Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Saturday, July 23, 2011

Bhagavad Geeta Kannada Chapter-09 Shloka-01


ಅಧ್ಯಾಯ ಒಂಭತ್ತು

ಜ್ಞಾನ ಎಂದರೆ ಭಗವಂತನ ಅರಿವು(Spiritual wisdom).  ಎಲ್ಲವನ್ನು ತಿಳಿದ ಭಗವಂತನೆಡೆಗೆ ನಮ್ಮ ಮನಸ್ಸು ಹರಿಯುವುದು ಜ್ಞಾನ. ಭಗವಂತ ಸರ್ವೋತ್ತಮ, ಭಗವಂತ ಸರ್ವಗತ, ಭಗವಂತ ಸರ್ವಜ್ಞ, ಇತ್ಯಾದಿಯಾಗಿ ತಿಳಿಯುವುದು ಜ್ಞಾನ. ಆ ನಂತರ ಅದರ ವಿವರಗಳ ಅರಿವು ವಿಜ್ಞಾನ(ವಿಶಿಷ್ಟವಾದ ಜ್ಞಾನ).  ಭಗವಂತ ಗುಣಪೂರ್ಣ ಎನ್ನುವುದು ಜ್ಞಾನ. ಭಗವಂತ ಜ್ಞಾನಪೂರ್ಣ, ಭಗವಂತ ಆನಂದಪೂರ್ಣ, ಭಗವಂತ ಸೌಂದರ್ಯಪೂರ್ಣ, ಭಗವಂತ ದಯಾಪೂರ್ಣ, ಹೀಗೆ ಒಂದೊಂದು ಗುಣಗಳ ಪೂರ್ಣತೆಯನ್ನು ವಿವರವಾಗಿ ಅನುಸಂಧಾನ ಮಾಡುವುದು ವಿಜ್ಞಾನ(exclusive wisdom of God). ನಾವು ದೇವರನ್ನು ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ಆದರೆ ಪ್ರತಿಯೊಂದು ಜೀವನಿಗೆ ಅವನವನಿಗೆ ವಿಶಿಷ್ಟವಾದಂತಹ ಅರಿವಿನ ಮಟ್ಟವಿದೆ. ಎಲ್ಲರೂ ಒಂದೇ ರೀತಿ ತಿಳಿದುಕೊಳ್ಳಲು ಬರುವುದಿಲ್ಲ. ಅವರವರ ಮಟ್ಟಕ್ಕೆ ತಕ್ಕಂತೆ ಭಗವಂತನನ್ನು ಅರಿಯುವುದು ವಿಜ್ಞಾನ(individual exclusive wisdom of God ). ಹೀಗೆ ಭಗವಂತ ಸರ್ವೋತ್ತಮ ಎಂದು ತಿಳಿದುಕೊಳ್ಳುವುದು ಜ್ಞಾನವಾದರೆ, ಆ ಸರ್ವೋತ್ತಮ ತತ್ವವನ್ನು ವಿವರವಾಗಿ ಅದರ ಬೇರೆ ಬೇರೆ ಮುಖಗಳಿಂದ ಅವರವರ ಯೋಗ್ಯತೆಗೆ ತಕ್ಕಂತೆ  ಅನುಸಂಧಾನ ಮಾಡುವುದು ವಿಜ್ಞಾನ. ಹೀಗೆ ಅನುಸಂಧಾನ ಮಾಡುವುದರಿಂದ ಭಗವಂತ ಎಲ್ಲವುದಕ್ಕಿಂತ ವಿಲಕ್ಷಣ ಎನ್ನುವ ಸತ್ಯದ ಸಾಕ್ಷಾತ್ಕಾರವಾಗುತ್ತದೆ.
