Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Sunday, November 20, 2011

Bhagavad GitA in Kannada Chapter-14 Shloka 14-16


ಯದಾ ಸತ್ತ್ವೇ ಪ್ರವೃದ್ಧೇ ತು ಪ್ರಯಂ ಯಾತಿ ದೇಹಭೃತ್
ತದೋತ್ತಮವಿದಾಂ ಲೋಕಾನಮಲಾನ್ ಪ್ರತಿಪದ್ಯತೇ                    ೧೪

ಯದಾ ಸತ್ತ್ವೇ ಪ್ರವೃದ್ಧೇ ತು ಪ್ರಮ್  ಯಾತಿ ದೇಹಭೃತ್
ದಾ ಉತ್ತಮವಿದಾಮ್ ಲೋಕಾನ್ ಅಮಲಾನ್ ಪ್ರತಿಪದ್ಯ ತೇ –ಸತ್ವಗುಣ ಬಲಗೊಂಡಾಗ ಜೀವಿ ಸಾವನ್ನಪ್ಪಿದರೆ, ಹಿರಿದಾದ ತತ್ವವನ್ನು- ಬಲ್ಲವರ ಕುಲದಲ್ಲಿ, ದೋಷವಿರದ ದೇಹಗಳನ್ನು ಪಡೆಯುತ್ತಾನೆ.

ನಮಗೆ ತಿಳಿದಂತೆ ಜೀವ ದೇಹವನ್ನು ಬಿಟ್ಟು ಹೊರ ಹೋಗುವ ಕೊನೆಯ ಕ್ಷಣ ಆ ಜೀವದ ಮುಂದಿನ ನಡೆಯನ್ನು ನಿರ್ಧರಿಸುತ್ತದೆ. ಅಂತ್ಯಕಾಲದಲ್ಲಿ ಸಾತ್ವಿಕವಾದ ಚಿಂತನೆಯೊಂದಿಗೆ, ಸತ್ವದ ಪ್ರಭಾವದಲ್ಲಿ ಪ್ರಾಣ ಬಿಡಲು ಸಾಧ್ಯವಾದರೆ, ಮುಂದಿನ ಜನ್ಮದಲ್ಲಿ ಯಾವುದೇ ದೋಷವಿಲ್ಲದ ಮನುಷ್ಯರಾಗಿ ಜ್ಞಾನಿಗಳ ಸಮುದಾಯದಲ್ಲಿ ಹುಟ್ಟುತ್ತೇವೆ. ಅಲ್ಲಿ ಜ್ಞಾನಿಗಳ ನಡುವೆ ಇದ್ದು,  ಜ್ಞಾನವನ್ನು ಬೆಳೆಸಿಕೊಂಡು ಮತ್ತೆ ಜ್ಞಾನ ಮಾರ್ಗದಲ್ಲಿ ಎತ್ತರಕ್ಕೆರಲು ಸಾಧ್ಯವಾಗುತ್ತದೆ. ಜೀವಮಾನದಲ್ಲಿ ನಾವು ಸತ್ವಕ್ಕೆ ಒತ್ತುಕೊಟ್ಟು ಬದುಕಿದರೆ ಮಾತ್ರ ಸಾಯುವಾಗ ಸತ್ವದ ಅಧಿಷ್ಠಾನದಲ್ಲಿ ಸಾಯಲು ಸಾಧ್ಯವಾಗಬಹುದು. ಇದನ್ನು ಬಿಟ್ಟು “ಸಾಯುವಾಗ ಸಾತ್ವಿಕ ಚಿಂತನೆ ಬಗ್ಗೆ ಯೋಚಿಸೋಣ” ಎಂದು ಬದುಕಿದರೆ, ಸತ್ವದ ಪ್ರಭಾವದಲ್ಲಿ ಸಾಯುವುದು ಅಸಾಧ್ಯ. 

ರಜಸಿ ಪ್ರಯಂ ಗತ್ವಾ ಕರ್ಮ ಸಂಗಿಷು ಜಾಯತೇ
ತಥಾ ಪ್ರಲೀನಸ್ತಮಸಿ ಮೂಢಯೋನಿಷು ಜಾಯತೇ                                    ೧೫

ರಜಸಿ ಪ್ರಮ್  ಗತ್ವಾ ಕರ್ಮ ಸಂಗಿಷು ಜಾಯತೇ
ತಥಾ ಪ್ರಲೀನಃ ತಮಸಿ ಮೂಢ ಯೋನಿಷು ಜಾಯತೇ –ರಜೋಗುಣದಲ್ಲಿ ಸಾವನ್ನಪ್ಪಿದರೆ ಕರ್ಮಕ್ಕೆ ಅಂಟಿಕೊಂಡವರಲ್ಲಿ ಹುಟ್ಟುತ್ತಾನೆ. ತಮೋಗುಣದಲ್ಲಿ ಸತ್ತವನು ತಿಳಿವಿರದ ಹೀನಯೋನಿಗಳಲ್ಲಿ ಹುಟ್ಟುತ್ತಾನೆ.

