Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Thursday, May 19, 2011

Bhagavad Gita in Kannada Chapter-06 Shloka-7-9


ಜಿತಾತ್ಮನಃ ಪ್ರಶಾಂತಸ್ಯ ಪರಮಾತ್ಮಾ ಸಮಾಹಿತಃ
ಶೀತೋಷ್ಣಸುಖದುಃಖೇಷು ತಥಾ ಮಾನಾಪಮಾನಯೋಃ

ಜ್ಞಾನವಿಜ್ಞಾನತೃಪ್ತಾತ್ಮಾ ಕೂಟಸ್ಥೋ ವಿಜಿತೇಂದ್ರಿಯ
ಯುಕ್ತ ಇತ್ಯುಚ್ಯತೇ ಯೋಗೀ ಸಮಲೋಷ್ಟಾಶ್ಮಕಾಂಚನಃ

ಜಿತ ಆತ್ಮನಃ ಪ್ರಶಾಂತಸ್ಯ ಪರಮ ಆತ್ಮಾ ಸಮಾಹಿತಃ
ಶೀತ ಉಷ್ಣ ಸುಖ ದುಃಖೇಷು ತಥಾ ಮಾನ ಅಪಮಾನಯೋಃ  ||
ಜ್ಞಾನ ವಿಜ್ಞಾನ ತೃಪ್ತ ಆತ್ಮಾ ಕೂಟ ಸ್ಥಃ ವಿಜಿತ ಇಂದ್ರಿಯ
ಯುಕ್ತಃ ಇತಿ ಉಚ್ಯತೇ ಯೋಗೀ ಸಮಲೋಷ್ಟ ಅಶ್ಮ ಕಾಂಚನಃ –ಬಗೆಯನ್ನು[ಭಕ್ತಿಯಿಂದ ಭಗವಂತನನ್ನು] ಗೆಲಿದವನ, ವಿಷಯಗಳತ್ತ ಸುಳಿಯದೆ ಭಗವಂತನಲ್ಲೆ ನಲಿದವನ ಬಗೆಯಲ್ಲಿ ಭಗವಂತ ನೆಲೆಗೊಳ್ಳುತ್ತಾನೆ. ಅಂತವನು ತಂಪು –ಬಿಸಿ, ಸುಖ –ದುಃಖ ಮತ್ತು ಸಮ್ಮಾನ-ತಿರಸ್ಕಾರ ಇಂಥ ದ್ವಂದ್ವಗಳಲ್ಲಿ ನಿರ್ವಿಕಾರನಾಗಿ ನಿಲ್ಲಬಲ್ಲವನು ; ಭಗವಂತನ ಅರಿವು ಕಾಣ್ಕೆಗಳಿಂದ ಬಗೆದುಂಬಿದವನು; ಇಂದ್ರಿಯಗಳನ್ನು ಹಿಡಿತದಲ್ಲಿಟ್ಟವನು. ಅವನಿಗೆ ಮಣ್ಣು, ಕಲ್ಲು, ಚಿನ್ನ ಎಲ್ಲ ಒಂದೆ. ಇಂಥ ಯೋಗ ಸಾಧಕನು ಗುರಿ ಸೇರಿದವನು ಎನ್ನಿಸುತ್ತಾನೆ.

ಭಕ್ತಿಯಿಂದ ಭಗವಂತನ ಅನುಗ್ರಹ ಪಡೆದಾಗ ಮೊದಲು ಮನಸ್ಸು ಆತನಲ್ಲಿ ನೆಲೆ ನಿಲ್ಲುತ್ತದೆ. ಮನಸ್ಸು ಎಂಥಹ ಪ್ರಸಂಗದಲ್ಲೂ ಉದ್ವೇಗಗೊಳ್ಳುವುದಿಲ್ಲ. “ಪರಮಾತ್ಮಾ ಸಮಾಹಿತಃ” –ಭಗವಂತ ಅವನ ಹೃದಯದಲ್ಲಿ ಬಂದು ನೆಲೆಸಿ ಬಿಡುತ್ತಾನೆ. ನಾವು ಬಯಸಿದಾಗ ಆತನ ಅಂತರ್ದರ್ಶನ ಸಾಧ್ಯ. ಈ ರೀತಿ ಭಗವಂತನನ್ನು ಕಾಣುವವರ, ಅಪರೋಕ್ಷ ಜ್ಞಾನದ ಪರಿಣಾಮ ಏನು ಎನ್ನುವುದನ್ನು ಇಲ್ಲಿ ಮತ್ತೊಮ್ಮೆ ವಿವರಿಸುತ್ತಾನೆ ಕೃಷ್ಣ.
ಮುಖ್ಯವಾಗಿ ಅಪರೋಕ್ಷ ಜ್ಞಾನಿಗಳಿಗೆ ಎಂದೂ ಇಂದ್ರಿಯ ಚಾಪಲ ಕಾಡುವುದಿಲ್ಲ. ಅಪಮಾನಕ್ಕೆ ಆತ ಎಂದೂ ಕುಸಿಯುವುದಿಲ್ಲ. ಮಾನಾಪಮಾನ ಆತನಿಗೆ ದೊಡ್ಡ ಸಂಗತಿ ಆಗುವುದಿಲ್ಲ. ಈ ಸ್ಥಿತಿ ತಲುಪಿದವ ಸಿದ್ಧ ಎನಿಸುತ್ತಾನೆ. ಆತ ಎಷ್ಟು ನಿರ್ವೀಕಾರ ಎಂದರೆ ಆತ ಎಲ್ಲವನ್ನೂ  ಸಮನಾಗಿ ಕಾಣಲಾರಂಭಿಸುತ್ತಾನೆ. ಧನ-ಕನಕ ಎಲ್ಲವೂ ಬೇಡವೆನಿಸಿ ಅದರಿಂದ ದೂರವಿರುತ್ತಾನೆ. (ರಾಮಕೃಷ್ಣ ಪರಮಹಂಸರ ಆತ್ಮಕಥೆಯನ್ನು ಓದಿದರೆ ಒಬ್ಬ ಅಪರೋಕ್ಷ ಜ್ಞಾನಿಯ ಮನಃಸ್ಥಿತಿ ನಮಗೆ ಅರ್ಥವಾಗುತ್ತದೆ).

ಮುಂದಿನ ಶ್ಲೋಕದಲ್ಲಿ ಕೃಷ್ಣ  ಧ್ಯಾನಕ್ಕೆ ಪೂರ್ವಭಾವಿಯಾಗಿ  ಒಬ್ಬ ಯೋಗಿಯ ಮನಃಸ್ಥಿತಿ ಹೇಗಿರಬೇಕು ಎನ್ನುವ ಬಹಳ  ಮಹತ್ವವಾದ ವಿಚಾರವನ್ನು ವಿವರಿಸುತ್ತಾನೆ.               

ಸುಹೃನ್ಮಿತ್ರಾರ್ಯುದಾಸೀನಮಧ್ಯಸ್ಥದ್ವೇಷ್ಯಬಂದುಷು
ಸಾಧುಷ್ವಪಿ ಚ ಪಾಪೇಷು ಸಮಬುದ್ಧಿರ್ವಿಶಿಷ್ಯತೇ

ಸುಹೃತ್ ಮಿತ್ರ ಅರಿ ಉದಾಸೀನ ಮಧ್ಯಸ್ಥ ದ್ವೇಷ್ಯ ಬಂದುಷು
ಸಾಧುಷು ಅಪಿ ಚ ಪಾಪೇಷು ಸಮಬುದ್ಧಿಃ ವಿಶಿಷ್ಯತೇ –ಹೆಳೆಯಿಲ್ಲದೆ ಹಚ್ಚಿಕೊಳ್ಳುವವರು, ಕಷ್ಟ ಕಾಲದಲ್ಲಿ ಎಚ್ಚರಿಸುವವರು, ಕಾಟಕೊಡುವವರು, ಒಳಿತು-ಕೆಡುಕು ಯಾವುದಕ್ಕೂ ಇಲ್ಲದವರು, ಎರಡಕ್ಕೂ ನಿಲ್ಲುವವರು, ಬೇಡವಾದದ್ದನ್ನು ಬಗೆವವರು, ನೆಂಟರು, ಒಳ್ಳೆಯವರು ಮತ್ತು ಕೆಟ್ಟವರು –ಎಲ್ಲರೂ ಮೂಲತಃ ಜ್ಞಾನ ಸ್ವರೂಪರು ಎಂದು ಸಮಭಾವದಿಂದ ಕಾಣುವವನು[ಎಲ್ಲರನ್ನೂ ಅವರವರ ಇರವಿಗೆ ತಕ್ಕಂತೆ ಗೌರವಿಸುವವನು] ಮಿಗಿಲಾದವನು.

ಮನಸ್ಸು ಸಮತೋಲನವಾಗದೆ ಧ್ಯಾನ ಮಾಡಲು ಸಾಧ್ಯವಿಲ್ಲ. ಯಾರ್ಯಾರೋ ಬಗ್ಗೆ ಯಾವುದ್ಯಾವುದೋ ವಿಚಾರಗಳು ಮನಸ್ಸಿನಲ್ಲಿ ಸುಳಿಯಲಾರಂಭಿಸಿದರೆ ಧ್ಯಾನ ಅಸಾಧ್ಯ. ಪ್ರಪಂಚದಲ್ಲಿ ಅನೇಕ ವಿಧದ ಜನರಿರುತ್ತಾರೆ. ಉದಾಹರಣೆಗೆ ಸುಹೃತರು-ಅಂದರೆ ಒಳ್ಳೆಯ ಹೃದಯ ಉಳ್ಳವರು. ಯಾವ ಪ್ರತ್ಯುಪಕಾರ ಬಯಸದೆ ಎಲ್ಲರಿಗೂ ಸಹಾಯ ಮಾಡುವ ಜನರಿವರು. ಇವರ ನಂತರ ‘ಮಿತ್ರ’- ತನ್ನ ಆತ್ಮೀಯನಿಗೆ ಸದಾ ಸಹಾಯ ಮಾಡುವವ, ನಾವು ತಪ್ಪಿದಾಗ ನಮ್ಮನ್ನು ತಿದ್ದುವವನೀತ. ಆರಿಗಳು: ಕೊಲ್ಲುವ ಕೆಟ್ಟ ಶತ್ರುತ್ವ ಸಾಧಿಸುವ ಇವರಿಗೆ ದ್ವೇಷಿಸಲು ಕಾರಣ ಬೇಡ. ಉದಾಸೀನರು: ಇವರು ಒಳ್ಳೆಯದಕ್ಕೂ ಇಲ್ಲ ಕೆಟ್ಟದಕ್ಕೂ ಇಲ್ಲ. ಮಧ್ಯಸ್ಥ: ಒಳ್ಳೆಯದು ಮಾಡಿದಾಗ ಒಳ್ಳೆಯದು, ಕೆಟ್ಟದ್ದು ಮಾಡಿದಾಗ ಕೆಟ್ಟದ್ದು ಮಾಡುವವ. ದ್ವೇಷ್ಯ: ಒಬ್ಬರನ್ನು ಕಂಡು ಸಹಿಸದವ(hatred). ಕೊನೆಯದಾಗಿ ಬಂಧುಗಳು(Relatives).ಹೀಗೆ ಮಾನವ ಜನಾಂಗದಲ್ಲಿ ಒಳ್ಳೆಯರು ಮತ್ತು ಕೆಟ್ಟವರು ತುಂಬಿರುತ್ತಾರೆ.(ದೇವತೆಗಳಲ್ಲಿ- ದಾನವರಲ್ಲಿ ಈ ರೀತಿಯ ಸಮ್ಮಿಶ್ರ ವರ್ಗವಿಲ್ಲ. ದೇವತೆಗಳು ಕೇವಲ ಸಾದುಗಳು, ಅಸುರರು ಸದಾ ಪಾಪಿಗಳು, ಆದರೆ ಮಾನವರಲ್ಲಿ ಮಾತ್ರ ಈ ಎರಡು ಗುಣ ಮಿಶ್ರಿತ ಗುಂಪುಗಳನ್ನು ಕಾಣಬಹುದು). ಧ್ಯಾನದಲ್ಲಿ ನಮಗೆ ಭಗವಂತನ ದರ್ಶನವಾಗಬೇಕಾದರೆ ಮೊದಲು ನಾವು ನಮ್ಮ ಅಂತರಂಗದಲ್ಲಿ ಈ ಎಲ್ಲಾ ರೀತಿಯ ಜನರ ಬಗ್ಗೆ ಸಮಬುದ್ಧಿಯನ್ನು ಬೆಳೆಸಿಕೊಳ್ಳಬೇಕು. ಒಬ್ಬ ವ್ಯಕ್ತಿಯ ನಡವಳಿಕೆ ಆತನು ಬೆಳೆದುಬಂದ ವಾತಾವರಣದಿಂದ ಅಥವಾ ತಿಳುವಳಿಕೆ ಇಲ್ಲದೆ ಇದ್ದುದರಿಂದ ಬಂದದ್ದು ಎಂದು ತಿಳಿದು  ಅವನ ಬಗ್ಗೆ ಮನಸ್ಸಿನಲ್ಲಿ ಯಾವ ಕೆಟ್ಟ ಭಾವನೆಯೂ ಇರದಂತೆ ನೋಡಿಕೊಳ್ಳಬೇಕು. ಒಬ್ಬ ನಮ್ಮ ವೈರಿಯಂತೆ ನಮ್ಮನ್ನು ಕಾಡುತ್ತಿರಬಹುದು. ಇದಕ್ಕೆ ಕಾರಣ ಆತನ ಹಾಗು ನಮ್ಮ ಪ್ರಾರಾಬ್ಧ ಕರ್ಮವಿರಬಹುದು. ದೇವರು ಈ ಜನ್ಮದಲ್ಲಿ ಅವನಿಗೆ ಕೊಟ್ಟ ಪಾತ್ರವನ್ನು ಆತ ನಿಭಾಯಿಸುತ್ತಿದ್ದಾನೆ ಎನ್ನುವ ಭಾವದಲ್ಲಿ ಅವನನ್ನು ನೋಡಿದಾಗ ನಮ್ಮಲ್ಲಿ ದ್ವೇಷ ಹುಟ್ಟುವುದಿಲ್ಲ; ಇನ್ನೊಬ್ಬರು ನಮ್ಮನ್ನು  ಬೈದಾಗ ನಾವು ಉದ್ವೇಗಕ್ಕೊಳಗಾಗುವುದಿಲ್ಲ-"ಭಗವಂತ ಅವನಿಗೆ ಕೊಟ್ಟ ಪಾತ್ರವನ್ನು ಅದೆಷ್ಟು ಚನ್ನಾಗಿ ನಿಭಾಯಿಸುತ್ತಿದ್ದಾನೆ" ಎನ್ನುವ ಭಾವ ನಮ್ಮಲ್ಲಿ ಮೂಢಬೇಕು.  ಸಂಬಂಧಿಕರಿರಲಿ, ಶತ್ರುಗಳಿರಲಿ, ಯಾರೇ ಇರಲಿ  ಧ್ಯಾನ ಸಮಯದಲ್ಲಿ ಮನಸ್ಸಿನಲ್ಲಿ ಶುದ್ಧವಾದ ಸಮಭಾವ ನೆಲೆಗೊಂಡಿರಬೇಕು. ಈ ಸ್ಥಿತಿಯಲ್ಲಿ  ಧ್ಯಾನಕ್ಕೆ ಕುಳಿತಾಗ ಇವರ್ಯಾರೂ ಎದುರಿಗೆ ಬರದೆ ಆ ಭಗವಂತನ ದರ್ಶನವಾಗುತ್ತದೆ. ಇಲ್ಲಿ ಒಂದು ಎಚ್ಚರದ ವಿಷಯ ಎಂದರೆ ಅಂತರಂಗದ ಸಮಭಾವವನ್ನು ವ್ಯವಹಾರಿಕವಾಗಿ ಹೊರ ಪ್ರಪಂಚದಲ್ಲಿ ಅಳವಡಿಸಲು ಬರುವುದಿಲ್ಲ. ವ್ಯವಹಾರಿಕವಾಗಿ ನಾವು ಹಿಂದೆ ಹೇಳಿದ ಮೈತ್ರಿ, ಕರುಣಾ, ಮುದಿತ ಮತ್ತು ಉಪೇಕ್ಷ ಎನ್ನುವ ನಾಲ್ಕು ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಎಲ್ಲರನ್ನೂ ಸಮಾನವಾಗಿ ಕಾಣುವುದು ಅಂದರೆ ಅವರವರನ್ನು ಆಯಾ ಸ್ಥಾನದಲ್ಲಿ ನೋಡುವುದು ವ್ಯಾವಹಾರಿಕ ಪ್ರಪಂಚದ ಸಮದೃಷ್ಟಿ. ತಂದೆಯನ್ನು ತಂದೆಯಂತೆ, ಮಗನನ್ನು ಮಗನಂತೆ ಕಂಡು ನಡೆಯುವುದು, ದುಷ್ಟರಿಂದ ದೂರವಿರುವುದು(ಉಪೇಕ್ಷ) ವ್ಯವಹಾರಿಕ ಪ್ರಪಂಚ.  ಅಂತರಂಗ ಪ್ರಪಂಚದಲ್ಲಿ ನಾವು ಎಲ್ಲರಲ್ಲೂ ಆತನ ಒಳಗಿರುವ ಭಗವಂತನನ್ನು ಮಾತ್ರ ಕಾಣಬೇಕು. ಇದು ಧ್ಯಾನಕ್ಕೆ ಬೇಕಾದ  ಪೂರ್ವಭಾವಿ ಮನಃಸ್ಥಿತಿ.  ಮಾನಸಿಕವಾಗಿ ಎಲ್ಲಾ ಸಂಬಂಧದ ನಂಟನ್ನು ಕಳಚಿ ಧ್ಯಾನಕ್ಕೆ  ಕುಳಿತುಕೊಳ್ಳಬೇಕು. ಧ್ಯಾನದಲ್ಲಿ ತಂದೆ, ತಾಯಿ, ಗುರು ಶಿಷ್ಯ, ವೈರಿ, ಮಿತ್ರ ಇತ್ಯಾದಿ ವರ್ಗಗಳಿಲ್ಲ. ಎಲ್ಲವೂ ಒಂದೆ, ಅದು  ಕೇವಲ ಜ್ಞಾನಸ್ವರೂಪವಾದ ಜೀವ- ಅದರೊಳಗೆ ಬಿಂಬ ರೂಪಿ ಭಗವಂತ. ಇದು ಧ್ಯಾನಕ್ಕೆ ಬೇಕಾದ ಮಾನಸಿಕ ಸ್ಥಿತಿ.                                

Monday, May 16, 2011

Bhagavad Gita Kannada Chapter-06 Shloka 4-6

ಯದಾ ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನುಷಜ್ಜತೇ
ಸರ್ವಸಂಕಲ್ಪಸಂನ್ಯಾಸೀ ಯೋಗಾರೂಢಸ್ತದೋಚ್ಯತೇ           

ಯದಾ ಹಿ ನ ಇಂದ್ರಿಯ ಅರ್ಥೇಷು ನ ಕರ್ಮಸು ಅನುಷಜ್ಜತೇ
ಸರ್ವ ಸಂಕಲ್ಪ ಸಂನ್ಯಾಸೀ ಯೋಗಾರೂಢ ತದಾ ಉಚ್ಯತೇ –ಎಲ್ಲ ಕರ್ಮದ ಹೊಣೆಯನ್ನೂ ಭಗವಂತನಿಗರ್ಪಿಸಿ, ಇಂದ್ರಿಯ ವಿಷಯಗಳಲ್ಲಿ ಮತ್ತು ಕರ್ಮಗಳಲ್ಲಿ ಬಗೆಯ ನಂಟು ಕಳೆದುಕೊಂಡಾಗ ಸಾಧನೆಯ ಗುರಿ ಸೇರಿದವನೆನಿಸುತ್ತಾನೆ.

ಅಪರೋಕ್ಷ ಜ್ಞಾನಿಯ ಲಕ್ಷಣವನ್ನು ಹೇಳುತ್ತ ಕೃಷ್ಣ ಹೇಳುತ್ತಾನೆ  “ಯದಾ ಹಿ ನ ಇಂದ್ರಿಯ ಅರ್ಥೇಷು ನ ಕರ್ಮಸು ಅನುಷಜ್ಜತೇ” ಎಂದು.  ಅಂದರೆ ಅಪರೋಕ್ಷ ಜ್ಞಾನಿಗಳು  ಇಂದ್ರಿಯಗಳನ್ನು ಸೆಳೆಯುವ ಸಂಗತಿಗಳಲ್ಲಿ (ಶಬ್ದ, ರೂಪ, ರಸ, ಗಂಧ, ಸ್ಪರ್ಶ),  ಅಥವಾ ಯಾವ ವಿಷಯದಲ್ಲೂ ಅಂಟಿಕೊಂಡಿರುವುದಿಲ್ಲ. ಆತ ಕ್ರಿಯೆ ಮಾಡುತ್ತಾನೆ ಆದರೆ ಅದಕ್ಕೆ ತನ್ನನ್ನು ಅಂಟಿಸಿಕೊಳ್ಳುವುದಿಲ್ಲ. ಸಾಧನೆಯ ಹಾದಿಯಲ್ಲಿರುವ ಸಾಧಕ ಕಷ್ಟಪಟ್ಟು ಇಂದ್ರಿಯ ನಿಗ್ರಹ ಮಾಡಿದರೆ ಅಪರೋಕ್ಷ ಜ್ಞಾನಿಗಳಿಗೆ ಇದು ಸಹಜ ಧರ್ಮವಾಗಿರುತ್ತದೆ. ಋಗ್ವೇದದಲ್ಲಿ ಹೇಳುವಂತೆ “ಎಲ್ಲ ಜಗತ್ತಿನ ನಿಯಾಮಕನಾದ ನರಸಿಂಹ-ಅವನ ಬಯಕೆಯೇ ನನ್ನ ಬಯಕೆಯಾಗಲಿ.ಅವನ ಹೃದಯದಲ್ಲಿ ಏನು ಬಯಕೆ ಇದೆ ಅದೇ ನನ್ನ ಭಾವನೆಯಾಗಲಿ. ಅದಕ್ಕೆ ವಿರುದ್ಧವಾದ ಸಂಕಲ್ಪ ನನಗೆ ಬಾರದೇ ಇರಲಿ”. ಈ ರೀತಿ ಅಪರೋಕ್ಷಜ್ಞಾನಿ ಬಯಸುತ್ತಾನೆ. ಅವನು ಏನನ್ನೂ ಕೂಡಾ ಇಂದ್ರಿಯದ ಮೂಲಕ ಅನುಭವಿಸಬೇಕು ಎಂದು ಬಯಸುವುದಿಲ್ಲ, ಪರಿತಪಿಸುವುದಿಲ್ಲ. ಇಂದ್ರಿಯದ ಮೂಲಕ  ಬಂದ ಅನುಭವದಿಂದ ಪ್ರಭಾವಿತನಾಗಿ ಅದಕ್ಕೆ ಅಂಟಿಕೊಳ್ಳುವುದೂ ಇಲ್ಲ. ಎಲ್ಲವನ್ನೂ ತಟಸ್ಥವಾಗಿ ನೋಡುತ್ತಿರುತ್ತಾನೆ. ನಾವು ಸಮುದ್ರದ ತಟದಲ್ಲಿ ಕುಳಿತು ಸಮುದ್ರವನ್ನು ನೋಡುತ್ತಿದ್ದರೆ ಅಲ್ಲಿ ಅನೇಕ ರೀತಿಯ ಅಲೆಗಳಿರುತ್ತವೆ. ನಾವು ಆ ಅಲೆಗಳನ್ನು ನೋಡಿ ಆನಂದಿಸುತ್ತಿರುತ್ತೇವೆ. ಅಲ್ಲಿ ಬರುವ ತೆರೆಗಳ ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಯಾವ ಅಲೆ ಹೇಗೆ ಬಂತೋ ಹಾಗೆ ತಟಸ್ಥವಾಗಿ ಆಸ್ವಾದಿಸುವುದರಲ್ಲಿ ಆನಂದವಿದೆ. ಜೀವನ ಸಾಗರದಲ್ಲಿ ಕಷ್ಟ ಸುಖ ನೋವು ನಲಿವು ಎಲ್ಲವೂ ಅಲೆಗಳಂತೆ ಬಂದು ಹೋಗುತ್ತಿರುತ್ತವೆ. ಅದರ ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಸಮುದ್ರದ ಅಲೆಯನ್ನು ನೋಡಿ ಸಂತೋಷಪಟ್ಟಂತೆ ಈ ಜೀವನದ ಅಲೆಯನ್ನು ಸಹಜವಾಗಿ ನೋಡಿ ಸಂತೋಷಪಡುತ್ತ ಬಾಳುವುದೇ ಅಪರೋಕ್ಷ ಜ್ಞಾನಿಯ ಲಕ್ಷಣ.

ಈ ಅಧ್ಯಾಯದಲ್ಲಿ ಕೃಷ್ಣ ಧ್ಯಾನದ ಸಂಪೂರ್ಣ ಪ್ರಕ್ರೀಯೆಯನ್ನು ಮುಂದೆ ವಿವರಿಸುತ್ತಾನೆ. ಅದಕ್ಕಾಗಿ ನಮ್ಮ ಮನಸ್ಸನ್ನು ಹೇಗೆ ಸಜ್ಜುಗೊಳಿಸಬೇಕು, ನಾವೂ ಯೋಗಾರೂಢರಾಗಬೇಕಾದರೆ  ಏನು ಮಾಡಬೇಕು ಎನ್ನುವುದರ ಪ್ರಸ್ತಾವನೆ ಮುಂದಿನ ಶ್ಲೋಕ.                 
ಉದ್ಧರೇದಾತ್ಮನಾSSತ್ಮಾನಂ ನಾSತ್ಮಾನಮವಸಾದಯೇತ್   
ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ

ಉದ್ಧರೇತ್ ಆತ್ಮನಾ ಆತ್ಮಾನಮ್ ನ ಆತ್ಮಾನಮ್ ಅವಸಾದಯೇತ್      
ಆತ್ಮಾ ಏವ ಹಿ ಆತ್ಮನಃ ಬಂಧುಃ ಆತ್ಮಾ ಏವ ರಿಪುಃ ಆತ್ಮನಃ –ಬಗೆಯ ಬಲದಿಂದ [ಭಗವಂತನ ಹಸಾದದಿಂದ] ಜೀವವನ್ನು ಮೇಲೆತ್ತಬೇಕು; ಜೀವವನ್ನು ಜಂಜಡಗೊಳಿಸಬಾರದು. ಬಗೆಯೆ[ಭಗವಂತನೆ] ಜೀವದ ಗೆಳೆಯ; ಬಗೆಯೆ[ಭಗವಂತನೆ]ಜೀವದ ಹಗೆಯು.

ಈ ಹಿಂದೆ ಹೇಳಿದಂತೆ ಆತ್ಮ ಎನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಆತ್ಮ ಎಂದರೆ ಶರೀರ, ಮನಸ್ಸು, ಜೀವ, ಪರಮಾತ್ಮ. ಹೀಗೆ ಈ ಶ್ಲೋಕದಲ್ಲಿ ಬಂದಿರುವ ಆತ್ಮ ಶಬ್ಧಕ್ಕೆ ಈ ಎಲ್ಲಾ ಅರ್ಥವನ್ನೂ ಜೋಡಿಸಿ ನೋಡಿದರೆ ಅನೇಕ ವಿಚಾರ ಸ್ಪಷ್ಟವಾಗುತ್ತದೆ. “ಉದ್ಧರೇತ್ ಆತ್ಮನಾ ಆತ್ಮಾನಮ್ ನ ಆತ್ಮಾನಮ್ ಅವಸಾದಯೇತ್” ಅಂದರೆ ನಮ್ಮ ಅಧಃಪಾತಕ್ಕೂ ಕಾರಣ ಮನಸ್ಸು. ನಮ್ಮ ಉದ್ಧಾರಕ್ಕೆ ಕಾರಣ ಮನಸ್ಸು. ಆದ್ದರಿಂದ ಮನಸ್ಸಿನಿಂದ(ಆತ್ಮಾನಾ) ಜೀವದ(ಆತ್ಮಾನಂ) ಉದ್ಧಾರದ ದಾರಿಯನ್ನು ಹುಡುಕು ಎನ್ನುತ್ತಾನೆ ಕೃಷ್ಣ. ಎಂದೂ ಮನಸ್ಸನ್ನು ಕೆಳಕ್ಕೆ ಕಳುಹಿಸಬೇಡ. ಆತ್ಮದ(ಜೀವದ) ಅವಸಾನಕ್ಕೆ ಕಾರಣವಾಗುವಂತೆ ಮನಸ್ಸನ್ನು ಸ್ವಚ್ಛಂದವಾಗಿ ಬಿಡಬೇಡ. ಅದನ್ನು ಮೇಲಕ್ಕೆ ಕೊಂಡು ಹೋಗು. ಮನಸ್ಸು ಕೆಳಗೆ ಹೋದರೆ ಅದು ನಮ್ಮನ್ನು ಪಾತಾಳಕ್ಕೆ ತಳ್ಳಿ ಬಿಡುತ್ತದೆ. ‘ಆ ಮನಸ್ಸನ್ನು ಎತ್ತರಕ್ಕೆ ಕಳಿಸು. ಎತ್ತರಕ್ಕೆ ಹೋದ ಮನಸ್ಸು ನಿನ್ನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಮನಸ್ಸಿನಿಂದ ನಿನ್ನ ಜೀವ ಸ್ವರೂಪವನ್ನು ಉದ್ಧಾರ ಮಾಡಿಕೊ. ಜೀವಕ್ಕೆ ಮನಸ್ಸೇ ಬಂಧು, ಮನಸ್ಸೇ ಶತ್ರು. ಆದ್ದರಿಂದ ಸಾಧನೆ ಮಾಡಬೇಕಾದರೆ  ಮನಸ್ಸನ್ನು ಬಂಧುವಾಗಿ ಪರಿವರ್ತನೆ ಮಾಡಿಕೊ. ಮನಸ್ಸು ನಿನ್ನ ಶತ್ರುವಾಗಿ ನಿಂತರೆ ನಿನ್ನ ಜೀವಮಾನದಲ್ಲೇ ಉದ್ಧಾರವಿಲ್ಲ. ಅದಕ್ಕಾಗಿ ಮೊದಲು ಬುದ್ಧಿಬಲದಿಂದ  ಮನಸ್ಸಿಗೆ ತರಬೇತಿ ಕೊಟ್ಟು ಅದನ್ನು ಗೆಲ್ಲಬೇಕು’  ಎನ್ನುವುದು ಕೃಷ್ಣನ ಸಂದೇಶ. ಮನಸ್ಸನ್ನು ಗೆದ್ದರೆ ಎಲ್ಲವೂ ಪ್ರಶಾಂತ, ಯಾವ ಗೊಂದಲವೂ ಇಲ್ಲ. ಇದು ಧ್ಯಾನಕ್ಕೆ ಬೇಕಾದ ಪೂರ್ವ ಸ್ಥಿತಿ.
ಕೃಷ್ಣನ ಈ ಸಂದೇಶ ಕೇಳಿದಾಗ ನಮಗೆ ಒಂದು ಪ್ರಶ್ನೆ ಎದುರಾಗುತ್ತದೆ. ಈ ಹಿಂದೆ ಕೃಷ್ಣನೇ ಹೇಳಿದಂತೆ ಯಾವುದೂ ನಮ್ಮ ಕೈಯಲ್ಲಿಲ್ಲ. ಭಗವಂತನ ಅನುಗ್ರಹವಿಲ್ಲದೆ ನಾವು ನಮ್ಮ ಮನಸ್ಸನ್ನು ಸ್ವತಂತ್ರವಾಗಿ ಎಂದೂ ನಿಯಂತ್ರಿಸಲು ಸಾಧ್ಯವಿಲ್ಲ. ಹೀಗಿರುವಾಗ ನಾವು ನಮ್ಮ ಮನಸ್ಸನ್ನು ನಿಯಂತ್ರಿಸುವುದು ಹೇಗೆ? ಈ ನಮ್ಮ ಪ್ರಶ್ನೆಗೆ ಇದೇ ಶ್ಲೋಕದಲ್ಲಿ ಉತ್ತರವಿದೆ.ಆತ್ಮ ಎಂದರೆ ಪರಮಾತ್ಮ ಎನ್ನುವ ಸೂಕ್ಷ್ಮ ಅರ್ಥದಲ್ಲಿ  ಈ ಶ್ಲೋಕವನ್ನು ನೋಡಿದಾಗ ನಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ. “ಉದ್ಧರೇತ್ ಆತ್ಮನಾ ಆತ್ಮಾನಮ್” ಅಂದರೆ   “ಆತ್ಮನಿಂದಲೇ(ಭಗವಂತನಿಂದಲೇ) ಆತ್ಮನನ್ನು(ಜೀವವನ್ನು) ಉದ್ಧರಿಸಬೇಕು. ಸಾಮಾನ್ಯವಾಗಿ ಮನಸ್ಸು ನಮ್ಮ ಮಾತನ್ನು ಕೇಳುವುದಿಲ್ಲ. “ನನ್ನಿಂದ ಇದು ಸಾಧ್ಯವಿಲ್ಲ” ಎನ್ನುತ್ತದೆ ಮನಸ್ಸು. ಆದರೆ ನಮಗೆ ಭಗವಂತ ಬುದ್ಧಿ ಕೊಟ್ಟಿದ್ದಾನೆ, ನಾವು ಅದನ್ನು ಉಪಯೋಗಿಸಬೇಕು. ಬುದ್ಧಿಯನ್ನು ಉಪಯೋಗಿಸಿ ಆ ಭಗವಂತನಲ್ಲಿ “ನನಗೆ ಒಳ್ಳೆಯ ಮನಸ್ಸನ್ನು ಕೊಡು, ನನ್ನನ್ನು ಉದ್ಧಾರದ ದಾರಿಯಲ್ಲಿ ನಡೆಸು, ಸಾಧನೆ ಮಾಡುವಂತಹ ಸದ್ಭುದ್ಧಿಯನ್ನು ಕೊಡು” ಎಂದು ಆ ಭಗವಂತನಲ್ಲಿ ನಿರಂತರ ಪ್ರಾರ್ಥಿಸು. ಆತ ನಮ್ಮ ಅತ್ಯಂತ ಆತ್ಮೀಯ ಹಿತಚಿಂತಕ ಬಂಧು. ಅವನೊಬ್ಬನೇ ಯಾವುದೇ ಸ್ವಾರ್ಥವಿಲ್ಲದ ಶಾಶ್ವತ, ನಿರ್ವ್ಯಾಜ, ನಿರಂತರ  ಬಂಧು. ಆತ ಖಂಡಿತ ನಮ್ಮ ಪ್ರಾರ್ಥನೆಯನ್ನು ಮನ್ನಿಸಿ ನಮ್ಮ ಮನಸ್ಸಿನಲ್ಲಿ ಬಂದು ಕೂರುತ್ತಾನೆ.
ಭಗವಂತ ನಾವು ಆತನನ್ನು ಹೇಗೆ ಕಾಣುತ್ತೇವೆ ಅದೇ ಭಾವದಲ್ಲಿ ವ್ಯಕ್ತನಾಗುತ್ತಾನೆ. ದೇವತೆಗಳು ಆತನನ್ನು ಜ್ಞಾನಿಯಾಗಿ ಕಂಡರು- ಆತ ಅವರಿಗೆ ಜ್ಞಾನಿಯಾಗಿ ಕಾಣಿಸಿಕೊಂಡು ಅವರ ಉದ್ಧಾರ ಮಾಡಿದ. ರಾಕ್ಷಸರು ಆತ ಕೊಲ್ಲುವವವ ಮತ್ತು ಶತ್ರು ಎಂದು ತಿಳಿದು ಅವನನ್ನು ದ್ವೇಷಿಸಿದರು- ಆತ ಅವರಿಗೆ ಶತ್ರುವಾಗಿ ಕಾಣಿಸಿದ. ಆದ್ದರಿಂದ ಕೃಷ್ಣ ಹೇಳುತ್ತಾನೆ “ಆತ್ಮಾ ಏವ ರಿಪುಃ ಆತ್ಮನಃ” ಎಂದು. ಅಂದರೆ ನಾವು ಅಹಂಕಾರದಿಂದ ದಾರಿ ತಪ್ಪಿದಾಗ ಆತ ನಮಗೆ ನಮ್ಮ ಶತ್ರುವಿನಂತೆ ಬಾಸವಾಗುತ್ತಾನೆ. ಈ ಬಗ್ಗೆ ಮುಂದಿನ ಶ್ಲೋಕ ಇನ್ನೂ ಹೆಚ್ಚಿನ ವಿವರವನ್ನು ಕೊಡುತ್ತದೆ.             


                 ಬಂಧುರಾತ್ಮಾSSತ್ಮನಸ್ತಸ್ಯ ಯೇನಾSತ್ಮೈವಾSತ್ಮನಾ ಜಿತಃ
ಅನಾತ್ಮನಸ್ತು ಶತ್ರುತ್ವೇ ವರ್ತೇತಾSತ್ಮೈವ ಶತ್ರುವತ್

ಬಂಧುಃ ಆತ್ಮಾ ಆತ್ಮನಃ ತಸ್ಯ ಯೇನ ಆತ್ಮಾ ಏವ ಆತ್ಮನಾ ಜಿತಃ
ಅನಾತ್ಮನಃ ತು ಶತ್ರುತ್ವೇ  ವರ್ತೇತ ಆತ್ಮಾ ಏವ ಶತ್ರುವತ್-ಯಾವ ಜೀವ ವಿವೇಕದಿಂದ ಬಗೆಯನ್ನು [ಭಕ್ತಿಯಿಂದ ಭಗವಂತನನ್ನು]ಗೆದೆಯಬಲ್ಲದೋ [ಯಾವ ಜೀವದಿಂದ ಬಗೆ ಹದಗೊಂಡಿದೆಯೋ], ಅಂಥ ಜೀವಕ್ಕೆ ಬಗೆ[ಭಗವಂತ]ಗೆಳೆಯ. ಬಗೆಯನ್ನು[ಭಗವಂತನನ್ನು] ಗೆದೆಯಲಾರದವನಿಗೆ ಬಗೆಯೆ [ಭಗವಂತನೆ]ಹಗೆಯಾಳಿನಂತೆ ಎದುರಾಳಿ.

ಯಾರು ಭಗವಂತನನ್ನು ಗೆದ್ದಿದ್ದಾರೋ(ಭಗವಂತನ ಪ್ರೀತಿಗೆ ಪಾತ್ರರಾಗಿದ್ದಾರೋ) ಅವರಿಗೆ ಆತ ಬಂಧು. ಭಗವಂತನ  ಪ್ರೀತಿಗೆ ಪಾತ್ರರಾಗಲು ಆತನ ಅನುಗ್ರಹ ಬೇಕು. ಅವನ ಅನುಗ್ರಹದಿಂದ ಅವನನ್ನು ಒಲಿಸಿ ಅವನ ಪ್ರೀತಿಗೆ ಪಾತ್ರರಾದವರಿಗೆ ಆತ ಬಂಧು. ಯಾರು ಭಗವಂತನಿಗೆ ಬೆನ್ನು ಹಾಕಿ ಮುಂದೆ ಸಾಗಿದರೋ ಅವರು ಸದಾ ಭಗವಂತನಿಂದ ದೂರ ಸಾಗುತ್ತಾರೆ. ಆತನಿಗೆ ಬೆನ್ನುಹಾಕಿ ಆತನನ್ನು ದ್ವೇಷಿಸುವವರಿಗೆ ಆತ ಶತ್ರುವಂತೆ ಕಾಣುತ್ತಾನೆ. ಈ ಕಾರಣದಿಂದ ನಿರಂತರ ಭಗವಂತನನ್ನು ಪ್ರಾರ್ಥಿಸು. “ಬಂಧುವಾಗಿ ನನ್ನೊಳಗೆ ಬಂದು ನೆಲೆಸು, ನನ್ನನ್ನು ಒಳ್ಳೆಯ ದಾರಿಯಲ್ಲಿ ನಡೆಸು, ನನ್ನನ್ನು ನಿನ್ನತ್ತ ತಿರುಗಿಸಿ ಮುಂದೆ ಕರೆದುಕೊಂಡು ಹೋಗು” ಎನ್ನುವ ಪ್ರಾರ್ಥನೆ ಹಾಗು ಶರಣಾಗತಿ ನಮ್ಮ ಮನಸ್ಸು ಆತನಲ್ಲಿ ನೆಲೆಗೊಳ್ಳುವಂತೆ ಮಾಡುತ್ತದೆ. ಇದು ಧ್ಯಾನದ ಮೊದಲ ಮೆಟ್ಟಿಲು. ಹೀಗೆ ಮನಸ್ಸನ್ನು ಮಣಿಸಲು ಭಗವಂತನ ಅನುಗ್ರಹಪಡೆಯುವ ಪ್ರಯತ್ನ ಮಾಡಿದಾಗ ಏನಾಗುತ್ತದೆ ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ನೋಡೋಣ.

