Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, April 3, 2011

Bhagavad Gita Kannada Chapter-03 Shloka 33-35


ಸದೃಶಂ ಚೇಷ್ಟತೇ ಸ್ವಸ್ಯಾಃ ಪ್ರಕೃತೇರ್ಜ್ಞಾನವಾನಪಿ    ।
ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ        ॥೩೩॥

ಸದೃಶಮ್  ಚೇಷ್ಟತೇ ಸ್ವಸ್ಯಾಃ ಪ್ರಕೃತೇಃ  ಜ್ಞಾನವಾನ್ ಅಪಿ
ಪ್ರಕೃತಿಮ್  ಯಾಂತಿ ಭೂತಾನಿ ನಿಗ್ರಹಃ ಕಿಮ್  ಕರಿಷ್ಯತಿ--ಎಷ್ಟು ತಿಳಿದವನಾದರೂ ತನ್ನ ಸಂಸ್ಕಾರಕ್ಕೆ (ಸ್ವಭಾವಕ್ಕೆ) ತಕ್ಕಂತೆಯೆ ನಡೆದುಕೊಳ್ಳುತ್ತಾನೆ. ಎಲ್ಲ ಜೀವಿಗಳೂ ಸಂಸ್ಕಾರದ(ಸ್ವಭಾವದ) ಕೈಗೊಂಬೆಗಳು. ಅದುಮಿಟ್ಟರೇನು ಬಂತು.

ಯಾರು ಎಷ್ಟೇ  ಉಪದೇಶ ಮಾಡಿದರೂ ಇಡೀ ಜಗತ್ತಿನಲ್ಲಿ ಎಲ್ಲರೂ ಒಂದೇ ಮಾರ್ಗ ಅನುಸರಿಸುವುದು ಎಂದೂ ಸಾಧ್ಯವಿಲ್ಲ. ಇದಕ್ಕೆ ಕಾರಣ ನಮ್ಮ ನಡೆ, ನಮ್ಮ ಸಂಸ್ಕಾರ, ಹಾಗು ನಮ್ಮ ಜೀವ ಸ್ವಭಾವ. ನಾವು ನಮ್ಮ  ಪೂರ್ವ ಸಂಸ್ಕಾರವನ್ನು ನೋಡಿದರೆ-ಸಾತ್ವಿಕ,ರಾಜಸ,ತಾಮಸವಾದ ಅನೇಕ ಅನುಭವಗಳು ಜನ್ಮ-ಜನ್ಮಾಂತರಗಳಿಂದ ಸುಪ್ತಪ್ರಜ್ಞೆಯಲ್ಲಿರುತ್ತವೆ. ಅನೇಕ ಜನ್ಮಗಳ ಮೂಲಕ ಹರಿದು ಬಂದ ಈ ಜೀವಕ್ಕೆ ಅನೇಕ ಜನ್ಮಗಳ ಅನುಭವದ ಸಂಸ್ಕಾರವಿದೆ. ಒಂದೇ ಜನ್ಮವನ್ನು ನೋಡಿದರೂ ಕೂಡಾ,  ಬೆಳೆದು ಬಂದ ವಾತಾವರಣದ ಛಾಪು,  ಈ ಪ್ರಭಾವ, ಸದಾ ನಮ್ಮ ಮೇಲಿರುತ್ತದೆ. ಇದಲ್ಲದೆ ಪ್ರತೀ ವ್ಯಕ್ತಿಗೆ ಆತನದೇ ಆದ ಜೀವಸ್ವಭಾವವಿರುತ್ತದೆ. ಆತ ಸದಾ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾನೆ. ಮೆಣಸಿನ ಗಿಡ ಹೇಗೆ ಸಿಹಿಯಾದ ಹಣ್ಣನ್ನು ನೀಡಲಾರದೋ ಹಾಗೇ ಒಬ್ಬ ವ್ಯಕ್ತಿಯ ಜೀವಸ್ವಭಾವವನ್ನು ಬದಲಿಸುವುದು ಅಸಾಧ್ಯ. ಸ್ವಭಾವ ಮತ್ತು ಪ್ರಭಾವದ ಸಮ್ಮಿಶ್ರಣ ಈ ಬದುಕು.
ಈ ಮೇಲಿನ ವಿಶ್ಲೇಷಣೆಯನ್ನು ನೋಡಿದಾಗ ಸಹಜವಾಗಿ ನಮಗೊಂದು ಪ್ರಶ್ನೆ ಮೂಡುತ್ತದೆ. “ಜೀವ ಸ್ವಭಾವದಂತೆ ಜೀವದ ನಡೆ; ಸ್ವಭಾವದಂತೆ ಕ್ರಿಯೆ; ಸ್ವಭಾವಕ್ಕೆ ತಕ್ಕಂತೆ ಎಲ್ಲವೂ ಆಗುತ್ತದೆ. ಹಾಗಾದರೆ ಪ್ರಯತ್ನ ಏಕೆ ಮಾಡಬೇಕು?” ಎಂದು.  ಏಕೆಂದರೆ ಸದಾ ಪ್ರಯತ್ನ ಮಾಡುವುದರಿಂದ ಸಂಸ್ಕಾರದಿಂದ ಅಥವಾ  ಪ್ರಭಾವದಿಂದ ಈಚೆ ಬರಲು ಸಾಧ್ಯ. ಸಹಜ ಸ್ವಭಾವದಲ್ಲಿ ನಿಲ್ಲುವ ತನಕ ಪ್ರಭಾವದಿಂದ ಪಾರಾಗುವ ನಿರಂತರ ಪ್ರಯತ್ನ ಅಗತ್ಯ. ನಿರಂತರ ಅಧ್ಯಾತ್ಮ ಸಾಧನೆ  ನಮ್ಮ ಸಹಜ ಸ್ವಭಾವವನ್ನು ಅಭಿವ್ಯಕ್ತಗೊಳಿಸಲು ಸಹಾಯ ಮಾಡುತ್ತದೆ.       

ಇಂದ್ರಿಯಸ್ಯೇಂದ್ರಿಯಸ್ಯಾರ್ಥೇ ರಾಗದ್ವೇಷೌ ವ್ಯವಸ್ಥಿತೌ   ।
ತಯೋರ್ನ ವಶಮಾಗಚ್ಛೇತ್ ತೌ  ಹ್ಯಸ್ಯ ಪರಿಪಂಥಿನೌ        ॥೩೪॥

ಇಂದ್ರಿಯಸ್ಯ ಇಂದ್ರಿಯಸ್ಯಅರ್ಥೇ ರಾಗ ದ್ವೇಷೌ ವ್ಯವಸ್ಥಿತೌ
ತಯೋಃ ನ ವಶಮ್ ಅಗಚ್ಛೇತ್ ತೌ ಹಿ ಅಸ್ಯ ಪರಿಪಂಥಿನೌ--ಒಂದೊಂದು ಇಂದ್ರಿಯದ ವಿಷಯದಲ್ಲೂ ಒಲವು -ಹಗೆತನಗಳು ತುಂಬಿವೆ. ಅವುಗಳಿಗೆ ಬಲಿಯಾಗಬಾರದು. ಅವೇ ಸಾಧಕನ ಹಗೆಗಳು.

ನಮ್ಮ ಇಂದ್ರಿಯಗಳಲ್ಲಿ ಎರಡು ವಿಷಯಗಳು ನಮ್ಮ ಶತ್ರುಗಳಾಗಿ ಕೆಲಸ ಮಾಡುತ್ತವೆ. ಅವುಗಳೆಂದರೆ ರಾಗ(ಇಷ್ಟ ಪಡುವುದು, Attachment); ಹಾಗು ಬೇಕು ಎನ್ನುವ ಬಯಕೆ(ಕಾಮ, Desire). ಇಷ್ಟಪಡುವುದು-ರಾಗ, ಅದರಿಂದ ಕಾಮ.  ಇಷ್ಟ ಆಗದೆ- ದ್ವೇಷ, ಅದರಿಂದ ಕೋಪ. ಒಂದು ವಸ್ತುವನ್ನು ಬಯಸಿದೆವು, ಅದು ಸಿಗಲಿಲ್ಲ ಆಗ ಸಿಟ್ಟು. ಅದು ಇನ್ನೊಬ್ಬರಿಗೆ ಸಿಕ್ಕಿತು ಆಗ ದ್ವೇಷ, ಸಿಕ್ಕಿತು ಆದರೆ ಅದು ನಾವು ಅಂದುಕೊಂಡಂತೆ ಇಲ್ಲ ಆಗ ಕೋಪ.  ಮೂಲಭೂತವಾಗಿ ಇರತಕ್ಕ ದೊಡ್ಡ ದೋಷ ಬಯಕೆ. ಯಾವುದನ್ನು ಹೆಚ್ಚು ಹೆಚ್ಚು ಬಯಸುತ್ತೇವೋ ಅದರಿಂದ ಹೆಚ್ಚು ಹೆಚ್ಚು ದುಃಖಕ್ಕೀಡಾಗುತ್ತೇವೆ. ಬಯಕೆಯನ್ನು ಸೀಮಿತಗೊಳಿಸದೆ ಮೇಲೆ ಬರಲು ಸಾಧ್ಯವಿಲ್ಲ. ನಮ್ಮ ಪ್ರತಿಯೊಂದು ಇಂದ್ರಿಯದಲ್ಲಿ ರಾಗ-ದ್ವೇಷ; ಕಾಮ-ಕ್ರೋಧ ತುಂಬಿರುತ್ತದೆ. ಆದರೆ ನಾವು ಎಂದೂ ಈ ಬೇಕು ಬೇಡಗಳಿಗೆ, ರಾಗ ದ್ವೇಷಗಳಿಗೆ ವಶವಾಗಬಾರದು. ನನ್ನದು ಎನ್ನುವ ಅತಿ ಅನುರಾಗ (Possessiveness) ನಮ್ಮನ್ನು ಅಧಃಪತನಕ್ಕೆ ಕೊಂಡೊಯ್ಯುತ್ತದೆ. ನನಗೆ ಬೇಕು, ಅದು ಇನ್ನೊಬ್ಬರಿಗೆ ಸಿಗಬಾರದು ಎನ್ನುವುದು ಪ್ರತೀ ಇಂದ್ರಿಯದಲ್ಲಿ ತುಂಬಿದೆ. ಇದು ನಮ್ಮ ಪ್ರವೃತ್ತಿಯ ಹಿಂದಿರುವ ಅಹಂಕಾರ(Ego). ಕೃಷ್ಣ ಹೇಳುತ್ತಾನೆ: "ಎಂದೂ ಈ ಬೇಕು ಬೇಡಗಳ ದಾಸನಾಗಬೇಡ, ಅವು ನಿನ್ನ ಸಾಧನೆಯ ದಾರಿಗೆ ಅಡ್ಡಗೋಡೆ. ಅವು ನಿನ್ನ ನಿಜ ಶತ್ರುಗಳು" ಎಂದು.

