Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Saturday, April 16, 2011

Bhagavad Gita Kannada Chapter 04 Shloka 7-9


ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ      ।
ಅಭ್ಯುತ್ಥಾನಮಧರ್ಮಸ್ಯ ತದಾSSತ್ಮಾನಂ ಸೃಜಾಮ್ಯಹಮ್  ॥೭॥

ಯದಾಯದಾ ಹಿ ಧರ್ಮಸ್ಯ ಗ್ಲಾನಿಃ ಭವತಿ ಭಾರತ |
ಅಭ್ಯುತ್ಥಾನಮ್ ಅಧರ್ಮಸ್ಯ ತದಾ ಆತ್ಮಾನಮ್  ಸೃಜಾಮಿ ಅಹಮ್-ಓ ಭಾರತ, ಧರ್ಮ ಕಳೆಗುಂದಿದಾಗೆಲ್ಲ, ಅಧರ್ಮ ತಲೆಯತ್ತಿದಾಗೆಲ್ಲ ನಾನು ನನ್ನನ್ನು ಹುಟ್ಟಿಸಿಕೊಳ್ಳುತ್ತೇನೆ.

ಇಡಿಯ ಪ್ರಪಂಚದಲ್ಲಿ  ಯಾವಾಗ-ಯಾವಾಗ ಧರ್ಮ ಮಲೀನವಾಗಿ ಅಧರ್ಮದ ಮುಂದೆ ಸೋಲೊಪ್ಪಿಕೊಂಡು, ತಲೆ ಕೆಳಗಾಗಿ ನಿಲ್ಲುವ ಪ್ರಸಂಗ ಬರುತ್ತದೋ, ಆಗ ನಾನು ಧರೆಗಿಳಿದು ಬರುತ್ತೇನೆ ಎನ್ನುತ್ತಾನೆ ಕೃಷ್ಣ. ಇಲ್ಲಿ ಧರ್ಮ ಸೋಲುವುದು ಅಂದರೆ ಅದು ಒಂದು ಮನೆಗೆ- ಒಂದು ದೇಶಕ್ಕೆ  ಸಂಬಂಧಪಟ್ಟಿದ್ದಲ್ಲ. ಇಡೀ ವಿಶ್ವದಲ್ಲೇ ಧರ್ಮಕ್ಕೆ ನೆಲೆ ಸಿಗದ ಪರಿಸ್ಥಿತಿ ಬಂದಾಗ ಭಗವಂತನ ಅವತಾರವಾಗುತ್ತದೆ. ದುಷ್ಟ ಶಕ್ತಿಗಳು ಭೂಮಿಯ ಮೇಲೆ ಹಿಡಿತ ಸಾಧಿಸಿ ಸತ್ವಗುಣ ತಲೆ ಎತ್ತದಂತೆ ಮಾಡಿದಾಗ, ಭಗವಂತ ತನ್ನನ್ನು ತಾನು ಭೂಮಿಯ ಮೇಲೆ ಸೃಷ್ಟಿಸಿಕೊಳ್ಳುತ್ತಾನೆ. "ತದಾSSತ್ಮಾನಂ ಸೃಜಾಮ್ಯಹಮ್" ಎನ್ನುವಲ್ಲಿ  'ನಾನು ನನ್ನ ಆತ್ಮೀಯರನ್ನು ಕಳುಹಿಸುತ್ತೇನೆ' ಎನ್ನುವ ಹಾಗು 'ನಾನೇ ಅವತರಿಸುತ್ತೇನೆ' ಎನ್ನುವ ಎರಡು ಧ್ವನಿ ಇದೆ.  ಧರ್ಮಕ್ಕೆ ಸೋಲಾಗುವ ಲಕ್ಷಣಗಳು ಪ್ರಾಂತೀಯವಾಗಿ ಕಂಡು ಬಂದಾಗ ಭಗವಂತ ತನಗೆ ಆತ್ಮೀಯರಾದವರನ್ನು(ದೇವತೆಗಳನ್ನು) ಭೂಮಿಗೆ ಕಳುಹಿಸುತ್ತಾನೆ. ಅವರು ಆಚಾರ್ಯಪುರುಷರಾಗಿ ಬಂದು ಸಮಾಜವನ್ನು ತಿದ್ದುತ್ತಾರೆ. ಇಂತಹ ವ್ಯವಸ್ಥೆ ಕೂಡಾ ಕುಸಿದು ತಾಮಸ ಶಕ್ತಿಗಳು ವಿಜೃಂಭಿಸಿದಾಗ, ಕೊನೆಯದಾಗಿ ಭಗವಂತ ಸ್ವಯಂ ಅವತಾರವೆತ್ತುತ್ತಾನೆ.   