Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Saturday, December 10, 2011

Bhagavad Gita Kannada Chapter-15 Shloka 16-20


ಮುಂದಿನ ಮೂರು ಶ್ಲೋಕಗಳು ಭಾರತೀಯ ತತ್ವಶಾಸ್ತ್ರದ ಚಿಂತನಾಕ್ರಮದ ಸಾರ. ಇವು ವಿಶ್ವ ಮತ್ತು ವಿಶ್ವಾತ್ಮನ ಅನುಸಂಧಾನವನ್ನು ವಿವರಿಸುವ ಶ್ಲೋಕಗಳು.

ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋSಕ್ಷರ ಉಚ್ಯತೇ                   ೧೬

ದ್ವಾವಿಮೌ ಪುರುಷೌ ಲೋಕೇ  ಕ್ಷರಃ ಚ ಅಕ್ಷರಃ  ಏವ ಚ
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥಃ ಅಕ್ಷರಃ  ಉಚ್ಯತೇ—ಲೋಕದಲ್ಲಿ ಈ ಎರಡು ಬಗೆಯ ಪುರುಷರು: ಕ್ಷರಪುರುಷ ಮತ್ತು ಅಕ್ಷರಪುರುಷ. ಬ್ರಹ್ಮಾದಿ ಸಮಸ್ತ ಜೀವರೂ ಕ್ಷರಪುರುಷರು. ಈ ಚರಾಚರದ ಕೂಟವನ್ನು ಕೂಡಿಸಿಟ್ಟ ಚಿತ್ ಪ್ರಕೃತಿಯೆ ಅಕ್ಷರ ಪುರುಷಳೆನ್ನಿಸಿದ್ದಾಳೆ.

 ಈ ಚೇತನಾ ಪ್ರಪಂಚದಲ್ಲಿ ಎರಡು ಬಗೆಯ ಪುರುಷರಿದ್ದಾರೆ. ಒಂದು ಕ್ಷರಪುರುಷ ಮತ್ತು ಇನ್ನೊಂದು ಅಕ್ಷರಪುರುಷ. [ಇಲ್ಲಿ ಪುರುಷ ಎಂದರೆ ಗಂಡಸು ಎನ್ನುವ ಅರ್ಥವಲ್ಲ. ಈ ಬಗ್ಗೆ ವಿಶೇಷವಾಗಿ ಹಿಂದೆ ಅನೇಕ ಬಾರಿ ಚರ್ಚಿಸಿದ್ದೇವೆ]. ಒಂದು ದಿನ ಬಿದ್ದುಹೋಗುವ ಶರೀರ ಉಳ್ಳವರು ಕ್ಷರಪುರುಷರು.  ಬ್ರಹ್ಮಾದಿ ಸಮಸ್ತ ಜೀವರೂ ಕೂಡ ಕ್ಷರಪುರುಷರು. ಬ್ರಹ್ಮಾದಿ ಸಮಸ್ತ ದೇವತೆಗಳೂ ಕೂಡ ಮೋಕ್ಷವನ್ನು ಸೇರುವಾಗ ತಮ್ಮ ಶರೀರ ಸಮೇತರಾಗಿ ಹೋಗುವಂತಿಲ್ಲ. ಚತುರ್ಮುಖ ಬ್ರಹ್ಮನ ಆಯಸ್ಸು ಒಂದು ಬ್ರಹ್ಮಕಲ್ಪ(೩೧,೧೦೪ ಸಾವಿರ ಕೋಟಿ ಮಾನವ ವರ್ಷ=ಚತುರ್ಮುಖನ ನೂರು ವರ್ಷ). ಆ ನಂತರ ಆತನ ಶರೀರ ಕೂಡ ಬಸ್ಮವಾಗುತ್ತದೆ. ಇದನ್ನು ಈಶೋಪನಿಷತ್ತಿನಲ್ಲಿ ಹೀಗೆ ವಿವರಿಸಿದ್ದಾರೆ: “ವಾಯುರನಿಲಮ್ ಅಮೃತಮ್ ಅಥೇದಂ ಭಸ್ಮಾಂತಂ ಶರೀರಂ  || ೧೭||”. “ಭಗವಂತನಿಗೆ ಅಧಿಷ್ಠಾನವಾಗಿ ನಿಂತಿರುವ ಪ್ರಾಣ ದೇವರು ಅಮೃತರು. ಆದರೂ ಕೂಡ, ಒಂದು ದಿನ ಅವರ ದೇಹ ಬಸ್ಮವಾಗಲೇ ಬೇಕು” ಎಂದು. ಹೀಗೆ ಸಮಸ್ತ ದೇವತೆಗಳು, ಜೀವಜಾತಗಳು-ಕ್ಷರಪುರುಷರು.
ನಾಶವಿಲ್ಲದ ಜ್ಞಾನಾನಂದಮಯ ಸ್ವರೂಪಭೂತವಾದ ದೇಹವುಳ್ಳ ಶ್ರೀಲಕ್ಷ್ಮಿ ಅಕ್ಷರಪುರುಷಳು. ಸಮಸ್ತ ಕ್ಷರಪುರುಷರೂ ಮೋಕ್ಷದಲ್ಲಿ ಅಕ್ಷರರಾಗುತ್ತಾರೆ. ಆದರೆ ಲಕ್ಷ್ಮಿ ಸದಾ ಅಕ್ಷರಳು. ಇಲ್ಲಿ ಲಕ್ಷ್ಮಿಯನ್ನು ಕೂಟಸ್ಥಳು ಎಂದು ವರ್ಣಿಸಿದ್ದಾರೆ. ಕೂಟ ಎಂದರೆ ‘ಕೂಡುವುದು’. ಜೀವ ಮತ್ತು ಶರೀರದ ಕೂಡುವಿಕೆಗೆ ಕಾರಣಳಾದವಳು ತಾಯಿ-ಶ್ರೀಲಕ್ಷ್ಮಿ. ಸದಾ ನಿರ್ಲಿಪ್ತಳಾಗಿ, ಯಾವುದೇ ಲೇಪವಿಲ್ಲದೆ, ಪ್ರಪಂಚವನ್ನು ವ್ಯವಸ್ಥೆಗೊಳಿಸಿದ ಶಕ್ತಿ –ಜಗನ್ಮಾತೆ ಶ್ರೀಲಕ್ಷ್ಮಿ. ಇವಳು ಅಕ್ಷರಪುರುಷಳು. 

ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುಧಾಹೃತಃ
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ                      ೧೭

ಉತ್ತಮಃ ಪುರುಷಃ ತು ಅನ್ಯಃ ಪರಮ ಆತ್ಮಾ ಇತಿ ಉಧಾಹೃತಃ
ಯಃ  ಲೋಕತ್ರಯಮ್ ಆವಿಶ್ಯ ಬಿಭರ್ತಿ ಅವ್ಯಯಃ  ಈಶ್ವರಃ –ಈ ಎರಡಕ್ಕೂ ಮಿಗಿಲಾದವನು ಪುರುಷೋತ್ತಮ. ಅವನನ್ನೇ ಪರಮಾತ್ಮ ಎನ್ನುತ್ತಾರೆ. ಅಳಿವಿರದ ಆ ಪರಮೇಶ್ವರನೆ ಮೂರು ಲೋಕದೊಳಗಿದ್ದು ಸಲಹುತ್ತಾನೆ.

ಕ್ಷರ ಮತ್ತು ಅಕ್ಷರವನ್ನು ಮೀರಿ ನಿಂತಿರುವ ಪರಮಪುರುಷ ಆ ಭಗವಂತ. ಅವನನ್ನೇ ‘ಪರಮಾತ್ಮ’ ಎಂದು ಕರೆಯುತ್ತಾರೆ. ಯಾರು ಈ ಮೂರು ಲೋಕದೊಳಗೆ, (ಭೂಃ ಭುವಃ ಸ್ವಃ ಅಥವಾ ಇಡೀ ಬ್ರಹ್ಮಾಂಡ-ಇದನ್ನು ಏಳು ಅಥವಾ ಹದಿನಾಲ್ಕು ಲೋಕವನ್ನಾಗಿಯೂ ವಿಭಾಗ ಮಾಡಿ ಹೇಳುತ್ತಾರೆ.) ತುಂಬಿ ಧಾರಣೆ ಮಾಡಿ ರಕ್ಷಿಸುತ್ತಿದ್ದಾನೋ ಅವನು ಸರ್ವಶಕ್ತ(ಈಶ್ವರ)ನಾದ ಭಗವಂತ.

ಯಸ್ಮಾತ್ ಕ್ಷರಮತೀತೋSಹಮಕ್ಷರಾದಪಿ ಚೋತ್ತಮಃ
ಅತೋSಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ                 ೧೮

ಯಸ್ಮಾತ್  ಕ್ಷರಮ್ ಅತೀತಃ ಅಮ್ ಅಕ್ಷರಾತ್ ಅಪಿ ಚ ಉತ್ತಮಃ
ತಃ ಅಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷ ಉತ್ತಮಃ –ನಾನು ಕ್ಷರವನ್ನು ಮೀರಿನಿಂತವನು. ಅಕ್ಷರಕಿಂತಲೂ ಹಿರಿಯನು. ಅದಕೆಂದೆ ಲೋಕದಲ್ಲು ವೇದದಲ್ಲು ‘ಪುರುಷೋತ್ತಮ’ ಎಂದೆ ಹೆಸರಾಗಿದ್ದೇನೆ. 

ಹಿಂದಿನ ಶ್ಲೋಕದಲ್ಲಿ “ಯಾರು ಕ್ಷರಾಕ್ಷರಗಳಿಂದ ಅತೀತನೋ ಅವನು ಪುರುಷೋತ್ತಮ” ಎಂದು ಹೇಳಿದ ಕೃಷ್ಣ, ಇಲ್ಲಿ ನೇರವಾಗಿ “ಆ ಬೇರೆಯಾದ ಪುರುಷೋತ್ತಮ ನಾನೆ” ಎಂದು ಸ್ಪಷ್ಟವಾಗಿ ಹೇಳುತ್ತಾನೆ. ಮಧ್ವಾಚಾರ್ಯರು ವಿಷ್ಣುತತ್ವ ನಿರ್ಣಯದ ಮಂಗಳಾಚರಣೆಯಲ್ಲಿ  ಹೇಳುತ್ತಾರೆ: “ಸದಾಗಮೈಕ ವಿಜ್ಞೇಯಂ ಸಮತೀತ ಕ್ಷರಾಕ್ಷರಂ ನಾರಾಯಣಂ ಸದಾ ವಂದೇ ನಿರ್ದೋಷ ಅಶೇಷ ಸದ್ಗುಣಂ” ಎಂದು. ಇಲ್ಲಿ  ಕ್ಷರ ಮತ್ತು ಅಕ್ಷರದಿಂದ ಅತೀತನಾದ ಭಗವಂತನನ್ನು ಅವರು “ಸಮತೀತ ಕ್ಷರಾಕ್ಷರಂ” ಎಂದು ಕರೆದಿದ್ದಾರೆ.
ಈ ಶ್ಲೋಕದಲ್ಲಿ ಕ್ಷರದಿಂದ ಅತೀತ ಮತ್ತು ಅಕ್ಷರದಿಂದ ಉತ್ತಮ ಎಂದಿದೆ. ಇಲ್ಲಿ ಅತೀತ ಎಂದರೆ ಉತ್ತಮ. ಆದರೂ ಅತೀತ ಮತ್ತು ಉತ್ತಮ ಎಂದು ಎರಡು ಪದ ಬಳಕೆ ಮಾಡಿದ್ದಾರೆ. ಇದು ಒಂದು ವಿಶೇಷ ಅರ್ಥವನ್ನು ಕೊಡುತ್ತದೆ. ಕ್ಷರಪುರುಷನ ಅಸ್ತಿತ್ವದ ವ್ಯಾಪ್ತಿ ಈ ಬ್ರಹ್ಮಾಂಡದ ಒಳಗೆ. ಆದರೆ ಲಕ್ಷ್ಮೀ ನಾರಾಯಣರು ಈ ಬ್ರಹ್ಮಾಂಡವನ್ನು ಮೀರಿ ನಿಂತವರು. ಇದನ್ನು ‘ಅತೀತ’ ಪದ ವಿವರಿಸುತ್ತದೆ. ಭಗವಂತ ಅಕ್ಷರಳಾದ ಲಕ್ಷ್ಮಿಗಿಂತಲೂ ಉತ್ತಮ.  ಈ ಶ್ಲೋಕದಲ್ಲಿ ‘ಅಪಿ’ ಮತ್ತು ‘ಚ-ಕಾರವನ್ನು’ ಒಟ್ಟಿಗೆ ಬಳಸಲಾಗಿದೆ. ಇದು ಭಗವಂತನ ಸರ್ವಶ್ರೇಷ್ಠತ್ವವನ್ನು ಹೇಳುತ್ತದೆ. ಆತನಿಗಿಂತ ಶ್ರೇಷ್ಠವಾದ ತತ್ವ ಇನ್ನೊಂದಿಲ್ಲ.
ಪುರುಷೋತ್ತಮ ಪದದ ಎಲ್ಲ ಮುಖದ ಅರ್ಥ ಕೇವಲ ಭಗವಂತನಲ್ಲಿ ಮಾತ್ರ ಅನ್ವಯವಾಗುತ್ತದೆ. ಕೃಷ್ಣ ಹೇಳುತ್ತಾನೆ: “ಲೋಕದಲ್ಲಿ ಮತ್ತು ವೇದದಲ್ಲಿ ಪುರುಷೋತ್ತಮ ಎಂದು ಕರೆದಿರುವುದು ನನ್ನನ್ನು” ಎಂದು. ಇಲ್ಲಿ ಲೋಕ ಎಂದರೆ ಪೌರುಷೇಯವಾದ ಪುರಾಣ ಗ್ರಂಥಗಳು. ಉದಾಹರಣೆಗೆ: ರಾಮಾಯಣ, ಮಹಾಭಾರತ, ಪಂಚರಾತ್ರ, ಪುರಾಣ, ಇತ್ಯಾದಿ. ಹೀಗೆ “ಪುರುಷೋತ್ತಮ” ಎನ್ನುವುದು ಪರಮ ಮುಖ್ಯವಾಗಿ ಕೇವಲ ಭಗವಂತನಿಗೆ ಮಾತ್ರ ಅನ್ವಯ.

ಯೋ ಮಾಮೇವಮಸಮ್ಮೂಢೋ ಜಾನಾತಿ ಪುರುಷೋತ್ತಮಮ್
ಸ ಸರ್ವವಿದ್ ಭಜತಿ ಮಾಂ ಸರ್ವಭಾವೇನ ಭಾರತ                                    ೧೯

ಯಃ  ಮಾಮ್ ಏವಮ್ ಅಸಮ್ಮೂಢಃ  ಜಾನಾತಿ ಪುರುಷೋತ್ತಮಮ್
ಸ ಸರ್ವವಿತ್  ಭಜತಿ ಮಾಮ್  ಸರ್ವಭಾವೇನ ಭಾರತ –ಭ್ರಾಂತಿಯಳಿದು, ಹೀಗೆ ನನ್ನನ್ನು ಪುರುಷೋತ್ತಮನೆಂದು ತಿಳಿದವನು ಎಲ್ಲವನ್ನು ತಿಳಿದವನು. ಓ ಭಾರತ, ಎಲ್ಲ ಬಗೆಯಿಂದಲೂ ಅವನು ನನ್ನನ್ನೆ ಆರಾಧಿಸುತ್ತಾನೆ.

ಇಲ್ಲಿ ಹೇಳಿರುವ ವಿಚಾರಗಳನ್ನು ತಿಳಿದು ನಮಗೇನು ಲಾಭ ಎಂದು ಪ್ರಶ್ನೆ ಮಾಡುವವರಿಗೆ ಕೃಷ್ಣನ ಉತ್ತರ ಈ  ಶ್ಲೋಕದಲ್ಲಿದೆ. ಕೃಷ್ಣ ಹೇಳುತ್ತಾನೆ: “ನನ್ನನ್ನು ಪುರುಷೋತ್ತಮ ಎಂದು ಅಹಂಕಾರವಿಲ್ಲದೆ, ಸ್ವಚ್ಛವಾದ ಮನಸ್ಸಿನಿಂದ, ಕೊಪವನ್ನು ಗೆದ್ದು, ಮೋಹವಳಿದು ತಿಳಿದವನು- ಎಲ್ಲವನ್ನು ತಿಳಿದವನು” ಎಂದು. ನಮಗೆ ಭಗವಂತನ ಅಸ್ತಿತ್ವ ಅರ್ಥವಾಗಬೇಕಾದರೆ ಮೊದಲು ಜಡಕ್ಕಿಂತ ಭಿನ್ನವಾದ ‘ನಾನು’ ಎನ್ನುವ ಚೇತನ ಈ ದೇಹದಲ್ಲಿದೆ ಎಂದು ಅರ್ಥವಾಗಬೇಕು(awareness of self). ಹೀಗೆ ಆತ್ಮಸಾಕ್ಷಾತ್ಕಾರವಾದ ಮೇಲೆ, ಭಗವಂತನ ಬಿಂಬ ಸಾಕ್ಷಾತ್ಕಾರವಾಗುತ್ತದೆ. ಯಾರು ಭಗವಂತನನ್ನು ತಿಳಿಯುತ್ತಾನೆ ಅವನು ಎಲ್ಲವನ್ನು ತಿಳಿಯಬಲ್ಲ. ಹೀಗಾಗಿ ನಾವು ಪ್ರಾಣಿಗಳಿಗಿಂತ ಬಿನ್ನವಾಗಿ ಜ್ಞಾನಿಗಳಾಗಿ ಬದುಕಬೇಕು. ಹೀಗೆ ಬದುಕಿದಾಗ ನಮಗೆ ದೇವರ ಮೇಲಿನ ಅಚಲ ಭಕ್ತಿ ಗಟ್ಟಿಗೊಳ್ಳುತ್ತದೆ. ಜ್ಞಾನಿ ಎನಿಸಿದವ ತನ್ನ ಸರ್ವಸ್ವವನ್ನು ಕಳೆದುಕೊಂಡರೂ ಕೂಡ, ‘ಅದು ಭಗವಂತನ ಕರುಣೆ’ ಎಂದು ಸ್ವೀಕರಿಸುತ್ತಾನೆ. ಅಜ್ಞಾನಿಯಲ್ಲಿ ಈ ದೃಢ ಭಕ್ತಿ ಇರದು. ಈ ರೀತಿ ದೃಢಭಕ್ತಿ ಮೂಡಬೇಕಾದರೆ ನಾವು ‘ಭಾರತ’ರಾಗಬೇಕು. ನಿರಂತರ ಜ್ಞಾನ ತೃಷೆ, ಜ್ಞಾನಿಗಳಲ್ಲಿ ಭಕ್ತಿ, ಭಗವದ್ ಭಕ್ತರಲ್ಲೇ ಹಿರಿಯರಾದ ಪ್ರಾಣದೇವರಲ್ಲಿ ಭಕ್ತಿ- ನಮ್ಮನ್ನು ಭಾರತರನ್ನಾಗಿ ಮಾಡಬಲ್ಲದು.

ಇತಿ ಗುಹ್ಯತಮಂ ಶಾಸ್ತ್ರಮಿದಮುಕ್ತಂ ಮಯಾSನಘ
ಏತದ್ ಬುದ್ಧ್ವಾ ಬುದ್ಧಿಮಾನ್ ಸ್ಯಾತ್ ಕೃತ ಕೃತ್ಯಶ್ಚ ಭಾರತ             ೨೦

ಇತಿ ಗುಹ್ಯತಮಮ್  ಶಾಸ್ತ್ರಮ್ ಇದಮ್ ಉಕ್ತಮ್  ಮಯಾನಘ
ಏತತ್  ಬುದ್ಧ್ವಾ ಬುದ್ಧಿಮಾನ್ ಸ್ಯಾತ್ ಕೃತಕೃತ್ಯಶ್ಚ ಭಾರತ—ಓ ಅನಘ, ತುಂಬ ಮುಚ್ಚಿಡಬೇಕಾದ ಮಾತನ್ನು ನಾನು ನಿನ್ನೆದುರು ಬಿಚ್ಚಿಟ್ಟಿದ್ದೇನೆ. ಇದನ್ನರಿತವನು ಭಗವಂತನನ್ನು ಬಲ್ಲವನಾಗುತ್ತಾನೆ. ಅವನು ಮತ್ತೆ ಮಾಡಬೇಕಾದ್ದೇನೂ ಉಳಿಯುವುದಿಲ್ಲ.

ಇದು ಅಧ್ಯಾತ್ಮ ಜಿಜ್ಞಾಸುಗಳಿಗೆ ಹೇಳಬೇಕಾದ ರಹಸ್ಯಗಳಲ್ಲೇ ಸರ್ವಶ್ರೇಷ್ಠ ರಹಸ್ಯ. ಅಧ್ಯಾತ್ಮವನ್ನು ಆಸಕ್ತಿ ಉಳ್ಳವರಿಗೆ ಅವರ ಆಸಕ್ತಿಯ ಆಳವನ್ನು ತಿಳಿದು ಹೇಳಬೇಕು. ಶಾಸ್ತ್ರದ ಪ್ರಮೇಯವನ್ನು ಎಂದೂ ಬೀದಿಯಲ್ಲಿ ತೆರೆದಿಡಬಾರದು. ಏಕೆಂದರೆ ಅದು ವ್ಯರ್ಥವಾಗಬಾರದು ಮತ್ತು ಅನರ್ಥವಾಗಲೂಬಾರದು. ಯಾರಿಗೆ ಗ್ರಹಣ ಮಾಡುವ ಯೋಗ್ಯತೆ ಇದೆ, ಆಸಕ್ತಿ, ಶ್ರದ್ಧೆ, ಭಕ್ತಿ ಇದೆ, ಅವರಿಗೆ ಮಾತ್ರ ಹೇಳಬೇಕು. ಇದು ರಹಸ್ಯಗಳಲ್ಲೇ ಅತ್ಯಂತ ಗೋಪ್ಯವಾದುದು. ಕ್ಷರಪುರುಷರ ಜ್ಞಾನ, ಅಕ್ಷರಪುರುಷಳ ಜ್ಞಾನ ಮತ್ತು ಪುರುಷೋತ್ತಮನ ಜ್ಞಾನವನ್ನು ತಿಳಿದವನು ಶಾಸ್ತ್ರವನ್ನು ಬಲ್ಲವನು. ಶಾಸ್ತ್ರ ಎಂದರೆ ತಿಳಿದವರು ತಿಳಿಯದವರಿಗೆ ತಿಳಿಹೇಳಬೇಕಾದ ವಸ್ತು. “ಬಹಳ ರಹಸ್ಯವಾಗಿ, ಜೋಪಾನವಾಗಿ ಕಾಪಾಡಬೇಕಾದ ಉಪದೇಶಾರ್ಹ ವಿಷಯವಿದು. ಇದಕ್ಕಿಂತ ಶ್ರೇಷ್ಠವಾದ ಉಪದೇಶ ಇನ್ನೊಂದಿಲ್ಲ. ಅಂತಹ ಗೋಪ್ಯವಾದ ವಿಷಯವನ್ನು ನಿನಗೆ ಹೇಳಿದೆ-ಏಕೆಂದರೆ ನೀನು ‘ಅನಘ' ಅದಕ್ಕಾಗಿ’” ಎನ್ನುತ್ತಾನೆ ಕೃಷ್ಣ. ‘ಅನಘ’ ಎಂದರೆ ಯಾವ ದೋಷವೂ ಇಲ್ಲದವ. ನಾವು ಜ್ಞಾನಕ್ಕೆ ಭಾದಕವಾಗಿರುವ ದುರಿತಗಳಿಂದ, ದೋಷಗಳಿಂದ ಮೊದಲು ಮುಕ್ತರಾಗಬೇಕು. ನಮ್ಮ ಮನಸ್ಸು ಕೆಟ್ಟ ವಿಚಾರದಿಂದ ಕಲುಷಿತವಾದರೆ ಆಗ ನಮಗೆ ಗೀತೆ ಅರ್ಥವಾಗುವುದಿಲ್ಲ. ಯಾವುದೇ ಪೂರ್ವಾಗ್ರಹ ಆವೇಶಗಳಿಲ್ಲದೆ ಪೂರ್ಣ ಭಗವಂತನಲ್ಲಿ ಶರಣಾದಾಗ ಮನಸ್ಸು ಪಾಪ ರಹಿತವಾಗಬಲ್ಲದು.
ಕೃಷ್ಣ ಹೇಳುತ್ತಾನೆ: “ಇದು ಎಲ್ಲ ತಿಳುವಳಿಕೆಗಳ ಬೇರು. ಇದನ್ನು ತಿಳಿದವನು ಕೃತಕೃತ್ಯ” ಎಂದು. ಜೀವನದಲ್ಲಿ ಭಗವಂತನನ್ನು ತಿಳಿದವನು ಸಾರ್ಥಕವಾದ ಬದುಕನ್ನು ಬದುಕಬಲ್ಲ. ಭಗವಂತನ ಅರಿನೊಂದಿಗೆ ಬದುಕುವುದೇ ಜೀವನದ ಸಾರ್ಥಕ್ಯ.

ಇತಿ ಪಂಚದಶೋಧ್ಯಾಯಃ
ಹದಿನೈದನೆಯ ಅಧ್ಯಾಯ ಮುಗಿಯಿತು
*******

No comments:

Post a Comment