Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, November 12, 2011

Bhagavad Gita in Kannada Chapter-14 Shloka 01-02


ಅಧ್ಯಾಯ ಹದಿನಾಲ್ಕು

ಗೀತೆಯಲ್ಲಿ ಇಲ್ಲಿಯ ತನಕ ಅಲ್ಲಲ್ಲಿ ಸಾಧನೆಯ ಮಾತು ಬಂದಿದ್ದರೂ ಕೂಡ, ಭಗವಂತನ ಸ್ವರೂಪದ ಮಹಿಮೆಯ ಮಾತು ಹೆಚ್ಚಾಗಿ ಬಂದಿದೆ. ಇಂಥಹ ಭಗವಂತನ ಉಪಾಸನೆಯ ಮುಖಗಳ ವರ್ಣನೆಯನ್ನು ನಾವು ಇನ್ನು ಮುಂದೆ ಕಾಣಬಹುದು. ಹನ್ನೆರಡನೆ ಅಧ್ಯಾಯದಲ್ಲಿ(ಶ್ಲೋ-೦೫) ಕೃಷ್ಣ "ಶ್ರೀತತ್ವದ ಉಪಾಸನೆ ತುಂಬಾ ಕಷ್ಟ, ಇದು ನೇರ ದಾರಿಯನ್ನು ಬಿಟ್ಟು ಬಳಸುದಾರಿಯಲ್ಲಿ ಭಗವಂತನೆಡೆಗೆ ಪಯಣಿಸಿದಂತೆ, ಸಾಧಕರು ಇದನ್ನು ಬಹಳ ಕಷ್ಟದಿಂದ ಸಾಧಿಸಬೇಕು"-ಎನ್ನುವ ಎಚ್ಚರವನ್ನು ಕೊಟ್ಟ. ಹದಿಮೂರನೇ ಅಧ್ಯಾಯದಲ್ಲಿ(ಶ್ಲೋ-೨೬)- "ಸ್ಥಿರ ಮತ್ತು ಚರ ಜೀವಿಗಳಲ್ಲಿ  ಯಾವುದು ಹುಟ್ಟಿದರೂ ಅದು ಕ್ಷೇತ್ರ[ಶ್ರೀತತ್ವ] ಮತ್ತು ಕ್ಷೇತ್ರಜ್ಞ[ಭಗವಂತ]ರ ಸಂಯೋಗದಿಂದಲೆ ಎಂದು ತಿಳಿ"-ಎಂದು ಹೇಳಿದ. ಸಾಮಾನ್ಯವಾಗಿ ಸೃಷ್ಟಿಯ ಮಾತು ಬಂದಾಗ ‘ಭಗವಂತ ಸೃಷ್ಟಿ ಮಾಡಿದ’ ಎನ್ನುತ್ತೇವೆ. ಇಲ್ಲಿ ಎಲ್ಲಿಯೂ ಲಕ್ಷ್ಮಿಯ ಮಾತು ಬರುವುದಿಲ್ಲ. ಆದರೆ ಹಿಂದಿನ ಅಧ್ಯಾಯದಲ್ಲಿ ಕೃಷ್ಣ ಸ್ಪಷ್ಟವಾಗಿ ಹೇಳಿದ: “ಈ ಸೃಷ್ಟಿ ಲಕ್ಷ್ಮೀನಾರಾಯಣರ ದಾಂಪತ್ಯದ ಫಲ” ಎಂದು. ಈ ಕಾರಣದಿಂದ ಸೃಷ್ಟಿ ಮೂಲದ ಚಿಂತನೆಯಲ್ಲಿ ಲಕ್ಷ್ಮೀನಾರಾಯಣರನ್ನು ಒಟ್ಟಿಗೆ ಸ್ತುತಿಸುವುದು ಶ್ರೇಷ್ಠ. ಲಕ್ಷ್ಮಿಯನ್ನು ಸ್ತುತಿಸುವಾಗ ಜೊತೆಗೆ ನಾರಾಯಣನನ್ನು ಸ್ತುತಿಸಿ ಲಕ್ಷ್ಮಿಯ ಸ್ತೋತ್ರ ಮಾಡಬೇಕು ಎನ್ನುವುದನ್ನು ಆಚಾರ್ಯರು ದ್ವಾದಶ ಸ್ತೋತ್ರದಲ್ಲಿ ಸ್ಪಷ್ಟವಾಗಿ ತೋರಿಸಿದ್ದಾರೆ. ಅಲ್ಲಿ ‘ಶ್ರೀಸ್ತುತಿ’ ಎನ್ನುವ ಲಕ್ಷ್ಮೀದೇವಿಯ ಸ್ತುತಿ ಈ ರೀತಿ ಹೇಳುತ್ತದೆ:
ವಿಶ್ವಸ್ಥಿತಿಪ್ರಳಯಸರ್ಗಮಹಾವಿಭೂತಿ ವೃತ್ತಿಪ್ರಕಾಶನಿಯಮಾವೃತಿ ಬಂಧಮೋಕ್ಷಾಃ |
ಯಸ್ಯಾ ಅಪಾಂಗಲವಮಾತ್ರತ ಊರ್ಜಿತಾ ಸಾ ಶ್ರೀಃ ಯತ್ಕಟಾಕ್ಷಬಲವತ್ಯಜಿತಂ ನಮಾಮಿ || ||
ಅಂದರೆ “ಯಾರ ಕಟಾಕ್ಷದ ಬಲದಿಂದ ಇಡಿಯ ಸೃಷ್ಟಿ-ಸ್ಥಿತಿ-ಸಂಹಾರವನ್ನು ಲಕ್ಷ್ಮಿ  ಮಾಡುತ್ತಾಳೋ, ಅಂಥಹ ಲಕ್ಷ್ಮಿಯ ಪತಿಯಾದ ನಾರಾಯಣನಿಗೆ ನಮಸ್ಕಾರ” ಎಂದು. ಇಲ್ಲಿ ಲಕ್ಷ್ಮಿಯನ್ನು ಒಂದು ಸ್ತೋತ್ರದಲ್ಲಿ ಪೂರ್ಣ ವರ್ಣನೆ ಮಾಡಿ, ಅಂಥಹ ಲಕ್ಷ್ಮಿಯ ಪತಿಯಾದ ನಾರಾಯಣನಿಗೆ ನಮಸ್ಕಾರ ಎಂದು ಹೇಳಿದ್ದಾರೆ. ಆದ್ದರಿಂದ ಲಕ್ಷ್ಮೀನಾರಾಯಣರ ಸ್ತುತಿಯೇ ಲಕ್ಷ್ಮಿಸ್ತುತಿ ಹೊರತು ಕೇವಲ ಲಕ್ಷ್ಮಿ ಸ್ತುತಿ ಅಲ್ಲ. ಇದಕ್ಕೆ ಮೂಲ-ಗೀತೆಯ ಹನ್ನೆರಡು, ಹದಿಮೂರು ಮತ್ತು ಹದಿನಾಲ್ಕನೇ ಅಧ್ಯಾಯ. ಹನ್ನೆರಡನೆ ಅಧ್ಯಾಯದಲ್ಲಿ ಕೇವಲ ಲಕ್ಷ್ಮಿ ಉಪಾಸನೆ ಮಾಡಿದರೆ ಖಂಡಿತವಾಗಿ ಆಕೆ ಒಲಿಯಳು ಎನ್ನುವ ಎಚ್ಚರವಿದ್ದರೆ, ಹದಿಮೂರನೇ ಅಧ್ಯಾಯದಲ್ಲಿ  ಈ ಜಗತ್ತು ಲಕ್ಷ್ಮೀ ನಾರಾಯಣರ ಸಂಯೋಗದಿಂದ ರಚನೆಯಾಯಿತು- ಆದ್ದರಿಂದ ನಾವೆಲ್ಲರೂ ಅವರ ಮಕ್ಕಳು ಎನ್ನುವ ಸಂದೇಶವಿದೆ.  ಭಗವಂತನ ಜೊತೆಗೆ ಸೃಷ್ಟಿ ಪ್ರಕ್ರಿಯೆಯಲ್ಲಿ ಲಕ್ಷ್ಮಿಯ ಅನುಸಂಧಾನ ಹೇಗೆ ಅನ್ನುವುದನ್ನು ಹದಿನಾಲ್ಕನೆ ಅಧ್ಯಾಯ ವಿವರಿಸುತ್ತದೆ. ಲಕ್ಷ್ಮಿ ಶ್ರೀ-ಭೂ-ದುರ್ಗ ಈ ಮೂರು ರೂಪದಲ್ಲಿ ಸತ್ವ-ರಜಸ್ಸು-ತಮೋಗುಣಗಳ ನಿಯಾಮಕ ಶಕ್ತಿಯಾದ್ದರಿಂದ-ಅವಳ ಮಕ್ಕಳು ಸಾತ್ವಿಕರು-ರಾಜಸರು-ತಾಮಸರು  ಎನ್ನುವ  ಮೂರು ಬಗೆ. ಈ ವಿಚಾರವನ್ನು ಮೊತ್ತಮೊದಲ ಬಾರಿ ಈ ಅಧ್ಯಾಯದಲ್ಲಿ ಹೇಳಲಾಗಿದೆ. ಹಿಂದಿನ ಯಾವ ಅಧ್ಯಾಯದಲ್ಲಿ ಕೂಡ  ತ್ರೈವಿದ್ಯರ ವಿವರ ಇಷ್ಟು ಸ್ಪಷ್ಟವಾಗಿ ಬಂದಿಲ್ಲ. ನಾವು ಈ ತ್ರಿಗುಣಗಳ  ವಿಶ್ಲೇಷಣೆ ಮಾಡಿ,  ನಮ್ಮಲ್ಲಿರುವ  ರಾಜಸ ಮತ್ತು ತಾಮಸ ಅಂಶವನ್ನು ತಿದ್ದಿಕೊಂಡು, ಹೇಗೆ ಸಾತ್ವಿಕ ದಾರಿಯಲ್ಲಿ ಸಾಧನೆಯನ್ನು ಮಾಡಬಹುದು ಎನ್ನುವ ಅಂಶವನ್ನು ಈ ಅಧ್ಯಾಯದಲ್ಲಿ ಕಾಣಬಹುದು.

