Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Tuesday, November 8, 2011

Bhagavad Gita Kannada Chapter-13 shloka 29-34


ಭಗವಂತನ ಚಿಂತನೆಯ ಇನ್ನೊಂದು ಅನುಸಂಧಾನವನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ನಮ್ಮ ಮುಂದಿಟ್ಟಿದ್ದಾನೆ. ಎಚ್ಚರಿಕೆಯಿಂದ ಈ ಶ್ಲೋಕವನ್ನು ನಾವು ನೋಡಿದರೆ ನಮಗೆ ಸತ್ಯ ತಿಳಿಯುತ್ತದೆ. ನಮ್ಮಲ್ಲಿ ಎಲ್ಲರಲ್ಲೂ ಇರುವ ಒಂದು ಗೊಂದಲ ಎಂದರೆ- “ಕ್ರಿಯೆಯನ್ನು  ನಾನು ಮಾಡುವುದೇ ಅಥವಾ ನನ್ನಿಂದ ಭಗವಂತ ಮಾಡಿಸುವುದೇ? ಭಗವಂತ ಮಾಡಿಸುವುದಾದರೆ ಏಕೆ ನನ್ನಿಂದ ಕೆಟ್ಟ ಕೆಲಸವನ್ನು ಮಾಡಿಸುತ್ತಾನೆ?”ಎಂಬುದು. ಈ ಪ್ರಶ್ನೆಗೆ ಕೃಷ್ಣ ಈ ಶ್ಲೋಕದಲ್ಲಿ ಅಡಕವಾಗಿ ಉತ್ತರ ಕೊಟ್ಟಿದ್ದಾನೆ. ಇಲ್ಲಿ ಹಿಂದೆ ಕೃಷ್ಣ ಹೇಳಿದ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಈ ಶ್ಲೋಕವನ್ನು ನಾವು ನೋಡಬೇಕಾಗಿದೆ.

ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ
ಯಃ ಪಶ್ಯತಿ ತಥಾSSತ್ಮಾನಮಕರ್ತಾರಂ ಸ ಪಶ್ಯತಿ                                   ೨೯

ಪ್ರಕೃತ್ಯಾ ಏವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ
ಯಃ ಪಶ್ಯತಿ ತಥಾತ್ಮಾನಮ್ ಅಕರ್ತಾರಮ್ ಸಃ ಪಶ್ಯತಿ -- ಪ್ರಕೃತಿಯಿಂದಲೆ ಎಲ್ಲ ಕಾರ್ಯಗಳೂ ನಡೆಯುತ್ತಿವೆ[ಜೀವನ ಕರ್ಮಕ್ಕನುಗುಣವಾಗಿ ಭಗವಂತನೆ ತೊಡಗಿ ಎಲ್ಲ ಕಾರ್ಯಗಳಲ್ಲು ಮುನ್ನೆಡೆಸುತ್ತಾನೆ] ಎಂದು ತಿಳಿದವನು ಮತ್ತು ಏನು ಮಾಡುವುದಕ್ಕೂ ತಾನು ಸ್ವತಂತ್ರನಲ್ಲ[ಭಗವಂತನಿಗೆ ಇನ್ನೊಬ್ಬ ಕಾರಣ ಪುರುಷನಿಲ್ಲ] ಎಂದು ತಿಳಿದವನು ‘ನಿಜವಾಗಿ ತಿಳಿದವನು’.

