Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Thursday, November 17, 2011

Bhagavad GitA Kannada Chapter-14 Shloka 5-9


ಸತ್ತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿಸಂಭವಾಃ
ನಿಬಧ್ನಂತಿ ಮಹಾಬಾಹೋ ದೇಹೇ ದೇಹಿನಮವ್ಯಯಮ್                  

ಸತ್ತ್ವಮ್ ಜಃ ತಮಃ  ಇತಿ ಗುಣಾಃ ಪ್ರಕೃತಿ ಸಂಭವಾಃ
ನಿಬಧ್ನಂತಿ ಮಹಾಬಾಹೋ ದೇಹೇ ದೇಹಿನಮ್ ಅವ್ಯಯಮ್ ಮಹಾಬಾಹೋ, ಸತ್ವ-ರಜಸ್ಸು-ತಮಸ್ಸು ಎಂಬಿವು ಜಡಪ್ರಕೃತಿಯಿಂದ ಮೂಡಿಬಂದ ಗುಣಗಳು. ಅಳಿವಿರದ ಜೀವನನ್ನು ಇವು ದೇಹದಲ್ಲಿ ಕಟ್ಟಿಹಾಕುತ್ತವೆ.

ಈ ಪ್ರಪಂಚದ, ಸರ್ವಜೀವಜಾತದ ತಾಯಿಯಾದ ಪ್ರಕೃತಿ- ಗುಣತ್ರಯಮಾನಿನಿ. ಆದ್ದರಿಂದ ಪ್ರತಿಯೊಂದು ಜೀವ ಹುಟ್ಟುವಾಗಲೂ ಕೂಡ ಸತ್ವ-ರಜಸ್ಸು ಮತ್ತು ತಮಸ್ಸೆಂಬ ಮೂರು ಗುಣಗಳೊಂದಿಗೆ ಹುಟ್ಟುತ್ತವೆ ಮತ್ತು ಈ ಗುಣಗಳ ಪ್ರಭಾವದಲ್ಲಿ ಬೆಳೆಯುತ್ತವೆ. ಮೂರು ಗುಣಗಳಿಲ್ಲದೆ ಶುದ್ಧವಾದ ಏಕಗುಣದಿಂದ ಯಾವ ಜೀವವೂ ಸೃಷ್ಟಿಯಾಗುವುದಿಲ್ಲ. ಜಡದಲ್ಲಿ ಕೂಡ ಈ ಮೂರು ಗುಣಗಳನ್ನು ಕಾಣುತ್ತೇವೆ. ಸದಾ ಊರ್ಧ್ವಮುಖ ಬೆಳಕನ್ನು ಕೊಡುವ ಬೆಂಕಿ ಸತ್ವ; ಅಸ್ಪಷ್ಟತೆಯ ಸ್ಥಾನವಾದ ನೀರು ರಜಸ್ಸು ಮತ್ತು ಸದಾ ಕೆಳಮುಖವಾಗಿ ಸೆಳೆಯುವ ಮಣ್ಣು-ತಮಸ್ಸು. ಜಗತ್ತಿನ ಎಲ್ಲ ವಸ್ತುಗಳೂ ಈ ಮೂರರ ಸಂಯೋಗ(Combination). ಉದಾಹರಣೆಗೆ ಬತ್ತ. ಅದನ್ನು ಭೂಮಿಯಲ್ಲಿ(ಮಣ್ಣು-ತಮಸ್ಸು) ಬಿತ್ತಿದೆವು. ಅಲ್ಲಿ ಅದಕ್ಕೆ ನೀರೆರೆದೆವು(ನೀರು-ರಜಸ್ಸು), ಅದು ಸೂರ್ಯನ ಪ್ರಕಾಶವನ್ನು(ಸೂರ್ಯ-ಸತ್ವ) ಹೀರಿ  ಚಿಗುರಿ ಬೆಳೆದು ಫಸಲನ್ನು