ಭಗವಾನುವಾಚ
ಪರಂ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್
ಜ್ ಜ್ಞಾತ್ವಾ ಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ                     

ಭಗವಾನ್ ಉವಾಚ-ಭಗವಂತ ಹೇಳಿದನು:
ಪರಮ್ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಾಮ್  ಜ್ಞಾನಮ್ ಉತ್ತಮಮ್
ತ್  ಜ್ಞಾತ್ವಾ ಮುನಯಃ ಸರ್ವೇ ಪರಾಮ್  ಸಿದ್ಧಿಮ್ ಇತಃ  ಗತಾಃ –ತಿಳಿಯಬೇಕಾದ ಸಂಗತಿಗಳಲ್ಲಿ ಹಿರಿದಾದ ತಿಳಿವನ್ನು ಇನ್ನಷ್ಟು ಹೇಳುತ್ತೇನೆ; ಎಲ್ಲ ಮುನಿಗಳು ಇದನ್ನರಿತು ಇಲ್ಲಿಂದ ಪರಮಪದವನ್ನೈದಿದರು.

ಕೃಷ್ಣ ಹೇಳುತ್ತಾನೆ “ಇನ್ನೂ ಹೇಳುತ್ತೇನೆ” ಎಂದು. ಇದು ಬಹಳ ಮುಖ್ಯವಾದ ಮಾತು. ಸಾಮಾನ್ಯವಾಗಿ ಶಿಷ್ಯರು ಒತ್ತಾಯ ಮಾಡಿದರೂ ಗುರುಗಳು ಹೇಳುವುದಿಲ್ಲ. ಗುರುಗಳಿಗೆ ಶಿಷ್ಯನ ಜ್ಞಾನ ತೃಷೆಯನ್ನು ಕಂಡು ಹೇಳಬೇಕು ಅನ್ನಿಸಬೇಕು ಮತ್ತು ಅವರು ಖುಷಿಯಿಂದ ಹೇಳಬೇಕು. ಆಗ ಶಿಷ್ಯನಿಗೆ ಆ ವಿದ್ಯೆ ಫಲಿಸುತ್ತದೆ. ಹೀಗೆ ಜ್ಞಾನ ತೃಷೆಯನ್ನು ಕಂಡು ಖುಷಿಯಿಂದ ಗುರು ಹೇಳುವ ಜ್ಞಾನ ನಿಜವಾದ ಜ್ಞಾನ. ಇಲ್ಲಿ ಕೃಷ್ಣ ತಾನಾಗಿಯೇ ಅರ್ಜುನನಿಗೆ ಅಪೂರ್ವವಾದ ಜ್ಞಾನವನ್ನು ಹೇಳುತ್ತಿದ್ದಾನೆ. ಕೃಷ್ಣ ಹೇಳುತ್ತಾನೆ: “ಹಿಂದೆ ಹೇಳಿದ ಕ್ಷೇತ್ರ(ಪ್ರಕೃತಿ-ಲಕ್ಷ್ಮಿ) ಮತ್ತು ಕ್ಷೇತ್ರಜ್ಞ(ನಾರಾಯಣ)ರ ವಿಚಾರವನ್ನು ಇನ್ನೂ ವಿವರವಾಗಿ ಹೇಳುತ್ತೇನೆ. ಏಕೆಂದರೆ ಅದು ತಿಳಿದುಕೊಳ್ಳಬೇಕಾದ ವಿಚಾರದಲ್ಲೇ ಅತ್ಯಂತ ಮುಖ್ಯವಾದ ವಿಚಾರ” ಎಂದು. ಈ ಜಗತ್ತಿನ ಸೃಷ್ಟಿಯ ಹಿಂದೆ ತಂದೆ-ತಾಯಿಯಾಗಿ ಲಕ್ಷ್ಮೀ-ನಾರಾಯಣರಿದ್ದಾರೆ. ಆದ್ದರಿಂದ ಕೇವಲ ತಂದೆಯ ಸ್ಮರಣೆಯಾಗಲಿ ಅಥವಾ ಕೇವಲ ತಾಯಿಯ ಸ್ಮರಣೆಯಾಗಲಿ ಮಾಡುವುದಕ್ಕಿಂತ, ತಂದೆ-ತಾಯಿಯರ ಸ್ಮರಣೆಯನ್ನು ತಿಳಿದು ಮಾಡುವುದು ಒಳಿತು. ಕೃಷ್ಣ ಹೇಳುತ್ತಾನೆ: “ಈ ವಿಚಾರವನ್ನು ಇನ್ನೂ ವಿಸ್ತಾರವಾಗಿ ನಿನಗೆ ಹೇಳುತ್ತೇನೆ. ಏಕೆಂದರೆ ಇದು ಒಬ್ಬ ಮೋಕ್ಷ ಸಾಧನೆ ಮಾಡುವ ವ್ಯಕ್ತಿ ತಿಳಿದುಕೊಳ್ಳಲೇಬೇಕಾದ ವಿಷಯ” ಎಂದು. ಲಕ್ಷ್ಮೀ-ನಾರಾಯಣರನ್ನು ಸೃಷ್ಟಿ ಮೂಲದಲ್ಲಿ ಚಿಂತನೆ ಮಾಡದೆ ಮೋಕ್ಷ ಸಾಧನೆ ಅಸಾಧ್ಯ. “ಈ ಸಾಧನಾ ಭೂಮಿಯಲ್ಲಿ ಹುಟ್ಟಿಬಂದು ಬ್ರಹ್ಮಸಾಕ್ಷಾತ್ಕಾರ ಪಡೆದ ಮುನಿಗಳೂ ಕೂಡ, ಇದನ್ನು ತಿಳಿದೇ ಜೀವನದ ಪರಮ ಸಿದ್ಧಿಯಾದ ಮೋಕ್ಷವನ್ನು ಪಡೆದರು” ಎನ್ನುತ್ತಾನೆ ಕೃಷ್ಣ.  ಇದನ್ನೇ ಮುಂದಿನ ಶ್ಲೋಕದಲ್ಲಿ ಬಹಳ ಸ್ಪಷ್ಟವಾಗಿ ವಿವರಿಸಲಾಗಿದೆ.

