Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Sunday, July 17, 2011

Bhagavad Gita in Kannada Chapter-08 Shloka 5-8

ಅಂತಕಾಲೇ ಚ ಮಾಮೇವ ಸ್ಮರನ್ ಮುಕ್ತ್ವಾ ಕಳೇಬರಮ್
ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ

ಅಂತಕಾಲೇ ಚ ಮಾಮ್ ಏವ ಸ್ಮರನ್ ಮುಕ್ತ್ವಾ ಕಳೇಬರಮ್
ಯಃ ಪ್ರಯಾತಿ ಸ ಮತ್ ಭಾವಮ್  ಯಾತಿ ನ ಅಸ್ತಿ ಅತ್ರ ಸಂಶಯಃ –ಕೊನೆಯ ಕಾಲದಲ್ಲು ನನ್ನನ್ನೆ ನೆನೆಯುತ್ತ ದೇಹವನ್ನು ತೊರೆದು ತೆರಳುವವನು ನನ್ನಂತಯೆ ದುಃಖವಿರದ ಸುಖದ ನಿಜಸ್ಥಿತಿಯನ್ನು [ನನ್ನಲ್ಲೆ ಇರವನ್ನು] ಪಡೆಯುತ್ತಾನೆ.
ಅರ್ಜುನನ ಕೊನೆಯ ಪ್ರಶ್ನೆಗೆ ಕೃಷ್ಣ ಉತ್ತರಿಸುತ್ತಾ ಹೇಳುತ್ತಾನೆ “ಸಾಯುವ ಕ್ಷಣದಲ್ಲೂ ಕೂಡ ನನ್ನನ್ನೇ ನೆನೆಯುತ್ತಾ ದೇಹವನ್ನು ತೊರೆಯುವ ಜೀವರು ನನ್ನ ಹಾಗೇ ಜ್ಞಾನಾನಂದ ಸ್ವರೂಪರಾಗಿ ನನ್ನಲ್ಲಿ ಬಂದು ನೆಲೆಸುತ್ತಾರೆ. ಅವರು ಮುಂದೆಂದೂ ಈ ಅಜ್ಞಾನ ಮತ್ತು ದುಃಖಮಯವಾದ ಸಂಸಾರದ ತೊಳಲಾಟಕ್ಕೆ ಒಳಗಾಗುವುದಿಲ್ಲ. ಈ ಬಗ್ಗೆ ಎಂದೂ ಸಂಶಯ ಪಡಬೇಡ”  ಎಂದು. ಇಲ್ಲಿ “ಅಂತಕಾಲೇ” ಎಂದರೆ ಮುಪ್ಪಿನ ಕಾಲದಲ್ಲಿ ಎನ್ನುವ ಅರ್ಥವಲ್ಲ ಬದಲಿಗೆ ದೇಹವನ್ನು ಜೀವ ಬಿಡುವ ಕೊನೆಯ ಕ್ಷಣ  ಎಂದರ್ಥ. ದೇಹವನ್ನು ಬಿಡುತ್ತಾ ಭಗವಂತನನ್ನು ಸ್ಮರಿಸುತ್ತಾ ಹೊರಗೆ ಹೋಗುವ ಚೇತನಕ್ಕೆ ಅಗಾಧವಾದ ಬೆಳಕು ಕಾಣಿಸುತ್ತದೆ ಮತ್ತು ಆ ಚೇತನ  ಮೋಕ್ಷವನ್ನು ಸೇರುತ್ತದೆ. [ಜೀವ ಶರೀರವನ್ನು ಬಿಡುವ ಮತ್ತು ದೇಹದಿಂದ ಹೊರ ಬಂದ ಮೇಲೆ ಜೀವದ ಪ್ರಯಾಣದ ಕುರಿತು ಸತ್ತು ಬದುಕಿದ ಅನೇಕ ಜನರ ಅನುಭವವನ್ನು ಸಂಗ್ರಹಿಸಿ Raymond Mody ಬರೆದ “Life after Life” ಎನ್ನುವ ಪುಸ್ತಕ ಬೆಳಕು ಚೆಲ್ಲುತ್ತದೆ]. 