Sunday, May 15, 2011

Bhagavad Gita Kannada Chapter-06 Shloka 1-3

ಅಧ್ಯಾಯ ಆರು

ಹಿಂದಿನ ಅಧ್ಯಾಯದಲ್ಲಿ ಮುಖ್ಯವಾಗಿ ಭಗವಂತನ ಉಪಾಸನೆಯ ಸಾಧನೆಯನ್ನು ವಿವರಿಸಿದ ಕೃಷ್ಣ  ಈಗ ಆರನೇ ಅಧ್ಯಾಯದಲ್ಲಿ ಧ್ಯಾನಯೋಗ ಮತ್ತು ಧ್ಯಾನಸಮಾಧಿಯನ್ನು ತಳಸ್ಪರ್ಶಿಯಾಗಿ ವಿವರಿಸುತ್ತಾನೆ.

ಭಗವಾನುವಾಚ
ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ         
ಸ ಸಂನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯಃ

ಭಗವಾನುವಾಚ- ಭಗವಂತ ಹೇಳಿದನು:
ಅನಾಶ್ರಿತಃ ಕರ್ಮ ಫಲಮ್  ಕಾರ್ಯಮ್  ಕರ್ಮ ಕರೋತಿ ಯಃ 
ಸಃ ಸಂನ್ಯಾಸೀ ಚ ಯೋಗೀ  ಚ ನ ನಿಃ ಅಗ್ನಿಃ ನ ಚ ಅಕ್ರಿಯಃ –ಕರ್ಮದ ಫಲನ್ಯಾಸ ಮಾಡಿ  ಕರ್ತವ್ಯವನ್ನು ಮಾಡುತ್ತಿರುವವನೆ ನಿಜವಾದ ಸಂನ್ಯಾಸಿ ಮತ್ತು ನಿಜವಾದ ಯೋಗಿ. ಬೆಂಕಿಯಲ್ಲಿ ಹೋಮಿಸದವನಲ್ಲ, ಕರ್ಮವನ್ನು ತೊರೆದವನೂ ಅಲ್ಲ.

ಸಾಮಾನ್ಯವಾಗಿ ನಾವು ಕರ್ಮಯೋಗಿಗಳು ಬೇರೆ ಮತ್ತು ಸಂನ್ಯಾಸಿಗಳು ಬೇರೆ ಎಂದು ಎರಡು ಗುಂಪು ಮಾಡುತ್ತೇವೆ. ಇಲ್ಲಿ ಕೃಷ್ಣ ಯಾರು ಸಂನ್ಯಾಸಿಗಳು, ಯಾರು ಕರ್ಮಯೋಗಿಗಳು ಎನ್ನುವ ಲೋಕದ ಕಲ್ಪನೆಗಿಂತ ಭಿನ್ನವಾದ ವಿವರವನ್ನು ಈ ಶ್ಲೋಕದಲ್ಲಿ ನಮ್ಮ ಮುಂದಿಟ್ಟಿದ್ದಾನೆ. ಕೃಷ್ಣ ಹೇಳುತ್ತಾನೆ “ಅನಾಶ್ರಿತಃ ಕರ್ಮಫಲಂ” ಎಂದು. ನಾವು ಸಾಮಾನ್ಯವಾಗಿ ಕರ್ಮತ್ಯಾಗ ಮಾಡಿದವರು ಸಂನ್ಯಾಸಿಗಳು, ಕರ್ಮ ಮಾಡುವವರು ಗೃಹಸ್ಥರೆಂದು ಭಾವಿಸುತ್ತೇವೆ. ಆದರೆ ಕೃಷ್ಣ ಹೇಳುತ್ತಾನೆ ಪ್ರತಿಯೊಬ್ಬರೂ ಕರ್ಮಯೋಗಿಗಳಾಗಬೇಕು ಮತ್ತು ಪ್ರತಿಯೊಬ್ಬರೂ ಸಂನ್ಯಾಸಿಗಳಾಗಬೇಕು ಎಂದು. ಇದು ಒಂದನ್ನು ಬಿಟ್ಟು ಒಂದು ಇರತಕ್ಕದ್ದಲ್ಲ. ಸಂನ್ಯಾಸಿ ಎಂದರೆ ನಾವು ಮಾಡಿದ್ದನ್ನೆಲ್ಲಾ ಭಗವಂತನಿಗೆ ಅರ್ಪಿಸುವುದೇ ಹೊರತು ಏನೂ ಮಾಡದೆ ಇರುವುದಲ್ಲ.(ಹಿಂದೆ ಕರ್ಮ ಸಂನ್ಯಾಸದ ಬಗ್ಗೆ ವಿವರಿಸುವಾಗ ಈ ಬಗ್ಗೆ ನೋಡಿದ್ದೇವೆ). ಸಮಸ್ತ ಕರ್ಮವನ್ನು ಭಗವಂತನಿಗೆ ಅರ್ಪಿಸುವುದು ಸಂ-ನ್ಯಾಸ. ಇಲ್ಲಿ ಬಹಳ ಮುಖ್ಯವಾದ ವಿಷಯ ಎಂದರೆ  ಕರ್ಮದ ಫಲದ ಬಯಕೆಯನ್ನು ಸಂಪೂರ್ಣನಾದ ಭಗವಂತನ ಹೃದಯದಲ್ಲಿ ನೆಲೆಗೊಳಿಸಬೇಕು.
ಸಂನ್ಯಾಸ ಎಂದರೆ ತನ್ನ ಕುಟುಂಬವನ್ನು ತೊರೆದು ಕಾಡಿಗೆ ಹೋಗುವುದಲ್ಲ. ಕರ್ಮಯೋಗ ಮಾಡಲೇ ಬೇಕು. “ಕಾರ್ಯಂ ಕರ್ಮ ಕರೋತಿ ಯಃ” ಯಾರ್ಯಾರಿಗೆ ಯಾವುದ್ಯಾವುದು ಕಾರ್ಯವೋ ಅವರವರು ಅದನ್ನದನ್ನು ಮಾಡಬೇಕು. ಈ ಕಾರಣಕ್ಕಾಗಿ ಸಂನ್ಯಾಸ ಮತ್ತು ಕರ್ಮಯೋಗ ಎರಡೂ ಒಟ್ಟೊಟ್ಟಿಗಿರುವುದು. ನಿಜವಾದ ಸಂನ್ಯಾಸಿ ಕರ್ಮಯೋಗಿಯಾಗಿರುತ್ತಾನೆ, ಮತ್ತು ನಿಜವಾದ ಕರ್ಮಯೋಗಿ ಸಂನ್ಯಾಸಿಯಾಗಿರುತ್ತಾನೆ. ಇದಲ್ಲದೆ ನಾವು ತಿಳಿದಂತೆ ಅಗ್ನಿಯನ್ನು ತ್ಯಾಗ ಮಾಡಿದವರು, ಕರ್ಮವನ್ನು ತ್ಯಾಗ ಮಾಡಿದವರು ಸಂನ್ಯಾಸಿಗಳು ಅಥವಾ ಯೋಗಿಗಳಲ್ಲ.
ಸಂನ್ಯಾಸಿ ಎಂದೂ ನಿಷ್ಕ್ರೀಯ ಅಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಕ್ರಿಯೆ ಇರುತ್ತದೆ. ಬ್ರಹ್ಮಚಾರಿಯಾದವನು ಅಧ್ಯಯನ, ಗುರುಕುಲವಾಸ, ಗುರು ಶುಶ್ರೂಷೆ, ಇತ್ಯಾದಿ ಕಾರ್ಯ ಮಾಡಿದರೆ, ಗ್ರಹಸ್ಥ ಅತಿಥಿಸತ್ಕಾರ, ಸಂಸಾರ ಪಾಲನೆ ಇತ್ಯಾದಿ ಕಾರ್ಯವನ್ನು ಮಾಡುತ್ತಾನೆ. ಹೀಗಾಗಿ ಎಲ್ಲರಿಗೂ ಕರ್ಮವಿದೆ.
   
ಯಂ ಸಂನ್ಯಾಸಮಿತಿ ಪ್ರಾಹುರ್ಯೋಗಂ ತಂ ವಿದ್ಧಿ ಪಾಂಡವ
ನಹ್ಯಸಂನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ

ಯಮ್  ಸಂನ್ಯಾಸಮ್ ಇತಿ ಪ್ರಾಹುಃ ಯೋಗಮ್ ತಮ್  ವಿದ್ಧಿ ಪಾಂಡವ
ನ ಹಿ ಅಸಂನ್ಯಸ್ತ ಸಂಕಲಪಃ  ಯೋಗೀ ಭವತಿ ಕಶ್ಚನ-ಯಾವುದನ್ನು ಸಂನ್ಯಾಸವೆನ್ನುವರೋ ಅದನ್ನೆ ಯೋಗವೆಂದು ತಿಳಿ ಪಾಂಡವ. ಬಯಕೆಗಳ ‘ಸಂನ್ಯಾಸ’ ಮಾಡದ ಯಾವನೂ ಮರ್ಮವರಿತ ಕರ್ಮಯೋಗಿಯಾಗಲಾರ.

ಸಂನ್ಯಾಸ ಕೂಡಾ ಒಂದು ಯೋಗ. ಕರ್ಮ ಫಲತ್ಯಾಗ ಕೂಡಾ ಕರ್ಮ ಮಾಡತಕ್ಕ ಕರ್ಮಯೋಗಿಯ ಯೋಗದ ಒಂದು ಮುಖ. ಎಲ್ಲವನ್ನೂ ಭಗವಂತನಿಗೆ ಅರ್ಪಣೆ ಮಾಡಿ ಫಲಕಾಮನೆ ಇಲ್ಲದೆ ಭಗವದ್ ಪೂಜಾ ದೃಷ್ಟಿಯಿಂದ ಮಾಡುವಂತಹ ಕ್ರಿಯೆ ಸಾತ್ವಿಕರ ಸಾಧನೆ. ಸಂನ್ಯಾಸ ಎಂದರೆ ಕಾಮ-ಸಂಕಲ್ಪವನ್ನು ಭಗವಂತನಲ್ಲಿ ಅರ್ಪಿಸುವುದು. ಕಾಮ ಅಂದರೆ ‘ಮಾಡಬೇಕು’ ಎಂದು ಬಯಸುವುದು, ಸಂಕಲ್ಪ ಎಂದರೆ  ‘ಮಾಡುತ್ತೇನೆ’ ಎಂದು ನಿರ್ಧರಿಸುವುದು. ಕಾಮಸಂಕಲ್ಪ ವರ್ಜಿತ-ಸಂನ್ಯಾಸ. ಇಲ್ಲಿ ಕೃಷ್ಣ ವಿವರಿಸುತ್ತಿರುವುದು ಆಶ್ರಮಕ್ಕೆ(ಸಂನ್ಯಾಸಾಶ್ರಮ) ಸಂಭಂದಪಟ್ಟ ವಿಚಾರವಲ್ಲ. ಇದು ಸಾಧನೆಗೆ ಸಂಭಂದಪಟ್ಟ ವಿಚಾರ. ಸಾಧನೆಯ ಮುಖದಲ್ಲಿ ಯೋಗಿಗಳು ಸಂನ್ಯಾಸಿಗಳಾಗಬೇಕು ಮತ್ತು ಸಂನ್ಯಾಸಿಗಳು ಯೋಗಿಗಳಾಗಬೇಕು ಇದು ಕೃಷ್ಣನ ಸಂದೇಶ.

ನಾವು ಸಾಧನೆ ಮಾಡುವಾಗ ಕರ್ಮವೂ ಇರಬೇಕು ಫಲನ್ಯಾಸವೂ ಇರಬೇಕು. ಹೀಗಿರುವಾಗ ಎಲ್ಲರೂ ಮಾಡಬೇಕಾದ ಕರ್ಮ ಅಂತ ಒಂದು ಇದೆಯೋ ? ಸಾಧಕನ ಸಾಮಾಜಿಕ ಕರ್ತವ್ಯ ಯಾವುದು? ಸಮಾಜದೊಂದಿಗೆ ಒಬ್ಬ ಸಾಧಕ ಹೇಗೆ ಸ್ಪಂದಿಸಬೇಕು? ಕರ್ಮದ ಕೊನೆ ಎಂದು? ಸಾಧನೆಗೂ ಕರ್ಮಕ್ಕೂ ಇರುವ ಹೊಂದಿಕೆ ಏನು? ಅದು ಹೇಗೆ ಸಾಧನೆಗೆ ಪೂರಕ? ಈ ಎಲ್ಲಾ  ಪ್ರಶ್ನೆಗಳಿಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರ  ಕೊಡುತ್ತಾನೆ.          
  

ಆರುರುಕ್ಷೋರ್ಮುನೇರ್ಯೋಗಂ ಕರ್ಮ ಕಾರಣಮುಚ್ಯತೇ        
ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಚ್ಯತೇ

ಆರುರುಕ್ಷೋಃ ಮುನೇಃ ಯೋಗಮ್ ಕರ್ಮ ಕಾರಣಮ್ ಉಚ್ಯತೇ           
ಯೋಗ ಆರೂಢಸ್ಯ ತಸ್ಯ ಏವ ಶಮಃ ಕಾರಣಮ್ ಉಚ್ಯತೇ –ಸಾಧನೆಯ ಮೆಟ್ಟಲೇರುವವನಿಗೆ ಗುರಿ ಮುಟ್ಟಲು ಕರ್ಮಯೋಗ[ಹಲವು ಬಗೆಯ ಜನಸೇವೆ]ಕಾರಣವೆನಿಸುತ್ತದೆ. ಅವನೆ ಗುರಿ ಸೇರಿದಾಗ ಭಗವತ್ ಸಮಾಧಿ [ಜನ ಸೇವೆಯಿಂದ ವಿರಾಮ ಮತ್ತು ಭಗವಂತನಲ್ಲಿ ಧ್ಯಾನ ನಿಷ್ಠೆ] ಸುಖದ ಹೆಚ್ಚಳಕ್ಕೆ ಕಾರಣವೆನಿಸುತ್ತದೆ.

ಈ ಶ್ಲೋಕಕ್ಕೆ ಎರಡು ಆಯಾಮವಿದೆ. ನಾವು ಮಾಡತಕ್ಕ ನಿತ್ಯಕರ್ಮ ಒಬ್ಬ ಸಾಧಕ ಎಲ್ಲಿಯತನಕ ಮಾಡಬೇಕು ಮತ್ತು ಎಲ್ಲಿಂದ ಬಿಡಬಹುದು ಎನ್ನುವುದು ಒಂದು ಆಯಾಮವಾದರೆ ಇನ್ನೊಂದು ಸಾಮಾಜಿಕವಾಗಿ ಒಬ್ಬ ಸಾಧಕನ ಕರ್ತವ್ಯವೇನು ಎನ್ನುವುದನ್ನು ಈ ಶ್ಲೋಕ ವಿವರಿಸುತ್ತದೆ.
ಇನ್ನೂ ಸಿದ್ಧಿ ಪಡೆಯದ ಸಾಧನೆಯ ಹಾದಿಯಲ್ಲಿರುವ ಒಬ್ಬ ಸಾಧಕ  ಆ ಸ್ಥಿತಿಯಲ್ಲಿ ಎಲ್ಲ ವಿಹಿತಕರ್ಮವನ್ನು ಮಾಡುತ್ತಿರಬೇಕು, ಯಾವುದನ್ನೂ ಬಿಡುವಂತಿಲ್ಲ. ಸಿದ್ಧನಾದ ಮೇಲೆ ಆತ ಸಮಾಧಿ ಸ್ಥಿತಿಯಲ್ಲಿ ಭಗವಂತನನ್ನು ಒಳಗಿನಿಂದ ಕಾಣಬಲ್ಲ.  ಆ ಸ್ಥಿತಿಯಲ್ಲಿ ಆತನಿಗೆ ಉಳಿದ ಕರ್ಮಗಳಿಗಿಂತ ಅಂತರಂಗದಲ್ಲಿ ಭಗವಂತನನ್ನು ಕಾಣುವ ಕರ್ಮ ಮುಖ್ಯವಾಗುತ್ತದೆ. ಒಬ್ಬ ಅಪರೋಕ್ಷ್ಣ ಜ್ಞಾನ ಬಂದವ ಸದಾ ಸಮಾಧಿ ಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ. ಅವನು ಹೊರ ಪ್ರಪಂಚಕ್ಕೆ ಬರಲೇ ಬೇಕು. ಆಗ ಅವನ ಮುಖ್ಯ ಕರ್ಮವೆಂದರೆ ಶಾಸ್ತ್ರ ಶ್ರಾವಣ, ಮಂತ್ರ ಜಪ, ಪ್ರವಚನ ಇತ್ಯಾದಿ. ಆದ್ದರಿಂದ ವಿಹಿತಕರ್ಮಗಳ ವಿಧಿನಿಷೇದ ಬದ್ದತೆ ಅಪರೋಕ್ಷ  ಜ್ಞಾನದವರೆಗೆ ಮಾತ್ರ. ಉದಾಹರಣೆಗೆ ಒಬ್ಬ ಅಪರೋಕ್ಷ ಜ್ಞಾನಿ ಧ್ಯಾನಕ್ಕೆ ಕುಳಿತಿದ್ದಾನೆ, ಆತ ತನ್ನ ಅಂತರಂಗದಲ್ಲಿ ಭಗವಂತನನ್ನು ಕಾಣುತ್ತಿದ್ದಾನೆ ಮತ್ತು ಆ ಆನಂದದಲ್ಲಿ ಮುಳುಗಿದ್ದಾನೆ. ಅದು ಬೆಳಗಿನಜಾವ-ಸೂರ್ಯೋದಯದ ಕಾಲ. ಸ್ನಾನ ಮಾಡಿ ಸಂಧ್ಯಾವಂದನೆ ಮಾಡುವ ಸಮಯದಲ್ಲಿ ಈತ ಧ್ಯಾನದಲ್ಲಿ ಕುಳಿತಿದ್ದಾನಲ್ಲ ಎಂದು ನಾವು ಅವನನ್ನು ಎಬ್ಬಿಸುವುದು ತಪ್ಪು. ಆತ ಸಂಧ್ಯಾವಂದನೆ ಮಾಡದಿದ್ದರೆ ಯಾವ ಕರ್ಮ ಲೇಪವೂ ಆಗುವುದಿಲ್ಲ. ಏಕೆಂದರೆ ಸಂಧ್ಯಾವಂದನೆ ಮಾಡುವುದು ಭಗವಂತನ ದರ್ಶನಕ್ಕಾಗಿ-ಆದರೆ ಆತ ಆಗಲೇ ಭಗವಂತನ ದರ್ಶನ ಪಡೆಯುತ್ತಿದ್ದಾನೆ. ಹೀಗೆ ಅಪರೋಕ್ಷ ಜ್ಞಾನಿಗೆ ಕರ್ಮದ ಬದ್ಧತೆ ಇಲ್ಲ. ಸಮಾಧಿಸ್ಥಿತಿಯಿಂದ ಹೊರಬಂದ ಮೇಲೆ ಇರತಕ್ಕ ಕರ್ತವ್ಯ ಎಂದರೆ ಭಗವಂತನ ಗುಣಗಾನ, ಪ್ರವಚನ, ಅಧ್ಯಯನ, ಜಪ ಇತ್ಯಾದಿ.
ಈ ಶ್ಲೋಕದ ಇನ್ನೊಂದು ಆಯಾಮವನ್ನು ಬಹಳ ಸುಂದರವಾಗಿ ಮಧ್ವಾಚಾರ್ಯರು ತಮ್ಮ ಗೀತಾತಾತ್ಪರ್ಯದಲ್ಲಿ ವಿವರಿಸಿದ್ದಾರೆ. ಇದು ಮುಖ್ಯವಾಗಿ ಒಬ್ಬ ಸಾಧಕನ ಸಾಮಾಜಿಕ ನಡೆ ಹೇಗಿರಬೇಕು ಎನ್ನುವುದನ್ನು ವಿವರಿಸುತ್ತದೆ. ಕರ್ಮ ಎನ್ನುವುದಕ್ಕೆ ಆಚಾರ್ಯರು ಒಂದು ಅಪೂರ್ವ ಅರ್ಥವನ್ನು ಕೊಟ್ಟಿದ್ದಾರೆ. ಕರ್ಮ ಅಂದರೆ ಕರ+ಮ. ಕರ ಅಂದರೆ ಕಂದಾಯ(Duty).ಯಾವುದನ್ನು ಕಂದಾಯವೆಂದು ತಿಳಿದು ನಾವು ಮಾಡಬೇಕೋ ಅದು ‘ಕರ-ಮ’. ನಾವು ಭಗವಂತನ ರಾಜ್ಯದಲ್ಲಿನ ಪ್ರಜೆಗಳು. ಅದಕ್ಕೋಸ್ಕರ ಅವನಿಗೆ ನಾವು ಕೊಡುವ ಕರ ಕರ್ಮ. ಯಾವುದೋ ಅಭಿಲಾಷೆಯಿಂದ ದೇವಸ್ಥಾನದಲ್ಲಿ ನಾವು ಕಾಣಿಕೆ ಹಾಕುವುದು ನಿಜವಾದ ಕಂದಾಯವಲ್ಲ, ಅದನ್ನು ಭಗವಂತ ಬಯಸುವುದೂ ಇಲ್ಲ. ಭಗವಂತ ನಮ್ಮಿಂದ ಬಯಸುವ ಕರ್ಮ ಕಷ್ಟದಲ್ಲಿರುವವರ ಶುಶ್ರೂಷೆ. ಒಬ್ಬ ಸಾಧಕ ಅಪರೋಕ್ಷ ಸಾಧಕನಾಗುವ ತನಕ ಅವನ ಸಾಧನೆಯಲ್ಲಿ ಇದು ಒಂದು ಮುಖ್ಯ ಸಾಧನೆ. ಸಮಸ್ತ ಜೀವಜಾತದ ಮೇಲೆ ಅನುಕಂಪ ಸೇವಾ ಮನೋವೃತ್ತಿ  ಬಹಳ ಮುಖ್ಯ. ಯೋಗಶಾಸ್ತ್ರದಲ್ಲಿ ಕೂಡಾ ಇದನ್ನೇ ಹೇಳುತ್ತಾರೆ. ಮೈತ್ರಿ, ಕರುಣಾ, ಮುದಿತ ಮತ್ತು ಉಪೇಕ್ಷ ಎನ್ನುವ ನಾಲ್ಕು ಮನೋವೃತ್ತಿ ಒಬ್ಬ ಸಾಧಕನಲ್ಲಿರಬೇಕು. ಮೈತ್ರಿ ಎಂದರೆ ಸಜ್ಜನರ ಸಹವಾಸ, ಎಲ್ಲಿ ಒಳ್ಳೆಯತನವಿದೆ ಅವರ ಸ್ನೇಹ;  ದುಃಖವನ್ನು ಕಂಡಾಗ ಅಲ್ಲಿ ಕರುಣೆ ಹಾಗು ನೆರವು-ಕರುಣಾ; ಇನ್ನೊಬ್ಬರ ಉದ್ಧಾರ ನೋಡಿ ಸಂತೋಷಪಡುವುದು ಮುದಿತ; ದುಷ್ಟರಿಂದ ದೂರವಿರುವುದು ಉಪೇಕ್ಷ. ಕೆಟ್ಟವರೊಂದಿಗೆ ಜಗಳ ಬೇಡ ಆದರೆ ಅವರ ಒಡನಾಟದಿಂದ ಯಾವುದೇ ದ್ವೇಷವಿಲ್ಲದೆ ದೂರವಿರುವುದು ಉಪೇಕ್ಷ. ಹೀಗೆ ಸಾಧಕನ ಜೀವನದಲ್ಲಿ ಇದು ಮಹತ್ತರವಾದ ಸಾಮಾಜಿಕ ಕರ್ತವ್ಯ. ಒಬ್ಬ ಸಿದ್ಧನಾದವ(ಯೋಗಾರೂಢ) ಸದಾ ಅಂತರ್ಮುಖಿ-ಯಾಗಿರುತ್ತಾನೆ. ಅವನಿಗೆ ಈ ಸಾಮಾಜಿಕ ಬದ್ಧತೆ ಇಲ್ಲ(ಅವರಿಗೆ ಅದು ಸಾಧ್ಯವಾಗುವುದಿಲ್ಲ). ಅವರ ಆನಂದಾಭಿವೃದ್ಧಿಗೆ ಕಾರಣ ‘ಶಮಃ’.  ಅಂದರೆ ಸದಾ ಭಗವಂತನಲ್ಲೇ ಮನಸ್ಸನ್ನು ನೆಟ್ಟಿರುವುದು, ಅದರಿಂದ ವ್ಯತಿರಿಕ್ತವಾದ ಇನ್ನೊಂದು ಕರ್ಮ ಅವರಿಗಿಲ್ಲ.
ಹೀಗೆ ಲೋಕಸೇವೆ ಎನ್ನುವುದು ಒಬ್ಬ ಸಾಧಕನ ಅವಿಭಾಜ್ಯ ಅಂಗವಾಗಬೇಕು ಎನ್ನುವುದನ್ನು ಕೃಷ್ಣ ಈ ಶ್ಲೋಕದಲ್ಲಿ  ಸ್ಪಷ್ಟವಾಗಿ ಹೇಳಿದ. ಯೋಗಾರೂಢನಿಗೆ ಯಾವ ಸಾಮಾಜಿಕ ಬದ್ಧತೆ ಇಲ್ಲ, ಅವನು ಅಂತರಂಗದಲ್ಲಿ ಭಗವಂತನನ್ನು ಕಾಣುತ್ತಿರುತ್ತಾನೆ ಎಂದು ಕೃಷ್ಣ ಹೇಳಿದಾಗ ನಮಗೆ ಒಂದು ಪ್ರಶ್ನೆ ಮೂಡಬಹುದು. ಇಂತಹ ಅಪರೋಕ್ಷ  ಜ್ಞಾನಿಗಳನ್ನು ಗುರುತಿಸುವುದು ಹೇಗೆ ಎಂದು. ಮುಂದಿನ ಶ್ಲೋಕ ಈ ನಮ್ಮ ಪ್ರಶ್ನೆಗೆ ಉತ್ತರ ರೂಪದಲ್ಲಿದೆ.                            

Saturday, May 14, 2011

Bhagavad Gita in Kannada Chapter-05 Shloka 27-29

ಬಾಹ್ಯ ಸುಖದಿಂದ ಅಂತರಂಗದ ಸ್ವರೂಪಭೂತವಾದ ಸಹಜ ಸುಖದ ಕಡೆ ತಿರುಗುವ ಸಂದೇಶವನ್ನು ಕೊಟ್ಟ ಕೃಷ್ಣ, ಅದಕ್ಕೆ ಪೂರಕವಾದ ಧ್ಯಾನದ ಬಗ್ಗೆ ಸಂಕ್ಷಿಪ್ತವಾಗಿ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.   
  
ಸ್ಪರ್ಶಾನ್ ಕೃತ್ವಾ ಬಹಿರ್ಬಾಹ್ಯಾಂಶ್ಚಕ್ಷುಶ್ಚೈವಾಂತರೇ  ಭ್ರುವೋಃ
ಪ್ರಾಣಾಪಾನೌ ಸಮೌ ಕೃತ್ವಾ ನಾಸಾಭ್ಯಂತರಚಾರಿಣೌ ೨೭
ಯತೇಂದ್ರಿಯಮನೋವೃತ್ತಿರ್ಮುನಿರ್ಮೋಕ್ಷಪರಾಯಣಃ
ವಿಗತೇಚ್ಛಾಭಯಕ್ರೋಧೋ ಯಃ ಸದಾ ಮುಕ್ತ ಏವ ಸಃ ೨೮

ಸ್ಪರ್ಶಾನ್ ಕೃತ್ವಾ ಬಹಿಃ ಬಾಹ್ಯಾನ್ ಚಕ್ಷುಃ ಚ ಏವ ಅಂತರೇ   ಭ್ರುವೋಃ
ಪ್ರಾಣ ಅಪಾನೌ ಸಮೌ ಕೃತ್ವಾ ನಾಸ ಅಭ್ಯಂತರ ಚಾರಿಣೌ ||
ಯತ ಇಂದ್ರಿಯ ಮನಃ ವೃತ್ತಿಃ ಮುನಿಃ ಮೋಕ್ಷ ಪರಾಯಣಃ
ವಿಗತ ಇಚ್ಛಾ ಭಯ ಕ್ರೋಧಃ ಯಃ ಸದಾ ಮುಕ್ತಃ  ಏವ ಸಃ –ಹೊರಗಣ ವಿಷಯ ಸಂಬಂಧಗಳನ್ನು ಹೊರಗಟ್ಟಿ, ನೋಟವನ್ನು ಹುಬ್ಬುಗಳ ನಡುವಿರಿಸಿ, ಹೊರಳೆಯೊಳಗೆ ಚರಿಸುವ ಪ್ರಾಣಾಪಾನಗಳನ್ನು ಕುಂಭಕದಲ್ಲಿ ಸಮಗೊಳಿಸಿ, ಇಂದ್ರಿಯಗಳ ಮತ್ತು ಮನದ ಚೆಲ್ಲಾಟವನ್ನು ಹಿಡಿತದಲ್ಲಿಟ್ಟವನು, ಬಿಡುಗಡೆಗಾಗಿ ಕಾತರಿಸುವವನು, ಬಯಕೆ-ಅಂಜಿಕೆ-ಸಿಡುಕುಗಳನ್ನು ತೊಡೆದುಕೊಂಡವನು-ಇಂಥ ಸಾಧಕನು ಸದಾ ಮುಕ್ತನೇ ಸರಿ.

ನಾವು ನಮ್ಮ ಮನಸ್ಸನ್ನು ನಿಯಂತ್ರಿಸಬೇಕಾದರೆ ಮೊದಲು ನಮ್ಮ ಇಂದ್ರಿಯಗಳು ಹೊರ ಪ್ರಪಂಚದಲ್ಲಿ ಸಂಚರಿಸುವುದನ್ನು ನಿಯಂತ್ರಿಸಬೇಕು. “ಸ್ಪರ್ಶಾನ್ ಕೃತ್ವಾ ಬಹಿಃ ಬಾಹ್ಯಾನ್”- ಬಾಹ್ಯೇಂದ್ರಿಯ ನಿಯಂತ್ರಣ ಮಾಡದೆ ಮನಸ್ಸನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಹೊರ ಪ್ರಪಂಚದ ರೂಪ-ರಸ-ಸ್ಪರ್ಶ-ಶಬ್ದ-ಗಂಧ ಎನ್ನುವ ಸುಖದ ಭ್ರಮೆಯನ್ನು ಹೊರಗೇ ಬಿಡಬೇಕು, ಜೊತೆಗೆ ಅನಪೇಕ್ಷಿತವಾಗಿ ನಮ್ಮೊಳಗೆ ತುಂಬಿರುವ, ಸತ್ಯವನ್ನು ಕಾಣುವುದಕ್ಕೆ ಅಡ್ಡಗೋಡೆಯಾಗಿರುವ, ಈ ಪ್ರಪಂಚದ ಅನುಭೂತಿಯನ್ನು ಹೊರಹಾಕಬೇಕು. ಸಾಮಾನ್ಯವಾಗಿ ನಮಗೆ ಧ್ಯಾನಕ್ಕೆ ಕುಳಿತಾಗ ಏನೇನೊ ಕಾಣಲು ಆರಂಭವಾಗುತ್ತದೆ. ಸುಂದರವಾದದ್ದು, ಭಯಾನಕವಾದದ್ದು, ಇತ್ಯಾದಿ. ಇದಕ್ಕಾಗಿ ಭಯಪಡುವ ಅಗತ್ಯವಿಲ್ಲ. ಇವೆಲ್ಲವೂ ನಾವು ನಮ್ಮೊಳಗೆ ತುಂಬಿಕೊಂಡಿರುವ ಅನಗತ್ಯ ವಿಚಾರಗಳು. ಅವು ಹೊರ ಹೋಗುವಾಗ ಈ ರೀತಿ ನಮಗೆ ದರ್ಶನ ಕೊಡುತ್ತವೆ. ಹಠಬಿಡದೆ ಸಾಧನೆ ಮುಂದುವರಿಸಿದಾಗ ಕ್ರಮೇಣವಾಗಿ ಈ ಎಲ್ಲಾ  ವಿಚಾರಗಳು ಹೊರಹೋಗಿ ಮನಸ್ಸು ನಿರ್ಮಲವಾಗುತ್ತದೆ. ಇದು ಒಂದೇ ದಿನದಲ್ಲಿ ಆಗುವಂತದ್ದಲ್ಲ, ಇದಕ್ಕೆ ನಿರಂತರ ಸಾಧನೆ ಅಗತ್ಯ. ಒಮ್ಮೆ ಅಂತಃಕರಣ ಸ್ವಚ್ಛವಾದರೆ ಅದರಲ್ಲಿ ಏನನ್ನು ಬೇಕಾದರೂ ಪ್ರತಿಬಿಂಬಿಸಬಹುದು. 
ಧ್ಯಾನಕ್ಕೆ ಬೇಕಾದ ಇನ್ನೊಂದು ಮುಖ್ಯವಾದ ಅಂಶ ಅನ್ನಮಯಕೋಶ(ದೇಹ) ಸ್ಥಿರಗೊಳಿಸುವುದು. ದೇಹ ಚಲಿಸಿದರೆ ಮನಸ್ಸು ಚಲಿಸುತ್ತದೆ-ಆಗ ಏಕಾಗ್ರತೆ ಸಾಧ್ಯವಿಲ್ಲ. ಅದಕ್ಕಾಗಿ ನಾವು ನೆಟ್ಟಗೆ(erect and straight body),  ನಮಗೆ ಸಾಧ್ಯವಾದ ಆಸನ(Posture)ದಲ್ಲಿ ನಮ್ಮ ದೇಹವನ್ನು ಸ್ಥಿರಗೊಳಿಸಬೇಕು. ಕೃಷ್ಣ ಹೇಳುತ್ತಾನೆ “ಚಕ್ಷುಃ ಚ ಏವ ಅಂತರೇ   ಭ್ರುವೋಃ” ಎಂದು. ಅಂದರೆ ನಮ್ಮ ದೃಷ್ಟಿಯನ್ನು ನಮ್ಮ ಎರಡು ಹುಬ್ಬಿನ ನಡುವೆ ನೆಡುವುದು.(ಇದು ಕಷ್ಟವಾದರೆ ಮೂಗಿನ ತುದಿಯನ್ನೂ ಆರಿಸಿಕೊಳ್ಳಬಹುದು ಎಂದು ಶಾಸ್ತ್ರಕಾರರು ಹೇಳುತ್ತಾರೆ). ನಮ್ಮ ಎರಡು ಹುಬ್ಬಿನ ನಡುವೆ ಆಜ್ಞಾಚಕ್ರವಿದೆ, ಅಲ್ಲಿ ನಾವು ನಮ್ಮ ದೃಷ್ಟಿಯನ್ನು ನೆಟ್ಟಾಗ ಈ ಶಕ್ತಿ ಕೇಂದ್ರ  ಜಾಗೃತವಾಗುತ್ತದೆ. ಇದರಿಂದ ಅನ್ನಮಯ ಕೋಶ ಸ್ಥಿರವಾಗುತ್ತದೆ. 
ಅನ್ನಮಯಕೋಶದ ನಂತರ ಪ್ರಾಣಮಯಕೋಶ. “ಪ್ರಾಣ ಅಪಾನೌ ಸಮೌ ಕೃತ್ವಾ ನಾಸ ಅಭ್ಯಂತರ ಚಾರಿಣೌ”-ನಮ್ಮೊಳಗೆ ನಿರಂತರ ವಾಯುವಿನ ಚಲನೆ ಇರುತ್ತದೆ; ಈ ಚಲನೆಯನ್ನು  ಸ್ಥಿರಗೊಳಿಸುವುದು-ಇದನ್ನು ಕುಂಭಕ ಎನ್ನುತ್ತಾರೆ. ಇದರಲ್ಲಿ ಎರಡು ವಿಧ. ಒಂದು ಅಂತಃಕುಂಭಕ ಹಾಗು ಇನ್ನೊಂದು ಬಾಹ್ಯಕುಂಭಕ. ಅಂತಃಕುಂಭಕದಲ್ಲಿ ಮೊದಲು ಸಂಪೂರ್ಣ ಒಳಗಿರುವ ಗಾಳಿಯನ್ನು ಹೊರಹಾಕಿ ನಂತರ ಎಷ್ಟು ಹೆಚ್ಚುಸಾಧ್ಯವೋ ಅಷ್ಟು ಶುದ್ಧ ಗಾಳಿಯನ್ನು ಒಳಗೆ ತೆಗೆದುಕೊಂಡು,  ಉಸಿರನ್ನು ಸ್ಥಗನಗೊಳಿಸಬೇಕು. [ಈ ರೀತಿಯ ಪ್ರಾಣಾಯಾಮವನ್ನು ಗುರುವಿನಿಂದ ಕಲಿತು ಮಾಡಬೇಕು ಇಲ್ಲದಿದ್ದರೆ ಇದರಿಂದ ಅಪಾಯವಿದೆ]. ಬಾಹ್ಯಕುಂಭಕದಲ್ಲಿ ಒಳಗಿನ  ಗಾಳಿಯನ್ನು ಸಂಪೂರ್ಣ ಹೊರಹಾಕಿ ಅದೇ ಸ್ಥಿತಿಯಲ್ಲಿ ಉಸಿರನ್ನು ಸ್ಥಗನಗೊಳಿಸುತ್ತಾರೆ. ಸಾಮಾನ್ಯವಾಗಿ ಹೃದಯ ರೋಗವಿದ್ದವರಿಗೆ  ಅಂತಃಕುಂಭಕ ಅಪಾಯಕಾರಿ, ಅವರು  ಬಾಹ್ಯಕುಂಭಕ ಮಾಡಬಹುದು. ಹೀಗೆ ಕುಂಭಕದಿಂದ ಪ್ರಾಣಮಯಕೊಶ ಸ್ಥಿರವಾಗುತ್ತದೆ. ನಂತರದ ಹೆಜ್ಜೆ ಮನೋಮಯ ಮತ್ತು ವಿಜ್ಞಾನಮಯಕೋಶ. ನಮ್ಮ ಮನಸ್ಸು ಚಂಚಲ, ಅದು ಒಂದುಕಡೆ ನಿಲ್ಲುವುದಿಲ್ಲ, ಅದನ್ನು ಸ್ಥಿರಗೊಳಿಸಬೇಕು. ‘ಈ ದಾರಿಯಲ್ಲಿ ನಾನು ಸಾಗಿ-ಸಾಧಿಸಿ ಸಿದ್ಧಿ ಪಡೆದೇ ಪಡೆಯುತ್ತೇನೆ’ ಎನ್ನುವ ಹಠತೊಟ್ಟು ಮನಸ್ಸನ್ನು ಅದಕ್ಕೆ ಅಣಿಗೊಳಿಸಬೇಕು. ಇದರಿಂದ ಚಿತ್ತ ಭಗವಂತನ ಕಡೆ ಏಕಾಗ್ರವಾಗುತ್ತದೆ. ಈ ಸ್ಥಿತಿ ಪಂಚಬೌತಿಕವಾಗಿ ನಾವು ತಲುಪಬಹುದಾದ ಅತ್ಯಂತ ಮಹತ್ತಾದ ಸ್ಥಿತಿ. ಇಲ್ಲಿರುವ ಆನಂದ ಅಪರಿಮಿತ. ಈ ಸ್ಥಿತಿಯಲ್ಲಿರುವ ಸುಖವನ್ನು ಅನುಭವಿಸಿದರೆ ಮುಂದೆ ಬಾಹ್ಯ ಪ್ರಪಂಚದಲ್ಲಿನ ಸುಖದ ಹಿಂದೆ ನಮ್ಮ ಮನಸ್ಸು ಎಂದೂ ಹರಿಯುವುದಿಲ್ಲ.ಮನಸ್ಸು ಭಗವಂತನಲ್ಲಿ ನೆಲೆನಿಲ್ಲುತ್ತದೆ. ಇದರಿಂದ ನಮ್ಮ ಆಸೆ-ಭಯ-ಕ್ರೋಧ ಎಲ್ಲವೂ ಇಲ್ಲವಾಗುತ್ತದೆ. “ಇಂತಹ ಸಾಧಕ  ಸದಾ ಮುಕ್ತನೇ ಸರಿ” ಎನ್ನುತ್ತಾನೆ ಕೃಷ್ಣ.

