Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Showing posts with label Chapter-14. Show all posts
Showing posts with label Chapter-14. Show all posts

Friday, November 25, 2011

Bhagavad GitA in Kannada Chapter-14 Shloka 26-27


ಇಲ್ಲಿಯ ತನಕ ತ್ರಿಗುಣಗಳ ಬಗ್ಗೆ ಮತ್ತು ತ್ರಿಗುಣಾತೀತರ ಸ್ವಭಾವದ ಬಗ್ಗೆ ವಿವರಿಸಿದ ಕೃಷ್ಣ, ಕೊನೆಯ ಎರಡು ಶ್ಲೋಕದಲ್ಲಿ ನಾವು ತ್ರಿಗುಣಾತೀತರಾಗುವ ಬಗೆ ಹೇಗೆ ಎನ್ನುವುದನ್ನು ವಿವರಿಸುತ್ತಾನೆ. ನಮ್ಮ ಎಲ್ಲ ಪ್ರವೃತ್ತಿಯೂ ಈ ಮೂರು ಗುಣಗಳ ಪರಿಮಿತಿಯಲ್ಲಿ ಇರುವಾಗ ತ್ರಿಗುಣವನ್ನು ಮೀರಿ ನಿಲ್ಲುವುದು ನಮಗೆ ಕಲ್ಪನಾತೀತ. ಹಾಗಾಗಿ ಇಲ್ಲಿ ಕೃಷ್ಣ ನಮಗೆ ತ್ರಿಗುಣಾತೀತರಾಗಲು ಇರುವ ಏಕಮಾತ್ರ ಮಾರ್ಗವನ್ನು ವಿವರಿಸುತ್ತಾನೆ.

ಮಾಂ ಚ ಯೋSವ್ಯಭಿಚಾರೇಣ ಭಕ್ತಿಯೋಗೇನ ಸೇವತೇ       ।
ಸ ಗುಣಾನ್ ಸಮತೀತ್ಯೈತಾನ್ ಬ್ರಹ್ಮಭೂಯಾಯ ಕಲ್ಪತೇ              ॥೨೬॥

ಮಾಮ್ ಚ ಯಃ ಅವ್ಯಭಿಚಾರೇಣ ಭಕ್ತಿಯೋಗೇನ ಸೇವತೇ    ।
ಸಃ ಗುಣಾನ್ ಸಮತೀತ್ಯ ಏತಾನ್ ಬ್ರಹ್ಮಭೂಯಾಯ ಕಲ್ಪತೇ – ನನ್ನನ್ನು ಎಡೆಬಿಡದೆ ಭಕ್ತಿಯಿಂದ ಆರಾಧಿಸುವವನು ಈ ಗುಣಗಳ ಕಟ್ಟನ್ನು ಹರಿದು, ಚೇತನ ಪ್ರಕೃತಿಯಂತೆ ಭಗವಂತನ ಭಕ್ತಿಗೆ ಪಾತ್ರನಾಗುತ್ತಾನೆ.[ಚೇತನ ಪ್ರಕೃತಿಯನ್ನು ಸೇರುತ್ತಾನೆ].

ನಾವು ನಾವಾಗಿ ತ್ರಿಗುಣಾತೀತರಾಗಬೇಕು ಎಂದು ಪ್ರಯತ್ನಿಸಿದರೆ ಆ ಪ್ರಯತ್ನದಲ್ಲಿ ನಾವು ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಎಲ್ಲ ಯೋಚನೆ ತ್ರಿಗುಣದಲ್ಲೇ ಸುತ್ತುತ್ತಿರುತ್ತದೆ. ಇದೊಂದು ಚಕ್ರಭ್ರಮಣ. ಈ ಚಕ್ರ ಭ್ರಮಣದಿಂದ ಪಾರು ಮಾಡಲು ಆ ಚಕ್ರಧಾರಿಯೇ ಬರಬೇಕು. ದ್ವಾದಶಸ್ತೋತ್ರದಲ್ಲಿ ಹೇಳುವಂತೆ: “ತ್ರಿಗುಣಾತೀತ ವಿಧಾರಕ ಪರಿತೋ ದೇಹಿ ಸುಭಕ್ತಿಮ್”. ತ್ರಿಗುಣಾತೀತರನ್ನು ಧಾರಣೆ ಮಾಡುವವ ಆ ಭಗವಂತ. ಆದ್ದರಿಂದ ತ್ರಿಗುಣಾತೀತರಾಗಲು ಇರುವ ಮಾರ್ಗ ಒಂದೆ-ಆ ಭಗವಂತನಲ್ಲಿ ಶರಣಾಗುವುದು. ಲಕ್ಷ್ಮೀಸಮೇತನಾದ ಆ ಭಗವಂತನಲ್ಲಿ ಏಕನಿಷ್ಠೆಯಿಂದ ಅನನ್ಯ ಭಕ್ತಿ ಮಾಡುವುದರಿಂದ – ಲಕ್ಷ್ಮಿಯಿಂದ ಹದಿನೈದು ಬಂಧನದ ಬೇಲಿಯನ್ನು ಧರಿಸಿ ಪ್ರಪಂಚಕ್ಕೆ ಬಂದ ನಾವು, ಈ ಎಲ್ಲಾ ಬಂಧವನ್ನು ಕಳಚಿಕೊಂಡು ಮರಳಿ ತಾಯಿಯ ಮಡಿಲನ್ನು ಸೇರಬಹುದು.          

ಬ್ರಹ್ಮಣೋ ಹಿ ಪ್ರತಿಷ್ಠಾSಹಮಮೃತಸ್ಯಾವ್ಯಯಸ್ಯ ಚ ।
ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ ॥೨೭॥

ಬ್ರಹ್ಮಣಃ  ಹಿ ಪ್ರತಿಷ್ಠಾ ಅಹಮ್ ಅಮೃತಸ್ಯ ಅವ್ಯಯಸ್ಯ ಚ ।
ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯ ಐಕಾಂತಿಕಸ್ಯ ಚ –ಅಳಿವಿರದ ಬದಲಾಗದ ಚಿತ್ ಪ್ರಕೃತಿಗೂ ನಾನೆ ಆಸರೆ-ನೆಲೆ. ಸನಾತನ ಧರ್ಮಕ್ಕೆ ಮತ್ತು ಕೇವಲ ಸುಖಮಯವಾದ ಮೋಕ್ಷಕ್ಕೆ ಕೂಡ.

ಮೂರು ಗುಣಗಳನ್ನು ಮೀರಿ ನಿಂತಾಗ ಜೀವದ ಸಹಜ-ಶಾಶ್ವತ ಧರ್ಮ ಅಭಿವ್ಯಕ್ತವಾಗುತ್ತದೆ. ಈ ಸ್ಥಿತಿಯಲ್ಲಿ  ಬ್ರಹ್ಮತತ್ವವಾದ ಚಿತ್ ಪ್ರಕೃತಿ(ಶ್ರೀಲಕ್ಷ್ಮಿ)ಗೂ ಆಸರೆಯಾದ  ಆ ಭಗವಂತವಂತನನ್ನು ಮೋಕ್ಷದಲ್ಲಿ ಸೇರಬಹುದು.   

Bhagavad GitA in Kannada Chapter-14 Shloka 23-25


ಉದಾಸೀನವದಾಸೀನೋ ಗುಣೈರ್ಯೋ ನ ವಿಚಾಲ್ಯತೇ       ।
ಗುಣಾ ವರ್ತಂತ ಇತ್ಯೇವ ಯೋSವತಿಷ್ಠತಿ ನೇಂಗತೇ                       ॥೨೩॥

ಉದಾಸೀನವತ್ ಆಸೀನಃ ಗುಣೈಃ ಯಃ  ನ ವಿಚಾಲ್ಯತೇ        ।
ಗುಣಾಃ ವರ್ತಂತ ಇತಿ  ಏವ ಯಃ ಅವತಿಷ್ಠತಿ ನ ಇಂಗತೇ –ಉದಾಸೀನನಂತೆ ಇದ್ದುಬಿಡುತ್ತಾನೆ. ಗುಣಗಳ ಸೆಳೆತಕ್ಕೆ ಕದಲುವುದಿಲ್ಲ. ಗುಣಗಳು ಇರುವಂಥವೆ ಎಂದು ತೆಪ್ಪಗೆ ಇದ್ದು ಬಿಡುತ್ತಾನೆ. ಅವುಗಳ ತಾಳಕ್ಕೆ ತಾನು ಕುಣಿಯುವುದಿಲ್ಲ.

ಪ್ರಾಪಂಚಿಕ ವ್ಯವಹಾರದಲ್ಲಿ ಈತ ಉದಾಸೀನನಂತೆ ಇದ್ದುಬಿಡುತ್ತಾನೆ. ನಮಗೆ ಬೇಕು ಬೇಡಗಳು ಬರುವುದು ತ್ರಿಗುಣಗಳಿಂದ. ತ್ರಿಗುಣಾತೀತ- “ಹಾಗಾಗಬೇಕು-ಹೀಗೇ ಆಗಬೇಕು” ಎಂದು ಬಯಸುವುದಿಲ್ಲ. “ಹೇಗಾಗಬೇಕೋ ಹಾಗೆ ಭಗವಂತ ಮಾಡುತ್ತಾನೆ” ಎನ್ನುವ ನಂಬಿಕೆ ಅವನಲ್ಲಿರುತ್ತದೆ.[ಇಲ್ಲಿ ಒಂದು ವಿಷಯವನ್ನು ನಾವು ತಿಳಿದುಕೊಳ್ಳಬೇಕು. ಪ್ರಪಂಚದಲ್ಲಿ ನಡೆಯುವ ಘಟನೆಗಳು ನಮ್ಮ ಅಧೀನವಲ್ಲ. ನಾವು ಆಗಬಾರದು ಅಂದುಕೊಳ್ಳುವುದು ಆಗಬಹುದು, ಆಗಬೇಕು ಅಂದುಕೊಳ್ಳುವುದು ಆಗದೇ ಇರಬಹುದು. ಹೀಗಿರುವಾಗ ‘ಹೀಗೇ ಆಗಬೇಕು’ ಎಂದು ವ್ಯರ್ಥವಾಗಿ ಮನಸ್ಸನ್ನು ಉದ್ವೇಗಕ್ಕೊಳಪಡಿಸುವುದರಲ್ಲಿ ಅರ್ಥವಿಲ್ಲ].  ಹೀಗೆ ಬದುಕಿದಾಗ-ಬಯಸಿದ್ದು ಆಗದಿದ್ದಾಗ ಕೋಪವಿಲ್ಲ, ಆದಾಗ ಹಾರಾಟವಿಲ್ಲ. ಮನಸ್ಸು ಪ್ರಸನ್ನವಾಗಿರುತ್ತದೆ.
ಇಂದ್ರಿಯಗಳು ಗುಣಗಳಲ್ಲಿ ಇರುತ್ತವೆ, ಇಂದ್ರಿಯಗಳ ಹಿಂದೆ ಗುಣಗಳಿರುತ್ತವೆ. ಆದರೆ ತ್ರಿಗುಣಾತೀತ ಇವೆಲ್ಲವನ್ನೂ ತಿಳಿದು, ತಲೆಕೆಡಿಸಿಕೊಳ್ಳದೆ, ಯಾವುದೇ ಕ್ರಿಯೆಯಲ್ಲಿ ಕೂಡ[ತಾತ್ಕಾಲಿಕ ಕ್ರಿಯೆಯಲ್ಲಿ ಕೂಡ] ಚಪಲವಿಲ್ಲದೆ ಬದುಕುತ್ತಾನೆ.        

ಸಮದುಃಖಸುಖಃ ಸ್ವಸ್ಥಃ ಸಮಲೋಷ್ಟಾಶ್ಮಕಾಂಚನಃ  ।
ತುಲ್ಯಪ್ರಿಯಾಪ್ರಿಯೋ ಧೀರಸ್ತುಲ್ಯನಿಂದಾತ್ಮಸಂಸ್ತುತಿಃ                     ॥೨೪॥

ಸಮ ದುಃಖಸುಖಃ ಸ್ವಸ್ಥಃ ಸಮ ಲೋಷ್ಟ ಆಶ್ಮ  ಕಾಂಚನಃ  ।
ತುಲ್ಯ ಪ್ರಿಯ ಅಪ್ರಿಯಃ  ಧೀರಃ ತುಲ್ಯ ನಿಂದಾತ್ಮ ಸಂಸ್ತುತಿಃ – ಸುಖ-ದುಃಖವನ್ನು ಸಮನಾಗಿ ಕಾಣುತ್ತಾನೆ. ತನ್ನಲ್ಲೆ ತಾನು ಇದ್ದುಬಿಡುತ್ತಾನೆ. ಮಣ್ಣು, ಕಲ್ಲು, ಚಿನ್ನ ಅವನಿಗೆ ಒಂದೆ ತರ. ಸಾಧನೆಯಿಂದ ಬಗೆ ಗಟ್ಟಿಗೊಂಡ ಅವನಿಗೆ ಪ್ರಿಯವೂ ಒಂದೆ; ಅಪ್ರೀಯವೂ ಒಂದೆ. ತೆಗಳಿಕೆಯೂ  ಒಂದೆ. ಹೊಗಳಿಕೆಯೂ ಒಂದೆ.

ತ್ರಿಗುಣಾತೀತ ಸರ್ವ ಸುಖ-ದುಃಖವನ್ನೂ ಸಮನಾಗಿ ಕಾಣುತ್ತಾನೆ. ಏಕೆಂದರೆ ನಮಗೆ ಮೇಲ್ನೋಟಕ್ಕೆ ಸುಖವೆಂದು ಕಾಣುವುದು ನಿಜವಾಗಿ ಸುಖವಾಗಿ ಇರಬೇಕಿಂದಿಲ್ಲ. ಅದೇ ರೀತಿ ದುಃಖ ಕೂಡ. ಇದನ್ನು ತಿಳಿದಾಗ ಎಲ್ಲವೂ ಭಗವಂತನ ಲೀಲೆ ಎನ್ನುವ ಭಾವನೆ ಮನಸ್ಸಿನಲ್ಲಿ ಹುಟ್ಟುತ್ತದೆ. ಆಗ ಎಲ್ಲವನ್ನು ಸಮನಾಗಿ ಕಾಣುವ ಕ್ಷಮತೆ ನಮ್ಮಲ್ಲಿ ಬೆಳೆಯುತ್ತದೆ.
ನಾವು ಹೇಗೆ ನಾಟಕದಲ್ಲಿ ನಡೆಯುವ ದೃಶ್ಯವನ್ನು ಪ್ರೇಕ್ಷಕರಂತೆ ಕಾಣುತ್ತೇವೋ, ಹಾಗೆ ಪ್ರಪಂಚದಲ್ಲಿ ನಡೆಯುವ ಘಟನೆಗಳನ್ನು ಪ್ರೇಕ್ಷಕರಂತೆ ಕಾಣಲು ಅಭ್ಯಾಸ ಮಾಡಿಕೊಳ್ಳಬೇಕು. ಅದು ಸುಖಮಯವಿರಬಹುದು, ದುಃಖಮಯವಿರಬಹುದು-ಆದರೆ ನಾವು ಭಗವಂತನ ಒಂದೊಂದು ಕ್ರಿಯಯನ್ನೂ ಆಸ್ವಾಧಿಸಬೇಕು. ಜೀವನದಲ್ಲಿ ಬರುವ ತಾತ್ಕಾಲಿಕ ದುಃಖ  ನಮ್ಮ ಶಾಶ್ವತ ಸುಖಕ್ಕೆ ಕಾರಣವಾಗಿರುತ್ತದೆ. ಆದರೆ ಅದು ನಮಗೆ ತಿಳಿದಿರುವುದಿಲ್ಲ ಅಷ್ಟೆ. ತ್ರಿಗುಣಾತೀತರು ಈ ವಿಷಯವನ್ನು ಅರಿತು ಸುಖ-ದುಃಖವನ್ನು ಸಮನಾಗಿ ಕಾಣುತ್ತ ಆನಂದದಿಂದ ಬದುಕುತ್ತಿರುತ್ತಾರೆ.
ಹಿಂದೆ ಸ್ಥಿತಪ್ರಜ್ಞ ಮತ್ತು ಭಕ್ತರ ಲಕ್ಷಣ ಹೇಳುವಾಗ ಹೇಳಿದ ಮಾತುಗಳನ್ನು ಕೃಷ್ಣ ಇಲ್ಲಿ ಮತ್ತೆ ಪುನರುಚ್ಛರಿಸುತ್ತಾನೆ. ತ್ರಿಗುಣಾತೀತನಿಗೆ ಮಣ್ಣು, ಅಮೂಲ್ಯ ರತ್ನ, ಚಿನ್ನ-ಎಲ್ಲವೂ ಒಂದೆ. ಆತನಿಗೆ ಚಿನ್ನವಾಗಲಿ, ರತ್ನವಾಗಲಿ ಅಮೂಲ್ಯ ಎಂದು ಕಾಣುವುದಿಲ್ಲ.  ಆತನಿಗೆ ಅಮೂಲ್ಯ-ಜ್ಞಾನವೊಂದೆ. ಈ ಕಾರಣದಿಂದ ಆತ ಹಣದಲ್ಲಾಗಲಿ, ಮುತ್ತು-ರತ್ನದಲ್ಲಾಗಲಿ, ಬಂಗಾರದಲ್ಲಾಗಲಿ ಯಾವುದೇ ರೀತಿಯ ಅಭಿಲಾಷೆ ತೋರುವುದಿಲ್ಲ. ಆದ್ದರಿಂದ ಆತ ಸಂತೋಷದಿಂದ ಬದುಕುತ್ತಾನೆ. ಭಾಗವತದ ಮೂರನೇ ಸ್ಕಂದದಲ್ಲಿ ಬರುವ ಒಂದು ಶ್ಲೋಕ ಈ ರೀತಿ ಹೇಳುತ್ತದೆ:    
ಯಶ್ಚ ಮೂಢತಮೋ ಲೋಕೇ ಯಶ್ಚ ಬುದ್ಧೇಃ ಪರಂ ಗತಃ
ತಾವುಭೌ ಸುಖಮೇಧೇತೇ ಕ್ಲಿಶ್ಯತ್ಯಂತರಿತೋ ಜನಃ             ||೩-೭-೧೭||
ಒಬ್ಬ ಮೂಢ ಮತ್ತು ಇನ್ನೊಬ್ಬ ಜ್ಞಾನಿ- ಇವರಿಬ್ಬರು ಲೋಕದಲ್ಲಿ ಸುಖದಿಂದ ಬದುಕಬಲ್ಲರು ಎಂದು. ಏಕೆಂದರೆ ಇವರಿಗೆ ಹಣದ ಮೋಹವಿರುವುದಿಲ್ಲ. ಆದರೆ ಇವೆರಡರ ಮಧ್ಯದಲ್ಲಿರುವವರು-ಜೀವನದ ಅರ್ಥ ತಿಳಿಯದೆ ಮೋಹಕ್ಕೆ ಬಲಿಯಾಗಿ ದುಃಖ ಅನುಭವಿಸುತ್ತಾರೆ.
ಹೇಗೆ ಜ್ಞಾನಿಗಳು ತಮ್ಮ ಜೀವನದಲ್ಲಿ ಈ ತತ್ವವನ್ನು ಅಳವಡಿಸಿಕೊಂಡು ಬದುಕುತ್ತಾರೆ ಎನ್ನುವುದಕ್ಕೆ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ ಉತ್ತಮ ನಿದರ್ಶನ. ಮೈಸೂರು ಮಹಾರಾಜರ ಕಾಲದಲ್ಲಿ ಸೋದೆಮಠದ ಸ್ವಾಮಿಗಳಾಗಿದ್ದ ವಿಶ್ವಪ್ರೀಯತೀರ್ಥರು (ವೃಂದಾವನಾಚಾರ್ಯರು) ಬದುಕಿದ ಜೀವನ ಶೈಲಿ ಇದಕ್ಕೆ ಇನ್ನೊಂದು ಉತ್ತಮ ದೃಷ್ಟಾಂತ.
ಈ ಶ್ಲೋಕವನ್ನು ಇನ್ನೊಂದು ಮುಖದಲ್ಲಿ ನೋಡಿದಾಗ ನಮಗೆ ಇನ್ನೂ ಒಂದು ವಿಶೇಷ ಸಂದೇಶ ತಿಳಿಯುತ್ತದೆ. ಒಬ್ಬ ನಿಜವಾದ ಭಕ್ತ(ತ್ರಿಗುಣಾತೀತ)ನ ಭಗವದ್ ಭಕ್ತಿ ಆತನ ಜೀವನದಲ್ಲಿ ಬರುವ ಸುಖ-ದುಃಖಗಳಿಂದ ಏರುಪೇರಾಗುವುದಿಲ್ಲ. ಬಡತನವಿರಲಿ-ಸಿರಿತನವಿರಲಿ ಈತ ನಿರಂತರ ಭಗವಂತನ ಭಕ್ತಿಯಲ್ಲಿ ತೊಡಗಿರುತ್ತಾನೆ. ಈತನ ಭಕ್ತಿಗೆ ಇನ್ನೊಬ್ಬರ ಪ್ರೀತಿ-ದ್ವೇಷ ಎಂದೂ ಮಾನದಂಡವಲ್ಲ. ಈ ರೀತಿ ತ್ರಿಗುಣಾತೀತರು  ಎಲ್ಲ ಸ್ಥಿತಿಯಲ್ಲೂ ಸಮಾನತೆಯಿಂದ ಬದುಕುತ್ತಾರೆ.    

ಮಾನಾಪಮಾನಯೋಸ್ತುಲ್ಯಸ್ತುಲ್ಯೋ ಮಿತ್ರಾರಿಪಕ್ಷಯೋಃ   ।
ಸರ್ವಾರಂಭಪರಿತ್ಯಾಗೀ ಗುಣಾತೀತಃ ಸ ಉಚ್ಯತೇ                          ॥೨೫॥

ಮಾನ ಅಪಮಾನಯೋಃ ತುಲ್ಯಃ  ತುಲ್ಯಃ ಮಿತ್ರ ಅರಿ ಪಕ್ಷಯೋಃ        ।
ಸರ್ವಾರಂಭ ಪರಿತ್ಯಾಗೀ ಗುಣಾತೀತಃ ಸ ಉಚ್ಯತೇ -- ಸಮ್ಮಾನವೂ ಒಂದೆ; ಅಪಮಾನವೂ ಒಂದೆ. ಗೆಳೆಯರ ಬಳಗವೂ ಒಂದೆ; ಹಗೆಯರ ಬಳಗವೂ ಒಂದೆ. ಅವನು ಇಂಥ ಯಾವ ಲೌಕಿಕದಲ್ಲೂ ತೊಡಗಿಕೊಳ್ಳುವುದಿಲ್ಲ. ಅಂಥವನು ‘ಗುಣಾತೀತ’ ಎನ್ನಿಸುತ್ತಾನೆ.


ತ್ರಿಗುಣಾತೀತರನ್ನು ಒಬ್ಬರು 'ಮಹಾನ್ ಜ್ಞಾನಿ' ಎಂದು ಸಮ್ಮಾನಿಸಿ ಮಾತನಾಡಬಹುದು, ಇನ್ನೊಬ್ಬರು ಆತ 'ಅರೆಹುಚ್ಚ'  ಎಂದು ನಿಂದಿಸಬಹುದು. ಆದರೆ ಇದ್ಯಾವುದೂ ಅವರ ಮೇಲೆ ಪರಿಣಾಮಬೀರದು.  ಇವರಿಗೆ ಸ್ನೇಹಿತರು ಎನ್ನುವ ಮೋಹವಾಗಲಿ, ಶತ್ರುಗಳು ಎನ್ನುವ ದ್ವೇಷವಾಗಲಿ ಇರುವುದಿಲ್ಲ. ಇವರು ಎಲ್ಲರನ್ನು ಅವರವರ ಯೋಗ್ಯತೆಗೆ ತಕ್ಕಂತೆ ಕಾಣುತ್ತ, ಭಗವಂತನ ಭಕ್ತಿಗೆ ವಿರುದ್ಧವಾದ ಯಾವ ಚಟುವಟಿಕೆಯಲ್ಲೂ ತೊಡಗದೆ ಬದುಕುತ್ತಾರೆ. ಇವರು ದೀರ್ಘಕಾಲದ ಯಾವುದೇ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಿಲ್ಲ. 
ಹೀಗೆ ಮೇಲಿನ ನಾಲ್ಕು ಶ್ಲೋಕದಲ್ಲಿ ಹೇಳಿದ ಎಲ್ಲ ಸ್ವಭಾವವುಳ್ಳವರು ಗುಣಾತೀತರೆನಿಸುತ್ತಾರೆ.  

Thursday, November 24, 2011

Bhagavad GitA Kannada Chapter-14 Shloka 21-22


ಇಲ್ಲಿ ಕೃಷ್ಣ ತ್ರಿಗುಣವನ್ನು ದಾಟಿದಾಗ ಅದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಿದ. ಹೀಗೆ ಹೇಳಿದಾಗ  ಸಹಜವಾಗಿ ನಮಗೊಂದು ಪ್ರಶ್ನೆ ಬರುತ್ತದೆ. ಅದೇ ಪ್ರಶ್ನೆಯನ್ನು ಮುಂದಿನ ಶ್ಲೋಕದಲ್ಲಿ ಅರ್ಜುನ ಕೃಷ್ಣನ ಮುಂದಿಡುತ್ತಾನೆ.   