ಜ್ಞಾನಕ್ಕೆ ಪೂರಕವಲ್ಲದ ಕರ್ಮಾನುಷ್ಠಾನ ಮಾಡುತ್ತಾ ರಜೋಗುಣದ ಪ್ರಭಾವದಲ್ಲಿ ದುಡ್ಡು-ದುಡ್ಡು ಎಂದು ಬದುಕಿ, ಅದೇ ಪ್ರಭಾವದಲ್ಲಿ ಸತ್ತರೆ-ಆಗ ಮುಂದಿನ ಜನ್ಮದಲ್ಲಿ ಕರ್ಮಕ್ಕೆ ಅಂಟಿಕೊಂಡು ಹುಟ್ಟಬೇಕಾಗುತ್ತದೆ. ಇನ್ನು ತಮೋಗುಣದ ಪ್ರಭಾವದಲ್ಲಿ ಬದುಕಿ ಸತ್ತರೆ ಮುಂದಿನ ಜನ್ಮದಲ್ಲಿ ಹೀನಯೋನಿಯಲ್ಲಿ ಹುಟ್ಟಬೇಕಾಗುತ್ತದೆ. ಇಲ್ಲಿ ‘ಹೀನಯೋನಿ’ ಅಂದರೆ ಮನುಷ್ಯ ಕೂಡ ಆಗಬಹುದು. ಯಾವ ಸಂಸ್ಕಾರವಿಲ್ಲದ, ಸ್ವಚ್ಛತೆ ಇಲ್ಲದ, ಜ್ಞಾನವಿಲ್ಲದ, ಕೇವಲ ಮನುಷ್ಯ ಆಕಾರವನ್ನು ಪಡೆದು, ಮನುಷ್ಯತ್ವದ ಲವಲೇಷವಿಲ್ಲದೆ ಮನುಷ್ಯರಾಗಿ ಬದುಕುವುದೂ ಕೂಡ ಹೀನಯೋನಿ ಜನನ. ಇದಕ್ಕಿಂತ ಪ್ರಾಣಿ ಜನ್ಮ ಎಷ್ಟೋ ಮೇಲು. ಇದು ತಮೋಗುಣದಲ್ಲಿ ಸತ್ತಾಗ ಆಗುವ ಪರಿಣಾಮ. [ಸಾಯುವ ಕೊನೇ ಕ್ಷಣದಲ್ಲಿ ರಜಸ್ಸು ಮತ್ತು ತಮಸ್ಸಿನ ಪ್ರಭಾವದಿಂದ ಸತ್ತರೆ, ಅದು ನಮ್ಮ ಮುಂದಿನ ಜನ್ಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು-ಘಜೇಂದ್ರನಾಗಿ ಹುಟ್ಟಿದ ಇಂದ್ರದ್ಯುಮ್ನ ಮತ್ತು ಜಿಂಕೆಯಾಗಿ ಹುಟ್ಟಿದ ಭರತ ಚಕ್ರವರ್ತಿಯ ಕಥೆಯಿಂದ ನಾವು ತಿಳಿಯಬಹುದು. ಪುನರ್ಜನ್ಮದ ಬಗ್ಗೆ ಇತ್ತೀಚಿನ ಸಂಶೋಧನೆ ಬಗ್ಗೆ ತಿಳಿಯಲು Edgar cayce(1877 to 1920) ಅವರ ಪುಸ್ತಕಗಳು ಹಾಗು ಅವರ ಮೇಲಿನ ಸಂಶೋಧನೆಯ ವಿವರವನ್ನು ನೋಡಿ ].