ಯಂ ಯಂ ವಾSಪಿ ಸ್ಮರನ್  ಭಾವಂ ತ್ಯಜತ್ಯಂತೇ ಕಳೇಬರಮ್       
ತನ್ತಮೇವೈತಿ ಕೌಂತೇಯ ಸದಾ ತದ್ ಭಾವಭಾವಿತಃ         

ಮ್  ಮ್  ವಾಪಿ ಸ್ಮರನ್  ಭಾಮ್  ತ್ಯಜತಿ ಅಂತೇ ಕಳೇಬರಮ್  
ತಮ್ ತಮ್  ಏವ ಏತಿ ಕೌಂತೇಯ ಸದಾ ತತ್  ಭಾ ಭಾವಿತಃ  -ಕೌಂತೇಯ, ಕೊನೆಯಲ್ಲಿ ಯಾವ ಯಾವ ವಿಷಯವನ್ನು ನೆನೆಯುತ್ತ ದೇಹವನ್ನು ತೊರೆಯುತ್ತಾನೆ ಅದರಲ್ಲೆ ಅನುಗಾಲ ಬೇರೂರಿದ ಸಂಸ್ಕಾರದಿಂದ ಅದದನ್ನೆ ಪಡೆಯುತ್ತಾನೆ.

“ಜೀವನ ಯಾತ್ರೆಯ  ಅಂತಿಮ ಕ್ಷಣದಲ್ಲಿ ಭಗವಂತನನ್ನು ನೆನೆದವರು ‘ನನ್ನನ್ನು’ ಸೇರುತ್ತಾರೆ” ಎಂದು ಕೃಷ್ಣ  ಏಕೆ ಹೇಳಿದ ಎನ್ನುವುದಕ್ಕೆ ಈ ಶ್ಲೋಕದಲ್ಲಿ ಉತ್ತರವಿದೆ. ಇಲ್ಲಿ ಕೃಷ್ಣ ಮರಣ ಕಾಲದ ಒಂದು ಅದ್ಭುತ ಮನಃಶಾಸ್ತ್ರವನ್ನು ನಮ್ಮ ಮುಂದೆ ತೆರೆದಿಡುತ್ತಾನೆ. ಸಾಯುವ ಕ್ಷಣದಲ್ಲಿ ಭಗವಂತನ ಧ್ಯಾನ ಮಾಡಲು ಒಂದು ಉದ್ದೇಶವಿದೆ ಎನ್ನುತ್ತಾನೆ ಕೃಷ್ಣ. ನಾವು ದೇಹ ತ್ಯಾಗ ಮಾಡುವಾಗ ಏನನ್ನು ಸ್ಮರಣೆ ಮಾಡುತ್ತೇವೋ ಮುಂದಿನ ಜನ್ಮದಲ್ಲಿ ಅದನ್ನೇ ಪಡೆಯುತ್ತೇವೆ. ಆದ್ದರಿಂದ ಆ ಕಾಲದಲ್ಲಿ ಭಗವಂತನನ್ನು ಸ್ಮರಿಸಿದರೆ ಭಗವಂತನನ್ನು ಸೇರುತ್ತೇವೆ. ಸಾವಿನ ಕೊನೇ ಕ್ಷಣದಲ್ಲಿ ಬರುವ ಚಿಂತನೆ ಮುಂದಿನ ಜನ್ಮದ ನಿರ್ಣಾಯಕ ಸಂಗತಿ. ಹಾಗಾಗಿ ಮುಂದಿನ ಜನ್ಮದಲ್ಲಿ ಆತ ಏನಾಗಬೇಕೋ ಅದೇ ನೆನಪಾಗುತ್ತದೆ! ಭಗವಂತನನ್ನು ಸೇರುವ ಯೋಗ ಇಲ್ಲದವರಿಗೆ ಭಗವಂತನ ನೆನಪು ಬರುವುದೇ ಇಲ್ಲ! ಇದಕ್ಕೆ ಶಾಸ್ತ್ರದಲ್ಲಿ ಅನೇಕ ದೃಷ್ಟಾಂತಗಳಿವೆ. ಈ ದೇಶಕ್ಕೆ ‘ಭಾರತ’ ಎಂದು ಹೆಸರು ಬರಲು ಕಾರಣನಾದ ವೃಷಭದೇವನ ಮಗ ಭರತನ ಕಥೆ ಈ ವಿಚಾರವನ್ನು ಸ್ಪಷ್ಟವಾಗಿ ಪುರಾವೆ ಸಹಿತ ಹೇಳುವ ಕಥೆ. (ಈ ಭರತ ದುಷ್ಯಂತನ ಮಗ ಭರತನಲ್ಲ, ದುಷ್ಯಂತನ ಮಗ ಭರತ  ‘ಭರತವಂಶ’ ದ ಮೂಲ ಪುರುಷ). ಪರಮ ಧಾರ್ಮಿಕನಾದ ಭರತ ತನ್ನ ಮಗ ಪ್ರಾಯ ಪ್ರಬುದ್ಧನಾದ ಮೇಲೆ ತನ್ನೆಲ್ಲಾ ಅಧಿಕಾರವನ್ನು ಅವನಿಗೊಪ್ಪಿಸಿ, ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿ ಕಾಡಿನಲ್ಲಿ ಋಷಿಗಳ ಜೊತೆಗೆ ಸದಾ ಭಗವದ್ ನಿಷ್ಠನಾಗಿ ಬದುಕುತ್ತಿದ್ದ. ಒಂದು ದಿನ ಆತನಿಗೆ ಕಾಡಿನಲ್ಲಿ ತಾಯಿ ಸತ್ತ ಒಂದು ಜಿಂಕೆ ಮರಿ ಸಿಕ್ಕಿತು. ಭರತ ಆ ಮರಿಯನ್ನು ತಂದು ಪಾಲನೆ ಪೋಷಣೆ ಮಾಡತೊಡಗಿದ. ಇದರಿಂದ ಆತ ಸದಾ ಆ ಜಿಂಕೆಯನ್ನೇ ಪೋಷಣೆ ಮಾಡುವುದರಲ್ಲಿ ತನ್ನ ಸಮಯವನ್ನು ಕಳೆಯಲಾರಂಭಿಸಿದ. ಇದರಿಂದ ಆತನ ಸಾಧನೆಗೆ ಚ್ಯುತಿ ಬಂತು. ಆ ಜಿಂಕೆಯ ಮರಿ ಬೆಳೆದು ದೊಡ್ಡದಾಗುವ ಮೊದಲೇ ಆತ ಪ್ರಾಣತ್ಯಾಗ ಮಾಡುವ ಪ್ರಸಂಗ ಬಂತು. ಆ ಕಾಲದಲ್ಲಿ ಭರತನಿಗೆ ಭಗವಂತನ ಚಿಂತನೆಯ ಬದಲು ಕಾಡಿದ್ದು ಆ ಜಿಂಕೆ ಮರಿಯ ಚಿಂತೆ!  ಇದರಿಂದ ಆತ ತನ್ನ ಮುಂದಿನ ಜನ್ಮದಲ್ಲಿ ಜಿಂಕೆಯಾಗಿ ಹುಟ್ಟಿದ. ಆದ್ದರಿಂದ ಎಂತಹ ಅಪರೋಕ್ಷ ಜ್ಞಾನಿಯನ್ನೂ ಕೂಡ ಪ್ರರಾಬ್ಧ ಬಿಡದು ಎನ್ನುವುದಕ್ಕೆ  ಇದು ಶ್ರೇಷ್ಠ ಉದಾಹರಣೆ. ಈ ಕಥೆ ಕೃಷ್ಣ ಇಲ್ಲಿ ಹೇಳುವ ವಿಚಾರಕ್ಕೆ ಜ್ವಲಂತ ದೃಷ್ಟಾಂತ.
ನಾವು ಜೀವನ ಪರ್ಯಂತ ಸಾಧನೆ ಮಾಡಿದರೂ ಕೂಡಾ, ಸಾಯುವ ಕ್ಷಣದಲ್ಲಿ ಭಗವಂತನ ನೆನಪು ಬಾರದೇ ಹೋಗಬಹುದು. ಇದಕ್ಕಾಗಿ ಜೀವನ ಪರ್ಯಂತ ಅಥವಾ ಅನೇಕ ಜನ್ಮಗಳ ಸಾಧನೆ ಅಗತ್ಯ. ಕೃಷ್ಣ ಹೇಳುತ್ತಾನೆ “ಸದಾ ತದ್ ಭಾವಭಾವಿತಃ” ಎಂದು. ಇಲ್ಲಿ ಭಾವ ಅಂದರೆ ತನ್ಮಯತೆ. ಯಾವಾಗಲೂ ಭಗವಂತನಲ್ಲೇ ತನ್ಮಯವಾದ ಮನಸ್ಸಿನಿಂದ ನಿರಂತರ ಭಗವಂತನ ಚಿಂತನೆ ಮಾಡಬೇಕು. ಅಂತ್ಯ ಕಾಲದಲ್ಲಿ ಭಗವಂತನ ನೆನಪು ಬರಬೇಕಾದರೆ, ನಿರಂತರ ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸುವ ಸಂಸ್ಕಾರ ಬೇಕು. ಇದನ್ನು ಬಿಟ್ಟು ಮರಣ ಕಾಲದಲ್ಲಿ ಭಗವಂತನನ್ನು ನೆನೆದರಾಯ್ತು ಎಂದು ಜೀವನವನ್ನು ವ್ಯರ್ಥವಾಗಿ ಕಳೆದರೆ ಮರಣ ಕಾಲದಲ್ಲಿ ಭಗವಂತನ ನೆನಪು ಬರುವುದೇ ಇಲ್ಲ!