ಅರ್ಜುನ ಉವಾಚ ।
ಕೈರ್ಲಿಗೈಸ್ತ್ರೀನ್ ಗುಣಾನೇತಾನತೀತೋ ಭವತಿ ಪ್ರಭೋ ।
ಕಿಮಾಚಾರಃ ಕಥಂ ಚೈತಾಂಸ್ತ್ರೀನ್ ಗುಣಾನತಿವರ್ತತೇ                   ॥೨೧॥

ಅರ್ಜುನ ಉವಾಚ-ಅರ್ಜುನ ಕೇಳಿದನು:
ಕೈಃ ಲಿಂಗೈಃ ತ್ರೀನ್ ಗುಣಾನ್ ಏತಾನ್ ಅತೀತಃ  ಭವತಿ ಪ್ರಭೋ ।
ಕಿಮ್ ಆಚಾರಃ ಕಥಮ್ ಚ ಏತಾನ್ ತ್ರೀನ್  ಗುಣಾನ್ ಅತಿವರ್ತತೇ—ಒಡೆಯನೆ, ಯಾವ ಕುರುಹುಗಳಿಂದ ಈ ಮೂರು ಗುಣಗಳನ್ನು ದಾಟಿದವನೆನ್ನಿಸುತ್ತಾನೆ ? ಅವನ ನಡೆವಳಿಕೆ ಎಂಥದು ? ಹೇಗೆ ಈ ಮೂರು ಗುಣಗಳನ್ನು ದಾಟುತ್ತಾನೆ?

ನಮ್ಮ ನಿಮ್ಮೆಲ್ಲರ ಪರವಾಗಿ ಅರ್ಜುನ ಕೃಷ್ಣನಲ್ಲಿ ಪ್ರಶ್ನೆ ಹಾಕುತ್ತಾನೆ. ಆತ ಕೇಳುತ್ತಾನೆ: “ಮೂರು ಗುಣಗಳನ್ನು ದಾಟಿದವನೊಬ್ಬನಿದ್ದರೆ ಅವನನ್ನು ಗುರುತಿಸುವುದು ಹೇಗೆ? ಆತನ ಕುರುಹು ಏನು? ಅವನ ನಡತೆ ಹೇಗಿರುತ್ತದೆ? ಈ ಮೂರು ಗುಣಗಳನ್ನು ಆತ ಹೇಗೆ ದಾಟುತ್ತಾನೆ?”
ಇಲ್ಲಿ ಅರ್ಜುನ ಕೃಷ್ಣನನ್ನು “ಪ್ರಭೋ” ಎಂದು ಸಂಬೋಧಿಸುತ್ತಾನೆ. “ನನ್ನ ಪ್ರಶ್ನೆಗಳಿಗೆ ಖಂಡಿತವಾಗಿ ಉತ್ತರ ಕೊಡಬಲ್ಲವ-ನೀನೊಬ್ಬನೆ” ಎನ್ನುವ ಧ್ವನಿ ಮತ್ತು ‘ಪೂರ್ಣ ಶರಣಾಗತಿ’  ಈ ಸಂಬೋಧನೆಯ ಹಿಂದಿದೆ.  ಭಗವಂತ ಅರ್ಜುನನ ಈ ಪ್ರಶ್ನೆಗೆ ಮುಂದಿನ ಶ್ಲೋಕಗಳಲ್ಲಿ ವಿವರವಾಗಿ ಉತ್ತರಿಸಿದ್ದಾನೆ.

ಭಗವಾನುವಾಚ ।
ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಮೇವ ಚ ಪಾಂಡವ ।
ನ ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ                            ॥೨೨॥

ಭಗವಾನ್ ಉವಾಚ-ಭಗವಂತ ಹೇಳಿದನು:
ಪ್ರಕಾಶಮ್ ಚ ಪ್ರವೃತ್ತಿಮ್ ಚ ಮೋಹಮ್ ಏವ  ಚ ಪಾಂಡವ ।
ನ ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ—ಪಾಂಡವ, ಲೌಕಿಕದ ತಿಳಿವಿನ ಬೆಳಕನ್ನಾಗಲಿ, ಕಾಯಕದ ಹುರುಪನ್ನಾಗಲಿ, ಭ್ರಾಂತಿಯನ್ನೆ ಆಗಲಿ- ಇದ್ದಾಗ ದ್ವೇಷಿಸುವುದಿಲ್ಲ; ಇರದಾಗ ಬಯಸುವುದಿಲ್ಲ.

ತ್ರಿಗುಣಗಳನ್ನು ದಾಟಿದವ ಯಾವುದೋ ಅನಪೇಕ್ಷವಾದುದು ಬಂದಾಗ ಅದನ್ನು ದ್ವೇಷಿಸುವುದಿಲ್ಲ; ಅಪೇಕ್ಷಿತವಾದುದು ಬಾರದೇ ಇದ್ದಾಗ ಅದನ್ನು ಅಪೇಕ್ಷಿಸುವುದಿಲ್ಲ. “ಯಾವುದು ಬೇಕು, ಯಾವುದು ಬೇಡ ಎನ್ನುವುದು ನನಗಿಂತ ಚನ್ನಾಗಿ ಭಗವಂತನಿಗೆ ಗೊತ್ತಿದೆ. ಅದಕ್ಕಾಗಿ ನಾನೇಕೆ ತಲೆ ಕೆಡಿಸಿಕೊಳ್ಳಬೇಕು” ಎನ್ನುವ ನಿರ್ಲಿಪ್ತತೆ ಆತನಲ್ಲಿರುತ್ತದೆ. ಜೀವನದಲ್ಲಿ ಏನು ಬಂತೋ ಅದನ್ನು ಆತ ಸ್ವಾಗತಿಸುತ್ತಾನೆ. ವ್ಯಾಸರು ಮಹಾಭಾರತದ ಶಾಂತಿಪರ್ವದಲ್ಲಿ ಒಂದು ಮಾತನ್ನು ಹೇಳಿದ್ದಾರೆ:
ಏವಂ ಅಪ್ಯ ಅಶುಭಂ ಕರ್ಮ ನ ಭೂತಂ ನ ಭವಿಷ್ಯತಿ  ||೧೨-೩೨-೧೮||
“ಆಗಬಾರದ್ದು ಹಿಂದೆ ಆಗಿಲ್ಲ, ಮುಂದೆ ಆಗುವುದೂ ಇಲ್ಲ. ಏನು ಆಗಬೇಕೋ ಅದು ಘಟಿಸಿಯೇ ತೀರುತ್ತದೆ. ಅದನ್ನು ನಾನು ಬೇಡ ಎಂದು ದ್ವೇಷಿಸಿ ಫಲವೇನು?”. ಆದ್ದರಿಂದ ತ್ರಿಗುಣವನ್ನು ದಾಟಿದವನು- ಬಂದಾಗ 'ಬೇಡ' ಎಂದು ದ್ವೇಷಿಸುವುದಿಲ್ಲ; ಇಲ್ಲದ್ದನ್ನು ಬಯಸುವುದೂ ಇಲ್ಲ.  ಎಲ್ಲವನ್ನು ನಿರ್ವೀಕಾರನಾಗಿ ನೋಡುತ್ತಾ, ತುಂಬಿದ ಕೊಡದಂತೆ ತುಳುಕದೆ ಬದುಕುತ್ತಾನೆ.
ಲೋಕದಲ್ಲಿ ಕೆಲವರಿಗೆ ಸತ್ವದಲ್ಲಿ ಆಸಕ್ತಿಯಾದರೆ ಇನ್ನು ಕೆಲವರಿಗೆ ಕೇವಲ ಪ್ರವೃತ್ತಿ. ಮತ್ತೆ ಕೆಲವರಿಗೆ ಯಾವ ಆಸಕ್ತಿಯೂ ಇಲ್ಲ- ಕತ್ತಲನ್ನು ಕತ್ತಲು ಎಂದು ತಿಳಿಯದೆ ಕತ್ತಲಲ್ಲೇ ಬದುಕುವವರಿದ್ದಾರೆ. ಇದು ಸರ್ವೇಸಾಮಾನ್ಯವಾಗಿ ಕಾಣುವ ವಿಚಾರ. ತ್ರಿಗುಣವನ್ನು ಮೀರಿ ನಿಂತವರು ಇದನ್ನು ನೋಡಿ ತಮ್ಮ ಮನಸ್ಸನ್ನು ವಿಕಾರ ಮಾಡಿಕೊಳ್ಳುವುದಿಲ್ಲ.  “ಅವರವರ ಗುಣ ಪ್ರಭಾವಕ್ಕನುಗುಣವಾಗಿ ಎಲ್ಲವೂ ನಡೆಯುತ್ತಿದೆ” ಎಂದು ತಿಳಿದು ತಟಸ್ಥರಾಗಿ ಬದುಕುತ್ತಾರೆ. ಸತ್ಯವೆಂದು ಕಂಡದ್ದನ್ನು ಇವರು ಹೇಳುತ್ತಾರೆ. ಆದರೆ ಎಂದೂ ವಾದ ವಿವಾದವನ್ನು ಬೆಳೆಸುವುದಿಲ್ಲ. “ಎಲ್ಲವೂ ಭಗವಂತನ ಲೀಲೆ, ಆತ ಮಾಡಿದ ವ್ಯವಸ್ಥೆ” ಎಂದು ಎಲ್ಲವನ್ನು ಸ್ವೀಕರಿಸುತ್ತಾರೆ. ಗೀತೆಯ ಹನ್ನೆರಡನೇ ಅಧ್ಯಾಯದಲ್ಲಿ ‘ನಿಜವಾದ ಭಕ್ತ’ ಹೇಗಿರುತ್ತಾನೆ ಎಂದು ವಿವರಿಸುವಾಗ ಕೃಷ್ಣ ಈ ಶ್ಲೋಕದಲ್ಲಿ ಕೊಟ್ಟ ವಿವರಣೆಯನ್ನೇ  ಕೊಟ್ಟಿದ್ದಾನೆ. ಪೂರ್ಣಭಕ್ತಿ ಎಂದರೆ ಹೊರಗಿನ ಗುಣವನ್ನು ಮೀರಿ ನಿಲ್ಲುವುದು. 
ಇಲ್ಲಿ ವ್ಯಾಸರು ‘ಪಾಂಡವ’ ಎನ್ನುವ ವಿಶೇಷಣವನ್ನು ಬಳಸಿದ್ದಾರೆ. ಪಾಂಡಾ ಎಂದರೆ ಜ್ಞಾನಿ. ಪಾಂಡವ ಎಂದರೆ ಜ್ಞಾನವನ್ನು ಗುರುತಿಸಿ ತಲೆಬಾಗುವವನು. “ತ್ರಿಗುಣಾತೀತನಾಗುವ ಮೊದಲು ನೀನು ಪಾಂಡವನಾಗಬೇಕು” ಎನ್ನುವ ಸಂದೇಶ ಈ ವಿಶೇಷಣದ ಹಿಂದಿದೆ. 

Tuesday, November 22, 2011

Bhagavad GitA in Kannada Chapter-14 Shloka-18-20


ಊರ್ಧ್ವಂ ಗಚ್ಛಂತಿ ಸತ್ತ್ವಸ್ಥಾ ಮಧ್ಯೇ ತಿಷ್ಠಂತಿ ರಾಜಸಾಃ ।
ಜಘನ್ಯಗುಣವೃತ್ತಿಸ್ಥಾ ಅಧೋ ಗಚ್ಛಂತಿ ತಾಮಸಾಃ                           ॥೧೮॥

ಊರ್ಧ್ವಮ್ ಗಚ್ಛಂತಿ ಸತ್ತ್ವಸ್ಥಾಃ  ಮಧ್ಯೇ ತಿಷ್ಠಂತಿ ರಾಜಸಾಃ ।
ಜಘನ್ಯಗುಣ ವೃತ್ತಿಸ್ಥಾಃ  ಅಧಃ  ಗಚ್ಛಂತಿ ತಾಮಸಾಃ—ಸತ್ವದಲ್ಲಿ ನೆಲೆಗೊಂಡವರು ಎತ್ತರಕ್ಕೆರುತ್ತಾರೆ. ರಾಜಸರು ನಡುವಿನಲ್ಲಿ ನಿಲ್ಲುತ್ತಾರೆ. ‘ಕೊನೆಯ ಗುಣದ’ ಪ್ರಭಾವಕ್ಕೊಳಗಾದ ತಾಮಸರು ಕೆಳಕ್ಕೆ ಕುಸಿಯುತ್ತಾರೆ.