ಕರ್ಮಣಃ ಸುಕೃತಸ್ಯಾSಹುಃ ಸಾತ್ತ್ವಿಕಂ ನಿರ್ಮಲಂ ಫಲಮ್  
ರಜಸಸ್ತು ಫಲಂ  ದುಃಖಮಜ್ಞಾನಂ ತಮಸಃ ಫಲಮ್                                    ೧೬

ಕರ್ಮಣಃ ಸುಕೃತಸ್ಯ ಆಹುಃ ಸಾತ್ತ್ವಿಕಮ್ ನಿರ್ಮಲಮ್ ಫಲಮ್        
ರಜಸಃ ತು ಫಲಮ್  ದುಃಖಮ್ ಅಜ್ಞಾನಮ್ ತಮಸಃ ಫಲಮ್ – ಒಳ್ಳೆಯ ಕಜ್ಜದಿಂದ ದುಗುಡವಿರದ ಸಾತ್ವಿಕ ಫಲ ಎನ್ನುತ್ತಾರೆ ತಿಳಿದವರು. ರಾಜಸವಾದ ಕಜ್ಜದಿಂದ ದುಃಖ ಬೆರೆತ ಸುಖ. ತಿಳಿಗೇಡಿತನವೇ ತಮೋಗುಣದ ಕಜ್ಜದ ಫಲ.

