Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, July 17, 2011

Bhagavad Gita in Kannada Chapter-08 Shloka 5-8

ಅಂತಕಾಲೇ ಚ ಮಾಮೇವ ಸ್ಮರನ್ ಮುಕ್ತ್ವಾ ಕಳೇಬರಮ್ ।
ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ ॥೫॥

ಅಂತಕಾಲೇ ಚ ಮಾಮ್ ಏವ ಸ್ಮರನ್ ಮುಕ್ತ್ವಾ ಕಳೇಬರಮ್ ।
ಯಃ ಪ್ರಯಾತಿ ಸ ಮತ್ ಭಾವಮ್  ಯಾತಿ ನ ಅಸ್ತಿ ಅತ್ರ ಸಂಶಯಃ –ಕೊನೆಯ ಕಾಲದಲ್ಲು ನನ್ನನ್ನೆ ನೆನೆಯುತ್ತ ದೇಹವನ್ನು ತೊರೆದು ತೆರಳುವವನು ನನ್ನಂತಯೆ ದುಃಖವಿರದ ಸುಖದ ನಿಜಸ್ಥಿತಿಯನ್ನು [ನನ್ನಲ್ಲೆ ಇರವನ್ನು] ಪಡೆಯುತ್ತಾನೆ.
ಅರ್ಜುನನ ಕೊನೆಯ ಪ್ರಶ್ನೆಗೆ ಕೃಷ್ಣ ಉತ್ತರಿಸುತ್ತಾ ಹೇಳುತ್ತಾನೆ “ಸಾಯುವ ಕ್ಷಣದಲ್ಲೂ ಕೂಡ ನನ್ನನ್ನೇ ನೆನೆಯುತ್ತಾ ದೇಹವನ್ನು ತೊರೆಯುವ ಜೀವರು ನನ್ನ ಹಾಗೇ ಜ್ಞಾನಾನಂದ ಸ್ವರೂಪರಾಗಿ ನನ್ನಲ್ಲಿ ಬಂದು ನೆಲೆಸುತ್ತಾರೆ. ಅವರು ಮುಂದೆಂದೂ ಈ ಅಜ್ಞಾನ ಮತ್ತು ದುಃಖಮಯವಾದ ಸಂಸಾರದ ತೊಳಲಾಟಕ್ಕೆ ಒಳಗಾಗುವುದಿಲ್ಲ. ಈ ಬಗ್ಗೆ ಎಂದೂ ಸಂಶಯ ಪಡಬೇಡ”  ಎಂದು. ಇಲ್ಲಿ “ಅಂತಕಾಲೇ” ಎಂದರೆ ಮುಪ್ಪಿನ ಕಾಲದಲ್ಲಿ ಎನ್ನುವ ಅರ್ಥವಲ್ಲ ಬದಲಿಗೆ ದೇಹವನ್ನು ಜೀವ ಬಿಡುವ ಕೊನೆಯ ಕ್ಷಣ  ಎಂದರ್ಥ. ದೇಹವನ್ನು ಬಿಡುತ್ತಾ ಭಗವಂತನನ್ನು ಸ್ಮರಿಸುತ್ತಾ ಹೊರಗೆ ಹೋಗುವ ಚೇತನಕ್ಕೆ ಅಗಾಧವಾದ ಬೆಳಕು ಕಾಣಿಸುತ್ತದೆ ಮತ್ತು ಆ ಚೇತನ  ಮೋಕ್ಷವನ್ನು ಸೇರುತ್ತದೆ. [ಜೀವ ಶರೀರವನ್ನು ಬಿಡುವ ಮತ್ತು ದೇಹದಿಂದ ಹೊರ ಬಂದ ಮೇಲೆ ಜೀವದ ಪ್ರಯಾಣದ ಕುರಿತು ಸತ್ತು ಬದುಕಿದ ಅನೇಕ ಜನರ ಅನುಭವವನ್ನು ಸಂಗ್ರಹಿಸಿ Raymond Mody ಬರೆದ “Life after Life” ಎನ್ನುವ ಪುಸ್ತಕ ಬೆಳಕು ಚೆಲ್ಲುತ್ತದೆ]. 

ಯಂ ಯಂ ವಾSಪಿ ಸ್ಮರನ್  ಭಾವಂ ತ್ಯಜತ್ಯಂತೇ ಕಳೇಬರಮ್        ।
ತನ್ತಮೇವೈತಿ ಕೌಂತೇಯ ಸದಾ ತದ್ ಭಾವಭಾವಿತಃ          ॥೬॥

ಯಮ್  ಯಮ್  ವಾ ಅಪಿ ಸ್ಮರನ್  ಭಾವಮ್  ತ್ಯಜತಿ ಅಂತೇ ಕಳೇಬರಮ್   ।
ತಮ್ ತಮ್  ಏವ ಏತಿ ಕೌಂತೇಯ ಸದಾ ತತ್  ಭಾವ ಭಾವಿತಃ  -ಕೌಂತೇಯ, ಕೊನೆಯಲ್ಲಿ ಯಾವ ಯಾವ ವಿಷಯವನ್ನು ನೆನೆಯುತ್ತ ದೇಹವನ್ನು ತೊರೆಯುತ್ತಾನೆ ಅದರಲ್ಲೆ ಅನುಗಾಲ ಬೇರೂರಿದ ಸಂಸ್ಕಾರದಿಂದ ಅದದನ್ನೆ ಪಡೆಯುತ್ತಾನೆ.