ತ್ರಿಗುಣದ ಸ್ವಭಾವವನ್ನು ಹೇಳಿದ ಕೃಷ್ಣ, ಅದರ ಪರಿಣಾಮದ ಮೂರು ಮಜಲನ್ನು ಈ ಶ್ಲೋಕದಲ್ಲಿ ವಿವರಿಸಿದ್ದಾನೆ. ಸತ್ವದಲ್ಲಿರುವವರು ಮಾನಸಿಕವಾಗಿ ಮೇಲಕ್ಕೇರುತ್ತಾರೆ. ರಜೋಗುಣದವನಿಗೆ ಯಾವ ಏಳಿಗೆಯೂ ಇಲ್ಲ. ತಮಸ್ಸಿನಲ್ಲಿರುವವ  ಮಾನಸಿಕವಾಗಿ ಅಧಃಪಾತ ಹೊಂದುತ್ತಾನೆ. ಇಲ್ಲಿ ‘ಊರ್ಧ್ವ’ ಎನ್ನುವ ಪದಕ್ಕೆ ವಿಶೇಷವಾದ ಅರ್ಥವಿದೆ.  ಕಠೋಪನಿಷತ್ತಿನಲ್ಲಿ ಹೇಳುವಂತೆ :
ಊರ್ಧ್ವಮೂಲೋ ಅವಾಕ್ಶಾಖಃ ಏಷೋ ಅಶ್ವತ್ಥಃ ಸನಾತನಃ  ||೨-೩-೧||
ಊರ್ಧ್ವ ಎಂದರೆ ಎಲ್ಲಕ್ಕಿಂತ ಮೇಲಿರುವ ಭಗವಂತ. ಸತ್ವದಲ್ಲಿರುವವ ಮೇಲಕ್ಕೆ ಹೋಗುವುದು ಅಂದರೆ- ಭಗವಂತನ ಕಡೆ ಮುಖಮಾಡಿ ಚಲಿಸುವುದು. ಆತ ಮುಂದೆ ಹೋದಂತೆ ಭಗವಂತನಿಗೆ ಹತ್ತಿರವಾಗುತ್ತಾ ಹೋಗುತ್ತಾನೆ. ಆದರೆ ತಮಸ್ಸಿನಲ್ಲಿರುವವ ಭಗವಂತನಿಗೆ ಬೆನ್ನು ಹಾಕಿ ಚಲಿಸುತ್ತಿರುತ್ತಾನೆ. ರಾಜಸ ಇದ್ದಲ್ಲೇ ಅತಂತ್ರ ಸ್ಥಿತಿಯಲ್ಲಿ ಮುಂದುವರಿಯುತ್ತಾನೆ. 
ದೇವತೆಗಳನ್ನು ಬಂಧನದಲ್ಲಿಡುವ ಶಕ್ತಿ ‘ಶ್ರೀದೇವಿ’; ಮಾನವರನ್ನು ಬಂಧನದಲ್ಲಿಡುವ ಶಕ್ತಿ ‘ಭೂದೇವಿ’ ಮತ್ತು ರಾಕ್ಷಸರನ್ನು ಬಂಧನದಲ್ಲಿಡುವ ಶಕ್ತಿ ‘ದುರ್ಗಾದೇವಿ’. ಸಾತ್ವಿಕರು ಸತ್ವಮಾನಿನಿಯಾದ ‘ಶ್ರೀದೇವಿಯ’ ಕೃಪೆಗೆ ಪಾತ್ರರಾಗಿ ಮೇಲಿನ ಲೋಕವನ್ನು ಪಡೆಯುತ್ತಾರೆ[ಭೂಮಿಯಿಂದ ಮೇಲೆ ಇರುವ ಆರು ಸೂಕ್ಷ್ಮ ಲೋಕಗಳು ಮತ್ತು ಕೊನೆಗೆ ಮೋಕ್ಷ]; ರಾಜಸರು ಭೂದೇವಿಯ ಬಂಧನದಲ್ಲೇ ಮುಂದುವರಿಯುತ್ತಾರೆ[ಭೂಮಿ ಮತ್ತು ಅಂತರಿಕ್ಷ] ಮತ್ತು ತಾಮಸರು ದುರ್ಗಾದೇವಿಯ ನಿಯಂತ್ರಣದಲ್ಲಿರುವ ತಾಮಸಲೋಕ [ಭೂಮಿಯಿಂದ ಕೆಳಗಿರುವ ಏಳು ಸೂಕ್ಷ್ಮಲೋಕಗಳು]ವನ್ನು ಸೇರುತ್ತಾರೆ.

ನಾ[S]ನ್ಯಂ ಗುಣೇಭ್ಯಃ ಕರ್ತಾರಂ ಯದಾ ದ್ರಷ್ಟಾSನುಪಶ್ಯತಿ ।
ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ ಸೋSಧಿಗಚ್ಛತಿ                      ॥೧೯॥

ನ ಅನ್ಯಮ್ ಗುಣೇಭ್ಯಃ ಕರ್ತಾರಮ್ ಯದಾ ದ್ರಷ್ಟಾ ಅನುಪಶ್ಯತಿ        ।
ಗುಣೇಭ್ಯಃ ಚ  ಪರಮ್ ವೇತ್ತಿ ಮತ್ ಭಾವಮ್ ಸಃ ಅಧಿಗಚ್ಛತಿ – ಈ ಎಲ್ಲಾ ಪರಿಣಾಮಗಳಿಗೆ ತ್ರಿಗುಣಗಳಲ್ಲದೆ ಬೇರೆ ಕಾರಣವಿಲ್ಲ ಎಂದು ಕಂಡುಕೊಂಡವನು[ತ್ರಿಗುಣಗಳಿಂದ ಭಿನ್ನನಾದ ಭಗವಂತನೆ ಎಲ್ಲದರ ಮೂಲ ಕಾರಣ ಎಂದು ತಿಳಿದವನು] ಮತ್ತು ಗುಣಗಳಿಂದ ಅತೀತನೆಂದು ಭಗವಂತನನ್ನು ತಿಳಿದವನು[ನಿಜವಾದ ಮನುಷ್ಯ] ನನ್ನಲ್ಲೆ ನೆಲೆಸುತ್ತಾನೆ. 

ನಮ್ಮ ಜೀವನದಲ್ಲಿ ಏನೇನು ನಡೆಯುತ್ತದೆ ಅದು ಈ ಮೂರು ಗುಣಗಳ ಪ್ರಕ್ರಿಯೆ. ನಾವು ನಾವಾಗಿ ಏನೂ ಮಾಡುವುದಿಲ್ಲ. ಬದಲಿಗೆ ಎಲ್ಲವೂ ತ್ರಿಗುಣಗಳ ಪ್ರಭಾವದಿಂದ ನಡೆಯುತ್ತಿರುತ್ತದೆ. ಪ್ರಕೃತಿಯಿಂದ ಬಂದು, ನಮ್ಮ ಸ್ವರೂಪವನ್ನು ಮುಚ್ಚಿ ಅವು ಕೆಲಸ ಮಾಡುತ್ತಿರುತ್ತವೆ. ಹಾಗಾಗಿ  ಒಬ್ಬ ವ್ಯಕ್ತಿಯ ಮೇಲ್ನೋಟದ ವರ್ತನೆಯಿಂದ ಆತನ ನಿಜ  ಸ್ವಭಾವವನ್ನು ಅರಿಯುವುದು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ನಾವು ಪ್ರಪಂಚದಲ್ಲಿ ನಡೆಯುವ ಘಟನೆಗಳನ್ನು ನಿರ್ವೀಕಾರರಾಗಿ ಕಾಣಲು ಅಭ್ಯಾಸ ಮಾಡಿಕೊಳ್ಳಬೇಕು.
ಸತ್ವಕ್ಕೆ ಶ್ರುತಿಗೂಡಿದ ಮನಸ್ಸು ಸತ್ವಕ್ಕೆ ಅನುಗುಣವಾದ ವಿಷಯವನ್ನೇ ಗ್ರಹಿಸುತ್ತದೆ. ಅಂಥಹ ವ್ಯಕ್ತಿ  ಎಂದೂ ‘ನಾನು ಮಾಡಿದೆ’ ಎಂದು ಭ್ರಮೆ ಪಡುವುದಿಲ್ಲ. ಇಲ್ಲಿ ಗುಣಗಳಿಗಿಂತ ಬೇರೆಯಾದ ಕರ್ತಾ ಇಲ್ಲ ಎಂದಿದ್ದಾರೆ.  ಜಡಕ್ಕೆ ಎಂದೂ ಕರ್ತಾ ಎನ್ನುವುದಿಲ್ಲ. ಆದ್ದರಿಂದ ಗುಣ ಅಂದರೆ ಕೇವಲ ಜಡವಾದ ಗುಣವಲ್ಲ. ಅದಕ್ಕೆ ಅಭಿಮಾನಿಯಾದ ಚೈತನ್ಯವನ್ನು ಗುರುತಿಸು ಎನ್ನುವ ಸಂದೇಶ ಈ ಶ್ಲೋಕದಲ್ಲಿದೆ.[ಶ್ಲೋಕ ೧೭ರಲ್ಲಿ ನಾವು ಈ ಬಗ್ಗೆ ಚರ್ಚಿಸಿದ್ದೇವೆ]. ಕರ್ತೃತ್ವದಲ್ಲಿ ಅನೇಕ ವಿಧ. ಇಚ್ಛಾಪೂರ್ವಕ ಕೃತಿ ಎಲ್ಲಿದೆಯೋ ಅದು ಕರ್ತಾ. ಇದು ಇರುವುದು ಚೇತನಕ್ಕೆ ಮಾತ್ರ. ಆದರೆ ನಿಜವಾದ ಕರ್ತೃತ್ವ ‘ಸ್ವತಂತ್ರ ಇಚ್ಛಾಪೂರ್ವಕ ಕೃತಿ’. ಇದು ಇರುವುದು ಕೇವಲ ಭಗವಂತನಲ್ಲಿ. ‘ನಾಹಂ ಕರ್ತಾ ಹರಿಃ ಕರ್ತಾ’  ಎನ್ನುವ ಪ್ರಸಿದ್ಧವಾದ ಮಾತು ನಮಗೆ ತಿಳಿದೇ ಇದೆ. ಇದನ್ನು  ಮೊಕ್ಷಧರ್ಮಪರ್ವದಲ್ಲಿ ಈ ರೀತಿ ಹೇಳಿದ್ದಾರೆ:   
ನಾಹಂ ಕರ್ತಾ ನ ಕರ್ತಾ ತ್ವಂ ಕರ್ತಾಯಸ್ತು ಸದಾ ಪ್ರಭುಃ ||
ಸೋSಯಂ ಪಚತಿ ಕಾಲೋ ಮಾಮ್ ವೃಕ್ಷೇ ಫಲಂ ಇವಾಗತಂ || ೧೨-೨೨೦-೮೪ ||
“ನೀನೂ ಮಾಡಿಲ್ಲ, ನಾನೂ ಮಾಡಿಲ್ಲ- ‘ಅವನು’ ನಮ್ಮಿಂದ ಮಾಡಿಸಿದ”. ಈ ಎಚ್ಚರ ಇದ್ದಾಗ ನಮಗೆ ಕರ್ತೃತ್ವದ ಅಹಂಕಾರ ಬರಲು ಸಾಧ್ಯವಿಲ್ಲ. ಇದರಿಂದ ದ್ವೇಷವಿಲ್ಲ, ಮಮಕಾರವಿಲ್ಲ. ‘ನಾನು ಮಾಡಿದೆ , ನನ್ನಿಂದಾಯ್ತು’ ಎನ್ನುವುದು  ಕೇವಲ ಭ್ರಮೆ. ಈ ಜಗತ್ತಿನಲ್ಲಿ ಏನೇ ನಡೆದರೂ ಅದು ಈ ಮೂರು ಗುಣಗಳ ಪ್ರಭಾವದಿಂದ ನಡೆದಿದೆ. ಅದನ್ನು ಮೀರಿ ನನ್ನಷ್ಟಕ್ಕೆ ನಾನು ಏನೂ ಮಾಡಿಲ್ಲ. ಈ ಅರಿವು ನಮಗೆ ಬರಬೇಕು.
ತ್ರಿಗುಣಗಳ ಪ್ರಭಾವ ಜಡದಲ್ಲೂ ಇದೆ, ಚೇತನದಲ್ಲೂ ಇದೆ. ಅದರ ಪ್ರಭಾವದಿಂದ ಕ್ರಿಯೆ ನಡೆಯುತ್ತದೆ. ಯಾರೋ ಒಬ್ಬರು ನಿಮಗೆ ಬೈದರು ಎಂದರೆ-ಆತನಲ್ಲಿ ಆ ಕ್ಷಣದಲ್ಲಿ ರಜೋಗುಣ ಜಾಗೃತವಾಗಿ ಕೆಲಸ ಮಾಡುತ್ತಿದೆ ಎಂದರ್ಥ. ನಾವು ಈ ಅರಿವಿನಿಂದ ಆ ಕ್ಷಣದಲ್ಲಿ ವರ್ತಿಸಬೇಕು. ಇದನ್ನು ಶ್ರೀರಾಮಚಂದ್ರ ತನ್ನ ಜೀವನದಲ್ಲಿ ನಡೆದು ತೋರಿಸಿದ್ದಾನೆ. ರಾಮಾಯಣದಲ್ಲಿ ವಾಲ್ಮೀಕಿ ಹೇಳುತ್ತಾರೆ:
ಸ ಹಿ ನಿತ್ಯಂ ಪ್ರಶಾಂತಂ ಮೃದುಪೂರ್ವಃ ಚ ಭಾಷತೆ |
ಉಚ್ಚಮಾನೋSಪಿ ಪರುಷಮ್ ನೋತ್ತರಂ ಪ್ರತಿಪದ್ಯತೆ ||ಅಯೋಧ್ಯಾ-೧.೧೫||
ರಾಮನಲ್ಲಿ ಯಾರಾದರೂ ಜಗಳಕ್ಕೆ ನಿಂತರೆ ಆತ ಎಂದೂ ಸಿಟ್ಟಿಗೇಳುತ್ತಿರಲಿಲ್ಲ. “ಮತ್ತೆ ಮಾತನಾಡೋಣ” ಎಂದು ಹೊರಟು ಹೋಗುತ್ತಿದ್ದನಂತೆ.  ಏಕೆಂದರೆ ಒಬ್ಬ ವ್ಯಕ್ತಿಯಲ್ಲಿ ರಜೋಗುಣ ಕೆಲಸ ಮಾಡುತ್ತಿರುವಾಗ, ಅವರೊಂದಿಗೆ ನಾವು ರಜೋಗುಣದಿಂದ ವರ್ತಿಸಬೇಕಾದ ಪ್ರಸಂಗ ಬಂದುಬಿಡುತ್ತದೆ. ಇದು ಬಹಳ ಅಪಾಯಕಾರಿ. ಆದ್ದರಿಂದ ರಜೋಗುಣಕ್ಕೊಳಗಾದವರೊಂದಿಗೆ ನೀನು   ರಾಜಸನಾಗಬೇಡ. ತಟಸ್ಥನಾಗಿ ದೂರ ನಿಲ್ಲು(Act but never React). ಆಗ ಅವರ ರಜೋಗುಣ ತನ್ನಷ್ಟಕ್ಕೆ ಕುಸಿಯುತ್ತದೆ. ಸಿಟ್ಟು ಮಾಡುವವರ ಮುಂದೆ ಮೌನಿಯಾದರೆ ಅವರ ಸಿಟ್ಟು ಬಹುಬೇಗ ಕರಗುತ್ತದೆ. ಹೀಗೆ ನಾವು ಈ ಗುಣಗಳ ಪ್ರಭಾವವನ್ನು ಗುರುತಿಸಿದಾಗ ನಮ್ಮ ಬದುಕಿನ ನಡೆಯೂ ಬೇರೆಯಾಗುತ್ತದೆ.
ಮೇಲೆ ಹೇಳಿರುವ ವಿಷಯವನ್ನಷ್ಟೇ ತಿಳಿದರೆ ಸಾಲದು. ಈ ತ್ರಿಗುಣಗಳನ್ನು ಮೀರಿ ನಿಂತವ ಭಗವಂತ. ಅವನನ್ನು ತಿಳಿದಾಗ ನೀನು ತ್ರಿಗುಣಗಳನ್ನು ಮೀರಿ ನಿಲ್ಲಲು ಸಹಾಯವಾಗುತ್ತದೆ. ಆ ಭಗವಂತನನ್ನು ಸೇರಲು ನಾನು ಈ ತ್ರಿಗುಣಗಳ ಪ್ರಭಾವದಿಂದ ಹೊರ ಬರಬೇಕು ಎನ್ನುವ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. “ಇಂಥವರ ಮನಸ್ಸು ನನ್ನಲ್ಲಿ ನೆಲೆಗೊಳ್ಳುತ್ತದೆ ಮತ್ತು ಅದರಿಂದಾಗಿ ಮುಂದೆ ಅವರು ನನ್ನನ್ನು ಬಂದು ಸೇರಿ ನನ್ನಲ್ಲೇ ನೆಲೆಸುತ್ತಾರೆ” ಎನ್ನುತ್ತಾನೆ ಕೃಷ್ಣ.
ಈ ಶ್ಲೋಕಕ್ಕೆ ಇನ್ನೊಂದು ಮುಖವಿದೆ.    “ಗುಣೇಭ್ಯಃ ಅನ್ಯಂ ಕರ್ತಾರಂ ಯದಾ ದ್ರಷ್ಟಾ ಅನುಪಶ್ಯತಿ ತದಾ ಸಃ ‘ನಾ’ ಭವತಿ”. ಇಲ್ಲಿ  “ಗುಣೇಭ್ಯಃ ಅನ್ಯಂ” ಅಂದರೆ ತ್ರಿಗುಣಮಾನಿನಿಯಾಗಿರತಕ್ಕಂತಹ, ಗುಣಶಬ್ದವಾಚ್ಯಳಾದ, ಶ್ರೀ-ಭೂ-ದುರ್ಗ ನಾಮಕಳಾದ, ಮಹಾಲಕ್ಷ್ಮಿಗಿಂತಲೂ ಅತೀತವಾದ ಒಂದು ಶಕ್ತಿ. ಅವನೇ ನಿಜವಾದ ಕರ್ತಾ. ಯಾರಾತ? ಮುಂಡಕೋಪನಿಷತ್ತಿನಲ್ಲಿ ಹೇಳುವಂತೆ:
ಯದಾ ಪಶ್ಯಃ ಪಶ್ಯತೇ ರುಕ್ಮವರ್ಣಂ ಕರ್ತಾರಮೀಶಂ ಪುರುಷಂ ಬ್ರಹ್ಮಯೋನಿಂ || ೩-೧-೩||
ಯಾರು ಚತುರ್ಮುಖನಿಗೂ ತಂದೆಯೋ, ಯಾರು ಚಿತ್ಪ್ರಕೃತಿಗೂ ನಿಯಾಮಕನೋ, ಯಾರು ಸಮಸ್ತ ವೇದಗಳಿಂದ ವಾಚ್ಯನೋ –ಅವನೊಬ್ಬನೆ ಕರ್ತಾ. ಇದನ್ನು ತಿಳಿದವನು ನಿಜವಾದ ಮಾನವ. 
ಎಲ್ಲಾ ಅಧ್ಯಾತ್ಮ ಸಾಧನೆ ಮಾಡುವ ಸೌಕರ್ಯವಿರುವ ಶರೀರ-ಮನುಷ್ಯ ಶರೀರ ಮಾತ್ರ. ಅಂಥಹ ಶರೀರವನ್ನು  ಉಪಯೋಗಿಸಿಕೊಳ್ಳುವವ ನರ. ಧರ್ಮ-ಅರ್ಥ-ಕಾಮಗಳಿಂದ ಬಿಡಿಸಿಕೊಳ್ಳುವುದು ಎಂದರೆ ಸತ್ವ-ರಜಸ್ಸು-ತಮೋಗುಣಗಳಿಂದ ಬಿಡಿಸಿಕೊಂಡು ಭಗವಂತನನ್ನು ಸೇರುವುದು. ಇದು ಮನುಷ್ಯನ ಜೀವನದ ಗುರಿ. “ಈ ಮೂರು ಗುಣಗಳು ನನ್ನಲ್ಲಿ ಕೆಲಸ ನಡೆಸಿವೆ, ನಾನು ಈ ಪ್ರಭಾವದಿಂದ ಕಳಚಿಕೊಂಡು ಮೇಲೇರಬೇಕು” ಎನ್ನುವ ಎಚ್ಚರವಿರುವುದು ಮನುಷ್ಯನಿಗೆ ಮಾತ್ರ. ಈ ಎಚ್ಚರದಿಂದಾಗಿ “ಮದ್ಭಾವಂ ಸೋSಧಿಗಚ್ಛತಿ”-ಅವನಲ್ಲಿ ಭಕ್ತಿಜ್ಞಾನಗಳು ಮನಸ್ಸಿನಲ್ಲಿ ತುಂಬಿ ಆತ ಮೋಕ್ಷವನ್ನು ಸೇರುತ್ತಾನೆ.
  
ಗುಣಾನೇತಾನತೀತ್ಯ ತ್ರೀನ್ ದೇಹೀ ದೇಹಸಮುದ್ಭವಾನ್ ।
ಜನ್ಮಮೃತ್ಯುಜರಾದುಃಖೈರ್ವಿಮುಕ್ತೋSಮೃತಮಶ್ನುತೇ                   ॥೨೦॥

ಗುಣಾನ್ ಏತಾನ್ ಅತೀತ್ಯ ತ್ರೀನ್ ದೇಹೀ ದೇಹ ಸಮುದ್ಭವಾನ್ ।
ಜನ್ಮ ಮೃತ್ಯು ಜರಾ ದುಃಖೈಃ ವಿಮುಕ್ತಃ ಅಮೃತಮ್ ಅಶ್ನುತೇ—ದೇಹದಲ್ಲಿ ಮೂಡಿಬರುವ ಈ ಮೂರು ಗುಣಗಳನ್ನು ದಾಟಿದಾಗ ಜೀವ ಹುಟ್ಟು ಸಾವು ಮುಪ್ಪಿನ ದುಃಖದಿಂದಲು ಪಾರಾಗಿ ಅಮರನಾಗುತ್ತಾನೆ.

ನಮ್ಮ ಸ್ವರೂಪವನ್ನು ಮುಚ್ಚಿ ಗಾಢವಾಗಿ ಪರಿಣಾಮಬೀರುವ ಈ ಮೂರು ಗುಣಗಳನ್ನು ನಾವು ದಾಟಬೇಕು. [ಇಲ್ಲಿ ಮೂರು ಗುಣದಲ್ಲಿ ಸತ್ವವನ್ನು ದಾಟುವುದು ಎಂದರೆ ಸ್ಥೂಲ ಸತ್ವವನ್ನು ದಾಟಿ, ಸೂಕ್ಷ್ಮ ಸತ್ವವನ್ನು ಸೇರುವುದು ಎಂದರ್ಥ]. ಹೀಗೆ ಮೂರು ಗುಣಗಳನ್ನು ದಾಟಿ ತ್ರಿಗುಣಾತೀತನಾದರೆ, ಆಗ ನಾವು ಈ ಸಂಸಾರದ ಹುಟ್ಟು-ಸಾವು-ರೋಗ-ಮುಪ್ಪು-ದುಃಖ ಎಲ್ಲವನ್ನು ದಾಟಿ ಭಗವಂತನನ್ನು ಸೇರಿ ಅಮರರಾಗಬಹುದು. ಇದರಿಂದ ಎಂದೂ ಹುಟ್ಟು ಸಾವಿಲ್ಲದ ಆನಂದದ ಸ್ಥಿತಿಯಾದ ಮೋಕ್ಷವನ್ನು ಪಡೆಯಲು ಸಾಧ್ಯ.

Sunday, November 20, 2011

Bhagavad Gita Kannada Chapter-14 Shloka-17


ನಮ್ಮಲ್ಲಿ ಯಾವ ಗುಣ ಪೂರ್ಣವಾಗಿ ಜಾಗೃತವಾಗಿದೆ ಎಂದು ಹೇಗೆ ತಿಳಿಯುತ್ತದೆ ಎನ್ನುವುದರೆ ವಿವರಣೆಯನ್ನು, ಮುಂದಿನ ಶ್ಲೋಕದಲ್ಲಿ ಉಪಸಂಹಾರ ರೂಪದಲ್ಲಿ ಕೃಷ್ಣ ವಿವರಿಸಿದ್ದಾನೆ .

ಸತ್ತ್ವಾತ್ ಸಂಜಾಯತೇ ಜ್ಞಾನಂ ರಜಸೋ ಲೋಭ ಏವ ಚ   ।
ಪ್ರಮಾದಮೋಹೌ ತಮಸೋ ಭವತೋSಜ್ಞಾನಮೇವ ಚ                  ॥೧೭॥

ಸತ್ತ್ವಾತ್ ಸಂಜಾಯತೇ ಜ್ಞಾನಮ್ ರಜಸಃ  ಲೋಭಃ  ಏವ ಚ            ।
ಪ್ರಮಾದ ಮೋಹೌ ತಮಸಃ  ಭವತಃ ಅಜ್ಞಾನಮ್ ಏವ ಚ—ಸತ್ವದಿಂದ ತಿಳಿವು ತಿಳಿಯಾಗುತ್ತದೆ. ರಜಸ್ಸಿನಿಂದ ಜಿಪುಣತನ ಬೆಳೆಯುತ್ತದೆ. ತಮಸ್ಸಿನಿಂದ ಮೈಮರೆವು, ಭ್ರಾಂತಿ ಮತ್ತು ತಿಳಿಗೇಡಿತನ ಉಂಟಾಗುತ್ತದೆ.

