Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Friday, September 23, 2011

Bhagavad Geeta Kannada Chapter-10 Shloka 36-38



ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ।
ಜಯೋSಸ್ಮಿ ವ್ಯವಸಾಯೋSಸ್ಮಿ ಸತ್ತ್ವಂ ಸತ್ತ್ವವತಾಮಹಮ್            ॥೩೬॥

ದ್ಯೂತಮ್  ಛಲಯತಾಮ್ ಅಸ್ಮಿ ತೇಜಃ ತೇಜಸ್ವಿನಾಮ್ ಅಹಮ್ ।
ಜಯಃ ಅಸ್ಮಿ ವ್ಯವಸಾಯಃ ಅಸ್ಮಿ ಸತ್ತ್ವಮ್  ಸತ್ತ್ವವತಾಮ್ ಅಹಮ್—ಮೋಸಗಾರರ ಜೂಜು ನಾನು. [ಕ್ರೀಡಾರೂಪನಾಗಿ ‘ದ್ಯೂತ’ ಎನ್ನಿಸಿ ಜೂಜಿನಲ್ಲಿದ್ದೇನೆ.] ವೀರರಾದವರ ಬೀರ ನಾನು. [ಪ್ರಕಾಶರೂಪನಾದ್ದರಿಂದ ‘ತೇಜಸ್’ ಎನ್ನಿಸಿ ಬೀರದಲ್ಲಿದ್ದೇನೆ.] ಗೆಲುವು ನಾನು. [ಎಲ್ಲವನ್ನು ಗೆದ್ದವನಾಗಿ ‘ಜಯ’ ಎನ್ನಿಸಿ ಗೆಲುವಿನಲ್ಲಿದ್ದೇನೆ.] ದುಡಿಮೆ ನಾನು. [ನಿಶ್ಚಯ ಜ್ಞಾನರೂಪನಾದ್ದರಿಂದ ‘ವ್ಯವಸಾಯ’ ಎನ್ನಿಸಿ ದುಡಿಮೆಯಲ್ಲಿದ್ದೇನೆ.] ಹಿರಿಯ ವ್ಯಕ್ತಿಗಳ ಘನತೆ ನಾನು.[ಸದ್ಗುಣಗಳ ಗಣಿಯಾಗಿ ‘ಸತ್ವ’ ಎನ್ನಿಸಿ ದೊಡ್ಡವರ ಘನತೆಯಲ್ಲಿದ್ದೇನೆ.]

ಕೌರವ ಪಾಂಡವರ ನಡುವೆ ಯುದ್ಧವಾಗಲು ಕಾರಣವಾಗಿ ಕಾಣುವುದು ದ್ಯೂತ. ಇದು ಮೊಸಗಾರಿಕೆಯಲ್ಲಿ ಅತ್ಯಂತ ಶ್ರೇಷ್ಠ ಕಲೆ! ಭಗವಂತ ‘ದ್ಯೂತ’ ಎನ್ನಿಸಿ ಜೂಜಿನಲ್ಲಿದ್ದಾನೆ. ಇಲ್ಲಿ ಭಗವಂತನ ನಾಮ ‘ದ್ಯೂತ’. ದಿವು ಅಂದರೆ ಕ್ರೀಡೆ. ಸದಾ ಸೃಷ್ಟಿ ಸ್ಥಿತಿ ಸಂಹಾರಗಳ ಕ್ರೀಡೆಯಲ್ಲಿ ನಿರತನಾದ ಭಗವಂತ ‘ದ್ಯೂತ’ ಶಬ್ದ ವಾಚ್ಯ. ಆತ್ಮಬಲವುಳ್ಳವರ ತೇಜಸ್ಸು ಭಗವಂತ. ಜಯಃ ನಾಮಕನಾಗಿ ಗೆಲುವಿನಲ್ಲಿ ಭಗವಂತನಿದ್ದಾನೆ. ಜಗತ್ತಿನ ಎಲ್ಲ ವಿಜಯಗಳ ಪ್ರೇರಕ ಭಗವಂತ.  ಒಂದು ಕಾರ್ಯದಲ್ಲಿ ಉತ್ಸಾಹದಿಂದ ತೊಡಗುವಂತೆ ಮಾಡುವವನು ‘ವ್ಯವಸಾಯ’ ನಾಮಕ  ಭಗವಂತ. ಬಲನಿಯಾಮಕನಾಗಿ ಆತ ಬಲಶಾಲಿಗಳಲ್ಲಿ ‘ಸತ್ವ’ ನಾಮಕನಾಗಿ ಕೂತಿದ್ದಾನೆ.

ವೃಷ್ಣೀನಾಂ ವಾಸುದೇವೋSಸ್ಮಿ ಪಾಂಡವಾನಾಂ ಧನಂಜಯಃ ।
ಮುನೀನಾಮಪ್ಯಹಂ ವ್ಯಾಸಃ ಕವೀನಾಮುಶನಾ ಕವಿಃ ॥೩೭॥

ವೃಷ್ಣೀನಾಮ್  ವಾಸುದೇವಃ ಅಸ್ಮಿ ಪಾಂಡವಾನಾಮ್  ಧನಂಜಯಃ ।
ಮುನೀನಾಮ್ ಅಪಿ ಅಹಮ್  ವ್ಯಾಸಃ ಕವೀನಾಮ್ ಉಶನಾ ಕವಿಃ – ವೃಷ್ಣಿವಂಶದ ರಾಜನ್ಯರಲ್ಲಿ [ವಾಸು=ಎಲ್ಲವನ್ನೂ ಆವರಿಸಿ, ಎಲ್ಲದರೊಳಗೂ ನೆಲೆಸಿರುವ, ದೇವ=ದಿವ್ಯರೂಪನಾದ್ದರಿಂದ] ವಾಸುದೇವನಾಗಿ ಅವತರಿಸಿದ್ದೇನೆ. ಪಾಂಡವರಲ್ಲಿ ಅರ್ಜುನ ನಾನು. [ಸಿರಿಯನ್ನು ಗೆದ್ದವನಾಗಿ ‘ಧನಂಜಯ’ ಎನ್ನಿಸಿ ಅರ್ಜುನನಲ್ಲಿದ್ದೇನೆ.] ಮುನಿಗಳಲ್ಲಿ [ವಿ=ಎಲ್ಲಕ್ಕಿಂತ ವಿಶಿಷ್ಟನಾಗಿ, ಆ=ಎಲ್ಲೆಡೆಯು, ಸಃ =ಅವನೆ ತುಂಬಿರುವುದರಿಂದ]  ವ್ಯಾಸ ನಾನು. ವಿಜ್ಞಾನಿಗಳಲ್ಲಿ ಹಿರಿಯ ವಿದ್ವಾಂಸನಾದ ಶುಕ್ರ ನಾನು. [ಇಚ್ಛಾರೂಪನಾದ್ದರಿಂದ ‘ಉಶನಸ್’ ಎನ್ನಿಸಿ ದೈತ್ಯಗುರು ಶುಕ್ರನಲ್ಲಿದ್ದೇನೆ.]

ಸಾಕ್ಷಾತ್ ವಿಭೂತಿಯನ್ನು ಹೇಳುತ್ತ ಕೃಷ್ಣ ಹೇಳುತ್ತಾನೆ “ವೃಷ್ಣೀನಾಮ್  ವಾಸುದೇವಃ ಅಸ್ಮಿ” ಎಂದು.  ಇಲ್ಲಿ ಭಗವಂತನ ವಿಭೂತಿ ನಾಮ ‘ವಾಸುದೇವಃ’. ಎಲ್ಲೆಡೆ ಇದ್ದರೂ ಕಾಣಿಸದೆ, ಅಪರೋಕ್ಷ ಜ್ಞಾನವನ್ನು ಕರುಣಿಸಿ ಪ್ರತ್ಯಕ್ಷನಾಗುವ ಭಗವಂತ ವಾಸುದೇವಃ. ಪಾಂಡವರಲ್ಲಿ ‘ಧನಂಜಯಃ’ ನಾನು ಎನ್ನುತ್ತಾನೆ ಕೃಷ್ಣ. ಇದು ಏಕದೇಶ ವಿಭೂತಿ. ಅರ್ಜುನನಲ್ಲಿ ಭಗವಂತನ ವಿಶೇಷ ಆವೇಶ ಇತ್ತು. ಆತನಲ್ಲಿ ಭಗವಂತ  ‘ಧನಂಜಯಃ’ ನಾಮಕನಾಗಿ ನಿಂತಿದ್ದ. ಧನಂಜಯಃ ಎನ್ನುವಲ್ಲಿ  ಧನ ಎಂದರೆ ಜ್ಞಾನ.  ಭಗವಂತನ ಅರಿವು, ಅದರಿಂದ ಪಡೆಯುವ ಮೋಕ್ಷ ಶಾಶ್ವತ ಧನ. ಅದನ್ನು ಕೊಡುವ ಭಗವಂತ ಧನಂಜಯಃ. ಮುನಿಗಳಲ್ಲಿ ವ್ಯಾಸ. ಇದು ಭಗವಂತನ ಸಾಕ್ಷಾತ್ ವಿಭೂತಿ. ವ್ಯಾಸರು ವೇದವನ್ನು 1137 ಸಂಹಿತೆಯಾಗಿ ವಿಭಾಗಮಾಡಿ ಜ್ಞಾನಿಗಳ ಮುಖೇನ ನಮಗೆ ಕೊಟ್ಟಿದ್ದಾರೆ. ಪ್ರಧಾನವಾಗಿ ವೇದಗಳು ನಾಲ್ಕು. ಪದ್ಯ ಸಂಕಲನ ಋಗ್ವೇದ, ಗದ್ಯ ಸಂಕಲನ ಯಜುರ್ವೇದ, ಗಾನಕ್ಕೋಸ್ಕರ ಸಾಮವೇದ, ಅಥರ್ವ ಮುನಿ ಬ್ರಹ್ಮನಿಂದ ಉಪದೇಶ ಪಡೆದು ಬರೆದ ಅಥರ್ವಣ ವೇದ. ಮೂಲಭೂತವಾಗಿ ವೇದಗಳು ಮೂರು ಆದರೆ ಋಷಿ ಸಂಪ್ರದಾಯದಿಂದ ನಾಲ್ಕು ವೇದಗಳ ಸೃಷ್ಟಿಯಾಯಿತು. ಇದನ್ನೇ ವೇದವ್ಯಾಸರು ನಾಲ್ಕು ಜನ ಮುನಿಗಳಿಗೆ (ಬೈಲ, ವೈಶಂಪಾಯನ, ಸುಮಂತು ಮತ್ತು ಜೈಮಿನಿಗೆ) ಹೇಳಿದರು. ಈ ನಾಲ್ಕು ಮುನಿಗಳು ಮತ್ತೆ ವೇದವನ್ನು ಅನೇಕ ಶಾಖೆಗಳಾಗಿ(ಸಂಹಿತೆ) ವಿಂಗಡಿಸಿದರು. ಋಗ್ವೇದದಲ್ಲಿ 24 ಸಂಹಿತೆಗಳಿವೆ; ಯಜುರ್ವೇದದಲ್ಲಿ ಪ್ರಮುಖವಾಗಿ ಎರಡು ಶಾಖೆ. ಒಂದು ಶುಕ್ಲ ಯಜುರ್ವೇದ ಹಾಗು ಇನ್ನೊಂದು ಕೃಷ್ಣ ಯಜುರ್ವೇದ. ಶುಕ್ಲ ಯಜುರ್ವೇದದಲ್ಲಿ 15 ಸಂಹಿತೆ, ಹಾಗು ಕೃಷ್ಣ ಯಜುರ್ವೇದದಲ್ಲಿ 86 ಸಂಹಿತೆ, ಒಟ್ಟು 101 ಸಂಹಿತೆ. ಸಾಮವೇದದಲ್ಲಿ 1000 ಶಾಖೆಗಳು, ಒಂದು ಸಾವಿರ ಬಗೆಯ ಗಾನ ಪದ್ಧತಿ! ಆದರೆ ಇಂದು ಕೇವಲ ಮೂರು (ಜೈಮಿನಿಯ, ರಣಾಯನಿಯ  ಹಾಗು ಕೌತುಮನ) ಗಾನಪದ್ಧತಿ ಮಾತ್ರ ಪ್ರಚಲಿತದಲ್ಲಿದೆ. ಅಥರ್ವ ವೇದದಲ್ಲಿ  ಒಟ್ಟು 12  ಶಾಖೆಗಳು. ಹೀಗೆ ವೇದವನ್ನು  1137 (24+101+12+1000) ಸಂಹಿತೆಗಳಾಗಿ ವಿಂಗಡಿಸಿ ವಿಸ್ತಾರ ಮಾಡಿದ ಮುನಿ ವ್ಯಾಸ. ಮನುಷ್ಯ ಸ್ವಭಾವದ ಬುದ್ಧಿ ವೈಚಿತ್ರ್ಯದ ಜ್ಞಾನ ಸಾಗರವನ್ನು ನಮ್ಮ ಮುಂದೆ ತೆರೆದಿಟ್ಟ, ಎಲ್ಲೆಡೆ ತುಂಬಿರುವ ಭಗವಂತ ವ್ಯಾಸಃ. ದೈತ್ಯ ಗುರು ಶುಕ್ರಾಚಾರ್ಯರಲ್ಲಿ ‘ಉಶನ’ ನಾಮಕನಾಗಿ ಭಗವಂತ ನಿಂತ. ಈ ಕಾರಣದಿಂದ ಗ್ರಹಗಳಲ್ಲಿ ಶುಕ್ರ ಒಬ್ಬನಾಗಿ ಸ್ಥಾನ ಪಡೆದ. ತನ್ನ ಇಚ್ಛಾಮಾತ್ರದಿಂದಲೇ ಎಲ್ಲ ಕಾರ್ಯವನ್ನು ಮಾಡುವ ಭಗವಂತ ‘ಉಶನ’.                      

ದಂಡೋ ದಮಯತಾಮಸ್ಮಿ ನೀತಿರಸ್ಮಿ ಜಿಗೀಷತಾಮ್ ।
ಮೌನಂ ಚೈವಾಸ್ಮಿ ಗುಹ್ಯಾನಾಂ ಜ್ಞಾನಂ ಜ್ಞಾನವತಾಮಹಮ್ ॥೩೮॥

ದಂಡಃ ದಮಯತಾಮ್ ಅಸ್ಮಿ ನೀತಿಃ ಅಸ್ಮಿ ಜಿಗೀಷತಾಮ್ ।
ಮೌನಮ್  ಚ ಏವ ಅಸ್ಮಿ ಗುಹ್ಯಾನಾಮ್ ಜ್ಞಾನಮ್ ಜ್ಞಾನವತಾಮ್ ಅಹಮ್  --ಬಗ್ಗುಬಡಿಯುವವರ ದಂಡನೀತಿ ನಾನು. [ದಂಡಿಸುವವನಾದ್ದರಿಂದ ‘ದಂಡ’ ಎನ್ನಿಸಿ ದಂಡನೀತಿಯಲ್ಲಿದ್ದೇನೆ.] ಗೆಲ್ಲಬಯಸುವವರ ನಯಗಾರಿಕೆ ನಾನು. [ಗೆಲುವಿನತ್ತ ಕರೆದೊಯ್ಯುವುದರಿಂದ ‘ನೀತಿ’ ಎನ್ನಿಸಿ ನಯಗಾರಿಕೆಯಲ್ಲಿದ್ದೇನೆ.] ಗುಟ್ಟುಗಳಲ್ಲಿ ಮೌನ ನಾನು. [ಮುನಿಗಳಿಂದ ಸ್ತುತನಾಗಿ ‘ಮೌನ’ ಎನ್ನಿಸಿ ಮೌನದಲ್ಲಿದ್ದೇನೆ.] ಬಲ್ಲವರ ತಿಳಿವು ನಾನು. [ಅರಿವಿನ ಮೂರ್ತಿಯಾದ್ದರಿಂದ ‘ಜ್ಞಾನ’ ಎನ್ನಿಸಿ ತಿಳಿವಿನಲ್ಲಿದ್ದೇನೆ.]

“ದುಷ್ಟರನ್ನು  ದಮನ ಮಾಡುವ ದಮನಶಕ್ತಿ ನಾನು” ಎನ್ನುತ್ತಾನೆ ಕೃಷ್ಣ. ಈ ದಮನಶಕ್ತಿಯಾಗಿ ವೀರರಲ್ಲಿ ಭಗವಂತ ಕೂತಿದ್ದಾನೆ. ದಂಡ ಎಂದರೆ ಶಿಕ್ಷೆ. ಸಂಸ್ಕೃತದಲ್ಲಿ ಶಿಕ್ಷೆ ಎನ್ನುವುದಕ್ಕೆ ಶಿಕ್ಷಣ ಎನ್ನುವ ಅರ್ಥವಿದೆ. ಆದರೆ ಇಲ್ಲಿ ದಂಡ ಎಂದರೆ ದಂಡಿಸುವುದು(Punishment). ತಪ್ಪು ಮಾಡಿದವರಿಗೆ ದೇವರ ರಾಜ್ಯದಲ್ಲಿ ಕ್ಷಮೆ ಇಲ್ಲ. ನಾವು ಮಾಡಿದ ಕರ್ಮವನ್ನು ನಾವು ಅನುಭವಿಸಲೇಬೇಕು. ತಪ್ಪು ಮಾಡಿದವರಿಗೆ ನಿರ್ದಾಕ್ಷಿಣ್ಯ ಹಾಗು ನಿಷ್ಠುರವಾದ ದಂಡನೆಯನ್ನು ಕೊಡುವ ಭಗವಂತ ‘ದಂಡಃ’. ಗೆಲ್ಲುವ ಶಕ್ತಿಯಾಗಿ ಎಲ್ಲರನ್ನು ನಿಯಂತ್ರಣ ಮಾಡುವ ಭಗವಂತ ‘ನೀತಿಃ’. ಮನನಶಕ್ತಿಯಾಗಿ ನಿಂತ ಭಗವಂತ ‘ಮೌನಃ’. ಬಲ್ಲವರ ತಿಳಿವಾಗಿರುವ ಭಗವಂತ ‘ಜ್ಞಾನಃ’.

ಮೂಲಭೂತವಾಗಿ ವಿಭೂತಿಗಳ ವಿಸ್ತಾರ ಇಲ್ಲಿಗೆ ಮುಗಿಯಿತು. ಮುಂದೆ ವಿಭೂತಿಯ ಉಪಸಂಹಾರವನ್ನು ಈ ಅಧ್ಯಾಯದ ಉಳಿದ ಭಾಗದಲ್ಲಿ ನೋಡೋಣ.     

No comments:

Post a Comment