ನಾವು  ಈ ಶತ್ರುಗಳಿಗೆ ಬಲಿಯಾಗದೆ, ನಮ್ಮ ಇಂದ್ರಿಯಗಳನ್ನು ನಾವೇ ವಿಶ್ಲೇಷಿಸಬೇಕು. ನನ್ನ ಇಂದ್ರಿಯ ಏನನ್ನು ಬಯಸುತ್ತಿದೆ, ಏಕೆ ಬಯಸುತ್ತಿದೆ, ಅದರ ಹಿಂದಿರುವ ಸ್ವಾರ್ಥ-ದ್ವೇಷವೇನು, ಇದು ನನ್ನನ್ನು ದಾರಿತಪ್ಪಿಸುವ ಬಯಕೆಯೋ ಅಥವಾ ಮೇಲಕ್ಕೆ ತರುವ ಬಯಕೆಯೋ? ಹೀಗೆ ವಿಚಾರ ಮಾಡಿ ನಮ್ಮ ಬಯಕೆಗಳ ಶುದ್ಧೀಕರಣ ಮಾಡಿಕೊಳ್ಳಬೇಕು. ವೇದದಲ್ಲಿ ಹೇಳುವಂತೆ  'ಹಿಟ್ಟನ್ನು ಸಾರಣಿಗೆಯಿಂದ ಬೇರ್ಪಡಿಸುವಂತೆ ನಾವು ನಮ್ಮ ಮನಸ್ಸೆಂಬ ಸಾರಣಿಗೆಯಿಂದ ನಮ್ಮ ಬಯಕೆಗಳ ಶುದ್ಧೀಕರಣ ಮಾಡಿಕೊಳ್ಳಬೇಕು. ಆಗ ಅಲ್ಲಿ ಸ್ನೇಹದ ಬೆಸುಗೆ ಇರುತ್ತದೆ. ಅಲ್ಲಿ ಲಕ್ಷ್ಮಿ ಸದಾ ನೆಲೆಸುತ್ತಾಳೆ'.

ಇಲ್ಲಿ ಕೃಷ್ಣ  ಅರ್ಜುನನಿಗೆ ಯುದ್ಧ ಮಾಡುವಾಗ ಕೂಡಾ ರಾಗ-ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡ, ಕೇವಲ ನ್ಯಾಯಾನ್ಯಾಯದ ಹೋರಾಟ ಎನ್ನುವ ನಿರ್ಲಿಪ್ತತೆಯಿಂದ ಹೋರಾಡು ಎನ್ನುತ್ತಿದ್ದಾನೆ! ಅಂದರೆ ದುರ್ಯೋಧನ ಸತ್ತಾಗ ಸಂತೋಷ ಬೇಡ ಸ್ವಂತ ಮಗ ಸತ್ತಾಗ ದುಃಖ ಬೇಡ ಎನ್ನುವ ಕಿವಿಮಾತಿದು! 

ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ ।
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ          ॥೩೫॥

ಶ್ರೇಯಾನ್ ಸ್ವ ಧರ್ಮಃ ವಿಗುಣಃ ಪರಧರ್ಮಾತ್ ಸು ಅನುಷ್ಠಿತಾತ್
ಸ್ವಧರ್ಮೇ ನಿಧನಮ್  ಶ್ರೇಯಃ ಪರಧರ್ಮಃ ಭಯ ಆವಹಃ-- ತನ್ನ ಸ್ವಭಾವಕ್ಕೆ ಪರಕೀಯವಾದ ಧರ್ಮವನ್ನು ಚೆನ್ನಾಗಿ ಆಚರಿಸುವುದಕ್ಕಿಂತಲೂ, ಅರೆಬರೆಯಾಗಿಯಾದರೂ ಸಹಜ ಧರ್ಮವನ್ನು ಆಚರಿಸುವುದು ಮಿಗಿಲು.
 ಸ್ವಭಾವ ಸಹಜ ಧರ್ಮದಲ್ಲಿ ಸಾವಾದರೂ ಮೇಲು. ಪರಕೀಯ ಧರ್ಮ ಅದಕ್ಕಿಂತ ಭಯಂಕರ.

ಹಿಂದೆ ಹೇಳಿದಂತೆ ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಸ್ವಭಾವವಿರುತ್ತದೆ ಹಾಗು ಅದನ್ನು ಬದಲಿಸಲು ಬರುವುದಿಲ್ಲ. ಜೀವ ಸ್ವಭಾವಕ್ಕನುಗುಣವಾಗಿ ನಮ್ಮ ಧರ್ಮ, ಅದು ಸ್ವಧರ್ಮ. ಇದು ಸಹಜ ಕ್ರಿಯೆ.  ನಮ್ಮ ಸಹಜ ಸ್ವಭಾವ ಯಾವುದೋ ಅದನ್ನು ನಾವು ಮಾಡಬೇಕೇ ವಿನಃ ಅನ್ಯವನ್ನಲ್ಲ. ಈ ಕಾರಣಕ್ಕಾಗಿ ತಂದೆ-ತಾಯಿ ತಮ್ಮ ಅಭಿರುಚಿಯನ್ನು ಮಕ್ಕಳ ಮೇಲೆ ಹೇರದೆ, ಮಕ್ಕಳ ನಿಜ ಸ್ವಭಾವವನ್ನು ಗುರುತಿಸಿ ಅದಕ್ಕನುಗುಣವಾಗಿ ಅವರ ಭವಿಷ್ಯವನ್ನು ರೂಪಿಸಬೇಕು. ಇಲ್ಲದಿದ್ದರೆ ಅವರ ಭವಿಷ್ಯವನ್ನು ಹಾಳು ಮಾಡಿದಂತಾಗುತ್ತದೆ.  ಮಕ್ಕಳ ಪ್ರತಿಭೆ ಅವರ ಸಹಜವಾದ ಸ್ವಭಾವದಲ್ಲಿದೆ.  ಪ್ರತಿಯೊಬ್ಬನೂ ತನ್ನ ಜೀವ ಸ್ವಭಾವಕ್ಕನುಗುಣವಾಗಿ ಕಾರ್ಯ ನಿರ್ವಹಿಸಬೇಕೇ ಹೊರತು ಇನ್ಯಾರದ್ದೋ  ಧರ್ಮವನ್ನು ಅನುಸರಿಸಿ ಅಲ್ಲ.  ಇಲ್ಲಿ ಕೃಷ್ಣ ಹೇಳುತ್ತಾನೆ "ನಿನ್ನ ಸ್ವಧರ್ಮ ಆಚರಣೆಯಲ್ಲಿ ನ್ಯೂನತೆ ಇದ್ದರೂ, ಅದು ಪರಕೀಯ ಧರ್ಮವನ್ನು ಆಚರಿಸುವುದಕ್ಕಿಂತ ಶ್ರೇಷ್ಠ" ಎಂದು. ಪರ ಧರ್ಮವನ್ನು ಎಷ್ಟು ಪರಿಪೂರ್ಣವಾಗಿ ಆಚರಿಸಿದರೂ ಅದರಿಂದ ಒಳಿತಿಲ್ಲ, ಅದು ಅಸಹ್ಯ ಅಥವಾ ಭಯಂಕರ.
ಇಲ್ಲಿ  ಯುದ್ಧ ಮಾಡುವುದು ಅರ್ಜುನನ ಸ್ವಭಾವ ಧರ್ಮ. ಅದನ್ನು ಬಿಟ್ಟು ಆತ ತಪಸ್ಸು ಮಾಡುವುದಕ್ಕೆ ಕಾಡಿಗೆ ಹೋಗುವುದು ಆತನ ಸ್ವಧರ್ಮಕ್ಕೆ ವಿರುದ್ಧ. ಆದುದರಿಂದ ಸ್ವಧರ್ಮ ಪಾಲನೆ ಮಾಡು, ರಾಗ ದ್ವೇಷವನ್ನು ಬಿಟ್ಟು ಹೋರಾಡು ಎನ್ನುತ್ತಿದ್ದಾನೆ ಕೃಷ್ಣ.

Bhagavad Gita Kannada Chapter-03 Shloka 29-32


ಪ್ರಕೃತೇರ್ಗುಣ ಸಮ್ಮಾಢಾಃ ಸಜ್ಜಂತೇ  ಗುಣಕರ್ಮಸು    ।
ತಾನಕೃತ್ಸ್ನವಿದೋ ಮಂದಾನ್ ಕೃತ್ಸ್ನವಿನ್ನ ವಿಚಾಲಯೇತ್ ॥೨೯॥

ಪ್ರಕೃತೇಃ ಗುಣ ಸಮ್ಮಾಢಾಃ ಸಜ್ಜಂತೇ  ಗುಣಕರ್ಮಸು
ತಾನ್ ಅಕೃತ್ಸ್ನವಿದಃ ಮಂದಾನ್ ಕೃತ್ಸ್ನವಿತ್ ನ  ವಿಚಾಲಯೇತ್--ಪ್ರಕೃತಿಯ ಅಂಗಾಂಗಗಳಾದ ಇಂದ್ರಿಯಾದಿಗಳಲ್ಲೇ ಮೈಮರೆತವರು ಇಂದ್ರಿಯಾದಿಗಳ ಕ್ರಿಯೆಯಲ್ಲೆ ಅಂಟಿಕೊಳ್ಳುತ್ತಾರೆ. ಪೂರ್ತಿ ನಿಜವನ್ನರಿಯದ ಅಂಥ ಮಂದಿಯನ್ನು ಪೂರ್ತಿ ಅರಿತವರು ಗೊಂದಲಗೆಡಿಸಬಾರದು.