ಕೊಟ್ಟಿತು. ಆ ಫಸಲನ್ನು ಕೊಯ್ದು ಅಕ್ಕಿಯನ್ನಾಗಿ ಮಾಡಿದೆವು. ಅಕ್ಕಿಗೆ(ತಮಸ್ಸು) ನೀರನ್ನು(ರಜಸ್ಸು) ಸೇರಿಸಿ ಬೇಯಿಸಿ(ಶಾಖ-ಸತ್ವ) ಅನ್ನವನ್ನಾಗಿ ಮಾಡಿದೆವು. ಅಕ್ಕಿ ಇರಲಿ, ಅನ್ನವಿರಲಿ, ಎಲ್ಲವೂ ಮಣ್ಣು-ನೀರು-ಬೆಂಕಿ ಈ ಮೂರರ ಸಂಯೋಜನೆ. ಹೀಗೆ ಸತ್ವ-ರಜಸ್ಸು ಮತ್ತು ತಮಸ್ಸೆಂಬ ಗುಣತ್ರಯಗಳಿಂದ ಈ ಸಮಗ್ರ ಸೃಷ್ಟಿ ನಿರ್ಮಾಣವಾಗಿದೆ. ಹುಟ್ಟುವ ಪ್ರತಿಯೊಂದು ಜೀವಜಾತವನ್ನು ಈ ಮೂರು ಗುಣಗಳು ಬಂಧಿಸುತ್ತವೆ. ಒಬ್ಬ ವ್ಯಕ್ತಿಯಲ್ಲಿ ಈ ಮೂರು ಗುಣಗಳ ಪ್ರಮಾಣ ಬೇರೆ ಬೇರೆಯಾಗಿರುತ್ತದೆ. ಅತ್ಯಂತ ಸಾತ್ವಿಕನಾದ ಮೋಕ್ಷಯೋಗ್ಯ ಜೀವನಲ್ಲಿ ಕೂಡ ಈ ಮೂರು ಗುಣಗಳಿರುತ್ತವೆ. ನೂರಕ್ಕೆ ನೂರು ಶುದ್ಧ ಸತ್ವಗುಣ  ಒಬ್ಬ ವ್ಯಕ್ತಿಯಲ್ಲಿರುವುದಿಲ್ಲ. ಜಡದಲ್ಲಿ ನೋಡಿದರೆ ಬೆಂಕಿ-ಸತ್ವ. ಆದರೆ ಅದರೊಂದಿಗೆ ಹೊಗೆ-ರಜಸ್ಸು, ಕಟ್ಟಿಗೆ-ತಮಸ್ಸು. ಸತ್ವ ಗುಣದ ಸಾಕ್ಷಾತ್ಕಾರವಿರುವುದೇ ರಜಸ್ಸು ಮತ್ತು ತಮಸ್ಸಿನ ಮೂಲಕ. ಹೀಗೆ ಈ ಗುಣತ್ರಯಗಳ ಬಂಧನದಿಂದಾಗಿ ಸ್ವರೂಪತಃ ಹುಟ್ಟುಸಾವಿಲ್ಲದ ಜೀವ-ಸ್ಥೂಲ ದೇಹವನ್ನು ಪಡೆದು ಹುಟ್ಟುತ್ತಾನೆ ಮತ್ತು ಆ ದೇಹವನ್ನು ಕಳೆದುಕೊಂಡು ಸಾಯುತ್ತಾನೆ.  ಹುಟ್ಟು ಸಾವಿಲ್ಲದ ಮೋಕ್ಷವನ್ನು ಸೇರಲು ನಾವು ನಮ್ಮೊಂದಿಗಿರುವ ಈ ಮೂರು ಅಂತಃಶತ್ರುಗಳನ್ನು ಗೆಲ್ಲಬೇಕು. 
ಇಲ್ಲಿ ವ್ಯಾಸರು ‘ಮಹಾಬಾಹು’ ಎನ್ನುವ ವಿಶೇಷಣವನ್ನು ಬಳಸಿದ್ದಾರೆ. “ನಿನ್ನನ್ನು ಬಂಧಿಸಿ ತಮ್ಮ ಇಷ್ಟದಂತೆ ಕುಣಿಸುವ ಈ ತ್ರಿಗುಣಗಳನ್ನು ಗೆದೆಯುವ ಮಹಾಬಾಹುವಾಗು; ಕುಸ್ಸಿತವನ್ನು ನಿರಾಕರಣೆಮಾಡಿ ಅಧ್ಯಾತ್ಮದ ಶೂರನಾಗು” ಎನ್ನುವ ಧ್ವನಿ ಈ ವಿಶೇಷಣದ ಹಿಂದಿದೆ.

