Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Monday, September 12, 2011

Bhagavad Geeta Kannada Chapter-10 Shloka 25


ಮಹರ್ಷೀಣಾಂ ಭೃಗುರಹಂ ಗಿರಾಮಸ್ಮ್ಯೇಕಮಕ್ಷರಮ್
ಯಜ್ಞಾನಾಂ ಜಪಯಜ್ಞೋSಸ್ಮಿ ಸ್ಥಾವರಾಣಾಂ ಹಿಮಾಲಯಃ ೨೫

ಹಾ ಋಷೀಣಾಮ್  ಭೃಗುಃ ಅಮ್  ಗಿರಾಮ್ ಅಸ್ಮಿ ಏಕಮ್ ಅಕ್ಷರಮ್
ಯಜ್ಞಾನಾಮ್ ಜಪಯಜ್ಞಃ ಅಸ್ಮಿ ಸ್ಥಾವರಾಣಾಮ್  ಹಿಮಾಲಯಃ –ಮಹರ್ಷಿಗಳಲ್ಲಿ ಭೃಗು ನಾನು. [ಕೆಟ್ಟವರನ್ನು ಸುಟ್ಟುರಿದು, ‘ಭೃಗು’ ಎನ್ನಿಸಿ, ‘ಭೃಗು’ಮುನಿಯಲ್ಲಿದ್ದೇನೆ.] ವಾಙ್ಮಯಗಳಲ್ಲಿ ಓಂಕಾರವೆಂಬ ಒಂದಕ್ಷರ ನಾನು. [ಎಲ್ಲಕ್ಕಿಂತ ಮಿಗಿಲಾಗಿ ‘ಏಕ’ ಎನ್ನಿಸಿ, ಅಳಿವಿರದ್ದರಿಂದ ‘ಅಕ್ಷರ’ ಎನ್ನಿಸಿ ಓಂಕಾರವಾಚ್ಯನಾಗಿದ್ದೇನೆ.] ಯಜ್ಞಗಳಲ್ಲಿ ಜಪಯಜ್ಞ ನಾನು.[ಜ=ಹುಟ್ಟಿದ್ದನ್ನೆಲ್ಲ, ಪ=ಪಾಲಿಸುವುದರಿಂದ ‘ಜಪ’ಎನ್ನಿಸಿ, ಎಲ್ಲರ ಎಲ್ಲ ಪೂಜೆಗಳನ್ನು ಕೊಳ್ಳುವುದರಿಂದ ‘ಯಜ್ಞ’ಎನ್ನಿಸಿ ಜಪಯಜ್ಞದಲ್ಲಿದ್ದೇನೆ.] ಘನವಾದ ಬೆಟ್ಟಗಳಲ್ಲಿ ಹಿಮಾಲಯ ನಾನು. [ಹ್ರೀ=ಲಕ್ಷ್ಮಿಯ ‘ಹ್ರೀ’ನಾಮಕ ರೂಪಕ್ಕೆ ಮತ್ತು ಮಾ=’ಶ್ರೀ’ ನಾಮಕ ರೂಪಕ್ಕೆ ಆಲಯ=ನೆಲೆಯಾದ್ದರಿಂದ ‘ಹಿಮಾಲಯ’ ಎನ್ನಿಸಿ ಹಿಮಗಿರಿಯಲ್ಲಿದ್ದೇನೆ.]