ಪ್ರಕೃತಿಯ ಗುಣಭೂತವಾಗಿರುವ ಇಂದ್ರಿಯ ಸುಖದಲ್ಲಿ ಮುಳುಗಿದವರು, ಮೂಲ ಪ್ರಕೃತಿಯ ತ್ರಿಗುಣದ ಮೋಹಕ್ಕೊಳಗಾಗಿ, ಸತ್ಯವನ್ನರಿಯದೆ, ಜೀವ ಸ್ವಭಾವದ ಗುಣ ಮೋಹದಲ್ಲಿದ್ದು, ತಾನು ಭಗವಂತನ ಗುಣದ ಅಧೀನ ಎನ್ನುವ ಎಚ್ಚರ ಇಲ್ಲದೆ ಇರುವವರನ್ನು ಕೃಷ್ಣ   'ಪ್ರಕೃತೇರ್ಗುಣ ಸಮ್ಮಾಢಾಃ' ಎಂದು ಕರೆದಿದ್ದಾನೆ.  ಇಂತವರು ಭಗವಂತನ ಗುಣ ಕರ್ಮವನ್ನು ತಮ್ಮದೇ ಎಂದು ಭ್ರಮಿಸಿಕೊಂಡು, 'ನಾನೇ ಎಲ್ಲಾ ನನ್ನಿಂದಲೇ ಎಲ್ಲ' ಎಂದು ಬದುಕುತ್ತಿರುತ್ತಾರೆ. ಇಂತವರಿಗೆ ಸತ್ಯವನ್ನು ಅಥವಾ ಪೂರ್ಣವನ್ನು ಅರಿಯುವ ಯೋಗ್ಯತೆ ಇರುವುದಿಲ್ಲ. ಅಂಥವರನ್ನು 'ಪೂರ್ಣವನ್ನು ಅರಿತವರು'  ಗೊಂದಲಗೆಡಿಸಲು ಹೋಗಬಾರದು. ಅವರಲ್ಲಿ ಸತ್ಯವನ್ನು ತಿಳಿಯುವ ಯೋಗ್ಯತೆ ಇದ್ದರೆ ಅವರು ಆ ಸ್ಥಿತಿಯಿಂದಾಚೆಗೆ ಬರುತ್ತಾರೆ. ಇಲ್ಲದ ಯೋಗ್ಯತೆಯನ್ನು ಯಾರೂ ಅವರಲ್ಲಿ ತುಂಬಿಸಲಾರರು, ಇದ್ದ ಯೋಗ್ಯತೆಯನ್ನು ಯಾರೊಬ್ಬರೂ ಕಸಿಯಲಾರರು. ಯಾರಿಗೆ ಸತ್ಯವನ್ನು ತಿಳಿಯುವ ಅಪೇಕ್ಷೆ ಇದೆ ಅವರೊಂದಿಗೆ ಸೇರಿ ಅವರ ಸಹವಾಸ ಮಾಡಿ ಅವರಿಂದ ಕಲಿಯಬಹುದು ಅಥವಾ ಅವರಿಗೆ ತಿಳಿಹೇಳಬಹುದು. 

ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮಚೇತಸಾ           ।
ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತಜ್ವರಃ ॥೩೦॥

ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯ ಅಧ್ಯಾತ್ಮ ಚೇತಸಾ          
ನಿರಾಶೀಃ ನಿರ್ಮಮಃ ಭೂತ್ವಾ ಯುಧ್ಯಸ್ವ ವಿಗತ ಜ್ವರಃ-ಎಲ್ಲ ಕರ್ಮಗಳನ್ನು ನನ್ನಲ್ಲಿ ಅರ್ಪಿಸಿ, ನನ್ನಲ್ಲೇ ಮನವಿಟ್ಟು, ಹಂಬಲ ತೊರೆದು, ಮಮಕಾರ ತೊರೆದು,ಚಳಿ ಬಿಟ್ಟು ಹೋರಾಡು.

ಕೃಷ್ಣ ಹೇಳುತ್ತಾನೆ "ನೀನು ಮಾಡುವ ಸರ್ವಕರ್ಮವನ್ನು ನನಗರ್ಪಿಸಿ ಕರ್ಮ ಮಾಡು" ಎಂದು.  ಇಲ್ಲಿ 'ಸಂನ್ಯಸ್ಯ' ಎನ್ನುವ ಪದ ಬಳಕೆಯಾಗಿದೆ. ನಾನು ಮಾಡಿದ್ದೆಲ್ಲವೂ ನಾನೇ ಮಾಡಿದ್ದಲ್ಲ. ಏನು ಕ್ರಿಯೆ ನನ್ನಿಂದಾಯಿತೋ ಅದು ನನ್ನ ಕೈಯಿಂದ ಭಗವಂತ ಮಾಡಿಸಿದ್ದು. ಏನು ನನ್ನ ಮೂಲಕ ನಡೆಯಿತು ಅದು ಭಗವಂತನ ಪೂಜೆ ಎನ್ನುವ  ಸಮರ್ಪಣಾ ಭಾವ ಸಂನ್ಯಾಸ. "ನಾಹಂ  ಕರ್ತಾ ಹರಿ ಕರ್ತಾ; ಹರಿ ಕರ್ತಾ ಹಿ ಕೇವಲಮ್" ; "ನನ್ನ ಬಾಯಿಯಿಂದ ಏನು ಬಂತೋ ಅದು ನಿನ್ನ ಸ್ತೋತ್ರವಾಗಲಿ. ನನ್ನ ಮನಸ್ಸಿನ ಮೂಲಕ ನಡೆಯುವುದೆಲ್ಲವೂ ನಿನ್ನ ಸ್ಮರಣೆಯಾಗಲಿ. ಎಲ್ಲವೂ ನಿನ್ನ ಪೂಜೆಯಾಗಲಿ ಅನ್ನುವ ಚಿಂತನೆ ಬೆಳೆಸಿಕೊ-ಯುದ್ಧ ಮಾಡುವಾಗಲೂ ಸಹ"  ಎನ್ನುತ್ತಾನೆ ಕೃಷ್ಣ.

ಇಲ್ಲಿ ಯುದ್ಧ ಸಮಷ್ಟಿಯಾಗಿ ತೀರ್ಮಾನವಾಗಿರುವುದು. ಸುಮಾರು ಹದಿಮೂರು ವರ್ಷಗಳ ಹಿಂದೆ ಧರ್ಮರಾಯ ರಾಜಸೂಯ ಯಾಗ ಮಾಡಿದಾಗ ಅಲ್ಲಿ   ಶಿಶುಪಾಲನ ತಲೆ ಉರುಳುತ್ತದೆ. ಆಗ ಧರ್ಮರಾಯನಿಗೆ ವ್ಯಾಸರು "ಇದು ಮುಂದೆ ಸುಮಾರು ಹದಿಮೂರು ವರ್ಷಗಳ ನಂತರ ನಡೆಯುವ ಮಹಾ ಯುದ್ಧದ ಮುನ್ಸೂಚನೆ" ಎಂದು ಹೇಳುತ್ತಾರೆ. ಅಂದರೆ ಈ ಯುದ್ಧ ವಿಧಿಲಿಖಿತ. ಇಲ್ಲಿ ಅರ್ಜುನ ಕೇವಲ ಉಪಕರಣ(Instrument) ಅಷ್ಟೇ. ಆದ್ದರಿಂದ “ಭಗವಂತನಲ್ಲಿ ಮನವನ್ನಿಟ್ಟು ಹಂಬಲ-ಮಮಕಾರ ತೊರೆದು ನಿಶ್ಚಿಂತೆಯಿಂದ ಹೋರಾಡು” ಎಂದು ಕೃಷ್ಣ ಅರ್ಜುನನಿಗೆ ಹೇಳುತ್ತಾನೆ.

ನಮ್ಮ ಬದುಕೇ ಒಂದು ಹೋರಾಟ. ಈ ಹೋರಾಟದಲ್ಲಿ ನಾವು ಮಾಡುವ ಕಾರ್ಯವನ್ನು ನಾವು ಪ್ರಾಮಾಣಿಕವಾಗಿ ಮಾಡಬೇಕು. ಏನು ಆಗಬೇಕೋ ಅದು ಆಗೇ ತೀರುತ್ತದೆ. ಅದನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ. ಭಗವಂತ ನನಗೆ ವಹಿಸಿದ ಕೆಲಸವನ್ನು ಆತನೇ ನನ್ನ ಕೈಯಿಂದ ಮಾಡಿಸಿದ, ಇದು ಅವನಿಗರ್ಪಿತವಾಗಲಿ, ಅವನ ಪೂಜೆಯಾಗಲಿ. ಏನು ಫಲ ಬಂತೋ ಅದು ಭಗವಂತನ ಪ್ರಸಾದ. ಈ ಸಂಕಲ್ಪವನ್ನಿಟ್ಟು ಕಾರ್ಯ ನಿರ್ವಹಿಸಿದಾಗ ಏನೇ ಆದರೂ ಅದರ ಹೊಣೆಯನ್ನು ಭಗವಂತ ಹೊರುತ್ತಾನೆ. ಇದಕ್ಕಿಂತ ದೊಡ್ಡ ಪೂಜೆ ಯಾವುದೂ ಇಲ್ಲ. ಇದು ಗೀತೆ ಮೂಲಕ ಕೃಷ್ಣ ನಮಗೆ ಕೊಟ್ಟ ಜೀವನ ಸಂದೇಶ.  ಇದರ ಫಲಶ್ರುತಿ ಎಂಬಂತೆ ಮುಂದಿನ ಎರಡು ಶ್ಲೋಕಗಳಿವೆ.

ಯೇ ಮೇ ಮತಮಿದಂ ನಿತ್ಯಮನುತಿಷ್ಠಂತಿ ಮಾನವಾಃ   ।
ಶ್ರದ್ಧಾವಂತೋsನಸೂಯಂತೋ  ಮುಚ್ಯಂತೇ ತೇsಪಿ ಕರ್ಮಭಿಃ           ॥೩೧॥


ಯೇ ಮೇ ಮತಮ್ ಇದಮ್  ನಿತ್ಯಮ್ ಅನುತಿಷ್ಠಂತಿ ಮಾನವಾಃ  
ಶ್ರದ್ಧಾವಂತಃ ಅನಸೂಯಂತಃ  ಮುಚ್ಯಂತೇ ತೇ ಅಪಿ ಕರ್ಮಭಿಃ -ಯಾವ ಮನುಷ್ಯರು ಕಿಚ್ಚು ಪಡದೆ ನನ್ನ ಈ ಸಿದ್ದಾಂತವನ್ನು ನಂಬಿ ನಡೆಯುವರೋ ಅವರು ಕರ್ಮಗಳಿಂದ ಪಾರಾಗುತ್ತಾರೆ.

"ಎಲ್ಲವನ್ನು ಭಗವಂತ ನನ್ನ ಕೈಯಿಂದ ಮಾಡಿಸುತ್ತಿದ್ದಾನೆ, ನಾನು ಮಾಡುವುದೆಲ್ಲವೂ ಅವನ ಪೂಜೆ, ನನಗೆ ಯಾವ ಫಲದಿಂದ ಒಳಿತು ಎನ್ನುವುದು ನನಗಿಂತ ಭಗವಂತನಿಗೆ ಚನ್ನಾಗಿ ತಿಳಿದಿದೆ. ಆದ್ದರಿಂದ ಫಲದಲ್ಲಿ ಅಧಿಕಾರ ಬಯಸದೇ ಬಂದಿದ್ದನ್ನು ಭಗವಂತನ ಪ್ರಸಾದ ಎಂದು ಸ್ವೀಕರಿಸಿ ಬದುಕುವುದು". ಇದು ನಮ್ಮ ಜೀವನದ ನಿತ್ಯಾನುಷ್ಠಾನದ ಪರಿಯಾಗಬೇಕು.  ಜೀವನದ ಪ್ರತಿ ಕ್ಷಣದಲ್ಲೂ ಈ ಅನುಸಂಧಾನವಿರುವ ಮಾನವರು(Human being, ಜ್ಞಾನಿಗಳು, ಮನುಷ್ಯತ್ವ ಉಳ್ಳವರು) ಅಶ್ರದ್ಧೆ(ರಾಜಸ) ಹಾಗು ಅಸೂಯೆ(ತಾಮಸ) ತೊರೆದು ನಿಷ್ಕಾಮಕರ್ಮ ಮಾಡಿದಾಗ, ಅವರ ಜ್ಞಾನ ವೃದ್ಧಿಯಾಗುತ್ತದೆ. ಅದರಿಂದ ಅವರು ಕರ್ಮ ಬಂಧನವನ್ನು ಕಳಚಿಕೊಂಡು ಮೋಕ್ಷಕ್ಕೆ ಹೋಗಲು ಅರ್ಹರಾಗುತ್ತಾರೆ. ನಿತ್ಯಾನುಷ್ಠಾನದಲ್ಲಿ  ಈ ಅನುಸಂದಾನವಿದ್ದಾಗ ನಮ್ಮ ಕರ್ಮವೇ ನಮ್ಮನ್ನು ಕರ್ಮ ಬಂಧನದಿಂದ ಕಳಚುವುದಕ್ಕೆ ಮೆಟ್ಟಿಲಾಗುತ್ತದೆ ಹಾಗು ಕರ್ಮ ಬಂಧನದಿಂದ ಪಾರು ಮಾಡುತ್ತದೆ.

ಯೇ ತ್ವೇತದಭ್ಯಸೂಯಂತೋ ನಾನುತಿಷ್ಠಂತಿ  ಮೇ ಮತಮ್।
ಸರ್ವಜ್ಞಾನವಿಮೂಢಾಂಸ್ತಾನ್ ವಿದ್ಧಿನಷ್ಟಾನಚೇತಸಃ       ॥೩೨॥

ಯೇ ತು ಏತತ್ ಅಭ್ಯಸೂಯಂತಃ ನ ಅನುತಿಷ್ಠಂತಿ  ಮೇ ಮತಮ್ ।
ಸರ್ವ ಜ್ಞಾನ ವಿಮೂಢಾನ್ ತಾನ್ ವಿದ್ಧಿ ನಷ್ಟಾನ್ ಅಚೇತಸಃ -ಯಾರು ಕಿಚ್ಚಿನಿಂದ ನನ್ನ ಸಿದ್ದಾಂತವನ್ನು ಆಚರಣೆಗೆ ತರುವುದಿಲ್ಲ ಅವರು ಎಲ್ಲ ತಿಳಿವಿಗೂ ಎರವಾದವರು. ವಿನಾಶದತ್ತ ಸರಿವ ತಿಳಿಗೇಡಿಗಳು-ಎಂದು ತಿಳಿ.

ಮೇಲೆ ಹೇಳಿದ ಅನುಷ್ಠಾನವನ್ನು ಅರಿಯದೆ, ಅಸೂಯೆ-ಅಸಹನೆಯಿಂದ, 'ನನ್ನ ಕೆಲಸಕ್ಕೆ ನಾನೊಬ್ಬನೇ ಜವಾಬ್ದಾರ, ನಾನು ಮಾಡುವುದು ನನ್ನ ಸ್ವಂತ ಹಿತಾಸಕ್ತಿಗಾಗಿ, ಅದರ ಫಲವನ್ನು ನಾನು ಪಡೆಯುತ್ತೇನೆ,  ನನ್ನ ಕೈಯಲ್ಲಿ ನನ್ನ ಅಸ್ತಿತ್ವವಿದೆ, ಯಾವ ದೇವರೂ ಅದಕ್ಕೆ ಹೊಣೆಗಾರನಲ್ಲ' ಎಂದು ಅಭಿಪ್ರಾಯ ತೋರಿ ಅಹಂಕಾರದಿಂದ ಬದುಕುವವರಿಗೆ ಎಂದೂ ಅರಿವಿನ ಬಾಗಿಲು ತೆರೆಯುವುದಿಲ್ಲ. ಆತ ಪ್ರಪಂಚದಲ್ಲಿ ವಿಮೂಢ(ಶ್ರೇಷ್ಠ ದಡ್ಡ)ಎನಿಸುತ್ತಾನೆ. ಆತನಿಗೆ 'ತನಗೆ ಏನೂ ಗೊತ್ತಿಲ್ಲ ಎನ್ನುವ ವಿಷಯವೂ ಗೊತ್ತಿರುವುದಿಲ್ಲ!' ಇಂತವರಿಗೆ ಸತ್ಯದ ಬಗ್ಗೆ ಚಿಂತನೆ ಮಾಡುವ ಅರ್ಹತೆ ಇರುವುದಿಲ್ಲ. ಅಂತವರು ವಿನಾಶದತ್ತ ನಡೆಯುವ ತಿಳಿಗೇಡಿಗಳು. ಅವರು ಕತ್ತಲಿನಿಂದ ಕತ್ತಲಿಗೆ ಹೋಗುತ್ತಾ ಅಧಃಪಾತವನ್ನು ತಲುಪಿ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಾರೆ.

ಕೃಷ್ಣನ ಈ ಮೇಲಿನ ಸಂದೇಶವನ್ನು ಕೇಳಿದಾಗ ನಮಗೊಂದು ಪ್ರಶ್ನೆ ಬರುತ್ತದೆ. ಜಗತ್ತಿನ ಮೂಲಭೂತವಾದ ಈ ಸತ್ಯವನ್ನು ಏಕೆ ಎಲ್ಲರೂ ಅನುಸರಿಸುವುದಿಲ್ಲ? ಎಂದು.  ಇದಕ್ಕೆ ತುಂಬಾ ರೋಚಕವಾದ ಉತ್ತರವನ್ನು ಕೃಷ್ಣ ಮುಂದಿನ ಎರಡು ಶ್ಲೋಕಗಳಲ್ಲಿ ಕೊಡುತ್ತಾನೆ.

Bhagavad Gita Kannada Chapter-03 Shloka 26-28


ನ ಬುದ್ಧಿಭೇದಂ ಜನಯೇದಜ್ಞಾನಾಮ್  ಕರ್ಮಸಂಗಿನಾಮ್             ।

ಜೋಷಯೇತ್ ಸರ್ವಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್           ॥೨೬॥

ನ ಬುದ್ಧಿ ಭೇದಮ್  ಜನಯೇತ್ ಅಜ್ಞಾನಾಮ್  ಕರ್ಮ ಸಂಗಿನಾಮ್
ಜೋಷಯೇತ್ ಸರ್ವ ಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್--ತಿಳುವಳಿಕೆಯಿಲ್ಲದೆ ಫಲದ ನಂಟಿಗಾಗಿಯೇ ಕರ್ಮ ಮಾಡುವ ಮಂದಿಯ ನಂಬಿಕೆಯನ್ನು ನಲುಗಿಸಬಾರದು. ಉಪಾಯ ಬಲ್ಲ ತಿಳಿದವನು ತಾನು ಎಲ್ಲಾ ಕರ್ಮಗಳನ್ನು ಮಾಡುತ್ತ ಅವರನ್ನು ಒಲೈಸಬೇಕು.

ಸಮಾಜದಲ್ಲಿ ಅನೇಕ ತರದ ಜನರಿರುತ್ತಾರೆ. ಎಲ್ಲರಿಗೂ ತಿಳುವಳಿಕೆ ಇರುವುದಿಲ್ಲ. ಅವರು ಅವರ ನಂಬಿಕೆಗೆ ತಕ್ಕಂತೆ ನೆಡೆದುಕೊಳ್ಳುತ್ತಿರುತ್ತಾರೆ. ತಿಳಿದವನಿಗೆ ಅದು ಮೂಢನಂಬಿಕೆಯಾಗಿ ಕಾಣಬಹುದು. ಆದರೆ ಎಂದೂ ಒಮ್ಮೆಗೆ ಹೋಗಿ ಅಂತಹ ಜನರನ್ನು ಪರಿಹಾಸ್ಯ ಮಾಡಬಾರದು. ಒಬ್ಬ ಒಂದು ಕಲ್ಲನ್ನು ಅದಕ್ಕೊಂದು ಹೆಸರನ್ನು ಕೊಟ್ಟು ದೇವರೆಂದು ಪೂಜಿಸುತ್ತಿರಬಹುದು. ಆತನ ಅಪಾರ ನಂಬಿಕೆ ಶರಣಾಗತಿ ಆತನನ್ನು ರಕ್ಷಿಸುತ್ತಿರುತ್ತದೆ. ಇದನ್ನು ನೋಡಿ ಪರಿಹಾಸ್ಯ ಮಾಡುವುದು ಮೂಢತನ. ಅವರು ಇಂತಹ ನಂಬಿಕೆಯ ನೆಲಗಟ್ಟಿನಲ್ಲಿ ಜೀವನದಲ್ಲಿ ಭರವಸೆಯಿಂದ ಬದುಕುತ್ತಿರುತ್ತಾರೆ.ಅವರಿಗೊಂದು ಸನಾತನ ಪ್ರಜ್ಞೆ ಇರುತ್ತದೆ. ಸರ್ವಗತ, ಸರ್ವಶಬ್ದವಾಚ್ಯ ಹಾಗು ಸರ್ವಶಕ್ತ ಭಗವಂತ ಆತನಿಗೆ ಕಲ್ಲಿನ ಮುಖೇನ ರಕ್ಷಣೆ ಕೊಡಲೂ ಸಾಧ್ಯವಿದೆಯಲ್ಲವೇಆದ್ದರಿಂದ ಎಂದೂ ಅಂತವರನ್ನು ನೋಡಿ ನಗಬಾರದು. ಅದನ್ನು ಬಿಟ್ಟು ಅವನನ್ನು ಕ್ರಮೇಣವಾಗಿ ಜ್ಞಾನದ ಪರಿದಿಗೆ ತರುವ ಪ್ರಯತ್ನವನ್ನು ಮಾಡಬೇಕು.  ಎಲ್ಲವನ್ನು ಸಾಮಾಜಿಕ ಕಾಳಜಿಯಿಂದ ಮಾಡಬೇಕು, ಆದರೆ ನಿರ್ಲಿಪ್ತನಾಗಿ ಎಲ್ಲಾ ಕರ್ಮವನ್ನು ಮಾಡುತ್ತಾ ಅಜ್ಞಾನಿಗಳಲ್ಲಿ ಜ್ಞಾನವನ್ನು ತುಂಬಬೇಕು.

ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ  ।
ಅಹಂಕಾರವಿಮೂಢಾತ್ಮಾ ಕರ್ತಾsಹಮಿತಿ ಮನ್ಯತೇ     ॥೨೭॥

ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ
ಅಹಂಕಾರವಿಮೂಢ ಆತ್ಮಾ ಕರ್ತಾ ಅಹಮ್ ಇತಿ ಮನ್ಯತೇ--ಪ್ರಕೃತಿಯ ಅಂಗಾಂಗಗಳಾದ ಇಂದ್ರಿಯಾದಿಗಳಿಂದ(ಭಗವದಧೀನವಾದ, ಜೀವನ ಸ್ವಭಾವ ಸಹಜವಾದ ಗುಣಗಳಿಂದ) ಎಲ್ಲ ಬಗೆಯ ಕರ್ಮಗಳೂ  ನಡೆಯುತ್ತಿರುತ್ತವೆ. ಹಮ್ಮಿನಿಂದ ಮೈಮರೆತವನು 'ನಾನೇ ಮಾಡಿದೆ' ಎಂದು ತಿಳಿಯುತ್ತಾನೆ.
ಈ ಶ್ಲೋಕ ಅನೇಕ ವಿಧದಲ್ಲಿ ತೆರೆದುಕೊಳ್ಳುತ್ತದೆ. ಇಲ್ಲಿ ಕೃಷ್ಣ ಮುಖ್ಯವಾಗಿ 'ನಾನೇ ಮಾಡಿದೆ' ಎಂದು ಅಹಂಕಾರ ಪಡುವುದು ಎಷ್ಟು ತಪ್ಪು ಮತ್ತು ಏಕೆ ಎನ್ನುವುದನ್ನು ವಿವರಿಸಿದ್ದಾನೆ. ಕೃಷ್ಣ ಹೇಳುತ್ತಾನೆ "ಯಾರಾದರು ಏನನ್ನಾದರು 'ನಾನೇ ಮಾಡಿದೆ' ಎಂದು ತಿಳಿದುಕೊಂಡರೆ ಅದು ಅವನ ತಿಳಿಗೇಡಿತನ" ಎಂದು. ಸೃಷ್ಟಿಯಲ್ಲಿನ ಒಂದು ವಿಚಿತ್ರವೆಂದರೆ ಯಾರೂ ಏನನ್ನೂ ಮಾಡುವುದಿಲ್ಲ-ಆದರೆ ಎಲ್ಲವೂ ಎಲ್ಲರ ಕೈಯಿಂದ ಆಗುತ್ತಿರುತ್ತದೆ!  ಈ ದೇಹ (ಪಿಂಡಾಂಡ) ಪ್ರಕೃತಿಯ ನಿರ್ಮಾಣ. ಪ್ರಕೃತಿಯಲ್ಲಿ ಅದಕ್ಕೆ ಪೋಷಕವಾದ ಅಂಗಭೂತವಾದ ಇಂದ್ರಿಯಗಳಿವೆ. ಪ್ರಕೃತಿ ಎಂದರೆ ಈ ದೇಹ, ಅದರ ಗುಣಗಳು ಎಂದರೆ ಇಂದ್ರಿಯಗಳು. ಶಬ್ದ-ಸ್ಪರ್ಶ-ರಸ-ರೂಪ- ಗಂಧ; ಕಿವಿ-ತೊಗಲು-ನಾಲಿಗೆ-ಕಣ್ಣು-ಮೂಗುಅದಕ್ಕೆ ಅನುಗುಣವಾಗಿ ಆಕಾಶ(ಶಬ್ದ), ಗಾಳಿ(ಸ್ಪರ್ಶ), ನೀರು(ರಸ), ಅಗ್ನಿ (ರೂಪ), ಮತ್ತು ಮಣ್ಣು(ಗಂಧ) ಇವು ಪ್ರಕೃತಿಯ ಗುಣಗಳು. ಹೀಗಿರುವಾಗ ನಾವು ಯಾವುದೋ ಒಂದು ವಿಷಯವನ್ನು ನಾನೇ ಮಾಡಿದೆ ಎಂದು ಹೇಳುವುದು ಅರ್ಥ ಶೂನ್ಯ. ಉದಾಹರಣೆಗೆ 'ಕಣ್ಣಿನಿಂದ ನೋಡಿದೆ'; ಈ ಕಣ್ಣನ್ನು ನಮಗೆ ಕೊಟ್ಟವನು ಯಾರು? ಹುಟ್ಟು ಕುರುಡನಿಗೆ ಕಣ್ಣು ಕೊಡಲು ನಿನಗೆ ಸಾಧ್ಯವೇ? ಅಂದರೆ ಕಣ್ಣು ಪ್ರಕೃತಿಯ ಕೊಡುಗೆ. ಭಗವಂತ ನಮಗೆ ಕಣ್ಣು ಕೊಟ್ಟ, ಕಣ್ಣ ಮುಂದೆ ನೋಡುವ ವಸ್ತುವನ್ನಿಟ್ಟ, ನೋಡುವಂತೆ ಪ್ರೇರೇಪಿಸಿದ- ನಾವು ನೋಡಿದೆವು!  ಒಂದು ವೇಳೆ ನಮಗೆ ಒಳ್ಳೆಯ ಸ್ವರವಿದ್ದರೆ ಅದಕ್ಕಾಗಿ ಅಹಂಕಾರ ಪಡುತ್ತೇವೆ. ಆದರೆ ಈ ಸ್ವರವನ್ನು ನಮಗೆ ಕೊಟ್ಟವನು ಯಾರು? ಈ ಬಗ್ಗೆ ಎಂದೂ ನಾವು ಯೋಚಿಸುವುದಿಲ್ಲ. ಒಂದು ಕಾರ್ಯವಾಗಬೇಕಾದರೆ ಇಡೀ ವಿಶ್ವದ ಅನೇಕ ಘಟಕಗಳು ಸೇರಿ ಕಾರ್ಯ ನಿರ್ವಹಿಸಬೇಕು. ಪ್ರಕೃತಿ ಜಡ ಅದಕ್ಕೆ ಇಚ್ಛೆ ಇಲ್ಲ. 'ನಾವು ಮಾಡುವುದು' ಅಂದರೆ ಇಚ್ಛಿಸಿ ಮಾಡುವುದು. ನಮಗೆ ಇಚ್ಛೆ ಇದೆ; ಪ್ರತಿಯೊಬ್ಬ ಜೀವನಿಗೂ ಅವನದೇ ಆದ ಜೀವ ಸ್ವಭಾವವಿದೆ. ನಾವು ಮಾಡುವ ಪ್ರತಿಯೊಂದು ಕಾರ್ಯ ನಮ್ಮ ಜೀವ ಸ್ವಭಾವಕ್ಕೆ ಅನುಗುಣವಾಗಿರುತ್ತದೆ. ಇದು ಇಚ್ಛಾ ಪೂರ್ವಕ ಕ್ರಿಯೆ. ಆದರೆ ಇಲ್ಲಿ ನಮಗೆ ಇಚ್ಛಾ ಸ್ವಾತಂತ್ರ್ಯವಿಲ್ಲ.
ಇಚ್ಛಾಸ್ವಾತಂತ್ರ್ಯ ಇರುವುದು ಕೇವಲ ಭಗವಂತನಲ್ಲಿ. ಅದಕ್ಕನುಗುಣವಾಗಿ ಸರ್ವಕಾರ್ಯ ನಿರ್ವಹಣೆ ಆಗುತ್ತದೆ. ಆದ್ದರಿಂದ ನಮ್ಮ ಸ್ವಭಾವವನ್ನು ನಿಯಂತ್ರಿಸುವವ ಇಡೀ ಜಗತ್ತಿನ ಮೂಲ ಕರ್ತೃ ಭಗವಂತ. ಅವನ ಇಚ್ಛೆಗನುಗುಣವಾಗಿ ಪ್ರಪಂಚದ ವ್ಯಾಪಾರ ನಡೆಯುತ್ತದೆ. ಇದು ವಿಶ್ವದ ವ್ಯವಸ್ಥೆ. ಇಡೀ ವಿಶ್ವದ ಕರ್ಮ ಚಕ್ರದಲ್ಲಿ ನಾವು ಒಂದು ಘಟಕ ಅಷ್ಟೆ. ಆದ್ದರಿಂದ 'ನಾನೇ ಮಾಡಿದೆ' ಎಂದು ಅಹಂಕಾರ ಪಡುವುದರಲ್ಲಿ ಯಾವ ಅರ್ಥವೂ ಇಲ್ಲ. ನಿಜವಾದ ಕರ್ತೃ ಭಗವಂತ. ಜೀವನಿಗೊಂದು ಕರ್ತೃತ್ವ ಹಾಗು ಜಡಕ್ಕೊಂದು  ಕರ್ತೃತ್ವವಿದೆ. ಇದರ ಅಂತರ ನಮಗೆ ತಿಳಿದಿರಬೇಕು. ಮಣ್ಣು  ಜಡ ಅದಕ್ಕೆ ಇಚ್ಛೆ ಇಲ್ಲ. ಬೀಜ ಚೇತನ, ಅದಕ್ಕೆ ಮರವಾಗುವ ಸ್ವಭಾವವಿದೆ ಆದರೆ ಸ್ವಾತಂತ್ರ್ಯವಿಲ್ಲ. ಬೀಜವನ್ನು ಬಿತ್ತಿ ಬೆಳೆಸುವ ತೋಟಗಾರ ಆ ಭಗವಂತ. ಭಗವಂತನ ಇಚ್ಛೆಗನುಗುಣುವಾಗಿ, ‘ಜೀವ’ ನಲ್ಲಿರುವ ಸ್ವಭಾವಕ್ಕನುಗುಣವಾಗಿ ಪ್ರಪಂಚದಲ್ಲಿ ಕ್ರಿಯೆ ನಡೆಯುತ್ತದೆ. ಒಂದು ಕ್ರಿಯೆಯ ಹಿಂದೆ ಇಡೀ ವಿಶ್ವದ ಪಾಲುದಾರಿಕೆ ಇರುತ್ತದೆ.

ತತ್ತ್ವವಿತ್ತು ಮಹಾಬಾಹೋ ಗುಣಕರ್ಮವಿಭಾಗಯೋಃ   ।
ಗುಣಾ ಗುಣೇಷು ವರ್ತಂತ ಇತಿ ಮತ್ವಾ ನ ಸಜ್ಜತೇ        ॥೨೮॥

ತತ್ತ್ವವಿತ್ ತು ಮಹಾಬಾಹೋ ಗುಣ ಕರ್ಮ ವಿಭಾಗಯೋಃ
ಗುಣಾಃ  ಗುಣೇಷು ವರ್ತಂತೇ  ಇತಿ ಮತ್ವಾ ನ ಸಜ್ಜತೇ- ಓ ಮಹಾವೀರ, ಇಂದ್ರಿಯಾದಿಗಳ(ಜೀವ ಸ್ವಭಾವದ ಗುಣಗಳ) ಮತ್ತು ಕ್ರಿಯೆಗಳ ಪ್ರಭೇದಗಳ ನಿಜವನ್ನರಿತವನು, ಇಂದ್ರಿಯಗಳ ವಿಷಯಗಳಲ್ಲಿ ಚರಿಸುತ್ತವೆ ಎಂದರಿತು ಅವುಗಳನ್ನು ಅಂಟಿಸಿಕೊಳ್ಳುವುದಿಲ್ಲ.

ತತ್ವವನ್ನು ಅರಿತ ಅಥವಾ ಯಥಾರ್ಥವನ್ನು ಅರಿತ ತತ್ವವಾದಿ-ಗುಣಕರ್ಮ, ಇಂದ್ರಿಯ ಮತ್ತು ಅದರಲ್ಲಿನ ಕ್ರಿಯಾಭೇದವನ್ನು ತಿಳಿದಿರಬೇಕು. ಮೂಲಭೂತವಾಗಿ ಇಂದ್ರಿಯಗಳಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸವೆಂಬ ತ್ರೈಗುಣ್ಯಗಳಿಂದ ಕರ್ಮ ನಡೆಯುತ್ತಿರುತ್ತದೆ. ಇದು ನಾವು ಹಿಂದೆ ಅಂಟಿಸಿಕೊಂಡು ಬಂದುದರ ಪ್ರಭಾವವಿರಬಹುದು. ಇದರಿಂದ ಆಗುವ ಕರ್ಮವನ್ನು ನಾವು ತಟಸ್ಥರಾಗಿ ನೋಡುತ್ತಿರಬೇಕು. ಈ ವಿಷಯ ಮನೋಶಾಸ್ತ್ರಕ್ಕೆ ಸಂಬಂಧಪಟ್ಟಿದ್ದು. ನಾವೇ ಮಾಡುವ ಕ್ರಿಯೆಯನ್ನು ನಾವೇ ತಟಸ್ಥರಾಗಿ ವಿಶ್ಲೇಷಿಸುವುದು! ನನ್ನ ಮೇಲೆ ತ್ರೈಗುಣ್ಯದ ಯಾವ ಗುಣ ಪ್ರಭಾವಬೀರುತ್ತಿದೆ ಎನ್ನುವುದನ್ನು ಸ್ವಯಂ ವಿಶ್ಲೇಷಣೆ(Self analysis) ಮಾಡಿ, ಗುಣಕರ್ಮ ವಿಭಾಗ ತತ್ವವನ್ನು ತಿಳಿದುಕೊಂಡಾಗ, ತ್ರೈಗುಣ್ಯದ  ಪ್ರಭಾವದ ಅರಿವಾಗುತ್ತದೆ. ಆಗ ನಮಗೆ ಅದರಲ್ಲಿ ಒಡೆತನವಿಲ್ಲ ಎನ್ನುವ ಸತ್ಯ ತಿಳಿಯುತ್ತದೆ.ಇಂದ್ರಿಯಗಳು- ಅದರ ಮೇಲೆ ಪ್ರಕೃತಿಯ ತ್ರೈಗುಣ್ಯ-ಅದರ ಮೇಲೆ ಜೀವ ಸ್ವಭಾವ-ಅದರ ಮೇಲೆ ಭಗವಂತನ ಜ್ಞಾನಾನಂದ- ಇವೆಲ್ಲವೂ ಕರ್ಮವಾಗಿ ಇಂದ್ರಿಯದ ಮೂಲಕ  ಅಭಿವ್ಯಕ್ತವಾಗುತ್ತಿರುತ್ತದೆ. ಜಡದಲ್ಲಿ ಬರಿಯ ಕೃತಿ(Action), ಜೀವನಲ್ಲಿ ಇಚ್ಛೆ ಮತ್ತು ಕೃತಿ (Intentional Action) ಹಾಗು ಭಗವಂತನಲ್ಲಿ ಸ್ವತಂತ್ರ ಇಚ್ಛಾಕೃತಿ(Independent Intentional Action)-ಇದು ಕರ್ಮಭೇದ. ಹೀಗೆ ಗುಣಭೇದ ಮತ್ತು ಕರ್ಮಭೇದವನ್ನು ಅರಿತವನು 'ತತ್ವವಿತ್ತು'. ಈ ತತ್ವ ಅರ್ಥವಾದರೆ "ನಾನು ಮಾಡಿದೆ" ಎನ್ನುವ ಅಹಂಕಾರ ಎಂದೂ ನಮ್ಮನ್ನು ಕಾಡುವುದಿಲ್ಲ.
ಈ ಮೇಲಿನ ವಿಷಯವನ್ನು ಉದಾಹರಣೆಯೊಂದಿಗೆ ನೋಡುವುದಾದರೆ-ಸ್ವಾರಸ್ಯವಾಗಿ, ವಿಷಯಗರ್ಭಿತವಾಗಿ ಮಾತನಾಡುವ ಒಬ್ಬ ಮಾತುಗಾರನನ್ನು ನೋಡಿ:  ಆತ ಹೀಗೆ ಮಾತನಾಡಬೇಕಾದರೆ ಕೇವಲ ಬಾಯಿ ಇದ್ದರೆ ಸಾಲದು, ಬಾಯಿಯಲ್ಲಿ ಶಬ್ದ ಬರಬೇಕು. ಕೇವಲ ಶಬ್ದವಲ್ಲ-ಯಾವ ಮಾತನಾಡಬೇಕೋ ಅದಕ್ಕನುಗುಣವಾದ ಶಬ್ದ ಬರಬೇಕು. ಆ ಶಬ್ದ ಬರಬೇಕಾದರೆ ಮಾತಿಗೆ ಒಂದು ಭಾವ ಬೇಕು. ಭಾವ ಅನ್ನುವುದು ಮನಸ್ಸಿನಲ್ಲಿ ಹೊಳೆಯಬೇಕು. ಹೊಳೆದ ಭಾವಕ್ಕೆ ತಕ್ಕಂತೆ ಶಬ್ದ ಬರಬೇಕು. ಆ ಶಬ್ದ ಬಾಯಿಯಲ್ಲಿ ಸ್ಫುಟವಾಗಿ ಹೊರ ಹೊಮ್ಮಬೇಕು. ಭಾವನೆಯಿಂದ ಶಬ್ದ ಹುಟ್ಟಬೇಕಾದರೆ ಮಾಧ್ಯಮವಾಗಿ ಆಕಾಶ ಮತ್ತು ಗಾಳಿ ಅಗತ್ಯ. ಈ ಎಲ್ಲಾ ಕ್ರಿಯೆ ಸುಸೂತ್ರವಾಗಿ ನಡೆದರೆ ಮಾತ್ರ ಆತ ಚನ್ನಾಗಿ ಮಾತನಾಡಬಲ್ಲ. ಮನಸ್ಸಿನಲ್ಲಿ ಭಾವ ಮತ್ತು ಶಬ್ದವನ್ನು ಹೊಳೆಸುವವನು ಯಾರು? ಒಂದು ವೇಳೆ ಹೇಳಬೇಕು ಅನ್ನುವ ವಿಷಯಕ್ಕೆ ಅನುಗುಣವಾದ ಶಬ್ದ ಹೊಳೆಯದೆ ಇದ್ದರೆ? ನಮ್ಮ ಮೆದುಳಿನಲ್ಲಿ ಯಾವುದೋ ಒಂದು ಗುಂಡಿ ಆ ಕ್ಷಣದಲ್ಲಿ ಕೆಲಸ ಮಾಡದೆ ಇದ್ದರೆ? ಇಲ್ಲಿ ನಮ್ಮ ಕೈವಾಡ ಏನಿದೆ? ಇದು ತಿಳಿದಾಗ ಅಹಂಕಾರ ಬಾರದು. ಈ ಅರಿವಿದ್ದಾಗ ಎಲ್ಲರೊಡನೆ ಎಲ್ಲರಂತೆ ಇದ್ದು ಅಂಟಿಸಿಕೊಳ್ಳದೆ   ಇರಲು ಸಾಧ್ಯ.
ಇಂದ್ರಿಯಗಳಲ್ಲಿ ಸತ್ವ-ರಜೋ-ತಮೋ ಗುಣಗಳು ಜೀವ ಸ್ವಭಾವಕ್ಕನುಗುಣವಾಗಿ ಕೆಲಸ ಮಾಡುತ್ತವೆ. ಭಗವಂತನ ಜ್ಞಾನಾನಂದ ಸ್ವರೂಪ- ಜೀವನ ಜ್ಞಾನೇಂದ್ರಿಯ ಗುಣಗಳನ್ನು ನಿಯಂತ್ರಿಸುತ್ತವೆ. ಇದನ್ನು ತಿಳಿದಾಗ ನಾನು-ನನ್ನದು ಎನ್ನುವುದು ಹೊರಟು ಹೋಗುತ್ತದೆ. ವಿಶ್ವವೆಂಬ ಈ ಮಹಾ ಸಾಗರದಲ್ಲಿ ನಾನೊಂದು ಮರಳಿನ ಕಣ ಎನ್ನುವ ನಿಜ ತಿಳಿಯುತ್ತದೆ. ವಿಶ್ವದ ವಿಶ್ವತೋಮುಖವಾದ ಅಸ್ತಿತ್ವ ಗುರುತಿಸಿದವ "ನಾನು ಮಾಡಿದೆ" ಎಂದು ಎಂದೂ ಹೇಳುವುದಿಲ್ಲ ಹಾಗು ಯಾವುದನ್ನೂ ಅಂಟಿಸಿಕೊಳ್ಳು(Attachment)ವುದಿಲ್ಲ.
ಈ ಶ್ಲೋಕದಲ್ಲಿ ಕೃಷ್ಣ ಅರ್ಜುನನನ್ನು 'ಮಹಾಬಾಹೋ' ಎಂದು ಸಂಬೋಧಿಸಿದ್ದಾನೆ. ಮೇಲ್ನೋಟದಲ್ಲಿ ಮಹಾಬಾಹು ಎಂದರೆ ವೀರ, ಹೋರಾಟಗಾರ. ಬಲಿಷ್ಠ ತೊಳಿನವನಾದ ನೀನು ಹೇಡಿಯಾಗದೆ ಹೋರಾಡು ಎನ್ನುವುದು ಇಲ್ಲಿ ಕಾಣುವ ಭಾವ. ಆದರೆ ಅದರಿಂದಾಚೆಗೆ ಇನ್ನೂ ಅನೇಕ ಅರ್ಥವಿದೆ. ಮಹತ್ ವಹತೀತಿ ಮಹಾಬಾಹು ಅಂದರೆ ದೊಡ್ದದ್ದನ್ನು ಹೊತ್ತುಕೊಂಡವ. ಜಗತ್ತಿನ ಮೂಲಭೂತವಾದ ಸತ್ಯವನ್ನು ಹೃದಯದಲ್ಲಿ ಹೊತ್ತವ ಎಂದರ್ಥ. “ಜಗತ್ತಿನ ಮಹತ್ತಾದ ಸಂಗತಿಯನ್ನು ಗ್ರಹಿಸಬಲ್ಲ ಅರಿವಿನ ಮಹಾತೋಳಿನಿಂದ ದಿಗಂತದಾಚೆಗಿನ ಸತ್ಯ(ಭಗವಂತ)ವನ್ನು ಹಿಡಿ” ಎನ್ನುವುದು ಈ ಸಂಬೋಧನೆ ಹಿಂದಿರುವ ಇನ್ನೊಂದು ಭಾವ.

Saturday, April 2, 2011

Bhagavad Gita Kannada Chapter-03 Shloka 21-25


ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ ।
ಸ ಯತ್ ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ    ॥೨೧॥

ಯತ್ ಯತ್ ಆಚರತಿ ಶ್ರೇಷ್ಠಃ ತತ್ ತತ್  ಏವ ಇತರಃ  ಜನಃ
ಸಃ  ಯತ್ ಪ್ರಮಾಣಮ್  ಕುರುತೇ ಲೋಕಃ ತತ್ ಅನುವರ್ತತೇ--ಮುಂದಾಳು ಏನೇನು ಮಾಡುತ್ತಾನೆ ಉಳಿದ ಮಂದಿ ಅದೇ ದಾರಿ ಹಿಡಿಯುತ್ತಾರೆ. ಅವನು ಯಾವುದನ್ನು ಆಧಾರವಾಗಿ ಬಳಸುತ್ತಾನೆ ಜನತೆ ಅದನ್ನೇ ಬೆನ್ನು ಹತ್ತುತ್ತದೆ.

ಸಮಾಜದಲ್ಲಿ ಹಿರಿಯನೆನಿಸಿದವ(ಶ್ರೇಷ್ಠ), ವಯಸ್ಸಿನಲ್ಲಿ, ಆಚರಣೆಯಲ್ಲಿ, ಜ್ಞಾನದಲ್ಲಿ ಸಮಾಜಕ್ಕೆ ಮಾರ್ಗದರ್ಶನ ಮಾಡಬಲ್ಲ, ಎತ್ತರದಲ್ಲಿರುವ ವ್ಯಕ್ತಿ ಯಾವ ದಾರಿಯಲ್ಲಿ ಸಾಗುತ್ತಾನೋ, ಉಳಿದವರೂ ಅದೇ ಹಾದಿಯಲ್ಲಿ ಸಾಗುತ್ತಾರೆ. ಇಲ್ಲಿ ಅರ್ಜುನ ಸಮಾಜದ ಮುಖಂಡ. ಆತ ಏನು ಮಾಡುತ್ತಾನೋ ಅದನ್ನೇ  ಸಮಾಜ ಹಿಂಬಾಲಿಸುತ್ತದೆ. ಏಕೆಂದರೆ ಸಾಮಾನ್ಯ ಜನರಿಗೆ ಶಾಸ್ತ್ರ ಇತ್ಯಾದಿ ತಿಳಿಯುವುದಿಲ್ಲ. ಅವರು ಕೇವಲ ಆದರ್ಶ ವ್ಯಕ್ತಿಗಳೆನಿಸಿದವರನ್ನು ಹಿಂಬಾಲಿಸುತ್ತಾರೆ. ನಾಯಕನಾದವನು ಯಾವುದನ್ನು ಪ್ರಮಾಣವಾಗಿರಿಸಿಕೊಂಡು ಮಾಡುತ್ತಾನೋ ಅದನ್ನೇ ಸಾಮಾನ್ಯ ಜನರು ಅನುಸರಿಸುತ್ತಾರೆ.
ಈ ಶ್ಲೋಕದಲ್ಲಿ ಕೃಷ್ಣ ಕೊಟ್ಟಿರುವ ಸಂದೇಶವನ್ನು ನಾವು ನಮ್ಮ ದೈನಂದಿನ ಬದುಕಿನಲ್ಲಿ ಕಾಣುತ್ತೇವೆ. ಒಂದು ಸಂಸ್ಥೆಯನ್ನು ನಡೆಸುವ ಮುಖ್ಯಸ್ತನ ನಡವಳಿಕೆ, ಆಚರಣೆ, ಸರಿದಾರಿಯಲ್ಲಿ ಇಲ್ಲದಿದ್ದರೆ, ಆ ಸಂಸ್ಥೆ ಅದೋಗತಿಯನ್ನು ಕಾಣುತ್ತದೆ. ದುಷ್ಟ ಶಕ್ತಿಗಳು ಎದ್ದು ನಿಲ್ಲುತ್ತವೆ.  ಏಕೆಂದರೆ ಮುಖಂಡ ಎನಿಸಿದವ ಏನನ್ನು ಅನುಸರಿಸುತ್ತಾನೋ ಅದನ್ನೇ ಪ್ರಮಾಣವಾಗಿ ಆತನ ಕೆಳಗಿರುವ ಜನರು ತಮಗರಿವಿಲ್ಲದಂತೆ ಅನುಸರಿಸಲಾರಂಭಿಸುತ್ತಾರೆ. ಈ ಕಾರಣದಿಂದ ಒಬ್ಬ ಮುಖಂಡ ಎಷ್ಟು ಎಚ್ಚರದಿಂದಿದ್ದರೂ ಸಾಲದು. ಒಂದು ದೇಶವನ್ನು ನಡೆಸುವ ಮುಖ್ಯಸ್ಥ ಬ್ರಷ್ಟಾಚಾರಿಯಾಗಿದ್ದಲ್ಲಿ ಇಡೀ ದೇಶ ಬ್ರಷ್ಟಾಚಾರದ ಹಾದಿಯನ್ನು ತುಳಿಯುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಮಾನವರು ಒಳ್ಳೆಯದನ್ನು ಅನುಸರಿಸುವುದಕ್ಕಿಂತ ಹೆಚ್ಚಾಗಿ ಹಾಗು ವೇಗವಾಗಿ ಕೆಟ್ಟದನ್ನು ಅನುಸರಿಸುವುದು ಹೆಚ್ಚು. ಉದಾಹರಣೆಗೆ ಒಬ್ಬ ಉತ್ತಮ ಅಧ್ಯಾಪಕ ಧೂಮಪಾನ ಮಾಡುವ ಹವ್ಯಾಸದವನಾಗಿದ್ದರೆ, ಆತನ ವಿದ್ಯಾರ್ಥಿಗಳು  ಆತನಲ್ಲಿರುವ ಜ್ಞಾನಕ್ಕಿಂತ ಮಿಗಿಲಾಗಿ ಆತನ ದುರಾಭ್ಯಾಸವನ್ನು ಪ್ರಮಾಣವಾಗಿರಿಸಿಕೊಂಡು ಕೆಟ್ಟ ದಾರಿ ಹಿಡಿಯುವ ಸಾಧ್ಯತೆ ಹೆಚ್ಚು. ಇದು ಹಿರಿಯವರೆನಿಸಿದವರು ತಪ್ಪು ದಾರಿ ತುಳಿದಾಗ ಸಮಾಜದ ಮೇಲಾಗುವ ದುಷ್ಟರಿಣಾಮ. ಇದು ತುಂಬಾ ಅಪಾಯಕಾರಿ ಹಾಗು ಇದರ ಅರಿವು ನಮಗಿರಬೇಕು.

ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ           ।
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ         ॥೨೨॥

ನ ಮೇ ಪ್ರಾರ್ಥ ಅಸ್ತಿ  ಕರ್ತವ್ಯಮ್  ತ್ರಿಷು ಲೋಕೇಷು ಕಿಂಚನ
ನ ಅನವಾಪ್ತಮ್ ಅವಾಪ್ತವ್ಯಮ್ ವರ್ತೇ ಏವ ಚ ಕರ್ಮಣಿ --ಪಾರ್ಥ, ಮೂರು ಲೋಕಗಳಲ್ಲು ನಾನು ಮಾಡಬೇಕಾದ್ದು ಏನೂ ಇಲ್ಲ. ಪಡೆಯದೇ ಇದ್ದು ಪಡೆಯಬೇಕಾದ್ದು ಇಲ್ಲ.ಆದರೂ ನಾನು ಕರ್ಮದಲ್ಲಿ ತೊಡಗಿದ್ದೇನೆ.

ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದ್ರಿತಃ   ।
ಮಮ ವರ್ತ್ಮಾನುವವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ          ॥೨೩॥

ಯದಿ ಹಿ ಅಹಮ್ ನ ವರ್ತೇಯಮ್  ಜಾತು ಕರ್ಮಣಿ ಅತಂದ್ರಿತಃ
ಮಮ ವರ್ತ್ಮ ಅನುವವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ --ಓ ಪಾರ್ಥ, ನಾನು ಎಂದಾದರೂ ಎಚ್ಚರದಿಂದ ಕರ್ಮದಲ್ಲಿ ತೊಡಗದೆ ಹೋದರೆ, ಮನುಷ್ಯರು ಎಲ್ಲ ಬಗೆಯಿಂದಲೂ ನನ್ನ ದಾರಿ ಹಿಡಿದು ಬಿಡುತ್ತಾರೆ.

ಉತ್ಸೀದೇಯುರಿಮೇ ಲೋಕಾ ನ ಕುರ್ಯಾಂ ಕರ್ಮ ಚೇದಹಮ್ ।
ಸಂಕರಸ್ಯ ಚ ಕರ್ತಾ ಸ್ಯಾಮುಪಹನ್ಯಾಮಿಮಾಃ ಪ್ರಜಾಃ            ॥೨೪॥

ಉತ್ಸೀದೇಯಃ ಇಮೇ ಲೋಕಾಃ  ನ ಕುರ್ಯಾಮ್  ಕರ್ಮ ಚೇತ್ ಅಹಮ್
ಸಂಕರಸ್ಯ ಚ ಕರ್ತಾ ಸ್ಯಾಮ್ ಉಪಹನ್ಯಾಮ್ ಇಮಾಃ ಪ್ರಜಾಃ  --ನಾನು ಕರ್ಮ ಮಾಡದೇ ಇದ್ದರೆ ಈ ಜನರೆಲ್ಲಾ ದಾರಿ ತಪ್ಪಿ ಹಾಳಾಗುತ್ತಾರೆ. ಧರ್ಮದ ಕಲಬೆರೆಕೆಗೆ ಕಾರಣನಾಗಿ ಈ ಎಲ್ಲ ಜನತೆಯನ್ನು ನಾನೆ ಕೈಯಾರ ಕೆಡವಿದಂತಾದೀತು.

ಈ ಮೇಲಿನ ಮೂರು  ಶ್ಲೋಕದಲ್ಲಿ ಕೃಷ್ಣ ತನ್ನನ್ನೇ ತಾನು ಉದಾಹರಣೆಯಾಗಿಟ್ಟುಕೊಂಡು ಹಿಂದೆ  ಹೇಳಿದ ವಿಷಯವನ್ನು ವಿವರಿಸುತ್ತಾನೆ. ಅರ್ಜುನನ ಸಾರಥಿಯಾಗಿ ನಿಂತಿರುವ ಕೃಷ್ಣ ಹೇಳುತ್ತಾನೆ- "ನನಗೆ ಏನಾದರೂ ಮಾಡಬೇಕಾದ್ದು ಅಥವಾ ಮಾಡದೇ ಇದ್ದರೆ ತೊಂದರೆ ಆಗುವಂಥದ್ದು ಏನೂ ಇಲ್ಲ, ಆದರೆ ನಾನು ಕರ್ತವ್ಯ ಕರ್ಮದಲ್ಲಿ ನಿಂತಿದ್ದೇನೆ" ಎಂದು. ಮೂರು ಲೋಕದಲ್ಲಿ, ಸೃಷ್ಠಿ-ಸ್ಥಿತಿ-ಸಂಹಾರವನ್ನು ತನ್ನ ನಿತ್ಯ ಕರ್ಮವಾಗಿ ಮಾಡುತ್ತಿರುವ ಭಗವಂತ, ಎಲ್ಲವನ್ನು ತನ್ನ ಪ್ರೀತಿಯ ಭಕ್ತರಿಗಾಗಿ, ಜೀವಜಾತಕ್ಕಾಗಿ ಮಾಡುತ್ತಿದ್ದಾನೆಯೇ ಹೊರತು ಇನ್ನೇನೋ ಲಾಭಕ್ಕಾಗಿ ಅಲ್ಲ.
ಒಂದು ವೇಳೆ ಕೃಷ್ಣ ತನ್ನನ್ನು ನಿತ್ಯ ಕರ್ಮದಲ್ಲಿ ತೊಡಗಿಸಿಕೊಳ್ಳದೆ ಇದ್ದಿದ್ದರೆ ಎಲ್ಲರೂ ಆತನನ್ನು ಪ್ರಮಾಣವಾಗಿರಿಸಿಕೊಂಡು ಆತನ ದಾರಿಯನ್ನು ಹಿಡಿಯುತ್ತಿದ್ದರು. ಈ ಕಾರಣಕ್ಕಾಗಿ ಭಗವಂತ ಅವತಾರ ತಾಳಿದಾಗ ಒಬ್ಬ ಸಾಮಾನ್ಯ ಮಾನವನಂತೆ ಕಾಣಿಸಿಕೊಂಡು, ತನ್ನ ನಿತ್ಯ ಕರ್ಮಗಳನ್ನು ಆದರ್ಶವಾಗಿ ಜನತೆ ಪಾಲಿಸುವಂತೆ ಕರ್ತವ್ಯ ಕರ್ಮವನ್ನು ನಿರ್ವಹಿಸುತ್ತಾನೆ. ಕೃಷ್ಣಾವತಾರದಲ್ಲಿ ನೋಡಿದರೆ ಕೃಷ್ಣ ಸಂಧ್ಯಾವಂದನೆ ಇತ್ಯಾದಿ ಮೂಲ ಕರ್ಮವನ್ನು ತಪ್ಪದೆ ಮಾಡುತ್ತಿದ್ದ. ಇದು ಆತನಿಗೊಸ್ಕರವಲ್ಲ, ಆತನನ್ನು ಹಿಂಬಾಲಿಸುವ ಜನರಿಗೆ ಮಾರ್ಗದರ್ಶನಕ್ಕೋಸ್ಕರ.
ಕೃಷ್ಣ ಹೇಳುತ್ತಾನೆ "ನಾನು ಕರ್ಮ ಮಾಡದೇ ಇದ್ದರೆ ಇಡೀ ಲೋಕ ಕರ್ಮ ಪ್ರಜ್ಞೆಯನ್ನು ಕಳೆದುಕೊಂಡು ದಾರಿತಪ್ಪಿಬಿಡುತ್ತದೆ, ಸ್ವಚ್ಛಂದತೆ ಬಂದು ನಿರ್ದಿಷ್ಟ ವ್ಯವಸ್ಥೆ ಹೊರಟು ಹೋಗುತ್ತದೆ" ಎಂದು. ಯಾರಿಗೆ ಯಾವುದು ಧರ್ಮವೋ ಅದನ್ನು ಮಾಡಲೇ ಬೇಕು. ಅದೊಂದು ವ್ಯವಸ್ಥೆ. ಇಲ್ಲದಿದ್ದರೆ ಎಲ್ಲರೂ ತಮಗೆ ತೋಚಿದಂತೆ ಮಾಡಲಾರಂಭಿಸಿಬಿಡುತ್ತಾರೆ. "ಇದರಿಂದ ಅವ್ಯವಸ್ಥೆ ತಾಂಡವವಾಡುತ್ತದೆ ಹಾಗು ಅದಕ್ಕೆ ಜವಾಬ್ದಾರಿ ನಾವಾಗುತ್ತೇವೆ" ಎನ್ನುತ್ತಾನೆ ಕೃಷ್ಣ.

ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ  ಭಾರತ।
ಕುರ್ಯಾದ್ ವಿದ್ವಾಂಸ್ತಥಾsಸಕ್ತಶ್ಚಿಕೀರ್ಷುರ್ಲೋಕಸಂಗ್ರಹಮ್       ॥೨೫॥

ಸಕ್ತಾಃ ಕರ್ಮಣಿ ಅವಿದ್ವಾಂಸಃ ಯಥಾ ಕುರ್ವಂತಿ  ಭಾರತ
ಕುರ್ಯಾತ್  ವಿದ್ವಾನ್ ತಥಾ ಅಸಕ್ತಃ ಚಿಕೀರ್ಷುಃ ರ್ಲೋಕ ಸಂಗ್ರಹಮ್ -ಓ ಭಾರತ, ತಿಳಿಯದ ಮಂದಿ ಫಲದ ನಂಟಿಗಾಗಿ ಕರ್ಮಗಳನ್ನು ಮಾಡುತ್ತಾರೆ ಹೇಗೆ, ಹಾಗೇ ತಿಳಿದವನೂ ಕರ್ಮ ಮಾಡುತ್ತಿರಬೇಕು-ಫಲದ ನಂಟು ತೊರೆದು, ಸಮಾಜವನ್ನು ತಿದ್ದುವುದಕ್ಕಾಗಿ.

ತಿಳುವಳಿಕೆ ಇಲ್ಲದವರು ಫಲಾಪೇಕ್ಷೆಯಿಂದ ಕರ್ಮ ಮಾಡುತ್ತಾರೆ. ಆದರೆ ತಿಳಿದವನು, ಜ್ಞಾನಿ, ಯಾವುದೇ  ಫಲದ ಅಧಿಕಾರ ಸಾಧಿಸದೆ, ನಿಷ್ಕಾಮ ಕರ್ಮ ಮಾಡುತ್ತಿರಬೇಕು. "ನಾನು ನನ್ನ ಕಣ್ಮಂದೆ ಬೆಳೆಯುತ್ತಿರುವ ಜನಾಂಗಕ್ಕೆ ಮಾರ್ಗದರ್ಶನವಾಗಿ ಭಗವಂತನ ಸೇವೆ ಮಾಡುತ್ತಿದ್ದೇನೆ, ನನಗೆ ಇದರಿಂದ ಭಗವಂತ ಏನು ಕೊಟ್ಟರೂ ಸಂತೋಷ" ಎಂಬ ಸಂಕಲ್ಪದಿಂದ ಕರ್ಮ ಮಾಡಬೇಕು ಇದು ನಿಜವಾದ ಕರ್ಮಯೋಗ.