ಕಾಯೇನ ಮನಸಾ ಬುದ್ಧ್ಯಾ ಕೇವಲೈರಿಂದ್ರಿಯೈರಪಿ ।
ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ಯಕ್ತ್ವಾSSತ್ಮಶುದ್ಧಯೇ ॥೧೧॥
ಕಾಯೇನ ಮನಸಾ ಬುದ್ಧ್ಯಾ ಕೇವಲೈಃ ಇಂದ್ರಿಯೈಃ ಅಪಿ ।
ಯೋಗಿನಃ ಕರ್ಮ ಕುರ್ವಂತಿ ಸಂಗಮ್ ತ್ಯಕ್ತ್ವಾ ಆತ್ಮ ಶುದ್ಧಯೇ-ಯೋಗಿಗಳು ಮೈಯಿಂದ, ಮನದಿಂದ, ಬುದ್ಧಿಯಿಂದ ಮತ್ತು ಬರಿಯ ಇಂದ್ರಿಯಗಳಿಂದ ಕರ್ಮ ಮಾಡುತ್ತಾರೆ. ನಂಟು ನೀಗಿ, ಬಗೆಯ ಶುದ್ಧಿಗಾಗಿ.
ಶಾಸ್ತ್ರದ ಸಂಪ್ರದಾಯದಂತೆ ಒಂದು ವಿಷಯವನ್ನು ಹೇಳಿ ಕೊನೆಗೆ ಆ ರೀತಿ ಅನುಷ್ಠಾನ ಮಾಡಿದವರ ಬಗ್ಗೆ ಹೇಳಿ, ನಮಗೆ ಆ ವಿಷಯದಲ್ಲಿ ಭರವಸೆ ಬರುವಂತೆ ಮಾಡುತ್ತಾರೆ. ಇದನ್ನು 'ಅರ್ಥವಾದ' ಎನ್ನುತ್ತಾರೆ. ಯಾವುದೇ ವಿಷಯವನ್ನು ನಾವೇ ಮೊದಲು ಆರಂಭಿಸುವುದು ಅಂದರೆ ಸ್ವಲ್ಪ ಕಷ್ಟ. ಆದರೆ 'ಅದು ಹಿಂದಿನಿಂದಲೂ ನಡೆದುಕೊಂಡು ಬಂದ ವಿಚಾರ' ಎಂದಾಗ ಆ ವಿಷಯದ ಬಗ್ಗೆ ನಮಗೆ ಧೈರ್ಯ ಹೆಚ್ಚು. ಹಾಗೇ ಕೃಷ್ಣ ಇಲ್ಲಿ ಜ್ಞಾನಿಗಳು ಸಂನ್ಯಾಸಯುಕ್ತವಾದ ಕರ್ಮಯೋಗ ಮಾಡುವುದನ್ನು ಪ್ರಸ್ತಾಪಿಸುತ್ತಾನೆ.
ಯೋಗಿಗಳು ದ್ವಂದ್ವಾತೀತವಾದ, ಫಲಕಾಮನೆ ಇಲ್ಲದೆ, 'ನನ್ನೊಳಗೆ ಭಗವಂತ ತನ್ನ ಪೂಜೆಯನ್ನು ನನ್ನ ಮೂಲಕ ನನ್ನ ಉದ್ಧಾರಕ್ಕೋಸ್ಕರ ಮಾಡಿಸುತ್ತಿದ್ದಾನೆ' ಎಂದು ತಿಳಿದು ಕರ್ತವ್ಯ ದೃಷ್ಟಿಯಿಂದ ಕರ್ಮ ಮಾಡುತ್ತಾರೆ, ಅವರಿಗೆ ಅಹಂಕಾರ-ಮಮಕಾರ ಇರುವುದಿಲ್ಲ; ಇದರಿಂದ ಮನಸ್ಸು ಶುದ್ಧವಾಗುತ್ತದೆ. ಶುದ್ಧಮನಸ್ಸಿಗೆ ಶುದ್ಧ ವಿಷಯ ಗ್ರಹಣ ಮಾಡಲು ಸಾಧ್ಯ. ಶುದ್ಧ ವಿಷಯ ಗ್ರಹಣ ಎಂದರೆ ಶಾಸ್ತ್ರಕಾರರು ಯಾವ ಅರ್ಥದಲ್ಲಿ ಹೇಳಿದ್ದಾರೆ ಅದೇ ಅರ್ಥದಲ್ಲಿ ಗ್ರಹಿಸುವುದು. ಹೀಗೆ ಅರ್ಥ ಮಾಡಿಕೊಳ್ಳಬೇಕಾದರೆ ನಮ್ಮ ಮನಸ್ಸು ಶಾಸ್ತ್ರಕಾರರ ಮನಸ್ಸಿಗೆ ಶ್ರುತಿಗೂಡಬೇಕು(tuning) ಅಥವಾ ನಾವು ಅವರ ಸ್ಥಾನ ಕ್ಕೇರಬೇಕು ಹಾಗು ಅವರ ಸ್ಥಾನದಲ್ಲಿ ನಿಂತು ಯೋಚಿಸಬೇಕು. ಇಲ್ಲದಿದ್ದರೆ ನಿಜವಾದ ವಿಷಯ ಗ್ರಹಣವಾಗುವುದಿಲ್ಲ. ಇಲ್ಲಿ ಕೃಷ್ಣ ಹೇಳುತ್ತಾನೆ "ಯೋಗಿಗಳೂ ಕೂಡಾ ಅಹಂಕಾರ-ಮಮಕಾರ ತೊರೆದು (ಸಂಗಂ ತ್ಯಕ್ತ್ವಾ) ಭಗಾವದರ್ಪಣ ಬುದ್ಧಿಯಿಂದ- ಮೈಯಿಂದ, ಮನದಿಂದ, ಬುದ್ಧಿಯಿಂದ ಮತ್ತು ಇಂದ್ರಿಯಗಳಿಂದ ಕರ್ಮನುಷ್ಠಾನವನ್ನು ಮಾಡುತ್ತಾರೆ" ಎಂದು. ಈ ವಿಚಾರವನ್ನು ಮತ್ತಷ್ಟು ಒತ್ತು ಕೊಟ್ಟು ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸುತ್ತಾನೆ.
ಯುಕ್ತಃ ಕರ್ಮಫಲಂ ತ್ಯಕ್ತ್ವಾ ಶಾಂತಿಮಾಪ್ನೋತಿ ನೈಷ್ಠಿಕೀಮ್ ।
ಅಯುಕ್ತಃ ಕಾಮಕಾರೇಣ ಫಲೇ ಸಕ್ತೋ ನಿಬದ್ಧ್ಯತೆ ॥೧೨॥
ಯುಕ್ತಃ ಕರ್ಮಫಲಮ್ ತ್ಯಕ್ತ್ವಾ ಶಾಂತಿಮ್ ಆಪ್ನೋತಿ ನೈಷ್ಠಿಕೀಮ್ ।
ಅಯುಕ್ತಃ ಕಾಮ ಕಾರೇಣ ಫಲೇ ಸಕ್ತಃ ನಿಬದ್ಧ್ಯತೆ-ಯೋಗ ಬಲ್ಲವನು ಕರ್ಮಫಲದ ನಂಟು ತೊರೆದು ನಿಚ್ಚಳವಾದ ನೆಮ್ಮದಿಯನ್ನು ಪಡೆಯುತ್ತಾನೆ. ಯೋಗಿಯಲ್ಲದವನು ಫಲದಲ್ಲೆ ಕಣ್ಣಿರಿಸಿ ಆಸೆಪಟ್ಟು ಮಾಡುತ್ತಾ ಅದರ ಬಂದಿಯಾಗುತ್ತಾನೆ.
ಕರ್ಮಯೋಗಕ್ಕೆ ತನ್ನನ್ನು ತೊಡಗಿಸಿಕೊಂಡವ, ಭಗವದ್ಪ್ರಜ್ಞೆಯಲ್ಲಿ ಕರ್ಮ ಮಾಡತಕ್ಕವ-ಜ್ಞಾನಾನಂದದ ಅಂತವಾದ ಮೋಕ್ಷವನ್ನು ಪಡೆಯುತ್ತಾನೆ. ನಾವು ಯಾವುದೊ ಒಂದು ಫಲ ಕಾಮನೆಯಿಂದ ಕರ್ಮ ಮಾಡಿದರೆ ಅದರಿಂದ ಯಾವುದೇ ಫಲ ಸಿಗುವುದಿಲ್ಲ ಎಂದಲ್ಲ, ಆದರೆ ಆ ಫಲ ನಮಗೆ ಎಷ್ಟು ಉಪಯುಕ್ತ ಎನ್ನುವ ಅರಿವು ನಮಗೆ ಇರುವುದಿಲ್ಲ ಹಾಗು ಅದು ಪೂರ್ಣವಾದ ಫಲವಾಗಿರುವುದಿಲ್ಲ. ಫಲಕಾಮನೆ ಇಲ್ಲದೆ ಕರ್ಮ ಮಾಡಿದರೆ ನಾವು ನಮಗೆ ಅಗತ್ಯವಾದ ಎಲ್ಲವನ್ನು ಪಡೆಯುತ್ತೇವೆ. ನಾವು ಕರ್ಮ ಫಲದ ಆಸೆ ಇಲ್ಲದೆ ಕರ್ಮದಲ್ಲಿ ತೊಡಗಿಸಿಕೊಂಡರೆ, ಕರ್ಮದಲ್ಲೇ ಮುಂದುವರಿದು ಅದರಿಂದ ಜ್ಞಾನಪಡೆದು, ಅಂತಃಕರಣ ಶುದ್ಧಿಯಿಂದ ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ಮೋಕ್ಷವನ್ನು ಪಡೆಯುಬಹುದು.
ಕರ್ಮಯೋಗವಿಲ್ಲದೆ 'ನನಗೋಸ್ಕರ ನಾನು ದುಡಿಯುತ್ತಿದ್ದೇನೆ, ಇದು ನನ್ನ ಸಂಪತ್ತು, ನಾನು ದುಡಿದಿದ್ದನ್ನು ನನ್ನ ಸುಖಕ್ಕಾಗಿ ಖರ್ಚು ಮಾಡುತ್ತೇನೆ, ಯಾವ ದೇವರೂ ನಮಗೆ ಸಹಾಯ ಮಾಡುವುದಿಲ್ಲ' ಇತ್ಯಾದಿ ಆತ್ಮ ಕೇಂದ್ರಿತವಾದ ಭಾವನೆಯಿಂದ ಕರ್ಮ ಮಾಡಿದಾಗ ಕರ್ಮ ನಮಗೆ ಬಂದಿಯಾಗುತ್ತದೆ. ಒಂದು ಮೂಕಪ್ರಾಣಿ ಕೂಡಾ ಹೀಗೆ ಬದುಕುವುದಿಲ್ಲ. ಉದಾಹರಣೆಗೆ ಕಾಗೆ: ಅದಕ್ಕೆ ಒಂದು ತಿನ್ನುವ ವಸ್ತು ಕಾಣಿಸಿದರೆ, ತನ್ನೆಲ್ಲಾ ಬಳಗವನ್ನು ಕರೆದು ಹಂಚಿಕೊಂಡು ತಿನ್ನುತ್ತದೆ. ಹುಲಿ-ಸಿಂಹಗಳಂತಹ ಕ್ರೂರ ಮೃಗಗಳೂ ಕೂಡಾ ಒಮ್ಮೆ ತಮ್ಮ ಹೊಟ್ಟೆ ತುಂಬಿದ ಮೇಲೆ ಎಂದೂ ಸ್ವಾರ್ಥದಿಂದ ಕಾರ್ಯ ನಿರ್ವಹಿಸುವುದಿಲ್ಲ. ಆದರೆ ಮಾನವರಾದ ನಾವು ಸ್ವಾರ್ಥದಿಂದ ಬದುಕುತ್ತೇವೆ, ನಮಗೆ ಎಷ್ಟು ಪಡೆದರೂ ಮತ್ತಷ್ಟರಾಸೆ! ಈ ರೀತಿ ಬದುಕುವವನು ಸಂಸಾರ ಚಕ್ರದಲ್ಲಿ ಸಿಕ್ಕಿ ಅದೋಗತಿಯನ್ನು ಪಡೆಯುತ್ತಾನೆ.
ಸರ್ವಕರ್ಮಾಣಿ ಮನಸಾ ಸಂನ್ಯಸ್ಯಾsಸ್ತೇ ಸುಖಂ ವಶೀ ।
ನವದ್ವಾರೇ ಪುರೇ ದೇಹೀ ನೈವ ಕುರ್ವನ್ ನ ಕಾರಯನ್ ॥೧೩॥
ಸರ್ವ ಕರ್ಮಾಣಿ ಮನಸಾ ಸಂನ್ಯಸ್ಯ ಆಸ್ತೇ ಸುಖಮ್ ವಶೀ ।
ನವ ದ್ವಾರೇ ಪುರೇ ದೇಹೀ ನ ಏವ ಕುರ್ವನ್ ನ ಕಾರಯನ್-ಮಾನಸಿಕವಾಗಿ ಎಲ್ಲಾ ಕರ್ಮಗಳ ನಂಟು ತೊರೆದು ಇಂದ್ರಿಯಗಳನ್ನು ಗೆದ್ದವನು ಹಾಯಾಗಿರುತ್ತಾನೆ-ಒಂಭತ್ತು ಬಾಗಿಲ ಈ ಪುರದಲ್ಲಿ; ಏನನ್ನೂ ಮಾಡದೆ, ಏನನ್ನೂ ಮಾಡಿಸದೆ.
