Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, April 30, 2011

Bhagavad Gita Kannada Chapter-05 Shloka-11-13

ಕಾಯೇನ ಮನಸಾ ಬುದ್ಧ್ಯಾ ಕೇವಲೈರಿಂದ್ರಿಯೈರಪಿ
ಯೋಗಿನಃ ಕರ್ಮ ಕುರ್ವಂತಿ ಸಂಗಂ  ತ್ಯಕ್ತ್ವಾSSತ್ಮಶುದ್ಧಯೇ  ೧೧

ಕಾಯೇನ ಮನಸಾ ಬುದ್ಧ್ಯಾ ಕೇವಲೈಃ  ಇಂದ್ರಿಯೈಃ ಅಪಿ 
ಯೋಗಿನಃ ಕರ್ಮ ಕುರ್ವಂತಿ ಸಂಗಮ್  ತ್ಯಕ್ತ್ವಾ ಆತ್ಮ ಶುದ್ಧಯೇ-ಯೋಗಿಗಳು ಮೈಯಿಂದ, ಮನದಿಂದ, ಬುದ್ಧಿಯಿಂದ ಮತ್ತು ಬರಿಯ ಇಂದ್ರಿಯಗಳಿಂದ ಕರ್ಮ ಮಾಡುತ್ತಾರೆ. ನಂಟು ನೀಗಿ, ಬಗೆಯ ಶುದ್ಧಿಗಾಗಿ.

ಶಾಸ್ತ್ರದ   ಸಂಪ್ರದಾಯದಂತೆ ಒಂದು ವಿಷಯವನ್ನು ಹೇಳಿ ಕೊನೆಗೆ ಆ ರೀತಿ ಅನುಷ್ಠಾನ ಮಾಡಿದವರ ಬಗ್ಗೆ ಹೇಳಿ, ನಮಗೆ ಆ ವಿಷಯದಲ್ಲಿ ಭರವಸೆ ಬರುವಂತೆ ಮಾಡುತ್ತಾರೆ. ಇದನ್ನು 'ಅರ್ಥವಾದ' ಎನ್ನುತ್ತಾರೆ. ಯಾವುದೇ ವಿಷಯವನ್ನು ನಾವೇ ಮೊದಲು ಆರಂಭಿಸುವುದು ಅಂದರೆ ಸ್ವಲ್ಪ ಕಷ್ಟ. ಆದರೆ 'ಅದು ಹಿಂದಿನಿಂದಲೂ  ನಡೆದುಕೊಂಡು ಬಂದ ವಿಚಾರ' ಎಂದಾಗ ಆ ವಿಷಯದ ಬಗ್ಗೆ ನಮಗೆ ಧೈರ್ಯ ಹೆಚ್ಚು.   ಹಾಗೇ ಕೃಷ್ಣ ಇಲ್ಲಿ  ಜ್ಞಾನಿಗಳು ಸಂನ್ಯಾಸಯುಕ್ತವಾದ ಕರ್ಮಯೋಗ ಮಾಡುವುದನ್ನು  ಪ್ರಸ್ತಾಪಿಸುತ್ತಾನೆ. 
ಯೋಗಿಗಳು  ದ್ವಂದ್ವಾತೀತವಾದ,  ಫಲಕಾಮನೆ ಇಲ್ಲದೆ, 'ನನ್ನೊಳಗೆ ಭಗವಂತ ತನ್ನ ಪೂಜೆಯನ್ನು ನನ್ನ ಮೂಲಕ ನನ್ನ ಉದ್ಧಾರಕ್ಕೋಸ್ಕರ ಮಾಡಿಸುತ್ತಿದ್ದಾನೆ' ಎಂದು ತಿಳಿದು ಕರ್ತವ್ಯ ದೃಷ್ಟಿಯಿಂದ ಕರ್ಮ ಮಾಡುತ್ತಾರೆ, ಅವರಿಗೆ ಅಹಂಕಾರ-ಮಮಕಾರ ಇರುವುದಿಲ್ಲ; ಇದರಿಂದ ಮನಸ್ಸು ಶುದ್ಧವಾಗುತ್ತದೆ. ಶುದ್ಧಮನಸ್ಸಿಗೆ ಶುದ್ಧ ವಿಷಯ ಗ್ರಹಣ ಮಾಡಲು ಸಾಧ್ಯ. ಶುದ್ಧ ವಿಷಯ  ಗ್ರಹಣ ಎಂದರೆ ಶಾಸ್ತ್ರಕಾರರು ಯಾವ ಅರ್ಥದಲ್ಲಿ ಹೇಳಿದ್ದಾರೆ ಅದೇ ಅರ್ಥದಲ್ಲಿ ಗ್ರಹಿಸುವುದು. ಹೀಗೆ ಅರ್ಥ ಮಾಡಿಕೊಳ್ಳಬೇಕಾದರೆ ನಮ್ಮ ಮನಸ್ಸು ಶಾಸ್ತ್ರಕಾರರ ಮನಸ್ಸಿಗೆ ಶ್ರುತಿಗೂಡಬೇಕು(tuning) ಅಥವಾ ನಾವು ಅವರ ಸ್ಥಾನಕ್ಕೇರಬೇಕು   ಹಾಗು ಅವರ  ಸ್ಥಾನದಲ್ಲಿ ನಿಂತು ಯೋಚಿಸಬೇಕು. ಇಲ್ಲದಿದ್ದರೆ ನಿಜವಾದ ವಿಷಯ ಗ್ರಹಣವಾಗುವುದಿಲ್ಲ. ಇಲ್ಲಿ ಕೃಷ್ಣ ಹೇಳುತ್ತಾನೆ "ಯೋಗಿಗಳೂ ಕೂಡಾ  ಅಹಂಕಾರ-ಮಮಕಾರ ತೊರೆದು (ಸಂಗಂ ತ್ಯಕ್ತ್ವಾ) ಭಗಾವದರ್ಪಣ ಬುದ್ಧಿಯಿಂದ- ಮೈಯಿಂದ, ಮನದಿಂದ, ಬುದ್ಧಿಯಿಂದ ಮತ್ತು ಇಂದ್ರಿಯಗಳಿಂದ ಕರ್ಮನುಷ್ಠಾನವನ್ನು ಮಾಡುತ್ತಾರೆ" ಎಂದು. ಈ ವಿಚಾರವನ್ನು ಮತ್ತಷ್ಟು ಒತ್ತು ಕೊಟ್ಟು ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸುತ್ತಾನೆ.       

ಯುಕ್ತಃ ಕರ್ಮಫಲಂ ತ್ಯಕ್ತ್ವಾ ಶಾಂತಿಮಾಪ್ನೋತಿ ನೈಷ್ಠಿಕೀಮ್
ಅಯುಕ್ತಃ ಕಾಮಕಾರೇಣ ಫಲೇ ಸಕ್ತೋ ನಿಬದ್ಧ್ಯತೆ  ೧೨


ಯುಕ್ತಃ ಕರ್ಮಫಲಮ್  ತ್ಯಕ್ತ್ವಾ ಶಾಂತಿಮ್ ಆಪ್ನೋತಿ ನೈಷ್ಠಿಕೀಮ್
ಅಯುಕ್ತಃ ಕಾಮ ಕಾರೇಣ ಫಲೇ ಸಕ್ತಃ ನಿಬದ್ಧ್ಯತೆ-ಯೋಗ ಬಲ್ಲವನು ಕರ್ಮಫಲದ ನಂಟು ತೊರೆದು ನಿಚ್ಚಳವಾದ ನೆಮ್ಮದಿಯನ್ನು ಪಡೆಯುತ್ತಾನೆ. ಯೋಗಿಯಲ್ಲದವನು ಫಲದಲ್ಲೆ ಕಣ್ಣಿರಿಸಿ ಆಸೆಪಟ್ಟು ಮಾಡುತ್ತಾ ಅದರ ಬಂದಿಯಾಗುತ್ತಾನೆ. 
ಕರ್ಮಯೋಗಕ್ಕೆ   ತನ್ನನ್ನು ತೊಡಗಿಸಿಕೊಂಡವ, ಭಗವದ್ಪ್ರಜ್ಞೆಯಲ್ಲಿ ಕರ್ಮ ಮಾಡತಕ್ಕವ-ಜ್ಞಾನಾನಂದದ ಅಂತವಾದ ಮೋಕ್ಷವನ್ನು ಪಡೆಯುತ್ತಾನೆ. ನಾವು ಯಾವುದೊ ಒಂದು ಫಲ ಕಾಮನೆಯಿಂದ ಕರ್ಮ ಮಾಡಿದರೆ ಅದರಿಂದ ಯಾವುದೇ ಫಲ ಸಿಗುವುದಿಲ್ಲ ಎಂದಲ್ಲ, ಆದರೆ ಆ ಫಲ ನಮಗೆ ಎಷ್ಟು ಉಪಯುಕ್ತ ಎನ್ನುವ ಅರಿವು ನಮಗೆ ಇರುವುದಿಲ್ಲ ಹಾಗು ಅದು ಪೂರ್ಣವಾದ ಫಲವಾಗಿರುವುದಿಲ್ಲ. ಫಲಕಾಮನೆ ಇಲ್ಲದೆ ಕರ್ಮ ಮಾಡಿದರೆ ನಾವು ನಮಗೆ ಅಗತ್ಯವಾದ ಎಲ್ಲವನ್ನು ಪಡೆಯುತ್ತೇವೆ. ನಾವು ಕರ್ಮ ಫಲದ ಆಸೆ ಇಲ್ಲದೆ ಕರ್ಮದಲ್ಲಿ ತೊಡಗಿಸಿಕೊಂಡರೆ, ಕರ್ಮದಲ್ಲೇ  ಮುಂದುವರಿದು ಅದರಿಂದ ಜ್ಞಾನಪಡೆದು, ಅಂತಃಕರಣ  ಶುದ್ಧಿಯಿಂದ  ಭಗವಂತನ  ಅನುಗ್ರಹಕ್ಕೆ  ಪಾತ್ರರಾಗಿ  ಮೋಕ್ಷವನ್ನು  ಪಡೆಯುಬಹುದು. 
ಕರ್ಮಯೋಗವಿಲ್ಲದೆ 'ನನಗೋಸ್ಕರ ನಾನು ದುಡಿಯುತ್ತಿದ್ದೇನೆ, ಇದು ನನ್ನ ಸಂಪತ್ತು, ನಾನು ದುಡಿದಿದ್ದನ್ನು ನನ್ನ ಸುಖಕ್ಕಾಗಿ ಖರ್ಚು ಮಾಡುತ್ತೇನೆ, ಯಾವ ದೇವರೂ ನಮಗೆ ಸಹಾಯ ಮಾಡುವುದಿಲ್ಲ' ಇತ್ಯಾದಿ  ಆತ್ಮ ಕೇಂದ್ರಿತವಾದ ಭಾವನೆಯಿಂದ ಕರ್ಮ ಮಾಡಿದಾಗ ಕರ್ಮ ನಮಗೆ ಬಂದಿಯಾಗುತ್ತದೆ. ಒಂದು ಮೂಕಪ್ರಾಣಿ ಕೂಡಾ ಹೀಗೆ ಬದುಕುವುದಿಲ್ಲ.  ಉದಾಹರಣೆಗೆ  ಕಾಗೆ:  ಅದಕ್ಕೆ  ಒಂದು ತಿನ್ನುವ ವಸ್ತು ಕಾಣಿಸಿದರೆ, ತನ್ನೆಲ್ಲಾ ಬಳಗವನ್ನು ಕರೆದು ಹಂಚಿಕೊಂಡು ತಿನ್ನುತ್ತದೆ. ಹುಲಿ-ಸಿಂಹಗಳಂತಹ  ಕ್ರೂರ  ಮೃಗಗಳೂ ಕೂಡಾ  ಒಮ್ಮೆ ತಮ್ಮ ಹೊಟ್ಟೆ ತುಂಬಿದ ಮೇಲೆ ಎಂದೂ ಸ್ವಾರ್ಥದಿಂದ ಕಾರ್ಯ ನಿರ್ವಹಿಸುವುದಿಲ್ಲ. ಆದರೆ ಮಾನವರಾದ ನಾವು  ಸ್ವಾರ್ಥದಿಂದ  ಬದುಕುತ್ತೇವೆ, ನಮಗೆ ಎಷ್ಟು ಪಡೆದರೂ ಮತ್ತಷ್ಟರಾಸೆ! ಈ ರೀತಿ ಬದುಕುವವನು   ಸಂಸಾರ ಚಕ್ರದಲ್ಲಿ ಸಿಕ್ಕಿ  ಅದೋಗತಿಯನ್ನು  ಪಡೆಯುತ್ತಾನೆ.        

ಸರ್ವಕರ್ಮಾಣಿ ಮನಸಾ ಸಂನ್ಯಸ್ಯಾsಸ್ತೇ ಸುಖಂ ವಶೀ
ನವದ್ವಾರೇ ಪುರೇ ದೇಹೀ ನೈವ ಕುರ್ವನ್ ನ ಕಾರಯನ್  ೧೩

ಸರ್ವ ಕರ್ಮಾಣಿ ಮನಸಾ ಸಂನ್ಯಸ್ಯ ಆಸ್ತೇ ಸುಖಮ್  ವಶೀ
ನವ ದ್ವಾರೇ ಪುರೇ ದೇಹೀ ನ ಏವ ಕುರ್ವನ್ ನ ಕಾರಯನ್-ಮಾನಸಿಕವಾಗಿ ಎಲ್ಲಾ ಕರ್ಮಗಳ ನಂಟು ತೊರೆದು ಇಂದ್ರಿಯಗಳನ್ನು ಗೆದ್ದವನು ಹಾಯಾಗಿರುತ್ತಾನೆ-ಒಂಭತ್ತು  ಬಾಗಿಲ ಈ ಪುರದಲ್ಲಿ; ಏನನ್ನೂ ಮಾಡದೆ, ಏನನ್ನೂ ಮಾಡಿಸದೆ.

ಎಲ್ಲಾ ಕರ್ಮವನ್ನು ಮಾನಸಿಕವಾಗಿ ಸಂನ್ಯಾಸ ಮಾಡು ಎನ್ನುತ್ತಾನೆ ಕೃಷ್ಣ. ಇದು ಬಹಳ ಮುಖ್ಯವಾದ ಮಾತು. ಇಲ್ಲಿ 'ಕರ್ಮವನ್ನು ತ್ಯಾಗ ಮಾಡು' ಎಂದು ಕೃಷ್ಣ ಹೇಳುತ್ತಿಲ್ಲ, ಕೇವಲ ಮನಸ್ಸಿನಲ್ಲಿ ಬಿಡು ಎನ್ನುತ್ತಿದ್ದಾನೆ. ಅಂದರೆ ಕರ್ಮಗಳ ಬಗ್ಗೆ ಮನಸ್ಸಿನಲ್ಲಿರುವ ಫಲದ ಸಂಗ, ಮಾನಸಿಕವಾಗಿ ಸ್ವಾತಂತ್ರ್ಯ ಎನ್ನುವ ಭ್ರಮೆಯನ್ನು ಬಿಡುವುದು.  'ನನಗೆ', 'ನನಗೋಸ್ಕರ' ಎನ್ನುವ ವಿಚಾರವನ್ನು ಮಾನಸಿಕವಾಗಿ ಬಿಡುವುದು. 'ಜೀವನಿಗೆ ಯಾವ ಕಾಲದಲ್ಲೂ ಯಾವ ಕರ್ತೃತ್ವದಲ್ಲೂ ಸ್ವಾತಂತ್ರ್ಯವಿಲ್ಲ'. ಇದನ್ನು ಮಧ್ವಾಚಾರ್ಯರು ತಮ್ಮ ಎಲ್ಲಾ ಗ್ರಂಥಗಳಲ್ಲಿ ಸಾರಿ-ಸಾರಿ ಹೇಳಿದ್ದಾರೆ. ಇದನ್ನು ಮಾನಸಿಕವಾಗಿ ಅಳವಡಿಸಿಕೊಳ್ಳುವುದೇ  ನಿಜವಾದ ಕರ್ಮಸಂನ್ಯಾಸ.  
ಭಗವಂತ ಈ ಒಂಭತ್ತು ಬಾಗಿಲಿನ ಪುರದೊಳಗೆ(ಪೂರ್ಣತೆಯನ್ನು ಪಡೆದ ಮನುಷ್ಯ ಶರೀರ) ನಮ್ಮನ್ನು ಕೂರಿಸಿ ನಮ್ಮಿಂದ ಕರ್ಮ ಮಾಡಿಸುತ್ತಿದ್ದಾನೆ. 'ನನ್ನನ್ನು ಈ ಪುರದಲ್ಲಿಟ್ಟು, ನನ್ನೊಂದಿಗೆ ನನ್ನ ಆತ್ಮೀಯ ಗೆಳೆಯನಾಗಿ ನಿಂತು  ನನ್ನ ಉದ್ಧಾರಕ್ಕಾಗಿ ಆ ಭಗವಂತ ಕರ್ಮ ಮಾಡಿಸುತ್ತಿದ್ದಾನೆ' ಎನ್ನುವ ಎಚ್ಚರ ಕರ್ಮಯೋಗ.
ಕರ್ಮಯೋಗದ ಬಗ್ಗೆ ಕೃಷ್ಣ  ವಿವರಿಸಿದ ಅಪೂರ್ವವಾದ ಜ್ಞಾನಯೋಗವನ್ನು ನೋಡಿದೆವು. ಹೀಗೆ ಕರ್ಮ ಮಾಡುವುದರಿಂದ ಅದು ಭಗವಂತನ ಆರಾದನೆಯಾಗುತ್ತದೆ ಹಾಗು ಜ್ಞಾನಮಾರ್ಗದ ಒಂದು ಅಂಗವಾಗುತ್ತದೆ. ಜ್ಞಾನದಿಂದ ಕರ್ಮ ಮಾಡಿದಾಗ ಯಾವ ಕ್ಷುದ್ರ ಕೆಲಸ ಕೂಡಾ ವ್ಯರ್ಥವಾಗುವುದಿಲ್ಲ, ಅದು ಯೋಗವಾಗುತ್ತದೆ.
ಇಲ್ಲಿ   'ಏನನ್ನೂ ಮಾಡದೆ, ಏನನ್ನೂ ಮಾಡಿಸದೆ' ಎಂದಿದ್ದಾನೆ ಕೃಷ್ಣ. ಸಾಮಾನ್ಯವಾಗಿ ನಾವು ಒಂದು ಕೆಲಸ ಮಾಡಿದರೆ 'ಅದನ್ನು ನಾನು ಮಾಡಿದೆ', 'ನಾನು ಹೇಳಿದ್ದರಿಂದ ಆ ಕಾರ್ಯ ಆಯಿತು' ಎಂದು ಎಲ್ಲಾ ಕಡೆ ಹೇಳಿಕೊಂಡು ಬರುತ್ತೇವೆ. ಹಾಗೆ ನಾಲ್ಕು ಜನ ಹೇಳಲಿ ಎಂದು ಬಯಸುತ್ತೇವೆ. ಆದರೆ ಜ್ಞಾನಿಗಳು ಹಾಗೆ ಹೇಳುವುದಿಲ್ಲ. 'ಏನೋ ದೇವರು ನನ್ನ ಕೈಯಲ್ಲಿ ಮಾಡಿಸಿದ' , 'ನನ್ನೊಳಗಿದ್ದು ಆ ದೇವರು ಮಾಡಿಸಿದ', 'ಭಗವಂತ ಅವರಿಗೆ ಪ್ರೇರಣೆ ಮಾಡಿದ' ಇತ್ಯಾದಿಯಾಗಿ ಮಾತನಾಡುತ್ತಾರೆ. ಇದಕ್ಕೆ ಕಾರಣ ಜ್ಞಾನಿಗಳು ಎಂದೂ  'ನಾನು ಸ್ವತಂತ್ರ  ಕರ್ತಾ' ಎನ್ನುವ ಪ್ರಜ್ಞೆಯನ್ನು ಬೆಳೆಸಿಕೊಂಡಿರುವುದಿಲ್ಲ. ಇದು ಜ್ಞಾನಿಗಳ ಮತ್ತು ಅಜ್ಞಾನಿಗಳ ಕರ್ಮದ ಅನುಸಂಧಾನದಲ್ಲಿರುವ ವೆತ್ಯಾಸ.

ಈ   ಎಲ್ಲಾ ವಿಚಾರವನ್ನು ತಿಳಿದ ಮೇಲೆ ನಮಗೆ ಒಂದು ಪ್ರಶ್ನೆ ಮೂಡುತ್ತದೆ. ಎಲ್ಲವನ್ನೂ ದೇವರೇ ಮಾಡಿಸುವುದಾದರೆ ಆತ ನಮ್ಮ ಕೈಯಲ್ಲಿ ಒಳ್ಳೆಯ ಕೆಲಸವನ್ನೇ ಮಾಡಿಸಲಿ, ಕೆಟ್ಟ ಕೆಲಸ ಏಕೆ ಮಾಡಿಸುತ್ತಾನೆ? ಕೆಟ್ಟಕೆಲಸ ಮಾಡಿಸುವವ  ಅವನೇ ಆದರೆ ನಮಗೇಕೆ ಅದರ ಶಿಕ್ಷೆ? ನಮಗೇಕೆ ದುಃಖ? ನಾನು ಬಯಸಿ ಬುದ್ಧಿಪೂರ್ವಕವಾಗಿ ಮಾಡಿದಾಗ ನಾನು ಏಕೆ ಕರ್ತಾ ಅಲ್ಲ? ಅದರಿಂದ ಏಕೆ ನನಗೆ ಫಲ ಬರುವುದಿಲ್ಲ? ಎಲ್ಲಾ ದೇವರೇ ಮಾಡಿಸುವುದಾದರೆ ನನಗೆ ಫಲ ಹೇಗೆ ಬರುತ್ತದೆ? ಇತ್ಯಾದಿ ಪ್ರಶ್ನೆ. ಇದು ಪ್ರತಿಯೊಬ್ಬರನ್ನೂ ಕಾಡುವ ಪ್ರಶ್ನೆ. ಇವು ಕಾಡುವ ಪ್ರಶ್ನೆಗಳೇನೋ ಸರಿ ಆದರೆ ಸರಿಯಾದ ಪ್ರಶ್ನೆಗಳಲ್ಲ. ಶಾಸ್ತ್ರದ ತಿರುಳು ತಿಳಿಯದಾಗ ಈ ಪ್ರಶ್ನೆಗಳು ಬರುತ್ತವೆ. ಮುಂದಿನ ಶ್ಲೋಕಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಈ ನಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ.

Thursday, April 28, 2011

Bhagavad Gita Kannada Chapter-05 Shloka 8-10

ಕರ್ಮ ಸಂನ್ಯಾಸ  ಮತ್ತು ಕರ್ಮಯೋಗ ಎರಡನ್ನು ಬೆರಸಿ ಜೀವನದಲ್ಲಿ ಕರ್ಮಾನುಷ್ಠಾನ ಮಾಡಬೇಕು ಎಂದು ವಿವರಿಸಿದ ಕೃಷ್ಣ ನಮ್ಮ ದೈನಂದಿನ ಜೀವನದಲ್ಲಿ ಈ ರೀತಿಯ ಕರ್ಮಾನುಷ್ಠಾನ ಅಂದರೆ ಏನು ಎನ್ನುವುದರ ವಿವರಣೆಯನ್ನು ಮುಂದಿನ ಶ್ಲೋಕದಲ್ಲಿ ಕೊಡುತ್ತಾನೆ.

ನೈವ ಕಿಂಚಿತ್ ಕರೋಮೀತಿ ಯುಕ್ತೋ ಮನ್ಯೇತ ತತ್ತ್ವವಿತ್         
ಪಶ್ಯನ್ ಶೃಣ್ವನ್ ಸ್ಪೈಶನ್ ಜಿಘ್ರನ್ನಶ್ನನ್ ಗಚ್ಛನ್ ಸ್ವಪನ್ ಶ್ವಸನ್ 

ಪ್ರಲಪನ್ ವಿಸೃಜನ್ ಗೃಹ್ಣನ್ನುನ್ಮಿಷನ್ ನಿಮಿಷನ್ನಪಿ
ಇಂದ್ರಿಯಾಣೀಂದ್ರಿಯಾರ್ಥೇಷು ವರ್ತಂತ ಇತಿ ಧಾರಯನ್

ನ ಏವ  ಕಿಂಚಿತ್ ಕರೋಮಿ ಇತಿ ಯುಕ್ತಃ ಮನ್ಯೇತ ತತ್ತ್ವವಿತ್         
ಪಶ್ಯನ್ ಶೃಣ್ವನ್ ಸ್ಪೈಶನ್ ಜಿಘ್ರನ್ ಅಶ್ನನ್ ಗಚ್ಛನ್ ಸ್ವಪನ್ ಶ್ವಸನ್ ||
ಪ್ರಲಪನ್ ವಿಸೃಜನ್ ಗೃಹ್ಣನ್ ಉನ್ಮಿಷನ್ ನಿಮಿಷನ್ ಅಪಿ
ಇಂದ್ರಿಯಾಣಿ ಇಂದ್ರಿಯ ಅರ್ಥೇಷು ವರ್ತಂತ ಇತಿ ಧಾರಯನ್  - ನಿಜವರಿತ ಸಾಧಕ ತಾನಾಗಿ ಏನೂ ಮಾಡುತ್ತಿಲ್ಲ ಎಂದು ತಿಳಿಯಬೇಕು- ಕಾಣುವಾಗ,ಕೇಳುವಾಗ,ಮುಟ್ಟುವಾಗ,ಮೂಸುವಾಗ,ತಿನ್ನುವಾಗ,ತಿರುಗುವಾಗ,ಮಲಗುವಾಗ, ಉಸಿರುವಾಗ,ಉಸುರುವಾಗ,ಕಳೆಯುವಾಗ,ಕೊಳ್ಳುವಾಗ,ಎವೆ ಮುಚ್ಚುವಾಗ,ಎವೆ ಬಿಚ್ಚುವಾಗ ಕೂಡಾ-ಇಂದ್ರಿಯಗಳು ತಮ್ಮ ಕೆಲಸದಲ್ಲಿ ತೊಡಗಿವೆ ಎಂದು ಭಾವಿಸುತ್ತ.

ನಮ್ಮ ಜೀವನದಲ್ಲಿ ದೇವರಪೂಜೆ ಮಾತ್ರ ಅನುಷ್ಠಾನವಲ್ಲ. ನಮ್ಮ ಪ್ರತಿಯೊಂದು ನಡೆಯೂ ಒಂದು ಕರ್ಮಯೋಗವಾಗಬೇಕು. ಯಾವುದೋ ಕಾಲ ವಿಶೇಷದಲ್ಲಿ ಮಾತ್ರ ದೇವರ ಪೂಜೆ ಮಾಡುವುದಲ್ಲ. ಇಡೀ ಬದುಕೇ ಒಂದು ಯಜ್ಞವಾಗಬೇಕು. ಯಜ್ಞವನ್ನು ಕನ್ನಡದಲ್ಲಿ ಬೇಳುವೆ ಎನ್ನುತ್ತಾರೆ. ನಮ್ಮ ಬಾಳುವೆಯೇ ಒಂದು ಬೇಳುವೆಯಾಗಬೇಕು.
ಕರ್ಮಾನುಷ್ಠಾನ ಮಾಡುವವನು "ನಾನು ನಾನಾಗಿ ಏನನ್ನೂ ಮಾಡುತ್ತಿಲ್ಲ, ನಾನು ಮಾಡುವ ಕ್ರಿಯೆಯಲ್ಲಿ ನಾನು ಸ್ವತಂತ್ರನಲ್ಲ, ನನ್ನದು ಇಚ್ಛಾಪೂರ್ವಕ ಕೃತಿ ಆದರೆ ಇಲ್ಲಿ ನನಗೆ ಸ್ವಾತಂತ್ರವಿಲ್ಲ" ಎನ್ನುವ ಸತ್ಯವನ್ನು ಅರಿತಿರಬೇಕು. ನಾವು  ಮಾಡಬೇಕು ಎಂದುಕೊಂಡಿದ್ದನ್ನು ನಮ್ಮಿಂದ  ಮಾಡಲು ಆಗುವುದಿಲ್ಲ,  ನಾವು ಬಯಸಿದ್ದು ಸಿಗುವುದಿಲ್ಲ, ಫಲದಲ್ಲಿ ನಮಗೆ ಸ್ವಾತಂತ್ರ್ಯವಿಲ್ಲ. ಇದು ಪ್ರತಿಯೊಬ್ಬರ ಅನುಭವಕ್ಕೆ ಬರುವ ವಿಷಯ. ಆದರೆ ಕ್ರಿಯೆ ಮಾತ್ರ ನಮ್ಮ ಮುಖೇನ ಆಗುತ್ತದೆ. 
'ನಾನು ಇಂಥದ್ದೇ  ಸಿಗಬೇಕು, ಇಂಥದ್ದು ಸಿಗಬಾರದು ಎನ್ನುವ ಇಚ್ಛೆಯಿಂದಾಗಲಿ, ನಾನು ಮಾಡುತ್ತಿದ್ದೇನೆ ಎನ್ನುವ ಅಹಂಕಾರದಿಂದಾಗಲಿ ಮಾಡುತ್ತಿಲ್ಲ; ನನ್ನೊಳಗಿರುವ ಭಗವಂತ ಇದನ್ನು ಮಾಡಿಸುತ್ತಿದ್ದಾನೆ' ಎಂದು ತತ್ವಜ್ಞಾನಿ  ತಿಳಿದಿರುತ್ತಾನೆ.  ಆದ್ದರಿಂದ ಯಾವುದರಲ್ಲೂ "ನಾನು, ನನ್ನದು" ಎನ್ನುವ ಅಹಂಕಾರವಿಲ್ಲ. ಅವನು ಏನು ಒದಗಿಸಿ ಕೊಟ್ಟ ಹಾಗೆ ನಡೆಯುತ್ತದೆ ಹೊರತು ಇಲ್ಲಿ ನಾವು ಸ್ವತಂತ್ರ ಕರ್ತಾರರಲ್ಲ. ಇದನ್ನು ತತ್ವವನ್ನು ಅರಿತವನು ತನ್ನ ಪ್ರತಿಯೊಂದು ಕ್ರಿಯೆಯಲ್ಲಿ ಅನುಸರಿಸುತ್ತಾನೆ.
ಪಶ್ಯನ್-ನೋಡುವಾಗ,  ಶೃಣ್ವನ್-ಕೇಳುವಾಗ, ಸ್ಪೈಶನ್-ಸ್ಪರ್ಶದಲ್ಲಿ, ಜಿಘ್ರನ್-ಮೂಸುವಾಗ, ಅಶ್ನನ್-ತಿನ್ನುವಾಗ, ಗಚ್ಛನ್-ತಿರುಗುವಾಗ, ಸ್ವಪನ್-ಮಲಗುವಾಗ, ಶ್ವಸನ್-ಉಸಿರಿನಲ್ಲಿ, ಪ್ರಲಪನ್-ಮಾತಿನಲ್ಲಿ, ವಿಸೃಜನ್-ವಿಸರ್ಜಿಸುವಾಗ, ಗೃಹ್ಣನ್-ಸ್ವೀಕರಿಸುವಾಗ, ಉನ್ಮಿಷನ್-ತೆರೆಯುತ್ತ,   ನಿಮಿಷನ್-ಮುಚ್ಚುತ್ತ ಹೀಗೆ ತನ್ನೆಲ್ಲಾ ಕ್ರಿಯೆಯಲ್ಲಿ ತಾನೇನೂ ಮಾಡುತ್ತಿಲ್ಲ ಅನ್ನುವ ಅರಿವನ್ನು ತತ್ವಜ್ಞಾನಿ ತಿಳಿದಿರುತ್ತಾನೆ. ಉದಾಹರಣೆಗೆ-ನಾವು ಒಂದು ಹೂವಿನ ಅಂದವನ್ನು ಕಣ್ಣಿನಿಂದ ಸವಿಯುತ್ತೇವೆ, ಅದರ ಪರಿಮಳವನ್ನು ಮೂಗಿನಿಂದ ಆಸ್ವಾಧಿಸುತ್ತೇವೆ, ಆ ಹೂವನ್ನು ಮುಟ್ಟಿ-ಮುಡಿದು ಸಂತೋಷ ಪಡುತ್ತೇವೆ. ಈ ಹೂವನ್ನು ಸೃಷ್ಟಿಸಿದವ, ಅದಕ್ಕೆ ಅಂದವನ್ನು ಕೊಟ್ಟವ ಆ ಭಗವಂತ. ಆ ಹೂವನ್ನು  ನೋಡುವ ಕಣ್ಣನ್ನು ನಮಗೆ ಕೊಟ್ಟವ ಆತ(ಹುಟ್ಟು ಕುರುಡನಿಗೆ ಈ ಯೋಗವಿಲ್ಲ). ಈ ಅನುಸಂಧಾನವಿದ್ದರೆ ನೋಡುವ-ಮುಟ್ಟುವ-ಮೂಸವ ಕ್ರಿಯೆಯಲ್ಲಿ 'ನನ್ನದು' ಎನ್ನುವ ಅಹಂಕಾರಕ್ಕೆ ಎಡೆಯಿಲ್ಲ. ಅದೇ ರೀತಿ ತಿನ್ನುವುದು:  ಈ ಪ್ರಪಂಚದಲ್ಲಿ ಎಷ್ಟೋ ಜನ ಒಂದು ಹೊತ್ತಿನ ಆಹಾರಕ್ಕೂ ಗತಿ ಇಲ್ಲದೆ ಇನ್ನೊಬ್ಬರ ಮುಂದೆ ಕೈಚಾಚಿಕೊಂಡು ಬದುಕುತ್ತಾರೆ. ಆದರೆ ನಮಗೆ ಭಗವಂತ ಮೂರು ಹೊತ್ತಿನ ತುತ್ತಿಗೆ ಅನುಕೂಲ ಮಾಡಿ ಕೊಟ್ಟಿದ್ದಾನೆ ಅನ್ನುವ ಅನುಸಂಧಾನದಿಂದ ಊಟ ಮಾಡಿದಾಗ ಅದೊಂದು ಯಜ್ಞವಾಗುತ್ತದೆ. ಇನ್ನು ನಿದ್ದೆ: ನಿದ್ದೆಯಲ್ಲಿ ನಾವು ಭಗವಂತನ ಸಮೀಪದಲ್ಲಿರುತ್ತೇವೆ. ಆದರೆ ಆ ಎಚ್ಚರ ನಮಗಿರುವುದಿಲ್ಲ. ಒಂದು ವೇಳೆ ನಿದ್ದೆಯೇ ಬಾರದಿದ್ದರೆ? ಇಡೀ ರಾತ್ರಿ ಕನಸಿನಲ್ಲೇ ಕಳೆದರೆ? ಇದನ್ನು ನಮ್ಮಿಂದ ಉಹಿಸುವುದೂ ಕಷ್ಟ. ಹುಟ್ಟಿದಾಗ ನಮಗರಿವಿಲ್ಲದಂತೆ ಉಸಿರಾಟ ಆರಂಭವಾಯಿತು, ನಿದ್ದೆಯಲ್ಲೂ ನಮಗರಿವಿಲ್ಲದಂತೆ ನಮ್ಮ ಉಸಿರಿನ ಕ್ರಿಯೆ ನಿರಂತರ. ಆದರೆ ಈ ಉಸಿರು ಯಾವಾಗ ನಿಲ್ಲುತ್ತದೆ ಎನ್ನುವುದು ನಮಗೆ ತಿಳಿದಿಲ್ಲ. ಹೀಗೆ ಪ್ರತಿಯೊಂದು ಕ್ರಿಯೆಯಲ್ಲಿ ಆ ವಿಶ್ವಶಕ್ತಿಯ ಅನುಸಂಧಾನ. 
ಭಗವಂತ ನಮಗೆ ಅಮೂಲ್ಯವಾದ ಕೈ ಕೊಟ್ಟಿದ್ದಾನೆ. ಪ್ರಾಣಿಗಳಿಗೆ ನಾಲ್ಕೂ ಕಾಲೇ, ಕೈ ಇಲ್ಲ. ತನ್ನ ಮೈ ಮೇಲೆ ಯಾವುದೋ ಜೀವಿ ಕುಳಿತು ರಕ್ತ ಹೀರುತ್ತಿದ್ದರೂ ಅದನ್ನು ಓಡಿಸುವ ಕೈ ಅವುಗಳಿಗಿಲ್ಲ. ಇಂತಹ ಅಮೂಲ್ಯವಾದ ಕೈಯನ್ನು ಭಗವಂತ ನಮಗೆ ಕರುಣಿಸಿದ್ದಾನೆ. ಅತ್ಯಂತ ಸೂಕ್ಷ್ಮ ಇಂದ್ರಿಯವಾದ ಕಣ್ಣನ್ನು ರಕ್ಷಿಸುವ ರೆಪ್ಪೆಗಳು, ಅವು ನಿರಂತರ ತೆರೆಯವುದು-ಬಿಚ್ಚುವುದರಿಂದ ಕಣ್ಣಿನ ರಕ್ಷಣೆ. ಒಂದು ವೇಳೆ, ಕಣ್ಣಿಗೆ ಏನಾದರೂ ಕಸ ಬಿದ್ದರೆ ನಮಗರಿವಿಲ್ಲದಂತೆ ಕಣ್ಣಿಗೆ ನೀರಿನ ಸರಬರಾಜಾಗಿ ಕಣ್ಣು ರಕ್ಷಣೆ ಆಗುತ್ತದೆ. ಈ ಅಪೂರ್ವ ಯಂತ್ರದ ವಿನ್ಯಾಸ ಮಾಡಿದ ಶಿಲ್ಪಿ ಆ ಭಗವಂತ.
ನಮ್ಮ ಪ್ರತಿಯೊಂದು ಇಂದ್ರಿಯಗಳನ್ನೂ ಇಂದ್ರಿಯಾಭಿಮಾನಿ ದೇವತೆಗಳು ನಿಯಂತ್ರಿಸುತ್ತಾರೆ ಎನ್ನುವ ವಿಚಾರವನ್ನು ನಾವು ಈ ಹಿಂದೆ ವಿಶ್ಲೇಷಿಸಿದ್ದೇವೆ. ಉದಾಹರಣೆಗೆ ಸೂರ್ಯ ಕಣ್ಣಿನ, ಚಂದ್ರ ಕಿವಿಯ ದೇವತೆ. ಸುಪರ್ಣಿ-ವಾರುಣಿ-ಪಾರ್ವತಿ ಶಬ್ದ-ಸ್ಪರ್ಶ-ಗಂಧದ ಅಭಿಮಾನಿ ದೇವತೆಯರು. ಮನೋಭಿಮಾನಿ ದೇವತೆಯಾಗಿ ಗರುಡ  ಶೇಷ ರುದ್ರ. ಹೀಗೆ ನಮ್ಮ ಕ್ರಿಯೆಯ ಹಿಂದೆ ಅದ್ಭುತವಾದ ಆಧ್ಯಾತ್ಮಿಕ ಶಕ್ತಿ ಕೆಲಸ ಮಾಡುತ್ತಿದೆ.  

ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ         
ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿ ಮಿವಾಂಭಸಾ  ೧೦

ಬ್ರಹ್ಮಣಿ ಆಧಾಯ ಕರ್ಮಾಣಿ ಸಂಗಮ್ ತ್ಯಕ್ತ್ವಾ ಕರೋತಿ ಯಃ         
ಲಿಪ್ಯತೇ ನ ಸಃ ಪಾಪೇನ ಪದ್ಮಪತ್ರಮ್ ಇವ ಅಂಭಸಾ-ಕರ್ಮಗಳನ್ನು ಭಗವಂತನಲ್ಲಿ ಒಪ್ಪಿಸಿ, ನಂಟು ನೀಗಿ ಮಾಡುವವನು ಪಾಪದಿಂದ ಅಂಟಿಸಿಕೊಳ್ಳುವುದಿಲ್ಲ-ತಾವರೆ ಎಲೆ ನೀರಿನಿಂದ ಹೇಗೆ ಹಾಗೆ.

ನಾವು ಪೂಜೆಯ ಕೊನೆಯಲ್ಲಿ "ಶ್ರೀ ಕೃಷ್ಣಾರ್ಪಣ ಮಸ್ತು" ಎಂದು ಹೇಳುತ್ತೇವೆ. ಇದರ ಅರ್ಥ " ಆ ಭಗವಂತನಲ್ಲಿ ಅರ್ಪಿತ". ಅರ್ಪಿಸುವುದು  ಎಂದರೆ " ಈ ಕರ್ಮವನ್ನು ಭಗವಂತ ತನ್ನ ಪೂಜಾರೂಪವಾಗಿ ನನ್ನ ಮೂಲಕ ನನ್ನ ಉದ್ಧಾರಕ್ಕಾಗಿ ಅವನೇ ಮಾಡಿಸಿಕೊಂಡ" ಎನ್ನುವ ಸಂಕಲ್ಪ.  ಹೀಗೆ ನಾವು ಕರ್ಮವನ್ನು ಮಾಡಿದಾಗ ಯಾವ ಕರ್ಮದ ಲೇಪವೂ ನಮಗೆ ಅಂಟುವುದಿಲ್ಲ. 'ನಾನು, ನನ್ನದು, ನನ್ನಿಂದ' ಎನ್ನುವ ಅಹಂಕಾರ ಹೊರಟುಹೋಗುತ್ತದೆ. ಇದು ಆನಂದಮಯವಾದ ವಿಸ್ಮಯ. ತಾವರೆ ಎಲೆ ನೀರಿನಲ್ಲೇ ಇದ್ದರೂ ಕೂಡಾ ಹೇಗೆ ನೀರನ್ನು ತನಗೆ ಅಂಟಿಸಿಕೊಳ್ಳುವುದಿಲ್ಲ ಹಾಗೆ ಕರ್ಮದ ಜೊತೆಗೇ ಇದ್ದು, ಕರ್ಮ ಮಾಡಿ, ಕರ್ಮವನ್ನು ಅಂಟಿಸಿಕೊಳ್ಳದೆ  ಇರುವುದು ಈ ಅನುಸಂಧಾನದಿಂದ ಮಾತ್ರ ಸಾಧ್ಯ.

Tuesday, April 26, 2011

Bhagavad Gita Chapter-05 Shloka 4-7

ಸಾಂಖ್ಯಯೋಗೌ ಪೃಥಗ್ ಬಾಲಾಃ ಪ್ರವದದಂತಿ  ನ ಪಂಡಿತಾಃ
ಏಕಮಪ್ಯಾಸ್ಥಿತಃ ಸಮ್ಯಗುಭಯೋರ್ವಿಂದತೇ ಫಲಮ್

ಸಾಂಖ್ಯ ಯೋಗೌ ಪೃಥಕ್  ಬಾಲಾಃ ಪ್ರವದಂತಿ  ನ ಪಂಡಿತಾಃ
ಏಕಮ್ ಅಪಿ ಅಸ್ಥಿತಃ ಸಮ್ಯಕ್  ಉಭಯೋಃ ವಿಂದತೇ ಫಲಮ್- ಜ್ಞಾನ ಮತ್ತು ಕರ್ಮದ ದಾರಿ ಬೇರೆ ಬೇರೆ [ಒಂದು ಸಂನ್ಯಾಸಿಗಳಿಗೆ ಹಾಗು ಇನ್ನೊಂದು ಸಂಸಾರಿಗಳಿಗೆ] ಎಂದು ನುಡಿದವರು ಬಾಲಿಷರು[ತಿಳಿಗೇಡಿಗಳು]; ತಿಳಿದವರಲ್ಲ. ಯಾವುದೋ ಒಂದು ದಾರಿಯಲ್ಲಿ ಸರಿಯಾಗಿ ನಡೆದವನು ಎರಡರ ಫಲವನ್ನೂ ಪಡೆಯುತ್ತಾನೆ.

ಹಿಂದೆ ಕರ್ಮಸಂನ್ಯಾಸ  ಮತ್ತು ಕರ್ಮಯೋಗವನ್ನು ವಿವರಿಸಿದಂತೆ ಕೃಷ್ಣ ಇಲ್ಲಿ ಸಾಖ್ಯವನ್ನು(ಜ್ಞಾನ-Spiritual Wisdom) ಮತ್ತು ಯೋಗವನ್ನು(ಅನುಷ್ಠಾನ-Spiritual Practice) ವಿವರಿಸುತ್ತಾನೆ. ಶಾಸ್ತ್ರದಲ್ಲಿ ಸಾಂಖ್ಯ(ಸಮ್ಯಕ್ ಖ್ಯಾತಿ) ಎಂದರೆ ಗಣಿತವಲ್ಲ, ಅದು  ಶುದ್ಧ ಆತ್ಮತತ್ವವಿಜ್ಞಾನ-ಭಗವಂತನ ಜ್ಞಾನ. ಯಾರ ಅಂಕೆಯಲ್ಲಿ ಈ ಇಡೀ ಜಗತ್ತು ನಡೆಯುತ್ತಿದೆಯೋ ಅವನ ಅರಿವು. ಇದನ್ನು ತಿಳಿಯದೇ ಇರುವವರನ್ನು ಕೃಷ್ಣ ಬಾಲಿಷರು ಹಾಗು ಅಂತವರ ಮಾತಿಗೆ ಮೂಲ ಆಧಾರ ಎನ್ನುವುದಿಲ್ಲ ಎನ್ನುತ್ತಾನೆ. ಇಷ್ಟು ಹೇಳಿ ಕೃಷ್ಣ ಹೇಳುತ್ತಾನೆ "ಏಕಮಪ್ಯಾಸ್ಥಿತಃ ಸಮ್ಯಗುಭಯೋರ್ವಿಂದತೇ ಫಲಮ್" ಎಂದು.  ಅಂದರೆ ಯಾವುದೇ ಒಂದನ್ನು ನೀನು ಚೆನ್ನಾಗಿ ಆಚರಣೆಗೆ ತಂದರೆ ಎರಡರ ಫಲವನ್ನೂ ಪಡೆಯುತ್ತಿ ಎಂದರ್ಥ. ಇಲ್ಲಿ ಪುನಃ ನಮಗೆ ಗೊಂದಲವಾಗಬಹುದು. ಇದರರ್ಥ ಜ್ಞಾನವನ್ನು ಮಾತ್ರ ಅಥವಾ ಕರ್ಮವನ್ನು ಮಾತ್ರ ಆಚರಣೆ ಮಾಡುವುದು ಎಂದಲ್ಲ. ನಾವು ಕರ್ಮವನ್ನು ಚನ್ನಾಗಿ ಮಾಡುವದು ಎಂದರೆ ತಿಳಿದು ಜ್ಞಾನಪೂರ್ವಕವಾಗಿ ಮಾಡುವದು, ಅದೇ ರೀತಿ ಜ್ಞಾನ ಚನ್ನಾಗಿರುವುದು ಎಂದರೆ ತಿಳಿದಿದ್ದನ್ನು ಅನುಷ್ಠಾನಗೊಳಿಸುವುದು. ಆದ್ದರಿಂದ ಒಂದು 'ಜ್ಞಾನಪ್ರಧಾನ' ಇನ್ನೊಂದು 'ಕರ್ಮ ಪ್ರಧಾನ'ವಾಗಿರಬಹುದು ಆದರೆ ಒಂದು ಇನ್ನೊಂದಕ್ಕೆ ಪೂರಕ. ಯಾರು ಇದನ್ನು ತಿಳಿದಿದ್ದಾರೆ ಅವರು ಪಂಡಿತರು ಹಾಗು ಅವರು ನಿಜವಾದ ಫಲವನ್ನೂ ಪಡೆಯುತ್ತಾರೆ.                 
 
ಯತ್  ಸಂಖ್ಯೈಃ ಪ್ರಾಪ್ಯತೇ ಸ್ಥಾನಂ ತದ್ ಯೊಗೈರಪಿ ಗಮ್ಯತೇ
ಏಕಂ ಸಾಂಖ್ಯಂ ಚ ಯೋಗಂ ಚ ಯಃ ಪಶ್ಯತಿ ಸ ಪಶ್ಯತಿ          

ಯತ್  ಸಂಖ್ಯೈಃ ಪ್ರಾಪ್ಯತೇ ಸ್ಥಾನಮ್  ತತ್  ಯೋಗ್ಯೆಃ  ಅಪಿ ಗಮ್ಯತೇ
ಏಕಮ್  ಸಾಂಖ್ಯಮ್  ಚ ಯೋಗಮ್  ಚ ಯಃ ಪಶ್ಯತಿ ಸಃ  ಪಶ್ಯತಿ-ಜ್ಞಾನ ಯೋಗಿಗಳು ಪಡೆಯುವ ತಾಣದೆಡೆ ಕರ್ಮ ಯೋಗಿಗಳೂ ನಡೆಯುತ್ತಾರೆ. ಜ್ಞಾನ ಮತ್ತು ಕರ್ಮದ ದಾರಿಗಳ ಗುರಿ ಒಂದೆ ಎಂದು ತಿಳಿದವನೆ ನಿಜವಾಗಿ ತಿಳಿದವನು.

ಜ್ಞಾನಿಗಳು ತಮಗೋಸ್ಕರ ಅಲ್ಲದೆ ಲೋಕಕ್ಕೆ ಮಾರ್ಗದರ್ಶನ ಮಾಡುವ ಸಲುವಾಗಿಯೂ ಕರ್ಮ ಮಾಡಬೇಕಾಗುತ್ತದೆ. ಏಕೆಂದರೆ ಸಮಾಜ ಅವರನ್ನು ಅನುಸರಿಸುತ್ತದೆ. ಇದು ಅವರ ಮೇಲಿರುವ ಸಾಮಾಜಿಕ ಜವಾಬ್ದಾರಿ. ಆದ್ದರಿಂದ ಜ್ಞಾನ ಮತ್ತು ಕರ್ಮ ಒಂದಕ್ಕೊಂದು ಪೂರಕ. ಜ್ಞಾನಪ್ರದ ಮತ್ತು ಕರ್ಮಪ್ರದ ಈ ಮಾರ್ಗದ ಗುರಿ ಒಂದೆ. ಜ್ಞಾನಪ್ರಧಾನವಾಗಿ ಕರ್ಮ ಮಾಡುವ ಋಷಿಗಳು, ದೇವತೆಗಳು, ಮತ್ತು ಕರ್ಮಪ್ರಧಾನವಾಗಿ ಜ್ಞಾನದಿಂದ ಕರ್ಮಮಾಡುವವರು ಸೇರುವ ಗುರಿ ಒಂದೆ-ಅದು ಆ ಭಗವಂತನನ್ನು. ಇಲ್ಲಿ ಕರ್ಮಸಂನ್ಯಾಸವೇ ಬೇರೆ ಮತ್ತು ಕರ್ಮಯೋಗವೇ ಬೇರೆ ಎನ್ನುವುದು ಅರ್ಥ ಶೂನ್ಯ. ಇವೆರಡೂ ಒಂದಕ್ಕೊಂದು ಪೂರಕ.  ಯಾರು ಈ ಸತ್ಯವನ್ನು ತಿಳಿಯುತ್ತಾರೋ ಅವರು'ತಿಳಿದವರು'     

ಸಂನ್ಯಾಸಸ್ತು ಮಹಾಬಾಹೋ ದುಃಖಮಾಪ್ತುಮಯೋಗತಃ       
ಯೋಗಯುಕ್ತೋ ಮುನಿರ್ಬ್ರಹ್ಮನ ಚಿರೇಣಾಧಿಗಚ್ಛತಿ     

ಸಂನ್ಯಾಸಃ ತು  ಮಹಾಬಾಹೋ ದುಃಖಮ್ ಆಪ್ತುಮ್ ಅಯೋಗತಃ       
ಯೋಗ ಯುಕ್ತಃ ಮುನಿಃ ಬ್ರಹ್ಮ ನ ಚಿರೇಣ ಅಧಿಗಚ್ಛತಿ-ಓ ಮಹಾವೀರ,ಕರ್ಮಯೋಗವಿರದ ಬರಿಯ ಸಂನ್ಯಾಸ [ದ್ವಂದ್ವ ತ್ಯಾಗ] ಬನ್ನವನ್ನೇ ತಂದೀತು.[ಭಗವಂತನ ಪೂಜೆಯೆಂದು ಕರ್ಮ ಮಾಡುವ ಬದಲು ಕರ್ಮವನ್ನೇ ತೊರೆಯುವುದು ನರಕದ ದಾರಿ]. ಕರ್ಮ ಮಾಡುತ್ತ ದ್ವಂದ್ವವನ್ನು ಗೆದ್ದವನು ಭಗವಂತನನ್ನು ಪಡೆಯಲು ತಡವಾಗದು.

ಕರ್ಮಯೋಗವಿಲ್ಲದ   ಬರಿಯ ದ್ವಂದ್ವತ್ಯಾಗ [ಸಂನ್ಯಾಸ] ವ್ಯರ್ಥ.ಶಾಸ್ತ್ರವನ್ನು ಓದಿ ನನಗೆ ಜ್ಞಾನ ಬಂತು, ನಾನು ದ್ವಂದ್ವಾತೀತ, ನನಗೆ ಯಾವ ಕರ್ಮವೂ ಬೇಕಾಗಿಲ್ಲ ಎಂದು ತಿಳಿದು ನಿಷ್ಕ್ರೀಯನಾದರೆ ಅದು ನಮ್ಮನ್ನು ಅದೋಗತಿಗೆ ತಳ್ಳುತ್ತದೆ. ಆದರೆ ದ್ವಂದ್ವಾತೀತನಾಗಿ ಕಾಮಕ್ರೋಧವನ್ನು ಗೆದ್ದು  ಜ್ಞಾನಪೂರ್ವಕವಾಗಿ ಕರ್ಮ ಮಾಡಿದರೆ ಅದರಿಂದ ಮೋಕ್ಷ ನಿಶ್ಚಿತ.   

ಯೋಗಯುಕ್ತೋ ವಿಶುದ್ಧಾತ್ಮಾ ವಿಜಿತಾತ್ಮಾ ಜಿತೇಂದ್ರಿಯಃ        
ಸರ್ವಭೂತಾತ್ಮಭೂತಾತ್ಮಾ ಕುರ್ವನ್ನಪಿ ನ ಲಿಪ್ಯತೇ   

ಯೋಗಯುಕ್ತಃ ವಿಶುದ್ಧ ಆತ್ಮಾ ವಿಜಿತ ಆತ್ಮಾ ಜಿತ ಇಂದ್ರಿಯಃ        
ಸರ್ವ ಭೂತ ಆತ್ಮಭೂತ ಆತ್ಮಾ ಕುರ್ವನ್ ಅಪಿ ನ ಲಿಪ್ಯತೇ-ಕರ್ಮ ಯೋಗದಲ್ಲಿ ತೊಡಗಿದವನು, ತಿಳಿಯಾದ ಬಗೆಯವನು, ಬಗೆಯ ಗೆದ್ದವನು. ಇಂದ್ರಿಯಗಳನ್ನೂ ಗೆದ್ದವನು. ಎಲ್ಲಾ ಜೀವಿಗಳನ್ನು ಪೊರೆವ ಭಗವಂತ ತನ್ನ ದೊರೆಯೆಂದು ತಿಳಿದವನು.[ಭಗವಂತನಲ್ಲೆ ಬಗೆ ನೆಟ್ಟವನು]. ಮಾಡಿದರೂ ಅಂಟಿಸಿಕೊಳ್ಳುವುದಿಲ್ಲ.

ಕರ್ಮಯೋಗದಲ್ಲಿ ತೊಡಗಿದವನು ತನ್ನ  ಮನೋನಿಗ್ರಹ ಮಾಡಿ ಶುದ್ಧವಾದ ಮನಸ್ಸಿನಿಂದ ಶುದ್ಧ ಕರ್ಮವನ್ನು ಮಾಡಬೇಕು. ಮನಸ್ಸನ್ನು ಗೆಲ್ಲಬೇಕಾದರೆ ಭಗವಂತನ ಒಲವು ಬೇಕು. ಮನಸ್ಸನ್ನು ಗೆದ್ದವನು ಇಂದ್ರಿಯಗಳನ್ನು ಗೆಲ್ಲುತ್ತಾನೆ-ಅದರಿಂದ ಆತ್ಮ ಶುದ್ಧಿಯಾಗುತ್ತದೆ. ಆಗ ಸರ್ವಭೂತಗಳಿಗೂ ಆತ್ಮಭೂತನಾದ ಭಗವಂತನೇ ನನ್ನ ಆತ್ಮ ಎನ್ನುವ ಅರಿವಾಗುತ್ತದೆ. ಸರ್ವಗತ, ಸರ್ವನಿಯಾಮಕ ಭಗವಂತ ನನ್ನೊಳಗೂ ಇದ್ದಾನೆ ಅವನೇ ವಿಶ್ವನಿಯಾಮಕನಾಗಿ ವಿಶ್ವದಲ್ಲಿ ತುಂಬಿದ್ದಾನೆ. ಜಗತ್ತನ್ನು ನಿಯಂತ್ರಿಸುವ ಅನಂತ ಶಕ್ತಿ ಅಣೋರ್ಣಿಯವಾಗಿ ನನ್ನ ಜೀವ ಸ್ವರೂಪದೊಳಗೂ  ತುಂಬಿದೆ ಎನ್ನುವ ಅನುಷ್ಠಾನದಿಂದ, ಸರ್ವ ಭೂತಗಳಲ್ಲಿ ಅಂತರ್ಯಾಮಿಯಾದ ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸಿ ಕರ್ಮ ಮಾಡಿದಾಗ ನಮಗೆ ಕರ್ಮ ಅಂಟಿಕೊಳ್ಳುವುದಿಲ್ಲ.

Monday, April 25, 2011

Bhagavad Gita Chapter-05 Shloka-01-03


ಅಧ್ಯಾಯ ಐದು

ನಾಲ್ಕನೆ ಅಧ್ಯಾಯದಲ್ಲಿ ಕೃಷ್ಣ ಕರ್ಮಯೋಗದ ಬಗ್ಗೆ ಹೇಳಿದ ಹಾಗು ಕೊನೆಯಲ್ಲಿ ಕರ್ಮಸನ್ಯಾಸದ ಬಗ್ಗೆಯೂ ಹೇಳಿದ. ಇಲ್ಲಿ ನಮಗೆ ಸ್ವಲ್ಪ ಗೊಂದಲವಾಗುತ್ತದೆ. ಇದನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಕರ್ಮಯೋಗ ಮತ್ತು ಕರ್ಮಸಂನ್ಯಾಸ ಅಂದರೆ ಏನು ಎಂದು ತಿಳಿಯಬೇಕು.  ಮೇಲ್ನೋಟಕ್ಕೆ ನಮಗೆ ಕರ್ಮಸಂನ್ಯಾಸ ಅಂದರೆ 'ಕರ್ಮತ್ಯಾಗ' ಎನ್ನುವಂತೆ ಕಾಣುತ್ತದೆ. ಆದರೆ ಕೃಷ್ಣ ನಾಲ್ಕನೇ ಅಧ್ಯಾಯದ ಕೊನೆಯಲ್ಲಿ "ಎದ್ದು ನಿಲ್ಲು- ಯುದ್ಧ ಮಾಡು" ಎಂದು ಅರ್ಜುನನನ್ನು ಕರ್ಮ ಮಾಡುವಂತೆ ಹುರಿದುಂಬಿಸಿದ್ದನ್ನು ನಾವು ಕಂಡಿದ್ದೇವೆ. ಇದರಿಂದ  ಕರ್ಮಸಂನ್ಯಾಸ ಅಂದರೆ  ಕರ್ಮತ್ಯಾಗವಲ್ಲ ಎನ್ನುವುದು ನಮಗೆ  ಸ್ಪಷ್ಟವಾಗುತ್ತದೆ. ಶಾಸ್ತ್ರೀಯವಾಗಿ ಕರ್ಮಸಂನ್ಯಾಸ ಎಂದರೆ  ದ್ವಂದ್ವಾತೀತವಾಗಿ, ಕರ್ಮಫಲದ ಬಯಕೆಯಿಲ್ಲದೆ-ಕರ್ಮ  ಮಾಡುವುದು. ಇಲ್ಲಿ ರಾಗ-ದ್ವೇಷಗಳಿಗೆ, ಕಾಮ-ಕ್ರೋಧಗಳಿಗೆ ಎಡೆಯಿಲ್ಲ. ಈ ಬಗ್ಗೆಯೂ ವಿಶೇಷವಾಗಿ ಕೃಷ್ಣ ಹಿಂದೆ ವಿವರಿಸಿದ್ದ.  ಆದ್ದರಿಂದ ಕರ್ಮಸಂನ್ಯಾಸ  ಎಂದರೆ ಕರ್ಮವನ್ನು ಬಿಡುವುದಲ್ಲ, ಕರ್ಮದಲ್ಲಿ ಕಾಮ ಕ್ರೋಧಗಳನ್ನು ಬಿಡುವುದು.  "ಕಾಮಕ್ರೋಧಗಳ  ಅತೀತನಾಗಿ ಯುದ್ಧಮಾಡು ಮತ್ತು ಜ್ಞಾನಯೋಗದ ದಾರಿಯಲ್ಲಿ ನಡೆ" ಎನ್ನುವುದು ಅರ್ಜುನನಿಗೆ ಕೃಷ್ಣನ ಸಂದೇಶ. ಆದರೆ ಕಾಮ-ಕ್ರೋಧಗಳ ಅತೀತನಾಗಿ ಜ್ಞಾನಮಾರ್ಗದಲ್ಲಿ ಯುದ್ಧ ಮಾಡುವುದು ಹೇಗೆ? ಇದನ್ನು   ಅರ್ಥ ಮಾಡಿಕೊಳ್ಳುವುದು ನಮಗೆ ಸ್ವಲ್ಪ ಕಷ್ಟ.  ಈ ಕುರಿತು ಅರ್ಜುನ ಕೃಷ್ಣನಲ್ಲಿ ವಿವರಣೆಯನ್ನು ನಮ್ಮ ನಿಮ್ಮೆಲ್ಲರ ಪರವಾಗಿ ಕೇಳುವುದರೊಂದಿಗೆ ಐದನೇ ಅಧ್ಯಾಯ ಆರಂಭವಾಗುತ್ತದೆ. ಈ ಅಧ್ಯಾಯದಲ್ಲಿ ಕರ್ಮಸಂನ್ಯಾಸದ ಬಗ್ಗೆ ವಿಶೇಷವಾದ ವಿವರಣೆಯನ್ನು ಕೃಷ್ಣ ನಮ್ಮ ಮುಂದಿಟ್ಟಿದ್ದಾನೆ.

ಅರ್ಜುನ ಉವಾಚ ।
ಸಂನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ ।
ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್       ॥೧॥

ಅರ್ಜುನಃ  ಉವಾಚ-ಅರ್ಜುನ ಕೇಳಿದನು:
ಸಂನ್ಯಾಸಂ ಕರ್ಮಣಾಮ್  ಕೃಷ್ಣ ಪುನಃ ಯೋಗಮ್  ಚ ಶಂಸಸಿ ।
ಯತ್  ಶ್ರೇಯಃ  ಏತಯೋಃ ಏಕಮ್ ತತ್ ಮೇ ಬ್ರೂಹಿ ಸುನಿಶ್ಚಿತಮ್ -- ಕೃಷ್ಣ, ಒಮ್ಮೆ ಕರ್ಮಸಂನ್ಯಾಸವನ್ನು ಹೊಗಳುತ್ತಿ; ಮತ್ತೊಮ್ಮೆ ಕರ್ಮಯೋಗವನ್ನು. ಇವೆರಡರಲ್ಲಿ ಯಾವುದು ಮಿಗಿಲು ಅದನ್ನು ನನಗೆ ಖಚಿತವಾಗಿ ಹೇಳು.

ಅರ್ಜುನ  ಕೇಳುತ್ತಾನೆ: "ಓ ಕೃಷ್ಣ, ನೀನು ಒಮ್ಮೆ ಹೋರಾಡು ಎನ್ನುತ್ತಿ, ಇನ್ನೊಮ್ಮೆ ಕರ್ಮಸಂನ್ಯಾಸ ಮಾಡು ಅನ್ನುತ್ತಿ . ಒಂದು ವೇಳೆ ಕರ್ಮಸಂನ್ಯಾಸ ಅಂದರೆ ಕರ್ಮತ್ಯಾಗವಾದರೆ  ಇದು ಒಂದಕ್ಕೊಂದು ವಿರುದ್ಧ.  ಇದರಲ್ಲಿ ಯಾವುದು ಶ್ರೇಯಸ್ಕರ ಎನ್ನುವುದನ್ನು ನಿಶ್ಚಿತವಾಗಿ ಹೇಳು" ಎಂದು ಅರ್ಜುನ ಕೃಷ್ಣನನ್ನು ಕೇಳುತ್ತಾನೆ. ಯುದ್ಧ ಮಾಡುವಾಗ ದ್ವಂದ್ವ ಅನ್ನುವುದು ಇದ್ದೇ ಇದೆ. ದ್ವಂದ್ವತ್ಯಾಗದಿಂದ ಯುದ್ಧ ಮಾಡುವುದು ಹೇಗೆ? ಕರ್ಮಸಂನ್ಯಾಸ ಮತ್ತು ಕರ್ಮಯೋಗ ಇವೆರಡೂ ಒಟ್ಟಿಗೆ ಹೇಗೆ ಸಾಧ್ಯ? ಯುದ್ಧವೆಂದಮೇಲೆ ರಾಗ-ದ್ವೇಷ ಇದ್ದೇ ಇರುತ್ತದೆ. ಈ ಕಾರಣದಿಂದ ಕೃಷ್ಣನ ಮಾತು ನಮಗೆ ಖಚಿತವಾಗಿ ಅರ್ಥವಾಗುವುದಿಲ್ಲ. ಅದಕ್ಕಾಗಿ ಅರ್ಜುನ ಕೃಷ್ಣನಲ್ಲಿ ವಿವರವನ್ನು ಕೇಳುತ್ತಿದ್ದಾನೆ.
ಇಲ್ಲಿ ಅರ್ಜುನ ತನ್ನ  ಪ್ರಶ್ನೆಯ ನಡುವೆ "ಕೃಷ್ಣ" ಎನ್ನುವ ಸಂಬೋಧನೆಯನ್ನು ಬಳಸಿದ್ದಾನೆ.  'ಕರ್ಷತಿ ಇತೀ ಕೃಷ್ಣಃ' ಎಲ್ಲರನ್ನೂ ತನ್ನೆಡೆಗೆ ಸೆಳೆಯುವ ಪಾದರಸಸಂಸಾರದಿಂದ ಎತ್ತರಕ್ಕೆ ಕೊಂಡೊಯ್ಯುವ ಕರ್ಷಣಶಕ್ತಿಯಾದ ಸೌಂದರ್ಯಮೂರ್ತಿ ಭಗವಂತ ಕೃಷ್ಣಃ. ಅಜ್ಞಾನದಿಂದ ಬರುವ  ಸಂಶಯವನ್ನು ಕರ್ಷಣೆಮಾಡಿ ಜ್ಞಾನದ ಮಡಿಲಿಗೆ ಸೆಳೆಯುವ ನೀನು ನನಗೆ ಖಚಿತವಾಗಿ ಯಾವುದು ಶ್ರೇಯಸ್ಸು ಎನ್ನುವುದನ್ನು ತಿಳಿಸು ಎನ್ನುವ ಭಾವ ಈ ಸಂಬೋಧನೆಯಲ್ಲಿದೆ.
ಭಗವಾನುವಾಚ ।
ಸಂನ್ಯಾಸಃ ಕರ್ಮಯೋಗಶ್ಚ ನಿಃಶ್ರೇಯಸಕರಾವುಭೌ ।
ತಯೋಸ್ತು ಕರ್ಮಸಂನ್ಯಾಸಾತ್  ಕರ್ಮಯೋಗೋ ವಿಶಿಷ್ಯತೇ ॥೨॥

ಭಗವಾನುವಾಚ- ಭಗವಂತ ಹೇಳಿದನು
ಸಂನ್ಯಾಸಃ ಕರ್ಮಯೋಗಃ ಚ ನಿಃಶ್ರೇಯಸ ಕರೌ ಉಭೌ ।
ತಯೋಃ ತು ಕರ್ಮ ಸಂನ್ಯಾಸಾತ್  ಕರ್ಮಯೋಗಃ  ವಿಶಿಷ್ಯತೇ -- ಕರ್ಮಸಂನ್ಯಾಸ ಮತ್ತು ಕರ್ಮಯೋಗ ಎರಡೂ ಒಳಿತಿನ ದಾರಿಗಳೆ. ಅವುಗಳಲ್ಲಿ ಕರ್ಮಸಂನ್ಯಾಸಕ್ಕಿಂತ ಕರ್ಮಯೋಗ ಮಿಗಿಲು.

ಜ್ಞೇಯಃ ಸ ನಿತ್ಯಸಂನ್ಯಾಸೀ ಯೋ ನ ದ್ವೇಷ್ಟಿ ನ ಕಾಂಕ್ಷತಿ  ।
ನಿರ್ದ್ವಂದ್ವೋ  ಹಿ ಮಹಾಬಾಹೋ ಸುಖಂ ಬಂಧಾತ್ ಪ್ರಮುಚ್ಯತೇ     ॥೩॥

ಜ್ಞೇಯಃ ಸ ನಿತ್ಯಸಂನ್ಯಾಸೀ ಯಃ  ನ ದ್ವೇಷ್ಟಿ ನ ಕಾಂಕ್ಷತಿ  ।
ನಿರ್ದ್ವಂದ್ವಃ  ಹಿ  ಮಹಾಬಾಹೋ ಸುಖಮ್  ಬಂಧಾತ್ ಪ್ರಮುಚ್ಯತೇ --ದ್ವೇಷಿಸದವನು, ಮತ್ತು ಬಯಸದವನು  ನಿಜವಾದ ಸಂನ್ಯಾಸಿಯೆಂದರಿಯಬೇಕು. ಮಹಾವೀರ, ಇಂಥ ದ್ವಂದ್ವಗಳನ್ನು ಗೆದ್ದವನು ಹಾಯಾಗಿ ಕರ್ಮ ಸೆರೆಯಿಂದ ಪಾರಾಗುತ್ತಾನೆ.

ಇಲ್ಲಿ ಅರ್ಜುನನ ಪ್ರಶ್ನೆಗೆ ಕೃಷ್ಣನ ಉತ್ತರ ಒಗಟಿನ ರೂಪದಲ್ಲಿದೆ. ಈ ಶ್ಲೋಕವನ್ನು ಎಚ್ಚರಿಕೆಯಿಂದ ಬಿಡಿಸಿ ಅರ್ಥೈಸಿಕೊಳ್ಳಬೇಕು.  ಇಲ್ಲಿ ಹೇಳುವ ಸಂನ್ಯಾಸ ಸಂನ್ಯಾಸಾಶ್ರಮವಲ್ಲ. ಯಾರು ರಾಗ ದ್ವೇಷವನ್ನು ದಾಟಿ ನಿಲ್ಲುತ್ತಾನೋ ಅವನು ಸಂನ್ಯಾಸಿ. ಸ+ಅಹಂ+ನ್ಯಾಸ-ಸಂನ್ಯಾಸ. '' ಅಂದರೆ ಸಂಪೂರ್ಣವಾದ, ಸಮೀಚೀನವಾದ, ದೋಷರಹಿತ ಮತ್ತು ಗುಣಪೂರ್ಣನಾದ ಭಗವಂತ. ಅವನಲ್ಲಿ ನಮ್ಮ ಅಹಂ(ರಾಗ ದ್ವೇಷ-ಅಹಂಕಾರ)ನ್ನು ನ್ಯಾಸ ಮಾಡುವುದು ಸಂನ್ಯಾಸ. ಕೃಷ್ಣ ಹೇಳುತ್ತಾನೆ: "ಕರ್ಮಯೋಗ  ಕರ್ಮಸಂನ್ಯಾಸಕ್ಕಿಂತ ಮಿಗಿಲು" ಎಂದು. ಏಕೆಂದರೆ ಇಲ್ಲಿ ಅರ್ಜುನ 'ನನಗೆ ಕೌರವರ ಮೇಲೆ ದ್ವೇಷವಿಲ್ಲ, ನಾವೇ ಗೆಲ್ಲಬೇಕು ಎನ್ನುವ ಬಯಕೆ  ಇಲ್ಲ, ನನಗೆ ಯಾವ ಫಲದ ಆಸೆಯೂ ಇಲ್ಲ' ಎಂದು ಯುದ್ಧ ಮಾಡದೇ ನಿರ್ಲಿಪ್ತನಾಗಿ-ನಿಷ್ಕ್ರೀಯನಾಗಿ ಕುಳಿತರೆ ಅದು ಕರ್ಮಸಂನ್ಯಾಸವಾಗುತ್ತದೆ. ಆದರೆ ಹೀಗೆ ಸುಮ್ಮನೆ ಕುಳಿತರೆ ಕರ್ತವ್ಯಕರ್ಮ(ಕರ್ಮಯೋಗ) ಮಾಡಿದಂತಾಗುವುದಿಲ್ಲ . ಇದರಿಂದಾಗಿ ಅಧರ್ಮಕ್ಕೆ ಜಯವಾಗುತ್ತದೆ. ಆದ್ದರಿಂದ ಕರ್ಮಸಂನ್ಯಾಸ ಮತ್ತು ಕರ್ಮಯೋಗ ಜೊತೆ-ಜೊತೆಯಾಗಿರಬೇಕು. ಕರ್ಮಯೋಗವಿಲ್ಲದ ಕರ್ಮಸಂನ್ಯಾಸ ಎಂದೂ ಶ್ರೇಯಸ್ಸನ್ನು ತರುವುದಿಲ್ಲ ಎನ್ನುವುದು ಕೃಷ್ಣನ ಉತ್ತರ.
ಸಂನ್ಯಾಸ  ಅನ್ನುವುದು ಅರ್ಥಪೂರ್ಣವಾಗಬೇಕಾದರೆ ಕಾಮ ಕ್ರೋಧಗಳ ತ್ಯಾಗದ ಜೊತೆಗೆ ಕ್ರಿಯೆ ಇರಬೇಕು. ಹೋರಾಡಬೇಕು-ಆದರೆ ರಾಗದ್ವೇಷದಿಂದಲ್ಲ. ಕ್ರಿಯೆ ಇಲ್ಲದೆ  ರಾಗ-ದ್ವೇಷ ತ್ಯಾಗಕ್ಕೆ ಅರ್ಥವಿಲ್ಲ. ಆದ್ದರಿಂದ ದ್ವಂದ್ವಾತೀತವಾಗಿ ಕರ್ಮ ಮಾಡಬೇಕು ಎನ್ನುವುದು ಕೃಷ್ಣನ ಸಂದೇಶ.
ನಮ್ಮ ಜೀವನವೇ ಒಂದು ಹೋರಾಟ. ಇಲ್ಲಿ ನಮ್ಮ ಕರ್ತವ್ಯಕರ್ಮದಿಂದ ದೂರ ಸರಿದು,  ರಾಗ-ದ್ವೇಷ, ಕಾಮ-ಕ್ರೋಧವನ್ನು  ಬಿಟ್ಟು, ನಿಷ್ಕ್ರೀಯನಾಗಿ,  ‘ಕರ್ಮಸಂನ್ಯಾಸವನ್ನು ಸಾಧಿಸಿದೆ’ ಎಂದುಕೊಂಡರೆ ನಮ್ಮ ಜೀವನ ವ್ಯರ್ಥ. ಅದರಿಂದ  ಎಂದೂ ಶ್ರೇಯಸ್ಸಿಲ್ಲ ಮತ್ತು  ಮೋಕ್ಷವಿಲ್ಲ. ರಾಗ-ದ್ವೇಷ ತ್ಯಾಗದ ಜೊತೆಗೆ, ಬದುಕು ಎನ್ನುವ ಜೀವನ ಸಂಗ್ರಾಮದಲ್ಲಿ  ನಮ್ಮ ಕರ್ತವ್ಯಕರ್ಮದ ಮುಖೇನ ಹೋರಾಟ ಮಾಡುವುದೇ  ನಿಜವಾದ ಜೀವನಧರ್ಮ. ಈ ರೀತಿ ದ್ವಂದ್ವಾತೀತ  ಬದುಕನ್ನು ಬಾಳುವವನು ಕರ್ಮದ ಸೆರೆಯಿಂದ ಪಾರಾಗುತ್ತಾನೆ.
 ಇಲ್ಲಿ ಕೃಷ್ಣ ಅರ್ಜುನನ್ನು ಮಹಾಬಾಹು ಎಂದು ಸಂಬೋಧಿಸಿದ್ದಾನೆ.  ಹಿಂದೆ ಹೇಳಿದಂತೆ ಮಹಾಬಾಹು  ಎಂದರೆ ಮಹಾವೀರ ಎನ್ನುವುದು ಮೇಲ್ನೋಟದ ಅರ್ಥ.ಇಲ್ಲಿ  ಈ  ವಿಶೇಷಣಕ್ಕೆ ವಿಶೇಷ ಅರ್ಥವಿದೆ. 'ಮಹಾಬಾ' ಅಂದರೆ ರಾಗ-ದ್ವೇಷ, ಮತ್ತು ಕಾಮನೆಗಳ ಮಡುವಿನಲ್ಲಿರುವವ. ಇಂತಹ ಮಹತ್ತರವಾದ ರಾಗ-ದ್ವೇಷಗಳನ್ನು ತ್ಯಾಗ ಮಾಡಿದವ ಮಹಾಬಾಹು. "ನಿನ್ನಲ್ಲಿ ಕರ್ಮಸಂನ್ಯಾಸವಿದೆ, ಅದರ ಜೊತೆಗೆ ಕರ್ಮಯೋಗ ಮಾಡಲು ಅರ್ಹತೆಯುಳ್ಳ ಮಹಾವೀರ ನೀನು"  ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ.  ನಮ್ಮ ಜೀವನ ಸಂಗ್ರಾಮದಲ್ಲಿ ರಾಗ-ದ್ವೇಷಗಳನ್ನು ಬಿಟ್ಟು ಕರ್ಮ ಮಾಡಬೇಕು. ಕರ್ಮಸಂನ್ಯಾಸ ಮತ್ತು ಕರ್ಮಯೋಗ ಎರಡೂ ಒಟ್ಟಿಗಿರಬೇಕು ಎನ್ನುವುದು ಮೂಲ ಸಂದೇಶ. ಅದಕ್ಕೆ ಹೊಂದಿಕೆಯಾಗುವಂತೆ ಇಲ್ಲಿ 'ಮಹಾಬಾಹು' ಎನ್ನುವ ವಿಶೇಷಣ ಬಳಕೆಯಾಗಿದೆ.

Sunday, April 24, 2011

Bhagavad Gita Kannada Chapter-04 Shloka 39-42


ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ  ಸಂಯತೇಂದ್ರಿಯಃ  ।
ಜ್ಞಾನಂ ಲಬ್ಧ್ವಾ ಪರಾಂ ಶಾಂತಿಮಚಿರೇಣಾಧಿಗಚ್ಛತಿ             ॥೩೯॥

ಶ್ರದ್ಧಾವಾನ್ ಲಭತೇ ಜ್ಞಾನಮ್ ತತ್  ಪರಃ  ಸಂಯತ ಇಂದ್ರಿಯಃ  ।
ಜ್ಞಾನಮ್  ಲಬ್ಧ್ವಾ ಪರಾಮ್  ಶಾಂತಿಮ ಆಚಿರೇಣ ಅಧಿಗಚ್ಛತಿ-ಇಂದ್ರಿಯಗಳನ್ನು ಹದ್ದಿನಲ್ಲಿಟ್ಟು, ಶ್ರದ್ಧೆಯಿಂದ ನನ್ನನ್ನೇ ಪರದೈವವೆಂದು  ನಂಬಿದವನು ತಿಳಿವನ್ನುಗಳಿಸಿ ಶೀಘ್ರವಾಗಿ  ಸಂತಸದ ಸೆಲೆಯಾದ ಮುಕ್ತಿಯನ್ನು ಪಡೆಯುತ್ತಾನೆ.

ನಮ್ಮಲ್ಲಿ ಅರಿವು ಮೂಡಬೇಕೆಂದರೆ ಬರಿಯ ಅಧ್ಯಯನ ಸಾಲದು. ಒಂದು ವಿಷಯ ನಮಗೆ ಮನವರಿಕೆಯಾಗಬೇಕಾದರೆ ಮೊದಲು ನಮಗೆ ಶ್ರದ್ಧೆ ಬೇಕು. ಇಲ್ಲಿ ಸಮರ್ಪಣಾ ಭಾವನೆ ಅತೀ ಮುಖ್ಯ.  ನಾನು ತಿಳಿದಿದ್ದೇ ದೊಡ್ಡದು ಅದಕ್ಕಿಂತ ದೊಡ್ಡದು  ಯಾವುದೂ ಇಲ್ಲ ಅನ್ನುವ ಅಹಂಕಾರವನ್ನು ಮೊದಲು ಬಿಡಬೇಕು. ನನಗೆ ಯಾವುದು ತಿಳಿದಿಲ್ಲವೋ ಅದು ಸತ್ಯವಾಗಿರಲು ಸಾಧ್ಯ ಎನ್ನುವ ಶ್ರದ್ಧೆ ಬೇಕು. ಪ್ರಪಂಚದ ಸತ್ಯ ನಮ್ಮ ನಂಬಿಕೆಯ ಮೇಲೆ ನಿಂತಿಲ್ಲ.  ಈ ಪ್ರಪಂಚದಲ್ಲಿ ನಮಗೆ ತಿಳಿದಿರುವುದು ಕೇವಲ ಅತೀ ಚಿಕ್ಕ ಅಂಶ. ನಮಗೆ ಗೊತ್ತಿಲ್ಲದೇ ಇರುವ ಸತ್ಯ ಇದೆ ಎಂದು ತಿಳಿಯುವುದೇ ಶ್ರದ್ಧೆ. ನಮ್ಮ ಬದುಕಿನ ಗುರಿ ಜ್ಞಾನ ಮತ್ತು  ಸತ್ಯದ ತಿಳುವಳಿಕೆಯಾಗಬೇಕು. ಜ್ಞಾನದ ತೃಷೆ ಜೊತೆಗೆ ಇಂದ್ರಿಯಗಳ ಚಾಪಲ್ಯಕ್ಕೆ ಹಿಡಿತ. ಹೀಗೆ ಇದ್ದಾಗ ಅದರಿಂದ ಮಾನಸ ಸಾಕ್ಷಾತ್ಕಾರ, ಆತ್ಮ ಸಾಕ್ಷಾತ್ಕಾರ-ಕೊನೆಗೆ ಪರಮಾತ್ಮನ ಸಾಕ್ಷಾತ್ಕಾರ. ಈ ನಡೆಯಿಂದ ಅಪರೋಕ್ಷ ಜ್ಞಾನ ಸಿದ್ಧಿಯಾಗುತ್ತದೆ  ಮತ್ತು ಇದರಿಂದ  ಸದಾ ಜ್ಞಾನಾನಂದಪೂರ್ಣನಾದ ಭಗವಂತನನ್ನು(ಮೋಕ್ಷವನ್ನು) ಪಡೆಯಲು ಸಾಧ್ಯ.                 

ಅಜ್ಞಶ್ಚಾಶ್ರದ್ದಧಾನಶ್ಚ ಸಂಶಯಾತ್ಮಾ ವಿನಶ್ಯತಿ           ।
ನಾಯಂ ಲೋಕೋSಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ॥೪೦॥

ಅಜ್ಞಃ ಚ ಅಶ್ರದ್ದಧಾನಃ ಚ  ಸಂಶಯ ಆತ್ಮಾ ವಿನಶ್ಯತಿ
ನ ಅಯಮ್  ಲೋಕಃ ಅಸ್ತಿ  ನ ಪರಃ ನ ಸುಖಮ್  ಸಂಶಯ ಆತ್ಮನಃ -ಅರಿವಿರದ, ನಂಬಿಕೆ ಕಳೆದುಕೊಂಡ ಇಬ್ಬಂದಿ ವಿನಾಶದತ್ತ ಸಾಗುತ್ತಾನೆ. ಇಬ್ಬಂದಿಗೆ ಇಹವಿಲ್ಲ; ಪರವಿಲ್ಲ; ನೆಮ್ಮದಿಯೂ ಇಲ್ಲ.

ಜ್ಞಾನವಿಲ್ಲದ, ಶ್ರದ್ಧೆ ಇಲ್ಲದ ಅಜ್ಞಾನಿಗಳು ನಿರಂತರ ಸಂಶಯದಲ್ಲೇ ಬದುಕುತ್ತಾರೆ.  ಜ್ಞಾನ ಮತ್ತು ಶ್ರದ್ಧೆ ಇಲ್ಲದಾಗ ಅಲ್ಲಿ ಸಂಶಯ ಬೆಳೆಯಲಾರಂಭಿಸುತ್ತದೆ. ಆ ಸಂಶಯ ಮನಸ್ಸನ್ನು ಆಕ್ರಮಿಸಿ ನಂತರ ಚಿತ್ತವನ್ನು ತಲುಪುತ್ತದೆ.  ಬುದ್ಧಿಗೆ ಬಂದ ಸಂಶಯಕ್ಕೆ ಪರಿಹಾರವಿಲ್ಲ. ಅದು ನಮ್ಮನ್ನು ಅಧಃಪಾತಕ್ಕೆ ಕೊಂಡೊಯ್ಯುತ್ತದೆ. ಇದರಿಂದ ಅಂತವರಿಗೆ ಇಹವಿಲ್ಲ, ಪರವಿಲ್ಲ, ಎಂದೆಂದೂ ನೆಮ್ಮದಿ ಇಲ್ಲ.      

ಯೋಗಸಂನ್ಯಸ್ತಕರ್ಮಾಣಂ ಜ್ಞಾನಸಂಛಿನ್ನಸಂಶಯಮ್           ।
ಆತ್ಮವಂತಂ ನ ಕರ್ಮಾಣಿ  ನಿಬಧ್ನಂತಿ  ಧನಂಜಯ             ॥೪೧॥

ಯೋಗ ಸಂನ್ಯಸ್ತ ಕರ್ಮಾಣಮ್  ಜ್ಞಾನ ಸಂಛಿನ್ನ ಸಂಶಯಮ್
ಆತ್ಮವಂತಮ್  ನ ಕರ್ಮಾಣಿ  ನಿಬಧ್ನಂತಿ  ಧನಂಜಯ- ಧನಂಜಯ, ಸಾಧನೆಯಿಂದ ಕರ್ಮಫಲದ ನಂಟು ತೊರೆದ, ಅರಿವಿನಿಂದ ಶಂಕೆಗಳನ್ನು ಕಳೆದುಕೊಂಡ ಭಗವದ್ಭಕ್ತನನ್ನು ಕರ್ಮಗಳು ಕಟ್ಟಿ ಹಾಕುವುದಿಲ್ಲ.

ಜೀವನದಲ್ಲಿ ಕರ್ಮ ಮಾಡು, ಕರ್ಮ ಮಾಡುತ್ತಾ ಕರ್ಮ ಸನ್ಯಾಸ ಮಾಡು ಎನ್ನುತ್ತಾನೆ ಕೃಷ್ಣ. ಇಲ್ಲಿ ಕರ್ಮ ಸನ್ಯಾಸ ಅಂದರೆ ಕರ್ಮ ತ್ಯಾಗವಲ್ಲ. 'ಈ ಕರ್ಮ ಭಗವಂತನಿಗೆ ಸೇರಿದ್ದು ಎಂದು ಭಗವಂತನಲ್ಲಿ ಕರ್ಮವನ್ನು ಅರ್ಪಿಸುವುದು'- ಕರ್ಮ ಸನ್ಯಾಸ(ಈ ಬಗ್ಗೆ ಮುಂದಿನ ಅಧ್ಯಾಯದಲ್ಲಿ ಹೆಚ್ಚಿನ ವಿವರಣೆಯನ್ನು ಕಾಣಬಹುದು). ಕರ್ಮಫಲದ ಬಗ್ಗೆ ಆಸೆ ಆಕಾಕ್ಷೆಗಳನ್ನು  ಬಿಟ್ಟು ಎಲ್ಲವನ್ನು ಸಮದೃಷ್ಟಿಯಿಂದ ಕಾಣುತ್ತಾ, ನಿರ್ವೀಕಾರನಾಗಿ ನಿರಂತರ ಕರ್ಮ ಮಾಡುವುದು ಕರ್ಮಸನ್ಯಾಸ. ಕರ್ಮವನ್ನು ಭಗವಂತನಲ್ಲಿ ಅರ್ಪಿಸಿ, ಜ್ಞಾನದಿಂದ ಸಂಶಯವನ್ನು ಪರಿಹರಿಸಿಕೊಂಡು, ವಿವೇಕಿಯಾಗಿ ಚಿತ್ತವನ್ನು ಜಾಗೃತಿಗೊಳಿಸಿ, ಆತ್ಮವಂತನಾಗಿ ಬದುಕುವುದನ್ನು ಕಲಿತಾಗ ಯಾವ ಕರ್ಮವೂ ಎಂದೂ ನಮಗೆ  ಬಂಧಕವಾಗುವುದಿಲ್ಲ. "ಯುದ್ಧದಲ್ಲಿ ಶತ್ರುಗಳನ್ನು ಗೆದ್ದು ಧನವನ್ನು ಗೆದ್ದ ನೀನುಜ್ಞಾನಧನವನ್ನು ಗೆದ್ದ ಧನಂಜಯ, ನಿನ್ನನ್ನು ಕರ್ಮ ಬಂಧಿಸದು" ಎನ್ನುತ್ತಾನೆ ಕೃಷ್ಣ.

ತಸ್ಮಾದಜ್ಞಾನಸಂಭೂತಂ ಹೃತ್ ಸ್ಥಂ ಜ್ಞಾನಾಸಿನಾSSತ್ಮನಃ ।
ಛಿತ್ವೈನಂ ಸಂಶಯಂ ಯೋಗಮಾತಿಷ್ಠೋತ್ತಿಷ್ಠ ಭಾರತ         ॥೪೨॥

ತಸ್ಮಾತ್ ಅಜ್ಞಾನ ಸಂಭೂತಮ್  ಹೃತ್ ಸ್ಥಮ್   ಜ್ಞಾನ ಅಸಿನಾ ಆತ್ಮನಃ ।
ಛಿತ್ವೈನಮ್  ಸಂಶಯಮ್  ಯೋಗಮ್ ಆತಿಷ್ಠ ಉತ್ತಿಷ್ಠ ಭಾರತ-ಆದ್ದರಿಂದ, ಓ ಭಾರತ, ಅಜ್ಞಾನದಿಂದ ಹುಟ್ಟಿ ಬಗೆಯೊಳಹೊಕ್ಕು ನಿಂತ ನಿನ್ನ ಈ ಸಂದೇಹವನ್ನು ತಿಳಿವಿನ ಕತ್ತಿಯಿಂದ ಕತ್ತರಿಸಿ ಜ್ಞಾನದ ದಾರಿಯಲ್ಲಿ ನಡೆ; ಎದ್ದು ನಿಲ್ಲು.

"ಆದ್ದರಿಂದ ಎದ್ದು ನಿಲ್ಲು, ಭರತ ಚಕ್ರವರ್ತಿಯಂತಹ ಮಹಾ ಪುರುಷರು ಹುಟ್ಟಿ ಬಂದ ವಂಶದವನಾದ ನೀನು ಜ್ಞಾನ ಸ್ವರೂಪನಾದ ಭಗವಂತನ ಭಕ್ತಿಯಲ್ಲಿ ನಿರತನಾದ ಜ್ಞಾನಿ(ಭಾರತ)ನಿನ್ನ ಮನಸ್ಸಿನಲ್ಲಿ ಕುಳಿತಿರುವ ಸಂಶಯವನ್ನು ಭಗವಂತನೆನ್ನುವ  ಜ್ಞಾನ ಕತ್ತಿಯಿಂದ ಕಡಿದು ಹಾಕು. ಅನ್ಯಾಯದ ವಿರುದ್ಧ ಹೋರಾಟ ಭಗವಂತನ ಪೂಜೆ ಎನ್ನುವ ಧೀಕ್ಷೆ ತೊಟ್ಟು, ಸತ್ಯದ, ಪ್ರಾಮಾಣಿಕತೆಯ ಬದುಕನ್ನು ಬದುಕುವುದಕ್ಕೊಸ್ಕರ ಪುಣ್ಯದ ಸಾಧನೆಯಲ್ಲಿ ತೊಡಗು"  ಎನ್ನುತ್ತಾನೆ ಕೃಷ್ಣ.               

ಇತಿ ಚತುರ್ಥೋSಧ್ಯಾಯಃ
ನಾಲ್ಕನೆಯ ಅಧ್ಯಾಯ ಮುಗಿಯಿತು.

*******

Bhagavad Gita Kannada Chapter-04 Shloka 34-38


ತದ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ    ।
ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ               ॥೩೪॥

ಯಜ್ ಜ್ಞಾತ್ವಾ ನ ಪುನರ್ಮೋಹಮೇವಂ ಯಾಸ್ಯಸಿ ಪಾಂಡವ    ।
ಯೇನ ಭೂತಾನ್ಯಶೇಷೇಣ ದ್ರಕ್ಷ್ಯಸ್ಯಾSತ್ಮನ್ಯಥೋ ಮಯಿ     ॥೩೫॥

ತತ್  ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ |
ಉಪದೇಕ್ಷ್ಯಂತಿ ತೇ ಜ್ಞಾನಮ್  ಜ್ಞಾನಿನಃ ತತ್ತ್ವದರ್ಶಿನಃ  ||
ಯತ್  ಜ್ಞಾತ್ವಾ ನ ಪುನಃ ಮೋಹಮ್ ಏವಮ್ ಯಾಸ್ಯಸಿ ಪಾಂಡವ |
ಯೇನ ಭೂತಾನಿ ಅಶೇಷೇಣ ದ್ರಕ್ಷ್ಯಸಿ ಆತ್ಮನಿ ಅಥ ಉ ಮಯಿ-      ಪಾಂಡವ, ಯಾವುದನ್ನು ತಿಳಿದಾಗ ನೀನು ಮತ್ತೆ ಹೀಗೆ ಮೋಹಗೊಳ್ಳುವುದಿಲ್ಲ; ಯಾವುದರಿಂದ ಮೋಹವಳಿದದ್ದರಿಂದ ಎಲ್ಲಾ ಜೀವಿಗಳನ್ನು ಅಂತರ್ಯಾಮಿಯಾದ [ಎಲ್ಲೆಲ್ಲೂ ಇರುವ] ನನ್ನಲ್ಲಿ ಕಾಣಬಲ್ಲೆ, ಅಂಥ ತಿಳಿವನ್ನು ನಿಜ ಕಂಡು  ತಿಳಿದವರು ನಿನಗೆ ತಿಳಿಹೇಳುತ್ತಾರೆ. ಕಾಲಿಗೆರಗಿ, ಪರಿಪರಿಯಿಂದ ಕೇಳಿ, ಸೇವೆಗೈದು ಅದನ್ನು ತಿಳಿದುಕೋ.

ಜ್ಞಾನವನ್ನು ಗಳಿಸಬೇಕಾದರೆ "ನೀನು ಜ್ಞಾನಿಗಳ ಬೆನ್ನುಹತ್ತಬೇಕು; ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡ ತತ್ವದರ್ಶಿಗಳಿಂದ ಜ್ಞಾನವನ್ನು ಪಡೆ ಎನ್ನುತ್ತಾನೆ ಕೃಷ್ಣ. ಜ್ಞಾನ ಎನ್ನುವುದು ಕೇವಲ ಪುಸ್ತಕವನ್ನು ಓದುವುದರಿಂದ ಬರುವುದಲ್ಲ. ಅದು ನಮಗೆ ಸಾಕ್ಷಾತ್ಕಾರವಾಗಬೇಕು. "Truth is an intuitional flash, it is  not Intellectual". ಸತ್ಯ  ಎನ್ನುವುದು ನಮಗೆ ಸ್ಪೂರಣವಾಗಬೇಕು. ಎಲ್ಲಾ ವೇದ ಮಂತ್ರಗಳೂ ಋಷಿಗಳಿಗೆ ಅಂತರಂಗದಲ್ಲಿ ಸ್ಪೂರಣವಾಗಿರುವುದು(intuitional composition). ನ್ಯೂಟನ್ ಗೆ ಗುರುತ್ವಾಕರ್ಷಣ ಶಕ್ತಿಯ ವಿಚಾರ ಹೊಳೆದಂತೆ. ಈ ಕಾರಣಕ್ಕಾಗಿ ಮೊದಲು ನಾವು ಸತ್ಯಕ್ಕೆ ಶರಣಾಗಬೇಕು; ಸತ್ಯವನ್ನು ಕಂಡ ತತ್ವಜ್ಞಾನಿಗಳ ಬೆನ್ನುಹತ್ತಬೇಕು.
ಸಾಮಾನ್ಯವಾಗಿ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನಿಗಳು ಜ್ಞಾನವನ್ನು ಯೋಗ್ಯರಲ್ಲದವರಿಗೆ ಎಂದೂ ಬೋಧಿಸುವುದಿಲ್ಲ. ಈ ಕಾರಣಕ್ಕಾಗಿ ಕೃಷ್ಣ ಹೇಳುತ್ತಾನೆ: "ತತ್ವದರ್ಶಿಗಳನ್ನು ಕಂಡರೆ ಬಿಡಬೇಡ, ಅವರ ಬೆನ್ನು ಹತ್ತು, ಅವರನ್ನು ಒಲಿಸಿಕೊ, ಅವರ ಮುಂದೆ ನೀನು ಯೋಗ್ಯ ಎಂದು ರುಜುವಾತು ಪಡಿಸು. ನಿನ್ನ ಅನನ್ಯ  ಬಯಕೆ ಅವರಿಗೆ ಮನವರಿಕೆಯಾಗುವಂತೆ ಮಾಡು, ಅವರಿಗೆ ಶರಣಾಗು"  ಎಂದು. ಇಲ್ಲಿ 'ಪ್ರಣಿಪಾತ' ಅಂದರೆ ಎಂಟು ಅಂಗಗಳ ನಮಸ್ಕಾರ. ತಲೆ, ಎದೆ, ಕೈ, ಕಾಲು ಎಲ್ಲವನ್ನು ನೆಲಕ್ಕೆ ತಾಗಿಸಿ, ಭಕ್ತಿಯ ದೃಷ್ಟಿಯಿಂದ, ಸ್ತೋತ್ರ(ವಚನ) ಮುಖೇನ, ಮನಸ್ಸಿನಲ್ಲಿ ಅಪಾರ ಗೌರವವಿಟ್ಟು ಮಾಡುವ ನಮಸ್ಕಾರ-'ಅಷ್ಟಾಂಗ ನಮನ'. ಹೀಗೆ ಶರಣಾಗಿ "ಕೆದಕಿ ಕೆದಕಿ, ಪರಿಪರಿಯಾಗಿ  ಕೇಳಿ ತಿಳಿದುಕು" ಎನ್ನುತ್ತಾನೆ ಕೃಷ್ಣ. 'ತತ್ವದರ್ಶಿಗಳ ಸೇವೆಮಾಡಿ ಅವರಿಂದ ಜ್ಞಾನವನ್ನು ಗಳಿಸು, ಅದರಿಂದ ಕರ್ಮ ಮಾಡು' ಎನ್ನುವುದು ಕೃಷ್ಣ  ಅರ್ಜುನನ ಮೂಲಕ ನಮಗೆ ಕೊಟ್ಟ ಸಂದೇಶ.
ಒಮ್ಮೆ ತತ್ವದರ್ಶಿಗಳಿಂದ ಜ್ಞಾನವನ್ನು ಪಡೆದರೆ ಮುಂದೆ ಮೋಹಕ್ಕೆ ಅವಕಾಶವಿಲ್ಲ. ಇಲ್ಲಿ ಅರ್ಜುನನನ್ನು ಕಾಡುತ್ತಿರುವುದು ಜ್ಞಾನವನ್ನು ಮುಚ್ಚಿರುವ  ಮೋಹದ ಪರದೆ. ಅದಕ್ಕಾಗಿ ಕೃಷ್ಣ ಅರ್ಜುನನನ್ನು 'ಪಾಂಡವ' ಎಂದು ಸಂಬೋಧಿಸುತ್ತಾನೆ.  ಇಲ್ಲಿ 'ಪಂಡಾ' ಎಂದರೆ ಜ್ಞಾನ (ಉದಾ:ಪಂಡಾ ಉಳ್ಳವ ಪಂಡಿತ)ಪಾಂಡವ ಎಂದರೆ ಜ್ಞಾನರಾಶಿಯನ್ನು ಪಡೆದವ. ಇನ್ನು ಪಾಂಡು ಎಂದರೆ 'ಬಿಳಿ ಬಣ್ಣ' ಅದು ಸಾತ್ವಿಕತೆಯ ಸಂಕೇತ. 'ನೀನು ಸ್ವಯಂ ಜ್ಞಾನಿ ಹಾಗು ಸಾತ್ವಿಕ' ಎಂದು ಸೂಚಿಸಿ ಇಲ್ಲಿ  ಈ ಸಂಬೋಧನೆ.
ಒಮ್ಮೆ ಸತ್ಯದ ಅರಿವು ಬಂದರೆ ಅದರಿಂದ ಮೋಹದ ಪಾಶ ಕಳಚಿಹೋಗುತ್ತದೆ. ಅದು ಪುನಃ ಬರುವ ಸಂಭವವಿಲ್ಲ. ಈ ಸ್ಥಿತಿಯಲ್ಲಿ ಸಮಸ್ತ ಜೀವಜಾತವೂ ಆತ್ಮನಲ್ಲಿ (ಭಗವಂತನಲ್ಲಿ) ಆಶ್ರಿತವಾಗಿದೆ, ಎಲ್ಲವುದಕ್ಕೂ ನಿಯಾಮಕ ಶಕ್ತಿ ಭಗವಂತ ಎನ್ನುವ ಪ್ರಜ್ಞೆ ಜಾಗೃತವಾಗುತ್ತದೆ. ಇದರಿಂದ ಎಲ್ಲ ಗೊಂದಲವೂ ಮರೆಯಾಗುತ್ತದೆ. ಸ್ವಾರ್ಥ, ದುಃಖ, ಅಸೂಹೆ, ಎಲ್ಲವೂ ಹೊರಟು ಹೋಗಿ ಸ್ಥಿತಪ್ರಜ್ಞೆ ಮೂಡುತ್ತದೆ. ಭಗವಂತ ಅಣು ಒಳಗೆ ಅಣುವಾಗಿ, ಎಲ್ಲರೊಳಗೂ ಬಿಂಬ ರೂಪನಾಗಿ ತುಂಬಿದ್ದಾನೆ ಹಾಗು ಆತ ಮಹತ್ತಿನಲ್ಲಿ ಮಹತ್ತಾಗಿರುವ ಸರ್ವಗತ.  ಅವನ ಇಚ್ಛೆಯಂತೇ ಎಲ್ಲವೂ ನಡೆಯುತ್ತದೆ ಎನ್ನುವ ಸತ್ಯ ತಿಳಿಯುತ್ತದೆ. ಭಗವಂತನಲ್ಲಿ ತನ್ನನ್ನು ತಾನು ಒಪ್ಪಿಸಿಕೊಂಡವನಿಗೆ ಜೀವನದಲ್ಲಿ ಎಂದೂ ಭಯವಿಲ್ಲ.

ಜ್ಞಾನದಿಂದ ಕರ್ಮ ಮಾಡಬೇಕು, ತತ್ವ ಜ್ಞಾನಿಗಳಿಂದ  ಜ್ಞಾನ ಪಡೆಯಬೇಕು, ಅದರಿಂದ ಮೋಕ್ಷ ಸಾಧ್ಯ ಎನ್ನುವ ವಿಚಾರ ತಿಳಿಯಿತು. ಆದರೆ ಈ ವಿಷಯ ತಿಳಿಯುವ ಮೊದಲು ಸಾಕಷ್ಟು ಪಾಪ ಕರ್ಮಗಳನ್ನು ಮಾಡಿದ ಪಾಪಿಗಳ ಗತಿ ಏನು? ಇದಕ್ಕಾಗಿ ಭಯ ಪಡಬೇಕಾಗಿಲ್ಲ ಎನ್ನುತ್ತಾನೆ ಕೃಷ್ಣ. ಈ ವಿಚಾರವಾಗಿ ಕೃಷ್ಣನ  ಭರವಸೆಯನ್ನು ಮುಂದಿನ ಶ್ಲೋಕದಲ್ಲಿ ನೋಡೋಣ.                           

ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ    ।
ಸರ್ವಂ ಜ್ಞಾನಪ್ಲವೇನೈವ ವೃಜಿನಂ ಸಂತರಿಷ್ಯಸಿ                  ॥೩೬॥

ಅಪಿ ಚೇತ್  ಅಸಿ ಪಾಪೇಭ್ಯಃ ಸರ್ವೇಭ್ಯಃ ಪಾಪ ಕೃತ್ ತಮಃ
ಸರ್ವಮ್  ಜ್ಞಾನ ಪ್ಲವೇನ ಏವ ವೃಜಿನಮ್  ಸಂತರಿಷ್ಯಸಿ-ನೀನು ಎಲ್ಲಾ ಪಾಪಿಗಳಿಗಿಂತಲೂ ಹಿರಿಯ ಪಾಪಿಯಾಗಿದ್ದರೂ ಸರಿಯೇ, ಎಲ್ಲ ಪಾತಕಗಳನ್ನೂ  ತಿಳಿವಿನ ದೋಣಿಯಿಂದ ದಾಟಬಲ್ಲೆ.

"ನೀನು ನಿನ್ನ ಕಾಲದಲ್ಲಿನ ಸರ್ವಶ್ರೇಷ್ಠ ಪಾಪಿಯಾಗಿದ್ದರೂ ಕೂಡಾ, ಒಮ್ಮೆ ನಿನಗೆ ಭಗವಂತನ ಅರಿವು ಮೂಡಿದರೆ ನೀನು ಗೆದ್ದಂತೆ" ಎನ್ನುತ್ತಾನೆ ಕೃಷ್ಣ. ಏಕೆಂದರೆ ತಿಳುವಳಿಕೆ ಬಂದ ಮೇಲೆ  ಜ್ಞಾನದ ಮಾರ್ಗದಲ್ಲಿ ಸಾಗಿದರೆ ಹಿಂದಿನ ಯಾವ ಪಾಪವೂ ನಿಲ್ಲುವುದಿಲ್ಲ. ಜ್ಞಾನವೆನ್ನುವುದು ಪಾಪದ ಕಡಲಿನಲ್ಲಿ ದೋಣಿಯಂತೆ. ಅದು  ನಮ್ಮನ್ನು ದಡ ಸೇರಿಸಬಲ್ಲದು.  ಪಾಪದ ಕಡಲನ್ನು ದಾಟಲು ಇರುವ ಒಂದೇ ಒಂದು ಸಾಧನ ಜ್ಞಾನ. ಇಂತಹ ದೊಡ್ಡ ಭರವಸೆಯನ್ನು ಕೃಷ್ಣ ಕೊಟ್ಟಿದ್ದಾನೆ. ಆದ್ದರಿಂದ ನಾವೆಲ್ಲರೂ ಇಂದೇ ಈ ಕ್ಷಣದಿಂದ ಜ್ಞಾನ ಮಾರ್ಗದಲ್ಲಿ ಸಾಗುವ ಸಂಕಲ್ಪ ತೊಟ್ಟು ಮುಂದುವರಿಯೋಣ- ಏಕೆಂದರೆ ನಾಳೆ ಎಂದರೆ ಆ ನಾಳೆ ನಮ್ಮ ಪಾಲಿಗೆ ಬಾರದೆ ಇರಬಹುದು!  Yesterday was history, tomorrow is a mystery, today is God's gift, that's why we call it 'the present' .

ಜ್ಞಾನ ಮಾರ್ಗವನ್ನು ಹಿಡಿದ ಒಬ್ಬ ಪಾಪಿಯ ಪಾಪಕರ್ಮವೇನಾಗುತ್ತದೆ ಎನ್ನುವುದಕ್ಕೆ ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಣೆಯನ್ನು ಕೊಟ್ಟಿದ್ದಾನೆ.

ಯಥೈಧಾಂಸಿ ಸಮಿದ್ಧೋSಗ್ನಿರ್ಭಸ್ಮಸಾತ್  ಕುರುತೇ ಅರ್ಜುನ    ।
ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ        ॥೩೭॥

ಯಥಾ ಏಧಾಂಸಿ ಸಮಿದ್ಧಃ ಅಗ್ನಿಃ ಭಸ್ಮ ಸಾತ್  ಕುರುತೇ ಅರ್ಜುನ    ।
ಜ್ಞಾನಾಗ್ನಿಃ ಸರ್ವ ಕರ್ಮಾಣಿ ಭಸ್ಮ ಸಾತ್ ಕುರುತೇ ತಥಾ- ಅರ್ಜನ, ಉರಿಯುವ ಬೆಂಕಿ ಉರುವಲನ್ನುಸುಟ್ಟುಬಿಡುವ ಹಾಗೆ ಅರಿವಿನ ಬೆಂಕಿ ಎಲ್ಲ ಕರ್ಮಗಳನ್ನೂ ಸುಟ್ಟುಬಿಡುತ್ತದೆ.

ಜ್ಞಾನ ಎನ್ನುವುದು ಸದಾ ಪ್ರಜ್ವಲಿಸುವ ಬೆಂಕಿ. ಅದಕ್ಕಿಂತ ಹೆಚ್ಚು ಶಕ್ತಿ ಶಾಲಿಯಾದ ಬೆಂಕಿ ಇನ್ನೊಂದಿಲ್ಲ.  ಹೇಗೆ ಉರಿಯುವ ಬೆಂಕಿ ಕಟ್ಟಿಗೆಯನ್ನು ಸುಟ್ಟುಬಿಡುತ್ತದೋ, ಹಾಗೆ ಜ್ಞಾನದ ಬೆಂಕಿ ಎಲ್ಲ ಪಾಪ ಕರ್ಮವನ್ನು ಸುಟ್ಟುಬಿಡುತ್ತದೆ. ಭಾಗವತದಲ್ಲಿ ಹೇಳುವಂತೆ ಆಧ್ಯಾತ್ಮಿಕವಾಗಿ ಬೆಂಕಿ ಸತ್ವ ಗುಣದ ಪ್ರತೀಕ. ಏಕೆಂದರೆ ಅದು ಬೆಳಕು ಕೊಡುವ ಹಾಗು ಸದಾ ಊರ್ಧ್ವ ಮುಖವಾಗಿರುವ ಶಕ್ತಿ. ಅದೇ ರೀತಿ ಕಟ್ಟಿಗೆ ಸದಾ ಕೆಳಕ್ಕೆಳೆಯುವ ತಮೋಗುಣದ  ಪ್ರತೀಕ.  ಬೆಂಕಿ ಕಟ್ಟಿಗೆಯನ್ನು ಸುಟ್ಟಂತೆ ಒಬ್ಬ ಸಾಧಕನಲ್ಲಿರುವ ಜ್ಞಾನ ತಮಸ್ಸನ್ನು ಸುಟ್ಟುಬಿಡುತ್ತದೆ. ಇಲ್ಲಿ ಕೃಷ್ಣ ಅರ್ಜುನ' ಎಂದು ಸಂಬೋಧಿಸಿದ್ದಾನೆ. ಅರ್ಜುನ ಎಂದರೆ ಅರ್ಜನ ಮಾಡಿದವ, ಜ್ಞಾನವೆಂಬ ಬೆಂಕಿ ಉಳ್ಳವ.  ಈ ಸಂಬೋಧನೆಯಿಂದ ಕೃಷ್ಣ ಅರ್ಜುನನ ಜ್ಞಾನಕ್ಕೆ  ಆವರಿಸಿರುವ ಮೋಹದ ಪರದೆಯನ್ನು ಸರಿಸುತ್ತಿದ್ದಾನೆ.

ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ            ।
ತತ್ ಸ್ವಯಂ ಯೋಗಸಂಸಿದ್ಧಃ ಕಾಲೇನಾSತ್ಮನಿ ವಿಂದತಿ     ॥೩೮॥

ನ ಹಿ ಜ್ಞಾನೇನ ಸದೃಶಮ್  ಪವಿತ್ರಮ್ ಇಹ  ವಿದ್ಯತೇ        
ತತ್ ಸ್ವಯಮ್   ಯೋಗ ಸಂಸಿದ್ಧಃ ಕಾಲೇನ ಆತ್ಮನಿ ವಿಂದತಿ- ತಿಳಿವಿಗೆ ಸಾಟಿಯಾದ ಪಾವನವಾದ ವಸ್ತು ಇಲ್ಲಿ ಇನ್ನೊಂದಿಲ್ಲ. ಸಾಧನೆಯಿಂದ ಪಳಗಿದವನು  ತಕ್ಕ ಕಾಲದಲ್ಲಿ ಅದನ್ನು ತಾನೆ ತನ್ನಲ್ಲಿ ಪಡೆಯುತ್ತಾನೆ.

ಜ್ಞಾನ ಎನ್ನುವುದು ಮಹಾಪವಿತ್ರ. ಅದಕ್ಕೆ ಸಾಟಿಯಾದ ಇನ್ನೊಂದು ವಸ್ತು ಈ ಪ್ರಪಂಚದಲ್ಲಿಲ್ಲ. ಏಕೆಂದರೆ ಜ್ಞಾನವೆಂದರೆ  ಭಗವಂತ. ಆದ್ದರಿಂದ "ಜ್ಞಾನ ಮಾರ್ಗವನ್ನು ಹಿಡಿ, ಕಾಲ ಪರಿಪಕ್ವವಾದಾಗ ನೀನು ಸಿದ್ಧಿಯನ್ನು ಪಡೆದೇ ಪಡೆಯುತ್ತಿ" ಎನ್ನುವುದು ಕೃಷ್ಣನ  ಭರವಸೆ. ಕೆಲವೊಮ್ಮೆ ಸಾಧನೆಯ ಪಥದಲ್ಲಿ ಸಿದ್ಧಿಯನ್ನು ಪಡೆಯಲು ಕೆಲವು ಜನ್ಮಗಳೇ ಬೇಕಾಗಬಹುದು. ಆದರೆ ಭಗವಂತನ ಭರವಸೆಯನ್ನು ನಂಬಿ ಆತ್ಮವಿಶ್ವಾಸದಿಂದ ಮುನ್ನೆಡೆದವನು ಸಿದ್ಧಿಯನ್ನು ಪಡೆಯುತ್ತಾನೆ.

Bhagavad Gita Kannada Chapter-04 Shloka 33


ಶ್ರೇಯಾನ್ ದ್ರವ್ಯಮಯಾದ್ ಯಜ್ಞಾಜ್ ಜ್ಞಾನಯಜ್ಞಃ ಪರಂತಪ   ।
ಸರ್ವಂ ಕರ್ಮಾ[S]ಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ  ॥೩೩॥

ಶ್ರೇಯಾನ್ ದ್ರವ್ಯ ಮಯಾತ್  ಯಜ್ಞಾತ್  ಜ್ಞಾನಯಜ್ಞಃ ಪರಂತಪ |
ಸರ್ವಮ್  ಕರ್ಮಾ ಅ[ಆ]ಖಿಲಮ್  ಪಾರ್ಥ ಜ್ಞಾನೇ ಪರಿಸಮಾಪ್ಯತೇ- ಓ ಪರಂತಪ, ಸೊತ್ತುಗಳನ್ನು ಹೊಮಿಸುವ ಬಾಹ್ಯ ಯಜ್ಞಕ್ಕಿಂತ ಜ್ಞಾನ ಯಜ್ಞ ಮಿಗಿಲು. ಓ ಪಾರ್ಥ, ಸಾಂಗವಾದ [ತಿಳಿವಿನೆದುರು ತೀರ ಸಣ್ಣದಾದ] ಎಲ್ಲಾ ಕರ್ಮವೂ ತಿಳಿವಿನಲ್ಲಿ ಪೂರ್ತಿಗೊಳ್ಳುತ್ತದೆ.

ವಾಸ್ತವಿಕವಾಗಿ ಪೂರ್ಣವಾದ ಬರಿಯ ಬಾಹ್ಯಯಜ್ಞ ಮತ್ತು ಬರಿಯ ಅಂತರಂಗ ಯಜ್ಞ ಅನ್ನುವುದೊಂದಿಲ್ಲ. ನಾವು ಮಾಡುವ ಬಾಹ್ಯಯಜ್ಞದ ಹಿಂದೆ ಅರಿವಿದೆ. ಅಂತರಂಗ ಯಜ್ಞದ ಜೊತೆಗೆ ಆಚರಣೆ ಕೂಡಾ ಇದೆ. ಇವೆರಡರಲ್ಲಿ  ಅಂತರಂಗ ಯಜ್ಞಕ್ಕೆ ಹೆಚ್ಚು ಮಹತ್ವ. ಏಕೆಂದರೆ ನಾವು ಮಾನಸಿಕವಾಗಿ ಧ್ಯಾನ ಮಾಡುವುದರಿಂದ ಬಾಹ್ಯಕ್ರಿಯೆ ಇಲ್ಲದೆ ಮನಸ್ಸಿನಲ್ಲಿ ವಿಶೇಷ ಶಕ್ತಿ ನಿರ್ಮಾಣವಾಗುತ್ತದೆ.  ಆದರೆ ಅರಿವು ಇಲ್ಲದೆ ಕರ್ಮ ಮಾಡಿದರೆ ಅದು ವ್ಯರ್ಥ! ಈ ಕಾರಣಕ್ಕಾಗಿ ಕರ್ಮದ ಹಿಂದಿನ ಅರಿವು ಬಹಳ ಮುಖ್ಯ.  ಹಾಗಾಗಿ ಜ್ಞಾನಪೂರ್ವಕ ನಾವು ಕರ್ಮ ಮಾಡಬೇಕು. ಬರೀ ದ್ರವ್ಯಮಯವಾಗಿ, ಅದರ ಹಿಂದೆ ಜ್ಞಾನ ಇಲ್ಲದೇ ಇದ್ದರೆ, ತಿಳಿದು ಮಾಡದಿದ್ದರೆ, ಅದಕ್ಕೆ ಅರ್ಥವಿಲ್ಲ. ಯಾವ ಕರ್ಮವನ್ನಾಗಲಿ ತಿಳಿದು ಮಾಡಿದಾಗ ಮಾತ್ರ ಪರಿಣಾಮಕಾರಿ. ಈ ಕಾರಣದಿಂದ  ಜ್ಞಾನಪರವಾದ ಯಜ್ಞ ಮಹತ್ವದ್ದು. ಈ ಶ್ಲೋಕದಲ್ಲಿ ಕೃಷ್ಣ ಅರ್ಜುನನನ್ನು ಪರಂತಪ ಎಂದು ಸಂಬೋಧಿಸುತ್ತಾನೆ. ಇಲ್ಲಿ ಈ ಸಂಬೋಧನೆಗೆ ವಿಶೇಷ ಅರ್ಥವಿದೆ. ಈ ಪದವನ್ನು ಎರಡು ನೆಲೆಯಲ್ಲಿ ಅರ್ಥೈಸಬಹುದು. ಸ್ಥೂಲವಾಗಿ ನೋಡಿದರೆ ಪರಂತಪ ಎಂದರೆ 'ಶತ್ರುಗಳನ್ನು ಸದೆಬಡಿಯುವ ವೀರ'. ಇಲ್ಲಿ ಅರ್ಜುನ ಮಾಡುತ್ತಿರುವ ಯಜ್ಞ ಶತ್ರುನಿಗ್ರಹ. ಆ ಯಜ್ಞದ ಹಿಂದೆ ಜ್ಞಾನದ ಸಹಕಾರವಿದೆ. ಆದ್ದರಿಂದ ಅದು ಜ್ಞಾನಯಜ್ಞವಾಗುತ್ತದೆ- ದ್ರವ್ಯಯಜ್ಞವಲ್ಲ. ಏಕೆಂದರೆ ಅರ್ಜುನ ಪರಂತಪ-'ಪರಮಾತ್ಮನನ್ನು ಸದಾ ಚಿಂತಿಸುವವನು'. ಇಲ್ಲಿ 'ಅವರು ನನ್ನ ಶತ್ರುಗಳು, ಅವರನ್ನು ನಿಗ್ರಹಿಸಿ ನಾನು ಅಧಿಕಾರ ಸಾಧಿಸಬೇಕು' ಎನ್ನುವ ಅನುಸಂಧಾನವಿಲ್ಲ. ಇದೊಂದು ಭಗವಂತನ ಆರಾದನಾ ರೂಪವಾದ ಯಜ್ಞ. ಅನ್ಯಾಯದ ವಿರುದ್ಧ ಹೋರಾಟ ಅರ್ಜುನನ ಕರ್ತವ್ಯ, ಜಯಾಪಜಯಗಳು ಆ ಭಗವಂತನಿಗೆ ಬಿಟ್ಟಿದ್ದು. ಈ ಅನುಸಂಧಾನದಿಂದ ಯುದ್ಧ ಮಾಡಿದಾಗ ಅದು ಜ್ಞಾನಯಜ್ಞವಾಗುತ್ತದೆ. ಪರಂತಪ ಎನ್ನುವ ಈ ವಿಶೇಷಣ ಇಲ್ಲಿ ಕರ್ಮವನ್ನು ಜ್ಞಾನವಾಗಿ ಹೇಗೆ ಪರಿವರ್ತಿಸಬಹುದು ಎನ್ನುವುದನ್ನು ಸೂಚಿಸುತ್ತದೆ.
ಇದು ಏಕೆ ಜ್ಞಾನಮಯ ನ್ನುವುದನ್ನು ಕೃಷ್ಣ ವಿವರಿಸುತ್ತಾ ಹೇಳುತ್ತಾನೆ: "ಸರ್ವಮ್  ಕರ್ಮಾ ಅ[ಆ]ಖಿಲಮ್  ಪಾರ್ಥ ಜ್ಞಾನೇ ಪರಿಸಮಾಪ್ಯತೇ" ಎಂದು. ಇಲ್ಲಿ  'ಸರ್ವಂ' ಮತ್ತು  'ಅಖಿಲಂ' ಎನ್ನುವ ಪದ ಪುನರುಕ್ತಿ ಇದ್ದಂತೆ ಕಾಣುತ್ತದೆ. ಆದರೆ  ಇದರ ಹಿಂದೆ ವಿಶೇಷ ಅರ್ಥವಿದೆ. ಒಂದು  ಮಂತ್ರದಲ್ಲಿ ಎಷ್ಟು ಬಗೆಯ ಪದಛೇದ, ಎಷ್ಟು ಬಗೆಯ ಅರ್ಥಾನುಸಂಧಾನ ಎನ್ನುವುದು ಮುಖ್ಯ. ಇಲ್ಲಿ   "ಸರ್ವಂ ಕರ್ಮಾ[S]ಖಿಲಂ" ಎನ್ನುವುದನ್ನು ಎರಡು ಬಗೆಯಿಂದ ಪದಛೇದ ಮಾಡಬಹುದು. ಒಂದು- ಸರ್ವ ಕರ್ಮ ಅಖಿಲಂ ಹಾಗು ಇನ್ನೊಂದು ‘ಸರ್ವ ಕರ್ಮ ಆಖಿಲಂ.  ಎಲ್ಲಾ ಪರಿಕರಗಳಿಂದ ಪರಿಪೂರ್ಣವಾದ ಸರ್ವಕರ್ಮವನ್ನು  'ಸರ್ವ ಕರ್ಮ ಅಖಿಲಂ ಎನ್ನುತ್ತಾರೆ.' ಅಂದರೆ ಪರಿಪೂರ್ಣವಾದ ಎಲ್ಲಾ ಕರ್ಮ.  "ಒಂದು ಕರ್ಮವನ್ನು ಪೂರ್ಣವಾಗಿ ಮಾಡು" ಎನ್ನುತ್ತಾನೆ ಕೃಷ್ಣ. ಯಾವುದೇ ಕರ್ಮವನ್ನು ಜ್ಞಾನಪೂರ್ವಕವಾಗಿ ಮಾಡಿದಾಗ ಮಾತ್ರ ಅದು ಪೂರ್ಣವಾಗುತ್ತದೆ. ಕರ್ಮದ ಜೊತೆಗೆ ಜ್ಞಾನ ಬೇಕೇಬೇಕು.  ಅದು ಜ್ಞಾನದ ಶ್ರೇಷ್ಠತೆ. ಜ್ಞಾನದಿಂದ ಕರ್ಮ ಮಾಡು; ಕರ್ಮ ಮಾಡಿ ಜ್ಞಾನಗಳಿಸು. ಆಗ ಅದು ಪರಿಪೂರ್ಣ. ಭಾಗವತದಲ್ಲಿ ಜ್ಞಾನವಿಲ್ಲದೆ ಮಾಡುವ ಯಜ್ಞವನ್ನು ಉಗ್ರವಾಗಿ ವಿರೋಧಿಸುತ್ತಾರೆ. ಅಲ್ಲಿ  ಹೋಮದಲ್ಲಿ ಕೊಡುವ ಆಹುತಿಯನ್ನು ಏಕೆ ಕೊಡುತ್ತಿದ್ದೇವೆ ಎಂದು ತಿಳಿಯದೆ ಹೋಮ ಮಾಡುವವನು ಬೆಂಕಿಗೆ ಮರುಳಾದವನು  ಹಾಗು ಹೊಗೆ ತಿಂದು ಸಾಯುವವನು' ಎನ್ನುತ್ತಾರೆ. ಕರ್ಮದ ಹಿಂದಿನ ಭಗವಂತನ ಅರಿವು ಬಹಳ ಮುಖ್ಯ.  ಇಲ್ಲದಿದ್ದರೆ ಅದು ತೂತು ಬಿದ್ದ ದೋಣಿಯಂತೆ. ಮಾಡಿದ ಕರ್ಮ ಸಫಲವಾಗುವುದು ಅದರ ಹಿಂದೆ ಅರಿವು ಇದ್ದಾಗ ಮಾತ್ರ.
ಇನ್ನೊಂದು ಅರ್ಥದಲ್ಲಿ ಜ್ಞಾನರಹಿತವಾದ ಕೇವಲಕರ್ಮ 'ಆ-ಖಿಲಂ'. ಇಲ್ಲಿ 'ಖಿಲಂ' ಅಂದರೆ ಚೂರು. ಜ್ಞಾನವಿಲ್ಲದ ಎಲ್ಲಾ ಕರ್ಮವನ್ನು ಒಂದುಗೂಡಿಸಿದರೂ ಅದು ಜ್ಞಾನದ ಮುಂದೆ ಒಂದು ಚಿಕ್ಕ ಚೂರು. ಜ್ಞಾನವಿಲ್ಲದ ಎಲ್ಲ ಕರ್ಮಗಳು ಸೇರಿದರೂ ಅದು ಜ್ಞಾನಪೂರ್ಣ ಕರ್ಮದ ಮುಂದೆ ಅತ್ಯಲ್ಪ.  ನಮ್ಮ ಕರ್ಮ ಜ್ಞಾನಕ್ಕೋಸ್ಕರವಾಗಬೇಕೇ  ಹೊರತು ಕರ್ಮಕ್ಕೋಸ್ಕರ ಕರ್ಮ ಮಾಡಬಾರದು. ಆದರೆ ಇಂದಿನ ದಿನದಲ್ಲಿ ಜ್ಞಾನಕ್ಕೋಸ್ಕರ ಕರ್ಮ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ದುಃಖದಾಯಕ.
ಇಲ್ಲಿ ಕೃಷ್ಣ ಅರ್ಜುನನನ್ನು ಪಾರ್ಥ ಎಂದು ಸಂಬೋಧಿಸಿದ್ದಾನೆ. ಹಿಂದೆ ಹೇಳಿದಂತೆ ಪಾರ್ಥ ಎಂದರೆ ಪಾರವನ್ನು ಕಂಡವನು, ಜ್ಞಾನದ ಕಡಲಿನ ಆಚೆಯ ದಡವನ್ನು ಕಂಡವನು; ವೇದಾರ್ಥವನ್ನು ಪಾನ ಮಾಡಿದವನು. "ಮಹಾನ್ ಜ್ಞಾನಿಯಾದ ನೀನು ಅರಿತು ಮಾಡುವ ಈ ಕರ್ಮ ಕೇವಲ ಕರ್ಮವಲ್ಲ ಇದು ಜ್ಞಾನಯಜ್ಞ"  ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. ಇಲ್ಲಿ ನಾವು ಪುನಃ ನೆನಪಿಸಿಕೊಳ್ಳಬೇಕಾದ ವಿಷಯ ಎಂದರೆ ಮೂಲತಃ ಅರ್ಜುನ ಮಹಾನ್ ಜ್ಞಾನಿ. ಆದರೆ ಮಹಾನ್ ಜ್ಞಾನಿಗಳಿಗೂ ಕೂಡಾ ಕೆಲವೊಮ್ಮೆ ಗೊಂದಲವಾಗಿ ಎಲ್ಲವೂ ಮರೆತು ಹೋಗುತ್ತದೆ. ಅರ್ಜುನ ಇಲ್ಲಿ ಆ ಸ್ಥಿತಿಯಲ್ಲಿದ್ದಾನೆ. ಇದು ಕೇವಲ ತಾತ್ಕಾಲಿಕ ಪರದೆಆ ಪರದೆಯನ್ನು  ಇಲ್ಲಿ ಕೃಷ್ಣ  ಸರಿಸುತ್ತಿದ್ದಾನೆ.
ಜ್ಞಾನವಿಲ್ಲದ ಕರ್ಮದಿಂದ ಯಾವ ಉಪಯೋಗವೂ ಇಲ್ಲ ಅನ್ನುವ ವಿಚಾರ ಸ್ಪಷ್ಟವಾಯಿತು. ಆದರೆ ಈ ಜ್ಞಾನವನ್ನು ಗಳಿಸುವ ಪರಿ ಎಂತು? ಈ ಪ್ರಶ್ನೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸುತ್ತಾನೆ.