ಕೃಷ್ಣ ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ ಮತ್ತು  ವಿಜ್ಞಾನಮಯಕೋಶವೆಂಬ      ಚತುರ್ವಿದ ಅಂತಃಕರಣವನ್ನು ಪಕ್ವಗಳಿಸಿ ಹೇಗೆ ನಾವು ನಮ್ಮೊಳಗಿನ  ಭಗವಂತನ ದರ್ಶನವನ್ನು ಪಡೆಯಬಹುದು ಎನ್ನುವುದನ್ನು ವಿವರಿಸಿದ. ಮುಂದಿನ ಶ್ಲೋಕದಲ್ಲಿ ನಾವೆಂದೂ ಕಾಣದ ಆ  ಭಗವಂತನನ್ನು ಯಾವ ರೀತಿ ಕಾಣಬೇಕು ಎನ್ನುವುದನ್ನು ವಿವರಿಸುತ್ತಾನೆ.         

ಭೋಕ್ತಾರಂ ಯಜ್ಞತಪಸಾಂ ಸರ್ವಲೋಕಮಹೇಶ್ವರಮ್          
ಸುಹೃದಂ ಸರ್ವಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ ೨೯


ಭೋಕ್ತಾರಮ್  ಯಜ್ಞ ತಪಸಾಮ್  ಸರ್ವಲೋಕ ಮಹಾ ಈಶ್ವರಮ್       
ಸುಹೃದಮ್  ಸರ್ವ ಭೂತಾನಾಮ್  ಜ್ಞಾತ್ವಾ ಮಾಮ್  ಶಾಂತಿಮ್ ಋಚ್ಛತಿ-ಹೊಮಗಳನ್ನು-ವೃತಗಳನ್ನು ಉಣ್ಣುವವನೆಂದು, ಎಲ್ಲ ಲೋಕಗಳ ಒಡೆಯರಿಗು ಹಿರಿಯೊಡೆಯನೆಂದು, ಎಲ್ಲ ಜೀವಿಗಳ ನೇಹಿಗನೆಂದು ನನ್ನನ್ನು ತಿಳಿದವನು ಸುಖದ ಸೆಲೆಯಾದ ಮುಕ್ತಿಯನ್ನು ಪಡೆಯುತ್ತಾನೆ.

ಆ ಭಗವಂತ ಸರ್ವ ಯಜ್ಞಗಳ ಭೋಕ್ತಾರ. [ಇಲ್ಲಿ ಯಜ್ಞ ಅಂದರೆ ಅಗ್ನಿಮುಖದಲ್ಲಿ ಮಾಡುವ ಯಜ್ಞ ಮಾತ್ರವಲ್ಲ, ಹಿಂದೆ ವಿವರಿಸಿದ ಎಲ್ಲಾ ರೀತಿಯ ಯಜ್ಞ]. ನಾವು ಯಜ್ಞದಲ್ಲಿ ದೇವತೆಗಳ ಹೆಸರಿನಲ್ಲಿ ಅರ್ಪಿಸುವ ಹವಿಸ್ಸೂ ಕೂಡಾ ಆ ದೇವತೆಯೊಳಗೆ ಅಂತರ್ಯಾಮಿಯಾಗಿರುವ ಭಗವಂತನಿಗೆ ಅರ್ಪಿತ ಎನ್ನುವ ಭಾವನೆಯಿಂದ ಅರ್ಪಿಸಬೇಕು. ಭಗವಂತನಿಗೆ ಅರ್ಪಿಸದೆ ಅರ್ಪಿಸುವ ಯಾವ ಹವಿಸ್ಸನ್ನೂ ದೇವತೆಗಳು ಸ್ವೀಕರಿಸುವುದಿಲ್ಲ. ನಮ್ಮ ಪ್ರತಿಯೊಂದು ನಡೆಯಲ್ಲಿಯೂ ಭಗವಂತನ ಅನುಸಂಧಾನವಿರಬೇಕು. ಆತ ಸರ್ವಸಮರ್ಥ, ಸರ್ವಕ್ರಿಯೆಗಳ ನಿಯಾಮಕ, ಎಲ್ಲವೂ ಅವನಿಗೆ ಸಂದದ್ದು ಎನ್ನುವ ಅನುಸಂಧಾನ ಧ್ಯಾನದಲ್ಲಿ ಬಹಳ ಮುಖ್ಯ. ದೈಹಿಕವಾಗಿ, ಮಾನಸಿಕವಾಗಿ, ವಾಚಕವಾಗಿ ಅಚಲವಾದ ದೀಕ್ಷೆ ಬಹಳ ಮುಖ್ಯ. ಯಾವ ಕಾಲಕ್ಕೂ ಅಪ್ರಾಮಾಣಿಕನಾಗಿ ಮಾತನಾಡುವುದಿಲ್ಲ ಎನ್ನುವ ದೀಕ್ಷೆ, ಸದಾ ಮನಸ್ಸಿನಲ್ಲಿ ಸತ್ಯದ ಬಗ್ಗೆ ಆಳವಾದ ಚಿಂತನೆ, ಸದಾ ಎಲ್ಲರ ಬಗ್ಗೆ ಸದ್ಭಾವ- ಹೀಗೆ  ಇದೊಂದು ತಪಸ್ಸು. ಭಗವಂತನನ್ನು ಮರೆತು ಯಾರನ್ನು ಪೂಜಿಸಿದರೂ ಅದು ವ್ಯರ್ಥ.
ಕೆಲವರಿಗೆ ಭಗವಂತ ಎಂದರೆ ಭಯ! ಇಲ್ಲಿ ಕೃಷ್ಣ ಹೇಳುತ್ತಾನೆ ‘ಸುಹೃದಮ್  ಸರ್ವ ಭೂತಾನಾಮ್’ ಎಂದು.  ಭಗವಂತನ ಬಗ್ಗೆ ಎಂದೂ ಭಯಪಡಬೇಕಾಗಿಲ್ಲ. ಆತನಿಗಿಂತ ಆತ್ಮೀಯ ಗೆಳೆಯ ಇನ್ನೊಬ್ಬನಿಲ್ಲ. ನಮ್ಮನ್ನು ಸದಾ ಪ್ರೀತಿಸುವ,ನಿರಂತರ ನಮ್ಮ ಒಳಗೆ-ಹೊರಗೆ ತುಂಬಿ ಸದಾ ರಕ್ಷಿಸುವ ಶಕ್ತಿ ಭಗವಂತ.ಪ್ರತಿಯೊಬ್ಬರನ್ನು ಅವರವರ ಯೋಗ್ಯತೆಗೆ ತಕ್ಕಂತೆ ಬೆಳೆಸುವ, ತಪ್ಪು ಮಾಡಿದಾಗ ಕೇವಲ ತಿದ್ದುವುದಕ್ಕೊಸ್ಕರ ಶಿಕ್ಷೆ ಕೊಟ್ಟು ದಾರಿ ತೋರುವ, ಸದಾ ಕಾರುಣ್ಯದಿಂದ ಮೇಲೆತ್ತುವ ‘ಸುಹೃತ್’ ಆ ಭಗವಂತ. ಇಂತಹ ಕರುಣಾಳು ಇನ್ನೊಬ್ಬನಿಲ್ಲ ಎನ್ನುವ ಜ್ಞಾನ ಧ್ಯಾನದಲ್ಲಿ ಬಹಳ ಮುಖ್ಯ. ಈ ವಿಚಾರವನ್ನು ತಿಳಿದು ಅನುಸರಿಸಿದವ ಜ್ಞಾನಾನಂದದ ಪರಾಕಾಷ್ಠೆಯಾದ ಮೋಕ್ಷವನ್ನುಪಡೆಯುತ್ತಾನೆ ಎನ್ನುತ್ತಾನೆ ಕೃಷ್ಣ.     
ಇತಿ ಪಂಚಮೋSಧ್ಯಾಯಃ
ಐದನೆಯ ಅಧ್ಯಾಯ ಮುಗಿಯಿತು.
*******

Monday, May 9, 2011

Bhagavad Gita in Kannada Chapter-05 Shloka-24-26

ಯೋSನ್ತಃ ಸುಖೋSನ್ತರಾರಾಮಸ್ತಥಾSನ್ತರ್ಜ್ಯೋತಿರೇವ ಯಃ 
ಸ ಯೋಗೀ ಬ್ರಹ್ಮ ನಿರ್ಬಾಣಂ ಬ್ರಹ್ಮಭೂತೋSಧಿಗಚ್ಛತಿ ೨೪

ಯಃ ಅಂತಃ ಸುಖಃ ಅಂತಃ ಆರಾಮಃ ತಥಾ ಅಂತಃ ಜ್ಯೋತಿಃ ಏವ ಯಃ  
ಸಃ  ಯೋಗೀ ಬ್ರಹ್ಮ ನಿರ್ಬಾಣಂ ಬ್ರಹ್ಮಭೂತಃ ಅಧಿಗಚ್ಛತಿ-ಬಯಕೆಯಳಿದು ಒಳಬಗೆಯ ಸುಖ ಕಂಡವನು , ಭಗವಂತನನ್ನು ಕಂಡು ಒಳಗೊಳಗೇ ಖುಷಿಗೊಂಡವನು, ಭಗವಂತನ ಬೆಳಕನ್ನೆ ಒಳಗೆಲ್ಲ ತುಂಬಿಕೊಂಡವನು, ಭಗವಂತನಲ್ಲೆ ನೆಲೆ ನಿಂತ ಇಂಥ ಸಾಧಕ ಅಳಿವಿರದ ಮೈ ತಳೆದ ಭಗವಂತನನ್ನೇ ಸೇರುತ್ತಾನೆ.

ಮನುಷ್ಯ ಸುಖ ಬೇಕು ಎಂದು ಬಯಸದೆ ಅಂತಃಸುಖ ಬೇಕು ಎಂದು ಬಯಸಬೇಕು. ಈ ಶ್ಲೋಕದಲ್ಲಿ ‘ಸುಖ’ ಮತ್ತು ‘ಆರಾಮ’ ಎನ್ನುವ ಎರಡು ಶಬ್ದಗಳು ಬಳಕೆಯಾಗಿವೆ. ಈ ಎರಡು ಶಬ್ದಗಳ ನಡುವೆ ಸೂಕ್ಷ್ಮ ವೆತ್ಯಾಸವಿದೆ. ನಮ್ಮ ಬಯಕೆಗಳು ಈಡೇರುವುದು ಅಥವಾ  ಬಯಸಿದ್ದು ಸಿಕ್ಕಿದಾಗ ಆಗುವುದು ‘ಆರಾಮ’ ; ಬಯಕೆಗಳೇ ಇಲ್ಲದಿರುವುದು ಸುಖ. ಯಾವುದೋ ಕೊರತೆ, ತೊಂದರೆ, ಕಷ್ಟ ಪರಿಹಾರವಾದಾಗ, ಯಾವುದೋ ತಾಪತ್ರಯದಿಂದ ಪಾರಾದಾಗ ಆಗುವುದು ಸುಖ. ಇಲ್ಲಿ ಕೃಷ್ಣ ಹೇಳುತ್ತಾನೆ “ಅಧ್ಯಾತ್ಮ ಯೋಗದ ಸಾಧಕ, ಸಾಧನೆ ಮಾಡಿ ಫಲ ಪಡೆದವನು- ಮಾನಸಿಕವಾಗಿ ಭಗವಂತನಲ್ಲೇ ನೆಲೆಸಿರುತ್ತಾನೆ. ಆತ   ಒಳಗಿಂದೊಳಗೆ ಆರಾಮವಾಗಿರುತ್ತಾನೆ”  ಎಂದು. ಅಂತರಂಗದಲ್ಲಿ ಭಗವಂತನನ್ನು ನೋಡುತ್ತಾ ಆರಾಮವಾಗಿರುವುದು. ಕಾಮ ಕ್ರೋಧವನ್ನು ಬಿಟ್ಟು ಸುಖಪಡುವುದು. ಸಾಧಕ ತನ್ನೊಳಗಿರುವ ಆ ಜ್ಯೋತಿಯನ್ನು ಅರಿತು ತನ್ನೊಳಗಿರುವ ಆ ಮಹಾ ಬೆಳಕಾದ ಭಗವಂತನನ್ನು ಕಂಡು  ಭಗವಂತನಲ್ಲೇ ನೆಲೆಸಿಬಿಡುತ್ತಾನೆ.  

ಲಭಂತೇ  ಬ್ರಹ್ಮನಿರ್ಬಾಣಮೃಷಯಃ ಕ್ಷೀಣಕಲ್ಮಷಾಃ
ಛಿನ್ನದ್ವೈಧಾಯತಾತ್ಮಾನಃ ಸರ್ವಭೂತಹಿತೇ ರತಾಃ    ೨೫

ಲಭಂತೇ  ಬ್ರಹ್ಮನಿರ್ಬಾಣಮ್ ಋಷಯಃ ಕ್ಷೀಣ ಕಲ್ಮಷಾಃ
ಛಿನ್ನ ದ್ವೈಧಾಃ ಯತಆತ್ಮಾನಃ ಸರ್ವಭೂತಹಿತೇ ರತಾಃ –ಕೊಳೆಗಳನೆಲ್ಲ ಕಳೆದು, ಇಬ್ಬಂದಿತನವಳಿದು ತಿಳಿವಿನ ಕೊಳವಾದವರು.[ಬಗೆಯನ್ನು ಹದಗೊಳಿಸಿದವರು], ಎಲ್ಲ ಜೀವಿಗಳಿಗು ಒಳಿತನ್ನೆ ಬಯಸುವ ಬಲ್ಲವರು ನಿತ್ಯ ಸ್ವರೂಪನಾದ ಭಗವಂತನನ್ನೇ ಪಡೆಯುತ್ತಾರೆ.

ತನ್ನಲ್ಲಿ ಉದ್ಭವವಾಗುವ ಸಂದೇಹವನ್ನು, ದ್ವಂದ್ವವನ್ನು ಮೀರಿ ನಿಂತವರು ನಿಜವಾದ ಸಾಧಕರು. ಇವರು ಸದಾ ತಮ್ಮ ಮನಸ್ಸನ್ನು ಅಂತರಂಗದಲ್ಲಿ ನೆಲೆಗೊಳಿಸಿರುತ್ತಾರೆ. ಇವರು ಬಯಸುವ ಸುಖ ‘ಅಂತರಂಗದ ಸುಖ’. ಬಾಹ್ಯ ಸುಖದ ಬೆನ್ನುಹತ್ತದೆ, ಎಲ್ಲ ಜೀವಿಗಳಿಗೆ ಒಳಿತನ್ನೇ ಬಯಸುವ ಇವರು ಸದಾ ನಿತ್ಯ ಸ್ವರೂಪನಾದ ಭಗವಂತನಲ್ಲೇ ನೆಲಸಿ ಅವನನ್ನೇ  ಸೇರುತ್ತಾರೆ.    

ಕಾಮಕ್ರೋಧವಿಯುಕ್ತಾನಾಂ ಯತೀನಾಂ ಯತಚೇತಸಾಮ್
ಅಭಿತೋ ಬ್ರಹ್ಮನಿರ್ಬಾಣಂ ವರ್ತತೇ ವಿದಿತಾತ್ಮನಾಮ್           ೨೬


ಕಾಮ ಕ್ರೋಧ ವಿಯುಕ್ತಾನಾಮ್  ಯತೀನಾಮ್  ಯತಚೇತಸಾಮ್
ಅಭಿತಃ  ಬ್ರಹ್ಮನಿರ್ಬಾಣಮ್  ವರ್ತತೇ ವಿದಿತ ಆತ್ಮನಾಮ್-ಪ್ರಯತ್ನಶೀಲರಾಗಿ ಒಲುಮೆ-ಸಿಡುಕುಗಳನ್ನು ಓದ್ದವರಿಗೆ, ಬಗೆಯನ್ನು ಗೆದ್ದವರಿಗೆ ಭಗವಂತನನ್ನು ಬಲ್ಲವರಿಗೆ ಎಲ್ಲೆಡೆಯು ನಿತ್ಯ ಸ್ವರೂಪನಾದ ಭಗವಂತ ತುಂಬಿರುತ್ತಾನೆ.

ಕಾಮ-ಕ್ರೋಧವನ್ನು ಸಂಪೂರ್ಣ  ತೊರೆದು, ಪೂರ್ಣವಾಗಿ ಇಂದ್ರಿಯನಿಗ್ರಹ ಸಾಧಿಸಿದವರಿಗೆ ಎಲ್ಲೆಡೆಯೂ ಎಲ್ಲ ಜೀವ ಜಂತುವಿನಲ್ಲೂ ಭಗವಂತ ಕಾಣಿಸುತ್ತಾನೆ. ಯಾವುದೇ ಐಹಿಕ  ಕ್ಲೇಶದ ನೋವು ಇವರಿಗಿರುವುದಿಲ್ಲ. ಇವರ  ಮನದಲ್ಲಿ ಸರ್ವಾಂತರ್ಯಾಮಿಯಾದ, ನಿತ್ಯ ಸ್ವರೂಪನಾದ ಭಗವಂತ ನೆಲೆನಿಂತಿರುತ್ತಾನೆ.

Sunday, May 8, 2011

Bhagavad Gita Kannada Chapter-05 Shloka 22-23

ಯೇ ಹಿ ಸಂಸ್ಪರ್ಶಜಾ ಭೋಗಾ ದುಃಖಯೋನಯ ಏವ ತೇ
ಆದ್ಯಂತವಂತಃ  ಕೌಂತೇಯ ನ ತೇಷು ರಮತೇ ಬುಧಃ ೨೨

ಯೇ ಹಿ ಸಂಸ್ಪರ್ಶ ಜಾಃ ಭೋಗಾಃ  ದುಃಖ ಯೋನಯಃ ಏವ ತೇ
ಆದಿ ಅಂತ ವಂತಃ  ಕೌಂತೇಯ ನ ತೇಷು ರಮತೇ ಬುಧಃ –ವಿಷಯದ ನಂಟಿನಿಂದ ಬರುವ ಸುಖಗಳು ಬನ್ನದ ತವರು. ಬಂತು ಎನ್ನುವಷ್ಟರಲ್ಲೇ ಬರಿದಾಗುವಂಥವು. ಕೌಂತೇಯ, ಬಲ್ಲವರು ಅವನ್ನು  ಮೆಚ್ಚುವುದಿಲ್ಲ.

ಬಾಹ್ಯ ವಿಷಯ ಸ್ಪರ್ಶದಿಂದ ಸಿಗುವ ಸುಖಭೋಗದ ಅನುಭವ(ಸಂಸ್ಪರ್ಶ)ದಿಂದ ನಮಗೆಷ್ಟು ಸುಖ ಸಿಕ್ಕೀತು?  ಒಂದು ಗುಲಗಂಜಿಯಷ್ಟು ಸುಖಕ್ಕಾಗಿ ಕುಂಬಳಕಾಯಿಯಷ್ಟು ದುಃಖವನ್ನು ಅನುಭವಿಸಲು ನಾವು ಸಿದ್ಧರಾಗಿರುತ್ತೇವೆ. ಇಂದಿನ ಎಲ್ಲಾ ಪ್ರಾಪಂಚಿಕ ಅಪರಾಧಗಳಿಗೆ ಇದೇ ಕಾರಣ. ಕ್ಷಣಿಕ ಸುಖದ ಆಸೆಗೆ ಬಿದ್ದು ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುವವರನ್ನು ನಮ್ಮ ದೈನಂದಿನ ಜೀವನದಲ್ಲಿ ನಾವು ಕಾಣುತ್ತೇವೆ. ನಮಗೆ ಬಾಹ್ಯವಾಗಿ ಸುಖ ಎಂದು ಕಾಣುವುದು ದುಃಖವನ್ನು ಮರಿ ಹಾಕುವ ಮೊಟ್ಟೆ ಎನ್ನುವ ಸತ್ಯವನ್ನರಿಯದೆ ಅದೇ ಸುಖ ಎಂದು ಅದರ ಬೆನ್ನು ಹಿಡಿಯುತ್ತೇವೆ. ಪ್ರತಿಯೊಂದು ಬಾಹ್ಯಸುಖದ ಹಿಂದೆ ದುಃಖವೆಂಬ ಕಗ್ಗತ್ತಲು ಮಡುಗಟ್ಟಿರುತ್ತದೆ. ಬಾಹ್ಯ ಸುಖ-ಆನಂದ ಎನ್ನುವುದು ಕೇವಲ ಒಂದು ಮಿಂಚು. ಅದು ಬಂತು ಎನ್ನುವಷ್ಟರಲ್ಲಿ ಬರಿದಾಗುತ್ತದೆ. ತಿಳುವಳಿಕೆ ಉಳ್ಳವರು ಈ ಬಾಹ್ಯ ಸುಖದ ಆಸೆಯಲ್ಲಿ ಬದುಕುವುದಿಲ್ಲ.         

ಅಧ್ಯಾತ್ಮದ ಬಗ್ಗೆ  ಕೆಲವರು ಹೇಳುವುದಿದೆ “ಈಗಾಗಲೇ ನಮಗೇಕೆ ಅಧ್ಯಾತ್ಮ, ಅದೆಲ್ಲಾ ಅರವತ್ತರ ಶಾಂತಿ ಆದ ಮೇಲೆ” ಎಂದು. ಇದು ಏಕೆ ಸರಿಯಲ್ಲ  ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ  ವಿವರಿಸುತ್ತಾನೆ.

ಶಕ್ನೋತೀಹೈವ ಯಃ ಸೋಢುಂ ಪ್ರಾಕ್ ಶರೀರವಿಮೋಕ್ಷಣಾತ್
ಕಾಮಕ್ರೋಧೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ ೨೩


ಶಕ್ನೋತಿ ಇಹ ಏವ ಯಃ ಸೋಢುಮ್  ಪ್ರಾಕ್ ಶರೀರ ವಿಮೋಕ್ಷಣಾತ್
ಕಾಮ ಕ್ರೋಧ ಉದ್ಭವಮ್  ವೇಗಮ್  ಸಃ ಯುಕ್ತಃ ಸಃ ಸುಖೀ ನರಃ –ಒಲುಮೆ-ಸಿಡುಕುಗಳ ಸೆಳೆತವನ್ನು ಇಲ್ಲೇ, ಈ ನರದೇಹ ಕಳಚುವ ಮುನ್ನವೆ ಯಾರು ತಾಳಬಲ್ಲ ಅಂಥ ಮಾನವನೇ ನಿಜವಾದ ಯೋಗಿ; ನಿಜವಾದ ಸುಖಿ.

ನಾವು ನಮ್ಮ ಪ್ರಾಪಂಚಿಕ ಸುಖ-ಸ್ಪರ್ಶದ ಮೋಹವನ್ನು ಗೆಲ್ಲಲು ಸಾಧ್ಯವಾಗುವುದು ಈ ದೇಹ ಇರುವಾಗಲೇ. ವಿಷಯಗಳ ಸ್ಪರ್ಶ ಇರುವುದು ದೇಹಕ್ಕೆ ಹಾಗು ವಿಷಯಗಳನ್ನು ಗೆಲ್ಲಲು ಸಾಧ್ಯವಾಗುವುದು ಈ ದೇಹವಿರುವಾಗಲೇ. ಭಗವಂತ ನಮಗೆ ಯಾವುದು ಸರಿ, ಯಾವುದು ತಪ್ಪು ಎನ್ನುವ ವಿಚಾರ ಮಾಡುವ ಬುದ್ಧಿಶಕ್ತಿಯನ್ನು ಕೊಟ್ಟಿದ್ದಾನೆ. ಇಂತಹ ವಿಚಾರ ಶಕ್ತಿಯನ್ನು ಬಳಸಿಕೊಂಡು ಶರೀರ ಬಿದ್ದುಹೋಗುವ ಮೊದಲೇ ಇಂದ್ರಿಯ ನಿಗ್ರಹವನ್ನು ಅಭ್ಯಾಸ ಮಾಡಬೇಕು. ಇದು ಮುಂದಕ್ಕೆ ಹಾಕುವ ಮತ್ತು ಒಂದು ದಿನದಲ್ಲಿ ಸಾಧಿಸುವ ವಿಷಯವಲ್ಲ. ಇದಕ್ಕೆ ನಿರಂತರ ಸಾಧನೆ ಅಗತ್ಯ. ಈ ದೇಹ ಗಟ್ಟಿಯಾಗಿರುವಾಗಲೇ ಈ ಸಾಧನೆ ಮಾಡಬೇಕು.
ಮನುಷ್ಯನನ್ನು ಕಾಡುವ ಮೂಲಭೂತ ಸಮಸ್ಯೆ ಕಾಮ ಮತ್ತು ಕ್ರೋಧ. ಈ ಕಾಮ ಕ್ರೋಧದ ವೇಗ ನಮ್ಮೆಲ್ಲಾ ವಿವೇಕವನ್ನು ತಳ್ಳಿ ಮುಂದೆ ಬಂದು ನಿಲ್ಲುವಷ್ಟು ಬಲಿಷ್ಠ. ಅದು ಮಳೆಗಾಲದ ಹುಚ್ಚು ಹೊನಲಂತೆ ನಿನ್ನ ವಿಚಾರಧಾರೆಯನ್ನು ಕೊಚ್ಚಿಕೊಂಡು ಹೋಗುವ ಮೊದಲು ಅದನ್ನು ತಡೆ. ಯಾರು ಇದನ್ನು ತಡೆಯಬಲ್ಲರೋ ಅವರು “ಸ ಯುಕ್ತಃ ಸ ಸುಖೀ ನರಃ” ಎನ್ನುತ್ತಾನೆ ಕೃಷ್ಣ.  ಯಾರು ಕಾಮ-ಕ್ರೋಧದ ಬೆನ್ನುಹತ್ತದೆ, ಬಾಹ್ಯ ಸ್ಪರ್ಶವನ್ನು ತಡೆದು ಅಂತರಂಗದ ಅನುಭವಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಾನೆ ಅವನು ನಿಜವಾದ ಸುಖಿ.

ನಮ್ಮ ಅಂತರಂಗದ ಅನುಭವ ಎಂಥದ್ದು? ಒಬ್ಬ ಸಾಧಕ ತನ್ನ ಅಂತರಂಗದಲ್ಲಿ ಕಾಣತಕ್ಕಂತಹ  ಆನಂದದ ಅನುಭವವನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾನೆ.