Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Sunday, November 13, 2011

Bhagavad GitA Kannada Chapter-14 Shloka 3-4


ಮಮ ಯೋನಿರ್ಮಹದ್ ಬ್ರಹ್ಮ ತಸ್ಮಿನ್ ಗರ್ಭಂ ದಧಾಮ್ಯಹಮ್
ಸಂಭವಃ ಸರ್ವಭೂತಾನಾಂ ತತೋ ಭವತಿ ಭಾರತ                                   

ಮಮ ಯೋನಿಃ ಮಹತ್ ಬ್ರಹ್ಮ ತಸ್ಮಿನ್ ಗರ್ಭಮ್  ದಧಾಮಿ ಅಹಮ್
ಸಂಭವಃ ಸರ್ವಭೂತಾನಾಮ್  ತತಃ  ಭವತಿ ಭಾರತ –ಚೇತನ ಪ್ರಕೃತಿ ನನ್ನ ಅರ್ಧಾಂಗಿ. ಅವಳಲ್ಲಿ ಸೃಷ್ಟಿಯ ಬೀಜವನ್ನು ಬಿತ್ತುತ್ತೇನೆ. ಭಾರತ, ಎಲ್ಲ ಜೀವಿಗಳ ಹುಟ್ಟು ಅದರ ಮೂಲಕ ನಡೆಯುತ್ತದೆ.

ಇಲ್ಲಿ ಕೃಷ್ಣ ಬಹಳ ವಿಚಿತ್ರವಾದ ಒಂದು ಸಂಗತಿಯನ್ನು ಹೇಳುತ್ತಾನೆ. ಈ ಶ್ಲೋಕ ಅರ್ಥವಾಗಬೇಕಿದ್ದರೆ ನಾವು ಮೊದಲು ‘ಭಾ-ರತ’ ರಾಗಬೇಕು. ‘ರತ’ ಅಂದರೆ ತತ್ಪರತೆ. ನಾವು   ಭಗವಂತನಲ್ಲಿ ರತರಾಗಬೇಕು; ಜ್ಞಾನದ ಮಾರ್ಗದಲ್ಲಿ ರತರಾಗಬೇಕು; ಭಕ್ತಿಯಿಂದ ಭರಿತರಾಗಿ ತುಂಬಿದ ಕೊಡವಾಗಬೇಕು; ವಿನೀತರಾಗಿರಬೇಕು. ಆಗ ಸೃಷ್ಟಿಯ ಈ ಗುಟ್ಟು ಅರ್ಥವಾಗುತ್ತದೆ.
ಯಾವುದೇ ಒಂದು ವಸ್ತು ಸೃಷ್ಟಿಯಾಗಬೇಕಿದ್ದರೂ ಅಲ್ಲಿ ಒಂದಕ್ಕಿಂತ  ಹೆಚ್ಚು ಕಾರಣಗಳು ಬೇಕು. ಜಡವಾದರೆ ಅಲ್ಲಿ ಎರಡು ಕಾರಣಗಳು ಅಗತ್ಯ. ಉದಾಹರಣೆಗೆ ಒಂದು ಮಡಕೆ ಸೃಷ್ಟಿಯಾಗಬೇಕಿದ್ದರೆ ಅಲ್ಲಿ ಮೂಲದ್ರವ್ಯ(raw materials) ಬೇಕು ಮತ್ತು ರೂಪ ಕೊಡುವ ಕುಂಬಾರ ಬೇಕು. ವನಸ್ಪತಿಗಳ ಸೃಷ್ಟಿ- ಜಡದೊಳಗೆ ಭಗವಂತ ಜೀವವನ್ನು ಸೇರಿಸುವುದರ ಮೂಲಕ ಆಗುತ್ತದೆ. ಆದರೆ ಗರ್ಭದ ಮೂಲಕ ಹುಟ್ಟುವ  'ಚೇತನ ಸೃಷ್ಟಿ'ಗೆ ಜಡದ್ರವ್ಯದೊಂದಿಗೆ ಸೃಷ್ಟಿ ಮಾಡತಕ್ಕಂತಹ ಒಂದು ಗಂಡು ಮತ್ತು ಒಂದು ಹೆಣ್ಣು ಬೇಕು.  ಇಬ್ಬರ ಸಮಾಗಮದಿಂದ ಮೂರನೆಯದು ಸೃಷ್ಟಿಯಾಗುತ್ತದೆ.
ಈ ಶ್ಲೋಕದಲ್ಲಿ  ‘ಮಮ ಯೋನಿಃ ಮಹತ್ ಬ್ರಹ್ಮ’ ಎನ್ನುವಲ್ಲಿ ಬಂದಿರುವ 'ಯೋನಿ' ಮತ್ತು 'ಬ್ರಹ್ಮ' ಎನ್ನುವ ಪದಗಳು ಅನೇಕ ಅರ್ಥವನ್ನು ಕೊಡುವ ಪದಗಳು. ಯಾವ ಸಂದರ್ಭದಲ್ಲಿ ಯಾವ ಅರ್ಥ ಹೊಂದಿಕೆಯಾಗುತ್ತದೆ ಎಂದು ತಿಳಿದು ನಾವು  ಶ್ಲೋಕವನ್ನು ಅರ್ಥ ಮಾಡಿಕೊಳ್ಳಬೇಕು. ಯೋನಿ- ಕಾರಣ, ಉತ್ಪತ್ತಿಸ್ಥಾನ, ಹೆಂಡತಿ ಇತ್ಯಾದಿ ಅರ್ಥವನ್ನು ಕೊಡುತ್ತದೆ. ಅದೇ ರೀತಿ ಬ್ರಹ್ಮ- ಜೀವ, ಚತುರ್ಮುಖ, ಲಕ್ಷ್ಮಿ, ಭಗವಂತ ಇತ್ಯಾದಿ ಅನೇಕ ಅರ್ಥವನ್ನು ಕೊಡುತ್ತದೆ.  ಈ ಶ್ಲೋಕದಲ್ಲಿ  ಯೋನಿ ಅಂದರೆ ಹೆಂಡತಿ; ‘ಮಹತ್ ಬ್ರಹ್ಮ’ ಎಂದರೆ ಚತುರ್ಮುಖನಿಗೂ ತಾಯಿಯಾಗಿರುವ ಶ್ರೀಲಕ್ಷ್ಮಿ. ಕೃಷ್ಣ ಹೇಳುತ್ತಾನೆ “ ನಾನು ನನ್ನ ಪತ್ನಿಯಾದ ಚಿತ್ ಪ್ರಕೃತಿ (ಲಕ್ಷ್ಮಿ)ಯಲ್ಲಿ ಗರ್ಭದಾನ ಮಾಡುತ್ತೇನೆ. ಆ ಗರ್ಭ ಬೆಳೆದು ಸಮಸ್ತ ಜೀವಜಾತಗಳು ಸೃಷ್ಟಿಯಾಗುತ್ತವೆ” ಎಂದು. ಇದು ನಮಗೆ ಹೊಸ ಸಂಗತಿ. ಏಕೆಂದರೆ ಋಗ್ವೇದದಲ್ಲಿ ಚತುರ್ಮುಖನ ಸೃಷ್ಟಿಯ ಬಗ್ಗೆ ಈ ರೀತಿ ಹೇಳಲಾಗಿದೆ:
ತಮಿದ್ಗರ್ಭಂ ಪ್ರಥಮಂ ದಧ್ರ ಆಪೋ ಯತ್ರ ದೇವಾಃ ಸಮಗಚ್ಛಂತ ವಿಶ್ವೇ|
ಅಜಸ್ಯ ನಾಭಾವಧ್ಯೇಕಮರ್ಪಿತಂ ಯಸ್ಮಿನ್ವಿಶ್ವಾನಿ ಭುವನಾನಿ ತಸ್ಥುಃ ||  ೧೦.೮೨.೦೬||
ಇಲ್ಲಿ  “ಭಗವಂತನ ನಾಭಿ ಕಮಲದಿಂದ ಬ್ರಹ್ಮ ಹೊರ ಬಂದ” ಎಂದು ಹೇಳಲಾಗಿದೆ. ಚತುರ್ಮುಖನಿಂದ ಜೀವ  ಸೃಷ್ಟಿ ನಿರ್ಮಾಣವಾಯಿತು ಆದ್ದರಿಂದ ಚತುರ್ಮುಖ ಜಗತ್ತಿನ ತಂದೆ ಎನ್ನುವ ವಿಚಾರವೂ ನಮಗೆ ತಿಳಿದಿದೆ. ವೇದದಲ್ಲಿ ಇನ್ನೊಂದು ಕಡೆ(ಅಂಭ್ರಿಣೀಸೂಕ್ತ) ಹೀಗೆ ಹೇಳಿದ್ದಾರೆ:
ಅಹಂ ಸುವೇ ಪಿತರಮಸ್ಯ ಮೂರ್ಧನ್ ಮಮ ಯೋನಿರಪ್ಸ್ವ‌೦ತಃ ಸಮುದ್ರೇ |
ತತೋ ವಿ ತಿಷ್ಠೇ ಭುವನಾನು ವಿಶ್ವೋ-ತಾಮೂಂ ದ್ಯಾಂ ವರ್ಷ್ಮಣೋಪ ಸ್ಪೃಶಾಮಿ ||||
ಇದು ಲಕ್ಷ್ಮಿ ಹೇಳುವ ಮಾತು: “ನಾನು ಈ ಜಗತ್ತಿನ ತಂದೆಯಾದ ಚತುರ್ಮುಖನನ್ನು ನನ್ನ ನೆತ್ತಿ(ಮೂರ್ಧನ್-ಬೈತಲೆ)ಯಿಂದ ಹೆತ್ತೆ. ನನಗೂ ಕಾರಣನಾದ ಭಗವಂತ ಸಮುದ್ರದಲ್ಲಿದ್ದಾನೆ ” ಎಂದು.  ಸಮಸ್ತ ಬ್ರಹ್ಮಾಂಡದ ಸೃಷ್ಟಿ ಶಿವನಿಂದಾಯಿತು ಎಂದು ಇನ್ನೊಂದೆಡೆ ಹೇಳುತ್ತಾರೆ. ಶಾಸ್ತ್ರ ಪ್ರಕ್ರಿಯೆ ಗೊತ್ತಿಲ್ಲದಿದ್ದರೆ ಇದೆಲ್ಲವೂ ಬರಿಯ ಗೊಂದಲ. ಮೋಕ್ಷ ಸಾಧನೆ ಮಾಡುವವರು ಇದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಬೇಕು-ಆಗ ಸತ್ಯ ಸಾಕ್ಷಾತ್ಕಾರವಾಗುತ್ತದೆ.
ಜೀವ-ಪ್ರಕೃತಿ-ಭಗವಂತ ಅನಾದಿ ಅನಂತ. ಸೃಷ್ಟಿ ಪೂರ್ವದಲ್ಲಿ ಸಮಸ್ತ ಪ್ರಪಂಚ ಸೂಕ್ಷ್ಮ ರೂಪದಲ್ಲಿ ಭಗವಂತನ ಉದರದಲ್ಲಿತ್ತು. ಇದನ್ನು ಇನ್ನೂ ಸೂಕ್ಷ್ಮವಾಗಿ ನೋಡಿದರೆ- ಸಮಸ್ತ ವಿಶ್ವ ಲಕ್ಷ್ಮೀದೇವಿಯ ಉದರದಲ್ಲಿತ್ತು ಮತ್ತು ಲಕ್ಷ್ಮಿ  ಭಗವಂತನ ಉದರದಲ್ಲಿದ್ದಳು. ಭಗವಂತ ಲಕ್ಷ್ಮಿಯ ಉದರದಲ್ಲಿ ಸಮಸ್ತ ಜೀವಜಾತಗಳ ಬೀಜಕ್ಷೇಪ ಮಾಡಿದ. ಕಮಲ ರೂಪದ ಇಡೀ ಬ್ರಹ್ಮಾಂಡ ಲಕ್ಷ್ಮಿಯ ನೆತ್ತಿಯ ಮೂಲಕ ಭಗವಂತನ ನಾಭಿಯಿಂದ ಹೊರಚಿಮ್ಮಿತು. ಅದರಲ್ಲಿ ಚತುರ್ಮುಖನಿದ್ದ ಜೊತೆಗೆ ಅವ್ಯಕ್ತ ರೂಪದಲ್ಲಿ ಸಮಸ್ತ ದೇವತೆಗಳೂ, ಜೀವಜಾತರೂ ಹುಟ್ಟಿದರು. ಈ ಕಾರಣದಿಂದ ಲಕ್ಷ್ಮೀನಾರಾಯಣರು ಸಮಸ್ತ ಜಗತ್ತಿನ ತಾಯಿ-ತಂದೆ. ಇಲ್ಲಿ ನಾವು ಅರಿಯಬೇಕಾದ ಒಂದು ಮುಖ್ಯ ವಿಚಾರವೆಂದರೆ-ಸೃಷ್ಟಿ ಕ್ರಿಯೆ ಹಂತ ಹಂತವಾಗಿ ನಡೆದ ಕ್ರಿಯೆ. ಲಕ್ಷ್ಮೀ ನಾರಾಯಣರ ಸಮಾಗಮದಿಂದ ನಿರ್ಮಾಣವಾದದ್ದು ಕೇವಲ ಅವ್ಯಕ್ತ ಸೃಷ್ಟಿ. ನಂತರ ಚತುರ್ಮುಖ ಬ್ರಹ್ಮ ಈ ಸೂಕ್ಷ್ಮರೂಪಿ ಅವ್ಯಕ್ತ ಪ್ರಪಂಚಕ್ಕೆ(ಜೀವ ಜಾತಕ್ಕೆ) ಒಂದು ಮೂಲ ಸ್ಥೂಲರೂಪವನ್ನು ಕೊಟ್ಟು ಜಗತ್ತಿನ ಪಿತಾಮಹನೆನಿಸಿದ. ತದನಂತರ ಶಿವನಿಂದ ಈ ಪ್ರಪಂಚ ಪೂರ್ಣ ಸ್ಥೂಲರೂಪವನ್ನು ಪಡೆಯಿತು. ಈ ಪ್ರಕ್ರೀಯೆಯನ್ನು ನಾವು ಅರ್ಥ ಮಾಡಿಕೊಂಡರೆ ಇಲ್ಲಿ ಯಾವುದೇ ಗೊಂದಲವಿಲ್ಲ. ಚತುರ್ಮುಖ ಲಕ್ಷ್ಮಿಯ ನೆತ್ತಿಯಿಂದ ಹುಟ್ಟಿದ್ದು ಹೌದು; ಆತ ಭಗವಂತನ ನಾಭಿಯಿಂದ ಹುಟ್ಟಿರುವುದೂ ಹೌದು; ಆತ ಜಗತ್ತಿನ ತಂದೆ ಹೌದು; ಶಿವನಿಂದ ಈ ಸ್ಥೂಲ ಪ್ರಪಂಚ ನಿರ್ಮಾಣವಾದದ್ದೂ ಹೌದು; ಲಕ್ಷ್ಮೀ ನಾರಾಯಣರು ಸಮಸ್ತ ಜೀವಜಾತದ ತಾಯಿ-ತಂದೆ ಕೂಡ ಹೌದು. ಈ ಕುರಿತ ವಿವರವನ್ನು 'ಮಹಾಭಾರತ ತಾತ್ಪರ್ಯ ನಿರ್ಣಯ'ದಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ.
