Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Tuesday, April 5, 2011

Bhagavad Gita Kannada Chapter-03 Shloka 36-38


ಅರ್ಜುನ ಉವಾಚ ।
ಅಥ ಕೇನ ಪ್ರಯುಕ್ತೋsಯಂ ಪಾಪಂ ಚರತಿ ಪೂರುಷಃ  
ಅನಿಚ್ಛನ್ನಪಿ ವಾರ್ಷ್ಣೇಯ ಬಲಾದಿವ ನಿಯೋಜಿತಃ         ॥೩೬॥

ಅರ್ಜುನ ಉವಾಚ-ಅರ್ಜುನ ಕೇಳಿದನು
ಅಥ ಕೇನ ಪ್ರಯುಕ್ತಃ ಅಯಮ್  ಪಾಪಮ್  ಚರತಿ ಪೂರುಷಃ  
ಅನಿಚ್ಛನ್ ಅಪಿ ವಾರ್ಷ್ಣೇಯ ಬಲಾತ್ ಇವ ನಿಯೋಜಿತಃ-ಓ ವಾರ್ಷ್ಣೇಯ, ಮನುಷ್ಯ ಪಾಪ ಮಾಡುತ್ತಾನೆ. ತನಗೆ ಇಷ್ಟವಿರದಿದ್ದರೂ ಯಾರೋ ಬಲವಂತದಿಂದ ಮಾಡಿಸಿದಂತೆ! ಇದು ಯಾರ ಪ್ರೇರಣೆ?

ಕೃಷ್ಣನ ಉಪದೇಶವನ್ನು ಕೇಳಿದ ಮೇಲೆ ಅರ್ಜುನ ನಮ್ಮ-ನಿಮ್ಮೆಲ್ಲರಿಗೆ ಬರುವಂಥಹ ಒಂದು ಬಹಳ ಮುಖ್ಯವಾದ ಪ್ರಶ್ನೆಯನ್ನು ಹಾಕುತ್ತಾನೆ. "ಪಾಪ ಪುಣ್ಯದ ಅರಿವಿದ್ದೂ, ಮಾಡಬಾರದ ಕೆಲಸ ಎಂದು ತಿಳಿದಿದ್ದೂ, ಮನುಷ್ಯ ಕೆಲವೊಮ್ಮೆ ತಪ್ಪು ಮಾಡುತ್ತಾನೆ-ಇದು ಏಕೆ? ನಮಗೆ ಸರಿ-ತಪ್ಪಿನ ಅರಿವಿದ್ದೂ ಏಕೆ ತಪ್ಪನ್ನು ಮಾಡುತ್ತೇವೆ? ಮಾಡಬಾರದು ಅನಿಸಿದ್ದನ್ನು ಮಾಡುವಂತೆ ಪ್ರೇರೇಪಿಸುವ ಶಕ್ತಿ ಯಾವುದು? ನಾವು ಬೇಡವೆಂದರೂ ನಮ್ಮ ಕೈಯಲ್ಲಿ ಮಾಡಿಸುವ ಶಕ್ತಿ ಯಾವುದು?"  ಇದು ಅರ್ಜುನನ ಪ್ರಶ್ನೆ. ಇಲ್ಲಿ 'ಪೂರುಷ' ಎನ್ನುವ ಪದ ಬಳಕೆಯಾಗಿದೆ. ಒಬ್ಬ ಅಪರೋಕ್ಷ ಜ್ಞಾನಿ ಕೂಡಾ ಈ ಮೇಲಿನ ತಪ್ಪನ್ನು ಮಾಡುತ್ತಾನೆ ಎನ್ನುವ ಅರ್ಥದಲ್ಲಿ ಈ ಪದ ಇಲ್ಲಿ ಬಳಕೆಯಾಗಿದೆ. ಮಹಾಭಾರತದಲ್ಲಿ ನೋಡಿದಾಗ ನಮಗೆ ಇದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ. ಭೀಷ್ಮ-ದ್ರೋಣಾಚಾರ್ಯರು ಆ ಕಾಲದ ಮಹಾ ಜ್ಞಾನಿಗಳು. ಆದರೆ ಯಾವುದೋ ಕಾರಣದಿಂದ, ತಪ್ಪು ಎಂದು ತಿಳಿದಿದ್ದರೂ ಸಹ ದುರ್ಯೋಧನನ ಕಡೆ ಯುದ್ಧಕ್ಕೆ ನಿಂತರು. ಈ ರೀತಿ  ಏಕೆ? ಯಾವ ದುಷ್ಟ ಶಕ್ತಿ (ಸೈತಾನ) ನಮ್ಮೊಳಗಿದ್ದು ಈ ಕೆಲಸವನ್ನು ಮಾಡಿಸುತ್ತದೆ? ಎನ್ನುವ ಮೂಲಭೂತವಾದ ಪ್ರಶ್ನೆಯನ್ನು ಅರ್ಜುನ ಕೃಷ್ಣನ ಮುಂದಿರಿಸುತ್ತಾನೆ.
ಇಲ್ಲಿ ಅರ್ಜುನ ಕೃಷ್ಣನನ್ನು 'ವಾರ್ಷ್ಣೇಯ' ಎಂದು ಸಂಬೋಧಿಸಿದ್ದಾನೆ. 'ವೃಷ್ಣಿ' ಅನ್ನುವುದು ವೈದಿಕ ಪದ. 'ವೃಷ್ಣಿ' ಅಂದರೆ ಬಯಸಿದ ಬಯಕೆಗಳನ್ನು ಈಡೇರಿಸುವವ. ಬಯಸಿದ ಬಯಕೆಗಳನ್ನು ಈಡೇರಿಸುವವರಿಗೆ, ಹಾಗು ಎಲ್ಲರಿಗೂ ಆಶ್ರಯದಾತ 'ವಾರ್ಷ್ಣೇಯ'. “ಬಯಸಿದ ಬಯಕೆಗಳನ್ನು ಈಡೇರಿಸುವವರನ್ನು ಒದಗಿಸಿಕೊಡುವವ ಮತ್ತು ಎಲ್ಲಾ ಬಯಕೆಗಳನ್ನು ಈಡೇರಿಸುವ ಮಹಾಶಕ್ತಿಯಾಗಿ ನಿಂತಿರುವ ನೀನು, ಇಷ್ಟವಿರದಿದ್ದರೂ ನಮ್ಮಿಂದ ಬಲವಂತವಾಗಿ  ಕೆಲಸ ಮಾಡಿಸುವ ಶಕ್ತಿ ಯಾವುದು ಎನ್ನುವುದನ್ನು ತಿಳಿಸು” ಎನ್ನುವ ಭಾವ ಈ ಸಂಬೋಧನೆಯಲ್ಲಿದೆ.

ಭಗವಾನುವಾಚ
ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ।
ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್           ॥೩೭॥

ಭಗವಾನುವಾಚ-ಭಗವಂತ ಹೇಳಿದನು:
ಕಾಮಃ  ಏಷಃ  ಕ್ರೋಧಃ ಏಷಃ ರಜಃ ಗುಣ ಸಮುದ್ಭವಃ
ಮಹಾ ಅಶನಃ  ಮಹಾಪಾಪ್ಮಾ ವಿದ್ಧಿ ಏನಮ್ ಇಹ ವೈರಿಣಮ್--ಪಾಪವನ್ನು ಪ್ರೇರೇಪಿಸುವ ಶಕ್ತಿ ಕಾಮ (ಕಾಮದ ಅಭಿಮಾನಿಯಾದ ಕಾಲನೇಮಿ) ಇದರದೇ ರೂಪಾಂತರ ಸಿಟ್ಟು. ರಜೋಗುಣದಿಂದ ಇದರ ಹುಟ್ಟು. ಇದು ತಿಂದಷ್ಟೂ ತಣಿಯದ ಹೊಟ್ಟೆಬಾಕ. ಮಹಾಪಾತಕಗಳ ತವರು. ಇದನ್ನು ಈ ಸಾಧನಾ ಪಥದಲ್ಲಿ ಹಗೆಯೆಂದು ತಿಳಿ.