ಇಡೀ ವಿಶ್ವ, ಈ ನಮ್ಮ  ಬದುಕು, ಎಲ್ಲವೂ  ಗುಣತ್ರಯದ ವಿಕಾರ. ನಮ್ಮ ಮನಸ್ಸು, ನಮ್ಮ ಚಿಂತನೆ, ನಮ್ಮ ನಿರ್ಧಾರ, ನಮ್ಮ ಓದು, ನಮ್ಮ ನಂಬಿಕೆ, ಎಲ್ಲವೂ ಈ ಗುಣಗಳ ಪ್ರಭಾವದಿಂದ. ನಮ್ಮನ್ನು ಸರಿ ದಾರಿಯಲ್ಲಿ ನಡೆಸುವುದೂ ತ್ರಿಗುಣಗಳು, ನಮ್ಮನ್ನು ದಾರಿ ತಪ್ಪಿಸುವುದೂ ಈ ತ್ರಿಗುಣಗಳು. ಮೂರು ದಾರಿಯಲ್ಲಿ ಯಾವ ದಾರಿಯಲ್ಲಿ ಸಾಗಿದರೆ ಒಳಿತಾಗುತ್ತದೆ ಎನ್ನುವ ತೀರ್ಮಾನ ಮಾಡಿಕೊಂಡು ಆಯ್ಕೆ ಮಾಡುವ ಎಚ್ಚರ ನಮಗೆ ಬರಬೇಕಾಗಿದ್ದರೆ, ನಾವು ಯಾವ ದಾರಿಯಲ್ಲಿ ಸಾಗುತ್ತಿದ್ದೇವೆ ಎನ್ನುವ ಅರಿವು ನಮಗೆ ಬೇಕು. ಈ ಕಾರಣಕ್ಕಾಗಿ ತ್ರಿಗುಣಗಳ ಅರಿವು ನಮಗೆ ಬಹಳ ಮುಖ್ಯ.
ಒಬ್ಬ ವ್ಯಕ್ತಿಯನ್ನು ನಿಯಂತ್ರಿಸುವ ಸಂಗತಿಗಳು ನಾಲ್ಕು. ಒಂದು ಅನಾದಿಕಾಲದಿಂದ  ಜೀವದ ಜೊತೆಗೆ ಜೀವ ಸ್ವರೂಪದಲ್ಲಿ ಸೇರಿಕೊಂಡಿರತಕ್ಕಂತಹ ‘ಸ್ವಭಾವ’. ಇದರ ಜೊತೆಗೆ ಸತ್ವ, ರಜಸ್ಸು, ತಮಸ್ಸು-ಈ ಮೂರು ‘ಪ್ರಭಾವ’ಗಳು. ಸ್ವಭಾವ ಎಂದೂ ಬದಲಾಗುವುದಿಲ್ಲ. ನಾವು ನಮ್ಮ ಸ್ವಭಾವವನ್ನು ಗುರುತಿಸಿಕೊಳ್ಳಬೇಕು. ಆದರೆ ನಮ್ಮ ಸ್ವಭಾವ ಏನು ಎನ್ನುವುದು ನಮಗೆ ತಿಳಿಯುವುದೇ ಇಲ್ಲ! ಏಕೆಂದರೆ ಈ ಸ್ವಭಾವದ ಮೇಲೆ ಮುಚ್ಚಳವಾಗಿ ‘ಪ್ರಭಾವ’ ಕೂತಿದೆ. ನಾವು ಸದಾ ಈ ಮುಚ್ಚಳದ ಪ್ರಭಾವವನ್ನೇ ನಮ್ಮ ಸ್ವಭಾವ ಎಂದು ಭ್ರಮಿಸುತ್ತೇವೆ. ಆದರೆ ಅದು  ನಮ್ಮ ನಿಜವಾದ ಸ್ವರೂಪ ಸ್ವಭಾವವಲ್ಲ-ಅದು ಪ್ರಭಾವ. ಇಡೀ ಜೀವಮಾನದುದ್ದಕ್ಕೂ ನಮ್ಮ ಸ್ವಭಾವವೇನು ಎನ್ನುವುದು ನಮಗೆ ತಿಳಿಯದೇ ಹೋಗಬಹುದು. ಸ್ವಭಾವವೇನು ಎಂದು ತಿಳಿಯದೆ ನಾವು ಈ ಪ್ರಭಾವದೊಳಗೆ ಬಿದ್ದು ಒದ್ದಾಡುತ್ತಿರುತ್ತೇವೆ. ನಮಗೆ ಈ ತ್ರಿಗುಣಗಳ ಪ್ರಭಾವ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯದೇ ಇದ್ದರೆ- ನಮ್ಮನ್ನು ನಾವು ತಿದ್ದಿಕೊಳ್ಳಲು ಆಗುವುದಿಲ್ಲ. ಇಂದು ನಾವು ನಮ್ಮ ಸ್ವಭಾವವನ್ನು ಮತ್ತು ಸತ್ವಗುಣವನ್ನು ಮೂಲೆಗುಂಪಾಗಿಸಿ, ರಜಸ್ಸು ಮತ್ತು ತಮಸ್ಸುಗಳ ಹತೋಟಿಯಲ್ಲಿ ಬದುಕುತ್ತಿದ್ದೇವೆ.
ಮೊದಲು ನಾವು ನಮ್ಮನ್ನು ತಿದ್ದಿಕೊಳ್ಳಬೇಕು-ಸಮಾಜವನ್ನಲ್ಲ. ನಮ್ಮಲ್ಲಿ ಸತ್ವದ ಅಂಶ ಎಷ್ಟಿದೆ; ರಜಸ್ಸಿನ ಅಂಶ ಎಷ್ಟಿದೆ; ತಮಸ್ಸಿನ ಅಂಶ ಎಷ್ಟಿದೆ ಎನ್ನುವುದನ್ನು ತಿಳಿದು, ನಮ್ಮ ನಡೆಯಲ್ಲಿ ಸತ್ವದ ಅಂಶವನ್ನು ಹೆಚ್ಚಾಗಿ ಬಳಸಿ, ಅದರ ಅಂಶವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು. ಹಿಂದೆ ನಡೆದ ಘಟನೆಗಳಲ್ಲಿ ನಾವು ಎಲ್ಲಿ ರಜಸ್ಸಿನ ಮತ್ತು ತಮಸ್ಸಿನ ಪ್ರಭಾವದಿಂದ ತಪ್ಪಿದ್ದೇವೆ ಎನ್ನುವ ಆತ್ಮಚಿಂತನೆ ನಡೆಸಿ, ಮುಂದೆ ಹಾಗಾಗದಂತೆ ಎಚ್ಚರವಹಿಸಬೇಕು. ಈ ವಿಚಾರವನ್ನು ತಿಳಿದು ನಡೆದರೆ ನಾವು ನಮ್ಮನ್ನು ನಿಯಂತ್ರಿಸಿಕೊಂಡು ಬಹಳ ಆನಂದದಿಂದ ಬದುಕಬಹುದು.
ಮುಂದಿನ ಶ್ಲೋಕಗಳಲ್ಲಿ ಕೃಷ್ಣ ಸತ್ವದ ಬದುಕು ಹೇಗಿರುತ್ತದೆ; ರಜಸ್ಸಿನ ಬದುಕು ಹೇಗಿರುತ್ತದೆ; ತಮಸ್ಸಿನ ಬದುಕು ಹೇಗಿರುತ್ತದೆ ಎನ್ನುವುದನ್ನು ವಿವರಿಸುತ್ತಾನೆ. ತ್ರಿಗುಣದ ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ ಜೀವರು, ಯಾವ ಕಟ್ಟಿನ ಪ್ರಭಾವದಲ್ಲಿ ಹೇಗೆ ನೆಡೆದುಕೊಳ್ಳುತ್ತಾರೆ ಎನ್ನುವ ಅಂಶ ತಿಳಿದರೆ, ಸತ್ಯದ ದಾರಿಯಲ್ಲಿ ಸಾಗಲು ಪ್ರಯತ್ನ ಮಾಡಬಹುದು. ಇದಕ್ಕೆ ಬಹಳ ಸುಂದರವಾದ ವಿಶ್ಲೇಷಣೆಯನ್ನು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ನೀಡಿದ್ದಾನೆ.