ಕೃಷ್ಣನ ಅವತಾರವಾದ  ಸಮಯದ ಸ್ಥಿತಿಯನ್ನು ಗಮನಿಸಿದಾಗ ಆ ಕಾಲದ ಧರ್ಮದ ಪಾಡೇನು ಎನ್ನುವುದು ಸ್ಪಷ್ಟವಾಗುತ್ತದೆ. ಜರಾಸಂಧ ಪ್ರಪಂಚದ ಮೂಲೆ ಮೂಲೆಯಲ್ಲಿನ ಸುಮಾರು 22,800  ರಾಜಕುಮಾರರನ್ನು ತನ್ನ ಸೆರೆಯಲ್ಲಿಟ್ಟಿದ್ದ. ಕಂಸನಿಗೆ ತನ್ನ ಮಗಳನ್ನು ಕೊಟ್ಟು ಆತನನ್ನು ಎತ್ತಿಕಟ್ಟಿ, ಶೂರಸೇನನನ್ನು ಸೆರೆಮನೆಗೆ ಹಾಕುವಂತೆ ಕುತಂತ್ರ ಮಾಡಿ, ಅದರಲ್ಲಿ ಯಶಸ್ವಿಯಾಗಿದ್ದ ಜರಾಸಂಧ. ಇನ್ನು ಆತನ ಮಿತ್ರ ನರಕಾಸುರ ಸುಮಾರು 16,100 ರಾಜಕುಮಾರಿಯರನ್ನು ಸೆರೆಮನೆಯಲ್ಲಿಟ್ಟಿದ್ದ. ಭೀಷ್ಮಾಚಾರ್ಯರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡು ಇಡೀ ಭೂಲೋಕದಲ್ಲಿ ತನ್ನದೇ ಆದ ಏಕಚಕ್ರಧಿಪತ್ಯವನ್ನು ಸ್ಥಾಪಿಸುವ, ಹಾಗು ಜನರನ್ನು ಸುಲಿಗೆ ಮಾಡುವ ಕುತಂತ್ರ ರೂಪಿಸಿದ್ದ ಜರಾಸಂಧ. ಅಂದಿನ ಭಾರತ ಇಂದಿನ ಭಾರತದಂತಿರಲಿಲ್ಲ. ಅದು ಅತಿದೊಡ್ಡ ಭೂ ಭಾಗವಾಗಿತ್ತು. ಒಂದು ವೇಳೆ ಕೃಷ್ಣನ ಅವತಾರ ಆಗದೇ ಇದ್ದಿದ್ದರೆ ಇಡೀ ಭೂಲೋಕ ಈ  ಪಾಪಿಗಳ ಕೈವಶವಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಕೃಷ್ಣ ಅವತರಿಸಿದ. ಕಂಸನನ್ನು ಕೊಂದು ಶೂರಸೇನನನ್ನು ಮರಳಿ ರಾಜನನ್ನಾಗಿ ಮಾಡಿದ ಕೃಷ್ಣ, ನರಕಾಸುರನನ್ನು ಕೊಂದು, ಆತನ ಕೈ ಕೆಳಗಿನ ರಾಜಕುಮಾರಿಯರನ್ನು ಬಿಡುಗಡೆಗೊಳಿಸಿದ. ಹೀಗೆ ಬಿಡುಗಡೆಗೊಂಡ ರಾಜಕುಮಾರಿಯರು ಶೀಲ ಶಂಕಿಸುವ ಸಮಾಜಕ್ಕೆ ಹೆದರಿದಾಗ ಅವರಿಗೆ ಅಭಯವನ್ನು ಕೊಟ್ಟು, ಅವರನ್ನು ತಾನೇ ಮದುವೆಯಾಗಿ ಅವರ ಗೌರವವನ್ನು ಕಾಪಾಡಿದ. ಜರಾಸಂಧ ಕೃಷ್ಣನ ಮೇಲೆ ಸುಮಾರು 23  ಅಕ್ಷೌಹಿಣಿ ಸೈನ್ಯದೊಂದಿಗೆ ದಾಳಿ ಮಾಡಿದಾಗ ಓಡಿ ಹೋದಂತೆ ನಟಿಸಿ, ನಂತರ ಭೀಮಾರ್ಜುನರೊಂದಿಗೆ ಜರಾಸಂಧನನ್ನು ಸಂಧಿಸಿ- ಅಲ್ಲಿ ನಡೆದ ಮಲ್ಲ ಯುದ್ಧದಲ್ಲಿ ಭೀಮನಿಂದ ಜರಾಸಂಧನ ವದೆಯಾಗುವಂತೆ ಮಾಡಿದ. ಹಾಗು ಆತನ ಸೆರೆಯಲ್ಲಿದ್ದ ಎಲ್ಲಾ ರಾಜಕುಮಾರರರನ್ನು ಅವರವರ ರಾಜ್ಯಕ್ಕೆ ಕಳುಹಿಸಿಕೊಟ್ಟ.
ಹೀಗೆ ಇಡೀ ಭೂಲೋಕ ಅಧರ್ಮದ ದಾಸ್ಯಕ್ಕೆ ಗುರಿಯಾಗುವ ಸಂದರ್ಭ ಬಂದಾಗ ಮಾತ್ರ ಭಗವಂತನ ಅವತಾರ ಭೂಲೋಕದಲ್ಲಿ ಆಗುತ್ತದೆ.

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ।
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ ॥೮॥

ಪರಿತ್ರಾಣಾಯ ಸಾಧೂನಾಮ್  ವಿನಾಶಾಯ ಚ ದುಷ್ಕೃತಾಮ್ |
ಧರ್ಮ ಸಂಸ್ಥಾಪನ ಅರ್ಥಾಯ ಸಂಭವಾಮಿ ಯುಗೇಯುಗೇ-ಸಜ್ಜನರನ್ನು ಉಳಿಸಲೆಂದು, ಕೇಡಿಗರನ್ನು ಅಳಿಸಲೆಂದು, ಧರ್ಮವನ್ನು ನೆಲೆಗೊಳಿಸಲೆಂದು ಯುಗ ಯುಗದಲ್ಲೂ ಮೂಡಿಬರುತ್ತೇನೆ.

ಯಾರು ಸಮಾಜಕ್ಕೆ ಕೆಟ್ಟದ್ದನ್ನು, ಕೇಡನ್ನು ಮಾಡಿ ಅದರಿಂದ ಲಾಭ ಪಡೆದು ಮೆರೆಯುತ್ತಾರೋ, ಅಂಥವರ ಪೂರ್ಣನಾಶಕ್ಕಾಗಿ, ಸಜ್ಜನರ ಮತ್ತು ಪ್ರಪಂಚದ ಸಮಗ್ರ ರಕ್ಷಣೆಗಾಗಿ, ಧರ್ಮದ ಬೀಜ ಬಿತ್ತಲು ಭಗವಂತ ಭೂಲೋಕದಲ್ಲಿ ಅವತರಿಸುತ್ತಾನೆ. ಇಲ್ಲಿ ಯುಗೇ ಯುಗೇ ಅನ್ನುವಲ್ಲಿನ ಅರ್ಥ ಯುಗ-ಯುಗದಲ್ಲೂ’. ಅಂದರೆ ಭಗವಂತ ಪ್ರತೀ ಯುಗದಲ್ಲೂ ಅವತರಿಸುತ್ತಾನೆ ಎಂದರ್ಥವಲ್ಲ. ಆತ ಅವತರಿಸುವುದು ಮೇಲೆ ಹೇಳಿದ ಸಂದರ್ಭ ಬಂದಾಗ ಮಾತ್ರ. ಒಂದೊಂದು ಯುಗದಲ್ಲಿ ಅನೇಕ ಅವತಾರವಿರಬಹುದು; ಇನ್ನು ಕೆಲವು ಯುಗದಲ್ಲಿ ಅವತಾರವೇ ಇಲ್ಲದಿರಬಹುದು. ಆದರೆ ಭಗವಂತನ ಆವಿರ್ಭಾವವಿರುವ ಅನೇಕ ಮಹಾಪುರುಷರು ಯುಗ-ಯುಗದಲ್ಲೂ ಬಂದು ಹೋಗುತ್ತಿರುತ್ತಾರೆ. ಅವರ ಮುಖೇನ ಭಗವಂತನ ಧರ್ಮ ರಕ್ಷಣೆ ಯುಗ ಯುಗದಲ್ಲೂ ನಿರಂತರ.
  
ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ವತಃ           ।
ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋSರ್ಜುನ ॥೯॥

ಜನ್ಮ ಕರ್ಮ ಚ ಮೇ ದಿವ್ಯಮ್ ಏವಮ್ ಯಃ  ವೇತ್ತಿ ತತ್ವತಃ |
ತ್ಯಕ್ತ್ವಾ ದೇಹಮ್  ಪುನಃ  ಜನ್ಮ  ನ ಏತಿ ಮಾಮ್ ಏತಿ ಸಃ ಅರ್ಜುನ-ಹೀಗೆ ನನ್ನ ಅಲೌಕಿಕವಾದ  ಹುಟ್ಟಿನ, ಕಜ್ಜದ ನಿಜವನ್ನರಿತವನು ದೇಹವನ್ನು ತೊರೆದು ಮರಳಿ ಹುಟ್ಟುವುದಿಲ್ಲ. ಅರ್ಜುನ-ಅವನು ನನ್ನನ್ನು ಸೇರುತ್ತಾನೆ.

ಹೀಗೆ ಭಗವಂತನ ಜ್ಞಾನಾನಂದಮಯ, ದಿವ್ಯ(Divine), ಲೀಲಾಮಯ ಅವತಾರದ ಅರಿವು ಯಥಾವತ್ತಾಗಿ(ತತ್ವತಃ) ಅರಿತರೆ, ಅದು ನಮಗೆ ಮೋಕ್ಷ ಮಾರ್ಗವನ್ನು ತೋರಬಲ್ಲದು. ಇದು  ಮರು-ಹುಟ್ಟಿಲ್ಲದ ಮೋಕ್ಷವನ್ನು ಪಡೆಯಲು ಬೇಕಾದ ಒಂದು ಅಮೂಲ್ಯ ಜ್ಞಾನ.  ಈ ರೀತಿ   ಅಧಿಷ್ಠಾನದಿಂದ ಸಿದ್ಧಿಯನ್ನು ಪಡೆದವರ ಬಗ್ಗೆ ಕೃಷ್ಣ ಮುಂದೆ ವಿವರಿಸುತ್ತಾನೆ.

No comments:

Post a Comment