ಎಲ್ಲವುದಕ್ಕೂ ಮೂಲಕಾರಣ ನಮ್ಮೊಳಗಿರುವ ಬಯಕೆ. ಯಾವುದೋ ಒಂದು ಬಯಕೆ ನಮ್ಮನ್ನು ಕಾಡುತ್ತಿರುತ್ತದೆ, ಆ ಬಯಕೆಯನ್ನು ತಪ್ಪು ಮಾಡುವ ಮುಖೇನ ಈಡೇರಿಸಿಕೊಳ್ಳಬಹುದು ಎನ್ನುವ ಪ್ರೇರಣೆ (temptation) ನಮ್ಮಲ್ಲಿರುತ್ತದೆ. ಇದನ್ನು ಮಾಡಿಸುವವನು ಕಾಮದ ಅಭಿಮಾನಿಯಾದ ದುಷ್ಟ ಶಕ್ತಿ 'ಕಾಲನೇಮಿ'; ನಮ್ಮೊಳಗೆ ಕಾಲನೇಮಿ ಬಂದು ಕೂತರೆ ನಮಗರಿವಿಲ್ಲದಂತೆ ನಾವು ತಪ್ಪು ಮಾಡುತ್ತೇವೆ. ಮೂಲಭೂತವಾಗಿ ನೋಡಿದರೆ ಮನುಷ್ಯ ತಪ್ಪು ಮಾಡುವುದಕ್ಕೆ ಎರಡು ಸಂಗತಿಗಳು ಕಾರಣ. ಒಂದು ಅಪೇಕ್ಷೆಗಳು ಹಾಗು ಅಪೇಕ್ಷೆ ಈಡೇರದೆ ಇದ್ದಾಗ ಕೋಪ. ಸಿಟ್ಟಿನ ಬರದಲ್ಲಿ ಮನುಷ್ಯ ಎಷ್ಟು ತಪ್ಪು ಮಾಡುತ್ತಾನೆ ಎಂದು ಹೇಳುವುದೂ ಕಷ್ಟ. ತಪ್ಪು ಮಾಡಿ ಕೊನೆಗೆ ಪಶ್ಚಾತಾಪ ಪಡುತ್ತೇವೆ. ಈ ಕ್ರೋಧ ಎನ್ನುವುದಕ್ಕೆ ಮೂಲ ಕಾಮ. ಕಾಮವಿಲ್ಲದೆ ಕ್ರೋಧವಿಲ್ಲ. ಎಲ್ಲಾ ಕ್ರೋಧದ ಹಿಂದೆ ಅರ್ಥಹೀನ ಕಾಮವಿರುತ್ತದೆ.
ಮನುಷ್ಯನಲ್ಲಿರುವ ರಜೋಗುಣ ರಾಗ-ದ್ವೇಷವನ್ನು ಬೆಳೆಸುತ್ತದೆ. ಅದಕ್ಕೆ ಎಷ್ಟು ಆಹಾರ ಹಾಕಿದರೂ ಹೊಟ್ಟೆ ತುಂಬುವುದಿಲ್ಲ! ಇದಕ್ಕೆ ಉತ್ತಮ ಉದಾಹರಣೆ ಎಂದರೆ ಒಬ್ಬ ಕೆಲಸಕ್ಕಾಗಿ ಅಲೆದಾಡುತ್ತಿರುತ್ತಾನೆ, ಆಗ ಆತನಿಗೆ ಹೊಟ್ಟೆ ಪಾಡಿಗೆ ಒಂದು ಕೆಲಸ ಸಿಕ್ಕಿದರೆ ಸಾಕು ಎನ್ನುವ ಅಭಿಪ್ರಾಯವಿರುತ್ತದೆ. ಒಮ್ಮೆ ಕೆಲಸ ಸಿಕ್ಕಿತು, ಆತನ ಬಯಕೆ ಹೆಚ್ಚು ಸಂಬಳ ಪಡೆಯುವತ್ತ ಹರಿಯುತ್ತದೆ. ಹೆಚ್ಚು ಸಿಕ್ಕಿದಾಗ ಮತ್ತಷ್ಟರಾಸೆ, ಹೀಗೆ ಇದು ಬೆಳೆದುಕೊಂಡು ಹೋಗುತ್ತದೆ. ಎಂದೂ ತೃಪ್ತಿ ಇರುವುದೇ ಇಲ್ಲ.
ಹೀಗೆ ನಾವು ತಪ್ಪು ಮಾಡುವುದನ್ನು ಒಗ್ಗಿಸಿಕೊಂಡರೆ ಅದು 'ಮಹಾಶನ' ವಾಗುತ್ತದೆ. ಅದಕ್ಕೆ ಎಷ್ಟು ಔತಣ ಹಾಕಿದರೂ ಮತ್ತೆ ಬೇಕು ಅನ್ನುತ್ತದೆ. ಎಲ್ಲಿಯವರೆಗೆ ಅಂದರೆ ಅದು ನಮ್ಮಿಂದ ಮಾಡಬಾರದ ಕೆಲಸವನ್ನು ಮಾಡಿಸುತ್ತದೆ. ತನ್ನ ಆಸೆಯನ್ನು ಈಡೇರಿಸಿಕೊಳ್ಳುವ ಛಲಕ್ಕೆ ಬಿದ್ದವ ಬ್ರಹ್ಮಹತ್ಯಗೂ ಹೇಸುವುದಿಲ್ಲ ಎನ್ನುತ್ತದೆ ಶಾಸ್ತ್ರ!  ಆದ್ದರಿಂದ ನಮ್ಮ ಮೊದಲ ಶತ್ರು ರಾಗ-ದ್ವೇಷ. ಅದರ ಬಗ್ಗೆ ಎಚ್ಚರವಹಿಸಬೇಕು. ಅದು ನಿನ್ನೊಳಗಿದ್ದು ನಿನ್ನನ್ನು ಆಳದಿರಲಿ. ಇದನ್ನೇ ಕುರಾನಿನಲ್ಲಿ ಹೀಗೆ ಹೇಳಿದ್ದಾರೆ "Drive them out from where you have been driven out". ರಾಗ ದ್ವೇಷಗಳು ನಮ್ಮ ವ್ಯಕ್ತಿತ್ವವನ್ನು ಸೂರೆ ಮಾಡಿ ತಾವು ಆಳುತ್ತಿದ್ದಾವಲ್ಲ, ಅವನ್ನು ಹೊರಗೋಡಿಸು, ನೀನು ನೀನಾಗಿ ಬದುಕು.   

ಧೂಮೇನಾsವ್ರಿಯತೇ ವಹ್ನಿರ್ಯಥಾssದರ್ಶೋ ಮಲೇನ ಚ          
ಯಥೋಲ್ಬೇನಾsವೃತೋ ಗರ್ಭಸ್ತಥಾ ತೇನೇದಮಾವೃತಮ್ ॥೩೮॥

ಧೂಮೇನ ಅವ್ರಿಯತೇ ವಹ್ನಿಃ ಯಥಾ ಆದರ್ಶಃ  ಮಲೇನ ಚ          
ಯಥಾ ಉಲ್ಬೇನ ಆವೃತಃ ಗರ್ಭಃ ತಥಾ ತೇನ ಇದಮ್ ಆವೃತಮ್ -ಹೊಗೆಯಿಂದ ಬೆಂಕಿ ಕವಿದಂತೆ (ಭಗವಂತ), ಕೊಳೆಯಿಂದ ಕನ್ನಡಿ ಕವಿದಂತೆ(ಮನಸ್ಸು), ಗರ್ಭ ಕೋಶದಿಂದ ಭ್ರೂಣ ಕವಿದಂತೆ(ಜೀವ), ಕಾಮದಿಂದ ಈ ಎಲ್ಲಾ ಕವಿದುಕೊಂಡಿದೆ.[ಹೊಗೆ ಬೆಂಕಿಯನ್ನು ಕವಿದಂತೆ ಕಾಮ ಸಜ್ಜನರನ್ನು ಕವಿಯುತ್ತದೆ. ಕೊಳೆ ಕನ್ನಡಿಯನ್ನು ಕೆಡಿಸಿದಂತೆ ಮಧ್ಯಮರನ್ನು. ಗರ್ಭಕೋಶ ಭ್ರೂಣವನ್ನು ಮುಚ್ಚಿದಂತೆ ದುರ್ಜನರನ್ನು]

