Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Thursday, November 24, 2011

Bhagavad GitA Kannada Chapter-14 Shloka 21-22


ಇಲ್ಲಿ ಕೃಷ್ಣ ತ್ರಿಗುಣವನ್ನು ದಾಟಿದಾಗ ಅದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಿದ. ಹೀಗೆ ಹೇಳಿದಾಗ  ಸಹಜವಾಗಿ ನಮಗೊಂದು ಪ್ರಶ್ನೆ ಬರುತ್ತದೆ. ಅದೇ ಪ್ರಶ್ನೆಯನ್ನು ಮುಂದಿನ ಶ್ಲೋಕದಲ್ಲಿ ಅರ್ಜುನ ಕೃಷ್ಣನ ಮುಂದಿಡುತ್ತಾನೆ.   

ಅರ್ಜುನ ಉವಾಚ
ಕೈರ್ಲಿಗೈಸ್ತ್ರೀನ್ ಗುಣಾನೇತಾನತೀತೋ ಭವತಿ ಪ್ರಭೋ
ಕಿಮಾಚಾರಃ ಕಥಂ ಚೈತಾಂಸ್ತ್ರೀನ್ ಗುಣಾನತಿವರ್ತತೇ                   ೨೧

ಅರ್ಜುನ ಉವಾಚ-ಅರ್ಜುನ ಕೇಳಿದನು:
ಕೈಃ ಲಿಂಗೈಃ ತ್ರೀನ್ ಗುಣಾನ್ ಏತಾನ್ ಅತೀತಃ  ಭವತಿ ಪ್ರಭೋ
ಕಿಮ್ ಆಚಾರಃ ಕಥಮ್ ಚ ಏತಾನ್ ತ್ರೀನ್  ಗುಣಾನ್ ಅತಿವರ್ತತೇ—ಒಡೆಯನೆ, ಯಾವ ಕುರುಹುಗಳಿಂದ ಈ ಮೂರು ಗುಣಗಳನ್ನು ದಾಟಿದವನೆನ್ನಿಸುತ್ತಾನೆ ? ಅವನ ನಡೆವಳಿಕೆ ಎಂಥದು ? ಹೇಗೆ ಈ ಮೂರು ಗುಣಗಳನ್ನು ದಾಟುತ್ತಾನೆ?

ನಮ್ಮ ನಿಮ್ಮೆಲ್ಲರ ಪರವಾಗಿ ಅರ್ಜುನ ಕೃಷ್ಣನಲ್ಲಿ ಪ್ರಶ್ನೆ ಹಾಕುತ್ತಾನೆ. ಆತ ಕೇಳುತ್ತಾನೆ: “ಮೂರು ಗುಣಗಳನ್ನು ದಾಟಿದವನೊಬ್ಬನಿದ್ದರೆ ಅವನನ್ನು ಗುರುತಿಸುವುದು ಹೇಗೆ? ಆತನ ಕುರುಹು ಏನು? ಅವನ ನಡತೆ ಹೇಗಿರುತ್ತದೆ? ಈ ಮೂರು ಗುಣಗಳನ್ನು ಆತ ಹೇಗೆ ದಾಟುತ್ತಾನೆ?”
ಇಲ್ಲಿ ಅರ್ಜುನ ಕೃಷ್ಣನನ್ನು “ಪ್ರಭೋ” ಎಂದು ಸಂಬೋಧಿಸುತ್ತಾನೆ. “ನನ್ನ ಪ್ರಶ್ನೆಗಳಿಗೆ ಖಂಡಿತವಾಗಿ ಉತ್ತರ ಕೊಡಬಲ್ಲವ-ನೀನೊಬ್ಬನೆ” ಎನ್ನುವ ಧ್ವನಿ ಮತ್ತು ‘ಪೂರ್ಣ ಶರಣಾಗತಿ’  ಈ ಸಂಬೋಧನೆಯ ಹಿಂದಿದೆ.  ಭಗವಂತ ಅರ್ಜುನನ ಈ ಪ್ರಶ್ನೆಗೆ ಮುಂದಿನ ಶ್ಲೋಕಗಳಲ್ಲಿ ವಿವರವಾಗಿ ಉತ್ತರಿಸಿದ್ದಾನೆ.

ಭಗವಾನುವಾಚ
ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಮೇವ ಚ ಪಾಂಡವ
ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ                            ೨೨

ಭಗವಾನ್ ಉವಾಚ-ಭಗವಂತ ಹೇಳಿದನು:
ಪ್ರಕಾಶಮ್ ಚ ಪ್ರವೃತ್ತಿಮ್ ಚ ಮೋಹಮ್ ಏವ  ಚ ಪಾಂಡವ
ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ—ಪಾಂಡವ, ಲೌಕಿಕದ ತಿಳಿವಿನ ಬೆಳಕನ್ನಾಗಲಿ, ಕಾಯಕದ ಹುರುಪನ್ನಾಗಲಿ, ಭ್ರಾಂತಿಯನ್ನೆ ಆಗಲಿ- ಇದ್ದಾಗ ದ್ವೇಷಿಸುವುದಿಲ್ಲ; ಇರದಾಗ ಬಯಸುವುದಿಲ್ಲ.

ತ್ರಿಗುಣಗಳನ್ನು ದಾಟಿದವ ಯಾವುದೋ ಅನಪೇಕ್ಷವಾದುದು ಬಂದಾಗ ಅದನ್ನು ದ್ವೇಷಿಸುವುದಿಲ್ಲ; ಅಪೇಕ್ಷಿತವಾದುದು ಬಾರದೇ ಇದ್ದಾಗ ಅದನ್ನು ಅಪೇಕ್ಷಿಸುವುದಿಲ್ಲ. “ಯಾವುದು ಬೇಕು, ಯಾವುದು ಬೇಡ ಎನ್ನುವುದು ನನಗಿಂತ ಚನ್ನಾಗಿ ಭಗವಂತನಿಗೆ ಗೊತ್ತಿದೆ. ಅದಕ್ಕಾಗಿ ನಾನೇಕೆ ತಲೆ ಕೆಡಿಸಿಕೊಳ್ಳಬೇಕು” ಎನ್ನುವ ನಿರ್ಲಿಪ್ತತೆ ಆತನಲ್ಲಿರುತ್ತದೆ. ಜೀವನದಲ್ಲಿ ಏನು ಬಂತೋ ಅದನ್ನು ಆತ ಸ್ವಾಗತಿಸುತ್ತಾನೆ. ವ್ಯಾಸರು ಮಹಾಭಾರತದ ಶಾಂತಿಪರ್ವದಲ್ಲಿ ಒಂದು ಮಾತನ್ನು ಹೇಳಿದ್ದಾರೆ:
ಏವಂ ಅಪ್ಯ ಅಶುಭಂ ಕರ್ಮ ನ ಭೂತಂ ನ ಭವಿಷ್ಯತಿ  ||೧೨-೩೨-೧೮||
“ಆಗಬಾರದ್ದು ಹಿಂದೆ ಆಗಿಲ್ಲ, ಮುಂದೆ ಆಗುವುದೂ ಇಲ್ಲ. ಏನು ಆಗಬೇಕೋ ಅದು ಘಟಿಸಿಯೇ ತೀರುತ್ತದೆ. ಅದನ್ನು ನಾನು ಬೇಡ ಎಂದು ದ್ವೇಷಿಸಿ ಫಲವೇನು?”. ಆದ್ದರಿಂದ ತ್ರಿಗುಣವನ್ನು ದಾಟಿದವನು- ಬಂದಾಗ 'ಬೇಡ' ಎಂದು ದ್ವೇಷಿಸುವುದಿಲ್ಲ; ಇಲ್ಲದ್ದನ್ನು ಬಯಸುವುದೂ ಇಲ್ಲ.  ಎಲ್ಲವನ್ನು ನಿರ್ವೀಕಾರನಾಗಿ ನೋಡುತ್ತಾ, ತುಂಬಿದ ಕೊಡದಂತೆ ತುಳುಕದೆ ಬದುಕುತ್ತಾನೆ.
ಲೋಕದಲ್ಲಿ ಕೆಲವರಿಗೆ ಸತ್ವದಲ್ಲಿ ಆಸಕ್ತಿಯಾದರೆ ಇನ್ನು ಕೆಲವರಿಗೆ ಕೇವಲ ಪ್ರವೃತ್ತಿ. ಮತ್ತೆ ಕೆಲವರಿಗೆ ಯಾವ ಆಸಕ್ತಿಯೂ ಇಲ್ಲ- ಕತ್ತಲನ್ನು ಕತ್ತಲು ಎಂದು ತಿಳಿಯದೆ ಕತ್ತಲಲ್ಲೇ ಬದುಕುವವರಿದ್ದಾರೆ. ಇದು ಸರ್ವೇಸಾಮಾನ್ಯವಾಗಿ ಕಾಣುವ ವಿಚಾರ. ತ್ರಿಗುಣವನ್ನು ಮೀರಿ ನಿಂತವರು ಇದನ್ನು ನೋಡಿ ತಮ್ಮ ಮನಸ್ಸನ್ನು ವಿಕಾರ ಮಾಡಿಕೊಳ್ಳುವುದಿಲ್ಲ.  “ಅವರವರ ಗುಣ ಪ್ರಭಾವಕ್ಕನುಗುಣವಾಗಿ ಎಲ್ಲವೂ ನಡೆಯುತ್ತಿದೆ” ಎಂದು ತಿಳಿದು ತಟಸ್ಥರಾಗಿ ಬದುಕುತ್ತಾರೆ. ಸತ್ಯವೆಂದು ಕಂಡದ್ದನ್ನು ಇವರು ಹೇಳುತ್ತಾರೆ. ಆದರೆ ಎಂದೂ ವಾದ ವಿವಾದವನ್ನು ಬೆಳೆಸುವುದಿಲ್ಲ. “ಎಲ್ಲವೂ ಭಗವಂತನ ಲೀಲೆ, ಆತ ಮಾಡಿದ ವ್ಯವಸ್ಥೆ” ಎಂದು ಎಲ್ಲವನ್ನು ಸ್ವೀಕರಿಸುತ್ತಾರೆ. ಗೀತೆಯ ಹನ್ನೆರಡನೇ ಅಧ್ಯಾಯದಲ್ಲಿ ‘ನಿಜವಾದ ಭಕ್ತ’ ಹೇಗಿರುತ್ತಾನೆ ಎಂದು ವಿವರಿಸುವಾಗ ಕೃಷ್ಣ ಈ ಶ್ಲೋಕದಲ್ಲಿ ಕೊಟ್ಟ ವಿವರಣೆಯನ್ನೇ  ಕೊಟ್ಟಿದ್ದಾನೆ. ಪೂರ್ಣಭಕ್ತಿ ಎಂದರೆ ಹೊರಗಿನ ಗುಣವನ್ನು ಮೀರಿ ನಿಲ್ಲುವುದು. 
ಇಲ್ಲಿ ವ್ಯಾಸರು ‘ಪಾಂಡವ’ ಎನ್ನುವ ವಿಶೇಷಣವನ್ನು ಬಳಸಿದ್ದಾರೆ. ಪಾಂಡಾ ಎಂದರೆ ಜ್ಞಾನಿ. ಪಾಂಡವ ಎಂದರೆ ಜ್ಞಾನವನ್ನು ಗುರುತಿಸಿ ತಲೆಬಾಗುವವನು. “ತ್ರಿಗುಣಾತೀತನಾಗುವ ಮೊದಲು ನೀನು ಪಾಂಡವನಾಗಬೇಕು” ಎನ್ನುವ ಸಂದೇಶ ಈ ವಿಶೇಷಣದ ಹಿಂದಿದೆ. 

No comments:

Post a Comment