ಕೃಷ್ಣ ಹೇಳುತ್ತಾನೆ “ಯಾರಿಗೆ ‘ನಾನು’ ಮಾಡುತ್ತಿಲ್ಲ ಎಂದು ಗೊತ್ತಿದೆಯೋ ಅವನು ತಿಳಿದವನು” ಎಂದು. ಆದ್ದರಿಂದ ಮೊದಲು ನಾವು “ನಾನು ಮಾಡುತ್ತಿದ್ದೇನೆ” ಎನ್ನುವ ಅಹಂಕಾರವನ್ನು ಬಿಟ್ಟುಬಿಡಬೇಕು. ನಾನು ಮಾಡುತ್ತಿದ್ದೇನೆ ಎನ್ನುವುದು ಕೇವಲ ವ್ಯವಹಾರಿಕ ಸತ್ಯ ಹೊರತು ಪಾರಮಾರ್ಥಿಕ ಸತ್ಯವಲ್ಲ. ಉದಾಹರಣೆಗೆ: “ನಾನು ಮಾತನಾಡುತ್ತಿದ್ದೇನೆ”. ಇಲ್ಲಿ ನಾನು ಮಾತನಾಡಬೇಕಾದರೆ ಮೊದಲು ನಾನು ಮೂಗನಾಗಿರಬಾರದು. ಅದಕ್ಕೆ ಸರಿಯಾದ ಅಂಗಾಂಗವಿರುವ ಮಾನವ ಶರೀರವಿರಬೇಕು. ಮಾತನಾಡಬೇಕಾದರೆ ನನ್ನ ಮನಸ್ಸು ವಿಷಯಗಳನ್ನು ಸಮಯಕ್ಕೆ ಸರಿಯಾಗಿ ಯೋಚಿಸಿ ಸಂದೇಶವನ್ನು ರವಾನಿಸಬೇಕು. ಅಂದರೆ ಇದಕ್ಕೆ ಸರಿಯಾದ ಮೆದುಳಿನ ಶಕ್ತಿ ನನಗೆ ಬೇಕು. ಮಾತನಾಡುವ ಧೈರ್ಯ ನನಗೆ ಬೇಕು. ಈಗ ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳೋಣ: ನನಗೆ ಮಾತನಾಡಬಲ್ಲ ಮಾನವ ದೇಹವನ್ನು ಕೊಟ್ಟವನ್ಯಾರು? ನನಗೆ ಯೋಚಿಸಬಲ್ಲ ಮೆದುಳನ್ನು ವಿನ್ಯಾಸಗೊಳಿಸಿ ಕರುಣಿಸಿದನ್ಯಾರು? ಸಮಯಕ್ಕೆ ಸರಿಯಾಗಿ ಈ ಮೆದುಳಿನಿಂದ ಸಂದೇಶವನ್ನು ರವಾನಿಸಿದವನ್ಯಾರು? ಮಾತನಾಡುವ ಅದ್ಭುತ ಕಲೆಯನ್ನು ನನಗೆ ದಯಾಪಾಲಿಸಿದವನ್ಯಾರು? ಈ ಎಲ್ಲಾ ಪ್ರಶ್ನೆಯಿಂದ ನಮಗೆ ತಿಳಿಯುವುದೇನೆಂದರೆ: “ನನ್ನೊಳಗಿರುವ ಭಗವಂತ ನುಡಿಸಿದ-ನಾನು ನುಡಿದೆ” ಎನ್ನುವ ಸತ್ಯ. ಇದನ್ನೇ ಇಲ್ಲಿ ಭಗವಂತ ವಿವರಿಸುತ್ತ ಹೇಳುತ್ತಾನೆ “ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ” ಎಂದು. ಅವರವರ ಜೀವಪ್ರಕೃತಿ(ಜೀವ ಸ್ವಭಾವ)ಗೆ  ಅನುಗುಣವಾಗಿ, ಪ್ರಕೃತಿ(ತ್ರಿಗುಣಗಳ) ಪ್ರಭಾವದಿಂದ, ಪ್ರಕೃತಿಪುರುಷರು(ಲಕ್ಷ್ಮೀನಾರಾಯಣರು) ನಮ್ಮಿಂದ ಕರ್ಮವನ್ನು ಮಾಡಿಸುತ್ತಾರೆ.  ಆದ್ದರಿಂದ ಜೀವನಿಗೆ ಅನಾಧಿನಿತ್ಯವಾಗಿ ಬಂದ ಜೀವಸ್ವಭಾವಕ್ಕನುಗುಣವಾಗಿ ಆತನ ದೇಹ ಸೃಷ್ಟಿ; ಅದಕ್ಕನುಗುಣವಾಗಿ ಆತನ ಮೇಲೆ ವಾತಾವರಣದಲ್ಲಿನ ತ್ರಿಗುಣಗಳ ಪ್ರಭಾವ; ತ್ರಿಗುಣಗಳ ಪ್ರಭಾವದಂತೆ ಆತನ ಎಲ್ಲಾ ವಿಧದ ಕರ್ಮ. ಇದೆಲ್ಲವನ್ನು ಮಾಡಿಸುವವ- ಸರ್ವದೇವತೆಗಳ ಅಧಿಪತಿಯಾದ, ಲಕ್ಷ್ಮೀ ಸಮೇತನಾದ ನಾರಾಯಣ.

ಯದಾ ಭೂತಪೃಥಗ್ ಭಾವಮೇಕಸ್ಥಮನುಪಶ್ಯತಿ   
ತತ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ                             ೩೦

ಯದಾ ಭೂತ ಪೃಥಕ್  ಭಾಮ್ ಏಕಸ್ಥಮ್ ಅನುಪಶ್ಯತಿ    
ತಃ  ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ –ಬಗೆಬಗೆಯ ಜೀವರಾಶಿ ಒಬ್ಬ ಭಗವಂತನಲ್ಲಿ ನೆಲೆಸಿದೆ ಎಂದು, ಅವನಿಂದಲೆ ಈ ಬಗೆಬಗೆಯ ಬಿತ್ತರ ಎಂದು ತಿಳಿದಾಗ ಭಗವಂತನನ್ನೇ ಸೇರುತ್ತಾನೆ.

ಜೀವ ಅನಾಧಿನಿತ್ಯ. ಸೃಷ್ಟಿಯಾಗುವುದು, ಸಂಹಾರವಾಗುವುದು  ಕೇವಲ ಕಾಣುವ ರೂಪ ಅಷ್ಟೆ. ಜೀವಜಾತಗಳು ಒಂದೊಂದೂ ಪೃಥಕ್  ಭಾ. ಯಾವ ಎರಡು ಜೀವಜಾತವೂ ನೂರಕ್ಕೆ ನೂರು ಸದೃಶವಾಗಿಲ್ಲ. ಈ ಅನೇಕ ಜೀವ ಸಮುದಾಯ ಏಕನಾದ ಭಗವಂತನಲ್ಲಿದೆ. ಸೃಷ್ಟಿ ಕಾಲದಲ್ಲಿ ಭಗವಂತನ ಉದರದಿಂದ ಹೊರ ಬಂದು ಆಕಾರ ಪಡೆಯುವ ಜೀವ ಜಾತಗಳು ಪ್ರಳಯ ಕಾಲದಲ್ಲಿ ಮರಳಿ ಸೂಕ್ಷ್ಮ ರೂಪದಲ್ಲಿ ಭಗವಂತನ ಉದರವನ್ನು ಸೇರುತ್ತವೆ. ಇದನ್ನು ನಾವು ವಸ್ತುಃಸ್ಥಿತಿಗೆ ಅನುಗುಣವಾಗಿ ಗ್ರಹಣ ಮಾಡಬೇಕು. ಯಾರು ಈ ಸತ್ಯವನ್ನು ಗ್ರಹಣ ಮಾಡಬಲ್ಲನೋ ಆತ ಮೋಕ್ಷವನ್ನು ಪಡೆಯಬಲ್ಲ.

ಅನಾದಿತ್ವಾನ್ನಿರ್ಗುಣತ್ವಾತ್ ಪರಮಾತ್ಮಾSಯಮವ್ಯಯಃ
ಶರೀರಸ್ಥೋSಪಿ ಕೌಂತೇಯ ನ ಕರೋತಿ ನ ಲಿಪ್ಯತೇ                                   ೩೧

ಅನಾದಿತ್ವಾತ್ ನಿರ್ಗುಣತ್ವಾತ್ ಪರಮತ್ಮಾಮ್ ಅವ್ಯಯಃ
ಶರೀರಸ್ಥಃ ಅಪಿ ಕೌಂತೇಯ ನ ಕರೋತಿ ನ ಲಿಪ್ಯತೇ            --ಕೌಂತೇಯ, ಪರಮಾತ್ಮ ಎಂದೂ ಹುಟ್ಟದವನು; ಗುಣಗಳು ಅಂಟದವನು; ಅದರಿಂದ ಅವನಿಗೆ ಅಳಿವೂ ಇಲ್ಲ. ಅವನು ದೇಹದೊಳಗಿದ್ದೂ ಏನನ್ನೂ ಮಾಡುವುದಿಲ್ಲ; ಏನನ್ನೂ ಅಂಟಿಸಿಕೊಳ್ಳುವುದಿಲ್ಲ.[ಅಳಿವಿರದ ಈ ಪರಮಾತ್ಮ ಸಂಸಾರಿ ಜೀವನಲ್ಲ; ಜಡದ ಮಾತೇನು! ಅವನು ಎಲ್ಲವನ್ನೂ ಮಾಡುತ್ತಾನೆ; ಏನನ್ನೂ ಅಂಟಿಸಿಕೊಳ್ಳುವುದಿಲ್ಲ.]

ನಿರ್ವೀಕಾರನಾಗಿರುವ ಏಕಮೇವ ವಸ್ತು ಎಂದರೆ ಭಗವಂತ. ಆತ ಎಂದೂ ಯಾವ ಕಾರಣ ವಿಶೇಷದಿಂದ ಕೂಡ ಹುಟ್ಟಿಲ್ಲ. ಭಗವಂತ ತ್ರೈಗುಣ್ಯವರ್ಜಿತ. ಇದರಿಂದ ಆತ ಎಂದೂ ಬದಲಾವಣೆಗೆ, ವಿಕಾರಕ್ಕೆ ಒಳಪಡುವುದಿಲ್ಲ. ಭಗವಂತ ಎಲ್ಲ ಜೀವರೊಳಗೆ ಬಿಂಬರೂಪನಾಗಿದ್ದರೂ ಕೂಡ ಆತನಿಗೆ ದೇಹದ ಬದ್ಧತೆ ಇಲ್ಲ. ಆತ ಎಲ್ಲವನ್ನು ನಮ್ಮಿಂದ ಮಾಡಿಸುತ್ತಾನೆ ಆದರೆ ಏನನ್ನೂ ಅಂಟಿಸಿಕೊಳ್ಳುವುದಿಲ್ಲ. ಆತ ನಿರ್ಲಿಪ್ತನಾಗಿ ಎಲ್ಲವನ್ನೂ ಮಾಡುತ್ತಾನೆ ಆದರೆ ಯಾವುದರ ಲೇಪವೂ ಆತನಿಗಿಲ್ಲ. ಇದು ಯಾವ ರೀತಿ ಎಂದು ಅರ್ಥ ಮಾಡಿಕೊಳ್ಳುವುದಕ್ಕೆ- ಕೃಷ್ಣ ಒಂದು ಉದಾಹರಣೆಯನ್ನು ಕೊಟ್ಟು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.         

ಯಥಾ ಸರ್ವಗತಂ ಸೌಕ್ಷ್ಮ್ಯಾದಾಕಾಶಂ ನೋಪಲಿಪ್ಯತೇ      
ಸರ್ವತ್ರಾವಸ್ಥಿತೋ ದೇಹೇ ತಥಾSSತ್ಮಾ ನೋಪಲಿಪ್ಯತೇ                 ೩೨

ಯಥಾ ಸರ್ವಗತಮ್  ಸೌಕ್ಷ್ಮ್ಯಾತ್ ಆಕಾಶಮ್ ನ ಉಪಲಿಪ್ಯತೇ       
ಸರ್ವತ್ರವಸ್ಥಿತಃ  ದೇಹೇ ತಥಾತ್ಮಾ ನ ಉಪಲಿಪ್ಯತೇ –ಆಕಾಶ ಎಲ್ಲೆಡೆ ತುಂಬಿದ್ದರೂ ಏತಕ್ಕೂ ತಡೆಯಾಗದಷ್ಟು  ನವುರಾದ್ದರಿಂದ ಏತರಿಂದಲೂ ಅಂಟಿಸಿಕೊಳ್ಳುವುದಿಲ್ಲ ಹೇಗೆ ಹಾಗೆ- ಪರಮಾತ್ಮ ಕೂಡ ಎಲ್ಲ ದೇಹಗಳಲ್ಲಿ ತುಂಬಿದ್ದರೂ ಅಂಟಿಕೊಳ್ಳುವುದಿಲ್ಲ.

ಎಲ್ಲ ಕಡೆ ಆಕಾಶವಿದೆ. ಅದಿಲ್ಲದ ಸ್ಥಳವಿಲ್ಲ. ಇಂಥಹ ಆಕಾಶ ಎಲ್ಲೆಡೆ ಇದ್ದೂ ಹೇಗೆ ಏನನ್ನೂ ಅಂಟಿಸಿಕೊಳ್ಳದೆ ಇರುತ್ತದೋ- ಹಾಗೆ ಭಗವಂತ ಎಲ್ಲ ದೇಹದಲ್ಲಿದ್ದರೂ ಏನನ್ನೂ ಅಂಟಿಸಿಕೊಳ್ಳದೆ ನಿರ್ಲಿಪ್ತನಾಗಿದ್ದಾನೆ.
 
