Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Saturday, November 19, 2011

Bhagavad Gita in Kannada Chapter-14 Shloka 10-13


ಈ ಗುಣತ್ರಯಗಳು ಹೇಗೆ ನಮ್ಮನ್ನು ನಿಯಂತ್ರಣಕ್ಕೆ ತೆಗೆದುಕೊಂಡು ನಮ್ಮನ್ನು ಕುಣಿಸುತ್ತವೆ ಅನ್ನುವುದನ್ನು ಕೃಷ್ಣ ನಿರೂಪಿಸಿದ್ದನ್ನು ನೋಡಿದೆವು. ಇಲ್ಲಿ ನಮಗೆ ಒಂದು ಸಂಶಯ ಬರಬಹುದು. ಈ ಮೂರು ಗುಣಗಳು ಒಟ್ಟಿಗೆ ಏಕಕಾಲದಲ್ಲಿ ಕೆಲಸ ಮಾಡುವಾಗ, ಕೇವಲ ಸಾತ್ವಿಕ ಚಿಂತನೆ, ಕೇವಲ ರಾಜಸ ಚಿಂತನೆ, ಕೇವಲ ತಾಮಸ ಚಿಂತನೆ ಹೇಗೆ ಸಾಧ್ಯವಾಗುತ್ತದೆ? ಮೂರು ಗುಣಗಳು ಒಬ್ಬನ ದೇಹದಲ್ಲಿರುವಾಗ ಯಾವುದೋ ಒಂದು ಗುಣ ಕೆಲಸ ಮಾಡುವುದು ಹೇಗೆ ಸಾಧ್ಯ? ಮೂರು ಗುಣಗಳು ಬೆರೆತು  ನಮ್ಮೊಳಗಿರುವಾಗ ಒಂದು ಪ್ರತ್ಯೇಕವಾದ ಸಾತ್ವಿಕ ಸ್ವಭಾವ, ರಾಜಸ ಸ್ವಭಾವ, ತಾಮಸ ಸ್ವಭಾವ  ಎಂದು ಗುರುತಿಸುವುದು ಹೇಗೆ? ಇದರ ವಿವರಣೆ ಮುಂದಿನ ಶ್ಲೋಕ

ರಜಸ್ತಮಶ್ಚಾಭಿಭೂಯ ಸತ್ತ್ವಂ ಭವತಿ ಭಾರತ       
ರಜಃ ಸತ್ತ್ವಂ ತಮಶ್ಚೈವ ತಮಃ ಸತ್ತ್ವಂ ರಜಸ್ತಥಾ                            ೧೦

ಜಃ ತಮಃ ಚ ಅಭಿಭೂಯ ಸತ್ತ್ವಮ್ ಭವತಿ ಭಾರತ          
ರಜಃ ಸತ್ತ್ವಮ್ಮಃ ಚ ಏವ ತಮಃ ಸತ್ತ್ವಮ್ಜಃ ತಥಾ –ಭಾರತ, ರಜಸ್ಸು-ತಮಸ್ಸುಗಳನ್ನು ತಳ್ಳಿ ಸತ್ವಗುಣ ಬಲಗೊಳ್ಳುತ್ತದೆ; ಸತ್ವ ತಮಸ್ಸುಗಳನ್ನು ತಳ್ಳಿ ರಜೋಗುಣ; ಹಾಗೆಯೇ ಸತ್ವ-ರಜಸ್ಸುಗಳನ್ನು ತಳ್ಳಿ ತಮೋಗುಣ.

ಗುಣತ್ರಯಗಳಿಗೆ ಒಂದು ವಿಶೇಷವಾದ ಶಕ್ತಿ ಇದೆ. ಏನೆಂದರೆ ಈ ಮೂರರಲ್ಲಿ ಯಾವುದೋ ಒಂದು ನಮ್ಮ ಮನಸ್ಸಿನ ನಿಯಂತ್ರಣವನ್ನು ತೆಗೆದುಕೊಂಡು ಉಳಿದ ಎರಡು ಗುಣಗಳನ್ನು ಮುಚ್ಚಿ(Suppress)ಬಿಡುತ್ತದೆ. ಮೂರರಲ್ಲಿ ಒಂದು ಗುಣ ನಮ್ಮ ಮನಸ್ಸನ್ನು ಸ್ವಾಧೀನಪಡಿಸಿಕೊಳ್ಳುತ್ತದೆ.  ಆಗ ನಮ್ಮ ಮನಸ್ಸು ಆ ಗುಣಕ್ಕೆ ತಕ್ಕಂತೆ ಕೆಲಸ ಮಾಡಲಾರಂಭಿಸುತ್ತದೆ.  ತ್ರಿಗುಣಮಾನಿನಿ ಲಕ್ಷ್ಮಿ. ಆಕೆ ಯಾವುದೋ ಒಂದು ಗುಣಕ್ಕೆ ಉಳಿದ ಎರಡು ಗುಣವನ್ನು ಮೀರಿಸಿ ಕೆಲಸ ಮಾಡುವ ಶಕ್ತಿ ಕೊಡುತ್ತಾಳೆ. ಹೀಗೆ ಒಂದು ಗುಣ ಉಳಿದೆರಡನ್ನು ಮುಚ್ಚಿ ಕೆಲಸ ಮಾಡಲಾರಂಭಿಸುತ್ತದೆ.

ನಮ್ಮಲ್ಲಿ ಯಾವ ಗುಣ ಜಾಗೃತವಾಗಿದೆ ಎಂದು ನಾವು ಗುರುತಿಸಿಕೊಳ್ಳಬೇಕು. ಆಗ ಆ ಗುಣದ ಪ್ರಭಾವದಿಂದಾಗುವ ಅನಾಹುತವನ್ನು ತಪ್ಪಿಸಬಹುದು. ಇದನ್ನು ಗುರುತಿಸುವ ವಿಧಾನವನ್ನು ಕೃಷ್ಣ ಮುಂದಿನ ಮೂರು ಶ್ಲೋಕಗಳಲ್ಲಿ ವಿವರಿಸುತ್ತಾನೆ. 

ಸರ್ವದ್ವಾರೇಷು ದೇಹೇSಸ್ಮಿನ್ ಪ್ರಕಾಶ ಉಪಜಾಯತೇ
ಜ್ಞಾನಂ ಯದಾ ತದಾ ವಿದ್ಯಾದ್ ವಿವೃದ್ಧಂ ಸತ್ತ್ವಮಿತ್ಯುತ                  ೧೧

ಸರ್ವದ್ವಾರೇಷು ದೇಹೇಸ್ಮಿನ್ ಪ್ರಕಾಶಃ  ಉಪಜಾಯತೇ
ಜ್ಞಾನಮ್ ಯದಾ ತದಾ ವಿದ್ಯಾತ್  ವಿವೃದ್ಧಮ್ ಸತ್ತ್ವಮ್ ಇತಿ ಉ –ಈ ದೇಹದಲ್ಲಿ ಎಲ್ಲ ಇಂದ್ರಿಯಗಳಲ್ಲು ತಿಳಿವು ಬೆಳಕಾಗಿ  ಮೂಡಿಬಂದಾಗ ಸತ್ವಗುಣ ಬಲಗೊಂಡಿದೆ ಎಂದು ತಿಳಿಯಬೇಕು.

ಸತ್ವಗುಣ ಜಾಗೃತವಾದಾಗ ನಮ್ಮೊಳಗೆ ಬೆಳಕು ತುಂಬಿದ ಅನುಭವವಾಗುತ್ತದೆ. ಈ ಬೆಳಕಿನ ಸಂಚಾರ ಎಲ್ಲಾ ಇಂದ್ರಿಯಗಳ ಮೂಲಕ ಹೊರಬರುತ್ತದೆ. ಸರ್ವೇಂದ್ರಿಯದಲ್ಲೂ ಜ್ಞಾನದ ಆನಂದ ತುಂಬುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಸಿನಲ್ಲಿ ಹೊಸಹೊಸ ಜ್ಞಾನದ ವಿಚಾರ (intututional flash) ಹೊಳೆಯಲಾರಂಭಿಸುತ್ತದೆ.  ಇದರಿಂದ ಅಪಾರ ಸಂತೋಷವಾಗುತ್ತದೆ. ಇದು ಸತ್ವಗುಣದ ಜಾಗೃತಾವಸ್ಥೆ.

ಲೋಭಃ ಪ್ರವೃತ್ತಿರಾರಂಭಃ  ಕರ್ಮಣಾಮಶಮಃ ಸ್ಪೃಹಾ
ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ                             ೧೨

ಲೋಭಃ ಪ್ರವೃತ್ತಿಃ ಆರಂಭಃ  ಕರ್ಮಣಾಮ್ ಅಶಮಃ ಸ್ಪೃಹಾ
ರಜಸಿ ಏತಾನಿ  ಜಾಯಂತೇ ವಿವೃದ್ಧೇ ಭರತರ್ಷಭ ಭರತರ್ಷಭ, ರಜೋಗುಣ ಬಲಗೊಂಡಾಗ ಕಂಡುಬರುವ ಅಂಶಗಳು ಇವು: ಜಿಪುಣತನ, ಹುಚ್ಚುಹುರುಪು, ಕಾಯಕಗಳಲ್ಲಿ ತೊಡಗುವುದು, ನೆಮ್ಮದಿಗೇಡು ಮತ್ತು ತೀರದ ಬಯಕೆ.

ರಜೋಗುಣ ಜಾಗೃತವಾದಾಗ ನಮ್ಮಲ್ಲಿ ಮೊದಲು ಕಾಣಿಸಿಕೊಳ್ಳುವುದು ಲೋಭತನ. ಯಾವ ರೀತಿ ದುಡ್ಡು ಮಾಡುವುದು ಎನ್ನುವ ಯೋಚನೆ; ಇನ್ನೊಬ್ಬರಿಗೆ ಒಂದು ಪುಡಿಗಾಸನ್ನೂ ಕೊಡದ ಜಿಪುಣತನ, ಇತ್ಯಾದಿ. ಉದಾಹರಣೆಗೆ ಕೆಲವರು ತಮ್ಮ ಮನೆ ಸಮಾರಂಭಕ್ಕೆ ಲಕ್ಷಾಂತರ ಖರ್ಚು ಮಾಡುತ್ತಾರೆ. ಆದರೆ ಯಾರೋ ಹೊಟ್ಟೆಗೆ ಹಿಟ್ಟಿಲ್ಲದ ವ್ಯಕ್ತಿ ಬಂದು ಕೇಳಿದರೆ ಇವರಿಂದ ಅವರಿಗೆ ಒಂದು ಪೈಸೆ ದಾನ ಕೂಡ ಸಿಗದು. ಇದು ಲೋಭತನ. ಇಂಥಹ ಲೋಭಿಗಳ ಬಗ್ಗೆ  ನೀತಿ ಶತಕದಲ್ಲಿ ಭವಭೂತಿ ಹೀಗೆ ಹೇಳಿದ್ದಾನೆ:
ದಾನ೦ ಭೋಗೋ ನಾಶಃ ತಿಸ್ರೋ ಭವ೦ತಿ ಗತಯೋ ವಿತ್ತಸ್ಯ|
ಯೋ ನ ದದಾತಿ ನ ಭು೦ಕ್ತೇ ತಸ್ಯ ತೃತೀಯಾ ಗತಿರ್ಭವತಿ||೧೫೮||
ದುಡ್ಡಿಗೆ ಮೂರು ರೂಪದ ವಿನಿಯೋಗ: ದಾನ, ಭೋಗ, ನಾಶ. ಲೋಭಿಗಳು ತಮ್ಮಲ್ಲಿರುವ ಹಣವನ್ನು ಇನ್ನೊಬ್ಬರಿಗೆ ದಾನ ಮಾಡುವುದಿಲ್ಲ, ತಾವೂ ತಿನ್ನುವುದಿಲ್ಲ, ಕೊನೆಗೆ ಅದು ನರಿ-ನಾಯಿ ಪಾಲಾಗಿ ನಾಶವಾಗುತ್ತದೆ. ಇದು ರಜೋಗುಣದ ಪ್ರಭಾವದಿಂದಾಗುವ ಪರಿಣಾಮ. ರಜೋಗುಣದ ಪ್ರಭಾವಕ್ಕೊಳಗಾದಾಗ ವ್ಯಕ್ತಿ ಸದಾ ಯಾವುದ್ಯಾವುದೋ ಪ್ರವೃತ್ತಿಯನ್ನು ಮಾಡ ಬಯಸುತ್ತಾನೆ. ದುಡ್ಡು ಮಾಡುವುದಕ್ಕಾಗಿ ಬಗೆಬಗೆಯ ವ್ಯವಹಾರಗಳು; ಎಷ್ಟು ತೊಡಗಿಸಿಕೊಂಡರೂ ಅಲ್ಲಿ ಅತೃಪ್ತಿ; ತಾನು ಮಾಡುವ ವ್ಯವಹಾರದಲ್ಲಿ ದೇವರು ತನಗೆ ಹೊಟ್ಟೆ ಬಟ್ಟೆಗಾಗುವಷ್ಟು ಕೊಟ್ಟರೂ ಕೂಡ ಅಲ್ಲಿ ತೃಪ್ತಿ ಇಲ್ಲದೆ ಇರುವುದು; ತನಗೆ ಬರುತ್ತಿರುವ ಸಂಬಳದಲ್ಲಿ ತಾನು ಸುಖವಾಗಿ ಬದುಕಲು ಸಾಧ್ಯವಾದರೂ ಕೂಡ, ಅದು ಪಕ್ಕದ ಮನೆಯವರ ಸಂಬಳಕ್ಕಿಂತ ಕಡಿಮೆ ಎಂದು ಕೊರಗುವುದು ಇತ್ಯಾದಿ. ಇಂಥವರ ನಿತ್ಯ ಮಂತ್ರ “ಬೇಕು-ಬೇಕು”. ಸತ್ವಗುಣವನ್ನು ತುಳಿದು ರಜೋಗುಣ ತಲೆಯತ್ತಿ ನಿಂತಾಗ ಈ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. 
ಇಲ್ಲಿ ವ್ಯಾಸರು ‘ಭರತರ್ಷಭ’ ಎನ್ನುವ ವಿಶೇಷಣವನ್ನು ಬಳಸಿದ್ದಾರೆ. ರಜೋಗುಣದಿಂದ  ಪಾರಾಗಲು ನಾವು   ಭರತರ್ಷಭರಾಗಬೇಕು. ಐತರೇಯ ಬ್ರಾಹ್ಮಣದಲ್ಲಿ ‘ವಾಯರ್ವಾವ ಭರತಃ’ ಎನ್ನುವ ಒಂದು ಮಾತಿದೆ. ಸದಾ ಭಗವಂತನಲ್ಲಿ ನಿರತನಾದ ವಾಯುದೇವರಿಗೆ 'ಭರತ' ಎಂದು ಹೆಸರು.  ಪ್ರಾಣದೇವರಲ್ಲಿ ಶರಣಾಗತಿ ನಮ್ಮನ್ನು ರಜೋಗುಣದಿಂದ ಪಾರುಮಾಡಬಲ್ಲದು.     

ಅಪ್ರಕಾಶೋSಪ್ರವೃತ್ತಿಶ್ಚ ಪ್ರಮಾದೋ ಮೋಹ ಏವ ಚ
ತಮಸ್ಯೇತಾನಿ ಜಾಯಂತೇ ವಿವೃದ್ಧೇ ಕುರುನಂದನ                         ೧೩

ಅಪ್ರಕಾಶಃ ಅಪ್ರವೃತ್ತಿಃ ಚ  ಪ್ರಮಾದಃ ಮೋಹಃ  ಏವ ಚ
ತಮಸಿ ಏತಾನಿ ಜಾಯಂತೇ ವಿವೃದ್ಧೇ ಕುರುನಂದನ – ಓ ಕುರುನಂದನ, ತಮಸ್ಸು ಬಲಗೊಂಡಾಗ ಕಂಡುಬರುವ ಅಂಶಗಳು ಇವು: ಅಂಧಕಾರ, ಹುರುಪುಗೇಡು, ಎಚ್ಚರಗೇಡು ಮತ್ತು ತಪ್ಪರಿವು.

ತಮೋಗುಣ ಜಾಗೃತವಾದಾಗ ಒಳಗೂ ಹೊರಗೂ ಎಲ್ಲವೂ ಕತ್ತಲು. ಯಾವಾಗಲೂ ನಿದ್ದೆ ಮಾಡುವುದು, ತಪ್ಪು ಮಾಡುವುದು, ಅಜ್ಞಾನದಲ್ಲಿ ಬದುಕುವುದು- ತಮೋಗುಣದ ಪ್ರಭಾವದಿಂದ. ಮುಂಜಾನೆ ಸೂರ್ಯ ಮೂಡುವ ಮುಂಚೆ ಏಳಲು ತಮೋಗುಣ ಬಿಡುವುದಿಲ್ಲ. ಸದಾ ನಿದ್ದೆಮಾಡುವಂತೆ ಈ ಗುಣ ನಮ್ಮನ್ನು ಪ್ರೇರೇಪಿಸುತ್ತದೆ. ಈ ಗುಣ ಸದಾ ಕತ್ತಲೆಯನ್ನು ಬಯಸುವಂತೆ ಮಾಡುತ್ತದೆ. ಇದರ ಪ್ರಭಾವದಿಂದ ಪಾರಾಗಲು ನಾವು ಕುರುನಂದನರಾಗಬೇಕು. ನಮ್ಮನ್ನು ನಾವು ಯಾವುದೋ ಒಂದು ಕೆಲಸದಲ್ಲಿ ತೊಡಗಿಸಿಕೊಂಡು ಅದನ್ನು ರೂಢಿ ಮಾಡಿಕೊಳ್ಳಬೇಕು. ಉದಾಹರಣೆಗೆ: ಮುಂಜಾನೆ ಸೂರ್ಯೋದಯವಾಗುವ ಮುಂಚೆ ಏಳುವ ಅಭ್ಯಾಸ ಮಾಡಿಕೊಳ್ಳುವುದು. ಹೀಗೆ ರೂಢಿ ಮಾಡಿಕೊಂಡಾಗ ಮನಸ್ಸು ಅದನ್ನು ಬಿಡಲು ಕೇಳುವುದಿಲ್ಲ. 
ನಮ್ಮಲ್ಲಿ ಕೆಲವರು ಹೇಳುವುದಿದೆ. “ಅಧ್ಯಾತ್ಮ ಚಿಂತನೆ ಮಾಡಲು ನನಲ್ಲಿ ಸಮಯವಿಲ್ಲ” ಎಂದು. ಆದರೆ ಇವರು ತಮ್ಮ ರಜಾ ದಿನಗಳಲ್ಲಿ  ಮುಂಜಾನೆಯಿಂದ ಸಂಜೆಯತನಕ ಸೋಮಾರಿಯಾಗಿ ನಿದ್ದೆ ಮಾಡುತ್ತಾ ಕಾಲಹರಣ ಮಾಡುತ್ತಿರುತ್ತಾರೆ. ಹೀಗೆ ನಮಗರಿವಿಲ್ಲದಂತೆ ನಮ್ಮನ್ನು ತಮೋಗುಣ ಆಕ್ರಮಿಸಿ ನಿಯಂತ್ರಿಸುತ್ತಿರುತ್ತದೆ. ನಾವು ಸೋಮಾರಿಯಾಗದೆ ಯಾವುದಾದರೂ ಕರ್ತವ್ಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದರಿಂದ ತಮೋಗುಣದ ಪ್ರಭಾವದಿಂದ ಪಾರಾಗಬಹುದು.

2 comments: