Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Sunday, November 6, 2011

Bhagavad Gita Kannada Chapter-13 Shloka 24-28


ಕೃಷ್ಣ ಪ್ರಕೃತಿ ಮತ್ತು ಪುರುಷನನ್ನು ಗುಣ ಸಹಿತ ತಿಳಿಯುವುದು ಮೋಕ್ಷಮಾರ್ಗ ಎಂದು ಹೇಳಿದ. ಹಾಗಿದ್ದರೆ ಇದನ್ನು ತಿಳಿಯುವ ಬಗೆ ಯಾವುದು? ಇದನ್ನು ಕೃಷ್ಣ ಮುಂದಿನ ಎರಡು ಶ್ಲೋಕಗಳಲ್ಲಿ ವಿವರಿಸುತ್ತಾನೆ. ಭಗವಂತನನ್ನು ಸೇರಲು ಅನೇಕ ವಿಧಾನಗಳಿವೆ. ಎಲ್ಲರಿಗೂ ಎಲ್ಲವೂ ಅಲ್ಲ. ಏಕೆಂದರೆ ಒಬ್ಬರು ತಿಳಿದಂತೆ ಇನ್ನೊಬ್ಬರು ತಿಳಿದುಕೊಳ್ಳಲು ಆಗುವುದಿಲ್ಲ. ಬನ್ನಿ ಈ ಕುರಿತು ಕೃಷ್ಣನ ವಿವರಣೆಯನ್ನು ಆಲಿಸೋಣ.

ಧ್ಯಾನೇನಾSತ್ಮನಿ ಪಶ್ಯಂತಿ ಕೇಚಿದಾತ್ಮಾನಮಾತ್ಮನಾ
ಅನ್ಯೇ ಸಾಂಖ್ಯೇನ ಯೋಗೇನ ಕರ್ಮಯೋಗೇನ ಚಾಪರೇ                 ೨೪

ಧ್ಯಾನೇನ ಆತ್ಮನಿ ಪಶ್ಯಂತಿ ಕೇಚಿತ್ ಆತ್ಮಾನಮ್ ಆತ್ಮನಾ
ಅನ್ಯೇ ಸಾಂಖ್ಯೇನ ಯೋಗೇನ ಕರ್ಮಯೋಗೇನ ಚಪರೇ –ಕೆಲವರು ಧ್ಯಾನದ ಮೂಲಕ ಪರಮಾತ್ಮನನ್ನು ತನ್ನಲ್ಲಿ ಬಗೆಗಣ್ಣಿನಿಂದ  ಕಾಣುತ್ತಾರೆ. ಕೆಲವರು ಶಾಸ್ತ್ರದ ಅರಿವಿನ ಮೂಲಕ. ಕೆಲವರು ಕರ್ಮಯೋಗದ ಮೂಲಕ.

ಸಾಧನೆ ಮಾಡಲು ಮೊದಲು ನಮಗೆ ಸಾಧನಾ ಶರೀರ ಬೇಕು. ಹೀನಯೋನಿಯಲ್ಲಿ ಪೂರ್ಣತೆ ಪಡೆಯದ ಶರೀರದಲ್ಲಿ ಹುಟ್ಟಿ ಬಂದರೆ ಸಾಧನೆ ಸಾಧ್ಯವಿಲ್ಲ. ಮೊದಲು ನಾವು ಮಾನವರಾಗಬೇಕು(ಪೂರ್ಣತೆಯನ್ನು ಪಡೆದ ಶರೀರದಲ್ಲಿ ನೆಲೆಸುವ ಪುರುಷರಾಗಬೇಕು). ಇದಕ್ಕಾಗಿ "ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಬೇಡಿರಿ ಹುಚ್ಚಪ್ಪಗಳಿರಾ" ಎಂದು ದಾಸರು ಹಾಡಿರುವುದು. ಸಾಧನೆಗೆ ಬೇಕಾದ ಸಾಧನಾ ಶರೀರ ಇಲ್ಲದಿದ್ದರೆ ಯಾವಸಾಧನೆಯೂ ಸಾಧ್ಯವಿಲ್ಲ.
ಕೆಲವರು ತಮ್ಮ ಸ್ವರೂಪ ಯೋಗ್ಯತೆಯಿಂದ ಮತ್ತು ಭಗವದನುಗ್ರಹದಿಂದ ಜನ್ಮತಃ ಜ್ಞಾನ ಪಡೆದು ಹುಟ್ಟುತ್ತಾರೆ. ಇವರಿಗೆ ಜ್ಞಾನ ನಿಚ್ಛಳ. ಇಂಥವರು ತಮ್ಮ ಜೀವ ಯೋಗ್ಯತೆಯಿಂದ ತಮ್ಮ ಜೀವ ಸ್ವರೂಪದೊಳಗೆ- ಬಿಂಬರೂಪಿ ಭಗವಂತನನ್ನು ಕಾಣಬಲ್ಲರು. ಇಂಥವರು ಯಾವುದೇ ಅಧ್ಯಯನ ಮಾಡದೆ ಸದಾ ಭಗವಂತನನ್ನು ಅಂತರಂಗದಲ್ಲಿ ಕಾಣುತ್ತಾ-ಭಗವಂತನನ್ನು ಸೇರುತ್ತಾರೆ. ಬ್ರಹ್ಮಾದಿ ಸಕಲ ದೇವತೆಗಳು, ದೇವಾಂಶ ಸಂಭೂತರು ಈ ರೀತಿ ಕಣ್ಮುಚ್ಚಿ ಭಗವಂತನನ್ನು ಕಾಣಬಲ್ಲರು, ಕಂಡು ಆತನನ್ನು ಸೇರಬಲ್ಲರು.
ಕೆಲವರು ಶುದ್ಧ ಆತ್ಮತತ್ವ ವಿಜ್ಞಾನದಿಂದ ಮೊದಲು ಭಗವಂತನನ್ನು ತಿಳಿಯುತ್ತಾರೆ. ಜೀವನನ್ನು ಪರಮಾತ್ಮನನ್ನು ತಿಳಿಯುವುದೇ ಸಾಂಖ್ಯಯೋಗ. ಈ ರೀತಿ ಜ್ಞಾನಗಳಿಸಿ, ಜ್ಞಾನಸ್ಪುರಣವನ್ನು ಗಳಿಸಿ, ಧ್ಯಾನದ ಮೂಲಕ ಇವರು ಭಗವಂತನನ್ನು ಕಂಡು ಭಗವಂತನನ್ನು ಸೇರುತ್ತಾರೆ.
ಇನ್ನು ಕೆಲವರು ತಮ್ಮ ನಿರಂತರ ಕರ್ಮಾನುಷ್ಠಾನದಿಂದ ದೇಹ ಶುದ್ಧಿ ಸಾಧಿಸಿ, ಅದರಿಂದ ಭಗವಂತನ ಒಲುಮೆಗೆ ಪಾತ್ರರಾಗಿ, ಜ್ಞಾನಗಳಿಸಿ, ಧ್ಯಾನದಲ್ಲಿ ಭಗವಂತನನ್ನು ಕಂಡು ಭಗವಂತನನ್ನು ಸೇರುತ್ತಾರೆ.           

ಅನ್ಯೇ ತ್ವೇವಮಜಾನಂತಃ ಶ್ರುತ್ವಾSನ್ಯೇಭ್ಯ ಉಪಾಸತೇ
ತೇSಪಿ ಚಾತಿತರಂತ್ಯೇವ ಮೃತ್ಯುಂ ಶ್ರುತಿಪರಾಯಣಾಃ                    ೨೫

ಅನ್ಯೇ ತು ಏವಂ ಅಜಾನಂತಃ ಶ್ರುತ್ವಾನ್ಯೇಭ್ಯಃ ಉಪಾಸತೇ
ತೇಪಿ ಚತಿತರಂತಿ ಏವ ಮೃತ್ಯುಮ್  ಶ್ರುತಿಪರಾಯಣಾಃ –ಹೀಗೆ ಭಗವಂತನನ್ನರಿಯಲಾರದ ಇನ್ನು ಕೆಲವರು ಬಲ್ಲವರಿಂದ ಕೇಳಿ ಉಪಾಸನೆ ಮಾಡುತ್ತಾರೆ. ಶ್ರವಣವನ್ನೆ ನಂಬಿ ನಡೆವ ಅವರೂ ಸಾಧನೆಯಿಂದ ಬೆಳೆದು ಸಾವನ್ನು ಗೆಲ್ಲುತ್ತಾರೆ.

ಜನಸಾಮಾನ್ಯರು,  ಮೇಲಿನ ಯಾವ ವಿಧದಲ್ಲೂ ಸಾಧನೆ ಮಾಡಲಾರದವರು-ಇನ್ನೊಬ್ಬರಿಂದ ಕೇಳಿ ತಿಳಿದು ಸಾಧನೆಯ ಮೊದಲ ಮೆಟ್ಟಿಲನ್ನು ಹತ್ತಬಲ್ಲರು. ಇದು ಸಾಧನೆಯ ಮಾರ್ಗದಲ್ಲಿನ ಅತ್ಯಂತ ಕೆಳಗಿನ ಮೆಟ್ಟಿಲಾದರೂ ಸಹ, ಇವರು ನಿರಂತರ ಶ್ರವಣ, ಮನನ, ನಿಧಿಧ್ಯಾಸನದಿಂದ, ಅಹಂಕಾರವಿಲ್ಲದೆ, ಜ್ಞಾನ ಸಂಪಾದಿಸಿ, ಆ ಜ್ಞಾನದಿಂದ-ಧ್ಯಾನದಲ್ಲಿ ಭಗವಂತನನ್ನು ಕಾಣಬಲ್ಲರು. ಇದು ಸಾಮಾನ್ಯ ಮಾನವನಿಗೆ ಕೃಷ್ಣ ತೋರಿಸಿದ ಮೋಕ್ಷ ಮಾರ್ಗ.   ಹೀಗೆ ಇವರು ಶ್ರವಣ ಮತ್ತು ಉಪಾಸನೆಯಿಂದ ಮೃತ್ಯುವನ್ನು ಗೆದ್ದು ಭಗವಂತನನ್ನು ಸೇರಬಲ್ಲರು.

ಯಾವತ್ ಸಂಜಾಯತೇ ಕಿಂಚಿತ್ ಸತ್ವಂ ಸ್ಥಾವರಜಂಗಮಮ್         
ಕ್ಷೇತ್ರಕ್ಷೇತ್ರಜ್ಞಸಂಯೋಗಾತ್ ತದ್ ವಿದ್ಧಿ ಭರತರ್ಷಭ                                   ೨೬

ಯಾವತ್ ಸಂಜಾಯತೇ ಕಿಂಚಿತ್ ಸತ್ವಮ್ ಸ್ಥಾವರ ಜಂಗಮಮ್     
ಕ್ಷೇತ್ರ ಕ್ಷೇತ್ರಜ್ಞ ಸಂಯೋಗಾತ್ ತದ್ ವಿದ್ಧಿ ಭರತರ್ಷಭ -- ಭರತರ್ಷಭ, ಸ್ಥಿರ-ಚರ ಜೀವಿಯಲ್ಲಿ ಯಾವುದು ಹುಟ್ಟಿದರೂ ಅದು ಕ್ಷೇತ್ರ[ಶ್ರೀತತ್ವ] ಮತ್ತು ಕ್ಷೇತ್ರಜ್ಞನಾದ ಭಗವಂತನ ಸಹಯೋಗದಿಂದಲೆ ಎಂದು ತಿಳಿ.

ಈ ಪ್ರಪಂಚದಲ್ಲಿ ಏನೆಲ್ಲ ಹುಟ್ಟುತ್ತದೋ, ಚಲಿಸುವ-ಚಲಿಸದಿರುವ ಸಮಸ್ತ ಜೀವ ಜಡಾತ್ಮಕ ಪ್ರಪಂಚ ಮತ್ತು ಅದರ ಅಭಿಮಾನಿನಿಯಾದ  ಪ್ರಕೃತಿದೇವಿ-ಇಷ್ಟನ್ನು ಒಟ್ಟಿಗೆ ಕ್ಷೇತ್ರವೆನ್ನುತ್ತಾರೆ. ಇವೆಲ್ಲವನ್ನು ಬಲ್ಲವ  ಕ್ಷೇತ್ರಜ್ಞನಾದ ಭಗವಂತ. ಆದ್ದರಿಂದ ಕ್ಷೇತ್ರವೆಂದರೆ ಭಗವಂತನಿಂದ ನಿರ್ಮಾಣವಾದ ಸಮಸ್ತ ಜೀವ ಜಡಾತ್ಮಕ ಪ್ರಪಂಚ. ಸಮಸ್ತ ಸೃಷ್ಟಿ ಲಕ್ಷ್ಮೀ ನಾರಾಯಣರ ಸಮಾಗಮದಿಂದ ನಿರ್ಮಾಣವಾಯಿತು. ಅವರು ಈ ಪ್ರಪಂಚದ ಮೊದಲ ದಂಪತಿಗಳು. ಆದ್ದರಿಂದ ಎಲ್ಲರ ತಂದೆ ತಾಯಿ ನಾರಾಯಣ ಮತ್ತು ಶ್ರೀಲಕ್ಷ್ಮಿ. “ಇದನ್ನು ತಿಳಿದಾಗ ನೀನು ನಿಜವಾದ ಭರತರ್ಷಭನಾಗುತ್ತೀಯ” ಎನ್ನುತ್ತಾನೆ ಕೃಷ್ಣ. ಭಗವಂತನಲ್ಲಿ ರಥನಾದವನು, ಭಗವಂತನಲ್ಲಿ ಪೂರ್ಣಭಕ್ತಿ ಉಳ್ಳವನು ಭರತರ್ಷಭ.

 ಸಮಂ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಮ್     
ವಿನಶ್ಯತ್ಸ್ವವಿನಶ್ಯಂತಂ  ಯಃ ಪಶ್ಯತಿ ಸ ಪಶ್ಯತಿ                               ೨೭

ಸಮಮ್ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಮ್  
ವಿನಶ್ಯತ್ಸು ಅವಿನಶ್ಯಂತಂ  ಯಃ ಪಶ್ಯತಿ ಸಃ  ಪಶ್ಯತಿ – ಎಲ್ಲ ಜೀವಿಗಳಲ್ಲು ಏಕರೂಪದಿಂದಿರುವವನು ಸರ್ವಶಕ್ತನಾದ ಭಗವಂತ-ಅವು ಅಳಿದಾಗಳೂ ಅಳಿಯದೆ ಉಳಿದವನು. ಅವನನ್ನು ತಿಳಿದವನೆ ‘ನಿಜವಾಗಿ ತಿಳಿದವನು’.

ಎಲ್ಲ ಜೀವರೊಳಗೂ ಏಕರೂಪದಿಂದಿರುವ ಸರ್ವಶಕ್ತ ಭಗವಂತ ಪರಮ-ಈಶ-ವರ. ಯಾರ ಆಜ್ಞೆಯನ್ನು ನಾವು ಪಾಲಿಸದೇ ಇರಲಾರೆವೋ; ಪಾಲಿಸುವುದು ನಮ್ಮ ಕರ್ತವ್ಯವೋ; ನಮಗರಿವಿಲ್ಲದೆ ನಮ್ಮೊಳಗಿದ್ದು ಪಾಲಿಸುವ ಅಜ್ಞಾತಶಕ್ತಿ- ‘ಈಶ-ವರ’. ಅಂದರೆ ತತ್ವಾಭಿಮಾನಿ ದೇವತೆಗಳು. ಇಂತಹ ತತ್ವಾಭಿಮಾನಿ ದೇವತೆಗಳನ್ನೂ ನಿಯಂತ್ರಿಸುವ ಭಗವಂತ ಪರಮೇಶ್ವರ. ಇಂಥ ಭಗವಂತ ಎಲ್ಲೋ ಕೂತು ನಮ್ಮನ್ನು ನಿಯಮಿಸುತ್ತಿಲ್ಲ. ಆತ ನಮ್ಮೊಳಗಿದ್ದು ನಮ್ಮನ್ನು ನಿಯಂತ್ರಿಸುತ್ತಿದ್ದಾನೆ. ಆತ ನಮ್ಮೊಳಗೆ ಸ್ವತಂತ್ರವಾಗಿದ್ದು ನಮ್ಮನ್ನು ಹೊತ್ತು  ನಡೆಸುತ್ತಿದ್ದಾನೆ [ಹಿಂದಿನ ಕಾಲದವರು ಜನರಿಗೆ ಈ ಸಂದೇಶವನ್ನು ದೇವಸ್ಥಾನದಲ್ಲಿ ತಟ್ಟಿರಾಯನ ಮೂಲಕ ಕೊಟ್ಟರು].  ಭಗವಂತ ಮುಕ್ತಾSSಮುಕ್ತ  ನಿಯಾಮಕ. ಎಲ್ಲರನ್ನು ಎಲ್ಲ ಕಾಲದಲ್ಲಿ ಅವರವರ ಯೋಗ್ಯತೆಗನುಗುಣವಾಗಿ, ಆಯಾ ವಸ್ತುವಿನ ಸ್ವಭಾವಕ್ಕನುಗುಣವಾಗಿ ಒಳಗಿದ್ದು ಪ್ರೇರಣೆ ಮಾಡುವವ ಭಗವಂತ. ಭಗವಂತನ ಶಕ್ತಿಯಲ್ಲಿ ಮೇಲು ಕೀಳು ಇಲ್ಲ. ಆನೆಯಲ್ಲಿರುವ ಭಗವಂತ ಇರುವೆಯಲ್ಲಿರುವ ಭಗವಂತ ಬೇರೆಬೇರೆ ಅಲ್ಲ.  ಆದರೆ ಆತನ ಸನ್ನಿಧಾನದಲ್ಲಿ ವೆತ್ಯಾಸವಿರುವುದರಿಂದ ಆ ಸನ್ನಿಧಾನದ ಅಧಿಷ್ಠಾನದಲ್ಲಿ ವೆತ್ಯಾಸ ಬರುತ್ತದೆ. ನಮ್ಮ ದೇಹದಲ್ಲಿರುವ ಬಿಂಬ ರೂಪಿ ಭಗವಂತ ಅವಿನಾಶಿ. ಆತನಿಗೆ ದೇಹನಾಶ, ಸ್ವರೂಪನಾಶವಿಲ್ಲ. ದುಃಖಪ್ರಾಪ್ತಿ ಇಲ್ಲ. ಆತ ಅಪೂರ್ಣನಲ್ಲ. ಈ ಸತ್ಯವನ್ನು ತಿಳಿದವನು ಯಥಾರ್ಥ ಜ್ಞಾನವುಳ್ಳವನು.
ಈ ಶ್ಲೋಕದಲ್ಲಿ ಹೇಳಿದ ವಿಚಾರವನ್ನು ಇನ್ನೂ ಬಿಡಿಸಿ ಮತ್ತೆ ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸುತ್ತಾನೆ:        

ಸಮಂ ಪಶ್ಯನ್ ಹಿ  ಸರ್ವತ್ರ ಸಮವಸ್ಥಿತಮೀಶ್ವರಮ್
ನ ಹಿನಸ್ತ್ಯಾತ್ಮನಾSSತ್ಮಾನಂ ತತೋ ಯಾತಿ ಪರಾಂ ಗತಿಮ್          ೨೮

ಸಮಮ್  ಪಶ್ಯನ್ ಹಿ  ಸರ್ವತ್ರ ಸಮವಸ್ಥಿತಮ್ ಈಶ್ವರಮ್
ನ ಹಿನಸ್ತಿ ಆತ್ಮನಾತ್ಮನಮ್ತಃ  ಯಾತಿ ಪರಾಮ್ ಗತಿಮ್ – ಸರ್ವ ಶಕ್ತನಾದ ಭಗವಂತ ಎಲ್ಲೆಡೆಯು ಏರುಪೇರಿಲ್ಲದೆ ಏಕರೂಪನಾಗಿದ್ದಾನೆ  ಎಂದು ತಿಳಿದವನು ತನ್ನ ಏಳಿಗೆಗೆ ತಾನೇ ತಾನು ಅಡ್ಡಿಯನ್ನೂಡ್ಡಿಕೊಳ್ಳುವುದಿಲ್ಲ. ಮುಂದೆ ಪರಮ ಪದವನ್ನು ಪಡೆಯುತ್ತಾನೆ.

  ನಾವು ನಮ್ಮ ದೇಹದಲ್ಲಿ ಸ್ಥಿತರು. ಆದರೆ ಭಗವಂತ ‘ಸಂಸ್ಥಿತ’ . ಈ ದೇಹದೊಳಗಿರುವ ನಮಗೆ ಈ ದೇಹದ ಜ್ಞಾನ ಕೂಡ ಇಲ್ಲ. ಏಕಿದ್ದೇವೆ ಎಂದೂ ಗೊತ್ತಿಲ್ಲ. ನಾವು ಒಳಗಿದ್ದು ಆನಂದ ದುಃಖವನ್ನು ಅನುಭವಿಸುತ್ತಿರುತ್ತೇವೆ. ಆದರೆ ಭಗವಂತ ದುಃಖ ಅಜ್ಞಾನದ ಸ್ಪರ್ಶವಿಲ್ಲದ ಆನಂದಮೂರ್ತಿ. ಆತ ನಮ್ಮೊಳಗಿರುವ ಸರ್ವ ತತ್ವಾಭಿಮಾನಿ ದೇವತೆಗಳಿಗೆ ಸಮವಸ್ಥಿತನಾಗಿ ಎತ್ತರದಲ್ಲಿದ್ದಾನೆ. ದುಃಖ ಅಜ್ಞಾನದ ಸ್ಪರ್ಶವಿಲ್ಲದ ಭಗವಂತ ಯಾರನ್ನೂ ಮೇಲು-ಕೀಳು ಭಾವದಿಂದ ನೋಡುವುದಿಲ್ಲ. ಪ್ರತಿಯೊಬ್ಬರನ್ನೂ ಅವರವರ ಕರ್ಮ ಮತ್ತು ಜೀವಯೋಗ್ಯತೆಗೆ ತಕ್ಕಂತೆ ಸಮನಾಗಿ ಕಾಣುತ್ತಾನೆ. ಭಗವಂತ ಸಮಸ್ತ ಜಡ-ಚೇತನದೊಳಗೆ ಜಗದೀಶ್ವರನಾಗಿ ನಿಂತು ನಮ್ಮ ಜೀವ ಸ್ವಭಾವಕ್ಕೆ ತಕ್ಕಂತೆ, ಕರ್ಮಕ್ಕನುಗುಣವಾಗಿ ನಮ್ಮನ್ನು ನಡೆಸುತ್ತಿದ್ದಾನೆ. ಈ ಸತ್ಯ ತಿಳಿದಾಗ “ನೀನು ನಿನಗೆ ಹಿಂಸೆ ಮಾಡದೆ ಬದುಕಬಹುದು” ಎನ್ನುತ್ತಾನೆ ಕೃಷ್ಣ. ನಿನ್ನ ಅರಿವಿಲ್ಲದೆ, ಭಗವಂತನ ಅರಿವಿಲ್ಲದೆ ಬದುಕುವುದು ಒಂದು ಆತ್ಮಹಿಂಸೆ. ಒಮ್ಮೆ ‘ನಾನು’ ಅಂದರೇನು, ನನ್ನೊಳಗಿರುವ ಭಗವಂತನಂದರೇನು ಎನ್ನುವ ವಸ್ತುಃಸ್ಥಿತಿ ತಿಳಿದರೆ ಹಿಂಸೆಯಾಗುವುದಿಲ್ಲ. ಅದು ತಿಳಿಯದೆ ಬದುಕುವುದು ಅಜ್ಞಾನದ ಮತ್ತು ದುಃಖದ ಬದುಕು. ಜೀವನದಲ್ಲಿ ಬರುವ ಪ್ರತಿಯೊಂದು ಸಂಗತಿಯನ್ನು-“ನಾನು ಹಿಂದೆ ಮಾಡಿದ ಕರ್ಮದ ಫಲ-ಅದನ್ನು ಭಗವಂತ ಮಾಡಿಸಿದ” ಎಂದು ತಿಳಿದುಕೊಂಡರೆ ದುಃಖವಿಲ್ಲದೆ ಆನಂದದಿಂದ ಬದುಕಬಹುದು. ನಮ್ಮ ಮನಸ್ಸೇ ನಮಗೆ ದುಃಖ ಕೊಡುವುದು. ಅದೇ ಆನಂದ ಕೊಡುವುದು. ನಮಗೆ ದುಃಖವಾಗುವುದು ನಮ್ಮ ತಿಳುವಳಿಕೆಯಿಂದ ಹೊರತು ಇನ್ಯಾವುದರಿಂದಲೂ ಅಲ್ಲ. ಉದಾಹರಣೆಗೆ ಒಬ್ಬ ಶ್ರೀಮಂತ ಯಾವುದೋ ಕಾರಣದಿಂದ ತನ್ನಲ್ಲಿರುವ ಎಲ್ಲ ಸಂಪತ್ತನ್ನು ಕಳೆದುಕೊಳ್ಳುತ್ತಾನೆ. ಆಗ ಆತ “ನನ್ನ ಪೂರ್ವ ಜನ್ಮದ ಕರ್ಮಕ್ಕನುಗುಣವಾಗಿ ಈ ಘಟನೆ ನಡೆಯಿತು. ಎಲ್ಲವೂ ಭಗವಂತನ ಲೀಲೆ; ಕೊಡುವವನೂ ಅವನೆ, ತೆಗೆದುಕೊಳ್ಳುವವನೂ ಅವನೆ; ಪಾಲಿಸುವವನೂ ಅವನೆ; ಇದಕ್ಕಾಗಿ ನಾನೇಕೆ ಚಿಂತಿಸಬೇಕು” ಎಂದು ತಿಳಿದುಕೊಂಡರೆ ಆತ ಆನಂದದಿಂದಿರಬಹುದು. ಇದನ್ನು ಬಿಟ್ಟು ಬ್ರಹ್ಮಾಂಡವೇ ತಲೆಮೇಲೆ  ಬಿದ್ದಂತೆ ವರ್ತಿಸಿದರೆ ಅದು ನಮ್ಮನ್ನು ನಾವು ಹಿಂಸಿಸಿಕೊಂಡಂತೆ. ನಾವು ಎಲ್ಲವನ್ನು ಪ್ರೇಕ್ಷಕರಾಗಿ  ಕಾಣಲು ಅಭ್ಯಾಸ ಮಾಡಿಕೊಳ್ಳಬೇಕು. ಭಗವಂತನ ಅರಿವಿನೊಂದಿಗೆ ಶಾಂತವಾದ ಇಂತಹ ಬದುಕು ನಮ್ಮನ್ನು ಪರಮಪದವಾದ ಮೊಕ್ಷದತ್ತ ಕೊಂಡೊಯ್ಯಬಲ್ಲದು.  

No comments:

Post a Comment