Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, July 9, 2011

Bhagavad Geeta Kannada Chapter-07 Shloka 29-30

ಜರಾಮರಣಮೋಕ್ಷಾಯ ಮಾಮಾಶ್ರಿತ್ಯ ತಂತಿ  ಯೇ
ತೇ ಬ್ರಹ್ಮ ದ್ ವಿದುಃ ಕೃತ್ಸ್ನಮಧ್ಯಾತ್ಮಂ ಕರ್ಮ ಚಾಖಿಲಮ್ ೨೯

ಜರಾ ಮರಣ ಮೋಕ್ಷಾಯ ಮಾಮ್ ಆಶ್ರಿತ್ಯ ತಂತಿ  ಯೇ
ತೇ ಬ್ರಹ್ಮ ತ್  ವಿದುಃ ಕೃತ್ಸ್ನಮ್ ಅಧ್ಯಾತ್ಮಮ್  ಕರ್ಮ ಚ ಅಖಿಲಮ್-ಮುಪ್ಪು-ಸಾವುಗಳಿಂದ ಪಾರಾಗಲೆಂದು ನನ್ನನ್ನು ಮೊರೆಹೊಕ್ಕು ಸಾಧನೆಗೆಳಸುವವರು ಆ ‘ಬ್ರಹ್ಮತತ್ವ’ವನ್ನು ತಿಳಿಯಬಲ್ಲರು; ಸಮಗ್ರವಾದ ‘ಅಧ್ಯಾತ್ಮ’ವನ್ನು ಮತ್ತು ಎಲ್ಲ ‘ಕರ್ಮ’ ವನ್ನು ಕೂಡ.