ತತ್ರ ಸತ್ತ್ವಂ ನಿರ್ಮಲತ್ವಾತ್ ಪ್ರಕಾಶಕಮನಾಮಯಮ್
ಸುಖಸಂಗೇನ ಬಧ್ನಾತಿ ಜ್ಞಾನಸಂಗೇನ ಚಾನಘ                             

ತತ್ರ ಸತ್ತ್ವಮ್  ನಿರ್ಮಲತ್ವಾತ್ ಪ್ರಕಾಶಕಮ್ ಅನಾಮಯಮ್
ಸುಖ ಸಂಗೇನ ಬಧ್ನಾತಿ ಜ್ಞಾನ ಸಂಗೇನ ಚನಘ –ಅವುಗಳಲ್ಲಿ ಸತ್ವಗುಣ ಪರಿಶುದ್ಧವಾದದ್ದು. ಆದ್ದರಿಂದ ಜ್ಞಾನದ ಬೆಳಕು ನೀಡುವಂಥದು; ಬೇನೆಗಳನ್ನು ನೀಗುವಂಥದು. ಓ ನಘ, ಅದು ಸುಖದ ನಂಟಿನಿಂದ ಮತ್ತು ತಿಳಿವಿನ ನಂಟಿನಿಂದ ಕಟ್ಟಿಹಾಕುತ್ತದೆ.

ಕಣ್ಮುಚ್ಚಿ ಕುಳಿತು ನಿನ್ನೊಳಗೆ ನಿನ್ನನ್ನು ನೋಡು. ನಿನ್ನೊಳಗೆ ನಡೆಯುವ ಮಾನಸಿಕ ಬೆಳವಣಿಗೆಗಳು, ಚಿಂತನೆಗಳು, ಯೋಚನೆಗಳು, ಭಾವನೆಗಳನ್ನು ನೋಡು.  ಸತ್ವ ಗುಣದ ಪ್ರಭಾವ ನಿನ್ನ ಮೇಲೆ ಆಗಿದ್ದರೆ-ನಿನ್ನೊಳಗೆ ನೀನು ಸ್ವಚ್ಛ, ನಿರ್ಮಲ ನಿರಾಳವಾದ ಪ್ರಜ್ವಲಿಸುವ ಬೆಳಕನ್ನು ಕಾಣುತ್ತೀಯ. ನಮ್ಮ ಅಂತರಂಗ ಪ್ರಪಂಚಕ್ಕೆ ಪೂರ್ಣ ವಿದ್ಯುತ್  ಸಂಪರ್ಕವಾಗಿದೆ, ದೀಪವನ್ನು, ಈ ದೀಪವನ್ನು ನಿಯಂತ್ರಿಸುವ ಅನೇಕ ಒತ್ತುಗುಂಡಿ(Switch)ಯನ್ನು  ಅಳವಡಿಸಲಾಗಿದೆ. ಇಲ್ಲಿ ನಿರಂತರ ವಿದ್ಯುತ್  ಸರಬರಾಜಿದೆ. ಆದರೆ ನಮಗೆ ಈ ಸ್ವಿಚ್  ಎಲ್ಲಿದೆ ಅನ್ನುವುದು ಗೊತ್ತಿಲ್ಲ. ಆದ್ದರಿಂದ- ಎಲ್ಲ ಇದ್ದರೂ ಸದಾ ನಮ್ಮೊಳಗೆ ಕತ್ತಲು ಆವರಿಸಿಕೊಂಡಿರುತ್ತದೆ. ನಾವು ಅದನ್ನು ಉಪಯೋಗಿಸುವುದೇ ಇಲ್ಲ. ನಮ್ಮಲ್ಲಿ ಸತ್ವಗುಣ ಜಾಗೃತವಾದಾಗ ನಮಗೆ ಈ ಸ್ವಿಚ್  ಸಿಗುತ್ತದೆ. ಅದರಿಂದ ಯಾವುದೇ ದೋಷವಿಲ್ಲದ ಜ್ಞಾನದ ಬೆಳಕು ನಮ್ಮೊಳಗೆ ಬೆಳಗುತ್ತದೆ.      
ಸತ್ವದ ಗುಣ ಜಾಗೃತವಾದಾಗ ನಮ್ಮಲ್ಲಿ ಅಂತರಂಗದ ಆನಂದ ತುಂಬಿ ತುಳುಕುತ್ತಿರುತ್ತದೆ. ಈ ಅನುಭವ ಹೆಚ್ಚಿನವರಿಗೆ ಆಗಿರುತ್ತದೆ. ಉದಾಹರಣೆಗೆ: ಕೆಲವೊಮ್ಮೆ ನಾವು ಹೇಳುವುದಿದೆ “ಏಕೋ ಇಂದು ಬಹಳ ಸಂತೋಷವಾಗುತ್ತಿದೆ” ಎಂದು. ಅಲ್ಲಿ ಏನೂ ವಿಶೇಷ ಕಾರಣವಿರುವುದಿಲ್ಲ. ಆದರೆ ಅಂತರಂಗದ ಆನಂದ ಹೊರ ಹೊಮ್ಮುವುದನ್ನು ನಾವು ಅನುಭವಿಸುತ್ತಿರುತ್ತೇವೆ.  ಇದು ಸತ್ವ ಗುಣದ ಜಾಗೃತಾವಸ್ಥೆ. ಜ್ಞಾನದಿಂದ ಬರುವ ಸುಖವೆಲ್ಲವೂ ಸಾತ್ವಿಕ.