“ಸತ್ತ್ವಾತ್ ಸಂಜಾಯತೇ ಜ್ಞಾನಮ್”- ಗೀತೆಯ ಈ ಸಾಲು ಬಹಳ ಮುಖ್ಯವಾದ ಸಂದೇಶವನ್ನು ಕೊಡುತ್ತದೆ. ಯಾವಾಗ ಮನುಷ್ಯನಿಗೆ ಉಳಿದ ಎಲ್ಲಾ ಸಂಗತಿಗಳಿಗಿಂತ ಜ್ಞಾನ ಮುಖ್ಯ, ಅದಕ್ಕಾಗಿ ನಾನು ಏನನ್ನಾದರೂ ಕಳೆದುಕೊಳ್ಳಲು ಸಿದ್ಧ ಎನ್ನುವ ದೃಢ ನಿರ್ಧಾರ ಬರುತ್ತದೋ- ಆಗ ನಾವು ನಿಸ್ಸಂದೇಹವಾಗಿ ಇದು ಸತ್ವಗುಣದ ಪೂರ್ಣ ಜಾಗೃತಾವಸ್ಥೆ ಎಂದು ತಿಳಿಯಬಹುದು. ಇದಕ್ಕೆ ಉತ್ತಮ ಉದಾಹರಣೆ ಕಠೋಪನಿಷತ್ತಿನಲ್ಲಿ ಬರುವ ಯಮ ಮತ್ತು ನಚಿಕೇತನ ಈ ಸಂಭಾಷಣೆ:

ಏತತ್ತುಲ್ಯಂ ಯದಿ ಮನ್ಯಸೇ ವರಂ  ವೃಣೀಷ್ವ ವಿತ್ತಂ ಚಿರಜೀವಿಕಾಂ ಚ |
ಮಹಾಭೂಮೌ ನಚಿಕೇತಸ್ತ್ವಮೇಧಿ  ಕಾಮಾನಾಂ ತ್ವಾ ಕಾಮಭಾಜಂ ಕರೋಮಿ.                     ||೧-೨೪ ||
ಯೇ ಯೇ ಕಾಮಾ ದುರ್ಲಭಾ ಮರ್ತ್ಯಲೋಕೇ   ಸರ್ವಾನ್ ಕಾಮಾಂಶ್ಛಂದತಃ ಪ್ರಾರ್ಥಯಸ್ವ |
ಇಮಾ ರಾಮಾಃ ಸರಥಾಃ ಸತೂರ್ಯಾ   ನ ಹೀದೃಶಾ ಲಂಭನೀಯಾ ಮನುಷ್ಯೈಃ |
ಆಭಿರ್ಮತ್ಪ್ರತ್ತಾಭಿಃ ಪರಿಚಾರಯಸ್ವ  ನಚಿಕೇತೋ ಮರಣಂ ಮಾಽನುಪ್ರಾಕ್ಷೀಃ                          ||೧-೨೫||

ಇಲ್ಲಿ “ನನಗೆ ಆತ್ಮ ಜ್ಞಾನವನ್ನು ಬೋಧಿಸು" ಎಂದು ನಚಿಕೇತ ಯಮನನ್ನು ಕೇಳಿದಾಗ: “ನೀನಿನ್ನೂ ಚಿಕ್ಕವನು, ಆ ವಿದ್ಯೆ ಬೇಡ. ಅದಕ್ಕೆ ಬದಲಾಗಿ ನಿನ್ನನ್ನು ಭೂಮಂಡಲದ ಚಕ್ರವರ್ತಿಯನ್ನಾಗಿ ಮಾಡುತ್ತೇನೆ; ನೀನು ಬಯಸಿದ್ದು ಸಿಗುವಂತೆ ಮಾಡುತ್ತೇನೆ; ಆಯುಷ್ಯ ಐಶ್ವರ್ಯವನ್ನು ಕೊಡುತ್ತೇನೆ" ಎಂದು ಜವರಾಯ ನುಡಿಯುತ್ತಾನೆ. ಆಗ ನಚಿಕೇತ ಹೀಗೆ ಹೇಳುತ್ತಾನೆ:

ಶ್ವೋಭಾವಾ ಮರ್ತ್ಯಸ್ಯ ಯದಂತಕೈತತ್   ಸರ್ವೇಂದ್ರಿಯಾಣಾಂ ಜರಯಂತಿ ತೇಜಃ |
ಅಪಿ ಸರ್ವಂ ಜೀವಿತಮಲ್ಪಮೇವ   ತವೈವ ವಾಹಾಸ್ತವ ನೃತ್ಯಗೀತೇ                                      ||೧-೨೬||
ನ ವಿತ್ತೇನ ತರ್ಪಣೀಯೋ ಮನುಷ್ಯೋ   ಲಪ್ಸ್ಯಾಮಹೇ ವಿತ್ತಮದ್ರಾಕ್ಷ್ಮ ಚೇತ್ತ್ವಾ |
ಜೀವಿಷ್ಯಾಮೋ ಯಾವದೀಶಿಷ್ಯಸಿ ತ್ವಂ   ವರಸ್ತು ಮೇ ವರಣೀಯಃ ಸ ಏವ                               ||೧-೨೭||
ಅಜೀರ್ಯತಾಮಮೃತಾನಾಮುಪೇತ್ಯ   ಜೀರ್ಯನ್ಮರ್ತ್ಯಃ ಕ್ವಧಃಸ್ಥಃ ಪ್ರಜಾನನ್ |
ಅಭಿಧ್ಯಾಯನ್ ವರ್ಣರತಿಪ್ರಮೋದಾನ್   ಅತಿದೀರ್ಘೇ ಜೀವಿತೇ ಕೋ ರಮೇತ                       ||೧-೨೮||
ಯಸ್ಮಿನ್ನಿದಂ ವಿಚಿಕಿತ್ಸಂತಿ ಮೃತ್ಯೋ   ಯತ್ಸಾಂಪರಾಯೇ ಮಹತಿ ಬ್ರೂಹಿ ನಸ್ತತ್ |
ಯೋಽಯಂ ವರೋ ಗೂಢಮನುಪ್ರವಿಷ್ಟೋ  ನಾನ್ಯಂ ತಸ್ಮಾನ್ನಚಿಕೇತಾ ವೃಣೀತೇ                  ||೧-೨೯||

“ನೀನು ಎಷ್ಟೇ ಕೊಟ್ಟರೂ ಅದು ಅಲ್ಪ. ಎಷ್ಟೇ ಆಯಸ್ಸು ಪಡೆದರೂ ನಾವೊಂದು ದಿನ ಸಾಯಬೇಕು. ಆದ್ದರಿಂದ ಇದ್ಯಾವುದೂ ನನಗೆ ಬೇಡ. ನೀನು ಇಡೀ ಜಗತ್ತನ್ನು ನನಗೆ ಧಾರೆಯೆರೆದರೂ ಅದು ನನಗೆ ಬೇಡ. ನನಗೆ ಜ್ಞಾನ ಬೇಕು. ಆ ಆತ್ಮಜ್ಞಾನವಿದ್ಯೆಯನ್ನೇ ತಿಳಿಸಿಕೊಡು" ಎಂದು. ಇದು ಯಾವ ಪ್ರಲೋಭನೆಗೂ ಒಳಗಾಗದ ನಿಜವಾದ ಸತ್ವ. ಜ್ಞಾನ ಸಾಧನೆಯ ನಿಜವಾದ ಹಸಿವುಳ್ಳವರು ಎಲ್ಲವನ್ನು ಕಳೆದುಕೊಳ್ಳಲು ಸಿದ್ಧರಾಗಿ ಹೇಗೆ ಜ್ಞಾನಮಾರ್ಗದಲ್ಲಿ ಸಾಗುತ್ತಾರೆ ಎನ್ನುವುದಕ್ಕೆ ಇತ್ತೀಚೆಗಿನ ಉತ್ತಮ ಉದಾಹರಣೆ- ಸ್ವಾಮಿರಾಮ್ (1925–1996). ಅವರ ಜೀವನ ಚರಿತ್ರೆಯನ್ನು ನಾವು ‘Lliving with the Himalayan Masters’ ಎನ್ನುವ ಪುಸ್ತಕದಲ್ಲಿ ಓದಿ ತಿಳಿಯಬಹುದು. ಶಾಸ್ತ್ರ ಓದಿದರೂ ಶಾಸ್ತ್ರದ ಯಥಾರ್ಥ ಜ್ಞಾನ ಬರಬೇಕಿದ್ದರೆ ನಮ್ಮೊಳಗೆ ಸಾತ್ವಿಕತೆ ಇರಬೇಕು. ಅಕಾರ ವಾಚ್ಯನಾದ ಭಗವಂತನ ಜ್ಞಾನ ಬರುವುದು ಸತ್ವಗುಣವಿದ್ದಾಗ ಮಾತ್ರ. ಸತ್ವಗುಣ ಪೂರ್ಣ ಜಾಗೃತವಾದಾಗ ನಮಗೆ ಯಥಾರ್ಥಜ್ಞಾನ ತಿಳಿಯುತ್ತದೆ ಮತ್ತು  ಉಳಿದ ಎಲ್ಲಾ ಪ್ರಾಪಂಚಿಕ ಸಂಗತಿ ಜ್ಞಾನದ ಮುಂದೆ ಶೂನ್ಯ ಎನ್ನುವ ಸತ್ಯ ತಿಳಿಯುತ್ತದೆ.
 “ರಜಸೋ ಲೋಭ ಏವ ಚ”- ಲೋಭ ಎನ್ನುವುದು ರಜಸ್ಸಿನ ಮೀಸಲಾದ ಗುಣ(Exclusive Quality).  ಇದನ್ನು ಸಾತ್ವಿಕರಲ್ಲಿ ಕಾಣಲು ಸಾಧ್ಯವಿಲ್ಲ.  ಯಾವುದೋ ಒಂದು ವಸ್ತುವಿನ ಬಗ್ಗೆ ಕಾಮ, ಆ ವಸ್ತು ಸಿಗದಿದ್ದಾಗ ಕ್ರೋಧ, ಸಿಕ್ಕಿದಾಕ್ಷಣ –ಲೋಭ. ಅದನ್ನು ಉಪಯೋಗಿಸುವುದೂ ಇಲ್ಲ, ಇನ್ನೊಬ್ಬರಿಗೆ ಕೊಡುವುದೂ ಇಲ್ಲ. ದಾನ ಎನ್ನುವುದು ಇವರಿಗೆ ಬಲು ದೂರ! ನಾವು ನಮ್ಮ ಹತ್ತಿರ ಏನಿದೆ ಅದನ್ನು ಹಂಚಿ ಬದುಕಬೇಕು ಎನ್ನುವುದು ಸತ್ವ. ಇದನ್ನು ಈಶೋಪನಿಷತ್ತಿನಲ್ಲಿ ಬಹಳ ಸುಂದರವಾಗಿ ಹೇಳಿದ್ದಾರೆ:
ಓಂ ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್  |
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಂ                         || ೧ ||
ಭಗವಂತ ಎಲ್ಲವುದಕ್ಕೂ ಸ್ವಾಮಿ. ಅವನು ಕೊಟ್ಟಿದ್ದನ್ನು ನಾವು ಅನುಭವಿಸಬೇಕು. ಇಲ್ಲದ ಸಂಪತ್ತಿಗಾಗಿ ಆಸೆಪಡಬಾರದು. ಜಗತ್ತಿನ ಸರ್ವ ಸಂಪತ್ತಿನ ಒಡೆಯ ಆ ಭಗವಂತ. ಆದ್ದರಿಂದ ಆತ ಕೊಟ್ಟಿರುವ ಸಂಪತ್ತನ್ನು ‘ನನ್ನದು’ ಎಂದುಕೊಂಡು ಲೋಭದಿಂದ ಬದುಕುವುದು ಸರಿಯಲ್ಲ. ಆದರೆ ರಜೋಗುಣದ ಬಹಳ ಮುಖ್ಯ ದೋಷ ಈ ಲೋಭ. ಇದು ಇನ್ನೊಬ್ಬರ ಬಗ್ಗೆ ಸಹಾನುಭೂತಿ ಇಲ್ಲದೆ, ತಾನು ಗಳಿಸಿದ್ದನ್ನು ಇನ್ನೊಬ್ಬರಿಗೆ ಕೊಡದೆ, ಕೆಲವೊಮ್ಮೆ ತಾನೂ ತಿನ್ನದೆ ಮುಚ್ಚಿಡುವಂತೆ ಮಾಡುತ್ತದೆ. ಸಾಮಾನ್ಯವಾಗಿ ಪ್ರಾಣಿಗಳಲ್ಲೂ ಇಲ್ಲದ ಕೆಟ್ಟ ಗುಣ ಈ  ಲೋಭ.  ನಮ್ಮಲ್ಲಿ ಲೋಭದ ಲಕ್ಷಣವಿದ್ದರೆ ಅದು ರಜೋಗುಣದ ಜಾಗೃತಾವಸ್ಥೆ ಎನ್ನುವುದನ್ನು ನಾವು ಅರಿಯಬೇಕು.
“ಪ್ರಮಾದಮೋಹೌ ತಮಸೋ ಭವತೋSಜ್ಞಾನಮೇವ ಚ”. ಹೇಗೆ ರಜೋಗುಣದಿಂದ ಲೋಭವೋ, ಹಾಗೆ ತಮೊಗುಣದಿಂದ ಪ್ರಮಾದ ಮತ್ತು ಮೋಹ-ಅದರಿಂದ ತಿಳಿಗೇಡಿತನ. ಒಬ್ಬರನ್ನು ಅತಿಯಾಗಿ ಹಚ್ಚಿಕೊಳ್ಳುವುದು, ಅದರಿಂದ ಅವರು ಮಾಡುವ ತಪ್ಪುಗಳನ್ನು ಕ್ಷಮಿಸುವುದು, ಅವರು ಹೇಳಿದಂತೆ ಕುಣಿಯುವುದು,  ಇತ್ಯಾದಿ. ಇದು ಎಷ್ಟು ಪ್ರಭಾವಶಾಲಿ ಎಂದರೆ- ಇದು ನಮ್ಮ ಜ್ಞಾನವನ್ನೂ ಕೂಡ ಮುಚ್ಚಿಸಿ, ನಮ್ಮನ್ನು ತಪ್ಪು ದಾರಿಯಲ್ಲಿ ಕರೆದೊಯ್ಯುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಭಾಗವತದ ಆರನೇ ಸ್ಕಂದದ ಮೊದಲ ಅಧ್ಯಾಯದಲ್ಲಿ ಬರುವ ಅಜಾಮಿಳನ ಕಥೆ. ಈತ ಒಬ್ಬ ಸಾತ್ವಿಕ ಬ್ರಾಹ್ಮಣ. ಆತನಿಗೆ ಮದುವೆಯಾಗಿತ್ತು. ಒಮ್ಮೆ ಪೂಜೆಗೆ ಹೂ-ತುಳಸಿ ತರಲು ಕಾಡಿಗೆ ಹೋದಾಗ ಕಂಡ ಒಂದು ದೃಶ್ಯ ಆತನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ತಾನು ಕಾಡಿನಲ್ಲಿ ಕಂಡ ಯುವತಿಯನ್ನು ಆತ ಮೊಹಿಸಲಾರಂಭಿಸಿದ. ಆಕೆಗಾಗಿ ಮದ್ಯ-ಮಾಂಸಾಹಾರದಲ್ಲಿ ತೊಡಗಿದ. ಆಕೆಯ ಬಯಕೆಗಳನ್ನು ತೀರಿಸಲು ಕಳ್ಳತನ ಮಾಡಿದ. ಸಾತ್ವಿಕನಾಗಿದ್ದ ಒಬ್ಬ ವಿಪ್ರ-ಪೂರ್ಣ ತಾಮಸನಾದ. ಈ ಕಥೆಯನ್ನು ಮನಃಶಾಸ್ತ್ರೀಯವಾಗಿ ನೋಡಿದರೆ- ಈ ರೀತಿ ಘಟನೆ ಏಕೆ ನಡೆಯಿತು ಎನ್ನುವುದು ತಿಳಿಯುತ್ತದೆ. ಅಜಾಮಿಳ ಮದುವೆಯಾಗಿದ್ದ, ಆದರೆ ಆತನ ಮನೆಯಲ್ಲಿ ಮಡಿ-ಮೈಲಿಗೆ ಎನ್ನುವ ಅನೇಕ ಕರ್ಮಾಚರಣೆಯಿಂದಾಗಿ ಆತ ತನ್ನಲ್ಲಿನ ಅಂತರಂಗದ ಬಯಕೆಯನ್ನು ಬಲವಂತವಾಗಿ ನಿಗ್ರಹಿಸಿದ್ದ. ನಾವು ನಮ್ಮ ಬಯಕೆಯನ್ನು ಬಲವಂತವಾಗಿ ತಡೆಹಿಡಿದರೆ ಅದು ಒಂದಲ್ಲ ಒಂದು ದಿನ ಸ್ಪೋಟವಾಗಿ ಹೊರಬರುತ್ತದೆ. ಈ ಕಾರಣದಿಂದಾಗಿ ಶಾಸ್ತ್ರಕಾರರು ಹೇಳುವಂತೆ “ಅಧ್ಯಾತ್ಮ ಸಾಧನೆ ಮಾಡುವ ಮೊದಲು ನಿನಗೆ ಸಾಂಸಾರಿಕ ಸುಖದ ಮೋಹವಿದ್ದರೆ ಅದನ್ನು ಅನುಭವಿಸು, ಅದರ ನಿಸ್ಸಾರವನ್ನು ಅರಿ, ಆಗ ಸಾಧನೆ ಸುಲಭ” ಎಂದು. ಅಜಾಮಿಳ ಶಾಸ್ತ್ರ ಓದಿದ್ದ, ಆದರೂ ಆತ ಮೋಹಕ್ಕೆ ಬಲಿಯಾದ. ಅದರಿಂದ ಆತನ ಎಲ್ಲಾ ಜ್ಞಾನವೂ ಮರೆಯಾಯಿತು. ತಮೋಗುಣ ಆತನಲ್ಲಿ ಮಾಡಬಾರದ ತಪ್ಪನ್ನು ಮಾಡಿಸಿತು. ಇದು ತಮೋಗುಣ ನಮ್ಮಲ್ಲಿ ಪ್ರಬಲವಾದಾಗ ನಮ್ಮ ಮೇಲೆ ಆಗುವ ಪರಿಣಾಮ.
ಈ ಶ್ಲೋಕದಲ್ಲಿ ಕೃಷ್ಣ ನಮ್ಮಲ್ಲಿ ಯಾವ ಗುಣ ಕೆಲಸ ಮಾಡುತ್ತಿದೆ ಅನ್ನುವುದನ್ನು ಸ್ಪಷ್ಟ ರೂಪುರೇಷೆಯಿಂದ ವಿವರಿಸಿದ. ಈ ಶ್ಲೋಕದ ಸಂಗ್ರಹ ಸಾರಾಂಶ ಇಷ್ಟು: ಜ್ಞಾನದ ತೃಷೆ ಇದ್ದರೆ ಅದು ಸಾತ್ವಿಕ ಗುಣ; ನನಗೇ ಬೇಕು ಉಳಿದವರಿಗೆ ಸಿಗಬಾರದು ಎನ್ನುವ ಲೋಭವಿದ್ದರೆ ಅದು ರಜಸ್ಸು; ಯಾವುದೋ ಒಂದು ಭೌತಿಕ ವಸ್ತುವಿನ ಮೇಲೆ ಅತಿಯಾದ ಮಮತೆ, ಮೋಹ ಬೆಳೆದರೆ ಅದು ತಮಸ್ಸಿನ ಕೆಲಸ.
ಸತ್ವ-ರಜಸ್ಸು-ತಮಸ್ಸುಗಳಿಗೆ ಇನ್ನೊಂದು ಮುಖವಿದೆ. ಪೂಜೆಯಲ್ಲಿ ನವಶಕ್ತಿಗಳನ್ನು ಹೇಳಿದ ಮೇಲೆ ಭಗವಂತನನ್ನು ಅನುಸಂಧಾನ ಮಾಡುವ ಮುಂಚೆ “ಸಂ ಸತ್ವಾಯ ನಮಃ –ರಂ-ರಜಸೇ ನಮಃ-ತಂ ತಮಸೇ ನಮಃ”  ಎನ್ನುವ ಒಂದು ಮಂತ್ರ ಹೇಳುತ್ತಾರೆ. ಈ ಮಂತ್ರವನ್ನು  ಕೆಲವರು ಈ ರೀತಿ ಕೂಡ ಹೇಳುತ್ತಾರೆ:  “ಸಂ ಸತ್ವಾಯ ಶ್ರಿಯೋ ನಮಃ-ರಂ ರಜಸೇ ಭೂವೇ ನಮಃ-ತಂ ತಮಸೇ ದುರ್ಗಾಯ ನಮಃ” ಎಂದು. [ಇದು ಮಂತ್ರವಲ್ಲ, ಮೂಲರೂಪದ ಮಂತ್ರ:   “ಸಂ ಸತ್ವಾಯ ನಮಃ –ರಂ-ರಜಸೇ ನಮಃ-ತಂ ತಮಸೇ ನಮಃ” ] ಇಲ್ಲಿ ಸಂ ಸತ್ವಾಯ ನಮಃ ಎಂದರೆ ಸತ್ವಗುಣಕ್ಕೆ ನಮಸ್ಕಾರ ಮಾಡುವುದಲ್ಲ- ಸತ್ವ ಮಾನಿನಿಯಾದ ಶ್ರೀದೇವಿಗೆ ನಮಸ್ಕಾರ ಮಾಡುವುದು. ರಂ ರಜಸೇ ನಮಃ ಎಂದರೆ ರಜೋ ಮಾನಿನಿಯಾದ ಭೂದೇವಿಗೆ ನಮಸ್ಕಾರ. ತಂ ತಮಸೇ ನಮಃ ಎಂದರೆ ತಮೋ ಮಾನಿನಿಯಾದ ದುರ್ಗಾ ದೇವಿಗೆ ನಮಸ್ಕಾರ. ಇವು ಲಕ್ಷ್ಮಿಯ ಮೂರು ರೂಪಗಳು. ಲಕ್ಷ್ಮಿಯ ಮೂಲ ರೂಪಕ್ಕೆ ‘ಮಹಾಲಕ್ಷ್ಮಿ’ ಎನ್ನುತ್ತಾರೆ. ಈ ಮೂಲರೂಪದಿಂದ ಮೂರು ಆವೇಶ ರೂಪಗಳು.
ಇಲ್ಲಿ ಸತ್ವವನ್ನು ಜಾಗೃತೆಗೊಳಿಸುವವಳು ಶ್ರೀದೇವಿ;ರಜಸ್ಸನ್ನು ಜಾಗೃತೆಗೊಳಿಸುವವಳು ಭೂದೇವಿ; ತಮೋಗುಣವನ್ನೂ ಜಾಗೃತೆಗೊಳಿಸುವವಳು ತಮೋಮಾನಿನಿಯಾದ ದುರ್ಗಾದೇವಿ.  “ಸತ್ತ್ವಾತ್ ಸಂಜಾಯತೇ ಜ್ಞಾನಮ್”- ಅಂದರೆ:  ಸತ್ವಗುಣದ ಅಭಿಮಾನಿನಿಯಾದ ಲಕ್ಷ್ಮಿ ಜ್ಞಾನಪ್ರದಳು ಎಂದರ್ಥ. ನಾರಾಯಣನ ಜ್ಞಾನ ಬರಬೇಕಾದರೆ ಶ್ರೀದೇವಿಯ ಅನುಗ್ರಹಬೇಕು. ‘ಶ್ರೀ’ ಸಂಪತ್ತನ್ನು ಕೊಡುತ್ತಾಳೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಜ್ಞಾನವೆಂಬ ಮಹಾ ಸಂಪತ್ತನ್ನು ಕೊಡುವವಳು ಶ್ರೀದೇವಿ ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ದುಡ್ಡು ಸಂಪತ್ತು ಹೌದು, ಆದರೆ ಜ್ಞಾನ ಮಹಾಸಂಪತ್ತು-ಅದನ್ನು ಕೊಡುವವಳು ‘ಶ್ರೀ’. ನಮ್ಮೊಳಗೆ ಜ್ಞಾನ ಜಾಗೃತವಾಗಬೇಕಾದರೆ ಮೊದಲು ತಾಯಿಯ ‘ಶ್ರೀ’ ರೂಪವನ್ನು ಉಪಾಸನೆ ಮಾಡಬೇಕು. ಭಗವಂತನ ಜ್ಞಾನವನ್ನು ಕರುಣಿಸು ಎಂದು ಆಕೆಯನ್ನು ಬೇಡಬೇಕು.
 ಶಾಸ್ತ್ರಕಾರರು ಹೇಳುವಂತೆ ಮನಸ್ಸು ಭಗವಂತನತ್ತ ಹರಿಯುವುದಕ್ಕೆ ಮೊದಲು ನಾವು  ಮನೋSಭಿಮಾನಿಯನ್ನು ಪ್ರಾರ್ಥಿಸಬೇಕು. ಶಿವ-ಮನೋSಭಿಮಾನಿ ದೇವತೆ. [ಗರುಡ-ಸುಪರ್ಣಿ, ಶೇಷ-ವಾರುಣಿ ಮತ್ತು ಶಿವ-ಪಾರ್ವತಿ ಇವರು ಮನೋಭಿಮಾನಿಯಾದರೂ ಸಹ ವಿಶೇಷತಃ ಶಿವ ಮನೋSಭಿಮಾನಿ] ಜ್ಞಾನ ಬೇಕು ಅನ್ನುವವರ ಮನಸ್ಸಿನ ತಮೋಗುಣವನ್ನು, ಕತ್ತಲೆಯನ್ನು ಓಡಿಸಿ ಬೆಳಕು ತುಂಬುವವರು ಶಿವ-ಪಾರ್ವತಿಯರು. ಈ ಕಾರಣಕ್ಕಾಗಿ ಜ್ಞಾನಕ್ಕೋಸ್ಕರ ಮೊದಲು ನಾವು ಪ್ರಾರ್ಥನೆ ಮಾಡಬೇಕಾಗಿರುವುದು ಶಿವತತ್ವವನ್ನು. ಶಿವ ಜ್ಞಾನ ಕೊಟ್ಟ ಮೇಲೆ ಅದು ಚಿತ್ತದಲ್ಲಿ ಸ್ಮರಣಶಕ್ತಿಯಾಗಿ ಉಳಿಯಲು ನಾವು ಪ್ರಾರ್ಥಿಸಬೇಕಾಗಿರುವುದು ಪ್ರಾಣಶಕ್ತಿಯನ್ನು(ಬ್ರಹ್ಮ-ವಾಯು, ಸರಸ್ವತಿ-ಭಾರತಿ). ನಮಗೆ ಬಂದ ಜ್ಞಾನ ಮರೆಯಾಗದಂತೆ(ಸ್ಥಿರವಾಗುವಂತೆ) ಮಾಡುವ ಪ್ರಮುಖ ಶಕ್ತಿ ಪ್ರಾಣಶಕ್ತಿ (ಆಂಜನೇಯ).  ಈ ರೀತಿ ಸ್ಥಿರವಾದದ್ದು ಮತ್ತೆ ಎತ್ತರಕ್ಕೆ ಹೋಗಿ ಭಗವಂತನನ್ನು ಮುಟ್ಟುವಂತೆ ಮಾಡುವವಳು-ಸದಾ ಭಗವಂತನ ಜೊತೆಗಿರುವ ಲಕ್ಷ್ಮೀದೇವಿ. ಇಂಥಹ ಲಕ್ಷ್ಮಿ ತನ್ನ ಎಲ್ಲಾ ರೂಪದಲ್ಲಿ ಅರಿವನ್ನು ಕೊಡುವುದಿಲ್ಲ. ಆಕೆ ತನ್ನ ಶ್ರೀರೂಪದಲ್ಲಿ  ಜ್ಞಾನರೂಪವಾದ ಸಂಪತ್ತನ್ನು ಕರುಣಿಸುತ್ತಾಳೆ. ‘ಶ್ರೀ’  ಮಹಾಲಕ್ಷ್ಮಿಯ ಅವತಾರಗಳಲ್ಲಿ ಒಂದು. ಸತ್ವವನ್ನು ನಿಯಮನ ಮಾಡಿ ಜಗತ್ತಿನ ರಕ್ಷಣೆಗೆ ವಿಷ್ಣುವಿನ ಜೊತೆಗೆ ಪಣತೊಟ್ಟು ನಿಂತ ರೂಪವಿದು. ಆದ್ದರಿಂದ ಜ್ಞಾನ ಮಾರ್ಗದಲ್ಲಿ ಸಾಗುವವರಿಗೆ ಮುಖ್ಯವಾದುದು ಲಕ್ಷ್ಮಿಯ ಶ್ರೀ ನಾಮಕ ಅನುಗ್ರಹ.
ಇಲ್ಲಿ ನಾವು ಶಿವ, ಪ್ರಾಣದೇವರು ಮತ್ತು ಶ್ರೀದೇವಿ ಅನುಗ್ರಹದಿಂದ ಜ್ಞಾನಮಾರ್ಗದಲ್ಲಿ ಮುನ್ನೆಡೆದು ಭಗವಂತನನ್ನು ಸೇರಬಹುದು ಎನ್ನುವುದನ್ನು ವಿಶ್ಲೇಶಿಸಿದೆವು. ಮುಂದೆ ಭೂತತ್ವದ ಬಗ್ಗೆ ವಿಶ್ಲೇಷಿಸುವ ಮೊದಲು ಶಾಂತಿಮಂತ್ರ ಮತ್ತು ಗಣಪತಿಯ ಪ್ರಾರ್ಥನೆಯ ಮಹತ್ವವನ್ನು ಸಂಕ್ಷಿಪ್ತವಾಗಿ ಇಲ್ಲಿ ವಿಶ್ಲೇಷಿಸೋಣ. ಯಾವುದೇ ಶಾಸ್ತ್ರವನ್ನು ಓದುವ ಮೊದಲು "ಓಂ ಶಾಂತಿಃ ಶಾಂತಿಃ ಶಾಂತಿಃ" ಎಂದು ಶಾಂತಿ ಮಂತ್ರ ಪಠಿಸುತ್ತೇವೆ. ಜ್ಞಾನಾನಂದಗಳ ಪರಾಕಾಷ್ಠೆಯಾದ ಭಗವಂತನೆ, ನನ್ನನ್ನು ಜ್ಞಾನಾನಂದಗಳ(ಶಾ+ಅಂತಿ) ದಾರಿಯಲ್ಲಿ ನೆಡೆಸು ಎನ್ನುವುದು ಈ ಶಾಂತಿ ಮಂತ್ರದ ಅರ್ಥ. ಇದೇ ರೀತಿ, ಪ್ರತೀ ಪೂಜೆಯಲ್ಲಿ ಮೊದಲು ಗಣಪತಿ ಪ್ರಾರ್ಥನೆ ಮಾಡುತ್ತೇವೆ. ಏಕೆಂದರೆ ಶಿವ-ಪಾರ್ವತಿ ಪುತ್ರ ಗಣಪತಿ ಆಕಾಶದ ದೇವತೆ. ಈ ಆಕಾಶ ಭಗವಂತನ ನಾಭಿಯಿಂದ ಸೃಷ್ಟಿಯಾಗಿದೆ. ಆದ್ದರಿಂದ ಗಣಪತಿ ನಮ್ಮ ನಾಭಿ ದೇವತೆ.
ನಾಭ್ಯ ಆಸೀದಂತರಿಕ್ಷಂ ಶೀರ್ಷ್ನೋಧ್ಯೋ ಸಮವರ್ತತ
ಪದ್ಭ್ಯಾಂ ಭೂಮೀರ್ ದಿಶ ಶ್ರೋತ್ರಾತ್ ತತಾ ಲೋಕಾ ಅಕಲ್ಪಯನ್
ನಮ್ಮ ನಾಭಿಯ ಸಮೀಪ ಇರುವ ಮೂರು ಚಕ್ರಗಳು-ಮೂಲಾಧಾರ, ಸ್ವಾದಿಷ್ಟಾನ ಹಾಗು ಮಣಿಪುರ. ನಾಭಿಯಿಂದ ಮೇಲಕ್ಕೆ ಹೃತ್ಕಮಲದಲ್ಲಿ ನಿಜವಾದ ಸಾಧನೆಯ ಅನಾಹತ ಚಕ್ರವಿದೆ. ಮೂಲಾಧಾರ, ಸ್ವಾದಿಷ್ಟಾನ ಹಾಗು ಮಣಿಪುರ ಚಕ್ರಗಳನ್ನು ಮೀರಿ ಹೃದಯವನ್ನು ಪ್ರವೇಶಿಸಬೇಕಾದರೆ ನಾಭಿಯ ಬಾಗಿಲನ್ನು ಗಣಪತಿ ತೆರೆಯಬೇಕು. ಅದಕ್ಕಾಗಿ ನಾವು ಗಣಪತಿಯಲ್ಲಿ ಮೊತ್ತಮೊದಲಿಗೆ ಪ್ರಾರ್ಥನೆ ಮಾಡುತ್ತೇವೆ. ಪ್ರತೀ ಯಜ್ಞದ ಮೊದಲು ಗಣಪತಿ ಮಂಡಲ ಬರೆದು ಪೂಜಿಸಿ, ಆನಂತರ ಯಜ್ಞ ಪ್ರಾರಂಭಿಸುತ್ತಾರೆ. ಗಣಪತಿ ನಾಭಿಯ ಬಾಗಿಲನ್ನು ತೆರೆದಾಗ ಹೃತ್ಕಮಲ ತಾನೇ-ತಾನಾಗಿ ತೆರೆದುಕೊಳ್ಳುತ್ತದೆ. ಈ ಸ್ಥಿತಿಯನ್ನು 'ವೃಷಾಹ' ಎನ್ನುತ್ತಾರೆ. ಭಗವಂತ ಈ ಸ್ಥಿತಿಯಲ್ಲಿ ನಮ್ಮ ಪೂಜೆಯನ್ನು ವೃಷಾಹೀಯಾಗಿ ಸ್ವೀಕರಿಸುತ್ತಾನೆ. ಇಂಥಹ ಭಗವಂತನನ್ನು ‘ವೃಷಾಹೀ’ ಎಂದೂ ಕರೆಯುತ್ತಾರೆ.
“ರಜಸೋ ಲೋಭ ಏವ ಚ”- ರಜಸ್ಸು ಎಂದರೆ ರಜೋಗುಣದ ಅಭಿಮಾನಿನಿಯಾದ ‘ಭೂದೇವಿ’. ಇಲ್ಲಿ ಭೂದೇವಿ ಎಂದರೆ ಭೂಮಿಯ ನಿಯಮನ ಮಾಡುವ ಹದಿನೆಂಟನೇ ಕಕ್ಷೆಯಲ್ಲಿರುವ ದೇವತೆ ಅಲ್ಲ. ಅವಳನ್ನೂ ನಿಯಮನ ಮಾಡುವ ಲಕ್ಷ್ಮಿಯ ಆವೇಶರೂಪ ‘ಭೂ’ ಅದು ಸೃಷ್ಟಿಗೆ ಕಾರಣವಾದದ್ದು. ರಂಜನೆ, ಆಕರ್ಷಣೆ, ಸೆಳೆತ, ಮೋಹ –ಇವೆಲ್ಲವೂ ರಜೋಗುಣದ ಮುಖಗಳು. ಹಾಗಾಗಿ ಒಬ್ಬರನ್ನು ಒಬ್ಬರು ಪ್ರೀತಿಸುವುಕ್ಕೆ ಮೂಲಭೂತವಾಗಿ ಬೇಕಾಗಿರುವುದು-ರಂಜನ. ಗಂಡು-ಹೆಣ್ಣಿನ ಸೆಳೆತವೇ ಸೃಷ್ಟಿಗೆ ಕಾರಣವಾದದ್ದು. ಸೃಷ್ಟಿಗೆ ಬೇಕಾದ ಸೆಳೆತ ಕೊಟ್ಟು ಸೃಷ್ಟಿ ಮಾಡುವ, ಅದೇ ಸೆಳೆತದಿಂದ ದಾರಿ ತಪ್ಪಿಸುವ ಅಂಶ ರಜೋಗುಣದಲ್ಲಿದೆ. ಅಂತಹ ರಜೋಗುಣದ ಸ್ವಭಾವವನ್ನು ಕೊಡುವವಳು ಭೂದೇವಿ. ನನ್ನ ಆಸ್ತಿ, ನನ್ನ ಮನೆ, ನನ್ನ ದುಡಿಮೆ, ನನ್ನ ಹಣ, ಇತ್ಯಾದಿ ಮೋಹ ರಜೋಗುಣದಿಂದ ಬರುವಂಥದ್ದು.
“ಪ್ರಮಾದ ಮೋಹೌ ತಮಸಃ  ಭವತಃ ಅಜ್ಞಾನಮ್ ಏವ ಚ”- ಭೌತಿಕವಾಗಿ ನಮ್ಮನ್ನು ವಿನಾಶದತ್ತ ಕೊಂಡೊಯ್ಯುವ–ಸಂಹಾರ ಶಕ್ತಿಯಾದ, ತಮೋಗುಣದ ಅಭಿಮಾನಿನಿ  ದುರ್ಗ. ಆಕೆ ಸಂಹಾರದ ಕಡೆಗೆ ಹೋಗುವ ಬುದ್ಧಿ ಕೊಡುತ್ತಾಳೆ. ತಪ್ಪನ್ನೇ ಸರಿ ಎಂದು ತಿಳಿದು ತಪ್ಪು ಮಾಡುವುದು, ಅದರಿಂದ ಜಾರಿ ಬೀಳುವುದು, ವಿಪರೀತ ಜ್ಞಾನ, ಜ್ಞಾನದ ಅಭಾವ, ಇತ್ಯಾದಿ–ತಮೋಗುಣದ ಪ್ರಭಾವದಿಂದ ಬರುವಂತದು.
ಹೀಗೆ ಚಿತ್ಪ್ರಕೃತಿಯ ಮೂರು ಆವೇಶರೂಪಗಳಾದ ಶ್ರೀ-ಭೂ-ದುರ್ಗ, ಸತ್ವ-ರಜಸ್ಸು-ತಮಸ್ಸಿನ ಅಭಿಮಾನಿನಿಯರಾಗಿ, ತ್ರಿಗುಣಗಳ ಮೂಲಕ ನಮ್ಮನ್ನು ಬಂಧಿಸುತ್ತಾರೆ. ಆದ್ದರಿಂದ ಚಿತ್ಪ್ರಕೃತಿಯ ಚೈತನ್ಯದ ಮೂರು ರೂಪಗಳೇ ಸತ್ವ-ರಜಸ್ಸು ಮತ್ತು ತಮಸ್ಸು. ಮಹಾಲಕ್ಷ್ಮಿಯ ಶ್ರೀ-ಭೂ-ದುರ್ಗಾ ರೂಪದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಮಹಾಭಾರತ ತಾತ್ಪರ್ಯ ನಿರ್ಣಯದ “ಸರ್ಗಾನುಸರ್ಗ-ಲಯ-ಪ್ರಾದುರ್ಭಾವ ನಿರ್ಣಯ”ವನ್ನು ಓದಿ. [ಏಕೆ ಇಲ್ಲಿ ಈ ಅರ್ಥವನ್ನು ಮಾಡಬೇಕು ಎನ್ನುವುದಕ್ಕೆ ಗೀತೆಯಲ್ಲೇ ಸುಳಿವಿದೆ. ಅದನ್ನು ಮುಂದೆ ಈ ಅಧ್ಯಾಯದ ೧೯ನೇ ಶ್ಲೋಕದಲ್ಲಿ ಕಾಣಬಹುದು].