್ಮ ಕಾರ್ಯ ನಿರ್ವಹಣೆ ಮಾಡುತ್ತಾರೆ ಎಂದಾಗ-ಯಾಜ್ಞವಲ್ಕ್ಯ ಹೇಳುತ್ತಾನೆ: “ಚಂದ್ರನ ಬೆಳಕಿನಿಂದ” ಎಂದು.
ಅಸ್ತಮಿತ ಆದಿತ್ಯೇ, ಯಾಜ್ಞವಲ್ಕ್ಯ,ಚಂದ್ರಮಸ್ಯSಸ್ತಮಿತೇ, ಕಿಮ್ ಜ್ಯೋತಿರೇವಾಯಂ ಪುರುಷ ಇತಿ | ಅಗ್ನಿರ್ ಎವಾಸ್ಯ ಜ್ಯೋತಿರ್ ಭವತಿ, ಅಗ್ನಿನೈವಯಂ ಜ್ಯೋತಿಷಾಸ್ತೇ ಪಲ್ಯಯತೇ ಕರ್ಮ ಕುರುತೇ ವಿಪಲ್ಯಯೇತ್ ಇತಿ ಏವಮೇವೈ ತದ್ ಯಾಜ್ಞವಲ್ಕ್ಯ||೪-೪||.  ಸೂರ್ಯ ಚಂದ್ರ ಇಲ್ಲದಾಗ ಯಾವ ಬೆಳಕು ಎನ್ನುವ ಪ್ರಶ್ನೆಗೆ ಯಾಜ್ಞವಲ್ಕ್ಯ ಉತ್ತರಿಸುತ್ತಾನೆ: “ಬೆಂಕಿಯ ಪ್ರಕಾಶದಿಂದ” ಎಂದು.
ಅಸ್ತಮಿತ ಆದಿತ್ಯೇ, ಯಾಜ್ಞವಲ್ಕ್ಯ,ಚಂದ್ರಮಸಿ ಅಸ್ತಮಿತೇ,ಶಾಂತೇSಗ್ನೌ ,ಕಿಮ್ ಜ್ಯೋತಿರೇವಾಯಂ ಪುರುಷ ಇತಿ | ವಾಗ್ ಎವಾಸ್ಯ ಜ್ಯೋತಿರ್ ಭವತಿ ವಾಚೈವಾಯಂ ಜ್ಯೋತಿಷಾಸ್ತೇ ಪಲ್ಯಯತೇ ಕರ್ಮ ಕುರುತೇ ವಿಪಲ್ಯಯೇತಿ ತಸ್ಮಾದ್ವೈ ,ಸಮ್ರಾಡ್, ಅಪಿ ಯತ್ರ ಪಾಣಿರ್ನ ವಿನಿರ್ಜ್ಞಾಯತೇ ,ಅಥ ಯತ್ರ ವಾಗುಚ್ಛಾರತಿ ಉಪೈವ ತತ್ರ ನ್ಯೇತೀತಿ | ಏವಮೇವೈತದ್ ಯಾಜ್ಞವಲ್ಕ್ಯ||೪-೫|| -ಒಂದು ವೇಳೆ ಸೂರ್ಯ, ಚಂದ್ರ, ಬೆಂಕಿ, ನಕ್ಷತ್ರ- ಯಾವುದೇ ಬೆಳಕು ಇಲ್ಲದಾಗ ಜನರು ಹೇಗೆ ವ್ಯವಹರಿಸುತ್ತಾರೆ ಎಂದಾಗ ಯಾಜ್ಞವಲ್ಕ್ಯ ಉತ್ತರಿಸುತ್ತಾನೆ :“ಒಬ್ಬರಿಗೊಬ್ಬರು ಮಾತನಾಡುವ ಮೂಲಕ” ಎಂದು.
ಅಸ್ತಮಿತ ಆದಿತ್ಯೇ ,ಯಾಜ್ಞವಲ್ಕ್ಯ,ಚಂದ್ರಮಸ್ಯಸ್ತಮಿತೇ, ಶಾಂತೇSಗ್ನೌ ,ಶಾಂತಾSಯಾಂ ವಾಚಿ, ಕಿಮ್  ಜ್ಯೋತಿರೇವಾಯಂ ಪುರುಷ ಇತಿ | ಆತ್ಮೈವಾಸ್ಯ ಜ್ಯೋತಿರ್ಭವತಿ, ಆತ್ಮನೈವಾಯಂ ಜ್ಯೋತಿಷಾಸ್ತೇ ಪಲ್ಯಯತೇ ಕರ್ಮ ಕುರುತೇ ವಿಪಲ್ಯಯೇತ್ ಇತಿ ||೪-೬||  ಎಲ್ಲ ಬೆಳಕೂ ಇಲ್ಲದಾಗ, ಯಾರೂ ಜೊತೆಯಲ್ಲಿ ಇಲ್ಲದಾಗ ಯಾವ ಬೆಳಕು ನಮಗೆ ಶಕ್ತಿ ಎನ್ನುವ ಪ್ರಶ್ನೆಗೆ ಯಾಜ್ಞವಲ್ಕ್ಯ ಉತ್ತರಿಸುತ್ತಾನೆ “ಆತ್ಮ ಜ್ಯೋತಿ” ಎಂದು.
ಮೇಲ್ನೋಟಕ್ಕೆ ಈ ಸಂಭಾಷಣೆಯನ್ನು ನೋಡಿದರೆ ನಮಗೆ ಏನೂ ತಿಳಿಯುವುದಿಲ್ಲ. ಆದರೆ ಇದರಲ್ಲಿ ಪ್ರಾಚೀನರು ಅದೆಷ್ಟು ವಿಚಾರವನ್ನು ತುಂಬಿದ್ದಾರೆ. ನಾವು ನಮ್ಮ ಅಂತರಂಗದಲ್ಲಿನ ಆತ್ಮಜ್ಯೋತಿಯ ಪರಿಚಯವಿಲ್ಲದೆ ಕೇವಲ ಹೊರ ಪ್ರಪಂಚದಲ್ಲಿ ಭೌತಿಕ ಬೆಳಕಿನಲ್ಲಿ ಭಗವಂತನನ್ನು ಹುಡುಕುವುದರಿಂದ ಆತ ನಮಗೆ ಸಿಗಲಾರ. ಆತನನ್ನು ಯಾವ ಭೌತಿಕ ಬೆಳಕೂ ಬೆಳಗಲಾರದು. ಆತ ಬೆಳಕುಗಳ ಬೆಳಕು. ಆತನನ್ನು ಕಾಣಲು ನಾವು ನಮ್ಮ ಸ್ವರೂಪದಲ್ಲಿನ ಆತ್ಮಜ್ಯೋತಿಯನ್ನು ಬಳಸಬೇಕು. ಸೂರ್ಯ, ಚಂದ್ರ, ಅಗ್ನಿಯನ್ನು ಭಗವಂತನ ಪ್ರತೀಕವಾಗಿ ಬಳಸಿ ನಮ್ಮ ಅಂತರಂಗದ ಜ್ಯೋತಿಯನ್ನು ನಾವು ಜಾಗೃತಗೊಳಿಸಿಕೊಳ್ಳಬೇಕು.
ಯಾವ ಸ್ಥಾನದಲ್ಲಿ ಭಗವಂತ ಸದಾ ಜ್ಞಾನಿಗಳಿಗೆ ಗೋಚರವಾಗುತ್ತಾನೋ ಅದು “ಪರಮಧಾಮ” ಅದೇ ಮೋಕ್ಷ. ಅಲ್ಲಿ ಸೂರ್ಯನಾಗಲಿ, ಚಂದ್ರನಾಗಲಿ, ಅಗ್ನಿಯಾಗಲಿ ಬೆಳಕಲ್ಲ. ಈ ಪರಮಧಾಮದಿಂದಲೇ ಸೂರ್ಯ, ಚಂದ್ರ, ಅಗ್ನಿ ಬೆಳಕು ಪಡೆಯುವುದು. ಆತ್ಮಜ್ಯೋತಿಯನ್ನು ಗುರುತಿಸಿ, ಆತ್ಮದಲ್ಲಿನ ಪರಮಾತ್ಮನನ್ನು ಕಂಡುಕೊಂಡವ ಎಂದೂ ಮರಳಿಬಾರದ ಈ ಪರಮಧಾಮವನ್ನು ಸೇರುತ್ತಾನೆ.     

No comments:

Post a Comment