ಕೃಷ್ಣ ಏಳನೇ ಅಧ್ಯಾಯದಲ್ಲಿ ಅರ್ಜುನನಿಗೆ ಹೇಳಿದ್ದ- “ತಿಳಿಯಬೇಕಾದ ನನ್ನ ಹಿರಿಮೆಯನ್ನು ಅದರ ಬಿತ್ತರದ ಜತೆಗೆ ನಿನಗೆ ನಾನು ಪೂರ್ತಿಯಾಗಿ ಹೇಳುತ್ತೇನೆ. ಇದನ್ನು ತಿಳಿದರೆ ಮತ್ತೆ ವಿಷಯದಲ್ಲಿ ಬೇರೆ ತಿಳಿಯುವಂಥದೇನೂ ಉಳಿದಿರುವುದಿಲ್ಲ” ಎಂದು (ಅ-೭ , ಶ್ಲೋ-೨). ಮತ್ತೆ ಇಲ್ಲಿ ಈ ಅಧ್ಯಾಯದಲ್ಲಿ ಪುನಃ ಜ್ಞಾನ ವಿಜ್ಞಾನದ ಬಗ್ಗೆ ವಿವರಿಸುತ್ತಾನೆ!  ಏಕೆ ಹೀಗೆ? ಹಿಂದೆ ಹೇಳಿದ್ದನ್ನು ಕೃಷ್ಣ ಮರೆತು ಪುನಃ ವಿವರಿಸುತ್ತಿದ್ದಾನೋ?! ಅಲ್ಲ, ಅದಕ್ಕೆ ಕಾರಣಗಳಿವೆ. ಒಮ್ಮೆ ಹೇಳಿದ್ದನ್ನು ಮತ್ತೆ ಏಕೆ ಹೇಳುತ್ತಿದ್ದಾನೆ ಎಂದರೆ ‘ಬೇರೆಬೇರೆ ಆಯಾಮದಲ್ಲಿ ಹೇಳುವುದಕ್ಕೊಸ್ಕರ’. ಆದ್ದರಿಂದ ಇಲ್ಲಿ ಹೇಳುವುದು ಹಿಂದೆ ಹೇಳಿದುದರ ವಿವರಣೆ ಮತ್ತು ಸೃಷ್ಟೀಕರಣ. ಸಂಕ್ಷಿಪ್ತವಾಗಿ ಅಲ್ಲಿ ವಿವರಿಸಿದ್ದನ್ನು ಇಲ್ಲಿ ಕೆಲವು ಹೊಸ ಅರ್ಥಗಳಿಂದ ಇನ್ನೊಂದು ರೀತಿಯಲ್ಲಿ ಕೃಷ್ಣ ವಿವರಿಸುತ್ತಾನೆ. ಭಗವಂತನ ತತ್ವ ಚಿಂತನೆಯನ್ನು ಒಂದು ಬಾರಿ ಮಾಡಿದರೆ ನಮ್ಮ ತಲೆಯೊಳಗೆ ಹೋಗುವುದಿಲ್ಲ! ನಿರಂತರ ಚಿಂತನೆ ಮಾಡುತ್ತಾ ಇದ್ದರೆ ಎಲ್ಲೋ ಸ್ವಲ್ಪ ಒಳಗೆ ಹೋಗುತ್ತದೆ! ಕೇಳಿದಾಗ, ಓದಿದಾಗ ಎಲ್ಲವೂ ತಿಳಿಯಿತು ಅನಿಸುತ್ತದೆ. ಆದರೆ ಸ್ವಲ್ಪ ಹೊತ್ತಿನ ನಂತರ ಒಂದೂ ನೆನಪಾಗುವುದಿಲ್ಲ! ಅದಕ್ಕೋಸ್ಕರ ಆವೃತ್ತಿ ಮಾಡುತ್ತಾ ಬೇರೆಬೇರೆ ಆಯಾಮದಲ್ಲಿ ಚಿಂತನೆ ಮಾಡಬೇಕು. ಈ ಅಧ್ಯಾಯದಲ್ಲಿ ಕೃಷ್ಣ ಹಿಂದೆ ಹೇಳಿದ್ದ  ಜ್ಞಾನ-ವಿಜ್ಞಾನವನ್ನು ನಮಗೆ ಅರ್ಥವಾಗುವ ರೀತಿಯಲ್ಲಿ ಬೇರೆ ಬೇರೆ ಮುಖಗಳಿಂದ ಬೇರೆ ಬೇರೆ ಆಯಾಮದಲ್ಲಿ ವಿವರಿಸುತ್ತಾನೆ.
ಒಬ್ಬ ಸೈನಿಕನಾಗಿ ಯುದ್ಧರಂಗದಲ್ಲಿ ನಿಂತಿರುವ ವ್ಯಕ್ತಿಯ ಮಾನಸಿಕ ಸ್ಥಿತಿ ಅಧ್ಯಾತ್ಮ ಚಿಂತನೆಯಲ್ಲಿ ಬಹಳ ಹತ್ತಿರವಾಗಿರುತ್ತದೆ. ಈ ಕಾರಣದಿಂದ ಯುದ್ಧರಂಗದಲ್ಲಿ ಕೃಷ್ಣ ಅಧ್ಯಾತ್ಮವನ್ನು ಬಿಚ್ಚುತ್ತಾನೆ. ಅರ್ಜುನ ಬಹಳ ದೊಡ್ಡ ಜ್ಞಾನಿ. ಸದಾ ಭಗವದ್ ಚಿಂತನೆಯಲ್ಲಿ ಇರತಕ್ಕಂತಹ ದೇವಾಂಶಸಂಭೂತ. ಅದರ ಜೊತೆಗೆ ಆತನನ್ನು ಯುದ್ಧರಂಗದಲ್ಲಿ ನಿಲ್ಲಿಸಿ ಮಾನಸಿಕವಾಗಿ ಹುಟ್ಟು ಸಾವುಗಳ ಈ ಲೀಲೆಯ ಆಚೆಗೆ ಅವನನ್ನು ಕರೆದೊಯ್ದು ಮಾನಸಿಕವಾಗಿ ಅಣಿಗೊಳಿಸಿ ಕೃಷ್ಣ ವೇದಾಂತವನ್ನು ಹೇಳುತ್ತಾನೆ. ಇಂತಹ ಕ್ಷಣದಲ್ಲಿ ಭಗವಂತನ ಬಗೆಗೆ ಹೇಳಿದರೆ ಬಹುಬೇಗ ಹೃದಯ ತುಂಬಿಕೊಳ್ಳುತ್ತದೆ. ನಾವಾದರೂ ಅಷ್ಟೇ, ನಮ್ಮ ದೈನಂದಿನ ಜೀವನದಲ್ಲಿ ಸರಿ-ತಪ್ಪು, ಧರ್ಮಾಧರ್ಮಗಳ ಸಂಘರ್ಷ ನಡೆಯುತ್ತಲೇ ಇರುತ್ತದೆ. ಅಂತಹ ಯುದ್ಧದ ಸಂದರ್ಭದಲ್ಲೇ ನಮಗೆ ಅಧ್ಯಾತ್ಮ ಅರ್ಥವಾಗುವುದು.
    
ಭಗವಾನುವಾಚ
ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ
ಜ್ಞಾನಂ ವಿಜ್ಞಾನಸಹಿತಂ ಯಜ್ ಜ್ಞಾತ್ವಾ ಮೋಕ್ಷ್ಯಸೇSಶುಭಾತ್

ಭಗವಾನುವಾಚ-ಭಗವಂತ ಹೇಳಿದನು:
ಇದಮ್  ತು ತೇ ಗುಹ್ಯತಮಮ್  ಪ್ರವಕ್ಷ್ಯಾಮಿ ಅನಸೂಯವೇ
ಜ್ಞಾನಮ್  ವಿಜ್ಞಾನ ಸಹಿತಮ್  ಯತ್  ಜ್ಞಾತ್ವಾ ಮೋಕ್ಷ್ಯಸೇ ಶುಭಾತ್- ಇದಂತೂ ತುಂಬಾ ಬಚ್ಚಿಡಬೇಕಾದದ್ದು. ಕಿಚ್ಚು ಪಡದೆ ಮೆಚ್ಚುವವನೆಂದು ಹೇಳುತ್ತಿದ್ದೇನೆ: ತಿಳಿವು ಮತ್ತು ತಿಳಿವಿನ ಬಿತ್ತರ. ಇದನ್ನು ತಿಳಿದು ಕುತ್ತಿನಿಂದ ಪಾರಾಗುವೆ.

ಕೃಷ್ಣ ಹೇಳುತ್ತಾನೆ “ಭಗವದ್ ತತ್ವದ ಬಗೆಗೆ ನಿನಗೆ ಪುನಃ ಹೇಳುತ್ತೇನೆ; ಅತ್ಯಂತ ರಹಸ್ಯವಾದ ಉಪಾಸನೆ ಸಂಗತಿಯನ್ನು ನಿನ್ನ ಮುಂದೆ ಬಿಚ್ಚಿಡುತ್ತಿದ್ದೇನೆ” ಎಂದು. ಇದು ಎಲ್ಲರ ಮುಂದೆ ತೆರೆದಿಡುವ ಸಂಗತಿಯಲ್ಲ. ಯಾರಿಗೆ ಭಗವಂತನ ಉಪಾಸನೆಯಲ್ಲಿ ಅನನ್ಯವಾದ ಕಾತರ ಇದೆ, ಭಗವಂತನಲ್ಲದೆ ನನಗೆ ಇನ್ನೇನೂ ಬೇಡ ಎನ್ನುವ ಮನಸ್ಸುಳ್ಳವರ ಮತ್ತು  ಭಗವಂತನಿಗೋಸ್ಕರ ಹಾತೊರೆಯುವವರ ಮುಂದೆ ಹೇಳಬೇಕಾದ ಮಾತು. ಅತ್ಯಂತ ರಹಸ್ಯವಾದ ಗೊಪನೆ ಮಾಡಬೇಕಾದ ಸಂಗತಿ. “ಅದನ್ನು ನಾನು ನಿನಗೆ ಹೇಳುತ್ತಿದ್ದೇನೆ” ಎನ್ನುತ್ತಾನೆ ಕೃಷ್ಣ.  ಇಲ್ಲಿ ಅರ್ಜುನನಿಗೆ ಈ ವಿಚಾರವನ್ನು ತಿಳಿಯುವ ಜಿಜ್ಞಾಸೆ ಮತ್ತು ಅರ್ಹತೆ ಇದ್ದುದರಿಂದ ಕೃಷ್ಣ ಆತನಿಗೆ ಆ ಗೋಪ್ಯವಾದ ವಿಚಾರವನ್ನು ಹೇಳುತ್ತಾನೆ. ಕೇಳುವ ಅರ್ಹತೆ ಮತ್ತು ಬಯಕೆ ಇದ್ದವರಿಗೆ ಮಾತ್ರ ಕೊಡಬೇಕಾದ ವಿದ್ಯೆ ಇದು. ಇದನ್ನು ಎಲ್ಲರಿಗೂ ಕೊಡಲಾಗುವುದಿಲ್ಲ.
ಇಲ್ಲಿ ಕೃಷ್ಣ “ಅನಸೂಯವೇ” ಎನ್ನುವ ಪದವನ್ನು ಬಳಸಿದ್ದಾನೆ. ಮನುಷ್ಯನಿಗೆ ವೇದಾಂತ ಓದುವ ಮತ್ತು ವೇದಾಂತ ಓದಿದ ನಂತರವೂ ಇರಬೇಕಾದ ಗುಣಮಟ್ಟ(Quality) ‘ಅಹಂಕಾರ ರಹಿತತೆ’(egolessness). ಅಹಂಕಾರ ಇದ್ದು ವೇದಾಂತ ಓದಿದರೆ ಏನೂ ಉಪಯೋಗವಿಲ್ಲ. ವೇದಾಂತ ಓದುವ ಮೊದಲು ಅಹಂ  ಇರಬಾರದು. “ಭಗವಂತನ ಮುಂದೆ ನಾನು ಏನೂ ಅಲ್ಲ” ಎಂದು ತಿಳಿದಿದ್ದರೆ ಅಹಂಕಾರ ಬರುವುದಿಲ್ಲ. ವೇದಾಂತ ಓದಿ ‘ನಾನು ದೊಡ್ಡ ಜ್ಞಾನಿ’ ಅನ್ನುವ ಅಹಂಕಾರ ಬಂದರೆ- ಓದಿ ದೇವರನ್ನು ಕಳೆದುಕೊಂಡಂತಾಗುತ್ತದೆ. ಆದರೆ ಇಂದು ನಾವು ಒಂದಲ್ಲ ಒಂದು ಅಹಂಕಾರಕ್ಕೆ ಒಳಗಾಗಿರುತ್ತೇವೆ. ಜ್ಞಾನದ ಅಹಂಕಾರ, ಅಧಿಕಾರದ ಅಹಂಕಾರ, ಸಂಪತ್ತಿನ ಅಹಂಕಾರ, ಸೌಂದರ್ಯದ ಅಹಂಕಾರ, ಯೌವನದ ಅಹಂಕಾರ, ಇಂತಹ ಅನೇಕ ಸಂಗತಿಗಳು ನಮ್ಮನ್ನು ಕಾಡುತ್ತಿರುತ್ತವೆ. ಅದನ್ನು ಕಳಚಿಕೊಂಡಾಗ ಮಾತ್ರ ವೇದಾಂತವನ್ನು ಅರಿಯಲು ನಾವು ಅರ್ಹತೆ ಪಡೆದಂತಾಗುತ್ತದೆ. ಎಲ್ಲಿಯ ತನಕ ನಮ್ಮಲ್ಲಿ ಅಹಂಕಾರ ತುಂಬಿದೆಯೋ ಅಲ್ಲಿಯ ತನಕ ವೇದಾಂತ ನಮಗೆ ಉಪಯೋಗಕ್ಕೆ ಬರುವುದಿಲ್ಲ.