ರಾಗ  ದ್ವೇಷಗಳು ಹೇಗೆ ನಮ್ಮ ಕಣ್ಣನ್ನು ಕಟ್ಟುತ್ತವೆ ಎನ್ನುವುದಕ್ಕೆ ಒಂದು ಸುಂದರ ವಿವರಣೆಯನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ. ಎಲ್ಲವನ್ನು ಬೆಳಗುತ್ತಿರುವ ಬೆಂಕಿ, ಅದು ತಾನೂ ಬೆಳಗುತ್ತದೆ ಹಾಗು ಎಲ್ಲವನ್ನೂ ಬೆಳಗಿಸುತ್ತದೆ. ಈ ಬೆಂಕಿಗೆ ಹೊಗೆ ತುಂಬಿದಾಗ ಅದು ಕಾಣುವುದಿಲ್ಲ ಹಾಗು ಬೆಳಗುವುದಿಲ್ಲ. ಭಗವಂತ ಬೆಂಕಿಯಂತೆ. ನಮ್ಮ ರಜೋ ಗುಣ ಹೊಗೆಯಂತೆ. ನಮಗೂ ಭಗವಂತನಿಗು ನಡುವೆ  ರಜೋಗುಣದ ಪರದೆ ಬೆಂಕಿಯನ್ನು ಸುತ್ತಿದ ಹೊಗೆಯಂತೆ. ಇದು ಸಾತ್ವಿಕ ಮನುಷ್ಯನಿಗೆ ಕೃಷ್ಣ ಕೊಟ್ಟ ದೃಷ್ಟಾಂತ. ಇನ್ನು ರಾಜಸರಿಗೆ ಕೃಷ್ಣ ಕೊಡುವ ದೃಷ್ಟಾಂತ ಮಸಿ ಬಳಿದ ಕನ್ನಡಿ. ಮನಸ್ಸು ಎನ್ನುವ ಕನ್ನಡಿಗೆ ರಜೋಗುಣ ಎನ್ನುವ ಕೊಳೆ ಬಳಿದಂತೆ ಎನ್ನುತ್ತಾನೆ ಕೃಷ್ಣ. ತಾಮಸರಿಗೆ ಕೃಷ್ಣನ ದೃಷ್ಟಾಂತ ಗರ್ಭಚೀಲದಲ್ಲಿರುವ ಭ್ರೂಣ. ಎಲ್ಲವೂ ಕತ್ತಲು. ಕಣ್ಣು ತೆರೆದರೂ ಕಾಣದು, ಜೀವಜಾತವೆನ್ನುವ ಮರಿಯನ್ನು ರಜೋಗುಣ ಎನ್ನುವ ಮೊಟ್ಟೆಯಲ್ಲಿಟ್ಟಂತೆ.
ಹೀಗೆ ಬೆಂಕಿಗೆ ಹೊಗೆಯಂತೆ-ಭಗವಂತನಿಗೆ ಆವರಣ ಈ ರಜೋ ಗುಣ; ಕನ್ನಡಿಗೆ ಹಚ್ಚಿದ ಮಸಿಯಂತೆ- ಅಂತಃಕಾರಣಕ್ಕೆ ಆವರಣ ಈ ರಜೋಗುಣ. ಅಂತಃಕರಣ ಕೆಲಸ ಮಾಡದೆ ಇದ್ದಾಗ ಭಗವಂತ ಕಾಣುವುದಿಲ್ಲ ಆಗ- ಜೀವಕ್ಕೆ 'ಭ್ರೂಣದಂತೆ' ಎಲ್ಲವೂ ಕತ್ತಲು. ಎಲ್ಲವೂ ಇದ್ದೂ ಏನೂ ಉಪಯೋಗವಿಲ್ಲದೆ ವ್ಯರ್ಥವಾಗುತ್ತದೆ.

No comments:

Post a Comment