“ಜೀವನ ಯಾತ್ರೆಯ  ಅಂತಿಮ ಕ್ಷಣದಲ್ಲಿ ಭಗವಂತನನ್ನು ನೆನೆದವರು ‘ನನ್ನನ್ನು’ ಸೇರುತ್ತಾರೆ” ಎಂದು ಕೃಷ್ಣ  ಏಕೆ ಹೇಳಿದ ಎನ್ನುವುದಕ್ಕೆ ಈ ಶ್ಲೋಕದಲ್ಲಿ ಉತ್ತರವಿದೆ. ಇಲ್ಲಿ ಕೃಷ್ಣ ಮರಣ ಕಾಲದ ಒಂದು ಅದ್ಭುತ ಮನಃಶಾಸ್ತ್ರವನ್ನು ನಮ್ಮ ಮುಂದೆ ತೆರೆದಿಡುತ್ತಾನೆ. ಸಾಯುವ ಕ್ಷಣದಲ್ಲಿ ಭಗವಂತನ ಧ್ಯಾನ ಮಾಡಲು ಒಂದು ಉದ್ದೇಶವಿದೆ ಎನ್ನುತ್ತಾನೆ ಕೃಷ್ಣ. ನಾವು ದೇಹ ತ್ಯಾಗ ಮಾಡುವಾಗ ಏನನ್ನು ಸ್ಮರಣೆ ಮಾಡುತ್ತೇವೋ ಮುಂದಿನ ಜನ್ಮದಲ್ಲಿ ಅದನ್ನೇ ಪಡೆಯುತ್ತೇವೆ. ಆದ್ದರಿಂದ ಆ ಕಾಲದಲ್ಲಿ ಭಗವಂತನನ್ನು ಸ್ಮರಿಸಿದರೆ ಭಗವಂತನನ್ನು ಸೇರುತ್ತೇವೆ. ಸಾವಿನ ಕೊನೇ ಕ್ಷಣದಲ್ಲಿ ಬರುವ ಚಿಂತನೆ ಮುಂದಿನ ಜನ್ಮದ ನಿರ್ಣಾಯಕ ಸಂಗತಿ. ಹಾಗಾಗಿ ಮುಂದಿನ ಜನ್ಮದಲ್ಲಿ ಆತ ಏನಾಗಬೇಕೋ ಅದೇ ನೆನಪಾಗುತ್ತದೆ! ಭಗವಂತನನ್ನು ಸೇರುವ ಯೋಗ ಇಲ್ಲದವರಿಗೆ ಭಗವಂತನ ನೆನಪು ಬರುವುದೇ ಇಲ್ಲ! ಇದಕ್ಕೆ ಶಾಸ್ತ್ರದಲ್ಲಿ ಅನೇಕ ದೃಷ್ಟಾಂತಗಳಿವೆ. ಈ ದೇಶಕ್ಕೆ ‘ಭಾರತ’ ಎಂದು ಹೆಸರು ಬರಲು ಕಾರಣನಾದ ವೃಷಭದೇವನ ಮಗ ಭರತನ ಕಥೆ ಈ ವಿಚಾರವನ್ನು ಸ್ಪಷ್ಟವಾಗಿ ಪುರಾವೆ ಸಹಿತ ಹೇಳುವ ಕಥೆ. (ಈ ಭರತ ದುಷ್ಯಂತನ ಮಗ ಭರತನಲ್ಲ, ದುಷ್ಯಂತನ ಮಗ ಭರತ  ‘ಭರತವಂಶ’ ದ ಮೂಲ ಪುರುಷ). ಪರಮ ಧಾರ್ಮಿಕನಾದ ಭರತ ತನ್ನ ಮಗ ಪ್ರಾಯ ಪ್ರಬುದ್ಧನಾದ ಮೇಲೆ ತನ್ನೆಲ್ಲಾ ಅಧಿಕಾರವನ್ನು ಅವನಿಗೊಪ್ಪಿಸಿ, ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿ ಕಾಡಿನಲ್ಲಿ ಋಷಿಗಳ ಜೊತೆಗೆ ಸದಾ ಭಗವದ್ ನಿಷ್ಠನಾಗಿ ಬದುಕುತ್ತಿದ್ದ. ಒಂದು ದಿನ ಆತನಿಗೆ ಕಾಡಿನಲ್ಲಿ ತಾಯಿ ಸತ್ತ ಒಂದು ಜಿಂಕೆ ಮರಿ ಸಿಕ್ಕಿತು. ಭರತ ಆ ಮರಿಯನ್ನು ತಂದು ಪಾಲನೆ ಪೋಷಣೆ ಮಾಡತೊಡಗಿದ. ಇದರಿಂದ ಆತ ಸದಾ ಆ ಜಿಂಕೆಯನ್ನೇ ಪೋಷಣೆ ಮಾಡುವುದರಲ್ಲಿ ತನ್ನ ಸಮಯವನ್ನು ಕಳೆಯಲಾರಂಭಿಸಿದ. ಇದರಿಂದ ಆತನ ಸಾಧನೆಗೆ ಚ್ಯುತಿ ಬಂತು. ಆ ಜಿಂಕೆಯ ಮರಿ ಬೆಳೆದು ದೊಡ್ಡದಾಗುವ ಮೊದಲೇ ಆತ ಪ್ರಾಣತ್ಯಾಗ ಮಾಡುವ ಪ್ರಸಂಗ ಬಂತು. ಆ ಕಾಲದಲ್ಲಿ ಭರತನಿಗೆ ಭಗವಂತನ ಚಿಂತನೆಯ ಬದಲು ಕಾಡಿದ್ದು ಆ ಜಿಂಕೆ ಮರಿಯ ಚಿಂತೆ!  ಇದರಿಂದ ಆತ ತನ್ನ ಮುಂದಿನ ಜನ್ಮದಲ್ಲಿ ಜಿಂಕೆಯಾಗಿ ಹುಟ್ಟಿದ. ಆದ್ದರಿಂದ ಎಂತಹ ಅಪರೋಕ್ಷ ಜ್ಞಾನಿಯನ್ನೂ ಕೂಡ ಪ್ರರಾಬ್ಧ ಬಿಡದು ಎನ್ನುವುದಕ್ಕೆ  ಇದು ಶ್ರೇಷ್ಠ ಉದಾಹರಣೆ. ಈ ಕಥೆ ಕೃಷ್ಣ ಇಲ್ಲಿ ಹೇಳುವ ವಿಚಾರಕ್ಕೆ ಜ್ವಲಂತ ದೃಷ್ಟಾಂತ.
ನಾವು ಜೀವನ ಪರ್ಯಂತ ಸಾಧನೆ ಮಾಡಿದರೂ ಕೂಡಾ, ಸಾಯುವ ಕ್ಷಣದಲ್ಲಿ ಭಗವಂತನ ನೆನಪು ಬಾರದೇ ಹೋಗಬಹುದು. ಇದಕ್ಕಾಗಿ ಜೀವನ ಪರ್ಯಂತ ಅಥವಾ ಅನೇಕ ಜನ್ಮಗಳ ಸಾಧನೆ ಅಗತ್ಯ. ಕೃಷ್ಣ ಹೇಳುತ್ತಾನೆ “ಸದಾ ತದ್ ಭಾವಭಾವಿತಃ” ಎಂದು. ಇಲ್ಲಿ ಭಾವ ಅಂದರೆ ತನ್ಮಯತೆ. ಯಾವಾಗಲೂ ಭಗವಂತನಲ್ಲೇ ತನ್ಮಯವಾದ ಮನಸ್ಸಿನಿಂದ ನಿರಂತರ ಭಗವಂತನ ಚಿಂತನೆ ಮಾಡಬೇಕು. ಅಂತ್ಯ ಕಾಲದಲ್ಲಿ ಭಗವಂತನ ನೆನಪು ಬರಬೇಕಾದರೆ, ನಿರಂತರ ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸುವ ಸಂಸ್ಕಾರ ಬೇಕು. ಇದನ್ನು ಬಿಟ್ಟು ಮರಣ ಕಾಲದಲ್ಲಿ ಭಗವಂತನನ್ನು ನೆನೆದರಾಯ್ತು ಎಂದು ಜೀವನವನ್ನು ವ್ಯರ್ಥವಾಗಿ ಕಳೆದರೆ ಮರಣ ಕಾಲದಲ್ಲಿ ಭಗವಂತನ ನೆನಪು ಬರುವುದೇ ಇಲ್ಲ!
ಭೀಷ್ಮಾಚಾರ್ಯರಿಗೆ ಕೊನೆಗಾಲದಲ್ಲಿ ಎಷ್ಟೇ ಭಗವಂತನ ಬಗ್ಗೆ ಯೋಚಿಸಿದರೂ ಕೂಡಾ ಕಂಡಿದ್ದು ತನ್ನದೇ ಬಾಣದಿಂದ ಗಾಯಗೊಂಡು ನೆತ್ತರು ಸುರಿಸುತ್ತಿರುವ ಕೃಷ್ಣ! ಆನಂದಸ್ವರೂಪ ಭಗವಂತನ ನಿಜ ದರ್ಶನ ಅವರಿಗಾಗಲಿಲ್ಲ. ಇಲ್ಲಿ ನಾವು ಅರಿಯಬೇಕಾದ ವಿಚಾರವೇನೆಂದರೆ-ನಾವು ಯಾವುದೇ ಕೆಟ್ಟ ಸಂಗತಿಯನ್ನು ಗಾಢವಾಗಿ ಮನಸ್ಸಿಗೆ ಹಚ್ಚಿಕೊಳ್ಳಬಾರದು. ಹಚ್ಚಿಕೊಂಡರೆ ಕೊನೆಗಾಲದಲ್ಲಿ ಅದೇ ಕಾಣುತ್ತದೆ! ಇಡೀ ಜೀವನದಲ್ಲಿ ನಾವು ಯಾವತ್ತೂ ಕೆಟ್ಟದ್ದನ್ನು ಯೋಚಿಸಬಾರದು. ಯಾರನ್ನೂ ಕೆಟ್ಟವರೆಂದು ದ್ವೇಷಿಸಬಾರದು. ಒಬ್ಬರನ್ನು ದ್ವೇಷಿಸುವುದು ತುಂಬಾ ಕೆಟ್ಟದ್ದು. ಅದು ನಮ್ಮ ಇಡೀ ಬದುಕನ್ನೇ ಹಾಳುಮಾಡುತ್ತದೆ. ದುಷ್ಟರಿಂದ ದೂರವಿರು ಆದರೆ ದ್ವೇಷಿಸಬೇಡ. ಒಬ್ಬರನ್ನು ದ್ವೇಷಿಸುವುದು, ನಿಂದಿಸುವುದು, ಅದನ್ನು ಗಾಢವಾಗಿ ಹಚ್ಚಿಕೊಳ್ಳುವುದರಿಂದ ಅವರಿಗೆ ಏನೂ ಬಾಧಕವಿಲ್ಲ. ಆದರೆ ನಮ್ಮ ಬದುಕನ್ನು ನಾವು ಹಾಳು ಮಾಡಿಕೊಳ್ಳುತ್ತೇವೆ. ನಾವು ದ್ವೇಷಿಸುವ ವಸ್ತು ನಮ್ಮ ತಲೆಯಲ್ಲಿ ಗಾಢವಾಗಿ ನೆಲೆ ನಿಲ್ಲುತ್ತದೆ ಮತ್ತು ನಮ್ಮನ್ನು ಅಧಃಪಾತಕ್ಕೆ ಕೊಂಡೊಯ್ಯುತ್ತದೆ. ಅದು ಸಾವಿನ ಕಾಲದಲ್ಲಿ ಕೊನೆಗೆ ತಲೆಎತ್ತಿ ಹೆಡೆ ಅರಳಿಸುತ್ತದೆ! ಆದ್ದರಿಂದ ನಾವು ಈ ವಿಚಾರದಲ್ಲಿ ಎಚ್ಚರವಾಗಿರಬೇಕು. ಯಾರನ್ನಾದರು ಟೀಕೆ ಮಾಡಲು ನಾವು ಅರ್ಹರಲ್ಲ. ಏಕೆಂದರೆ ನಮಗೆ ಅಂತರಂಗ ದರ್ಶನವಿಲ್ಲ. ನಾವು ಮಾತನಾಡುವುದು ಕೇವಲ ಹೊರ ನೋಟದಿಂದ. ಒಳಗೆ ಯಾರು ಏನು ಎಂದು ನೋಡುವ ಶಕ್ತಿ ನಮಗಿಲ್ಲ. ಆದ್ದರಿಂದ ಇನ್ನೊಬ್ಬರ ಚಿಂತನೆ ಬಿಟ್ಟು ಸದಾ ಭಗವಂತನ ಚಿಂತನೆ ಮಾಡು ಎನ್ನುತ್ತಾನೆ ಕೃಷ್ಣ. ನಾವು ಚಿಂತಿಸಬೇಕಾದ ಏಕಮಾತ್ರ ವಸ್ತು ಕೇವಲ ಭಗವಂತ.                       

ತಸ್ಮಾತ್ ಸರ್ವೇಷು ಕಾಲೇಷು ಮಾಮನುಸ್ಮರ ಯುಧ್ಯ ಚ    ।
ಮಯ್ಯರ್ಪಿತಮನೋಬುದ್ಧಿರ್ಮಾಮೇವೈಷ್ಯಸ್ಯಸಂಶಯಮ್ ॥೭॥

ತಸ್ಮಾತ್ ಸರ್ವೇಷು ಕಾಲೇಷು ಮಾಮ್ ಅನುಸ್ಮರ ಯುಧ್ಯ ಚ           ।
ಮಯಿ ಅರ್ಪಿತ ಮನಃ ಬುದ್ಧಿಃ ಮಾಮ್ ಏವ ಏಷ್ಯಸಿ ಅಸಂಶಯಃ  –ಅದರಿಂದ ಎಲ್ಲ ಕಾಲದಲ್ಲು ನನ್ನನ್ನು ನೆನೆ. ನೆನೆಯುತ್ತ ಹೋರಾಡು. ನಿನ್ನೆಲ್ಲ ಬಯಕೆ ನಿರ್ಧಾರಗಳು ನನ್ನ ಕುರಿತಾದಾಗ ನಿಶ್ಚಯವಾಗಿ ನನ್ನನ್ನೆ ಸೇರುವೆ.

