Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Tuesday, April 19, 2011

Bhagavd Gita Kannada Chapter-04 Shloka 18


ಕರ್ಮಣ್ಯಕರ್ಮ ಯಃ ಪಶ್ಯೇದಕರ್ಮಣಿ ಚ ಕರ್ಮ ಯಃ  ।
ಸ ಬುದ್ಧಿಮಾನ್ ಮನುಷ್ಯೇಷು ಸ ಯುಕ್ತಃ ಕೃತ್ಸ್ನಕರ್ಮಕೃತ್   ॥೧೮॥

ಕರ್ಮಣಿ ಅಕರ್ಮ ಯಃ ಪಶ್ಯೇತ್ ಅಕರ್ಮಣಿ ಚ ಕರ್ಮ ಯಃ |
ಸಃ  ಬುದ್ಧಿಮಾನ್ ಮನುಷ್ಯೇಷು ಸಃ  ಯುಕ್ತಃ ಕೃತ್ಸ್ನಕರ್ಮ ಕೃತ್ -- ವಿಶ್ವದ ಕ್ರಿಯೆ ನಡೆಯುತ್ತಿರುವಾಗಲೂ ತನ್ನಿಂದ ಏನೂ ನಡೆದಿಲ್ಲ ಎಂದು ತಿಳಿದವನು, ತಾನು ಏನು ಮಾಡದಿದ್ದಾಗಲೂ ವಿಶ್ವದ ಕ್ರಿಯೆ ನಡೆಯುತ್ತಿದೆ ಎಂದು ತಿಳಿದವನು,[ಕರ್ಮ ಬದ್ಧನಾದ ಜೀವನಲ್ಲಿ ಕರ್ಮ ಇಲ್ಲ ಎಂದು ತಿಳಿದವನು, ಕರ್ಮಾತೀತನಾದ ಭಗವಂತನಲ್ಲಿ ಎಲ್ಲಾ ಕರ್ಮಗಳನ್ನು ಕಾಣುವವನು] ಮನುಷ್ಯರಲ್ಲಿ ನಿಜವಾಗಿ ತಿಳಿದವನು. ಅವನೇ ಸಾಧನೆಯ ದಾರಿ ಬಲ್ಲವನು; ಎಲ್ಲಾ ಕರ್ಮಗಳ ಫಲವನ್ನು ಪಡೆದವನು.

ಕರ್ಮ ಅಂದರೆ ಏನು ಎನ್ನುವ ಬಗ್ಗೆ ಅತ್ಯಂತ ರೋಚಕವಾದ ವಿಚಾರವನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ. ಈ ಹಿಂದೆ ಹೇಳಿದಂತೆ ಸಂಸ್ಕೃತ ರಹಸ್ಯಾರ್ಥವುಳ್ಳ ಭಾಷೆ(mystic language). ಅದಕ್ಕಾಗಿ ಭಗವದ್ಗೀತೆಯನ್ನು ಓದಿದಾಕ್ಷಣ, ಅಧ್ಯಾತ್ಮದ ಅನುಭವ ಇಲ್ಲದೆ ಏನೂ ತಿಳಿಯದು. ಅಧ್ಯಾತ್ಮದ ಅನುಭವದ ಸ್ಥರದಲ್ಲಿ ನಾವು ಎಷ್ಟು ಆಳಕ್ಕೆ ಇಳಿಯುತ್ತೆವೋ ಅಷ್ಟು ಆಳಕ್ಕೆ ಗೀತೆ ತೆರೆದುಕೊಳ್ಳುತ್ತದೆ. ಇದಕ್ಕೆ ಈ ಶ್ಲೋಕವೇ ಉದಾಹರಣೆ. ಮೇಲ್ನೋಟಕ್ಕೆ ಒಗಟಿನಂತೆ ವಿರೋಧಾಭಾಸವಾಗಿರುವ ಹುಚ್ಚು ಹೇಳಿಕೆಯಂತಿದೆ ಈ ಶ್ಲೋಕ!  ಇಲ್ಲಿ ಹೀಗೆ ಹೇಳಲಾಗಿದೆ: "ಕರ್ಮ ಇದ್ದಲ್ಲಿ ಕರ್ಮ ಇಲ್ಲ, ಕರ್ಮ ಏಲ್ಲಿ ಇಲ್ಲ ಅಲ್ಲಿ ಕರ್ಮ ಇದೆ. ಇದು ಯಾರಿಗೆ ತಿಳಿದಿದೆ ಆತ ಬುದ್ಧಿವಂತ"  ಅಥವಾ "ಯಾವುದು ಕರ್ಮವೋ ಅದು ಕರ್ಮವಲ್ಲ, ಯಾವುದು ಕರ್ಮವಲ್ಲವೋ ಅದು ಕರ್ಮ; ಇದನ್ನು ತಿಳಿದವ ಬುದ್ಧಿವಂತ"!!  ಇಲ್ಲಿರುವ ಗೂಡಾರ್ಥವನ್ನು ತಿಳಿದುಕೊಳ್ಳಬೇಕಾದರೆ ಅಧ್ಯಯನದ ಜೊತೆಗೆ ಅಧ್ಯಾತ್ಮದ ಅನುಭಾವ ಬೇಕು.
'ಏಲ್ಲಿ ಕರ್ಮವಿದೆ ಅಲ್ಲಿ ಕರ್ಮವಿಲ್ಲ. ನಾವು ನಮ್ಮಲ್ಲಿ  ಕರ್ಮವಿದೆ ಎಂದು ತಿಳಿದುಕೊಳ್ಳುತ್ತೇವೆ. 'ನನ್ನಲ್ಲಿ ಕರ್ಮದ ಸ್ವಾತಂತ್ರ್ಯವಿದೆ-ನನಗೆ ಯಾರ ಹಂಗೂ ಇಲ್ಲ' ಎನ್ನುವ ಭಾವನೆ ನಮ್ಮದು. ಆದರೆ ನಮ್ಮಲ್ಲಿರುವ ಕರ್ಮ ಭಗವಂತನ ಅಧೀನ. ಈ ಸೃಷ್ಟಿ ಚಕ್ರದಲ್ಲಿ ನಾವು ಏನು ಮಾಡದಿದ್ದಾಗಲೂ ಸಹ ಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ನೀನು ಏನನ್ನಾದರೂ ಮಾಡುತ್ತಿದ್ದರೆ ನಿನ್ನಿಂದಾಗಿಯೇ ಕ್ರಿಯೆ ನಡೆದಿದ್ದಲ್ಲ. ನನ್ನಲ್ಲಿ ಕ್ರಿಯೆ ಇದೆ ಎನ್ನುವ ಭ್ರಮೆಯನ್ನು ಬಿಟ್ಟುಬಿಡು. ಪ್ರಕೃತಿ ನಿರಂತರವಾಗಿ ತನ್ನ ಕರ್ತವ್ಯವನ್ನು ಮಾಡುತ್ತಿರುತ್ತದೆ. ವಿಶ್ವಕ್ರಿಯೆ ನಾವು ನಿಷ್ಕ್ರೀಯರಾಗಿದ್ದರೂ ನಡೆಯುತ್ತದೆ. ನಾವು ಎಲ್ಲ ಮಾಡಿದರೂ ಏನೂ ನಡೆಯುವುದಿಲ್ಲ. ಈ ವಿಶ್ವ ಚಕ್ರ ನಿರಂತರ.
ಇದನ್ನು ಅರ್ಥ ಮಾಡಿಕೊಳ್ಳಲು ಒಂದು ಲೌಕಿಕ ದೃಷ್ಟಾಂತವನ್ನು ನೋಡೋಣ.  ಒಂದು ಆನೆ(ಈ ವಿಶ್ವ ಚಕ್ರ) ಅದರ ತಲೆಯ ಮೇಲೆ ಒಂದು ಪುಟ್ಟ ಇರುವೆ(ಸಾಮಾನ್ಯ ಮಾನವ). ಆನೆ ಪೂರ್ವದಿಂದ ಪಶ್ಚಿಮಕ್ಕೆ ಹೋಗುತ್ತಿದೆ. ಇರುವೆ ನಿರಂತರ ತಲೆಯಿಂದ ಬಾಲದತ್ತ ಅಂದರೆ ಪಶ್ಚಿಮದಿಂದ ಪೂರ್ವಕ್ಕೆ ಹೋಗುತ್ತಿದೆ. ಆದರೆ ಆನೆಯ ಮೇಲೆ ಇರುವ ಈ ಇರುವೆ ಯಾವ ದಿಕ್ಕಿನಲ್ಲಿ ಚಲಿಸಿದರೂ ಅದು ಆನೆ ಎಲ್ಲಿಗೆ ಸೇರುತ್ತದೋ ಅಲ್ಲಿಗೇ ಸೇರುವುದು.  ಇಲ್ಲಿ ಇರುವೆಯ ಚಲನೆ ವ್ಯರ್ಥ-ಅದರಿಂದ ಏನೂ ಉಪಯೋಗವಿಲ್ಲ. ಒಂದು ವೇಳೆ ಈ ಇರುವೆ ನನ್ನಿಂದಾಗಿ ಆನೆ ಅಲ್ಲಿಂದ ಇಲ್ಲಿಗೆ ಬಂದು ತಲುಪಿತು ಎಂದು ತಿಳಿದರೆ? ಎಷ್ಟು ಹಾಸ್ಯಾಸ್ಪದವಲ್ಲವೇ? ಹಾಗೇ, ನಮ್ಮ ಚಲನೆಯ ಹಿಂದೆ ಒಂದು ಮಹಾನ್ ಚಾಲನಾ ಶಕ್ತಿ ಇದೆ. ಇಡೀ ಬ್ರಹ್ಮಾಂಡವನ್ನು(Cosmos) ತೆಗೆದುಕೊಂಡರೆ, ಈ ಭೂಮಿ ಇತರ ಗ್ರಹಗೊಲಗಳ ನಡುವಿಒಂದು ಚಿಕ್ಕ ಬಿಂದು. ಆ ಬಿಂದುವಿನಲ್ಲಿ ನಮ್ಮ ದೇಶ  ಇನ್ನೂ ಒಂದು ಚಿಕ್ಕ ಬಿಂದು. ಅದರಲ್ಲಿ 'ನಾನು' ಎನ್ನುವುದು ಊಹಿಸಲೂ ಅಸಾಧ್ಯವಾದ ಬಿಂದು(very tiny and insignificant). ಆದರೆ ನಾವು ಮಾತ್ರ ಈ ಬ್ರಹ್ಮಾಂಡವೇ ನಮ್ಮಿಂದ ನಡೆಯುತ್ತಿದೆ ಎನ್ನುವಂತೆ ಅಹಂಕಾರ ಪಡುತ್ತೇವೆ. ಇಡೀ ವಿಶ್ವದ ಚಲನೆಯೊಂದಿಗೆ ನಾವು  ಒಂದು ಘಟಕವಾಗಿದ್ದೇವೆ ಹೊರತು, ನಮ್ಮ  ಸ್ವಂತದಿಂದ ಏನೂ ಆಗುತ್ತಿಲ್ಲ. ಆದ್ದರಿಂದ 'ನಿನ್ನ ಕರ್ಮದಲ್ಲಿ ಕರ್ಮವನ್ನು ನೋಡುಎನ್ನುತ್ತಾನೆ ಕೃಷ್ಣ. ಹೀಗೆ ತನ್ನ  ಕರ್ಮವನ್ನು ನಿಯಂತ್ರಿಸುವ ವಿಶ್ವಶಕ್ತಿಯಾಗಿ ಭಗವಂತನಿದ್ದಾನೆ ಎಂದು ತಿಳಿದವ ವಿವೇಕಿ'.
'ಯುಕ್ತಃ' ಅಂದರೆ ಮನಸ್ಸನ್ನು ಸತ್ಯದ ಕಡೆಗೆ ತಿರುಗಿಸಿ, ಸತ್ಯವನ್ನು ತಿಳಿಯುವುದಕ್ಕೋಸ್ಕರ ಮನನ ಮಾಡಿದವ ಎಂದರ್ಥ. ಹೀಗೆ ಸರಿ ತಪ್ಪು ತಿಳಿದವ ಎಲ್ಲ ಕರ್ಮದ ಪೂರ್ಣ ಫಲವನ್ನು ಪಡೆಯುತ್ತಾನೆ. ಇಂಥವನಿಗೆ ಕರ್ತೃತ್ವ ಇದ್ದರೂ ಅದರ ಅಭಿಮಾನವಿಲ್ಲ;  ನಾನು ಮಾಡಿದೆ ನನ್ನಿಂದಾಯಿತು ಅನ್ನುವ ಅಹಂಕಾರವಿಲ್ಲ; ನಾನು ಸ್ವತಂತ್ರ ಅನ್ನುವ ಭ್ರಮೆ ಇಲ್ಲ. ಆದ್ದರಿಂದ ಅವನು ಮಾಡುವ ಎಲ್ಲ ಕರ್ಮವೂ ಫಲಪ್ರದ. ಭಗವಂತನ ಪಾರಮ್ಯದ ಎಚ್ಚರದಿಂದ ಅವನ ಜೀವನ ರೂಪುಗೊಂಡಿದೆ. ಅಂತವನು ಸಣ್ಣ ಕರ್ಮ ಮಾಡಿದರೂ ಮಹಾ ಫಲವನ್ನು ಪಡೆಯುತ್ತಾನೆ. ಅಹಂಕಾರದಿಂದ ಕಳಚಿಕೊಳ್ಳುವುದು ಅಧ್ಯಾತ್ಮದಲ್ಲಿ ಅತ್ಯಂತ ಮಹತ್ವದ ವಿಷಯ. ಕೃಷ್ಣ ಗೀತೆಯಲ್ಲಿ  ಈ ಮಾತನ್ನು ಪದೇ ಪದೇ ಹೇಳುತ್ತಾನೆ. ಅಹಂಕಾರ ಎನ್ನುವುದು ಎಷ್ಟು ಅಪಾಯಕಾರಿ ಎಂದರೆ, ಗೀತೆ ಓದಿದ ಮೇಲೆ 'ನಾನು ಗೀತೆಯನ್ನು ಓದಿದ್ದೇನೆ' ಎನ್ನುವ ಅಹಂಕಾರ ಬಂದು ಬಿಡುತ್ತದೆ!  ಆದ್ದರಿಂದ ಜ್ಞಾನ ಸಂಪಾದನೆ ಜೊತೆಗೆ ಒಂದು ಎಚ್ಚರ ಸದಾ ಇರಬೇಕು. ಯಾವ ಕಾಲಕ್ಕೂ ಅಹಂಕಾರಕ್ಕೆ ಒಳಗಾಗಬಾರದು. ಅಹಂಕಾರ ಎನ್ನುವುದು ಆಧ್ಯಾತ್ಮದ ದಾರಿ ಅಲ್ಲ.
ಭಗವಂತ ಕರ್ಮ ಮಾಡಿದರೂ ಅವನಿಗೆ ಕರ್ಮದ ಲೇಪವಿಲ್ಲ. ಯಾವ ಕರ್ಮದ ಲೇಪವಿಲ್ಲದ ಭಗವಂತನಲ್ಲಿ ಎಲ್ಲ ಕರ್ಮವಿದೆ. ಕರ್ಮ ಇದ್ದಲ್ಲಿ ಕರ್ಮದ ಲೇಪವಿಲ್ಲ. ಯಾರಲ್ಲಿ ಕರ್ಮದ ಲೇಪವಿಲ್ಲ ಆತ ಮಾತ್ರ ಪೂರ್ಣ ಫಲವನ್ನು ಪಡೆಯುತ್ತಾನೆ. ಕರ್ಮದ ಲೇಪದಲ್ಲಿ ಬಿದ್ದವನು 'ನಾನು ಮಾಡಿದೆ, ನನ್ನಿಂದಾಯಿತು' ಎಂದುಕೊಂಡು ಸೆರೆಯಲ್ಲಿ ಸಿಕ್ಕಿ ಒದ್ದಾಡುತ್ತಾನೆ. ಇದು ಕೃಷ್ಣನ  ಕರ್ಮದ ವಿವರಣೆ(definition).  ಭಗವಂತನಲ್ಲಿ ಕರ್ಮದ ಲೇಪವಿಲ್ಲ, ಆದರೆ ಸರ್ವ ಕರ್ತೃತ್ವವಿದೆ. ನಾವು ಎಷ್ಟು ಕರ್ಮದ ಲೇಪವನ್ನು ಕಮ್ಮಿ ಮಾಡಿಕೊಂಡೆವೋ ಅಷ್ಟು ಕರ್ಮದ ಫಲವನ್ನು ಪಡೆಯುತ್ತೇವೆ. ಇದನ್ನು ತಿಳಿದವ ಬುದ್ಧಿವಂತ. ಆತ  ಕರ್ಮದ ನಿಜವಾದ ಅನುಸಂಧಾನದಿಂದ ಅದರ ಪೂರ್ಣ ಫಲವನ್ನು ಪಡೆಯುತ್ತಾನೆ. ಇದನ್ನು ಇನ್ನೂ ಬಿಡಿಸಿ ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸುತ್ತಾನೆ.

No comments:

Post a Comment