ಭೀಷ್ಮಾಚಾರ್ಯರಿಗೆ ಕೊನೆಗಾಲದಲ್ಲಿ ಎಷ್ಟೇ ಭಗವಂತನ ಬಗ್ಗೆ ಯೋಚಿಸಿದರೂ ಕೂಡಾ ಕಂಡಿದ್ದು ತನ್ನದೇ ಬಾಣದಿಂದ ಗಾಯಗೊಂಡು ನೆತ್ತರು ಸುರಿಸುತ್ತಿರುವ ಕೃಷ್ಣ! ಆನಂದಸ್ವರೂಪ ಭಗವಂತನ ನಿಜ ದರ್ಶನ ಅವರಿಗಾಗಲಿಲ್ಲ. ಇಲ್ಲಿ ನಾವು ಅರಿಯಬೇಕಾದ ವಿಚಾರವೇನೆಂದರೆ-ನಾವು ಯಾವುದೇ ಕೆಟ್ಟ ಸಂಗತಿಯನ್ನು ಗಾಢವಾಗಿ ಮನಸ್ಸಿಗೆ ಹಚ್ಚಿಕೊಳ್ಳಬಾರದು. ಹಚ್ಚಿಕೊಂಡರೆ ಕೊನೆಗಾಲದಲ್ಲಿ ಅದೇ ಕಾಣುತ್ತದೆ! ಇಡೀ ಜೀವನದಲ್ಲಿ ನಾವು ಯಾವತ್ತೂ ಕೆಟ್ಟದ್ದನ್ನು ಯೋಚಿಸಬಾರದು. ಯಾರನ್ನೂ ಕೆಟ್ಟವರೆಂದು ದ್ವೇಷಿಸಬಾರದು. ಒಬ್ಬರನ್ನು ದ್ವೇಷಿಸುವುದು ತುಂಬಾ ಕೆಟ್ಟದ್ದು. ಅದು ನಮ್ಮ ಇಡೀ ಬದುಕನ್ನೇ ಹಾಳುಮಾಡುತ್ತದೆ. ದುಷ್ಟರಿಂದ ದೂರವಿರು ಆದರೆ ದ್ವೇಷಿಸಬೇಡ. ಒಬ್ಬರನ್ನು ದ್ವೇಷಿಸುವುದು, ನಿಂದಿಸುವುದು, ಅದನ್ನು ಗಾಢವಾಗಿ ಹಚ್ಚಿಕೊಳ್ಳುವುದರಿಂದ ಅವರಿಗೆ ಏನೂ ಬಾಧಕವಿಲ್ಲ. ಆದರೆ ನಮ್ಮ ಬದುಕನ್ನು ನಾವು ಹಾಳು ಮಾಡಿಕೊಳ್ಳುತ್ತೇವೆ. ನಾವು ದ್ವೇಷಿಸುವ ವಸ್ತು ನಮ್ಮ ತಲೆಯಲ್ಲಿ ಗಾಢವಾಗಿ ನೆಲೆ ನಿಲ್ಲುತ್ತದೆ ಮತ್ತು ನಮ್ಮನ್ನು ಅಧಃಪಾತಕ್ಕೆ ಕೊಂಡೊಯ್ಯುತ್ತದೆ. ಅದು ಸಾವಿನ ಕಾಲದಲ್ಲಿ ಕೊನೆಗೆ ತಲೆಎತ್ತಿ ಹೆಡೆ ಅರಳಿಸುತ್ತದೆ! ಆದ್ದರಿಂದ ನಾವು ಈ ವಿಚಾರದಲ್ಲಿ ಎಚ್ಚರವಾಗಿರಬೇಕು. ಯಾರನ್ನಾದರು ಟೀಕೆ ಮಾಡಲು ನಾವು ಅರ್ಹರಲ್ಲ. ಏಕೆಂದರೆ ನಮಗೆ ಅಂತರಂಗ ದರ್ಶನವಿಲ್ಲ. ನಾವು ಮಾತನಾಡುವುದು ಕೇವಲ ಹೊರ ನೋಟದಿಂದ. ಒಳಗೆ ಯಾರು ಏನು ಎಂದು ನೋಡುವ ಶಕ್ತಿ ನಮಗಿಲ್ಲ. ಆದ್ದರಿಂದ ಇನ್ನೊಬ್ಬರ ಚಿಂತನೆ ಬಿಟ್ಟು ಸದಾ ಭಗವಂತನ ಚಿಂತನೆ ಮಾಡು ಎನ್ನುತ್ತಾನೆ ಕೃಷ್ಣ. ನಾವು ಚಿಂತಿಸಬೇಕಾದ ಏಕಮಾತ್ರ ವಸ್ತು ಕೇವಲ ಭಗವಂತ.                       