ಎಲ್ಲಾ ಕರ್ಮವನ್ನು ಮಾನಸಿಕವಾಗಿ ಸಂನ್ಯಾಸ ಮಾಡು ಎನ್ನುತ್ತಾನೆ ಕೃಷ್ಣ. ಇದು ಬಹಳ ಮುಖ್ಯವಾದ ಮಾತು. ಇಲ್ಲಿ 'ಕರ್ಮವನ್ನು ತ್ಯಾಗ ಮಾಡು' ಎಂದು ಕೃಷ್ಣ ಹೇಳುತ್ತಿಲ್ಲ, ಕೇವಲ ಮನಸ್ಸಿನಲ್ಲಿ ಬಿಡು ಎನ್ನುತ್ತಿದ್ದಾನೆ. ಅಂದರೆ ಕರ್ಮಗಳ ಬಗ್ಗೆ ಮನಸ್ಸಿನಲ್ಲಿರುವ ಫಲದ ಸಂಗ, ಮಾನಸಿಕವಾಗಿ ಸ್ವಾತಂತ್ರ್ಯ ಎನ್ನುವ ಭ್ರಮೆಯನ್ನು ಬಿಡುವುದು. 'ನನಗೆ', 'ನನಗೋಸ್ಕರ' ಎನ್ನುವ ವಿಚಾರವನ್ನು ಮಾನಸಿಕವಾಗಿ ಬಿಡುವುದು. 'ಜೀವನಿಗೆ ಯಾವ ಕಾಲದಲ್ಲೂ ಯಾವ ಕರ್ತೃತ್ವದಲ್ಲೂ ಸ್ವಾತಂತ್ರ್ಯವಿಲ್ಲ'. ಇದನ್ನು ಮಧ್ವಾಚಾರ್ಯರು ತಮ್ಮ ಎಲ್ಲಾ ಗ್ರಂಥಗಳಲ್ಲಿ ಸಾರಿ-ಸಾರಿ ಹೇಳಿದ್ದಾರೆ. ಇದನ್ನು ಮಾನಸಿಕವಾಗಿ ಅಳವಡಿಸಿಕೊಳ್ಳುವುದೇ ನಿಜವಾದ ಕರ್ಮಸಂನ್ಯಾಸ.
ಭಗವಂತ ಈ ಒಂಭತ್ತು ಬಾಗಿಲಿನ ಪುರದೊಳಗೆ(ಪೂರ್ಣತೆಯನ್ನು ಪಡೆದ ಮನುಷ್ಯ ಶರೀರ) ನಮ್ಮನ್ನು ಕೂರಿಸಿ ನಮ್ಮಿಂದ ಕರ್ಮ ಮಾಡಿಸುತ್ತಿದ್ದಾನೆ. 'ನನ್ನನ್ನು ಈ ಪುರದಲ್ಲಿಟ್ಟು, ನನ್ನೊಂದಿಗೆ ನನ್ನ ಆತ್ಮೀಯ ಗೆಳೆಯನಾಗಿ ನಿಂತು ನನ್ನ ಉದ್ಧಾರಕ್ಕಾಗಿ ಆ ಭಗವಂತ ಕರ್ಮ ಮಾಡಿಸುತ್ತಿದ್ದಾನೆ' ಎನ್ನುವ ಎಚ್ಚರ ಕರ್ಮಯೋಗ.
ಕರ್ಮಯೋಗದ ಬಗ್ಗೆ ಕೃಷ್ಣ ವಿವರಿಸಿದ ಅಪೂರ್ವವಾದ ಜ್ಞಾನಯೋಗವನ್ನು ನೋಡಿದೆವು. ಹೀಗೆ ಕರ್ಮ ಮಾಡುವುದರಿಂದ ಅದು ಭಗವಂತನ ಆರಾದನೆಯಾಗುತ್ತದೆ ಹಾಗು ಜ್ಞಾನಮಾರ್ಗದ ಒಂದು ಅಂಗವಾಗುತ್ತದೆ. ಜ್ಞಾನದಿಂದ ಕರ್ಮ ಮಾಡಿದಾಗ ಯಾವ ಕ್ಷುದ್ರ ಕೆಲಸ ಕೂಡಾ ವ್ಯರ್ಥವಾಗುವುದಿಲ್ಲ, ಅದು ಯೋಗವಾಗುತ್ತದೆ.
ಇಲ್ಲಿ 'ಏನನ್ನೂ ಮಾಡದೆ, ಏನನ್ನೂ ಮಾಡಿಸದೆ' ಎಂದಿದ್ದಾನೆ ಕೃಷ್ಣ. ಸಾಮಾನ್ಯವಾಗಿ ನಾವು ಒಂದು ಕೆಲಸ ಮಾಡಿದರೆ 'ಅದನ್ನು ನಾನು ಮಾಡಿದೆ', 'ನಾನು ಹೇಳಿದ್ದರಿಂದ ಆ ಕಾರ್ಯ ಆಯಿತು' ಎಂದು ಎಲ್ಲಾ ಕಡೆ ಹೇಳಿಕೊಂಡು ಬರುತ್ತೇವೆ. ಹಾಗೆ ನಾಲ್ಕು ಜನ ಹೇಳಲಿ ಎಂದು ಬಯಸುತ್ತೇವೆ. ಆದರೆ ಜ್ಞಾನಿಗಳು ಹಾಗೆ ಹೇಳುವುದಿಲ್ಲ. 'ಏನೋ ದೇವರು ನನ್ನ ಕೈಯಲ್ಲಿ ಮಾಡಿಸಿದ' , 'ನನ್ನೊಳಗಿದ್ದು ಆ ದೇವರು ಮಾಡಿಸಿದ', 'ಭಗವಂತ ಅವರಿಗೆ ಪ್ರೇರಣೆ ಮಾಡಿದ' ಇತ್ಯಾದಿಯಾಗಿ ಮಾತನಾಡುತ್ತಾರೆ. ಇದಕ್ಕೆ ಕಾರಣ ಜ್ಞಾನಿಗಳು ಎಂದೂ 'ನಾನು ಸ್ವತಂತ್ರ ಕರ್ತಾ' ಎನ್ನುವ ಪ್ರಜ್ಞೆಯನ್ನು ಬೆಳೆಸಿಕೊಂಡಿರುವುದಿಲ್ಲ. ಇದು ಜ್ಞಾನಿಗಳ ಮತ್ತು ಅಜ್ಞಾನಿಗಳ ಕರ್ಮದ ಅನುಸಂಧಾನದಲ್ಲಿರುವ ವೆತ್ಯಾಸ.
ಈ ಎಲ್ಲಾ ವಿಚಾರವನ್ನು ತಿಳಿದ ಮೇಲೆ ನಮಗೆ ಒಂದು ಪ್ರಶ್ನೆ ಮೂಡುತ್ತದೆ. ಎಲ್ಲವನ್ನೂ ದೇವರೇ ಮಾಡಿಸುವುದಾದರೆ ಆತ ನಮ್ಮ ಕೈಯಲ್ಲಿ ಒಳ್ಳೆಯ ಕೆಲಸವನ್ನೇ ಮಾಡಿಸಲಿ, ಕೆಟ್ಟ ಕೆಲಸ ಏಕೆ ಮಾಡಿಸುತ್ತಾನೆ? ಕೆಟ್ಟಕೆಲಸ ಮಾಡಿಸುವವ ಅವನೇ ಆದರೆ ನಮಗೇಕೆ ಅದರ ಶಿಕ್ಷೆ? ನಮಗೇಕೆ ದುಃಖ? ನಾನು ಬಯಸಿ ಬುದ್ಧಿಪೂರ್ವಕವಾಗಿ ಮಾಡಿದಾಗ ನಾನು ಏಕೆ ಕರ್ತಾ ಅಲ್ಲ? ಅದರಿಂದ ಏಕೆ ನನಗೆ ಫಲ ಬರುವುದಿಲ್ಲ? ಎಲ್ಲಾ ದೇವರೇ ಮಾಡಿಸುವುದಾದರೆ ನನಗೆ ಫಲ ಹೇಗೆ ಬರುತ್ತದೆ? ಇತ್ಯಾದಿ ಪ್ರಶ್ನೆ. ಇದು ಪ್ರತಿಯೊಬ್ಬರನ್ನೂ ಕಾಡುವ ಪ್ರಶ್ನೆ. ಇವು ಕಾಡುವ ಪ್ರಶ್ನೆಗಳೇನೋ ಸರಿ ಆದರೆ ಸರಿಯಾದ ಪ್ರಶ್ನೆಗಳಲ್ಲ. ಶಾಸ್ತ್ರದ ತಿರುಳು ತಿಳಿಯದಾಗ ಈ ಪ್ರಶ್ನೆಗಳು ಬರುತ್ತವೆ. ಮುಂದಿನ ಶ್ಲೋಕಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಈ ನಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ.