Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, April 23, 2011

Bhagavad Gita Kannada Chapter-04 Shloka 25-32


ದೈವಮೇವಾಪರೇ ಯಜ್ಞಂ ಯೋಗಿನಃ ಪರ್ಯುಪಾಸತೇ           ।
ಬ್ರಹ್ಮಾಗ್ನಾವಪರೇ ಯಜ್ಞಂ ಯಜ್ಞೇನೈವೋಪಜುಹ್ವತಿ                        ॥೨೫॥

ದೈವಮ್ ಏವ ಅಪರೇ ಯಜ್ಞಮ್  ಯೋಗಿನಃ ಪರ್ಯುಪಾಸತೇ |
ಬ್ರಹ್ಮ ಅಗ್ನೌ ಅಪರೇ ಯಜ್ಞಮ್  ಯಜ್ಞೇನ ಏವ ಉಪಜುಹ್ವತಿ-ಕೆಲವು ಸಾಧಕರು ಭಗವದುಪಾಸನೆಯೆಂಬ ಮಾನಸ ಯಜ್ಞವನ್ನು ಆಚರಿಸುತ್ತಾರೆ.[ಭಗವಂತನನ್ನೇ ಯಜ್ಞ ರೂಪನೆಂದು ಪೂಜಿಸುತ್ತಾರೆ.] ಕೆಲವರು ಬೆಂಕಿಯ ರೂಪದ ಭಗವಂತನಲ್ಲಿ ಹೋಮಿಸುವ ಮೂಲಕ ಬಾಹ್ಯ ಯಜ್ಞದಿಂದ ಯಜ್ಞ ನಾಮಕ ಭಗವಂತನನ್ನು ಪೂಜಿಸುತ್ತಾರೆ.[ಯಜ್ಞನಾಮಕ ಭಗವಂತನಿಂದಲೆ ಬಾಹ್ಯ ಯಜ್ಞವನ್ನು ಆಚರಿಸುತ್ತಾರೆ].

ಭಗವಂತನ  ಉಪಾಸನೆಯ ಮಾರ್ಗದಲ್ಲಿ ಸಾಗುವ  ಕೆಲವು ಯೋಗಿಗಳು(ಸಾಧಕರು) ದೈವವನ್ನೇ ಯಜ್ಞವಾಗಿ ಉಪಾಸನೆ ಮಾಡುತ್ತಾರೆ. ಅಂದರೆ ನಿರಂತರ ಅಂತರಂಗದಲ್ಲಿ ಭಗವಂತನ ಉಪಾಸನೆಯೇ ಅವರ ಯಜ್ಞ. ಇದಕ್ಕೆ ಯಾವ ಬಾಹ್ಯ ಪರಿಕರ ಬೇಡ. ಇದು ಧ್ಯಾನ ರೂಪ ಯಜ್ಞ. ಈ ರೀತಿ ಬಾಹ್ಯ ಪರಿಕರಗಳಿಲ್ಲದೆ ಮಾಡುವ ಯಜ್ಞ ಅತ್ಯಂತ ಶ್ರೇಷ್ಠ ಯಜ್ಞ. ಇದು  ಸಾಮಾನ್ಯವಾಗಿ ಅತ್ಯಂತ ಎತ್ತರಕ್ಕೇರಿದ ಸಾಧಕರು ಮಾಡಬಲ್ಲ ಯಜ್ಞ. ಎಲ್ಲಾ ಬಾಹ್ಯ ಪರಿಕರಗಳನ್ನು ಬಿಟ್ಟು ಮಾನಸ ಪರಿಗ್ರಹದಿಂದ ಮಾಡತಕ್ಕ ಜ್ಞಾನಪ್ರಧಾನವಾದ ಯಜ್ಞವಿದು.
ಇನ್ನೊಂದು  ಪ್ರಕಾರದ ಯಜ್ಞ ಅಗ್ನಿ ಮುಖದಲ್ಲಿ ಮಾಡತಕ್ಕ ಕರ್ಮ ಪ್ರಧಾನವಾದ ಯಜ್ಞ. ಇದನ್ನು ಸಾಮಾನ್ಯ ಮಾನವರು ಅನುಸರಿಸುತ್ತಾರೆ. ಭಗವಂತನ ಸನ್ನಿಧಾನವಿರುವ ಅಗ್ನಿಯ ಮುಖದಲ್ಲಿ ಭಗವಂತನಿಗೆ ಅರ್ಪಣೆ ಮಾಡುವ ಆರಾಧನೆ. ಇದು ಬಾಹ್ಯ ಯಜ್ಞ. ಇದು ಬಹಳ ಮುಖ್ಯವಾದದ್ದು. ವೇದದಲ್ಲಿ ಭಗವಂತನ ಆರಾದನೆಗೆ ಅತ್ಯಂತ ಮುಖ್ಯವಾದ ಪ್ರತೀಕ ಅಗ್ನಿ ಎನ್ನುತ್ತಾರೆ. ಅಗ್ನಿ ಎಂದೂ ಅಪವಿತ್ರವಲ್ಲ. ಅಗ್ನಿ ಸ್ಪರ್ಶದಿಂದ ಅಪವಿತ್ರ ಕೂಡಾ ಪವಿತ್ರವಾಗುತ್ತದೆ. ನಮಗೆ ಭಗವಂತನಿಗೆ ಏನನ್ನಾದರೂ ತಿನ್ನಿಸಬೇಕು ಎನ್ನುವ ಅಭಿಲಾಷೆ ಇದ್ದರೆ ಅದನ್ನು ಕೇವಲ ಅಗ್ನಿ ಮುಖೇನ ಮಾಡಬಹುದು. ನಮ್ಮ ಕಣ್ಣ ಮುಂದೆ ಇರುವ ಎಲ್ಲಾ ಪ್ರತೀಕಗಳಲ್ಲಿ ಅಗ್ನಿ ಅತ್ಯಂತ ಶ್ರೇಷ್ಠ ಎನ್ನುವುದು ವೇದ ಕಾಲದ ಋಷಿಗಳ ತೀರ್ಮಾನ. ಸುಡುವ ಅಗ್ನಿಯಲ್ಲಿ ಅಗ್ನಿದೇವ, ಅವನೊಳಗೆ ಪ್ರಾಣ, ಪ್ರಾಣನೊಳಗೆ  ಭಗವಂತ. ಈ ಅನುಸಂಧಾನದಲ್ಲಿ ಯಜ್ಞ. ಯಜ್ಞ ನಾಮಕ ಭಗವಂತನನ್ನು, ಯಜ್ಞದಿಂದ, ಜ್ಞಾನ ಭಕ್ತಿ ವೈರಾಗ್ಯದಿಂದ ಕೂಡಿದ ಉತ್ಕೃಷ್ಟವಾದ ಆಹ್ವಾನದಿಂದ ಆರಾದನೆ.          

ಶ್ರೋತ್ರಾದೀನೀಂದ್ರಿಯಾಣ್ಯನ್ಯೇ ಸಂಯಮಾಗ್ನಿಷು ಜುಹ್ವತಿ         ।
ಶಬ್ದಾದೀನ್ ವಿಷಯಾನನ್ಯ ಇಂದ್ರಿಯಾಗ್ನಿಷು ಜುಹ್ವತಿ                       ॥೨೬॥

ಶ್ರೋತ್ರಾ ಆದೀನಿ ಇಂದ್ರಿಯಾಣಿ ಅನ್ಯೇ ಸಂಯಮ ಅಗ್ನಿಷು ಜುಹ್ವತಿ |
ಶಬ್ದ ಆದೀನ್ ವಿಷಯಾನ್ ಅನ್ಯ ಇಂದ್ರಿಯ ಅಗ್ನಿಷು ಜುಹ್ವತಿ-ಕೆಲವರು ಕಿವಿ ಮೊದಲಾದ ಇಂದ್ರಿಯಗಳನ್ನು ಅಂಕೆಯ ಬೆಂಕಿಯಲ್ಲಿ ಹೋಮಿಸುತ್ತಾರೆ. ಕೆಲವರು ಶಬ್ದ ಮೊದಲಾದ ವಿಷಯಗಳನ್ನು ಇಂದ್ರಿಯಗಳ ಬೆಂಕಿಯಲ್ಲಿ ಹೋಮಿಸುತ್ತಾರೆ.

ಒಬ್ಬ ಸಾಧಕನಲ್ಲಿರಬೇಕಾದ ವಿಶಿಷ್ಟ ಸಾಧನೆ ಕೂಡಾ ಒಂದು ಯಜ್ಞ.ಇಂದ್ರಿಯವೆಂಬ ಹವಿಸ್ಸನ್ನು 'ನಿಗ್ರಹ' ಎನ್ನುವ ಬೆಂಕಿಯಲ್ಲಿ ಆಹುತಿಗೊಳಿಸುವುದು ಒಂದು ಯಜ್ಞ. ಕೆಟ್ಟದ್ದನ್ನು ಕೇಳುವುದಿಲ್ಲ, ಕೆಟ್ಟದ್ದನ್ನು ಆಡುವುದಿಲ್ಲ. ಕೆಟ್ಟದ್ದನ್ನು ನೋಡುವುದಿಲ್ಲ, ಹೀಗೆ ಇಂದ್ರಿಯ ಸಂಯಮದಿಂದ ಇಂದ್ರಿಯ ಚಾಪಲವನ್ನು ಹೋಮಿಸು. ಇದು ಇಂದ್ರಿಯ ಚಾಪಲವನ್ನು ಗೆಲ್ಲುವ ಪ್ರಕ್ರಿಯೆ.  ಸಂಯಮ ಎನ್ನುವ ಅಗ್ನಿಯಲ್ಲಿ ಇಂದ್ರಿಯ ಚಾಪಲವೆಂಬ ಹವಿಸ್ಸನ್ನು ಹೋಮಿಸಿ, ಭಗವಂತನನ್ನು ಆರಾದಿಸುವುದು. ಭಗವಂತ ಪ್ರಸನ್ನನಾಗಲಿ, ಅದರ ಮೂಲಕ ನನ್ನನ್ನು ಸಾಧನೆಯ ದಾರಿಯಲ್ಲಿ ಮುನ್ನೆಡೆಸಲಿ ಎನ್ನುವ ಅನುಸಂಧಾನದಲ್ಲಿ ಮಾಡುವ ಯಜ್ಞವಿದು.
ಇನ್ನು ಒಳ್ಳೆಯ ಸಂಗತಿಗಳನ್ನು ಇಂದ್ರಿಯಗಳಲ್ಲಿ ಹೋಮಿಸುವುದೂ ಒಂದು ಯಜ್ಞ. ಕಿವಿ ಎನ್ನುವ ಅಗ್ನಿ ಕುಂಡದಲ್ಲಿ ಭಗವಂತನ ಗುಣಗಾನವೆಂಬ ಹವಿಸ್ಸನ್ನು ಹಾಕುವುದು, ಕಣ್ಣು ಎನ್ನುವ ಅಗ್ನಿ ಕುಂಡದಲ್ಲಿ ಭಗವಂತನ ಪ್ರತೀಕ ಎನ್ನುವ ಹವಿಸ್ಸನ್ನು ಹಾಕುವುದು, ಮೂಗು ಎನ್ನುವ ಅಗ್ನಿ ಕುಂಡದಲ್ಲಿ ಭಗವಂತನಿಗೆ ಅರ್ಪಿತವಾದ ತುಳಸಿ, ಗಂಧ ರೂಪದ ಹವಿಸ್ಸನ್ನು ಹಾಕುವುದು. ಹೀಗೆ ಇಂದ್ರಿಯ ವಿಷಯಗಳನ್ನು ಸ್ವೀಕರಿಸುವುದೂ ಒಂದು ಯಜ್ಞವಾಗುತ್ತದೆ.  ಇಂದ್ರಿಯ ನಿಗ್ರಹದಂತೆ ಇಂದ್ರಿಯ ಗ್ರಹಣ ಕೂಡಾ ಒಂದು ಯಜ್ಞ. ಭಗವಂತನ ಚಿಂತನೆಗೆ ಪೂರಕವಾದ ವಿಷಯವನ್ನು ಗ್ರಹಣ ಮಾಡು ಮತ್ತು ಅಲ್ಲದ ವಿಷಯವನ್ನು ತ್ಯಾಗ ಮಾಡು-ಇದು ಸಾಧನೆಯ ಹಾದಿಯಲ್ಲಿ ಪ್ರಮುಖ ಹೆಜ್ಜೆ.     