ಇದಂ ಜ್ಞಾನಮಪಾಶ್ರಿತ್ಯ ಮಮ ಸಾಧರ್ಮ್ಯಮಾಗತಾಃ        
ಸರ್ಗೇSಪಿ ನೋಪಜಾಯಂತೇ ಪ್ರಯೇ ನ ವ್ಯಥಂತಿ                 

ಇದಮ್  ಜ್ಞಾನಮ್ ಅಪಾಶ್ರಿತ್ಯ ಮಮ ಸಾಧರ್ಮ್ಯಮ್ ಆಗತಾಃ        
ಸರ್ಗೇಪಿ ನ ಉಪಜಾಯಂತೇ ಪ್ರಯೇ ನ ವ್ಯಥಂತಿ –ಈ ತಿಳಿವು ಗಳಿಸಿ ದುಗುಡ ದೂರರಾಗಿ ನನ್ನನ್ನು ಹೋಲುವವರು ಸೃಷ್ಟಿಕಾಲದಲ್ಲಿ ಹುಟ್ಟುವುದಿಲ್ಲ; ಪ್ರಳಯಕಾಲದಲ್ಲಿ ನೋಯುವುದಿಲ್ಲ.

ಈ ಶ್ಲೋಕದಲ್ಲಿ ಬಂದಿರುವ ‘ಅಪಾಶ್ರಿತ್ಯ’ ಎನ್ನುವ ಪದ ವಿಶೇಷ ಅರ್ಥವನ್ನು ಕೊಡುವ ಪದ. ‘ಅನ್ಯತ್ ಸರ್ವಂ ಅಪಾಹಾಯಾSಶ್ರಯಣಂ-ಅಪಾSಶ್ರಯಣಃ’  “ಇನ್ಯಾರೂ ಇಲ್ಲ-ನೀನೇ ನನಗೆ ಆಶ್ರಯ” ಎಂದು ಭಗವಂತನಲ್ಲಿ ಆಶ್ರಯ ಹೊಂದುವುದನ್ನು ಇಲ್ಲಿ   ‘ಅಪಾಶ್ರಿತ್ಯ’ ಎಂದಿದ್ದಾರೆ.  ದ್ವಾದಶ ಸ್ತೋತ್ರದಲ್ಲಿ ಹೇಳುವಂತೆ:
ಕುರು ಭುಂಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾ ಸತತಂ |
ಹರಿರೇವ ಪರೋ ಹರಿರೇವ ಗುರುಃ ಹರಿರೇವ ಜಗತ್ಪಿತೃಮಾತೃಗತಿಃ || ||

