Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Wednesday, April 13, 2011

Bhagavad Gita Kannada Chapter-04 Shloka 04-06


ಅರ್ಜುನ ಉವಾಚ ।
ಅಪರಂ ಭವತೋ ಜನ್ಮ ಪರಂ ಜನ್ಮ ವಿವಸ್ವತಃ ।
ಕಥಮೇತದ್ ವಿಜಾನೀಯಾಂ ತ್ವಮಾದೌ ಪ್ರೋಕ್ತವಾನಿತಿ     ॥೪॥

ಅರ್ಜುನಃ ಉವಾಚ-ಅರ್ಜುನ ಕೇಳಿದನು:
ಅಪರಮ್ ಭವತಃ ಜನ್ಮ  ಪರಮ್  ಜನ್ಮ ವಿವಸ್ವತಃ |
ಕಥಮ್ ಏತತ್  ವಿಜಾನೀಯಾಮ್  ತ್ವಮ್ ಆದೌ ಪ್ರೋಕ್ತವಾನ್ ಇತಿ-ನೀನು ಹುಟ್ಟಿದ್ದು ಇತ್ತೀಚೆಗೆ. ಸೂರ್ಯ ಮೊದಲು ಹುಟ್ಟಿದವನು. ನೀನೇ ಮೊದಲು ಹೇಳಿದವನು ಎಂದರೆ ಇದನ್ನು ಹೇಗೆ ಅರ್ಥೈಸಲಿ?

ಜ್ಞಾನ ಪರಂಪರೆಯನ್ನು ವಿವರಿಸುವಾಗ ಕೃಷ್ಣ "ನಾನು ಮೊದಲು ಸೂರ್ಯನಿಗೆ(ದೇವತೆಗಳಿಗೆ) ಹೇಳಿದೆ"   ಎಂದಿದ್ದಾನೆ. ಇಲ್ಲಿ ಅರ್ಜುನ ಕೃಷ್ಣನನ್ನು ಈ ಕುರಿತು ಪ್ರಶ್ನಿಸುತ್ತಾನೆ. ಕೃಷ್ಣ ಅರ್ಜುನನಿಗಿಂತ ಸುಮಾರು ಆರು ತಿಂಗಳು ಹಿರಿಯ. ಹಾಗಿರುವಾಗ ಕೋಟಿ-ಕೋಟಿ ವರ್ಷಗಳ ಹಿಂದೆ ಸೂರ್ಯನಿಗೆ ಹೇಳಿದೆ ಅಂದರೆ ಇದನ್ನು ಹೇಗೆ ಅರ್ಥೈಸಲಿ ಎನ್ನುವುದು ಅರ್ಜುನನ ಪ್ರಶ್ನೆ.
ಇಲ್ಲಿ ಅರ್ಜುನನಿಗೆ ಸ್ವಯಂ ಭಗವಂತನಿಂದ ಈ ಪ್ರಶ್ನೆಗೆ ಉತ್ತರ ಪಡೆಯುವ ಆಸೆ. ಅದಕ್ಕಾಗಿ ಈ ಪ್ರಶ್ನೆಯನ್ನು ಹಾಕಿದ್ದಾನೆ. ಇಷ್ಟೇ ಅಲ್ಲದೆ ಎಲ್ಲಾ ನರರ ಪ್ರತಿನಿಧಿಯಾಗಿ ನಿಂತ ಮಹಾಜ್ಞಾನಿ ಅರ್ಜುನ, ನಮ್ಮ ನಿಮ್ಮೆಲ್ಲರ  ಪರ ಈ ಪ್ರಶ್ನೆಯನ್ನು ಹಾಕುತ್ತಾನೆ. ಈ ಬಗ್ಗೆ ಪ್ರಾರಂಭದಲ್ಲೇ ಪ್ರಸ್ತಾಪಿಸಲಾಗಿದೆ. ಕೃಷ್ಣ ಹೇಳಿದ್ದ: "ನಾವೆಲ್ಲರೂ ಹಿಂದೆಯೂ ಇದ್ದೆವೂ ಹಾಗು ಈಗ ಇದ್ದೇವೆ ಮತ್ತು ಮುಂದೆಯೂ ಇರುತ್ತೇವೆ" ಎಂದು(ಅ-2 ,ಶ್ಲೋ-12).   ಅದರ ಸಂಪೂರ್ಣ ವಿವರಣೆ ಇಲ್ಲಿ ಬರುತ್ತದೆ. ಯಾವ ಕರ್ಮಬಂಧನವಿಲ್ಲದ ಸರ್ವ ಸಮರ್ಥನಾದ ಭಗವಂತ ಭೂಮಿಗೇಕೆ ಇಳಿದು ಬರುತ್ತಾನೆ ಎನ್ನುವ ಪ್ರಶ್ನೆಗೆ ಮುಂದಿನ ಶ್ಲೋಕಗಳಲ್ಲಿ ಕೃಷ್ಣ ಉತ್ತರಿಸಿದ್ದಾನೆ.