ಇಲ್ಲಿ ಒಂದು ಎಚ್ಚರವನ್ನು ಕೃಷ್ಣ ಕೊಡುತ್ತಾನೆ. ಸತ್ವಗುಣ ನಮ್ಮಲ್ಲಿ ಜಾಗೃತವಾಗಬೇಕಾದರೆ ನಾವು ‘ಅನಘ’ರಾಗಬೇಕು. ಪಾಪ ಸ್ಪರ್ಶ ನಮ್ಮಲ್ಲಿದ್ದರೆ-ಸತ್ವಗುಣ ಜಾಗೃತವಾಗದು. ಅದಕ್ಕಾಗಿ ನಾವು ಪಾಪ ದೂರರಾಗಬೇಕು. ಪಾಪ ಸ್ಪರ್ಶ ಎಷ್ಟು ಹೆಚ್ಚಾಯಿತೋ- ಅಷ್ಟು ಸತ್ವ ದೂರ ಹೋಗುತ್ತದೆ. 
ಮೋಕ್ಷ ಸಾಧನೆಯಲ್ಲಿ ಸತ್ವಗುಣ ಸಾಧನವಾದರೂ ಕೂಡ, ಇದು ತ್ರಿಗುಣಗಳಲ್ಲಿ ಒಂದು. ಆದ್ದರಿಂದ ಸತ್ವಗುಣ ಕೂಡ ಬಂಧಕವಾಗಬಹುದು. ಇದು ಸುಖದ ನಂಟಿನಿಂದ ಮತ್ತು ತಿಳಿವಿನ ನಂಟಿನಿಂದ ನಮ್ಮನ್ನು ಕಟ್ಟಿ ಹಾಕಬಹುದು. ಉದಾಹರಣೆಗೆ: ಜ್ಞಾನ ಸಾಧನೆ ಸಾತ್ವಿಕ ಗುಣ. ಇಲ್ಲಿ ಭಗವಂತನ ವಿಷಯವಲ್ಲದ ಜ್ಞಾನ ಸಾಧನೆಯ ನಂಟಿನಲ್ಲಿ ನಾವು ಬಿದ್ದರೆ-ಆಗ ಅದು ಬಂಧಕವಾಗುತ್ತದೆ. ನಾವು ಯಾವುದೋ ಸಂಶೋಧನೆ, ಅನ್ವೇಷಣೆಯಲ್ಲಿ ಮುಳುಗಿದ್ದರೆ ಅದು ನಮ್ಮನ್ನು ಮೊಕ್ಷದತ್ತ ಕೊಂಡೊಯ್ಯಲಾರದು. ನಾವು ಆ ಸಂಶೋಧನೆಯಲ್ಲಿ ಬರುವ ಫಲಿತಾಂಶದ  ಸುಖದ ನಂಟಿನಲ್ಲಿ ಸಿಲುಕಿ ಸತ್ವಗುಣದ ಬಂಧನಕ್ಕೊಳಗಾಗಬಹುದು.  ಮೋಕ್ಷ ಸಾಧನೆಯಲ್ಲಿ ನಾವು ಸತ್ವವನ್ನೂ ದಾಟಬೇಕು-ಏಕೆಂದರೆ ಮೋಕ್ಷ  ತ್ರಿಗುಣಾತೀತ. ಕೃಷ್ಣ ಇಲ್ಲಿ ಸತ್ವ ಗುಣವನ್ನು ‘ಬಧ್ನಾತಿ’ ಎಂದಿದ್ದಾನೆ. ಏಕೆಂದರೆ ಈ ಬಂಧನ ಸುಲಭದಲ್ಲಿ ಬಿಡಿಸಿಕೊಳ್ಳಬಹುದಾದ ಬಂಧನ. ಅದು ಎಂದೂ ನಮ್ಮನ್ನು ಕೆಳಕ್ಕೆಳೆಯುವುದಿಲ್ಲ. [ಆದರೆ ರಜಸ್ಸು ಮತ್ತು ತಮಸ್ಸು ‘ನಿಬಧ್ನಾತಿ’ ಎಂದು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ಉಲ್ಲೇಖಿಸಿದ್ದಾನೆ]. ಯಾವ ಸತ್ವ ಭಗವಂತನ ಕಡೆಗೆ ಹೋಗದೆ ನಮ್ಮನ್ನು ಬಂಧನದಲ್ಲಿ ಸುತ್ತಾಡಿಸುತ್ತದೋ- ಆ ಸತ್ವದಿಂದ ನಾವು ಪಾರಾಗಬೇಕು. 