ಜೀವನದುದ್ದಕ್ಕೂ ಇನ್ನೊಬ್ಬರಿಗೆ ಸಹಾಯವಾಗುವಂತಹ ಕೆಲಸ ಮಾಡಿದರೆ ಅದು ಸುಕೃತ. ನಮ್ಮಲ್ಲಿ ಸಂಪತ್ತಿದ್ದಾಗ ಅದು ನನ್ನದು-ನನ್ನದು ಎಂದು ಜಿಪುಣನಾಗಿ ಬದುಕಿದರೆ ಅದರಿಂದ ದುಃಖಭರಿತ ಜೀವನ ನಮ್ಮದಾಗುತ್ತದೆ. ನಾವು ಗಳಿಸಿದ್ದನ್ನು ಇನ್ನೊಬ್ಬರ ಕಷ್ಟದಲ್ಲಿ ವಿನಿಯೋಗಿಸಿದಾಗ ಅದು ನಮ್ಮನ್ನು ಸಾತ್ವಿಕ ಫಲದತ್ತ ಕೊಂಡೊಯ್ಯುತ್ತದೆ. ಮಧ್ವಾಚಾರ್ಯರು ಈ ವಿಚಾರಕ್ಕೆ ಒತ್ತು ಕೊಟ್ಟು ತಮ್ಮ 'ಗೀತಾತಾತ್ಪರ್ಯ'ದಲ್ಲಿ  ಹೀಗೆ ಹೇಳಿದ್ದಾರೆ:
ನಾನಾ ಜನಸ್ಯ ಶುಶ್ರೂಷಾ ಕರ್ತವ್ಯಾ ಕರವನ್ಮಿತೇ
ಕಷ್ಟದಲ್ಲಿರುವವರ ಸೇವೆ ಮಾಡುವುದು ಮೋಕ್ಷ ಸಾಧನೆಯ ಒಂದು ಮುಖ. ನಮ್ಮಲ್ಲಿ ಕೆಲವರು ಕಷ್ಟದಲ್ಲಿರುವವರನ್ನು ಕಂಡು  ಹೀಗೆ ಹೇಳುವುದಿದೆ: “ಅದು ಅವನ ಪ್ರಾರಾಬ್ಧಕರ್ಮ, ಅದನ್ನು ಅವನು ಅನುಭವಿಸಲಿ. ಅದಕ್ಕೆ ನಾನ್ಯಾಕೆ ಚಿಂತಿಸಬೇಕು” ಎಂದು. ಈ ರೀತಿ ಹೇಳಿದಾಗ ನಾವು ಆ ಕಷ್ಟದಲ್ಲಿರುವ ವ್ಯಕ್ತಿಯ ಒಳಗಿರುವ ಭಗವಂತನನ್ನು ತಿರಸ್ಕಾರ ಮಾಡಿದಂತಾಗುತ್ತದೆ. ಇಂಥವರಿಗೆ ಎಂದೆಂದೂ ಭಗವಂತನ ಸಾಕ್ಷಾತ್ಕಾರವಾಗುವುದಿಲ್ಲ. ನಮ್ಮ ಆಧ್ಯಾತ್ಮಿಕ ಸಾಧನೆಯಲ್ಲಿ ಜಪ-ತಪವಷ್ಟೇ ಸಾಲದು; ಇಲ್ಲಿ  ಕಷ್ಟದಲ್ಲಿರುವ ಜನರ ಸೇವೆಯೂ ಒಂದು ಪ್ರಧಾನವಾದ ಅಂಶ. ಸಾಧಕನು ತನ್ನ ನಿತ್ಯಾನುಷ್ಠಾನಗಳ ಜತೆಗೆ ಈ ಸೇವಾಕಾರ್ಯವನ್ನು ಆಚರಿಸಬೇಕೆನ್ನುವುದು ಗೀತೆಯ ಆದೇಶವೆಂದು ಮಧ್ವಾಚಾರ್ಯರು ಪ್ರತಿಪಾದಿಸಿದ್ದಾರೆ. ನಿನ್ನ ಮನೆಯಲ್ಲಿ ಬೆಂದ ಅನ್ನ ಎಷ್ಟು ಹಸಿದ ಜನರ ಹಸಿವನ್ನು ತಣಿಸುತ್ತದೆ-ಅಷ್ಟು ಸುಕೃತ. ಇದಕ್ಕಾಗಿ ಹಿಂದಿನ ಕಾಲದಲ್ಲಿ ಒಂದು ಸಂಪ್ರದಾಯವಿತ್ತು. ಅಡುಗೆ ಮಾಡಿ, ದೇವರಿಗೆ ಅದನ್ನು ಅರ್ಪಿಸಿ, ಸುಮಾರು ಹತ್ತು ನಿಮಿಷ ಹೆಬ್ಬಾಗಿಲಿನಲ್ಲಿ ಕಾದು, ನಂತರ ಊಟ ಮಾಡುವುದು. ಏಕೆಂದರೆ ಈ ಸಮಯದಲ್ಲಿ ಯಾರಾದರೂ ಹಸಿದವರು ಮನೆಯ ಬೀದಿಯಲ್ಲಿ ಬಂದರೆ ಅವರಿಗೆ ಮೊದಲು ಊಟ ಬಡಿಸಿ, ಆನಂತರ ಯಜಮಾನ ಊಟಮಾಡುವುದು ಆಗಿನ ಪದ್ಧತಿಯಾಗಿತ್ತು. ಇಷ್ಟೇ ಅಲ್ಲದೆ ಇದಕ್ಕೂ ಮೊದಲು ‘ಬಲಿಹರಣ’ ಮಾಡುತ್ತಿದ್ದರು. ಮನೆಯ ಸುತ್ತಮುತ್ತಲಿನ ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡುವುದು ‘ಬಲಿಹರಣ’. ಹೀಗೆ ಜೀವಮಾನದುದ್ದಕ್ಕೂ ಒಳ್ಳೆಯ ಕೆಲಸ ಮಾಡಿದರೆ ಅದರ ಫಲ ಸಾತ್ವಿಕವಾಗುತ್ತದೆ. ಇದರಿಂದ ಈ ಜನ್ಮದಲ್ಲಿ ಜ್ಞಾನ ಗಳಿಸಲು ಆಗದಿದ್ದರೂ ಕೂಡ, ಮುಂದಿನ ಜನ್ಮದಲ್ಲಿ ಆ ಅವಕಾಶ ಒದಗಿ ಬರುತ್ತದೆ. ಜ್ಞಾನವಿದ್ದೂ  ದುಷ್ಕೃತಿಯಾಗಿ ಬದುಕಿದರೆ ಮತ್ತೆ ಹೀನಯೋನಿಯಲ್ಲಿ ಹುಟ್ಟಬೇಕಾಗುತ್ತದೆ.
ಹೋಮ-ಹವನ, ದಾನ-ದಕ್ಷಿಣೆ, ಬ್ರಾಹ್ಮಣಾರಾಧನೆ- ಎಲ್ಲವನ್ನು ಮಾಡಿ, ‘ತಾನು ಎಲ್ಲರಿಗಿಂತ ಮಹಾನ್’ ಎನ್ನುವ ಅಹಂಕಾರ ಬಂದರೆ ಅದು ರಜಸ್ಸಿನ ಕರ್ಮವಾಗುತ್ತದೆ. ಅದರ ಫಲ ಲೋಭ; ದುಃಖ ಬೆರೆತ ಜೀವನ. ಇದರಿಂದ ಪುಣ್ಯ ಕರ್ಮ ಮಾಡಿಯೂ ದುಃಖ ಅನುಭವಿಸಬೇಕಾಗುತ್ತದೆ.  ಅಜ್ಞಾನದಿಂದ, ಯಾರದ್ದೋ ಒತ್ತಡಕ್ಕೆ ಮಾಡುವ ಕರ್ಮದಿಂದ ಎಂದೂ ಜ್ಞಾನ ಬೆಳೆಯುವುದಿಲ್ಲ. ತಿಳಿಗೇಡಿತನವೇ  ತಮೋಗುಣದ ಕರ್ಮಫಲ.     

No comments:

Post a Comment