ಭಗವಾನುವಾಚ ।
ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ ।
ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ             ॥೫॥

ಭಗವಾನ್ ಉವಾಚ-ಭಗವಂತ ಹೇಳಿದನು.
ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚ ಅರ್ಜುನ |
ತಾನಿ ಅಹಮ್  ವೇದ ಸರ್ವಾಣಿ ನ ತ್ವಮ್  ವೇತ್ಥ ಪರಂತಪ-ಓ ಅರ್ಜುನ, ನನಗೆ ಹಲವಾರು ಹುಟ್ಟುಗಳು ಆಗಿ ಹೋದವು. ನಿನಗೆ ಕೂಡಾ. ಓ ಅರಿಗಳನ್ನು ತರಿದವನೆ, ಅವನ್ನೆಲ್ಲ ನಾನು ಬಲ್ಲೆ- ಆದರೆ ನಿನಗೆ ಗೊತ್ತಿಲ್ಲ.

ಜನ್ಮ ಅಂದರೆ ಜನನ ಅಥವಾ ಹುಟ್ಟುವುದು. ಇಲ್ಲದೇ ಇರುವುದು ಹುಟ್ಟುವುದಿಲ್ಲ. ಜಡವನ್ನು ಹುಟ್ಟಿತು ಎಂದು ನಾವು ಕರೆಯುವುದಿಲ್ಲ.  ಸೂಕ್ಷ್ಮ ಶರೀರದಿಂದ ಸ್ಥೂಲ ಶರೀರದಲ್ಲಿ ಕಾಣಿಸಿಕೊಳ್ಳುವುದು ಜನನ. ಸಾಯುವುದು ಅಂದರೆ ಸೂಕ್ಷ್ಮಶರೀರ ಸ್ಥೂಲಶರೀರವನ್ನು ತೈಜಿಸುವುದು. ಇಲ್ಲಿ ಕೃಷ್ಣ ಹೇಳುತ್ತಾನೆ: "ನನಗೆ ಹಾಗು ನಿನಗೆ ಅನೇಕ ಹುಟ್ಟುಗಳು ಆಗಿ ಹೋದವು. ನನಗೆ ಅದು ತಿಳಿದಿದೆ ಆದರೆ ಪರಂತಪನಾದ ನಿನಗೂ ಈ ವಿಚಾರ ತಿಳಿದಿಲ್ಲ" ಎಂದು.  

ಅಜೋSಪಿ ಸನ್ನವ್ಯಯಾತ್ಮಾ ಭೂತಾನಾಮೀಶ್ವರೋSಪಿ ಸನ್ ।
ಪ್ರಕೃತಿಂ ಸ್ವಾಮಧಿಷ್ಠಾಯ ಸಂಭವಾಮ್ಯಾತ್ಮಮಾಯಯಾ    ॥೬॥

ಅಜಃ ಅಪಿ ಸನ್ ಅವ್ಯಯ ಆತ್ಮಾ ಭೂತಾನಾಮ್ ಈಶ್ವರಃ ಅಪಿ ಸನ್ |
ಪ್ರಕೃತಿಮ್  ಸ್ವಾಮ್ ಅಧಿಷ್ಠಾಯ ಸಂಭವಾಮಿ ಆತ್ಮಮಾಯಯಾ-ನನಗೆ ಹುಟ್ಟೆಂಬುದಿಲ್ಲ. ನನ್ನ ದೇಹಕ್ಕೆ ಕೂಡಾ ಸಾವಿಲ್ಲ. ನಾನು ಎಲ್ಲಾ ಜೀವಿಗಳ ಒಡೆಯರಿಗೂ ಒಡೆಯ. ಆದರೂ ನನ್ನಂಕೆಯಲ್ಲಿರುವ ಪ್ರಕೃತಿಮಯವಾದ ಶರೀರವನ್ನು ಹೊಕ್ಕು ಜ್ಞಾನ ಸ್ವರೂಪದಿಂದಲೇ (ನನ್ನ ಸಹಜ ಸ್ವಭಾವವನ್ನಾಧರಿಸಿ ನನ್ನಿಚ್ಛೆಯಿಂದಲೇ ) ಮೂಡಿಬರುವೆ.

ಸಮಸ್ತ ಜೀವ ಜಾತದ ಒಡೆಯನಾದ ಭಗವಂತ ಅನೇಕ ಬಾರಿ ಭೂಮಿಗೆ ಇಳಿದು ಬರುತ್ತಾನೆ. ಆತನಿಗೆ ಹುಟ್ಟು ಅನ್ನುವುದಿಲ್ಲ. ಆದರೂ ಹುಟ್ಟಿ ಬರುತ್ತಾನೆ. ಆತ ಅವ್ಯಯ; ಆತ ನಶ್ವರವಾದ ದೇಹವನ್ನು ಹೊತ್ತು ಹುಟ್ಟುವುದಿಲ್ಲ. ಆದ್ದರಿಂದ ದೇಹದ ಮೂಲಕ ಹುಟ್ಟು-ಸಾವು ಭಗವಂತನಿಗಿಲ್ಲ.  ಇಲ್ಲಿ ಬಂದಿರುವ 'ಆತ್ಮ ಮಾಯಯಾ' ಅನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಜೀವಕ್ಕೆ ಕವಿದ ಮೋಹದ ಪರದೆ ಆತ್ಮ ಮಾಯೆ; ಭಗವಂತನ ಮಹಿಮೆ ಆತ್ಮ ಮಾಯೆ; ಭಗವಂತನ ಸ್ವಂತ ಇಚ್ಚೆ ಹಾಗು ಜ್ಞಾನ ಆತ್ಮ ಮಾಯೆ. ಭಗವಂತ ಭೂಮಿಗೆ ಇಳಿದು ಬರುವುದು ಆತನ ಜ್ಞಾನದ ಮಹಿಮೆಯಿಂದ ಹೊರತು ಯಾವುದೋ ಮಾಯೆಯ ಅಧೀನನಾಗಿ ಅಲ್ಲ. ಭಗವಂತ ತನ್ನ ಭಕ್ತರ ಕಳಕಳಿಯನ್ನು ಈಡೇರಿಸುವುದಕ್ಕೊಸ್ಕರ ಇಚ್ಛಾಪೂರ್ವಕವಾಗಿ ತಾನೇ ನಿರ್ಮಿಸಿರುವ ಪ್ರಕೃತಿಯನ್ನು ಮಾಧ್ಯಮವಾಗಿ ಬಳಸಿ ಇಳಿದು ಬರುತ್ತಾನೆ. ಇದು ಆತನ ಮಹಿಮೆ. ಮೋಹದ ಪರದೆಯಲ್ಲಿ ಬದುಕುವ ನಮಗೆ ಇದು ಒಂದು ಸಾಮಾನ್ಯ ಹುಟ್ಟು ಎನ್ನುವಂತೆ ಕಾಣುತ್ತದೆ. ಏಕೆಂದರೆ ನಮಗೆ ಆತನ ಜ್ಞಾನಾನಂದಮಯ ಶರೀರವನ್ನು ಕಾಣಲು ಸಾಧ್ಯವಿಲ್ಲ. ನಮಗೆ ಸ್ವಯಂ ನಮ್ಮ ಜೀವ ಸ್ವರೂಪದ ಅರಿವೇ ಇಲ್ಲ-ಹೀಗಿರುವಾಗ ಭಗವಂತನನ್ನು ಅರಿಯುವುದು ಸಾಧ್ಯವೇಈ ಕಾರಣದಿಂದ ನಮಗೆ ಭಗವಂತ ಪಾಂಚಭೌತಿಕ ಶರೀರದವನಂತೆ ಕಾಣುತ್ತಾನೆ. ನಮಗೆ ತಿಳಿದಂತೆ ಕೆಲವು ಪ್ರಾಣಿಗಳಿಗೆ ಬಣ್ಣ ಕಾಣುವುದಿಲ್ಲ. ಅವುಗಳ ಕಣ್ಣಿಗೆ ಆ ಶಕ್ತಿ ಇಲ್ಲ. ಆದ್ದರಿಂದ ಎಲ್ಲವೂ ಕಪ್ಪು ಬಿಳುಪು. ಆದರೆ ನಿಜವಾಗಿ ಪ್ರಪಂಚದಲ್ಲಿ ಬಣ್ಣವಿದೆ, ಆ ಪ್ರಾಣಿಗಳಿಗೆ ಬಣ್ಣವನ್ನು ಗ್ರಹಿಸುವ ಶಕ್ತಿ ಇಲ್ಲ ಅಷ್ಟೇ. ಹಾಗೇ ಮೋಹದ ಪರದೆಯಲ್ಲಿ ಬದುಕುವ ನಮಗೆ ಭಗವಂತನ ಜ್ಞಾನಾನಂದ ಸ್ವರೂಪ ಶರೀರ ಕಾಣಿಸುವುದಿಲ್ಲ, ಬದಲಿಗೆ ಪಾಂಚಭೌತಿಕ  ಶರೀರ ಹುಟ್ಟಿ ನಾಶವಾದಂತೆ ಕಾಣುತ್ತದೆ.  ಆದರೆ ಮೂಲತಃ ಭಗವಂತನಿಗೆ ಹುಟ್ಟೂ ಇಲ್ಲ, ನಾಶವೂ ಇಲ್ಲ. ಆತ ತನ್ನ ಸಹಜ ಸ್ವಭಾವದಿಂದ ಸ್ವ ಇಚ್ಚೆಯಿಂದ ಮೂಡಿ ಬರುತ್ತಾನೆ.

ಭಗವಂತ ಯಾವ ಕಾರಣಕ್ಕೋಸ್ಕರ ಭೂಮಿಗಿಳಿದು ಬರುತ್ತಾನೆ?  ಅದರ ಹಿಂದಿರುವ ದೈವೀ ಸಂಕಲ್ಪ ಏನು? ಈ ಪ್ರಶ್ನೆಗೆ ಉತ್ತರ  ಮುಂದಿನ ಎರಡು ಶ್ಲೋಕದಲ್ಲಿ ಕಾಣಬಹುದು.

No comments:

Post a Comment