ಈ ಹಿಂದೆ ನಾವು ದೇವರ್ಷಿ ಬೃಹಸ್ಪತಿಯ ಬಗ್ಗೆ ನೋಡಿದೆವು. ಇವರು ದೇವಲೋಕಕ್ಕೆ ಸಂಬಂಧಪಟ್ಟವರು. ಇವರನ್ನು ಬಿಟ್ಟು ಇತರ ಮಹರ್ಷಿಗಳನ್ನು ನೋಡಿದರೆ-ಭಗವಂತನನ್ನು ಕಂಡ ವಿಶಿಷ್ಟರಲ್ಲಿ ಅತ್ಯಂತ ಶ್ರೇಷ್ಠರಾದವರು ಭೃಗು ಮಹರ್ಷಿಗಳು. ವಿಶ್ವಾಮಿತ್ರ-ವಸಿಷ್ಠರು ತಾರತಮ್ಯ ಕಕ್ಷೆಯಲ್ಲಿ ಹದಿನಾರನೇ ಸ್ಥಾನದಲ್ಲಿದ್ದರೆ,  ಭೃಗುಮುನಿಗಳು ಇವರಿಂದ ಎತ್ತರದಲ್ಲಿ ಹದಿನೈದನೇ ಕಕ್ಷೆಯಲ್ಲಿ ಅಗ್ನಿಗೆ ಸಮಾನರಾಗಿದ್ದಾರೆ. ಇವರು ಭೂಮಿಯಲ್ಲಿ ಋಷಿಗಳ ಮಾಲಿಕೆಯಲ್ಲಿ ಹೊಸ ಆವಿಷ್ಕಾರ ಮಾಡಿದವರು. ಭಾಗವತದಲ್ಲಿ ಬರುವ ಒಂದು ಕಥೆಯಂತೆ ತ್ರಿಮೂರ್ತಿಗಳಲ್ಲಿ ಯಾರು ಅತ್ಯಂತ ಶ್ರೇಷ್ಟರು ಎಂದು ಅಳೆಯುವ ನಿಯೋಗಶ್ರೇಷ್ಠರಾಗಿ ಹೋಗಿ, ‘ನಾರಾಯಣ’ ಸರ್ವ ಶ್ರೇಷ್ಠ ಎಂದು ಜಗತ್ತಿಗೆ ಸಾರಿದ ಬಹಳ ದೊಡ್ಡ ಮುನಿ ಭೃಗು. ಈ ಕಥೆಯಲ್ಲಿ ಹೇಳುವಂತೆ- ನಿಯೋಗ ಶ್ರೇಷ್ಠರಾಗಿ ಭೃಗು ಮೊದಲು ಶಿವನಲ್ಲಿಗೆ, ನಂತರ ಬ್ರಹ್ಮನಲ್ಲಿಗೆ ಹೋಗುತ್ತಾರೆ. ಅಲ್ಲಿ ಅವರಿಗೆ ಯಾವ ಪುರಸ್ಕಾರವೂ ದೊರೆಯದಿದ್ದಾಗ, ಭೃಗು ಸಿಟ್ಟಿನಿಂದಲೇ ನಾರಾಯಣನಲ್ಲಿಗೆ ಹೋಗುತ್ತಾರೆ. ಅಲ್ಲಿ ವಿಷ್ಣು ಕೂಡಾ ಇವರನ್ನು ಗಮನಿಸದೇ ಇದ್ದಾಗ, ಸಿಟ್ಟಿನಿಂದ ವಿಷ್ಣುವಿನ ಎದೆಗೆ ಒದೆಯುತ್ತಾರೆ. ಆಗ ಭಕ್ತವತ್ಸಲ ನಾರಾಯಣ: “ನೀವು ಕರೆದಿದ್ದರೆ ನಾನು ಬರುತ್ತಿದ್ದೆ, ಈ ರೀತಿ ಒದೆದುದರಿಂದ ನಿಮ್ಮ ಕಾಲಿಗೆ ಅದೆಷ್ಟು ನೋವಾಯಿತೋ” ಎಂದು ಅವರ ಕಾಲನ್ನು ಉಜ್ಜಲು ಆರಂಭಿಸುತ್ತಾನೆ. ಆಗ ಭೃಗು ತನ್ನ ತಪ್ಪನ್ನು ಅರಿತು ನಾರಾಯಣನಲ್ಲಿ ಶರಣಾಗುತ್ತಾರೆ. ಈ ಕಥೆಯನ್ನು ನೋಡಿದಾಗ ನಮಗೆ ಈ ಮುನಿಗಳಿಗೆ ಭಗವಂತನ ಮಹತ್ವ ಗೊತ್ತಿರಲಿಲ್ಲವೇ ಎನ್ನುವ ಪ್ರಶ್ನೆ ಮೂಡುತ್ತದೆ. ಖಂಡಿತವಾಗಿ ಅವರಿಗೆ ಭಗವಂತನ ಪೂರ್ಣ ಮಹತ್ವ ತಿಳಿದಿದೆ. ಇದು ಕೇವಲ ಜನಸಾಮಾನ್ಯರಿಗೆ ಕ್ರಿಯೆಯ ಮೂಲಕ ವಿಷಯನ್ನು ತಿಳಿಸುವ ಒಂದು ಕಾರ್ಯ ಅಷ್ಟೆ. ಇದೇ ರೀತಿ “ನೀನು ಭೂಮಿಯ ಮೇಲೆ ಹತ್ತು ಬಾರಿ ಅವತಾರ ತಾಳು” ಎಂದು ಭಗವಂತನಿಗೆ ಶಾಪ ಕೊಟ್ಟವರು ಭೃಗು. ಅವರ ಶಾಪಕ್ಕೆ ಪುರಸ್ಕಾರ ಕೊಡುವುದಕ್ಕೆ ಭಗವಂತ ಭೂಮಿಯ ಮೇಲೆ ಹತ್ತು ಅವತಾರ ತಾಳಿದ. ಲಕ್ಷ್ಮಿ ಭಾರ್ಗವಿಯಾಗಿ ಭೃಗು ಮುನಿಯಲ್ಲಿ ಮಗಳಾಗಿ ಹುಟ್ಟಿದಳು. ಈ ರೀತಿ ಭೃಗುವಿನಲ್ಲಿ ಅನೇಕ ವೈಶಿಷ್ಟ್ಯವನ್ನು ಕಾಣುತ್ತೇವೆ. ಇದಕ್ಕೆಲ್ಲ ಕಾರಣ ಭೃಗುವಿನಲ್ಲಿ ಭಗವಂತನ ವಿಶೇಷ ಸನ್ನಿದಾನ.
ಇಲ್ಲಿ ಬಂದಿರುವ ಭಗವಂತನ ನಾಮ ‘ಭೃಗುಃ’. ಭರ್ಜನಾತ್ ಇತಿ ಭೃಗುಃ. ಪ್ರಳಯ ಕಾಲದಲ್ಲಿ ಎಲ್ಲವನ್ನು ಭರ್ಜನೆ ಮಾಡುವ ಭಗವಂತ, ಮುಖ್ಯವಾಗಿ ಭಕ್ತರ ಪಾಪವನ್ನು ಭರ್ಜನೆ(ನಾಶ)ಮಾಡುವ ಭೃಗುಃ. ಭಗವಂತ ತನ್ನ ಭಕ್ತರ ಜೀವನದಲ್ಲಿ ಅಡ್ಡಿ ಮಾಡುವ ದುಷ್ಟ ಶಕ್ತಿಗಳನ್ನು ಭರ್ಜನೆ ಮಾಡುವವ. ದುಷ್ಟರನ್ನು ಮತ್ತು ಅಧರ್ಮವನ್ನು ಭರ್ಜನೆ ಮಾಡಿ, ಧರ್ಮ ಸಂಸ್ಥಾಪನೆ ಮಾಡುವ ಭಗವಂತ ಭೃಗುಃ ಶಬ್ದ ವಾಚ್ಯ. ಋಷಿಗಳಲ್ಲಿ ಅತ್ಯಂತ ಎತ್ತರ ಸ್ಥಾನ ಭೃಗುವಿಗೆ ಬರುವಂತೆ ಮಾಡಿ, ಅವರಲ್ಲಿ ಭೃಗು ಶಬ್ದ ವಾಚ್ಯನಾಗಿ ಭಗವಂತ ಸನ್ನಿಹಿತನಾಗಿದ್ದಾನೆ. ಇದು ನಾವು ಉಪಾಸನೆಯಲ್ಲಿ ತಿಳಿದಿರಬೇಕಾದ ಮುಖ್ಯವಾದ ಅಂಶ.
ಋಷಿಗಳ ಬಗ್ಗೆ ಹೇಳಿದಾಗ ಋಷಿಗಳು ಭಗವಂತನಿಗೆ ಹತ್ತಿರ ಹೇಗಾದರು ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಇದಕ್ಕೆ ಕಾರಣ- ಉಪಾಸನೆ, ಮಂತ್ರ-ಜಪ ಸಿದ್ಧಿ.  ಕ್ಷತ್ರಿಯನಾದ ವಿಶ್ವಾಮಿತ್ರ ಕೂಡ ವೇದಮಂತ್ರ ಜಪ ಸಿದ್ಧಿಯಿಂದ ಬ್ರಹ್ಮರ್ಷಿಯಾದ. ಋಷಿಯಾಗಬೇಕಿದ್ದರೆ, ಋಷಿತ್ವ ಪಡೆಯಬೇಕಿದ್ದರೆ ಓಂಕಾರದ ಉಪಾಸನೆಯಿಂದ ಭಗವಂತನನ್ನು ಸಾಕ್ಷಾತ್ಕಾರಗಳಿಸಿಕೊಳ್ಳಬೇಕು. ಪ್ರಪಂಚದಲ್ಲಿರುವ ಅತ್ಯಂತ ಮಹತ್ವವಾದ ಮತ್ತು ಶ್ರೇಷ್ಠ ಶಬ್ದ ಓಂಕಾರ. ಈ ಓಂಕಾರದಲ್ಲಿ ಅಕ್ಷರಃ ನಾಮಕ ಭಗವಂತನ ವಿಶೇಷ ಸನ್ನಿದಾನವಿದೆ. ಓಂಕಾರ ಭಗವಂತನ ವಿಶೇಷ(Exclusive)ನಾಮ. [ಓಂಕಾರಕ್ಕೆ ಕೃಷ್ಣ ಇಷ್ಟು ಮಹತ್ವ ಏಕೆ ಕೊಟ್ಟ, ಓಂಕಾರದಲ್ಲಿರುವ ಅಸಾಧಾರಣ ವೈಶಿಷ್ಟ್ಯ ಏನು ಎನ್ನುವುದರ ವಿಶೇಷ ಅರ್ಥ ವಿವರಣೆಯನ್ನು, ನಾವು ಏಳನೇ ಅಧ್ಯಾಯದಲ್ಲಿ ಈಗಾಗಲೇ ನೋಡಿದ್ದೇವೆ(ಅ-೭, ಶ್ಲೋಕ-೮)]. ಎಂದೂ ನಾಶವಿಲ್ಲದ(ಅ-ಕ್ಷರ) ಭಗವಂತ ಎಲ್ಲರಿಗಿಂತ ಹಿರಿದಾದ ಏಕಮಾತ್ರ ತತ್ವ. ಆದ್ದರಿಂದ ಆತ ಏಕಃ.
