Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Saturday, July 9, 2011

Bhagavad Geeta Kannada Chapter-07 Shloka 27-28

ಭಗವಂತನನ್ನು ಪೂರ್ಣವಾಗಿ ತಿಳಿಯುವುದು ಅಸಾಧ್ಯ, ಆದರೆ ತಮ್ಮ ಯಥಾಶಕ್ತಿ ಅರಿಯಲು ಎಲ್ಲರಿಗೂ  ಏಕೆ ಸಾಧ್ಯವಾಗುವುದಿಲ್ಲ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.  

ಇಚ್ಛಾದ್ವೇಷಸಮುತ್ಥೇನ ದ್ವಂದ್ವಮೋಹೇನ ಭಾರತ
ಸರ್ವಭೂತಾನಿ ಸಮ್ಮೋಹಂ ಸರ್ಗೇ ಯಾಂತಿ ಪರಂತಪ       ೨೭

ಇಚ್ಛಾ ದ್ವೇಷ ಸಮುತ್ಥೇನ ದ್ವಂದ್ವ ಮೋಹೇನ ಭಾರತ
ಸರ್ವ ಭೂತಾನಿ ಸಮ್ಮೋಮ್  ಸರ್ಗೇ ಯಾಂತಿ ಪರಂತಪ-ಓ ಅರಿಗಳನ್ನು ತರಿದವನೆ, ಭರತ ವಂಶದ ಕುಡಿಯೆ, ಒಲವು-ಹಗೆತನಗಳಿಂದ ಹುಟ್ಟಿದ ಸುಖ-ದುಃಖ ಮುಂತಾದ ದ್ವಂದ್ವಗಳ [ಜೀವೇಶ್ವರರು ಮುಂತಾದ ದ್ವಂದ್ವಗಳ] ತಪ್ಪು ಗ್ರಹಿಕೆಯಿಂದ ಎಲ್ಲ ಜೀವಿಗಳೂ ಹುಟ್ಟಿನಿಂದಲೆ ಸುಳ್ಳಿನ ಕೆಟ್ಟದಾರಿ  ಹಿಡಿದಿವೆ.

ನಾವು ಹುಟ್ಟುವಾಗಲೇ ಹುಟ್ಟಿನ ಜೊತೆಗೆ ‘ಇಚ್ಛಾ-ದ್ವೇಷ’ ಸೇರಿಸಿಕೊಂಡು ಹುಟ್ಟುತ್ತೇವೆ. ಶರೀರ ಬೆಳೆದಂತೆ ಅದು ಬೆಳೆಯುತ್ತಾ ಹೋಗುತ್ತದೆ. ಇದರಿಂದ ಇಬ್ಬಂದಿತನ(ದ್ವಂದ್ವ)ದ ಗೊಂದಲ. ಯಾವುದರಿಂದ ಸುಖ, ಯಾವುದರಿಂದ ದುಃಖ ಎಂದು ಗೊತ್ತಿಲ್ಲದೆ ದುಃಖವನ್ನೇ ಸುಖ ಎಂದು ತಿಳಿದು ಅದರ ಬೆನ್ನು ಹತ್ತಿ ಕೊನೆಗೆ ದುಃಖ ಬಂದಾಗ ಅಯ್ಯೋ ಎನ್ನುತ್ತೇವೆ. ಸುಳ್ಳನ್ನೇ ಸತ್ಯ ಎಂದು ನಂಬುವುದು, ಜ್ಞಾನ-ಅಜ್ಞಾನದ ಗೊಂದಲ, ಸತ್ಯ-ಅಸತ್ಯದ ಗೊಂದಲ, ಹೀಗೆ ದ್ವಂದ್ವ ಮೋಹಕ್ಕೆ ಒಳಗಾದವರನ್ನು ತಿದ್ದುವುದು ಬಹಳ ಕಷ್ಟ. ಇದು ಬರಿಯ ಮೋಹ ಮಾತ್ರವಲ್ಲ, ಇದೊಂದು ಸಮ್ಮೋಹ! ನಾನು ತಿಳಿದಿರುವುದೇ ಸರಿ ಎನ್ನುವ ಹಠ, ತನ್ನದೇ ಸರಿ ಎನ್ನುವ ಆಗ್ರಹ. ಇದರಿಂದ ಮನುಷ್ಯ ಸತ್ಯವನ್ನು ಅರಿಯದೆ ಅಜ್ಞಾನಿಯಾಗುತ್ತಾನೆ. ಹೀಗೆ ಅಜ್ಞಾನದಿಂದ ಮೋಹ, ಮೋಹದಿಂದ ಸಮ್ಮೋಹ. ಗೊತ್ತಿಲ್ಲದೇ ಇರುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸದೆ ಇದ್ದಾಗ ಅದರಿಂದ ವಿಪರೀತ ಜ್ಞಾನ-ನಂತರ ನಾನು ನಂಬಿದ್ದೇ ಸರಿ ಎನ್ನುವ ಆಗ್ರಹ. ಇದು ಸಾಮಾನ್ಯವಾಗಿ ನಾವು ಕಾಣುವ ಮನುಷ್ಯನ ದೌರ್ಬಲ್ಯ. ಈ ಪ್ರಪಂಚದಲ್ಲಿ ಪ್ರತಿಯೊಬ್ಬ ದಡ್ಡನೂ ಕೂಡಾ ತಾನು ಎಲ್ಲರಿಗಿಂತ ಬುದ್ಧಿವಂತ ಎಂದು ತಿಳಿದಿರುತ್ತಾನೆ!  ಆದ್ದರಿಂದ ಇಡೀ ಜಗತ್ತಿನ ವ್ಯವಹಾರವನ್ನು ತನ್ನ ಬುದ್ಧಿಯ ಮಾನದಂಡದಿಂದ ಅಳೆದು ದಾರಿತಪ್ಪುತ್ತಾನೆ. ಇದನ್ನು ಮಹಾಭಾರತದಲ್ಲಿ ಹೀಗೆ ಹೇಳಿದ್ದಾರೆ: “ಸರ್ವೋಹಿ ಮನ್ಯತೇ ಲೋಕ ಆತ್ಮಾನಂ ಬುದ್ಧಿಮತ್ತರಂ” ಎಂದು. ತಾನು ಬುದ್ಧಿವಂತ, ನನ್ನ ತೀರ್ಮಾನವೇ ಸರಿ, ಉಳಿದವರಿಗೆ ನನ್ನಷ್ಟು ತಿಳುವಳಿಕೆ ಇಲ್ಲ ಅನ್ನುವ ತಪ್ಪು ಕಲ್ಪನೆಯಿಂದ ಮನುಷ್ಯ ಸಮ್ಮೋಹದತ್ತ  ಸಾಗುತ್ತಾನೆ. ಈ ಅಪಾಯದಿಂದ ಯಾರು ಹೇಗೆ ಪಾರಾಗುತ್ತಾರೆ ಎನ್ನುವುದನ್ನು ಮುಂದಿನ ಶ್ಲೋಕ ವಿವರಿಸುತ್ತದೆ.
ಇಲ್ಲಿ ಕೃಷ್ಣ ಅರ್ಜುನನ್ನು ‘ಭಾರತ’ ಮತ್ತು ‘ಪರಂತಪ’ ಎನ್ನುವ ವಿಶೇಷಣಗಳಿಂದ ಸಂಬೋಧಿಸಿದ್ದಾನೆ. ಭಗವಂತನ ಅರಿವು ಪಡೆಯಬೇಕಾದರೆ ನಾವು ಭಾರತ-ಪರಂತಪರಾಗಬೇಕು. ಬೆಳಕಿನ ದಾರಿಯಲ್ಲಿ ರಥನಾಗಿ ಸಾಗಿ(ಭಾರತ), ಪರತತ್ವದ ನಿರಂತರ ಚಿಂತನೆ(ಪರಂತಪ) ಮಾಡಿದಾಗ ಮಾತ್ರ ನಮಗೆ ಭಗವಂತನ  ಛಾಯೆ ತಿಳಿದೀತು ಎನ್ನುವುದು ಈ ವಿಶೇಷಣದ ಅರ್ಥವಿಶೇಷ.  
       
ಯೇಷಾಂ ತ್ವಂತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಮ್
ತೇ ದ್ವಂದ್ವ ಮೋಹನಿರ್ಮುಕ್ತಾ ಭಜಂತೇ  ಮಾಂ ದೃಢವ್ರತಾಃ    ೨೮

ಯೇಷಾಮ್ ತು ಅಂತಗತಮ್  ಪಾಪಮ್  ಜನಾನಾಮ್  ಪುಣ್ಯಕರ್ಮಣಾಮ್
ತೇ ದ್ವಂದ್ವ ಮೋಹ ನಿರ್ಮುಕ್ತಾಃ ಭಜಂತೇ  ಮಾಮ್  ದೃಢವ್ರತಾಃ –ಪುಣ್ಯವಂತರಾದ ಯಾವ ಜನರ ಪಾಪ ಕೊನೆಗೊಂಡಿದೆ ಅವರು ದ್ವಂದ್ವಗಳ ತಪ್ಪರಿವಿನಿಂದ ಕಳಚಿಕೊಂಡು ನಿಷ್ಠೆಯ ನೇಮದಿಂದ ನನ್ನನ್ನು ಸೇವಿಸುತ್ತಾರೆ.

ಹಿಂದಿನ ಶ್ಲೋಕದಲ್ಲಿ ಕೃಷ್ಣ ದ್ವಂದ್ವ ಮೋಹದ ಬಗ್ಗೆ ಹೇಳಿದ. ಇದಕ್ಕೆ ಮೂಲಭೂತವಾಗಿ ಎರಡು ಕಾರಣ. ಒಂದು ಜೀವ ಸ್ವರೂಪ(ಉದಾ: ದುರ್ಯೋಧನ, ಶಕುನಿ). ಇನ್ನೊಂದು ಪ್ರರಾಬ್ಧ ಕರ್ಮ(ಉದಾ: ಕರ್ಣ, ಅಜಾಮಿಳ, ಪಿಂಗಳೆ). ಜೀವ ಸ್ವರೂಪವೇ ಇಂತಹ ಗತಿಯಲ್ಲಿದ್ದರೆ ಅದಕ್ಕೆ ಯಾವುದೇ ಪರಿಹಾರ ಮಾರ್ಗವಿಲ್ಲ. ಆದರೆ ಯಾವುದೋ ಕಾರಣದಿಂದ ಕೆಟ್ಟ ದಾರಿಯಲ್ಲಿ ಸಾಗುವ ಸಾತ್ವಿಕ ಜೀವಕ್ಕೆ ಜ್ಞಾನದ ಮಾರ್ಗವಿದೆ. ಯಾವುದೋ ಒಂದು ದುರಂತದಿಂದ ಕೆಲವೊಮ್ಮೆ ಅಪರೋಕ್ಷ ಜ್ಞಾನಿಗಳೂ ದಾರಿ ತಪ್ಪುತ್ತಾರೆ. ಇಂತವರ ಪಾಪ ಕರ್ಮ ತೊಳೆದು ಹೋಗುವ ತನಕ ಅವರು ಸರಿ ದಾರಿಗೆ ಬರಲಾಗುವುದಿಲ್ಲ. ಆದರೆ ಕೆಲವೊಮ್ಮೆ ಜೀವನದಲ್ಲಿ ನಡೆಯುವ ಕೆಲವು ದುರಂತ ಅಥವಾ ಆಘಾತ ಇಂತವರನ್ನು ಮರಳಿ ಸತ್ಯದ ಮಾರ್ಗಕ್ಕೆ ಕರೆತರುತ್ತದೆ. ಇಂತಹ ಸಂದರ್ಭದಲ್ಲಿ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಭಾವನೆಯಿಂದ ದೇವರಲ್ಲಿ ಅಗಾಧವಾದ ಭಕ್ತಿ ಮೂಡುತ್ತದೆ.
ಪಶ್ಚಾತ್ತಾಪಕ್ಕಿಂತ ಶ್ರೇಷ್ಠವಾದ ಪ್ರಾಯಶ್ಚಿತ ಇನ್ನೊಂದಿಲ್ಲ. ಎಂತಹ ಪಾತಕವನ್ನೂ ಕೂಡ ಪಶ್ಚಾತ್ತಾಪದಿಂದ ತಿದ್ದಿಕೊಳ್ಳಬಹುದು. ನಾವು ನಮ್ಮ ಜೀವನದಲ್ಲಿ ನಮಗೆ ತಿಳಿದೋ ತಿಳಿಯದೆಯೋ ತಪ್ಪು ಮಾಡುತ್ತಿರುತ್ತೇವೆ. ಮಾನಸಿಕವಾಗಿ,  ದೈಹಿಕವಾಗಿ, ವಾಚಕವಾಗಿ ನಮಗೆ ತಿಳಿಯದೆಯೇ ನಮ್ಮಿಂದ ತಪ್ಪು ನಡೆಯುತ್ತಿರುತ್ತದೆ. ಆದರೆ ತಪ್ಪಿನ ಅರಿವಾದಾಗ ಹೃದಯದಿಂದ ಮೂಡುವ ಪಶ್ಚಾತ್ತಾಪ ಇಂತಹ ತಪ್ಪಿಗೆ ಪ್ರಾಯಶ್ಚಿತ. ವೈದಿಕ ಸಂಪ್ರದಾಯದಲ್ಲಿ ದೇವತಾರ್ಚನೆಯ ನಂತರ ನಮಸ್ಕಾರ ಮಾಡುವಾಗ ಹೇಳಿಕೊಳ್ಳುವ ಶ್ಲೋಕ ಒಂದಿದೆ.
ಪಾಪೋಽಹಂ ಪಾಪಕರ್ಮಾಹಂ ಪಾಪಾತ್ಮಾ ಪಾಪಸಂಭವ |
ತ್ರಾಹಿ ಮಾ ಕೃಪಯಾ ದೇವ ಸರ್ವಪಾಪಹರೋ ಭವ ||
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ |
ತಸ್ಮಾತ್ ಕಾರುಣ್ಯಭಾವೇನ ರಕ್ಷ ಮಾಂ ಜಗದೀಶ್ವರ ||
 ಇಲ್ಲಿ ನಾವು ಆ ಭಗವಂತನಲ್ಲಿ “ನಾನು ತಿಳಿದೋ ತಿಳಿಯದೆಯೋ ಮಾಡಿದ ತಪ್ಪನ್ನು ಕ್ಷಮಿಸು” ಎಂದು ಬೇಡುತ್ತೇವೆ. “ನಾನು ಹುಟ್ಟಿನಿಂದ ಪಾಪವನ್ನು ಹೊತ್ತು ಬಂದಿದ್ದೇನೆ, ಅದರಿಂದ ತಪ್ಪು ಮಾಡುತ್ತಿದ್ದೇನೆ, ಆದ್ದರಿಂದ ನನ್ನನ್ನು ಕ್ಷಮಿಸಿ ಈ ಪಾಪದಿಂದ ನನ್ನನ್ನು ಪಾರು ಮಾಡು” ಎಂದು ದೇವರಲ್ಲಿ ಶರಣಾಗುವುದು ಈ ಶ್ಲೋಕದ ಮೂಲಕ ನಾವು ದೇವರಲ್ಲಿ ಮಾಡುವ ಪ್ರಾರ್ಥನೆ. ಇಲ್ಲಿ ಕೃಷ್ಣ ಹೇಳುತ್ತಾನೆ “ತೇ ದ್ವಂದ್ವ ಮೋಹನಿರ್ಮುಕ್ತಾ ಭಜಂತೇ  ಮಾಂ ದೃಢವ್ರತಾಃ” ಎಂದು. ಅಂದರೆ  ಒಮ್ಮೆ ಇಂತಹ ಪಾಪ ಕರ್ಮದಿಂದ ಆಚೆ ಬಂದರೆ, ಎಲ್ಲಾ ದ್ವಂದ್ವ ಮೋಹಗಳೂ ಪರಿಹಾರವಾಗಿ ಭಗವಂತನಲ್ಲಿ ಗಾಢವಾದ ಭಕ್ತಿ ನೆಲೆ ನಿಲ್ಲುತ್ತದೆ. ಈ ರೀತಿ ಪಾಪದ ಅರಿವಾಗಿ ಪಶ್ಚಾತ್ತಾಪದಿಂದ ಭಗವಂತನೆಡೆಗೆ ತಿರುಗಿದವರು ಬಹಳ ಬೇಗ ಭಗವಂತನ ದಾರಿಯಲ್ಲಿ ಸಾಗುತ್ತಾರೆ.

No comments:

Post a Comment