ಸರ್ವಾಣೀಂದ್ರಿಯಕರ್ಮಾಣಿ ಪ್ರಾಣಕರ್ಮಾಣಿ ಚಾಪರೇ ।
ಆತ್ಮಸಂಯಮಯೋಗಾಗ್ನೌ ಜುಹ್ವತಿ ಜ್ಞಾನದೀಪಿತೇ                        ॥೨೭॥

ಸರ್ವಾಣಿ ಇಂದ್ರಿಯ ಕರ್ಮಾಣಿ ಪ್ರಾಣಕರ್ಮಾಣಿ ಚ ಅಪರೇ ।
ಆತ್ಮ ಸಂಯಮ ಯೋಗ ಅಗ್ನೌ ಜುಹ್ವತಿ ಜ್ಞಾನದೀಪಿತೇ-ಕೆಲವರು ಎಲ್ಲ ಇಂದ್ರಿಯ ಕ್ರಿಯೆಗಳನ್ನೂ,  ಪ್ರಾಣವಾಯುವಿನ  ಕ್ರಿಯೆಗಳನ್ನೂ  ತಿಳಿವಿನಿಂದ ತಿಳಿಗೊಂಡ ಆತ್ಮನಿಗ್ರಹದ ಸಾಧನೆಯೆಂಬ ಬೆಂಕಿಯಲ್ಲಿ ಹೋಮಿಸುತ್ತಾರೆ.

ನಮ್ಮ   ದೇಹದಲ್ಲಿ ಜ್ಞಾನೇಂದ್ರಿಯ ಹಾಗು ಕರ್ಮೇಂದ್ರಿಯದಿಂದ ನಿರಂತರ ಕ್ರಿಯೆ ನಡೆಯುತ್ತಿರುತ್ತದೆ. ಇದಲ್ಲದೆ ಪ್ರಾಣ ಶಕ್ತಿಯಿಂದ ಆಗುವ ಕ್ರಿಯೆಗಳು ಅನೇಕ (ಉದಾ: ಉಸಿರಾಟ, ಬಲ, ಸಂತಾನಶಕ್ತಿ, ಸಂತೋಷ ಅಥವಾ ದುಃಖವಾದಾಗ ಕಣ್ಣೀರು ಇತ್ಯಾದಿ). ಮನೋನಿಗ್ರಹ ಎನ್ನುವ ಅಗ್ನಿಯಲ್ಲಿ ಈ ಜ್ಞಾನೇಂದ್ರಿಯ, ಕರ್ಮೇಂದ್ರಿಯ ಮತ್ತು ಪ್ರಾಣಶಕ್ತಿಯಿಂದ ಆಗುವ ಕ್ರಿಯೆಯನ್ನು ಹೋಮಿಸುವುದು(ಹಿಡಿತ) ಒಂದು ಯಜ್ಞ. ಇದು ಹಠಕ್ಕೊಸ್ಕರ ಅಲ್ಲ, ಯಜ್ಞ ರೂಪವಾಗಿ ಭಗವಂತನ ಪೂಜಾರೂಪವಾಗಿ. ಇದು  ಭಗವಂತನ ಅರಿವಿನಿಂದ ಬೆಳಗುವ ಆತ್ಮ ಸಂಯಮ. ಭಗವಂತನ ಅರಿವಿಗೊಸ್ಕರ ಮಾಡಿದ ಆತ್ಮ ಸಂಯಮ; ಭಗವಂತನ ಅರಿವಿನೆಡೆಗೆ ಕೊಂಡೊಯ್ಯುವ  ಜ್ಞಾನಪೂರ್ವಕ ಸಂಯಮ, ಆವೇಶವಲ್ಲ.

ಯಜ್ಞಗಳ ವೈವಿದ್ಯವನ್ನು  ಹೇಳುತ್ತಾ ಮುಂದುವರಿದು ಕೃಷ್ಣ ಯಜ್ಞದ ಒಂದು ಪಟ್ಟಿಯನ್ನು ನಮ್ಮ ಮುಂದಿಡುತ್ತಾನೆ:

ದ್ರವ್ಯಯಜ್ಞಾಸ್ತಪೋಯಜ್ಞಾ ಯೋಗಯಜ್ಞಾಸ್ತಥಾSಪರೇ   ।
ಸ್ವಾಧ್ಯಾಯಜ್ಞಾನಯಜ್ಞಾಶ್ಚ ಯತಯಃ ಸಂಶಿತವ್ರತಾಃ          ॥೨೮॥

ದ್ರವ್ಯ ಯಜ್ಞಾಃ ತಪಃ ಯಜ್ಞಾಃ ಯೋಗ ಯಜ್ಞಾಃ ತಥಾ ಅಪರೇ |
ಸ್ವಾಧ್ಯಾಯ ಜ್ಞಾನ ಯಜ್ಞಾಃ  ಚ ಯತಯಃ ಸಂಶಿತ ವ್ರತಾಃ -ಕೆಲವರು ಸೊತ್ತುಗಳನ್ನು ಹೋಮಿಸುವವರು. ಕೆಲವರು ತಪಸ್ಸನ್ನೆ ಭಗವಂತನಲ್ಲಿ ಹೋಮಿಸುವವರು. ಕರ್ಮ ಸಾಧನೆಯೆ ಕೆಲವರ ಯಜ್ಞ. ಚುರುಕು ನಿಷ್ಠೆಯ ಪ್ರಯತ್ನಶೀಲರಾದ ಕೆಲವರಿಗೆ ವೇದಾಧ್ಯಯನ, ಭಗವಂತನ ಅರಿವೇ ಯಜ್ಞ.

ದ್ರವ್ಯಯಜ್ಞ: ಕೆಲವರು  ದ್ರವ್ಯದ ಮೂಲಕ ಭಗವಂತನನ್ನು ಆರಾದನೆ ಮಾಡುತ್ತಾರೆ. ಇದು ಅಗ್ನಿ ಮುಖೇನವಿರಬಹುದು, ಧನದಾನ, ಅನ್ನದಾನ, ಕನ್ಯಾದಾನ ಇತ್ಯಾದಿ ದಾನಗಳ ಮುಖೇನ ಇರಬಹುದು. ಯೋಗ್ಯನಾದವನಿಗೆ, ಯೋಗ್ಯ ಕಾಲದಲ್ಲಿ, ಯೋಗ್ಯವಾದುದ್ದನ್ನು, ಅವರೊಳಗಿರುವ ಭಗವಂತ ಪ್ರೀತನಾಗಲಿ ಎಂದು ಕೊಡುವುದು ದ್ರವ್ಯ ಯಜ್ಞ.
ತಪೋಯಜ್ಞ: ಇದಕ್ಕೆ ಎರಡು ಮುಖ. ಒಂದು ಬಾಹ್ಯ ಇನ್ನೊಂದು ಅಂತರಂಗ.  ಒಂದು ನಿರಂತರ ಧ್ಯಾನ, ಅದಕ್ಕೆ ಬಾಹ್ಯ ಪರಿಕರಗಳ ಅಗತ್ಯವಿಲ್ಲ. ಎರಡನೆಯದು ಭಗವಂತನ ಚಿಂತನೆಗೆ ಬೇಕಾದ ಆತ್ಮಸಂಯಮ(discipline)-ಇದನ್ನು ತಪಸ್ಸು ಎನ್ನುತ್ತಾರೆ. ಉದಾಹರಣೆಗೆ ಬ್ರಹ್ಮಚರ್ಯಪಾಲನೆ, ವೃತಾನುನುಷ್ಠಾನ, ಇತ್ಯಾದಿ.
ಯೋಗಯಜ್ಞ: ಅಂದರೆ ವಿಧವಿಧವಾದ ಕರ್ಮಯೋಗವನ್ನು ಭಗವಂತನ ಪ್ರೀತ್ಯರ್ಥ ಅನುಷ್ಠಾನ ಮಾಡುವುದು. ಇದು ಬಾಹ್ಯ ಕರ್ಮಗಳ ಮೂಲಕ ಭಗವಂತನ ಆರಾದನೆ. ಉದಾಹರಣೆಗೆ: ದೇವರಿಗೆ 108 ಪ್ರದಕ್ಷಿಣೆ, ಅರ್ಚನೆ , ಇತ್ಯಾದಿ. ಇದಲ್ಲದೆ ಯೋಗ ಶಾಸ್ತ್ರದಲ್ಲಿ ಹೇಳಿರುವ ಯಮನಿಯಮ ಪಾಲನೆ.
ಸ್ವಾಧ್ಯಾಯ ಜ್ಞಾನಯಜ್ಞ: ಇದು ಭಗವಂತನಿಗೆ ಅತ್ಯಂತ ಪ್ರಿಯವಾದ ಯಜ್ಞ. ಇಲ್ಲಿ ಸ್ವಾಧ್ಯಾಯ ಎನ್ನುವುದಕ್ಕೆ ಅನೇಕ ಅರ್ಥವಿದೆ. ತನಗೆ ಸಂಬಂಧಪಟ್ಟದ್ದನ್ನು, ತಾನು ಓದಬೇಕಾದ್ದನ್ನು ಓದುವುದು. ತನ್ನ ಶಾಖೆಯ ವೇದಾಧ್ಯಯನ; ಎಲ್ಲಾ ಕಡೆ ಸ್ವತಂತ್ರನಾಗಿರುವ ಸರ್ವೋತ್ತಮನಾದ ಭಗವಂತನ ಗುಣವನ್ನು ಅಧ್ಯಯನ ಮೂಲಕ  ಎಲ್ಲ ಗ್ರಂಥಗಳಲ್ಲಿ ಕಂಡು ಕೊಳ್ಳುವುದು ಸ್ವಾಧ್ಯಾಯ. ಈ ಕಾಲದಲ್ಲಿ ಶಾಸ್ತ್ರದ ರಹಸ್ಯವನ್ನು ತಿಳಿದವರು ಸಿಗುವುದು ತುಂಬಾ ವಿರಳ. ಅಂತಹ ಸಂದರ್ಭದಲ್ಲಿ ಕಾಲವನ್ನು ವ್ಯರ್ಥ ಮಾಡದೆ, ಭಗವಂತ ಎಷ್ಟು ಬುದ್ಧಿ ಕೊಟ್ಟಿದ್ದಾನೋ ಅಷ್ಟನ್ನು ಬಳಸಿ ಸ್ವಂತ ಎಷ್ಟು ಸಾಧ್ಯವೋ ಅಷ್ಟನ್ನು ಅಧ್ಯಯನ ಮಾಡುವುದೂ  ಸ್ವಾಧ್ಯಾಯ. ಈ ಎಲ್ಲಾ ಸ್ವಾಧ್ಯಾಯ ನಮ್ಮ ಜ್ಞಾನದ ಬೆಳವಣಿಗೆಗೆ ಪೋಷಕವಾದದ್ದು. ನಾವು ತಿಳಿಯುವುದು, ತಿಳಿದಿದ್ದನ್ನು ಇನ್ನೊಬ್ಬರಿಗೆ ಹಂಚುವುದು-ಭಗವಂತನಿಗೆ ಅತ್ಯಂತ ಪ್ರೀಯ.  ಇನ್ನೊಬ್ಬರಿಗೆ ಹಂಚುವುದರಿಂದ ಹೆಚ್ಚಾಗುವ ಏಕಮೇವ ಸಂಪತ್ತು  ಎಂದರೆ ಅದು ಜ್ಞಾನ. ಇದನ್ನು ಮಾಡಬೇಕಾದರೆ ನಾವು ಯತಿಗಳಾಗಬೇಕು. ಇಲ್ಲಿ ಯತಿ ಎಂದರೆ ಸನ್ಯಾಸಿ ಅಲ್ಲ. ಯತಿ ಅಂದರೆ ನಿರಂತರ ಪ್ರಯತ್ನಶೀಲ.  ಸಾಧನೆ ಜೊತೆಗೆ ಹರಿತವಾದ ವೃತ ಕೂಡಾ ಅಗತ್ಯ. ಅಂದರೆ ಸ್ವಚ್ಛವಾದ ಪ್ರಾಮಾಣಿಕವಾದ ಬದುಕು. ಇದಿಲ್ಲದೆ ಮಾಡುವ ಯಾವ ಕರ್ಮ ಕೂಡಾ ಯಜ್ಞವಾಗುವುದಿಲ್ಲ.ಆಧ್ಯಾತ್ಮದ ದಾರಿಯಲ್ಲಿ ಮುಂದೆ ಸಾಗಲು ಛಲ ಅಗತ್ಯ.          

ಅಪಾನೇ ಜುಹ್ವತಿ ಪ್ರಾಣಂ ಪ್ರಾಣೇSಪಾನಂ ತಥಾSಪರೇ  ।
ಪ್ರಾಣಾಪಾನಗತೀ ರುದ್ಧ್ವಾ ಪ್ರಾಣಾಯಾಮಪರಾಯಣಾಃ      ॥೨೯॥

ಅಪಾನೇ ಜುಹ್ವತಿ ಪ್ರಾಣಮ್  ಪ್ರಾಣೇ ಅಪಾನಮ್  ತಥಾ ಅಪರೇ  ।
ಪ್ರಾಣ ಅಪಾನ ಗತೀ ರುದ್ಧ್ವಾ ಪ್ರಾಣಾಯಾಮ ಪರಾಯಣಾಃ  -ಮತ್ತೆ ಕೆಲವರು ಪ್ರಾಣಾಯಾಮದ ಸಾಧಕರು. ಪ್ರಾಣಾಪಾನಗಳ ನಡೆಯನ್ನು ತಡೆಹಿಡಿದು ಅಪಾನದಲ್ಲಿ ಪ್ರಾಣವನ್ನು ಹೋಮಿಸುತ್ತಾರೆ. ಪ್ರಾಣದಲ್ಲಿ ಅಪಾನವನ್ನು.

ಯೋಗದಲ್ಲಿ   ವಿಶಿಷ್ಟವಾದ ಸಾಧನೆ ಪ್ರಾಣಯಾಮ. ಕೆಲವರಿಗೆ ಪ್ರಾಣಾಯಾಮವೇ ಬದುಕಿನಲ್ಲಿ ಒಂದು ಸಾಧನೆ. ಪ್ರಾಣಾಪಾನಗಳನ್ನು ಭಗವಂತನಲ್ಲಿ ಯಜ್ಞ ರೂಪವಾಗಿ ಅರ್ಪಿಸಿ, ಪ್ರಾಣಾಯಾಮದಿಂದ ಭಗಂತನ ಉಪಾಸನೆ-ಅಪಾನದಲ್ಲಿ ಪ್ರಾಣವನ್ನು ಹೋಮಿಸುವುದು. ಇದು ಕುಂಭಕಕ್ಕೆ  ಸಂಬಂಧಪಟ್ಟಿದ್ದು. ದೇಹದ ಒಳಗಿನಿಂದ  ಶ್ವಾಸವನ್ನು ಹೊರಬಿಡುವುದು 'ರೇಚಕ'; ಆಮ್ಲಜನಕಯುಕ್ತ ಶುದ್ಧ ಗಾಳಿಯನ್ನು ಒಳಗೆ ತೆಗೆದುಕೊಳ್ಳುವುದು 'ಪೂರಕ'. ನಮ್ಮ ಹೃದಯ ಕಲಶದಲ್ಲಿ ಪ್ರಾಣಶಕ್ತಿಯನ್ನು ಹಿಡಿದಿಡುವುದು-‘ಕುಂಭಕ’. ಇದು ಬಹಳ ಪರಿಣಾಮಕಾರಿ. ಇದರಿಂದ ಏಕಾಗ್ರತೆ, ಆರೋಗ್ಯ, ಆಯಸ್ಸು ಹೆಚ್ಚುತ್ತದೆ. ಸಾಮಾನ್ಯವಾಗಿ ಒಬ್ಬ ಮನುಷ್ಯನ ಆಯಸ್ಸು ಆತನ ಉಸಿರಾಟದ ಮೇಲೆ ನಿರ್ಧಾರವಾಗಿರುತ್ತದೆ. ಸಹಜ ಉಸಿರಾಟ ಎಂದರೆ ನಾಲ್ಕು ಸೆಕೆಂಡಿಗೆ ಒಂದು  ಉಸಿರಾಟ(ರೇಚಕ ಮತ್ತು ಪೂರಕ). ಒಬ್ಬ ಮನುಷ್ಯ ನೂರು ವರ್ಷ ಬದುಕುತ್ತಾನೆ ಎಂದರೆ ಆತನ ಆಯಸ್ಸು '೭೭ ಕೋಟಿ, ೭೬ ಲಕ್ಷ ಉಸಿರು'. ಒಂದು ವೇಳೆ ನಾಲ್ಕು ಸೆಕೆಂಡಿಗೆ ಬದಲಾಗಿ ೮ ಸೆಕೆಂಡಿಗೊಮ್ಮೆ ಉಸಿರಾಟ ಮಾಡಿದರೆ ಆತ ೨೦೦ ವರ್ಷ ಬದುಕಬಹುದು. ಇದನ್ನು ಹಿಂದೆ ಕೆಲವು ಸಾಧಕರು ಪ್ರಾಣಾಯಾಮದಿಂದ ಸಾಧಿಸುತ್ತಿದ್ದರು. ಇಂದೂ ಕೂಡಾ ಹಿಮಾಲಯದಲ್ಲಿ ನೂರಾರು ವರ್ಷ ವಯಸ್ಸಾಗಿರುವ ಆರೋಗ್ಯಪೂರ್ಣ ಸಾಧಕರಿದ್ದಾರೆ ಎಂದು  ಪರಮಹಂಸ ಯೋಗನಂದರು(Autobiography of Yogi) ಮತ್ತು ಸ್ವಾಮಿರಾಮ್(Living with Himalayan Masters) ತಮ್ಮ  ಸ್ವಂತ ಅನುಭವದಿಂದ ಹೇಳಿದ್ದಾರೆ.
ಪ್ರಾಣಾಯಾಮದಿಂದ ಪ್ರಾಣಶಕ್ತಿ ವೃದ್ಧಿಗೊಳ್ಳುತ್ತದೆ. ಇದರಿಂದ ಇನ್ನೊಬ್ಬರ ರೋಗವನ್ನು  ಕೂಡಾ ಗುಣಪಡಿಸಬಹುದು. ಇದನ್ನು ಸ್ಪರ್ಶ ಅಥವಾ   Touch Heal ಎನ್ನುತ್ತಾರೆ. ಕೇವಲ ಹಸ್ತ ಸ್ಪರ್ಶದಿಂದ ಭಯ, ರೋಗ, ದುಃಖ, ಹುಚ್ಚು, ಕುರುಡುತನ ಎಲ್ಲವನ್ನೂ ಗುಣ ಪಡಿಸಬಹುದು. ಈ ಕಾರಣಕ್ಕಾಗಿ ಒಬ್ಬರು ಇನ್ನೊಬ್ಬರಿಗೆ ಆಶೀರ್ವಾದ ಮಾಡುವಾಗ ತಲೆ ಮೇಲೆ ಕೈ ಇಟ್ಟು ಮಾಡುತ್ತಾರೆ. ಇದರಿಂದ ಪ್ರಾಣ ಶಕ್ತಿ ದೊಡ್ಡವರಿಂದ ಚಿಕ್ಕವರಿಗೆ ಹರಿಯುತ್ತದೆ.   ಹೀಗೆ ಪ್ರಣಾಯಾಮದಲ್ಲಿ ಅನೇಕ ಸಾಧನೆ ಸಾಧ್ಯ. ಮುಖ್ಯವಾಗಿ ಇದರಿಂದ ಮನಸ್ಸು ದೇವರಲ್ಲಿ ನೆಲೆಗೊಳ್ಳುತ್ತದೆ. ಕೃಷ್ಣ ಇದನ್ನು ಯಜ್ಞ ಎನ್ನುತ್ತಾನೆ.
ಮೇಲಿನಿಂದ ಕೆಳಕ್ಕೆ ಹರಿಯುವ ಶಕ್ತಿ ಅಪಾನ, ಊರ್ಧ್ವ ಮುಖವಾಗಿ ಮೂಲಾದಾರದಿಂದ ಸಹಸ್ರಾರದತ್ತ ಹರಿಯುವ ಶಕ್ತಿ ಪ್ರಾಣ. ಈ ಎರಡು ಶಕ್ತಿಗಳನ್ನು ಹೃದಯದಲ್ಲಿ ಸ್ಥಗಿತ ಮಾಡುವುದು ಕುಂಭಕ. ಪೂರ್ಣವಾಗಿ ಒಳಗಿನ ಗಾಳಿಯನ್ನು ತನ್ನ ಬಲ ಮೂಗಿನ ಹೊರಳೆಯಿಂದ ಹೊರ ಹಾಕಿ, ತನ್ನ ಎಡ ಮೂಗಿನ ಹೊರಳೆಯಿಂದ ಶುದ್ಧ ಗಾಳಿಯನ್ನು ಇನ್ನು ಒಳಗೆ ಹೋಗುವುದಿಲ್ಲ ಅನ್ನುವಷ್ಟು ಪ್ರಮಾಣದಲ್ಲಿ ತೆಗೆದುಕೊಂಡುಪ್ರಾಣಶಕ್ತಿ  ಮೇಲಕ್ಕೆ ಹೋಗದಂತೆ, ಅಪಾನ ಕೆಳಗೆ ಹೋಗದಂತೆ ಶಕ್ತಿಯನ್ನು ಹೃದಯದಲ್ಲಿ ಸ್ಥಗಿತ ಗೊಳಿಸುವುದು- ಕುಂಭಕ.  ಇದು ಪ್ರಾಣಾಯಾಮ ಪರಾಯಣರು ಮಾಡುವ ಯಜ್ಞ. ಭಗವಂತ ಪ್ರಸನ್ನನಾಗಿ ನನಗೆ ಏಕಾಗ್ರತೆಯನ್ನು ಕೊಟ್ಟು, ನನ್ನ ಸಾಧನೆಯನ್ನು ಮುಂದುವರಿಸಲು ಸಹಕರಿಸಲಿ ಎನ್ನುವ ಅನುಸಂಧಾನದಿಂದ ಮಾಡುವ ಉಸಿರಾಟದ ಯಜ್ಞ. [ಗುರುವಿನ ಮಾರ್ಗದರ್ಶನವಿಲ್ಲದೆ ಪ್ರಾಣಾಯಾಮವನ್ನು ಪ್ರಯತ್ನಿಸಬಾರದು]                         

ಅಪರೇ ನಿಯತಹಾರಾಃ ಪ್ರಾಣಾನ್ ಪ್ರಾಣೇಷು ಜುಹ್ವತಿ   ।
ಸರ್ವೇSಪ್ಯೇತೇ ಯಜ್ಞವಿದೋ ಯಜ್ಞಕ್ಷಪಿತಕಲ್ಮಷಾಃ                          ॥೩೦॥

ಅಪರೇ ನಿಯತ ಆಹಾರಾಃ ಪ್ರಾಣಾನ್ ಪ್ರಾಣೇಷು ಜುಹ್ವತಿ |
ಸರ್ವೇ ಅಪಿ ಏತೇ ಯಜ್ಞವಿದಃ ಯಜ್ಞಕ್ಷಪಿತ ಕಲ್ಮಷಾಃ -ಕೆಲವರು ಆಹಾರವನ್ನು ಮಿತಗೊಳಿಸಿ ಇಂದ್ರಿಯವೃತ್ತಿಗಳನ್ನು ಇಂದ್ರಿಯಗಳಲ್ಲಿ ಹೋಮಿಸುತ್ತಾರೆ.[ಕಿರಿಯರಾದ ಇಂದ್ರಿಯ ದೇವತೆಗಳು ಹಿರಿಯರಾದ ಇಂದ್ರಿಯ ದೇವತೆಗಳಿಗೆ ಅಧೀನರೆಂದು ಚಿಂತನೆ ಮಾಡುತ್ತಾರೆ] ಈ ಎಲ್ಲರೂ ಯಜ್ಞದ ಬಗೆಯನ್ನು ಬಲ್ಲವರು; ಯಜ್ಞದಿಂದ ಕೊಳೆಯನ್ನು ತೊಳೆದುಕೊಂಡವರು.

ಕೆಲವರು ಆಹಾರ ನಿಯಂತ್ರಣಗೊಳಿಸಿ, ಇಂದ್ರಿಯ ಚಾಪಲವನ್ನು ಕಡಿಮೆ ಮಾಡಿಕೊಂಡು ಸಾಧನೆ ಮಾಡುತ್ತಾರೆ. ಆಹಾರ ನಿಯಂತ್ರಣ ಎಂದರೆ ಹೆಚ್ಚು ಆಹಾರ ಸೇವಿಸದೆ ಇರುವುದು, ಉಪ್ಪು-ಹುಳಿ-ಖಾರ ಕಡಿಮೆ ತಿನ್ನುವುದು ಇತ್ಯಾದಿ. ಇದರಿಂದ ಇಂದ್ರಿಯ ಸೆಳೆತ ಕಡಿಮೆಯಾಗುತ್ತದೆ. ಇದರ ಪರಿಣಾಮ ನೇರವಾಗಿ ಮನಸ್ಸಿನ ಮೇಲೆ. ಹೀಗೆ ಆಹಾರ ನಿಯಂತ್ರಣದ ಮೂಲಕ ಸಾಧನೆ ಒಂದು ಯಜ್ಞ. ಈ ಕಾರಣಕ್ಕಾಗಿ ನಮ್ಮಲ್ಲಿ ಅನೇಕ ಹಬ್ಬ ಹರಿದಿನಗಳಲ್ಲಿ, ಏಕಾದಶಿಯಂದು-ಉಪವಾಸ ಪದ್ಧತಿ ಸಾಮಾಜಿಕವಾಗಿ ನೆಡೆದು ಬಂತು. ಇದರಿಂದ ಕನಿಷ್ಠ ಆ ಒಂದು ದಿನವಾದರೂ ಮನಸ್ಸು ಸ್ವಚ್ಛವಾಗಿ ಭಗವಂತನ ಉಪಾಸನೆಯಲ್ಲಿ ತೊಡಗಲಿ ಎನ್ನುವುದು ಇದರ ಹಿಂದಿನ ಸಂಕಲ್ಪ.
ಇನ್ನೊಂದು ವಿಧವಾದ  ಯಜ್ಞ "ಪ್ರಾಣಾನ್ ಪ್ರಾಣೇಷು ಜುಹ್ವತಿ" ಅಂದರೆ ಪ್ರಾಣಗಳಲ್ಲಿ ಪ್ರಾಣವನ್ನು ಹೋಮಿಸುವುದು ಅಥವಾ ಇಂದ್ರಿಯಗಳಲ್ಲಿ ಇಂದ್ರಿಯವನ್ನು ಹೋಮಿಸುವುದು. ಇಲ್ಲಿ ಇಂದ್ರಿಯಗಳು ಎಂದರೆ ಇಂದ್ರಿಯಾಭಿಮಾನಿ ದೇವತೆಗಳು. ನಮ್ಮ ಪ್ರತಿಯೊಂದು ಇಂದ್ರಿಯಕ್ಕೂ ಒಬ್ಬ ಅಭಿಮಾನಿ ದೇವತೆ ಇದ್ದಾನೆ. ಈ ದೇವತೆಗಳು ಒಂದೊಂದು ಸ್ತರದಲ್ಲಿ ಕೆಲಸ ಮಾಡುತ್ತಾರೆ(Protocol). ಒಬ್ಬೊಬ್ಬ ದೇವತೆ  ಒಂದೊಂದು  ಮೆಟ್ಟಲಿನಲ್ಲಿ  ನಿಂತು  ಕಾರ್ಯ  ನಿರ್ವಹಿಸುತ್ತಿರುತ್ತಾರೆ ಹಾಗು ಇವರು ಭಗವಂತನನ್ನು ಸೇರುವಲ್ಲಿ ನಮಗೆ ಸಹಾಯ ಮಾಡುತ್ತಾರೆ. ಈ ದೇವತೆಗಳನ್ನು ವಿವಿಧ ಮೆಟ್ಟಲಿನಲ್ಲಿ ತಾರತಮ್ಯ ಚಿಂತನೆ ಮಾಡುವುದು, ಅದರ ಮುಖೇನ ಭಗವಂತನ ಚಿಂತನೆ ಒಂದು ಯಜ್ಞ. ಸರ್ವೋತ್ತಮನಾದ ಭಗವಂತ ಮೊದಲಿನವನು. ಎಲ್ಲವೂ ಅವನ ಅಧೀನ. ಆತನ ನಂತರ ಪ್ರಕೃತಿ ಮಾತೆ ಲಕ್ಷ್ಮಿ, ನಂತರ ಬ್ರಹ್ಮ-ವಾಯು, ಸರಸ್ವತಿ-ಭಾರತಿ, ಗರುಡ-ಶೇಷ-ರುದ್ರಸುಪರ್ಣಿ-ವಾರುಣಿ-ಪಾರ್ವತಿ, ಇಂದ್ರ-ಕಾಮರು, ದಕ್ಷಾದಿಗಳು, ಸೂರ್ಯ-ಚಂದ್ರ-ಯಮಾದಿಗಳು, ವರುಣ, ಅಗ್ನಿ, ಅಶ್ವೀದೇವತೆಗಳು, ಕುಬೇರ, ಯಜ್ಞ. ಹೀಗೆ ಒಬ್ಬರು ಇನ್ನೊಬ್ಬರಿಗೆ ಅಧೀನವಾಗಿ ವಿವಿಧ ಮೆಟ್ಟಲಿನಲ್ಲಿ   ಕಾರ್ಯ ನಿರ್ವಹಿಸುತ್ತಿರುತ್ತಾರೆ. ಈ ರೀತಿ ದೇಹ ಎನ್ನುವ ಈ ಅದ್ಭುತ ಯಂತ್ರವನ್ನು ನಿಯಂತ್ರಿಸುವ ದೇವತೆಗಳ ಅರಿವು, ಅದರ ಮೂಲಕ ಭಗವಂತನೆಡೆಗೆ ಸಾಗುವ ಜ್ಞಾನಸಾಧನೆ-ತಾರತಮ್ಯ ಜ್ಞಾನಯಜ್ಞ.
ಯಜ್ಞದಲ್ಲಿ ಒಂದು ಒಳ್ಳೆಯದು ಒಂದು ಕೆಟ್ಟದ್ದು ಅನ್ನುವುದಿಲ್ಲ. ಯಾರಿಗೆ ಯಾವ ಯಜ್ಞ ಒಗ್ಗುತ್ತದೆ ಅದರ ಮುಖೇನ ಸಾಧನೆ ಮಾಡುತ್ತಾರೆ. ಎಲ್ಲರೂ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಯಾರಿಗೆ ಯಾವುದು ಹಿತವೆನಿಸುತ್ತದೋ, ಸಾಧನೆಗೆ ಅನುಕೂಲವಾಗುತ್ತದೋ, ಆ ದಾರಿಯಲ್ಲಿ ಸಾಗಬೇಕು. ಯಜ್ಞದಿಂದ ಆರಾಧ್ಯನಾದ ಯಜ್ಞಮೂರ್ತಿಯಾದ ಭಗವಂತನತ್ತ ಸಾಗುವವನು, ತನ್ನ ಜೀವನದ ಪ್ರತಿಯೊಂದು ನಡೆಯನ್ನು ಭಗವಂತನ ಆರಾದನೆಯಾಗಿ ಮಾಡಿಕೊಳ್ಳುವ ಮೂಲಕ, ತನ್ನ ಬದುಕಿನ ಕಲ್ಮಶವನ್ನು ತೊಳೆದುಕೊಂಡು ಸ್ವಚ್ಚವಾದ ಬದುಕನ್ನು ಬಾಳುತ್ತಾನೆ.
  
ಯಜ್ಞಶಿಷ್ಟಾಮೃತಭುಜೋ ಯಾಂತಿ ಬ್ರಹ್ಮ ಸನಾತನಮ್    ।
ನಾಯಂ ಲೋಕೋSಸ್ತ್ಯಯಜ್ಞಸ್ಯ ಕುತೋSನ್ಯಃ ಕುರುಸತ್ತಮ ॥೩೧॥

ಯಜ್ಞ ಶಿಷ್ಟ ಅಮೃತ ಭುಜಃ ಯಾಂತಿ ಬ್ರಹ್ಮ ಸನಾತನಮ್ |
ನ ಅಯಮ್  ಲೋಕಃ ಅಸ್ತಿ ಅಯಜ್ಞಸ್ಯ ಕುತಃ ಅನ್ಯಃ ಕುರುಸತ್ತಮ -- ಯಜ್ಞದಲ್ಲಿ ಅರ್ಪಿಸಿ ಉಳಿದ ಅಮೃತವನ್ನುಣ್ಣುವವರು(ಯಜ್ಞ ಫಲದ ಅಮೃತ) ಶಾಶ್ವತವಾದ ಭಗವಂತನನ್ನು ಪಡೆಯುತ್ತಾರೆ. ಓ ಕುರುಶ್ರೇಷ್ಠ, ಯಜ್ಞವಿರದವನಿಗೆ ಈ ಲೋಕವೇ ಇಲ್ಲ. ಆ ಲೋಕದ ಮಾತೇನು?

ಯಜ್ಞದಲ್ಲಿ ಭಗವಂತನಿಗೆ ಅರ್ಪಿಸಿ ಉಳಿದಿದ್ದನ್ನು  'ಅಮೃತ' ಎನ್ನುತ್ತಾರೆ. ಅದು ನಮ್ಮನ್ನು ಸಾವಿನಿಂದಾಚೆಗೆ ಕೊಂಡೊಯ್ಯುತ್ತದೆ. ಜೀವನದ ಪ್ರತಿಯೊಂದು ನಡೆಯಲ್ಲಿ ಈ ರೀತಿಯ ಬದುಕನ್ನು ಬದುಕುತ್ತಿದ್ದರೆ ಕ್ರಮೇಣ ಎಂದೆಂದೂ ಬದಲಾಗದ, ಶಾಶ್ವತ ಮತ್ತು  ಸನಾತನವಾದ ಭಗವಂತನನ್ನು ಹೋಗಿ ಸೇರುತ್ತೇವೆ.
ಇಲ್ಲಿ 'ಸನಾತನ' ಎನ್ನುವಲ್ಲಿ ಇನ್ನೊಂದು ಧ್ವನಿ ಇದೆ. ಕೇವಲ ಉಪವಾಸ ಪ್ರಾಣಾಯಾಮ ಮಾಡಿದಾಗ ಮೋಕ್ಷ ಸಿಗದು. ಸನಾತನ(ನಾತನ-ನಾದನ) ಅಂದರೆ ಶಬ್ದ.   ಬ್ರಹ್ಮ ಸನಾತನ ಎಂದರೆ ಸರ್ವಶಬ್ದ ವಾಚ್ಯನಾದ, ವೇದವೇದ್ಯ ಭಗವಂತ.  ಇಂತಹ  ಭಗವಂತನನ್ನು ಶಾಸ್ತ್ರದ ಮುಖೇನ ತಿಳಿದುಮಾಡುವ ಯಜ್ಞದಿಂದ ಮೋಕ್ಷ ಸಾಧ್ಯ. ಇಲ್ಲದಿದ್ದರೆ ಏನೂ ಉಪಯೋಗವಿಲ್ಲ. ವೇದದಲ್ಲಿ ಹೇಳಿರುವ ಗುಣವನ್ನು ಬಲ್ಲವರಿಂದ ತಿಳಿದು ಉಪಾಸನೆ ಮಾಡುವವ, ವೇದವನ್ನು ಓದಿ ಅದರಿಂದ ತಿಳಿದವ, ತಿಳಿದು ಇನ್ನೊಬ್ಬರಿಗೆ ಹೇಳುವವ, ಹೀಗೆ ಎಲ್ಲರೂ ಸಾಧಕರೆನಿಸುತ್ತಾರೆ. ಯಜ್ಞದಲ್ಲಿ ಪ್ರಮುಖವಾಗಿ ಬೇಕಾಗಿರುವುದು ಜ್ಞಾನ, ಅನನ್ಯ ಭಕ್ತಿ ಮತ್ತು ಶರಣಾಗತಿ. "ಜೀವನದಲ್ಲಿ ಈ ಅನುಸಂಧಾನವಿಲ್ಲದವ, ಯಜ್ಞವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳದವ, ಇಹದಲ್ಲೂ ವ್ಯರ್ಥವಾಗಿ ಬದುಕುತ್ತಾನೆ-ಇನ್ನು ಪರದ ಮಾತೇನು" ಎನ್ನುತ್ತಾನೆ ಕೃಷ್ಣ.
ಇಲ್ಲಿ  ಅರ್ಜುನನನ್ನು ಕೃಷ್ಣ 'ಕುರುಸತ್ತಮ' ಎಂದು ಸಂಬೋಧಿಸಿದ್ದಾನೆ. ಕುರುವಂಶದಲ್ಲಿ ಶ್ರೇಷ್ಠನಾದ ನೀನು ನಿಷ್ಕ್ರೀಯನಾಗದೆ  ಕಾರ್ಯ ಪ್ರವೃತ್ತನಾಗು; ಯಜ್ಞದಲ್ಲಿ ತಮ್ಮನ್ನು ತೊಡಗಿಸಿಕೊಂಡುಬಂದ ವಂಶದಲ್ಲಿ ಹುಟ್ಟಿದ ಜ್ಞಾನಿಶ್ರೇಷ್ಠ, ಸಾತ್ವಿಕನಾದ ನೀನು- 'ಯುದ್ಧವನ್ನು ಯಜ್ಞವಾಗಿ ಮಾಡು' ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ.     

ಏವಂ ಬಹುವಿಧಾ ಯಜ್ಞಾ ವಿತತಾ ಬ್ರಹ್ಮಣೋ ಮುಖೇ    ।
ಕರ್ಮಜಾನ್ ವಿದ್ಧಿ ತಾನ್ ಸರ್ವಾನೇವಂ ಜ್ಞಾತ್ವಾ ವಿಮೋಕ್ಷ್ಯಸೇ         ॥೩೨॥

ಏವಮ್  ಬಹುವಿಧಾಃ  ಯಜ್ಞಾಃ ವಿತತಾಃ ಬ್ರಹ್ಮಣಃ ಮುಖೇ
ಕರ್ಮಜಾನ್ ವಿದ್ಧಿ ತಾನ್ ಸರ್ವಾನ್ ಏವಮ್  ಜ್ಞಾತ್ವಾ ವಿಮೋಕ್ಷ್ಯಸೇ- ಹೀಗೆ ಹಲವು ಬಗೆಯ ಯಜ್ಞಗಳು ಭಗವಂತನ ಬಾಯಲ್ಲಿ ಹರವಿಕೊಂಡಿವೆ. ಅವೆಲ್ಲ ಕರ್ಮದಿಂದಲೆ ಆಗುವಂಥವು ಎನ್ನುವುದನ್ನು ತಿಳಿ. ಹೀಗೆ ತಿಳಿದರೆ ಬಿಡುಗಡೆ ಹೊಂದುವೆ.

ಯಜ್ಞ ಅನ್ನುವುದಕ್ಕೆ ಹಲವು ಮುಖ. ಬದುಕಿನ ಯಾವುದೇ  ನಡೆಯನ್ನು ಭಗವಂತನ ಪ್ರಜ್ಞೆಯಿಂದ ಮಾಡಿದಾಗ, ಬದುಕಿನ ನಡೆ ಭಗವಂತನ ಕಡೆ ಸಾಗುವ ನಡೆಯಾದಾಗ, ಅದು ಯಜ್ಞವಾಗುತ್ತದೆ. ಯಾವ ರೀತಿ ಯಜ್ಞ ಮಾಡಿದರೂ ಅದು ಭಗವಂತನ ಮುಖದಲ್ಲೇ ಬಂದು ಸೇರುತ್ತದೆ.  ಸರ್ವಯಜ್ಞಗಳ ನಿಯಾಮಕ ಆ ಭಗವಂತನೊಬ್ಬನೆ. ವೈವಿಧ್ಯತೆ ಕೇವಲ ನಮ್ಮ ಅನುಸಂಧಾನ ಮತ್ತು ಕ್ರಿಯೆಯಲ್ಲಿ.
ನಾವು ನಮ್ಮ ಕರ್ಮದ ಮುಖೇನ ಯಜ್ಞ ಮಾಡಬೇಕು. ಕರ್ಮವನ್ನು ಬಿಟ್ಟು ಭಗವಂತನ ಉಪಾಸನೆ ಮಾಡುತ್ತೇನೆ ಎಂದು ಹೊರಟರೆ ಅದು ಸಾಧ್ಯವಿಲ್ಲ. ನಾವು ನಮ್ಮನಮ್ಮ ಕರ್ತವ್ಯ ಕರ್ಮದಲ್ಲಿ ಭಗವಂತನನ್ನು ಕಾಣುವುದು ಯಜ್ಞ. ಈ ಅನುಸಂಧಾನದಿಂದ  ಯಾವ ಕರ್ಮ ಮಾಡಿದರೂ ಅದು ನಮ್ಮನ್ನು ಬಿಡುಗಡೆಯ ಮಾರ್ಗದತ್ತ ಕೊಂಡೊಯ್ಯುತ್ತದೆ.
ಈವರಗೆ ಕೃಷ್ಣ ಕರ್ಮ-ಯಜ್ಞವಾಗುವುದು ಹೇಗೆ, ಅದರಲ್ಲಿನ ವಿಧ, ಅದರ ಸ್ವಾಮಿ- ಈ ವಿಚಾರವನ್ನು ವಿವರವಾಗಿ ಹೇಳಿದ. ಮೂಲಭೂತವಾಗಿ ಯಜ್ಞದಲ್ಲಿ ಬಾಹ್ಯ ಮತ್ತು ಅಂತರಂಗ ಯಜ್ಞ ಎನ್ನುವುದನ್ನೂ ನಾವು ನೋಡಿದೆವು. ಈ ಎರಡು ವಿಧವಾದ ಯಜ್ಞದಲ್ಲಿ ಯಾವುದಕ್ಕೆ ಹೆಚ್ಚು ಮಹತ್ವ ಮತ್ತು ಏಕೆ-ಈ ಕುರಿತು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.

Friday, April 22, 2011

Bhagavad Gita Kannada Chapter-04 Shloka 24


ಬ್ರಹ್ಮಾರ್ಪಣಂ ಬ್ರಹ್ಮ ಹವಿರ್ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್ ।
ಬ್ರಹ್ಮೈವ ತೇನ ಗಂತವ್ಯಂ  ಬ್ರಹ್ಮಕರ್ಮಸಮಾಧಿನಾ                        ॥೨೪॥

ಬ್ರಹ್ಮ ಅರ್ಪಣಮ್  ಬ್ರಹ್ಮ ಹವಿಃ ಬ್ರಹ್ಮ ಅಗ್ನೌ ಬ್ರಹ್ಮಣಾ ಹುತಮ್ ।
ಬ್ರಹ್ಮ ಏವ  ತೇನ ಗಂತವ್ಯಮ್   ಬ್ರಹ್ಮ ಕರ್ಮ ಸಮಾಧಿನಾ-ಅರ್ಪಣವೂ ಭಗವಂತ [ಭಗವಂತನಲ್ಲಿ ಅರ್ಪಣ]. ಅರ್ಪಿಸುವ ಹವಿಸ್ಸೂ ಭಗವಂತ[ಭಗವಂತನಾದ ಹವಿಸ್ಸು]. ಬೆಂಕಿಯ ರೂಪದಲ್ಲಿರುವ ಭಗವಂತನಲ್ಲಿ [ಭಗವದಧೀನವಾದ ಬೆಂಕಿಯಲ್ಲಿ] ಭಗವಂತನಿಂದಲೆ ಹೋಮಮಾಡಿತು. ಬಗೆಯ ಏಕಾಗ್ರತೆಯ ಜತೆಗೆ ಕರ್ಮದ ವ್ಯಗ್ರತೆಯೂ ಭಗವಂತನೆ [ಭಗವಂತನ ಅಧೀನವಾದದ್ದು]

ಅಭಿಮಾನ ತ್ಯಾಗದಿಂದ ಜ್ಞಾನದ ಸ್ಥಿತಿಯಲ್ಲಿ ಕರ್ಮ ಮಾಡಿದರೆ ಹೇಗಿರುತ್ತದೆ ಎನ್ನುವುದಕ್ಕೆ ಉತ್ತರ "ಬ್ರಹ್ಮಾರ್ಪಣಂ ಬ್ರಹ್ಮಹವಿಃ" . ಇಲ್ಲಿ ಅರ್ಪಣ ಅನ್ನುವದನ್ನು ಈ ರೀತಿ ಅರ್ಥ ಮಾಡಿಕೊಳ್ಳಬಹುದು. ನಾವು ಒಂದು ಹವಿಸ್ಸನ್ನು ಅಗ್ನಿಯಲ್ಲಿ ಭಗವಂತನಿಗೆ ಅರ್ಪಣೆ ಮಾಡುತ್ತೇವೆ- ಇದು ಅರ್ಪಣೆ. ಒಬ್ಬ ಹಸಿದವನಿಗೆ ಅನ್ನ ನೀಡುತ್ತೇವೆ-ಇದು ಅರ್ಪಣೆ. ಒಬ್ಬ ಯೋಗ್ಯ ವರನಿಗೆ ಕನ್ಯಾದಾನ ಮಾಡುತ್ತೇವೆ-ಇದು ಅರ್ಪಣೆ. ಒಬ್ಬ ಹಣದ ಸಮಸ್ಯಯಲ್ಲಿದ್ದಾಗ ಆತನಿಗೆ ಸಹಾಯ ಮಾಡುತ್ತೇವೆ-ಇದು ಅರ್ಪಣೆ. ಇಲ್ಲಿ ಕೊಡುವವನೂ ಆ ಭಗವಂತ, ತೆಗೆದುಕೊಳ್ಳುವವನ ಒಳಗಿದ್ದು ಸ್ವೀಕರಿಸುವವನೂ ಅವನೇ. ಎಲ್ಲವೂ ಭಗವಂತನ ಇಚ್ಛೆಯಂತೆ ನಡೆಯುತ್ತದೆ. ಹವಿಸ್ಸು ಅಂದರೆ ಕೊಡುವ ವಸ್ತು. ಅರ್ಪಣ-ಕೊಡುವ  ಕ್ರಿಯೆ. ಯಾವ ವಸ್ತು ಕೂಡಾ ಹವಿಸ್ಸಾಗಬಹುದು. ದಾನ ದ್ರವ್ಯ-ಹವಿಸ್ಸು, ಯಜ್ಞದಲ್ಲಿ ಅಗ್ನಿ ಮುಖೇನ ಅರ್ಪಿಸುವ ದ್ರವ್ಯ-ಹವಿಸ್ಸು. ನಾವು ಹುಟ್ಟುವಾಗ ಏನನ್ನೂ ತೆಗೆದುಕೊಂಡು ಬಂದಿಲ್ಲ, ಎಲ್ಲವನ್ನೂ ಈ ಪ್ರಕೃತಿಯಿಂದ ಪಡೆದಿರುವುದು ಅಂದಮೇಲೆ,  ನಾವು ಕೊಡುವ ಹವಿಸ್ಸು ಕೂಡಾ ಆ ಭಗವಂತನ ಅಧೀನ. ಇಲ್ಲಿ 'ನನ್ನದು' ಎನ್ನುವುದು ಹಾಸ್ಯಾಸ್ಪದ.
ಅಗ್ನಿ   ಮುಖೇನ  ನಾವು ದ್ರವ್ಯವನ್ನು ಅರ್ಪಿಸುತ್ತೇವೆ. ಇಲ್ಲಿ ಅಗ್ನಿ ಎಂದರೆ ಬರಿಯ ಜಡವಾದ ಬೆಂಕಿ ಅಲ್ಲ. ಸಂಸ್ಕೃತದಲ್ಲಿ ಅಗ್ನಿ ಎಂದರೆ ಅಗ್ನಿಯ ಅಭಿಮಾನಿ ದೇವತೆ, ಅದು  ಚೇತನ. ಈ ಕಾರಣಕ್ಕಾಗಿ ಅಗ್ನಿಯನ್ನು ಸಾಕ್ಷಿಯಾಗಿ ಬಳಸುತ್ತಾರೆ (ಉದಾ: ಅಗ್ನಿ ಸಾಕ್ಷಿಯಾಗಿ ಮದುವೆಯಾಗುವುದು). ಜಡವನ್ನು ಎಂದೂ ಸಾಕ್ಷಿಯಾಗಿ ಬಳಸಲು ಬರುವುದಿಲ್ಲ. ಈ ಅಗ್ನಿದೇವತೆಯ ಒಳಗೆ ತಾರಕ  ಶಕ್ತಿಯಾಗಿ ಆ ಭಗವಂತನಿದ್ದಾನೆ.  ಇಲ್ಲಿ ಕೊಡುವುದು, ಕೊಡತಕ್ಕದ್ದು, ಕೊಡುವ ಕ್ರಿಯೆ, ಕೊಟ್ಟಿದ್ದು ಎಲ್ಲಿಯೋ-ಎಲ್ಲವೂ ಭಗವಂತನ ಅಧೀನ. ಎಲ್ಲಾ ಕ್ರಿಯೆಯಲ್ಲಿ  ಭಗವಂತನ ಸನ್ನಿಧಾನವಿದೆ. ಕೊಡತಕ್ಕ ವಸ್ತುವಿನಲ್ಲಿ ಆತನ ಸನ್ನಿಧಾನವಿರುವುದರಿಂದ ಅದು ಉಪಯುಕ್ತವಾಗಿರುತ್ತದೆ. ಜ್ಞಾನರೂಪನಾದ ಭಗವಂತ ಅಗ್ನಿಯಲ್ಲಿ ಸನ್ನಿಹಿತನಾಗಿ ಭಕ್ತಿ ರೂಪದ ಆಹುತಿಯನ್ನು ಸ್ವೀಕರಿಸುತ್ತಾನೆ. ಈ ಅನುಸಂಧಾನದಿಂದ ನಮ್ಮ ಕ್ರಿಯೆ ನಡೆದರೆ ನಾವು ಭಗವಂತನ ಆರಾದನೆ ಮಾಡಿದಾಗ  "ಬ್ರಹ್ಮೈವ ತೇನ ಗಂತವ್ಯಂ"-ಹೋಗಿ ಸೇರುವುದೂ ಭಗವಂತನನ್ನೇ. ಏಕೆಂದರೆ "ಬ್ರಹ್ಮಕರ್ಮಸಮಾಧಿನಾ" -ಎಲ್ಲವೂ ಸರ್ವಸಮರ್ಥನಾದ ಭಗವಂತನ ಅಧೀನ.
 ಇಲ್ಲಿ ಬ್ರಹ್ಮಾರ್ಪಣ ಎಂದರೆ ಎಲ್ಲಾ ಕ್ರಿಯೆಯೂ ಭಗವಂತನಿಗೆ ಎಂದರ್ಥ. ಪ್ರಪಂಚದಲ್ಲಿರುವ ಎಲ್ಲಾ ವಸ್ತುವನ್ನು  ಸೃಷ್ಟಿಸಿದ್ದು ಆ ಭಗವಂತ. ಪ್ರಕೃತಿಯಲ್ಲಿ ಸೃಷ್ಟಿಯಾಗಿರುವುದನ್ನು ನಾವು ಉಪಯೋಗಿಸುತ್ತೇವೆ ಅಷ್ಟೆ. ಅಗ್ನಿ ಭಗವಂತನ ಅಧೀನವಾಗಿ ಕಾರ್ಯ ನಿರ್ವಹಿಸುತ್ತಾನೆ. 'ನಾವು ಮಾಡುವ ಕ್ರಿಯೆ ಆ ಭಗವಂತನ ಪ್ರೇರಣೆ. ನಾವು ಮಾಡುವ ಎಲ್ಲಾ ಕರ್ಮವೂ ಬ್ರಹ್ಮಕರ್ಮ. ಅದು ಭಗವಂತನ  ಪೂಜಾರೂಪವಾದ ಕರ್ಮ'- ಇದು ಕರ್ಮದ ಬಗ್ಗೆ ನಮಗಿರಬೇಕಾದ ಜ್ಞಾನ. ನಾವು ಮಾಡುವ ಕರ್ಮದಲ್ಲಿ ನಮ್ಮ ಸ್ವಾರ್ಥ ಇರಕೂಡದು. ಅದು ಭಗವಂತನ ಪೂಜಾ ರೂಪವಾಗಿರಬೇಕು. ಯಜ್ಞ ಎಂದರೆ ಅಗ್ನಿ ಮುಖೇನ ಮಾಡುವ ಕ್ರಿಯೆ ಮಾತ್ರ ಅಲ್ಲ. ನಮ್ಮ ಬದುಕನ್ನು ಭಗವನ್ಮಯ ಮಾಡಿಕೊಂಡಾಗ ನಮ್ಮ ಜೀವನದ ಎಲ್ಲಾ ನಡೆಯೂ ಯಜ್ಞವಾಗಿಬಿಡುತ್ತದೆ. ನಮ್ಮ ಬದುಕು ಭಗವಂತನ ಚಿಂತನೆಗೆ ಮೀಸಲಾದಾಗ ನಮ್ಮ ಬದುಕೇ ಒಂದು ಮಹಾಯಜ್ಞ. ಭಗವಂತನ ಚಿಂತನೆ ಇಲ್ಲದೆ ಸ್ವಾರ್ಥದಿಂದ  ಮಾಡುವ ಅಗ್ನಿಮುಖೇನವಾದ  ಯಜ್ಞ ಕೇವಲ ವ್ಯಾಪಾರ.  ಪೌರೋಹಿತ್ಯ ಕೂಡಾ ಹೀಗೆ.  ತಿಳಿದು ಮಾಡಿದಾಗ ಮಾತ್ರ ಅದು ನಿಜವಾದ ಪೌರೋಹಿತ್ಯ, ಇಲ್ಲದಿದ್ದರೆ ಅದು ಕೇವಲ ದುಡ್ಡಿಗಾಗಿ ಮಾಡುವ ದಂದೆ.

ಈ ತನಕ  ಕೃಷ್ಣ ಕರ್ಮದ ಪ್ರಭೇದದ ಬಗ್ಗೆ ಹೇಳಿದ. ದೇವರ ಪೂಜಾರೂಪವಾಗಿ ಮಾಡುವ ಪ್ರತಿಯೊಂದು ಕಾರ್ಯ ಕೂಡಾ ಯಜ್ಞ ಎನ್ನುವ ವಿಚಾರ ವಿಶ್ಲೇಷಣೆ ಮಾಡಿದ. ಮುಂದೆ ಯಜ್ಞದ ಬಗ್ಗೆ ವ್ಯಾಪಕವಾದ ಅರ್ಥವನ್ನು ಕೃಷ್ಣ ವಿವರಿಸುತ್ತಾನೆ. ಹಿಂದೆ ಹೇಳಿದಂತೆ ಅಗ್ನಿ ಮುಖದಲ್ಲಿ ಮಾಡುವ ಪೂಜೆ  ಮಾತ್ರ ಯಜ್ಞವಲ್ಲ. ಕೊಡುವಿಕೆ, ಪೂಜೆಯಂತಹ ಒಳ್ಳೆಯ ಕಾರ್ಯಕ್ಕೆ ಒಂದು ಕಡೆ ಸೇರುವಿಕೆ(ಸಂಗತೀಕರಣ), ಜ್ಞಾನದಾನ, ಅನ್ನದಾನ, ನಮ್ಮಲ್ಲಿ ಹೆಚ್ಚಿಗೆ ಇರುವುದನ್ನು ಇಲ್ಲದವರಿಗೆ ಹಂಚಿ ಬದುಕುವುದು, ಎಲ್ಲವೂ ಒಂದು ಯಜ್ಞವೇ.     ಮುಂದಿನ ಶ್ಲೋಕಗಳಲ್ಲಿ ಯಜ್ಞದ ವಿಶ್ವತೋಮುಖ ಚಿತ್ರವನ್ನು ಕೃಷ್ಣ ನಮಗೆ ನೀಡುತ್ತಾನೆ.
ಸಾಮಾನ್ಯವಾಗಿ ಯಜ್ಞದಲ್ಲಿ ಎರಡು ವಿಧ. ಒಂದು ಅಂತರಂಗ ಯಜ್ಞ ಇನ್ನೊಂದು ಬಾಹ್ಯಯಜ್ಞ. ಅಂತರಂಗದಲ್ಲಿ  ಭಗವಂತನ ನಿರಂತರ ಪೂಜೆ(ದೇವಪೂಜಾ); ಚಿತ್ತ-ಮನಸ್ಸು ಭಗವಂತನ ಜೊತೆಗೆ ಸೇರುವುದು(ಸಂಗತೀಕರಣ) ಮತ್ತು ನಮ್ಮನ್ನು ನಾವು ಭಗವಂತನಿಗೆ ಅರ್ಪಿಸಿಕೊಳ್ಳುವುದು-ಇದು ಪರಿಪೂರ್ಣವಾದ ಮಾನಸ ಯಜ್ಞ. ಇನ್ನೊಂದು ರೀತಿಯಲ್ಲಿ ಯಜ್ಞದಲ್ಲಿ ಎರಡು ಬಗೆ:  ಜ್ಞಾನಪ್ರದವಾದ ಯಜ್ಞ ಹಾಗು ಕರ್ಮಪ್ರದವಾದ ಯಜ್ಞ. ಈ ಎಲ್ಲಾ ವಿವರಣೆಯನ್ನು ಮುಂದಿನ ಶ್ಲೋಕಗಳಲ್ಲಿ ಕೃಷ್ಣ ವಿವರಿಸಿದ್ದಾನೆ.

Bhagavad Gita Kannada Chapter-04 Shloka 21-23


ನಿರಾಶೀರ್ಯತಚಿತ್ತಾತ್ಮಾತ್ಯಕ್ತಸರ್ವಪರಿಗ್ರಹಃ            ।
ಶಾರೀರಂ ಕೇವಲಂ ಕರ್ಮ ಕುರ್ವನ್ ನಾSಪ್ನೋತಿ ಕಿಲ್ಬಿಷಮ್           ॥೨೧॥

ನಿರಾಶೀಃ ಯತ ಚಿತ್ತ ಆತ್ಮಾ ತ್ಯಕ್ತ ಸರ್ವ ಪರಿಗ್ರಹಃ |
ಶಾರೀರಮ್  ಕೇವಲಮ್  ಕರ್ಮ ಕುರ್ವನ್ ನ ಆಪ್ನೋತಿ ಕಿಲ್ಬಿಷಮ್ -- ಮನಸ್ಸು-ಚಿತ್ತಗಳನ್ನು ಹದ್ದಿನಲ್ಲಿರಿಸಿದಾಗ ಹಂಬಲ ದೂರವಾಗುತ್ತದೆ. ನಾನು-ನನ್ನದು ಎಂಬ ಭಾವ ಮರೆಯಾಗುತ್ತದೆ. ದೇಹ ಪೋಷಣೆಗಷ್ಟೆ ಕರ್ಮ ಮಾಡಿದರೂ ದೋಷ ತಟ್ಟುವುದಿಲ್ಲ.

ನಿತ್ಯತೃಪ್ತರಾಗಿರಬೇಕು ಅನ್ನುವ ಆಸೆ ಇದೆ ಆದರೆ ಅದನ್ನು ರೂಢಿಸಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಇಲ್ಲಿ ಕೃಷ್ಣ ಉತ್ತರಿಸುತ್ತಾನೆ. ಲೌಕಿಕ ಆಸೆ ಇದ್ದಾಗ ಅತೃಪ್ತಿ ತಪ್ಪಿದ್ದಲ್ಲ. ಇಲ್ಲದ್ದನ್ನು ಬಯಸಿ ಎಂದೂ ಸುಖ ಸಿಗುವುದಿಲ್ಲ. ತೃಪ್ತಿ ಇರಬೇಕಾದರೆ ಮೊದಲು ಬೇಕು ಬೇಡಗಳ ಪಟ್ಟಿಯನ್ನು ಕಡಿಮೆ ಮಾಡಬೇಕು. ಮೊದಲು  'ಯತಚಿತ್ತನಾಗು' ಅದರಿಂದ ನಿರಾಶಿಯಾಗು (be content with whatever you have ) ಎನ್ನುತ್ತಾನೆ ಕೃಷ್ಣ.  ಮೊದಲು  ನಾವು  ನಮ್ಮ  ಚಿತ್ತವನ್ನು  ಮತ್ತು  ಮನಸ್ಸನ್ನು  ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲಿ ಚಿತ್ತ ಎಂದರೆ ನಮ್ಮ ಹಿಂದಿನ ನೆನಪುಗಳು(Memory). ಹಿಂದೆ ಮೂಡಿದ ಆಸೆಗಳ ನೆನಪಿನಕೋಶ-ಚಿತ್ತ. ಚಿತ್ತದಲ್ಲಿ ಆಸೆ ನಿರಾಸೆಗಳ ಕಂತೆ ತುಂಬಿರುತ್ತದೆ. ಮೊದಲು ಹಿಂದಿನ ಆಸೆಗಳು ಮರುಕಳಿಸದಂತೆ ನೋಡಿಕೊ. ಭೂತಕಾಲವನ್ನು ಮತ್ತೆ ಕೆದುಕಬೇಡ. ಅದನ್ನು ಪೂರ್ತಿ ಬಿಟ್ಟುಬಿಡು ಹಾಗು ಮನಸ್ಸು ವರ್ತಮಾನ ಕಾಲದಲ್ಲಿ ಬೇಕು ಬೇಡಗಳೆಡೆಗೆ  ಹರಿಯದಂತೆ ನಿಯಂತ್ರಣ ಮಾಡು. ಈ ರೀತಿ ನಾವು ರೂಢಿ ಮಾಡಿಕೊಂಡರೆ ಇದರಿಂದ ತೃಪ್ತರಾಗಿರಲು ಸಾಧ್ಯ. 
ಹೀಗೆ ತೃಪ್ತಿಯನ್ನು ಸಾಧಿಸಿದ ನಂತರ ಅದರ ಜೊತೆಗೆ ಆತ್ಮಾ ತ್ಯಕ್ತ ಸರ್ವ ಪರಿಗ್ರಹಃ. ಇಲ್ಲಿ ಪರಿಗ್ರಹ ಎಂದರೆ ಸಂಸಾರ, ಕುಟುಂಬ, ಎಲ್ಲವನ್ನು ಬಿಟ್ಟು ಕಾಡಿಗೆ ಹೋಗುವುದಲ್ಲ. ಎಲ್ಲವುದರ ಜೊತೆಗೆ ಇದ್ದೂ ಅದರ ಮೇಲಿನ ಅತೀವ ಮೋಹ(Over attachment)ವನ್ನು ಬಿಟ್ಟುಬಿಡುವುದು. ಅಭಿಮಾನ ತ್ಯಾಗ (Detached  attachment)ಮಾಡುವುದು. ಎಲ್ಲವೂ ಇರಲಿ ಆದರೆ ಅದನ್ನೇ ಹಚ್ಚಿಕೊಂಡು ಅದರಲ್ಲೇ ಮುಳುಗಬೇಡ. ಅದರೊಂದಿಗೆ ಬದುಕು- ಆದರೆ ಅಂಟಿಸಿಕೊಳ್ಳಬೇಡ. ತಾವರೆಯ ಎಲೆ ಹೇಗೆ ನೀರಿನಲ್ಲೇ ಇದ್ದು  ನೀರನ್ನು ಅಂಟಿಸಿಕೊಳ್ಳುವುದಿಲ್ಲವೋ  ಹಾಗೆ.  ಹೀಗೆ ಇದ್ದಾಗ ನಾವು ಎಲ್ಲಾ ಮಾಡಿದರೂ ಏನೂ ಮಾಡುವುದಿಲ್ಲ. ಏಕೆಂದರೆ ಅರಿವಿನಿಂದ ಮಾಡಿದಾಗ ಕರ್ಮದ ಲೇಪವಿಲ್ಲ. ನಾವು ಅಂಟಿಸಿಕೊಳ್ಳದೆ  ಬದುಕಲು ಕಲಿತರೆ ಕರ್ಮ ಕೂಡಾ ನಮಗೆ ಅಂಟುವುದಿಲ್ಲ. ಶರೀರ ನಿರ್ವಹಣೆಗೆ ಬೇಕಾದ ಕರ್ಮವನ್ನು ಮಾನಸಿಕವಾಗಿ ಅಂಟಿಸಿಕೊಳ್ಳದೆ, ಬಡಾಯಿ ಇಲ್ಲದೆ ಕರ್ಮ ನಿರ್ವಹಿಸು. ಆಗ ಕರ್ಮದ ಕೊಳೆ ನಿನಗಂಟುವುದಿಲ್ಲ ಎನ್ನುತ್ತಾನೆ ಕೃಷ್ಣ.    

ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ    ।
ಸಮಃ ಸಿದ್ಧಾವಸಿದ್ಧೌ ಚ ಕೃತ್ವಾSಪಿ ನ ನಿಬದ್ಧ್ಯತೇ                 ॥೨೨॥

ಯದೃಚ್ಛಾ ಲಾಭ ಸಂತುಷ್ಟಃ  ದ್ವಂದ್ವ ಅತೀತಃ ವಿಮತ್ಸರಃ |
ಸಮಃ ಸಿದ್ಧೌ ಅಸಿದ್ಧೌ ಚ ಕೃತ್ವಾ ಅಪಿ ನ ನಿಬಧ್ಯತೇ -- ತಾನಾಗಿಯೇ ಸಿಕ್ಕಿದ್ದರಲ್ಲಿ ಸಂತಸಪಡುವವನು, ಬದುಕಿನ ಇಬ್ಬಂದಿತನವನ್ನು ಮೀರಿನಿಂತವನು, ಹೆರವರ ಏಳಿಗೆಗೆ ಕಿಚ್ಚುಪಡದವನು, ಗಳಿಕೆಯನ್ನೂ ಕಲಿಕೆಯನ್ನೂ ಒಂದೇ ಬಗೆಯಿಂದ ಕಾಣುವವನು ಕರ್ಮ ಮಾಡಿದರೂ ಅದರ ಸೆರೆಗೆ ಸಿಕ್ಕುವುದಿಲ್ಲ.

ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿ ಬಂದಾಗ ಕಾಣುವ ಮುಖ್ಯ ಲಕ್ಷಣದ ಬಗ್ಗೆ ಇಲ್ಲಿ ವಿವರಣೆ ಇದೆ.  ತೃಪ್ತಿಯನ್ನು ಸಾಧಿಸಿದವನಿಗೆ ಏನಾದರೂ ಸಿಕ್ಕಿದರೆ ಅದರಲ್ಲೇ ಸಂತೋಷವಾಗಿರುತ್ತಾನೆ. ಸಿಕ್ಕಿದ್ದು ಸಾಲದೆಂದಾಗಲಿ, ಇನ್ನೇನೋ ಸಿಗಲಿ ಎಂದಾಗಲಿ ಆತನ ಮನಸ್ಸು ಬಯಸುವುದಿಲ್ಲ. ಏಕೆಂದರೆ ನಮಗೆ ಏನೇ ಸಿಕ್ಕಿದರೂ ಅದು ಭಗವಂತನ ಇಚ್ಛೆಯಿಂದ ಸಿಕ್ಕಿರುವುದು. ಉದಾಹರಣೆಗೆ ಉದ್ಯೋಗ. ಪ್ರತಿಭೆ ಇದ್ದವರಿಗೆಲ್ಲಾ ಉದ್ಯೋಗ ಸಿಗುವುದಿಲ್ಲ. ಉದ್ಯೋಗ ಸಿಗುವುದು, ಅದರಿಂದ ಸಂಬಳ ಸಿಗುವುದು- ಎಲ್ಲವೂ ಭಗವಂತನ ಇಚ್ಛೆಯಂತೆ. ಆದ್ದರಿಂದ ಎಲ್ಲವೂ ಭಗವಂತನ ಸಂಕಲ್ಪ ಎಂದು ತಿಳಿದು ನಿಸ್ವಾರ್ಥ ಕರ್ಮದಲ್ಲಿ ತೊಡಗಿದಾಗ ಮನಸ್ಸು ನಿರ್ಮಲವಾಗುತ್ತದೆ. ಈ ಸ್ಥಿತಿಯಲ್ಲಿ ಅಹಂಕಾರ ಎಂದೂ ಹತ್ತಿರ ಸುಳಿಯುವುದಿಲ್ಲ. ಬಡತನವಾಗಲಿ, ಸಿರಿತನವಾಗಲಿ, ನಾವು ಹುಟ್ಟುವ ಮನೆಯಾಗಲಿ, ಯಾವುದೂ ನಮ್ಮ ಕೈಯಲ್ಲಿಲ್ಲ. ಎಲ್ಲವೂ ಆ ಈಶ್ವರ ಇಚ್ಛೆ. ಇದನ್ನು  ತಿಳಿದು ಬದುಕುವುದು ಯತಚಿತ್ತಾತ್ಮನ ಗುರುತು.
ಇನ್ನು ಎರಡನೆ ಲಕ್ಷಣ 'ದ್ವಂದ್ವಾತೀತ ಜೀವನ'. ನಮ್ಮ ಜೀವನ ಎಂದರೆ ದ್ವಂದ್ವ. ಹಗಲು-ರಾತ್ರಿ, ಲಾಭ-ನಷ್ಟ, ಸೋಲು-ಗೆಲುವು, ಹುಟ್ಟು-ಸಾವು ಹೀಗೆ ಎಲ್ಲವೂ ದ್ವಂದ್ವ. ನಾವು ಈ ದ್ವಂದ್ವದ ನಡುವೆಯೇ ಬದುಕಬೇಕು. ಹಗಲು-ರಾತ್ರಿಗೆ ನಾವು ಹೇಗೆ ಹೊಂದಿಕೊಂಡು ಬದುಕುತ್ತೇವೆ ಹಾಗೆ 'ಇತರ ದ್ವಂದ್ವದ ಆಘಾತಕ್ಕೆ ಒಳಗಾಗದೆ ಬದುಕಲು ಕಲಿಎನ್ನುತ್ತಾನೆ ಕೃಷ್ಣ. ಸಿಗದಿದ್ದಾಗ ದುಃಖವಿಲ್ಲ, ಸಿಕ್ಕಾಗ ಹಾರಾಟವಿಲ್ಲ. ಎರಡೂ ಸ್ಥಿತಿಯಲ್ಲಿ ಏಕರೂಪವಾದ ಮನಃಸ್ಥಿತಿಯನ್ನು ಗಳಿಸುವುದು ದ್ವಂದ್ವಾತೀತ ಜೀವನ.
ದ್ವಂದ್ವಾತೀತನಾಗಿ ಬದುಕುವಾಗ ಒಂದು  ಸಮಸ್ಯೆ ಎದುರಾಗುತ್ತದೆ. ಇದ್ದದ್ದು ಸಾಕು ಎಂದು ಬದುಕುತ್ತಿರುವಾಗ ನಮ್ಮ ಜೊತೆಗಿನ ಇನ್ನೊಬ್ಬ ಹೆಚ್ಚು ಗಳಿಸಲಾರಂಬಿಸಿದರೆ, ಅದನ್ನು ನೋಡಿ ನಮಗೆ ಕಿಚ್ಚು ಹುಟ್ಟಿಕೊಳ್ಳುತ್ತದೆ. ನಮ್ಮ ಕೆಳಗಿನ ಮಟ್ಟದವರು, ನಮ್ಮ ಪಕ್ಕದ ಮನೆಯವರು  ಯಾವುದೋ ಕಾರಣಕ್ಕೆ ಶ್ರೀಮಂತರಾದರೆ ನಮಗೆ ಸಂಕಟ! ಇಲ್ಲಿ ಕೃಷ್ಣ ಹೇಳುತ್ತಾನೆ "ಇನ್ನೊಬ್ಬರನ್ನು ಕಂಡು ಎಂದೂ ಕಿಚ್ಚು ಪಡಬೇಡ" ಎಂದು. ಯಾರ್ಯಾರಿಗೆ ಎಷ್ಟೆಷ್ಟು ಸಿಗಬೇಕೋ ಅಷ್ಟಷ್ಟೇ ಸಿಗುವುದು. ನಾವು ಎಷ್ಟು ಕೌಶಲ್ಯ(expertise)ರಾದರೂ ಕೂಡಾ ಭಗವಂತ ಅನುಗ್ರಹಿಸದೇ ಇದ್ದರೆ ನಾವು ಮೇಲಕ್ಕೇಳಲು ಸಾಧ್ಯವಿಲ್ಲ. ಈ ಎಚ್ಚರವೇ  "ಯದೃಚ್ಛಾ ಲಾಭ ಸಂತುಷ್ಟಃ"
ಇನ್ನು ಸಿದ್ಧಿ ಅಸಿದ್ಧಿಗಳು. ಉದಾಹರಣೆಗೆ ಧ್ಯಾನ(Meditation): ಧ್ಯಾನದಲ್ಲಿ ಏಕಾಗ್ರತೆ ಪಡೆಯಲು ಆಗದೆ ಇನ್ನೇನೋ ಕಾಣಿಸಿದರೆ ಏನು ಕಾಣಿಸಿತೋ ಅದರಲ್ಲೇ ಭಗವಂತನನ್ನು ಕಾಣು. ಅದಕ್ಕಾಗಿ ತಲೆ ಕೆಡಿಸಿಕೊಳ್ಳಬೇಡ. ಏಕಾಗ್ರತೆ ಸಾಧ್ಯವಾದರೆ ಭ್ರಮೆಗೊಳಗಾಗಬೇಡ. ಏಕೆಂದರೆ ಸಿದ್ಧಿ-ಅಸಿದ್ಧಿಗಳು ನಮ್ಮ ಕೈಯಲ್ಲಿಲ್ಲ. ಅಸಿದ್ಧಿಯೂ ಸಿದ್ಧಿಯ ಮೆಟ್ಟಿಲು. ಇಂತಹ ಮಾನಸಿಕ ಸಮತೋಲನ ಲೌಕಿಕ ಮತ್ತು ಅಧ್ಯಾತ್ಮಿಕ ಜೀವನದಲ್ಲಿ ಅತಿಮುಖ್ಯ. ಇಂತಹ ಸ್ಥಿತಿಯಲ್ಲಿ ಕರ್ಮ ಎಂದೂ ಬಂಧಕವಾಗುವುದಿಲ್ಲ.  

ಗತ ಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತಚೇತಸಃ   ।
ಯಜ್ಞಾಯಾSಚರತಃ ಕರ್ಮ ಸಮಗ್ರಂ ಪ್ರವಿಲೀಯತೇ          ॥೨೩॥

ಗತ ಸಂಗಸ್ಯ ಮುಕ್ತಸ್ಯ ಜ್ಞಾನ ಅವಸ್ಥಿತ ಚೇತಸಃ |
ಯಜ್ಞಾಯ ಆಚರತಃ ಕರ್ಮ ಸಮಗ್ರಮ್  ಪ್ರವಿಲೀಯತೇ -ಫಲದ ನಂಟು ತೊರೆದು, ದೇಹಾಭಿಮಾನ ತೊರೆದು, ಭಗವಂತನ ಅರಿವಿನಲ್ಲೆ ಬಗೆನೆಟ್ಟು, ಪೂಜೆಯೆಂದು ಮಾಡುವವನ ಎಲ್ಲಾ ಕರ್ಮ ಲಯಗೊಳ್ಳುತ್ತದೆ.

ಈ ಶ್ಲೋಕದಲ್ಲಿ ಮೇಲೆ ಹೇಳಿದ ಎಲ್ಲಾ ವಿಷಯವನ್ನು ಉಪಸಂಹಾರ ರೂಪದಲ್ಲಿ ಭಗವಂತ ನಮ್ಮ ಮುಂದಿಟ್ಟಿದ್ದಾನೆ.
ಫಲದ ಬಗ್ಗೆ ಅತಿಯಾದ ಆಸೆ ಇಟ್ಟುಕೊಳ್ಳಬೇಡ; ಅತಿಯಾದ ನಿರೀಕ್ಷೆ ಬೇಡ; ಕರ್ತವ್ಯ ನಿಷ್ಠೆ ಇರಲಿ; ದೇಹಾಭಿಮಾನ, ಪರಿವಾರದ ಅಭಿಮಾನವನ್ನು ತೊರೆದು ನಿರ್ಲಿಪ್ತನಾಗಿ ಬದುಕಲು ಕಲಿ; ಮನಸ್ಸನ್ನು ಜ್ಞಾನಸ್ವರೂಪನಾದ ಭಗವಂತ(ಚೇತಸ್ಸು)ನಲ್ಲಿ ನೆಲೆಗೊಳಿಸು. ಹೀಗೆ ಬದುಕಿದಾಗ ನಾವು ಮಾಡುವ ಕರ್ಮವೆಲ್ಲವೂ ಯಜ್ಞವಾಗಿ ಯಜ್ಞ ನಾಮಕ ಭಗವಂತನನ್ನು ಸೇರುತ್ತದೆ ಹಾಗು  ಜ್ಞಾನದ ಬೆಂಕಿಯಲ್ಲಿ ಕರ್ಮದ ಕೊಳೆ ಸುಟ್ಟುಹೋಗುತ್ತದೆ.

Wednesday, April 20, 2011

Bhagavad gita Kannada Chapter-04 Shloka 19-20


ಯಸ್ಯ ಸರ್ವೇ ಸಮಾರಂಭಾಃ ಕಾಮಸಂಕಲ್ಪವರ್ಜಿತಾಃ            ।
ಜ್ಞಾನಾಗ್ನಿದಗ್ಧಕರ್ಮಾಣಂ ತಮಾಹುಃ ಪಂಡಿತಂ ಬುಧಾಃ       ॥೧೯॥

ಯಸ್ಯ ಸರ್ವೇ ಸಮಾರಂಭಾಃ ಕಾಮ ಸಂಕಲ್ಪವರ್ಜಿತಾಃ 
ಜ್ಞಾನ ಅಗ್ನಿ ದಗ್ಧ ಕರ್ಮಾಣಮ್  ತಮ್ ಆಹುಃ ಪಂಡಿತಮ್  ಬುಧಾಃ -- ಮಾಡುವ ಬಯಕೆ, ಪಡೆಯುವ ಬಯಕೆಗಳನ್ನು ತೊರೆದು ಎಲ್ಲ ಕರ್ಮಗಳಲ್ಲು ತೊಡಗುವವನು ಅರಿವಿನ ಬೆಂಕಿಯಿಂದ ಕರ್ಮಗಳನ್ನು ಸುಟ್ಟವನು. ಬಲ್ಲವರು ಅಂಥವನನ್ನು ಪಂಡಿತ ಎನ್ನುತ್ತಾರೆ.

ನಮ್ಮ ಜೀವನದ ತೊಡಗುವಿಕೆಯ ಹಿಂದೆ ಒಂದು ಕಾಮನೆ,ಸಂಕಲ್ಪ ಇರುತ್ತದೆ. ನಾನು ಸುಖ ಪಡಬೇಕು, ನನ್ನ ಮನೆಮಂದಿಯನ್ನು ಸುಖವಾಗಿಡಬೇಕು ಎನ್ನುವ ಕಾಮನೆ. ಇದಕ್ಕಾಗಿ ಇನ್ನೇನೋ ವಿಧಾನವನ್ನು ಅನುಸರಿಸುತ್ತೇವೆ. ಇದು ಪ್ರತಿಯೊಂದು ಕ್ರಿಯೆಯ ಹಿಂದೆ ಮನುಷ್ಯನನ್ನು ಕಾಡುವ ಸಮಸ್ಯೆ. ತನ್ನ ಬಯಕೆಯ ಈಡೇರಿಕೆಗಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ. ಯಾರಿಗೆ ತನ್ನ ತೊಡಗುವಿಕೆಯಲ್ಲಿ ಬಯಕೆಗಳ ಸ್ಪರ್ಶ ಇಲ್ಲವೋ ಅವನು ಪಂಡಿತ. ಒಬ್ಬ ಪಂಡಿತನ ಪಾಂಡಿತ್ಯವನ್ನು ಅವನ ನುಡಿಯಲ್ಲಿ ಅಲ್ಲ, ನಡೆಯಲ್ಲಿ ಕಾಣಬೇಕು.
ನಿನ್ನ ಜೀವನದಲ್ಲಿ ಹೀಗೇ ಆಗಬೇಕು, ಹೀಗೇ ಮಾಡಬೇಕು, ಅದರಿಂದ ಇಂತದ್ದು ನನಗೆ ಸಿಗಬೇಕು ಅನ್ನುವ ಬಯಕೆ, ಆಸೆಗಳನ್ನು ಬಿಟ್ಟು  ನಿರಾಳವಾಗಿ ಕರ್ತವ್ಯ ಮಾಡು. ಭಗವಂತ ಏನು ಕೊಟ್ಟ ಅದನ್ನು ಪ್ರಸಾದವಾಗಿ ಸ್ವೀಕರಿಸು. ಏನು ಬಂತೋ ಅದರಲ್ಲಿ ತೃಪ್ತಿಪಡುವುದನ್ನು ಕಲಿ. ಇಲ್ಲವಲ್ಲಾ ಎಂದು ಸಂಕಟ ಪಡಬೇಡ. ಇದು  'ಕಾಮಸಂಕಲ್ಪವರ್ಜ್ಯ'. [ಏನೂ ಬೇಡ ಎಂದು ಬಯಸುವುದಲ್ಲ, ಇಂತದ್ದೇ ಬೇಕು ಎಂದು ಬಯಸದೇ ಇರುವುದು ಕಾಮಸಂಕಲ್ಪವರ್ಜ್ಯ]. ಏನು ಬಂತೋ ಬರಲಿ, ನೀನು ಪ್ರಯತ್ನಶೀಲನಾಗು.  ಬಂದಿದ್ದರಲ್ಲಿ ಸಂತೋಷದಿಂದ ಬದುಕು. ಇಂತಹ ಅರಿವಿನಿಂದ ಮಾಡಿದ ಕರ್ಮ ಸ್ವಚ್ಛವಾಗಿರುತ್ತದೆ. ಇದು ಕರ್ಮದ ಕೊಳೆ ಅರಿವಿನ ಬೆಂಕಿಯಿಂದ ಸ್ವಚ್ಚವಾಗುವಿಕೆ. ಇಂತಹ ನಡೆ ಉಳ್ಳವನು ಪಂಡಿತ ಎನಿಸುತ್ತಾನೆ.  ಇಂತವರನ್ನು ಜ್ಞಾನಿಗಳು ಜ್ಞಾನಿಗಳೆಂದು  ಗುರುತಿಸುತ್ತಾರೆ. ಮನುಷ್ಯ ನನ್ನು  ಹೇಳುತ್ತಾನೆ ಅದು ಮುಖ್ಯವಲ್ಲ, ನನ್ನು ರೂಢಿಸಿಕೊಳ್ಳುತ್ತಾನೆ ಅದು ಮುಖ್ಯ. ಮನಸ್ಸಿನ ತುಂಬ ಆಸೆಗಳನ್ನು ತುಂಬಿಕೊಂಡು ಯಾವುದ್ಯಾವುದೋ ಆಸೆಯ ಬೆನ್ನುಹತ್ತಿ ಸೋಗು ಹಾಕಿಕೊಂಡು ಬದುಕುವವನು ಎಂದೂ ಎತ್ತರಕ್ಕೇರಲಾರ.    

ತ್ಯಕ್ತ್ವಾ ಕರ್ಮಫಲಾಸಂಗಂ ನಿತ್ಯತೃಪ್ತೋ[S]ನಿರಾಶ್ರಯಃ    ।
ಕರ್ಮಣ್ಯಭಿಪ್ರವೃತ್ತೋSಪಿ ನೈವ ಕಿಂಚಿತ್ ಕರೋತಿ ಸಃ        ॥೨೦॥

ತ್ಯಕ್ತ್ವಾ ಕರ್ಮ ಫಲ ಅಸಂಗಮ್  ನಿತ್ಯ ತೃಪ್ತಃ [ಅ]ನಿರಾಶ್ರಯಃ
ಕರ್ಮಣಿ ಅಭಿಪ್ರವೃತ್ತಃ ಅಪಿ ನ ಏವ ಕಿಂಚಿತ್ ಕರೋತಿ ಸಃ -- ಕರ್ಮಫಲದಲ್ಲಿ ನೇಹವನ್ನು ತೊರೆದು, ತಾನು ಎಂದೂ ಇತರ ಬಯಕೆಯೂ ಇಲ್ಲದ, ಯಾರಿಗೂ ತಲೆಬಾಗದ ಭಗವಂತನ ಪಡಿಯಚ್ಚು ಎಂದು ತಿಳಿದವನು[ಭಗವಂತನ ಆಸರೆಯಲ್ಲಿದ್ದು ಸದಾ ನೆಮ್ಮದಿಯಿಂದಿರುವವನು] ಕರ್ಮದಲ್ಲಿ ತೊಡಗಿದರೂ ವಾಸ್ತವವಾಗಿ ಏನನ್ನೂ ಮಾಡುವುದಿಲ್ಲ.

ಕೆಲವರಿಗೆ ಅದು ಬೇಕು, ಇದು ಬೇಕು ಎನ್ನುವ ಆಸೆ ಇರುವುದಿಲ್ಲ. ಆದರೆ ಬಂದಾಗ ಖುಷಿಯಾಗುತ್ತದೆ.  ಕರ್ಮ ಫಲದಲ್ಲಿ ಅತಿಯಾದ ಸ್ನೇಹ ಒಳ್ಳೆಯದಲ್ಲ. ಭಗವಂತ ಪ್ರೇರಣೆ ಮಾಡಿದ ಬಂತು. ಅದನ್ನು ಸದ್ವಿನಿಯೋಗ ಮಾಡುವುದು ಹೇಗೆ ಎನ್ನುವುದನ್ನು ಯೋಚಿಸು; ಉಬ್ಬಬೇಡ. ಬರಬೇಕು ಎಂದು ನಿರೀಕ್ಷಿಸಬೇಡ, ನಿರೀಕ್ಷಿಸದೆ ಬಂದಾಗ ಹಾರಾಡಬೇಡ. ಫಲದ ಬಗ್ಗೆ ಅತಿಯಾದ ಮಮತೆ ಒಳ್ಳೆಯದಲ್ಲ. ಇದೊಂದೆ ಮನುಷ್ಯ ಹಾಯಾಗಿ ನೆಮ್ಮದಿಯಿಂದ ಬದುಕಲು ಇರುವ ವಿಧಾನ. ಇದು ಇಲ್ಲದಿದ್ದರೆ  ಹತಾಶೆ (Disappointment) ಕಟ್ಟಿಟ್ಟ ಬುತ್ತಿ!
ಮನುಷ್ಯ ಹೀಗಾಗಬೇಕು-ಹಾಗಾಗಬೇಕು ಎಂದು ಕನಸುಗಳ ಸರಮಾಲೆಯನ್ನು ಕಟ್ಟುತ್ತಾ ಹೋಗುತ್ತಾನೆ. ಬಯಸಿದ್ದರಲ್ಲಿ ಎಲ್ಲವೂ ಕೈಗೂಡುವುದಿಲ್ಲ. ಆಗ ಹತಾಶೆ, ದುಗುಡ, ಉದ್ವೇಗ(Tension). ಅದರಿಂದ ಮಾನಸಿಕ ವ್ಯಾಕುಲತೆ (Depression). ಇನ್ನು ಅಕಾಲದಲ್ಲಿ ಸಂಪತ್ತು ಬಂದಾಗ ಹಾರಾಟ-ಅದರಿಂದ ಜೀವನ ನಾಶ! ಈ ಕಾರಣದಿಂದ ಬಂತು ಎಂದಾಗಲಿ, ಬರಲಿಲ್ಲ ಎಂದಾಗಲಿ, ಬರಬೇಕು ಎಂದಾಗಲಿ ತಲೆ ಕೆಡಿಸಿಕೊಳ್ಳಬೇಡ. ಸ್ವಚ್ಛವಾದ ಯೋಚನೆಯಿಂದ ಕರ್ತವ್ಯದಲ್ಲಿ ತೊಡಗು. ಎಂಥಹ ಪರಿಸ್ಥಿತಿಯಲ್ಲೂ  ಸಂಯಮ ಇರಲಿ. ಈ ರೀತಿ ನಿನ್ನ ಮನಸ್ಸನ್ನು ತರಬೇತಿಗೊಳಿಸು ಎಂದಿದ್ದಾನೆ ಕೃಷ್ಣ.  ಇದು ಕೃಷ್ಣನ ಮನಃಶಾಸ್ತ್ರ.
ಜೀವ ಭಗವಂತನ ಪ್ರತಿಬಿಂಬ. ಅದಕ್ಕೆ ಸ್ವಾತಂತ್ರ್ಯವಿಲ್ಲ. ಬಿಂಬ ಮಾಡಿಸಿದಂತೆ ಪ್ರತಿಬಿಂಬ. ಭಗವಂತ ನಿತ್ಯ ತೃಪ್ತ, ಆತನಿಗೆ ಅತೃಪ್ತಿ ಇಲ್ಲ. ಹಾಗೇ ನಾವೂ ಅತೃಪ್ತಿ ಇಲ್ಲದೆ ಇರುವುದನ್ನು ಕಲಿತುಕೊಳ್ಳಬೇಕು. ಯಾವುದೋ ಒಂದು ಆಸೆ ಈಡೇರಿಸಿಕೊಳ್ಳುವುದಕ್ಕಾಗಿ ಎಷ್ಟೋ ಜನರ ಹಿಂದೆ ಬಾಲ ಅಲ್ಲಾಡಿಸಿಕೊಂಡು ಸ್ವಾರ್ಥ ಮನಸ್ಸಿನಿಂದ ಬದುಕುವುದು ಜೀವನವಲ್ಲ. ಯಾರ ಆಶ್ರಯವೂ ಇಲ್ಲದಿರುವ ಭಗವಂತನ ಪ್ರತಿಬಿಂಬವಾದ ನಿನಗೆ ಅತೃಪ್ತಿಯ ಬದುಕೇಕೆ? ಭಗವಂತನಂತೆ ನಿರಾಶ್ರಯನಾಗು. ನಿನಗೆ ಸದಾ ಭಗವಂತನ ಆಶ್ರಯವಿದೆ  ಎನ್ನುವ ಸತ್ಯವನ್ನು ಅರಿತು ಬಾಳು.  ಹೀಗೆ ಬದುಕುವ ಮಾನವ ಕರ್ಮದಲ್ಲಿ ತೊಡಗಿದ್ದರೂ ಕೂಡಾ ಏನನ್ನೂ ಮಾಡುವುದಿಲ್ಲ. ಏಕೆಂದರೆ ಭಗವಂತ ಎಲ್ಲವುದಕ್ಕಿಂತ ಮೇಲಿದ್ದಾನೆ ಎನ್ನುವ ಮರ್ಮವನ್ನು ಆತ ಅರಿತಿರುತ್ತಾನೆ. ಇದಕ್ಕೆ ಇನ್ನೂ ಹೆಚ್ಚಿನ ವಿವರಣೆಯನ್ನು ಮುಂದಿನ ಶ್ಲೋಕಗಳಲ್ಲಿ  ಕಾಣಬಹುದು.