ತಸ್ಮಾತ್ ಸರ್ವೇಷು ಕಾಲೇಷು ಮಾಮನುಸ್ಮರ ಯುಧ್ಯ ಚ   
ಮಯ್ಯರ್ಪಿತಮನೋಬುದ್ಧಿರ್ಮಾಮೇವೈಷ್ಯಸ್ಯಸಂಶಯಮ್

ತಸ್ಮಾತ್ ಸರ್ವೇಷು ಕಾಲೇಷು ಮಾಮ್ ಅನುಸ್ಮರ ಯುಧ್ಯ ಚ          
ಯಿ ಅರ್ಪಿತ ಮನಃ ಬುದ್ಧಿಃ ಮಾಮ್ ಏವ ಏಷ್ಯಸಿ ಅಸಂಶಯಃ  –ಅದರಿಂದ ಎಲ್ಲ ಕಾಲದಲ್ಲು ನನ್ನನ್ನು ನೆನೆ. ನೆನೆಯುತ್ತ ಹೋರಾಡು. ನಿನ್ನೆಲ್ಲ ಬಯಕೆ ನಿರ್ಧಾರಗಳು ನನ್ನ ಕುರಿತಾದಾಗ ನಿಶ್ಚಯವಾಗಿ ನನ್ನನ್ನೆ ಸೇರುವೆ.

ದೇವರನ್ನು ಸ್ಮರಣೆ ಮಾಡುವ ಕಾಲ ಅಂತ ಒಂದಿಲ್ಲ. ಕೃಷ್ಣ ಹೇಳುತ್ತಾನೆ “ಸರ್ವ ಕಾಲದಲ್ಲೂ ನನ್ನನ್ನು ಸ್ಮರಣೆ ಮಾಡು” ಎಂದು. ಪ್ರತಿಯೊಂದು ಕ್ರಿಯೆ ಮಾಡುವಾಗ ಆ ಕ್ರಿಯೆ ಮಾಡಿಸುತ್ತಿರುವವ ಭಗವಂತ ಎನ್ನುವ ಎಚ್ಚರವಿರಲಿ. ಯುದ್ಧ ಮಾಡುವಾಗಲೂ ಸಹ “ಆ ಭಗವಂತ ನನ್ನೊಳಗೆ ಕೂತು ಈ ಕಾರ್ಯವನ್ನು ಮಾಡಿಸುತ್ತಿದ್ದಾನೆ, ಇದು ಅವನ ಸಂಕಲ್ಪ” ಎನ್ನುವ ಭಾವನೆ ಯುದ್ಧವನ್ನೂ ದೇವರ ಪೂಜೆಯನ್ನಾಗಿ ಪರಿವರ್ತಿಸುತ್ತದೆ! ನಮ್ಮಿಂದ ತಿಳಿದೋ ತಿಳಿಯದೆಯೋ ಆಗುವ ತಪ್ಪಿನಲ್ಲಿಯೂ ಕೂಡಾ ಭಗವಂತನ ಅರಿವು, ಶರಣಾಗತಿ ನಮಗೆ ಪಾಪದ ಲೇಪ ಬರದಂತೆ ತಡೆಯುತ್ತದೆ. ಭಗವಂತನ ಸ್ಮರಣೆಗೆ ಯಾವುದೇ ಕಾಲದ ನಿರ್ಬಂಧವಿಲ್ಲ. ಯಾವಾಗ ಭಗವಂತನ ಸ್ಮರಣೆ ಬಂತೋ ಅದೇ ಪುಣ್ಯಕಾಲ. ಭಗವಂತನ ಸ್ಮರಣೆ ಮನಸ್ಸಿನಲ್ಲಿರುವುದೇ ಮಡಿ. ಆದ್ದರಿಂದ ಭಗವಂತನ ಪೂಜಾರೂಪವಾಗಿ ಅಹಂಕಾರವಿಲ್ಲದೆ ಭಗವಂತನನ್ನು ನೆನೆದು ಕರ್ತವ್ಯ ಮಾಡಬೇಕು.