ರಜೋ ರಾಗಾತ್ಮಕಂ ವಿದ್ಧಿ ತೃಷ್ಣಾಸಂಗಸಮುದ್ಭವಮ್
ತನ್ನಿಬಧ್ನಾತಿ ಕೌಂತೇಯ ಕರ್ಮಸಂಗೇನ ದೇಹಿನಮ್                     

ಜಃ  ರಾಗಾತ್ಮಕಮ್  ವಿದ್ಧಿ ತೃಷ್ಣಾ ಸಂಗ ಸಮುದ್ಭವಮ್
ತ್ ನಿಬಧ್ನಾತಿ ಕೌಂತೇಯ ಕರ್ಮಸಂಗೇನ ದೇಹಿನಮ್—ರಜೋಗುಣ ರಂಜಿಸುವಂಥದು, ಆಸೆ-ಆಸಕ್ತಿಗಳನ್ನು ಹುಟ್ಟಿಸುವಂಥದು ಎಂದು ತಿಳಿ. ಕೌಂತೇಯ, ಅದು ಜೀವನನ್ನು ಕರ್ಮದ ನಂಟಿನಿಂದ ಕಟ್ಟಿಹಾಕುತ್ತದೆ.

ರಜಸ್ಸು ಅಂದರೆ ‘ರಾಗ’. ಒಂದು ವಸ್ತುವನ್ನು ತುಂಬಾ ಇಷ್ಟಪಡುವುದು, ಬಯಕೆಗಳ ಸರಮಾಲೆ- ಹೀಗೆ ಎಲ್ಲಾ  ಪಂಚೇಂದ್ರಿಯಗಳ ಬಯಕೆ ರಜೋಗುಣದ ಪ್ರಭಾವದಿಂದ ಬರುವಂಥದ್ದು. ಇದು  ತೃಷ್ಣಾ  ಮತ್ತು ಸಂಗಕ್ಕೆ ಕಾರಣ. ಇಲ್ಲಿ ತೃಷ್ಣಾ ಅಂದರೆ ಬೇಕು-ಬೇಕು ಎನ್ನುವ ದಾಹ. ಸಂಗ ಎಂದರೆ ಒಂದು ವಸ್ತುವಿನ ನಿರಂತರ ಒಡನಾಟ. ರಜೋಗುಣ ಬಯಕೆಯನ್ನು ಹುಟ್ಟಿಸುತ್ತದೆ. ಆ ಬಯಕೆಯಿಂದ ಒಡನಾಟ, ಒಡನಾಟದಿಂದ ಅದು ಅಂಟಿಕೊಳ್ಳುವಂತೆ ಮಾಡುತ್ತದೆ. ಹೀಗೆ ಹಂತ ಹಂತವಾಗಿ ರಜೋಗುಣ ನಮ್ಮನ್ನು ಬಿಡಿಸಿಕೊಳ್ಳಲಾಗದ ಬಂಧನಕ್ಕೊಳಪಡಿಸುತ್ತದೆ(ನಿಬಧ್ನಾತಿ). ಇದರ ಪ್ರಭಾವದಿಂದ ನಾವು ಜ್ಞಾನದ ಬಯಕೆ ಇಲ್ಲದ ಕರ್ಮಸಂಗ ಮಾಡಲಾರಂಭಿಸುತ್ತೇವೆ. ಉದಾಹರಣೆಗೆ: ದುಡ್ಡಿಗಾಗಿ ಹೋರಾಟ, ದುಡ್ಡಿಗಾಗಿ ಇಡೀ ಬದುಕನ್ನು ಮೀಸಲಿಡುವುದು. ದುಡ್ಡೇ ಪ್ರಪಂಚ ಎಂದು ಹೋರಾಡುವುದು, ಇತ್ಯಾದಿ. ಇದು ರಜಸ್ಸಿನ ಗಾಢವಾದ ಬಂಧನದ ಪ್ರಭಾವ.   

ತಮಸ್ತ್ವಜ್ಞಾನಜಂ ವಿದ್ಧಿ ಮೋಹನಂ ಸರ್ವದೇಹಿನಾಮ್
ಪ್ರಮಾದಾಲಸ್ಯನಿದ್ರಾಭಿಸ್ತನ್ನಿಬಧ್ನಾತಿ ಭಾರತ                               

ಮಃ ತು ಅಜ್ಞಾನಜಮ್  ವಿದ್ಧಿ ಮೋಹನಂ ಸರ್ವದೇಹಿನಾಮ್
ಪ್ರಮಾದ ಲಸ್ಯ ನಿದ್ರಾಭಿಃ ತತ್ ನಿಬಧ್ನಾತಿ ಭಾರತ –ಎಲ್ಲ ಜೀವಿಗಳಿಗೆ ಅಜ್ಞಾನ ನೀಡುವಂಥದು, ಭ್ರಮೆಗೊಳಿಸುವಂಥದು- ತಮೋಗುಣ ಎಂದು ತಿಳಿ. ಭಾರತ, ಅದು ಮೈಮರೆವು, ಸೋಮಾರಿತನ ಮತ್ತು ನಿದ್ದೆಗಳಿಂದ ಕಟ್ಟಿಹಾಕುತ್ತದೆ.

ಏನೂ ಗೊತ್ತಿಲ್ಲದೆ ಇರುವುದು ತಮಸ್ಸು. ತಮೋಗುಣದಿಂದ ಅಜ್ಞಾನ ಹುಟ್ಟುತ್ತದೆ. ಅದು ಎಷ್ಟು ಬಲಿಷ್ಟ ಎಂದರೆ-ಅದು   ನನ್ನಲ್ಲಿ ಜ್ಞಾನವಿಲ್ಲ, ನಾನು ಅಜ್ಞಾನಿ ಎನ್ನುವ ಜ್ಞಾನವೂ ಬಾರದಂತೆ ಮಾಡಬಲ್ಲದು. ಇದು ಅತ್ಯಂತ ಭಯಾನಕ. ಆಂಗ್ಲ ಭಾಷೆಯಲ್ಲಿ ಹೇಳುವಂತೆ: “He who knows not, and knows not that he knows not, is a fool”. ನನಗೆ ಏನೂ ಗೊತ್ತಿಲ್ಲ ಅನ್ನುವ ವಿಷಯ ಕೂಡ ನನಗೆ ಗೊತ್ತಿಲ್ಲದೆ ಇರುವುದು ತಮೋಗುಣದಿಂದ.  ಇದು ಸಮಸ್ತರನ್ನು ಭ್ರಮೆಯಲ್ಲಿ ಸಿಲುಕಿಹಾಕಿಸುವ ಗುಣ. ತಮಸ್ಸು ನಾವು ಬಿಡಿಸಿಕೊಳ್ಳಲಾಗದ ಮೂರು ಕಟ್ಟಿನಿಂದ ನಮ್ಮನ್ನು ಬಂಧಿಸುತ್ತದೆ. ಅವುಗಳೆಂದರೆ ನಿದ್ದೆ, ಆಲಸ್ಯ ಮತ್ತು ಪ್ರಮಾದ. ಎಚ್ಚರದಲ್ಲೂ  ಎಚ್ಚರವಿಲ್ಲದೆ ಬದುಕುವುದು ಪ್ರಮಾದ. ತಪ್ಪು ಮಾಡುವುದು ತಪ್ಪಲ್ಲ, ಆದರೆ ತಪ್ಪು ಮಾಡಿಯೂ ತಿದ್ದಿಕೊಳ್ಳದೆ ಇರುವುದು ಪ್ರಮಾದ. ಇದಕ್ಕೆ ಕಾರಣ ನಮ್ಮಲ್ಲಿರುವ ಈ ತಮೋಗುಣ.

ಸತ್ತ್ವಂ ಸುಖೇ ಸಂಜಯತಿ ರಜಃ ಕರ್ಮಣಿ ಭಾರತ
ಜ್ಞಾನಮಾವೃತ್ಯ ತು ತಮಃ ಪ್ರಮಾದೇ ಸಂಜಯತ್ಯುತ                    

ಸತ್ತ್ವಂ ಸುಖೇ ಸಂಜಯತಿ ರಜಃ ಕರ್ಮಣಿ ಭಾರತ
ಜ್ಞಾನಮ್ ಆವೃತ್ಯ ತು ತಮಃ ಪ್ರಮಾದೇ ಸಂಜಯತಿ ಉ –ಸತ್ವಗುಣ ಸುಖದ ನಂಟಿನಲ್ಲಿರುತ್ತದೆ. ಭಾರತ, ರಜೋಗುಣ  ಕರ್ಮದ ನಂಟಿನಲ್ಲಿರುತ್ತದೆ. ತಮೋಗುಣ ಅರಿವನ್ನು ಮುಚ್ಚಿ ಮೈಮರೆಸಿ ಬಿಡುತ್ತದೆ.    

ಈ ಶ್ಲೋಕದಲ್ಲಿ ಕೃಷ್ಣ   ಮೂರು ಗುಣಗಳನ್ನು ಒಟ್ಟಿನಲ್ಲಿ ಸಂಕ್ಷೇಪಿಸಿ ಹೇಳುತ್ತಾನೆ. ಸತ್ವದ ಮೂಲ ಗುಣಧರ್ಮ ಏನೆಂದರೆ -ಅದರಿಂದಾಗಿ ನಮ್ಮಿಂದ ಒಂದು ಸಹಜವಾದ ಆನಂದ ಚಿಮ್ಮುತ್ತದೆ. ರಜೋಗುಣ “ಏನಾದರೂ ಮಾಡಬೇಕು ಇಲ್ಲದಿದ್ದರೆ ಜೀವನದಲ್ಲಿ ಸುಖವಿಲ್ಲ” ಎಂದು, ಸದಾ ದುಡ್ಡಿಗಾಗಿ ಹೋರಾಟ ಮಾಡುತ್ತಾ, ತಮ್ಮ ಜೀವನವನ್ನು ಸವೆಸುವಂತೆ ಮಾಡುತ್ತದೆ. ತಮಸ್ಸು ನಮ್ಮಲ್ಲಿರುವ ಜ್ಞಾನವನ್ನು ಮುಚ್ಚಿಬಿಡುತ್ತದೆ. ಉದಾಹರಣೆಗೆ: ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎನ್ನುವ ಒಳ್ಳೆಯತನ, ಕೊಡುವುದರಲ್ಲಿ ಖುಷಿಪಡುವುದು-ಸತ್ವಗುಣ. ತಾನು ಸುಖವಾಗಿರಬೇಕು ಎಂದು ಸದಾ ಸುಖದ ಅನ್ವೇಷಣೆಯಲ್ಲಿ ತೊಡಗಿ, ಮಾಡಬಾರದ ಕೆಲಸವನ್ನು ಮಾಡುತ್ತ ಬದುಕುವುದು ರಜೋಗುಣ. ನಮ್ಮಿಂದ ನಡೆಯುವ ಪ್ರಮಾದವೆಲ್ಲವೂ ತಮೋಗುಣದ ಪ್ರಭಾವ. ಇದು ನಮಗೆ ಕೃಷ್ಣ ಗೀತೆಯ ಮೂಲಕ ಹೇಳಿದ ಅತ್ಯುನ್ನತವಾದ ಮನಃಶಾಸ್ತ್ರ.     

No comments:

Post a Comment