ದೇವರನ್ನು ಸ್ಮರಣೆ ಮಾಡುವ ಕಾಲ ಅಂತ ಒಂದಿಲ್ಲ. ಕೃಷ್ಣ ಹೇಳುತ್ತಾನೆ “ಸರ್ವ ಕಾಲದಲ್ಲೂ ನನ್ನನ್ನು ಸ್ಮರಣೆ ಮಾಡು” ಎಂದು. ಪ್ರತಿಯೊಂದು ಕ್ರಿಯೆ ಮಾಡುವಾಗ ಆ ಕ್ರಿಯೆ ಮಾಡಿಸುತ್ತಿರುವವ ಭಗವಂತ ಎನ್ನುವ ಎಚ್ಚರವಿರಲಿ. ಯುದ್ಧ ಮಾಡುವಾಗಲೂ ಸಹ “ಆ ಭಗವಂತ ನನ್ನೊಳಗೆ ಕೂತು ಈ ಕಾರ್ಯವನ್ನು ಮಾಡಿಸುತ್ತಿದ್ದಾನೆ, ಇದು ಅವನ ಸಂಕಲ್ಪ” ಎನ್ನುವ ಭಾವನೆ ಯುದ್ಧವನ್ನೂ ದೇವರ ಪೂಜೆಯನ್ನಾಗಿ ಪರಿವರ್ತಿಸುತ್ತದೆ! ನಮ್ಮಿಂದ ತಿಳಿದೋ ತಿಳಿಯದೆಯೋ ಆಗುವ ತಪ್ಪಿನಲ್ಲಿಯೂ ಕೂಡಾ ಭಗವಂತನ ಅರಿವು, ಶರಣಾಗತಿ ನಮಗೆ ಪಾಪದ ಲೇಪ ಬರದಂತೆ ತಡೆಯುತ್ತದೆ. ಭಗವಂತನ ಸ್ಮರಣೆಗೆ ಯಾವುದೇ ಕಾಲದ ನಿರ್ಬಂಧವಿಲ್ಲ. ಯಾವಾಗ ಭಗವಂತನ ಸ್ಮರಣೆ ಬಂತೋ ಅದೇ ಪುಣ್ಯಕಾಲ. ಭಗವಂತನ ಸ್ಮರಣೆ ಮನಸ್ಸಿನಲ್ಲಿರುವುದೇ ಮಡಿ. ಆದ್ದರಿಂದ ಭಗವಂತನ ಪೂಜಾರೂಪವಾಗಿ ಅಹಂಕಾರವಿಲ್ಲದೆ ಭಗವಂತನನ್ನು ನೆನೆದು ಕರ್ತವ್ಯ ಮಾಡಬೇಕು.
ಕ್ರಿಯೆಯಲ್ಲಿ ಇರತಕ್ಕ ಭಾವ ಧರ್ಮ-ಅಧರ್ಮವನ್ನು ನಿರ್ಣಯ ಮಾಡುತ್ತದೆ. ಉದಾಹರಣೆಗೆ ಧರ್ಮವ್ಯಾದ. ಈತ ಮಾಂಸ ಮಾರಿಯೂ ಪರಮ ಧಾರ್ಮಿಕನಾಗಿ ಬದುಕಿದ. ಏಕೆಂದರೆ ಆತನ ಅನುಸಂಧಾನ ಶುದ್ಧವಾಗಿತ್ತು. “ದೇವರು ನನ್ನನ್ನು ಈ ಕೆಲಸಕ್ಕೆ ಹಚ್ಚಿದ್ದಾನೆ, ನನ್ನ ಈ ಜನ್ಮದ ಕರ್ತವ್ಯ ಮಾಂಸ ಮಾರಿ ಬದುಕುವುದು. ಅದನ್ನು ಪ್ರಾಮಾಣಿಕವಾಗಿ ಮಾಡಿ ಜೀವನ ಸಾಗಿಸಬೇಕು” ಎನ್ನುವ ಅನುಸಂಧಾನ ಆತನಲ್ಲಿತ್ತು. ಆತ ತನ್ನ ವ್ಯಾಪಾರವನ್ನು ಕೇವಲ ತನ್ನ ಹಾಗು ತನ್ನ ಕುಟುಂಬದ ಜೀವನ ನಿರ್ವಹಣೆಗಾಗಿ ಮಾಡುತ್ತಿದ್ದ. ಈ ರೀತಿ ಪ್ರಾಮಾಣಿಕನಾಗಿ ಬದುಕಿ ಆತ ಋಷಿಗಳನ್ನೂ ಮೀರಿಸುವಷ್ಟು ಎತ್ತರಕ್ಕೇರಿದ. ಆದ್ದರಿಂದ ಭಾವ ಶುದ್ಧಿ ಅತ್ಯಂತ ಶ್ರೇಷ್ಠ. ಹಾಗಾಗಿ ನಾವು ನಮ್ಮ ಮನಸ್ಸು ಮತ್ತು ಬುದ್ಧಿಯನ್ನು ಭಗವಂತನಲ್ಲಿ ನೆಲೆ ನಿಲ್ಲಿಸಬೇಕು. “ಆಗ ನಿಸಂಶಯವಾಗಿ ನನ್ನನ್ನು ಸೇರುವೆ” ಎನ್ನುತ್ತಾನೆ ಕೃಷ್ಣ.

ಅಭ್ಯಾಸಯೋಗಯುಕ್ತೇನ ಚೇತಸಾSನಾನ್ಯಗಾಮಿನಾ ।
ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನುಚಿಂತಯನ್  ॥೮॥

ಅಭ್ಯಾಸ ಯೋಗ ಯುಕ್ತೇನ ಚೇತಸಾ ನ ಅನ್ಯ ಗಾಮಿನಾ ।
ಪರಮಮ್  ಪುರುಷಮ್  ದಿವ್ಯಮ್  ಯಾತಿ ಪಾರ್ಥ ಅನುಚಿಂತಯನ್ –ಪಾರ್ಥ, ಸೃಷ್ಟಿಯೊಂದು ಲೀಲೆಯಾದ ಪರಮ ಪುರುಷನನ್ನು ಅಭ್ಯಾಸದ ಉಪಾಯದಿಂದ ಹದಗೊಂಡು, ಬೇರಾವುದೂ ಬೇಡದ ಒಳಬಗೆಯಿಂದ, ಭಕ್ತಿಯಿಟ್ಟು ನೆನೆದಾಗ ಅವನನ್ನೆ ಸೇರುತ್ತಾನೆ.

ನಾವು ನಮ್ಮ ಮನಸ್ಸನ್ನು ನಿರಂತರ ಭಗವಂತನನಲ್ಲಿ ನೆಲೆ ನಿಲ್ಲುವಂತೆ ಮಾಡಲು ‘ನಿರಂತರ ಮನನ’ ಅತ್ಯಂತ ಮುಖ್ಯ ಅಂಶ.  ಸಾಮಾನ್ಯವಾಗಿ ನಮ್ಮ ಚಿತ್ತ ಬೇಡದ ವಿಷಯಗಳತ್ತ ಹರಿಯುತ್ತದೆ. ಆದರೆ ನಾವು ಅದನ್ನು  ಕೇವಲ ಭಗವಂತನನ್ನು ಚಿಂತಿಸುವಂತೆ  ತರಬೇತಿಗೊಳಿಸಬೇಕು. ಚಿತ್ತಕ್ಕೆ ಭಗವಂತನನ್ನು ಅನನ್ಯಗಾಮಿಯಾಗಿ ಚಿಂತನೆ ಮಾಡುವಂತೆ ನಿರಂತರ ಅಭ್ಯಾಸ ಮಾಡಿಸಬೇಕು. ನಮ್ಮ ಮನಸ್ಸು, ಬುದ್ಧಿ, ಚಿತ್ತ ಎಲ್ಲವೂ ನಾವು ಅಭ್ಯಾಸ ಮಾಡಿಸಿದಂತೆ ಕೆಲಸ ಮಾಡುತ್ತವೆ. ಅವುಗಳಿಗೆ ನಾವು ಭಗವಂತನ ಚಿಂತನೆಯ ಅಭ್ಯಾಸ ಮಾಡಿಸಬೇಕು. ಮನಸ್ಸು ಚಿತ್ತವನ್ನು ಮಣಿಸುವ ಏಕಮಾತ್ರ ಸಾಧನ ಅಭ್ಯಾಸ. ಹೀಗೆ ಮಾಡಿದಾಗ ಅದು ಭಗವಂತನಲ್ಲಿ ನೆಲೆನಿಲ್ಲುತ್ತದೆ. ಭಗವಂತನಲ್ಲಿ ನೆಲೆನಿಂತ ಮನಸ್ಸು ಅಂತ್ಯಕಾಲದಲ್ಲಿ ಕೂಡಾ ಭಗವಂತನನ್ನೇ ಕಾಣುತ್ತದೆ. ಇದು ಕೇವಲ ಚಿಂತನೆ ಅಲ್ಲ ಇದು ಅನುಚಿಂತನೆ-ಅಂದರೆ ಭಗವಂತನ ಯಥಾರ್ಥ (ಯತಾವತ್ತಾದ)ಚಿಂತನೆ. ಶ್ರುತಿಯಲ್ಲಿ ಹೇಗೆ ಹೇಳಿದ್ದಾರೋ ಹಾಗೆ ಭಗವಂತನನ್ನು ಚಿಂತನೆ ಮಾಡಬೇಕು. ಅಸತ್ಯವನ್ನು ಚಿಂತನೆ ಮಾಡಿ ಭಗವಂತನನ್ನು ಸೇರಲು ಸಾಧ್ಯವಿಲ್ಲ.
ಏಕಾಗ್ರವಾದ ಮನಸ್ಸಿನಿಂದ ದಿವ್ಯನಾದ ಪರಮಪುರುಷ, ಹೃತ್ಕಮಲ ಮದ್ಯನಿವಾಸಿ ಭಗವಂತನ ಚಿಂತನೆ ಮಾಡಬೇಕು ಎನ್ನುತ್ತಾನೆ ಕೃಷ್ಣ. ಮಹತೊಮಹಿಯಾದ ಭಗವಂತ ನಿನ್ನ ಹೃದಯದಲ್ಲಿ ಅಣೋರಣೀಯವಾಗಿ ಇರುವುದನ್ನು ಧ್ಯಾನದಲ್ಲಿ ಗುರುತಿಸು ಎನ್ನುವುದು ಇಲ್ಲಿ ಕೃಷ್ಣನ ಸಂದೇಶ. ಭಗವಂತ ಸರ್ವಗತ, ಸರ್ವಸಮರ್ಥ, ಸರ್ವಗುಣಪೂರ್ಣ, ಅನಾಧಿನಿತ್ಯ. ಅಂತಹ ಭಗವಂತ ನಮ್ಮ ಹೃತ್ಕಮಲದಲ್ಲಿ ವಾಸಿಸಿದ್ದಾನೆ ಮತ್ತು ದಿವ್ಯನಾಗಿದ್ದಾನೆ.
ಇಲ್ಲಿ ಬಳಸಿರುವ ದಿವ್ಯ ಪದಕ್ಕೆ ಅನೇಕ ಅರ್ಥಗಳಿವೆ. ಮೂಲವಾಗಿ ದಿವ್ಯ ಅಥವಾ ‘ದೇವರು’ ಈ ಪದಗಳು ‘ದಿವು’ ಎನ್ನುವ ದಾತುವಿನಿಂದ ಬಂದಿರುವುದು. ಪ್ರಾಚೀನ ದಾತು ಪಾಠದಲ್ಲಿ ಈ ದಾತುವಿಗೆ ಏಳು ಅರ್ಥವನ್ನು ನೋಡಬಹುದು; ಅವುಗಳೆಂದರೆ: ೧) ಧ್ಯುತಿ ೨) ವಿಜಿಗೀಶ ೩) ಕಾಂತಿ ೪) ಸ್ತುತಿ ೫) ವ್ಯವಹಾರ ೬) ಕ್ರೀಡಾ ೭) ಗತಿಶು. ಇತ್ತೀಚೆಗೆ ಮೋದ, ಮದ ಮತ್ತು ಸ್ವಪ್ನ ಎನ್ನುವ ಇನ್ನೂ ಮೂರು ಅರ್ಥವನ್ನು ಸೇರಿಸಿದ್ದಾರೆ. ಆದರೆ ಇದು ಪ್ರಾಚೀನ ದಾತುಪಾಠದಲ್ಲಿ ಇಲ್ಲ. ಈಗ ಸಂಕ್ಷಿಪ್ತವಾಗಿ ಮೇಲಿನ ಏಳು ಅರ್ಥಗಳನ್ನು ನೋಡೋಣ.
೧) ಧ್ಯುತಿ : ಧ್ಯುತಿ ಅಂದರೆ ಬೆಳಕಿನ ಸ್ವರೂಪ. ಬೆಳಕಿನ ಪುಂಜವಾದ ಸೂರ್ಯ ಚಂದ್ರಾದಿಗಳಿಗೆ ಬೆಳಕನ್ನೀಯುವ ಭಗವಂತ ನಮ್ಮೊಳಗೆ ಜ್ಞಾನದ ಬೆಳಕನ್ನು ತುಂಬುತ್ತಾನೆ.
೨) ವಿಜಿಗೀಶ: ಭಗವಂತ ಎಲ್ಲರಿಗಿಂತ ಎತ್ತರದಲ್ಲಿರುವವನು ಹಾಗು ಗೆಲುವಿನ ಸ್ವರೂಪ.
೩) ಕಾಂತಿ: ಕೇವಲ ಇಚ್ಚೆಯಿಂದ ಸೃಷ್ಟಿ ಮಾಡಬಲ್ಲವ. ನಮಗೆ ಇಚ್ಚೆಯನ್ನು ಕೊಟ್ಟವ ಹಾಗು ಅದನ್ನು ಅವರವರ ಯೋಗ್ಯತೆಗೆ ತಕ್ಕಂತೆ ಪೂರೈಸುವವ.
೪) ಸ್ತುತಿ: ಎಲ್ಲರಿಂದ ಸ್ತುತನಾದವನು; ಎಲ್ಲರೂ ಯಾರನ್ನು ಸ್ತುತಿಸುತ್ತಾರೋ ಅವನು ಸರ್ವಶಬ್ದ ವಾಚ್ಯನಾದ ಭಗವಂತ.
೫) ವ್ಯವಹಾರ: ಜಗತ್ತಿನ ಸಮಸ್ತ ವ್ಯವಹಾರವನ್ನು ನಿರ್ವಹಿಸುವವ.
೬) ಕ್ರೀಡಾ: ಸೃಷ್ಟಿ-ಸ್ಥಿತಿ-ಸಂಹಾರ ಇದು ಭಗವಂತನಿಗೊಂದು ಕ್ರೀಡೆ. ಹುಟ್ಟು-ಸಾವು, ಸರ್ವ ವ್ಯವಹಾರಗಳು ಆತನಿಗೊಂದು ಕ್ರೀಡೆ.
೭) ಗತಿಶು: ಚಲನೆ ಮತ್ತು ಜ್ಞಾನ ಕೊಟ್ಟವ. ಯಾರು ಎಲ್ಲಾ ಕಡೆ ಗತನಾಗಿದ್ದಾನೋ; ಎಲ್ಲವನ್ನೂ ತಿಳಿದಿದ್ದಾನೋ; ಎಲ್ಲರೊಳಗೆ ಬಿಂಬ ರೂಪದಲ್ಲಿ ನೆಲೆಸಿದ್ದಾನೋ ಅವನು ದಿವ್ಯ ಅಥವಾ  'ದೇವ'
ಹೀಗೆ ಅನೇಕ ಅರ್ಥಗಳನ್ನು 'ದಿವ್ಯ' ಎನ್ನುವ ಪದದಲ್ಲಿ  ಕಂಡುಕೊಳ್ಳಬಹುದು. "ಓ ದೇವರೇ" ಎನ್ನುವಾಗ ಮೇಲಿನ ಅರ್ಥವನ್ನು ಒಮ್ಮೆ ನೆನೆದರೆ ಅದರಿಂದಾಗುವ ಆನಂದ ಅಪರಿಮಿತ. ಭಗವಂತನ ನಾಮದಲ್ಲಿ ಅಷ್ಟೊಂದು ಬಲವಿದೆ. ನಾವು ಭಗವಂತನ ಜೊತೆಗೇ ಇದ್ದೂ ಕೂಡಾ ಮಾನಸಿಕವಾಗಿ ಆತನಿಂದ ದೂರವಿದ್ದೇವೆ. ಭಗವಂತನ ನಿರಂತರ ಅನುಚಿಂತನೆಯಿಂದ ನಾವು ಆತನ ಸಾಕ್ಷಾತ್ಕಾರ ಪಡೆಯಬಹುದು.
ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕೃಷ್ಣ ಭಗವಂತನನ್ನು ಅನುಚಿಂತನೆ ಮಾಡುವುದು ಅಂದರೆ ಏನು ಎನ್ನುವುದನ್ನು ವಿವರಿಸುತ್ತಾನೆ. ಒಬ್ಬ ಧ್ಯಾನ ಮಾಡುವವ ಭಗವಂತನನ್ನು ಯಾವರೀತಿ ಧ್ಯಾನ ಮಾಡಬೇಕು ಎನ್ನುವ ಚಿತ್ರಣವನ್ನು ಮುಂದಿನ ಶ್ಲೋಕಗಳಲ್ಲಿ ಕಾಣಬಹುದು.