ಇದು ‘ಅಪಾಶ್ರಿತ್ಯ’ ಪದದ ಮೂಲ ಅರ್ಥವನ್ನು ಹೇಳುತ್ತದೆ. ಇಲ್ಲಿ ಕೃಷ್ಣ ಹೇಳುತ್ತಾನೆ: “ಲಕ್ಷ್ಮೀ-ನಾರಾಯಣರು ಜಗತ್ತಿನ ತಂದೆ ತಾಯಿ-ಅನ್ನುವ ಜ್ಞಾನದಿಂದ ನನ್ನನ್ನು ಉಪಾಸನೆ ಮಾಡುವವರು, ನನ್ನಂತೆ ದಿವ್ಯ ಸ್ವಭಾವವನ್ನು ಪಡೆಯುತ್ತಾನೆ” ಎಂದು. ಇಂಥವರು ಸರ್ವದೋಷವನ್ನು ಕಳೆದುಕೊಂಡು, ತ್ರಿಗುಣಾತೀತ ಸ್ಥಿತಿಯಲ್ಲಿ ಭಗವಂತನನ್ನು ಸೇರಿ ಭಗವಂತನಲ್ಲಿ ನೆಲೆಸುತ್ತಾರೆ. ಈ ಜಗತ್ತು ಸೃಷ್ಟಿಯಾಗುವುದೂ ಲಕ್ಷ್ಮೀ-ನಾರಾಯಣರಿಂದ ಮತ್ತು ಹೋಗಿ ಸೇರುವುದೂ ಅವರನ್ನೆ. ಇದನ್ನು ತಿಳಿದವನು ಹುಟ್ಟು ಸಾವನ್ನು ದಾಟಬಲ್ಲ. ಆತ ಮರಳಿ ಎಂದೂ ಈ ಸಂಸಾರ ಬಂಧದಲ್ಲಿ ಸೀಲುಕುವುದಿಲ್ಲ. ಇಲ್ಲಿ ‘ಉಪಜಾಯತೆ’ ಎನ್ನುವ ಪದ ಬಳಕೆಯಾಗಿದೆ.  ಸಂಸ್ಕೃತದಲ್ಲಿ ‘ಉಪ’ ಅಂದರೆ ‘ಉತ್ಕೃಷ್ಟ’.[ಇದು ಆಂಗ್ಲ ಭಾಷೆಯಲ್ಲಿ ‘up/upper’ ಆದರೆ,  ಹಿಂದಿಯಲ್ಲಿ ‘ऊपर’ ಆಗಿದೆ. ಜರ್ಮನ್ ಭಾಷೆಯಲ್ಲಿ ಇದು  ‘über’. ಕನ್ನಡದಲ್ಲಿ ಉಪ್ಪರಿಗೆ ಅನ್ನುವಲ್ಲಿ ‘ಉಪ’ - ‘’ಮೇಲೆ’ ಎನ್ನುವ ಅರ್ಥವನ್ನು ಕೊಡುತ್ತದೆ].  ಆದ್ದರಿಂದ ‘ಉಪಜಾಯತೆ’ ಎಂದರೆ ಉತ್ಕೃಷ್ಟವಾದ ಜನನ. ಭಗವಂತನ ಅರಿವಿಗೋಸ್ಕರ ಈ ದೇಹ ಧಾರಣೆ ಮಾಡಿ ಹುಟ್ಟುವುದು ಎತ್ತರದ ಹುಟ್ಟು. ಅಧ್ಯಾತ್ಮದ ಸಾಧನೆಯಿಂದ ಎತ್ತರಕ್ಕೇರುವ ಜನನ  ‘ಉಪಜನನ’. ತನ್ನ ಜೀವಮಾನದಲ್ಲಿ ಈ ಸೃಷ್ಟಿಯ ಮೂಲದ ಜ್ಞಾನವನ್ನು ಗಳಿಸಿದವ ಮತ್ತೆ ಮರಳಿ ಹುಟ್ಟಲಾರ. ಆತ ಭಗವಂತನಲ್ಲಿ ನಿರಂತರ ವಾಸ ಮಾಡುವ ಪರಮ ಪದವನ್ನು ಪಡೆಯುತ್ತಾನೆ. 

No comments:

Post a Comment