Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Friday, November 25, 2011

Bhagavad GitA in Kannada Chapter-14 Shloka 23-25


ಉದಾಸೀನವದಾಸೀನೋ ಗುಣೈರ್ಯೋ ನ ವಿಚಾಲ್ಯತೇ      
ಗುಣಾ ವರ್ತಂತ ಇತ್ಯೇವ ಯೋSವತಿಷ್ಠತಿ ನೇಂಗತೇ                       ೨೩

ಉದಾಸೀನವತ್ ಆಸೀನಃ ಗುಣೈಃ ಯಃ  ನ ವಿಚಾಲ್ಯತೇ       
ಗುಣಾಃ ವರ್ತಂತ ಇತಿ  ಏವ ಯಃ ಅವತಿಷ್ಠತಿ ನ ಇಂಗತೇ –ಉದಾಸೀನನಂತೆ ಇದ್ದುಬಿಡುತ್ತಾನೆ. ಗುಣಗಳ ಸೆಳೆತಕ್ಕೆ ಕದಲುವುದಿಲ್ಲ. ಗುಣಗಳು ಇರುವಂಥವೆ ಎಂದು ತೆಪ್ಪಗೆ ಇದ್ದು ಬಿಡುತ್ತಾನೆ. ಅವುಗಳ ತಾಳಕ್ಕೆ ತಾನು ಕುಣಿಯುವುದಿಲ್ಲ.

ಪ್ರಾಪಂಚಿಕ ವ್ಯವಹಾರದಲ್ಲಿ ಈತ ಉದಾಸೀನನಂತೆ ಇದ್ದುಬಿಡುತ್ತಾನೆ. ನಮಗೆ ಬೇಕು ಬೇಡಗಳು ಬರುವುದು ತ್ರಿಗುಣಗಳಿಂದ. ತ್ರಿಗುಣಾತೀತ- “ಹಾಗಾಗಬೇಕು-ಹೀಗೇ ಆಗಬೇಕು” ಎಂದು ಬಯಸುವುದಿಲ್ಲ. “ಹೇಗಾಗಬೇಕೋ ಹಾಗೆ ಭಗವಂತ ಮಾಡುತ್ತಾನೆ” ಎನ್ನುವ ನಂಬಿಕೆ ಅವನಲ್ಲಿರುತ್ತದೆ.[ಇಲ್ಲಿ ಒಂದು ವಿಷಯವನ್ನು ನಾವು ತಿಳಿದುಕೊಳ್ಳಬೇಕು. ಪ್ರಪಂಚದಲ್ಲಿ ನಡೆಯುವ ಘಟನೆಗಳು ನಮ್ಮ ಅಧೀನವಲ್ಲ. ನಾವು ಆಗಬಾರದು ಅಂದುಕೊಳ್ಳುವುದು ಆಗಬಹುದು, ಆಗಬೇಕು ಅಂದುಕೊಳ್ಳುವುದು ಆಗದೇ ಇರಬಹುದು. ಹೀಗಿರುವಾಗ ‘ಹೀಗೇ ಆಗಬೇಕು’ ಎಂದು ವ್ಯರ್ಥವಾಗಿ ಮನಸ್ಸನ್ನು ಉದ್ವೇಗಕ್ಕೊಳಪಡಿಸುವುದರಲ್ಲಿ ಅರ್ಥವಿಲ್ಲ].  ಹೀಗೆ ಬದುಕಿದಾಗ-ಬಯಸಿದ್ದು ಆಗದಿದ್ದಾಗ ಕೋಪವಿಲ್ಲ, ಆದಾಗ ಹಾರಾಟವಿಲ್ಲ. ಮನಸ್ಸು ಪ್ರಸನ್ನವಾಗಿರುತ್ತದೆ.
ಇಂದ್ರಿಯಗಳು ಗುಣಗಳಲ್ಲಿ ಇರುತ್ತವೆ, ಇಂದ್ರಿಯಗಳ ಹಿಂದೆ ಗುಣಗಳಿರುತ್ತವೆ. ಆದರೆ ತ್ರಿಗುಣಾತೀತ ಇವೆಲ್ಲವನ್ನೂ ತಿಳಿದು, ತಲೆಕೆಡಿಸಿಕೊಳ್ಳದೆ, ಯಾವುದೇ ಕ್ರಿಯೆಯಲ್ಲಿ ಕೂಡ[ತಾತ್ಕಾಲಿಕ ಕ್ರಿಯೆಯಲ್ಲಿ ಕೂಡ] ಚಪಲವಿಲ್ಲದೆ ಬದುಕುತ್ತಾನೆ.        

ಸಮದುಃಖಸುಖಃ ಸ್ವಸ್ಥಃ ಸಮಲೋಷ್ಟಾಶ್ಮಕಾಂಚನಃ  
ತುಲ್ಯಪ್ರಿಯಾಪ್ರಿಯೋ ಧೀರಸ್ತುಲ್ಯನಿಂದಾತ್ಮಸಂಸ್ತುತಿಃ                     ೨೪

ಸಮ ದುಃಖಸುಖಃ ಸ್ವಸ್ಥಃ ಸಮ ಲೋಷ್ಟಶ್ಮ  ಕಾಂಚನಃ  
ತುಲ್ಯ ಪ್ರಿಯಪ್ರಿಯಃ  ಧೀರಃ ತುಲ್ಯ ನಿಂದಾತ್ಮ ಸಂಸ್ತುತಿಃ – ಸುಖ-ದುಃಖವನ್ನು ಸಮನಾಗಿ ಕಾಣುತ್ತಾನೆ. ತನ್ನಲ್ಲೆ ತಾನು ಇದ್ದುಬಿಡುತ್ತಾನೆ. ಮಣ್ಣು, ಕಲ್ಲು, ಚಿನ್ನ ಅವನಿಗೆ ಒಂದೆ ತರ. ಸಾಧನೆಯಿಂದ ಬಗೆ ಗಟ್ಟಿಗೊಂಡ ಅವನಿಗೆ ಪ್ರಿಯವೂ ಒಂದೆ; ಅಪ್ರೀಯವೂ ಒಂದೆ. ತೆಗಳಿಕೆಯೂ  ಒಂದೆ. ಹೊಗಳಿಕೆಯೂ ಒಂದೆ.

ತ್ರಿಗುಣಾತೀತ ಸರ್ವ ಸುಖ-ದುಃಖವನ್ನೂ ಸಮನಾಗಿ ಕಾಣುತ್ತಾನೆ. ಏಕೆಂದರೆ ನಮಗೆ ಮೇಲ್ನೋಟಕ್ಕೆ ಸುಖವೆಂದು ಕಾಣುವುದು ನಿಜವಾಗಿ ಸುಖವಾಗಿ ಇರಬೇಕಿಂದಿಲ್ಲ. ಅದೇ ರೀತಿ ದುಃಖ ಕೂಡ. ಇದನ್ನು ತಿಳಿದಾಗ ಎಲ್ಲವೂ ಭಗವಂತನ ಲೀಲೆ ಎನ್ನುವ ಭಾವನೆ ಮನಸ್ಸಿನಲ್ಲಿ ಹುಟ್ಟುತ್ತದೆ. ಆಗ ಎಲ್ಲವನ್ನು ಸಮನಾಗಿ ಕಾಣುವ ಕ್ಷಮತೆ ನಮ್ಮಲ್ಲಿ ಬೆಳೆಯುತ್ತದೆ.
ನಾವು ಹೇಗೆ ನಾಟಕದಲ್ಲಿ ನಡೆಯುವ ದೃಶ್ಯವನ್ನು ಪ್ರೇಕ್ಷಕರಂತೆ ಕಾಣುತ್ತೇವೋ, ಹಾಗೆ ಪ್ರಪಂಚದಲ್ಲಿ ನಡೆಯುವ ಘಟನೆಗಳನ್ನು ಪ್ರೇಕ್ಷಕರಂತೆ ಕಾಣಲು ಅಭ್ಯಾಸ ಮಾಡಿಕೊಳ್ಳಬೇಕು. ಅದು ಸುಖಮಯವಿರಬಹುದು, ದುಃಖಮಯವಿರಬಹುದು-ಆದರೆ ನಾವು ಭಗವಂತನ ಒಂದೊಂದು ಕ್ರಿಯಯನ್ನೂ ಆಸ್ವಾಧಿಸಬೇಕು. ಜೀವನದಲ್ಲಿ ಬರುವ ತಾತ್ಕಾಲಿಕ ದುಃಖ  ನಮ್ಮ ಶಾಶ್ವತ ಸುಖಕ್ಕೆ ಕಾರಣವಾಗಿರುತ್ತದೆ. ಆದರೆ ಅದು ನಮಗೆ ತಿಳಿದಿರುವುದಿಲ್ಲ ಅಷ್ಟೆ. ತ್ರಿಗುಣಾತೀತರು ಈ ವಿಷಯವನ್ನು ಅರಿತು ಸುಖ-ದುಃಖವನ್ನು ಸಮನಾಗಿ ಕಾಣುತ್ತ ಆನಂದದಿಂದ ಬದುಕುತ್ತಿರುತ್ತಾರೆ.
ಹಿಂದೆ ಸ್ಥಿತಪ್ರಜ್ಞ ಮತ್ತು ಭಕ್ತರ ಲಕ್ಷಣ ಹೇಳುವಾಗ ಹೇಳಿದ ಮಾತುಗಳನ್ನು ಕೃಷ್ಣ ಇಲ್ಲಿ ಮತ್ತೆ ಪುನರುಚ್ಛರಿಸುತ್ತಾನೆ. ತ್ರಿಗುಣಾತೀತನಿಗೆ ಮಣ್ಣು, ಅಮೂಲ್ಯ ರತ್ನ, ಚಿನ್ನ-ಎಲ್ಲವೂ ಒಂದೆ. ಆತನಿಗೆ ಚಿನ್ನವಾಗಲಿ, ರತ್ನವಾಗಲಿ ಅಮೂಲ್ಯ ಎಂದು ಕಾಣುವುದಿಲ್ಲ.  ಆತನಿಗೆ ಅಮೂಲ್ಯ-ಜ್ಞಾನವೊಂದೆ. ಈ ಕಾರಣದಿಂದ ಆತ ಹಣದಲ್ಲಾಗಲಿ, ಮುತ್ತು-ರತ್ನದಲ್ಲಾಗಲಿ, ಬಂಗಾರದಲ್ಲಾಗಲಿ ಯಾವುದೇ ರೀತಿಯ ಅಭಿಲಾಷೆ ತೋರುವುದಿಲ್ಲ. ಆದ್ದರಿಂದ ಆತ ಸಂತೋಷದಿಂದ ಬದುಕುತ್ತಾನೆ. ಭಾಗವತದ ಮೂರನೇ ಸ್ಕಂದದಲ್ಲಿ ಬರುವ ಒಂದು ಶ್ಲೋಕ ಈ ರೀತಿ ಹೇಳುತ್ತದೆ:    
ಯಶ್ಚ ಮೂಢತಮೋ ಲೋಕೇ ಯಶ್ಚ ಬುದ್ಧೇಃ ಪರಂ ಗತಃ
ತಾವುಭೌ ಸುಖಮೇಧೇತೇ ಕ್ಲಿಶ್ಯತ್ಯಂತರಿತೋ ಜನಃ             ||೩-೭-೧೭||
ಒಬ್ಬ ಮೂಢ ಮತ್ತು ಇನ್ನೊಬ್ಬ ಜ್ಞಾನಿ- ಇವರಿಬ್ಬರು ಲೋಕದಲ್ಲಿ ಸುಖದಿಂದ ಬದುಕಬಲ್ಲರು ಎಂದು. ಏಕೆಂದರೆ ಇವರಿಗೆ ಹಣದ ಮೋಹವಿರುವುದಿಲ್ಲ. ಆದರೆ ಇವೆರಡರ ಮಧ್ಯದಲ್ಲಿರುವವರು-ಜೀವನದ ಅರ್ಥ ತಿಳಿಯದೆ ಮೋಹಕ್ಕೆ ಬಲಿಯಾಗಿ ದುಃಖ ಅನುಭವಿಸುತ್ತಾರೆ.
ಹೇಗೆ ಜ್ಞಾನಿಗಳು ತಮ್ಮ ಜೀವನದಲ್ಲಿ ಈ ತತ್ವವನ್ನು ಅಳವಡಿಸಿಕೊಂಡು ಬದುಕುತ್ತಾರೆ ಎನ್ನುವುದಕ್ಕೆ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ ಉತ್ತಮ ನಿದರ್ಶನ. ಮೈಸೂರು ಮಹಾರಾಜರ ಕಾಲದಲ್ಲಿ ಸೋದೆಮಠದ ಸ್ವಾಮಿಗಳಾಗಿದ್ದ ವಿಶ್ವಪ್ರೀಯತೀರ್ಥರು (ವೃಂದಾವನಾಚಾರ್ಯರು) ಬದುಕಿದ ಜೀವನ ಶೈಲಿ ಇದಕ್ಕೆ ಇನ್ನೊಂದು ಉತ್ತಮ ದೃಷ್ಟಾಂತ.
ಈ ಶ್ಲೋಕವನ್ನು ಇನ್ನೊಂದು ಮುಖದಲ್ಲಿ ನೋಡಿದಾಗ ನಮಗೆ ಇನ್ನೂ ಒಂದು ವಿಶೇಷ ಸಂದೇಶ ತಿಳಿಯುತ್ತದೆ. ಒಬ್ಬ ನಿಜವಾದ ಭಕ್ತ(ತ್ರಿಗುಣಾತೀತ)ನ ಭಗವದ್ ಭಕ್ತಿ ಆತನ ಜೀವನದಲ್ಲಿ ಬರುವ ಸುಖ-ದುಃಖಗಳಿಂದ ಏರುಪೇರಾಗುವುದಿಲ್ಲ. ಬಡತನವಿರಲಿ-ಸಿರಿತನವಿರಲಿ ಈತ ನಿರಂತರ ಭಗವಂತನ ಭಕ್ತಿಯಲ್ಲಿ ತೊಡಗಿರುತ್ತಾನೆ. ಈತನ ಭಕ್ತಿಗೆ ಇನ್ನೊಬ್ಬರ ಪ್ರೀತಿ-ದ್ವೇಷ ಎಂದೂ ಮಾನದಂಡವಲ್ಲ. ಈ ರೀತಿ ತ್ರಿಗುಣಾತೀತರು  ಎಲ್ಲ ಸ್ಥಿತಿಯಲ್ಲೂ ಸಮಾನತೆಯಿಂದ ಬದುಕುತ್ತಾರೆ.    

ಮಾನಾಪಮಾನಯೋಸ್ತುಲ್ಯಸ್ತುಲ್ಯೋ ಮಿತ್ರಾರಿಪಕ್ಷಯೋಃ  
ಸರ್ವಾರಂಭಪರಿತ್ಯಾಗೀ ಗುಣಾತೀತಃ ಸ ಉಚ್ಯತೇ                          ೨೫

ಮಾನಪಮಾನಯೋಃ ತುಲ್ಯಃ  ತುಲ್ಯಃ ಮಿತ್ರರಿ ಪಕ್ಷಯೋಃ       
ಸರ್ವಾರಂಭ ಪರಿತ್ಯಾಗೀ ಗುಣಾತೀತಃ ಸ ಉಚ್ಯತೇ -- ಸಮ್ಮಾನವೂ ಒಂದೆ; ಅಪಮಾನವೂ ಒಂದೆ. ಗೆಳೆಯರ ಬಳಗವೂ ಒಂದೆ; ಹಗೆಯರ ಬಳಗವೂ ಒಂದೆ. ಅವನು ಇಂಥ ಯಾವ ಲೌಕಿಕದಲ್ಲೂ ತೊಡಗಿಕೊಳ್ಳುವುದಿಲ್ಲ. ಅಂಥವನು ‘ಗುಣಾತೀತ’ ಎನ್ನಿಸುತ್ತಾನೆ.


ತ್ರಿಗುಣಾತೀತರನ್ನು ಒಬ್ಬರು 'ಮಹಾನ್ ಜ್ಞಾನಿ' ಎಂದು ಸಮ್ಮಾನಿಸಿ ಮಾತನಾಡಬಹುದು, ಇನ್ನೊಬ್ಬರು ಆತ 'ಅರೆಹುಚ್ಚ'  ಎಂದು ನಿಂದಿಸಬಹುದು. ಆದರೆ ಇದ್ಯಾವುದೂ ಅವರ ಮೇಲೆ ಪರಿಣಾಮಬೀರದು.  ಇವರಿಗೆ ಸ್ನೇಹಿತರು ಎನ್ನುವ ಮೋಹವಾಗಲಿ, ಶತ್ರುಗಳು ಎನ್ನುವ ದ್ವೇಷವಾಗಲಿ ಇರುವುದಿಲ್ಲ. ಇವರು ಎಲ್ಲರನ್ನು ಅವರವರ ಯೋಗ್ಯತೆಗೆ ತಕ್ಕಂತೆ ಕಾಣುತ್ತ, ಭಗವಂತನ ಭಕ್ತಿಗೆ ವಿರುದ್ಧವಾದ ಯಾವ ಚಟುವಟಿಕೆಯಲ್ಲೂ ತೊಡಗದೆ ಬದುಕುತ್ತಾರೆ. ಇವರು ದೀರ್ಘಕಾಲದ ಯಾವುದೇ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಿಲ್ಲ. 
ಹೀಗೆ ಮೇಲಿನ ನಾಲ್ಕು ಶ್ಲೋಕದಲ್ಲಿ ಹೇಳಿದ ಎಲ್ಲ ಸ್ವಭಾವವುಳ್ಳವರು ಗುಣಾತೀತರೆನಿಸುತ್ತಾರೆ.  

No comments:

Post a Comment