Bhagavad Geeta Kannada Chapter-08 Shloka 04

ಅಧಿಭೂತಂ ಕ್ಷರೋ ಭಾವಃ ಪುರುಷಶ್ಚಾಧಿದೈವತಮ್ ।
ಅಧಿಯಜ್ಞೋSಹಮೇವಾತ್ರ ದೇಹೇ ದೇಹಭೃತಾಂ ವರ          ॥೪॥

ಅಧಿಭೂತಮ್  ಕ್ಷರಃ  ಭಾವಃ ಪುರುಷಃ ಚ ಅಧಿದೈವತಮ್ ।
ಅಧಿಯಜ್ಞಃ ಅಹಮ್ ಏವ ಅತ್ರ ದೇಹೇ ದೇಹಭೃತಾಮ್  ವರ- ಹುಟ್ಟಿ ಸಾಯುವ ಸಮಷ್ಟಿ ಬ್ರಹ್ಮಾಂಡ [ದೇಹೆಂದ್ರಿಯಗಳಿಂದ ಕೂಡಿದ ಜೀವರಾಶಿ] ‘ಅಧಿಭೂತ’, ಶರೀರದೊಳಗಿದ್ದು ನಿಯಮಿಸುವ ತತ್ವಾಭಿಮಾನಿ ದೇವತೆಗಳು[ಜಗತ್ತಿನ ಹಿರಿಯ ಚಾಲಕಶಕ್ತಿಯಾಗಿ ‘ಪುರುಷ’ ಎನಿಸಿದ ಶ್ರಿತತ್ವ ] ‘ಅಧಿದೈವ’. ಹಿರಿಯ ಜೀವವೆ, ಈ ದೇಹದಲ್ಲಿ ನಾನೆ ‘ಅಧಿಯಜ್ಞ’.

ಹಿಂದಿನ ಶ್ಲೋಕದಲ್ಲಿ ನೋಡಿದಂತೆ ಅಧ್ಯಾತ್ಮ ಎಂದರೆ ಶರೀರದಲ್ಲಿ ಬಂಧಿಯಾಗಿರುವ ಜೀವ. ಈ ಜೀವದ ಭೋಗಕ್ಕಾಗಿ ಸೃಷ್ಟಿಯಾಗಿರತಕ್ಕಂತಹ ಪಂಚಭೂತಾತ್ಮಕವಾದ ಈ ಪ್ರಪಂಚದ ಸಮಸ್ತ ವಿಚಾರಗಳೂ ಅಧಿಭೂತದಲ್ಲಿ ಸೇರಿದೆ. ಪಂಚಭೂತದ ಮೂಲದ್ರವ್ಯ ಮತ್ತು ಪಂಚಭೂತದಿಂದ ನಿರ್ಮಾಣಗೊಂಡ ಪ್ರಪಂಚ ಅಧಿಭೂತ. ಜಡ ಪ್ರಕೃತಿಯಿಂದ ಹಿಡಿದು ಸ್ಥೂಲ ವಿಶ್ವದ ತನಕ ತ್ರಿಗುಣಾತ್ಮಕವಾದ  ಎಲ್ಲವೂ ‘ಅಧಿಭೂತ’.
ಕೃಷ್ಣ ಹೇಳುತ್ತಾನೆ “ಪುರುಷಶ್ಚಾಧಿದೈವತಮ್” ಎಂದು. ಈ ಶರೀರದೊಳಗಿರುವ ಜೀವಕ್ಕೆ ನೆರವಾಗುವುದಕ್ಕೊಸ್ಕರ ದೇಹದಲ್ಲಿ ಬೇರೆ ಬೇರೆ ಇಂದ್ರಿಯಗಳನ್ನು ನಿಯಂತ್ರಿಸತಕ್ಕಂತಹ ದೇವತೆಗಳಿದ್ದಾರೆ. ಇದು ಅಧಿದೈವತಾ ವಿಜ್ಞಾನ. ಇದು ಒಂದು ಮುಖ. ಇನ್ನೊಂದು ರೀತಿಯಲ್ಲಿ ನೋಡಿದರೆ ಇಲ್ಲಿ ಕೃಷ್ಣ ‘ಪುರುಷ’ ಎಂದು ಸಂಬೋಧಿಸಿದ್ದಾನೆ.  ನಮ್ಮ ದೇಹದಲ್ಲಿ ನಾಲ್ಕು "ಪುರುಷರಿದ್ದಾರೆ'. ಶರೀರಪುರುಷ, ಛಂದಃಪುರುಷ, ವೇದಪುರುಷ ಮತ್ತು ಸಂವತ್ಸರಪುರುಷ. ಈ ದೇಹ ನಿಂತು ನಡೆದಾಡಬೇಕಾದರೆ ದೇಹದಲ್ಲಿ ಶರೀರಪುರುಷನಾದ ಶಿವಶಕ್ತಿ ಬೇಕು. ಮನಸ್ಸು ಯೋಚಿಸಿದ್ದನ್ನು ಸ್ಪಂದನ, ಪರಾಶರ, ಪಶ್ಯಂತಿ, ಮದ್ಯಮ ಮತ್ತು ವೈಖರಿ ರೂಪದಲ್ಲಿ ವಾಕ್ ಶಕ್ತಿ ಯಾಗಿ ಹೊರಹೊಮ್ಮಲು ಛಂದಃಪುರುಷನಾದ ಶೇಷ ಕಾರಣ. ಮನೋಮಯ ಕೋಶದಲ್ಲಿದ್ದು, ವೇದಾಂತದ ಚಿಂತನೆ, ಮನಸ್ಸಿನಲ್ಲಿ ಮನನ ಶಕ್ತಿ ಕೊಡತಕ್ಕವ ವೇದಪುರುಷ ಗರುಡ. ವೇದಪುರುಷ ನಮಗೆ  ಅಪೂರ್ವವಾದ ವೈದಿಕ ವಾಙ್ಮಯ ಶಕ್ತಿ ಪ್ರಾಪ್ತವಾಗುವಂತೆ ಮಾಡುತ್ತಾನೆ. ಜೀವದ ಯೋಗ್ಯತೆಯನ್ನು, ಇಡೀ ಜೀವದ ಸ್ವರೂಪವನ್ನು ನಿಯಂತ್ರಣ ಮಾಡುವವ ಜೀವಕಲಾಭಿಮಾನಿ ಚತುರ್ಮುಖಬ್ರಹ್ಮ, ಈತ ಸಂವತ್ಸರಪುರುಷ.  [ ‘ಸಂ-ವತ್ಸ-ರ’- ಅಂದರೆ ಚನ್ನಾಗಿ ಮಕ್ಕಳನ್ನು ಸಾಕುವ ಪಿತಾಮಹ]. ಬ್ರಹ್ಮ-ವಾಯು ಜೀವವನ್ನು ಮೇಲಕ್ಕೆತ್ತಿ ಸಾಧನೆಯ ಹಾದಿಯಲ್ಲಿ ತೊಡಗಿಸುತ್ತಾರೆ. ಹೀಗೆ ಈ ಪಂಚದೇವತೆಗಳು ಭಗವಂತನ  ನಂತರ ದೇಹದಲ್ಲಿರುವ ಪ್ರಮುಖ ಅಧಿದೇವತೆಗಳು. ಅವರಿಂದ ನಿಯಂತ್ರಿಸಲ್ಪಟ್ಟ ಸಮಸ್ತ ಬ್ರಹ್ಮಾಂಡ ಅಧಿಭೂತ.
ಕೃಷ್ಣ ಮುಂದುವರಿದು ಹೇಳುತ್ತಾನೆ: ಪ್ರತಿಯೊಂದು ದೇಹದ ಒಳಗೂ ನಾನು ಒಂದೊಂದು ರೂಪದಲ್ಲಿದ್ದೇನೆ ಎಂದು. ಭಗವಂತನ ಈ ರೂಪವೇ ‘ಅಧಿಯಜ್ಞ’ ರೂಪ. ಯಜ್ಞವನ್ನು ಅಧಿಕರಿಸಿ, ಅದನ್ನು ನಿಯಂತ್ರಿಸುವ ಯಜ್ಞ ಭೋಕ್ತಾರ, ಯಜ್ಞವನ್ನು ಮಾಡುವವ, ಮಾಡಿಸುವವ, ಫಲಪ್ರದ ಭಗವಂತ ಅಧಿಯಜ್ಞ. ನಾವು ಭಗವಂತನ ಪೂಜಾರೂಪ ಎಂದು ತಿಳಿದು ಮಾಡುವ ಎಲ್ಲಾ ಕರ್ಮವೂ ಯಜ್ಞ. ‘ಯಜ ದೇವಾ ಪೂಜಾಯಾಂ’ – ನಮ್ಮ ಬದುಕಿನ ಪ್ರತಿಯೊಂದು ಕ್ರಿಯೆಯೂ ಭಗವಂತನ ಆರಾದನೆ. ನಮ್ಮ ದೇಹದೊಳಗಿದ್ದು, ಸಕಲ ತತ್ವಾಭಿಮಾನಿ ದೇವತೆಗಳ ಮುಖೇನ ಕ್ರಿಯೆ ಮಾಡಿಸುವ ಭಗವಂತ ‘ಅಧಿಯಜ್ಞ’.
ಎರಡನೇ ಆಯಾಮದಲ್ಲಿ ಈ ಶ್ಲೋಕವನ್ನು ನೋಡಿದರೆ [ಹಿಂದಿನ ಶ್ಲೋಕದಲ್ಲಿ ಭಗವಂತ-ಭಗವಂತನ ಸ್ವಭಾವ ಮತ್ತು ಅವನ ಕ್ರಿಯೆ ಎನ್ನುವ ಅರ್ಥ ವಿಶ್ಲೇಷಣೆಯಂತೆ] ಅಧಿಭೂತ ಎಂದರೆ ಬ್ರಹ್ಮಾದಿಸಮಸ್ತ ದೇವತೆಗಳು. ಚೇತನಾಚೇತನಾತ್ಮಕ ಪ್ರಪಂಚ, ಜೀವರು, ಶರೀರ, ಬ್ರಹ್ಮ ಮತ್ತು ಬ್ರಹ್ಮಾಂಡ ಎಲ್ಲವೂ ಅಧಿಭೂತ. ಎಲ್ಲಾ ದೇವತೆಗಳಿಗೂ ಮಿಗಿಲಾದ ಭಗವಂತನ ಅನಂತರ ಬ್ರಹ್ಮಾದಿ ದೇವತೆಗಳಿಗೂ ತಾಯಿಯಾದ ‘ಶಕ್ತಿ’ ಶ್ರಿತತ್ವ ಅಧಿದೈವ. ಎಲ್ಲೆಡೆ ತುಂಬಿದ್ದು ಎಲ್ಲಾ ಜೀವರ ಒಳಗೆ ಅಂತರ್ಯಾಮಿಯಾಗಿ ನಿಂತು ನಿಯಮಿಸುವ ಭಗವಂತ ಅಧಿಯಜ್ಞ.

Tuesday, July 12, 2011

Bhagavad Gita Kannada Chapter-08 Shloka 3

ಭಗವಾನುವಾಚ ।
ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋSಧ್ಯಾತ್ಮಮುಚ್ಯತೇ ।
ಭೂತಭಾವೋದ್ಭವಕರೋ ವಿಸರ್ಗಃ ಕರ್ಮಸಂಜ್ಞಿತಃ            ॥೩॥

ಭಗವಾನ್ ಉವಾಚ ।
ಅಕ್ಷರಮ್  ಬ್ರಹ್ಮ ಪರಮಮ್  ಸ್ವಭಾವಃ ಅಧ್ಯಾತ್ಮಮ್ ಉಚ್ಯತೇ ।
ಭೂತ ಭಾವ ಉದ್ಭವ ಕರಃ ವಿಸರ್ಗಃ ಕರ್ಮ ಸಂಜ್ಞಿತಃ –ಭಗವಂತ ಹೇಳಿದನು: ಪರಮಾಕ್ಷರ ಎನ್ನಿಸಿದ ಪರತತ್ವವೆ ‘ಬ್ರಹ್ಮ’. ಜೀವ ಸ್ವರೂಪ ಮತ್ತು ಜೀವಕ್ಕೆ ಸಂಭದಿಸಿದ ಸಮಷ್ಟಿ ಪಿಂಡಾಂಡವನ್ನು [ಭಗವಂತನ ಬಗೆಯ ನಿಲುವನ್ನು] ‘ಅಧ್ಯಾತ್ಮ’ ಎನ್ನುತ್ತಾರೆ. ಜೀವ-ಜಡಗಳ ಅಭಿವ್ಯಕ್ತಿಗೆ ಕಾರಣವಾದ ಭಗವಂತನ ಬಗೆಬಗೆಯ ಸೃಷ್ಟಿಕ್ರಿಯೆಗೆ ‘ಕರ್ಮ’ ಎಂದು ಹೆಸರು.

ಕೃಷ್ಣ   ಹೇಳುತ್ತಾನೆ ‘ಬ್ರಹ್ಮ’ ಅಂದರೆ “ಪರಮಂ ಬ್ರಹ್ಮ –ಪರಮಂ ಅಕ್ಷರ’ ಎಂದು. ಭಗವಂತ ಎಲ್ಲರಿಗಿಂತ ಹಿರಿದಾದ  ಪರಮಮ್ ಬ್ರಹ್ಮ- ಆತ ಪರಮಾಕ್ಷರ. ಅಂತಹ ಭಗವಂತನ ಬಗೆಗೆ ತಿಳಿದುಕೊಳ್ಳಬೇಕು ಎನ್ನುವುದು ‘ಬ್ರಹ್ಮ’ ಪದದ ಹಿಂದಿನ ಅರ್ಥ. ವಿಷ್ಣು ಸಹಸ್ರನಾಮದಲ್ಲಿ ಭಗವಂತನನ್ನು ಈ ರೀತಿ ವರ್ಣಿಸಿದ್ದಾರೆ:
ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ |
ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್ ||
ಭಗವಂತ ಬೆಳಕುಗಳಿಗೆ ಬೆಳಕು ನೀಡುವ ಸ್ವರೂಪ; ಎಲ್ಲರ ಚಿಂತನೆಯ ಕೊನೆಯ ಗುರಿ; ಎಲ್ಲ ಜ್ಞಾನದ ಗಮ್ಯ ಆ ಭಗವಂತ.  ಇಲ್ಲಿ ಭಗವಂತನನ್ನು  'ಪರಮ ಮಹಾ ಬ್ರಹ್ಮ' ಎನ್ನುತ್ತಾರೆ.  ಬ್ರಹ್ಮ ಎಂದರೆ ಜೀವರು; ಪರಬ್ರಹ್ಮ ಎಂದರೆ ಮುಕ್ತರಾದ ಜೀವರು; ಪರಮಬ್ರಹ್ಮ ಎಂದರೆ ಶ್ರೀತತ್ವ, ನಿತ್ಯ ಮುಕ್ತಳಾದ ಶ್ರೀಲಕ್ಷ್ಮಿ. ಪರಮ ಮಹಾ ಬ್ರಹ್ಮ ಎಂದರೆ ನಾರಾಯಣ. ಭಗವಂತ ಪರಾಯಣರಿಗೂ ಕೂಡಾ ಪರಮ. ಇಲ್ಲಿ ಪರಾಯಣರು ಎಂದರೆ ನಮಗೆ ಆಸರೆಯಾಗಿರುವ ತತ್ವಾಭಿಮಾನಿ ದೇವತೆಗಳು.  ಭಗವಂತ ಸರ್ವ ದೇವತೆಗಳ ಒಡೆಯ.  ಇದು ನಾವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳಲ್ಲಿ  ಒಂದಾದ  ‘ಬ್ರಹ್ಮ’ ಪದದ ಅರ್ಥ.
ಮುಂದುವರಿದು ಕೃಷ್ಣ ಹೇಳುತ್ತಾನೆ “ಸ್ವಭಾವಃ ಅಧ್ಯಾತ್ಮಮ್ ಉಚ್ಯತೇ” ಎಂದು. ಇಲ್ಲಿ ಸ್ವಭಾವ ಎಂದರೆ ತನ್ನತನ. ಜೀವದ ಇರವಿನ ಬಗೆ ಮತ್ತು ಜೀವ ಸ್ವಭಾವ. ನಾವು ಭಗವಂತನನ್ನು ಅರಿಯುವ ಮೊದಲು ನಮ್ಮ ಜೀವ ಸ್ವಭಾವವನ್ನು ಅರಿಯಬೇಕು. ನಾನು ಅಂದರೆ ಏನು? ನನ್ನಲ್ಲಿರುವ ಉತ್ತಮ ಅಂಶ(plus point) ಯಾವುದು? ಕೆಟ್ಟ ಅಂಶ(minus point) ಯಾವುದು ಎಂದು ನಿರಂತರ ನಾವು ನಮ್ಮನ್ನು ತಿಳಿಯಲು ಪ್ರಯತ್ನಿಸಬೇಕು [ಆದರೆ ನಾವು ನಮ್ಮ ಹೆಚ್ಚಿನ ಸಮಯವನ್ನು ಇನ್ನೊಬ್ಬರ ಬಗ್ಗೆ ತೀರ್ಪು ಕೊಡುವುದರಲ್ಲಿ ಕಳೆಯುತ್ತೇವೆ!!!] . ನಮಗೆ ಈ ದೇಹದಲ್ಲಿ ಕಣ್ಣು, ಕೈ, ಕಾಲು ಹಾಗು ಇತರ ಅಂಗಾಂಗಗಳನ್ನೂ ಬಿಟ್ಟು ಒಂದು ‘ನಾನು’ ಅನ್ನುವ ವಸ್ತುವಿದೆ ಎನ್ನುವ ಅರಿವೇ ಇರುವುದಿಲ್ಲ [awareness of self].  ಮೊದಲು ನಾವು  ಜೀವದ ಇರುವಿಕೆಯನ್ನು ತಿಳಿದುಕೊಳ್ಳಬೇಕು, ನಂತರ  ಅದರ ಸ್ವಭಾವವೇನು ಎಂದು ತಿಳಿಯಬೇಕು. [ಸಾಮಾನ್ಯವಾಗಿ ನಮಗೆ ನಮ್ಮ ಜೀವ ಸ್ವಭಾವ ಏನು ಎಂದು ತಿಳಿದಿರುವುದಿಲ್ಲ. ನಾವು ಪ್ರಭಾವದಲ್ಲೇ ಬದುಕುತ್ತಿರುತ್ತೇವೆ.]
ಜೀವ ಅನ್ನುವುದು ಅತೀ ಸೂಕ್ಷ್ಮವಾದ ವಸ್ತು. ಅದು ಹೃತ್ಕಮಲ ಮಧ್ಯದಲ್ಲಿ ಅನಾಹತ ಚಕ್ರ(thymus gland)ವೆಂಬ ಶಕ್ತಿ ಕೇಂದ್ರದಲ್ಲಿದೆ. ಈ ಜೀವ ಎನ್ನುವುದು ಕೋಣೆಯಲ್ಲಿ ಹಚ್ಚಿದ ಪುಟ್ಟ ದೀಪದಂತೆ. ದೀಪ ಇಡೀ ಕೋಣೆಯನ್ನು ಬೆಳಗಿಸುವಂತೆ,  ಜೀವ  ಅತಿ ಸೂಕ್ಷ್ಮವಾದರೂ ಕೂಡಾ ಅದರ ಬೆಳಕು ಇಡೀ ದೇಹವನ್ನು ವ್ಯಾಪಿಸಿರುತ್ತದೆ. ಇಂತಹ  ಜೀವ ಮತ್ತು ಜೀವ ಸ್ವಭಾವವೇ ‘ಅಧ್ಯಾತ್ಮ’.
ಕೃಷ್ಣ ಮುಂದುವರಿದು ಹೇಳುತ್ತಾನೆ “ಈ ಪ್ರಪಂಚ ಎಂದರೆ ಭೂತ ಮತ್ತು ಭಾವ-ಅಂದರೆ ಇದು ಜೀವ ಮತ್ತು ಜಡದ ಸೃಷ್ಟಿ” ಎಂದು. ನಾವು ಈ ಜಗತ್ತಿನಲ್ಲಿದ್ದೇವೆ. ಇಂತಹ ಜಗತ್ತು ಹೇಗೆ ಸೃಷ್ಟಿಯಾಯಿತು? ಯಾವಾಗ ಸೃಷ್ಟಿಯಾಯಿತು? ಅದರ ಹಿಂದಿರುವ ಮೂಲದ್ರವ್ಯ ಯಾವುದು? ಅದರ ನಿಮಿತ್ತ ಮತ್ತು ಉಪಾದಾನ ಕಾರಣ ಯಾರು? ಜೀವ ದೇಹದಮೂಲಕ ಹುಟ್ಟುವುದು ಏಕೆ? ಎಲ್ಲವನ್ನೂ ವ್ಯವಸ್ಥಿತವಾಗಿ ನಡೆಸುತ್ತಿರುವ ಆ ಮಹಾ ಶಕ್ತಿ ಯಾವುದು? ಹೀಗೆ ಚಿಂತನೆ ಮಾಡಿದಾಗ ನಮಗೆ ಒಂದು ವಿಷಯ ತಿಳಿಯುತ್ತದೆ-ಅದೇ ಕರ್ಮ  ಸಿದ್ಧಾಂತ. ಈ ಜೀವಜಾತವನ್ನು ಮತ್ತು ಜಡಪ್ರಪಂಚವನ್ನು ಸೃಷ್ಟಿ ಮಾಡುವ ಮೂಲ ಶಕ್ತಿ ಆ ಭಗವಂತ. ಅವನ ಕ್ರಿಯೆಯೇ ನಿಜವಾದ ಕ್ರಿಯೆ. ಈ ಪ್ರಪಂಚದ ವೈವಿಧ್ಯಮಯವಾದ ಸೃಷ್ಟಿಯ ಮೂಲವನ್ನು ತಿಳಿದಾಗ ನಿಜವಾದ ಕರ್ಮ ತಿಳಿಯುತ್ತದೆ. ನಾವೆಲ್ಲರೂ ಕೂಡಾ ಭಗವಂತ ಸೃಷ್ಟಿ ಮಾಡಿದ ಗೊಂಬೆಗಳು-ಆತ ಸೂತ್ರದಾರ. ನಮ್ಮ ಕ್ರಿಯೆ  ಆ ಸೂತ್ರದಾರನ ನಿಯಮಕ್ಕೆ ಬದ್ಧ. ಇಡೀ ವಿಶ್ವಚಕ್ರ ಭಗವಂತನ ಅಧೀನವಾಗಿ ತಿರುಗುತ್ತಿದೆ. ಭಗವಂತನ ಕ್ರಿಯೆ ಮಹಾಕ್ರಿಯೆ. ನಮ್ಮ ಕ್ರಿಯೆ -ಸುತ್ತುತ್ತಿರುವ ಮಹಾ ಚಕ್ರದ ಮೇಲೆ ಚಲಿಸುತ್ತಿರುವ  ಇರುವೆಯಂತೆ. ಇರುವೆ ಯಾವ ದಿಕ್ಕಿಗೆ ಚಲಿಸಿದರೂ ಕೂಡಾ ಅದು ಚಲಿಸುವುದು ಚಕ್ರ ತಿರುಗಿದಂತೆ ಹೊರತು ಇರುವೆ ಚಲಿಸಿದಂತೆ  ಚಕ್ರ ತಿರುಗುವುದಿಲ್ಲ. ಅದೇ ರೀತಿ ಪ್ರಪಂಚದ ಗತಿ ನಮ್ಮ ಕ್ರಿಯೆಯ ಮೇಲೆ ನಿರ್ಧಾರವಲ್ಲ. ಅದು ತನ್ನ ಗತಿಗನುಗುಣವಾಗಿ ನಿರಂತರ ನಡೆಯುತ್ತಿರುತ್ತದೆ. ಆದ್ದರಿಂದ ‘ನಾನು ಮಾಡಿದೆ’ ನನ್ನಿಂದಾಯ್ತು’ ಎಂದು ಅಹಂಕಾರ ಪಡುವುದರಲ್ಲಿ ಯಾವ ಅರ್ಥವೂ ಇಲ್ಲ. ಹೀಗೆ  ಜೀವ ಜಡ ಪ್ರಪಂಚ ಸೃಷ್ಟಿಗೆ ಕಾರಣವಾಗಿರತಕ್ಕಂತಹ ವಿಶಿಷ್ಟವಾದ ಸೃಷ್ಠಿ ಕ್ರಿಯೆಯೇ ನಿಜವಾದ ‘ಕರ್ಮ’.
ಈ ಶ್ಲೋಕವನ್ನು ಇನ್ನೊಂದು ಆಯಾಮದಲ್ಲಿ ನೋಡಿದಾಗ ಇದು ಹೊಸ ರೀತಿಯಲ್ಲಿ ತೆರೆದುಕೊಳ್ಳುತ್ತದೆ. ಇಲ್ಲಿ ಜೀವ ಬರುವುದೇ ಇಲ್ಲ. ಎಲ್ಲಾ ಮೂರೂ ಸಂಗತಿಗಳೂ ಭಗವಂತನನ್ನು ಹೇಳುತ್ತವೆ. ಬ್ರಹ್ಮ ಎಂದರೆ ‘ಭಗವಂತ’ ; ಸ್ವಭಾವ ಅಂದರೆ ಭಗವಂತನ ಸ್ವತಂತ್ರ ಭಾವ. ಆದ್ದರಿಂದ ಭಗವಂತನ ಗುಣ-ಧರ್ಮ ಚಿಂತನೆಯೇ ಅಧ್ಯಾತ್ಮ.  ನಮ್ಮಲ್ಲಿ ಕೆಲವರು ಕೇಳುವುದಿದೆ. “ಭಗವಂತನಿಗೆ ಏಕೆ ಈ ಸ್ವಭಾವ ?   ಒಬ್ಬರಿಗೆ ಸುಖ, ಒಬ್ಬರಿಗೆ ದುಃಖ, ಒಬ್ಬರಿಗೆ ಬಡತನ, ಒಬ್ಬರಿಗೆ ಸಿರಿತನ, ಒಬ್ಬರು ನರಕಕ್ಕೆ, ಒಬ್ಬರು ಸ್ವರ್ಗಕ್ಕೆ , ಏಕೆ ಈ ತಾರತಮ್ಯ ?” ಎಂದು. ಇದು ಬಾಲಿಶ ಪ್ರಶ್ನೆ. ಇಂತಹ ವಾದದಿಂದಲೇ ನಮ್ಮಲ್ಲಿ ನಾಸ್ತಿಕತೆ ಹುಟ್ಟಿಕೊಂಡಿರುವುದು. ಜೀವ ಅನಾದಿನಿತ್ಯ, ಅದನ್ನು ಭಗವಂತ  ಸೃಷ್ಟಿ ಮಾಡುವುದಿಲ್ಲ. ಪ್ರತಿಯೊಂದು ಜೀವ ಸ್ವರೂಪದ ಗುಣಧರ್ಮ ಸ್ವಭಾವಕ್ಕನುಗುಣವಾಗಿ, ಅರ್ಹತೆಗನುಗುಣವಾಗಿ, ಅವರವರನ್ನು ಸೃಷ್ಟಿ ಮಾಡುವುದು ಭಗವಂತನ ಸ್ವಭಾವ. ಆದ್ದರಿಂದ ಇಲ್ಲಿ ತಾರತಮ್ಯ ಅನ್ನುವ ಪ್ರಶ್ನೆಯೇ ಇಲ್ಲ. ಭಗವಂತನ ಸೃಷ್ಟಿಯ ಹಿಂದಿರುವ  ಭಗವಂತನ  ಸ್ವತಂತ್ರ್ಯ, ಆತನ ನಿಷ್ಪಕ್ಷಪಾತ, ಯಾವುದೇ ಪ್ರಭಾವಕ್ಕೊಳಗಾಗದಿರುವುದು, ತ್ರಿಗುಣಾತೀತತ್ವ, ಇವು ಭಗವಂತನ ಮೂಲಭೂತ ಸ್ವಭಾವ. ಇದರ ಅರಿವೇ ‘ಅಧ್ಯಾತ್ಮ’. ಭಗವಂತನ ಗುಣಧರ್ಮವನ್ನು ತಿಳಿದಾಗ ಅವನ ಸೃಷ್ಟಿ ಏನು ಎಂದು ಅರ್ಥವಾಗುತ್ತದೆ. ಅದೇ ಕರ್ಮ. ಭಗವಂತನ ಕ್ರಿಯೆಯಲ್ಲಿ ಜ್ಞಾನ-ಇಚ್ಚೆ-ಕೃತಿ ಎನ್ನುವ ಮೂರು ಹಂತವಿಲ್ಲ. ಆತ ಇಚ್ಚಿಸುವುದೇ ಕ್ರಿಯೆ. ಇದನ್ನು ತಿಳಿಯುವುದು ‘ಕರ್ಮದ ಅರಿವು’. ಹೀಗೆ ಭಗವಂತನ ಸ್ವರೂಪದ, ಗುಣಧರ್ಮದ ಮತ್ತು ಕ್ರಿಯೆಯ  ಅರಿವೇ –ಬ್ರಹ್ಮ ಅಧ್ಯಾತ್ಮ ಮತ್ತು ಕರ್ಮ.  

Sunday, July 10, 2011

Bhagavad Geeta Kannada Chapter-08 Shloka 1-2

ಅಧ್ಯಾಯ ಎಂಟು

ಏಳನೆಯ ಅಧ್ಯಾಯದ ಕೊನೆಯಲ್ಲಿ ಕೃಷ್ಣ ಸಂಕ್ಷಿಪ್ತವಾಗಿ ಆರು ಮಹತ್ವದ ಸಂಗತಿಯನ್ನು ಮನುಷ್ಯ ತಿಳಿದಿರಬೇಕು ಎಂದು ಹೇಳಿದ್ದ. ಅಧ್ಯಾತ್ಮ, ಅಧಿಭೂತ, ಅಧಿದೈವ, ಅಧಿಯಜ್ಞ, ಬ್ರಹ್ಮ, ಕರ್ಮ-ಈ ಆರು ಸಂಗತಿಗಳನ್ನು ತಿಳಿದರೆ ಅದರಿಂದ ಮೇಲಕ್ಕೆ ಏರುವ ಇನ್ನೊಂದು ಮೆಟ್ಟಲಿರುವುದಿಲ್ಲ ಎಂದಿದ್ದ ಕೃಷ್ಣ.
ಅಧಿಭೂತ ಎಂದರೆ ಭೌತಿಕ ಪ್ರಪಂಚ, ಅಧ್ಯಾತ್ಮ ಎಂದರೆ ಜಡದೊಳಗಿರುವ ಚೈತನ್ಯ,  ಅಧಿದೈವ ಎಂದರೆ ಚೇತನವನ್ನು ನಿಯಂತ್ರಿಸುವ ದೇವತಾಶಕ್ತಿ, ಅಧಿಯಜ್ಞ ಎಂದರೆ ದೇವತೆಗಳನ್ನು ನಿಯಂತ್ರಿಸುವ ಭಗವಂತ, ಈ ಅಧಿಯಜ್ಞ ಜಗತ್ತಿನಲ್ಲೆಲ್ಲಾ ತುಂಬಿದ್ದಾನೆ ಎನ್ನುವುದು ಬ್ರಹ್ಮ ಕಲ್ಪನೆ, ಅವನಿಂದಲೇ ಎಲ್ಲಾ ಕ್ರಿಯೆಗಳೂ ನಡೆಯುತ್ತವೆ-ಆತನೇ ಸೂತ್ರದಾರ. ಈ ಅರಿವು ಸಾವಿನ ಸಮಯದಲ್ಲೂ ಎಚ್ಚರವಾಗಿರಬೇಕು ಆಗ ಆ ಸಾವು ಮಾಂಗಲಿಕ. ಇಷ್ಟು ವಿಚಾರವನ್ನು ನಾವು ಹಿಂದಿನ ಅಧ್ಯಾಯದಲ್ಲಿ ನೋಡಿದ್ದೇವೆ.
ಸೂಕ್ಷ್ಮವಾಗಿ ಏಳನೇ ಅಧ್ಯಾಯದ ಕೊನೆಯ ಎರಡು ಶ್ಲೋಕಗಳನ್ನು ಗಮನಿಸಿದರೆ ಅಲ್ಲಿ ಕೃಷ್ಣ ‘ತತ್ ಬ್ರಹ್ಮ’(ಆ ಬ್ರಹ್ಮತತ್ವ) ಎಂದಿದ್ದಾನೆ. ಕೊನೆಯಲ್ಲಿ  ‘ನನ್ನನ್ನು(ಮಾಂ) ಸೇರುತ್ತಾರೆ’ ಎಂದಿದ್ದಾನೆ. ಇಲ್ಲಿ ನಮಗೆ ಕೃಷ್ಣ ಮತ್ತು ಬ್ರಹ್ಮತತ್ವ ಬೇರೆ ಬೇರೆಯೋ ಅನ್ನುವ ಪ್ರಶ್ನೆ ಬರುತ್ತದೆ. ಇನ್ನು ಇಲ್ಲಿ ಕೃಷ್ಣ ಬಳಸಿದ ಪದಗಳನ್ನು ನೋಡಿದಾಗ ಅಲ್ಲಿ ಅನೇಕ ಅರ್ಥವನ್ನು ಕಾಣುತ್ತೇವೆ. ಉದಾಹರಣೆಗೆ ಬ್ರಹ್ಮ ಎನ್ನುವ ಪದಕ್ಕೆ ಸಂಸ್ಕೃತದಲ್ಲಿ ಅನೇಕ ಅರ್ಥವಿದೆ. ಬ್ರಹ್ಮ ಎಂದರೆ ಜೀವ, ಚತುರ್ಮುಖ ಬ್ರಹ್ಮ, ಭಗವಂತ, ವೇದಗಳು, ಇತ್ಯಾದಿ. ಅಧ್ಯಾತ್ಮ ಎನ್ನುವಲ್ಲಿ ‘ಆತ್ಮ’ ಪದಕ್ಕೆ ಶರೀರ, ಮನಸ್ಸು, ಜೀವ, ಪರಮಾತ್ಮ ಇತ್ಯಾದಿ ಅರ್ಥಗಳಿವೆ. ‘ಕರ್ಮ’ ಎನ್ನುವಲ್ಲಿ ಪ್ರಾರಾಬ್ಧಕರ್ಮ ಮತ್ತು ಕರ್ತವ್ಯಕರ್ಮ ಎನ್ನುವ ಎರಡು ಅರ್ಥ ಕಾಣುತ್ತದೆ. ಅಧಿಭೂತ ಎನ್ನುವಲ್ಲಿ ‘ಭೂತ’ ಪದಕ್ಕೆ ಜಡ ಹಾಗು ಚೇತನ ಎನ್ನುವ ಎರಡು ಅರ್ಥವನ್ನು ಕಾಣಬಹುದು. ಇದೇ ರೀತಿ ಅಧಿದೈವ ಎಂದರೆ ದೈವರಲ್ಲಿ(ದೇವತೆಗಳಲ್ಲಿ) ಅಧಿಕನಾದವನು ಅಧಿದೈವ, ದೇವತೆಗಳಿಗೆ ಸಂಬಂಧಪಟ್ಟಿದ್ದೂ ಕೂಡಾ ಅಧಿದೈವ. ಹೀಗೆ ಈ ಆರೂ ಶಬ್ದಗಳು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಆಯಾಮದಲ್ಲಿ ತೆರೆದುಕೊಳ್ಳುವಂತದ್ದು. ಹೀಗಿರುವಾಗ ಕೃಷ್ಣ ಹೇಳಿರುವ ಈ ಆರು ಸಂಗತಿಯನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ.
ಕೊನೆಯ ಶ್ಲೋಕದಲ್ಲಿ ಕೃಷ್ಣ ಹೇಳಿದ “ನಮ್ಮ ಜೀವನ ಪಯಣದ ಕೊನೆಯ ಕ್ಷಣದಲ್ಲಿ ಈ ಅರಿವನ್ನು ಉಳಿಸಿಕೊಂಡಿರಬೇಕು” ಎಂದು. ಅದು ಹೇಗೆ ಸಾಧ್ಯ ? ದೇಹತ್ಯಾಗ ಮಾಡುವಾಗ ಮಾನಸಿಕ ಚಿಂತನೆ ಹೇಗಿರಬೇಕು? ದೇಹತ್ಯಾಗ ನಂತರ ಜೀವ ಯಾವ ಮಾರ್ಗದಲ್ಲಿ ಚಲಿಸುತ್ತದೆ? ಇತ್ಯಾದಿ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಎಂಟನೇ ಅಧ್ಯಾಯ ನಮ್ಮೆಲ್ಲರ ಪ್ರತಿನಿಧಿ ಅರ್ಜುನ ಈ ನಮ್ಮ ಪ್ರಶ್ನೆಯನ್ನು ಶ್ರೀಕೃಷ್ಣನಲ್ಲಿ ಕೇಳುವುದರೊಂದಿಗೆ ಪ್ರಾರಂಭವಾಗುತ್ತದೆ.                
ಅರ್ಜುನ ಉವಾಚ ।
ಕಿಂ ತದ್ ಬ್ರಹ್ಮ  ಕಿಮಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ ।
ಅಧಿಭೂತಂ ಚ ಕಿಂ ಪ್ರೋಕ್ತಮಧಿದೈವಂ ಕಿಮುಚ್ಯತೇ            ॥೧॥

ಅರ್ಜುನ ಉವಾಚ
ಕಿಮ್  ತತ್  ಬ್ರಹ್ಮ  ಕಿಮ್ ಅಧ್ಯಾತ್ಮಮ್  ಕಿಮ್  ಕರ್ಮ ಪುರುಷೋತ್ತಮ ।
ಅಧಿಭೂತಮ್  ಚ ಕಿಮ್  ಪ್ರೋಕ್ತಮ್ ಅಧಿದೈವಮ್  ಕಿಮ್ ಉಚ್ಯತೇ  -ಅರ್ಜುನ ಕೇಳಿದನು: ಪುರುಷೋತ್ತಮ, ಯಾವುದು ಆ ‘ಬ್ರಹ್ಮ’? ‘ಅಧ್ಯಾತ್ಮ’ವೆಂದರೆ ಏನು? ಏನು ‘ಕರ್ಮ’ವೆಂದರೆ? ಯಾವುದನ್ನು ‘ಅಧಿಭೂತ’ವೆನ್ನುತ್ತಾರೆ? ಯಾವುದನ್ನು ‘ಅಧಿದೈವ’ವೆನ್ನುತ್ತಾರೆ?

ಅರ್ಜುನ ಕೃಷ್ಣನನ್ನು ಕೇಳುತ್ತಾನೆ “ ತತ್ ಬ್ರಹ್ಮ(ಆ ಬ್ರಹ್ಮತತ್ವ) ಅಂದರೆ ಯಾವುದು? ಅಧ್ಯಾತ್ಮ ಅಂದರೆ ಏನು? ಮತ್ತು ಕರ್ಮ ಅಂದರೇನು?”  ಎಂದು. ಇಲ್ಲಿ ವ್ಯಾಸರು ಅರ್ಜುನನ ಈ ಪ್ರಶ್ನೆಯ ಹಿಂದಿನ ಭಾವನೆಯನ್ನು “ಪುರುಷೋತ್ತಮ” ಎನ್ನುವ ವಿಶೇಷಣದಲ್ಲಿ ಹಿಡಿದು ನಮ್ಮ ಮುಂದಿಟ್ಟಿದ್ದಾರೆ. ಪುರುಷೋತ್ತಮ ಎಂದರೆ ಕ್ಷರ(ಜೀವ)ವನ್ನು ಮೀರಿನಿಂತವನು. ಅಕ್ಷರ(ಶ್ರೀತತ್ವ)ಕ್ಕಿಂತಲೂ ಹಿರಿಯನು. “ಕ್ಷರ-ಅಕ್ಷರವನ್ನು ಮೀರಿ ನಿಂತ  ನೀನೇ ಪುರುಷೋತ್ತಮ, ನೀನಲ್ಲದೆ ನಿನ್ನಿಂದ ಹಿರಿದಾದ ತತ್ವ ಇನ್ನೊಂದಿಲ್ಲ, ಆದ್ದರಿಂದ ನನಗೆ ತಿಳಿದಂತೆ ನೀನೇ ಬ್ರಹ್ಮ. ಇದರ ವಿವರಣೆಯನ್ನು ನಿನ್ನಿಂದ ತಿಳಿಯಬೇಕು”  ಎನ್ನುವ ಭಾವವನ್ನು ಅರ್ಜುನ ವ್ಯಕ್ತಪಡಿಸಿದ ಎನ್ನುವುದನ್ನು ತಿಳಿಸುವ ವಿಶೇಷಣ  ‘ಪುರುಷೋತ್ತಮ’. ಅರ್ಜುನ ಕೇಳುತ್ತಾನೆ “ಯಾವುದನ್ನು ಅಧಿಭೂತವೆನ್ನುತ್ತಾರೆ?  ಯಾವುದನ್ನು ಅಧಿದೈವವೆನ್ನುತ್ತಾರೆ?” ಎಂದು.

ಅಧಿಯಜ್ಞಃ ಕಥಂ ಕೋSತ್ರ ದೇಹೇSಸ್ಮಿನ್ ಮಧುಸೂದನ ।
ಪ್ರಯಾಣಕಾಲೇ ಚ ಕಥಂ ಜ್ಞೇಯೋSಸಿ ನಿಯತಾತ್ಮಭಿಃ        ॥೨॥

ಅಧಿಯಜ್ಞಃ ಕಥಮ್ ಕಃ ಅತ್ರ ದೇಹೇ ಅಸ್ಮಿನ್ ಮಧುಸೂದನ ।
ಪ್ರಯಾಣ ಕಾಲೇ ಚ ಕಥಮ್  ಜ್ಞೇಯಃ ಅಸಿ ನಿಯತ ಆತ್ಮಭಿಃ –ಮಧುಸೂದನ, ಇಲ್ಲಿ ಈ ದೇಹದಲ್ಲಿ ‘ಅಧಿಯಜ್ಞ’ಯಾರು? ಮತ್ತು ಹೇಗೆ? ಬಗೆ ಹಿಡಿತದಲ್ಲಿಟ್ಟವರು ಕೊನೆಯ ಕಾಲದಲ್ಲಿ ನಿನ್ನನ್ನು ಹೇಗೆ ನೆನೆಯಬೇಕು?

ಮುಂದುವರಿದು ಅರ್ಜುನ ಕೇಳುತ್ತಾನೆ “ಅಧಿಯಜ್ಞ ಅಂದರೆ ಯಾರು?” ಎಂದು. ನಮ್ಮ ದೇಹದೊಳಗಿರುವ ಅಧಿಯಜ್ಞ ಯಾರು ಮತ್ತು ಹೇಗೆ? ಅಧಿಯಜ್ಞದ ಅರ್ಥವ್ಯಾಪ್ತಿ ಏನು? ಎನ್ನುವುದು ಅರ್ಜುನನ ಪ್ರಶ್ನೆ. ಇಲ್ಲಿ ಪುನಃ ವ್ಯಾಸರು “ಮಧುಸೂದನ” ಎನ್ನುವ ವಿಶೇಷಣವನ್ನು ಬಳಸಿ ಅರ್ಜುನನ ಪ್ರಶ್ನೆಯ ಭಾವನೆಯನ್ನು ನಮಗೆ ತಿಳಿಸುತ್ತಾರೆ.   “ಮಧುಸೂದನ” ಅನ್ನುವ ನಾಮಕ್ಕೆ ಎರಡು ಪ್ರಮುಖ ಅರ್ಥವಿದೆ. ‘ಮಧು’ ಅಂದರೆ ಆನಂದ(Inner bliss). ‘ಸೂದ’ ಎಂದರೆ ಸತ್ಕರ್ಮವನ್ನು ಮಾಡುವ ಸಾತ್ವಿಕರು. ಆದ್ದರಿಂದ ಮಧುಸೂದನ ಎಂದರೆ ಸಾತ್ವಿಕರೊಳಗಿದ್ದು ಅವರಿಗೆ ಆನಂದವನ್ನು ಕೊಡುವವನು ಎಂದರ್ಥ.  ‘ಸೂದ’ ಎಂದರೆ ನಾಶ ಎನ್ನುವ ಇನ್ನೊಂದು ಅರ್ಥವಿದೆ. ಆದ್ದರಿಂದ ದುರ್ಜನರ ಆನಂದವನ್ನು ನಾಶಮಾಡುವವನು ಮಧುಸೂದನ. “ನಮ್ಮೊಳಗೆ ಕೂತು ಆನಂದ ಕೊಡುವವನೂ ನೀನೇ, ದುಃಖ ಕೊಡುವವನೂ ನೀನೆ. ನಮ್ಮೊಳಗಿದ್ದು ಎಲ್ಲ ಯಜ್ಞಗಳನ್ನು ನಿಯಂತ್ರಿಸುವವನು ನೀನೆ. ಆದ್ದರಿಂದ ನೀನೇ ಅಧಿಯಜ್ಞ ಎನ್ನುವುದು ನನ್ನ ತಿಳುವಳಿಕೆ. ಇದನ್ನು ನನಗೆ ವಿವರಿಸು” ಎನ್ನುವ ಅರ್ಜುನನ ಭಾವವನ್ನು ಈ ವಿಶೇಷಣದ ಮೂಲಕ ವ್ಯಾಸರು ಇಲ್ಲಿ ವಿವರಿಸಿದ್ದಾರೆ. ಅರ್ಜುನ ಕೇಳುತ್ತಾನೆ “ನಮ್ಮ ಜೀವನದ ಕೊನೆಯ ಶ್ರೇಷ್ಠವಾದ ಯಾತ್ರೆಯಲ್ಲಿ ಜೀವದ ದೇಹ ನಿರ್ಗಮನದ ಅನುಸಂಧಾನ ಮತ್ತು ಹೋಗುವ ವಿವರವನ್ನು ತಿಳಿಸು” ಎಂದು.  
ಮೇಲಿನ ಶ್ಲೋಕದಲ್ಲಿ ಉಪಯೋಗಿಸಿದ ಪುರುಷೋತ್ತಮ ಮತ್ತು ಮಧುಸೂದನ ಎನ್ನುವ ಎರಡು ವಿಶೇಷಣದ ಹಿಂದಿನ ಅರ್ಥವನ್ನು ನೋಡಿದಾಗ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ-ಅರ್ಜುನನಿಗೆ ಈ ಆರು ಸಂಗತಿಯ  (ಪದಗಳ) ನಿಜವಾದ ಅರ್ಥ ತಿಳಿದಿತ್ತು ಎಂದು. ಆದರೂ ಅದರ ವಿವರವನ್ನು ಭಗವಂತನಿಂದ ತಿಳಿದುಕೊಳ್ಳುವ ಉದ್ದೇಶದಿಂದ ಆತ ಈ ಪ್ರಶ್ನೆಯನ್ನು ಕೃಷ್ಣನಲ್ಲಿ ಕೇಳುತ್ತಾನೆ. ಸಾಮಾನ್ಯವಾಗಿ ತಿಳಿದವರು ತಮಗೆ ತಿಳಿದಿದ್ದರೂ ಕೂಡಾ ಇನ್ನೊಬ್ಬರಿಗೆ ತಿಳಿಸುವ ಉದ್ದೇಶದಿಂದ ಈ ರೀತಿ ಪ್ರಶ್ನೆ ಮಾಡುತ್ತಾರೆ. ಇಲ್ಲಿ ಅರ್ಜುನ ತಾನು ತಿಳಿದಿರುವುದನ್ನು ದೃಡೀಕರಿಸಿಕೊಳ್ಳುವುದಕ್ಕೊಸ್ಕರ ಮತ್ತು ಇಡೀ ಮಾನವ ಜನಾಂಗಕ್ಕೆ ಭಗವಂತನ ವಿವರಣೆಯನ್ನು ತಿಳಿಸುವುದಕ್ಕೋಸ್ಕರ ಈ ಪ್ರಶ್ನೆಯನ್ನು ಕೃಷ್ಣನ ಮುಂದಿಟ್ಟಿದ್ದಾನೆ.
ನಮಗೆ ಅನಿಸಬಹುದು “ಯುದ್ಧರಂಗದಲ್ಲಿ ನಿಂತಿರುವ ಅರ್ಜುನ ಏಕೆ ಇಂತಹ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ? ಇಲ್ಲಿ ಅದರ ಅಗತ್ಯ ಏನಿದೆ?”  ಎಂದು. ಸಾಮಾನ್ಯವಾಗಿ ಯುದ್ಧರಂಗದಲ್ಲಿ ನಿಂತವರಿಗೆ ಸಾವು ಕಾಡುವಷ್ಟು ಇನ್ನ್ಯಾರನ್ನೂ ಕಾಡುವುದಿಲ್ಲ. ಅವರನ್ನು ಪ್ರತಿಕ್ಷಣ ಸಾವು ನಿರೀಕ್ಷಿಸುತ್ತಿರುತ್ತದೆ. ಅವರು ಸಾವು ಮತ್ತು ಸಾವಿನ ಆಚೆಗಿನ ಸ್ಥಿತಿಯ ಬಗ್ಗೆ ಜಾಗೃತರಾಗಿರುತ್ತಾರೆ. ಸಾವಿನಿಂದಾಚೆಗೆ ಏನು ಎನ್ನುವುದು ಸೈನಿಕರಿಗೆ ಬಹಳ ಮಹತ್ವದ್ದಾಗಿರುತ್ತದೆ.  ಈವರೆಗಿನ ಕೃಷ್ಣಾರ್ಜುನ ಸಂವಾದದಲ್ಲಿ ಎಲ್ಲಿಯೂ ಕೃಷ್ಣ ಅರ್ಜುನನಿಗೆ ಗೆಲುವಿನ ಭರವಸೆಯನ್ನು ಕೊಟ್ಟಿಲ್ಲ. ಧರ್ಮದ ಪರ ಹೋರಾಡುವುದು ನಿನ್ನ ಕರ್ತವ್ಯ ಅಂದಿದ್ದಾನೆ ಅಷ್ಟೇ. ಆದ್ದರಿಂದ ಯುದ್ಧರಂಗದಲ್ಲಿರುವ ಅರ್ಜುನನಿಗೆ ಸಾವು ಮತ್ತು ಸಾವಿನಿಂದಾಚೆಗೆ ಏನು ಎನ್ನುವುದು ಬಹಳ ಮುಖ್ಯ ವಿಚಾರ.
ಅರ್ಜುನನ ಪ್ರಶ್ನೆಗೆ ಭಗವಂತನ ಉತ್ತರವೇ ಎಂಟನೆಯ ಅಧ್ಯಾಯದ ಉಳಿದ ಭಾಗ.