ಓಂಕಾರದ ನಂತರ ಇಲ್ಲಿ ಜಪಯಜ್ಞದ ಬಗ್ಗೆ ಕೃಷ್ಣ ಹೇಳುತ್ತಾನೆ. “ಯಜ್ಞಾನಾಮ್ ಜಪಯಜ್ಞಃ ಅಸ್ಮಿ” ಎನ್ನುತ್ತಾನೆ ಕೃಷ್ಣ. ಎಲ್ಲಕ್ಕಿಂತ ದೊಡ್ಡ ಯಜ್ಞ ಅಂದರೆ ಜಪಯಜ್ಞ. ಹಿಂದೆ ಹೇಳಿದಂತೆ ಅಗ್ನಿ ಮುಖದಲ್ಲಿ ಮಾಡುವ ಪೂಜೆ  ಮಾತ್ರ ಯಜ್ಞವಲ್ಲ. ಕೊಡುವಿಕೆ, ಪೂಜೆಯಂತಹ ಒಳ್ಳೆಯ ಕಾರ್ಯಕ್ಕೆ ಒಂದು ಕಡೆ ಸೇರುವಿಕೆ(ಸಂಗತೀಕರಣ), ಜ್ಞಾನದಾನ, ಅನ್ನದಾನ, ನಮ್ಮಲ್ಲಿ ಹೆಚ್ಚಿಗೆ ಇರುವುದನ್ನು ಇಲ್ಲದವರಿಗೆ ಹಂಚಿ ಬದುಕುವುದು, ಎಲ್ಲವೂ ಒಂದು ಯಜ್ಞವೆ. ಸಾಮಾನ್ಯವಾಗಿ ಯಜ್ಞದಲ್ಲಿ ಎರಡು ವಿಧ. ಒಂದು ಅಂತರಂಗ ಯಜ್ಞ ಇನ್ನೊಂದು ಬಾಹ್ಯಯಜ್ಞ. ಅಂತರಂಗದಲ್ಲಿ  ಭಗವಂತನ ನಿರಂತರ ಪೂಜೆ(ದೇವಪೂಜಾ); ಚಿತ್ತ-ಮನಸ್ಸು ಭಗವಂತನ ಜೊತೆಗೆ ಸೇರುವುದು(ಸಂಗತೀಕರಣ) ಮತ್ತು ನಮ್ಮನ್ನು ನಾವು ಭಗವಂತನಿಗೆ ಅರ್ಪಿಸಿಕೊಳ್ಳುವುದು-ಪರಿಪೂರ್ಣವಾದ ಮಾನಸ ಯಜ್ಞ. ಈ ರೀತಿ ಮನಸ್ಸಿನಲ್ಲಿ ಮಾಡುವ ಜಪಯಜ್ಞ ಅತ್ಯಂತ ಶ್ರೇಷ್ಠ. ಇದಕ್ಕೆ ಕಾರಣ ಜಪಯಜ್ಞದಲ್ಲಿನ ಭಗವಂತನ ವಿಭೂತಿ.
ಇಲ್ಲಿ ಬಂದಿರುವ ಭಗವಂತನ ನಾಮ 'ಜಪಃ' ಮತ್ತು 'ಯಜ್ಞಃ'. ಜಗತ್ತಿನಲ್ಲಿ ಹುಟ್ಟಿಬರುವ ಪ್ರತಿಯೊಂದು ಜೀವವನ್ನು ಪಾಲಿಸುವ ಭಗವಂತ 'ಜಪಃ'. ಇಂತಹ ಭಗವಂತ ಎಲ್ಲರ ಎಲ್ಲ ಪೂಜೆಗಳನ್ನು ಕೊಳ್ಳುವುದರಿಂದ ‘ಯಜ್ಞ’ಎನ್ನಿಸಿ ಜಪಯಜ್ಞದಲ್ಲಿದ್ದಾನೆ.
ಜಪದ ಬಗ್ಗೆ ಹೇಳಿದ ಮೇಲೆ, ಭೂಮಿಯ ಮೇಲೆ ಸಾತ್ವಿಕ ಕಂಪನ ಇರುವ ಅತ್ಯಂತ ಶ್ರೇಷ್ಠ ಸ್ಥಾವರದ ಬಗ್ಗೆ ಕೃಷ್ಣ ಹೇಳುತ್ತಾನೆ. ಹಿಂದೆ ಮನೆ ಕಟ್ಟುವಾಗ ಅಲ್ಲಿ ಹೆಚ್ಚು ಸಾತ್ವಿಕ ಕಂಪನ ಇರುವ ಸ್ಥಳದಲ್ಲಿ ದೇವರ ಕೋಣೆಯನ್ನು ನಿರ್ಮಿಸುತ್ತಿದ್ದರು. ಒಂದು ಊರಿನಲ್ಲಿ ಅತಿ ಹೆಚ್ಚು ಸಾತ್ವಿಕ ಕಂಪನ ಇರುವ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸುತ್ತಿದ್ದರು. ಈ ಭೂಮಿಯಲ್ಲಿ ಅತಿ ಹೆಚ್ಚು ಸಾತ್ವಿಕ ಕಂಪನ ಇರುವ ಏಕ ಮಾತ್ರ ಸ್ಥಳ ಹಿಮಾಲಯ. ಇಲ್ಲಿ ಎಲ್ಲಿ ಕುಳಿತರೂ ನಮ್ಮ ಮನಸ್ಸು ಬಹು ಸುಲಭದಲ್ಲಿ ಭಗವಂತನಲ್ಲಿ ಶ್ರುತಿಗೂಡುತ್ತದೆ. ಹಿಮಾಲಯಕ್ಕೆ ಈ ಶಕ್ತಿ ಭಗವಂತನ ವಿಶೇಷ ಸನ್ನಿದಾನದಿಂದ ಬಂತು. ಭಗವಂತ ‘ಹಿಮಾಲಯಃ’ ನಾಮಕನಾಗಿ ಇಲ್ಲಿ ನೆಲೆಸಿದ್ದಾನೆ. ಭಗವಂತನ ಈ ನಾಮಕ್ಕೆ ವಿಶೇಷ ಅರ್ಥವಿದೆ. ಹ್ರೀ+ಮಾ+ಆಲಯ=ಹಿಮಾಲಯ. ಹ್ರೀ ಅಂದರೆ ಶ್ರೀಲಕ್ಷ್ಮಿ, ಮಾ ಅಂದರೆ ಭೂದೇವಿ. ಶ್ರೀದೇವಿ ಮತ್ತು ಭೂದೇವಿಯರ ಆಲಯನಾದ ಭಗವಂತ ಹಿಮಾಲಯಃ. ಭಗವಂತನ ಈ ವಿಶೇಷ ವಿಭೂತಿಯಿಂದಾಗಿ ಹಿಮಾಲಯದ ಕಣಕಣವೂ ಅಧ್ಯಾತ್ಮದ ವಿಸ್ಮಯದಿಂದ ತುಂಬಿದೆ. ಮನುಷ್ಯನ ಮನಃಪರಿವರ್ತನೆ ಮಾಡಿ ಆತನನ್ನು ಅಧ್ಯಾತ್ಮದತ್ತ ತಿರುಗಿಸುವ ವಿಶೇಷಶಕ್ತಿ ಹಿಮಾಲಯಕ್ಕಿದೆ. ವೇದವ್ಯಾಸರು, ನರ-ನಾರಾಯಣರು, ಆಚಾರ್ಯ ಮಧ್ವರು ನೆಲೆಸಿರುವ ತಾಣ ಹಿಮಾಲಯ. ಅನೇಕ ದೇವತೆಗಳು ನೆಲೆಸಿರುವ ನಿಗೂಢ ತಾಣ ಈ ಹಿಮಾಲಯ. ಭಗವಂತನ ವಿಭೂತಿ ಈ ನೆಲಕ್ಕೆ ಈ ಅದ್ಭುತ ಶಕ್ತಿಯನ್ನು ತಂದುಕೊಟ್ಟಿದೆ.       

No comments:

Post a Comment