 ಒಂದು ಚೇತನ[ಭೂತಿ(ಉನ್ನತಿ) ಉಳ್ಳ ಜೀವ)ದ ಸೃಷ್ಟಿಗೆ ಒಂದು ಗಂಡು ಒಂದು ಹೆಣ್ಣಿನ ಸಮಾಗಮ ಅಗತ್ಯ. ಇದು ಸೃಷ್ಟಿ ಆರಂಭದಿಂದಲೇ ಬೆಳೆದುಕೊಂಡು ಬಂದ ಸಂಪ್ರದಾಯ. ಜಗತ್ತಿನ ಎಲ್ಲಾ ಸೃಷ್ಟಿಯ ಹಿಂದೆ ಲಕ್ಷ್ಮೀನಾರಾಯಣರು ತಂದೆ ತಾಯಿಯಾಗಿ ನಿಂತಿದ್ದಾರೆ. ಈ ವಿಷಯವನ್ನು ಇನ್ನೂ ಸ್ಪಷ್ಟವಾಗಿ ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.

ಸರ್ವಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ
ತಾಸಾಂ ಬ್ರಹ್ಮ ಮಹದ್ ಯೋನಿರಹಂ ಬೀಜಪ್ರದಃ ಪಿತಾ                

ಸರ್ವಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ
ತಾಸಾಮ್  ಬ್ರಹ್ಮ ಮಹತ್  ಯೋನಿಃ ಅಮ್ ಬೀಜಪ್ರದಃ ಪಿತಾ ಕೌಂತೇಯ, ಯಾವೆಲ್ಲ ಬಸಿರುಗಳಲ್ಲಿ ಏನೆಲ್ಲ ರೂಪಗಳು ರೂಪುಗೊಳ್ಳುತ್ತವೆ- ಅವುಗಳಿಗೆಲ್ಲ ಚೇತನ ಪ್ರಕೃತಿಯೆ ತಾಯಿ; ನಾನೆ ಬೀಜ ಬಿತ್ತುವ ತಂದೆ.

ಕೇವಲ ದೇವತೆಗಳು, ಮಾನವರಷ್ಟೇ ಅಲ್ಲ. ಸಮಸ್ತ ಜೀವಜಾತದ ಹುಟ್ಟಿನ ಹಿಂದೆ ತಂದೆ ತಾಯಿಯಾಗಿ ಲಕ್ಷ್ಮೀ-ನಾರಾಯಣರಿದ್ದಾರೆ. ಎಲ್ಲವುದರ ತಾಯಿ ಚೇತನ ಪ್ರಕೃತಿ ಲಕ್ಷ್ಮಿ. ಬೀಜ ಬಿತ್ತುವ ತಂದೆ ನಾರಾಯಣ. ಮುಂಡಕ ಉಪನಿಷತ್ತಿನಲ್ಲಿ ಹೇಳುವಂತೆ:
ಪುಮಾನ್ ರೇತಃ ಸಿಂಚತಿ ಯೋಷಿತಾಯಾಂ ಬಹ್ವೀಃ ಪ್ರಜಾಃ ಪುರುಷಾತ್ ಸಂಪ್ರಸೂತಾಃ || ೨.೨.||
ಇಲ್ಲಿ 'ಪುಮಾನ್' ಎಂದರೆ ಗಂಡಿನಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಮತ್ತು  'ಯೋಷಿತಾ' ಎಂದರೆ ಹೆಣ್ಣಿನಲ್ಲಿ ವಿಶೇಷವಾಗಿ ಸನ್ನಿಹಿತಳಾಗಿರುವ ಲಕ್ಷ್ಮಿ. ಹೇಗೆ ಹೊಲದಲ್ಲಿ ಬೀಜ ಬಿತ್ತಿದರೆ ಅದು ಅಲ್ಲಿ ನಿಜವಾದ ರೂಪವನ್ನು ತಾಳುತ್ತದೋ, ಹಾಗೆ ಭಗವಂತ ಜಡಪ್ರಕೃತಿಯ ಅಭಿಮಾನಿನಿಯಾದ ಶ್ರೀಲಕ್ಷ್ಮಿಯಲ್ಲಿ ಬೀಜಪ್ರದ ಮಾಡುತ್ತಾನೆ. ತಾಯಿ ಲಕ್ಷ್ಮಿ ಆ ಬೀಜಕ್ಕೆ ಒಂದು ಆಕಾರ ಕೊಡುತ್ತಾಳೆ. ಈ ಅನುಸಂಧಾನ ಎಷ್ಟು ಭವ್ಯ. ಈ ಕಾರಣಕ್ಕಾಗಿ  ಹಿಂದಿನ ಕಾಲದ ಶಾಸ್ತ್ರಕಾರರು ಗರ್ಭಿಣಿ ಹೆಣ್ಣಿನ ದೇಹವನ್ನು ದೇವಾಲಯ ಎಂದೂ, ಆ ಗರ್ಭಿಣಿಯ ಗರ್ಭವಿರುವ ಸ್ಥಳ ಗರ್ಭಗುಡಿ ಎಂತಲೂ, ಆ ಗರ್ಭದ ಒಳಗೆ ಸನ್ನಿಹಿತನಾಗಿ ಬೆಳೆಸುತ್ತಿರುವವ  ಭಗವಂತ ಎಂತಲೂ ಗೌರವಿಸುತ್ತಿದ್ದರು. ಇದು ನಮ್ಮ ಪ್ರಾಚೀನರು ಪ್ರತಿಯೊಂದು ಕ್ರಿಯೆಯಲ್ಲೂ ಭಗವಂತನನ್ನು ಅನುಸಂಧಾನ ಮಾಡುವ ಭವ್ಯತೆ. ಹೆಣ್ಣು ದೇವಾಲಯವಾಗುವುದು ಆಕೆ ಗರ್ಭಿಣಿಯಾದಾಗ. ಹಾಗಾಗಿ ಹೆಣ್ಣಿನ ಸರ್ವ ಶ್ರೇಷ್ಠ ಭಯಕೆ ತಾನು ತಾಯಿಯಾಗಬೇಕು ಎನ್ನುವುದು. ಆಕೆಯ ಬಯಕೆಯ ಕೊನೆಯ ಗುರಿ ಮಾತೃತ್ವ. ಲಕ್ಷ್ಮಿ ಆಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸನ್ನಿಹಿತಳಾಗುವುದು ಆಕೆ ಗರ್ಭವತಿಯಾದಾಗ.  ಈ ಕಾರಣದಿಂದ ದಾಂಪತ್ಯ ಅನ್ನುವುದು ಲಕ್ಷ್ಮೀನಾರಾಯಣರ ಆರಾಧನೆ. ದಾಂಪತ್ಯದಲ್ಲಿ ಗಂಡು ಹೆಣ್ಣಿನ ಸಮಾಗಮ ಎನ್ನುವುದು ಲಕ್ಷ್ಮೀ ನಾರಾಯಣರ ಸಮಾಗಮ. ಇಲ್ಲಿ ನಮ್ಮ ಭಾಗ್ಯ ಎಂದರೆ ನಮ್ಮನ್ನು ಮಾಧ್ಯಮವಾಗಿ ಬಳಸಿ ಭಗವಂತ ಸೃಷ್ಟಿ ಮಾಡುವುದು. ಈ ರೀತಿ ಸೃಷ್ಟಿಯಾಗುವಾಗ  ಇಲ್ಲಿ ಬೇಕಾಗುವ ಮೂಲದ್ರವ್ಯದ ವಿಸ್ತಾರವಾದ ವಿವರಣೆಯನ್ನು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ನೀಡಿದ್ದಾನೆ.   

No comments:

Post a Comment