ಎಲ್ಲಾ ಅಹಂಕಾರಕ್ಕಿಂತ ಜ್ಞಾನದ ಅಹಂಕಾರ ಬಹಳ ಅಪಾಯಕಾರಿ. ಇತರ ಅಹಂಕಾರಕ್ಕೆ ಕೊನೆ ಇದೆ, ಆದರೆ ಜ್ಞಾನದ ಅಹಂಕಾರಕ್ಕೆ ಕೊನೆ ಇಲ್ಲ.  ‘ನಾನು ಪಂಡಿತ’ ಎನ್ನುವ ಅಹಂಕಾರ ತಲೆಗೆ ಬಂದರೆ ಅಂತವನು ಮಹಾ ದರಿದ್ರ ಎನಿಸುತ್ತಾನೆ!  ಅಹಂಕಾರದ ಮರಿ ‘ಅಸೂಯೆ’. ಈ ಅಸೂಯೆ ನಮ್ಮನ್ನು ಸುಡುವ ಬೆಂಕಿ. ಅದಕ್ಕಾಗಿ ಅದನ್ನು ಕನ್ನಡದಲ್ಲಿ ‘ಹೊಟ್ಟೆಕಿಚ್ಚು’ ಎನ್ನುತ್ತಾರೆ. ಇದು ನಮ್ಮ ವ್ಯಕ್ತಿತ್ವವನ್ನು ನಾಶ ಮಾಡುತ್ತದೆ. ಅಂತವರಿಗೆ ವೇದಾಂತ ಹೇಳಿ  ಉಪಯೋಗವಿಲ್ಲ. “ ನಿನಗೆ ಅಸೂಯೆ ಇಲ್ಲ,  ಅದಕ್ಕಾಗಿ ನಿನಗೆ ಈ ಗೋಪ್ಯವನ್ನು ಹೇಳುತ್ತಿದ್ದೇನೆ” ಎನ್ನುತ್ತಾನೆ ಕೃಷ್ಣ.
ಯುದ್ಧ ರಂಗದಲ್ಲಿ ನಿಂತ ವ್ಯಕ್ತಿಗೆ ಅಸೂಯೆ ಇಲ್ಲದೆ ಇರುವುದು ಅತ್ಯಂತ ಮಹಾನ್ ಸಂಗತಿ. ದ್ವೇಷ-ಅಸೂಯೆ ಅಹಂಕಾರಗಳು ಯುದ್ಧರಂಗದಲ್ಲಿ ಸದಾ ತುಂಬಿ ತುಳುಕುತ್ತಿರುತ್ತವೆ. ಇದನ್ನು ಗೆದ್ದು ನಿಂತವ  ಅತ್ಯಂತ ಶ್ರೇಷ್ಠ. ಇಲ್ಲಿ ಕೃಷ್ಣ ಹೇಳುತ್ತಾನೆ “ಇದನ್ನು ತಿಳಿದುಕೊಂಡರೆ ನಿನ್ನ ಮನಸ್ಸು ಪರಿಶುದ್ಧವಾಗಿ ಭಗವಂತನನ್ನು ಬಯಸುವುದು ಸಾಧ್ಯವಾಗುತ್ತದೆ” ಎಂದು. ಜ್ಞಾನ ಬಂದರೆ ನಮ್ಮೊಳಗಿನ ಕೊಳೆ ತೊಳೆದು ಹೋಗಿ ಮನಸ್ಸು ನಿರ್ಮಲವಾಗುತ್ತದೆ. ನಮ್ಮ ಅತಿ ದೊಡ್ಡ ಸಂಪತ್ತು ಎಂದರೆ ಪ್ರಸನ್ನವಾದ ಸ್ವಚ್ಛ ಮನಸ್ಸು. ಅಂತಹ ಮನಸ್ಸಿನಲ್ಲಿ ಭಗವಂತ ಕಾಣಿಸಿಕೊಳ್ಳುತ್ತಾನೆ. ಅಹಂಕಾರ-ಅಸೂಯೆ ಇಲ್ಲದ ಮನಸ್ಸು ‘ವಸುದೇವ’ ಹಾಗು ಇಂತಹ ಮನಸ್ಸಿಗೆ ಕಾಣುವ ಭಗವಂತ ‘ವಾಸುದೇವ’. ಶುದ್ಧ ಮನಸ್ಸಿನಿಂದ ಜ್ಞಾನ, ಇದರಿಂದ ಅಭಯ ಮತ್ತು ಆನಂದ. ಆನಂದಮಯವಾದ ಈ ಸ್ಥಿತಿಯಿಂದ ಪಾಂಚಬೌತಿಕ ಶರೀರದಿಂದ ಮತ್ತು ಸಂಸಾರದಿಂದ   ಬಿಡುಗಡೆ ಮತ್ತು ಮೋಕ್ಷ.
ನಮಗೆ ಪಾಂಚಬೌತಿಕವಾದ ಮೂರು ಆವರಣವಿದೆ. ಈ ಮೂರು ಆವರಣದ ಒಳಗೆ ಜ್ಞಾನಾನಂದಮಯವಾದ ಆತ್ಮಸ್ವರೂಪವಿದೆ. ಲಿಂಗಶರೀರ, ಸೂಕ್ಷ್ಮಶರೀರ ಮತ್ತು ಸ್ಥೂಲಶರೀರ ಇವು ಆತ್ಮವನ್ನು ಆವರಿಸಿರುವ ಆವರಣಗಳು. ನಾವು ಈ ಮೂರೂ ಅಂಗಿಗಳನ್ನು ಕಳಚಿ, ಅಶುಭದಿಂದ ಬಿಡುಗಡೆಹೊಂದಿ,    ಸ್ವರೂಪಭೂತವಾದ ನೈಜ ಸ್ಥಿತಿಯಲ್ಲಿ ಭಗವಂತನ ಮುಂದೆ ನಿಲ್ಲುವುದನ್ನು ಇಲ್ಲಿ ಕೃಷ್ಣ  ಮೋಕ್ಷ್ಯಸೇSಶುಭಾತ್’ ಎಂದು ಸಂಕ್ಷಿಪ್ತವಾಗಿ ಹೇಳಿದ್ದಾನೆ.[ನಾವು ದೇವಸ್ಥಾನದಲ್ಲಿ ದೇವರ ಮುಂದೆ ಅಂಗಿ ತೆಗೆಯುವುದು ‘ಭಗವಂತನ ಮುಂದೆ ಹಾಕಿಕೊಂಡಿರುವ ಎಲ್ಲ ಆವರಣವನ್ನು ತೆಗೆದು ದೇವರ ಮುಂದೆ ಬತ್ತಲಾಗುವುದು’ ಎನ್ನುವ ಮುಖ್ಯಾರ್ಥವನ್ನು ಹೊಂದಿದೆ. ನಾವು ಭಗವಂತನ ಮುಂದೆ ಹಾಕಿಕೊಂಡ ಎಲ್ಲ ಮುಚ್ಚಳಗಳನ್ನು ಬಿಚ್ಚಿ ಆತನ ಮುಂದೆ ತೆರೆದುಕೊಳ್ಳಬೇಕು. ಆಗ ಆತ ನಮಗೆ ತೆರೆದುಕೊಳ್ಳುತ್ತಾನೆ.] ಹೀಗೆ ಯಾವ ರೀತಿ  ಪಾಂಚಬೌತಿಕ ಶರೀರದಿಂದ ಬಿಡುಗಡೆ ಮತ್ತು ಮೋಕ್ಷ  ಎನ್ನುವ  ಜ್ಞಾನ-ವಿಜ್ಞಾನವನ್ನು ಭಗವಂತ  ಸಮಷ್ಠಿಯಾಗಿ ಅರ್ಜುನನಿಗೆ ಹೇಳುವುದನ್ನುಮುಂದಿನ ಶ್ಲೋಕಗಳಲ್ಲಿ ನೋಡೋಣ.                   

No comments:

Post a Comment