Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Thursday, July 21, 2011

Bhagavad Geeta Kannada Chapter-08 shloka 17-22


ಸಹಸ್ರಯುಗಪರ್ಯಂತಮಹರ್ಯದ್ ಬ್ರಹ್ಮಣೋ ವಿದುಃ      
ರಾತ್ರಿಂ ಯುಗಸಹಸ್ರಾಂತಾಂ ತೇSಹೋರಾತ್ರವಿದೋ ಜನಾಃ ೧೭

ಸಹಸ್ರ ಯುಗ ಪರ್ಯಂತಮ್ ಅಹಃ ಯತ್  ಬ್ರಹ್ಮಣಃ  ವಿದುಃ
ರಾತ್ರಿಮ್  ಯುಗ ಸಹಸ್ರಾಂತಾಮ್  ತೇ ಅಹಃ ರಾತ್ರ ವಿದಃ  ಜನಾಃ –ಸಾವಿರಾರು ಯುಗಗಳ ತನಕ ಭಗವಂತನ ಹಗಲು ಮತ್ತು ಸಾವಿರಾರು ಯುಗಗಳ ತನಕ ಇರುಳು ಎಂದು ತಿಳಿಯುತ್ತಾರೆ, ಅವರು ಹಗಲು-ಇರುಳು ಬಲ್ಲ ಜನರು.

ಭಗವಂತ ಕಾಲಾತೀತ ಆದರೂ ಕೂಡಾ ಆತನ ಅನುಸಂಧಾನಕ್ಕಾಗಿ ಆತನ ಸೃಷ್ಟಿ ಕಾಲವನ್ನು ಭಗವಂತನ ಹಗಲೆಂದೂ ಮತ್ತು ಪ್ರಳಯ ಕಾಲವನ್ನು ಭಗವಂತನ ರಾತ್ರಿ ಎಂದು ಕರೆಯುತ್ತಾರೆ. ಒಂದು ಸಾವಿರ ಯುಗಚಕ್ರದ ಆವೃತಿಗೆ ಒಂದು ಬ್ರಹ್ಮನ ದಿನ.  ಯುಗಚಕ್ರ ಎಂದರೆ ಚತುರ್ಯುಗ- ಕಲಿಯುಗ 4,32,000 ವರ್ಷಗಳು; ದ್ವಾಪರ ಯುಗ 8,64,000 ವರ್ಷಗಳು; ತ್ರೇತಾಯುಗ 12,96,000 ವರ್ಷಗಳು; ಕೃತಯುಗ 17,28,000 ವರ್ಷಗಳು; ಒಟ್ಟಿಗೆ ಒಂದು ಯುಗಚಕ್ರ ಎಂದರೆ 43,20,000 ವರ್ಷಗಳು. ಇಂತಹ ಒಂದು ಸಾವಿರ ಯುಗ ಚಕ್ರಗಳು ಬ್ರಹ್ಮನ ಒಂದು ಹಗಲು. ಅಂದರೆ 432 ಕೋಟಿ ವರ್ಷ. ಆದ್ದರಿಂದ ಬ್ರಹ್ಮನ ಒಂದು ದಿನ ಅಂದರೆ 864 ಕೋಟಿ ವರ್ಷ. ಚತುರ್ಮುಖ ಬ್ರಹ್ಮನ ಆಯಸ್ಸು ಅಥವಾ ಸತ್ಯಲೋಕದ ಆಯಸ್ಸು 100 ವರ್ಷ. ಅಂದರೆ 864 ಕೋಟಿ X 360 X 100=31,104,000,0000000(ಮೂವತ್ತೊಂದು ಸಾವಿರದ ನೂರಾ ನಾಲ್ಕು ಸಾವಿರ ಕೋಟಿ) ವರ್ಷ.  ಇದು ಭಗವಂತನ ಸೃಷ್ಟಿ ಕಾಲ(ಹಗಲು). ನಂತರ ಮಹಾಪ್ರಳಯ. ಈ ಮಹಾಪ್ರಳಯದ ಕಾಲ 31,104 ಸಾವಿರ ಕೋಟಿ ವರ್ಷ(ರಾತ್ರಿ). ಇದು ಭಗವಂತನ ಸೃಷ್ಟಿ ಮತ್ತು ಸಂಹಾರದ ಲೆಕ್ಕಾಚಾರ.
ಪ್ರಳಯಗಳಲ್ಲಿ ಮೂರು ವಿಧ. ೧. ಮನ್ವಂತರ ಪ್ರಳಯ; ೨. ದಿನಪ್ರಳಯ; ೩. ಮಹಾಪ್ರಳಯ. [ಈ ಮೂರು ಪ್ರಳಯಗಳಲ್ಲದೆ ಇನ್ನೂ ಅನೇಕ ಚಿಕ್ಕ ಪ್ರಳಯಗಳಾಗುತ್ತವೆ.  ಆ ಪ್ರಳಯಗಳಲ್ಲಿ ಭೂಮಿಯ ಯಾವುದೊ ಒಂದು ಭಾಗ ನಾಶವಾಗಬಹುದು]. ಮನ್ವಂತರ ಪ್ರಳಯದಲ್ಲಿ ಭೂಮಿ ಪೂರ್ಣವಾಗಿ ನಾಶವಾಗುವುದಿಲ್ಲ-ಆದರೆ ನಾಗರೀಕತೆ ನಾಶವಾಗುತ್ತದೆ.  ದಿನಪ್ರಳಯ ಚತುರ್ಮುಖ ಬ್ರಹ್ಮನ ರಾತ್ರಿ. ಅಂದರೆ ಪ್ರತೀ 432 ಕೋಟಿ ವರ್ಷಕ್ಕೊಮ್ಮೆ ದಿನಪ್ರಳಯ. ಈ ಪ್ರಳಯದಲ್ಲಿ ಭೂಮಿ ಪೂರ್ಣವಾಗಿ ನಾಶವಾಗುತ್ತದೆ. ಮಹಾಪ್ರಳಯ ಪ್ರತೀ 31,104 ಸಾವಿರ ಕೋಟಿ ವರ್ಷಕ್ಕೊಮ್ಮೆ ಹಾಗು ಈ ಪ್ರಳಯದಲ್ಲಿ ಸತ್ಯ ಲೋಕದಿಂದ ಹಿಡಿದು ಸರ್ವ ಲೋಕಗಳೂ  ಸೂಕ್ಷ್ಮಾತಿ ಸೂಕ್ಷ್ಮ ಪರಮಾಣುವಿನ ರೂಪದಲ್ಲಿ ಭಗವಂತನಲ್ಲಿ ಲೀನವಾಗುತ್ತವೆ. 

ಅವ್ಯಕ್ತಾದ್  ವ್ಯಕ್ತಯಃ ಸರ್ವಾಃ ಪ್ರಭವಂತ್ಯಹರಾಗಮೇ
ರಾತ್ರ್ಯಾಗಮೇ ಪ್ರಲೀಯಂತೇ ತತ್ರೈವಾವ್ಯಕ್ತಸಂಜ್ಞಕೇ ೧೮

ಅವ್ಯಕ್ತಾತ್   ವ್ಯಕ್ತಯಃ ಸರ್ವಾಃ ಪ್ರಭವಂತಿ ಅಹಃ ಆಗಮೇ  
ರಾತ್ರಿ ಆಗಮೇ  ಪ್ರಲೀಯಂತೇ ತ್ರ ಏವ ಅವ್ಯಕ್ತ ಸಂಜ್ಞಕೇ –ಕಾಣದ ಭಗವಂತನಿಂದ ಕಾಣುವ ಈಯೆಲ್ಲ ಹಗಲಾದಾಗ ರೂಪುಗೊಳ್ಳುತ್ತವೆ, ಇರುಳಾದಾಗ ಅದೇ ಕಾಣದ ಭಗವಂತನಲ್ಲಿ ಕಣ್ಮರೆಯಾಗುತ್ತವೆ.