ಭಗವಂತನೆಡೆಗೆ ತಿರುಗಿದವರು ಮುಪ್ಪು-ಸಾವಿನಿಂದ ಪಾರಾಗುವುದಕ್ಕೊಸ್ಕರ, ಈ ಸಂಸಾರ ಬಂಧದಿಂದ ಬಿಡುಗಡೆ ಬಯಸಿ ಭಗವಂತನ ಮೊರೆ ಹೋಗುತ್ತಾರೆ ಮತ್ತು ಸಾಧನೆ ಮಾಡುತ್ತಾರೆ. ಸಾಮಾನ್ಯವಾಗಿ ಏನನ್ನೂ ಬಯಸದೇ ಇರುವುದು ಶ್ರೇಷ್ಠ, ಆದರೆ ಬಯಸುವುದೇ ಜೀವನ ಧರ್ಮವಾಗಿದ್ದಾಗ ಇನ್ನೇನನ್ನೋ ಬಯಸದೆ ಮೋಕ್ಷವನ್ನು ಬಯಸುವುದು ಶ್ರೇಷ್ಠ. ಈ ಶ್ಲೋಕದಲ್ಲಿ ಕೃಷ್ಣ ಮೋಕ್ಷಕ್ಕೆ ಹೋಗುವ ಸಾಧಕನ ಪ್ರಯತ್ನ ಏನು, ಜ್ಞಾನದ ದಾರಿಯಲ್ಲಿ ಹೇಗೆ ಸಾಗಬೇಕು ಅನ್ನುವ ಅದ್ಭುತ ವಿಚಾರವನ್ನು ವಿವರಿಸುತ್ತಾನೆ.
ಅಧ್ಯಾತ್ಮದಲ್ಲಿ ತಿಳಿದುಕೊಳ್ಳಬೇಕಾದ ಸಂಗತಿ ‘ಬ್ರಹ್ಮ’ ಎನ್ನುತ್ತಾನೆ ಕೃಷ್ಣ. ಬ್ರಹ್ಮ ಎನ್ನುವ ಪದ ‘ಅವ ವೃದ್ದೋ’ ಅನ್ನುವ ದಾತುವಿನಿಂದ ಬಂದಿದೆ. ಅವತಿ ಎಂದರೆ ಎಲ್ಲಕ್ಕಿಂತ ದೊಡ್ಡದು ಅದು ಓಂ. ಅಂದರೆ ಅನಾಧಿನಿತ್ಯ, ಸರ್ವ ಗುಣಪೂರ್ಣ, ಸರ್ವಗತ, ಸರ್ವಸಮರ್ಥ ಭಗವಂತ ಬ್ರಹ್ಮ- ಅವನೇ ಓಂ. ಮುಖ್ಯವಾಗಿ ಈ ಶ್ಲೋಕದಲ್ಲಿ   “ತೇ ಬ್ರಹ್ಮ ದ್ ವಿದುಃ”  ಅಂದರೆ ‘ಎಲ್ಲಾ ಕಡೆ ಇರುವ ಭಗವಂತನನ್ನು ತಿಳಿಯುತ್ತಾರೆ’ ಎಂದರ್ಥ. ಭಗವಂತನ ಸರ್ವಗತತ್ವದ ಸಾಕ್ಷಾತ್ಕಾರವೇ ಬ್ರಹ್ಮಸಾಕ್ಷಾತ್ಕಾರ. ಬಿಂಬಸಾಕ್ಷಾತ್ಕಾರ ಅಂದರೆ ನಮ್ಮೊಳಗಿರತಕ್ಕಂತಹ ಅಣೋರಣೀಯವಾಗಿರುವ ಭಗವಂತನ ಸಾಕ್ಷಾತ್ಕಾರ. ಇಂತಹ ಬಿಂಬರೂಪಿ ಭಗವಂತನೇ ಇಡೀ ವಿಶ್ವದಲ್ಲಿ ವ್ಯಾಪ್ತನಾಗಿ ತುಂಬಿದ್ದಾನೆ ಎನ್ನುವುದು ಬ್ರಹ್ಮಸಾಕ್ಷಾತ್ಕಾರ. ಭಗವಂತನ ವ್ಯಾಪ್ತ ರೂಪವನ್ನು ನಾವು ಕಾಣಲು ಸಾಧ್ಯವಿಲ್ಲ. ಆದರೆ ಆ ವ್ಯಾಪ್ತಿಯ ಅರಿವು ಬಹಳ ಮುಖ್ಯ. ಸೌರಶಕ್ತಿಯಲ್ಲಿ ತುಂಬಿ ಇಡೀ ಪ್ರಪಂಚವನ್ನು ಬೆಳಗಿಸುವವನೂ ಅವನೆ, ನನ್ನೊಳಗಿದ್ದು ಬೆಳಗಿಸುವವನೂ ಅವನೆ ಎನ್ನುವ ಅರಿವು ಆತ್ಮ ಸಾಕ್ಷಾತ್ಕಾರ.  ಬಲಿಚಕ್ರವರ್ತಿಗೆ ಆದ ಅನುಭವ ಕೂಡಾ ಇದೇ. ನಿಮಗೆ ತಿಳಿದಿರುವಂತೆ ವಾಮನ ರೂಪಿ ಭಗವಂತ, ಮಹಾ ದಾನಿ ಬಲಿಚಕ್ರವರ್ತಿಯಲ್ಲಿ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳುತ್ತಾನೆ. ಶುಕ್ರಾಚಾರ್ಯರ ವಿರೋಧವನ್ನು ಲೆಕ್ಕಿಸದೆ ಬಲಿ ವಾಮನನಿಗೆ ದಾನ ಮಾಡಲು ಮುಂದಾಗುತ್ತಾನೆ. ಆಗ ವಾಮನನು ತನ್ನ ಮೊದಲ ಹೆಜ್ಜೆಯಿಂದ ಭೂಮಿಯನ್ನೂ ಮತ್ತು ಎರಡನೇ ಹೆಜ್ಜೆಯಿಂದ ಆಕಾಶವನ್ನು ಆವರಿಸಿದಾಗ , ಮೂರನೇ ಹೆಜ್ಜೆಗೆ ಬಲಿ ತನ್ನ ತಲೆಯನ್ನು ಅರ್ಪಿಸಿ ಪಾತಳವನ್ನು ಸೇರಿ ಉದ್ದಾರವಾಗುತ್ತಾನೆ. ಈ ಕಥೆಯನ್ನು ನಾವು ಸ್ವಲ್ಪ ಆಳವಾಗಿ ವಿಶ್ಲೇಷಿಸಿದರೆ ಕಥೆಯಲ್ಲಿ ಅಡಗಿರುವ ಸಾರ ತಿಳಿಯುತ್ತದೆ. ಸಂಸಾರ ಸಾಗರದಲ್ಲಿ ಮುಳುಗಿರುವ ನಾವೆಲ್ಲರೂ ಒಂದು ರೀತಿಯಲ್ಲಿ ಬಲಿಗಳು. ಭಗವಂತನ ಸಾಕ್ಷಾತ್ಕಾರವಾಗಲು ನಾವೆಲ್ಲರೂ ಮಾನಸಿಕವಾಗಿ, ಆದ್ಯಾತ್ಮಿಕವಾಗಿ ಬಲಿಷ್ಟರಾಗಬೇಕು. ಉಪಾಸನೆಯಲ್ಲಿ ಪ್ರಮುಖವಾಗಿ ಮೂರೂ ಹೆಜ್ಜೆಗಳಿವೆ. ಮೊದಲನೆಯದು ಭಗವಂತನ ಪುಟ್ಟ (ವಾಮನ) ಮೂರ್ತಿಯನ್ನು ದೇವರು ಎಂದು ಆರಾದಿಸುವುದು. ಎರಡನೆಯದು ಉಪಾಸನೆ ಮಾಡುತ್ತಾ ಮಾಡುತ್ತಾ , ಭಗವಂತ ಕೇವಲ ಮೂರ್ತಿಯಲ್ಲಿ ಅಲ್ಲದೆ, ಇಡೀ ಲೋಕದಲ್ಲಿ ವ್ಯಾಪಿಸಿರುವ ಶಕ್ತಿ ಎಂದು ತಿಳಿಯುವುದು. ಪ್ರಮುಖವಾದ ಮೂರನೇ ಹೆಜ್ಜೆ- ಭಗವಂತ ಸರ್ವಾಂತರ್ಯಾಮಿ, ಆತ ನನ್ನೊಳಗೂ ತುಂಬಿದ್ದಾನೆ ಎಂದು ತಿಳಿದು, ಆ ಪರಶಕ್ತಿಗೆ ತಲೆಬಾಗುವುದು. ಆಗ ನಮಗೆ ನಿಜವಾದ ಭಗವಂತನ ಸಾಕ್ಷಾತ್ಕಾರವಾಗುತ್ತದೆ, ಹಾಗು ಭಗವಂತ ನಮ್ಮನ್ನು ಉದ್ದರಿಸುತ್ತಾನೆ. ಬಲಿ ಭಗವಂತ  ನನ್ನೊಳಗೆ ಅಂತರ್ಯಾಮಿ(ಆತ್ಮನಿ ವೇದನಂ) ಎಂದು ತಿಳಿದು ಭಗವಂತನಿಗೆ ತನ್ನನ್ನು ಅರ್ಪಿಸಿಕೊಂಡ(ಆತ್ಮ ನಿವೇದನಂ)ಅಥವಾ ತನ್ನ ತಲೆಯನ್ನು ಕೊಟ್ಟ. ಇದು ಮೂರು ಹೆಜ್ಜೆಯ ಪರಿಕಲ್ಪನೆ.
ಭಗವಂತ ಸರ್ವಗತ-ಸರ್ವಸಮರ್ಥ, ಅವನು ಎಲ್ಲವುದರ ಒಳಗೂ ಇದ್ದು ಎಲ್ಲವನ್ನು ಮಾಡುತ್ತಿದ್ದಾನೆ. ಅವನ ಅಧೀನವಾಗಿರತಕ್ಕ ಪ್ರತಿಬಿಂಬ ಈ ಜೀವ ಎನ್ನುವ ಸತ್ಯ ತಿಳಿದಾಗ ಎಲ್ಲ ಕರ್ಮದ ರಹಸ್ಯ ತಿಳಿಯುತ್ತದೆ. ಆದ್ದರಿಂದ ಅಧ್ಯಾತ್ಮದಲ್ಲಿ ತಿಳಿಯಬೇಕಾದ ಮೊದಲ ಮೂರು ವಿಚಾರ ಎಂದರೆ ಭಗವಂತನ ಪ್ರತಿಬಿಂಬವಾದ ಜೀವ, ಪರಿಪೂರ್ಣ ಮತ್ತು ಸರ್ವಸಮರ್ಥನಾದ ಬ್ರಹ್ಮ, ಆ ಅನಂತ ಸಾಮರ್ಥ್ಯದಿಂದ ನಡೆಯುವ ಕರ್ಮ. ಇದೇ ಬ್ರಹ್ಮ-ಕರ್ಮ-ಅಧಿಆತ್ಮ. ಈ ಮೂರು ವಿಚಾರವಲ್ಲದೆ ಇನ್ನೂ ಮೂರು ವಿಷಯಗಳನ್ನೂ ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.

ಸಾಧಿಭೂತಾಧಿದೈವಂ ಮಾಂ ಸಾಧಿಯಜ್ಞಂ ಯೇ ವಿದುಃ
ಪ್ರಯಾಣಕಾಲೇSಪಿ ಮಾಂ ತೇ ವಿದುರ್ಯುಕ್ತಚೇತಸಃ           ೩೦

ಸ ಅಧಿ ಭೂತ ಅಧಿದೈವಮ್  ಮಾಮ್  ಸ ಅಧಿಯಜ್ಞಮ್   ಯೇ ವಿದುಃ
ಪ್ರಯಾಣ ಕಾಲೇಪಿ ಮಾಮ್  ತೇ ವಿದುಃ ಯುಕ್ತ ಚೇತಸಃ –ಯಾರು ‘ಅಧಿಭೂತ’ –‘ಅಧಿದೈವ’ದ ಜತೆಗೆ ನನ್ನನ್ನು ತಿಳಿಯುತ್ತಾರೆ ; ತಿಳಿದು ಕೊನೆಯ ಕ್ಷಣದಲ್ಲು ನನ್ನನ್ನು ನೆನೆಯುತ್ತಾರೆ, ನನ್ನಲ್ಲೆ ಬಗೆಯಿಟ್ಟ ಅಂಥವರೆ ನನ್ನನ್ನು ಬಲ್ಲವರು.

ಭಗವಂತನ ಅರಿವು ಮೂಡಬೇಕಾದರೆ ಮೊದಲು ಭೌತವಿಜ್ಞಾನ(ಅಧಿಭೂತ)ದ ಅರಿವಿರಬೇಕು. ಪಂಚ ಭೂತಗಳು, ಈ ದೇಹ, ಬ್ರಹ್ಮಾಂಡ, ಪಿಂಡಾಂಡ, ಇಲ್ಲಿರುವ ದ್ರವ್ಯಗಳ ಅರಿವು ಸಾಧನೆಯ ಮೊದಲ ಹೆಜ್ಜೆ. ಅಧಿಭೂತದ ನಂತರ ಅಧಿದೈವದ ಅರಿವು. ನಮ್ಮ ಪಂಚಭೂತಾತ್ಮಕವಾದ ಶರೀರದಲ್ಲಿ ‘ನೋಡುವುದು, ಕೇಳುವುದು, ಅನುಭವಿಸುವುದು’ ಇತ್ಯಾದಿ ಕ್ರಿಯೆ ನಿಯಮಬದ್ಧವಾಗಿ ಹೇಗೆ ನಡೆಯುತ್ತದೆ? ಜಡದಲ್ಲಿ ಕ್ರಿಯೆ ಇಲ್ಲ, ಬದಲಿಗೆ ಅದರ ಹಿಂದಿರುವ ಅಭಿಮಾನಿ ದೇವತೆಗಳು ಒಂದೊಂದು ಇಂದ್ರಿಯದಲ್ಲಿದ್ದು ಒಂದೊಂದು ಕ್ರಿಯೆಯನ್ನು ನಿಯಂತ್ರಿಸುತ್ತಿದ್ದಾರೆ-ಇದು ಅಧಿದೈವದ ತಿಳುವಳಿಕೆ. ಇಂತಹ ಸಹಸ್ರಾರು ದೇವತೆಗಳನ್ನು ನಿಯಂತ್ರಿಸುವ ಅಧ್ಯಕ್ಷ ಆ ಭಗವಂತ. ಈ ಪ್ರಪಂಚದಲ್ಲಿ ಅಥವಾ ಪಿಂಡಾಂಡದಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆ ಒಂದು ಯಜ್ಞ. ಆ ಯಜ್ಞವನ್ನು ಅಧ್ಯಕ್ಷನಾಗಿ ನಡೆಸುವವನು ಅಧಿಯಜ್ಞ. ಆತ ಸಮಸ್ತ ದೇವತೆಗಳ ನಿಯಾಮಕನಾದ ಭಗವಂತ.
ಒಟ್ಟಿನಲ್ಲಿ ನಾವು ಆರು ವಿಚಾರವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ೧. ಅಧಿಭೂತ-ಭೌತಿಕ ಪ್ರಪಂಚ.; ೨. ಅಧಿಆತ್ಮ-ಜೀವಾತ್ಮ ; ೩. ಅಧಿದೈವ-ಸಮಸ್ತ ತತ್ವಾಭಿಮಾನಿ ದೇವತೆಗಳು ; ೪. ಅಧಿಯಜ್ಞ-ಸರ್ವ ನಿಯಾಮಕ ಭಗವಂತ; ೫. ಬ್ರಹ್ಮ ಸಾಕ್ಷಾತ್ಕಾರ -ಅಂತರ್ಯಾಮಿಯಾಗಿರುವ ಬಿಂಬ ರೂಪಿ ಭಗವಂತನೇ ಎಲ್ಲಾ ಕಡೆ ತುಂಬಿದ್ದಾನೆ ಎನ್ನುವ ಅರಿವು; ೬. ಎಲ್ಲಾ ಕರ್ಮಗಳೂ ಆ ಭಗವಂತನ ಅಧೀನವಾಗಿ ನಡೆಯುತ್ತವೆ ಎನ್ನುವ ಸತ್ಯ.
ಈ ಆರು ವಿಚಾರಗಳೂ ನಮ್ಮ ಜೀವನದ ಕೊನೆಯ ಕ್ಷಣದಲ್ಲಿ(ದೇಹ ತ್ಯಾಗ ಮಾಡುವಾಗ)ಕೂಡ ನಮ್ಮ ಮನದಲ್ಲಿ ಗಾಢವಾಗಿ ನಿಂತಿರಬೇಕು. ನಾವು ದೇಹ ತ್ಯಾಗ ಮಾಡುವಾಗ ನಮ್ಮ ಮನದಲ್ಲಿ ಯಾವುದು ಗಾಢವಾಗಿ ನಿಂತಿರುತ್ತದೋ ಅದು ನಮ್ಮ ಮುಂದಿನ ಜನ್ಮವನ್ನು ನಿರ್ಧರಿಸುತ್ತದೆ. ಇದಕ್ಕಾಗಿ ಜೀವಮಾನದಲ್ಲಿ ಭಗವಂತನ ಅರಿವು ಬಹಳ ಮುಖ್ಯ. “ಸಾಧನೆಯಲ್ಲಿ ಎಂದೂ ಯಾವುದೇ ಮೋಹಕ್ಕೊಳಗಾಗದೆ, ಅಂತ್ಯಕಾಲದಲ್ಲೂ ಸದಾ ಭಗವಂತನನ್ನು ಚಿಂತಿಸುವವನು ನನ್ನನ್ನು ಸೇರುತ್ತಾನೆ” ಎನ್ನುತ್ತಾನೆ ಕೃಷ್ಣ.
ಹೀಗೆ ಈ ಅಧ್ಯಾಯದಲ್ಲಿ ಜ್ಞಾನದ ವೈಭವವನ್ನು ನಮ್ಮ ಮುಂದೆ ತೆರೆದಿಟ್ಟ ಕೃಷ್ಣ, ಮುಂದಿನ ಅಧ್ಯಾಯದಲ್ಲಿ ಅಧಿಭೂತ, ಅಧಿದೈವ, ಅಧಿಆತ್ಮ, ಅಧಿಯಜ್ಞ, ಬ್ರಹ್ಮ, ಕರ್ಮ ಇದರ ವಿಸ್ತಾರವಾದ ವಿವರಣೆಯನ್ನು ವಿವರಿಸುತ್ತಾನೆ.                  

ಇತಿ ಸಪ್ತಮೋSಧ್ಯಾಯಃ
ಏಳನೆಯ ಅಧ್ಯಾಯ ಮುಗಿಯಿತು
*******

2 comments:

  1. 'ಬಲಿ'ಯ ಬಗ್ಗೆ ಹಾಗೂ 'ಮೂರು ಹೆಜ್ಜೆ'ಗಳ ಬಗ್ಗೆ ತಿಳಿಸಿರುವುದು ಬಹಳ ಉಪಯುಕ್ತವಾಗಿದೆ. ಸ೦ಗ್ರಹ ಯೋಗ್ಯ ಲೇಖನಕ್ಕಾಗಿ ಧನ್ಯವಾದಗಳು.

    ReplyDelete
  2. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.... ಎಲ್ಲವೂ ಬನ್ನಂಜೆಯವರ ನುಡಿ.

    ReplyDelete