Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Monday, July 25, 2011

Bhagavad Gita Kannada Chapter-09 Shloka 7-9


ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ  ಮಾಮಿಕಾಮ್
ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್

ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ  ಮಾಮಿಕಾಮ್
ಕಲ್ಪಕ್ಷಯೇ ಪುನಃ ತಾನಿ ಕಲ್ಪದೌ ವಿಸೃಜಾಮಿ ಅಹಮ್ –ಸೃಷ್ಟಿಯ ಕೊನೆಯಲ್ಲಿ ಎಲ್ಲ ವಸ್ತುಗಳೂ ನನ್ನದೇ ಆದ ಮೂಲ ಪ್ರಕೃತಿಯನ್ನು ಸೇರುತ್ತವೆ. ಸೃಷ್ಟಿಯ ಮೊದಲಲ್ಲಿ ಮರಳಿ ಅವನ್ನುನಾನು ನಿರ್ಮಿಸುತ್ತೇನೆ.

ಸೃಷ್ಟಿಯಾಗಿ 31,104 ಸಾವಿರ ಕೋಟಿ ವರ್ಷಗಳ ನಂತರ ಮಹಾಪ್ರಳಯ. ಇದು ಚತುರ್ಮುಖ ಬ್ರಹ್ಮನ ನೂರು ವರ್ಷ. ಇದನ್ನು ಕಲ್ಪಕ್ಷಯ ಎನ್ನುತ್ತಾರೆ. ಈ ಮಹಪ್ರಳಯದಲ್ಲಿ ಸತ್ಯಲೋಕದಿಂದ ಹಿಡಿದು ಪ್ರತಿಯೊಂದೂ ತನ್ನ ಸ್ಥೂಲ ರೂಪವನ್ನು ಕಳೆದುಕೊಂಡು ಸೂಕ್ಷ್ಮ ರೂಪದಲ್ಲಿ ಭಗವಂತನ ಅಧೀನವಾದ ಪ್ರಕೃತಿಯನ್ನು ಸೇರುತ್ತವೆ. ಎಲ್ಲಾ ಜೀವ ಜಾತಗಳೂ ಕೂಡಾ ತನ್ನ ಸ್ಥೂಲ ರೂಪವನ್ನು ಕಳೆದುಕೊಂಡು ಭಗವಂತನ ಉದರವನ್ನು ಸೇರುತ್ತದೆ. ಮತ್ತೆ 31,104 ಸಾವಿರ ಕೋಟಿ ವರ್ಷ ಪ್ರಳಯಕಾಲ. ನಂತರ ಮರಳಿ ಈ ಸೃಷ್ಟಿ ನಿರ್ಮಾಣವಾಗುತ್ತವೆ. ಅಂದರೆ ಮರಳಿ ಸೂಕ್ಷ್ಮರೂಪದಿಂದ ಸ್ಥೂಲರೂಪವನ್ನು ಪಡೆಯುತ್ತವೆ.     

ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ
ಭೂತಗ್ರಾಮಮಿಮಂ ಕೃತ್ಸ್ನಮವಶಂ ಪ್ರಕೃತೇರ್ವಶಾತ್     

ಪ್ರಕೃತಿಮ್  ಸ್ವಾಮ್ ಅವಷ್ಟಭ್ಯ ವಿಸೃಜಾಮಿ ಪುನಃ ಪುನಃ
ಭೂತ ಗ್ರಾಮಮ್ ಇಮಿಮಮ್  ಕೃತ್ಸ್ನಮ್ ಅವಶಮ್  ಪ್ರಕೃತೇಃ ವಶಾತ್ – ಪ್ರಕೃತಿಯ ನಿಯತಿಗೊಳಪಟ್ಟು ಪರತಂತ್ರವಾದ [ನನ್ನಂಕೆಯಲ್ಲಿರುವ] ಈ ಇಡಿಯ ವಿಶ್ವವನ್ನು ನನ್ನದೆ ಆದ ಪ್ರಕೃತಿಯನ್ನು ಬಳಸಿ ಮತ್ತೆ ಮತ್ತೆ ನಿರ್ಮಿಸುತ್ತೇನೆ.

ಪ್ರಳಯ ಕಾಲದಲ್ಲಿ ಸೂಕ್ಷ್ಮರೂಪದಲ್ಲಿ ಭಗವಂತನನ್ನು ಸೇರಿದ ಜಡ ಮತ್ತು ಜೀವವನ್ನು ಭಗವಂತ ತನ್ನ ಅಧೀನವಾದ ಪ್ರಕೃತಿಯನ್ನು ಬಳಸಿ ಮತ್ತೆ ಸೃಷ್ಟಿ ಮಾಡುತ್ತಾನೆ. ಭಗವಂತನ ಈ ಸೃಷ್ಟಿ ಮತ್ತು ಸಂಹಾರಚಕ್ರ ನಿರಂತರ.  ಇಂತಹ ಅನಂತ ಬ್ರಹ್ಮಾಂಡಗಳು ಹಿಂದೆ ನಿರ್ಮಾಣವಾಗಿ ಸಂಹಾರವಾಗಿವೆ ಮತ್ತು ಇನ್ನೂ ಅನಂತ ಕಾಲದಲ್ಲೂ ಇದು ಮುಂದುವರಿಯುತ್ತದೆ. ಈ ಕಾರಣಕ್ಕಾಗಿ ಭಗವಂತನನ್ನು ಅನಂತ ಕೋಟಿ ಬ್ರಹ್ಮಾಂಡನಾಯಕ ಎಂದು ಕರೆಯುತ್ತಾರೆ.(ಈ ಬಗ್ಗೆ ವಿವರವಾಗಿ ನಾವು ಏಳನೇ ಅಧ್ಯಾಯದಲ್ಲೇ ಚರ್ಚಿಸಿದ್ದೇವೆ).

ಹೀಗೆ ನಿರಂತರ ಸೃಷ್ಟಿ-ಸಂಹಾರ ಮಾಡುವ ಭಗವಂತನಿಗೆ ಕರ್ಮ ಅಂಟುವುದಿಲ್ಲವೇ? ಮುಂದಿನ ಶ್ಲೋಕಗಳಲ್ಲಿ ನೋಡೋಣ:
ನಚ ಮಾಂ ತಾನಿ ಕರ್ಮಾಣಿ ನಿಬಧ್ನನ್ತಿ ಧನಂಜಯ
ಉದಾಸೀನವದಾಸೀನಮಸಕ್ತಂ ತೇಷು ಕರ್ಮಸು

ನಚ ಮಾಮ್  ತಾನಿ ಕರ್ಮಾಣಿ ನಿಬಧ್ನನ್ತಿ ಧನಂಜಯ
ಉದಾಸೀನವತ್ ಆಸೀನಮ್ ಅಸಕ್ತಮ್  ತೇಷು ಕರ್ಮಸು –ಧನಂಜಯ, ನಾನು ಮಾಡಿಯೂ ಮಾಡದವನಂತೆ ಇದ್ದುಬಿಡುತ್ತೇನೆ. ಆ ಕರ್ಮಗಳಲ್ಲಿ ನನಗೆ ನಂಟಿಲ್ಲ. ಅದರಿಂದ ಆ ಕರ್ಮಗಳು ನನ್ನನ್ನು ಕಟ್ಟಿ ಹಾಕಲಾರವು.

ಭಗವಂತ ನಿರ್ಲಿಪ್ತ, ಆತ ಕರ್ಮ ಮಾಡುವುದು ಆತನಿಗೊಸ್ಕರ ಅಲ್ಲ. ಸ್ವತಂತ್ರನಾದ ಭಗವಂತನನ್ನು ಎಂದೂ ಯಾವ ಕರ್ಮವೂ ಕಟ್ಟಿ ಹಾಕಲಾರವು.(ಒಂದು ವೇಳೆ ಹಾಗೆ ಕಟ್ಟಿ ಹಾಕುವುದಾದರೆ ಭಗವಂತ ಸ್ವತಂತ್ರ ಎನಿಸುವುದಿಲ್ಲ!). “ನಾನು ನನಗೋಸ್ಕರ ಏನೂ ಮಾಡುವುದಿಲ್ಲ ಮತ್ತು ಕರ್ಮ ನನಗೆ ಅಂಟುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳುತ್ತಾನೆ ಕೃಷ್ಣ.
ಈ ಶ್ಲೋಕದಲ್ಲಿ ಧನಂಜಯ ಎನ್ನುವ ವಿಶೇಷಣ ಬಳಕೆಯಾಗಿದೆ. ವ್ಯವಹಾರಿಕವಾಗಿ ಈ ನಾಮವನ್ನು ನೋಡಿದರೆ ‘ಜನರಿಂದ ಹಣವನ್ನು ದೋಚಿ ದುಷ್ಟ ರಾಜ್ಯಭಾರ ಮಾಡುವ ಶತ್ರು ರಾಜರನ್ನು ಸೋಲಿಸಿ, ಆ ಸಂಪತ್ತನ್ನು ಜಯಿಸಿ, ಅದನ್ನು ಪ್ರಜೆಗಳಿಗಾಗಿ ಸದುಪಯೋಗ ಮಾಡುವವ ಧನಂಜಯ’.  [ತನ್ನ ಸ್ವಾರ್ಥಕ್ಕಾಗಿ ಇನ್ನೊಬ್ಬರ ಮೇಲೆ ದಾಳಿಮಾಡಿ ಹಣ ಗಳಿಸುವವ ‘ದರೋಡೆಕೋರ’ ಎನಿಸುತ್ತಾನೆ ಹೊರತು ಧನಂಜಯ ಎನಿಸುವುದಿಲ್ಲ. ಮಹಾಭಾರತದಲ್ಲಿ ಏಕಲವ್ಯ ಈ ಎರಡನೇ ಗುಂಪಿಗೆ ಸೇರಿದವನಾಗಿದ್ದ. ಆದ್ದರಿಂದ ಆತನ ಬೆರಳನ್ನು ಕತ್ತರಿಸಲಾಯಿತು ಮತ್ತು ಕೃಷ್ಣ ಸ್ವತಃ ಆತನನ್ನು ಸಂಹಾರ ಮಾಡಿದ್ದ.] ಆಧ್ಯಾತ್ಮಿಕವಾಗಿ ನಿಜವಾದ ಧನ ಎಂದರೆ ಭಗವಂತ. ಅಂತಹ ಭಗವಂತನ ಜ್ಞಾನವನ್ನು ಪಡೆದವ ಧನಂಜಯ. ನಾವೆಲ್ಲರೂ ಅರ್ಜುನನಂತೆ ಭಗವಂತನ ಜ್ಞಾನವನ್ನು ಪಡೆದು  ಧನಂಜಯರಾದಾಗ ಮಾತ್ರ  ಮೋಕ್ಷವನ್ನು ಪಡೆಯಲು ಸಾಧ್ಯ.

No comments:

Post a Comment