Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, July 24, 2011

Bhagavad Geeta In Kannada Chapter-9 Shloka 4-6


ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ
ತ್ ಸ್ಥಾನಿ ಸರ್ವಭೂತಾನಿ ನಚಾಹಂ ತೇಷ್ವವಸ್ಥಿತಃ    

ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ
ತ್ ಸ್ಥಾನಿ ಸರ್ವಭೂತಾನಿ ನಚಾಹಂ ತೇಷ್ವವಸ್ಥಿತಃ –ಈ ಎಲ್ಲ ಜಗತ್ತು ಮೈದೋರದ ನನ್ನಿಂದ ತುಂಬಿದೆ.ಇಲ್ಲಿ ಇರುವವೆಲ್ಲ ನನ್ನಲ್ಲಿ ನೆಲೆಸಿವೆ. ನಾನು ಅವುಗಳ ನೆರವಿನಲ್ಲಿಲ್ಲ.

ಕೃಷ್ಣ ಹೇಳುತ್ತಾನೆ “ನಾನು ಇಡೀ ಜಗತ್ತಿನಲ್ಲಿ ತುಂಬಿರುವ ಅವ್ಯಕ್ತಮೂರ್ತಿ” ಎಂದು. ಇಲ್ಲಿ ಬಳಸಿರುವ ಅವ್ಯಕ್ತಮೂರ್ತಿ ಎನ್ನುವ ಪದದಲ್ಲಿ ಅವ್ಯಕ್ತ ಮತ್ತು ಮೂರ್ತಿ ಎನ್ನುವುದು ಪರಸ್ಪರ ವಿರುದ್ಧ ಪದಗಳು. ಅವ್ಯಕ್ತ ಎಂದರೆ ಕಾಣದ್ದು, ಆಕಾರವಿಲ್ಲದ್ದು. ಮೂರ್ತಿ ಎಂದರೆ ಆಕೃತಿ ಮತ್ತು ರೂಪ. ಭಗವಂತ ಆಕಾಶದಂತೆ ಎಲ್ಲೆಡೆ ವ್ಯಾಪಿಸಿರುವ ಅವ್ಯಕ್ತ  ಆದರೆ ಆತ ಜ್ಞಾನಾನಂದಮಯನಾಗಿ ಎಲ್ಲರೊಳಗೆ ತುಂಬಿರುವ ಮೂರ್ತಿ. ಒಂದೊಂದು ವಸ್ತುವಿನಲ್ಲೂ ಒಂದೊಂದು ರೂಪದಲ್ಲಿ ತುಂಬಿರುವ ಅನಂತ ರೂಪಗಳುಳ್ಳವ ಆ ಭಗವಂತ. ಕೃಷ್ಣ ಹೇಳುತ್ತಾನೆ “ಪ್ರತಿಯೊಂದು ವಸ್ತುವಿಗೂ  ನಾನು ಆಧಾರ, ಈ ಇಡೀ ಪ್ರಪಂಚ ನನ್ನನ್ನು ಅವಲಂಬಿಸಿಕೊಂಡಿದೆ. ಆದರೆ ನಾನು ನಿರಾಲಂಬನಾಗಿ ಎಲ್ಲೆಡೆ ತುಂಬಿದ್ದೇನೆ”. ಎಂದು.

ನಚ ಮತ್ ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್
ಭೂತಭೃನ್ನ ಚ ಭೂತಸ್ಥೋ ಮಮಾSತ್ಮಾ ಭೂತಭಾವನಃ    

ಚ ಮತ್ ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮ್ ಈಶ್ವರಮ್
ಭೂತಭೃತ್ ನಚ ಭೂತಸ್ಥಃ  ಮಮ ತ್ಮಾ ಭೂತಭಾವನಃ – ನನ್ನಲ್ಲಿ ಎಲ್ಲ ಉಂಟು; ನನಗಿಲ್ಲ ಯಾವುದರ ಅಂಟು. ನೋಡು-ಮಿಗಿಲಾದ ನನ್ನ ಮಹಿಮೆಯನ್ನು. ನನ್ನ ರೂಪ ಇವುಗಳಿಗೆ ರೂಪು ಕೊಟ್ಟಿದೆ. ಹೊತ್ತು ಸಲಹಿದೆ. ಆದರೂ ಇವುಗಳಲ್ಲಿಲ್ಲ.

ಹಿಂದಿನ ಮತ್ತು ಈ ಶ್ಲೋಕದಲ್ಲಿ ಕೃಷ್ಣ ಹೇಳುವ ವಿಚಾರವನ್ನು ನಾವು ಗಮನವಿಟ್ಟು ನೋಡಬೇಕು. ಮೇಲ್ನೋಟಕ್ಕೆ ಇವು ಒಂದೊಕ್ಕೊಂದು ವಿರುದ್ಧವಾಗಿರುವ ಒಗಟಿನ ಹೇಳಿಕೆಯಂತೆ ಕಾಣುತ್ತದೆ. ಕೃಷ್ಣ ಹೇಳುವ ಮಾತು ಹೀಗಿದೆ "ನನ್ನ ಸಾಮರ್ಥ್ಯವನ್ನು ತಿಳಿ, ನಾನು ಎಲ್ಲವುದರಲ್ಲೂ ಇದ್ದೇನೆ-ಆದರೆ ಯಾವುದರಲ್ಲೂ ಇಲ್ಲ. ಎಲ್ಲವೂ ನನ್ನಲ್ಲಿದೆ ಆದರೆ ಯಾವುದೂ ನನ್ನಲ್ಲಿಲ್ಲ” ಇದು ಭಗವಂತನ ಅಚಿಂತ್ಯ  ಶಕ್ತಿಯ ಅನುಸಂಧಾನ. ಭಾಗವತದಲ್ಲಿ ಹೇಳುವಂತೆ ‘ನಾವು ಯಾವುದನ್ನು ಪ್ರಪಂಚದಲ್ಲಿ ವಿರೋಧಾತ್ಮಕ(Contradictory) ಎನ್ನುತ್ತೇವೋ ಅವು ಶುಭ ಧರ್ಮವಾದಲ್ಲಿ ಭಗವಂತನಲ್ಲಿ ಅನ್ವಯವಾಗುತ್ತವೆ’. ಈ ವಿರುದ್ಧವಾದ ಧರ್ಮವನ್ನು ಹೇಳುವುದರ ಮೂಲಕ ಇಲ್ಲಿ ಭಗವಂತ ಏನನ್ನು ತಿಳಿಸುತ್ತಿದ್ದಾನೆ ಅಂದರೆ “ ಎಲ್ಲವೂ ನನ್ನಲ್ಲಿದೆ ಆದರೆ ಯಾವ ಮಮಕಾರ(Attachment)ನನಗಿಲ್ಲ”. ಅಂದರೆ ಇದು ಭಗವಂತನ ನಿರ್ಲಿಪ್ತತೆಯನ್ನು ಸೂಚಿಸುತ್ತದೆ. ಆತ ಯಾವುದನ್ನೂ ಅಂಟಿಸಿಕೊಳ್ಳುವುದಿಲ್ಲ. ಆತ ಯಾವುದನ್ನೂ ಆಶ್ರಯಿಸಿಕೊಂಡಿಲ್ಲ ಮತ್ತು ಯಾವುದರ ಲೇಪವೂ ಆತನಿಗಿಲ್ಲ. ಕೃಷ್ಣ ಹೇಳುತ್ತಾನೆ “ಇದು ನನ್ನ ಈಶ್ವರೀಯ ಶಕ್ತಿ” ಎಂದು. ಇದು ಭಗವಂತನ ಸರ್ವಸಮರ್ಥತೆ.
ಈ ವಿಚಾರವನ್ನು ಕೃಷ್ಣ ಇನ್ನೊಮ್ಮೆ ಸಂಕ್ಷಿಪ್ತ(Crisp)ವಾಗಿಭೂತಭೃತ್ ನಚ ಭೂತಸ್ಥಃ” ಎಂದು ವಿವರಿಸುತ್ತಾನೆ. ಇಲ್ಲಿ ‘ನಚ’ ಅನ್ನುವ ಪದ ಹೊಸ್ತಿಲಲ್ಲಿ ಇಟ್ಟ ದೀಪದಂತೆ ಎರಡು ಪದಗಳ ನಡುವೆ ಬಳಕೆಯಾಗಿದೆ. ಇದರರ್ಥ ಹೀಗೆ: “ನಾನು ಭೂತಭೃತ್-ಎಲ್ಲಾ ಜೀವಜಾತಗಳನ್ನು ಧರಿಸಿದ್ದೇನೆ ಮತ್ತು  ನಚಭೂತಭೃತ್-ಏನನ್ನೂ ಧರಿಸಿಲ್ಲ; ನಾನು ಭೂತಸ್ಥ-ಎಲ್ಲ ಜೀವಜಾತಗಳು ನನ್ನಲ್ಲಿವೆ ಮತ್ತು ನಾನು ನಚಭೂತಸ್ಥ-ಯಾವುದರಲ್ಲೂ ನಾನಿಲ್ಲ”.
ಕೃಷ್ಣ ಹೇಳುತ್ತಾನೆ “ಮಮ ತ್ಮಾ ಭೂತಭಾವನಃ” ಎಂದು.  ಅಂದರೆ ಈ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷ ಎಲ್ಲವೂ ಭಗವಂತನಿಂದ. ಇಲ್ಲಿ ಕೃಷ್ಣ ‘ಮಮ ಆತ್ಮ’ ಎಂದಿದ್ದಾನೆ. ಭಗವಂತ ಜ್ಞಾನಾನಂದ ಸ್ವರೂಪ. ಭಗವಂತ ಬೇರೆ ಆತನ ದೇಹ ಬೇರೆ ಅಲ್ಲ. ಭಗವಂತನ ಗುಣ ಕ್ರಿಯೆಗಳು ಬೇರೆ ಅಲ್ಲ. ಅವೆಲ್ಲವೂ ಅಖಂಡ. ಇದನ್ನು ಪಾಂಚಬೌತಿಕ ಮತ್ತು ತ್ರೈಗುಣ್ಯದ ಪರಿದಿಯಲ್ಲಿ ನಾವು ಕಲ್ಪಿಸಲು ಸಾಧ್ಯವಿಲ್ಲ.

ಭಗವಂತ ಹೇಗೆ ಎಲ್ಲಾ ಕಡೆ ತುಂಬಿದ್ದಾನೆ ಎನ್ನುವುದನ್ನು ಕೃಷ್ಣ ಒಂದು ದೃಷ್ಟಾಂತದ ಮೂಲಕ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.

ಯಥಾSSಕಾಶಸ್ಥಿತೋ ನಿತ್ಯಂ ವಾಯುಃ ಸರ್ವತ್ರಗೋ ಮಹಾನ್
ತಥಾ ಸರ್ವಾಣಿ ಭೂತಾನಿ ಮತ್ ಸ್ಥಾನೀತ್ಯುಪಧಾರಯ      

ಯಥಾ ಕಾಶಸ್ಥಿತಃ ನಿತ್ಯಮ್  ವಾಯುಃ ಸರ್ವತ್ರ ಗಃ  ಮಹಾನ್
ತಥಾ ಸರ್ವಾಣಿ ಭೂತಾನಿ ಮತ್ ಸ್ಥಾನಿ ಇತಿ ಉಪಧಾರಯ –ಎಲ್ಲೆಡೆ ಹಿಗ್ಗಿ ತುಂಬಿರುವ ಗಾಳಿ ಎಂದೆಂದೂ ಆಗಸದಲ್ಲಿರುವಂತೆ ಜಗದ ಎಲ್ಲ ಇರುವಿಕೆಗಳೂ ನನ್ನಲ್ಲಿವೆ. ಎಂದು ಮನಗಾಣು.

ಗಾಳಿ ಎಲ್ಲಾ ಕಡೆ ಇದೆ. ಅದು ಒಳಗೂ ಇದೆ, ಹೊರಗೂ ಇದೆ. ಗಾಳಿ ನಮಗೆ ಕಾಣುವುದಿಲ್ಲ. ಗಾಳಿ ಈ ಆಕಾಶದಲ್ಲಿ ತುಂಬಿದೆ. ಹೀಗೆ ಭಗವಂತ ನಮ್ಮ ಒಳಗೂ ಹೊರಗೂ ತುಂಬಿ ನಿಂತಿದ್ದಾನೆ. ಆದರೆ ಯಾವುದರ ಲೇಪವೂ ಆತನಿಗಿಲ್ಲ. ಈ ಜಗತ್ತಿನ ಸರ್ವ ಇರುವಿಕೆಯೂ ಭಗವಂತನಲ್ಲಿದೆ.

2 comments:

  1. ಭಗವದ್ಗೀತೆಯ ಶ್ಲೋಕಗಳನ್ನು ಕನ್ನಡದಲ್ಲಿ ಅರ್ಥೈಸುತ್ತಿರುವ ನಿಮ್ಮ ಕಾರ್ಯ ಅತ್ಯ೦ತ ಉಪಯುಕ್ತವಾಗಿದೆ.

    ReplyDelete
  2. ಓದುತ್ತಿರುವ ನಿಮಗೂ ನನ್ನ ಹೃತ್ಪೂರ್ವಕ ವಂದನೆಗಳು.

    ReplyDelete