Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, July 10, 2011

Bhagavad Geeta Kannada Chapter-08 Shloka 1-2

ಅಧ್ಯಾಯ ಎಂಟು

ಏಳನೆಯ ಅಧ್ಯಾಯದ ಕೊನೆಯಲ್ಲಿ ಕೃಷ್ಣ ಸಂಕ್ಷಿಪ್ತವಾಗಿ ಆರು ಮಹತ್ವದ ಸಂಗತಿಯನ್ನು ಮನುಷ್ಯ ತಿಳಿದಿರಬೇಕು ಎಂದು ಹೇಳಿದ್ದ. ಅಧ್ಯಾತ್ಮ, ಅಧಿಭೂತ, ಅಧಿದೈವ, ಅಧಿಯಜ್ಞ, ಬ್ರಹ್ಮ, ಕರ್ಮ-ಈ ಆರು ಸಂಗತಿಗಳನ್ನು ತಿಳಿದರೆ ಅದರಿಂದ ಮೇಲಕ್ಕೆ ಏರುವ ಇನ್ನೊಂದು ಮೆಟ್ಟಲಿರುವುದಿಲ್ಲ ಎಂದಿದ್ದ ಕೃಷ್ಣ.
ಅಧಿಭೂತ ಎಂದರೆ ಭೌತಿಕ ಪ್ರಪಂಚ, ಅಧ್ಯಾತ್ಮ ಎಂದರೆ ಜಡದೊಳಗಿರುವ ಚೈತನ್ಯ,  ಅಧಿದೈವ ಎಂದರೆ ಚೇತನವನ್ನು ನಿಯಂತ್ರಿಸುವ ದೇವತಾಶಕ್ತಿ, ಅಧಿಯಜ್ಞ ಎಂದರೆ ದೇವತೆಗಳನ್ನು ನಿಯಂತ್ರಿಸುವ ಭಗವಂತ, ಈ ಅಧಿಯಜ್ಞ ಜಗತ್ತಿನಲ್ಲೆಲ್ಲಾ ತುಂಬಿದ್ದಾನೆ ಎನ್ನುವುದು ಬ್ರಹ್ಮ ಕಲ್ಪನೆ, ಅವನಿಂದಲೇ ಎಲ್ಲಾ ಕ್ರಿಯೆಗಳೂ ನಡೆಯುತ್ತವೆ-ಆತನೇ ಸೂತ್ರದಾರ. ಈ ಅರಿವು ಸಾವಿನ ಸಮಯದಲ್ಲೂ ಎಚ್ಚರವಾಗಿರಬೇಕು ಆಗ ಆ ಸಾವು ಮಾಂಗಲಿಕ. ಇಷ್ಟು ವಿಚಾರವನ್ನು ನಾವು ಹಿಂದಿನ ಅಧ್ಯಾಯದಲ್ಲಿ ನೋಡಿದ್ದೇವೆ.
ಸೂಕ್ಷ್ಮವಾಗಿ ಏಳನೇ ಅಧ್ಯಾಯದ ಕೊನೆಯ ಎರಡು ಶ್ಲೋಕಗಳನ್ನು ಗಮನಿಸಿದರೆ ಅಲ್ಲಿ ಕೃಷ್ಣ ‘ತತ್ ಬ್ರಹ್ಮ’(ಆ ಬ್ರಹ್ಮತತ್ವ) ಎಂದಿದ್ದಾನೆ. ಕೊನೆಯಲ್ಲಿ  ‘ನನ್ನನ್ನು(ಮಾಂ) ಸೇರುತ್ತಾರೆ’ ಎಂದಿದ್ದಾನೆ. ಇಲ್ಲಿ ನಮಗೆ ಕೃಷ್ಣ ಮತ್ತು ಬ್ರಹ್ಮತತ್ವ ಬೇರೆ ಬೇರೆಯೋ ಅನ್ನುವ ಪ್ರಶ್ನೆ ಬರುತ್ತದೆ. ಇನ್ನು ಇಲ್ಲಿ ಕೃಷ್ಣ ಬಳಸಿದ ಪದಗಳನ್ನು ನೋಡಿದಾಗ ಅಲ್ಲಿ ಅನೇಕ ಅರ್ಥವನ್ನು ಕಾಣುತ್ತೇವೆ. ಉದಾಹರಣೆಗೆ ಬ್ರಹ್ಮ ಎನ್ನುವ ಪದಕ್ಕೆ ಸಂಸ್ಕೃತದಲ್ಲಿ ಅನೇಕ ಅರ್ಥವಿದೆ. ಬ್ರಹ್ಮ ಎಂದರೆ ಜೀವ, ಚತುರ್ಮುಖ ಬ್ರಹ್ಮ, ಭಗವಂತ, ವೇದಗಳು, ಇತ್ಯಾದಿ. ಅಧ್ಯಾತ್ಮ ಎನ್ನುವಲ್ಲಿ ‘ಆತ್ಮ’ ಪದಕ್ಕೆ ಶರೀರ, ಮನಸ್ಸು, ಜೀವ, ಪರಮಾತ್ಮ ಇತ್ಯಾದಿ ಅರ್ಥಗಳಿವೆ. ‘ಕರ್ಮ’ ಎನ್ನುವಲ್ಲಿ ಪ್ರಾರಾಬ್ಧಕರ್ಮ ಮತ್ತು ಕರ್ತವ್ಯಕರ್ಮ ಎನ್ನುವ ಎರಡು ಅರ್ಥ ಕಾಣುತ್ತದೆ. ಅಧಿಭೂತ ಎನ್ನುವಲ್ಲಿ ‘ಭೂತ’ ಪದಕ್ಕೆ ಜಡ ಹಾಗು ಚೇತನ ಎನ್ನುವ ಎರಡು ಅರ್ಥವನ್ನು ಕಾಣಬಹುದು. ಇದೇ ರೀತಿ ಅಧಿದೈವ ಎಂದರೆ ದೈವರಲ್ಲಿ(ದೇವತೆಗಳಲ್ಲಿ) ಅಧಿಕನಾದವನು ಅಧಿದೈವ, ದೇವತೆಗಳಿಗೆ ಸಂಬಂಧಪಟ್ಟಿದ್ದೂ ಕೂಡಾ ಅಧಿದೈವ. ಹೀಗೆ ಈ ಆರೂ ಶಬ್ದಗಳು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಆಯಾಮದಲ್ಲಿ ತೆರೆದುಕೊಳ್ಳುವಂತದ್ದು. ಹೀಗಿರುವಾಗ ಕೃಷ್ಣ ಹೇಳಿರುವ ಈ ಆರು ಸಂಗತಿಯನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ.
ಕೊನೆಯ ಶ್ಲೋಕದಲ್ಲಿ ಕೃಷ್ಣ ಹೇಳಿದ “ನಮ್ಮ ಜೀವನ ಪಯಣದ ಕೊನೆಯ ಕ್ಷಣದಲ್ಲಿ ಈ ಅರಿವನ್ನು ಉಳಿಸಿಕೊಂಡಿರಬೇಕು” ಎಂದು. ಅದು ಹೇಗೆ ಸಾಧ್ಯ ? ದೇಹತ್ಯಾಗ ಮಾಡುವಾಗ ಮಾನಸಿಕ ಚಿಂತನೆ ಹೇಗಿರಬೇಕು? ದೇಹತ್ಯಾಗ ನಂತರ ಜೀವ ಯಾವ ಮಾರ್ಗದಲ್ಲಿ ಚಲಿಸುತ್ತದೆ? ಇತ್ಯಾದಿ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಎಂಟನೇ ಅಧ್ಯಾಯ ನಮ್ಮೆಲ್ಲರ ಪ್ರತಿನಿಧಿ ಅರ್ಜುನ ಈ ನಮ್ಮ ಪ್ರಶ್ನೆಯನ್ನು ಶ್ರೀಕೃಷ್ಣನಲ್ಲಿ ಕೇಳುವುದರೊಂದಿಗೆ ಪ್ರಾರಂಭವಾಗುತ್ತದೆ.                
ಅರ್ಜುನ ಉವಾಚ
ಕಿಂ ತದ್ ಬ್ರಹ್ಮ  ಕಿಮಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ
ಅಧಿಭೂತಂ ಚ ಕಿಂ ಪ್ರೋಕ್ತಮಧಿದೈವಂ ಕಿಮುಚ್ಯತೇ           

ಅರ್ಜು ಉವಾಚ
ಕಿಮ್  ತತ್  ಬ್ರಹ್ಮ  ಕಿಮ್ ಅಧ್ಯಾತ್ಮಮ್  ಕಿಮ್  ಕರ್ಮ ಪುರುಷೋತ್ತಮ
ಅಧಿಭೂತಮ್  ಚ ಕಿಮ್  ಪ್ರೋಕ್ತಮ್ ಅಧಿದೈವಮ್  ಕಿಮ್ ಉಚ್ಯತೇ  -ಅರ್ಜುನ ಕೇಳಿದನು: ಪುರುಷೋತ್ತಮ, ಯಾವುದು ಆ ‘ಬ್ರಹ್ಮ’? ‘ಅಧ್ಯಾತ್ಮ’ವೆಂದರೆ ಏನು? ಏನು ‘ಕರ್ಮ’ವೆಂದರೆ? ಯಾವುದನ್ನು ‘ಅಧಿಭೂತ’ವೆನ್ನುತ್ತಾರೆ? ಯಾವುದನ್ನು ‘ಅಧಿದೈವ’ವೆನ್ನುತ್ತಾರೆ?

ಅರ್ಜುನ ಕೃಷ್ಣನನ್ನು ಕೇಳುತ್ತಾನೆ “ ತತ್ ಬ್ರಹ್ಮ(ಆ ಬ್ರಹ್ಮತತ್ವ) ಅಂದರೆ ಯಾವುದು? ಅಧ್ಯಾತ್ಮ ಅಂದರೆ ಏನು? ಮತ್ತು ಕರ್ಮ ಅಂದರೇನು?”  ಎಂದು. ಇಲ್ಲಿ ವ್ಯಾಸರು ಅರ್ಜುನನ ಈ ಪ್ರಶ್ನೆಯ ಹಿಂದಿನ ಭಾವನೆಯನ್ನು “ಪುರುಷೋತ್ತಮ” ಎನ್ನುವ ವಿಶೇಷಣದಲ್ಲಿ ಹಿಡಿದು ನಮ್ಮ ಮುಂದಿಟ್ಟಿದ್ದಾರೆ. ಪುರುಷೋತ್ತಮ ಎಂದರೆ ಕ್ಷರ(ಜೀವ)ವನ್ನು ಮೀರಿನಿಂತವನು. ಅಕ್ಷರ(ಶ್ರೀತತ್ವ)ಕ್ಕಿಂತಲೂ ಹಿರಿಯನು. “ಕ್ಷರ-ಅಕ್ಷರವನ್ನು ಮೀರಿ ನಿಂತ  ನೀನೇ ಪುರುಷೋತ್ತಮ, ನೀನಲ್ಲದೆ ನಿನ್ನಿಂದ ಹಿರಿದಾದ ತತ್ವ ಇನ್ನೊಂದಿಲ್ಲ, ಆದ್ದರಿಂದ ನನಗೆ ತಿಳಿದಂತೆ ನೀನೇ ಬ್ರಹ್ಮ. ಇದರ ವಿವರಣೆಯನ್ನು ನಿನ್ನಿಂದ ತಿಳಿಯಬೇಕು”  ಎನ್ನುವ ಭಾವವನ್ನು ಅರ್ಜುನ ವ್ಯಕ್ತಪಡಿಸಿದ ಎನ್ನುವುದನ್ನು ತಿಳಿಸುವ ವಿಶೇಷಣ  ‘ಪುರುಷೋತ್ತಮ’. ಅರ್ಜುನ ಕೇಳುತ್ತಾನೆ “ಯಾವುದನ್ನು ಅಧಿಭೂತವೆನ್ನುತ್ತಾರೆ?  ಯಾವುದನ್ನು ಅಧಿದೈವವೆನ್ನುತ್ತಾರೆ?” ಎಂದು.

ಅಧಿಯಜ್ಞಃ ಕಥಂ ಕೋSತ್ರ ದೇಹೇSಸ್ಮಿನ್ ಮಧುಸೂದನ
ಪ್ರಯಾಣಕಾಲೇ ಚ ಕಥಂ ಜ್ಞೇಯೋSಸಿ ನಿಯತಾತ್ಮಭಿಃ       

ಅಧಿಯಜ್ಞಃ ಕಥಮ್ ಕಃ ಅತ್ರ ದೇಹೇಸ್ಮಿನ್ ಮಧುಸೂದನ
ಪ್ರಯಾಣ ಕಾಲೇ ಚ ಕಥಮ್  ಜ್ಞೇಯಃ ಅಸಿ ನಿಯತತ್ಮಭಿಃ –ಮಧುಸೂದನ, ಇಲ್ಲಿ ಈ ದೇಹದಲ್ಲಿ ‘ಅಧಿಯಜ್ಞ’ಯಾರು? ಮತ್ತು ಹೇಗೆ? ಬಗೆ ಹಿಡಿತದಲ್ಲಿಟ್ಟವರು ಕೊನೆಯ ಕಾಲದಲ್ಲಿ ನಿನ್ನನ್ನು ಹೇಗೆ ನೆನೆಯಬೇಕು?

ಮುಂದುವರಿದು ಅರ್ಜುನ ಕೇಳುತ್ತಾನೆ “ಅಧಿಯಜ್ಞ ಅಂದರೆ ಯಾರು?” ಎಂದು. ನಮ್ಮ ದೇಹದೊಳಗಿರುವ ಅಧಿಯಜ್ಞ ಯಾರು ಮತ್ತು ಹೇಗೆ? ಅಧಿಯಜ್ಞದ ಅರ್ಥವ್ಯಾಪ್ತಿ ಏನು? ಎನ್ನುವುದು ಅರ್ಜುನನ ಪ್ರಶ್ನೆ. ಇಲ್ಲಿ ಪುನಃ ವ್ಯಾಸರು “ಮಧುಸೂದನ” ಎನ್ನುವ ವಿಶೇಷಣವನ್ನು ಬಳಸಿ ಅರ್ಜುನನ ಪ್ರಶ್ನೆಯ ಭಾವನೆಯನ್ನು ನಮಗೆ ತಿಳಿಸುತ್ತಾರೆ.   “ಮಧುಸೂದನ” ಅನ್ನುವ ನಾಮಕ್ಕೆ ಎರಡು ಪ್ರಮುಖ ಅರ್ಥವಿದೆ. ‘ಮಧು’ ಅಂದರೆ ಆನಂದ(Inner bliss). ‘ಸೂದ’ ಎಂದರೆ ಸತ್ಕರ್ಮವನ್ನು ಮಾಡುವ ಸಾತ್ವಿಕರು. ಆದ್ದರಿಂದ ಮಧುಸೂದನ ಎಂದರೆ ಸಾತ್ವಿಕರೊಳಗಿದ್ದು ಅವರಿಗೆ ಆನಂದವನ್ನು ಕೊಡುವವನು ಎಂದರ್ಥ.  ‘ಸೂದ’ ಎಂದರೆ ನಾಶ ಎನ್ನುವ ಇನ್ನೊಂದು ಅರ್ಥವಿದೆ. ಆದ್ದರಿಂದ ದುರ್ಜನರ ಆನಂದವನ್ನು ನಾಶಮಾಡುವವನು ಮಧುಸೂದನ. “ನಮ್ಮೊಳಗೆ ಕೂತು ಆನಂದ ಕೊಡುವವನೂ ನೀನೇ, ದುಃಖ ಕೊಡುವವನೂ ನೀನೆ. ನಮ್ಮೊಳಗಿದ್ದು ಎಲ್ಲ ಯಜ್ಞಗಳನ್ನು ನಿಯಂತ್ರಿಸುವವನು ನೀನೆ. ಆದ್ದರಿಂದ ನೀನೇ ಅಧಿಯಜ್ಞ ಎನ್ನುವುದು ನನ್ನ ತಿಳುವಳಿಕೆ. ಇದನ್ನು ನನಗೆ ವಿವರಿಸು” ಎನ್ನುವ ಅರ್ಜುನನ ಭಾವವನ್ನು ಈ ವಿಶೇಷಣದ ಮೂಲಕ ವ್ಯಾಸರು ಇಲ್ಲಿ ವಿವರಿಸಿದ್ದಾರೆ. ಅರ್ಜುನ ಕೇಳುತ್ತಾನೆ “ನಮ್ಮ ಜೀವನದ ಕೊನೆಯ ಶ್ರೇಷ್ಠವಾದ ಯಾತ್ರೆಯಲ್ಲಿ ಜೀವದ ದೇಹ ನಿರ್ಗಮನದ ಅನುಸಂಧಾನ ಮತ್ತು ಹೋಗುವ ವಿವರವನ್ನು ತಿಳಿಸು” ಎಂದು.  
ಮೇಲಿನ ಶ್ಲೋಕದಲ್ಲಿ ಉಪಯೋಗಿಸಿದ ಪುರುಷೋತ್ತಮ ಮತ್ತು ಮಧುಸೂದನ ಎನ್ನುವ ಎರಡು ವಿಶೇಷಣದ ಹಿಂದಿನ ಅರ್ಥವನ್ನು ನೋಡಿದಾಗ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ-ಅರ್ಜುನನಿಗೆ ಈ ಆರು ಸಂಗತಿಯ  (ಪದಗಳ) ನಿಜವಾದ ಅರ್ಥ ತಿಳಿದಿತ್ತು ಎಂದು. ಆದರೂ ಅದರ ವಿವರವನ್ನು ಭಗವಂತನಿಂದ ತಿಳಿದುಕೊಳ್ಳುವ ಉದ್ದೇಶದಿಂದ ಆತ ಈ ಪ್ರಶ್ನೆಯನ್ನು ಕೃಷ್ಣನಲ್ಲಿ ಕೇಳುತ್ತಾನೆ. ಸಾಮಾನ್ಯವಾಗಿ ತಿಳಿದವರು ತಮಗೆ ತಿಳಿದಿದ್ದರೂ ಕೂಡಾ ಇನ್ನೊಬ್ಬರಿಗೆ ತಿಳಿಸುವ ಉದ್ದೇಶದಿಂದ ಈ ರೀತಿ ಪ್ರಶ್ನೆ ಮಾಡುತ್ತಾರೆ. ಇಲ್ಲಿ ಅರ್ಜುನ ತಾನು ತಿಳಿದಿರುವುದನ್ನು ದೃಡೀಕರಿಸಿಕೊಳ್ಳುವುದಕ್ಕೊಸ್ಕರ ಮತ್ತು ಇಡೀ ಮಾನವ ಜನಾಂಗಕ್ಕೆ ಭಗವಂತನ ವಿವರಣೆಯನ್ನು ತಿಳಿಸುವುದಕ್ಕೋಸ್ಕರ ಈ ಪ್ರಶ್ನೆಯನ್ನು ಕೃಷ್ಣನ ಮುಂದಿಟ್ಟಿದ್ದಾನೆ.
ನಮಗೆ ಅನಿಸಬಹುದು “ಯುದ್ಧರಂಗದಲ್ಲಿ ನಿಂತಿರುವ ಅರ್ಜುನ ಏಕೆ ಇಂತಹ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ? ಇಲ್ಲಿ ಅದರ ಅಗತ್ಯ ಏನಿದೆ?”  ಎಂದು. ಸಾಮಾನ್ಯವಾಗಿ ಯುದ್ಧರಂಗದಲ್ಲಿ ನಿಂತವರಿಗೆ ಸಾವು ಕಾಡುವಷ್ಟು ಇನ್ನ್ಯಾರನ್ನೂ ಕಾಡುವುದಿಲ್ಲ. ಅವರನ್ನು ಪ್ರತಿಕ್ಷಣ ಸಾವು ನಿರೀಕ್ಷಿಸುತ್ತಿರುತ್ತದೆ. ಅವರು ಸಾವು ಮತ್ತು ಸಾವಿನ ಆಚೆಗಿನ ಸ್ಥಿತಿಯ ಬಗ್ಗೆ ಜಾಗೃತರಾಗಿರುತ್ತಾರೆ. ಸಾವಿನಿಂದಾಚೆಗೆ ಏನು ಎನ್ನುವುದು ಸೈನಿಕರಿಗೆ ಬಹಳ ಮಹತ್ವದ್ದಾಗಿರುತ್ತದೆ.  ಈವರೆಗಿನ ಕೃಷ್ಣಾರ್ಜುನ ಸಂವಾದದಲ್ಲಿ ಎಲ್ಲಿಯೂ ಕೃಷ್ಣ ಅರ್ಜುನನಿಗೆ ಗೆಲುವಿನ ಭರವಸೆಯನ್ನು ಕೊಟ್ಟಿಲ್ಲ. ಧರ್ಮದ ಪರ ಹೋರಾಡುವುದು ನಿನ್ನ ಕರ್ತವ್ಯ ಅಂದಿದ್ದಾನೆ ಅಷ್ಟೇ. ಆದ್ದರಿಂದ ಯುದ್ಧರಂಗದಲ್ಲಿರುವ ಅರ್ಜುನನಿಗೆ ಸಾವು ಮತ್ತು ಸಾವಿನಿಂದಾಚೆಗೆ ಏನು ಎನ್ನುವುದು ಬಹಳ ಮುಖ್ಯ ವಿಚಾರ.
ಅರ್ಜುನನ ಪ್ರಶ್ನೆಗೆ ಭಗವಂತನ ಉತ್ತರವೇ ಎಂಟನೆಯ ಅಧ್ಯಾಯದ ಉಳಿದ ಭಾಗ.        

No comments:

Post a Comment