ಕ್ರಿಯೆಯಲ್ಲಿ ಇರತಕ್ಕ ಭಾವ ಧರ್ಮ-ಅಧರ್ಮವನ್ನು ನಿರ್ಣಯ ಮಾಡುತ್ತದೆ. ಉದಾಹರಣೆಗೆ ಧರ್ಮವ್ಯಾದ. ಈತ ಮಾಂಸ ಮಾರಿಯೂ ಪರಮ ಧಾರ್ಮಿಕನಾಗಿ ಬದುಕಿದ. ಏಕೆಂದರೆ ಆತನ ಅನುಸಂಧಾನ ಶುದ್ಧವಾಗಿತ್ತು. “ದೇವರು ನನ್ನನ್ನು ಈ ಕೆಲಸಕ್ಕೆ ಹಚ್ಚಿದ್ದಾನೆ, ನನ್ನ ಈ ಜನ್ಮದ ಕರ್ತವ್ಯ ಮಾಂಸ ಮಾರಿ ಬದುಕುವುದು. ಅದನ್ನು ಪ್ರಾಮಾಣಿಕವಾಗಿ ಮಾಡಿ ಜೀವನ ಸಾಗಿಸಬೇಕು” ಎನ್ನುವ ಅನುಸಂಧಾನ ಆತನಲ್ಲಿತ್ತು. ಆತ ತನ್ನ ವ್ಯಾಪಾರವನ್ನು ಕೇವಲ ತನ್ನ ಹಾಗು ತನ್ನ ಕುಟುಂಬದ ಜೀವನ ನಿರ್ವಹಣೆಗಾಗಿ ಮಾಡುತ್ತಿದ್ದ. ಈ ರೀತಿ ಪ್ರಾಮಾಣಿಕನಾಗಿ ಬದುಕಿ ಆತ ಋಷಿಗಳನ್ನೂ ಮೀರಿಸುವಷ್ಟು ಎತ್ತರಕ್ಕೇರಿದ. ಆದ್ದರಿಂದ ಭಾವ ಶುದ್ಧಿ ಅತ್ಯಂತ ಶ್ರೇಷ್ಠ. ಹಾಗಾಗಿ ನಾವು ನಮ್ಮ ಮನಸ್ಸು ಮತ್ತು ಬುದ್ಧಿಯನ್ನು ಭಗವಂತನಲ್ಲಿ ನೆಲೆ ನಿಲ್ಲಿಸಬೇಕು. “ಆಗ ನಿಸಂಶಯವಾಗಿ ನನ್ನನ್ನು ಸೇರುವೆ” ಎನ್ನುತ್ತಾನೆ ಕೃಷ್ಣ.

ಅಭ್ಯಾಸಯೋಗಯುಕ್ತೇನ ಚೇತಸಾSನಾನ್ಯಗಾಮಿನಾ
ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನುಚಿಂತಯನ್ 

ಅಭ್ಯಾಸ ಯೋಗ ಯುಕ್ತೇನ ಚೇತಸಾ ನ ಅನ್ಯ ಗಾಮಿನಾ
ಪರಮಮ್  ಪುರುಷಮ್  ದಿವ್ಯಮ್  ಯಾತಿ ಪಾರ್ಥ ಅನುಚಿಂತಯನ್ –ಪಾರ್ಥ, ಸೃಷ್ಟಿಯೊಂದು ಲೀಲೆಯಾದ ಪರಮ ಪುರುಷನನ್ನು ಅಭ್ಯಾಸದ ಉಪಾಯದಿಂದ ಹದಗೊಂಡು, ಬೇರಾವುದೂ ಬೇಡದ ಒಳಬಗೆಯಿಂದ, ಭಕ್ತಿಯಿಟ್ಟು ನೆನೆದಾಗ ಅವನನ್ನೆ ಸೇರುತ್ತಾನೆ.

ನಾವು ನಮ್ಮ ಮನಸ್ಸನ್ನು ನಿರಂತರ ಭಗವಂತನನಲ್ಲಿ ನೆಲೆ ನಿಲ್ಲುವಂತೆ ಮಾಡಲು ‘ನಿರಂತರ ಮನನ’ ಅತ್ಯಂತ ಮುಖ್ಯ ಅಂಶ.  ಸಾಮಾನ್ಯವಾಗಿ ನಮ್ಮ ಚಿತ್ತ ಬೇಡದ ವಿಷಯಗಳತ್ತ ಹರಿಯುತ್ತದೆ. ಆದರೆ ನಾವು ಅದನ್ನು  ಕೇವಲ ಭಗವಂತನನ್ನು ಚಿಂತಿಸುವಂತೆ  ತರಬೇತಿಗೊಳಿಸಬೇಕು. ಚಿತ್ತಕ್ಕೆ ಭಗವಂತನನ್ನು ಅನನ್ಯಗಾಮಿಯಾಗಿ ಚಿಂತನೆ ಮಾಡುವಂತೆ ನಿರಂತರ ಅಭ್ಯಾಸ ಮಾಡಿಸಬೇಕು. ನಮ್ಮ ಮನಸ್ಸು, ಬುದ್ಧಿ, ಚಿತ್ತ ಎಲ್ಲವೂ ನಾವು ಅಭ್ಯಾಸ ಮಾಡಿಸಿದಂತೆ ಕೆಲಸ ಮಾಡುತ್ತವೆ. ಅವುಗಳಿಗೆ ನಾವು ಭಗವಂತನ ಚಿಂತನೆಯ ಅಭ್ಯಾಸ ಮಾಡಿಸಬೇಕು. ಮನಸ್ಸು ಚಿತ್ತವನ್ನು ಮಣಿಸುವ ಏಕಮಾತ್ರ ಸಾಧನ ಅಭ್ಯಾಸ. ಹೀಗೆ ಮಾಡಿದಾಗ ಅದು ಭಗವಂತನಲ್ಲಿ ನೆಲೆನಿಲ್ಲುತ್ತದೆ. ಭಗವಂತನಲ್ಲಿ ನೆಲೆನಿಂತ ಮನಸ್ಸು ಅಂತ್ಯಕಾಲದಲ್ಲಿ ಕೂಡಾ ಭಗವಂತನನ್ನೇ ಕಾಣುತ್ತದೆ. ಇದು ಕೇವಲ ಚಿಂತನೆ ಅಲ್ಲ ಇದು ಅನುಚಿಂತನೆ-ಅಂದರೆ ಭಗವಂತನ ಯಥಾರ್ಥ (ಯತಾವತ್ತಾದ)ಚಿಂತನೆ. ಶ್ರುತಿಯಲ್ಲಿ ಹೇಗೆ ಹೇಳಿದ್ದಾರೋ ಹಾಗೆ ಭಗವಂತನನ್ನು ಚಿಂತನೆ ಮಾಡಬೇಕು. ಅಸತ್ಯವನ್ನು ಚಿಂತನೆ ಮಾಡಿ ಭಗವಂತನನ್ನು ಸೇರಲು ಸಾಧ್ಯವಿಲ್ಲ.
ಏಕಾಗ್ರವಾದ ಮನಸ್ಸಿನಿಂದ ದಿವ್ಯನಾದ ಪರಮಪುರುಷ, ಹೃತ್ಕಮಲ ಮದ್ಯನಿವಾಸಿ ಭಗವಂತನ ಚಿಂತನೆ ಮಾಡಬೇಕು ಎನ್ನುತ್ತಾನೆ ಕೃಷ್ಣ. ಮಹತೊಮಹಿಯಾದ ಭಗವಂತ ನಿನ್ನ ಹೃದಯದಲ್ಲಿ ಅಣೋರಣೀಯವಾಗಿ ಇರುವುದನ್ನು ಧ್ಯಾನದಲ್ಲಿ ಗುರುತಿಸು ಎನ್ನುವುದು ಇಲ್ಲಿ ಕೃಷ್ಣನ ಸಂದೇಶ. ಭಗವಂತ ಸರ್ವಗತ, ಸರ್ವಸಮರ್ಥ, ಸರ್ವಗುಣಪೂರ್ಣ, ಅನಾಧಿನಿತ್ಯ. ಅಂತಹ ಭಗವಂತ ನಮ್ಮ ಹೃತ್ಕಮಲದಲ್ಲಿ ವಾಸಿಸಿದ್ದಾನೆ ಮತ್ತು ದಿವ್ಯನಾಗಿದ್ದಾನೆ.
ಇಲ್ಲಿ ಬಳಸಿರುವ ದಿವ್ಯ ಪದಕ್ಕೆ ಅನೇಕ ಅರ್ಥಗಳಿವೆ. ಮೂಲವಾಗಿ ದಿವ್ಯ ಅಥವಾ ‘ದೇವರು’ ಈ ಪದಗಳು ‘ದಿವು’ ಎನ್ನುವ ದಾತುವಿನಿಂದ ಬಂದಿರುವುದು. ಪ್ರಾಚೀನ ದಾತು ಪಾಠದಲ್ಲಿ ಈ ದಾತುವಿಗೆ ಏಳು ಅರ್ಥವನ್ನು ನೋಡಬಹುದು; ಅವುಗಳೆಂದರೆ: ೧) ಧ್ಯುತಿ ೨) ವಿಜಿಗೀಶ ೩) ಕಾಂತಿ ೪) ಸ್ತುತಿ ೫) ವ್ಯವಹಾರ ೬) ಕ್ರೀಡಾ ೭) ಗತಿಶು. ಇತ್ತೀಚೆಗೆ ಮೋದ, ಮದ ಮತ್ತು ಸ್ವಪ್ನ ಎನ್ನುವ ಇನ್ನೂ ಮೂರು ಅರ್ಥವನ್ನು ಸೇರಿಸಿದ್ದಾರೆ. ಆದರೆ ಇದು ಪ್ರಾಚೀನ ದಾತುಪಾಠದಲ್ಲಿ ಇಲ್ಲ. ಈಗ ಸಂಕ್ಷಿಪ್ತವಾಗಿ ಮೇಲಿನ ಏಳು ಅರ್ಥಗಳನ್ನು ನೋಡೋಣ.
೧) ಧ್ಯುತಿ : ಧ್ಯುತಿ ಅಂದರೆ ಬೆಳಕಿನ ಸ್ವರೂಪ. ಬೆಳಕಿನ ಪುಂಜವಾದ ಸೂರ್ಯ ಚಂದ್ರಾದಿಗಳಿಗೆ ಬೆಳಕನ್ನೀಯುವ ಭಗವಂತ ನಮ್ಮೊಳಗೆ ಜ್ಞಾನದ ಬೆಳಕನ್ನು ತುಂಬುತ್ತಾನೆ.
೨) ವಿಜಿಗೀಶ: ಭಗವಂತ ಎಲ್ಲರಿಗಿಂತ ಎತ್ತರದಲ್ಲಿರುವವನು ಹಾಗು ಗೆಲುವಿನ ಸ್ವರೂಪ.
೩) ಕಾಂತಿ: ಕೇವಲ ಇಚ್ಚೆಯಿಂದ ಸೃಷ್ಟಿ ಮಾಡಬಲ್ಲವ. ನಮಗೆ ಇಚ್ಚೆಯನ್ನು ಕೊಟ್ಟವ ಹಾಗು ಅದನ್ನು ಅವರವರ ಯೋಗ್ಯತೆಗೆ ತಕ್ಕಂತೆ ಪೂರೈಸುವವ.
೪) ಸ್ತುತಿ: ಎಲ್ಲರಿಂದ ಸ್ತುತನಾದವನು; ಎಲ್ಲರೂ ಯಾರನ್ನು ಸ್ತುತಿಸುತ್ತಾರೋ ಅವನು ಸರ್ವಶಬ್ದ ವಾಚ್ಯನಾದ ಭಗವಂತ.
೫) ವ್ಯವಹಾರ: ಜಗತ್ತಿನ ಸಮಸ್ತ ವ್ಯವಹಾರವನ್ನು ನಿರ್ವಹಿಸುವವ.
೬) ಕ್ರೀಡಾ: ಸೃಷ್ಟಿ-ಸ್ಥಿತಿ-ಸಂಹಾರ ಇದು ಭಗವಂತನಿಗೊಂದು ಕ್ರೀಡೆ. ಹುಟ್ಟು-ಸಾವು, ಸರ್ವ ವ್ಯವಹಾರಗಳು ಆತನಿಗೊಂದು ಕ್ರೀಡೆ.
೭) ಗತಿಶು: ಚಲನೆ ಮತ್ತು ಜ್ಞಾನ ಕೊಟ್ಟವ. ಯಾರು ಎಲ್ಲಾ ಕಡೆ ಗತನಾಗಿದ್ದಾನೋ; ಎಲ್ಲವನ್ನೂ ತಿಳಿದಿದ್ದಾನೋ; ಎಲ್ಲರೊಳಗೆ ಬಿಂಬ ರೂಪದಲ್ಲಿ ನೆಲೆಸಿದ್ದಾನೋ ಅವನು ದಿವ್ಯ ಅಥವಾ  'ದೇವ'
ಹೀಗೆ ಅನೇಕ ಅರ್ಥಗಳನ್ನು 'ದಿವ್ಯ' ಎನ್ನುವ ಪದದಲ್ಲಿ  ಕಂಡುಕೊಳ್ಳಬಹುದು. "ಓ ದೇವರೇ" ಎನ್ನುವಾಗ ಮೇಲಿನ ಅರ್ಥವನ್ನು ಒಮ್ಮೆ ನೆನೆದರೆ ಅದರಿಂದಾಗುವ ಆನಂದ ಅಪರಿಮಿತ. ಭಗವಂತನ ನಾಮದಲ್ಲಿ ಅಷ್ಟೊಂದು ಬಲವಿದೆ. ನಾವು ಭಗವಂತನ ಜೊತೆಗೇ ಇದ್ದೂ ಕೂಡಾ ಮಾನಸಿಕವಾಗಿ ಆತನಿಂದ ದೂರವಿದ್ದೇವೆ. ಭಗವಂತನ ನಿರಂತರ ಅನುಚಿಂತನೆಯಿಂದ ನಾವು ಆತನ ಸಾಕ್ಷಾತ್ಕಾರ ಪಡೆಯಬಹುದು.
ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕೃಷ್ಣ ಭಗವಂತನನ್ನು ಅನುಚಿಂತನೆ ಮಾಡುವುದು ಅಂದರೆ ಏನು ಎನ್ನುವುದನ್ನು ವಿವರಿಸುತ್ತಾನೆ. ಒಬ್ಬ ಧ್ಯಾನ ಮಾಡುವವ ಭಗವಂತನನ್ನು ಯಾವರೀತಿ ಧ್ಯಾನ ಮಾಡಬೇಕು ಎನ್ನುವ ಚಿತ್ರಣವನ್ನು ಮುಂದಿನ ಶ್ಲೋಕಗಳಲ್ಲಿ ಕಾಣಬಹುದು.

No comments:

Post a Comment