ಮಹಾಪ್ರಳಯ ಕಾಲದಲ್ಲಿ ಅವ್ಯಕ್ತನಾದ  ಭಗವಂತನಲ್ಲಿ ವ್ಯಕ್ತವಾಗಿರುವ ಈ ಪ್ರಪಂಚ ಪರಮಾಣುವಿನ ರೂಪದಲ್ಲಿ ಸೇರಿಕೊಳ್ಳುತ್ತದೆ. ಪುನಃ ಸೃಷ್ಟಿ ಕಾಲದಲ್ಲಿ ಮರಳಿ ಸೂಕ್ಷ್ಮ ರೂಪದಿಂದ ಸ್ಥೂಲ ರೂಪವನ್ನು ಪಡೆದು ವ್ಯಕ್ತವಾಗುತ್ತವೆ.

ಭೂತಗ್ರಾಮಃ ಸ ಏವಾಯಂ ಭೂತ್ವಾಭೂತ್ವಾ ಪ್ರಲೀಯತೇ
ರಾತ್ರ್ಯಾಗಮೇSವಶಃ ಪಾರ್ಥ ಪ್ರಭವತ್ಯಹರಾಗಮೇ ೧೯

ಭೂತ ಗ್ರಾಮಃ ಸಃ ವ ಅಮ್  ಭೂತ್ವಾಭೂತ್ವಾ ಪ್ರಲೀಯತೇ
ರಾತ್ರಿ ಆಗಮೇ ಅವಶಃ ಪಾರ್ಥ ಪ್ರಭವತಿ ಅಹಃ ಆಗಮೇ  -ಪಾರ್ಥ, ಅದೇ ಪಂಚಭೂತಗಳ ಗುಂಪು ಮರಳಿಮರಳಿ ಹುಟ್ಟಿ ಇರುಳಾದಾಗ ಭಗವಂತನ ವಶದಲ್ಲಿ ಲಯಗೊಳ್ಳುತ್ತದೆ; ಹಗಲಾದಾಗ ಹುಟ್ಟುತ್ತದೆ.

ಸೃಷ್ಟಿಯ ಮೂಲದ್ರವ್ಯ ಎಂದೂ ಬದಲಾಗುವುದಿಲ್ಲ. ಅದೇ ಪಂಚಭೂತಗಳು ಮರಳಿಮರಳಿ ಸೃಷ್ಟಿ-ಸಂಹಾರ ಚಕ್ರದಲ್ಲಿ ಸುತ್ತುತ್ತಿರುತ್ತವೆ. ಈ ಚಕ್ರದಲ್ಲಿ ಮೋಕ್ಷ ಯೋಗ್ಯವಲ್ಲದ ಅನಂತ ಜೀವಗಳೂ ಸುತ್ತುತ್ತಿರುತ್ತವೆ. ಆದರೆ ಭಗವಂತನನ್ನು ಸೇರಿದ ಜೀವ ಈ ಚಕ್ರದಿಂದಾಚೆಗಿರುತ್ತದೆ.   

ಪರಸ್ತಸ್ಮಾತ್ತು ಭಾವೋSನ್ಯೋSವ್ಯಕ್ತೋ ವ್ಯಕ್ತಾತ್ ಸನಾತನಃ
ಯಃ ಸ ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ ೨೦

ರಃ ತಸ್ಮಾತ್ ತು  ಭಾವಃ ಅನ್ಯಃ ಅವ್ಯಕ್ತಃ  ಅವ್ಯಕ್ತಾತ್ ಸನಾತನಃ
ಯಃ ಸಃ  ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ –ಈ ಕಾಣುವ ವಿಶ್ವಕ್ಕಿಂತ ಬೇರೆಯಾಗಿ, ಮಿಗಿಲಾಗಿ ಎಂದೆಂದು ಇರುವ ತತ್ವವೆ ಅವ್ಯಕ್ತ. ಎಲ್ಲ ಭೂತಗಳು ಇಲ್ಲವಾದಾಗಲೂ ಅದು ಇರುತ್ತದೆ.

ಎಲ್ಲವನ್ನೂ ಮೀರಿ ನಿಂತ ಭಗವಂತ ಎಲ್ಲಕ್ಕಿಂತ ವಿಲಕ್ಷಣ ಮತ್ತು ಶ್ರೇಷ್ಠ. ಆತ ಸನಾತನ. ಎಲ್ಲಾ ಕಾಲದಲ್ಲೂ ನಿರ್ವೀಕಾರನಾಗಿರುವ, ಸರ್ವವೇದ ಪ್ರತಿಪಾಧ್ಯ, ಸಮಸ್ತ ಚರಾಚರಾತ್ಮಕ ಪ್ರಪಂಚ ನಾಶವಾದಾಗಲೂ ನಾಶವಾಗದೆ ಎಲ್ಲವನ್ನೂ ತನ್ನಲ್ಲಿ ಲೀನವಾಗಿಸಿಕೊಂಡು ಇರುವ ಏಕಮಾತ್ರ ತತ್ವ ಭಗವಂತ.     

ಅವ್ಯಕ್ತೋSಕ್ಷರ ಇತ್ಯುಕ್ತಸ್ತಮಾಹುಃ ಪರಮಾಂ ಗತಿಮ್
ಯಂ ಪ್ರಾಪ್ಯ ನ ನಿವರ್ತಂತೇ ದ್ ಧಾಮ  ಪರಮಂ ಮಮ  ೨೧

ಅವ್ಯಕ್ತಃ ಅಕ್ಷರಃ  ಇತಿ ಉಕ್ತಃ ತಮ್ ಆಹುಃ ಪರಮಾಮ್  ಗತಿಮ್
ಮ್  ಪ್ರಾಪ್ಯ ನ ನಿವರ್ತಂತೇ ತ್  ಧಾಮ  ಪರಮಮ್  ಮಮ –ಈ ಅವ್ಯಕ್ತ ತತ್ವವನ್ನೇ ‘ಅಕ್ಷರ’ ನಾದ ಭಗವಂತನೆನ್ನುತ್ತಾರೆ.ಅವನೆ ಕೊನೆಯಾಸರೆ ಎನ್ನುತ್ತಾರೆ. ಅವನನ್ನು ಪಡೆದವರು ಮತ್ತೆ ಮರಳಿ ಬರುವುದಿಲ್ಲ. ಅದು ನನ್ನ ಹಿರಿದಾದ ಸ್ವರೂಪ.

ಎಲ್ಲರೂ ಹೋಗಿ ಸೇರಬೇಕಾದ ಸರ್ವಶ್ರೇಷ್ಠ ಸ್ಥಾನ  ಈ ಅವ್ಯಕ್ತ ತತ್ವ. ಆತನೇ 'ಅಕ್ಷರ' ಶಬ್ದದ ಮುಖ್ಯಾರ್ಥ. ಎಂದೂ ನಾಶವಿಲ್ಲದ, ಎಲ್ಲಾ ಕಡೆ ವ್ಯಾಪಿಸಿರುವ,ಯಾರು ಏನು ಬಯಸಿದರೂ ಅದನ್ನು ಕೊಡತಕ್ಕ, ಸರ್ವಸಮರ್ಥ, ಇಂದ್ರಿಯಗಳ ಅನುಭವ ಕೊಡುವವ, ಸಮಸ್ತ ಶಬ್ದವಾಚ್ಯ-ಭಗವಂತ. ಅವನನ್ನು ಸೇರಿದರೆ ಮತ್ತೆ ಮರಳಿ ಸಂಸಾರದಲ್ಲಿ ಹುಟ್ಟಬೇಕಾಗಿಲ್ಲ. “ಅದು ನನ್ನ ಹಿರಿದಾದ ಸ್ವರೂಪ” ಎನ್ನುತ್ತಾನೆ ಕೃಷ್ಣ.      

ಪುರುಷಃ ಸ ಪರಃ ಪಾರ್ಥ ಭಕ್ತ್ಯಾ ಲಭ್ಯಸ್ತ್ವನನ್ಯಯಾ 
ಯಸ್ಯಾಂತಃಸ್ಥಾನಿ ಭೂತಾನಿ ಯೇನ ಸರ್ವಮಿದಂ ತತಮ್   ೨೨

ಪುರುಷಃ ಸಃ  ಪರಃ ಪಾರ್ಥ ಭಕ್ತ್ಯಾ ಲಭ್ಯ ತು ಅನನ್ಯ ಯಾ    
ಯಸ್ಯ ಅಂತಸ್ಥಾನಿ ಭೂತಾನಿ ಯೇನ ಸರ್ವಮ್ ಇಮ್  ತತಮ್ –ಪಾರ್ಥ, ಆ ಪರಮ ಪುರುಷ ಅವನಿಗೇ ಮೀಸಲಾದ ಭಕ್ತಿಗೆ ಮಾತ್ರವೆ ಎಟುಕುವವನು. ಅವನ ಒಳಗೆ ಇಡಿಯ ವಿಶ್ವವಿದೆ. ಅವನು ಈ ಎಲ್ಲವನ್ನು ತಬ್ಬಿ ನಿಂತಿದ್ದಾನೆ.

ಈ ಬ್ರಹ್ಮಾಂಡ ಮತ್ತು ಪಿಂಡಾಂಡವೆಂಬ ಪುರದಲ್ಲಿದ್ದು ಎಲ್ಲವನ್ನೂ ನಿಯಂತ್ರಿಸುವ ಭಗವಂತ ಸರ್ವ ಶಬ್ದವಾಚ್ಯ. ಇಂತಹ ಭಗವಂತನನ್ನು ಒಲಿಸಿಕೊಳ್ಳಲು ಇರುವ ಏಕಮಾತ್ರ ಉಪಾಯ ಭಕ್ತಿ. ಭಕ್ತಿ ಇಲ್ಲದ ಯಾವ ಕರ್ಮದಿಂದಲೂ ಆತನನ್ನು ಸೇರಲು ಸಾಧ್ಯವಿಲ್ಲ. ಭಗವಂತನ ಸಾಕ್ಷಾತ್ಕಾರ ಮತ್ತು ಮೋಕ್ಷಕ್ಕೆ ಏಕಮಾತ್ರ ಸಾಧನ ಅನನ್ಯವಾದ ಏಕಭಕ್ತಿ. ಪ್ರಳಯ ಕಾಲದಲ್ಲಿ ಎಲ್ಲವನ್ನೂ ತನ್ನ ಒಡಲಲ್ಲಿಟ್ಟು ರಕ್ಷಿಸಿ, ಸೃಷ್ಟಿ ಕಾಲದಲ್ಲಿ ಅಂತರ್ಯಾಮಿಯಾಗಿದ್ದು  ಮಾಡಬೇಕಾದ ಕಾರ್ಯವನ್ನೂ ಮಾಡಿಸಿ, ಅನುದಿನ ಅನಂತ ಕಾಲದಲ್ಲಿ ಒಳಗೂ ಹೊರಗೂ ತುಂಬಿ ರಕ್ಷಣೆ ಮಾಡುವ ಆ ಭಗವಂತನನ್ನು ನಿರಂತರ ಪ್ರೀತಿಸು.

 ಹೀಗೆ ಕೊನೆಗಾಲದಲ್ಲಿ ದೇಹ ತ್ಯಾಗ ಮಾಡುವಾಗ ಭಗವಂತನ ಧ್ಯಾನ ಹೇಗೆ ಮಾಡಬೇಕು ಎನ್ನುವ ಚಿತ್ರಣವನ್ನು ನಮ್ಮ ಮುಂದಿರಿಸಿದ ಕೃಷ್ಣ, ದೇಹದಿಂದ ಹೊರ ಬಂದ ಮೇಲೆ ಭಗವಂತನತ್ತ ಪ್ರಯಾಣಿಸುವ ದಾರಿಯ ಬಗ್ಗೆ  ಈ ಅಧ್ಯಾಯದ ಮುಂದಿನ ಭಾಗದಲ್ಲಿ ವಿವರಿಸುತ್ತಾನೆ. 

No comments:

Post a Comment