Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Saturday, November 5, 2011

Bhagavad Gita Kannada Chapter-13 Shloka 19-23


ಮುಂದಿನ ಶ್ಲೋಕದಲ್ಲಿ ಕೃಷ್ಣ ಮೂಲ ಸೃಷ್ಟಿಯ ಕಲ್ಪನೆ ಮತ್ತು ಅದರ ಅನುಸಂಧಾನವನ್ನು ವಿವರಿಸುತ್ತಾನೆ. ಈ ಶ್ಲೋಕ ಅಧ್ಯಾತ್ಮ ಪ್ರಪಂಚದಲ್ಲಿ ಸೃಷ್ಟಿಯ ಬಗೆಗಿನ ಎಲ್ಲ ಗೊಂದಲಗಳಿಗೆ ಕೃಷ್ಣ ಕೊಟ್ಟ ಉತ್ತರ. ಅಡಕವಾಗಿ ಎಲ್ಲವನ್ನು ಈ ಶ್ಲೋಕದ ಮೂಲಕ ಕೃಷ್ಣ ನಮ್ಮ ಮುಂದಿಟ್ಟಿದ್ದಾನೆ.

ಪ್ರಕೃತಿಂ ಪುರುಷಂ ಚೈವ ವಿದ್ಧ್ಯನಾದೀ ಉಭಾವಪಿ
ವಿಕಾರಾಂಶ್ಚ ಗುಣಾಂಶ್ಚೈವ ವಿದ್ಧಿ ಪ್ರಕೃತಿಸಂಭವಾನ್                                    ೧೯

ಪ್ರಕೃತಿಮ್  ಪುರುಷಮ್ ಚ ಏವ ವಿದ್ಧಿ ಅನಾದೀಭೌ ಅಪಿ
ವಿಕಾರಾನ್ ಚ ಗುಣಾನ್ ಚ ಏವ ವಿದ್ಧಿ ಪ್ರಕೃತಿ ಸಂಭವಾನ್ – ಪ್ರಕೃತಿ[ಜಡಪ್ರಕೃತಿ ಮತ್ತು ಚೇತನಪ್ರಕೃತಿ] ಮತ್ತು ಪುರುಷ[ಜೀವ ಮತ್ತು ಈಶ್ವರ] ಇಬ್ಬರೂ ಹುಟ್ಟಿರದವರು ಎಂದು ತಿಳಿ. ಸ್ಥೂಲರೂಪಗಳು ಮತ್ತು ಗುಣತ್ರಯಗಳು ಪ್ರಕೃತಿಯ ಕಾರ್ಯಗಳು ಎಂದು ತಿಳಿ.

ಭಗವಂತ ಯಾವುದೇ ಜೀವರನ್ನಾಗಲಿ, ಪ್ರಕೃತಿಯನ್ನಾಗಲಿ ಸೃಷ್ಟಿ ಮಾಡಿಲ್ಲ. ಜಡಪ್ರಕೃತಿ,  ಚೇತನ ಪ್ರಕೃತಿ,  ಪರಮಪುರುಷ(ಭಗವಂತ), ಅವಾಂತರಪುರುಷರು(ಜೀವರು) ಎಲ್ಲರೂ ಅನಾಧಿನಿತ್ಯರು.  ಪ್ರಪಂಚ ಎಂದರೆ ಪ್ರಕೃತಿಯ ವಿಕಾರ. ಒಂದು ಮಗು ಹುಟ್ಟಿತು ಎಂದರೆ ಅಲ್ಲಿ ಆಗುವುದು ಜೀವದ ಸೃಷ್ಟಿ ಅಲ್ಲ. ಜೀವಕ್ಕೆ ಒಂದು ಆಕಾರದ ಸೃಷ್ಟಿ. ಜೀವ ತಂದೆಯ ದೇಹದ ಮುಖೇನ ತಾಯಿಯ ಗರ್ಭವನ್ನು ಸೇರಿ ಅಲ್ಲಿ ಒಂದು ಆಕಾರವನ್ನು ಪಡೆಯುತ್ತದೆ. ಈ ರೀತಿ  ಭಗವಂತ ಜೀವರಿಗೆ ಪ್ರಕೃತಿಯ ಮೂಲಕ ಒಂದು ಆಕಾರ ಸೃಷ್ಟಿ ಮಾಡುತ್ತಾನೆ. ಸೃಷ್ಟಿಯ ಮೂಲದಲ್ಲೂ  ಕೂಡ ಲಕ್ಷ್ಮೀನಾರಾಯಣರು ತಂದೆ-ತಾಯಿಯಾಗಿ  ನಿಂತು  ಪ್ರಪಂಚದ ಸೃಷ್ಟಿಗೆ ಚಾಲನೆ ಕೊಟ್ಟರು. ಸೃಷ್ಟಿಯ ಆದಿಯಲ್ಲಿ ಜೀವರು ಲಕ್ಷ್ಮೀದೇವಿಯ ಉದರದಲ್ಲಿದ್ದರು. ಲಕ್ಷ್ಮೀದೇವಿ ಪರಮಪುರುಷ ಭಗವಂತನ ಉದರದಲ್ಲಿದ್ದಳು. ಸೃಷ್ಟಿಯ ಮೂಲದಲ್ಲಿ ಲಕ್ಷ್ಮಿಯ ನೆತ್ತಿಯಿಂದ ಹೊರ ಹೊಮ್ಮಿ, ಭಗವಂತನ ನಾಭಿಯ ಮುಖೇನ ಚತುರ್ಮುಖಬ್ರಹ್ಮನ ಜನನವಾಯಿತು. ಈ ಕಾರಣದಿಂದ ಚತುರ್ಮುಖ ಬ್ರಹ್ಮನನ್ನು ಲಕ್ಷ್ಮಿಯ ಶಿರಸ್ಸಿನಿಂದ ಮತ್ತು ಭಗವಂತನ ನಾಭಿಯಿಂದ ಜನಿಸಿದವನು ಎಂದು ಕರೆಯುತ್ತಾರೆ. ಒಟ್ಟಿನಲ್ಲಿ  “ಜಗತ್ತಿಗೆ ಕಾರಣವಾಗಿರುವ ಜಡಪ್ರಕೃತಿ ನಿತ್ಯ; ಆ ಜಡಪ್ರಕೃತಿಯಿಂದ ಆಕಾರಗೊಂಡು ಸೃಷ್ಟನಾದ ಜೀವನೂ ನಿತ್ಯ; ಈ ಜಡಪ್ರಕೃತಿ ಮತ್ತು ಜೀವನಿಗೆ ಕಾರಣಪುರುಷನಾದಂತಹ ಲಕ್ಷ್ಮೀನಾರಾಯಣರೂ ನಿತ್ಯರು; ಪ್ರಪಂಚ ಎಂದರೆ ಪ್ರಕೃತಿಯ ವಿಕಾರ”. ಇದು ಇಲ್ಲಿ ನಾವು ತಿಳಿದುಕೊಳ್ಳಬೇಕಾಗಿರುವ ಮುಖ್ಯ ವಿಚಾರ.
ಮೊತ್ತ ಮೊದಲು ಸೃಷ್ಟಿ ವಿಸ್ತಾರಕ್ಕೆ ಬೇಕಾದ ಶಕ್ತಿ ಸೃಷ್ಟಿಯಾಯಿತು. ಅದೇ ಪ್ರಕೃತಿಯ ಅತ್ಯಂತ ಸೂಕ್ಷ್ಮ ವಿಕಾರವಾದ ಗುಣತ್ರಯಗಳು. ಈ ಶಕ್ತಿ ಕಂಪನದಿಂದ ಇಡೀ ಪ್ರಪಂಚ ನಿಷ್ಪನ್ನವಾಯಿತು. ಆಕಾರ ಕೊಟ್ಟಿದ್ದು ತಾಯಿ ಲಕ್ಷ್ಮಿ; ಆಕಾರ ಪಡೆದದ್ದು ಜೀವರು; ಆಕಾರ ಕೊಡುವವ ನಾರಾಯಣ. ಈ ಕಾರಣದಿಂದ ಚತುರ್ಮುಖ ಬ್ರಹ್ಮನಿಂದ ಹಿಡಿದು ಸಮಸ್ತ ದೇವಾದಿ ಜೀವರೂ ಲಕ್ಷ್ಮೀನಾರಾಯಣರ ಮಕ್ಕಳು.

ಮೇಲಿನ ಶ್ಲೋಕದಲ್ಲಿ ಕೃಷ್ಣ ಪುರುಷ ಮತ್ತು ಪ್ರಕೃತಿ ಬಗ್ಗೆ ಹೇಳಿದ. [ಪುರುಷ ಎಂದರೆ ಜೀವಾತ್ಮ ಮತ್ತು ಪರಮಾತ್ಮ. ಪ್ರಕೃತಿ ಎಂದರೆ ಜಡಪ್ರಕೃತಿ ಮತ್ತು ಚೇತನ ಪ್ರಕೃತಿ]. ಸೃಷ್ಟಿ ಪ್ರಕ್ರೀಯೆಯಲ್ಲಿ ಈ ನಾಲ್ಕು ಪಾತ್ರದ ವಿವರಣೆಯನ್ನು ಕೃಷ್ಣ ಮುಂದಿನ ಮೂರು ಶ್ಲೋಕಗಳಲ್ಲಿ ನಮ್ಮ ಮುಂದಿಟ್ಟಿದ್ದಾನೆ. ಮೊದಲ ಶ್ಲೋಕದಲ್ಲಿ(ಶ್ಲೋ-೨೦) ಕೃಷ್ಣ ಜೀವಾತ್ಮ-ಪರಮಾತ್ಮ, ಜಡಪ್ರಕೃತಿ-ಚೇತನಪ್ರಕೃತಿಯ ಒಟ್ಟು ವಿವರಣೆಯನ್ನು ಕೊಡುತ್ತಾನೆ. ನಂತರ(ಶ್ಲೋ-೨೧) ಕೇವಲ ಜಡಪ್ರಕೃತಿ ಮತ್ತು ಜೀವಾತ್ಮರ ವಿವರಣೆಯನ್ನು ಕೊಟ್ಟು, ಮೂರನೇ ಶ್ಲೋಕದಲ್ಲಿ(ಶ್ಲೋ-೨೨) ಸೃಷ್ಟಿ ಪ್ರಕ್ರೀಯೆಯಲ್ಲಿ  ಪರಮಪುರುಷ ಮತ್ತು ಚೇತನಪ್ರಕೃತಿಯ ಪಾತ್ರದ ವಿವರಣೆಯನ್ನು ನಮ್ಮ ಮುಂದಿಡುತ್ತಾನೆ.      

ಕಾರ್ಯಕಾರಣಕರ್ತೃತ್ವೇ ಹೇತುಃ ಪ್ರಕೃತಿರುಚ್ಯತೇ
ಪುರುಷಃ ಸುಖದುಃಖಾನಾಂ ಭೋಕ್ತೃತ್ವೇ ಹೇತುರುಚ್ಯತೇ                   ೨೦

ಕಾರ್ಯ ಕಾರಣ ಕರ್ತೃತ್ವೇ ಹೇತುಃ ಪ್ರಕೃತಿಃ ಉಚ್ಯತೇ
ಪುರುಷಃ ಸುಖದುಃಖಾನಾಂ ಭೋಕ್ತೃತ್ವೇ ಹೇತುಃ ಉಚ್ಯತೇ –ದೇಹ ಮತ್ತು ಇಂದ್ರಿಯಗಳ ನಿರ್ಮಾಣದಲ್ಲಿ ಜಡಪ್ರಕೃತಿ[ಚೇತನಪ್ರಕೃತಿಯಾದ ಶ್ರೀ ತತ್ವ] ಕಾರಣವೆನಿಸಿದೆ. ಸುಖ-ದುಃಖಗಳ ಅನುಭವದಲ್ಲಿ ಜೀವ[ಪರಮಾತ್ಮ] ಕಾರಣಭೂತನಾಗಿದ್ದಾನೆ.

ಈ ಶ್ಲೋಕದಲ್ಲಿ ಎರಡು ವಿಚಾರವನ್ನು ಕೃಷ್ಣ ಬಿಡಿಸಿ ತೋರಿದ್ದಾನೆ. ನಮಗೆ ಒಂದು ದೇಹವಿದೆ. ದೇಹದಲ್ಲಿ ಐದು ಬಗೆಯ ಸುಖ-ದುಃಖ ಭೋಗವನ್ನು ಅನುಭವಿಸಲು ಐದು ಇಂದ್ರಿಯಗಳಿವೆ. ಹೀಗೆ ಶರೀರ, ಶರೀರದಲ್ಲಿ ಇಂದ್ರಿಯಗಳು- ಇಂದ್ರಿಯಗಳ ಮೂಲಕ ಸುಖ-ದುಃಖ ಭೋಗ-ಇದು ಜೀವನ. ಜೀವನಿಗೆ ಅವನು ಹಿಂದೆ ಮಾಡಿದ ಕರ್ಮಕ್ಕನುಗುಣವಾಗಿ ಕಾರ್ಯ ಕಾರಣಗಳ ಕರ್ತೃತ್ವ. ಅಂದರೆ ನಮ್ಮ ಕರ್ಮಕ್ಕನುಗುಣವಾಗಿ ಭಗವಂತ ಈ ಜನ್ಮದಲ್ಲಿ ಒಂದು ರೂಪವನ್ನು ಕೊಟ್ಟ. ಈ ನಮ್ಮ ದೇಹ ರೂಪುಗೊಳ್ಳಲು ಅಧಿಷ್ಠಾನಕಾರಣ ನಮ್ಮ ತಂದೆ ತಾಯಿ. ನಮ್ಮ ದೇಹ  ಜಡಪ್ರಕೃತಿಯಿಂದಾಗಿದೆ. ತಾಯಿಯ ಹೊಟ್ಟೆಯಲ್ಲಿ ನಮಗೆ ಈ ರೂಪವನ್ನು ಕೊಟ್ಟವಳು ಜಗನ್ಮಾತೆ ಶ್ರೀಲಕ್ಷ್ಮಿ. ಭಗವಂತನಿಗೆ ಅಂಗವಾಗಿ ಲಕ್ಷ್ಮಿ ದೇಹ ರಚನೆ ಮಾಡುತ್ತಾಳೆ. ಈ ರೀತಿ ದೇಹದ ಅಂಗಾಂಗ ಮತ್ತು  ಇಂದ್ರಿಯಗಳನ್ನು ಪಡೆದ ಜೀವ, ಅದರಿಂದ ಸುಖ-ದುಃಖದ ಭೋಗವನ್ನು ಅನುಭವಿಸುತ್ತದೆ. ಪರಮಪುರುಷ ಭಗವಂತ ಜೀವನಿಗೆ ಸುಖ-ದುಃಖದ ಅನುಭವವನ್ನು ಕೊಡುತ್ತಾನೆ. ಹೀಗಾಗಿ ದೇಹರಚನೆಯಲ್ಲಿ ಚೇತನ ಮತ್ತು ಜಡ ಪ್ರಕೃತಿ ಒಳಗೊಂಡರೆ, ಭಗವಂತ ಜೀವನಿಗೆ ಭೋಕ್ತೃತ್ವದ ಅನುಭವವನ್ನು ಸ್ವಯಂ ಅಂತರ್ಯಾಮಿಯಾಗಿ ನಿಂತು ನೀಡುತ್ತಾನೆ.      

ಪುರುಷಃ ಪ್ರಕೃತಿಸ್ಥೋ ಹಿ ಭುಂಕ್ತೇ ಪ್ರಕೃತಿಜಾನ್ ಗುಣಾನ್   
ಕಾರಣಂ ಗುಣಸಂಗೋSಸ್ಯ ಸದಸದ್ಯೋನಿಜನ್ಮಸು                                    ೨೧

ಪುರುಷಃ ಪ್ರಕೃತಿಸ್ಥಃ ಹಿ ಭುಂಕ್ತೇ ಪ್ರಕೃತಿಜಾನ್ ಗುಣಾನ್      
ಕಾರಣಮ್  ಗುಣಸಂಗಃ ಅಸ್ಯ ಸತ್ ಅಸತ್ ಯೋನಿ ಜನ್ಮಸು –ಪ್ರಕೃತಿಯ ಕಟ್ಟಿಗೊಳಗಾದ ಜೀವ, ಪ್ರಕೃತಿ ಕಾರ್ಯಗಳಾದ ಸುಖ-ದುಃಖಾದಿಗಳನ್ನು ಅನುಭವಿಸುತ್ತಾನೆ. ಒಳ್ಳೆಯ ಮತ್ತು ಕೆಟ್ಟ ಬಸಿರಿನಲ್ಲಿ ಹುಟ್ಟಿಬರಲು ಜೀವನಿಗೆ ತ್ರಿಗುಣಗಳ ನಂಟೇ ಕಾರಣ.

ಪ್ರಕೃತಿ ನಿರ್ಮಿತವಾದ ದೇಹದಲ್ಲಿ ಭಗವಂತನಿದ್ದಾನೆ, ದೇವತೆಗಳಿದ್ದಾರೆ. ಆದರೆ ದೇಹದಲ್ಲಿದ್ದು ಸುಖ-ದುಃಖದ ಭೋಗವನ್ನು ಅನುಭವಿಸುವವನು-ಜೀವ. ದೇಹ ಪ್ರಕೃತಿಯ ಗುಣದಿಂದ ನಿರ್ಮಾಣವಾಗಿರುತ್ತದೆ. ಜೀವ ತನ್ನ ಸ್ವಭಾವಕ್ಕನುಗುಣವಾಗಿ, ಪೂರ್ವ ಜನ್ಮದ ಕರ್ಮಫಲಕ್ಕನುಗುಣವಾಗಿ ಈ ಜನ್ಮದಲ್ಲಿ ದೇಹವನ್ನು ಪಡೆಯುತ್ತದೆ. ಹಿಂದೆ ಹೇಳಿದಂತೆ ಜೀವ ತನ್ನ ದೇಹವನ್ನು ಬಿಟ್ಟು ಹೊರಬರುವಾಗ ಯಾವುದನ್ನು ಗಾಢವಾಗಿ ನೆನೆಯುತ್ತದೋ -ಅದಕ್ಕನುಗುಣವಾಗಿ ಅದರ ಮುಂದಿನ ಜನ್ಮ ನಿರ್ಧಾರವಾಗುತ್ತದೆ. ಉತ್ತಮ ಅಥವಾ ಹೀನ ಯೋನಿಯಲ್ಲಿ ಹುಟ್ಟಿಬರಲು ಜೀವನಿಗೆ ತ್ರಿಗುಣಗಳ ನಂಟೇ ಕಾರಣ.         

ಉಪದ್ರಷ್ಟಾSನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ
ಪರಮಾತ್ಮೇತಿ ಚಾಪ್ಯುಕ್ತೋ ದೇಹೇSಸ್ಮಿನ್ ಪುರುಷಃ ಪರಃ                 ೨೨

ಉಪದ್ರಷ್ಟಾನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ
ಪರಮಾತ್ಮ ಇತಿ ಚ ಅಪಿ ಉಕ್ತಃ ದೇಹೇಸ್ಮಿನ್ ಪುರುಷಃ ಪರಃ –ಎಲ್ಲದರ ಮೇಲಿದ್ದು ಎಲ್ಲವನು ನೋಡುವವನು, ತನ್ನಿಷ್ಟದಂತೆ ಎಲ್ಲವನು ನಡೆಸುವವನು, ಎಲ್ಲವನು ಹೊತ್ತವನು, ಸಾರವನುಣ್ಣುವವನು-ಸರ್ವಶಕ್ತನಾದ ಪರಮಾತ್ಮ. ಅವನೆ ಈ ದೇಹದಲ್ಲಿ ಜೀವನ ಜೊತೆಗಿರುವ ಪರಮಪುರುಷ.

ಚಿತ್ ಪ್ರಕೃತಿ ಜಡಪ್ರಕೃತಿಯಿಂದ ದೇಹ ನಿರ್ಮಿಸುವಾಗ, ಜೀವ ಆ ದೇಹದಲ್ಲಿದ್ದು ಇಂದ್ರಿಯಗಳ ಮುಖೇನ ಸುಖ ದುಃಖವನ್ನು ಭೋಗಿಸುವಾಗ- ಎಲ್ಲದಕ್ಕೂ ಪ್ರೇರಕನಾಗಿ, ಎಲ್ಲವುದಕ್ಕಿಂತ ಎತ್ತರದಲ್ಲಿದ್ದು  ಎಲ್ಲವನ್ನು ಹತ್ತಿರದಿಂದ ಸಾಕ್ಷಾತ್ ಕಾಣುವ ಭಗವಂತ ಪರಮಪುರುಷ. ಆತ ನಮ್ಮ ಕರ್ಮವನ್ನು ಬಲ್ಲವನು. ಯಾವ ರೀತಿಯ ಕರ್ಮದಿಂದ ಏನಾಗಬೇಕು ಎಂದು ತಿಳಿದವನು. ಆತ ಒಳಗೆ ಕೂತು ಪ್ರೇರಣೆ ಮಾಡುವುದರಿಂದ ಈ ದೇಹ ನಿಂತಿದೆ. ಆತ ಹೊರಟು ಹೋದರೆ ದೇಹ ಬಿದ್ದು ಹೋಗುತ್ತದೆ. ಆತ ನಮ್ಮೊಳಗಿದ್ದು ಯಾವ ದುಃಖದ ಸ್ಪರ್ಶವೂ ಇಲ್ಲದೆ ಸದಾ ಆನಂದದಿಂದಿರುವ ಆನಂದ ಭೋಕ್ತ.    

ಯ ಏವಂ ವೇತ್ತಿ ಪುರುಷಂ ಪ್ರಕೃತಿಂ ಚ ಗುಣೈಃ ಸಹ
ಸರ್ವಥಾ ವರ್ತಮಾನೋSಪಿ ನ ಸ ಭೂಯೋSಭಿಜಾಯತೇ             ೨೩

ಯಃ  ಏವಮ್  ವೇತ್ತಿ ಪುರುಷಮ್ ಪ್ರಕೃತಿಮ್  ಚ ಗುಣೈಃ ಸಹ
ಸರ್ವಥಾ ವರ್ತಮಾನಃ  ಅಪಿ ಸಃ  ಭೂಯಃ  ಅಭಿಜಾಯತೇ –ಹೀಗೆ ಪ್ರಕೃತಿ-ಪುರುಷರನ್ನು ಗುಣಗಳ ಜತೆಗೆ ಅರಿತವನು ಹೇಗೆ ಬದುಕಿದರೂ ಮತ್ತೆ ಮರಳಿ ಹುಟ್ಟುವುದಿಲ್ಲ.

ಅನಾಧಿನಿತ್ಯವಾದ ಪ್ರಕೃತಿ(ಜಡ ಮತ್ತು ಚೇತನ), ಎಲ್ಲವುದಕ್ಕೂ ಕಾರಣ ಪುರುಷನಾದ ಪರಮಾತ್ಮ, ಆತನ ಅಧೀನವಾಗಿರುವ ಜೀವಜಾತ ಇದನ್ನು ಗುಣಗಳ ಜೊತೆಗೆ ಅರಿತವನು ಜ್ಞಾನಿ. ಇಂಥಹ ಜ್ಞಾನಿ ಬಾಹ್ಯವಾಗಿ ಹೇಗೆ ಕಾಣಿಸಿಕೊಂಡರೂ ಕೂಡ, ಸತ್ಯದ ಸಾಕ್ಷಾತ್ಕಾರದಿಂದ ಆತ ಮೋಕ್ಷವನ್ನು ತಲುಪುತ್ತಾನೆ. ಇಲ್ಲಿ ಬಾಹ್ಯ ಸಂಸ್ಕಾರಕ್ಕಿಂತ ಜ್ಞಾನ ಎಷ್ಟು ಮುಖ್ಯ ಎನ್ನುವುದನ್ನು ಕೃಷ್ಣ ಒತ್ತಿ ಹೇಳಿದ್ದಾನೆ. ಮುಖವಾಡದ ಬದುಕಿನಿಂದ ಏನೂ ಉಪಯೋಗವಿಲ್ಲ. ಅದಕ್ಕಿಂತ ಮಿಗಿಲಾದದ್ದು ಸತ್ಯದ ಸಾಕ್ಷಾತ್ಕಾರ. ಸತ್ಯದ ಸಾಕ್ಷಾತ್ಕಾರವಾದಾಗ ತಾನಾಗಿಯೇ ಲೌಕಿಕ ಪ್ರಪಂಚ ಎಷ್ಟು ಅರ್ಥಹೀನ ಎನ್ನುವುದು ತಿಳಿಯುತ್ತದೆ. ಜ್ಞಾನಕ್ಕಿಂತ ಮಿಗಿಲಾದ ಇನ್ನೊಂದು ಪವಿತ್ರಸಾಧನವಿಲ್ಲ. ಕರ್ಮಾನುಷ್ಠಾನದಲ್ಲಿ  ಅಕಾಸ್ಮಾತ್ ಚ್ಯುತಿಯಾದರೂ ಜ್ಞಾನ ಮಾರ್ಗದಲ್ಲಿ ಸಾಗುವವನಿಗೆ ಅದು ಬಾಧಕವಾಗುವುದಿಲ್ಲ. ಜ್ಞಾನ ಅವನನ್ನು ಸರಿದಾರಿಗೆ ತಂದು ನಿಲ್ಲಿಸುತ್ತದೆ ಮತ್ತು ಆತ ಮೋಕ್ಷವನ್ನು ಪಡೆಯುತ್ತಾನೆ.

No comments:

Post a Comment