ಯಥಾ ಪ್ರಕಾಶಯತ್ಯೇಕಃ ಕೃತ್ಸ್ನಂ ಲೋಕಮಿಮಂ ರವಿಃ      
ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ                                   ೩೩

ಯಥಾ ಪ್ರಕಾಶಯತಿ ಏಕಃ ಕೃತ್ಸ್ನಮ್  ಲೋಕಮ್ ಇಮಮ್ ರವಿಃ    
ಕ್ಷೇತ್ರಮ್  ಕ್ಷೇತ್ರೀ ತಥಾ ಕೃತ್ಸ್ನಮ್  ಪ್ರಕಾಶಯತಿ ಭಾರತ –ಭಾರತ, ಒಬ್ಬ ಸೂರ್ಯ ಇಡಿಯ ಈ ಭೂಮಿಯನ್ನು ಬೆಳಗುವಂತೆ ‘ಕ್ಷೇತ್ರಜ್ಞ’ನಾದ ಭಗವಂತನೊಬ್ಬನೆ ಇಡಿಯ ವಿಶ್ವವೆಂಬ ‘ಕ್ಷೇತ್ರ’ ವನ್ನು ಬೆಳಗುತ್ತಾನೆ.

ಏಕ ಸೂರ್ಯ ಹೇಗೆ ಇಡೀ ವಿಶ್ವವನ್ನು ಬೆಳಗಿಸುತ್ತಾನೋ ಹಾಗೆ, ಇಡೀ ಕ್ಷೇತ್ರವನ್ನು ಕ್ಷೇತ್ರಜ್ಞನಾದ ಭಗವಂತ ಬೆಳಗಿಸುತ್ತಾನೆ. ನಾವು ಮೊದಲು ಭಗವಂತನ ಬೆಳಕನ್ನು(ಜ್ಞಾನವನ್ನು) ತಿಳಿಯಬೇಕು. ಆಗ ನಮ್ಮೊಳಗಿನ ಬೆಳಕು ನಮಗೆ ಅರ್ಥವಾಗುತ್ತದೆ.  

ಕ್ಷೇತ್ರಕ್ಷೇತ್ರಜ್ಞಯೋರೇವಮಂತರಂ ಜ್ಞಾನಚಕ್ಷುಷಾ
ಭೂತಪ್ರಕೃತಿಮೋಕ್ಷಂ ಚ ಯೇ ವಿದುರ್ಯಾಂತಿ ತೇ ಪರಮ್              ೩೪

ಕ್ಷೇತ್ರ ಕ್ಷೇತ್ರಜ್ಞಯೋಃ ಏವಮ್ ಅಂತರಮ್  ಜ್ಞಾನೊ ಚಕ್ಷುಷಾ
ಭೂತ ಪ್ರಕೃತಿ ಮೋಕ್ಷಮ್  ಚ ಯೇ ವಿದುಃ ಯಾಂತಿ ತೇ ಪರಮ್ – ಕ್ಷೇತ್ರ-ಕ್ಷೇತ್ರಜ್ಞರೊಳಗಣ ಈ ಅಂತರವನ್ನು, ಪಂಚಭೂತಗಳಿಂದ  ಮತ್ತು ಪ್ರಕೃತಿಯಿಂದ [ಜೀವರಿಗೆ ಚೇತನ ಪ್ರಕೃತಿಯಿಂದ] ಬಿಡುಗಡೆಗೆ ಕಾರಣವಾದ ತಿಳಿವಿನ ದಾರಿಯನ್ನು ತುಳಿದವರು ಪರಮಾತ್ಮನನ್ನು ಪಡೆಯುತ್ತಾರೆ.

ಈ ಶ್ಲೋಕ ಈ ಅಧ್ಯಾಯದ ಉಪಸಂಹಾರ. ಕ್ಷೇತ್ರ ಅಂದರೇನು, ಕ್ಷೇತ್ರಜ್ಞ ಅಂದರೇನು, ಕ್ಷೇತ್ರ ಮತ್ತು ಕ್ಷೇತ್ರಜ್ಞರ ನಡುವಿನ ವೆತ್ಯಾಸವೇನು; ಜೀವಜಾತ ಜಡದಿಂದ ಬಿಡುಗಡೆ ಹೊಂದಲು ಇರಬೇಕಾದ ಮೋಕ್ಷ ಸಾಧಕ ಗುಣಗಳು-ಇವೆಲ್ಲವನ್ನು ಅರಿತು ಆಚರಣೆಗೆ ತಂದು ಬದುಕುವವರು ಸರ್ವಶ್ರೇಷ್ಠನಾದ ಭಗವಂತನನ್ನು ಸೇರುತ್ತಾರೆ.

ಇತಿ ತ್ರಯೋದಶೋSಧ್ಯಾಯಃ

ಹದಿಮೂರನೆಯ ಅಧ್ಯಾಯ ಮುಗಿಯಿತು
*******

No comments:

Post a Comment